ಶಿಕ್ಷಣ ಮತ್ತು ಪರಂಪರೆ
ತಂದೆಯಿಂದ ಮಗನಿಗೆ ವೃತ್ತಿ ಶಿಕ್ಷಣ ಗುರುಕುಲ ಪದ್ಧತಿಯ ಶಿಕ್ಷಣ ಮೂಲಶಿಕ್ಷಣ - ಇಂತಹವೂ ಎಲ್ಲ ಪರಂಪರೆಗೆ ಸೇರಿದ ಶಿಕ್ಷಣ ಪದ್ಧತಿಗಳೇ. ಆದರೆ ನಾನಿಲ್ಲಿ ಅಂತಹವುಗಳ ಬಗ್ಗೆ ಹೇಳುತ್ತಿಲ್ಲ. ಆಧುನಿಕ ಶಿಕ್ಷಣ ಪದ್ಧತಿಯು ದೇಶದಲ್ಲಿ ಅನುಷ್ಠಾನವಾದ ಮೇಲೆ ಎಲ್ಲವೂ ಸರಿಹೋಗುತ್ತದೆ ಎಂದು ನಂಬಲಾಗಿತ್ತು ತಾನೆ? ಆದರೆ ಈಗೇನಾಗಿದೆ? ದೇಶದಲ್ಲಿರುವ ಭ್ರಷ್ಟಾಚಾರದ ಬಗ್ಗೆ, ಸಾರ್ವಜನಿಕ ಆಸ್ತಿಯ ನಿರ್ಲಕ್ಷ್ಯದ ಬಗ್ಗೆ. ಈ ಕೊರೊನಾ ದಿನಗಳಲ್ಲಿ ಪೇಟೆಯಲ್ಲಿ ಕಾಣುವ ಅಶಿಸ್ತು, ಸ್ವಂತ ಆರೋಗ್ಯದ ಬಗ್ಗೆಯೇ ಕಾಳಜಿ ಇಲ್ಲದಿರುವುದು - ಇಂತಹವೆಲ್ಲದರ ಬಗ್ಗೆ ನಾವೆಲ್ಲರೂ ಮಾತನಾಡಿ ಕೊಳ್ಳುತ್ತಿರುತ್ತೇವೆ. ರಾಜಕೀಯ ನಾಯಕರುಗಳ ಮತ್ತು ಕೃಪಾಪೋಷಿತ ಅಧಿಕಾರಿಗಳ ಅಕ್ರಮ ಗಳಿಕೆ ದಿನ ಬೆಳಗಾದರೆ ನಮ್ಮ ಗಮನ ಸೆಳೆಯುತ್ತದೆ.. ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತವೆ. ಕೆಲವು ಸಲ ಎಫ್ ಐ ಆರ್ ಗಳೂ ದಾಖಲಾಗುತ್ತವೆ. ವಿಚಾರಣೆಯ ನಾಟಕವೂ ನಡೆಯುತ್ತದೆ. ಕೊನೆಗೆ ಏನೂ ಇಲ್ಲ. ಈರುಳ್ಳಿ ಸಿಪ್ಪೆ ಸುಲಿದಂತೆ. ಚುನಾವಣೆ ಬರುತ್ತದೆ. ನಾಯಕಗಣವೆಲ್ಲ ʼಟಿಕೆಟ್ʼ ಪಡೆಯುತ್ತಾರೆ. ಅವರಲ್ಲೇ ಕಲವರು ತಾರಾ ಪ್ರಚಾರಕರು. ಮತ್ತೆ ಗೆದ್ದು ಆಡಳಿತ ಪಕ್ಷದಲ್ಲಿಯೋ ವಿರೋಧ ಪಕ್ಷದಲ್ಲಿಯೋ ವಿರಾಜಮಾನರಾಗುತ್ತಾರೆ, ಪರಂರೆಯನ್ನು ಮುಂದುವರೆಸುತ್ತಾರೆ.
