ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಗೊಟ್-ಫ್ರೈಡ್-ವೈಗಲ್ ಎಂಬ ಜರ್ಮನ್ ವಿದ್ವಾಂಸ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕುರಿತು ಎಂಬ ಒಂದು ಪ್ರಬಂಧವನ್ನು ಬರೆದಿದ್ದಾನೆ. ಇದು ೧೮೪೬ರಲ್ಲಿ ಇವನು ಜರ್ಮನ್ ವಿದ್ವತ್ಪತ್ರಿಕೆಯೊಂದಕ್ಕೆ ಬರೆದ ಲೇಖನ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಂದ ಪ್ರಥಮ ಲೇಖನಗಳಲ್ಲಿ ಇದೊಂದು. ಆ ಪತ್ರಿಕೆಯಲ್ಲಿ ಇದು ೧೮೪೮ರಲ್ಲಿ ಪ್ರಕಟವಾಯಿತು. ಕನ್ನಡ ಭಾಷೆ ಮತ್ತು ವ್ಯಾಕರಣಗಳ ಬಗ್ಗೆ ಒಂದು ಕಿರು ಪರಿಚಯ ಇದರಲ್ಲಿದೆ. ಇದನ್ನು ಅನಂತರ ಕರೆನ್ ಶ್ಕೆರರ್ ಎಂಬ ವಿದ್ವಾಂಸ ಇಂಗ್ಲಿಶಿಗೆ ಅನುವಾದಿಸಿ ಪ್ರಕಟಿಸಿದ್ದಾನೆ. ಈ ಪ್ರಬಂಧವು ಮೂವತ್ತು ಪುಟಗಳಷ್ಟು ವಿಸ್ತಾರವಾದುದು.
ಇದೊಂದು ಪುಟ್ಟ ಪ್ರಬಂಧವಾದರೂ ಮಹತ್ವದ್ದು. "ಕಿರಿದರೊಳ್ ಪರಿದರ್ಥಮನೆ ಪೇಳ್ವ" ಗುಣ ಇದರಲ್ಲಿ ಘನತರವಾಗಿ ಕಾಣಿಸುತ್ತದೆ. ಇದು ಚಿಕ್ಕದಾದರೂ ಚೊಕ್ಕಟವಾಗಿದೆ; ಇದರಲ್ಲೊಂದು ಬೆರಗುಗೊಳಿಸುವ ಸಮಗ್ರತೆ ಇದೆ, ಒಂದು ಸ್ಪಷ್ಟ ಚಿತ್ರಣವಿದೆ. ಇದೊಂದು ಗಂಭೀರ ಬರಹ. ಆದರೂ ಹಲವು ಸಿದ್ಧಾಂತಗಳು ಮತ್ತು ನಿರೂಪಣೆಗಳು ಪ್ರಥಮ ಬಾರಿಗೆ ಇಲ್ಲಿ ವ್ಯಕ್ತವಾಗಿವೆ. ವಿವರಣೆಯ ವೈಶಾಲ್ಯ ಮತ್ತು ವಿಶ್ಲೇಷಣೆಯ ಆಳ ಈ ಪ್ರಬಂಧದದ ವೈಶಿಷ್ಟ್ಯ. ಇದರಲ್ಲಿ, ಬಹುಶಃ ಆ ಕಾಲದಲ್ಲಿ ಪ್ರಚಲಿತವಿದ್ದಂತೆ ಉದ್ದುದ್ದ ವಾಕ್ಯಗಳಿದ್ದರೂ ಬರಹವು ಸುಂದರವೂ ಗಂಭೀರವೂ ಆಗಿದೆ. ವಸ್ತುವಿನ ವಿಸ್ತಾರ ಹೆಚ್ಚಾಗಿರುವುದರಿಂದ ಒಂದು ಪಕ್ಷಿ ನೋಟದಂತೆ ಕನ್ನಡ ವ್ಯಾಕರಣ ವಸ್ತುವನ್ನೂ ಸಾಹಿತ್ಯ ಚರಿತ್ರೆಯ ಅಂಶಗಳನ್ನೂ ಇಲ್ಲಿ ಪರಿಶೀಲಿಸಿದ್ದಾನೆ.
ಜರ್ಮ್ ಭಾಷಾ ಜ್ಞಾನದ ಕೊರತೆಯಿಂದಾಗಿ ಇವನ ಪ್ರಬಂಧವನ್ನು ಅರ್ಥ ಮಾಡಿಕೊಳ್ಳಲು ಮತ್ತು ಬೆಲೆ ಕಟ್ಟಲು ನಾವು ಪ್ರಬಂಧದ ಇಂಗ್ಲಿಷ್ ಅವತರಣಿಕೆಯನ್ನು ಅವಲಂಬಿಸಬೇಕಾಗಿದೆ. ಕೆಲವು ಕಡೆ ಓದುಗನಿಗೆ ಅಸ್ಪಷ್ಟತೆ ಮತ್ತು ಗೊಂದಲ ಕಾಡುತ್ತವೆ. ಇದು ಮೂಲದ ಸಮಸ್ಯೆಯಾಗಿರುವುದಕ್ಕಿಂತ ಭಾಷಾಂತರದ ಅವಾಂತರವಾಗಿರುವುದು ಸಂಭವ. ಉದಾಹರಣೆಗೆ ಇಲ್ಲಿ ja ಎಂಬುದಕ್ಕೆ ʼಅಹುದುʼ ʼಹೌದುʼ ಎಂಬರ್ಥಗಳನ್ನು ಕೊಟ್ಟಿದ್ದು ಆಂಗ್ಲ ಭಾಷೆಯಲ್ಲಿ ಈ ಅರ್ಥ ಹೊಂದುವುದಿಲ್ಲವಾದ್ದರಿಂದ ಓದುಗ ಗೊಂದಲದಲ್ಲಿ ಬೀಳುತ್ತಾನೆ. (ಇಂಗ್ಲಿಶಿನಲ್ಲಿ yes ya yah yea ಇತ್ಯಾದಿ ಪದಗಳು ಈ ಅರ್ಥದಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಗಮನಿಸಬಹುದು).
ಪ್ರಬಂಧದಲ್ಲಿ ಎರಡು ಭಾಗಗಳಿದ್ದು ಮೊದಲನೆಯ ಭಾಗದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಹಲವು ವಿವರಗಳು ಕರಾರು ವಾಕ್ಕಾಗಿಯೂ ಚೊಕ್ಕಟವಾಗಿಯೂ ನಿರೂಪಿತವಾಗಿವೆ. ಎರಡನೆಯ ಭಾಗವು ಕನ್ನಡ ಸಾಹಿತ್ಯಕ್ಕೆ ಮೀಸಲಾಗಿದೆ. ಭಾಷೆಗೆ ಸಂಬಂಧಿಸಿದ ಭಾಗಕ್ಕೆ ಹೋಲಿಸಿದರೆ ಸಾಹಿತ್ಯಕ್ಕೆ ಸಂಬಂಧಿಸಿದ ಭಾಗವು ಪೇಲವವಾಗಿಯೂ, ಅಧ್ಯಯನ ಕೊರತೆಯಿಂದ ಬಳಲುತ್ತಿರುವಂತೆಯೂ, ಜಾಳಾಗಿಯೂ ಭಾಸವಾಗುತ್ತವೆ. ಬರೀ ಪ್ರಮಾಣವೇ ಈ ಅಂಶವನ್ನು ತೋರಿಸುವಂತೆ ಕಾಣುತ್ತದೆ: ಮೊದಲನೆಯ ಭಾಗವು ೨೨ ಪುಟಗಳಷ್ಟು ವಿಸ್ತಾರವಾಗಿದ್ದರೆ ಸಾಹಿತ್ಯಕ್ಕೆ ಸಂಬಂಧಿಸಿದ ವಿವರಗಳ ವಿಸ್ತಾರ ಕೇವಲ ಹತ್ತು ಪುಟಗಳು ಮಾತ್ರ. ನಾರಣಪ್ಪನ ಭಾರತ, ತೊರವೆ ರಾಮಾಯಣ, ಶಬ್ದಮಣಿದರ್ಪಣ ಇಂತಹ ಕೆಲವು ಕೃತಿಗಳ ಮತ್ತು ಕೃತಿಕಾರರ ಹೆಸರುಗಳನ್ನೂ ಹೇಳುವುದರಲ್ಲೇ ಇವನು ತೃಪ್ತಿಪಡುತ್ತಾನೆ. ಅದರಲ್ಲು ಹಲವು ಹೆಸರುಗಳನ್ನು ಹೇಳುವುದರಲ್ಲಿಯೂ ತಪ್ಪುಗಳು ಇಣುಕಿವೆ. ಮಹಾಭಾರತದ ಕವಿಯನ್ನು ನಾರಣನೆಂದೂ ರಾಮಾಯಣದ ಕವಿಯನ್ನು ನರಸಪ್ಪನೆಂದೂ ಇವನು ಹೆಸರಿಸಿದ್ದಾನೆ. ಕೊನೆಯ ಪುಟಗಳಲ್ಲಿ ಮೆಕೆರೆಲನವ್ಯಾಕರಣ ಮತ್ತು ಕೆಲವು ವಿದೇಶೀ ಕೃತಿಕಾರರನ್ನು ಇವನು ಹೆಸರಿಸಿದ್ದಾನೆ. ಇಷ್ಟೆಲ್ಲರನಡುವೆಯೂ ಈ ಭಾಗದಲ್ಲಿ ಒಂದೆರಡು ಕುತೂಹಲಕಾರೀ ಅಂಶಗಳು ಇಲ್ಲಿ ಬಂದಿವೆ, ಉದಾಹರಣೆಗೆ ಶ್ರೀರಂಗಪಟ್ಟಣದ ಕೃಷ್ಣಮಾಚಾರಿಯ ಬಗ್ಗೆ ಇವನ ಮಾತುಗಳನ್ನು ನೋಡಬಹುದು: "ಮದ್ರಸಿನ ಉಚ್ಚ ನ್ಯಾಯಾಲಯದಲ್ಲಿರುವ ಶ್ರೀರಂಗ ಪಟ್ಟಣ ಮೂಲದ ನ್ಯಾಯವಾದಿಯೊಬ್ಬರು ೧೮೩೮ರಲ್ಲಿ ೨೧೬ ಪುಟಗಳ ಉತ್ತಮವಾದ ಹೊಸಗನ್ನಡ ವ್ಯಾಕರಣದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದರ ಎರಡನೆಯ ಭಾಗವು ಹಳಗನ್ನಡವನ್ನು ಕುರಿತದ್ದಗಿರುವುದೆಂದು ಹೇಳಲಾಗಿದ್ದು, ಅದಿನ್ನೂ ಪ್ರಕಟವಾಗ ಬೇಕಾಗಿದೆ" (ಮುಂಬೆಳಗು ಪು೬೩೨). ಹಾಗೆಯೇ ದಾಸ ಸಾಹಿತ್ಯದ ಬಗ್ಗೆ ಇವನಿಗಿರುವ ಮೆಚ್ಚುಗೆ ಉಲ್ಲೇಖಾರ್ಹ: "[ಪ್ರಮುಖ] ಕೃತಿಗಳ ಕಾಲಕ್ಕೆ ಸೇರಿದ, ದರೆ ಅವುಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವುವವೆಂದರೆ ಪರ್ಷಿಯನ್ ಘಜಲುಗಳನ್ನು ಹೋಲುವ ಚಿಕ್ಕ ಪದ್ಯಗಳು. ಇವನ್ನು ರಚಿಸಿದವರು ʼದಾಸರುʼ ಎಂಬ ಹೆಸರಿನ ದೈವ ಭಕ್ತರು. ಇವರಲ್ಲಿ ಹಲವರು ಕೆಳವರ್ಗದಭಾಷೆಗೆ ಅನುವಾದಿಸಿದರೆಂದರೆ ದೂರದ ನಾಡುಗಳ ಸಾಹಿತ್ಯ ಪರಂಪರೆಗಳಿಂದ ಜರ್ಮನಿಯು ಪಡೆದುಕೊಂಡಿರುವ ಅಮೂಲ್ಯ ರತ್ನಗಳ ಸಾಲಿನಲ್ಲಿ ಅವು ಪ್ರಧಾನವಾಗಿ ಪ್ರಕಾಶಿಸುತ್ತವೆ (ಪು ೬೩೨). ೧೮೪೪ರಲ್ಲಿ ಮೊತ್ತ ಮೊದಲ ಬಾರಿಗೆ ಬಾಸೆಲ್ ಮಿಶನ್ ಒಂದು ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಲು ಪ್ರಯತನ್ಸಿತು ಎಂಬುದನ್ನುಇವನು ಉಲ್ಲೇಖಿಸಿದ್ದಾನೆ (ಪು ೬೩೫). ಇವೆಲ್ಲ ಮೊದಲ ಬಾರಿಗೆ ಉಲ್ಲೇಖಗೊಂಡಿರುವುದು ವೈಗಲನ ಪ್ರಬಂಧದಲ್ಲಿಯೇ.
