Search This Blog

Thursday 20 January 2022

ಶಿಕ್ಷಣ ಮತ್ತು ಪರಂಪರೆ

 




ಶಿಕ್ಷಣ ಮತ್ತು ಪರಂಪರೆ

                     

ತಂದೆಯಿಂದ ಮಗನಿಗೆ ವೃತ್ತಿ ಶಿಕ್ಷಣ ಗುರುಕುಲ ಪದ್ಧತಿಯ ಶಿಕ್ಷಣ ಮೂಲಶಿಕ್ಷಣ - ಇಂತಹವೂ ಎಲ್ಲ ಪರಂಪರೆಗೆ ಸೇರಿದ ಶಿಕ್ಷಣ ಪದ್ಧತಿಗಳೇ. ಆದರೆ ನಾನಿಲ್ಲಿ ಅಂತಹವುಗಳ ಬಗ್ಗೆ ಹೇಳುತ್ತಿಲ್ಲ. ಆಧುನಿಕ ಶಿಕ್ಷಣ ಪದ್ಧತಿಯು ದೇಶದಲ್ಲಿ ಅನುಷ್ಠಾನವಾದ ಮೇಲೆ ಎಲ್ಲವೂ ಸರಿಹೋಗುತ್ತದೆ ಎಂದು ನಂಬಲಾಗಿತ್ತು ತಾನೆ?  ಆದರೆ ಈಗೇನಾಗಿದೆ? ದೇಶದಲ್ಲಿರುವ ಭ್ರಷ್ಟಾಚಾರದ ಬಗ್ಗೆ, ಸಾರ್ವಜನಿಕ ಆಸ್ತಿಯ ನಿರ್ಲಕ್ಷ್ಯದ ಬಗ್ಗೆ. ಈ ಕೊರೊನಾ ದಿನಗಳಲ್ಲಿ ಪೇಟೆಯಲ್ಲಿ ಕಾಣುವ ಅಶಿಸ್ತು, ಸ್ವಂತ ಆರೋಗ್ಯದ ಬಗ್ಗೆಯೇ ಕಾಳಜಿ ಇಲ್ಲದಿರುವುದು - ಇಂತಹವೆಲ್ಲದರ ಬಗ್ಗೆ  ನಾವೆಲ್ಲರೂ ಮಾತನಾಡಿ ಕೊಳ್ಳುತ್ತಿರುತ್ತೇವೆ. ರಾಜಕೀಯ ನಾಯಕರುಗಳ ಮತ್ತು ಕೃಪಾಪೋಷಿತ ಅಧಿಕಾರಿಗಳ ಅಕ್ರಮ ಗಳಿಕೆ ದಿನ ಬೆಳಗಾದರೆ ನಮ್ಮ ಗಮನ ಸೆಳೆಯುತ್ತದೆ.. ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತವೆ. ಕೆಲವು ಸಲ ಎಫ್‌ ಐ ಆರ್‌ ಗಳೂ ದಾಖಲಾಗುತ್ತವೆ. ವಿಚಾರಣೆಯ ನಾಟಕವೂ ನಡೆಯುತ್ತದೆ. ಕೊನೆಗೆ ಏನೂ ಇಲ್ಲ. ಈರುಳ್ಳಿ ಸಿಪ್ಪೆ ಸುಲಿದಂತೆ. ಚುನಾವಣೆ ಬರುತ್ತದೆ. ನಾಯಕಗಣವೆಲ್ಲ ʼಟಿಕೆಟ್‌ʼ ಪಡೆಯುತ್ತಾರೆ. ಅವರಲ್ಲೇ ಕಲವರು ತಾರಾ ಪ್ರಚಾರಕರು. ಮತ್ತೆ ಗೆದ್ದು ಆಡಳಿತ ಪಕ್ಷದಲ್ಲಿಯೋ ವಿರೋಧ ಪಕ್ಷದಲ್ಲಿಯೋ ವಿರಾಜಮಾನರಾಗುತ್ತಾರೆ, ಪರಂರೆಯನ್ನು ಮುಂದುವರೆಸುತ್ತಾರೆ.

ಹೀಗೆ ನಕಾರಾತ್ಮಕ ವರ್ತನೆಗಳಲ್ಲಿ ತೊಡಗಿದವರೆಲ್ಲ ಯಾರು? ಇಂತಹವರೆಲ್ಲ ಅಶಿಕ್ಷಿತರೆಂದಾಗಿದ್ದರೆ ಪರಿಹಾರವು ಸುಲಭವಾಗಿರುತ್ತಿತ್ತು. ದೇಶದಲ್ಲಿ ಎಲ್ಲರನ್ನೂ ಶಾಲೆಗೆ ಸೇರಿಸಿ ಶಾಲಾ ಶಿಕ್ಷಣದಲ್ಲಿ ಹಿಂದುಳಿಯದಂತೆ ನೋಡಿಕೊಂಡರೆ ಈ ಕಾರ್ಯವು ಮುಕ್ತಾಯವಾದಂತೆ. ಆದರೆ ಇವರೆಲ್ಲರೂ ದೊಡ್ಡ ದೊಡ್ಡ ಡಿಗ್ರಿಗಳನ್ನು ತಮ್ಮ ಹೆಸರಿಗೆ ಅಂಟಿಸಿಕೊಂಡವರೇ. ದೇಶ ಸೇವೆಗೆ ಮತ್ತು ಸಮಾಜದ ಒಳಿತನ್ನು ಸಾಧಿಸುವುದಕ್ಕೆ ಉತ್ತಮ ಅವಕಾಶಗಳನ್ನು ಪಡೆದವರೇ. ಆದರೂ ಏಕೆ ಹೀಗೆ?

ಹುಡುಕುತ್ತಾ ಹೊರಟರೆ ಅಂತಹ ಕಾರಣಗಳಲ್ಲೊಂದರ ಎಳೆ ಶಿಕ್ಷಣವಾಗಿರುವುದು ಕಣ್ಣಿಗೆ ರಾಚುತ್ತದೆ. ನಮ್ಮ ಮಕ್ಕಳು ಸುಶಿಕ್ಷಿತರಾಗಿ ಸಮಾಜದ ಹಿರಿಯರಾದಾಗ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂಹ, ಒಟ್ಟುಗೂಡಿಸುವ ಮೌಲ್ಯಗಳನ್ನು ಮುರಿಯಲು ಹಿಂಜರಿಯುವಂತಹ ಅಂಶಗಳು ಔಪಚಾರಿಕ ಶಿಕ್ಷಣದ ಭಾಗವಾಗಿಲ್ಲದಿರುವುದು ಕಂಡುಬರುತ್ತದೆ. ನಮ್ಮ ಪಾರಂಪರಿಕ ಜ್ಞಾನ, ಮೌಲ್ಯಗಳ ನಿರೂಪಣೆ, ಸ್ವಸ್ಥ ಸಮಾಜದ ಕಲ್ಪನೆ -ಇಂತಹವೆಲ್ಲವೂ ವೇದೋಪನಿಷತ್ತು , ಭಗವದ್ಗೀತೆ ಇತ್ಯಾದಿಗಳಲ್ಲಿ ಅಡಕವಾಗಿವೆ. ದುರದೃಷ್ಟವಶಾತ್‌ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಈ ತರಹದ ಕೃತಿಗಳೆಲ್ಲ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಮೀಸಲು; ಅಂತಹ ಸಾಧನಾಮಾರ್ಗವನ್ನು ಮಾತ್ರ ಅವು ವಿವರಿಸುತ್ತವೆ  ಎಂಬ ನಿಲುವನ್ನು ಶಿಕ್ಷಣದ ಮೊದಲ ನೀತಿನಿರೂಪಕರು ತಳೆದರು. ತನ್ನಲ್ಲಿರುವ ಭಗವಂತನನ್ನು ವ್ಯಕ್ತಿ ಹೇಗೆ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂಬುದನ್ನು ಅವು ತಿಳಿಸುವಂತಹವು ಎಂಬುದು ಅವರ ಸಿದ್ಧಾಂತವಾಗಿತ್ತು. ಪರಿಣಾಮವಾಗಿ ಇಂತಹ ಉದ್-ಗ್ರಂಥಗಳ ಪರಿಚಯ ಔಪಚಾರಿಕ ಶಿಕ್ಷಣಕ್ರಮದಿಂದ ದೂರವೇ ಉಳಿಯಿತು. 

ಅದು ಹೀಗಲ್ಲ ಎಂಬುದು ಆರ್ಷೇಯ ಗ್ರಂಥಗಳ ಯಾವ ಭಾಗವನ್ನು ಅರೆಕ್ಷಣ ಪರಿಶೀಲಿಸಿದರೂ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಈಶೋಪನಿಷತ್ತಿನ ಮೊದಲೆರಡು ಶ್ಲೋಕಗಳನ್ನೇ ನೋಡಬಹುದು:

ಚಲಿಸುತಿಹುದೇನೆಲ್ಲ  ಇಲ್ಲಿ, 

ಈಶನಾವಾಸವದು ಬೇರಲ್ಲ

                  ಅವ ಕೊಟ್ಟುದನು ತಿನ್ನು; 

ಕಸಿಯ ಬೇಡ ಇನ್ನೊಬ್ಬನದನು ನೀನು.  ೧


ಕರ್ಮಗಳ ಮಾಡುತಲೆ ಇಲ್ಲಿ , 

ಬದುಕೋಣ ನಾವು ನೂರು ವರುಷ

ನಮಗಿದುವೆ ದಾರಿ ಬೇರಿಲ್ಲ; 

ಕರ್ಮವಂಟದು ನರನನು ಬದುಕಲವ ಇಂತು .೨

(ಕನ್ನಡಾನುವಾದ ನನ್ನದು)

ಈ ಶ್ಲೋಕಗಳಲ್ಲಿ ಅಭಿವ್ಯಕ್ತಿಯು ಕಾವ್ಯಮಯವಾಗಿದೆ.  ಸರಳ ನಿರೂಪಣೆ, ರೂಪಕಗಳ ಬಳಕೆ, ಪ್ರಾರ್ಥನೆಯನ್ನು ಒಳಗೊಂಡಿರುವುದು ಇದರ ಮುಖ್ಯ ಲಕ್ಷಣಗಳು. ಸಾಮಾಜಿಕ ಪ್ರಸ್ತುತತೆಯ ದೃಷ್ಟಿಯಿಂದಲೂ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಮಂತ್ರಗಳ ಅರ್ಥೈಸುವಿಕೆಯಲ್ಲಿ ಇಲ್ಲಿರುವ ರೂಪಕಗಳನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಮೌಲ್ಯಗಳ ನಿರೂಪಣೆ, ಮೌಲ್ಯಗಳ ಅನುಸರಣೆಯ ಲಾಭ, ಅನುಸರಿಸಿಸದಿದ್ದರೆ ನಷ್ಟ ಇಂತಹವನ್ನೆಲ್ಲ ರೂಪಕಗಳ ಮುಖಾಂತರವೇ ವಿವರಿಸುತ್ತಾರೆ. 

ಈ ಎರಡು ಮಂತ್ರಗಳು ಸಮಾಜದಲ್ಲಿ ನೆಲೆಗೊಳ್ಳಬೇಕಾದ ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಸಮಾಜ ಮತ್ತು ಸಮಾಜದೊಂದಿಗೆ ವ್ಯಕ್ತಿಯ ಕೊಡುಕೊಳೆಗಳ ಬಗ್ಗೆ ಭಾರತೀಯ ಮನಸ್ಸು ತುಡಿಯುವ ರೀತಿಯನ್ನು ಮೊದಲನೆಯ ಮಂತ್ರ ತೆರೆದಿಡುತ್ತದೆ. ವ್ಯಕ್ತಿಯು ಸಮಾಜದ ಭಾಗವಾಗಿದ್ದು ಸಮಾಜ ಮತ್ತು ವ್ಯಕ್ತಿಯ ನಡುವಣ ಕೊಡುಕೊಳೆಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿ ಮತ್ತು ಸಮಾಜ ಈಶನ ನಿಯಂತ್ರಣದಲ್ಲಿರುವುವು ಎಂಬ ಪರಿಕಲ್ಪನೆ ಇಲ್ಲಿಯ ಮೊದಲ ಮಂತ್ರದಲ್ಲಿದ್ದು ಇದು ಸಮಾಜದೊಡನೆ ವ್ಯಕ್ತಿಯ ಒಡನಾಟವನ್ನು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.

"ಚಲಿಸುವಂತಹುದು ಜಗತ್ತಿನಲ್ಲಿ ಏನೆಲ್ಲ ಇದೆಯೋ ಈ ಎಲ್ಲವೂ ಈಶನ ಆವಾಸ ಸ್ಥಾನ" ಎಂದು ಇದರ ಮೊದಲ ಸಾಲಿಗೆ ಅರ್ಥ ಹೇಳ ಬಹುದು. ಚಲಿಸುವಂತಹುದು ಎಂಬುದನ್ನು ಇಲ್ಲಿ ರೂಪಕಾರ್ಥದಲ್ಲಿ ಪ್ರಯೋಗಿಸಲಾಗಿದೆ. ಬದಲಾವಣೆಯು ಚಲನೆ ಎಂಬುದು ಇಲ್ಲಿ ಬಳಕೆಯಾಗಿರುವ ರೂಪಕ. ಹೀಗೆ ಚಲಿಸುವುದರಲ್ಲೆಲ್ಲ ಈಶನಿದ್ದಾನೆ ಎಂದರೆ ಬದಲಾಗುತ್ತಿರುವ ಎಲ್ಲ ವಸ್ತುಗಳಲ್ಲಿ ಈಶನಿದ್ದಾನೆ ಎಂದರ್ಥ. ಇಡೀ ಪ್ರಪಂಚವೇ ಬದಲಾಗುತ್ತಿದೆಯಷ್ಟೆ! ಆದ್ದರಿಂದ ಪ್ರಪಂಚದಲ್ಲೆಲ್ಲ ಅವನಿದ್ದಾನೆ. ಈ ಪ್ರಪಂಚ ಈಶನ ಆವಾಸ ಸ್ಥಾನ. ಇದರಲ್ಲಿ ಅವನು ನಮಗೆ ಏನು ಕೊಡುತ್ತಾನೋ ಅದನ್ನಷ್ಟೆ ಭೋಗಿಸಲು ನಾವು ಬಾಧ್ಯರು; ಹೆಚ್ಚಿನದನ್ನಲ್ಲ. ಉಳಿದುದು ಬೇರೆ ಯಾರಿಗಾಗಿಯೋ ಇರುವಂತಹುದು. ಇನ್ನೊಬ್ಬರಿಗಾಗಿ ಅವನು ಮೀಸಲಿಟ್ಟುದನ್ನು ಯಾರೂ ಗೆಬರಬಾರದು.

ಈ ಮಂತ್ರವು ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ಲಭ್ಯವಿರುವ ಸಂಪತ್ತಿನ ಮೇಲೆ ವ್ಯಕ್ತಿಗಿರುವ ಅಧಿಕಾರವೆಷ್ಟು, ಅದನ್ನು ಅವನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಮ್ಮ ಮುಂದಿಡುತ್ತದೆ. ಪ್ರತಿಯೊಬ್ಬನೂ ತಾನಿರುವುದು ಇನ್ನೊಬ್ಬನ ಮನೆಯಲ್ಲಿ ಎಂಬಂತೆ ನೆನಪಿಟ್ಟುಕೊಳ್ಳಬೇಕು; ತಾನು ಇಲ್ಲಿರುವ ಯಾವ ವ್ಯವಸ್ಥೆಯನ್ನೂ ಕೆಡಿಸದೆ ಮುಂದೆ ಬರುವವರಿಗಾಗಿ ಸುಸ್ಥಿತಿಯಲ್ಲಿ ಬಿಟ್ಟುಕೊಡಬೇಕು; ಪ್ರತಿಯೊಬ್ಬನೂ ತನಗೆ ಬೇಕಾದಷ್ಟನ್ನೇ ಜಾಗ್ರತೆಯಿಂದ ಬಳಸಬೇಕು; ಅಷ್ಟೇ ಹೊರತು ತಲೆಮಾರುಗಳಿಗೆ ಬೇಕೆಂಬ ರೀತಿಯಲ್ಲಿ ಆದಷ್ಟೂ ಹೆಚ್ಚನ್ನು ಕೂಡಿಡ ಬಾರದು.

ಎರಡನೆಯ ಮಂತ್ರವು ಮೊದಲನೆಯ ಮಂತ್ರವು ನಿರೂಪಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ನೂರ್ಕಾಲ ಜೀವನ ಸಾಗಿಸೋಣ ಎಂದಾಶಿಸುತ್ತದೆ. ಮೊದಲ ಮಂತ್ರದಲ್ಲಿ ದೇವರು ಕೊಟ್ಟದ್ದನ್ನು ತಿನ್ನು ಎಂದು ಹೇಳಿದರೆ ಎರಡನೆಯ ಮಂತ್ರ ಕರ್ತವ್ಯ ಪಾಲನೆ ಅದಕ್ಕೆ ಪೂರ್ವ ಆವಶ್ಯಕತೆ ಎನ್ನುತ್ತದೆ. "ಇಹ ಕರ್ಮಾಣಿ ಕುರ್ವನ್ನೇವ" ಎಂದರೆ ಇಲ್ಲಿ ಕರ್ಮಗಳನ್ನು ಮಾಡುತ್ತಲೇ ನಾವು ದೇವರು ಕೊಟ್ಟುದನ್ನು ತಿನ್ನ ಬೇಕು. ಹೀಗೆ ಶತಂ ಸಮಾಃ ಜಿಜೀವಿಷೇತ್‌  ನೂರು ವರ್ಷಗಳ ಕಾಲ ಬದುಕಲು ಇಚ್ಛಿಸಬೇಕು. ಹಾಗೆ ಮಾಡಿದರೆ ಕರ್ಮಗಳಿಂದ ಉಂಟಾಗುವ ಸಂಕಷ್ಟಗಳು ನಮಗೆ ಅಂಟುವುದಿಲ್ಲ (ನಲಿಪ್ಯತೇ) ಮತ್ತು ಹೀಗೆ ಮಾಡುವುದೊಂದೇ ನಮಗೆ ಸಂತೋಷದಿಂದ ಬದುಕಲು ಇರುವ ದಾರಿ.

ಹೀಗೆ ಬದುಕಿಗೆ ಬೇಕಾದ ಮಾರ್ಗದರ್ಶನ ನೀಡುವುದು ಇದೊಂದು ಉಪನಿಷತ್ತು ಅಥವ ಇದೊಂದು ಮಂತ್ರವಲ್ಲ. ಕಠೋಪನಿಷತ್ತು ಹೇಳುತ್ತದೆ:"ವ್ಯಕ್ತಿಗೆ ಶ್ರೇಯಸ್ಕರವಾದುದು ಬೇರೆ; ಅವನಿಗೆ ಪ್ರಿಯವನ್ನುಂಟು ಮಾಡುವುದು ಬೇರೆ. ಬುದ್ಧಿವಂತನಾದವನು ಶ್ರೇಯಸ್ಸನ್ನೇ ಆರಿಸಿ ಕೊಳ್ಳುತ್ತಾನೆ" ಎಂದು.  ಮಾತೃ ದೇವೋ ಭವ, ಪಿತೃದೇವೋ ಭವ ಅತಿಥಿ ದೇವೋ ಭವ ಸತ್ಯಂ ವದ ಧರ್ಮಂ ಚರ ಇತ್ಯಾದಿ ಉದ್ಬೋಧಕ ವಾಕ್ಯಗಳು ತೈತ್ತರೀಯೋಪನಿಷತ್ತಿನಲ್ಲಿ ಬರುತ್ತವೆ.

ಇಂತಹ ಶ್ಲೋಕಾನುವಾದಗಳು ಅಥವ ಉಪನಿಷತ್ತುಗಳ ಪರಿಚಯಾತ್ಮಕ ಪ್ರಬಂಧಗಳು ನಮ್ಮ ಐದರಿಂದ ಹನ್ನೆರಡನೆಯ ತರಗತಿಗಳ ಭಾಷಾ ಪಠ್ಯ ಪುಸ್ತಕಗಳಲ್ಲಿ ಸೇರ ಬೇಕು. ಆಗ ಮಗುವಿನ ವ್ಯಕ್ತಿತ್ವ ರೂಪುಗೊಳ್ಳುವ ಕಾಲಾವಧಿಯಲ್ಲಿ ಪರಂಪರೆಯ ಬಗ್ಗೆ ಗೌರವ, ಹೆಮ್ಮೆ , ಪಾರಂಪರಿಕ ಮೌಲ್ಯಗಳ ಬಗ್ಗೆ ಚಚ್ಚರ ಉಂಟಾಗಿ ವ್ಯಕ್ತಿತ್ವದ ಭಾಗವಾಗುತ್ತವೆ. ಎಷ್ಟೇ ಪ್ರಭುತ್ವವಿರಲಿ, ಯಾರ ಕೃಪಾಶ್ರಯವೇ ಇರಲಿ ಸಾಮಾಜಿಕ ಬದುಕನ್ನು ಹಸನಾಗಿ ಇಟ್ಟುಕೊಳ್ಳ ಬೇಕೆಂಬ ಎಚ್ಚರ ತಪ್ಪುವುದಿಲ್ಲ. ಸಮಾಜದಲ್ಲಿ ಕಾಣುತ್ತಿರುವ ಕೊರೆದು ತಿನ್ನುವ ರೋಗಗಳನ್ನು ಹೋಗಲಾಡಿಸಲು ಇದೊಂದು ಉತ್ತಮ ಮಾರ್ಗವಾದೀತು! 


***********************************************************************************

ಮಾಂಡೂಕ್ಯ ಉಪನಿಷತ್ತು: ದ್ವೈತಾದ್ವೈತ ನಿಲುವುಗಳ ಒಂದು ನೋಟ

 


ಮಾಂಡೂಕ್ಯ ಉಪನಿಷತ್ತು: ದ್ವೈತಾದ್ವೈತ ನಿಲುವುಗಳ ಒಂದು ನೋಟ


ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾ

ಭದ್ರಂ ಪಶ್ಯೇಮಾ ಕ್ಭಿರ್ಯಜತ್ರಾಃ

ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿಃ

ವ್ಯಶೇಮ ದೇವಹತಂ ಯದಾಯುಃ

ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ

ಸ್ವಸ್ತಿನಃ ಪೂಷಾ ವಿಶ್ವದೇವಾಃ

ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟ ನೇಮಿಃ

ಸ್ವಸ್ತಿನೋ ಬೃಹಸ್ಪತಿರ್ದಧಾತು

ಓಂ ಶಾಂತಿಃ ಶಾಂತಿಃ ಶಾಂತಿಃ

ಭಾರತೀಯ ಮೀಮಾಂಸಾ ದರ್ಶನದಲ್ಲಿ ದ್ವೈತ ಮತ್ತು ಅದ್ವೈತ ಇವೆರಡು ಬಹಳ ಚರ್ಚೆಗೊಳಗಾಗಿರುವ ದರ್ಶನ ಶಾಖೆಗಳು. ಎರಡರಲ್ಲಿಯೂ ಮಾನವನಲ್ಲಿ ದೈವತ್ವದ ಇರುವಿಕೆ ಮತ್ತು ಅದರ ಸಾಕ್ಷಾತ್ಕಾರ- ಇವು ಪ್ರಧಾನವಾಗಿವೆ. ಎರಡೂ ಸತ್ಯದ ಹುಡುಕಾಟವೇ ಆಗಿದ್ದು, ಈ ನಿಟ್ಟಿನಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇರುವ ಪ್ರಥಮ ಉಪಕರಣವೆಂದರೆ ತರ್ಕ. ಸಾಮಾನ್ಯ ತರ್ಕದಿಂದ ತೆಗೆಯಬಹುದಾದ ನಿರ್ಣಯಗಳು ಎರಡೂ ಶಾಖೆಗಳಿಗೆ ಸಾಮಾನ್ಯಗಳೇ. ಆದ್ದರಿಂದಲೇ ದ್ವೈತದಲ್ಲಿ ಪ್ರಪಂಚ ಸತ್ಯ ಎಂದು ಉದ್ಘೋಷಿಸಿದರೆ ಅದ್ವೈತದಲ್ಲಿ ಅದನ್ನು ವ್ಯಾವಹಾರಿಕ ಸತ್ಯ ಎಂದು ಒಪ್ಪುತ್ತಾರೆ. ಸಾಂಖ್ಯ ದರ್ಶನದಲ್ಲಿ ಪ್ರತಿಪಾದಿಸಿದ ತತ್ವಗಳನ್ನು ಎರಡೂ ಶಾಖೆಗಳಲ್ಲಿ ಒಂದು ಮಿತಿಯವರೆಗೆ ಸ್ವೀಕರಿಸುತ್ತಾರೆ. ನ್ಯಾಯ (ತರ್ಕ) ಶಾಸ್ತ್ರದ ಹಲವು ಪ್ರಮೇಯಗಳನ್ನೂ ಸಾಮಾನ್ಯವಾಗಿ ಸ್ವೀಕರಿಸಲಾಗಿದೆ.  (ಪ್ರತ್ಯಕ್ಷ, ಅನುಮಾನ, ಅನುಭವ, ಶ್ರುತಿ (ಪ್ರಸ್ಥಾನತ್ರಯಿ) ಇವುಗಳನ್ನು ಪ್ರಮಾಣಗಳೆಂದು ಎರಡೂ ಶಾಖೆಗಳ ಪ್ರತಿಪಾದಕರು ಒಪ್ಪುತ್ತಾರೆ. ಬ್ರಹ್ಮ ಸತ್ಯತ್ವ, ನಿತ್ಯತ್ವ, ವ್ಯಾಪಕತ್ವ ಇತ್ಯಾದಿ ಆತ್ಯಂತಿಕ ಸತ್ಯಗಳನ್ನು ಪ್ರತಿಪಾದಿಸುವಾಗ ಮಾತ್ರ ಶ್ರುತಿಗಳನ್ನು ಅರ್ಥೈಸುವ ರೀತಿ ಪ್ರಮುಖವಾಗಿ, ಭಿನ್ನವಾಗುತ್ತದೆ). ಉದಾಹರಣೆಗೆ ತರ್ಕದ ನಿತ್ಯಾಃ ಪರಮಾಣುರೂಪಾಃ; ಅನಿತ್ಯಾಃ ಕಾರ್ಯರೂಪಾಃ ಎಂಬ ತತ್ವವನ್ನು ನೋಡಬಹುದು. ಇದಕ್ಕಾಗಿ ದೋಸೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ದೋಸೆ ಅನಿತ್ಯ ಏಕೆಂದರೆ ಅದನ್ನು ನಾವು ಮಾಡಿದ್ದು; ಕಾರ್ಯರೂಪ. ದೋಸೆ ಹಿಟ್ಟು ಮೊದಲು ಇದ್ದದ್ದು ನಿತ್ಯ. ಈಗ ದೋಸೆಯನ್ನು ಬಿಡೋಣ ದೋಸೆಯ ಹಿಟ್ಟನ್ನು ತೆಗೆದುಕೊಳ್ಳೋಣ. ಹಿಟ್ಟು ಅನಿತ್ಯ ಏಕೆಂದರೆ ಅದು ಕಾರ್ಯ ರೂಪ. ಅಕ್ಕಿ ನಿತ್ಯ. ಈಗ ಅಕ್ಕಿಯನ್ನಷ್ಟೇ ತೆಗೆದುಕೊಳ್ಳೋಣ. ಅಕ್ಕಿ ಅನಿತ್ಯ, ಬತ್ತ ನಿತ್ಯ. ಹೀಗೆಯೇ ಬತ್ತ ಅನಿತ್ಯ ಅದರ ಸಸಿ ನಿತ್ಯ. ಮತ್ತು ಬತ್ತದ ಸಸಿ ಅನಿತ್ಯ ಭೂಮಿ ನಿತ್ಯ. ಭೂಮಿ ಬಿಗ್-ಬ್ಯಾಂಗಿನಿಂದ ಉಂಟಾಯಿತೆನ್ನುವುದಾದರೆ ಭೂಮಿ ಅನಿತ್ಯ ಬಿಗ್-ಬ್ಯಾಂಗ್ ಪೂರ್ವದಲ್ಲಿದ್ದ ಮೂಲದ್ರವ್ಯ ನಿತ್ಯ. ಹೀಗೆ. 

      ಈ ವಿವರಗಳಲ್ಲಿ ದ್ವೈತಾದ್ವೈತ ನಿಲುವುಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಮುಂದುವರೆದಾಗ ಅದ್ವೈತ ಪ್ರತಿಪಾದನೆಯಲ್ಲಿ ಅನಿತ್ಯವಾದುವನ್ನು ಅಸತ್ಯವಾದುವುಗಳೆಂದು ಪರಿಗಣಿಸುತ್ತಾರೆ. ಉದಾಹರಣಾ ರೂಪವಾಗಿ ಮಡಕೆ ಅನಿತ್ಯ - ಅದು ಒಡೆದು ಹೋಗುವುದರಿಂದ. ಆದ್ದರಿಂದ ಅದ್ವೈತದ ಪ್ರಕಾರ ಅದು ಅಸತ್ಯ. ಇದಕ್ಕಾಗಿ ಅವರು ಶ್ರುತಿವಾಕ್ಯಗಳನ್ನು ಉಲ್ಲೇಖಿಸುತ್ತಾರೆ. ದ್ವೈತವಾದಿಗಳು ಮಡಕೆಯನ್ನು ಸತ್ಯವೆಂದೇ ಸ್ವೀಕರಿಸುತ್ತಾರೆ. ಈ ಸಂಬಂಧದಲ್ಲಿ ಶ್ರುತಿವಾಕ್ಯಗಳಿಗೆ ಅದ್ವೈತವಾದಿಗಳು ಹೇಳುವುದಕ್ಕಿಂತ ಭಿನ್ನವಾದ ಅರ್ಥಗಳನ್ನು ದ್ವೈತಪರರು ನೀಡುತ್ತಾರೆ.

ಹೀಗೆಯೇ ಅದ್ವೈತ ಪರರು ಮಹಾವಾಕ್ಯಗಳೆಂದು ವರ್ಗೀಕರಿಸಿದ ಕೆಲವು ಉಪನಿಷದ್ವಾಕ್ಯಗಳಿವೆ. ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ ಇತ್ಯಾದಿ ಅಂತಹ ವಾಕ್ಯಗಳು. ಇವುಗಳನ್ನು ಅರ್ಥೈಸುವ ರೀತಿ ಎರಡೂ ಪರಂಪರೆಗಳಲ್ಲಿ ಭಿನ್ನ. ಇಂತಹ ಭಿನ್ನತೆಗಳು ವಿಭಿನ್ನ ನೆಲೆಗಳಿಂದ ಉಗಮಿಸುತ್ತವೆ. ಅದ್ವೈತ ಪರರ ಪ್ರಕಾರ ಅಹಂ ಬ್ರಹ್ಮಾಸ್ಮಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿ ಹೇಳಿಕೊಳ್ಳುವ ಒಂದು ವಾಕ್ಯ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಬ್ರಹ್ಮಸ್ವರೂಪಿ ಎಂಬರ್ಥ ಹೊರಡುತ್ತದೆ. ದ್ವೈತ ಪರ ವಾದದಲ್ಲಿ ಇದು ಯಾರು ಬ್ರಹ್ಮನೋ ಅವನು ಹೇಳುವ ವಾಕ್ಯ. ಆದ್ದರಿಂದ ಅವನು ಬ್ರಹ್ಮ ಉಳಿದವರಲ್ಲ ಎಂಬ ಅರ್ಥ ಹೊರಡುತ್ತದೆ. ತತ್ತ್ವಮಸಿ ಎಂಬುದು ತಾನೇ ಒಂದು ವಾಕ್ಯವಲ್ಲ; ಒಂದು ವಾಕ್ಯದ ಭಾಗ. ಸ ಆತ್ಮಾತತ್ತ್ವಮಸಿ ಎಂಬುದು ಪೂರ್ಣ ವಾಕ್ಯ. ಇದನ್ನು ನಿಜವಾಗಿ ಸ ಆತ್ಮಾ ಅತ್ತ್ವಮಸಿ ಎಂದು ಬಿಡಿಸ ಬೇಕು ಎಂಬುದು ದ್ವೈತಪರ ನಿಲುವು. (ಸಂಸ್ಕೃತ ವ್ಯಾಕರಣದ ಪ್ರಕಾರ ಎರಡೂ ತರಹ ಪದಚ್ಛೇದ ಮಾಡುವುದು ಸಾಧ್ಯವಿದೆ). ಹೀಗೆ ನೀನು ಆ ಆತ್ಮನಲ್ಲ ಎಂಬ ಅರ್ಥ ಹೊರಡುತ್ತದೆ. ಹೀಗೆಯೇ ಇನ್ನೊಂದು ವಾಕ್ಯ. ಅದ್ವೈತ ಪರರ ಪ್ರಕಾರ ಅಯಮಾತ್ಮಾ ಬ್ರಹ್ಮ ಎಂಬ ವಾಕ್ಯ ಪ್ರತಿಯೊಬ್ಬ ವ್ಯಕ್ತಿ ತನ್ನತ್ತ ಬೆರಳು ಮಾಡಿ ತೋರಿಸುತ್ತಾ ಹೇಳುವಂತಹುದು. ಹೀಗೆ ಮಾಡಿದಾಗ ನನ್ನೊಳಗಿರುವ ಆತ್ಮನೇ ಬ್ರಹ್ಮ ಎಂದರ್ಥವಾಗುತ್ತದೆ. ದ್ವೈತಪರ ನಿಲುವಿನಲ್ಲಿ ಈ ವಾಕ್ಯವು ಎದುರಿಗಿರುವ ಪರಮಾತ್ಮನನ್ನು ತೋರಿಸುತ್ತಾ ಹೇಳುವಂತಹುದು. ಆಗ ಎದುರಿಗಿರುವ ಆ ಪರಮಾತ್ಮನೇ ಬಗರಹ್ಮ ಎಂದರ್ಥವಾಗುತ್ತದೆ. ಹೀಗೆ ಎರಡು ವಾದಗಳು ಅವೇ ಅವೇ ಶ್ರುತಿ ವಾಕ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಹುಟ್ಟುತ್ತವೆ. ಆಯಾ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತದ ಪ್ರಕಾರ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಂಡವರು ಎಂದು ಸ್ವೀಕರಿಸಿದರೆ ಯಾವ ಸಿದ್ಧಾಂತವನ್ನು ಅನುಸರಿಸಿ ಸಾಧನೆ ಮಾಡಿದರೂ ದೈವ ಸಾಕ್ಷಾತ್ಕಾರ ಸಾಧ್ಯ ಎಂದು ಅರ್ಥವಾಗುತ್ತದೆ.

