Search This Blog

Tuesday 26 July 2016

ಕನ್ನಡ ವ್ಯಾಕರಣಗಳಲ್ಲಿ ನಿರೂಪಣಾ ತಂತ್ರ ವಿಕಾಸ


ಕನ್ನಡ ವ್ಯಾಕರಣಗಳಲ್ಲಿ ನಿರೂಪಣಾ ತಂತ್ರ ವಿಕಾಸ           
     

ವ್ಯಾಕರಣವೆಂಬುದು ಒಂದು ಭಾಷೆಯ ಘಟಕಗಳನ್ನು,  ಅವುಗಳನ್ನು ಪ್ರಯೋಗಿಸುವ ರೀತಿಗಳನ್ನು ಮತ್ತು ಅವುಗಳ ನಡುವಣ ಪರಸ್ಪರ ಸಂಬಂಧಗಳನ್ನು ವಿಶ್ಲೇಷಿಸುವ ಮತ್ತು ವಿವರಿಸುವ ಶಾಸ್ತ್ರ.ಸಾಮಾನ್ಯವಾಗಿ ಅದು ಧ್ವನಿ ಮತ್ತು ಅಕ್ಷರಗಳು, ಪದಗಳು, ಹೊಸಪದಗಳ ರೂಪಣೆ ಮತ್ತುಅರ್ಥಪ್ರಾಪ್ತಿ ಮತ್ತು ವಾಕ್ಯರಚನೆ – ಇವುಗಳಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುತ್ತದೆ. ಭಾಷಾ ಸ್ವರೂಪ, ಭಾಷೆಗಳ ನಡುವಣ ಸಾದೃಶ್ಯ-ವೈದೃಶ್ಯಗಳನ್ನು ಎತ್ತಿತೋರಿಸಿ ಭಾಷೆಯನ್ನು ಅರ್ಥಮಾಡಿಕೊಳ್ಳಲು, ಇತರ ಭಾಷೆಗಳೊಡನೆ ಸಂಬಂಧವನ್ನು ತಿಳಿಯಲು, ಪರಸ್ಪರ ಸಂವಹನ ಸೂಕ್ತವಾಗಿರುವಂತೆ ಭಾಷೆಯ ಸರಿಯಾದ ಪ್ರಯೋಗಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾಷೆಯು ಒಂದು ಕಲಿತ ನಡವಳಿಕೆಯಾದ್ದರಿಂದ ಕಲಿಕೆಗೆ ಸಹಾಯವಾಗುವಂತೆ ವ್ಯಾಕರಣವು  ಇಂತಹ ತತ್ವಗಳನ್ನು ತಿಳಿಸಿಕೊಡುತ್ತದೆ (Dragons That Won’t Be Slain, ಪು 77). ಅಕ್ಷರಗಳು, ಪದಗಳು, ಪದರಚನೆ ಮತ್ತು ವಾಕ್ಯರಚನೆ – ಇವು ಪಾರಂಪರಿಕ ವ್ಯಾಕರಣಗಳಲ್ಲಿ ಚರ್ಚೆಯಾಗುವ ವಿಷಯಗಳು. ಇವುಗಳ ಹಿಂದಿರುವ ತತ್ವಳಿಗನುಸಾರವಾಗಿ ಭಾಷೆಯನ್ನು ಪ್ರಯೋಗಿಸಿದಾಗ ಯಾವ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತದೋ ಅದಕ್ಕೆ ಭಾಷೆ ಸಾರ್ಥಕವಾಗಿ ದುಡಿಯುತ್ತದೆ.
            ಅಕ್ಷರಗಳು ಆಡು ಭಾಷೆಯ ಧ್ವನಿಗಳಿಗೆ ತೊಡಿಸಿದ ಲಿಖಿತ ಸ್ವರೂಪ. ಅಕ್ಷರಗಳ ಅರ್ಥಾನುಗುಣ ಸಂಯೋಜನೆ ಪದಗಳೆನಿಸುತ್ತವೆ. ಸದೃಶ ಪದಗಳನ್ನು ಒಂದು ಹೆಸರಿನಿಂದ ಕರೆಯುವುದು ಪದಗಳ ಚರ್ಚೆಯಲ್ಲಿ ಮೊದಲ ಹೆಜ್ಜೆ. ಇದು ಪದಗಳ ವರ್ಗೀಕರಣಕ್ಕೆ ಎಡೆಮಾಡಿ ವೈಜ್ಞಾನಿಕ ವಿಶ್ಲೇಷಣೆಗೆ ದಾರಿಮಾಡುತ್ತದೆ. ಆದ್ದರಿಂದಲೇ ಯಾವುದೇ ವ್ಯಾಕರಣ ಪದ್ಧತಿಯಲ್ಲಿ ಪದಗಳ ವರ್ಗೀಕರಣ ಪ್ರಾಮುಖ್ಯ ಪಡೆಯುತ್ತದೆ. ಒಂದು ನಿಯಮದ ನಿರೂಪಣೆಯಿಂದ ಆ ವರ್ಗಕ್ಕೆ ಸೇರಿದ ಎಲ್ಲ ಪದಗಳ ಭಾಷಾ ವ್ಯವಹಾರವನ್ನು ತಿಳಿಯಬಹುದು. ಅನಂತರ ಬರುತ್ತದೆ ಪ್ರತಿಯೊಂದು ವರ್ಗಕ್ಕೆ ಸೇರಿದ ಪದಗಳಿಗೆ ಸಂಬಂಧಿಸಿದ ನಿಯಮ ನಿರೂಪಣೆ. ಉದಾಹರಣೆಗೆ ನಾಮಪದಗಳ ಸಂದರ್ಭದಲ್ಲಿ ವಿಭಕ್ತಿಗಳನ್ನು ಹಚ್ಚುವುದು. ಒಂದದು ನಿರ್ದಿಷ್ಟ ವಿಭಕ್ತಿ ಪದವನ್ನು ಯಾವ ರೀತಿಯ ಬಳಕೆಗೆ ಒಡ್ಡುತ್ತದೆ ಎಂಬುದು ನಿಯಮ ನಿರೂಪಣೆಯ ಒಂದು ಮುಖ್ಯ ಭಾಗ. ಇದನ್ನು ನಿರ್ಧರಿಸುವ ಪರಿಕಲ್ಪನೆ ಕಾರಕವೆಂತಲೂ ಅದನ್ನು ಅಭಿವಕ್ತಿಸಲು ಬಳಸಬೇಕಾದ ಪ್ರತ್ಯಯವನ್ನು ವಿಭಕ್ತಿ ಪ್ರತ್ಯಯವೆಂತಲೂ ಕರೆಯುತ್ತಾರೆ. ನಮ್ಮ ಭಾಷೆಯಲ್ಲಿ ಇಂತಹ ಏಳು ಕಾರಕಗಳೂ ಏಳು ವಿಭಕ್ತಿಗಳೂ ಇವೆ ಎಂಬುದು ಮೊದಲಿನಿಂದಲೂ ವ್ಯಾಕರಣಕಾರರ ಅಭಿಪ್ರಾಯ. ಹೀಗೆಯೇ ಕ್ರಿಯಾಪದಕ್ಕೆ ಸಂಬಂಧಿಸಿ ಕಾಲ ಸೂಚಕ ಪ್ರತ್ಯಯಗಳೂ ಆಖ್ಯಾತ ಪ್ರತ್ಯಯಗಳೂ ಇವೆ. ಹೀಗೆ ವ್ಯಾಕರಣವು ಭಾಷೆಯಲ್ಲಿ ಇರುವ ವ್ಯವಸ್ಥೆಗಳನ್ನು, ಕ್ರಮಬದ್ಧತೆಯನ್ನು ನಿರೂಪಿಸಿ ಜನರಿಗೆ ಭಾಷಾ ಕಲಿಕೆಯನ್ನು ಸುಲಭಗೊಳಿಸುವುದು, ಭಾಷಾಭಿವ್ಯಕ್ತಿಯನ್ನು ಖಚಿತವಾಗಿಸಲು ಸಹಾಯಮಾಡುವುದು, ಭಾಷೆಗಳ ಹೋಲಿಕೆ ಸಾಮಾನ್ಯ ಸ್ವರೂಪ ನಿರ್ಧಾರಕ್ಕೆ ಪ್ರಯತ್ನಿಸುವುದು ಇಂತಹವು ವ್ಯಾಕರಣಗಳ ಪ್ರಯೋಜನ. ಕೆಲವು ವಿದ್ವಾಂಸರ ಪ್ರಕಾರ ಭಾಷೆಗಳಲ್ಲಿ ಅಸಂಖ್ಯ ಸಾದೃಶ್ಯಗಳು ಕಂಡುಬರುತ್ತಿದ್ದು ಎಲ್ಲವೂ ಒಂದು ಸಾರ್ವತ್ರಿಕ ಭಾಷೆಯಿಂದ ಹುಟ್ಟಿದವು (Dragons That Won’t Be Slain, ಪು 81).

             ವ್ಯಾಕರಣ ನಿಯಮಗಳ ನಿರೂಪಣೆ ಮತ್ತು ವಿವರಣೆಗೆ  ಭಾಷೆಯ ಯಾವ ವಿಧವನ್ನು ಬಳಸಬೇಕೆಂಬುದು ಒಂದು ಸಮಸ್ಯೆ. ಆಡುಮಾತೇ ಭಾಷೆನ್ನು ಸಮರ್ಪಕವಾಗಿ ಪ್ರತಿನಿಧಿಸುವ ಆವೃತ್ತಿ ಎಂಬುದು ಇಂದು ಸಾಮಾನ್ಯವಾಗಿ ಒಪ್ಪಿತವಾಗಿರುವ ತತ್ವ. ಆದರೆ ಒಂದು ದೀರ್ಘ ಕಾಲಘಟ್ಟಕ್ಕೆ ಸಂಬಂಧಿಸಿದ ಭಾಷೆಯ ವ್ಯಾಕರಣದ ಅಧ್ಯಯನಕ್ಕೆ ತನ್ನದೇ ಲಾಭಗಳಿವೆ. ಇದು ಹಳೆಯ ಲಿಖಿತ ಸಾಹಿತ್ಯ ಅಭ್ಯಾಸಕ್ಕೂ ಭಾಷಾ ಬೆಳವಣಿಗೆಯನ್ನು ಗುರುತಿಸುವ ಕಾರ್ಯಕ್ಕೂ ಸಹಾಯವಾಗುವ ಕಾರ್ಯ. ಇಂತಹ ಕಾರ್ಯಕ್ಕೆ ಆ ಕಾಲ ಘಟ್ಟದ ಪ್ರಾತಿನಿಧಿಕ ಕಾವ್ಯಗಳ ಅಧ್ಯಯನ ಮತ್ತು ಉದಾಹರಣೆ ಮುಖ್ಯವಾಗತ್ತದೆ. ಇಂತಹ ಕೃತಿ ಪ್ರಾಚೀನ ಸಾಹಿತ್ಯ ಕೃತಿಗಳ ಪ್ರಯೋಗಗಳನ್ನು ಆಯ್ದು ವಿಶ್ಲೇಷಿಸಿ ರಚಿತವಾಗಬೇಕಾಗುತ್ತದೆ. ಆದ್ದರಿಂದಲೇ ವ್ಯಾಕಾರಣಕಾರರು ಪ್ರಯೋಗ ಬಂಧಿತರು ಎಂಬ ಪರಿಕಲ್ಪನೆಗೆ ಎಡೆಯಾಗಿದೆ. ಇಂತಹ ವ್ಯಾಕರಣ ಪ್ರಾಚೀನ ಕಾವ್ಯಾಧ್ಯಯನಕ್ಕೆ ಸಹಾಯಕ ಮತ್ತು ಅಗತ್ಯ. ಮತ್ತು ಕೆಲವಿದ್ವಾಂಸರು ಭಾಷೆಯ ಇಂದಿನದಲ್ಲದ ಪ್ರಾಚೀನ ರೂಪದಲ್ಲಿ ಕಾವ್ಯರಚನೆಗೆ ತೊಡಗುವುದೂ ಇದರಿಂದ ಸಾಧ್ಯ.