ಹೀಗೆ ನಕಾರಾತ್ಮಕ ವರ್ತನೆಗಳಲ್ಲಿ ತೊಡಗಿದವರೆಲ್ಲ ಯಾರು? ಇಂತಹವರೆಲ್ಲ ಅಶಿಕ್ಷಿತರೆಂದಾಗಿದ್ದರೆ ಪರಿಹಾರವು ಸುಲಭವಾಗಿರುತ್ತಿತ್ತು. ದೇಶದಲ್ಲಿ ಎಲ್ಲರನ್ನೂ ಶಾಲೆಗೆ ಸೇರಿಸಿ ಶಾಲಾ ಶಿಕ್ಷಣದಲ್ಲಿ ಹಿಂದುಳಿಯದಂತೆ ನೋಡಿಕೊಂಡರೆ ಈ ಕಾರ್ಯವು ಮುಕ್ತಾಯವಾದಂತೆ. ಆದರೆ ಇವರೆಲ್ಲರೂ ದೊಡ್ಡ ದೊಡ್ಡ ಡಿಗ್ರಿಗಳನ್ನು ತಮ್ಮ ಹೆಸರಿಗೆ ಅಂಟಿಸಿಕೊಂಡವರೇ. ದೇಶ ಸೇವೆಗೆ ಮತ್ತು ಸಮಾಜದ ಒಳಿತನ್ನು ಸಾಧಿಸುವುದಕ್ಕೆ ಉತ್ತಮ ಅವಕಾಶಗಳನ್ನು ಪಡೆದವರೇ. ಆದರೂ ಏಕೆ ಹೀಗೆ?
ಹುಡುಕುತ್ತಾ ಹೊರಟರೆ ಅಂತಹ ಕಾರಣಗಳಲ್ಲೊಂದರ ಎಳೆ ಶಿಕ್ಷಣವಾಗಿರುವುದು ಕಣ್ಣಿಗೆ ರಾಚುತ್ತದೆ. ನಮ್ಮ ಮಕ್ಕಳು ಸುಶಿಕ್ಷಿತರಾಗಿ ಸಮಾಜದ ಹಿರಿಯರಾದಾಗ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂಹ, ಒಟ್ಟುಗೂಡಿಸುವ ಮೌಲ್ಯಗಳನ್ನು ಮುರಿಯಲು ಹಿಂಜರಿಯುವಂತಹ ಅಂಶಗಳು ಔಪಚಾರಿಕ ಶಿಕ್ಷಣದ ಭಾಗವಾಗಿಲ್ಲದಿರುವುದು ಕಂಡುಬರುತ್ತದೆ. ನಮ್ಮ ಪಾರಂಪರಿಕ ಜ್ಞಾನ, ಮೌಲ್ಯಗಳ ನಿರೂಪಣೆ, ಸ್ವಸ್ಥ ಸಮಾಜದ ಕಲ್ಪನೆ -ಇಂತಹವೆಲ್ಲವೂ ವೇದೋಪನಿಷತ್ತು , ಭಗವದ್ಗೀತೆ ಇತ್ಯಾದಿಗಳಲ್ಲಿ ಅಡಕವಾಗಿವೆ. ದುರದೃಷ್ಟವಶಾತ್ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಈ ತರಹದ ಕೃತಿಗಳೆಲ್ಲ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಮೀಸಲು; ಅಂತಹ ಸಾಧನಾಮಾರ್ಗವನ್ನು ಮಾತ್ರ ಅವು ವಿವರಿಸುತ್ತವೆ ಎಂಬ ನಿಲುವನ್ನು ಶಿಕ್ಷಣದ ಮೊದಲ ನೀತಿನಿರೂಪಕರು ತಳೆದರು. ತನ್ನಲ್ಲಿರುವ ಭಗವಂತನನ್ನು ವ್ಯಕ್ತಿ ಹೇಗೆ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂಬುದನ್ನು ಅವು ತಿಳಿಸುವಂತಹವು ಎಂಬುದು ಅವರ ಸಿದ್ಧಾಂತವಾಗಿತ್ತು. ಪರಿಣಾಮವಾಗಿ ಇಂತಹ ಉದ್-ಗ್ರಂಥಗಳ ಪರಿಚಯ ಔಪಚಾರಿಕ ಶಿಕ್ಷಣಕ್ರಮದಿಂದ ದೂರವೇ ಉಳಿಯಿತು.