       ಎರಡೂ ಪದ್ಧತಿಗಳಲ್ಲಿ ಉಪನಿಷತ್ತುಗಳಿಗೆ ಪ್ರಧಾನ ಸ್ಥಾನವಿದ್ದೇ ಇದೆ. ಆದರೆ ಪ್ರತಿ ಉಪನಿಷತ್ತನ್ನು ಅರ್ಥೈಸುವಾಗಲೂ ಎರಡರಲ್ಲಿ ಭಿನ್ನತೆಗಳು ಕಾಣಿಸಿಕೊಳ್ಳುತ್ತವೆ. ಮಾಂಡೂಕ್ಯ ಉಪನಿಷತ್ತಿನ ಸಂದರ್ಭದಲ್ಲಿ ಇಂತಹ ಭಿನ್ನತೆಗಳು ಹೆಚ್ಚಾಗಿವೆ. ಮಾಂಡೂಕ್ಯ ಉಪನಿಷತ್ತನ್ನು ಮಾಧ್ವ ಸಂಪ್ರದಾಯದಲ್ಲಿ ಮಾಂಡುಕೋಪನಿಷತ್ತು ಎಂದು ಕರೆಯುತ್ತಾರೆ. ಅದ್ವೈತ ಸಂಪ್ರದಾಯದಲ್ಲಿ ಉಪನಿಷನ್ಮಂತ್ರಗಳನ್ನು ಗೌಡಪಾದರ ಮಾಂಡೂಕ್ಯ ಕಾರಿಕಾಗಳ ಜೊತೆಗೆ ಓದಿ ಅರ್ಥ ಮಾಡಿಕೊಳ್ಳುವ ವಿಧಾನವಿದೆ. ಗೌಡಪಾದ ಕಾರಿಕೆಗಳಲ್ಲಿ ನಾಲ್ಕು ಅಧ್ಯಾಯಗಳಿದ್ದು ಮೊದಲನೆಯದು ಆಗಮ ಪ್ರಕರಣ. ಇದರಲ್ಲಿ ಉಪನಿಷತ್ತಿನ ಹನ್ನೆರಡು ಮಂತ್ರಗಳು ಮತ್ತು ಅದರ ಅರ್ಥವನ್ನು ವಿವರಿಸಲು ಇಪ್ಪತ್ತಂಬತ್ತು ಕಾರಿಕೆಗಳೂ ಇವೆ. ಮಾಧ್ವ ಸಂಪ್ರದಾಯದಲ್ಲಿ ಎಲ್ಲ ನಾಲ್ಕು ಪ್ರಕರಣಗಳನ್ನೊಳಗೊಂಡ ಗೌಡಪಾದರ ಇಡೀ ಮಾಂಡೂಕ್ಯ ಕಾರಿಕೆಗಳನ್ನು ಉದ್ಧರಿಸುವ ಕ್ರಮವಿಲ್ಲ. ಉಪನಿಷತ್ತಿನ ಹನ್ನೆರಡು ಮಂತ್ರಗಳು ಮತ್ತು ಗೌಡಪಾದರ ಆಗಮ ಪ್ರಕರಣದ ಇಪ್ಪತ್ತೊಂಬತ್ತು ಶ್ಲೋಕಗಳು - ಇವಿಷ್ಟು ಸೇರಿ ಮಾಡೂಕ್ಯೋಪನಿಷತ್ತೆಂದು ಸ್ವೀಕೃತವಾಗಿವೆ. ಆದರೆ ನಿರ್ದಿಷ್ಟ ಮಂತ್ರಗಳನಂತರ ಅತ್ರ ಏತೇ ಶ್ಲೋಕಾಃ ಭವಂತಿ ಎಂಬ ಟಿಪ್ಪಣಿಯ ನಂತರ ಮಾಂಡೂಕ್ಯ ಕಾರಿಕಾದಲ್ಲಿ ಬರುವ ಶ್ಲೋಕಗಳು ಬರುತ್ತವೆ ಮತ್ತು ಈ ಶ್ಲೋಕಗಳನ್ನು ಮೂಲ ಉಪನಿಷತ್ತಿನಿಂದ ಬೇರೆ ಎಂಬುದನ್ನು ಹೀಗೆ ಸೂಚಿಸಲಾಗಿದೆ. ಈ ಶ್ಲೋಕಗಳನ್ನೂ ಚತುರ್ಮುಖ ಬ್ರಹ್ಮ ಹೇಳಿದ್ದು ಎಂಬಂತೆ ಸ್ವೀಕರಿಸುತ್ತಾರೆ. ರಾಮಾನುಜಾಚಾರ್ಯರು ಮಾಂಡೂಕ್ಯ ಉಪನಿಷತ್ತಿಗೆ ಭಾಷ್ಯವನ್ನು ಬರೆದಿಲ್ಲ. ಆದರೆ ಅವರ ಬ್ರಹ್ಮ ಸೂತ್ರ ಭಾಷ್ಯದಲ್ಲಿ ಈ ಶ್ಲೋಕಗಳು ದೈವೀ ಮೂಲದವು ಎಂದು ಹೇಳಿದ್ದಾರೆಂದು ತಿಳಿದು ಬರುತ್ತದೆ. ಗೌಡಪಾದ ಕೃತವೆಂದು ಅದ್ವೈತಪರರು ಸ್ವೀಕರಿಸಿದರೆ ದ್ವೈತ ಹಾಗೂ ವಿಶಿಷ್ಟಾದ್ವೈತಗಳಲ್ಲಿ ಬ್ರಹ್ಮದ್ರಷ್ಟ ಮತ್ತು ದೈವೀಮೂಲದವು ಎಂದು ವಿಭಿನ್ನವಾಗಿ ಸ್ವೀಕರಿಸುತ್ತಾರೆ. ಹೀಗೆ ಈ ಶ್ಲೋಕಗಳ ಕರ್ತೃತ್ವ ವಿವಾದಾತೀತವಾಗಿಲ್ಲ. ಆದರೂ ಉಪನಿಷತ್ತಿನ ಒಟ್ಟಾರೆ ಅರ್ಥವನ್ನು ಗ್ರಹಿಸಲು ಇವುಗಳ ಪ್ರಾಮುಖ್ಯವು ಕಡಿಮೆ ಏನಲ್ಲ.

ಓಮಿತ್ಯೇದಕ್ಷರಮಿದಂ ಸರ್ವಂ ಎಂಬ ಮಂತ್ರದಿಂದ, ಅಂದರೆ ಈ ಎಲ್ಲವೂ ಓಂಕಾರವೇ ಎಂಬ ನಿರೂಪಣೆಯಿಂದ, ಮಾಂಡೂಕ್ಯ ಉಪನಿಷತ್ತು ಪ್ರಾರಂಭವಾಗುತ್ತದೆ. ಮುಂದುವರೆದು ಜಾಗೃತ ಸ್ವಪ್ನ ಮತ್ತು ಸುಷುಪ್ತಿ ಎಂಬ ಅವಸ್ಥೆಗಳನ್ನು ವಿವರಿಸಿ ಇವೆಲ್ಲಕ್ಕಿಂತ ಭಿನ್ನವಾದ ತುರೀಯಾವಸ್ಥೆಯನ್ನು ವಿವರಿಸುತ್ತಾರೆ. ಜಾಗೃತಾವಸ್ಥೆಯ ಅನುಭವಗಳನ್ನು ತಂದುಕೊಡುವ ಪರಮಾತ್ಮನ ಸ್ವರೂಪವನ್ನು ವಿಶ್ವ ಎಂದೂ ಸ್ವಪ್ನಾವಸ್ಥೆಯ ಅನುಭವಗಳನ್ನು ತಂದುಕೊಡುವ ಪರಮಾತ್ಮ ಸ್ವರೂಪವನ್ನು ತೈಜಸ ಎಂದೂ ಸುಷುಪ್ತಾವಸ್ಥೆಯ ಅನುಭವಗಳನ್ನು ತಂದು ಕೊಡುವ ಪರಮಾತ್ಮ ಸ್ವರೂಪವನ್ನು ಪ್ರಾಜ್ಞ ಎಂದೂ ಹೆಸರಿಸುತ್ತಾರೆ. (ಇವುಗಳ ವಿವರಗಳು ಮತ್ತು ದ್ವೈತಾದ್ವೈತ ಸಂಪ್ರದಾಯಗಳಲ್ಲಿ ಇದನ್ನು ವಿವರಿಸುವಲ್ಲಿ ಇರುವ ಭಿನ್ನತೆಗಳೂ ಮುಂದೆ ಬರುತ್ತವೆ). ಮುಂದೆ ಎಂಟನೆಯ ಮಂತ್ರದಲ್ಲಿ ಓಂಕಾರವು ಅಕಾರ ಉಕಾರ ಮತ್ತು ಮಕಾರಗಳಿಂದ ಆಗಿದೆ ಎಂಬುದನ್ನು ವಿವರಿಸಿ ಅಕಾರವು ಜಾಗರಿತ ಅವಸ್ಥೆಯನ್ನೂ ಉಕಾರವು ಸ್ವಪ್ನಾವಸ್ಥೆಯನ್ನೂ ಮಕಾರವು ಸುಷುಪ್ತಾವಸ್ಥೆಯನ್ನೂ ಪ್ರತಿನಿಧಿಸುತ್ತವೆ ಎಂದು ವಿವಿರಿಸಿದೆ. ಅಲ್ಲದೆ ಹನ್ನೆರಡನೆಯ ಮಂತ್ರದಲ್ಲಿ ಅ ಉ ಮಕಾರಗಳಿಂದಾದ ಓಂಕಾರದ ನಂತರ ಬರುವ ನಾದ ಅಥವ ಮೌನವೂ ಓಂಕಾರದ ಭಾಗವೇ ಆಗಿದ್ದು ಅದು ತುರೀಯವೆಂಬ ನಾಲ್ಕನೆಯ ಅವಸ್ಥೆಯನ್ನು ಪ್ರತಿನಿಧಿಸುವುದಾಗಿಯೂ ಅದು ಬ್ರಹ್ಮನೇ ಎಂದು ತಿಳಿಸುತ್ತದೆ. ಸಾಧಕನು ಓಂ ಎಂದು ಧ್ಯಾನಿಸುವ ಕಾಲದಲ್ಲಿ ಆಯಾ ಮಾತ್ರೆಗಳನ್ನು ಉಚ್ಚರಿಸುವಾಗ ಆಯಾ ಪರಮಾತ್ಮ ಸ್ವರೂಪಗಳನ್ನು ಮಾತ್ರೆಗಳ ಮೇಲೆ ಅಧ್ಯಾರೋಪಿಸಿ ಧ್ಯಾನಿಸ ಬೇಕೆಂದು ತಿಳಿಸಿದೆ. ಹೀಗೆ ಓಂಕಾರದ ಪ್ರಾಮುಖ್ಯ, ಅದರ ಭಾಗಗಳು ಮತ್ತು ಓಂಕಾರವನ್ನೇ ಧ್ಯಾನಿಸುವ ಬಗೆ - ಇವು ಈ ಉಪನಿಷತ್ತಿನ ವಸ್ತು.

       ಮೊದಲನೆಯ ಮಂತ್ರದಲ್ಲಿ

                            ಹರಿಃ ಓಂ. ಓಮಿತ್ಯೇದಕ್ಷರಮಿದಂ ಸರ್ವಂ  

                ತಸ್ಯ ಉಪವ್ಯಾಖ್ಯಾನಂ - ಭೂತ-ಭವದ್-ಭವಿಷ್ಯದಿತಿ

                ಸರ್ವಮೋಂಕಾರ ಏವ; ಯಚ್ಚ ಅನ್ಯತ್ ತ್ರಿಕಾಲಾತೀತಂ 

                ತದಪ್ಯೋಂಕಾರ ಏವ 

ಎಂದು ಬರುತ್ತದೆ. "ಈ (ಲೋಕದಲ್ಲರುವ) ಎಲ್ಲವು ಓಂ ಎಂಬ ಈ ಒಂದಕ್ಷರವೇ. ಅಂದರೆ ಹಿಂದೆ ಇದ್ದುದು, ಈಗಿರುವುದು ಮತ್ತು ಮುಂದೆ ಬರುವುದು ಎಲ್ಲವೂ ಓಂಕಾರವೇ" ಎಂದು ಪೂರ್ವ ಭಾಗದ ಅರ್ಥ ಹೇಳುವುದರಲ್ಲಿ ಭಿನ್ನತೆ ಇಲ್ಲ. ಕೊನೆಯ ವಾಕ್ಯವನ್ನು ವಿವರಿಸುವುದರಲ್ಲಿ ಭಿನ್ನತೆ ಇದೆ. ಅದ್ವೈತ ಸಂಪ್ರದಾಯದಲ್ಲಿ ಕಾಲಕ್ಕೆ ಒಳಪಡದ, ಅತೀಂದ್ರಯ ವಸ್ತು, ನಮ್ಮೊಳಗಿನ ಸತ್ತ್ವ ಮತ್ತು ಹೊರಗಿನ ಈ ಎಲ್ಲ ಜಡ ಪದಾರ್ಥಗಳು ಓಂ ಎಂಬ ಅಕ್ಷರವೇ ಎಂದು ಅರ್ಥ ಹೇಳುತ್ತಾರೆ. ದ್ವೈತ ಸಂಪ್ರದಾಯದಲ್ಲಿ ತ್ರಿಕಾಲಾತೀತವಾದ ಬಾಹ್ಯ ವಸ್ತುವೆಲ್ಲವನ್ನು ಪ್ರಕೃತಿ (ಶ್ರೀತತ್ತ್ವ) ಎನ್ನುತ್ತಾರೆ.ಅಂದರೆ ಪ್ರಲಯ ಕಾಲದಲ್ಲಿ ದೃಗ್ಗೋಚರ ಸೃಷ್ಟಿ ಎಲ್ಲವೂ ನಾಶವಾದ ನಂತರ ಮುಂದಿನ ಯುಗದ ಸೃಷ್ಟಿಗೆ ಕಾರಣಭೂತವಾಗಿ ಅಂಕುರ ರೂಪದಲ್ಲಿ ಉಳಿಯುವ ಪ್ರಕೃತಿ.  ಇದೂ ಓಂಕಾರವೇ ಎಂದು ಅರ್ಥೈಸುತ್ತಾರೆ.

        ಎರಡನೆಯ ಮಂತ್ರ ಹೀಗಿದೆ:

      ಸರ್ವಂ ಹ್ಯೇತದ್ ಬ್ರಹ್ಮ ಅಯಮಾತ್ಮಾ ಬ್ರಹ್ಮ

ಸೋsಯಮಾತ್ಮಾ ಚತುಷ್ಪಾತ್

                     ಮೊದಲಸಾಲು ಸರ್ವಂ ಹ್ಯೇತದ್ ಬ್ರಹ್ಮ; ಅಯಮಾತ್ಮಾ ಬ್ರಹ್ಮ  ಎಂದಿದೆ. ಇವಕ್ಕೆ ಅದ್ವೈತದಲ್ಲಿ ಇವೆಲ್ಲವೂ ಬ್ರಹ್ಮ, ಈ ಆತ್ಮವೂ ಬ್ರಹ್ಮ ಎಂದು ಅರ್ಥ ಹೇಳುತ್ತಾರೆ ಮತ್ತು ಅಯಮಾತ್ಮಾ ಬ್ರಹ್ಮ (ನನ್ನೊಳಗಿನ ಈ ಆತ್ಮವೂ ಬ್ರಹ್ಮ,) ಎಂಬುದನ್ನು ಮಹಾವಾಕ್ಯವೆಂದು ಸ್ವೀಕರಿಸುತ್ತಾರೆ. ದ್ವೈತ ಪರಂಪರೆಯಲ್ಲಿ ಇವೆಲ್ಲವೂ ಅಂದರೆ ಇವೆಲ್ಲವನ್ನೂ ಕ್ರಿಯಾಶೀಲ ಗೊಳಿಸುವ ಆ ಶಕ್ತಿ ಬ್ರಹ್ಮ ಎಂದು ಅರ್ಥೈಸುತ್ತಾರೆ. ದೃಗ್ಗೋಚರವಾದ ಹೊರ ಪ್ರಪಂಚವನ್ನು ಕ್ರಿಯಾಶೀಲ ಗೊಳಿಸುವ ಮತ್ತು ಪ್ರತಿ ವ್ಯಕ್ತಿಯನ್ನು ಕ್ರಿಯಾಶೀಲಗೊಳಿಸುವ, ಆಂತರ್ಯವನ್ನು ಬ್ರಹ್ಮ ಎಂದು ನಿರ್ದೇಶಿಸುತ್ತಾರೆ. ಮುಂದಿನ ಸಾಲು ಅಯಮಾತ್ಮಾ ಚತುಷ್ಪಾತ್ ಎಂಬುದು.   ‌ ಅದ್ವೈತ ವ್ಯಖ್ಯಾನಕಾರರು ಇದನ್ನು ವ್ಯಕ್ತಿಯ ಆತ್ಮಕ್ಕೆ ನಾಲ್ಕು ಆಯಾಮಗಳಿವೆ ಎಂದು ಅರ್ಥೈಸುತ್ತಾರೆ. ದ್ವೈತ ಪರಂಪರೆಯಲ್ಲಿ ಪ್ರತಿ ಜೀವಿಯು ತನ್ನೆಲ್ಲ ಕಾರ್ಯಾಕಾರ್ಯಗಳಿಗಾಗಿ ತನ್ನ ಆಂತರ್ಯದಲ್ಲಿರುವ ಪರಮಾತ್ಮನನ್ನು ಅವಲಂಬಿಸಿರುವುದು;  ಅಂತಹ ಪ್ರತಿ ವ್ಯಕ್ತಿಯ ಆಂತರ್ಯಕ್ಕೆ ನಾಲ್ಕು ಆಯಾಮಗಳಿವೆ ಎಂದು ವ್ಯಾಖ್ಯಾನಿಸುತ್ತಾರೆ. ವ್ಯಕ್ತಿಯ ಆತ್ಮವು ಪ್ರತಿಬಿಂಬ ಸ್ವಭಾವದ್ದಾಗಿದ್ದು ಅವನನ್ನು ಕ್ರಿಯಾಶೀಗೊಳಿಸುವ ಸರ್ವೋತ್ತಮ (ಪರಮ)ಆತ್ಮ ಸ್ವರೂಪವು ನಾಲ್ಕು ತರಹ ಎಂದು ತಾತ್ಪರ್ಯವಾಗುತ್ತದೆ. ಅವು ಯಾವುವು ಎಂಬುದು ಮುಂದಿನ ಮಂತ್ರಗಳ ವಸ್ತು.

ಇವುಗಳನ್ನು ವಿವರಿಸುವ ಮಂತ್ರಗಳು ಹೀಗಿವೆ:

ಜಾಗರಿತ ಸ್ಥಾನೋ ಬಹಿಷ್ಪ್ರಜ್ಞಃ ಸಪ್ತಾಂಗಃ

ಏಕೋನವಿಂಶತಿಮುಖಃ ಸ್ಥೂಲಭುಕ್‌

ವೈಶ್ವಾನರಃ ಪ್ರಥಮ ಪಾದಃ


ಸ್ವಪ್ನಸ್ಥಾನೋsನ್ತಃ ಪ್ರಜ್ಞಃ ಸಪ್ತಾಂಗಃ

ಏಕೋನವಿಂಶತಿಮುಖಃ ಪ್ರವಿವಿಕ್ತಭುಕ್‌

ತೈಜಸಃ ದ್ವಿತೀಯ ಪಾದಃ


          ಮೊದಲನೆಯದು ಜಾಗೃತಾವಸ್ಥೆ ಅಥವ ಮನುಷ್ಯ ಎಚ್ಚರದಲ್ಲಿರುವ ಸಮಯ. ಜಾಗರಿತ ಸ್ಥಾನ ಎಂದು ಮಂತ್ರದಲ್ಲಿ ಇದನ್ನು ಕರೆದಿದ್ದಾರೆ. ಅದ್ವೈತ ವ್ಯಾಖ್ಯಾನದ ಪ್ರಕಾರ ಇದು ಮತ್ತು ಮುಂದಿನ ಮಂತ್ರಗಳು ಪ್ರತಿ ವ್ಯಕ್ತಿಯ ಆಂತರ್ಯದ‌‌ ಆತ್ಮದ ಸ್ಥಿತಿಗಳನ್ನು ವಿವರಿಸುವಂತಹದು. ಆತ್ಮವು ಜಾಗೃತ ಸ್ಥಿತಿಯಲ್ಲಿರುವಾಗಿನ ಲಕ್ಷಣಗಳನ್ನು ಮೇಲಿನ ಮೊದಲನೆಯ ಮಂತ್ರವು ವಿವರಿಸುತ್ತದೆ. ಈ ಸ್ಥಿತಿಯಲ್ಲಿ ಅವನ ಪ್ರಜ್ಞೆ ಎಲ್ಲ ಅವನಿಂದ ಹೊರಗೆ ನಿರ್ದೇಶಿತವಾಗಿದೆ. ಹೊರಪ್ರಪಂಚವನ್ನು ಗ್ರಹಿಸುವುದು ಅವನ ಈ ಸ್ವರೂಪದ ಲಕ್ಷಣ. ಇಂತಹ ಸ್ಥಿತಿಯಲ್ಲಿ ಅವನ ತಲೆಯು ಸ್ವರ್ಗ, ಕಣ್ಣುಗಳು ಸೂರ್ಯ, ಗಾಳಿಯು ಅವನುಸಿರು, ಆಕಾಶವು ಅವನ ಶರೀರ, ನೀರು ಅವನ ಕೆಳ ಇಂದ್ರಿಯಗಳು ಮತ್ತು ಭೂಮಿ ಅವನ ಕಾಲುಗಳು. ಇದೊಂದು ದೊಡ್ಡ ರೂಪಕವಾಗಿದ್ದು ಹಾಗೆ ಗ್ರಹಿಸಿ ಇದನ್ನು ಅರ್ಥೈಸಿ ಕೊಳ್ಳ ಬೇಕು. ಇವನಿಗೆ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು ಮತ್ತು ನಾಲ್ಕು ಅಂತಃಕರಣಗಳು - ಹೀಗೆ ಹತ್ತೊಂಬತ್ತು ಬಾಯಿಗಳಿದ್ದು ಅವುಗಳಿಂದ ಪ್ರಪಂಚವನ್ನು ಭೋಗಿಸುತ್ತಾನೆ. ವಸ್ತು ಸೂಕ್ಷ್ಮತೆಯ ಗ್ರಹಿಕೆ ಇದರಲ್ಲಿ ಸೇರಿರುವುದಿಲ್ಲ. ಗೋಚರ ಪ್ರಪಂಚ ಹೇಗಿದೆಯೋ ಹಾಗೆ ಗ್ರಹಣೆ (ಸ್ಥೂಲಭುಕ್) ಈ ಸವರೂಪದ ಲಕ್ಷಣ. ಜಾಗರಿತ ಸ್ಥಿತಿಯಲ್ಲಿರುವ ಈ ಆತ್ಮನಿಗೆ ವೈಶ್ವಾನರ ಅಥವ ವಿಶ್ವ ಎಂದು ಹೆಸರು.  ದ್ವೈತ ಸಿದ್ಧಾಂತದ ವ್ಯಾಖ್ಯಾನಕಾರರು ಇಲ್ಲಿ ಹೇಳುವ ನಾಲ್ಕು ಸ್ಥಿತಿಗಳು ಜೀವಿಗಳ (ಆತ್ಮದ ಅಲ್ಲ) ನಾಲ್ಕು ಸ್ಥಿತಿಗಳೆಂದೂ ಈ ನಾಲ್ಕು ಸ್ಥಿತಿಗಳಲ್ಲಿ ಸರ್ವೋತ್ತಮನಾದ ಪರಮಾತ್ಮನು ಜೀವಿಗಳ ಆಂತರ್ಯದಲ್ಲಿ ಭಿನ್ನ ಸ್ವರೂಪಗಳಲ್ಲಿ ನೆಲಸಿದ್ದು ವಿಭಿನ್ನ ಅವಸ್ಥೆಗಳಲ್ಲಿ ಜೀವಿಯನ್ನು ಕ್ರಿಯಾಶೀಲ ಗೊಳಿಸುತ್ತಾನೆಂದು ಪ್ರತಿಪಾದಿಸುತ್ತಾರೆ. ಇದರಿಂದಾಗಿ ಮಂತ್ರಗಳನ್ನು ಅರ್ಥೈಸುವಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ.

   ವೈಶ್ವಾನರ ಎಂಬುದು ಜೀವಿಯನ್ನು ಜಾಗೃತಾವಸ್ಥೆಯಲ್ಲಿ ಕ್ರಿಯಾಶೀಲನನ್ನಾಗಿಸುವ ಪರಮಾತ್ಮನ ಸ್ವರೂಪದ ಹೆಸರು. ಇವನು ಉಪನಿಷದ್ವಾಕ್ಯದ ಪ್ರಕಾರ ಸಪ್ತಾಂಗಃ. ದ್ವೈತ ವ್ಯಾಖ್ಯಾನಕಾರರು ಸಪ್ತಾಂಗಃ ಎಂಬುದನ್ನು ಬೇರೆಯೇ ರೀತಿಯಲ್ಲಿ ಅರ್ಥೈಸುತ್ತಾರೆ.(ಅದ್ವೈತಪರ ಅರ್ಥವನ್ನು ಮೇಲಿನ ಪರಿಚ್ಛೇದದಲ್ಲಿ ಹೇಳಿದೆ).  ಪರಮಾತ್ಮನಿಗೆ ಈ ರೂಪದಲ್ಲಿ ಸೊಂಡಿಲು ಇರುವ ಪುರುಷಮುಖವಿದೆ. ನಾಲ್ಕು ಕೈಗಳು, ಎರಡು ಕಾಲುಗಳು ಮತ್ತು ಒಂದು ಸೊಂಡಿಲು ಹೀಗೆ ಇವನ ಏಳು ಅಂಗಗಳು. ಅಲ್ಲದೆ  ಈ ಮುಖ್ಯ ಮುಖದ ಎಡ ಮತ್ತು ಬಲ ಬದಿಗಳಲ್ಲಿ ಬೇರೆ ಬೇರೆ ದೇವತೆಗಳನ್ನು ಪ್ರತಿನಿಧಿಸುವ ಒಂಬತ್ತು ಒಂಬತ್ತು ಮುಖಗಳಿವೆ. ಹೀಗೆ ಇವನು ಏಕೋನ ವಿಂಶತಿ (ಹತ್ತೊಂಬತ್ತು) ಮುಖಃ.  ಈ ವೈಶ್ವಾನರ ಜಾಗೃತ ಸ್ಥಿತಿಯಲ್ಲಿ ಹೊರ ವಸ್ತುಗಳ ಜ್ಞಾನ ಉಂಟಾಗುವಂತೆ ಮಾಡುತ್ತಾನೆ.

       ಎರಡನೆಯದು ಸ್ವಪ್ನಾವಸ್ಥೆಯನ್ನು ವಿವರಿಸುತ್ತದೆ. ಅದ್ವೈತ ವ್ಯಾಖ್ಯಾನಕಾರರ ಪ್ರಕಾರ ಸ್ವಪ್ನಾವಸ್ಥೆಯಲ್ಲಿ ಆತ್ಮನ ಪ್ರಜ್ಞೆಯೆಲ್ಲವು ಒಳಗೆ ನಿರ್ದೇಶಿತ ವಾಗಿರುತ್ತದೆ. ಅಂದರೆ ಮನಸ್ಸಿನಿಂದ ಮಾತ್ರ ವಸ್ತುಗಳ ಗ್ರಹಿಕೆ. (ಜಾಗೃತಾವಸ್ಥೆಯಲ್ಲಿ ಇತರ ಇಂದ್ರಿಯಗಳು ಹೊರಗಿರುವ ವಸ್ತುಗಳನ್ನು ಭೋಗಿಸುತ್ತವೆ). ಏಳು ಅಂಗಗಳು ಮತ್ತು ಹತ್ತೊಂಬತ್ತು ಮುಖಗಳು ಮೊದಲಿನಂತೆ. ಆದರೆ ವಸ್ತುಗಳನ್ನು ಅವು ಇದ್ದಂತಲ್ಲ, ಅವುಗಳ ಸೂಕ್ಷ್ಮ ಸ್ವರೂಪದಲ್ಲಿ ಭೋಗಿಸುವಿಕೆ. ಅಂದರೆ ಜಾಗೃತಾವಸ್ಥೆಯಲ್ಲಿ ನೋಡಿದ ವಸ್ತುಗಳು ಮನಸ್ಸಿನಲ್ಲಿ ಬಿಟ್ಟ ಅಚ್ಚುಗಳನ್ನು ಮೆಲುಕು ಹಾಕುವಿಕೆ ಮತ್ತು ಇದರಿಂದ ಭೋಗಿಸುವಿಕೆ. ಸ್ವಪ್ನಾವಸ್ಥೆಯಲ್ಲಿರುವ ಈ ಆತ್ಮನಿಗೆ ತೈಜಸ ಎಂದು ಎಂದು ಹೆಸರು. ದ್ವೈತ ವ್ಯಾಖ್ಯಾನಕಾರರು ಸ್ವಪ್ನಾವಸ್ಥೆಯು ಜೀವಿಯ ಒಂದು ಅವಸ್ಥೆ ಎಂದು ಹೇಳುತ್ತಾರೆ. ಜೀವಿಗೆ ಸ್ವಪ್ನಾವಸ್ಥೆಯ ವಸ್ತುಗಳ ಭೋಗವನ್ನು ತಂದುಕೊಡುವ ಪರಮಾತ್ಮನ ಸ್ವರೂಪದ ಹೆಸರು ತೈಜಸ. ಅವನೇ ಸ್ವಪ್ನಗಳನ್ನು ಜಗೃತಾವಸ್ಥೆಯಲ್ಲಿ ಉಂಟಾದ ಅನುಭವಗಳ ಸಂಸ್ಕಾರಗಳನ್ನು ಬಳಸಿ ಸೃಷ್ಟಿ ಮಾಡುತ್ತಾನೆ.

      ಅನಂತರದ ಮಂತ್ರ ಇನ್ನೂ ಕುತೂಹಲಕರವಾಗಿದೆ. ಅದು ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಇದೆ. ಗಾಢ ನಿದ್ರೆಯ ಸೂಕ್ತವಾದ ಪ್ರಥಮ ವಿವರಣೆ ಈ ನಿರೂಪಣೆ ಎನ್ನಬಹುದು. ಮಂತ್ರ ಹೀಗಿದೆ: 


ಯತ್ರ ಸುಪ್ತೋ ನಕಂಚನ ಕಾಮಂ ಕಾಮಯತೇ,

  ನಕಂಚನ ಸ್ವಪ್ನಂ ಪಶ್ಯತಿ, ತತ್ ಸುಷುಪ್ತಂ. 

ಸುಷುಪ್ತ ಸ್ಥಾನಃ ಏಕೀಭೂತಃ, ಪ್ರಜ್ಞಾನ ಘನಃ 

ಏವಂ ಆನಂದಮಯೋ ಹಿ ಆನಂದಭುಕ್, 

ಚೇತೋಮುಖಃ ಪ್ರಾಜ್ಞಃ ತೃತೀಯ ಪಾದಃ. 


ಮಂತ್ರದ ಮೊದಲನೆಯ ಭಾಗವನ್ನು ಅರ್ಥೈಸುವಲ್ಲಿ ದ್ವೈತಾದ್ವೈತ ನಿರೂಪಣೆಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಯಾವ ನಿದ್ರಾವಸ್ಥೆಯಲ್ಲಿ ಯಾವ ಆಸೆಯೂ ಇರುವುದಿಲ್ಲವೋ ಮತ್ತು ಕನಸೂ ಕಾಣುವುದಿಲ್ಲವೋ ಅದಕ್ಕೆ ಗಾಢನಿದ್ರೆ ಎಂದು ಹೆಸರು ಎಂದು ಈ ಭಾಗ ನಿರೂಪಿಸುತ್ತದೆ. ಇದು ಸ್ಥೂಲವಾಗಿ ದ್ವೈತಾದ್ವೈತ ಪಕ್ಷಗಳಿಗೆ ಸಮಾನ. ಉತ್ತರ ಭಾಗವನ್ನು ಅರ್ಥೈಸುವಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಅದ್ವೈತ ಪರ ವ್ಯಾಖ್ಯಾನಕಾರರು ಏಕೀಭೂತ ಎಂಬುದಕ್ಕೆ ಜಾಗೃತ ಮತ್ತು ಸ್ವಪ್ನಾವಸ್ಥೆಗಳು ಒಗ್ಗೂಡಿ ಈ ಸುಷುಪ್ತಾವಸ್ಥೆ ಉಂಟಾಗುತ್ತದೆಂದು ವಿವರಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಇದು ಅವೆರಡರಂತಲ್ಲದ ವಿಶಿಷ್ಟವಾದ ಸ್ಥಿತಿ ಎಂದು ಅರ್ಥೈಸುತ್ತಾರೆ. ಇದೊಂದು ಆನಂದಮಯವಾದ ಪ್ರಜ್ಞಾ ಮೊತ್ತ ಎಂಬುದೂ ಆನಂದ ಭೋಜ್ಯನೆಂಬುದೂ ಎರಡೂ ವಾದಗಳಿಗೆ ಸಮಾನ. ಅದ್ವೈತದ ಪ್ರಕಾರ ಈ ಅವಸ್ಥೆಯನ್ನು ಅನುಭವಿಸುವ ಆತ್ಮಸ್ವರೂಪಿಗೆ ಪ್ರಾಜ್ಞನೆಂದು ಹೆಸರು ಎಂದು ಹೇಳುತ್ತಾರೆ. ದ್ವೈತ ವಾದದಲ್ಲಿ ಸುಷುಪ್ತಾನುಭವವನ್ನು ಜೀವಿಗೆ ತಂದುಕೊಡುವ ಪರಮಾತ್ಮನ ಸ್ವರೂಪಕ್ಕೆ ಪ್ರಾಜ್ಞ ಎಂಬ ಹೆಸರೆಂದು ನಿರೂಪಿಸುತ್ತಾರೆ.

         ಈ ಮೂರು ಅವಸ್ಥೆಗಳ ವಿವರಣೆಯನಂತರ  ವಿಷಯಕ್ಕೆ ಒಂದು ರೀತಿಯ ಮುಕ್ತಾಯ ಬರುತ್ತದೆ. ಇದಾದ ನಂತರ ಬರುವ ಆರನೆಯ ಮಂತ್ರವು ಆದುದರಿಂದ ಪ್ರಾಮುಖ್ಯ ಪಡೆಯುತ್ತದೆ. ಅದ್ವೈತ ವ್ಯಾಖ್ಯಾನಕಾರರು ಈ ಆರನೆಯ ಮಂತ್ರವು ಐದನೆಯ ಮಂತ್ರದಲ್ಲಿ ಹೇಳಿರುವ ಪ್ರಾಜ್ಞನ ಹೆಚ್ಚುವರಿ ವಿವರಣೆ ಎಂದು ವಿವರಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಆರನೆಯದನ್ನು ಏಳನೆಯ ಮಂತ್ರದೊಂದಿಗೆ ಒಗ್ಗೂಡಿಸಿ ವಿವರಿಸುತ್ತಾರೆ. 