            ಈ  ಎಲ್ಲ ಅಂಶಗಳೂ ಕನ್ನಡ ವ್ಯಾಕರಣಗಳ ರಚನೆಯಲ್ಲಿ ಕಂಡುಬರುತ್ತವೆ. ಹಳಗನ್ನಡ ಕಾಲದಲ್ಲಿ ವ್ಯಾಕರಣಗಳನ್ನು ರಚಿಸಿದ ವಿದ್ವಾಂಸರು ತಮ್ಮ ಹಿಂದಿನ ಕಾವ್ಯಗಳನ್ನು ಆಕರಗಳನ್ನಾಗಿ ಸ್ವೀಕರಿಸಿದರು. ಅವರೆಲ್ಲ ಸಂಸ್ಕೃತ ವಿದ್ವಾಂಸರೂ ಆಗಿದ್ದರಿಂದ ಸಂಸ್ಕೃತ ವ್ಯಾಕರಣಗಳ ಮಾದರಿಯಲ್ಲಿ ಹಳಗನ್ನಡ ವ್ಯಾಕರಣಗಳ ರಚನೆಯಾಯಿತು. ಪರಿಕಲ್ಪನೆಗಳ ಅಳವಡಿಕೆ, ಪರಿಭಾಷೆಗಳನ್ನು ಬಳಸುವುದು, ಸೂತ್ರಗಳ ರಚನೆ, ಅವುಗಳಿಗೆ ವೃತ್ತಿ,  ಉದಾಹರಣೆ ನೀಡುವಿಕೆ ಇಂತಹವುಗಳಲ್ಲೆಲ್ಲ ಈ ಅನುಸರಣೆಯನ್ನು ಕಾಣಬಹುದು. ಸಂಸ್ಕೃತದಲ್ಲಿ ಹಲವು ವ್ಯಾಕರಣ ಸಂಪ್ರದಾಯಗಳಿದ್ದು ಬೇರೆ ಬೇರೆ ಲೇಖಕರ ಮೇಲೆ ಬೇರೆಬೇರೆ ವ್ಯಾಕರಣಗಳು ವಿಭಿನ್ನ ಪ್ರಮಾಣದಲ್ಲಿ ಪ್ರಭಾವ ಬೀರಿವೆ. ಇದರಿಂದಾಗಿ ಸಂಸ್ಕೃತ ವ್ಯಾಕರಣಗಳು ಕನ್ನಡ ವ್ಯಾಕರಣಕಾರರಿಗೆ ಪ್ರೇರಣೆ ನೀಡಿದವು ಎನ್ನಬಹುದು. ಈ ಅಂಶಗಳನ್ನು ಒಂದಂದೇ ಕೃತಿಯಲ್ಲಿ  ಪರಿಶೀಲಿಸಬಹುದು:
           
ನಾಗವರ್ಮ
            ಇವನ ಕಾಲ 1042 ಆಗಿದ್ದು (ಚಿಟಗುಪ್ಪಿ,1976 : 547)  ಎರಡು ವ್ಯಾಕರಣ ಕೃತಿಗಳನ್ನು ರಚಿಸಿದ್ದಾನೆ. ಕರ್ನಾಟಕ ಭಾಷಾಭೂಷಣ ಮತ್ತು ಶಬ್ದಸ್ಮೃತಿ ಎಂಬಿವು ಈ ಕೃತಿಗಳ ಹೆಸರುಗಳು.  ಭಾಷಾ ಭೂಷಣವು ಪಾಣಿನಿಯನ್ನು ಅನುಸರಿಸಿದೆ ಎಂದು ಲೂಯೀಸ್ ರೈಸ್ ಇವರು ಅಭಪ್ರಾಯಪಟ್ಟಿದ್ದಾರೆ (ರೈಸ್, 1882: ಪು iv).  ಸಂಜ್ಞಾ, ಸಂಧಿ,  ವಿಭಕ್ತಿ, ಕಾರಕ, ತದ್ಧಿತ,ಆಖ್ಯಾತ  ಮುಂತಾದ ಪಾರಿಭಾಷಿಕ ಪದಗಳನ್ನು ಇವನು ಶರ್ವವರ್ಮನ ಕಾತಂತ್ರದಿಂದ ಸ್ವೀಕರಿಸಿರುವನೆಂದೂ ಅಷ್ಟಲ್ಲದೆ ತನ್ನನ್ನು ಅಭಿನವ ಶರ್ವವರ್ಮನೆಂದು ಕರೆದುಕೊಂಡಿರುವನೆಂದೂ ಆರ್ ನರಸಿಂಹಾಚಾರ್ ಸರಿಯಾಗಿ ಗುರುತಿಸಿದ್ದಾರೆ (ನರಸಿಂಹಾಚಾರ್, 1985: ಪು 42). ಆದ್ದರಿಂದ ಇವನು ಶರ್ವವರ್ಮನ ಕಾತಂತ್ರ ವ್ಯಾಕರಣವನ್ನು ಅನುಸಿರಿಸಿ ಕೃತಿ ರಚನೆ ಮಾಡಿದ್ದಾನೆ ಎನ್ನುವುದು ಹೆಚ್ಚು ಉಚಿವಾಗಬಹುದು.
ವ್ಯಾಕರಣ ವಸ್ತುವಿನ ವ್ಯವಸ್ಥೆ        
ಶರ್ವವರ್ಮನ ಕಾತಂತ್ರದಲ್ಲಿ ಸಂಧಿಪ್ರಕರಣ, ನಾಮಪ್ರಕರಣ, ಆಖ್ಯಾತ ಪ್ರಕರಣ ಮತ್ತು ಕೃತ್ ಪ್ರಕರಣ ಎಂಬ ನಾಲ್ಕು ಅಧ್ಯಾಯಗಳಲ್ಲಿ ವ್ಯಾಕರಣದ ವಿವರಣೆ ಇದೆ. ಪ್ರತಿಯೊಂದರಲ್ಲೂ ಉಪವಿಭಾಗಗಳಿವೆ. ಮೊದಲನೆಯ ಸಂಧಿಪ್ರಕರಣದಲ್ಲಿ ಸಂಜ್ಞಾಪಾದ ಮತ್ತು ಸಂಧಿನಿಯಮಗಳು, ಸ್ವರ ಸಂಧಿ ನಿಷೇಧ, ವ್ಯಂಜನಸಂಧಿ, ವಿಸರ್ಗಪಾದ, ನಿಪಾತಪಾದ – ಈ ವಿಭಾಗಗಳಲ್ಲಿ ಆಯಾ ವಿಷಯಗಳ ವಿವರಗಳಿವೆ. ಎರಡನೆಯ ನಾಮಪ್ರಕರಣದಲ್ಲಿ ಲಿಂಗಪಾದ, ವ್ಯಂಜನಪಾದ, ಸಖಿಪಾದ, ಯುಷ್ಮತ್ ಪಾದ, ಕಾರಕಪಾದ, ಸಮಾಸಪಾದ, ತದ್ಧಿತಪಾದ ಮತ್ತು ಸ್ತ್ರೀಪಾದ ಎಂಬ ವಿಭಾಗಗಳಿವೆ. ಈ ಪ್ರಕರಣದಲ್ಲಿ ನಾಮಪದಗಳು ವಿಭಕ್ತಿಯನ್ನೊಂದುವುದು, ಕಾರಕಗಳು, ಸಮಾಸಗಳು ಮತ್ತು ತದ್ಧಿತ ಪ್ರತ್ಯಯಗಳು – ಈ ನಾಲ್ಕು ವಿಷಯಗಳ ವಿವರಗಳಿರುವುದರಿಂದ ಇದಕ್ಕೆ ಚತುಷ್ಟಯ ಎಂದೂ ಹೆಸರು (ಸೈನಿ: ಪು 26). ಆಖ್ಯಾತ ಪ್ರಕರಣದಲ್ಲಿ ಕ್ರಿಯಾಪದಗಳ ವಿಷಯವೂ ಕೊನೆಯದಾದ ಕೃತ್-ಪ್ರಕರಣದಲ್ಲಿ ಕೃದಂತ ಪ್ರತ್ಯಯಗಳ ವಿಷಯವೂ ಇದೆ. ಅಲ್ಲದೆ ಇಲ್ಲಿರುವ ಸೂತ್ರಗಳು ಸಂಕ್ಷಿಪ್ತವಾಗಿವೆಯಾದರೂ ಪಾಣಿನಿಯ ಸೂತ್ರಗಳಂತೆ ಪಾರಿಭಾಷಿಕ ಪದಗಳಿಂದ ತುಂಬಿದ ಸೂತ್ರಗಳಾಗಿರದೆ ಅರ್ಥವಾಗುವ ವಾಕ್ಯ ರೂಪದಲ್ಲಿವೆ. ಉದಾಹರಣೆಗೆ ಪಾಣಿನಿಯ “ಅದೇಙ್ಗುಣಃ”  ಎಂಬ ಸೂತ್ರವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಶರ್ವವರ್ಮನ “ಅವರ್ಣ ಇವರ್ಣೇ ಏ”  “ಉವರ್ಣೇ ಓ” “ ಋವರ್ಣೇ ಅರ್” ಎಂಬ ಸೂತ್ರಗಳು (ಕಾತಂತ್ರ ಪಿಡಿಎಫ್ ಪು, 14) ಸುಲಭ ಗ್ರಾಹ್ಯವಾಗಿದವೆ; :ವೃದ್ಧಿರಾದೈಚ್” ಎಂಬ ಪಾಣಿನಿಯ ಸೂತ್ರಕ್ಕಿಂತ ಕಾತಂತ್ರದಲ್ಲಿರುವ “ಏಕಾರೇ ಐ ಐಕಾರೇಚ”, “ಓಕಾರೇ ಔ ಔಕಾರೇಚ” ಎಂಬಿವು ಸುಲಭವಾಗಿ ಅರ್ಥವಾಗುತ್ತವೆ. ಪ್ರತಿ ಸೂತ್ರಕ್ಕೆ ಸ್ವಲ್ಪ ವಿವರವಾದ ವೃತ್ತಿಗಳೂ ಇವೆ. ಮೇಲೆ ಉದಾಹರಿಸಿದ ಸೂತ್ರಗಳಿಗೆ “ಅವರ್ಣ ಇವರ್ಣೇ ಪರೇ ಏರ್ಭವತಿ ಪರಶ್ಚ ಲೋಪಮಾದ್ಯತೇ ತವೇಹಾ[ಎಂಬಂತೆ],  ಅವರ್ಣ ಉವರ್ಣೇ ಪರೇ ಓರ್ಭವತಿ ಪರಶ್ಚಲೋಪಮಾದ್ಯತೇ, ಗಂಗೋದಕಮ್ [ಎಂಬಂತೆ]” ಎಂಬಿವು ವೃತ್ತಿಗಳು (ಕಾತಂತ್ರ ಪಿಡಿಎಫ್ ಪು,15). ಹೀಗೆ ಸಂಕ್ಷಿಪ್ತತೆ ಮತ್ತು ಓದುಗರಿಗೆ ಸುಲಭ ಗ್ರಾಹ್ಯತೆ ಇವು ಕಾತಂತ್ರ ವ್ಯಾಕರಣದ ಲಕ್ಷಣಗಳು
ಅಭಿನವ ಶರ್ವವರ್ಮನ (ನಾಗವರ್ಮನ) ಭಾಷಾಭೂಷಣದಲ್ಲಿಯೂ ಇದೇ ವ್ಯವಸ್ಥೆಯನ್ನು ಸ್ವಲ್ಪ ಮಾರ್ಪಾಡಿನೊಂದಿಗೆ ಕಾಣಬಹುದು. ಸಂಜ್ಞಾ ವಿಧಾನ, ಸಂಧಿ ವಿಧಾನ, ವಿಭಕ್ತಿ ವಿಧಾನ, ಕಾರಕ ವಿಧಾನ, ಶಬ್ದರೀತಿ ವಿಧಾನ, ಸಮಾಸ ವಿಧಾನ, ತದ್ಧಿತ ವಿಧಾನ, ಆಖ್ಯಾತ ನಿಯಮ ವಿಧಾನ, ಅವ್ಯಯ ನಿರೂಪಣಾ ವಿಧಾನ ಮತ್ತು ನಿಪಾತ ನಿರೂಪಣಾ ವಿಧಾನ ಎಂಬ ಅಧ್ಯಾಯ ವರ್ಗೀಕರಣವಿದೆ. ಶರ್ವವರ್ಮ  ಉಪವಿಭಾಗಗಳನ್ನು ಕಲ್ಪಿಸುವಾಗ ಕನ್ನಡದಲ್ಲಿ ಲಭ್ಯವಿರುವ ವಿವರಗಳನ್ನು ಅಳವಡಿಸಲು ಬೇಕಾದಂತೆ ಸ್ವತಂತ್ರ ವಿಭಾಗಗಳನ್ನಾಗಿಸಿದ್ದಾನೆ. ಕಾತಂತ್ರದ ಸಂಜ್ಞಾ ಪ್ರಕರಣವು ಸಂಜ್ಞಾ, ಸಂಧಿ ಎಂಬ ಎರಡು ವಿಧಾನಗಳಾಗಿವೆ. ನಾಮಪ್ರಕರಣದ ಬೇರೆಬೇರೆ ಪಾದಗಳೂ ಕೂಡ ಹೀಗೆಯೇ ಭಾಷಾಭೂಷಣದಲ್ಲಿ ಬೇರೆಬೇರೆ ವಿಧಾನಗಳಾಗಿ ರೂಪುಗೊಂಡಿವೆ. ಸಂಧಿ, ಸಂಹಿತೆ, ವಿಭಕ್ತಿ, ಆಖ್ಯಾತ, ನಾಮಿ, ತೃತೀಯಾದಿ ವಿಭಕ್ತಿ – ಇಂತಹ ಪಾರಿಭಾಷಿಕ ಪದಗಳನ್ನು ಕಾತಂತ್ರ ವ್ಯಾಕರಣದಲ್ಲಿದ್ದಂತೆ ಬಳಸಿದ್ದಾನೆ. ಹೀಗೆ ಇಲ್ಲಿ ನಿರೂಪಣಾ ತಂತ್ರಗಳು ಕಾತಂತ್ರ ವ್ಯಾಕರಣದಲ್ಲಿ ಬಳಸಿದವೇ ಆಗಿವೆ.
ಕಾತಂತ್ರ ವ್ಯಾಕರಣದ ಅನುಸರನಣೆ ಮತ್ತು ಪ್ರಭಾವಗಳನ್ನು ಅಕ್ಷರಗಳ ಬಗೆಗಿನ ಇವನ ಪ್ರಥಮ ಸೂತ್ರದಂದಲೇ ಗುರುತಿಸಬಹುದು. ಅಕಾರಾದಯಃ ಪ್ರಸಿದ್ಧವರ್ಣಾಃ (ನಾಗವರ್ಮ,1884: ಪು 2) ಎಂಬುದು ಕನ್ನಡ ಅಕ್ಷರಗಳನ್ನು ಇವನು ನಿರೂಪಿಸಿರುವ ರೀತಿ. ಇದನ್ನು ಸಿದ್ಧೋ ವರ್ಣಸಮಾಮ್ನಾಯಃ (ಕಾತಂತ್ರ ಪಿಡಿಎಫ್, ಪು 1 ) ಎಂಬ ಕಾತಂತ್ರ ಸೂತ್ರದೊಂದಿಗೆ ಎಷ್ಟು ಹೋಲುತ್ತದೆ ಎಂಬುದನ್ನು ಕಾಣಬಹುದು. ಪದಗಳ ವರ್ಗೀಕರಣ, ನಾಮಪದದ ಮೂಲ ರೂಪ (‘ಲಿಂಗ’), ಪದರಚನೆ – ಇತ್ಯಾದಿಗಳಲ್ಲೂ ಕಾತಂತ್ರ ಪದ್ಧತಿಯನ್ನು ಇಲ್ಲಿ ಅನುಸರಿಸಿದೆ. ಕಾತಂತ್ರ ವ್ಯಾಕರಣದಲ್ಲಿ ‘ಲಿಂಗ’ವನ್ನು ಧಾತುವಿಭಕ್ತಿವರ್ಜಮ್ ಅರ್ಥವಲ್ಲಿಂಗಮ‍್ (ಕಾತಂತ್ರ ಪಿಡಿಎಫ್, ಪು 30) ಎಂಬ ಸೂತ್ರದಿಂದ ನಿರೂಪಿಸಿದ್ದಾನೆ. ಅನಂತರ ತಸ್ಮಾತ್ಪರೋ ವಿಭಕ್ತಯಃ  ಎಂದು ಸೂತ್ರೀಕರಿಸಿ ವೃತ್ತಿಯಲ್ಲಿ ಬೇರೆಬೇರೆ ವಚನಗಳಲ್ಲಿ ಸೇರುವ ವಿಭಕ್ತಿಪ್ರತ್ಯಯಗಳನ್ನು ಪಟ್ಟಿಮಾಡಿದ್ದಾನೆ (ಕಾತಂತ್ರ ಪಿಡಿಎಫ್ ಪು 31). ವಿಣಕ್ತಿಗಳ ನಿರೂಪಣೆಯು ಸೂತ್ರರೂಪದಲ್ಲಿರದಿದ್ದರೂ ಪಾಣಿನಿಯ ನಿರ್ವಚನವನ್ನೇ ಅನುಸರಿಸಿವೆ. ನಾಗವರ್ಮನ ಭಾಷಾಭೂಷಣದಲ್ಲಿ ಅರ್ಥವದಕ್ರಿಯಾವಾಚಿ ಕೃದಂತಂಚ ಲಿಂಗಂ ಎಂದಿ ವಿವರಿಸಿದ್ದಾನೆ; ಅನಂತರ ತತೋ ವಿಭಕ್ತಯಃ ಎಂಬ ಸೂತ್ರವಿದ್ದು ಕನ್ನಡ ವಿಭಕ್ತಿಗಳನ್ನು ಮಮಿ[ಮ್ಕೆಯ]ದದೋಳ್  ಎಂಬ ಸೂತ್ರದಲ್ಲಿ ಅಳವಡಿಸಿದ್ದಾನೆ; ದ್ವಿತ್ವಬಹುತ್ವಯೋರ್ಗಳಾದೌ ಎಂಬ ಸೂತ್ರದಿಂದ ‘ದ್ವಿತ್ವಬಹುತ್ವಗಳಲ್ಲಿ’ ಪ್ರತ್ಯೇಕ ವಿಭಕ್ತಿಪ್ರತ್ಯಗಳಿಲ್ಲವೆಂಬುದನ್ನೂ ವಿಭಕ್ತಿಪ್ರತ್ಯಯಕ್ಕಿಂತ ಮುಂಚೆ ಬಹುವಚನ ಸೂಚಕವಾದ ‘ಗಳ್’ ಬರುತ್ತದೆ ಎಂಬುದನ್ನೂ ಸೂಚಿಸಿದ್ದಾನೆ.