ಅದು ಹೀಗಲ್ಲ ಎಂಬುದು ಆರ್ಷೇಯ ಗ್ರಂಥಗಳ ಯಾವ ಭಾಗವನ್ನು ಅರೆಕ್ಷಣ ಪರಿಶೀಲಿಸಿದರೂ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಈಶೋಪನಿಷತ್ತಿನ ಮೊದಲೆರಡು ಶ್ಲೋಕಗಳನ್ನೇ ನೋಡಬಹುದು:
ಚಲಿಸುತಿಹುದೇನೆಲ್ಲ ಇಲ್ಲಿ,
ಈಶನಾವಾಸವದು ಬೇರಲ್ಲ
ಅವ ಕೊಟ್ಟುದನು ತಿನ್ನು;
ಕಸಿಯ ಬೇಡ ಇನ್ನೊಬ್ಬನದನು ನೀನು. ೧
ಕರ್ಮಗಳ ಮಾಡುತಲೆ ಇಲ್ಲಿ ,
ಬದುಕೋಣ ನಾವು ನೂರು ವರುಷ
ನಮಗಿದುವೆ ದಾರಿ ಬೇರಿಲ್ಲ;
ಕರ್ಮವಂಟದು ನರನನು ಬದುಕಲವ ಇಂತು .೨
(ಕನ್ನಡಾನುವಾದ ನನ್ನದು)
ಈ ಶ್ಲೋಕಗಳಲ್ಲಿ ಅಭಿವ್ಯಕ್ತಿಯು ಕಾವ್ಯಮಯವಾಗಿದೆ. ಸರಳ ನಿರೂಪಣೆ, ರೂಪಕಗಳ ಬಳಕೆ, ಪ್ರಾರ್ಥನೆಯನ್ನು ಒಳಗೊಂಡಿರುವುದು ಇದರ ಮುಖ್ಯ ಲಕ್ಷಣಗಳು. ಸಾಮಾಜಿಕ ಪ್ರಸ್ತುತತೆಯ ದೃಷ್ಟಿಯಿಂದಲೂ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಮಂತ್ರಗಳ ಅರ್ಥೈಸುವಿಕೆಯಲ್ಲಿ ಇಲ್ಲಿರುವ ರೂಪಕಗಳನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಮೌಲ್ಯಗಳ ನಿರೂಪಣೆ, ಮೌಲ್ಯಗಳ ಅನುಸರಣೆಯ ಲಾಭ, ಅನುಸರಿಸಿಸದಿದ್ದರೆ ನಷ್ಟ ಇಂತಹವನ್ನೆಲ್ಲ ರೂಪಕಗಳ ಮುಖಾಂತರವೇ ವಿವರಿಸುತ್ತಾರೆ.
ಈ ಎರಡು ಮಂತ್ರಗಳು ಸಮಾಜದಲ್ಲಿ ನೆಲೆಗೊಳ್ಳಬೇಕಾದ ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಸಮಾಜ ಮತ್ತು ಸಮಾಜದೊಂದಿಗೆ ವ್ಯಕ್ತಿಯ ಕೊಡುಕೊಳೆಗಳ ಬಗ್ಗೆ ಭಾರತೀಯ ಮನಸ್ಸು ತುಡಿಯುವ ರೀತಿಯನ್ನು ಮೊದಲನೆಯ ಮಂತ್ರ ತೆರೆದಿಡುತ್ತದೆ. ವ್ಯಕ್ತಿಯು ಸಮಾಜದ ಭಾಗವಾಗಿದ್ದು ಸಮಾಜ ಮತ್ತು ವ್ಯಕ್ತಿಯ ನಡುವಣ ಕೊಡುಕೊಳೆಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿ ಮತ್ತು ಸಮಾಜ ಈಶನ ನಿಯಂತ್ರಣದಲ್ಲಿರುವುವು ಎಂಬ ಪರಿಕಲ್ಪನೆ ಇಲ್ಲಿಯ ಮೊದಲ ಮಂತ್ರದಲ್ಲಿದ್ದು ಇದು ಸಮಾಜದೊಡನೆ ವ್ಯಕ್ತಿಯ ಒಡನಾಟವನ್ನು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.