        ಈಗ ಆರನೆಯ ಮಂತ್ರ. ಅದು ಹೀಗಿದೆ: 

ಏಷ ಸರ್ವೇಶ್ವರ ಏಷ ಸರ್ವಜ್ಞ ಏಷೋsನ್ತರ್ಯಾಮ್ಯೇಷ 

ಯೋನಿಃ ಸರ್ವಸ್ಯ ಪ್ರಭವಾಪ್ಯಯೌ ಹಿ ಭೂತಾನಾಂ. 

ಅಂದರೆ 'ಇವನೇ ಎಲ್ಲಕೂ ಒಡೆಯ, ಇವನೇ ಎಲ್ಲವನೂ ತಿಳಿದವನು, ಇವನೇ ಎಲ್ಲದರ ನಿಯಂತ್ರಕ, ಇವನೆ ಎಲ್ಲದರ ಮೂಲ, ಎಲ್ಲ ಪ್ರಾಣಿಗಳ ಹುಟ್ಟು ನಾಶಗಳು ಇವನೆ'.

ಅದ್ವೈತ ವ್ಯಾಖ್ಯಾನಕಾರರ ಪ್ರಕಾರ ಸುಪ್ತ ಸ್ಥಿತಿ-ಸ್ವರೂಪಿ ಪ್ರಾಜ್ಞನನ್ನು ಈ ಮಂತ್ರ ವಿವರಿಸುತ್ತಿದೆ. "ಗಾಢನಿದ್ರೆಗೆ ಸಂವಾದಿಯಾದ ಪ್ರಾಜ್ಞನನ್ನು ಈಶ್ವರನಿಗೆ ಸಮೀಕರಿಸ ಲಾಗುತ್ತಿದೆ. ಈಶ್ವರನು ಇಡೀ ವಿಶ್ವದ ಸೃಷ್ಟಿ ಕರ್ತನಿದ್ದಂತೆ ಗಾಢನಿದ್ರೆಯಲ್ಲಿನ ಪ್ರಜ್ಞೆಯಿಂದಾಗಿ ಜಾಗೃತ ಮತ್ತು ಸ್ವಪ್ನಾವಸ್ಥೆಯ ಎಲ್ಲ ಘಟನೆಗಳೂ ಘಟಿಸುತ್ತವೆ; ಅದರಲ್ಲಿಯೇ ಅವು ಕರಗುತ್ತವೆ ಕೂಡ". ಆದ್ದರಿಂದ ಪ್ರಾಜ್ಞನನ್ನು ಈಶ್ವರನೆಂದು ಕರೆದಿದೆ.

       ಈ ಮೂರೂ ಅಲ್ಲದ ನಾಲ್ಕನೆಯ ಸ್ಥಿತಿಯೊಂದಿದೆ. ಅದನ್ನು ತುರೀಯವೆಂದು ಕರೆದಿದ್ದಾರೆ. ಈ ನಾಲ್ಕನೆಯ ಅವಸ್ಥೆಯನ್ನು ಏಳನೆಯ ಮಂತ್ರ ವಿವರಿಸುತ್ತದೆ. ಅದರ ವಿಷಯವನ್ನು ಅನಂತರ ವಿವರವಾಗಿ ಚರ್ಚಿಸಬಹುದು. ದ್ವೈತ ವ್ಯಾಖ್ಯಾನಕಾರರ ಪ್ರಕಾರ ಇದುವರೆಗೆ ವಿವರಿಸಿದ ಮೂರು ಅವಸ್ಥೆಗಳು ಮತ್ತು ಮುಂದೆ ಬರುವ ನಾಲ್ಕನೆಯ ಅವಸ್ಥೆಯೂ ಸೇರಿ ಪರಮಾತ್ಮನನ್ನು ವಿವರಿಸುತ್ತವೆ. " ಹೀಗೆ ಚತುರೂಪ ಆತ್ಮನು ಎಲ್ಲಕ್ಕೂ ಒಡೆಯನು, ಎಲ್ಲವನ್ನೂ ತಿಳಿದವನು, ಎಲ್ಲರಲ್ಲಿ ಶ್ರೇಷ್ಠನು ಮತ್ತು ಎಲ್ಲ ವ್ಯಕ್ತಿಗಳ ದೇಹದಲ್ಲಿ ವಿಶ್ವ, ತೈಜಸ, ಪ್ರಾಜ್ಞ ಮತ್ತು ತುರೀಯ ಎಂಬ ಆನಂದಮಯ ರೂಪಗಳಿಂದ ಇರುವವನು". ಎಲ್ಲವೂ ಆನಂದ ಸ್ವರೂಪಿಗಳು ಎಂಬುದನ್ನು "ಚೇತೋಮುಖಃ" ಎಂಬ ಶಬ್ದ ತಿಳಿಸುತ್ತಿದೆ. 

       ಆರನೆಯ ಮಂತ್ರದನಂತರ ಅದ್ವೈತ ವ್ಯಾಖ್ಯಾನಗಳಲ್ಲಿ ಗೌಡಪಾದರ ಎಂಟು ಕಾರಿಕೆಗಳು ಬರುತ್ತವೆ. ಈ ಕಾರಿಕೆಗಳು ಒಂದರಿಂದ ಆರು ಮಂತ್ರಗಳಲ್ಲಿ ಬರುವ ವಿಷಯಗಳನ್ನು ವಿವರಿಸುತ್ತವೆ. ಮಂತ್ರಗಳಲ್ಲಿ ಸಾಂದ್ರೀಕೃತವಾಗಿರುವ ಅಂಶಗಳನ್ನು ಸ್ವಲ್ಪಮಟ್ಟಿಗೆ ಸ್ಪಷ್ಟಪಡಿಸುತ್ತವೆ. ಮಂತ್ರಗಳಲ್ಲಿಲ್ಲದ ಆದರೆ ಅರ್ಥ ಗ್ರಹಿಕೆಗೆ ಮುಖ್ಯವೆನಿಸಿದ ಕೆಲವಂಶಗಳನ್ನು ಸೇರಿಸುತ್ತವೆ. ಮೊದಲನೆಯ ಕಾರಿಕೆ ಹೀಗಿದೆ: 

ಬಹಿಷ್ಷ್-ಪ್ರಜ್ಞೋ ವಿಭುರ್-ವಿಶ್ವೋ ಹ್ಯಂತಃಪ್ರಜ್ಞಸ್ತು ತೈಜಸಃ. 

ಘನಪ್ರಜ್ಞಸ್ತಥಾ ಪ್ರಾಜ್ಞ ಏಕಏವ ತ್ರಿಧಾ ಸ್ಮೃತಃ. 

ಮೇಲ್ನೋಟಕ್ಕೆ ಇದು ಜಾಗೃತ, ಸ್ವಪ್ನ ಮತ್ತು ಸುಷುಪ್ತಾವಸ್ಥೆಗಳ ನಿರೂಪಣೆಗಳನ್ನು ಸಂಗ್ರಹಿಸುತ್ತಿರುವಂತೆ ಕಾಣುತ್ತದೆ. ಆದರೆ ಅದು ಇಷ್ಟೇ ಅಲ್ಲ. ಕಾರಿಕೆಯ ಅಂತ್ಯಭಾಗದಲ್ಲಿ ಇರುವ ಏಕ ಏವ ತ್ರಿಧಾ ಸ್ಮೃತಃ ಎಂಬ ಪದ ಪುಂಜವನ್ನು ಒಂದೇ ಆತ್ಮ ಮೂರು ರೂಪಗಳಲ್ಲಿ ಗೋಚರಿಸುವಂತಹದು ಎಂದು ಅದ್ವೈತ ವ್ಯಾಖ್ಯಾನಕಾರರು ಅರ್ಥೈಸುತ್ತಾರೆ. ಮತ್ತು ಮೂರೂ (ಅನಂತರದ ನಾಲ್ಕನೆಯದು ಕೂಡ) ಅವಸ್ಥೆಗಳ ಮೂಲದಲ್ಲಿರುವುದು ಒಂದೇ ಸತ್ಯ ಎನ್ನುತ್ತಾರೆ - ಚಿನ್ನದ ಕಡಗ, ಚಿನ್ನದ ಓಲೆ, ಚಿನ್ನದ ಡಾಬು ಎಂಬ ಮೂರೂ ವಸ್ತುಗಳ ಮೂಲದಲ್ಲಿ ಚಿನ್ನ ಎಂಬ ಒಂದೇ ವಸ್ತು ಇರುವಂತೆ.

          ಮಧ್ವ ಭಾಷ್ಯದಲ್ಲಿ ಆರನೆಯ ಮಂತ್ರದ ನಂತರ ಬರುವ ಎಂಟು ಶ್ಲೋಕಗಳನ್ನು ಗೌಡಪಾದ ಕಾರಿಕೆಗಳೆಂದು ಹೇಳಿಲ್ಲ. ಈ ಶ್ಲೋಕಗಳ ಪೂರ್ವದಲ್ಲಿ ʼಅತ್ರ ಏತೇ ಶ್ಲೋಕಾಃ ಭವಂತಿʼ ಎಂದು ಸೂಚಿಸುವ ಮೂಲಕ ಉಪನಿಷತ್ತಿನ ಮುಖ್ಯ ಧಾರೆಯಿಂದ ಇವು ಸ್ವಲ್ಪ ಭಿನ್ನ ಎಂಬುದನ್ನು ಸೂಚಿಸಿದೆ. ಇವೂ ಕೂಡ ಬ್ರಹ್ಮದೃಷ್ಟವೇ ಆಗಿದ್ದು ಪ್ರಮಾಣಗಳೇ ಆಗಿವೆ ಎಂದು ಗರುಡ ಪುರಾಣವನ್ನು ಉಲ್ಲೇಖಿಸಿ ಮಧ್ವರು ತಿಳಿಸುತ್ತಾರೆ. ವಿಶ್ವ, ತೈಜಸ ಮತ್ತು ಪ್ರಾಜ್ಞ ಎಂಬಿವು ಒಬ್ಬನೇ ಪರಮಾತ್ಮನ ಮೂರು ಸ್ವರೂಪಗಳಾಗಿದ್ದು ಇವು ಬೇರೆ ಬೇರೆ ಅವಸ್ಥೆಗಳಲ್ಲಿ ಜೀವಿಯನ್ನು ಕ್ರಿಯಾಶೀಲನನ್ನಾಗಿಸುವುವು ಎಂಬುದು ಮಧ್ವರ ನಿರೂಪಣೆ.

          ಇಲ್ಲಿ ಉಲ್ಲೇಖಿಸಿರುವ ಗೌಡಪಾದರ ಎಂಟು ಶ್ಲೋಕಗಳಲ್ಲಿ ಅಥವ ʼಏತೇ ಶ್ಲೋಕಾಃʼಗಳಲ್ಲಿ ಎರಡನೆಯದು ಮೂರು ಅವಸ್ಥೆಗಳಲ್ಲಿ ಪರಮಾತ್ಮನ (ಅದ್ವೈತದ ಪ್ರಕಾರ ಆತ್ಮನ) ಈ ಮೂರು ಸ್ವರೂಪಗಳು ಜೀವಿಯ ಯಾವ ಅಂಗದಲ್ಲಿ ಸ್ಥಿತವಾಗಿರುತ್ತವೆ ಎಂಬುದನ್ನು ತಿಳಿಸುತ್ತದೆ: 

ದಕ್ಷಿಣಾಕ್ಷಿ ಮುಖೇ ವಿಶ್ವಃ ಮನಸ್ಯಂತಸ್ತು ತೈಜಸಃ. 

ಆಕಾಶೇಚ ಹೃದಿ ಪ್ರಾಜ್ಞಃ ತ್ರಿಧಾ ದೇಹೇ ವ್ಯವಸ್ಥಿತಃ. 


ಬಲಗಣ್ಣಿನ ಮುಂಭಾಗದಲ್ಲಿ ವಿಶ್ವ, ಮನಸಿನೊಳಗೆ ತೈಜಸ, ಹೃದಯಾಕಾಶದಲ್ಲಿ ಪ್ರಾಜ್ಞ - ಹೀಗೆ ಪರಮಾತ್ಮನ ಮೂರು ಸ್ವರೂಪಗಳಿಗೆ ಮೂರು ಸ್ಥಾನಗಳು. ಈ ಸ್ಥಾನ ನಿರೂಪಣೆ ಧ್ಯಾನಕ್ಕೆ ಉಪಯುಕ್ತವೆಂಬ ಅಭಿಪ್ರಾಯವಿದೆ.

        ಮುಂದಿನ ಮೂರು ಶ್ಲೋಕಗಳಲ್ಲಿ ಈ ಮೂರು ಸ್ವರೂಪಗಳ ಮೂಲಕ ಆತ್ಮನು ಏನನ್ನು ಭೋಗಿಸುತ್ತಾನೆ, ಹೇಗೆ ತೃಪ್ತಿ ಪಡುತ್ತಾನೆ ಮತ್ತು ಅವನ ಸ್ಥಿತಿ ಹೇಗೆ ವ್ಯತ್ಯಾಸ ವಾಗದೆ ಉಳಿಯುತ್ತದೆ ಎಂಬ ವಿಷಯಗಳನ್ನು ಸ್ಪಷ್ಟ ಪಡಿಸುತ್ತಾನೆ. ವಿಶ್ವನು ಸ್ಥೂಲ ವಸ್ತುಗಳನ್ನಷ್ಟೆ ಭೋಗಿಸುತ್ತಾನೆ; ತೈಜಸನು ಸೂಕ್ಷ್ಮ ವಸ್ತುಗಳನ್ನು. ಪ್ರಾಜ್ಞನು ಆನಂದವನ್ನು ಮಾತ್ರ ಉಣ್ಣುತ್ತಾನೆ. ಆಯಾ ಸ್ವರೂಪದಲ್ಲಿ ಆಯಾ ಭಾಗಗಳಿಂದಲೇ ತೃಪ್ತಿ. ವಿಶ್ವನು ಸ್ಥೂಲ ವಸ್ತುಗಳಿಂದ ತೃಪ್ತನಾಗುತ್ತಾನೆ; ತೈಜಸನು ಸೂಕ್ಷ್ಮ ವಸ್ತುಗಳಿಂದ. ಪ್ರಾಜ್ಞನು ಆನಂದದಿಂದ ತೃಪ್ತನಾಗುತ್ತಾನೆ. ಹೀಗೆ ಬೇರೆಬೇರೆ ಸ್ವರೂಗಳಿಂದ ಆತ್ಮನು ಸ್ಥೂಲ, ಸೂಕ್ಷ್ಮ, ಆನಂದಗಳನ್ನು ಭೋಗಿಸಿದರೂ ಅವುಗಳ ಫಲದ ಅಂಟು ಆತ್ಮನಿಗಾಗುವುದಿಲ್ಲ.

      ದ್ವೈತ ವ್ಯಾಖ್ಯಾನಕಾರರ ಪ್ರಕಾರ ಈ ಶ್ಲೋಕಗಳ ಅರ್ಥ ಭಿನ್ನವಾಗಿದೆ. ವಿಶ್ವನು ಸ್ಥೂಲ ವಸ್ತುಗಳ ಭೋಗವನ್ನು ಜೀವನಿಗೆ ಒದಗಿಸುತ್ತಾನೆ ಮತ್ತು ತೃಪ್ತನನ್ನಾಗಿಸುತ್ತಾನೆ. ತೈಜಸನು ಸೂಕ್ಷ್ಮ ವಸ್ತುಗಳ ಭೋಗವನ್ನು ಜೀವನಿಗೆ ಒದಗಿಸುತ್ತಾನೆ ಮತ್ತು ತೃಪ್ತನನ್ನಾಗಿಸುತ್ತಾನೆ. ಅದೇ ರೀತಿ ಪ್ರಾಜ್ಞನು ಆನಂದವನ್ನು. ಭೋಗಫಲಗಳ ಅಂಟು ಪರಮಾತ್ಮನಿಗಾಗುವುದಿಲ್ಲ.

       ಇಲ್ಲಿಂದ ಮುಂದೆ ನಾಲ್ಕು ಶ್ಲೋಕಗಳು ಸೃಷ್ಟಿಯ ಬಗ್ಗೆ  ಪ್ರಚಲಿತ ವಾದಗಳನ್ನು ಸಂಗ್ರಹಿಸುತ್ತವೆ. ಇವುಗಳಲ್ಲಿ ಮೊದಲನೆಯದು ಉಪನಿಷತ್ತು ಒಪ್ಪಿರುವ ಸೃಷ್ಟಿ ಸಿದ್ಧಾಂತ.

ಅದ್ವೈತ ವ್ಯಾಖ್ಯಾನಕಾರರು ಈ ಶ್ಲೋಕವು ಸೃಷ್ಟಿಗೆ ಕಾರ್ಯಕಾರಣ ಪ್ರಕ್ರಿಯೆಯನ್ನು ಸೂಚಿಸುತ್ತದೆ ಎಂದು ವಿವರಿಸುತ್ತಾರೆ. ಎಲ್ಲ ಪ್ರಾಣಿಗಳಿಗೆ ಅಸ್ತಿತ್ವ ವಿರುವುದು ನಿಶ್ಚಿತ.  ಪ್ರಾಣನು ಎಲ್ಲವನ್ನೂ ಸೃಷ್ಟಿಸುತ್ತಾನೆ ಮತ್ತು ಪುರುಷನು ಚೇತನರನ್ನು ಸೃಷ್ಟಿಸುತ್ತಾನೆ. ಮಧ್ವ ಭಾಷ್ಯದ ಪ್ರಕಾರ ಇದಕ್ಕೆ "ಎಲ್ಲ ಭಾವಗಳ ಕ್ರಿಯಾಶೀಲಕ ವಿಷ್ಣುವೆ ಎಂಬುದು ನಿಶ್ಚಯ. ಹೀಗಲ್ಲದೆ ಅನ್ಯ ರೀತಿಯಲ್ಲಿ ಚಿಂತಿಸುವವರು ಅಜ್ಞಾನಿಗಳು. ನಾರಾಯಣನು ಅತ್ಯುಚ್ಚ ಸ್ಥಾನದಲ್ಲಿದ್ದು ಅವನ ಅಧೀನದಲ್ಲಿ ಪ್ರಾಣನು ಎಲ್ಲ ಜೀವಿಗಳ ಕ್ರಿಯಾಶೀಲ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾನೆ." ಎಂದರ್ಥ.

      ಮುಂದಿನ ಮೂರು ಶ್ಲೋಕಗಳನ್ನು ಅರ್ಥೈಸುವಲ್ಲಿ ಎರಡು ಪರಂಪರೆಗಳಲ್ಲಿ ಅಷ್ಟಾಗಿ ವ್ಯತ್ಯಾಸ ವಿಲ್ಲ. ಇವುಗಳಲ್ಲಿ ಸೃಷ್ಟಿಯ ಬಗ್ಗೆ ಆರು ವಾದಗಳನ್ನು ಉಲ್ಲೇಖಿಸಿ ಅವುಗಳನ್ನು ನಿರರ್ಥಗೊಳಿಸಿ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ವಿವರಿಸಿದ್ದಾರೆ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಕಾಣಿಸಿಗೊಳ್ಳುತ್ತವೆ. ಉದಾಹರಣೆಗೆ ಪ್ರಸವವು(ಸೃಷ್ಟಿಯು) ವಿಭೂತಿ ಎಂಬ ಮೊದಲನೆಯ ವಾದ. ಅದ್ವೈತ ವ್ಯಾಖ್ಯಾನಕಾರರು ಪರಮಾತ್ಮನ ವೈಭವವೇ ಸೃಷ್ಟಿ ಎಂದು ಅರ್ಥೈಸುತ್ತಾರೆ; ದ್ವೈತ ವ್ಯಾಖ್ಯಾನಕಾರರು ಇರುವುದರ ಮಾರ್ಪಾಟೇ ಸೃಷ್ಟಿ ಎನ್ನುತ್ತಾರೆ. ಇರುವುದನ್ನು ಮಾರ್ಪಡಿಸುವುದೂ ಪರಮಾತ್ಮನ ಒಂದು ವೈಭವವಾಗಿರಬಹುದೆಂಬುದನ್ನು ಗಮನಿಸಬಹುದು.

ಎರಡನೆಯ ವಾದವು ಸೃಷ್ಟಿಯು ಸ್ವಪ್ನದಲ್ಲಾದಂತೆ ಎಂದು ಹೇಳುತ್ತದೆ. ಮೂರನೆಯ ವಾದವು ಪರಮಾತ್ಮನು ಹೀಗಾಗಲಿ ಎಂದು ಇಚ್ಛೆಪಟ್ಟದ್ದರಿಂದ ಮಾತ್ರವೇ ಈ ಸೃಷ್ಟಿಯೆಲ್ಲ ಉಂಟಾಯಿತು ಎಂದಿದೆ. ನಾಲ್ಕನೆಯ ಗುಂಪಿನವರು ಕಾಲಾನುಕ್ರಮದಲ್ಲಿ ಈ ಸೃಷ್ಟಿ ವಿಕಾಸಗೊಂಡುದು ಎಂದು ಅಭಿಪ್ರಾಯ ಪಡುತ್ತಾರೆ. ಪರಮಾತ್ಮನು ತಾನು ಸುಖಪಡುವುದಕ್ಕಾಗಿ ಈ ಪ್ರಪಂಚವನ್ನು ಸೃಷ್ಟಿಸಿದನೆಂದು ಬೇರೆ ಕೆಲವರು ಸೂಚಿಸುತ್ತಾರೆ. ತನಗೆ ಮುದಕೊಡುವ ಕ್ರೀಡೆಯಾಡಲು ಪರಮಾತ್ಮನು ಸೃಷ್ಟಿಸಿಕೊಂಡುದು ಎನ್ನುತ್ತಾರೆ ಮತ್ತೆ ಕೆಲರು. ಈ ವಾದಗಳ ಸಂಗ್ರಹವನ್ನು ಕೊನೆಗೊಳಿಸುತ್ತಾ ಉಪನಿಷತ್ತು ಹೇಳುತ್ತದೆ: 'ತನ್ನಲ್ಲಿ ತಾನು ತೃಪ್ತನಾದವಗೆ ಆಸೆ ಇನ್ನೆಲ್ಲಿಯದು? ಅವನ ಸ್ವಭಾವದಂತೆ ನಡೆಯುವುದು ಎಲ್ಲ.'

       ಗ್ರಂಥದಲ್ಲಿ ವಸ್ತು ವಿಭಜನೆಯಲ್ಲಿ ಇಲ್ಲಿ ಒಂದು ಮುಖ್ಯ ವ್ಯತ್ಯಾಸ ಈ ಹಂತದಲ್ಲಿ ಕಂಡುಬರುತ್ತದೆ. ಅದ್ವೈತಪರ ಗ್ರಂಥಗಳಲ್ಲಿ ಇಡೀ ಉಪನಿಷತ್ತು ಮತ್ತು ಸಂಬಂಧಿಸಿದ ಗೌಡಪಾದ ಕಾರಿಕೆಗಳು ಒಂದು ಘಟಕವಾಗಿರುತ್ತವೆ. ಮಧ್ವ ಭಾಷ್ಯದಲ್ಲಿ ಇಲ್ಲಿಗೆ ಅಂದರೆ ಆರು ಮಂತ್ರಗಳನಂತರದ ಒಂಬತ್ತು ಶಲೋಕಗಳಿಗೆ ಪ್ರಥಮ ಅಧ್ಯಾಯ ಮುಕ್ತಾಯವಾಗುತ್ತದೆ. ಮುಂದಿನ ಮಂತ್ರದಿಂದ ಎರಡನೆಯ ಅಧ್ಯಾಯವು ಪ್ರಾರಂಭಗುತ್ತದೆ.

         ಎರಡನೆಯ ಅಧ್ಯಾಯದಲ್ಲಿ ಇರುವುದು ಒಂದೇ ಮಂತ್ರ. ಉಪನಿಷತ್ತಿನ ಮುಖ್ಯಧಾರೆಯಲ್ಲಿಲ್ಲದ ಶ್ಲೋಕಗಳು ಮುಗಿದ ನಂತರ ಇದೇ ಮುಖ್ಯ ಧಾರೆಯ ಮಂತ್ರ. ಶ್ಲೋಕಗಳು ಮುಗಿದವು ಮುಖ್ಯಧಾರೆ ಮತ್ತೆ ಪ್ರಾರಂಭವಾಯಿತು ಎಂಬುದನ್ನು ತೋರಿಸಲೆಂದೇ ಹೊಸ ಅಧ್ಯಾಯವನ್ನು ಪ್ರಾರಂಬಿಸಲಾಗಿದೆ ಎನಿಸುತ್ತದೆ. ಈ ಮಂತ್ರವು ಅದ್ವೈತ ಪರ ಗ್ರಂಥಗಳಲ್ಲಿ ಏಳನೆಯದು. ಮಧ್ವ ಭಾಷ್ಯದಲ್ಲಿ ಹದಿನೈದನೆಯದು. ಈ ಮಂತ್ರವು ತುರೀಯವೆಂಬ ನಾಲ್ಕನೆಯ ಸ್ಥಿತಿಯನ್ನು ವರ್ಣಿಸುವಂತಹದು. ಮಂತ್ರವು ಹೀಗಿದೆ: 

        ನಾಂತಃಪ್ರಜ್ಞಂ ನಬಹಿಷ್ಪ್ರಜ್ಞಂ ನೋಭಯತಃ

        ಪ್ರಜ್ಞಂ ನಪ್ರಜ್ಞಾನಘನಂ ನಪ್ರಜ್ಞಂ ನಾಪ್ರಜ್ಞಂ

        ಅದೃಷ್ಟಮವ್ಯವಹಾರ್ಯಮಗ್ರಾಹ್ಯಮಲಕ್ಷಣಂ

        ಅಚಿಂತ್ಯಮವ್ಯಪದೇಶ್ಯಮೇಕಾತ್ಮಪ್ರತ್ಯಯಸಾರಂ

        ಪ್ರಪಂಚೋಪಶಮಂ ಶಾಂತಂ ಶಿವಮದ್ವೈತಂ

        ಚತುರ್ಥಂ ಮನ್ಯಂತೇ ಸ ಆತ್ಮಾ ಸವಿಜ್ಞೇಯಃ


ಅದ್ವೈತ ಮತ್ತು ದ್ವೈತ ಪರ ವ್ಯಾಖ್ಯಾನಕಾರರಲ್ಲಿ ಈ ಮಂತ್ರವನ್ನು ಅರ್ಥೈಸುವಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಅಂತಃಪ್ರಜ್ಞ, ಬಹಿಷ್ಪ್ರಜ್ಞ ಇತ್ಯಾದಿ ಪದಗಳಿಗೆ ಎರಡೂ ಪರಂಪರೆಗಳಲ್ಲಿ ಇರುವ ಅರ್ಥವ್ಯತ್ಯಾಸದಿಂದ ಈ ವ್ಯತ್ಯಯಗಳು ಉದ್ಭವಿಸುತ್ತವೆ. ಅಂತಃಪ್ರಜ್ಞನಲ್ಲ, ಬಹಿಷ್ಪ್ರಜ್ಞನಲ್ಲ ಇತ್ಯಾದಿಯಾಗಿ ಅದ್ವೈತ ಪರರು ವ್ಯಾಖ್ಯಾನಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಈ ನಾಲ್ಕನೆಯ ಸ್ಥಿತಿಯ ನ್ನು ನಿಯಂತ್ರಿಸುವ ಪರಮಾತ್ಮ ಸ್ವರೂಪ, ಸ್ವಪ್ನದಲ್ಲಿ ಜಾಗೃತಾವಸ್ಥೆಯಲ್ಲಿ ಮತ್ತು ಸುಷುಪ್ತಿಯಲ್ಲಿ ಜೀವಿಯನ್ನು ಕ್ರಿಯಾಶೀಲ ಗೊಳಿಸುವ ಪರಮಾತ್ಮ ಸ್ವರೂಪಗಳಲ್ಲ ಎಂದು ಅರ್ಥ ಹೇಳುತ್ತಾರೆ. ಅದೃಷ್ಟಂ ಅವ್ಯವಹಾರ್ಯಂ ಅಗ್ರಾಹ್ಯಂ ಇತ್ಯಾದಿ ಪದಗಳಿಗೆ ಅದು ಅಜ್ಞಾನಿಗಳಗೆ ಕಾಣದು, ವ್ಯವಹರಿಸಲು ಸಿಗದು, ಗ್ರಹಿಸಲು ಸಾಧ್ಯವಾಗದ್ದು ಎಂಬುದು ದ್ವೈತಪರ ಅರ್ಥ. ಹೀಗೆ ಸ್ಪಷ್ಟವಾಗಿ ಹೇಳದಿದ್ದರೂ ಅದ್ವೈತ ಪರರು ಹೇಳುವ ಅರ್ಥವೂ ಇಲ್ಲಿಗೇ ಮುಟ್ಟುತ್ತದೆ. ಅದ್ವೈತಂ ಎಂಬುದಕ್ಕೆ ಆತ್ಮ ಪರಮಾತ್ಮ ಅಭೇದ ಎಂಬುಸು ಅದ್ವೈತಪರ ಅರ್ಥವಾದರೆ ದ್ವೈತಪರ ವ್ಯಾಖ್ಯಾನದಲ್ಲಿ ಅದೊಂದೇ. ಅದಕ್ಕೆ ಸಮನಾದುದು ಬೇರೊಂದಿಲ್ಲ ಎಂದು ಅರ್ಥ ಹೇಳುತ್ತಾರೆ.

      ಇಲ್ಲಿಂದ ಮುಂದೆ ಒಂಬತ್ತು ಶ್ಲೋಕಗಳು ಅದ್ವೈತ ಪರಂಪರೆಯ ಪ್ರಕಾರ ಗೌಡ ಪಾದರ ಮಾಂಡೂಕ್ಯ ಕಾರಿಕಾದ ಶ್ಲೋಕಗಳು. ಮಾಧ್ವ ಪರಂಪರೆಯಲ್ಲಿ ಇವುಗಳನ್ನು ಉಪನಿಷತ್ತಿನ ಮುಖ್ಯ ಧಾರೆಗೆ ಸೇರದ ಆದರೆ ಉಪನಿಷತ್ತಿನ ಭಾಗವೇ ಅಗಿರುವ ʼಏತೇ ಶ್ಲೋಕʼಗಳು ಎಂಬಂತೆ ಪರಿಗಣಿಸುತ್ತಾರೆ. 

ಅದ್ವೈತ ಪರಂಪರೆಯಲ್ಲಿ ಈ ಶ್ಲೋಕಗಳ ಅರ್ಥ ಈ ರೀತಿ ಇದೆ: ʼಬದಲಾಗದ ಎಲ್ಲದಕ್ಕಿಂತ ಶ್ರೇಷ್ಠವಾದ ಆ ಸ್ಥಾನದಲ್ಲಿ ಎಲ್ಲ ದುಃಖಗಳೂ ನಿವೃತ್ತವಾವಾಗುವುವು. ಇದು ಎಲ್ಲ ಇರುವಿಕೆಗಳಲ್ಲಿ ಶ್ರೇಷ್ಠವಾದುದಾಗಿದ್ದು ಇದಕ್ಕೆ ಎರಡನೆಯದು ಎಂಬಂತಹದು ಯಾವುದೂ ಇಲ್ಲ ಮತ್ತು ಇದಕ್ಕೆ ಸರ್ವವ್ಯಾಪಿಯಾದ ಸದಾ ಬೆಳಗುವ ತುರೀಯ ಸ್ಥಿತಿ ಎಂದು ಹೇಳುತ್ತಾರೆ.

ವಿಶ್ವ ಮತ್ತು ತೈಜಸ ಎಂಬ ರೂಪಗಳೆರಡೂ ಕಾರ್ಯ ಕಾರಣಗಳಿಂದ ಬದ್ಧವಾದುವುಗಳು. ಪ್ರಾಜ್ಞ ಎಂಬ ರೂಪವು ಕಾರ್ಯದಿಂದ ಬಾಧಿತವಲ್ಲ ಆದರೆ ಕಾರಣದಿಂದ ಬಾಧಿತ. ತುರೀಯವಾದರೋ ಈ ಎರಡರಿಂದಲೂ ಸ್ವತಂತ್ರ.

ಸುಷುಪ್ತಸ್ಥಾನದ ಸ್ವರೂಪನಾದ ಪ್ರಾಜ್ಞನು ಸತ್ಯ ಅಥವ ಅಸತ್ಯ ಅಥವ ಆತ್ಮ ಅಥವ ಆತ್ಮನಲ್ಲದ ಇತರ ಎಂಬ ಯಾವ ತಿಳಿವೂ ಇಲ್ಲದವನು. ಆದರೆ ತುರೀಯವೆಂಬುದು ಎಲ್ಲವನ್ನೂ ತಿಳಿದ ಎಲ್ಲವನ್ನೂ ಸ್ಪಷ್ಟವಾಗಿ ನೋಡಬಲ್ಲ ಆ ಸ್ಥಿತಿ. 

ಪ್ರಾಜ್ಞ ಮತ್ತು ತುರೀಯ ಈ ಎರಡು ಸ್ಥಿತಿಗಳಲ್ಲಿ ದ್ವಂದ್ವಗಳ ಅಸ್ತಿತ್ವವನ್ನು ಗುರುತಿಸುವುದು ಸಮಾನ ಗುಣ. ಗಾಢ ನಿದ್ರಾವಸ್ಥಿತನು ಕಾರಣರೂಪಿಯಾಗಿರುವನು. ತುರೀಯನು ನಿದ್ರೆ ಅಥವ ಕಾರಣಗಳಿಂದ ಅಬಾಧಿತನು.

ಾದವೈತ ಸಂಪ್ರದಾಯದಲ್ಲಿ ಈ ಶ್ಲೋಕಗಳ ಅರ್ಥ ಹೀಗಿಗೆ: ವಿಶ್ವ ಮತ್ತು ತೈಜಸ ಎಂಬ ಮೊದಲಿನೆರಡು ಸ್ರೂಪಗಳು ಸ್ವಪ್ನ ಮತ್ತು ನಿದ್ರೆಗಳ ಜೊತೆ ಸಂಬಂಧ ಇರುವುವು; ಪ್ರಾಜ್ಞನಾದರೋ ಸ್ವಪ್ನವಿರದ ನಿದ್ರಾ ಸ್ಥಿತಿ; ತುರೀಯದಲ್ಲಿ ಸ್ವಪ್ನವನ್ನಾಗಲೀ, ನಿದ್ರೆಯನ್ನಾಗಲೀ ನಿಶ್ಚಯವಾಗಿ ನೋಡುವುದಿಲ್ಲ.

ಸ್ವಪ್ನವೆಂಬುದು ಸತ್ಯದ ತಪ್ಪು ಗ್ರಹಿಕೆ; ನಿದ್ರೆಯೆಂಬುದು ಸತ್ಯವನ್ನು ಗ್ರಹಿಸಲಾಗದಿರುವ ಸ್ಥಿತಿ. ಈ ಎರಡು ಸ್ಥಿತಿಗಳಲ್ಲಿ ಉಂಟಾಗುವ ವಿಪರ್ಯಾಸ ಜ್ಞಾನ ಕಳೆದರೆ ತುರೀಯ ಸ್ಥಿತಿ ಉಂಟಾಗುವುದು.