ಮೊದಲ ಭಾಗದಲ್ಲಿ ಇವನು ಭಾಷೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಎತ್ತಿ ಹೇಳಿದ್ದಾನೆ. ಭಾಷೆಯ ಬಗ್ಗೆ ಇರುವ ಈ ಪ್ರಥಮ ಪರಿಚ್ಛೇದದಲ್ಲಿ ಕರ್ನಾಟಕ ಪ್ರಕಾಶಿಸುತ್ತವೆದ ಭೌಗೋಲಿಕ ಗಡಿಗಳೂ, ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳ ವಿವರಗಳೂ, ಕನ್ನಡ ಯಾವ ಭಾಷಾ ಕುಟುಂಬಕ್ಕ ಸೇರಿದ್ದೆಂಬಬಗ್ಗೆ ಚರ್ಚೆಗಳು, ಸಂಕ್ಷಿಪ್ತ ವ್ಯಾಕರಣ ವಿವರಗಳೂ ಇಲ್ಲಿವೆ. ಎರಡನೆಯ ಭಾಗದಲ್ಲಿ ಸಾಹಿತ್ಯ ಚರಿತ್ರೆಯ ವಿವರಗಳಿವೆ. ಈ ಪ್ರತಿಯೊಂದನ್ನೂ ಮುಂದೆ ಚರ್ಚಿಸಿದೆ. ವ್ಯಾಕರಣ ವಿಷಯಗಳನ್ನು ಚರ್ಚಿಸುವಾಗ ತದ್ಭವ ತತ್ಸಮಗಳ ವಿಷಯ ಮೊದಲಿಗೆ ಬಂದಿದೆ.ಅನಂತರ ನಾಮಪದ,ಸರ್ವನಾಮ, ಸಂಖ್ಯೆ, ಕ್ರಿಯಾಪದಮತ್ತು ವಾಕ್ಯ ರಚನೆ - ಈ ವಿಷಯಗಳ ಚರ್ಚೆ ಇದೆ. ಆದರೆ ಇವಿಷ್ಟೇ ನಿರೂಪಣೆ ಮತ್ತು ಉದಾಹರಣೆಗಳೊಂದಿಗೆ ಬಂದಿವೆ ಎಂದು ಭಾವಿಸಬಾರದು. ಅಂತರ್ಗತವಾಗಿ ಗುಣವಾಚಕಗಳು, ಕ್ರಿಯಾವಿಶೇಷಣಗಳು, ಕೃದಂತಗಳು, ಸಮಾಸ ಪದಗಳು, ದ್ವಿರುಕ್ತಿಗಳು - ಹೀಗೆ ಕನ್ನಡ ವ್ಯಾಕರಣದ ವಿಭಿನ್ನ ಅಂಶಗಳು ಚರ್ಚೆಯಾಗಿವೆ. ಒಟ್ಟಿನಲ್ಲಿ ಈ ಪ್ರಬಂಧ ಕನ್ನಡ ಭಾಷೆ ಮತ್ತು ವ್ಯಾಕರಣದ ಒಂದು ಕ್ಯಾಪ್ಸೂಲು ಎಂಬಂತೆ ಉಪಯುಕ್ತವಾಗದೆ. ೧೮೧೬ರಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳುನ ಪರಸ್ಪರ ಸಂಬಂಧ ಉಳ್ಳವುಗಳೆಂದೂ ಇವುಗಳನ್ನು ದ್ರಾವಿಡ ಭಾಷೆಗಲೆಂದು ಕರೆಯಬಹುದೆಂದೂ ಎಲ್ಲಿಸ್ ಸ್ಥಾಪಿಸಿದ ಮೇಲೆ ಬಹುಶಃ ವೈಗಲನೇ ಈ ವಿಷಯವನ್ನು ಮತ್ತೆ ಎತ್ತಿಕೊಂಡು ಚರ್ಚಿಸಿರುವುದು. ಇದೇ ಪ್ರಬಂಧದಲ್ಲಿ ಎವಾಲ್ಡ್, ವಿಲ್ಸನ್, ರೀನಿಯಸ್ ಇತ್ಯಾದಿ ವಿದ್ವಾಂಸರ ಕೊಡುಗೆಗಳನ್ನು ಪ್ರಸ್ತಾವಿಸಿದ್ದರೂ ಅವುಗಳಲ್ಲಿ ದ್ರಾವಿಡ ಭಾಷೆಗಳ ಏಕತೆಯ ಬಗ್ಗೆ ಹೆಚ್ಚಿನವಿಚಾರಗಳಿಲ್ಲ. ಹಾಗೆ ಇರಬಹುದಾದ ಕೃತಿಗಳು ಲಭ್ಯವಿಲ್ಲ. ಆದರೆ ವೈಗಲ್ ತೆಲುಗು ತಮಿಳು ತೆಲುಗುಗಳ ಜೊತೆಗೆ ತುಳು ಮತ್ತು ಮಲಯಾಳಮ್-ಗಳನ್ನು ಸೇರಿಸಿ ಪಂಚ ದ್ರಾವಿಡ ಭಾಷೆಗಳಿವೆ ಎಂದು ಪ್ರತಿಪಾದನೆ ಮಾಡಿದ್ದಾನೆ. ಅಲ್ಲದೆ ಈ ಪ್ರದೇಶದಲ್ಲಿ ಇನ್ನೂ ಹಲವು ಚಿಕ್ಕ ಸಮುದಾಯಗಳ ಭಾಷೆಗಳಿದ್ದು (ಉದಾ, ಕೊಡವ, ಕೊರಗ, ಮಲೆಕುಡಿಯ ಇತ್ಯಾದಿ) ಇವುಗಳೆಲ್ಲವೂ ದ್ರಾವಿಡ ಭಾಷೆಗಳೇ. ಅಷ್ಟೇ ಅಲ್ಲ, ಭಾರತದಾದ್ಯಂತವೂ ಈ ವರ್ಗಕ್ಕೆ ಸೇರಿದ ಹಲವು ಭಾಷೆಗಳಿವೆ ಎಂಬುದನ್ನು ಇವನು ವಿವರಿಸಿದ್ದು ಇವತ್ತಿಗೂ ನಿಜವಾಗಿದೆ. ಹೀಗೆ ಎಲ್ಲಿಸ್ ದ್ರಾವಿಡ ಭಾಷಾ ಕುಟುಂಬದ ಅನ್ವೇಷಕನಾದರೆ (ಶ್ರೀಕುಮಾರ್) ದ್ರಾವಿಡ ಭಾಷಾ ಸಾಮ್ರಾಜ್ಯದ ವಿಸ್ತರಣಕಾರ.