"ಚಲಿಸುವಂತಹುದು ಜಗತ್ತಿನಲ್ಲಿ ಏನೆಲ್ಲ ಇದೆಯೋ ಈ ಎಲ್ಲವೂ ಈಶನ ಆವಾಸ ಸ್ಥಾನ" ಎಂದು ಇದರ ಮೊದಲ ಸಾಲಿಗೆ ಅರ್ಥ ಹೇಳ ಬಹುದು. ಚಲಿಸುವಂತಹುದು ಎಂಬುದನ್ನು ಇಲ್ಲಿ ರೂಪಕಾರ್ಥದಲ್ಲಿ ಪ್ರಯೋಗಿಸಲಾಗಿದೆ. ಬದಲಾವಣೆಯು ಚಲನೆ ಎಂಬುದು ಇಲ್ಲಿ ಬಳಕೆಯಾಗಿರುವ ರೂಪಕ. ಹೀಗೆ ಚಲಿಸುವುದರಲ್ಲೆಲ್ಲ ಈಶನಿದ್ದಾನೆ ಎಂದರೆ ಬದಲಾಗುತ್ತಿರುವ ಎಲ್ಲ ವಸ್ತುಗಳಲ್ಲಿ ಈಶನಿದ್ದಾನೆ ಎಂದರ್ಥ. ಇಡೀ ಪ್ರಪಂಚವೇ ಬದಲಾಗುತ್ತಿದೆಯಷ್ಟೆ! ಆದ್ದರಿಂದ ಪ್ರಪಂಚದಲ್ಲೆಲ್ಲ ಅವನಿದ್ದಾನೆ. ಈ ಪ್ರಪಂಚ ಈಶನ ಆವಾಸ ಸ್ಥಾನ. ಇದರಲ್ಲಿ ಅವನು ನಮಗೆ ಏನು ಕೊಡುತ್ತಾನೋ ಅದನ್ನಷ್ಟೆ ಭೋಗಿಸಲು ನಾವು ಬಾಧ್ಯರು; ಹೆಚ್ಚಿನದನ್ನಲ್ಲ. ಉಳಿದುದು ಬೇರೆ ಯಾರಿಗಾಗಿಯೋ ಇರುವಂತಹುದು. ಇನ್ನೊಬ್ಬರಿಗಾಗಿ ಅವನು ಮೀಸಲಿಟ್ಟುದನ್ನು ಯಾರೂ ಗೆಬರಬಾರದು.
ಈ ಮಂತ್ರವು ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ಲಭ್ಯವಿರುವ ಸಂಪತ್ತಿನ ಮೇಲೆ ವ್ಯಕ್ತಿಗಿರುವ ಅಧಿಕಾರವೆಷ್ಟು, ಅದನ್ನು ಅವನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಮ್ಮ ಮುಂದಿಡುತ್ತದೆ. ಪ್ರತಿಯೊಬ್ಬನೂ ತಾನಿರುವುದು ಇನ್ನೊಬ್ಬನ ಮನೆಯಲ್ಲಿ ಎಂಬಂತೆ ನೆನಪಿಟ್ಟುಕೊಳ್ಳಬೇಕು; ತಾನು ಇಲ್ಲಿರುವ ಯಾವ ವ್ಯವಸ್ಥೆಯನ್ನೂ ಕೆಡಿಸದೆ ಮುಂದೆ ಬರುವವರಿಗಾಗಿ ಸುಸ್ಥಿತಿಯಲ್ಲಿ ಬಿಟ್ಟುಕೊಡಬೇಕು; ಪ್ರತಿಯೊಬ್ಬನೂ ತನಗೆ ಬೇಕಾದಷ್ಟನ್ನೇ ಜಾಗ್ರತೆಯಿಂದ ಬಳಸಬೇಕು; ಅಷ್ಟೇ ಹೊರತು ತಲೆಮಾರುಗಳಿಗೆ ಬೇಕೆಂಬ ರೀತಿಯಲ್ಲಿ ಆದಷ್ಟೂ ಹೆಚ್ಚನ್ನು ಕೂಡಿಡ ಬಾರದು.
ಎರಡನೆಯ ಮಂತ್ರವು ಮೊದಲನೆಯ ಮಂತ್ರವು ನಿರೂಪಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ನೂರ್ಕಾಲ ಜೀವನ ಸಾಗಿಸೋಣ ಎಂದಾಶಿಸುತ್ತದೆ. ಮೊದಲ ಮಂತ್ರದಲ್ಲಿ ದೇವರು ಕೊಟ್ಟದ್ದನ್ನು ತಿನ್ನು ಎಂದು ಹೇಳಿದರೆ ಎರಡನೆಯ ಮಂತ್ರ ಕರ್ತವ್ಯ ಪಾಲನೆ ಅದಕ್ಕೆ ಪೂರ್ವ ಆವಶ್ಯಕತೆ ಎನ್ನುತ್ತದೆ. "ಇಹ ಕರ್ಮಾಣಿ ಕುರ್ವನ್ನೇವ" ಎಂದರೆ ಇಲ್ಲಿ ಕರ್ಮಗಳನ್ನು ಮಾಡುತ್ತಲೇ ನಾವು ದೇವರು ಕೊಟ್ಟುದನ್ನು ತಿನ್ನ ಬೇಕು. ಹೀಗೆ ಶತಂ ಸಮಾಃ ಜಿಜೀವಿಷೇತ್ ನೂರು ವರ್ಷಗಳ ಕಾಲ ಬದುಕಲು ಇಚ್ಛಿಸಬೇಕು. ಹಾಗೆ ಮಾಡಿದರೆ ಕರ್ಮಗಳಿಂದ ಉಂಟಾಗುವ ಸಂಕಷ್ಟಗಳು ನಮಗೆ ಅಂಟುವುದಿಲ್ಲ (ನಲಿಪ್ಯತೇ) ಮತ್ತು ಹೀಗೆ ಮಾಡುವುದೊಂದೇ ನಮಗೆ ಸಂತೋಷದಿಂದ ಬದುಕಲು ಇರುವ ದಾರಿ.