ಆದಿರಹಿತವಾದ ಮಾಯೆಯ ಪ್ರಭಾವಕ್ಕೊಳಗಾಗಿ ನಿದ್ರಾವಸ್ಥೆಯಲ್ಲಿರುವ ಜೀವಾತ್ಮನು ಎಚ್ಚರಗೊಂಡಾಗ ತಾನು ಜನ್ಮರಹಿತ, ಸ್ವಪ್ನ ಗಾಢನಿದ್ರೆಗಳಿಗೆ ಹೊರತಾದ, ಯಾವುದೇ ದ್ವಂದ್ವವಿಲ್ಲದ ಆತ್ಮನೆಂದು ತಿಳಿಯುತ್ತಾನೆ,

ಈ ಬಹುರೂಪಗಳು ನಿಜವಾಗಿಯೂ ಇರುತ್ತಿದ್ದರೆ ಒಂದಲ್ಲ ಒಂದು ಕಾಲದಲ್ಲಿ ಅವು ನಿಸ್ಸಂಶಯವಾಗಿ ಇಲ್ಲವಾಗುತ್ತಿದ್ದವು. ಈ ಬಹುರೂಪಗಳೆಲ್ಲ ಕೇವಲ ಭ್ರಾಮಕವಾದುವು; ಶ್ರೇಷ್ಠವಾದ ಸತ್ಯವೆಂದರೆ ಅದ್ವೈತವೊಂದೇ.

ಯಾರೋ ಒಬ್ಬರಿಂದ ಇವೆಲ್ಲವೂ ಕಲ್ಪಿತವಾದುವುಗಳಾದರೆ ಈ ವೈವಿಧ್ಯವು ಕಾಣೆಯಾಗ ಬೇಕಾದುದು ಸಹಜ. ತಿಳಿದವರ ಉಪದೇಶದಿಂದ ಈ ವಾದದ ಸತ್ಯವನ್ನು ಗ್ರಹಿಸಿದಾಗ ಎಲ್ಲಿಯೂ ಎರಡಿಲ್ಲದಿರುವುದು ಗೊತ್ತಾಗುತ್ತದೆ.

ಈ ಶ್ಲೋಕಗಳೊಂದಿಗೆ ಗೌಡಪಾದ ಕಾರಿಕೆಗಳ ಪ್ರಥಮ ಕಂತು ಮುಕ್ತಾಯವಾಗುತ್ತದೆ. ಉಪನಿಷತ್ತಿನ ಮುಂದಿನ ಮಂತ್ರ ಮತ್ತದರ ವಿವರಣೆಗೆ ಪ್ರವೃತ್ತಿಸಲಾಗುತ್ತದೆ.

ದ್ವೈತ ಪರಂಪರೆಯಲ್ಲಿ ಇವುಗಳ ಅರ್ಥವನ್ನು ಹೀಗೆ ಹೇಳುತ್ತಾರೆ: ಜೀವಿಯ ದುಃಖಗಳೆಲ್ಲ ನಾಶವಾಗಲು ಆ ಬದಲಾಗದ ಸರ್ವಶ್ರೇಷ್ಠನ ದರ್ಶನವಾಗುವುದು.ಅವನಂತೆ ಇನ್ನೊಬ್ಬನಿಲ್ಲದವನು ಅವ, ಸರ್ವ ವ್ಯಾಪ್ತ ಸ್ವಾಮಿ ಅವ. ಅವಗೆ ತುರೀಯ ವೆಂಬುದು ಹೆಸರು.

ಜೀವಾತ್ಮರ ಅಜ್ಞಾನ ಕಾರ್ಯಗಳಿಗೆ ಎರಡು ವಿಧವಾದ ಬಂಧನಗಳಿವೆ - ಒಂದು ಕಾರ್ಯಬಂಧನ ಮತ್ತು ಇನ್ನೊಂದು ಕಾರಣ ಬಂಧನ.  ವಿಶ್ವ ಮತ್ತು ತೈಜಸರು ಈ ಎರಡು ಬಂಧನಗಳ ನಿಯಾಮಕರು. “ತುರೀಯವೆಂಬುದು ಮಾತ್ರ ಭ್ರಮೆ ಮತ್ತು ಅದಕ್ಕೆ ಕಾರಣವಾದ ಅವಿದ್ಯೆ ಇವೆರಡರ ಬಂಧನಕ್ಕಾಗಲೀ, ಕೇವಲ ಅವಿದ್ಯೆಯ ಬಂಧನಕ್ಕಾಗಲೀ ನಿಯಾಮಕನಲ್ಲ”(ರಾಘವೇಂದ್ರ ತೀರ್ಥರು).

ಪ್ರಾಜ್ಞನು ಜೀವಾತ್ಮನ ಅಥವ ಅದಕ್ಕಿಂತ ಬೇರೆಯಾದ ಪ್ರಕೃತಿಯ, ಅಥವ ಇರುವಿಕೆಯ ಅಥವ ಇಲ್ಲದಿರುವಿಕೆಯ ಜ್ಞಾನವನ್ನು ಕಡುವುದಿಲ್ಲ; ತುರೀಯ ಮಾತ್ರ ಸದಾ ಬೆಳಗುವವನಾಗಿದ್ದು ಈ ರೀತಿಯ ಜ್ಞಾನಕ್ಕೆ ಕಾರಣನಾಗುತ್ತಾನೆ.

ಸೇಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ಭೇದವನ್ನು ಗ್ರಹಿಸದಿರುವಿಕೆ ಪ್ರಾಜ್ಞ ತುರೀಯ ಎರಡೂ ಸ್ಥಿತಿಗಳಲ್ಲೂ ಸಾಮಾನ್ಯ; ಆದರೆ ಗಾಢ ನಿದ್ರೆಯನ್ನು ಪ್ರಾಜ್ಞನು ನೀಡುತ್ತಿದ್ದು ತುರೀಯದಲ್ಲಿ ಈ ಸ್ಥಿತಿಗೆ ಅವಕಾಶವಿರುವುದಿಲ್ಲ.

ಅನಾದಿಯಾದ ಮಾಯೆಯ ವಶವರ್ತಿಯಾಗಿ ನಿದ್ರಿಸುತ್ತಿರುವ ಜೀವನಿಗೆ ಜ್ಞಾನೋದಯವಾದಾಗ ಆಗ ಅವನಿಗೆ ಆ ಪರಮನ ತಿಳಿವು ಉಂಟಾಗುತ್ತದೆ; ಆ ಪರಮನು ಹುಟ್ಟಿರದವ, ಸರ್ವ ಶ್ರೇಷ್ಠ, ಅವನಂತೆ ಇನ್ನೊಬ್ಬನಿಲ್ಲದವ, ತನ್ನನ್ನೂ ಸ್ಫೂರ್ತಗೊಳಿಸುವವ, ಎಂದಗೂ ಸ್ವಪ್ನಾದಿಗಳಲ್ಲಿ ತೊಡಗದವ.

ನಾನು ನನ್ನದೆಂದು ಇರುವ ಭಾವವು ಪರಮನ ಸಾಕ್ಷಾತ್ಕಾರದಿಂದ ನಿಸ್ಸಂಶಯವಾಗಿ ನಾಶವಾಗುವುದು. ನಾನು ನನ್ನದು ಸುಖ-ದುಃಖ ಇತ್ಯಾದಿ ದ್ವಂದ್ವಗಳು ಮಾಯಾಮಾತ್ರಗಳು ಅಥವ ಭ್ರಾಮಕವಾದುವು. ಪರಮಾರ್ಥವು ಈ ತರಹದ ದ್ವಂದ್ವಗಳಿಲ್ಲದ್ದು ಅಥವ ಅದ್ವೈತ.

ಅನುಚಿತ ಜ್ಞಾನವೇನಾದರೂ ಇದ್ದರೆ ಅದು ಯಾರ ಕಲ್ಪನೆಯೇ ಆಗಿರಲಿ ಅದು ಕಾಣೆಯಾಗ ಬೇಕಾದುದು ಸಹಜ. ತಿಳಿದವರ ಉಪದೇಶದಿಂದ ಇದು ಸಾಧ್ಯ ಮತ್ತು ಉಪದೇಶಾದಿಗಳಿಂದ ಸತ್ಯವನ್ನು ಗ್ರಹಿಸಿದಾಗ ಎಲ್ಲಿಯೂ ದ್ವಂದ್ವಗಳಿಲ್ಲದಿರುವುದು ಗೊತ್ತಾಗುತ್ತದೆ.

ಹೀಗೆ ಮಧ್ವ ಭಾಷ್ಯದಲ್ಲಿ ಉಪನಿಷತ್ತಿನ ಎರಡನೆಯ ಅಧ್ಯಾಯವು ಮುಕ್ತಾಯವಾಗುತ್ತದೆ. 

ತುರೀಯ ಸ್ಥಿತಿಗೆ ಸಂಬಂಧಿಸಿದ ಮಂತ್ರ ಮತ್ತು ಅದರ ವಿವರಣಾರೂಪವಾದ ʼಏತೇಶ್ಲೋಕಾಃʼ ಇವಿಷ್ಟು ಮುಂದಿನ ಅಧ್ಯಾಯದ ಅಂದರ ಮೂರನೆಯ ಅಧ್ಯಾಯದ ವಸ್ತು. ʼಏತೇ ಶ್ಲೋಕಾಃʼ ಮುಗಿದ ತತ್ಕ್ಷಣ ಅಧ್ಯಾಯವೂ ಮುಗಿದಿರುವುದನ್ನು ಗಮನಿಸಬೇಕು. ಉಪನಿಷತ್ತಿನ ಮುಖ್ಯ ಧಾರೆಯ ಮಂತ್ರವು ಮೊದಲು ಬರುತ್ತದೆ. ಅನಂತರ ವಿವರಣಾರೂಪವಾದ ʼಏತೇ ಶ್ಲೋಕಾಃʼ ಬರುತ್ತವೆ. 

ಮುಖ್ಯಧಾರೆಯ ಮುಂದಿನ ಮಂತ್ರಕ್ಕೆ ಪ್ರವರ್ತಿಸಬೇಕಾಗಿದೆ. ಈಗ ಉಪಧಾರೆಯ ʼಏತೇ ಶ್ಲೋಕಾಃʼದ ಒಂದು ಭಾಗ ಮುಕ್ತಾಯವಾದುದನ್ನು ತಿಳಿಸಲು ಎರಡನೆಯ ಅಧ್ಯಾಯದ ಮುಕ್ತಾಯ ಅನಿವಾರ್ಯ. ಹಾಗೆ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯುತ್ತದೆ. ಮಧ್ವ ಭಾಷ್ಯದ ಪ್ರಕಾರ ಮುಂದಿನ ಮಂತ್ರದಿಂದ ಮುಂದಿನ ಅಧ್ಯಾಯದ ಪ್ರಾರಂಭವಾಗುತ್ತದೆ.

ಮುಂದಿನ ಮಂತ್ರವು ಹೀಗಿದೆ:

ಸೋಯಮತ್ಮಾ ಅಧ್ಯಕ್ಷರಂ ಓಂಕಾರೋಧಿಮಾತ್ರಂ

ಪಾದಾ ಮಾತ್ರಾ ಮಾತ್ರಾಶ್ಚ ಪಾದಾ

ಅಕಾರ ಉಕಾರ ಮಕಾರ ಇತಿ


ಜಾಗರಿತಸ್ಥಾನೋ ವೈಶ್ವಾನರೋಕಾರಃ

ಪ್ರಥಮಾ ಮಾತ್ರಾಪ್ತೇರಾದಿಮತ್ವಾದ್ವಾಪ್ನೋತಿ

ಹವೈ ಸರ್ವಾನ್‌ ಕಾಮಾನಾದಿಶ್ಚ

ಭವತಿ ಯಯೇವಂ ವೇದ

 

ಅದ್ವೈತ ರೀತ್ಯಾ ಇವುಗಳನ್ನು ಹೀಗೆ ಅರ್ಥೈಸುತ್ತಾರೆ: ಆ ಆತ್ಮನೇ ಓಂಕಾರದಿಂದ ಪ್ರತಿನಿಧಿಸಲ್ಪಡುತ್ತದೆ. ಓಂಕಾರವು ನಾಲ್ಕು ಭಾಗಗಳಿಂದಾಗಿದೆ. ಪ್ರತಿಯೊಂದು ಅಕ್ಷರವೂ ಕಾಲು ಭಾಗ (ಒಂದು ಪಾದ) ಮತ್ತು ಪ್ರತಿಯೊಂದು ಕಾಲು ಭಾಗವೂ (ಪಾದವೂ) ಒಂದಕ್ಷರ. ಅ ಉ ಮ (ಮತ್ತು ಮುಂದಿನ ಮೌನ) ಇವೇ ನಾಲ್ಕು ಭಾಗಗಳು.

ಜಾಗರಿತ ಸ್ಥಾನಿಯಾದ ವೈಶ್ವಾನರನು ಅಕಾರ. ಅದು ಪ್ರಥಮ ಭಾಗ. ಜಾಗರಿತ ಅವಸ್ಥೆಯು ಸರ್ವ ವ್ಯಾಪ್ತ ಮತ್ತು ಪ್ರಥಮವಾಗಿ ಕಾಣುವಂತಹುದು. [ಅಕಾರವೂ ಹಾಗೆ ಪ್ರಥಮಧ್ವನಿ ಮತ್ತು ಎಲ್ಲ ಕಡೆ ಇರುವಂತಹುದು]. ಇದನ್ನು ತಿಳಿದವನು ತನ್ನೆಲ್ಲ ಆಸೆಗಳನ್ನು ಪೂರೈಸಿಕೊಂಡು ಎಲ್ಲದರಲ್ಲೂ ಮೊದಲಿಗನಾಗುತ್ತನೆ.


ಮಾಧ್ವ ಪರಂಪರೆಯ ಪ್ರಕಾರ ಇದರ ಅರ್ಥ ಸ್ವಲ್ಪ ಭಿನ್ನವಾಗಿದೆ: ಈ ಬ್ರಹ್ಮನೇ (ಶ್ರೀ ವಿಷ್ಣುವೇ)  ಓಂಕಾರದಿಂದ ಪ್ರತಿನಿಧಿಸಲ್ಪಡುತ್ತಾನೆ. ಅದು ಮಹಾ ಅಕ್ಷರ (ಅಂದರೆ ಎಲ್ಲಕ್ಕಿಂತ ಹೆಚ್ಚು) ಮತ್ತು ನಾಲ್ಕು ಭಾಗಗಳಿಂದ ಆಗಿದೆ. ಮೊದಲನೆಯದಾದ ಅಕಾರವು ವೈಶ್ವಾನರಸ್ವರೂಪಿ. ಇದು ಮೊದಲನೆಯ ಮಾತ್ರೆ ಮತ್ತು ಮೊದಲನೆಯ ಕಾಲು ಭಾಗ. ಈ ಸ್ವರೂಪದಲ್ಲಿ ವಿಷ್ಣುವು [ಜೀವನ] ಎಲ್ಲ ಆಸೆಗಳನ್ನೂ ಪೂರೈಸುತ್ತಾನೆ. ಹೀಗೆಂದು ತಿಳಿಯ ಬೇಕು.


ಇದರ ಮುಂದಿ ಮಂತ್ರವು ಹೀಗಿದೆ:

ಸ್ವಪ್ನಸ್ಥಾನಸ್ತೈಜಸ

ಉಕಾರೋ ದ್ವಿತೀಯಾ ಮಾತ್ತ್ರೋತ್ಕರ್ಷಾದುಭಯತ್ವಾದ್ವೋತ್ಕರ್ಷತಿ ಹ ವೈ

ಜ್ಞಾನಸಂತತಿಂ ಸಮಾನಶ್ಚ ಭವತಿ

ನಾಸ್ಯಬ್ರಹ್ಮವಿದ್‌ ಕುಲೇ ಭವತಿ ಯ ಏವಂ ವೇದ


ಅದ್ವೈತ ವ್ಯಾಖ್ಯಾನಕಾರರು ಸ್ವಪ್ನಾವಸ್ಥೆಯ ತೈಜಸನು ಎರಡನೆಯ ಮಾತ್ರೆಯಾದ ಉಕಾರದಿಂದ ಪ್ರತಿನಿಧಿಸಲ್ಪಡುತ್ತಾನೆ ಎಂದು ವಿವರಿಸುತ್ತಾರೆ. ಶ್ರೇಷ್ಠತೆಯ ದೃಷ್ಟಿಯಿಂದ ಅಥವ ಅಕಾರ ಮಕಾರಗಳ ಮಧ್ಯಸ್ಥ ಅಕ್ಷರವಾಗಿರುವುದರಿಂದ ಜಾಗೃತ ಮತ್ತು ಗಾಢ ನಿದ್ರಾವಸ್ಥೆಯ ನಡುವೆ ಇರುವ ಸ್ವಪ್ನಾವಸ್ಥೆಯನ್ನು ಇದು ಪ್ರತಿನಿಧಿಸುವುದು ಸಹಜವಾಗಿದೆ. ಇದನ್ನು ತಿಳಿದವನು ಉತ್ತಮ ಜ್ಞಾನವನ್ನು ಪಡೆಯುತ್ತಾನೆ, ಎಲ್ಲರಿಂದಲೂ ಸಮಾನ ಗೌರವವನ್ನು ಪಡೆಯುತ್ತಾನೆ. ಅವನ ವಂಶಸ್ಥರಲ್ಲಾರೂ ಬ್ರಹ್ಮ ಜ್ಞಾನಿಯಲ್ಲದವನು ಇರುವುದಿಲ್ಲ. 

ಮಾಧ್ವ ವ್ಯಾಖ್ಯಾನಕಾರರ ಪ್ರಕಾರ ಸ್ವಪ್ನಸ್ಥಾನ ನಿಯಾಮಕನಾದ ತೈಜಸನನ್ನು ಉಕಾರವು ಪ್ರತಿನಿಧಿಸುತ್ತದೆ. ಶ್ರೇಷ್ಠತೆಯಿಂದಾಗಿ ಅಥವ [ತೈಜಸನಿಂದಾಗಿ ಜೀವನು] ಜ್ಞಾನ ವನ್ನು ಹೊಂದುವುದು ಮತ್ತು ಎಲ್ಲೆಡೆ ಸಮಾನ ಗೌರವ ಪಡೆಯುವುದು ಈ ಎರಡೂ ಇರುವುದರಿಂದಾಗಿ ತೈಜಸ ಮತ್ತು ಉಕಾರಗಳ ಅನನ್ಯತೆಯು ಸ್ವಾಭಾವಿಕ. ಅಂತಹವನ ವಂಶದಲ್ಲಿ ಬ್ರಹ್ಮಜ್ಞಾನವಿಲ್ಲದವನಾರೂ ಹುಟ್ಟುವುದಿಲ್ಲ, ಹೀಗೆಂದು ತಿಳಿಯ ಬೇಕು.


        ಸುಷುಪ್ತಸ್ಥಾನಃ ಮಕಾರಸ್ತೃತೀಯಾ ಮಾತ್ರಾ

ಮಿತೇರಪೀತೇರ್ವಾ ಮಿನೋತಿ ಹ ವಾ

ಇದಂ ಸರ್ವಮಪೀತಿಶ್ಚ ಭವತಿ

ಯ ಏವಂ ವೇದ


ಅದ್ವೈತ ಪರಂಪರೆಯಲ್ಲಿ ಈ ಮಂತ್ರಕ್ಕೆ ಹೀಗೆ ಅರ್ಥ ಹೇಳುತ್ತಾರೆ: ಸುಷುಪ್ತಾವಸ್ಥೆಯ ಪ್ರಾಜ್ಞನನ್ನು ಮಕಾರ ಪ್ರತಿನಿಧಿಸುತ್ತದೆ. ಅ ಉ ಮ ಗಳಲ್ಲಿ ಮಕಾರವು ಮೂರನೆಯ ಮಾತ್ರೆ ಮತ್ತು ಅದು ಕೊನೆಯದು ; ಜಾಗರಿತ ಸ್ವಪ್ನ ಮತ್ತು ಸುಷುಪ್ತಿಗಳಲ್ಲಿ ಸುಷುಪ್ತಿ ಕೊನೆಯದು. ಅಲ್ಲದೆ ಮಕಾರವು ಅದರ ಮುಂದಿನ ಮೌನದೊಂದಿಗೆ ಸೇರಿಕೊಂಡಿರುತ್ತದೆ, ಹಾಗೆಯೇ ಸುಷುಪ್ತಿಯು ಅದರ ಮುಂದಿನ ತುರೀಯ ಸ್ಥತಿಗೆ ದಾರಿಮಾಡಿ ಕೊಡುತ್ತದೆ. ಮಕಾರ ಮತ್ತು ಗಾಢ ನಿದ್ರಾ ಸ್ಥತಿಯ ಈ ಅನನ್ಯತೆಯನ್ನು ಅರಿತವನು ಈ ಎಲ್ಲವನ್ನೂ ಮತ್ತು ಪ್ರಪಂಚಕ್ಕೆ ತಾನು ಕಾರಣನೆಂಬುದನ್ನೂ ತಿಳಿಯುತ್ತಾನೆ. ಹೀಗೆಂದು ತಿಳಿಯಬೇಕು.

ದ್ವೈತ ಪರಂಪರಯಲ್ಲಿ: “ಪ್ರಾಜ್ಞನು ಮಕಾರ ವಾಚ್ಯನಾಗಲು ಉಪನಿಷತ್ತು ಹೇಳಿದ ನಿಮಿತ್ತಗಳಲ್ಲಿ ಒಂದು ಮಿತಿ. ಅಂದರೆ ಜೀವನನ್ನು ಆಲಂಗಿಸಿ ತನ್ನೊಳಗೆ ಸೇರಿಸಿಕೊಳ್ಳುವುದು.. ಪ್ರಾಜ್ಞನು ಅಜ್ಞಾನಾವೃತನಾದ ಜೀವನನ್ನು ತ್ನನ್ನೊಳಗೆ ಸೇರಿಸಿಕೊಳ್ಳುನು. ಅಲ್ಲದೆ ಜೀವನ ಬಾಹ್ಯ ಪದಾರ್ಥ ಜ್ಞಾನವನ್ನು ಲಯಗೊಳಿಸುವನು.. ಬಾಹ್ಯ ಜ್ಞಾನವನ್ನು ನಾಶಪಡಿಸುವುದರಿಂದ ಅಪೀತಿ ಎಂದು ಕರೆಯಲ್ಪಟ್ಟಿರುವನು”(ರಾಘವೇಂದ್ರ ತೀರ್ಥರು).

ಈ ಮಂತ್ರದ ನಂತರ ಐದು ಶ್ಲೋಕಗಳು ಬರುತ್ತವೆ. ಇವುಗಳನ್ನು ಅದ್ವೈತ ಪರಂಪರೆಯಲ್ಲಿ ಈ ಹಿಂದಿನಂತೆ ಗೌಡಪಾದ ಕಾರಿಕೆಗಳೆಂದೂ ದ್ವೈತ ಪರಂಪರೆಯಲ್ಲಿ ಉಪನಿಷತ್ತಿನ ಮುಖ್ಯ ಧಾರೆಗೆ ಸೇರದ ʼಏತೇ ಶ್ಲೋಕಾಃʼ ಎಂದೂ ಕರೆದಿದ್ದಾರೆ.

ಅದ್ವೈತ ಪರಂಪರೆಯಲ್ಲಿ ಈ ಶ್ಲೋಕಗಳ ಅರ್ಥ ಹೀಗಿದೆ: “ ವಿಶ್ವನನ್ನು ಅಕಾರದೊಂದಿಗೆ ಸಮೀಕರಿಸುವಾಗ ಎರಡೂ ಮೊದಲಿಗರಾಗಿರುವುದು ಮತ್ತು ಎರಡೂ ವ್ಯಾಪ್ತವಾಗಿರುವುದು ಈ ಸಮಾನ ಗುಣಗಳನ್ನು ಪರಿಗಣಿಸಿದೆ.

ತೈಜಸನನ್ನು ಉಕಾರದೊಂದಿಗೆ ಸಮೀಕರಿಸಿದಾಗ ಎರಡೂ ಮಧ್ಯಸ್ಥವಾಗಿರುವುದು ಮತ್ತು ಎರಡೂ ಶ್ರೇಷ್ಠವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಪ್ರಾಜ್ಞ ಮತ್ತು ಮಕಾರಗಳ ಸಮೀಕರಣವು ಅವೆರಡೂ ಮಾನಕಗಳಾಗಿರುವುದು ಮತ್ತು ಎರಡೂ ಕೊನೆಯವಾಗಿರುವುದು (ಲಯ) ಇವುಗಳಿಂದ ಸ್ಪಷ್ಟ.

ಮೂರು ಅವಸ್ಥೆಗಳಲ್ಲಿ (ಅಕಾರ, ಉಕಾರ, ಮಕಾರಗಳಿಗೆ) ಇರುವ ಸಮಾನ ಗುಣಗಳನ್ನು ನಿಶ್ಚಿತವಾಗಿ ತಿಳಿದವನು ಸರ್ವ ಪ್ರಾಣಿಗಳಿಗೆ ಪೂಜ್ಯನೂ ಸರ್ವರಿಂದ ಪೂಜಿಸಲ್ಪಡುವ ಮಹಾಮುನಿಯೂ ಆಗುತ್ತಾನೆ.

ಅಕಾರವು ವಿಶ್ವನನ್ನು, ಉಕಾರವು ತೈಜಸನನ್ನು ಮತ್ತು ಮಕಾರವು ಪ್ರಾಜ್ಞನನ್ನು (ಮನಸ್ಸಿಗೆ) ತರುತ್ತವೆ, ಯಾವುದೇ ಮಾತ್ರೆಯ ಸರಿಯುಚ್ಚಾರವಿಲ್ಲದಿರೆ ಯಾವ ಸಾಧನೆಯೂ ಆಗುವುದಿಲ್ಲ.”

ದ್ವೈತ ಪರಂಪರೆಯಲ್ಲಿಇವುಗಳನ್ನು ಹೀಗೆ ಅರ್ಥೈಸುತ್ತಾರೆ: ವಿಶ್ವನನ್ನು ಅಕಾರದೊಟ್ಟಿಗೆ ಧ್ಯಾನಿಸಿದಾಗ ಅಕಾರದಂತೆ ವಿಶ್ವನ ಶ್ರೇಷ್ಠತೆ ಪ್ರಕಟವಾಗುತ್ತದೆ. ಮಾತ್ರೆಯ(ಅಕ್ಷರದ) ಸಂಸರ್ಗದಿಂದ ವಿಶ್ವನ ವ್ಯಾಪ್ತತ್ವವು ಅನುಭವಕ್ಕೆ ಬರುತ್ತದೆ. ಅಂದರೆ ವಿಶ್ವನಂತೆ ತನಗೂ ಎಲ್ಲ ವಸ್ತುಗಳ ಪ್ರಾಪ್ತಿಯಾಗುತ್ತದೆ.

ಪ್ರಣವದ ಎರಡನೆಯ ಅಕ್ಷರವಾದ ಉಕಾರವು ಪರಮಾತ್ಮನ ತೈಜಸರೂಪವನ್ನು ಪ್ರತಿಪಾದಿಸುತ್ತಿದೆ ಎಂದು ಧ್ಯಾನಿಸಿದಾಗ ಉತ್ಕೃಷ್ಟವಾದ ಜ್ಞಾನವು ಲಭ್ಯವಾಗುತ್ತದೆ. ಈ ಎರಡನೆಯ ಅಕ್ಷರ ಧ್ಯಾನದಿಂದ ಬಾಹ್ಯೇಂದ್ರಿಯಗಳ ವಿಶ್ರಾಂತಿ ರೂಪವಾದ ನಿದ್ರೆ ಮತ್ತು ʼಸ್ವರೂಪೇಂದ್ರಿಯದಿಂದ ವಿಷಯಾನುಭವʼ ಎರಡನ್ನೂ ಹೊಂದುವನು.

ಓಂಕಾರದ ಮೂರನೆಯ ಮಾತ್ರೆಯಾದ ಮಕಾರವು ಪ್ರಾಜ್ಞನನ್ನು ಪ್ರತಿನಿಧಿಸುತ್ತದೆ. ಮಕಾರವು ಕೊನೆಯ ಅಕ್ಷರ. ಹಾಗೆಯೇ ವಿಶ್ವ, ತೈಜಸ  ಮತ್ತು ಪ್ರಾಜ್ಞ - ಇವರಲ್ಲಿ ಪ್ರಾಜ್ಞನು ಕೊನೆಯವನು. ಹೀಗೆ ಇವರಿಬ್ಬರ ಅನನ್ಯತೆಯು ಪೂರ್ಣ. ಹೀಗೆ ತಿಳಿದು ಈ ಅಕ್ಷರವನ್ನು ಕುರಿತು ಧ್ಯಾನಿಸಿದಾಗ ಸ್ವನಿಯಂತ್ರಣದ ಅನುಭವವು ಉಂಟಾಗುವುದು ತನ್ನ ಜ್ಞಾನದಲ್ಲಿ ಎಲ್ಲವನ್ನೂ ಒಳಗೊಳಿಸಿಕೊಳ್ಳುವ ಸಾಮರ್ಥ್ಯ ಉಂಟಾಗುವುದು.

ಓಂಕಾರದ ಮೂರು ಅಂಶಗಳು ಮತ್ತು ಸಂವಾದಿಯಾದ ಪರಮಾತ್ಮನ ಮೂರು ಸ್ವರೂಪಗಳ ನಡುವಣ ಹೋಲಿಕೆಗಳನ್ನೂ ಸಮಾನಾಂಶಗಳನ್ನು ತಿಳಿದುಕೊಂಡವನು ಎಲ್ಲ ಜೀವಿಗಳ ಗೌರವಕ್ಕೆ ಪಾತ್ರನು ಮತ್ತು ಮಹಾ ಋಷಿಗಳಿಂದ ವಂದ್ಯನೂ ಆಗುತ್ತಾನೆ.

ಅಕಾರ ಸ್ವರೂಪವು ಜಾಗೃತ ಲೋಕಕ್ಕೆ ರಹದಾರಿ; ಉಕಾರ ಸ್ವರೂಪವು (ಕತ್ತಲೆಯಲ್ಲಿ) ಬೆಳಕಿನ ಲೋಕಕ್ಕೆ ಕರೆದೊಯ್ಯುವುದು ಮತ್ತು ಮಕಾರಸ್ವರೂಪವು ಪ್ರಜ್ಞೆಯ ಮೊತ್ತಕ್ಕೆ ನಮ್ಮನ್ನು ಕರೆದೊಯ್ಯುವುದು. ಆದರೆ (ಓಂಕಾರದಲ್ಲಿ) ಅಕ್ಷರ ಪ್ರಾತಿನಿಧ್ಯವಿಲ್ಲದ ಸ್ವರೂಪವು ನಮ್ಮನ್ನು ಈ ಯಾವ ಗತಿಗೂ ತೆರೆಯುವುದಿಲ್ಲ. [ಅದು ತನ್ನಷ್ಟಕ್ಕೇ ಮಹಾಗತಿ].

ಮಧ್ವ ಭಾಷ್ಯದಲ್ಲಿ ಇಲ್ಲಿಗೆ ಮೂರನೆಯ ಅಧ್ಯಾಯವು ಮುಗಿಯುತ್ತದೆ. ಉಪನಿಷತ್ತಿನ ಮುಖ್ಯ ಧಾರೆಯ ಇನ್ನೊಂದು ಶ್ಲೋಕ ಮಾತ್ರ ಉಳಿದಿದ್ದು ಆ ಮಂತ್ರ ಮತ್ತು ಆರು ʼಏತೇ ಶ್ಲೋಕಾಃʼ ನಾಲ್ಕನೆಯ ಅಧ್ಯಾಯಕ್ಕೆ ಸೇರಿವೆ. ಇಲ್ಲಿ ಬರುವ ಉಪನಿಷತ್ತಿನ ಮುಖ್ಯ ಧಾರೆಯ ಮಂತ್ರವು ಹನ್ನೆರಡನೆಯ ಮಂತ್ರವಾಗಿದೆ.

ಈ ಹನ್ನೆರಡನೆಯ ಮಂತ್ರವು ಹೀಗಿದೆ:

ಅಮಾತ್ರಶ್ಚತುರ್ಥೋsವ್ಯವಹಾರ್ಯಃ ಪ್ರಪಂಚೋಪಶಮಃ

ಶಿವೋsದ್ವೈತ ಏವಮೋಂಕಾರ ಆತ್ಮೈವ

ಸಂವಿಶತ್ಯಾತ್ಮನಾತ್ಮಾನಂ

ಯ ಏವಂ ವೇದ 

ಈ ಮಂತ್ರದ ಅದ್ವೈತ ಪರ ಅರ್ಥ ಹೀಗಿದೆ: ಓಂಕಾರದ ನಾಲ್ಕನೆಯ ಭಾಗ ಒಂದಿದೆ. ಅದು ಅಮಾತ್ರ (ಅಕ್ಷರ ಸ್ವರೂಪ ವಿಲ್ಲದ್ದು). ವ್ಯವಾಹಾರಾತೀತವಾದುದು. ಎಲ್ಲ ತೋರಿಕೆ-ಗೊಂದಲಗಳಿಂದ ಮುಕ್ತವಾಗಿ ಶಾಂತವಾಗಿರುವುದು. ಮಂಗಳಕರವಾದದು. ಅದರಂತೆ ಇನ್ನೊಂದು ಇಲ್ಲದಿರುವುದು. ಈ ಓಂಕಾರವು ಆತ್ಮನೇ ಆಗಿರುವುದು. ಈ ಆತ್ಮನು ಶ್ರೇಷ್ಠವಾದ ಪರಮಾತ್ಮನಲ್ಲಿ ವಿಲೀನವಾಗುವುದು. ಹೀಗೆಂದು ತಿಳಿಯ ಬೇಕು.

ದ್ವೈತಪರ ವ್ಯಾಖ್ಯಾನಕಾರರು ಇದಕ್ಕೆ ಹೀಗೆ ಅರ್ಥ ಹೇಳುತ್ತಾರೆ: ಮಾತ್ರೆ ಇಲ್ಲದ ನಾಲ್ಕನೆಯ ಸ್ಥಿತಿಯು ವ್ಯವಹಾರಕ್ಕೆ ನಿಲುಕದು. ಮಂಗಳಕರವಾದುದು. ಅದರಂತೆ ಇನ್ನೊಂದಿಲ್ಲ. ಈ ಏಕಮೇವಾದ್ವಿತೀಯವಾದ ಓಂ ಅತಿ ಶ್ರೇಷ್ಠ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟು ಅವನ ಸಾಕ್ಷಾತ್ಕಾರ ಪಡೆದವನಿಗೆ ತಿಳಿಯಲು ಸಾಧ್ಯವಾಗುವುದು,  ಅಂದರೆ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟ ಆತ್ಮನು ಪರಮಾತ್ಮನನ್ನೆ ಹೊಂದುವನು. 