ಪದಗಳ ಲಿಂಗ-ಧಾತು-ಅವ್ಯಯ ಎಂಬ ತ್ರಿವರ್ಗೀಕರಣ, ಯಾವ ಸ್ವರದಿಂದ ಕೊನೆಗೊಳ್ಳುವ ‘ಲಿಂಗ’ಗಳು ವಿಭಕ್ತಿ ಪ್ರತ್ಯಯಗಳನ್ನು ಹೇಗೆ ಪಡೆಯುತ್ತವೆ, ಧಾತ್ವಂತ ಸ್ವರಗಳು ಆಖ್ಯಾತ ಪ್ರತ್ಯಯಗಳನ್ನೊಂದುವ ಪರಿಯನ್ನು ಹೇಗೆ ನಿಯಂತ್ರಿಸುತ್ತವೆ, ಪ್ರತ್ಯಯಗಳು ಹೊಸ ಪದರಚನೆಯನ್ನು ಹೇಗೆ ಆಗುಮಾಡುತ್ತವೆ ಇಂತಹ ಅಂಶಗಳೆಲ್ಲ ಕನ್ನಡತನವನ್ನು ಪ್ರತಿಬಿಂಬಿಸುವಂತೆ ಇಲ್ಲಿ ಪ್ರತಿಪಾದಿತವಾಗಿವೆ.  ಇಲ್ಲೆಲ್ಲ ಕಾತಂತ್ರ ವ್ಯಾಕರಣವನ್ನು ಅನುಸರಿಸಿಯೂ ಕನ್ನಡದ ರಚನೆಯನ್ನು ನಿರ್ದಿಷ್ಟಗೊಳಿಸಲು ಆ ಪದ್ಧತಿಯನ್ನು ಸುಧಾರಿಸಿರುವ ರೀತಿಯನ್ನು ಕಾಣಬಹುದು. ಈ ಪ್ರಯತ್ನ ಗ್ರಂಥದುದ್ದಕ್ಕೂ ಕಂಡುಬರುತ್ತಿದ್ದು ಕಾತಂತ್ರ ವ್ಯಾಕರಣ ಪದ್ಧತಿಯಿಂದ ಕನ್ನಡ ವ್ಯಾಕರಣಪದ್ಧತಿಯು ವಿಕಾಸವಾಗಿರುವುದನ್ನು ಗುರುತಿಸಬಹುದು.
ಪದಗಳ ವಿಭಾಗದಲ್ಲಿ ಇವನು ಕಲ್ಪಿಸಿರುವ ಪದವರ್ಗಗಳು ಲಿಂಗ-ಧಾತು-ಅವ್ಯಯ ಎಂಬಿವು ಮೂರೇ. ಸಮಾಸ ಮತ್ತು ತದ್ಧಿತ ವಿಧಾನಗಳೆಂಬ ಭಾಗಗಳಲ್ಲಿ ಹೊಸಪದರಚನೆಯ ಪ್ರಕ್ರಿಯೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಸಮಾಸಗಳನ್ನೂ ತದ್ಧಿತ ಪ್ರತ್ಯಯಗಳನ್ನೂ ವಿವರಿಸಿದ್ದಾನೆ. ಆದರೂ ಅವ್ಯಯಗಳನ್ನು ವಿವರಿಸುವ ಅವ್ಯಯವಿಧಾನವೆಂಬ ಪ್ರಕರಣವನ್ನಲ್ಲದೆ ಆಶ್ಚರ್ಯ ಸೂಚಕ, ಅವಧಾರಣೆ ಇತ್ಯಾದಿಗಳನ್ನು ನಿಪಾತಗಳೆಂದು ವರ್ಗೀಕರಿಸಿ ಪ್ರತ್ಯೇಕ ವಿಭಾಗದಲ್ಲಿ ವಿವರಿದ್ದು ತ್ರಿವರ್ಗವರ್ಗೀಕರಣವು ಕನ್ನಡಪದಗಳ ವಿವರಣೆಗೆ ಸಮರ್ಥವಾಗಿಲ್ಲವೆಂಬುದನ್ನು ತೋರಿಸುವಂತಿದೆ. ವಾಕ್ಯರಚನೆಗೆ ಸಂಬಂಧಿಸಿ ಕಾರಕವಿಧಾನದಲ್ಲಿ ಬಂದಿರುವ ಒಂದು ವಾಕ್ಯದಲ್ಲಿ ಯಾವ ಕಾರಕಾರ್ಥದಲ್ಲಿ ಯಾವ ವಿಭಕ್ತಿ ಬರುತ್ತದೆ ಎಂಬ ಅಂಶಗಳನ್ನು ಬಿಟ್ಟರೆ ಹೆಚ್ಚು ವಿವರಗಳಿಲ್ಲ.
ನಾಗವರ್ಮನ ಎರಡನೆಯ ಕೃತಿ ಶಬ್ದಸ್ಮೃತಿ. ಸಂಸ್ಕೃತ ಸೂತ್ರಗಳಲ್ಲಿಲ್ಲದೆ ಕನ್ನಡ ಕಂದ ರೂಪದಲ್ಲಿರುವುದು ಇದರ ವೈಶಿಷ್ಟ್ಯ. ನನ್ನ ಇನ್ನೊಂದು ಕೃತಿಯಲ್ಲಿ ವಿವರಿಸಿರುವಂತೆ ಭಾಷಾಭೂಷಣಕ್ಕಿಂತ ಕೆಲವು ಹೆಚ್ಚುವರಿ ವಿವರಗಳಿದ್ದು ಅವುಗಳಲ್ಲಿ ಮುಖ್ಯವಾದುವು  ಹೀಗಿವೆ:
1.    ಅವರ್ಣವನ್ನು ಹೊರತುಪಡಿಸಿ ಉಳಿದ ಸ್ವರಗಳಿಗೆ ನಾಮಿ ಎಂಬ ಹೆಸರು ಎಂಬ ನಿರೂಪಣೆ. ಇದು ಸ್ವರೋ ಅವರ್ಣ ವರ್ಜೋ ನಾಮಿ ಎಂಬ ಕಾತಂತ್ರ ಪರಿಕಲ್ಪನೆಗೆ ಅನುಗುಣವಾಗಿಯೇ ಇದ್ದು ಭಾಷಾಭೂಷಣದಲ್ಲಿ ಇದನ್ನು ಹೇಳಿರಲಿಲ್ಲ.
2.    ವ್ಯಾಕರಣಕ್ಕೆ ಈ ನಾಮಿಗಳಿದ್ದ ಹಾಗೆ ದಿವಕ್ಕೆ ಹನ್ನೆರಡು ಜನ ದಿವಾಕರರು ಎಂಬರ್ಥದ ಪದ್ಯವನ್ನು ಕೊಟ್ಟಿರುವುದು. ಇದು ನಾಗವರ್ಮನ ಸ್ವೋಪಜ್ಞ ಕಲ್ಪನೆಯಾಗಿದ್ದು ಇವನ ಸೃಜನಶೀಲತೆಯನ್ನು ತೋರಿಸುತ್ತದೆ.
3.    ಅಧ್ಯಾಹಾರದ ವಿಷಯವನ್ನು ಉದಾಹರಣೆಯ ಮೂಲಕ ವಿವರಿಸಿರುವುದು. ಅಧ್ಯಾಹಾರದ ಪ್ರಸ್ತಾಪವು ಕವಿರಾಜಮಾರ್ಗ ಸಂಪ್ರದಾಯದ ಮುಂದುವರಿಕೆಯಾಗಿದೆ.
4.    ಸಂಬಂಧಿಸಿದ ಪದಗಳು ಅಥವ ವಾಕ್ಯಗಳನ್ನು ಮಾತ್ರ ಉದಾಹರಿಸುವ ಪರಿಪಾಠವನ್ನು ಬಿಟ್ಟು ಪ್ರಯೋಗಗಳನ್ನು ಪೂರ್ಣವಾಗಿ ಕೊಟ್ಟಿರುವುದು.  ಈ ಸುಧಾರಣೆ ಇದಾಹರಣೆಗಳು ಹಿಂದಿನ ಕಾವ್ಯ ಪ್ರಯೋಗಗಳಿಂದ ಆಯ್ದವು ಎಂಬುದನ್ನು ಸ್ಪಷ್ಟಪಡಿಸಿ ಪ್ರಮಾಣಭೂತತೆಯನ್ನು ತಂದುಕೊಟ್ಟಿವೆ.
5.    ಕನ್ನಡಕ್ಕೆ ವಿಶಿಷ್ಟವಾದ ಜಾತ್ಯೈಕವಚನ ಮತ್ತು ವಿಭಕ್ತಿಪಲ್ಲಟಗಳನ್ನು ಇಲ್ಲಿ ವಿವರಿಸಿದ್ದಾನೆ (ಕಣಜ).
ಕನ್ನಡ ವ್ಯಾಕರಣವನ್ನು ಸಮಗ್ರಗೊಳಿಸುವಲ್ಲಿ ಮತ್ತು ನಿರೂಪಣಾತಂತ್ರಗಳಲ್ಲಿ ನಿಖರತೆಯನ್ನು ತರುವಲ್ಲಿ ಇವೆಲ್ಲ ನಾಗವರ್ಮ ತನ್ನ ಮೊದಲನೆಯ ಕೃತಿಯಿಂದ ಎರಡನೆಯ ಕೃತಿಯಲ್ಲಿ ಸಾಧಿಸಿರುವ ಹೊಸ ಸುಧಾರಣೆಗಳು.