ಭೌಗೋಲಕತೆ, ವರ್ಣ ಮಾಲೆ, ಸಂಸಕೃತ ಪದಗಳ ಸ್ವೀಕರಣ, ನಾಮಪದಗಳ ಲಿಂಗ - ವಚನ, ಸರ್ವನಾಮ ಪದಗಳು, ಸಂಖ್ಯೆಗಳು ಮತ್ತು ಭಿನ್ನರಾಶಿಗಳು, ವಾಕ್ಯ ರಚನೆ - ಇವುಗಳಿಗೆ ಸಂಬಂಧಿಸಿದಂತೆ ದ್ರಾವಿಡ ಭಾಷೆಗಳಲ್ಲೆಲ್ಲ ಒಂದು ಏಕರೂಪತೆಯನ್ನು ವೈಗಲ್ ಗುರುತಿಸಿದ್ದಾನೆ. ಕರ್ನಲ್ ವಿಲ್ಕ್ಸ್ ಇವನ ನಿರೂಪಣೆಯನ್ನು ಒಪ್ಪಿ ವೈಗಲ್ ಹೇಳಿರುವ ಹಾಗೆ ಕನ್ಯಾಕುಮಾರಿಯಿಂದ ಹಿಡಿದು ಹೆಚ್ಚು ಕಡಿಮೆ ವಿಂಧ್ಯ ಪರ್ವತಗಳ ವರೆಗೆ ದ್ರಾವಿಡ ಭಾಷಾ ಕ್ಷೇತ್ರ. ಅದರಲ್ಲಿ ಬೀದರದಿಂದ ಕೊಯಮುತ್ತೂರಿನವರೆಗಿನ ನಾಡು ಕನ್ನಡಿಗರ ಆವಾಸ ಸ್ಥಾನ. ಇದು ಸ್ಥೂಲವಾಗಿ ಗೋದಾವರಿಯಿಂದ ಕಾವೇರಿವರೆಗಿನ ನಾಡೇ ಆಗಿದೆ. ಹೇಳುವ ರೀತಿ ಮಾತ್ರ ಬೇರೆಯಾಗಿದೆ. ವೈಗಲ್ ನಾಡಿನ ಗಡಿಗಳನ್ನು ತಿಳಿಸಲು ನಗರಗಳ ಹೆಸರುಗಳನ್ನೂ ಅಕ್ಷಾಂಶ ರೇಖಾಂಶಗಳನ್ನೂ ಬಳಸಿದ್ದಾನೆ. ಇದರಿಂದ ವಿವರಗಳು ಹೆಚ್ಚು ನಿಖರವಾಗಿ ಮತ್ತು ಭೂಪಟದಲ್ಲಿ ಗುತಿಸಬಲ್ಲ ರೀತಿಯಲ್ಲಿ ಬಂದಿವೆ.
ಎ ಒ ಮತ್ತು ಶಕಟ ರೇಫೆಗಳಿರುವುದು, ಋ, ऌ, ವಿಸರ್ಗ ಮತ್ತು ಮಹಾಪ್ರಾಣಾಕ್ಷರಗಳಿಲ್ಲದಿರುವುದು - ಇವನ್ನು ದ್ರಾವಿಡ ಭಾಷೆಗಳ ವರ್ಣಮಾಲೆಗಳ ಸಾಮಾನ್ಯ ಅಂಶಗಳನ್ನಾಗಿ ಮತ್ತು ಈ ಕುಟುಂಬವನ್ನು ಸಂಸ್ಕೃತದಿಂದ ಪ್ರತ್ಯೇಕಿಸುವಂತಹವಾಗಿ ವೈಗಲ್ ಗುರುತಿಸಿದ್ದಾನೆ. ಹೀಗೆ ದ್ರಾವಿಡ ಮತ್ತು ಸಂಸ್ಕೃತ ಭಾಷೆಗಳ ವಿಭಿನ್ನತೆ ಮತ್ತು ವಿಶಿಷ್ಟತೆಗಳನ್ನು ದ್ರಾವಿಡ ಭಾಷಾಶಾಸ್ತ್ರದ ಪ್ರಾರಂಭದ ದಿನಗಳಲ್ಲೇ ತೋರಿಸಿದಂತಾಗಿದೆ. ತಮಿಳು ವರ್ಣಮಾಲೆ ಮತ್ತು ಹಳೆಯ ಮಲಯಾಳಂ ವರ್ಣ ಮಾಲೆಗಳು ದ್ರಾವಿಡ ಗುಣಗಳನ್ನು ಘನತರವಾಗಿ ಉಳಿಸಿ ಕೊಂಡಿರುವುದಾಗಿ ಇವನು ಸಯುಕ್ತಿಕವಾಗಿ ವಿವರಿಸಿದ್ದಾನೆ.