ಇಲ್ಲಿಂದ ಮುಂದೆ ಈ ಮಂತ್ರದ ಅರ್ಥವನ್ನು ಸ್ಪಷ್ಟಪಡಿಸುವ ಆರು ಶ್ಲೋಕಗಳಿವೆ. (ಇವುಗಳನ್ನು ಅದ್ವೈತಪರ ವ್ಯಾಖ್ಯಾನ ಗ್ರಂಥಗಳಲ್ಲಿ ಗೌಡಪಾದ ಕಾರಿಕೆಗಳೆಂದೂ ದ್ವೈತ ಪರ ಗ್ರಂಥಗಳಲ್ಲಿ ʼಏತೇ ಶ್ಲೋಕಾಃʼ ಎಂದೂ ಕರೆಯುವರು).

ಓಂಕಾರವನ್ನು ಅದರ ನಾಲ್ಕು ಭಾಗಗಳಲ್ಲಿ ತಿಳಿದುಕೊಳ್ಳಬೇಕು; ಪ್ರತಿ ಕಾಲು ಭಾಗವೂ ಒಂದು ಮಾತ್ರೆಯಾಗಿದೆ ಸಂಶಯ ಬೇಡ. ಓಂಕಾರವನ್ನು ಹೀಗೆ ಪಾದಶಃ ತಿಳಿದು ಬರೇನನ್ನೂ ಚಿಂತಿಸ ಬೇಕಾಗಿಲ್ಲ.

ಓಂಕಾರದ ಅನುರಣನದಿಂದ ಮನಸ್ಸು ನೆನೆಯಲಿ; ಓಂಕಾರವೇ ನಿರ್ಭಯ ಬ್ರಹ್ಮನಾಗಿದ್ದಾನೆ; ಓಂಕಾರವನ್ನು ಸದಾ ಅಳವಡಿಸಿಕೊಂಡವನು ಎಂದಿಗೂ ಯಾವ ಭಯವನ್ನೂ ಹೊಂದುವುದಿಲ್ಲ.

ಇಲ್ಲಿ ಪ್ರಕಟವಾಗಿರುವ ಬ್ರಹ್ಮನೂ ಓಂಕಾರವೇ; ಪ್ರಕಟಗೊಂಡಿರದ ಆ ಶ್ರೇಷ್ಠನೂ ಬ್ರಹ್ಮನೇ; ಕಾರಣವಿಲ್ಲದ ಕಾರ್ಯವಿಲ್ಲದ, ಹೊರಗಿಲ್ಲದ ಅವಿನಾಶಿ ಈ ಓಂಕಾರ.

ಎಲ್ಲದರ ಆದಿ ಮಧ್ಯ ಮತ್ತು ಅಂತಗಳೂ ಓಂಕಾರವೇ; ಹೀಗೆಂದು ಓಂಕಾರವನ್ನು ತಿಳಿದು ಸಾಧಕನು ತತ್ಕ್ಷಣ ಬ್ರಹ್ಮನನ್ನು ಹೊಂದುವನು.

ಎಲ್ಲರ ಹೃದಯದಲ್ಲಿ ನಿಂತಿರುವ ಈಶ್ವರನೇ ಓಂಕಾರನೆಂಬುದನ್ನು ತಿಳಿ; ಸರ್ವ ವ್ಯಾಪ್ತವಾದ ಓಂಕಾರವನ್ನು ತಿಳಿದು ಧೀರನಾದವನು ದುಃಖಕ್ಕೆ ಒಳಗಾಗುವುದಿಲ್ಲ.

ಸದ್ದಿಲ್ಲದ ಓಂಕಾರ ಮತ್ತು ಅನಂತ ಸದ್ದುಗಳ ದ್ವಂದ್ವಗಳಿಲ್ಲದ ಮತ್ತು ಮಂಗಳಕರವಾದ ಓಂಕಾರವನ್ನು ತಿಳಿದವನು ಮತ್ತು ಸಂತ; ಬೇರೆ ಯಾರೂ ಅಲ್ಲ.

ದ್ವೈತ ಪರಂಪರೆಯಲ್ಲಿ ಇದರ ಅರ್ಥ ಹೀಗಿದೆ:  ಜಾಗೃತ, ಸ್ವಪ್ನ, ಸುಷುಪ್ತ ಮತ್ತು ತುರೀಯ ಪ್ರತಿಯೊಂದೂ ಒಂದೊಂದು ಪಾದ ಮತ್ತು ಒಂದೊಂದು ಮಾತ್ರೆಯಾಗಿದ್ದು ಒಂದೊಂದು ಅವಸ್ಥೆಯನ್ನು ಪ್ರತಿನಿಧಿಸುತ್ತಿವೆ; ಪ್ರತಿಯೊಂದರಲ್ಲೂ ಓಂಕಾರವನ್ನು ತಿಳಿಯ ಬೇಕು. ಪ್ರತಿಯೊಂದು ಪಾದದಲ್ಲು ಓಂಕಾರವನ್ನು ತಿಳಿದು ಬೇರೇನನ್ನೂ ಚಿಂತಿಸ ಬೇಕಾಗಿಲ್ಲ.

ಓಂಕಾರವು ನಿರ್ಭಯನಾದ ಬ್ರಹ್ಮನೇ ಆಗಿದ್ದು ಓಂಕಾರದಲ್ಲಿ ಮನಸ್ಸನ್ನು ಕೇಂದ್ರೀಕರಿಸ ಬೇಕು.  ಓಂಕಾರದಲ್ಲಿ ಸದಾ ನೆಲಸುವವನಿಗೆ ಸ್ವಲ್ಪವೂ ಭಯ ಉಂಟಾಗುವುದಿಲ್ಲ.

ಓಂಕಾರವು ಎಲ್ಲದರ ಆದಿ ಮಧ್ಯ ಮತ್ತು ಅಂತ್ಯ; ಹೀಗೆ ಓಂಕಾರವನ್ನು ತಿಳಿದು ಶೀಘ್ರವಾಗಿ ಬ್ರಹ್ಮನನ್ನು ಹೊಂದುವನು,

ಎಲ್ಲರ ಹೃದಯದಲ್ಲಿರುವ ಈಶ್ವರನು ಓಂಕಾರವೇ ಎಂದು ತಿಳಿಯ ಬೇಕು, ಸರ್ವ ವ್ಯಾಪ್ತವಾದ ಇಂತಹ ಓಂಕಾರವನ್ನು ನೆನೆಯುತ್ತಾ ಧೀರನು ದುಃಖ ಪಡುವುದಿಲ್ಲ.

ಓಂಕಾರವು ಅಕ್ಷರ ಪ್ರಾತಿನಿಧ್ಯವಿಲ್ಲದ್ದು ಮತ್ತು ಅನಂತಾಕ್ಷರ ಪ್ರಾತಿನಿದ್ಯ ಉಳ್ಳುದು; ಸರಿಯಲ್ಲದ ಜ್ಞಾನವ್ನೆಲ್ಲ ನಾಶಮಾಡುವಂತಹುದು ಮಂಗಳಕರವಾದುದು. ಹೀಗಿರುವ ಓಂಕಾರವನ್ನು ಅದರ ಭಾಗಗಳನ್ನು ಬಿಡದೆ ತಿಳಿದವನು, ಅವನೇ ಸಿದ್ಧನಾದ ಮುನಿ ಬೇರೆಯವರಲ್ಲ.

ಹೀಗೆ ಮಾಂಡೂಕ್ಯ ಉಪನಿಷತ್ತು ಮೀಮಾಂಸಾ ಶಾಸ್ತ್ರದ ದ್ವೈತ ಮತ್ತು ಅದ್ವೈತ ಶಾಖೆಗಳಲ್ಲಿರುವ ಸೈದ್ಧಾಂತಿಕ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಒಂದು ಒಂದು ಧರ್ಮ ಗ್ರಂಥ. ಎರಡು ಪಂಥಗಳ ವಿದ್ವಾಂಸರು ಹೇಳುವ ಅರ್ಥಗಳಲ್ಲಿ ಹಲವು ವ್ಯತ್ಯಾಸಗಳಿವೆ. ಬ್ರಹ್ಮ ಶ್ರೇಷ್ಠತೆಯ ಪ್ರತಿಪಾದನೆ ಮತ್ತು ಓಂಕಾರ ಧ್ಯಾನದ ಪ್ರಾಮುಖ್ಯ ಇವುಗಳ ಪ್ರತಿಪಾದನೆ ಇವು ಎರಡೂ ಶಾಖೆಗಳಿಗೆ ಸಮಾನವಾಗಿವೆ.


ಈಶಾವಾಸ್ಯೋಪನಿಷತ್ತು: ಒಂದು ಸಾಮಾಜಿಕ ವಿವರಣೆ

 



ಈಶಾವಾಸ್ಯೋಪನಿಷತ್ತು: ಒಂದು ಸಾಮಾಜಿಕ ವಿವರಣೆ

       

  “ಪೂರ್ಣವದು ಪೂರ್ಣವಿದು

        ಸಂಪೂರ್ಣವದು ಸಂಪೂರ್ಣವಿದು

        ಪೂರ್ಣ ದೊಳಗಿಂದುದ್ಭವಿ ಸುವುದದು 

        ಕಳಿಯಲ್ಕದು ಸಂಪೂರ್ಣ ವೇ ಅಹುದು... 

        ಶಾಂತಿ ನಿಲುವುದು ಈ ಪೂರ್ಣದೊಳಗೆ...!!”

                                  (ಅನು:ವೇದಪ್ರಕಾಶ)                     

ಭಾಗ ೧


  ಉಪನಿಷತ್ತುಗಳು, ಭಗವದ್ಗೀತೆ ಮತ್ತು ಈ ತರಹದ ಕೃತಿಗಳೆಲ್ಲ ಆಧ್ಯಾತ್ಮಿಕ ಸಾಧನಾ ಮಾರ್ಗವನ್ನು ವಿವರಿಸುವಂತಹವು ಎಂಬುದು ಸಾಮಾನ್ಯ ತಿಳಿವಳಿಕೆ . ತನ್ನಲ್ಲಿರುವ ಭಗವಂತನನ್ನು ವ್ಯಕ್ತಿ ಹೇಗೆ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂಬುದನ್ನು ತಿಳಿಸುವಂತಹವು. ಆದರೆ ಇಂತಹ ಸಾಧನೆಗೆ ವ್ಯಕ್ತಿಯು ನೀತಿವಂತನೂ ಶಿಸ್ತುಬದ್ಧನೂ ಆಗಿರುವಂತೆ ತನ್ನನ್ನು ತಾನು ರೂಪಿಸಿಕೊಳ್ಳುವುದು ಪ್ರಥಮ ಅಗತ್ಯ. ಇವುಗಳನ್ನು ಸಾಧಿಸುವ ಬಗೆಯೂ ಉಪನಿಷತ್ತುಗಳ ವಸ್ತುವಿಷಯದಲ್ಲಿ ಸೇರಿವೆ. ಇವಲ್ಲದೆ ಬ್ರಹ್ಮದ ಸ್ವರೂಪದ ತಿಳಿವಳಿಕೆ, ಎಂತಹ ಪರಿಸರ ಬ್ರಹ್ಮ ಜ್ಞಾನದ ಗಳಿಕೆಗೆ ಪೂರಕ ಎಂಬುದು, ಬ್ರಹ್ಮಜ್ಞಾನದ ಗಳಿಕೆ, ಅವಿದ್ಯೆಯನ್ನು ಹೋಗಲಾಡಿಸಿಕೊಳ್ಳುವುದು, ದೈವಿಕ ಪ್ರಾರ್ಥನೆಗಳು,  ತಪಸ್ಸು - ಇಂತಹವೆಲ್ಲ ಉಪನಿಷತ್ತುಗಳ ವಸ್ತು. 

ಉಪನಿಷತ್ತುಗಳು ವೇದಗಳಲ್ಲಿ ಬರುವಂತಹವು. ಉಪನಿಷತ್ತುಗಳು ನಾಲ್ಕು ವೇದಗಳಲ್ಲಿಯೂ ಅಂತ್ಯಭಾಗಗಳಾಗಿ ಬರುತ್ತವೆ. ಪ್ರತಿ ವೇದದಲ್ಲಿ ಒಂದೇ ಉಪನಿಷತ್ತು ಇರುವುದು ಎಂದೇನೂ ಇಲ್ಲ. ಒಟ್ಟು ಉಪನಿಷತ್ತುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆಯೂ ಭಿನ್ನಭಿಪ್ರಾಯಗಳಿವೆ. ಕೆಲವು ಕಡೆ ಇನ್ನೂರು ಉಪನಿಷತ್ತುಗಳ ಉಲ್ಲೇಖವಿದೆ. ಕೆಲವು ಕಡೆ ಒಂದು ನೂರ ಎಂಟು ಉಪನಿಷತ್ತುಗಳೆಂದು ಹೇಳಿದೆ. ಹೀಗಾಗಿ ಮುಖ್ಯ ಉಪನಿಷತ್ತುಗಳು ಯಾವುವು ಎಂಬುದೊಂದು ಮುಖ್ಯ ಪ್ರಶ್ನೆ. ಹದಿನೆಂಟು ಉಪನಿಷತ್ತುಗಳು ಪ್ರಮುಖ ಉಪನಿಷತ್ತುಗಳೆಂಬ ಹೇಳಿಕೆ ಇದೆ. ಪ್ರಮುಖ ಉಪನಿಷತ್ತುಗಳಲ್ಲಿ ಈ ಹದಿನೆಂಟು ಯಾವುವು ಎಂಬ ಬಗ್ಗೆ ಒಮ್ಮತವಿಲ್ಲ. ಒಂದು ವಿಷಯವಂತೂ ನಿರ್ವಿವಾದವಾಗಿ ಒಪ್ಪಿಗೆಯಾಗಿದೆ. ಉಪನಿಷತ್ತುಗಳಲ್ಲಿ ವೇದಗಳ ಸಾರಸರ್ವಸ್ವವಿದೆ ಮತ್ತು ಉಪನಿಷತ್ತುಗಳೇ ಹಿಂದೂ ವೈದಿಕ ಮತದ ಸ್ತಂಭಗಳು ಎಂಬ ಬಗ್ಗೆ ಒಟ್ಟಾಭಿಪ್ರಾಯ ಮೂಡಿದೆ. 

ಉಪನಿಷತ್ತುಗಳ ಕಾಲ ಮತ್ತು ಗಾತ್ರಗಳು ವೈವಿಧ್ಯಮಯವಾಗಿವೆ. ಶುಕ್ಲ ಯಜುರ್ವೇದದ ಬೃಹದಾರಣ್ಯಕ ಉಪನಿಷತ್ತು ಉಪನಿಷತ್ತುಗಳಲ್ಲೆಲ್ಲ ದೀರ್ಘವಾದುದು, ಕಾಲದ ದೃಷ್ಟಿಯಿಂದಲೂ ಇದು ಹಳೆಯದಾಗಿದ್ದು ಕ್ರಿ ಪೂ ೭೦೦ ರಲ್ಲಿ ರಚಿತವಾಗಿರಹುದೆಂಬ ಅಭಿಪ್ರಾಯವಿದೆ. ಮಾಂಡೂಕ್ಯ ಉಪನಿಷತ್ತು ಹನ್ನೆರಡು ಮಂತ್ರಗಳ ಚಿಕ್ಕ ಉಪನಿಷತ್ತು. ಇದನ್ನು ಹೊರತುಪಡಿಸಿದರೆ ಚಿಕ್ಕ ಉಪನಿಷತ್ತೆಂದರೆ ಈಶಾವಾಸ್ಯ ಉಪನಿಷತ್ತೇ.

ಈಶಾವಾಸ್ಯೋಪನಿಷತ್ತು ಕೂಡ ಶುಕ್ಲಯಜುರ್ವೇದಕ್ಕೆ ಸೇರಿದುದೇ. ಅದೊಂದು ಸಂಕ್ಷಿಪ್ತ ಉಪನಿಷತ್ತಾಗಿದ್ದು ಅದರಲ್ಲಿರುವ ಮಂತ್ರಗಳನ್ನು ಬೇರೆಬೇರೆ ರೀತಿಗಳಲ್ಲಿ ಎಣಿಸುವ ಸಂಪ್ರದಾಯವಿದೆ. ಇದರಿಂದಾಗಿ ಹದಿನೆಂಟರಿಂದ ಇಪ್ಪತ್ತರವರೆಗೆ ಮಂತ್ರಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಾಣಬಹದು. ಈ ಪ್ರಬಂಧದಲ್ಲಿ ಸುಯಮೀ ರಾಘವೇಂದ್ರ ಸಂಶೋಧನ ಕೇಂದ್ರ, ನಂಜನಗೂಡು ಇವರು ಪ್ರಕಾಶಿಸಿರುವ ಗುರುರಾಜ ಸಂಪುಟಂ ೧ ಈ ಗ್ರಂಥದಲ್ಲಿ ಈಶಾವಾಸ್ಯ ಉಪನಿಷತ್ತಿನ ಶ್ರೀ ರಾಘವೇಂದ್ರ ತೀರ್ಥರ ವ್ಯಾಖ್ಯಾನವಿದ್ದು ಅದರಲ್ಲಿ ಅನುಸರಿಸಿರುವ ಎಣಿಕೆಯ ರೀತಿಯನ್ನು ಅನುಸರಿಸಿದೆ. ಇಲ್ಲಿರುವ ಪ್ರಕಾರ ಈ ಉಪನಿಷತ್ತಿನಲ್ಲಿ ೨೦ ಮಂತ್ರಗಳಿವೆ. 

  ಸಂಕ್ಷಿಪ್ತವಿದ್ದರೂ ಈ ಉಪನಿಷತ್ತಿಗೆ  ಎಲ್ಲ ಮತಾಚಾರ್ಯರೂ ಪ್ರಮುಖ ಸ್ಥಾನ ನೀಡಿದ್ದಾರೆ. ಮತಾಚಾರ್ಯರುಗಳ ಭಾಷ್ಯ ವ್ಯಾಖ್ಯಾನಗಳು ಅಧ್ಯಾತ್ಮ ಸಾಧನೆಗೆ ಒತ್ತು ನೀಡಿ ಮಾಡಿರುವ ವಿವರಣೆಗಳು. (ಇದರಿಂದಾಗಿ ಸಾಮಾನ್ಯ ಬದುಕಿಗೆ ಮತ್ತು ಆದ್ದರಿಂದ ಸಾಮಾನ್ಯ ಜನರಿಗೆ ಇದರಿಂದ ಪ್ರಯೋಜನವೇನೂ ಇಲ್ಲ ಎಂದು ಬಹುಜನರ ನಂಬಿಕೆ. ಆದ್ದರಿಂದಲೇ ಸಾಮಾನ್ಯ ಶಿಕ್ಷಣ ಕ್ರಮದಲ್ಲಿ ಉಪನಿಷತ್ತುಗಳ ಪರಿಚಯವನ್ನಾಗಲೀ ಅಧ್ಯಯನಕ್ಕಾಗಿ ಅವುಗಳ ಭಾಗಗಳನ್ನಾಗಲೀ ಇರಿಸುವ ಪರಿಪಾಠವಿಲ್ಲ).ಅಧ್ಯಾತ್ಮ ಸಾಧನೆಯಲ್ಲಿ ಈ ಉಪನಿಷತ್ತಿಗೆ ದೊಡ್ಡ ಸ್ಥಾನವಿದೆ. ಆಸಕ್ತರಿಗೆ ಅರ್ಥವಾಗುವಂತೆ ವ್ಯಾಖ್ಯಾನ ಬರೆದು ಈ ಉಪನಿಷತ್ತಿಗೆ ಎಲ್ಲ ಆಚಾರ್ಯರುಗಳೂ ನೀಡಿರುವ ಮಹತ್ವ ಆ ನಿಟ್ಟಿನಲ್ಲಿ ಇದು ಪ್ರತಿಪಾದಿಸಿರುವ ತತ್ವಗಳ ಮಹತ್ವವಾಗಿದೆ ಎನ್ನಬಹುದು. 

ಅಧ್ಯಾತ್ಮ ಸಾಧನೆಯೇ ಉಪನಿಷತ್ತುಗಳಲ್ಲಿ ಮುಖ್ಯವಾದರೂ ಸಮಾಜದಲ್ಲಿ ವ್ಯಕ್ತಿ ಹೇಗಿರಬೇಕೆಂಬುದನ್ನೂ ಇವುಗಳಿಂದ ಕಲಿಯಲು ಸಾಧ್ಯ. ಅಧ್ಯಾತ್ಮ ಮತ್ತು ಸಾಮಾಜಿಕ ನಡವಳಿಕೆ ಇವೆರಡೂ ಭಾರತೀಯ ಜನಜೀವನದಲ್ಲಿ ಒಟ್ಟಿಗೆ ಸಾಗುವಂತಹವು. ಸಾಮಾನ್ಯವಾಗಿ ಉಪನಿಷತ್ತುಗಳ ಪ್ರತಿಪಾದನೆಗಳು ಇವೆರಡನ್ನೂ ಒಳಗೊಳ್ಳುವಂತಹವು. ಸಾಮಾಜಿಕ ಮೌಲ್ಯಗಳ ನಿರೂಪಣೆ, ಅವುಗಳ ಅನುಸರಣೆ, ಅನುಸರಿಸಿದರೆ ಆಗುವ ಲಾಭ, ಅನುಸರಿಸದಿದ್ದರೆ ಆಗುವ ಅನಾಹುತ - ಇಂತಹವುಗಳನ್ನೆಲ್ಲ ಉಪನಿಷತ್ತುಗಳಲ್ಲಿ ಕಾಣಬಹುದು. ಹೀಗೆ ಮಾಡತಕ್ಕದ್ದು ಮಾಡದಿದ್ದರೆ ಇಂತಹ ಶಿಕ್ಷೆ ಎಂಬಂತೆ ನಿರೂಪಣೆ ಸಾಗುವುದಿಲ್ಲ.  ತರ್ಕ ಮತ್ತು ಆಪ್ತತ್ವ ಅವುಗಳ ಸಹಜ ನಿರೂಪಣಾ ಮಾರ್ಗ. ಆದ್ದರಿಂದಲೇ ಪ್ರಭು ಸಂಮಿತೆಯೇ ಆದರೂ ಅಲ್ಲಿ ಬರುವ ನಿಯಮಗಳು ಹೇರಿದ ನಿಯಮಗಳಾಗುವುದಿಲ್ಲ. ಕಾರ್ಯಕಾರಣ ತರ್ಕದಿಂದ ಮನಸ್ಸನ್ನು ದೃಢವಾಗಿಸಿಕೊಂಡು ಸಮಾಜ ನಡವಳಿಕೆನ್ನು ಧಾರ್ಮಿಕವಾಗಿರುವಂತೆ ರೂಪಿಸಿಕೊಳ್ಳುವ ರೂಢಿಸಿಕೊಳ್ಳುವ ಸಾತ್ವಿಕ ಒತ್ತಡಕ್ಕೆ ವ್ಯಕ್ತಿ ಒಳಪಡುತ್ತಾನೆ. ಇವುಗಲ ಧ್ಯಯನವು ಶಾಲಾಕ್ರಮದಲ್ಲಿ ಅಷ್ಠಾಗಿ ಇಲ್ಲದಿದ್ದರೂ ಅವುಗಳಲ್ಲಿ ಪ್ರತಿಪಾದಿತವಾಗಿರುವ ತತ್ವಗಳು  ಮತ್ತು ಅವುಗಳ ಬಗ್ಗೆ ಗೌರವ ಸಂಸ್ಕಾರಬಲದಿಂದ ಜನಮನಾಸದಲ್ಲಿ ಕಂಟು ಬರುತ್ತವೆ. ಆದ್ದರಿಂದಲೇ ಸಮಾಜದಲ್ಲಿ ಎಷ್ಟೇ ಭ್ರಷ್ಟಾಚಾರ ಅನ್ಯಾಯಗಳು ಕಂಡುಬಂದರೂ ಸಮಾಜದ ಧಾರ್ಮಿಕ ಸ್ವರೂಪ ಕೆಟ್ಟು ಹಾಳಾಗುವುದಿಲ್ಲ. ಧಾರ್ಮಿಕ ಸ್ವಭಾವವು ʼತಳದಲೆಲ್ಲೋ ತಳುವಿ ಮಾನವನ ಎದೆಯಿಂದಲೆದೆಗೆ ಸತತವಾಗಿ ಹರಿಯುತಲಿರುವ ಅಮೃತವಾಹಿನಿʼಯಾಗುತ್ತದೆ . ಆದ್ದರಿಂದಲೇ ಸಾಮಾಜಿಕ ಆರೋಗ್ಯ ಸಂಪೂರ್ಣವಾಗಿ ನಾಶವಾಗುವ ಸ್ಥಿತಿ ಉಂಟಾಗುವುದಿಲ್ಲ. ಸಮಾಜವು ತನ್ನಷ್ಟಕ್ಕೇ ತನ್ನ ತಾ ಸರಿಪಡಿಸಿಕೊಂಡು ಸಾಗುವ ವ್ಯವಸ್ಥೆಯಾಗುತ್ತದೆ. ಅದಕ್ಕೊಂದು ಸಾಮುದಾಯಿಕ ಸರಿಪಡಿಕಾ ಶಕ್ತಿ ಮೂಡುತ್ತದೆ. (ಅದಕ್ಕೆ ಕಾನೂನು ಇತ್ಯಾದಿ ಸಹಾಯ ಮಾಡುತ್ತವೆ).

ಹೀಗೆ ಉಪನಿಷತ್ತಿಗೆ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಳು ಮುಖ್ಯವಾಗಿರುವಂತೆ ಸಾಮಾಜಿಕತೆಯೂ ಮುಖ್ಯವಾಗುತ್ತದೆ. ಸಮಾಜದಲ್ಲಿ ಏಳಿಗೆಗಾಗಿ ವ್ಯಕ್ತಿ ಅನುಸರಿಸಬೇಕಾದ ನಡವಳಿಕೆಗಳಾವುವು? ವ್ಯಕ್ತಿ ತನ್ನ ಏಳಿಗೆಯ ಜೊತೆಗೆ ಸಮಾಜದ ಏಳಿಗೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕೇದ ಅವಶ್ಯಕತೆ ಇದೆಯೇ ಇತ್ಯಾದಿ ಅಂಶಗಳು ಉಪನಿಷತ್ತುಗಳಲ್ಲಿ ಚರ್ಚೆಗೊಳಗಾಗುತ್ತವೆ. ಈಶಾವಾಸ್ಯೋಪನಿಷತ್ತೂ ಇದಕ್ಕೆ ಹೊರತಲ್ಲ. ಈಶಾವಾಸ್ಯ ಉಪನಿಷತ್ತಿಗೆ ಸಂಬಂಧಿಸಿದಂತೆ ಇಂತಹ ಅಂಶಗಳ ನಿರೂಪಣೆಯನ್ನು ಈ ಪ್ರಬಂಧದಲ್ಲಿ ಮುಖ್ಯವೆಂದು ಪರಿಗಣಿಸಿದೆ.

ಮೊದಲಲ್ಲಿ ಉಪನಿಷತ್ತಿನ ಮಂತ್ರಗಳ ಒಂದು ಸರಳಾನುವಾದವನ್ನು ಪ್ರಸ್ತುತಪಡಿಸುತ್ತಿರುವೆ:


ಭಾಗ ೨

ಶ್ರೀಃ

                            (ಈಶಾವಾಸ್ಯೋಪನಿಷತ್‌ ಕನ್ನಡಾನುವಾದ ಪ್ರಾರಂಭ)

      ಚಲಿಸುತಿಹುದೇನೆಲ್ಲ  ಇಲ್ಲಿ, 

ಈಶನಾವಾಸವದು ಬೇರಲ್ಲ

                  ಅವ ಕೊಟ್ಟುದನು ತಿನ್ನು; 

ಕಸಿಯ ಬೇಡ ಇನ್ನೊಬ್ಬನದನು ನೀನು.  ೧

ಕರ್ಮಗಳ ಮಾಡುತಲೆ ಇಲ್ಲಿ , 

ಬದುಕೋಣ ನಾವು ನೂರು ವರುಷ

ನಮಗಿದುವೆ ದಾರಿ ಬೇರಿಲ್ಲ; 

ಕರ್ಮವಂಟದು ನರನು ಬದುಕಲಿಂತು .೨


ಕತ್ತಲಿನಿಂದಾವೃತವು ಆ ಲೋಕಗಳು

ಅಸುರ್ಯವೆಂಬುದು ಹೆಸರು

ತೆರಳಲಿಲ್ಲಿಂದ ಹೊಗುವರದನು 

ಆತ್ಮಗುಲಿಗಳೆನಿಸಿದ ಜನರು .


ಚಲಿಸದದೊಂದು ; ವೇಗವದರದು ಮನಸಿಗು ಹೆಚ್ಚು 

ದೇವತೆಗಳಾರೂ ಹಿಡಿಯಲಾಪರು ತಲುಪುವುದದು

ಅವರಿಗಿಂತಲು ಮೊದಲೆ ಅಲ್ಲಿ;

ಓಡುತಿಹ ಇತರರನು ಮೀರುವುದದು ನಿಂತೇ

ಅದರಲಿಡುವನು ನೀರ ಮಾತರಿಶ್ವನು ಬಿಡದೆ .


ಚಲಿಸದದು ಚಾಲಿಸುವುದು 

            ದೂರದಲ್ಲಿಯೂ ಅದೆ ಹತ್ತಿರದಲ್ಲಿಯು;

ಎಲ್ಲದರೊಳಗು ಅದೆ, ಅದೆ ಹೊರಗಡೆ ಎಲ್ಲ .


ಅನುಸರಿಸಿ ಕಾಣುವನು ಯಾರು 

ಸರ್ವ ಜೀವಿಗಳನು ತನ್ನಲ್ಲಿಯೇ

ಸರ್ವಜೀವಿಗಳಲಿ ತನ್ನನು ಹಾಗೆ, 

ಬಚ್ಚಿಡದದು ತನ್ನಿಂದ ಎಂದು.   ೬


ಸರ್ವಜೀವಿಗಳನು ತಿಳಿವನು ತನ್ನಂತೆ ಯಾರು

ಅವನಿಗೆಲ್ಲಿಯ ಮೋಹ ಎಲ್ಲಿಯ ಶೋಕ 

ಕಾಣುವನು ತಾನೆ ಏಕತ್ವವನು ಎಲ್ಲಡೆ .    ೭


ಆವರಿಸಿಹನಿವ ರೂಹಿಲ್ಲ ಅಚ್ಚಬಿಳಿಯನನೂನ

ನರನಾಡಿರಹಿತನಿವ ಶುದ್ಧನು ಪಾಪತಟ್ಟದವನು;

ಜ್ಞಾನಿ ಇವ ,ಸರ್ವ-ಚಿಂತನ-ಸ್ವರೂಪಿ;

ಅಧೀನರೆಲ್ಲರು ಅವಗೆ ಅವಲಂಬನವಿಲ್ಲದವ

ತ್ರಿಕಾಲದಲ್ಲಿಯು ಹರಡುವನಿವ ಸಿರಿಸಂಪದಗಳನೆಲ್ಲೆಲ್ಲು .     ೮


ದಟ್ಟ ಕತ್ತಲೆಯನೆ ಪ್ರವೇಶಿಸುವರವರು 

ಅವಿದ್ಯೆಯ ಉಪಾಸಕರು;

ಅದಕು ಸಾಂದ್ರ ಕತ್ತಲೆಯ ಪ್ರವೇಶಿಸುವರು 

ವಿದ್ಯೆಯಲೇ ಆಡುವವರು. ೯      


ಅವಿದ್ಯೆಯ ಕತ್ತಲು ಬೇರೆ , ವಿದ್ಯೆಯ ಕತ್ತಲೇ ಬೇರೆ;

ಹೀಗೆನುವರು ಇವೆರಡನೂ ಬಲ್ಲ ಧೀರರು .    ೧೦


           ವಿದ್ಯೆಯನೂ ಅವಿದ್ಯೆಯನೂ ಅರಿತಿಹನಾರು ಅವ

                       ಮೃತ್ಯುವನು ದಾಟಿ ಅವಿದ್ಯೆಯಿಂದ 

                       ಪಡೆವನು ಅಮರತ್ವ ವಿದ್ಯೆಯಿಂದ. ೧೧


  ದಟ್ಟ ಕತ್ತಲೆಯನೆ ಪ್ರವೇಶಿಸುವರವರು 

ಅಸಂಭೂತಿಯ ಉಪಾಸಕರು;

ಅದಕು ಸಾಂದ್ರ ಕತ್ತಲೆಯ ಪ್ರವೇಶಿಸುವರು 

ಸಂಭೂತಿಯಲೇ ಆಡುವವರು.                


ಅಸಂಭೂತಿಯ ಕತ್ತಲು ಬೇರೆ, ಸಂಭೂತಿಯ ಕತ್ತಲೇ ಬೇರೆ;

ಹೀಗೆನುವರು ಇವೆರಡನೂ ಬಲ್ಲ ಧೀರರು .  ೧೩


ಸಂಭೂತಿಯನೂ ಅಸಂಭೂತಿಯನೂ ಅರಿತಿಹನಾರು ಅವ

ಮೃತ್ಯುವನು ದಾಟಿ ಅಸಂಭೂತಿಯಿಂದ             ಪಡೆವನಮರತ್ವಸಂಭೂತಿಯಿಂದ ೧೪

ಸತ್ಯದ ಮುಖ ಮುಚ್ಚಿಹುದು 

ಸ್ವರ್ಣಮಯ ಪಾತ್ರೆಯೊಂದು

ಅದ ನೀ ಸರಿಸಾಚೆ ಹೇ ಪೂಷನ್!‌ 

ಸತ್ಯಧರ್ಮವ ತೋರೆನಗೆ .  ೧೫

ಹೇ ಪೂಷನ್‌  ಹೇ ಜಗದೊಡೆಯ ಮಿಂಚೆ! 

ನೀನಾಗಿರುವಿ ಮುನ್ನಡೆಸುವ ದೇವ, ಬೆಳಕುಬೀರುವ ದೇವ, 

ಸಂತಾನ ಬೆಳೆಸುವ ದೇವ.  ಚದುರಿ ಹರಡೈ ನಿನ್ನ ಬೆಳಕ ;

ಒಟ್ಟಾಗಿಸು ಒಟ್ಟಾಗಿಸು ಹೊಳಪ. 

ನಿನ್ನ ಕಲ್ಯಾಣತಮ ರೂಪವ ನೋಡಗೊಡು ನನಗೆ

ಇರುವೆ ನೀ ನೇಸರಲಿ, ಪ್ರಾಣನಲಿ ಹೇ ಪೂರ್ಣ ಪುರುಷ ೧೬

                        ಅವನಿರುವನಾಗಿ ಇರುವೆ ನಾನು      ೧೭


ಅನಿಲವಾಯುವು ಅಮೃತವು ತಾನೆ ?