ಕೇಶಿರಾಜ
                         ಅಕ್ಷರಗಳು, ಪದಗಳು, ಪದರಚನೆ ಮತ್ತು ವಾಕ್ಯರಚನೆ – ಈ ಎಲ್ಲ ವಿಭಾಗಗಳಲ್ಲಿ ಕೇಶಿರಾಜನ ವಿವರಣೆಗಳು ಮುಂದುವರೆದವು, ಸುಧಾರಿತವಾದುವು ಮತ್ತು ಪರಿಪೂರ್ಣವಾದುವು. ಅಕ್ಷರಗಳಿಗೆ ಸಂಬಂಧಿಸಿದಂತೆ ಶಕಟರೇಫೆ ಮತ್ತು ರಳಗಳಿಗೆ ಸಂಬಂಧೀಸಿ ನಾಗವರ್ಮನ ನಿರೂಪಣೆಗಳು ಆ ಕಾಲದಲ್ಲಿಯೇ ಈ ವರ್ಣಗಳಿಗೆ ಸಂಬಂಧಿಸಿದಂತೆ ಗೊಂದಲವೇರ್ಪಟ್ಟಿತ್ತೆಂಬುದನ್ನು ಮಾತ್ರ ನಿರೂಪಿಸುತ್ತವೆ. ಲ,ರ,ಡ – ಇವುಗಳ ಬದಲಿಗೆ ಕುಳ, ಶಕಟರೇಫ ಮತ್ತು ರಳಗಳು ಬರುತ್ತವೆ (ಪ್ರಯತ್ನಾಶ್ರಯಾತ್ ಲರಡೈರೇವ  [ಳಶಕಟರೇಫರಳಾಃ], ನಾಗವರ್ಮ 1884: ಪು 5) ಎಂಬುದು ಇವನ ಅಭಿಪ್ರಾಯ.ಇದೊಂದೇ ಸೂತ್ರ ಭಾಷಾಭೂಷಣದಲ್ಲಿ ಈ ದೇಶ್ಯ ಅಕ್ಷರಗಳ್ನು ವಿವರಿಸಲು ಇರುವುದು. ಕೇಶಿರಾಜ ಶಬ್ದಮಣಿದರ್ಪಣದಲ್ಲಿ 28ರಿಂದ 33ರವರೆಗೆ ಆರು ಸೂತ್ರಗಳಲ್ಲಿ ಕುಳ ರಳ ಮತ್ತು ಶಕಟರೇಫೆಗಳ ವಿಷಯವನ್ನು ಚರ್ಚಿಸಿರುವನಲ್ಲದೆ ನಿಯತವಾಗಿ ರಳವೇ ಇರಬೇಕಾದ 181 ಪದಗಳನ್ನು ಪಟ್ಟಿ ಮಾಡಿದ್ದಾನೆ (ಕೇಶೀರಾಜ 22-33). ಹೀಗೆ ಪದಗಳನ್ನು ಪಟ್ಟಿಮಾಡುವ ತಂತ್ರವನ್ನು ಇಲ್ಲಿ ಮೊದಲ ಬಾರಿಗೆ ಕಾಣುತ್ತೇವೆ. ಈ ತಂತ್ರವನ್ನು ಶಬ್ದಮಣಿದರ್ಪಣದಲ್ಲಿ ಮತ್ತೆ ನಿತ್ಯಬಿಂದುಯುಕ್ತ ಪದಗಳನ್ನು ತಿಳಿಸುವಾಗ ಉಪಯೋಗಿಸಿದ್ದಾನೆ. ಧಾತು ಪ್ರಕರಣವೆಂಬ ಪ್ರಕರಣವನ್ನು ಇವನು ಹೊಸದಾಗಿ ಸೇರಿಸಿ ಇದರಲ್ಲಿ ಮಹಾಪ್ರಾಣ, ಙಞಶಷಹಕ್ಷ – ಈ ಅಕ್ಷರಗಳಿಂದ ಕೊನೆಗೊಳ್ಳುವ ಒಂದು ಧಾತುವೂ ಇಲ್ಲವೆಂದು ಸೂತ್ರೀಕರಿಸಿ ಇದಕ್ಕೆ ಸಮರ್ಥನೆ ಎಂಬಂತೆ 985 ಕನ್ನಡ ಧಾತುಗಳನ್ನೂ ಅವುಗಳ ಅರ್ಥವನ್ನು ಸಂಸ್ಕೃತದಲ್ಲಿಯೂ ಪಟ್ಟಿಮಾಡಿದ್ದಾನೆ (ಕೇಶಿರಾಜ 280 – 301). ಮತ್ತೆ ಪ್ರಯೋಗಸಾರಮೆಂಬ ಶಬ್ದಾರ್ಥ ನಿರ್ಣಯಂ ಎಂಬಕೊನೆಯ ಭಾಗದಲ್ಲಿ 233 ನಾಮಪದಗಳು ಮತ್ತು ಅವುಗಳ (ಕನ್ನಡದಲ್ಲಿ) ಅರ್ಥವನ್ನು ಪಟ್ಟಿಮಾಡಿದ್ದಾನೆ. ಅಭ್ರಂಶ ಪ್ರಕರಣ, ತದ್ಧಿತ ಪ್ರಕರಣಗಲಲ್ಲಿಯೂ ಈ ತಂತ್ರದ ಉಪಯೋಗವಾಗಿದ್ದರೂ ಅವು ಸೂತ್ರಗಳ ರೂಪದಲ್ಲಿಯೇ ಅಡಕವಾಗಿವೆಯೇ ಹೊರತು ಒಂದರನಂತರ ಪಟ್ಟಿಮಾಡಿದ ಪದಪಟ್ಟಿ ಇಲ್ಲ.
            ಕೇಶಿರಾಜನ ಪದವರ್ಗೀಕರಣ ಚೌಕಟ್ಟೂ ತ್ರಿವರ್ಗವೇ ಆಗಿದ್ದರೂ ಅದರೊಳಗೆ ಮತ್ತಷ್ಟು ವರ್ಗಗಳನ್ನು ಕಲ್ಪಿಸಿ ಖಚಿತಗೊಳಿಸಲು ಪ್ರಯತ್ನಿಸಿದ್ದಾನೆ. ‘ಕ್ರಿಯೆಯಂ ನುಡಿಯದುದು ವಿಭಕ್ತಿಯನಿಲ್ಲದುದು ಅರ್ಥಮುಳ್ಳುದು ಅಂತದು ಲಿಂಗಂ’ (ಕೇಶಿರಾಜ: ಪು. 85) ಎಂಬ ಇವನ ನಿರೂಪಣೆ ಭಾಷಾಭೂಷಣದ ಸೂತ್ರದ ಅನುವಾದದಂತೆ ಕಂಡರೂ ಅನಂತರ ಒಳವರ್ಗಗಳನ್ನು ಲಕ್ಷಣಿಸುತ್ತಾ ಸಾಗುತ್ತಾನೆ. ಇದೇ ಸೂತ್ರದಲ್ಲಿ ಲಿಂಗವು ಕೃತ್, ತದ್ಧಿತ, ಸಮಾಸ, ನಾಮ ಎಂದು ನಾಲ್ಕುತರಹ ಎಂದು ವಿವರಿಸಿ ಉದಾಹರಿಸಿದ್ದಾನೆ. ಮತ್ತೆ ಮುಂದಿನ ಸೂತ್ರವೊಂದರಲ್ಲಿ ‘ಒಳ್ಳಿತು, ಮೆಲ್ಲಿತು, ಬೆಟ್ಟಿತು, ತೆಳ್ಳಿತು, ಬಿಸಿದು, ಅಸಿದು, ಕಡಿದು, ನಿಡಿದು, ಎಂಬಂತಿರುವ ತು ಮತ್ತು ದುಕಾರಗಳಿಂದ ಕೊನೆಗೊಳ್ಳುವ ಪದಗಳು ಗುಣವಾಚಿಗಳೆನಿಸುವುವು’ ಎಂದು ವಿವರಿಸಿದ್ದಾನೆ (ಕೇಶಿರಾಜ: ಪು, 92). ಸೂತ್ರ 99ರಲ್ಲಿ ಗುಣವಚನಗಳು ಮತ್ತು ಕೃತ್ತುಗಳ ಜೊತೆಗೆ ಸರ್ವನಾಮಗಳು, ತದ್ಧಿತಗಳು ಮತ್ತು ಸಂಖ್ಯೆಗಳನ್ನು ಲಿಂಗಳನ್ನಾಗಿ ತಿಳಿಸುತ್ತಾನೆ (ಕೇಶಿರಾಜ: 105). ಇನ್ನೊಂದು ಕಡೆ ‘ಪವಣೊಳಮ್ ಆ ಸಂಖ್ಯೆಯೊಳಂ ವ್ಯವಹರಿಕುಂ ವತ್ವಂ’ ( ಕೇಶರಾಜ: ಪು,115) ಎಂದು ರಚನಾತ್ಮಕ ಅಂಶವನ್ನು ತಿಳಿಸುತ್ತಾ ಪ್ರಮಾಣವಾಚಿಗಳೆಂಬ ಮತ್ತೊಂದು ವರ್ಗವನ್ನು ಸೇರಿಸಿದ್ದಾನೆ.  ಈ ಮಧ್ಯೆ ಸೂತ್ರ 147ರಲ್ಲಿ ವಿಶೇಷಣದ ಪ್ರಸ್ತಾಪವಿದ್ದು ಇದೊಂದು ಪ್ರತ್ಯೇಕ ಪದವರ್ಗವೋ ಹೇಗೆ ಎಂಬುದು ಸ್ಪಷ್ಟವಾಗುವುದಿಲ್ಲ. ಹೀಗೆ ನಾಮವಿಭಕ್ತಿ ಪ್ರತ್ಯಯಗಳನ್ನೊಂದುವ ಪದಗಳೆಲ್ಲ ಒಂದೇ ವರ್ಗವಲ್ಲ ಎಂಬ ಸೂಚನೆ ಇದೆ. ಅನಂತರ ಯಾವ ‘ಕಾರಕ’ದಲ್ಲಿ ಯಾವ ಪ್ರತ್ಯಯ ಬೇರೆಬೇರೆ ಲಿಂಗಗಳಲ್ಲಿ (gender) ಹತ್ತುತ್ತದೆ ಎಂಬುದನ್ನು ತತ್ಸಂಬಂಧೀ ಆಗಮಗಳನ್ನೂ ಯಾವ ವಚನ ಪ್ರತ್ಯಯಗಳು ಎಲ್ಲಿ ಹತ್ತುತ್ತವೆ ಎಂಬುದನ್ನೂ ವಿವರಣಾತ್ಮಕವಾಗಿ ತಿಳಿಸಿದ್ದಾನೆ. ಅನಂತರ ಪ್ರತ್ಯಯವನ್ನೊಂದದ ಅವ್ಯಯವೆಂಬ ಮತ್ತೊಂದು ಪದವರ್ಗವನ್ನು ವಿವರಿಸಲು ಒಂದು ಇಡೀ ಪ್ರಕರಣವನ್ನು (ಕೇಶರಾಜ: ಪು,349-359) ಮೀಸಲಿಟ್ಟಿದ್ದಾನೆ. ಅವುಗಳಲ್ಲಿ ಅನುಕರಣ ಪದಗಳು (ಪು,349), ಕ್ರಿಯಾತ್ಮಕ ಅವ್ಯಯ ಎಂಬಿವುಗಳನ್ನೂ ಅರ್ಥಾನುಗುಣವಾಗಿ ಕಾಲವಾಚಕ (ಪು,358. ಉದಾ. ನಾಳೆ, ನಿನ್ನೆ ಇ.), ಕಾಲಾರ್ಥ (ಅಲ್ಲಿಯೇ, ಆಗಳ್, ಈಗಳ್ ಇ.),  ಜುಗುಪ್ಸೆ(ಚಿಃ ಇ.), ‘ವಿಶಂಕಾಪ್ರಶ್ನಮಂಡಲಾಕ್ಷೇಪಾರ್ಥ’ ಹೀಗೆ ಉಪವರ್ಗಗಳನ್ನು ಕಲ್ಪಿಸಿದ್ದಾನೆ. (ಈ ಎಲ್ಲ ಅಂಶಗಳನ್ನೂ ವಿಸ್ಲೇಷಿಸಿ ಮುಂದೆ ಕಿಟೆಲ್ ಕನ್ನಡದಲ್ಲಿ ಹದಿಮೂರು ಪದವರ್ಗಗಳಿವೆ ಎಂದು ಪ್ರತಿಪಾದಿಸಿದ್ದಾನೆ).
            ಸಮಾಸ ಪ್ರಕರಣದಲ್ಲಿ (ಕೇಶಿರಾಜ: ಪು, 179-215) ಪದಗಳು ಪರಸ್ಪರ ಕೂಡಿ ಹೊಸ ಪದಗಳಾಗುವ ವಿಧಾನವನ್ನುಮತ್ತು ತದ್ಧಿತ ಪ್ರಕರಣದಲ್ಲಿ (ಕೇಶಿರಾಜ: ಪು,216-233 ) ಪ್ರತ್ಯಗಳನ್ನು ಹಚ್ಚುವ ಮೂಲಕ ಹೊಸ ಪದಗಳನ್ನು ರೂಪಿಸುವ ರೀತಿಯನ್ನು ವಿವರಿಸಿದ್ದಾನೆ. ಸಮಾಸವಿಧಗಳನ್ನುಲಕ್ಷಣಿಸುವ ಜೊತೆಗೆ ಸಮಸ್ತಪದಗಳು ಹೊಸ ಅರ್ಥಗಳನ್ನು ಹೇಗೆ ಪಡೆಯುತ್ತವೆ ಎಂಬುದನ್ನು ಮತ್ತು ಸಮಾಸ ಕ್ರಿಯೆಗಳು ನಡೆಯುವ ರೀತಿಯನ್ನು ಅಲ್ಲಲ್ಲಿಯೇ ವಿಶ್ಲೇಷಿಸಿ ವಿವರಿಸುವ ರೀತಿಅನನ್ಯವಾಗಿದೆ. ತದ್ಧಿತ ಪ್ರಕರಣದಲ್ಲಿ ತದ್ಧಿತ ಪ್ರತ್ಯಯಗಳು ಯಾವ ಅರ್ಥದಲ್ಲಿ ಎಂತಹ ಪದಗಳಿಗೆ ಹತ್ತುತ್ತವೆ ಎಂಬುದನ್ನು ನಿರೂಪಿಸುತ್ತಾನೆ. “ನಾಗವರ್ಮನ ಶಬ್ದಸ್ಮೃತಿಯಲ್ಲಿ ಅವ್ಯಯ ವಿಷಯವಿಲ್ಲ, ಭಾಷಾ ಭೂಷಣದಲ್ಲಿದೆ. ಅದನ್ನು ಶಬ್ದಮಣಿದರ್ಪಣದಲ್ಲಿ ಅನುಸರಿಸಲಾಗಿದೆ” (ಸೀತಾರಾಮಯ್ಯ, 1979: ಪು, 215). ಇವು ನಾಗವರ್ಮನ ಪರಂಪರೆಯ ಮುಂದುವರಿಕೆಯಾಗಿದ್ದರೂ ಇಲ್ಲಿ ಸುಧಾರಿತ ರೂಪ ತಾಳಿವೆ. ಹಾಗೆಯೇ ಅಪಭ್ರಂಶ ಪ್ರಕರಣದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಪದಸ್ವೀಕರಣ ವಿಧಗಳ ನಿರೂಪಣೆಗಳಿವೆ. ಇಲ್ಲೆಲ್ಲ ನಾಗವರ್ಮನ ನಿರೂಪಣೆಗಳಿಗಿಂತ ಹೆಚ್ಚಿನ ವಿವರಗಳಿವೆ, ಸಮಗ್ರವಾಗಿವೆ. ನಿಖರ ಮತ್ತು ಪರಿಪೂರ್ಣವಾಗಿವೆ.