ಸಂಸ್ಕೃತ ಪದಗಳನ್ನು ಭಾಷಾ ಬೆಳವಣಿಗೆಗಾಗಿ ಸ್ವೀಕರಿಸಿರುವುದು ಕುಟುಂಬದ ಎಲ್ಲ ಭಾಷೆಗಳಿಗೆ ಸಾಮಾನ್ಯವಾದ ಸ್ವಭಾವ. ಸಂಸ್ಕೃತದಿಂದ ಪದಗಳನ್ನು ಎರವಲು ಪಡೆಯುವಾಗ ಆಗುವ ಧ್ವನಿ ಬದಲಾವಣೆಗಳು ಹೆಚ್ಚು ಕಡಿಮೆ ಏಕ ರೂಪದವಾಗಿದ್ದು ಇವು ಮೊದಲು ಪ್ರಾಕೃತದಲ್ಲಿ ಪದಸ್ವೀಕರಣ ಸಂದರ್ಭದಲ್ಲಿ ರುಪುಗೊಂಡವು ಎಂಬುದು ಇವನ ಅಭಿಪ್ರಾಯ. ಇವೇ ನಿಯಮಗಳೇ ಕನ್ನಡದಲ್ಲಿ ತದ್ಭವಗಳನ್ನು ರೂಪಿಸುವಾಗ ಬಳಕೆಯಾದವು. ಇವನ ಅಭಿಪ್ರಾಯಗಳು ವಾಸ್ತವವಾಗಿವೆ. ಕನ್ನಡದಲ್ಲಿ ಸಂಸ್ಕೃತದಿಂದ ಸ್ವೀಕೃತ ಪದಗಳಿಗೆ ತದ್ಭವಗಳೆನ್ನುತ್ತಾರೆ ಎಂಬುದನ್ನು ಇವನು ಸ್ಪಷ್ಟವಾಗಿ ಹೇಳಿದ್ದಾನೆ. ವ್ಯತ್ಯಾಸಕ್ಕೊಳಗಾಗದೆ ಕನ್ನಡಕ್ಕೆ ಸ್ವೀಕೃತವಾಸ ಪದಗಳೂ ಇವೆಯಾದರೂ "ಹೊರಗಿನ ಪದಗಳನ್ನು ಬಳಸದೇ ಕನ್ನಡದಲ್ಲಿ ಏನನ್ನಾದರೂ ಹೇಳುವುದು ಅಥವ ಬರೆಯುವುದು ಹೆಚ್ಚು ಕಡಿಮೆ ಅಸಾಧ್ಯ" ಎಂಬುದನ್ನು ಇವನು ಭಿಡೆ ಇಲ್ಲದೆ ಹೇಳಿದ್ದನೆ.
ನಾಮಪದಗಳ ಸಂದರ್ಭದಲ್ಲಿ ಸಹಜವಾಗಿ ಕನ್ನಡದಲ್ಲಿ ಸಮಾಸನಾಮಗಳಿಲ್ಲವೆಂಬ, ನಾಮಪದಗಳ ಲಿಂಗವು ತಮಿಳಿನಲ್ಲರುವಂತೆ ಮಾನವ ಮಾನವೇತರ ಎಂಬ ವಿಭಾಗವನ್ನು ಅನುಸರಿಸಿಕೊಂಡು ಮುಂದುವರೆದಿದೆ ಎಂಬ, ಈ ವಿಷಯಗಳ ಮೊದಲ ಪ್ರತಿಪಾದನೆಯಾಗಿರುವುದು ಬಹುಶಃ ಇವನ ಪ್ರಬಂಧದಲ್ಲಿಯೇ. ತನ್ನ ಗುರು ಎವಾಲ್ಡನನ್ನನುಸರಸಿ "ದ್ರಾವಿಡ ಸರ್ವನಾಮಗಳಲ್ಲಿ ಅ ಮತ್ತು ಇ ಎಂಬಿವು ಸಾಮೀಪ್ಯವನ್ನು ಸೂಚಿಸುವುವು" ಎಂದು ಇವನು ಪ್ರತಿಪಾದಿಸಿದ್ದಾನೆ ಮತ್ತು ಇದನ್ನು ಮುಂದೆ ಕಾಲ್ಡ್ವೆಲ್ ಕೂಡ ಒಪ್ಪಿ ಮುಂದುವರೆಸಿದ್ದಾನೆ.(ಆದರೆಕಿಟೆಲನ ಅಭಿಪ್ರಾಯವು ಬೇರೆಯಾಗಿದೆ). ಕನ್ನಡದಲ್ಲಿ ಅವನು ಇವನು ಎಂಬ ಸರ್ವನಾಮಗಳ ನಡುವೆ ಉವನು ಎಂಬುದು ಕೂಡ ಇದೆ ಎಂಬುದು ವೈಗಲನ ಇನ್ನೊಂದು ಸ್ವೋಪಜ್ಞ ನಿರೂಪಣೆ.