ಸುಟ್ಟು ಭಸ್ಮವೆನಿಸುವುದೈ ಅಂತ್ಯದಲಿ ನಮ್ಮೀ ಶರೀರ;

ಒಳಗಿನಾಂತರ್ಯವದು ಅಮೃತವಹುದು .    ೧೮


ಓಮ್‌ ಅನುಗ್ರಹಿಸೆನ್ನ ಪರನೇ, ನೆನೆ ನಾ ಮಾಡಿದುದ

ಅನುಗ್ರಹಿಸೆನ್ನ ಪರನೇ  ನೆನೆ ನಾ ಮಾಡಿದುದ . ೧೯


ಹೇ ಅಗ್ನಿ ಕರೆದೊಯ್ಯಿ ನಮ್ಮ 

ನೀ ಸಿರಿವಂತಿಕೆಗೆ ಸರಿದಾರಿಯಲ್ಲಿ.

ನಾ ಗಳಿಸಿದುದೆಲ್ಲವ ತಿಳಿದವ ನೀನು, ಹೇ ದೇವ!

ಹೊಡೆದೋಡಿಸು ನಮ್ಮಿಂದ ಕೆಟ್ಟ ತಂಟೆಕೋರತನ

ಅರ್ಪಿಸುವೆವು ನಾವು ಅನೂನ ಗೌರವವ ನಿನಗೆ    ೨೦


(ಈಶಾವಾಸ್ಯೋಪನಿಷತ್‌ ಅನುವಾದ ಸಂಪೂರ್ಣ)

ಭಾಗ ೩

ಈ ಉಪನಿಷತ್ತಿನಲ್ಲಿ ಅಭಿವ್ಯಕ್ತಿಯು ಕಾವ್ಯಮಯವಾಗಿದೆ. ಈ ಉಪನಿಷತ್ತು ಅನುಷ್ಟುಭ್‌ ಛಂದಸ್ಸಿನಲ್ಲಿದೆ ಎಂದು ಹೇಳುತ್ತಾರೆ. ಅಂದರೆ ಸಾಲಿಗೆ ಎಂಟಕ್ಷರದಂತೆ ನಾಲ್ಕು ಸಾಲುಗಳಲ್ಲಿದ್ದು ಇದನ್ನು ಶ್ಲೋಕದಂತೆ ಓದಬಹುದು. ಸರಳ ನಿರೂಪಣೆ, ರೂಪಕಗಳ ಬಳಕೆ, ಪ್ರಾರ್ಥನೆಯನ್ನು ಒಳಗೊಂಡಿರುವುದು ಇದರ ಮುಖ್ಯ ಲಕ್ಷಣಗಳು. ಸಾಮಾಜಿಕ ಪ್ರಸ್ತುತತೆಯ ದೃಷ್ಟಿಯಿಂದಲೂ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಮಂತ್ರಗಳ ಅರ್ಥೈಸುವಿಕೆಯಲ್ಲಿ ಇಲ್ಲಿರುವ ರೂಪಕಗಳನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಮೌಲ್ಯಗಳ ನಿರೂಪಣೆ, ಮೌಲ್ಯಗಳ ಅನುಸರಣೆಯ ಲಾಭ, ಅನನುಸರಣೆಯ ನಷ್ಟ ಇಂತಹವನ್ನೆಲ್ಲ ರೂಪಕಗಳ ಮುಖಾಂತರವೇ ವಿವರಿಸುತ್ತಾರೆ. ಒಂದೆರಡು ಮಂತ್ರಗಳು ಪ್ರಾರ್ಥನೆಯನ್ನೊಳಗೊಂಡಿದ್ದರೂ ಅವು ಹೇಳ ಬೇಕಾದ್ದನ್ನು ರೂಪಕಗಳಮುಖಾಂತರವೇ ಹೇಳುತ್ತವೆ.

ಉಪನಿಷತ್ತಿನ ಮೊದಲ ಎರಡು ಮಂತ್ರಗಳು ಸಮಾಜದಲ್ಲಿ ನೆಲೆಗೊಳ್ಳಬೇಕಾದ ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಸಮಾಜ ಮತ್ತು ಸಮಾಜದೊಂದಿಗೆ ವ್ಯಕ್ತಿಯ ಕೊಡುಕೊಳೆಗಳ ಬಗ್ಗೆ ಭಾರತೀಯ ಮನಸ್ಸು ತುಡಿಯುವ ರೀತಿಯನ್ನು ಮೊದಲನೆಯ ಮಂತ್ರ ತೆರೆದಿಡುತ್ತದೆ. ವ್ಯಕ್ತಿಯು ಸಮಾಜದ ಭಾಗವಾಗಿದ್ದು ಸಮಾಜ ಮತ್ತು ವ್ಯಕ್ತಿಯ ನಡುವಣ ಕೊಡುಕೊಳೆಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿ ಮತ್ತು ಸಮಾಜ ಈಶನ ನಿಯಂತ್ರಣದಲ್ಲಿರುವುವು ಎಂಬ ಪರಿಕಲ್ಪನೆ ಈ ಮೊದಲ ಮಂತ್ರದಲ್ಲಿದ್ದು ಇದು ಸಮಾಜದೊಡನೆ ವ್ಯಕ್ತಿಯ ಒಡನಾಟವನ್ನು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.

"ಚಲಿಸುವಂತಹುದು ಜಗತ್ತಿನಲ್ಲಿ ಏನೆಲ್ಲ ಇದೆಯೋ ಈ ಎಲ್ಲವೂ ಈಶನ ಆವಾಸ ಸ್ಥಾನ" ಎಂದು ಇದರ ಮೊದಲ ಸಾಲಿಗೆ ಅರ್ಥ ಹೇಳ ಬಹುದು. ಚಲಿಸುವಂತಹುದು ಎಂಬುದನ್ನು ಇಲ್ಲಿ ರೂಪಕಾರ್ಥದಲ್ಲಿ ಪ್ರಯೋಗಿಸಲಾಗಿದೆ. ಬದಲಾವಣೆಯು ಚಲನೆ ಎಂಬುದು ಇಲ್ಲಿ ಬಳಕೆಯಾಗಿರುವ ರೂಪಕ. ಹೀಗೆ ಚಲಿಸುವುದರಲ್ಲೆಲ್ಲ ಈಶನಿದ್ದಾನೆ ಎಂದರೆ ಬದಲಾಗುತ್ತಿರುವ ಎಲ್ಲ ವಸ್ತುಗಳಲ್ಲಿ ಈಶನಿದ್ದಾನೆ ಎಂದರ್ಥ. ಇಡೀ ಪ್ರಪಂಚವೇ ಬದಲಾಗುತ್ತಿದೆಯಷ್ಟೆ! ಆದ್ದರಿಂದ ಪ್ರಪಂಚದಲೆಲ್ಲ ಅವನಿದ್ದಾನೆ. ಈ ಪ್ರಪಂಚ ಈಶನ ಆವಾಸ ಸ್ಥಾನ. ಇದರಲ್ಲಿ ಅವನು ನಮಗೆ ಏನು ಕೊಡುತ್ತಾನೋ ಅದನ್ನಷ್ಟೆ ಭೋಗಿಸಲು ನಾವು ಬಾಧ್ಯರು; ಹೆಚ್ಚಿನದನ್ನಲ್ಲ. ಉಳಿದುದು ಬೇರೆ ಯಾರಿಗಾಗಿಯೋ ಇರುವಂತಹುದು. ಇನ್ನೊಬ್ಬರಿಗಾಗಿ ಅವನು ಮೀಸಲಿಟ್ಟುದನ್ನು ಯಾರೂ ಗೆಬರಬಾರದು.

ಈ ಮಂತ್ರವು ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ಲಭ್ಯವಿರುವ ಸಂಪತ್ತಿನ ಮೇಲೆ ವ್ಯಕ್ತಿಗಿರುವ ಅಧಿಕಾರವೆಷ್ಟು, ಅದನ್ನು ಅವನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಮ್ಮ ಮುಂದಿಡುತ್ತದೆ. ಪ್ರತಿಯೊಬ್ಬನೂ ತಾನಿರುವುದು ಇನ್ನೊಬ್ಬನ ಮನೆಯಲ್ಲಿ ಎಂಬಂತೆ ನೆನಪಿಟ್ಟುಕೊಳ್ಳಬೇಕು; ತಾನು ಇಲ್ಲಿರುವ ಯಾವ ವ್ಯವಸ್ಥೆಯನ್ನೂ ಕೆಡಿಸದೆ ಮುಂದೆ ಬರುವವರಿಗಾಗಿ ಸುಸ್ಥಿತಿಯಲ್ಲಿ ಬಿಟ್ಟುಕೊಡಬೇಕು; ಪ್ರತಿಯೊಬ್ಬನೂ ತನಗೆ ಬೇಕಾದಷ್ಟನ್ನೇ ಜಾಗ್ರತೆಯಿಂದ ಬಳಸಬೇಕು; ಅಷ್ಟೇ ಹೊರತು ತಲೆಮಾರುಗಳಿಗೆ ಬೇಕೆಂಬ ರೀತಿಯಲ್ಲಿ ಆದಷ್ಟೂ ಹೆಚ್ಚನ್ನು ಕೂಡಿಡ ಬಾರದು.

ಎರಡನೆಯ ಮಂತ್ರವು ಮೊದಲನೆಯ ಮಂತ್ರವು ನಿರೂಪಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸೋಣ ಎಂದಾಶಿಸುತ್ತದೆ, ಮೊದಲ ಮಂತ್ರದಲ್ಲಿ ದೇವರು ಕೊಟ್ಟದ್ದನ್ನು ತಿನ್ನು ಎಂದು ಹೇಳಿದರೆ ಎರಡನೆಯ ಮಂತ್ರ ಕರ್ತವ್ಯ ಪಾಲನೆ ಅದಕ್ಕೆ ಪೂರ್ವ ಆವಶ್ಯಕತೆ ಎನ್ನುತ್ತದೆ. "ಇಹ ಕರ್ಮಾಣಿ ಕುರ್ವನ್ನೇವ" ಎಂದರೆ ಇಲ್ಲಿ ಕರ್ಮಗಳನ್ನು ಮಾಡುತ್ತಲೇ ನಾವು ದೇವರು ಕೊಟ್ಟುದನ್ನು ತಿನ್ನ ಬೇಕು. ಹೀಗೆ ಶತಂ ಸಮಾಃ ಜಿಜೀವಿಷೇತ್‌  ನೂರು ವರ್ಷಗಳ ಕಾಲ ಬದುಕಲು ಇಚ್ಛಿಸಬೇಕು. ಹಾಗೆ ಮಾಡಿದರೆ ಕರ್ಮಗಳಿಂದ ಉಂಟಾಗುವ ಸಂಕಷ್ಟಗಳು ನಮಗೆ ಅಂಟುವುದಿಲ್ಲ (ನಲಿಪ್ಯತೇ) ಮತ್ತು ಹೀಗೆ ಮಾಡುವುದೊಂದೇ ನಮಗೆ ಸಂತೋಷದಿಂದ ಬದುಕಲು ಇರುವ ದಾರಿ.

ಇನ್ನೊಂದು ದೃಷ್ಟಿಯಿಂದ ನೋಡಿದರೆ ಎರಡನೆಯ ಮಂತ್ರವೂ ನಮಗೆ ಒಂದೆರಡು ಮೌಲ್ಯಗಳನ್ನು ಕಟ್ಟಿಕೊಡುತ್ತದೆ: ಕರ್ತವ್ಯವನ್ನು ಮಾಡು ಮತ್ತು ನೂರು ವರ್ಷಗಳ ಕಾಲ ಬದುಕಲು ಇಚ್ಛಿಸು - ಇವು ಈ ಮಂತ್ರದಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳು.  ಮನೆಯನ್ನು ಸುಸ್ಥಿತಿಯಲ್ಲಿಡಲು ಶ್ರಮವಹಿಸುವುದು ಪ್ರತಿ ವ್ಯಕ್ತಿಗೆ ಅನಿವಾರ್ಯ. ತಾನು ಬಳಸಬೇಕಾದುದು ದೇವರು ತನಗೆ ಕೊಟ್ಟಷ್ಟೆ; ಮತ್ತಷ್ಟು, ಮತ್ತಷ್ಟು ಅಲ್ಲ. ಈ ಮಂತ್ರ  ನಮ್ಮನ್ನು ಆಶ್ವಸ್ತರನ್ನಾಗಿಯೂ ಮಾಡುತ್ತದೆ: ನಮ್ಮ ಕರ್ತವ್ಯವನ್ನು ಮಾಡಿ ನಮ್ಮ ಸರಿಯಾದ ಪಾಲನ್ನು ನಾವು ಉಪಭೋಗಿಸಿದರೆ ಆ ಕರ್ಮದಿಂದ ನಮಗೆ ಒದಗಬಹುದಾದ ಸಂಕಷ್ಟ ನಮ್ಮನ್ನು  ಸುತ್ತಿಕೊಳ್ಳುವುದಿಲ್ಲ.

ಹೀಗೆ ಮಾಡದಿದ್ದರೆ ಏನಾಗುತ್ತದೆ ಎಂಬುದು ಮೂರನೆಯ ಮಂತ್ರದಿಂದ ನಮಗೆ ತಿಳಿಯುತ್ತದೆ. ಯಾವುದು ಮಾಡಬೇಕಾದ್ದೋ ಅದನ್ನು ಮಾಡದಿದ್ದರೆ ವ್ಯಕ್ತಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮೂರನೆಯ ಮಂತ್ರವು ಕೆಲವು ಹೊಸ ಪದಗಳನ್ನೂ ಹೊಸ ರೂಪಕಗಳನ್ನೂ ಬಳಸುತ್ತದೆ. ತನ್ಮೂಲಕ ಮೌಲ್ಯಹೀನರ ಗತಿಯನ್ನು ಸಮರ್ಥವಾಗಿ ತಿಳಿಸಿಕೊಡುತ್ತದೆ.

ಆತ್ಮಹನೋ ಜನಾಃ ಎಂದರೆ ತಮ್ಮನ್ನು ತಾವು ಕೊಂದುಕೊಳ್ಳುವ ಜನರು. ತಾವಾಗಿಯೇ ಮರಣವನ್ನು ತಂದುಕೊಳ್ಳುವ ಜನರು. ಮರಣವು ಕಳೆದುಕೊಳ್ಳುವಿಕೆ ಎಂಬ ರೂಪಕವು ಇಲ್ಲಿಬಳಕೆಯಾಗಿದೆ. ಮೇಲಿನ ಮಂತ್ರಗಳಲ್ಲಿ ಹೇಳಿದ ಮೌಲ್ಯಗಳನ್ನು ಕಳೆದುಕೊಳ್ಳುವ ಜನರು ಆತ್ಮಹನೋ ಜನರು. ಇಂತಹ ಜನರು ಸುಖಮಯವಾದ ಈ ಮೌಲ್ಯಗಳ ಲೋಕದಿಂದ ಕಳುಹಿಸಲ್ಪಟ್ಟು ಕತ್ತಲ ಲೋಕಗಳನ್ನು ಪ್ರವೇಶಿಸುತ್ತಾರೆ. ಕತ್ತಲೆಯು ಅಜ್ಞಾನ, ಕತ್ತಲೆಯು ಸಂಕಷ್ಟ - ಎಂಬಿವು ಜನಜನಿತವಾದ ರೂಪಕಗಳು.  ಆದ್ದರಿಂದ ಆತ್ಮಹನೋ ಜನರು ಮೌಲ್ಯಗಳ ಸುಖಮಯ ಲೋಕದಿಂದ ಸಂಕಷ್ಟಗಳ ಕತ್ತಲೆಯ ಲೋಕಕ್ಕೆ ಕಳುಹಿಸಲ್ಪಡುತ್ತಾರೆ. ಆ ಕತ್ತಲೆಯ ಲೋಕಕ್ಕೆ ಅಸುರ್ಯಾ ಎಂದು ಹೆಸರು. ಅಂದರೆ ಸೂರ್ಯ ಅಲ್ಲದ್ದು. ಸೂರ್ಯ ಅಲ್ಲದ್ದು ಎಂದರೆ ಆ ಪ್ರಖರ ಬೇಳಕು (ಜ್ಞಾನ ಸುಖಗಳ ಆಗರ) ಇಲ್ಲದ್ದು. ಅಂದರೆ ಸುಖವಿಲ್ಲದ ಜ್ಞಾನವಿಲ್ಲದ ಲೋಕ. ಮೌಲ್ಯಗಳನ್ನು ಕಳೆದುಕೊಂಡ ಜನರು ಸುಖವಿಲ್ಲದವರೂ ಅಜ್ಞಾನಿಗಳೂ ಎನಿಸುತ್ತಾರೆ.

ಮೌಲ್ಯಗಳನ್ನು ಸ್ವೀಕರಿಸಿಕೊಂಡವರು ಹೇಗೆ ಸಾಧನೆಯ ಮೇಲಿನ ಹಂತಗಳನ್ನು ಪಡೆಯುತ್ತಾರೆ ಎಂಬುದು ಮುಂದಿನ ಮಂತ್ರಗಳಲ್ಲಿ ವ್ಯಕ್ತವಾಗಿದೆ. ವೇದಗಳ ಪದ್ಧತಿಯಲ್ಲಿ ಬೇಳವಣಿಗೆಯು ಒಂದೇ ಆಯಾಮದ್ದಾಗಿರುವುದು ಸಾಧ್ಯವಿಲ್ಲ. ಆಧ್ಯಾತ್ಮಿಕ ಬೇಳವಣಿಗೆ ಮತ್ತು ಸಾಮಾಜಿಕ ಬೆಳವಣಿಗೆ ಒಟ್ಟೊಟ್ಟಾಗಿ ನಡೆಯುವಂಹವು. ಆದ್ದರಿಂದಲೇ ವ್ಯಕ್ತಿ ಮತ್ತು ಸಮಾಜದ ಆಧ್ಯಾತ್ಮಿಕ ನೆಲೆಗಳನ್ನು ಪ್ರಸ್ತಾವಿಸುವುದು ಅನಿವಾರ್ಯವಾಗುತ್ತದೆ. ನಾಲ್ಕನೆಯ ಮಂತ್ರವನ್ನು ಈ ದೃಷ್ಟಿಯಿಂದ ನೋಡಬೇಕು.  

ವ್ಯಕ್ತಿಯ ಆಂತರ್ಯವು ಸ್ಥಿರವಾದುದು, ಬದಲಾಗುವಂಹುದಲ್ಲ. ವ್ಯಕ್ತಿಯ ಆಂತರ್ಯದ ಸ್ಥಿರತೆ ಒಂದು ಕಡೆಯಾದರೆ, ಅವನ ಬಾಹ್ಯ ಇಂದ್ರಿಯಗಳು ನಿರಂತರವಾಗಿ ವಿಷಯ ವಸ್ತುಗಳ ಕಡೆಗೆ ಹರಿಯುವ ಪ್ರವೃತ್ತಿ ಇನ್ನೊಂದು ಕಡೆ. ಇವು ನಾಲ್ಕನೆಯ ಮಂತ್ರದಲ್ಲಿ ಸುಂದರವಾಗಿ ನಿರೂಪಿತವಾಗಿರುವ ಅಂಶಗಳು. ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯ ಅದು ʼಅನೇಜದೇಕಂʼ(ಚಲಿಸದದೊಂದು). ಏಜತ್‌ ಎಂದರೆ ಚಲನೆ, ಚಲಿಸುವ ವಸ್ತು, ನಡುಗುವ ವಸ್ತು ಇತ್ಯಾದಿ. ಚಲನೆಯು ಬದಲಾವಣೆ ಎಂಬುದು ರೂಪಕ. ಅನೇಜತ್‌ ಎಂದರೆ ಚಲಿಸದಿರುವುದು; ಎಂದರೆ ಬದಲಾವಣೆಯಾಗದಿರುವುದು. ಏಕಂ ಎಂದರೆ ಹಾಗಿರುವುದು ಅದೊಂದೆ ಎಂದರೆ ವಿಶಿಷ್ಟವಾದುದು, ಅನನ್ಯವಾದುದು. ವ್ಯಕ್ತಿಯ ಆಂತರ್ಯದ ಅಚಲತೆಯು ಈ ಪದಪುಂಜಗಳಿಂದ ವ್ಯಕ್ತವಾಗಿದೆ. (ಆಂತರ್ಯಕ್ಕೆ ಆತ್ಮ, ಜೀವ ಇತ್ಯಾದಿಯಾದ ಹೆಸರುಗಳಿವೆ). ಸಮಾಜದಲ್ಲಿ ವ್ಯಕ್ತಿಯ ಚಟುವಟಿಕೆಗಳನ್ನು ನೋಡಿದರೆ ಈ ಸ್ಥಿರತೆಯಲ್ಲ, ಚಂಚಲತೆ ಎಲ್ಲರ ಅನುಭವಕ್ಕೆ ಬರುವುದು. ಇಂದ್ರಿಯಗಳು ಈ ಕ್ಷಣ ಒಂದು ವಸ್ತುವನ್ನು ಉಪಭೋಗಿಸಿದರೆ ಮರುಕ್ಷಣದಲ್ಲಿ ಬೇರೆಯದನ್ನು ಅನುಭವಿಸುತ್ತವೆ. ಈ ಚಂಚಲತೆ ಇಂದ್ರಿಯಗಳ ಸ್ವಭಾವ. ಇವು ಒಳಗಿನ ಸ್ಥಿರ ಆಂತರ್ಯವನ್ನು ಬಿಟ್ಟು ಹೊರಗಡೆಯ ವಿಷಯ ವಸ್ತುಗಳ ಕಡೆಗೆ ಶೀಘ್ರಾತಿ ಶೀಘ್ರತೆಯಿಂದ ಓಡುವುವು. ಅವುಗಳ ಚಲನೆ ವೇಗವುಳ್ಳುದು. ಮನಸಿಗಿಂತ ವೇಗ ಅವುಗಳಿಗೆ. ಇಲ್ಲಿರುವ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಅವನು ಚುರುಕಾಗಿದ್ದಾನೆ ಎಂದರೆ ಅವನು ಬೇಗ ತಿಳಿದುಕೊಳ್ಳುತ್ತಾನೆ ಎಂದರ್ಥ. ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯ ಬದಲಾವಣೆಯಾಗದಂತಹ ವಿಶಿಷ್ಟ ಅಸ್ಮಿತೆ. ಆದರೆ ಬಾಹ್ಯ ಘಟನೆಗಳಂದ ಅದು ಕ್ಷುಬ್ಧವಾಗಬಹುದು. ಅದನ್ನು ಯಾವ ಇಂದ್ರಿಯಗಳೂ ತಲುಪಲಾರವು. ಇಂದ್ರಿಯಗಳನ್ನು ಇಲ್ಲಿ ದೇವತೆಗಳೆಂದು ಕರೆದಿದೆ. ಮನಸ್ಸನ್ನು ಯಾವ ದೇವತೆಯೂ ಹೊಂದಲಾರದು (ನೈನದ್ದದೇವಾ ಆಪ್ನುವನ್)‌ ಅಂದರೆ ಮನಸ್ಸನ್ನು ಯಾವ ಇಂದ್ರಿಯವೂ ತಿಳಿಯಲಾರದು. ತಿಳಿಯುವುದು ಹೊಂದುವುದು ಎಂದು ಇಲ್ಲಿ ರೂಪಕ ಮಾಡಲಾಗಿದೆ. ಒಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯಾಗದಂತಹ ಒಂದು ವಿಶಿಷ್ಟ ಅಸ್ಮಿತೆ ಮತ್ತು ಅದನ್ನು ಇಂದ್ರಿಯಗಳು ತಲುಪಲಾರವು; ಅವುಗಳ ಚಟುವಟಿಕೆಗಳಿಂದ ಮನಸ್ಸು ಕ್ಷುಬ್ಧವಾಗಬಹುದು. ಇದರ ನಿಹಿತಗಳೆಂದರೆ ಇಂದ್ರಿಯಗಳನ್ನು ತೃಪ್ತಿಪಡಿಸುತ್ತಾ ಹೋಗುವುದರಿಂದ ತನ್ನನ್ನು ತಾನು ತಿಳಿಯಲಾಗಲೀ ತನ್ನ ಸಮಾಜವನ್ನು ತಿಳಿಯಲಾಗಲೀ ಸಮಾಜ ಮತ್ತು ತನ್ನ ಹಿತವನ್ನು ಸಾಧಿಸಲಾಗಲೀ ಸಾಧ್ಯವಾಗದು. ಇಂದ್ರಿಯಗಳು ಮಾಡಿದ್ದೆಲ್ಲ ಮನಸ್ಸಿನಲ್ಲಿ ಗಾಢವಾಗಿ ಉಳಿಯುವುವು. ಆದ್ದರಿಂದ ಮನಸ್ಸು ಕ್ಷುಬ್ಧವಾಗುವುದು; ಆಂತರ್ಯದ ಅಸ್ಮಿತೆ ಕುಗ್ಗುವುದು. ಆದ್ದರಿಂದ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ತನ್ನ ಆಂತರ್ಯದ ಹಿತವನ್ನೂ ಸಮಾಜದ ಹಿತವನ್ನೂ ಸಾಧಿಸಬೇಕು.

ನಾಲ್ಕನೆಯ ಮಂತ್ರವು ವ್ಯಕ್ತಿಯ ಅಸ್ಮಿತೆ, ಮಾನಸಿಕ ಆರೋಗ್ಯ ಮತ್ತು ಸಮಾಜದೊಡನೆ ಅದರ ಸಂಬಂಧ ಇವುಗಳ ಬಗ್ಗೆ ಹೇಳುತ್ತದೆ. ಮುಂದಿನ ಮಂತ್ರ ಸಮಾಜದ ಸಾಮೂಹಿಕ ಅಸ್ಮಿತೆ ಬಗ್ಗೆ ವಿವರಿಸುತ್ತದೆ. ಹಾಗೆಯೇ ವಿಶ್ವದ ಸಾಮೂಹಿಕ ಅಸ್ಮಿತೆ ವಿಶ್ವಚೇತನ ಕೂಡ. ಅದೂ ಅನೇಜತ್‌ ಎಂದರೆ ಅದೂ ಬದಲಾವಣೆಯಾಗದ್ದು ಮತ್ತು ವಿಶಿಷ್ಟವಾದುದು ಮತ್ತು ಅನನ್ಯವಾದುದು. ತಾನು ಬದಲಾವಣೆಯಾಗದೆ ಉಳಿದು ಹೊರ ಪ್ರಪಂಚವನ್ನು (ಪ್ರಕೃತಿಯನ್ನು) ತನ್ನ ಸ್ವಭಾವಕ್ಕನುಗುಣವಾಗಿ ಬದಲಾಗಲು ಅನುವು ಮಾಡಿಕೊಡುವಂತಹುದು. ಇಂದ್ರಿಯಗಳಿಂದ ಹೊರ ಪ್ರಪಂಚವನ್ನು ತಿಳಿಯಬಹುದು; ವಿಶ್ವದ ಆಂತರ್ಯ ಅಸ್ಮಿತೆಯನ್ನು ತಿಳಿಯುವುದು ಸಾಧ್ಯವಿಲ್ಲ. ಆ ಅಸ್ಮಿತೆ ತಾನು ನಿಂತೇ ಇರುತ್ತದೆ; ಅಂದರೆ ಯಾವ ಬದಲಾವಣೆಗೂ ಪಕ್ಕಾಗದೆ ಇದ್ದು ಪ್ರಕೃತಿಯಲ್ಲಿ ಎಲ್ಲ ಬದಲಾವಣೆಗಳಿಗೆ (ತದೇಜತಿ) ಕಾರಣವಾಗುತ್ತದೆ. ಪ್ರಾಣವಾಯುವಿನ ನಿರಂತರ ಚಲನೆಯಿಂದ ಇದು ಸಾಧ್ಯವಾಗುತ್ತದೆ. ವಾಯು ಹೀಗೆ ಜೀವಿಗಳ ಎಲ್ಲ ಚಟುವಟಿಕೆಗಳಿಗೆ ನೀರೆರೆಯುತ್ತದೆ. 

ಈ ವಿಶ್ವಚೇತನ ವಿಶ್ವದಸ್ಮಿತೆ ಬದಲಾಗುವಂತಹದಲ್ಲ; ಅದು ಹೊರನೋಟಕ್ಕೆ ಕಾಣುವಂತಹುದೂ ಅಲ್ಲ; ತಾನು ಬದಲಾಗದೆ ಕಾಣುವ ವಿಶ್ವದಲ್ಲಿ ಬದಲಾವಣೆ ತರುವಂಹುದು ಅದು. ಆದ್ದರಿಂದಲೇ ಅದು ಪ್ರತಿ ಪ್ರಾಪಂಚಿಕ ವಸ್ತುವಿನಿಂದ ದೂರವೂ ಇದೆ (ಬದಲಾವಣೆ ಪಕ್ಕಾಗದಷ್ಟು ದೂರದಲ್ಲಿ) ಮತ್ತು ಹತ್ತಿರದಲ್ಲೂ ಇದೆ (ಬದಲಾವಣೆ ತರುವಷ್ಟು ಹತ್ತಿರದಲ್ಲಿ). ಅದು ಎಲ್ಲ ವಸ್ತುಗಳ ಅಸ್ಮಿತೆಯೂ ಹೌದು. ವಿಶ್ವದ ಅಸ್ಮಿತೆಯೇ ಆಗಿರುವುದರಿಂದ ವಸ್ತುಗಳ ನಡುವೆಯೂ ಅದು ಇದೆ,ಹೊರಗೂ ಇದೆ.

ವಿಶ್ವ ಅಸ್ಮಿತೆಯೊಂದಿಗೆ ಹೀಗೆ ನಮ್ಮೆಲ್ಲರ ಒಡನಾಟ. ನಾವೆಲ್ಲರೂ ಆ ವಿಶ್ವಚೇತನದಲ್ಲಿದ್ದೇವೆ.  ಈ ಮಂತ್ರ ಸಾಮಾಜಿಕವಾಗಿ ಬಹು ಮುಖ್ಯ ತತ್ವವನ್ನು ತಿಳಿಸುತ್ತದೆ. ನಾವು ಯಾವ ಪ್ರಾಣಿಗಳನ್ನೂ ಹಿಂಸಿಸಬಾರದು. ತಾನು ತನ್ನ ಬಗ್ಗೆ  ಇವರೆಲ್ಲ ಹೇಗೆ ನಡೆದುಕೊಳ್ಳಬೇಕೆಂದು ಬಯಸುವೆನೋ ಆ ರೀತಿಯಲ್ಲಿ ಅವರುಗಳ ಬಗ್ಗೆ ನಡೆದುಕೊಳ್ಳ ಬೇಕು. ಆಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಮ್ತತು ಸಮೃದ್ಧಿ ನೆಲಸುತ್ತದೆ.

ಎಲ್ಲ ಪ್ರಾಣಿಗಳೂ ತಾನು ಯಾವುದರಿಂದ ಸುಖ ಅನುಭವಿಸುತ್ತೇನೋ ಅದರಿಂದ ಸುಖ ಅನುಭವಿಸುತ್ತವೆ, ತಾನು ಯಾವುದರಿಂದ ದುಖ ಅನುಭವಿಸುತ್ತೇನೋ ಅದರಿಂದ ದುಃಖ ಅನುಭವಿಸುತ್ತವೆ ಎಂಬುದನ್ನು ತಿಳಿದು ವರ್ತಿಸಲು ಪ್ರಾರಂಭಿಸಿದರೆ ವ್ಯಕ್ತಿ ಇಡೀ ಸಮಾಜವನ್ನು ಒಂದಾಗಿ ನೋಡುತ್ತಾನೆ. ಇಡೀ ಸಮಾಜವು ಅಭಿವೃದ್ಧಿಯಾದರೆ ತನ್ನ ಅಭಿವೃದ್ಧಿಯನ್ನು ನೋಡಿ ಕರುಬುವವರಾರೂ ಇರುವುದಿಲ್ಲ. ಆದ್ದರಿಂದ ಯಾರಿಗೂ ಶೋಕವಿರುವುದಿಲ್ಲ.

ಐದನೆಯ ಮಂತ್ರವು ವಿಶಿಷ್ಟವಾದುದು. ಇದು ಸಾಮಾಜಿಕ ಅಸ್ಮಿತೆಯ ಲಕ್ಷಣಗಳನ್ನು ಹೇಳುತ್ತಿದೆ. ಅದು ಆವೃತವಾದುದು. ಎಂದರೆ ಸಮಾಜದ ಕಣಕಣದಲ್ಲಿಯೂ ಅದು ತನ್ನ ಅಸ್ತಿತ್ವವನ್ನು ತೋರುವಂತಹುದು - ಒಬ್ಬ ವ್ಯಕ್ತಿಯ ಪ್ರತಿ ಜೀವಕೋಶದಲ್ಲಿಯೂ ಜೀವವಿರುವಂತೆ.  ಈ ಮಂತ್ರದಲ್ಲಿ ಸಾಮಾಜಿಕ ಅಸ್ಮಿತೆಯನ್ನು ಬಿಳಿಯದು ದೇಹವಿಲ್ಲದ್ದು ಊನರಹಿತವಾದುದು ಪಾಪರಹಿತ ವಾದುದು ಶುದ್ಧವಾದುದು ಮತ್ತು  ಕೆಡುಕಿನಿಂದ ಪ್ರಭಾವಿತವಾಗದ್ದು ಎಂದು ವರ್ಣಿಸಲಾಗಿದೆ. ಒಂದು ಸಮಾಜದಲ್ಲಿ ಒಬ್ಬ ಕಳ್ಳನಿದ್ದರೆ ಅದು ಇಡೀ ಸಮಾಜ ಕಳ್ಳರ ಸಮಾಜವೆಂದಾಗುವುದಿಲ್ಲ; ಸ್ಥಾಲೀ ಪುಲಾಕ ನ್ಯಾಯ ಇಲ್ಲಿ ಅನ್ವಯಿಸುವುದಿಲ್ಲ.  ಸಮಾಜವು ಪಾಪ ತಾಕದ್ದು, ಶುದ್ಧವಾದುದು ಮತ್ತು ಆದ್ದರಿಂದ ಬಿಳಿಯದು.  ಬಿಳಿಯದು ಶುದ್ಧ ಎಂಬ ರೂಪಕ ಇಲ್ಲಿ ಬಳಕೆಯಾಗಿದೆ. ವ್ಯಕ್ತಿ ಸಮಾಜದೊಡನೆ ಬೆರೆಯುತ್ತ, ಒಡನಾಡುತ್ತ ಸಮಾಜದಿಂದ ಕಲಿಯುತ್ತ ಸಮಾಜಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತ ತನ್ನ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣನಾಗಬೇಕು. 

ಆರು, ಏಳು ಮತ್ತು ಎಂಟನೆಯ ಮಂತ್ರಗಳು ಸಾಮಾಜಿಕ ಅಸ್ಮಿತೆಯ ಲಕ್ಷಣಗಳನ್ನು ನಿರ್ವಚಿಸುತ್ತವೆ ಮತ್ತು ವ್ಯಕ್ತಿ ಸಮಾಜದಲ್ಲಿ ನಡೆದುಕೊಳ್ಳ ಬೇಕಾದ ರೀತಿಯನ್ನು ವಿವರಿಸುತ್ತವೆ.  ಸಾಮಾಜಿಕ ಅಸ್ಮಿತೆಯ ಎರಡು ಮುಖ್ಯ ಲಕ್ಷಣಗಳೆಂದರೆ ಅದರ ಸ್ವತಂತ್ರ ಅಸ್ತಿತ್ವ ಮತ್ತು ಲೋಕದ ಎಲ್ಲ ಜೀವಿಗಳು ಮತ್ತು ವಸ್ತುಗಳಲ್ಲಿ ವ್ಯಾಪ್ತ. ಅದು ಅಮೂರ್ತವಾಗಿದ್ದರೂ ಸಮುದಾಯದ ಜ್ಞಾನ ಮತ್ತು ವಿಚಾರಶೀಲತೆ ತನ್ನದೇ ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ; ಆದ್ದರಿಂದಲೇ ಅದು ಸರ್ವ-ಚಿಂತನ-ಸ್ವರೂಪಿ. ಸಮಾಜದಲ್ಲಿ ಒಬ್ಬೊಬ್ಬ ವ್ಯಕ್ತಿ ಯಾವುದೋ ರೀತಿಯಲ್ಲಿ ಕಳಂಕಿತನಾಗಿರಬಹುದು ಆದರೆ ಒಟ್ಟಾರೆ ಸಮಾಜವು ಶುದ್ಧವಾದುದು ಪಾಪರಹಿತವಾದುದು ಯಾವುದೇ ಊನ ವಿಲ್ಲದ್ದು. ಸಮಾಜವು ನರನಾಡಿಗಳಿಲ್ಲದೆ ಅಗೋಚರವಾಗಿದ್ದರೂ ಎಲ್ಲ ಜೀವಿಗಳೂ ಸಮಾಜಕ್ಕೆ ಅಧೀನ.  ಯಾವ ವ್ಯಕ್ತಿ ಸರ್ವ ಜೀವಿಗಳನ್ನು ತನ್ನಂತೆಯೇ ಬಗೆದು ಅವರ ಸುಖಗಳಲ್ಲಿ ತನ್ನ ಸಂಭ್ರಮವನ್ನು ಕಾಣುತ್ತಾನೆ ಮತ್ತು ಅವರ ಸಂಕಷ್ಟಗಳನ್ನು ತನ್ನದೆಂದೇ ಅನುಭವಿಸಿ ಅವರಿಗೆ ಸಹಾಯ ಮಾಡಬಲ್ಲ ಅವನು ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳ ಬಲ್ಲ. ಅಂತಹವನು ಶೋಕವನ್ನು ಮೀರಿ ಮನಸ್ಸಿನ ಸಮತೋಲವನ್ನು ಕಾಪಾಡಿಕೊಳ್ಳ ಬಲ್ಲ. ವ್ಯಕ್ತಿಗಳ ಸಿರಿವಂತಿಕೆ ಸಮಾಜದ ಕೊಡುಗೆ. ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಪರಿಶ್ರಮದ ಜೊತೆಗೆ ಅವಕಾಶಗಳು, ಸಹಾಯ ಮತ್ತು ಪರಂಪರೆ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯನ್ನು ನಿರ್ಧರಿಸುತ್ತವೆ.

ಮುಂದಿನ ಮೂರು ಮಂತ್ರಗಳು ವ್ಯಕ್ತಿ ವಿದ್ಯಾವಂತ ಮಾತ್ರನಲ್ಲ, ಪ್ರಜ್ಞಾವಂತನೂ ಆಗಬೇಕಾದ ಅವಶ್ಯಕತೆಯನ್ನು ಬಹಳ ಸ್ಪಷ್ಟವಾಗಿ ತಿಳಿಸಿ ಕೊಡುತ್ತವೆ; ಆಗ ಮಾತ್ರ ಸಮಾಜವು ಸ್ಥಿರವಾಗಿ ಪ್ರಗತಿ ಪಥದಲ್ಲಿರಬಲ್ಲುದು. ಅವಿದ್ಯೆಯನ್ನು ಪೂಜಿಸುವವರು ಕಗ್ಗತ್ತಲೆಯನ್ನು ಪ್ರವೇಶಿಸುವರು. ಕತ್ತಲೆಯು ಅಜ್ಞಾನ, ಕತ್ತಲೆಯು ಸಂಕಷ್ಟ ಎಂಬ ರೂಪಕಗಳಿವೆ. ವಿದ್ಯೆಯನ್ನು ಕಲಿಯದೆ ಅವಿದ್ಯೆಯೇ ಸಾಕು ಹಣ ಸಂಪಾದನೆಗೆ ಎಂದುಕೊಂಡಿರುವವರು ಅಜ್ಞಾನದಲ್ಲಿ (ದಟ್ಟ ಕತ್ತಲೆಯಲ್ಲಿ) ಬೀಳುತ್ತಾರೆ ಮತ್ತು ಅದರ ಸಂಕಷ್ಟಗಳನ್ನು ಅನುಭವಿಸುತ್ತಾರೆ. ಒಂದು ವಿದ್ಯೆಯನ್ನು ಕಲಿತು ವಿದ್ಯಾವಂತರೆನಿಸಿಕೊಂಡವರೂ ಸುಖವನ್ನು ಅನುಭವಿಸುವರು ಮತ್ತು ಸಮಾಜದಲ್ಲಿ ಸುಖ ನೆಲೆಸಲು ಕಾರಣರಾಗುವರು ಎಂದೇನೂ ಇಲ್ಲ. ವಿದ್ಯಾವಂತರೆನಿಸಿಕೊಂಡವರೂ ಕೂಡ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಅದಕ್ಕಿಂತ ಘೋರ ಸಂಕಷ್ಟಕ್ಕೆ ಸಿಲುಕುತ್ತಾರೆ. ಉದಾಹರಣೆಗೆ ಅಣುವಿಜ್ಞಾನಿಯೊಬ್ಬ ವಿದ್ಯಾವಂತನೇ. ಆದರೆ ಅವನು ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಅಣುಬಾಂಬು ಸ್ಫೋಟಿಸಿ ಪ್ರಪಂಚನಾಶಕ್ಕೆ ಕಾರಣವಾಗಬಹುದು. 

ಆದರೆ ವಿದ್ಯೆಯಿಂದ ಒದಗುವ ಕತ್ತಲೆ ಬೇರೆ ಅವಿದ್ಯೆಯಿಂದ ಒದಗುವ ಕತ್ತಲೆ ಬೇರೆ. ವಿದ್ಯೆಯಿಂದ ಒದಗುವ ಕತ್ತಲೆಯೇ ಭೀಕರವೂ ಆಗಿರಬಹುದು. ವಿದ್ಯೆಯನ್ನೂ ಅವಿದ್ಯೆಯನ್ನೂ ಎರಡನ್ನೂ ಸರಿಯಾಗಿ ತಿಳಿದವರು ಅವಿದ್ಯೆಯಿಂದ ಸಾವನ್ನು ಎಂದರೆ ಅಧಃಪತನವನ್ನು ಮೀರಿ ವಿದ್ಯೆಯಿಂದ ಅಮೃತತ್ವವನ್ನು ಅಂದರೆ ಪ್ರಗತಿಯ ಅಂಶಗಳನ್ನು ಪಡೆಯುತ್ತಾರೆ. ವ್ಯಕ್ತಿ ಪ್ರಜ್ಞಾವಂತನಾಗಿ ವಿಕಾಸಿತನಾಗಬೇಕೆಂಬುದು ಈ ಮಂತ್ರಗಳು ನಿರೂಪಿಸುತ್ತವೆ.

ಇದೇ ರೀತಿ ಉತ್ಪಾದಕ ಕಾರ್ಯ ಅನುಸರಿಸುವವರು ಮತ್ತು ವಿನಾಶಕ ಕಾರ್ಯಗಳನ್ನು ಅನುಸರಿಸುವವರ ಬಗ್ಗೆಯೂ ವಿವರಣೆ ಇದೆ.ಈ ವಿವರಣೆಯು ೧೨ ೧೩ ೧೪ನೆಯ ಮಂತ್ರಗಳಲ್ಲಿ ಸ್ಫುಟವಾಗಿ ಬರುತ್ತದೆ. ʼವಿನಾಶಕ ಕಾರ್ಯಗಳಲ್ಲಿ ತೊಡಗಿರುವವರು ಹೇಗೂ ಕತ್ತಲೆಯ ಲೋಕಗಳನ್ನು ಪ್ರವೇಶಿಸುತ್ತಾರೆ. ಉತ್ಪಾದಕ ಅಥವ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿರುವವರೂ ಅದಕ್ಕಿಂತ ದಟ್ಟವಾದ ಕತ್ತಲ ಲೋಕವನ್ನು ಪ್ರವೇಶಿಸುತ್ತಾರೆ. ಆದರೆ ಈ ಎರಡೂ ಕತ್ತಲೆಗಳು ಬೇರೆ ಬೇರೆ. ಹಾಗೆಂದು ಎರಡನ್ನೂ ತಿಳಿದವರಿಂದ ಕೇಳಿದ್ದೇವೆ. ಎರಡನ್ನೂ ತಿಳಿದವರು ವಿನಾಶಕ ಕಾರ್ಯಗಳ ಜ್ಞಾನದಿಂದ ಮೃತ್ಯುವನ್ನು ಮೀರಿ ಸೃಜನಾತ್ಮಕ ಕಾರ್ಯಗಳ ಮೂಲಕ ಅಮರತ್ವವನ್ನು ಪಡೆಯುತ್ತಾರೆʼ - ಇದು ಮಂತ್ರದಲ್ಲಿ ಸ್ಥೂಲವಾಗಿ ಬಂದಿರುವ ವಿವರಣೆ.ಬಾಂಬನ್ನು ಸಿಡಿಸುವವನು ವಿನಾಶಕ ಕಾರ್ಯ ತತ್ಪರ; ಅವನು ಸಂಕಷ್ಟಗಳ ದುಃಖದ ಲೋಕದಲ್ಲಿ ಬಳಲುತ್ತಾನೆ. ಬಾಂಬನ್ನು ತಯಾರಿಸುವವನು ಉತ್ಪಾದಕ ಕಾರ್ಯ ತತ್ಪರನಾದರೂ ಸುಖದ ಲೋಕ ಭಾಜನನಲ್ಲ; ಕತ್ತಲೆಯ ಲೋಕವೇ ಅವನಿಗೆ ಗತಿ. ಸಮಾಜಕ್ಕೆ ಉಪಯುಕ್ತ ವಸ್ತುಗಳನ್ನು ತಯಾರಿಸಲು ಮತ್ತು ಸಮಾಜದ ಏಳಿಗೆಗಾಗಿ ಅದನ್ನು ಬಳಸಲು ಅರಿತವನು ಸುಖ ಸಂತೋಷಗಳ ಲೋಕಕ್ಕೆ ಸಲ್ಲುತ್ತಾನೆ.

ಬದುಕಿನಲ್ಲಿ ಇಂತಹ ವೈರುಧ್ಯಗಳು ಹಲವು ಎದುರಾಗುತ್ತವೆ. ಜ್ಞಾನ ಮತ್ತು ಅಜ್ಞಾನ, ದಯೆ ಮತ್ತು ಕ್ರೌರ್ಯ, ಹಿಂಸೆ ಮತ್ತು ಅಹಿಂಸೆ ಇತ್ಯಾದಿ. ಇಂತಹ ಸಂದರ್ಭಗಳಲ್ಲೆಲ್ಲ ಪರ ಮತ್ತು ವಿರೋಧೀ ನಿಲುವುಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳ ಬೇಕು. ಏಕಪಕ್ಷೀಯ ನಿರ್ಣಯಗಳು ತೊಂದರೆ ನೀಡುವ ಸಂಭವವಿದೆ. ಈ ವಿಷಯವನ್ನು ಇಲ್ಲಿ ಹೇಳಿರುವ ರೀತಿ ವಿಶಿಷ್ಟವಾಗಿದೆ.

ಇಲ್ಲಿಂದ ಮುಂದಿನ ಆರು ಮಂತ್ರಗಳು ಪ್ರಾರ್ಥನಾ ಸ್ವರೂಪದವು. ಇವೆಲ್ಲ ಬೆಳಕನ್ನು ಕುರಿತ ಪ್ರಾರ್ಥನೆಗಳು ಎನ್ನಬಹುದು. ಜ್ಞಾನದ, ಸುಖದ ಮತ್ತು ನಲಿವುಗಳ ದೇವನನ್ನು ಕುರಿತ ಪ್ರಾರ್ಥನೆಗಳು.  ಮೊದಲೆರಡು ಪೂಷನ್‌ ಕುರಿತವು. ಮೊದಲನೆಯದು ಬಹಳ ವಿಶಿಷ್ಟವಾದುದು, ಝಗಝಗಿಸುವ ಪ್ರಪಂಚದ ತೋರಿಕೆಯ ಹಿಂದೆ ಅಡಗಿದೆ ನಿಜವಾದ ಸತ್ಯ, ಈ ತೋರಿಕೆಯನ್ನು ತೆಗೆದು ಹಾಕಿದರೆ ಮಾತ್ರ ನಮಗೆ ಸತ್ಯದ ಅರಿವಾಗುತ್ತದೆ.  ಸಮಾಜದ ಅಸ್ಮಿತೆಯು ವ್ಯಕ್ತಿಗತ ಅಸ್ಮಿತೆಗಿಂತ ದೊಡ್ಡ ಸತ್ಯ. ಸಂತೆ, ಸಿನೆಮಾ, ಮಾಲುಗಳು ಇತ್ಯಾದಿ ಕಣ್ಣು ಕೋರೈಸುವ ಅಸ್ತಿತ್ವಗಳು. ಇವು ದಿನನಿತ್ಯ ನಮ್ಮ ಗಮನವನ್ನೆಲ್ಲ ಸೆಳೆಯುತ್ತವೆ ಮತ್ತು ಸಮಾಜದ ಅಸ್ಮಿತೆ ಎಂಬ ಈ ದೊಡ್ಡ ಸತ್ಯವನ್ನು ಕಾಣದ ಹಾಗಿಡುತ್ತವೆ. ಇಂತಹ ಮೇಲ್ಪದರಿನಿಂದ ಒಳ ಹೊಕ್ಕು ಸಮಾಜದ ಮಿಡಿತವನ್ನು ನಾವು ಗ್ರಹಿಸಬೇಕು. ಅದಕ್ಕೆ ತಕ್ಕಂತೆ ನಡೆದುಕೊಂಡರೆ ಸಮಾಜದ ಬೆಳವಣಿಗೆಗೆ ತನ್ ಕೊಡುಗೆಗಳನ್ನು ನೀಡುತ್ತಾ ವ್ಯಕ್ತಿ ಸುಖ ಸಂತೋಷಗಳನ್ನು ಪಡೆಯಬಹುದು.‌ ಆದ್ದರಿಂದೀ ಮೇಲ್ಪದರಿನ ಸೆಳೆತಗಳ ಮುಚ್ಚಳವನ್ನು ತೆಗೆದು ಸರಿಸು ಎಂಬುದು ಪ್ರಾರ್ಥನೆ.

ಹುಟ್ಟು (ಪ್ರಾಜಾಪತ್ಯ), ಸಾವು (ಯಮ), ಬದುಕು (ಸೂರ್ಯ) ಈ ಎಲ್ಲವು ಆ ಒಟ್ಟು ಅಸ್ಮಿತೆಯ (ಏಕರ್ಷಿ) ಭಾಗ. ಇವೆಲ್ಲವನ್ನೂ ಕಾಣಲು ಸಾಧ್ಯವಾಗುವಂತೆ ಜ್ಷಾನದ ಕಿರಣಗಳು ಹರಡಲಿ ಎಂಬ ಪ್ರಾರ್ಥನೆ ಪೂರ್ವಾರ್ಧ ಮಂತ್ರದಲ್ಲಿದೆ. ಅಂದರೆ ಇವುಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಹುಟ್ಟು-ಸಾವು-ಬದುಕುಗಳ ನಡುವೆ ಒಂದು ಸಮತೋಲವಿದೆ. ಈ ಸಮತೋಲವನ್ನು ಕಾಯ್ದುಕೊಳ್ಳುವುದು ಅಗತ್ಯ. ಅಲ್ಲದೆ ಹುಟ್ಟ ಸಾವುಗಳು ಹೇಗೆ ಪ್ರಮುಖ ಘಟನೆಗಳೋ ಹಾಗೆ ಬದುಕಿನ ಪ್ರತಿಹೆಜ್ಜೆ ಒಂದೊಂದು ಮುಖ್ಯ ಘಟನೆಯಿಂದಾಗಿದೆ. ಅವುಗಳನ್ನು ಹಾಗೆ ಹಾಗೆ ಸ್ವೀಕರಿಸುತ್ತಾ ಸಾಗುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ವ್ಯಕ್ತಿ ಇವುಗಳನ್ನು ಅರ್ಥ ಮಾಡಿಕೊಂಡು ಬದುಕು ಸಾಗಿಸುವುದರಲ್ಲಿ ಸಂಭ್ರಮ, ಸಾರ್ಥಕತೆ ಮತ್ತು ಸಂತೋಷಗಳು ಅಡಗಿವೆ. ಇವುಗಳ ಸಮಗ್ರತೆಯ ಮತ್ತು ಪರಸ್ಪರ ಸಂಬಂಧಗಳ ಅರಿವಾಗುವಂತೆ ಒಟ್ಟು ಜ್ಞಾನ ದೊರಕಲಿ ಎಂಬ ಪ್ರಾರ್ಥನೆ ಮಂತ್ರದ ಉತ್ತರಾರ್ಧದಲ್ಲಿದೆ. ಸಮಾಜವು ಇಂತಹ ಒಟ್ಟು ಅಸ್ಮಿತೆಯನ್ನು ಹೊಂದಿರುದರಿಂದಲೇ ಅದರ ನರಳಿಕೆ ನನ್ನದಾಗುತ್ತದೆ; ಅದರ ಸಂಭ್ರಮವೂ ನನ್ನದಾಗುತ್ತದೆ; ಅದುವೆ ಸಮಾಜದ ಕಲ್ಯಾಣತಮ ರೂಪ. ಅದಿರುವುದರಿಂದ ನಾನು ಹೀಗಿದ್ದೇನೆ ಎಂಬ ಉದ್ಘೋಷದೊಂದಿಗೆ ಹದಿನೇಳನೆಯಂತ್ರ ಮುಕ್ತಾಯವಾಗುತ್ತದೆ.

ಹದಿನೆಂಟು ಮತ್ತು ಹತ್ತೊಂಬತ್ತನೆಯ ಮಂತ್ರಗಳು ವ್ಯಕ್ತಿಗೆ ದೈಹಿಕ ಅಂತ್ಯವಿರುವುದನ್ನೂ ಮತ್ತು ಕಾರ್ಯಗಳ ರೂಪದಲ್ಲಿ ಶಾಶ್ವತತೆ ಇರುವುದನ್ನೂ ಮಾರ್ಮಿಕವಾಗಿ ನಿರೂಪಿಸುತ್ತವೆ. ಪ್ರಾಣವಾಯುವು ಅಮೃತ ಸಮಾನವಾದುದು. ಅದು ದೇಹದಿಂದ ಹೊರ ದಬ್ಬಲ್ಪಟ್ಟಾಗ ವ್ಯಕ್ತಿಯ ದೇಹವು ಸುಟ್ಟು ಭಸ್ಮವಾಗುವುದು; ಅದಕ್ಕೆ ಮಾತ್ರ ಯೋಗ್ಯವಾದುದು. ಹಾಗೆಂದು ವ್ಯಕ್ತಿಯ ಆಂತರ್ಯವಲ್ಲ - ವ್ಯಕ್ತಿಯ ಚಿಂತನೆಗಳು, ಸದ್ಭಾವ, ಅವನು ಮಾಡಿದ ಕರ್ಮಗಳು ಇತ್ಯಾದಿ ಶರೀರ ಭಸ್ಮವಾದ ಮೇಲೂ ಉಳಿಯುವಂತಹವು. ಆದ್ದರಿಂದ ಇದ್ದಾಗ ಸಚ್ಚಿಂತನೆ ಸತ್ಕರ್ಮಗಳನ್ನೇ ಮಾಡತಕ್ಕದ್ದು. ಹತ್ತೊಂಬತ್ತನೆಯ ಮಂತ್ರದಲ್ಲಿ ವ್ಯಕ್ತಿ ಸಮಾಜದಲ್ಲಿ ತಾನು ಮಾಡಿದ ಕಾರ್ಯಗಳ ಸ್ಮರಣೆ ಇರುವಂತೆ ಮಾಡೆಂದು ಪ್ರಾರ್ಥಿಸುತ್ತಾನೆ.

ಇಪ್ಪತ್ತನೆಯದು ಉಪನಿಷತ್ತಿನ ಕೊನೆಯ ಮಂತ್ರ. ಇದರಲ್ಲಿ ಅಗ್ನಿರೂಪಕಗಳನ್ನು ಕವಿ ಬಳಸಿದ್ದಾನೆ. ಕಲ್ಪನೆಯ ಕಿಡಿ ಹೊತ್ತಿಸುವುದು, ಮನಸ್ಸಿನಲ್ಲಿ ಮಿಂಚು ಹರಿಯುವುದು, ಇನ್ನೊಬ್ಬರಿಗಾಗಿ ಬೆಳಕಾಗುವುದು - ಇಂತಹ ಕಡೆಯಲ್ಲೆಲ್ಲ ಅಗ್ನಿ ರೂಪಕವನ್ನು ಕಾಣುತ್ತೇವೆ. ಕಿಡಿ, ಮಿಂಚು, ಬೆಳಕು ಇವೆಲ್ಲ ಅಗ್ನಿಯ ರೂಪಗಳು. ಇಲ್ಲೆಲ್ಲ ಬುದ್ಧಿ ಎಂಬುದರ ಬದಲಾಗಿ ಈ ಪದಗಳನ್ನು ಬಳಸಲಾಗಿದೆ. ಅಂದರೆ ಅಗ್ನಿಯು ಬುದ್ಧಿ ಎಂಬುದನ್ನು ಇಲ್ಲೆಲ್ಲ ರೂಪಕವಾಗಿ ಬಳಸಿದೆ. (ಅಗ್ನಿಯು ಊರಿಗೆ ಊರನ್ನೇ ನುಂಗಿ ಹಾಕಿತು, ಬೆಂಕಿಯ ಅನಾಹುತಕ್ಕೆ ಅವನು ಬಲಿಯಾದ - ಇಂತಹ ಪ್ರಯೋಗಗಳೂ ಇವೆ. ಇಂತಹ ಕಡೆ ಅಗ್ನಿಯೊಂದು ಹಸಿದ ಪ್ರಾಣಿ ಎಂಬ ರೂಪಕ ಬಳಕೆಯಾಗಿದೆ. ಅದನ್ನು ಇಲ್ಲಿ ಪರಿಗಣಿಸಿಲ್ಲ). ಈ ರೂಪಕದಿಂದ ಕೊನೆಯ ಮಂತ್ರವು ಸುಲಭವಾಗಿ ಅರ್ಥವಾಗುತ್ತದೆ. ಸರಿಯಾದ ದಾರಿಯಲ್ಲಿ ನಮ್ಮ ಯೋಚನೆಗಳನ್ನು ನಾವು ಹರಿಯಗೊಡಬೇಕು. ಹೆಚ್ಚು ಸಂಪದ್ಭರಿತ ಜೀವನಕ್ಕೆ ಹಾಗೆ ನಾವು ಸಾಗಬೇಕು. ಉಳಿದ ಸಾಲುಗಳು ಸ್ವಯಂಸ್ಪಷ್ಟವಾಗುತ್ತವೆ.

ಒಟ್ಟಿನಲ್ಲಿ ಈಶೋಪನಿಷತ್ತು ಅಧ್ಯಾತ್ಮ ವಿಷಯಗಳನ್ನು ಪ್ರತಿಪಾದಿಸುವ ಒಂದು ಪ್ರಮುಖ ಉಪನಿಷತ್ತಾದರೂ ಅದು ಸಾಮಾಜಿಕವಾಗಿಯೂ ತುಂಬ ಪ್ರಸ್ತುತವಾದುದಾಗಿದೆ. ಅದರ ಅಧ್ಯಯನ‌ ವ್ಯಕ್ತಿಯು ಸಮಾಜದಲ್ಲಿ ಹೇಗೆ ಬದುಕ ಬೇಕೆಂಬುದನ್ನೂ ಹೇಗೆ ಬದುಕಿದರೆ ತನಗೂ ಸಮಾಜಕ್ಕೂ ಅನುಕೂಲಕರವೆಂಬುದನ್ನೂ ಘನತರವಾಗಿ ತಿಳಿಸಿಕೊಡುತ್ತದೆ. ಶಾಲಾ ವಿಷಯಗಳಲ್ಲಿ (ಮುಖ್ಯವಾಗಿ ಭಾಷಾ ವಿಷಯಗಳಲ್ಲಿ ಇಂತಹವನ್ನು ಸೇರಿಸಿದರೆ) ಮುಂದಿನ ತಲೆಮಾರಿಗೆ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯೂ ಇಂದಿನ ಬದುಕನಲ್ಲಿ ಮೌಲ್ಯಯುತವಾಗಿ ಬಾಳಲು ಪ್ರೇರಣೆಯೂ ದೊರಕುತ್ತದೆ.

******************************************************************************************



ಕನ್ನಡಕ್ಕಾಗಿ ವೈಗಲ್‌ ಮಾಡಿದ್ದನ್ನು ನೆನೆಯೋಣ

 


ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಗೊಟ್-ಫ್ರೈಡ್-ವೈಗಲ್‌ ಎಂಬ ಜರ್ಮನ್‌ ವಿದ್ವಾಂಸ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕುರಿತು ಎಂಬ ಒಂದು ಪ್ರಬಂಧವನ್ನು ಬರೆದಿದ್ದಾನೆ. ಇದು ೧೮೪೬ರಲ್ಲಿ ಇವನು ಜರ್ಮನ್‌ ವಿದ್ವತ್ಪತ್ರಿಕೆಯೊಂದಕ್ಕೆ ಬರೆದ ಲೇಖನ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಂದ ಪ್ರಥಮ ಲೇಖನಗಳಲ್ಲಿ ಇದೊಂದು. ಆ ಪತ್ರಿಕೆಯಲ್ಲಿ ಇದು ೧೮೪೮ರಲ್ಲಿ ಪ್ರಕಟವಾಯಿತು. ಕನ್ನಡ ಭಾಷೆ ಮತ್ತು ವ್ಯಾಕರಣಗಳ ಬಗ್ಗೆ ಒಂದು ಕಿರು ಪರಿಚಯ ಇದರಲ್ಲಿದೆ. ಇದನ್ನು ಅನಂತರ ಕರೆನ್‌ ಶ್ಕೆರರ್‌ ಎಂಬ ವಿದ್ವಾಂಸ ಇಂಗ್ಲಿಶಿಗೆ ಅನುವಾದಿಸಿ ಪ್ರಕಟಿಸಿದ್ದಾನೆ. ಈ ಪ್ರಬಂಧವು ಮೂವತ್ತು ಪುಟಗಳಷ್ಟು ವಿಸ್ತಾರವಾದುದು.

ಇದೊಂದು ಪುಟ್ಟ ಪ್ರಬಂಧವಾದರೂ ಮಹತ್ವದ್ದು. "ಕಿರಿದರೊಳ್‌ ಪರಿದರ್ಥಮನೆ ಪೇಳ್ವ" ಗುಣ ಇದರಲ್ಲಿ ಘನತರವಾಗಿ ಕಾಣಿಸುತ್ತದೆ. ಇದು ಚಿಕ್ಕದಾದರೂ ಚೊಕ್ಕಟವಾಗಿದೆ; ಇದರಲ್ಲೊಂದು ಬೆರಗುಗೊಳಿಸುವ ಸಮಗ್ರತೆ ಇದೆ, ಒಂದು ಸ್ಪಷ್ಟ ಚಿತ್ರಣವಿದೆ. ಇದೊಂದು ಗಂಭೀರ ಬರಹ. ಆದರೂ ಹಲವು ಸಿದ್ಧಾಂತಗಳು ಮತ್ತು ನಿರೂಪಣೆಗಳು ಪ್ರಥಮ ಬಾರಿಗೆ ಇಲ್ಲಿ ವ್ಯಕ್ತವಾಗಿವೆ. ವಿವರಣೆಯ ವೈಶಾಲ್ಯ ಮತ್ತು ವಿಶ್ಲೇಷಣೆಯ ಆಳ ಈ ಪ್ರಬಂಧದದ ವೈಶಿಷ್ಟ್ಯ. ಇದರಲ್ಲಿ, ಬಹುಶಃ ಆ ಕಾಲದಲ್ಲಿ ಪ್ರಚಲಿತವಿದ್ದಂತೆ ಉದ್ದುದ್ದ ವಾಕ್ಯಗಳಿದ್ದರೂ ಬರಹವು ಸುಂದರವೂ ಗಂಭೀರವೂ ಆಗಿದೆ. ವಸ್ತುವಿನ ವಿಸ್ತಾರ ಹೆಚ್ಚಾಗಿರುವುದರಿಂದ ಒಂದು ಪಕ್ಷಿ ನೋಟದಂತೆ ಕನ್ನಡ ವ್ಯಾಕರಣ ವಸ್ತುವನ್ನೂ ಸಾಹಿತ್ಯ ಚರಿತ್ರೆಯ ಅಂಶಗಳನ್ನೂ ಇಲ್ಲಿ ಪರಿಶೀಲಿಸಿದ್ದಾನೆ.

ಜರ್ಮ್‌ ಭಾಷಾ ಜ್ಞಾನದ ಕೊರತೆಯಿಂದಾಗಿ ಇವನ ಪ್ರಬಂಧವನ್ನು ಅರ್ಥ ಮಾಡಿಕೊಳ್ಳಲು ಮತ್ತು ಬೆಲೆ ಕಟ್ಟಲು ನಾವು ಪ್ರಬಂಧದ ಇಂಗ್ಲಿಷ್‌ ಅವತರಣಿಕೆಯನ್ನು ಅವಲಂಬಿಸಬೇಕಾಗಿದೆ. ಕೆಲವು ಕಡೆ ಓದುಗನಿಗೆ ಅಸ್ಪಷ್ಟತೆ ಮತ್ತು ಗೊಂದಲ ಕಾಡುತ್ತವೆ.  ಇದು ಮೂಲದ ಸಮಸ್ಯೆಯಾಗಿರುವುದಕ್ಕಿಂತ ಭಾಷಾಂತರದ ಅವಾಂತರವಾಗಿರುವುದು ಸಂಭವ. ಉದಾಹರಣೆಗೆ ಇಲ್ಲಿ ja ಎಂಬುದಕ್ಕೆ ʼಅಹುದುʼ ʼಹೌದುʼ ಎಂಬರ್ಥಗಳನ್ನು ಕೊಟ್ಟಿದ್ದು ಆಂಗ್ಲ ಭಾಷೆಯಲ್ಲಿ ಈ ಅರ್ಥ ಹೊಂದುವುದಿಲ್ಲವಾದ್ದರಿಂದ ಓದುಗ ಗೊಂದಲದಲ್ಲಿ ಬೀಳುತ್ತಾನೆ. (ಇಂಗ್ಲಿಶಿನಲ್ಲಿ yes ya yah yea ಇತ್ಯಾದಿ ಪದಗಳು ಈ ಅರ್ಥದಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಗಮನಿಸಬಹುದು).

ಪ್ರಬಂಧದಲ್ಲಿ ಎರಡು ಭಾಗಗಳಿದ್ದು ಮೊದಲನೆಯ ಭಾಗದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಹಲವು ವಿವರಗಳು ಕರಾರು ವಾಕ್ಕಾಗಿಯೂ ಚೊಕ್ಕಟವಾಗಿಯೂ ನಿರೂಪಿತವಾಗಿವೆ. ಎರಡನೆಯ ಭಾಗವು ಕನ್ನಡ ಸಾಹಿತ್ಯಕ್ಕೆ ಮೀಸಲಾಗಿದೆ. ಭಾಷೆಗೆ ಸಂಬಂಧಿಸಿದ ಭಾಗಕ್ಕೆ ಹೋಲಿಸಿದರೆ ಸಾಹಿತ್ಯಕ್ಕೆ ಸಂಬಂಧಿಸಿದ ಭಾಗವು ಪೇಲವವಾಗಿಯೂ, ಅಧ್ಯಯನ ಕೊರತೆಯಿಂದ ಬಳಲುತ್ತಿರುವಂತೆಯೂ, ಜಾಳಾಗಿಯೂ ಭಾಸವಾಗುತ್ತವೆ. ಬರೀ ಪ್ರಮಾಣವೇ ಈ ಅಂಶವನ್ನು ತೋರಿಸುವಂತೆ ಕಾಣುತ್ತದೆ: ಮೊದಲನೆಯ ಭಾಗವು ೨೨ ಪುಟಗಳಷ್ಟು ವಿಸ್ತಾರವಾಗಿದ್ದರೆ ಸಾಹಿತ್ಯಕ್ಕೆ ಸಂಬಂಧಿಸಿದ ವಿವರಗಳ ವಿಸ್ತಾರ ಕೇವಲ ಹತ್ತು ಪುಟಗಳು ಮಾತ್ರ. ನಾರಣಪ್ಪನ ಭಾರತ, ತೊರವೆ ರಾಮಾಯಣ, ಶಬ್ದಮಣಿದರ್ಪಣ ಇಂತಹ ಕೆಲವು ಕೃತಿಗಳ ಮತ್ತು ಕೃತಿಕಾರರ ಹೆಸರುಗಳನ್ನೂ ಹೇಳುವುದರಲ್ಲೇ ಇವನು ತೃಪ್ತಿಪಡುತ್ತಾನೆ. ಅದರಲ್ಲು ಹಲವು ಹೆಸರುಗಳನ್ನು ಹೇಳುವುದರಲ್ಲಿಯೂ ತಪ್ಪುಗಳು ಇಣುಕಿವೆ. ಮಹಾಭಾರತದ ಕವಿಯನ್ನು ನಾರಣನೆಂದೂ ರಾಮಾಯಣದ ಕವಿಯನ್ನು ನರಸಪ್ಪನೆಂದೂ ಇವನು ಹೆಸರಿಸಿದ್ದಾನೆ. ಕೊನೆಯ ಪುಟಗಳಲ್ಲಿ ಮೆಕೆರೆಲನವ್ಯಾಕರಣ ಮತ್ತು ಕೆಲವು ವಿದೇಶೀ ಕೃತಿಕಾರರನ್ನು ಇವನು ಹೆಸರಿಸಿದ್ದಾನೆ. ಇಷ್ಟೆಲ್ಲರನಡುವೆಯೂ ಈ ಭಾಗದಲ್ಲಿ ಒಂದೆರಡು ಕುತೂಹಲಕಾರೀ ಅಂಶಗಳು ಇಲ್ಲಿ ಬಂದಿವೆ, ಉದಾಹರಣೆಗೆ ಶ್ರೀರಂಗಪಟ್ಟಣದ ಕೃಷ್ಣಮಾಚಾರಿಯ ಬಗ್ಗೆ ಇವನ ಮಾತುಗಳನ್ನು ನೋಡಬಹುದು: "ಮದ್ರಸಿನ ಉಚ್ಚ ನ್ಯಾಯಾಲಯದಲ್ಲಿರುವ ಶ್ರೀರಂಗ ಪಟ್ಟಣ ಮೂಲದ ನ್ಯಾಯವಾದಿಯೊಬ್ಬರು ೧೮೩೮ರಲ್ಲಿ ೨೧೬ ಪುಟಗಳ ಉತ್ತಮವಾದ ಹೊಸಗನ್ನಡ ವ್ಯಾಕರಣದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದರ ಎರಡನೆಯ ಭಾಗವು ಹಳಗನ್ನಡವನ್ನು ಕುರಿತದ್ದಗಿರುವುದೆಂದು ಹೇಳಲಾಗಿದ್ದು, ಅದಿನ್ನೂ ಪ್ರಕಟವಾಗ ಬೇಕಾಗಿದೆ" (ಮುಂಬೆಳಗು ಪು೬೩೨). ಹಾಗೆಯೇ ದಾಸ ಸಾಹಿತ್ಯದ ಬಗ್ಗೆ ಇವನಿಗಿರುವ ಮೆಚ್ಚುಗೆ ಉಲ್ಲೇಖಾರ್ಹ: "[ಪ್ರಮುಖ] ಕೃತಿಗಳ ಕಾಲಕ್ಕೆ ಸೇರಿದ, ದರೆ ಅವುಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವುವವೆಂದರೆ ಪರ್ಷಿಯನ್‌ ಘಜಲುಗಳನ್ನು ಹೋಲುವ ಚಿಕ್ಕ ಪದ್ಯಗಳು. ಇವನ್ನು ರಚಿಸಿದವರು ʼದಾಸರುʼ ಎಂಬ ಹೆಸರಿನ ದೈವ ಭಕ್ತರು.  ಇವರಲ್ಲಿ ಹಲವರು ಕೆಳವರ್ಗದಭಾಷೆಗೆ ಅನುವಾದಿಸಿದರೆಂದರೆ ದೂರದ ನಾಡುಗಳ ಸಾಹಿತ್ಯ ಪರಂಪರೆಗಳಿಂದ ಜರ್ಮನಿಯು ಪಡೆದುಕೊಂಡಿರುವ ಅಮೂಲ್ಯ ರತ್ನಗಳ ಸಾಲಿನಲ್ಲಿ ಅವು ಪ್ರಧಾನವಾಗಿ ಪ್ರಕಾಶಿಸುತ್ತವೆ (ಪು ೬೩೨). ೧೮೪೪ರಲ್ಲಿ ಮೊತ್ತ ಮೊದಲ ಬಾರಿಗೆ ಬಾಸೆಲ್‌ ಮಿಶನ್‌ ಒಂದು ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಲು ಪ್ರಯತನ್ಸಿತು ಎಂಬುದನ್ನುಇವನು ಉಲ್ಲೇಖಿಸಿದ್ದಾನೆ (ಪು ೬೩೫). ಇವೆಲ್ಲ ಮೊದಲ ಬಾರಿಗೆ ಉಲ್ಲೇಖಗೊಂಡಿರುವುದು ವೈಗಲನ ಪ್ರಬಂಧದಲ್ಲಿಯೇ.