ವಾಕ್ಯರಚನೆಯ ಬಗ್ಗೆ ಪ್ರತ್ಯೇಕ ಅಧ್ಯಾಯವಿಲ್ಲ. ಆದರೆ ಪ್ರಯೋಗ ವಿವರಗಳು ಆಯಾ ಸೂತ್ರಗಳಡಿಯೇ ಅಂತರ್ಗತವಾಗಿ ಬಂದಿದ್ದು ನೀಡಿರುವ ಉದಾಹರಣ ವಾಕ್ಯಗಳು ಈ ಬಗ್ಗೆ ಬೆಳಕು ಚಲ್ಲುತ್ತವೆ. ವಾಕ್ಯದ ಮೊದಲಲ್ಲಿರುವ ವಿಶೇಷಣ ಪದಗಳು ಪ್ರಥಮೆಯಲ್ಲಿದ್ದರೂ ವಾಕ್ಯದಲ್ಲಿಅನ್ವಯ ಮಾಡುವಾಗ  ಅವು ತುದಿಯಲ್ಲಿರುವ ಕಾರಕ ಪದದ ವಿಭಕ್ತಿಯನ್ನು ಪಡೆಯುವುವು; ಒಂದು ವಾಕ್ಯದಲ್ಲಿ ಪುಂಸ್ತ್ರೀನಪುಂಸಕ ಲಿಂಗಗಳೆಂಬ ಮೂರು ಲಿಂಗಗಳಲ್ಲಿಯೂ ಮೂರು ಕರ್ತೃಪದಗಳಿದ್ದಾಗ, ಮೂರು ಕರ್ತೃಪದಗಳಿಗೂ ಅನ್ವಯಿಸುವಂತೆ ಪ್ರಯೋಗವಾದ ಕ್ರಿಯಾಪದವು ಕಡೆಯ ಕರ್ತೃಪದ ಯಾವ ಲಿಂಗದಲ್ಲಿರುತ್ತದೆಯೋ ಅದೇ ಲಿಂಗವನ್ನು ಹೊಂದುತ್ತದೆ ಎಂಬುದನ್ನು ನಿರೂಪಿಸಿದ್ದಾನೆ; ಯಾವ ಸಂದರ್ಭಗಳಲ್ಲಿ ಅಧ್ಯಾರೋಪ ಮಾಡಿದರೆ ಕಾರಕಕ್ಕೂ ಕ್ರಿಯೆಗೂ ಹೊಂದಿಕೆಯಾಗುವುದೆಂಬುದನ್ನು ನಿರೂಪಿಸಿದ್ದಾನೆ – ಇವೆಲ್ಲ ಹಿಂದಿನ ವ್ಯಾಕರಣಕಾರರಿಗಿಂತ ಸ್ಪಷ್ಟವಾಗಿ ಕೇಶಿರಾಜ ನಿರೂಪಿಸಿದ್ದಾನೆ (ಸೀತಾರಾಮಯ್ಯ, 1979: ಪು,159-160). ಹೀಗೆ ವ್ಯಾಕರಣ ವಿವರಗಳ ಸಮಗ್ರತೆಯಲ್ಲೂ ವಿಕಸಿತ ನಿರೂಪಣಾ ತಂತ್ರಗಳ ಬಳಕೆಯಲ್ಲಿಯೂ ಕೇಶಿರಾಜನ ಶಬ್ದಮಣಿದರ್ಪಣ ವಿಶಿಷ್ಟವಾಗಿ ನಿಲ್ಲುತ್ತದೆ.

ಭಟ್ಟಾಕಳಂಕ ದೇವ
            ಇವನು ಕ್ರಿ ಶ 1604 ರಲ್ಲಿ ಜೀವಿಸಿದ್ದು ಕರ್ನಾಟಕ ಶಬ್ದಾನುಶಾಸನವೆಂಬ ವ್ಯಾಕರಣಕೃತಿಯನ್ನು ಸಂಸ್ಕೃತ ಸೂತ್ರಗಳಲ್ಲಿ ರಚಿಸಿದ್ದಾನೆ.ಭಟ್ಟಾಕಳಂಕ “ಶಾಕಟಾಯನನ ಶಬ್ದಾನುಶಾಸನದಿಂದ ಐವತ್ತಕ್ಕಿಂತ ಹೆಚ್ಚು ಸೂತ್ರಗಳನ್ನೂ, ಪಾಣಿನಿಯ ಅಷ್ಟಾಧ್ಯಾಯದಿಂದ ಸುಮಾರು ಮೂವತ್ತಾರು ಸೂತ್ರಗಳನ್ನು ಶರ್ವವರ್ಮನ ಕಾತಂತ್ರದಿಂದ ಸುಮಾರು ಮೂವತ್ತು ಸೂತ್ರಗಳನ್ನೂ ಜೈನೇಂದ್ರ ವ್ಯಾಕರಣದಿಂದ ಆರು ಸೂತ್ರಗಳನ್ನೂ ಉದ್ಧರಿಸಿದ್ದಾನೆ” (ಸೀತಾರಮಯ್ಯ, 1979: ಪು, 107). ಶಾಕಟಾಯನನೂ ಪಾಣಿನಿಯ ಅಷ್ಟಾಧ್ಯಾಯಿಯನ್ನು ಆಧಾರವಾಗಿಸಿಕೊಂಡೇ ತನ್ನ ವ್ಯಾಕರಣವನ್ನು ಬರೆದವನು ಮತ್ತು ಆಗ ಪ್ರಚಲಿತವಿದ್ದ ಇತರ ವ್ಯಾಕರಣಪದ್ಧತಿಗಳ ಬೆಳಕಿನಲ್ಲಿ ಪರಿಷ್ಕರಿಸಿದವನು (ಸೈನಿ : ಪು,108). ಜೈನೇಂದ್ರ ವ್ಯಾಕರಣವೂ ಪಾಣಿನಿವ್ಯಾಕರಣದ ಮೂಲದ್ರವ್ಯವನ್ನೇ ಬಳಸಿಕೊಂಡು ರಚಿತವಾಗಿದ್ದು ಅನೇಕ ಕಡೆ ಹೆಚ್ಚು ಅವ್ಯವಸ್ಥಿತವಾಗಿರುವುದಾಗಿ ವಿದ್ವಾಂಸರ ಅಭಿಪ್ರಾಯವಿದೆ (ಸೈನಿ : ಪು, 101). ಹೀಗೆ ನಿರೂಪಣೆಯಲ್ಲಿ ಭಟ್ಟಾಕಳಂಕನ ಒಲವೆಲ್ಲ ಪಾಣಿನಿಯ ಕಡೆಗೆ. ಇವನು ಕಾತಂತ್ರದ ವಿಭಕ್ತಿ, ಆಖ್ಯಾತ – ಇಂತಹ ಪದಗಳಿಗೆ ಬದಲಾಗಿ ಪಾಣಿನಿ ಬಳಸಿರುವ ಸುಪ್, ತಿಙ್ – ಇಂತಹ ಪದಗಳನ್ನು ಬಳಸಿದ್ದಾನೆ. “ಮಮಿಮ್ಗೆವತ್ತಣಿಮದದೊಳ್ ಸುಪ್”, “ಅಮರಯಿರೆನೆವು ತಿಙ್”, “ಸುಪ್ ತಿಙಂತಂ ಪದಂ” (ಭಟ್ಟಾಕಳಂಕ,1969: ಪು, 44-45). ದು ಕಿತ್ ಶಿತ್ ಇತ್ಯಾದಿ ಪಾರಿಭಾಷಿಕ ಸಂಜ್ಞೆಗಳನ್ನೂ ಇವನು ಪಾಣಿನಿಯಂತೆ ನಿರೂಪಿಸಿ ಬಳಸಿದ್ದಾನೆ. ಇವನ ಸೂತ್ರೀಕರಣವು ನಾಗವರ್ಮ ಕೇಶಿರಾಜರ ಪರಂಪರೆಯ ಮುಂದುವರಿಕೆಯಾಗದೆ ತಾನೇ ಬೇರೆಯಾಗಿ ನಿಂತಿದೆ. ಶಬ್ದಾನುಶಾಸನವು ನಾಗವರ್ಮ-ಕೇಶಿರಾಜರ ವ್ಯಾಕರಣಗಳಿಗಿಂತ ಹೆಚ್ಚು ವಿವರಪೂರ್ಣವೂ ಸಮಗ್ರವೂ ಆಗಿದ್ದರೂ (ಸೀತಾರಾಮಯ್ಯ, 1979: ಪು,103) ಕ್ಲಿಷ್ಟಕರವೂ ಆಗಿರುವುದರಿಂದ ಇಲ್ಲಿನ ನಿರೂಪಣಾ ತಂತ್ರಗಳ ಉಪಯುಕ್ತತೆ ಕಡಿಮೆ ಎಂದು ಹೇಳಬೇಕು. ನಿರೂಪಣೆಯಲ್ಲಿ ಇವನ ತಂತ್ರಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವುದು ಅವನು ಗಣಪಾಠಗಳನ್ನು ಸಿದ್ಧಪಡಿಸಿ ಕೊಟ್ಟಿರುವುದು. ಉದಾಹರಣೆಗೆ “ಬೆಸೆಕೋಲಾದಯಃ|| ಬೆಸೆಕೋಲ್, ತಲೆಕಟ್ಟು, ಒಳಕಯ್, ಮೊ(ಳ)ಕಯ್, ಪೊ(ರ)ಕಯ್, ಒಳಕೋಟೆ, ಪೊರಕೋಟೆ, ಪೊ(ರ)ಕಳು, ಬ(ರಿ)ಕಾಲ್, ಪೊಸತೊಲೆ, ಒಳತೋಟಂ, ಪೊಸತೋಳಂ, ಕಯ್ಪರೆ, ಕತ್ತುರಿಮಿಗಂ, ಸೊಸೆಮುದ್ದು, ನಸುಮುಳಿಸು, ಇರ್ಕೋಡಿ, ಇರ್ತಡಿ, ಇರ್ಪ್ಪಾನಿ, ಒಕ್ಕೊರಲ್, ಒರ್ಕಯ್, ಒಕ್ಕಣ್ಣಂ, ಮುಕ್ಕಣ್ಣಂ, ಮುಕ್ಕೊಡೆ, ಮುಕ್ಕೋಡಿ, ಮುತ್ತ(ರೆ), ಮುಕ್ಕುಪ್ಪೆ ಇತಿ. ಸಂಧಿಪ್ರಕರಣದಂತ್ಯದಲ್ಲಿ ಈ ಸೂತ್ರ ಬಂದಿರುದರಿಂದ ತೃತೀಯಾದಿ ಆದೇಶಗಳು ಬರುವುದಿಲ್ಲ ಎಂಬುದು ಈ ಸೂತ್ರದ ಅಭಿಪ್ರಾಯ. (ಕತಪಗಳಿಗೆ ಗದಬಗಳು, ಪಬಮಗಳಿಗೆ ವಕಾರ ಬರುವುದು - ಈ ಆದೇಶಗಳು).
            ಶ್ರೀರಂಗಪಟ್ಟಣದ ಕೃಷ್ಣಮಾಚಾರಿಯ ಹೊಸಗನ್ನಡನುಡಿಗನ್ನಡಿ (1838) ಕನ್ನಡದಲ್ಲಿ ಬರೆದ ಮೊದಲ ಹೊಸಗನ್ನಡ ವ್ಯಾಕರಣ. ಇದರಲ್ಲಿ ಕೃತಿಕಾರ ಸಂಶೋಧಿಸಿ ಪ್ರಸ್ತುತಪಡಿಸಿದ ಹಲವು ಹೊಸ ವಿಚಾರಗಳಿವೆ: ತೌಳವ, ಕರ್ನಾಟಕ,ಮಲಯಾಳ, ಆಂಧ್ರಗಳೆಂಬ ನಾಲ್ಕು ಭಾಷೆಗಳು ಸಂಸ್ಕೃತಜನ್ಯಗಳಲ್ಲ, “ದ್ರಮಿಡಾಭಾಸಗಳು” ಎಂಬುದು (ಕೃಷ್ಣಮಾಚಾರ್ಯ: ಪು,iii), ಹಳಗನ್ನಡದ ವ್ಯಂಜನಾಂತ ಪದಗಳು ಉಕಾರಾಂತವಾಗುವುದು, ಪಕಾರ ಹಕಾರವಾಗುವುದು, ರಳ ಮತ್ತು ಶಕಟರೇಫೆಗಳು ಸಾಮಾನ್ಯ ಳ ಮತ್ತು ರ ಆಗುವುದು, ಉದಿರ್ಚು, ನಾಣ್ಚು ಇಂತಹ ಪದಗಳು ಉದುರಿಸು, ನಾಚು ಎಂಬಂತಾಗುವುದು (ಅದೇ: ಪು, 171) ಇವು ಇವನ ಸಂಶೋಧನೆಗಳ ಸ್ವೋಪಜ್ಞತೆಯನ್ನು ತೋರಿಸುತ್ತವೆ. ಆದರೆ ನಿರೂಪಣಾ ದೃಷ್ಟಿಯಿಂದ ಇವನು ರೂಢಿಸಿರುವ ಹೊಸತನವೆಂದರೆ ಪ್ರಶ್ನೋತ್ತರ ವಿಧಾನ. ಪ್ರತಿಯೊಂದು ಪ್ರಶ್ನೆ ಒಂದು ಶೀರ್ಷಿಕೆಯ ಕೆಲಸ ಮಾಡುತ್ತದೆ. ಉತ್ತರವು ವಿಷಯ ಪ್ರತಿಪಾದನೆ ಮಾಡುತ್ತದೆ. ಇದು ಇವನ ಮುಖ್ಯ ಸುಧಾರಣೆ. ಇದಲ್ಲದೆ ಸಂಸ್ಕೃತದಿಂದ ಪದಗಳನ್ನು ತದ್ಭವಗಳು ಅಪಭ್ರಂಶಗಳು ಎಂದು ಕರೆಯುತ್ತಾ ಬಂದಂತೆ ಇತರ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಅನ್ಯದೇಶ್ಯ ಪದಗಳೆಂದು ಗುರುತಿಸುವ ಪರಿಪಾಠವನ್ನು ಇವನು ರೂಢಿಗೆ ತಂದನು. ಉಳಿದಂತೆ ಇವನು ಶಬ್ದಾನುಶಾಸನವನ್ನು ಅನುಸರಿಸಿದ್ದಾನೆ.

ಪಾಶ್ಚಾತ್ಯ ವ್ಯಾಕರಣಕಾರರು: ಥಾಮಸ್ ಹಾಡ್ಸನ್
ಹತ್ತೊಂಬತ್ತನೆಯ ಶತಮಾನದಲ್ಲಿ ಕನ್ನಡ ವ್ಯಾಕರಣವನ್ನು ಇಂಗ್ಲಿಷಿನಲ್ಲಿ ರಚಿಸಿದ ಪಾಶ್ಚಾತ್ಯ ವಿದ್ವಾಂಸರು ಅದರಲ್ಲಿಯೂ ಕ್ರೈಸ್ತ ಮಿಶನರಿಗಳು ನಿರೂಪಣೆಯಲ್ಲಿ ಕೆಲವು ಹೊಸ ಅಂಶಗಳನ್ನು ಅಳವಡಿಸಿದರು.