ಸಂಖ್ಯೆಗಳ ಬಗ್ಗೆ ಇವನು ಕಾಲ್ಡ್ವೆಲನಂತೆ ಅಥವ ಕಿಟೆಲನಂತೆ ಒಂದು ಎರಡು ಇತ್ಯಾದಿ ಪದಗಳು ಕನ್ನಡದಲ್ಲಿ ಹೇಗೆ ಹುಟ್ಟಿಕೊಂಡವು ಎಂಬ ಚರ್ಚೆಗೆ ಹೋಗುವುದಿಲ್ಲ. ಒಂದು ಎರಡು ಇತ್ಯಾದಿ ಹತ್ತರವರೆಗಿನ ಸಂಖ್ಯೆಗಳ ಹೆಸರುಗಳು ಮತ್ತು ಅವುಗಳನ್ನು ಬರೆಯುವ ರೀತಿಗಳನ್ನು ನಿರೂಪಿಸಿದ್ದಾನಲ್ಲದೆ ಅಲ್ಲಿಂದ ಮುಂದಿನ ಸಂಖ್ಯೆಗಳನ್ನು ಹೇಳುವಾಗ ಪೂರ್ವಪದವಾಗಿ ಹತ್ತು ಎಂಬುದನ್ನು ಹಚ್ಚಬೇಕೆಂಬುದನ್ನು ವಿವರಿಸಿದ್ದಾನೆ. ಸಾವಿರ ಸಹಸ್ರ ಎಂಬ ಪದಗಳಲ್ಲೂ ಮತ್ತು ಮುಂದಿನ ಸಂಖ್ಯೆಗಳ ಹೆಸರುಗಳಲ್ಲೂ ಸಂಸ್ಕೃತದ ಸಂವಾದೀ ಪದಗಳಿರುವುದನ್ನು ಇವನು ಗುರುತಿಸಿ ವಿವರಿಸಿದ್ದಾನೆ. ಇದರಿಂದ ಕನ್ನಡ ಮತ್ತು ಸಂಸ್ಕೃತಗಳು ಒಟ್ಟಾಗಿ ಬಾಳುವ ವಿಧಾನವನ್ನು ತೋರಿಸಿದಂತಾಗಿದೆ. ಜೊತೆಗೆ ಉತ್ತರ ಭಾರತದ ಭಾಷಗಳಲ್ಲೆಲ್ಲೂ ಕಂಡುಬರದ ಭಿನ್ನ ರಾಶಿ ಪದ್ಧತಿಯೊಂದು ದ್ರಾವಿಡ ಭಾಷೆಗಳಲ್ಲಿ ಕಂಡು ಬರುತ್ತದೆ ಎಂಬ ಆಶ್ಚರ್ಯಕರವಾದ ಮತ್ತು ವಿಶಿಷ್ಟ ಅಂಶವನ್ನು ಎತ್ತಿ ಹೇಳಿದ್ದಾನೆ. ಕನ್ನಡದಲ್ಲಿರುವ ಭಿನ್ನರಾಶಿಗಳು ಮತ್ತು ಅವುಗಳ ಹೆಸರುಗಳು ಹೀಗಿವೆ: ೧/೨ - ಅರೆ, ೧/೪ - ಕಾಲು, ೧/೮ - ಬೇಳೆ, ೧/೧೬ - ವೀಸ, ೧/೩೨ - ಅರೆವೀಸ, ೧/೬೪ - ಕಾಣಿ ೧/೧೨೮ - ಅರೆಕಾಣಿ, ೧/೨೫೬ - ಗಿಡ್ಡಾಣಿ. ತಮಿಳಿನಲ್ಲಿ ೧/೨೦ ಕ್ಕೆ ಮಾ ಎಂದೂ ತೆಲುಗಿನಲ್ಲಿ ೧/೨೫೬ ಕ್ಕೆ ಪ್ರಿಯ, ೧/೧೦೨೪ ಕ್ಕೆ ಸುರ ಎಂದೂ ಹೆಸರುಗಳಿರುವುದನ್ನು ತಿಳಿಸಿದ್ದಾನೆ. ಇವುಗಳಲ್ಲಿ ಹಲವು ಪದಗಳು ಈಗ ಬಳಕೆಯಿಂದ ಬಿಟ್ಟು ಹೋಗಿವೆ. ಆದರೂ ಇವು ದಾವಿಡ ಭಾಷೆಗಳ ಏಕತೆಯನ್ನು ತೋರಿಸುವುದರಿಂದ ಭಾಷಾ ದೃಷ್ಟಿಯಿಂದ ಮುಖ್ಯವಾಗಿವೆ. ಇವುಗಳನ್ನೆಲ್ಲ ಮೊದಲ ಬಾರಿಗೆ ದಾಖಲಿಸಿ ಎತ್ತಿ ತೋರಿಸಿದ ಕೀರ್ತಿ ವೂಗಲನಿಗೆ ಸಲ್ಲಬೇಕು.
ಕ್ರಿಯಾಪದಗಳಲ್ಲಿ ಉದಿಂದ ಕೊನೆಗೊಳ್ಳುವುವು ಮತ್ತು ಇ/ಎ ದಿಂದ ಕೊನೆಗೊಳ್ಳುವುವು ಎಂಬ ಎರಡು ಗಣಗಳನ್ನು ಮೊದಲಾಗಿ ತಿಳಿಸಿದ ಮಿಶನರಿಯೂ ಇವನೇ (ಇವುಗಳ ವಿವರಣೆ ಹಳಗನ್ನಡ ವ್ಯಕಾರಣಗಳಲ್ಲೂ ತನ್ನದೇ ರೀತಿಯಲ್ಲಿವೆ). ಭೂತ, ಭವಿಷ್ಯತ್, ವರ್ತಮಾನ ಕಾಲಗಳ ಜೊತೆಗೆ ಎರಡನೆಯ ವರ್ತಮಾನ ಅಥವ ಸಂಭಾವನಾರ್ಥ, ಪ್ರೇರಣಾರ್ಥ ಮತ್ತು ನಿಷೇಧಾರ್ಥ ಎಂಬ ರೂಪಗಳನ್ನು ಇವನು ವಿವರಿಸಿದ್ದಾನೆ (ಇವುಗಳ ವಿವರಣೆಯನ್ನೂ ಹಳಗನ್ನಡ ವ್ಯಾರಣಗಳಲ್ಲಿ ಕಾಣಬಹುದು). ಆಧುನಿಕಾ ಕನ್ನಡ ಭಾಷೆಯಲ್ಲಿ ವರ್ತಮಾನ ಕಾಲ ಕ್ರಿಯಾಪದ (ಹಳಗನ್ನಡ ಕಾಲದಲ್ಲಿ ವ್ಯಂಜನಾಂತವಾಗಿದ್ದುದು) ಎಕಾರಾಂತವಾಗುತ್ತದೆ ಎಂಬುದನ್ನು ಇವನು ಸ್ಪಷ್ಟವಾಗಿ ಗುರುತಿಸಿದ್ದಾನೆ. ಮುಂದೆ ಕಿಟೆಲ್ ಹಳಗನ್ನಡ ಕಾಲದಲ್ಲಿ ವ್ಯಂಜನಾಂತವಾಗಿದ್ದ ಎಲ್ಲ ಆಖ್ಯಾತ ಪ್ರತ್ಯಯಗಳೂ ಉಕಾರಾಂತವಾಗಿರುವಾಗ ಇದೊಂದು ಮಾತ್ರ ಹೇಗೆ ಎಕಾರಾಂತವಾಯಿತೆಂಬ ಒಗಟನ್ನು ಸಯುಕ್ತಿಕವಾಗಿ ಬಿಡಿಸಿರುವುದು ಈಗ ಇತಿಹಾಸ.