ಹೀಗೆ ಬದುಕಿಗೆ ಬೇಕಾದ ಮಾರ್ಗದರ್ಶನ ನೀಡುವುದು ಇದೊಂದು ಉಪನಿಷತ್ತು ಅಥವ ಇದೊಂದು ಮಂತ್ರವಲ್ಲ. ಕಠೋಪನಿಷತ್ತು ಹೇಳುತ್ತದೆ:"ವ್ಯಕ್ತಿಗೆ ಶ್ರೇಯಸ್ಕರವಾದುದು ಬೇರೆ; ಅವನಿಗೆ ಪ್ರಿಯವನ್ನುಂಟು ಮಾಡುವುದು ಬೇರೆ. ಬುದ್ಧಿವಂತನಾದವನು ಶ್ರೇಯಸ್ಸನ್ನೇ ಆರಿಸಿ ಕೊಳ್ಳುತ್ತಾನೆ" ಎಂದು. ಮಾತೃ ದೇವೋ ಭವ, ಪಿತೃದೇವೋ ಭವ ಅತಿಥಿ ದೇವೋ ಭವ ಸತ್ಯಂ ವದ ಧರ್ಮಂ ಚರ ಇತ್ಯಾದಿ ಉದ್ಬೋಧಕ ವಾಕ್ಯಗಳು ತೈತ್ತರೀಯೋಪನಿಷತ್ತಿನಲ್ಲಿ ಬರುತ್ತವೆ.
ಇಂತಹ ಶ್ಲೋಕಾನುವಾದಗಳು ಅಥವ ಉಪನಿಷತ್ತುಗಳ ಪರಿಚಯಾತ್ಮಕ ಪ್ರಬಂಧಗಳು ನಮ್ಮ ಐದರಿಂದ ಹನ್ನೆರಡನೆಯ ತರಗತಿಗಳ ಭಾಷಾ ಪಠ್ಯ ಪುಸ್ತಕಗಳಲ್ಲಿ ಸೇರ ಬೇಕು. ಆಗ ಮಗುವಿನ ವ್ಯಕ್ತಿತ್ವ ರೂಪುಗೊಳ್ಳುವ ಕಾಲಾವಧಿಯಲ್ಲಿ ಪರಂಪರೆಯ ಬಗ್ಗೆ ಗೌರವ, ಹೆಮ್ಮೆ , ಪಾರಂಪರಿಕ ಮೌಲ್ಯಗಳ ಬಗ್ಗೆ ಚಚ್ಚರ ಉಂಟಾಗಿ ವ್ಯಕ್ತಿತ್ವದ ಭಾಗವಾಗುತ್ತವೆ. ಎಷ್ಟೇ ಪ್ರಭುತ್ವವಿರಲಿ, ಯಾರ ಕೃಪಾಶ್ರಯವೇ ಇರಲಿ ಸಾಮಾಜಿಕ ಬದುಕನ್ನು ಹಸನಾಗಿ ಇಟ್ಟುಕೊಳ್ಳ ಬೇಕೆಂಬ ಎಚ್ಚರ ತಪ್ಪುವುದಿಲ್ಲ. ಸಮಾಜದಲ್ಲಿ ಕಾಣುತ್ತಿರುವ ಕೊರೆದು ತಿನ್ನುವ ರೋಗಗಳನ್ನು ಹೋಗಲಾಡಿಸಲು ಇದೊಂದು ಉತ್ತಮ ಮಾರ್ಗವಾದೀತು!
***********************************************************************************
No comments:
Post a Comment