ಇಂಗ್ಲಿಷ್ ಭಾಷೆಯಲ್ಲಿ ನಿರೂಪಣೆ 1817ರಲ್ಲಿ ವಿಲಿಯಮ್ ಕೇರಿಯಿಂದ ಪ್ರಾರಂಭವಾದರೂ ಪಾಶ್ಚಾತ್ಯ ಅಂಶಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು ಕನ್ನಡಕ್ಕೆ ಸಂಪೂರ್ಣವಾಗಿ ಹೊಸತೆನಿಸುವ ಹಾದಿಯಲ್ಲಿ ನಡೆದವನು ಥಾಮಸ್ ಹಾಡ್ಸನ್.  ಇವನ An Elementary Grammar of the Kannada or Canarese Language ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣ 1859ರಲ್ಲಿ ಪ್ರಕಟವಾಯಿತು. ಹಾಡ್ಸನ್ ತನ್ನ ನಿರೂಪಣೆಗೆ ಆಂಗ್ಲ ವ್ಯಾಕರಣಗಳಲ್ಲಿಯೂ ಲ್ಯಾಟಿನ್ನಿನಲ್ಲಿಯೂ ಬಳಕೆಯಲ್ಲಿದ್ದ ಪರಿಕಲ್ಪನೆಗಳನ್ನು ಮತ್ತು ಪಾರಿಭಾಷಿಕ ಪದಗಳನ್ನು ಬಳಸುವ ಕೇರಿಯ ಮಾದರಿಯನ್ನು ಪರಿಪೂರ್ಣಗೊಳಿಸಿದ. ಪದಗಳನ್ನು ಅಷ್ಟವರ್ಗಗಳಲ್ಲಿ ವಿಭಾಗಿಸಿದ. ವಾಕ್ಯರಚನೆಯ ಬಗ್ಗೆ ಪ್ರತ್ಯೇಕ ಅಧ್ಯಾಯಲ್ಲಿ ಚರ್ಚಿಸುವ ಹೊಸ ಪದ್ಧತಿಯನ್ನು ಮುಂದುವರೆಸಿದ. ವಿಭಕ್ತಿ ಪ್ರತ್ಯಯಗಳನ್ನೊಂದುವ ನಾಮಪದಗಳನ್ನು ಮೂರು ಡಿಕ್ಲೆನ್ಶನ್ನುಗಳಲ್ಲಿಯೂ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಹತ್ತುವುದನ್ನು ಎರಡು ಕಾಂಜುಗೇಶನ್ನುಗಳಲ್ಲಿಯೂ  ಚರ್ಚಿಸಿದ. ಪ್ರಾಣಿಗಳಲ್ಲಿ ಹೆಣ್ಣುಗಂಡುಗಳನ್ನು ಗುರುತಿಸಲು ಕನ್ನಡದಲ್ಲಿರುವ ಪದಗಳನ್ನು ದಾಖಲಿಸಿದ. ಅಂದಿನ ಕನ್ನಡದಲ್ಲಿ ಬಳಕೆಯಲ್ಲಿದ್ದ ಅಕ್ಷರಗಳನ್ನೆಲ್ಲ ಪಟ್ಟಿಮಾಡಿ ಅವುಗಳ ಉಚ್ಚಾರಗಳನ್ನು ಇಂಗ್ಲಿಷ್ ಅಕ್ಷರಗಳ ಮೂಲಕ ಸೂಚಿಸುವ ಕ್ರಮವನ್ನು ಅನುಸರಿಸಿದ. ಉದಾಹರಣೆಗೆ ಅ as in far. ಪ್ರತಿಯೊಂದು ಸ್ವರವು ಇನ್ನೊಂದರೊಡನೆ ಸೇರಿ ತ್ವರಿತೋಚ್ಚಾರಣೆಯಲ್ಲಿ ಸಂಧಿಗಳು ಹೇಗೆ ಆಗುತ್ತವೆ ಎಂಬುದನ್ನು ವಿವರಿಸಿದ್ದಾನೆ. ಇದು ಲೋಪ ಸಂಧಿಯ ವ್ಯಾಖ್ಯೆ, ಅದಕ್ಕೆ ಉದಾಹರಣೆ, ಆಕ್ಷೇಪಗಳು ಇತ್ಯಾದಿಗಳನ್ನು ನೀಡುವ ಹಳಗನ್ನಡ ವ್ಯಾಕರಣಕಾರರ ರೀತಿಗಿಂತ ಭಿನ್ನ. ಇಂಗ್ಲಿಷ್ ಅಕ್ಷರಗಳಿಗಿಂತ ಕನ್ನಡ ಅಕ್ಷರಗಳ ರೀತಿ ಭಿನ್ನವಾದುದರಿಂದ ಕಾಗುಣಿತಗಳನ್ನೆಲ್ಲ ಬರೆದು ತೋರಿಸುವುದು ಅಗತ್ಯವಾಗಿದ್ದು ಆ ಪದ್ಧತಿಯನ್ನೂ ಇವರು ಅಳವಡಿಸಿಕೊಂಡರು.
            ಇವನು ಹಳಗನ್ನಡ ವ್ಯಾಕರಣಗಳಲ್ಲಿದ್ದ ತ್ರಿವರ್ಗ ವರ್ಗೀಕರಣವನ್ನೇನೂ ಪ್ರಸ್ತಾವಿಸಲಿಲ್ಲ. ಇಂಗ್ಲಿಷ್ ವ್ಯಾಕರಣಗಳಲ್ಲಿ ಪ್ರಚಲಿತವಿದ್ದ ಅಷ್ಟವರ್ಗೀಕರಣವನ್ನು ಕನ್ನಡಕ್ಕೆ ಅವಡಿಸಿ ನಿರೂಪಿಸಿದ.  ಕನ್ನಡ ಕಲಿಯ ಬಯಸುವ ವಿದೇಶೀಯರಿಗಾಗಿ ಇವನ ಕೃತಿ ಇರುವುದರಿಂದ ಇಂತಹ ನಿರೂಪಣೆ ಉಪಯುಕ್ತವೂ ಆಯಿತು. ನಾಮಪದ, ಕ್ರಿಯಾಪದ, ಗುಣವಚನ, ಸರ್ವನಾಮ, ಕ್ರಿಯಾ ವಿಶೇಷಣ, ಸಮುಚ್ಚಾಯಕ, ಭಾವಬೋಧಕ ಮತ್ತು  ಉತ್ತರ ಸ್ಥಾನಿ ಎಂಬಿವು ಹಾಡ್ಸನ್ ಪದಗಳನ್ನು ವರ್ಗೀಕರಿಸಿರುವ ಅಷ್ಟವರ್ಗಗಳು. ಈ ಒಂದೊಂದರಲ್ಲೂ ಉಪವರ್ಗಗಳನ್ನು ಕಲ್ಪಿಸಿ, ನಿರೂಪಿಸಿ ಮತ್ತು ಉದಾಹರಣೆಗಳನ್ನು ನೀಡಿ ವಿವರಿಸಿದ್ದಾನೆ. ಅಲ್ಲಲ್ಲಿ ದೋಷಗಳು ಕಾಣಿಸುತ್ತವೆ. ಉದಾ. ಪ್ರಾಣಿಗಳಲ್ಲಿ ಹೆಣ್ಣುಗಂಡುಗಳನ್ನು ಸೂಚಿಸಲು ಇರುವ ವಿಭಿನ್ನ ಪದಗಳನ್ನು (ಉದಾ. ಗೂಳಿ – ಆಕಳು)  ‘ಜೆಂಡರ್ಸ್’ ಎಂದು ಹೇಳಿರುವುದನ್ನು  ‘ಸೆಕ್ಸ್’  ಎಂದು ತಿದ್ದಬೇಕಾಗಿದೆ. ಏಕೆಂದರೆ ಇವೆರಡೂ ವ್ಯಾಕರಣ ದೃಷ್ಟಿಯಿಂದ ನಪುಂಸಕ ಲಿಂಗಗಳೇ. ಇಂತಹವು ಇವನ ಪದ್ಧತಿಯಲ್ಲೇ ಇರುವ ದೋಷವಾಗಿರದೆ ಆ ಸಂದರ್ಭದ ಪದ ಪ್ರಯೋಗದಲ್ಲಾಗಿರುವ ಪ್ರಮಾದವೆನ್ನಬಹುದು. ಪದ-ಉಪವರ್ಗಗಳಳನ್ನೂ ಇಂಗ್ಲಿಷ್ ವ್ಯಾಕರಣದ ದೃಷ್ಟಿಯಿಂದಲೇ ನೋಡಿ ಪ್ರತ್ಯೇಕತೆ ಕಲ್ಪಿಸಿದ್ದಾನೆ.  ಉದಾ. ಸರ್ವನಾಮಗಳಲ್ಲಿ ಪುರುಷವಾಚಕ ಸರ್ವನಾಮ, ದರ್ಶಕ ಸರ್ವನಾಮ - ಅವುಗಳಲ್ಲಿ ದೂರದವು ಹತ್ತಿರದವು, ಪ್ರತಿವಾಚ್ಯ ಸರ್ವನಾಮ, ಅನಿಶ್ಚಯಾತ್ಮಕ ಸರ್ವನಾಮ, ಸಂಖ್ಯಾ ಸರ್ವನಾಮ, ಪರಿಮಾಣಾತ್ಮಕ ಸರ್ವನಾಮ, ಪ್ರಶ್ನಾತ್ಮಕ ಸರ್ವನಾಮ,ಸ್ಥಳವಾಚಕ ಸರ್ವನಾಮ ಎಂಬಿವು ಎಂಟು ಉಪವಿಧಗಳು. ಈ ತಂತ್ರವನ್ನು ಇತರ ವರ್ಗಗಳ ವಿವರನೆಯಲ್ಲೂ ಬಳಸಿದ್ದಾನೆ.
            ಪದರಚನೆಗೆ ಸಂಬಂಧಿಸಿದ ವಿಚಾರಗಳು ನಾಮಪದಗಳಡಿಯಲ್ಲಿಯೇ ಬಂದಿದೆ. ಸಮಾಸ ಪದಗಳು, ಪ್ರತ್ಯಯಗಳನ್ನೊಂದಿ ಕ್ರಿಯಾಪದಗಳು ನಾಮಪದಗಳಾಗುವುದು, ನಾಮಪದಗಳಿಂದ ಹೊಸ ನಾಮಪದಗಳ ಸೃಷ್ಟಿಯಾಗುವುದು ಇಂತಹವೆಲ್ಲ ಇಲ್ಲಿಯೇ ಬಂದಿವೆ. ಹೀಗಾಗಿ ತದ್ಧಿತ ಪ್ರಕರಣ, ಕೃದಂತ ಪ್ರಕರಣ – ಈ ರೀತಿಯ ವರ್ಗಿಕರಣಗಳಿರದಿದ್ದರೂ ವಸ್ತು ಪ್ರತಿಪಾದನೆಯಲ್ಲಿ  ಬದಲಾವಣೆಗಳೇನೂ ಆಗಿಲ್ಲ. ವಿಭಕ್ತಿ ಮತ್ತು ಆಖ್ಯಾತ ಪ್ರತ್ಯಯಗಳ ವಿಷಯಗಳೂ ನಾಮಪದ ಕ್ರಿಯಾಪದಗಳಡಿಯಲ್ಲೇ ಬರುತ್ತವೆ.
            ವಾಕ್ಯರಚನೆಯನ್ನು ವಿವರಿಸಲು ಪ್ರತ್ಯೇಕವಾಗಿ ಒಂದು ಅಧ್ಯಾಯವನ್ನು ಮೀಸಲಿಟ್ಟು ಬೇರೆಬೇರೆ ಪದಗಳೂ ವಾಕ್ಯವೊಂದರಲ್ಲಿ ಹೇಗೆ ಪ್ರಯೋಗವಾಗುತ್ತವೆ ಎಂಬುದನ್ನು ತಿಳಿಸಿದ್ದಾನೆ. ಇಲ್ಲಿ ವಿವರಣೆ ಇವನು ಅನುಸರಿಸಿರುವ ರೀತಿ. ಅಲ್ಲದೆ ಮುನ್ನೂರು ಕನ್ನಡ ವಾಕ್ಯಗಳನ್ನೂ ಅವುಗಳ ಇಂಗ್ಲಿಷ್ ಭಾಷಾಂತರಗಳನ್ನೂ ಈ ಭಾಗದಲ್ಲಿ ನೀಡಿರುವುದರಿಂದ ಇಂಗ್ಲಿಷ್ ವಾಕ್ಯಗಳಿಗಿಂತ ಕನ್ನಡ ವಾಕ್ಯಗಳು ಹೇಗೆ ವಿಭಿನ್ನ ಎಂದು ತಿಳಿಯಲು ಸಹಕಾರಿಯಾಗಿವೆ. ಇವೆರಡೂ ಪಾಶ್ಚಾತ್ಯ ವ್ಯಾಕರಣಕಾರರು ಕನ್ನಡಕ್ಕೆ ಪರಿಚಯಿಸಿದ ತಂತ್ರಗಳಾಗಿದ್ದು ಹಾಡ್ಸನ್ನನ ಕೃತಿಯಲ್ಲಿ ಪರಿಪೂರ್ಣ ಹಂತವನ್ನು ತಲುಪಿವೆ.
            ಇನ್ನೊಂದು ಇವನ ಸಂವಹನಾ ಸುಧಾರಣೆ ಎಂದರೆ ಅನುಬಂಧದ ಸೇರ್ಪಡೆ. ಇವನು ಇಂಗ್ಲಿಷ್ ವ್ಯಾಕರಣದ ಕಣ್ಣಿನಿಂದ ಕನ್ನಡದ ವ್ಯಾಕರಣವನ್ನು ನೋಡುವವನಾದ್ದರಿಂದ ಇಂಗ್ಲಿಷಿನ ಯಾವ ಪಾರಿಭಾಷಿಕ ಪದಕ್ಕೆ ಕನ್ನಡದ ಯಾವ ಪದವನ್ನು ಬಳಸಲಾಗಿದೆ ಎಂಬುದನ್ನು ಅನುಬಂಧದಲ್ಲಿ ತಿಳಿಸಿದ್ದಾನೆ. ಅಲ್ಲದೆ  ಸಾವಿರ, ಲಕ್ಷ ಇತ್ಯಾದಿ ಸಂಖ್ಯೆಗಳನ್ನೂ, ಕೆಲವು ಭಿನ್ನರಾಶಿಗಳ ಹೆಸರುಗಳನ್ನೂ ಅನುಬಂಧದಲ್ಲಿ ಸೇರಿಸಿ ಹೇಳಿದ್ದಾನೆ.