ಇವನು ಹೇಳಿರುವ ಕ್ರಿಯಾಪದಗಳ ಇನ್ನೆರಡು ಗುಣಗಳು ಕುತೂಹಲಕರವಾಗಿವೆ. ಕನ್ನಡದಲ್ಲಿ ಕರ್ಮಣಿ ಪ್ರಯೋಗವಿಲ್ಲವೆಂಬುದು ಒಂದು. ಇಷ್ಟನ್ನೆ ಃೇಳಿ ಇವನು ನಿಲ್ಲಿಸುವುದಿಲ್ಲ. ಕರ್ತರಿ ಪ್ರಯೋಗದಲ್ಲಿಯೇ ಹೇಳುವುವುದು ಸರಿಯಾದ ಕನ್ನಡ. ಇಂಗ್ಲೀ಼ಿನ ಪ್ರಭಾವದಿಂದ ಪಡು to fall ಎಂಬ ಪದವ್ನನು ಕರ್ಮಣಿ ಪ್ರಯೋಗಕ್ಕಾಗಿಕೆಲವರು ಬಳಸುತ್ತಿದ್ದು ಇದರಿಂದ ಕನ್ನಡದ ಸಹಜ ಅಭಿವ್ಯಕ್ತಿ ಸ್ಪಷ್ಟತೆ ಕೆಟ್ಟಿವೆ ಎಂದು ಅಭಿಪ್ರಾಯಿಸುತ್ತಾನೆ. ಇದು ಭಾಷೆಯ ಸಹಜ ಸ್ವಭಾವವನ್ನು ಉಳಿಸಿಕೊಳ್ಳುವ ಇವನ ಕಾಳಜಿಯನ್ನು ಕನ್ನಡದ ಸೌಂದರ್ಯವನ್ನು ಮೆಚ್ಚುವ ರೀತಿಯನ್ನೂ ತೋರಿಸುತ್ತದೆ. ಇನ್ನೊಂದು ಸಂಸ್ಕೃತ ಮತ್ತು ಹಿಂದೂಸ್ತಾನಿಗಳಿಂದ ಇಸು ಪ್ರತ್ಯಯವನ್ನು ಹಚ್ಚವ ಮೂಲಕ ಯಾವ ಪದವನ್ನು ಬೇಕಾದರೂ ಕನ್ನಡಕ್ಕೆ ಸ್ವೀಕರಿಸಬಹುದೆಂಬ ವಿಚಾರ. ಇದಕ್ಕೆ ಇವನು ನಿಗದಿ ಡಪಿಸಿರುವ ಒರೆ ವ್ಯಾವಹಾರಿಕವಾಗಿ ಮೆಚ್ಚುವಂತಿದೆ: ʼಹೊಸದಾಗಿ ಸ್ವೀಕರಿಸಿದ ಪದಗಳ ಜಪ್ರಿಯತೆ ಹುರುತಿಸಲ್ಪಡುವಿಕೆ ಮತ್ತು ಮೊದಲೇ ಬಳಕೆಯಲ್ಲಿರುವ ಪದಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ ಇವುಗಳನ್ನು ಪರಿಗಣಿಸಬೇಕು ಅಷ್ಟೆʼ.
ಕನ್ನಡ ವಾಕ್ಯಗಳಲ್ಲಿ ಕರ್ತೃಪದ ಕ್ರಿಯಾಪದಗಳ ಸ್ಥಾನದ ಬಗ್ಗೆ ಇತರ ಪದಗಳ ಅನುಕ್ರಮದ ಬಗ್ಗೆ ನಾಮ ವಿಶೇಷಣ ಕ್ರಿಯಾ ವಿಶೇಷಣಗಳ ಪ್ರಯೋಗದ ಬಗ್ಗೆ ತಿಳಿಸ ಬೇಕಾದ ಅಂಶಗಳನ್ನು ವಾಕ್ಯ ರಚನೆಯ ಪರಿಚ್ಛೇದದಲ್ಲಿ ನಿರೂಪಿಸಿದ್ದಾನೆ. ಇವನು ಕನ್ನಡದಲ್ಲಿ ತುಲನೆಯ ಅಭಿವ್ಯಕ್ತಿಯ ಬಗ್ಗೆ ಹೇಳುವುದು ಗಮನಾರ್ಹವಾಗಿದೆ: "ಜರ್ಮನ್ ಭಾಷೆಯಲ್ಲಿ ತುಲನೆಯ (than) (als)ನ್ನು ಅನುಸರಿಸಿ ಅನಂತರ ಬರುವ ಭಾಗವು (ಕನ್ನಡದಲ್ಲಿ) ತುಲನೆಗಿಂತ ಮೊದಲು ಬರುತ್ತದೆ. "ಒಟ್ಟಾಗಿ ಹೇಳುವುದಾದರೆ: ಕೊನೆಯದಾಗಿ ನಿರ್ಣಯವನ್ನು ಹೇಳುವ ಮೊದಲು ಆ ನಿರ್ಣಯದ ಪರಿಕರಗಳನ್ನು ಹೇಳಬೇಕು" ಎಂದು ಹೇಳಿದ್ದಾನೆ. ಇವು ಇವನ ಸ್ವೋಪಜ್ಞ ವಿಚಾರಗಳು.
ದ್ರಾವಿಡ ಭಾಷೆಗಳನ್ನು ವಿಶ್ವಭಾಷಾ ಕುಟುಂಬಗಳ ಮಧ್ಯೆ ಎಲ್ಲಿಡಬೇಕೆಂಬ ಬಗ್ಗೆ ಕೂಡ ಇವನು ಗಮನ ಹರಿಸಿದ್ದಾನೆ. ಈ ಭಾಷೆಗಳನ್ನು ಟಾರ್ಟೃ ಭಾಷೆಗಳು. ಪೋಲಿನೇಶ್ಯನ್ ಭಾಷೆಗಳು, ಜರ್ಮನ್ ಭಾಷೆ, ಗ್ರೀಕ್ ಭಾಷೆ ಇವುಗಳ ಜೊತೆಗೆಲ್ಲ ಹೋಲಿಸಿ ಇವುಗಳೊಡನೆ ಈ ಭಾಷೆಗಳಿಗೆ ಸಂಬಂಧವಿಲ್ಲವೆಂದು ವಿವರಿಸಿದ್ದಾನೆ.