ಗ್ರೇಟರನ ವ್ಯಾಕರಣಮಾಲೆಗಳು
            1884ರಲ್ಲಿ ಗ್ರೇಟರ್ ಎಂಬ ಮಹಾಶಯ ಹೊಸ ಪ್ರಯತ್ನವೊಂದನ್ನು ಮಾಡಿದ. ಇಷ್ಟರವರೆಗೆ ಸೂತ್ರಗಳಲ್ಲಿ ಮತ್ತು ವಿವರಣೆಗಳಲ್ಲಿ ಮಾತ್ರ ಅಭಿವ್ಯಕ್ತಿ ಕಾಣುತ್ತಿದ್ದ ವ್ಯಾಕರಣ ವಿಷಯ ಇವನ ಕೈಯಲ್ಲಿ ಕೋಷ್ಟಕಗಳ ರೂಪ ಪಡೆಯಿತು. ಒಟ್ಟು ಹನ್ನೊಂದು ಕೋಷ್ಟಕಗಳಲ್ಲಿ ಇಡೀ ಕನ್ನಡ ವ್ಯಾಕರಣವನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ. ಅಡ್ಡಸಾಲುಗಳ ಮತ್ತು ಕಂಬ ಸಾಲುಗಳ ಶಿರ್ಷಿಕೆಗಳೇ ಪ್ರತಿಕೋಶದಲ್ಲಿರುವ ವ್ಯಾಕರಣ ವಿಷಯವನ್ನು ಸೂತ್ರೀಕರಿಸುತ್ತದೆ ಈ ತಂತ್ರವನ್ನು ಇತರ ಪಾಶ್ಚಾತ್ಯ ವ್ಯಾಕರಣಕಾರರು ಅಲ್ಲಲ್ಲಿ ಬಳಸುತ್ತಿದ್ದರಾದರೂ ಇಡೀ ವ್ಯಾಕರಣವನ್ನು ಈ ರೀತಿಯಲ್ಲಿ ಕಟ್ಟುವ ತಂತ್ರವನ್ನು ಇವನು ಅಭಿವೃದ್ಧಿಪಡಿಸಿದ. ತನಗಿಂತ ಹಳೆಯ ವ್ಯಾಕರಣಕಾರರ ಸೂತ್ರ ಮತ್ತು ಉದಾಹರಣೆಗಳನ್ನು ತನ್ನ ಕೋಷ್ಟಕಗಳಲ್ಲಿ ಇವನು ಉಲ್ಲೇಖಿಸಿದ್ದಾನೆ. ಕೋಷ್ಟಕ ರಚನೆಯು ಒಂದು ಕ್ರೋಡೀಕರಣವಿಧಾನವಾಗಿದ್ದು ಕನ್ನಡ ವ್ಯಾಕರಣವನ್ನು ವಿವರವಾಗಿ ಅಭ್ಯಸಿಸಿದ ವ್ಯಕ್ತಿಯೊಬ್ಬ ತನಗೆ ಬೇಕಾದಾಗ ಬೇಕಾದ ವಿಷಯವೊಂದನ್ನು ನೋಡಿ ದೃಢೀಕರಿಸಿಕೊಳ್ಳುವುದು ಇದರಿಂದ ಸುಲಭವಾಯಿತು.
                        ಒಟ್ಟಿನಲ್ಲಿ ಕನ್ನಡ ವ್ಯಾಕರಣ ನಿರೂಪಣೆಯಲ್ಲಿ ಹಲವು ಹೊಸ ಸುಧಾರಣೆಗಳನ್ನು ಪಾಶ್ಚಾತ್ಯ ವ್ಯಾಕರಣಕಾರರು ತಂದರು. ಇವು ಮುಮದಿನ ವರ್ಷಗಳಲ್ಲಿ ನೆಲೆನಿಂತವು.

ಕಿಟೆಲನ ವ್ಯಾಕರಣದಲ್ಲಿ ನಿರೂಪಣೆ
            ಅಲ್ಲಿಯವರೆಗೆ ಕನ್ನಡ ವ್ಯಾಕರಣವೆಂದರೆ ಹಳಗನ್ನಡ ವ್ಯಾಕರಣ ಅಥವ ನಡುಗನ್ನಡ ವ್ಯಾಕರಣ ಅಥವ ಹೊಸಗನ್ನಡ ವ್ಯಾಕರಣವೆಂದು ಮೂರು ಬಗೆಯಲ್ಲಿ ಅರ್ಥವಾಗುತ್ತಿತ್ತು. ಕೃಷ್ಣಮಾಚಾರ್ಯನು ತನ್ನ ಕೃತಿಯನ್ನು ಹೊಸಗನ್ನಡನುಡಿಗನ್ನಡಿ ಎಂದು ಕರೆದಿದ್ದರೂ ಅವನದು ನಿಜವಾಗಿ ನಡುಗನ್ನಡ ಅವಸ್ಥೆಗೆ ಹೆಚ್ಚಾಗಿ ಸಂಬಂಧಿಸಿದ್ದು. ಕಿಟೆಲ್ ಈ ಮೂರೂ ಭಾಷಾ ಅವಸ್ಥೆಗಳಿಗೆ ಸಂಬಂಧಿಸಿದಂತೆ ವ್ಯಾಕರಣವನ್ನು ರಚಿಸಿದ್ದು, ಅನುಗುಣವಾದ ತಂತ್ರವನ್ನು ಸೂಕ್ತವಾಗಿ ಅಳವಡಿಸಿಕೊಳ್ಳಬೇಕಾಯಿತು. ಇವನು ಒಂದು ರಿತಿಯಲ್ಲಿ ಕೇಶಿರಾಜನ ಸೂತ್ರ ಪರಂಪರೆಯನ್ನು ಮಂದುವರೆಸಿದ; ನಡುಗನ್ನಡ – ಹೊಸಗನ್ನಡಗಳಿಗೆ ಸಂಬಂಧಿಸಿದ ವಿವರಣೆಗಳನ್ನು ಸೇರಿಸಿದ; ತನ್ನ ಸಂಶೋಧನೆಗಳಿಂದ ವಿಶ್ಲೇಷಿಸಿ ನಿರೂಪಿಸಿದ, ಹೀಗೆ ಕನ್ನಡ ವ್ಯಾಕರಣವನ್ನು ಸಮಗ್ರ ಮತ್ತು ವ್ಯಾಪಕಗೊಳಿಸಿದ.
ಇಲ್ಲಿಯ ಪದ್ಧತಿಯನ್ನು ಕೆಳಗಿನ ಉದಾಹರಣೆಯಿಂದ ಸ್ಪಷ್ಟವಾಗುವುದು:
“193. In presenting the personal terminations let us use the European way of placing and naming of persons viz first person (uttama purusha), second person (madhyama purusha) and third person (prathama purusha)
1, The following are the personal terminations of the present,past and future tense in the ancient dialect:
                         Singular.                                                                      Plural.
1st pers.      ಎಂ, (before vowels) ಎನ್.       ಎಂ (if not followed by a vowel); ಎವು (cf. 137, a,    
                                                                                                           nominative plural).
2nd pers             ಅಯ್                                                                          ಇರ್
3rd pers.
masc.           ಅಂ,  (before vowels) ಅನ್.         ಅರ್;  ಒರ್ ( Rule198, 3,remark; Rule 200, 1);
          ಒಂ                                                    ಅರ್  ( Rule198  3" remark; Rule 201, i);
                                                                             ಅರು (Rule198, 3,remark),
fern.             ಅಳ್, ಒಳ್, ಆಳ್ ( Rule198, 3,                                        ಅರ್;  ಒರ್
                                               remark).
neut.           ಉದು,ಉತು,ಉತ್ತು,ಇತ್ತು,ತು                    ಉವು;exceptionally ಅವು (Rule 194,  remark 1;
                                                                                                                          Rule 198, 1).
About ಅದು and ಅವು of the negative see  Rule 209, 210
The personal terminations ಅಂ, ಒಂ, ಅಳ್, ಒಳ್, ಉದು, ಅರ್  and ಉವು are also the suffixes for the krillingas in  Rule 177, 179, 185, 186, 198,remark 1. 253.
2, The following are the correspondingpersonalterminations of the mediaeval dialect:
                     Singular.                                                         Plural.
1st pers.     ಎಂ, (before vowels) ಎನ್;ಎನು;ಎ.                        ಎವು
2nd pers.    ಎ                                                                     ಇರ್; ಇರಿ
3rd pers.
masc.         ಅಂ, (before vowels) ಅನ್;ಅನು;ಅ.                      (ಅರ್); ಅರು
fern;           ಅಳ್; ಅಳು                                                                 (ಅರ್); ಅರು
neut.          ಉದು; ಇತು,ಇತ್ತು; ಅತ್ತು; ತು                                          ಅವು
An occasional ಅದು for ಉದು in MSS. for the third person singular neuter is perhaps a mistake of the copyist.
3, The following are the corresponding personal terminations of the modern dialect:
                        Singular.                                                      Plural.
1st pers.         ಎನು;  ಎ                                                          ಎವು; ಇವಿ
2nd pers.        ಎ                                                                               ಇರಿ
3rd pers.
masc.              ಅನು; ಅ                                                             ಅರು
fern.                   ಅಳು                                                                           ಅರು
neut.                  ಅದು; ಇತು; ತು                                                            ಅವು” (ಕಿಟೆಲ್, 1903: ಪು,127)

            ಕಿಟೆಲನ ನಿರೂಪಣಾ ತಂತ್ರ ಈ ಉದಾಹರಣೆಯಿಂದ ಸಾಕಷ್ಟು ಸ್ಪಷ್ಟವಾಗುತ್ತದೆ. ಯಾವುದೇ ವ್ಯಾಕರಣಾಂಶಕ್ಕೆ ಸಂಬಂಧಿಸಿದ ನಿಯಮವನ್ನು ನಿರೂಪಿಸಿದಾಗ ಆ ನಿಯಮ ಕನ್ನಡದ ಮೂದು ಅವಸ್ಥೆಗಳಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾನೆ. ಈ ತಂತ್ರ ಕನ್ನಡ ವ್ಯಾಕರಣದಲ್ಲಿ ಅದುವರೆಗೆ ಆಗಿದ್ದ ಎಲ್ಲ ಬೇಳವಣಿಗೆಗಳನ್ನು ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. The present Grammar is chiefly based on Kesava’s Sabdamanidarpana (ಕಿಟೆಲ್, 1903: ಪು,i) ಎಂದು ಘೋಷಿಸಿಕೊಂಡು ಒಂದು ಕಡೆಯಿಂದ ವಿನಯವನ್ನು ಮೆರೆದಿದ್ದಾನೆ; ಇನ್ನೊಂದು ಕಡೆಯಿಂದ ಶಬ್ದಮಣಿದರ್ಪಣದಿಂದ ವ್ಯಾಪಕವಾಗಿ ಸೂತ್ರಗಳು ಮತ್ತು ಉದಾಹರಣೆಗಳನ್ನು ಉಲ್ಲೇಖಿಸಿ ಮತ್ತು ಇತರ ವ್ಯಾಕರಣಗಳಿಂದಲೂ ಉಲ್ಲೇಖಿಸಿ (ಉದಾ. This is only in the Sabdanusasana. Cf.No. 8. ಕಿಟೆಲ್ 1903: ಪು, 205. ಮತ್ತೆ Nagavarma introduces it under his sutra 80 when he writes,the agent
(kartri)may be expressedby the instrumental (tritiyee) ಅದೇ,ಪು 324. ) ತನ್ನ ಗ್ರಂಥವನ್ನು ಪ್ರಮಾಣಭೂತವನ್ನಾಗಿಸಿದ್ದಾನೆ.
            ಪದಗಳ ವಿಭಾಗದಲ್ಲಿ ಕೇಶಿರಾಜನ ವಿವರಣೆಗಳ ಬೆನ್ನು ಹತ್ತಿ ಕಿಟೆಲ್ ಕನ್ನಡದಲ್ಲಿ ಹದಿಮೂರು ವರ್ಗಗಳನ್ನು ಕಲ್ಪಿಸಿದ್ದಾನೆ: ನಾಮಪದ, ಸರ್ವನಾಮಮ, ಕೃಲ್ಲಿಂಗ, ಸಮಾಸನಾಮ, ತದ್ಧಿತನಾಮ, ಗುಣವಚನ, ಸಂಖ್ಯೆ – ಇವು ಇವನ ಪ್ರಕಾರ ವಿಭಕ್ತಿಗಳನ್ನೊಂದುವ ಪದವರ್ಗಗಳು.(ಕೇಶಿರಾಜ ತ್ರಿವರ್ಗೀಕರಣಕ್ಕೆ ಬದ್ಧನಾದ್ದರಿಂದ ಸಂಖ್ಯೆ, ಗುಣವಚನಗಳನ್ನು ಸ್ಪಷ್ಟವಾಗಿ ಪ್ರತ್ಯೇಕ ವರ್ಗಗಳಾಗಿರಿಸಿರಲಿಲ್ಲ). ಕ್ರಿಯಾಪದಗಳು ಆಖ್ಯಾತ ಪ್ರತ್ಯಯಗಳನ್ನೊಂದುವ ಪದವರ್ಗ. ಅನುಕರಣ ಪದಗಳು, ಕ್ರಿಯಾವಿಶಷಣ, ಭಾವಬೋಧಕ ಅವ್ಯಯ, ಸಮುಚ್ಚಯಾವ್ಯಯ, ಉಪಸರ್ಗಾವ್ಯಯ ಅಥವ ಉತ್ತರಸ್ಥಾನಿಗಳು(post positions) – ಪ್ರತ್ಯಯವನ್ನೊಂದದ ಪದವರ್ಗಗಳು. (ಕೇಶಿರಾಜ ಇವೆಲ್ಲವನ್ನೂ ಅವ್ಯಯವೆಂಬ ಒಂದೆ ವರ್ಗವಾಗಿ ಪರಿಗಣಿಸಿದ್ದ). ಹೀಗೆ ಕನ್ನಡದಲ್ಲಿ ಹದಿಮೂರು ಪದವರ್ಗಗಳೆಂದು ಕಿಟೆಲನ  ಪ್ರತಿಪಾದನೆ (ಮಹೀದಾಸ, 2015: ಪು, 405). ಇಲ್ಲೆಲ್ಲ ಇವನ ನಿರೂಪಣಾ ವಿಧಾನ ವಿಶಿಷ್ಟವಾದುದು. ಕೇಶವ ಹೀಗೆ ಹೇಳುತ್ತಾನೆ; ಅದರ ಅರ್ಥ ಹೀಗೆ ಎಂದು ವಿವರಿಸುತ್ತಾ ಕೇಶವನ ಸೂತ್ರಗಳ ವ್ಯಾಪ್ತಿಯನ್ನೇ ವಿಸ್ತರಿಸಿಬಿಡುತ್ತಾನೆ – ಒಳ್ಳೆಯ ವ್ಯಾಖ್ಯಾನಕಾರನಂತೆ. ನಮ್ಮ ಮತಾಚಾರ್ಯರೆಲ್ಲ ವೇದಗಳಿಂದ ಅರ್ಥ ಹೊರಡಿಸುವಂತೆ ಇವನಿಗೆ ಕೇಶಿರಾಜ ಆಧಾರ ರೇಖೆ. ಅಲ್ಲಿಂದ ಇದು ನಡುಗನ್ನಡದಲ್ಲಿ ಹೀಗಾಗುತ್ತದೆ, ಹೊಸಗನ್ನಡದಲ್ಲಿ ಹೀಗಾಗುತ್ತದೆ ಎಂದು ನಿರೂಪಿಸುತ್ತಾ ಉದಾಹರಣೆಗಳನ್ನು ಒದಗಿಸುತ್ತಾ ಸಾಗುತ್ತಾನೆ. ಈ ಕಾರ್ಯದಲ್ಲಿ ಆಧುನಿಕ ಭಾಷಾಶಾಸ್ತ್ರ ತತ್ವಗಳೂ ಮೇಳವಿಸುತ್ತವೆ. ಉದಾಹರಣೆಗೆ ಸರ್ವನಾಮಗಳ ಮೂಲಸ್ವರಗಳ ಬಗ್ಗೆ ಇವನ ವಿವರಣೆಯಲ್ಲಿ(ಕಿಟೆಲ್, 1903; ಪು 77-80) ಇದನ್ನು ಗುರುತಿಸಬಹುದು. ಹೀಗೆ ಕನ್ನಡ ವ್ಯಾಕರಣವನ್ನು ಪಾರಂಪರಿಕ ನೆಲೆಯಲ್ಲಿ ವ್ಯಾಪಕ, ಸಮಗ್ರ ಮತ್ತು ಖಚಿತವಾಗಿ ಮತ್ತು ಆಧುನಿಕ ಬೆಳವಣಿಗೆಗಳ ಹಿನ್ನೆಲೆಯೆಲ್ಲಿ ನಿರೂಪಿಸಲು ಸೂಕ್ತ ವಿಧಾನವನ್ನು ಇವನು ರೂಪಿಸಿದ.

ಕನ್ನಡ ಶಾಲಾ ವ್ಯಾಕರಣ
            ಇದೊಂದು ಶಾಲಾ ವ್ಯಾಕರಣವಾಗಿದ್ದರೂ ನಿರೂಪಣೆಯ ತಂತ್ರದಲ್ಲಿ ಮುಂದಿನ ಮಜಲನ್ನು ಇಲ್ಲಿ ಕಾಣಬಹುದು. ಅಕ್ಷರಗಳು, ಪದಗಳು, ಪದರಚನೆ ಮತ್ತು ವಾಕ್ಯರಚನೆ – ಇವುಗಳ ನಿರ್ಚವಚನಗಳು ಪ್ರಪ್ರತ್ಯೇಕವಾಗಿಯೇ ಉಳಿದುಬಿಡಬಹುದಾಗಿದ್ದ ಸಂದಿಗ್ಧವನ್ನ ಹೋಗಲಾಡಿಸಿ ವ್ಯಾಕರಣವಸ್ತುವಿನ ಒಂದು ವಿಶಿಷ್ಟ ವರ್ಗೀಕರಣವನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಇಲ್ಲಿಯ ವರ್ಗೀಕರಣವು ಪಾರಂಪರಿಕವೇ ಆದರೂ ಕನ್ನಡಡ ವ್ಯಾಕರಣವನ್ನು ಅಕ್ಷರಖಂಡ, ಶಬ್ದಖಂಡ, ವಾಕ್ಯಖಂಡ ಮತ್ತು ಛಂದೋಲಕ್ಷಣ ಎಂಬ ನಾಲ್ಕು ವಿಭಾಗಗಳಲ್ಲಿ ನಿರ್ದೇಶಿಸಿ ಇವೆಲ್ಲವೂ ಒಂದೇ ವಿವಕ್ಷಿತ ವಸ್ತುವಿನ ಅಂಶಗಳು ಎಂಬುದು ಸ್ಪಷ್ಟವಾಗುವಂತೆ ಏರ್ಪಡಿಸಿದ್ದಾನೆ. ಇವುಗಳಲ್ಲಿ ಶಬ್ದಖಂಡದಲ್ಲಿ ಪ್ರತಿಯೊಂದು ಪದವನ್ನು ರೂಪ ಭೇದ, ಜಾತಿಭೇದ ಮತ್ತು ವಾಗರ್ಥಭೇದಗಳೆಂಬ ಮೂರು ಭಿನ್ನ ತತ್ವಗಳಿಂದ ಗುರುತಿಸುವ ವಿಧಾನವನ್ನು ರೂಪಿಸಿರುವುದು ವಿಶಿಷ್ಟವಾಗಿದೆ. ಉದಾಹರಣೆಗೆ ‘ಕೊಟ್ಟನು’ ಎಂಬುದು   ದೇಶ್ಯ,  (ಕೊಡು ಎಂಬುದರಿಂದ) ವ್ಯುತ್ಪನ್ನ, (ಭೂತಕಾಲ) ಕ್ರಿಯಾಪದ. ಪ್ರತಿಯೊಂದು ಪದ ಹೀಗೆ ತ್ರಿಸ್ವರೂಪಿ. ಇವನು ಹೊಸಗನ್ನಡನುಡಿಗನ್ನಡಿಯ ಪ್ರಶ್ನೋತ್ತರ ರೂಪದಲ್ಲಿ ನಿರೂಪಣೆಯನ್ನು ಮುಂದುವರೆಸಿ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತೆ ರಚಿಸಿದ್ದಾನೆ. ಪಾರಂಪರಿಕ ವ್ಯಾಕರಣ ಪದ್ಧತಿಯಲ್ಲಿ ನಿರೂಪಣಾ ತಂತ್ರವು ಹೀಗೆ ಒಂದು ರೀತಿಯಲ್ಲಿ ಪೂರ್ಣವಿಕಾಸವನ್ನು ಈ ಕೃತಿಯಲ್ಲಿ ತಲುಪಿತೆಂದು ಹೇಳಬಹುದು. ಮುಂದೆ ಡಿ ಎನ್ ಶಂಕರಭಟ್ಟರು ಕನ್ನಡ ವ್ಯಾಕರಣವನ್ನು ರಚನಾತ್ಮಕ (constructive grammar) ವಿಧದಲ್ಲಿ ಬೆಳೆಸಲು ಪ್ರಯತ್ನಿಸಿದ್ದು ಅಷ್ಟೇನೂ ಜನಪ್ರಿಯವಾಗಲಿಲ್ಲ ಎನ್ನಬಹುದು.
           
            ಆಕರ ಗ್ರಂಥಗಳ ಅಕಾರಾದಿ:
1.    ಕಾತಂತ್ರ ಪಿಡಿಎಫ್: The Katantra with the commentary of Durgasimha Edited with notes and indexes by Julius Eggeling Printed by Stephen Austin and Sons Clcutta 1874, Bibleothica Indica, Asiatic Society of Bengal.
2.    ಕಿಟೆಲ್, 1903: ಎ ಗ್ರ್ಯಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ ಇನ್ ಇಂಗ್ಲಿಷ್ ಕಾಂಪ್ರೈಸಿಂಗ್ ದಿ ತ್ರೀ ಡಯಲಕ್ಟ್ಸ್ (ಮಂಗಳೂರು: ಬಾಸೆಲ್ ಬುಕ್ ಅಂಡ್ ಟ್ರ್ಯಾಕ್ ಡಿಪೋಸಿಟೊರಿ)
3.       ಕೃಷ್ಣಮಾಚಾರ್ಯ,ಶ್ರೀರಂಗ ಪಟ್ಟಣದ 1838: ಹೊಸಗನ್ನಟನುಡಿಗನ್ನಡಿ (ಮದ್ರಾಸು) ಪು,iii
4.    ಕೇಶೀರಾಜ: ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ ಸಂ|| ಡಿ ಎಲ್ ನರಸಿಂಹಾಚಾರ್ 1963 (ಮೈಸೂರು, ಶಾರದಾ ಮಂದಿರ, ರಾಮಯ್ಯ ರಸ್ತೆ)
5.    ಗ್ರೇಟರ್ ಬಿ, ರೆ. 1884: ಟೇಬಲ್ಸ್ ಆಫ್ ಕ್ಯಾನರೀಸ್ ಗ್ರ್ಯಾಮರ್  (ಮಂಗಳೂರು: ಬಾಸೆಲ್ ಬುಕ್ ಅಂಡ್ ಟ್ರ್ಯಾಕ್ ಡಿಪೋಸಿಟೊರಿ)
6.    ಚಿಟಗುಪ್ಪಿ,ಭೀಮರಾವ್,1976 : ‘ಇಮ್ಮಡಿ ನಾಗವರ್ಮ’  ಇದರಲ್ಲಿ: ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ 3. ಪು, 547 – 565. ( ಪ್ರಸಾರಾಂಗ: ಬೆಂಗಳೂರು ವಿಶ್ವವಿದ್ಯಾಲಯ)
7.    ನರಸಿಂಹಾಚಾರ್, 1985: ಎ ಹಿಸ್ಟರಿ ಆಫ್ ಕನ್ನಡ ಲಿಟರೇಚರ್ (ನ್ಯೂ ಡೆಲ್ಹಿ: ಏಶಿಯನ್ ಎಜುಕೇಶನಲ್ ಸರ್ವೀಸಸ್ )
8.    ನಾಗವರ್ಮ,1884: ನಾಗವರ್ಮಕೃತ  ಕರ್ನಾಟಕ ಭಾಷಾಭೂಷಣ ಸಂ|| ಲೂಯೀಸ್ ರೈಸ್ (ಇದರ ಮೊದಲ ಆವೃತ್ತಿ ಲಭ್ಯವಿಲ್ಲ. 1985ರಲ್ಲಿ ಏಶಿಯನ್ ಎಜುಕೇಶನಲ್ ಸರ್ವೀಸಸ್ ನ್ಯೂ ಡೆಲ್ಹಿ ಇವರ ಮುದ್ರಣ ಬಂದಿರುತ್ತದೆ. ಇದರಲ್ಲಿ ಪ್ರಥಮ ಮುದ್ರಣ ವರ್ಷವನ್ನು 1884 ಎಂದು ನಮೂದಿಸಿದೆ. ಇಲ್ಲಿ ಅದನ್ನೇ ಬಳಸಿಕೊಂಡಿದೆ).
9.    ಭಟ್ಟಾಕಳಂಕ,1968: ಕರ್ನಾಟಕ ಶಬ್ದಾನುಶಾಸನಂ. ಸಂ|| ಡಿ ಪದ್ಮನಾಭಶರ್ಮ,ಭುವನಹಳ್ಳಿ (ಬೆಂಗಳೂರು, ರಾಜಕಮಲ್ ಪ್ರಕಾಶನ).
10. ಮಹೀದಾಸ, 2015: ‘ಹೊಸ ಮಾದರಿ ವ್ಯಾಕರಣ ಗ್ರಂಥಗಳು’  ಇದರಲ್ಲಿ: ಮುಂಬೆಳಗು ಸಂ|| ಪ್ರೊ ಎ ವಿ ನಾವಡ (ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ಪು, 382-414
11.   ರೈಸ್, 1882:  ‘ಇಂಟ್ರೊಡಕ್ಷನ್’ ಇದರಲ್ಲಿ ನಾಗವರ್ಮ 1884. ಪು iv. 
12. ಸೀತಾರಾಮಯ್ಯ, 1979: ಪ್ರಾಚೀನ ಕನ್ನಡ ವ್ಯಾಕರಣಗಳು (ಮೈಸೂರು ವಿಶ್ವವವಿದ್ಯಾಲಯ)
13. ಸೈನಿ ಆರ್ ಎಸ್: ಪೋಸ್ಟ್ ಪಾಣಿನೀಯನ್ ಸಿಸ್ಟಮ್ಸ್ ಆಫ್ ಸಂಸ್ಕ್ರಿತ್ ಗ್ರ್ಯಾಮರ್ (ಪ್ರೈಮಲ್ ಪಬ್ಲಿಕೇಶನ್ಸ್ ದೆಹಲಿ)
14. ಹಾಡ್ಸನ್, ಥಾಮಸ್, ರೆ. 1859: ಅನ್ ಎಲಿಮೆಂಟರಿ ಗ್ರ್ಯಾಮರ್ ಕನ್ನಡ ಆರ್ ಕ್ಯಾನರಿಸ್ ಲ್ಯಾಂಗ್ವೇಜ್ (ಬೆಂಗಳೂರು, ವೆಸ್ಲಿಯನ್ ಮಿಶನ್ ಪ್ರೆಸ್)
15.   Dragons That Won’t Be Slain - www.unm.edu/~ldbeene/dragons-2.pdf · PDF file - University of New Mexico
16.   Rabindra Kumar Satpathy Pāṇinian and Kātantra Systems of Grammar: A Comparative Study Bharatiya Vidya Prakashan, 1999 Digitized 30 May 2008
17.  ಕಣಜ: http://www.nammakannadanaadu.com/vyakarana/parampare.php
18.   sanskrit.sai.uni-heidelberg.de/Panini/HTML
19. ಅಷ್ಟಾಧ್ಯಾಯೀ ಅಥವ ಸೂತ್ರಪಾಠ ಪಾಣಿನೀ ಕೃತ: http://sanskritdocuments.org/doc_z_misc_major_works/aShTAdhyAyI.pdf
20.  http://sanskritdictionary.com/ ವರ್ಣ ಸಮಾಮ್ನಾಯ:   "assemblage or aggregate of letters", the alphabet