ಕೃತಿಯಲ್ಲಿ ದೋಷಗಳೇನು ಇಲ್ಲವೆಂದಲ್ಲ. ತುಳು ಕೆಳಮಟ್ಟದ ಜನರ ಭಾಷೆ ಎಂದು ಇವನು ಹೇಳಿರುವುದು, ಯಾವ ಭಾಷಿಕರ ಬಗ್ಗೆಯೇ ಹೀಗೆ ಹೇಳಿದರೂ, ಒಪ್ಪುವ ಮಾತಲ್ಲ. ಕೊಳ್ಳು ಎಂಬುದಕ್ಕೆ ಖರೀದಿ ಎಂಬ ಅರ್ಥವನ್ನು ಹೇಳಿ ಮಾಡಿಕೊಳ್ಳು ಎಂಬಂತಹ ಕಡೆ to do something in relation to oneself ಎಂದರ್ಥವಾಗುತ್ತದೆ ಎನ್ನುತ್ತಾನೆ. ಆದರೆ ಈ ಸಂದರ್ಭದಲ್ಲಿ ಇದರ ಅರ್ಥ to take ಎಂಬುದಾಗಿರುವುದು ವಿದಿತ. ಹಾಗೆಯೇ ಸಂಸ್ಹಕೃತದ ಪರ್ವ ಎಂಬ ಪದಕ್ಕೆ section of a book ಎಂಬರ್ಥವಿದ್ದು ಕನ್ನಡಕ್ಕೆ ಹಬ್ಬ ಎಂದಾಗ celeberation ಎಂರ್ಥವಾಗುತ್ತದೆ ಎಂಬ ವಿವರಣೆ ದೋಷಪೂರ್ಣವಾಗಿದ್ದು ಪರ್ವ ಎಂಬ ಶಬ್ದದ ಉತ್ಸವ ಎಂಬರ್ಥದಿಂದ ಹಬ್ಬ ಉಂಟಾಗಿದೆ ಎಂಬುದು ಸ್ಪಷ್ಟ. ಉವನು ಎಂಬುದು ಆಧುನಿಕ ಕನ್ನಡದಲ್ಲಿ ಕ್ರಿಯಾಪದಾಂತ್ಯಗಳಲ್ಲಿ ಕಂಡುಬರುವುದಾಗಿ ಇವನು ಹೇಳಿದ್ದಾನೆ. ಭೌಗೋಲಿಕ ವಿವರಗಳಲ್ಲೂ ಸಣ್ಣ ದೋಷಗಳು ಕಾಣಿಸುತ್ತವೆ. ಆದರೆ ಇವೆಲ್ಲವುಗಳು ಕೃತಿಯ ಪ್ರಾಮುಖ್ಯವನ್ನು ಸ್ವಲ್ಪವೂ ಕಡಿಮೆ ಮಾಡುವುದಿಲ್ಲ.
ದ್ರಾವಿಡ ಭಾಷೆಗಳ ಇತಿಹಾಸದಲ್ಲಿ ಕಾಲ್ಡ್ವೆಲ (೧೮೫೬) ಒಂದು ದೊಡ್ಡ ಹೆಸರು. ದ್ರಾವಿಡ ಭಾಷೆಗಳ ವ್ಯಾಕರಣಗಳ ತುಲನೆ, ವಿಶ್ವಭಾಷೆಗಳ ನಡುವೆ ಅವುಗಳ ಸ್ಥಾನ, ಭಾರತದ ಬೇರೆಬೇರೆ ಭಾಗಗಳಲ್ಲಿರುವ ದ್ರಾವಿಡ ಭಾಷೆಗಳ ನಿರೂಪಣೆ ಇಂತಹವುಗಳಲ್ಲೆಲ್ಲ ಇವನೇ ಆದ್ಯ ಪ್ರವರ್ತಕನೆಂದು ಹಲವರ ನಂಬಿಕೆ. ವಿಷಯಗಳ ವ್ಯಾಪ್ತಿ ವಿಶ್ಲೇಷಣೆಯ ಆಳ ನಿರೂಪಣೆಯ ವಿಸ್ತಾರ ಮತ್ತು ಈ ಸಂಬಂಧದ ಬೃಹತ್-ಗ್ರಂಥದ ಲೇಖನ ಇವುಗಳನ್ನೆಲ್ಲ ದೃಷ್ಟಿಯಲ್ಲಿಟ್ಟು ನೋಡಿದಾಗ ಅದು ನಿಜವೂ ಹೌದು. ಐತಿಹಾಸಿಕವಾಗಿ ಯಾರು ಮೊದಲು ಎಂಬ ಜಿಜ್ಞಾಸೆ ಬಂದಾಗ ಎಲ್ಲಿಸನ (೧೮೧೬) ಹೆಸರನ್ನು ಹೇಳಲಾಗುತ್ತಿದೆ. ಇವರಿಬ್ಬರ ನಡುವೆ ಇದುವರೆಗೆ ಅಗೋಚರನಾಗಿದ್ದ ಕೊಂಡಿಯೇ ವೈಗಲ್ (೧೮೪೬). ಎಲ್ಲಿಸ್ ಪ್ರಾರಂಭಿಸಿದ ದ್ರಾವಿಡ ಆಭಷಾ ಯಾನವನ್ನು ಸುಸೂತ್ರವಾಗಿ ಮುಂದುವರೆಸುವಲ್ಲಿ ಗೊಟ್ಟ-ಫ್ರೈಡ್ ವೈಗಲ್ ಮೌಲಿಕ ಕೊಡುಗೆಯನ್ನು ಈ ಪ್ರಬಂಧದ ಮೂಲಕ ನೀಡಿದ್ದಾನೆ.
No comments:
Post a Comment