  ಮೊದಲ ಭಾಗದಲ್ಲಿ ಇವನು ಭಾಷೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಎತ್ತಿ ಹೇಳಿದ್ದಾನೆ. ಭಾಷೆಯ ಬಗ್ಗೆ ಇರುವ ಈ ಪ್ರಥಮ ಪರಿಚ್ಛೇದದಲ್ಲಿ ಕರ್ನಾಟಕ ಪ್ರಕಾಶಿಸುತ್ತವೆದ ಭೌಗೋಲಿಕ ಗಡಿಗಳೂ, ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳ ವಿವರಗಳೂ, ಕನ್ನಡ ಯಾವ ಭಾಷಾ ಕುಟುಂಬಕ್ಕ ಸೇರಿದ್ದೆಂಬಬಗ್ಗೆ ಚರ್ಚೆಗಳು, ಸಂಕ್ಷಿಪ್ತ ವ್ಯಾಕರಣ ವಿವರಗಳೂ ಇಲ್ಲಿವೆ. ಎರಡನೆಯ ಭಾಗದಲ್ಲಿ ಸಾಹಿತ್ಯ ಚರಿತ್ರೆಯ ವಿವರಗಳಿವೆ. ಈ ಪ್ರತಿಯೊಂದನ್ನೂ ಮುಂದೆ ಚರ್ಚಿಸಿದೆ. ವ್ಯಾಕರಣ ವಿಷಯಗಳನ್ನು ಚರ್ಚಿಸುವಾಗ ತದ್ಭವ ತತ್ಸಮಗಳ ವಿಷಯ ಮೊದಲಿಗೆ ಬಂದಿದೆ.ಅನಂತರ ನಾಮಪದ,ಸರ್ವನಾಮ, ಸಂಖ್ಯೆ, ಕ್ರಿಯಾಪದಮತ್ತು ವಾಕ್ಯ ರಚನೆ - ಈ ವಿಷಯಗಳ ಚರ್ಚೆ ಇದೆ. ಆದರೆ ಇವಿಷ್ಟೇ ನಿರೂಪಣೆ ಮತ್ತು ಉದಾಹರಣೆಗಳೊಂದಿಗೆ ಬಂದಿವೆ ಎಂದು ಭಾವಿಸಬಾರದು. ಅಂತರ್ಗತವಾಗಿ ಗುಣವಾಚಕಗಳು, ಕ್ರಿಯಾವಿಶೇಷಣಗಳು, ಕೃದಂತಗಳು, ಸಮಾಸ ಪದಗಳು, ದ್ವಿರುಕ್ತಿಗಳು - ಹೀಗೆ ಕನ್ನಡ ವ್ಯಾಕರಣದ ವಿಭಿನ್ನ ಅಂಶಗಳು ಚರ್ಚೆಯಾಗಿವೆ. ಒಟ್ಟಿನಲ್ಲಿ ಈ ಪ್ರಬಂಧ ಕನ್ನಡ ಭಾಷೆ ಮತ್ತು ವ್ಯಾಕರಣದ ಒಂದು ಕ್ಯಾಪ್ಸೂಲು ಎಂಬಂತೆ ಉಪಯುಕ್ತವಾಗದೆ. ೧೮೧೬ರಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳುನ ಪರಸ್ಪರ ಸಂಬಂಧ ಉಳ್ಳವುಗಳೆಂದೂ ಇವುಗಳನ್ನು ದ್ರಾವಿಡ ಭಾಷೆಗಲೆಂದು ಕರೆಯಬಹುದೆಂದೂ ಎಲ್ಲಿಸ್‌ ಸ್ಥಾಪಿಸಿದ ಮೇಲೆ ಬಹುಶಃ ವೈಗಲನೇ ಈ ವಿಷಯವನ್ನು ಮತ್ತೆ ಎತ್ತಿಕೊಂಡು ಚರ್ಚಿಸಿರುವುದು. ಇದೇ ಪ್ರಬಂಧದಲ್ಲಿ ಎವಾಲ್ಡ್‌, ವಿಲ್ಸನ್‌, ರೀನಿಯಸ್‌ ಇತ್ಯಾದಿ ವಿದ್ವಾಂಸರ ಕೊಡುಗೆಗಳನ್ನು ಪ್ರಸ್ತಾವಿಸಿದ್ದರೂ ಅವುಗಳಲ್ಲಿ ದ್ರಾವಿಡ ಭಾಷೆಗಳ ಏಕತೆಯ ಬಗ್ಗೆ ಹೆಚ್ಚಿನವಿಚಾರಗಳಿಲ್ಲ. ಹಾಗೆ ಇರಬಹುದಾದ ಕೃತಿಗಳು ಲಭ್ಯವಿಲ್ಲ. ಆದರೆ ವೈಗಲ್‌ ತೆಲುಗು ತಮಿಳು ತೆಲುಗುಗಳ ಜೊತೆಗೆ ತುಳು ಮತ್ತು ಮಲಯಾಳಮ್‌-ಗಳನ್ನು ಸೇರಿಸಿ  ಪಂಚ ದ್ರಾವಿಡ ಭಾಷೆಗಳಿವೆ ಎಂದು ಪ್ರತಿಪಾದನೆ ಮಾಡಿದ್ದಾನೆ. ಅಲ್ಲದೆ ಈ ಪ್ರದೇಶದಲ್ಲಿ ಇನ್ನೂ ಹಲವು ಚಿಕ್ಕ ಸಮುದಾಯಗಳ ಭಾಷೆಗಳಿದ್ದು (ಉದಾ, ಕೊಡವ, ಕೊರಗ, ಮಲೆಕುಡಿಯ ಇತ್ಯಾದಿ) ಇವುಗಳೆಲ್ಲವೂ ದ್ರಾವಿಡ ಭಾಷೆಗಳೇ. ಅಷ್ಟೇ ಅಲ್ಲ, ಭಾರತದಾದ್ಯಂತವೂ ಈ ವರ್ಗಕ್ಕೆ ಸೇರಿದ ಹಲವು ಭಾಷೆಗಳಿವೆ ಎಂಬುದನ್ನು ಇವನು ವಿವರಿಸಿದ್ದು ಇವತ್ತಿಗೂ ನಿಜವಾಗಿದೆ. ಹೀಗೆ ಎಲ್ಲಿಸ್‌ ದ್ರಾವಿಡ ಭಾಷಾ ಕುಟುಂಬದ ಅನ್ವೇಷಕನಾದರೆ (ಶ್ರೀಕುಮಾರ್)‌ ದ್ರಾವಿಡ ಭಾಷಾ ಸಾಮ್ರಾಜ್ಯದ ವಿಸ್ತರಣಕಾರ.

ಭೌಗೋಲಕತೆ, ವರ್ಣ ಮಾಲೆ, ಸಂಸಕೃತ ಪದಗಳ ಸ್ವೀಕರಣ, ನಾಮಪದಗಳ ಲಿಂಗ - ವಚನ, ಸರ್ವನಾಮ ಪದಗಳು, ಸಂಖ್ಯೆಗಳು ಮತ್ತು ಭಿನ್ನರಾಶಿಗಳು, ವಾಕ್ಯ ರಚನೆ - ಇವುಗಳಿಗೆ ಸಂಬಂಧಿಸಿದಂತೆ ದ್ರಾವಿಡ ಭಾಷೆಗಳಲ್ಲೆಲ್ಲ ಒಂದು ಏಕರೂಪತೆಯನ್ನು ವೈಗಲ್‌ ಗುರುತಿಸಿದ್ದಾನೆ. ಕರ್ನಲ್‌ ವಿಲ್ಕ್ಸ್‌ ಇವನ ನಿರೂಪಣೆಯನ್ನು ಒಪ್ಪಿ ವೈಗಲ್‌ ಹೇಳಿರುವ ಹಾಗೆ ಕನ್ಯಾಕುಮಾರಿಯಿಂದ ಹಿಡಿದು ಹೆಚ್ಚು ಕಡಿಮೆ ವಿಂಧ್ಯ ಪರ್ವತಗಳ ವರೆಗೆ ದ್ರಾವಿಡ ಭಾಷಾ ಕ್ಷೇತ್ರ. ಅದರಲ್ಲಿ ಬೀದರದಿಂದ ಕೊಯಮುತ್ತೂರಿನವರೆಗಿನ ನಾಡು ಕನ್ನಡಿಗರ ಆವಾಸ ಸ್ಥಾನ. ಇದು ಸ್ಥೂಲವಾಗಿ ಗೋದಾವರಿಯಿಂದ ಕಾವೇರಿವರೆಗಿನ ನಾಡೇ ಆಗಿದೆ. ಹೇಳುವ ರೀತಿ ಮಾತ್ರ ಬೇರೆಯಾಗಿದೆ. ವೈಗಲ್‌ ನಾಡಿನ ಗಡಿಗಳನ್ನು ತಿಳಿಸಲು ನಗರಗಳ ಹೆಸರುಗಳನ್ನೂ ಅಕ್ಷಾಂಶ ರೇಖಾಂಶಗಳನ್ನೂ ಬಳಸಿದ್ದಾನೆ. ಇದರಿಂದ ವಿವರಗಳು ಹೆಚ್ಚು ನಿಖರವಾಗಿ ಮತ್ತು ಭೂಪಟದಲ್ಲಿ ಗುತಿಸಬಲ್ಲ ರೀತಿಯಲ್ಲಿ ಬಂದಿವೆ.

ಎ ಒ ಮತ್ತು ಶಕಟ ರೇಫೆಗಳಿರುವುದು, ಋ, ऌ, ವಿಸರ್ಗ ಮತ್ತು ಮಹಾಪ್ರಾಣಾಕ್ಷರಗಳಿಲ್ಲದಿರುವುದು - ಇವನ್ನು ದ್ರಾವಿಡ ಭಾಷೆಗಳ ವರ್ಣಮಾಲೆಗಳ ಸಾಮಾನ್ಯ ಅಂಶಗಳನ್ನಾಗಿ ಮತ್ತು ಈ ಕುಟುಂಬವನ್ನು ಸಂಸ್ಕೃತದಿಂದ ಪ್ರತ್ಯೇಕಿಸುವಂತಹವಾಗಿ ವೈಗಲ್‌ ಗುರುತಿಸಿದ್ದಾನೆ. ಹೀಗೆ ದ್ರಾವಿಡ ಮತ್ತು ಸಂಸ್ಕೃತ ಭಾಷೆಗಳ ವಿಭಿನ್ನತೆ ಮತ್ತು ವಿಶಿಷ್ಟತೆಗಳನ್ನು ದ್ರಾವಿಡ ಭಾಷಾಶಾಸ್ತ್ರದ ಪ್ರಾರಂಭದ ದಿನಗಳಲ್ಲೇ ತೋರಿಸಿದಂತಾಗಿದೆ. ತಮಿಳು ವರ್ಣಮಾಲೆ ಮತ್ತು ಹಳೆಯ ಮಲಯಾಳಂ ವರ್ಣ ಮಾಲೆಗಳು ದ್ರಾವಿಡ ಗುಣಗಳನ್ನು ಘನತರವಾಗಿ ಉಳಿಸಿ ಕೊಂಡಿರುವುದಾಗಿ ಇವನು ಸಯುಕ್ತಿಕವಾಗಿ ವಿವರಿಸಿದ್ದಾನೆ. 

 ಸಂಸ್ಕೃತ ಪದಗಳನ್ನು ಭಾಷಾ ಬೆಳವಣಿಗೆಗಾಗಿ ಸ್ವೀಕರಿಸಿರುವುದು ಕುಟುಂಬದ ಎಲ್ಲ ಭಾಷೆಗಳಿಗೆ ಸಾಮಾನ್ಯವಾದ ಸ್ವಭಾವ. ಸಂಸ್ಕೃತದಿಂದ ಪದಗಳನ್ನು ಎರವಲು ಪಡೆಯುವಾಗ ಆಗುವ ಧ್ವನಿ ಬದಲಾವಣೆಗಳು ಹೆಚ್ಚು ಕಡಿಮೆ ಏಕ ರೂಪದವಾಗಿದ್ದು ಇವು ಮೊದಲು ಪ್ರಾಕೃತದಲ್ಲಿ ಪದಸ್ವೀಕರಣ ಸಂದರ್ಭದಲ್ಲಿ ರುಪುಗೊಂಡವು ಎಂಬುದು ಇವನ ಅಭಿಪ್ರಾಯ. ಇವೇ ನಿಯಮಗಳೇ ಕನ್ನಡದಲ್ಲಿ ತದ್ಭವಗಳನ್ನು ರೂಪಿಸುವಾಗ ಬಳಕೆಯಾದವು. ಇವನ ಅಭಿಪ್ರಾಯಗಳು ವಾಸ್ತವವಾಗಿವೆ. ಕನ್ನಡದಲ್ಲಿ ಸಂಸ್ಕೃತದಿಂದ ಸ್ವೀಕೃತ ಪದಗಳಿಗೆ ತದ್ಭವಗಳೆನ್ನುತ್ತಾರೆ ಎಂಬುದನ್ನು ಇವನು ಸ್ಪಷ್ಟವಾಗಿ ಹೇಳಿದ್ದಾನೆ. ವ್ಯತ್ಯಾಸಕ್ಕೊಳಗಾಗದೆ ಕನ್ನಡಕ್ಕೆ ಸ್ವೀಕೃತವಾಸ ಪದಗಳೂ ಇವೆಯಾದರೂ "ಹೊರಗಿನ ಪದಗಳನ್ನು ಬಳಸದೇ ಕನ್ನಡದಲ್ಲಿ ಏನನ್ನಾದರೂ ಹೇಳುವುದು ಅಥವ ಬರೆಯುವುದು ಹೆಚ್ಚು ಕಡಿಮೆ ಅಸಾಧ್ಯ" ಎಂಬುದನ್ನು ಇವನು ಭಿಡೆ ಇಲ್ಲದೆ ಹೇಳಿದ್ದನೆ.

ನಾಮಪದಗಳ ಸಂದರ್ಭದಲ್ಲಿ ಸಹಜವಾಗಿ ಕನ್ನಡದಲ್ಲಿ ಸಮಾಸನಾಮಗಳಿಲ್ಲವೆಂಬ, ನಾಮಪದಗಳ ಲಿಂಗವು ತಮಿಳಿನಲ್ಲರುವಂತೆ ಮಾನವ ಮಾನವೇತರ ಎಂಬ ವಿಭಾಗವನ್ನು ಅನುಸರಿಸಿಕೊಂಡು ಮುಂದುವರೆದಿದೆ ಎಂಬ, ಈ ವಿಷಯಗಳ ಮೊದಲ ಪ್ರತಿಪಾದನೆಯಾಗಿರುವುದು ಬಹುಶಃ ಇವನ ಪ್ರಬಂಧದಲ್ಲಿಯೇ. ತನ್ನ ಗುರು ಎವಾಲ್ಡನನ್ನನುಸರಸಿ "ದ್ರಾವಿಡ ಸರ್ವನಾಮಗಳಲ್ಲಿ ಅ ಮತ್ತು ಇ ಎಂಬಿವು ಸಾಮೀಪ್ಯವನ್ನು ಸೂಚಿಸುವುವು" ಎಂದು ಇವನು ಪ್ರತಿಪಾದಿಸಿದ್ದಾನೆ ಮತ್ತು ಇದನ್ನು ಮುಂದೆ ಕಾಲ್ಡ್ವೆಲ್‌ ಕೂಡ ಒಪ್ಪಿ ಮುಂದುವರೆಸಿದ್ದಾನೆ.(ಆದರೆಕಿಟೆಲನ ಅಭಿಪ್ರಾಯವು ಬೇರೆಯಾಗಿದೆ). ಕನ್ನಡದಲ್ಲಿ ಅವನು ಇವನು ಎಂಬ ಸರ್ವನಾಮಗಳ ನಡುವೆ ಉವನು ಎಂಬುದು ಕೂಡ ಇದೆ ಎಂಬುದು ವೈಗಲನ ಇನ್ನೊಂದು ಸ್ವೋಪಜ್ಞ ನಿರೂಪಣೆ.

ಸಂಖ್ಯೆಗಳ ಬಗ್ಗೆ ಇವನು ಕಾಲ್ಡ್ವೆಲನಂತೆ ಅಥವ ಕಿಟೆಲನಂತೆ ಒಂದು ಎರಡು ಇತ್ಯಾದಿ ಪದಗಳು ಕನ್ನಡದಲ್ಲಿ ಹೇಗೆ ಹುಟ್ಟಿಕೊಂಡವು ಎಂಬ ಚರ್ಚೆಗೆ ಹೋಗುವುದಿಲ್ಲ. ಒಂದು ಎರಡು ಇತ್ಯಾದಿ ಹತ್ತರವರೆಗಿನ ಸಂಖ್ಯೆಗಳ ಹೆಸರುಗಳು ಮತ್ತು ಅವುಗಳನ್ನು ಬರೆಯುವ ರೀತಿಗಳನ್ನು ನಿರೂಪಿಸಿದ್ದಾನಲ್ಲದೆ ಅಲ್ಲಿಂದ ಮುಂದಿನ ಸಂಖ್ಯೆಗಳನ್ನು ಹೇಳುವಾಗ ಪೂರ್ವಪದವಾಗಿ ಹತ್ತು ಎಂಬುದನ್ನು ಹಚ್ಚಬೇಕೆಂಬುದನ್ನು ವಿವರಿಸಿದ್ದಾನೆ. ಸಾವಿರ ಸಹಸ್ರ ಎಂಬ ಪದಗಳಲ್ಲೂ ಮತ್ತು ಮುಂದಿನ ಸಂಖ್ಯೆಗಳ ಹೆಸರುಗಳಲ್ಲೂ ಸಂಸ್ಕೃತದ ಸಂವಾದೀ ಪದಗಳಿರುವುದನ್ನು ಇವನು ಗುರುತಿಸಿ ವಿವರಿಸಿದ್ದಾನೆ. ಇದರಿಂದ ಕನ್ನಡ ಮತ್ತು ಸಂಸ್ಕೃತಗಳು ಒಟ್ಟಾಗಿ ಬಾಳುವ ವಿಧಾನವನ್ನು ತೋರಿಸಿದಂತಾಗಿದೆ. ಜೊತೆಗೆ ಉತ್ತರ ಭಾರತದ ಭಾಷಗಳಲ್ಲೆಲ್ಲೂ ಕಂಡುಬರದ ಭಿನ್ನ ರಾಶಿ ಪದ್ಧತಿಯೊಂದು ದ್ರಾವಿಡ ಭಾಷೆಗಳಲ್ಲಿ ಕಂಡು ಬರುತ್ತದೆ ಎಂಬ ಆಶ್ಚರ್ಯಕರವಾದ ಮತ್ತು ವಿಶಿಷ್ಟ ಅಂಶವನ್ನು ಎತ್ತಿ ಹೇಳಿದ್ದಾನೆ. ಕನ್ನಡದಲ್ಲಿರುವ ಭಿನ್ನರಾಶಿಗಳು ಮತ್ತು ಅವುಗಳ ಹೆಸರುಗಳು ಹೀಗಿವೆ: ೧/೨ - ಅರೆ, ೧/೪ - ಕಾಲು, ೧/೮ - ಬೇಳೆ, ೧/೧೬ - ವೀಸ, ೧/೩೨ - ಅರೆವೀಸ, ೧/೬೪ - ಕಾಣಿ ೧/೧೨೮ - ಅರೆಕಾಣಿ, ೧/೨೫೬ - ಗಿಡ್ಡಾಣಿ. ತಮಿಳಿನಲ್ಲಿ ೧/೨೦ ಕ್ಕೆ ಮಾ ಎಂದೂ ತೆಲುಗಿನಲ್ಲಿ ೧/೨೫೬ ಕ್ಕೆ ಪ್ರಿಯ, ೧/೧೦೨೪ ಕ್ಕೆ ಸುರ ಎಂದೂ ಹೆಸರುಗಳಿರುವುದನ್ನು ತಿಳಿಸಿದ್ದಾನೆ. ಇವುಗಳಲ್ಲಿ ಹಲವು ಪದಗಳು ಈಗ ಬಳಕೆಯಿಂದ ಬಿಟ್ಟು ಹೋಗಿವೆ. ಆದರೂ ಇವು ದಾವಿಡ ಭಾಷೆಗಳ ಏಕತೆಯನ್ನು ತೋರಿಸುವುದರಿಂದ ಭಾಷಾ ದೃಷ್ಟಿಯಿಂದ ಮುಖ್ಯವಾಗಿವೆ. ಇವುಗಳನ್ನೆಲ್ಲ ಮೊದಲ ಬಾರಿಗೆ ದಾಖಲಿಸಿ ಎತ್ತಿ ತೋರಿಸಿದ ಕೀರ್ತಿ ವೂಗಲನಿಗೆ ಸಲ್ಲಬೇಕು.

ಕ್ರಿಯಾಪದಗಳಲ್ಲಿ ಉದಿಂದ ಕೊನೆಗೊಳ್ಳುವುವು ಮತ್ತು ಇ/ಎ ದಿಂದ ಕೊನೆಗೊಳ್ಳುವುವು ಎಂಬ ಎರಡು ಗಣಗಳನ್ನು ಮೊದಲಾಗಿ ತಿಳಿಸಿದ ಮಿಶನರಿಯೂ ಇವನೇ (ಇವುಗಳ ವಿವರಣೆ ಹಳಗನ್ನಡ ವ್ಯಕಾರಣಗಳಲ್ಲೂ ತನ್ನದೇ ರೀತಿಯಲ್ಲಿವೆ). ಭೂತ, ಭವಿಷ್ಯತ್‌, ವರ್ತಮಾನ ಕಾಲಗಳ ಜೊತೆಗೆ ಎರಡನೆಯ ವರ್ತಮಾನ ಅಥವ ಸಂಭಾವನಾರ್ಥ, ಪ್ರೇರಣಾರ್ಥ ಮತ್ತು ನಿಷೇಧಾರ್ಥ ಎಂಬ ರೂಪಗಳನ್ನು ಇವನು ವಿವರಿಸಿದ್ದಾನೆ (ಇವುಗಳ ವಿವರಣೆಯನ್ನೂ ಹಳಗನ್ನಡ ವ್ಯಾರಣಗಳಲ್ಲಿ ಕಾಣಬಹುದು). ಆಧುನಿಕಾ ಕನ್ನಡ ಭಾಷೆಯಲ್ಲಿ ವರ್ತಮಾನ ಕಾಲ ಕ್ರಿಯಾಪದ (ಹಳಗನ್ನಡ ಕಾಲದಲ್ಲಿ ವ್ಯಂಜನಾಂತವಾಗಿದ್ದುದು) ಎಕಾರಾಂತವಾಗುತ್ತದೆ ಎಂಬುದನ್ನು ಇವನು ಸ್ಪಷ್ಟವಾಗಿ ಗುರುತಿಸಿದ್ದಾನೆ. ಮುಂದೆ ಕಿಟೆಲ್‌ ಹಳಗನ್ನಡ ಕಾಲದಲ್ಲಿ ವ್ಯಂಜನಾಂತವಾಗಿದ್ದ ಎಲ್ಲ ಆಖ್ಯಾತ ಪ್ರತ್ಯಯಗಳೂ ಉಕಾರಾಂತವಾಗಿರುವಾಗ ಇದೊಂದು ಮಾತ್ರ ಹೇಗೆ ಎಕಾರಾಂತವಾಯಿತೆಂಬ ಒಗಟನ್ನು ಸಯುಕ್ತಿಕವಾಗಿ ಬಿಡಿಸಿರುವುದು ಈಗ ಇತಿಹಾಸ.

  ಇವನು ಹೇಳಿರುವ ಕ್ರಿಯಾಪದಗಳ ಇನ್ನೆರಡು ಗುಣಗಳು ಕುತೂಹಲಕರವಾಗಿವೆ. ಕನ್ನಡದಲ್ಲಿ ಕರ್ಮಣಿ ಪ್ರಯೋಗವಿಲ್ಲವೆಂಬುದು ಒಂದು. ಇಷ್ಟನ್ನೆ ಃೇಳಿ ಇವನು ನಿಲ್ಲಿಸುವುದಿಲ್ಲ. ಕರ್ತರಿ ಪ್ರಯೋಗದಲ್ಲಿಯೇ ಹೇಳುವುವುದು ಸರಿಯಾದ ಕನ್ನಡ. ಇಂಗ್ಲೀ಼ಿನ ಪ್ರಭಾವದಿಂದ ಪಡು to fall ಎಂಬ ಪದವ್ನನು ಕರ್ಮಣಿ ಪ್ರಯೋಗಕ್ಕಾಗಿಕೆಲವರು ಬಳಸುತ್ತಿದ್ದು ಇದರಿಂದ ಕನ್ನಡದ ಸಹಜ ಅಭಿವ್ಯಕ್ತಿ ಸ್ಪಷ್ಟತೆ ಕೆಟ್ಟಿವೆ ಎಂದು ಅಭಿಪ್ರಾಯಿಸುತ್ತಾನೆ. ಇದು ಭಾಷೆಯ ಸಹಜ ಸ್ವಭಾವವನ್ನು ಉಳಿಸಿಕೊಳ್ಳುವ ಇವನ ಕಾಳಜಿಯನ್ನು ಕನ್ನಡದ ಸೌಂದರ್ಯವನ್ನು ಮೆಚ್ಚುವ ರೀತಿಯನ್ನೂ ತೋರಿಸುತ್ತದೆ. ಇನ್ನೊಂದು ಸಂಸ್ಕೃತ ಮತ್ತು ಹಿಂದೂಸ್ತಾನಿಗಳಿಂದ ಇಸು ಪ್ರತ್ಯಯವನ್ನು ಹಚ್ಚವ ಮೂಲಕ ಯಾವ ಪದವನ್ನು ಬೇಕಾದರೂ ಕನ್ನಡಕ್ಕೆ ಸ್ವೀಕರಿಸಬಹುದೆಂಬ ವಿಚಾರ. ಇದಕ್ಕೆ ಇವನು ನಿಗದಿ ಡಪಿಸಿರುವ ಒರೆ ವ್ಯಾವಹಾರಿಕವಾಗಿ ಮೆಚ್ಚುವಂತಿದೆ: ʼಹೊಸದಾಗಿ ಸ್ವೀಕರಿಸಿದ ಪದಗಳ ಜಪ್ರಿಯತೆ ಹುರುತಿಸಲ್ಪಡುವಿಕೆ ಮತ್ತು ಮೊದಲೇ ಬಳಕೆಯಲ್ಲಿರುವ ಪದಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ ಇವುಗಳನ್ನು ಪರಿಗಣಿಸಬೇಕು ಅಷ್ಟೆʼ. 

ಕನ್ನಡ ವಾಕ್ಯಗಳಲ್ಲಿ ಕರ್ತೃಪದ ಕ್ರಿಯಾಪದಗಳ ಸ್ಥಾನದ ಬಗ್ಗೆ ಇತರ ಪದಗಳ ಅನುಕ್ರಮದ ಬಗ್ಗೆ ನಾಮ ವಿಶೇಷಣ ಕ್ರಿಯಾ ವಿಶೇಷಣಗಳ ಪ್ರಯೋಗದ ಬಗ್ಗೆ ತಿಳಿಸ ಬೇಕಾದ ಅಂಶಗಳನ್ನು ವಾಕ್ಯ ರಚನೆಯ ಪರಿಚ್ಛೇದದಲ್ಲಿ ನಿರೂಪಿಸಿದ್ದಾನೆ. ಇವನು ಕನ್ನಡದಲ್ಲಿ ತುಲನೆಯ ಅಭಿವ್ಯಕ್ತಿಯ ಬಗ್ಗೆ ಹೇಳುವುದು ಗಮನಾರ್ಹವಾಗಿದೆ: "ಜರ್ಮನ್‌ ಭಾಷೆಯಲ್ಲಿ ತುಲನೆಯ (than) (als)ನ್ನು ಅನುಸರಿಸಿ ಅನಂತರ ಬರುವ ಭಾಗವು (ಕನ್ನಡದಲ್ಲಿ) ತುಲನೆಗಿಂತ ಮೊದಲು ಬರುತ್ತದೆ. "ಒಟ್ಟಾಗಿ ಹೇಳುವುದಾದರೆ: ಕೊನೆಯದಾಗಿ ನಿರ್ಣಯವನ್ನು ಹೇಳುವ ಮೊದಲು ಆ ನಿರ್ಣಯದ ಪರಿಕರಗಳನ್ನು ಹೇಳಬೇಕು" ಎಂದು ಹೇಳಿದ್ದಾನೆ. ಇವು ಇವನ ಸ್ವೋಪಜ್ಞ ವಿಚಾರಗಳು. 

ದ್ರಾವಿಡ ಭಾಷೆಗಳನ್ನು ವಿಶ್ವಭಾಷಾ ಕುಟುಂಬಗಳ ಮಧ್ಯೆ ಎಲ್ಲಿಡಬೇಕೆಂಬ ಬಗ್ಗೆ ಕೂಡ ಇವನು ಗಮನ ಹರಿಸಿದ್ದಾನೆ. ಈ ಭಾಷೆಗಳನ್ನು ಟಾರ್ಟೃ ಭಾಷೆಗಳು. ಪೋಲಿನೇಶ್ಯನ್‌ ಭಾಷೆಗಳು, ಜರ್ಮನ್‌ ಭಾಷೆ, ಗ್ರೀಕ್‌ ಭಾಷೆ ಇವುಗಳ ಜೊತೆಗೆಲ್ಲ ಹೋಲಿಸಿ ಇವುಗಳೊಡನೆ ಈ ಭಾಷೆಗಳಿಗೆ ಸಂಬಂಧವಿಲ್ಲವೆಂದು ವಿವರಿಸಿದ್ದಾನೆ. 

ಕೃತಿಯಲ್ಲಿ ದೋಷಗಳೇನು ಇಲ್ಲವೆಂದಲ್ಲ. ತುಳು ಕೆಳಮಟ್ಟದ ಜನರ ಭಾಷೆ ಎಂದು ಇವನು ಹೇಳಿರುವುದು, ಯಾವ ಭಾಷಿಕರ ಬಗ್ಗೆಯೇ ಹೀಗೆ ಹೇಳಿದರೂ, ಒಪ್ಪುವ ಮಾತಲ್ಲ. ಕೊಳ್ಳು ಎಂಬುದಕ್ಕೆ ಖರೀದಿ ಎಂಬ ಅರ್ಥವನ್ನು ಹೇಳಿ ಮಾಡಿಕೊಳ್ಳು ಎಂಬಂತಹ ಕಡೆ to do something in relation to oneself ಎಂದರ್ಥವಾಗುತ್ತದೆ ಎನ್ನುತ್ತಾನೆ. ಆದರೆ ಈ ಸಂದರ್ಭದಲ್ಲಿ ಇದರ ಅರ್ಥ to take ಎಂಬುದಾಗಿರುವುದು ವಿದಿತ. ಹಾಗೆಯೇ ಸಂಸ್ಹಕೃತದ ಪರ್ವ ಎಂಬ ಪದಕ್ಕೆ section of a book ಎಂಬರ್ಥವಿದ್ದು ಕನ್ನಡಕ್ಕೆ ಹಬ್ಬ ಎಂದಾಗ celeberation ಎಂರ್ಥವಾಗುತ್ತದೆ ಎಂಬ ವಿವರಣೆ ದೋಷಪೂರ್ಣವಾಗಿದ್ದು ಪರ್ವ ಎಂಬ ಶಬ್ದದ ಉತ್ಸವ ಎಂಬರ್ಥದಿಂದ ಹಬ್ಬ ಉಂಟಾಗಿದೆ ಎಂಬುದು ಸ್ಪಷ್ಟ. ಉವನು ಎಂಬುದು ಆಧುನಿಕ ಕನ್ನಡದಲ್ಲಿ ಕ್ರಿಯಾಪದಾಂತ್ಯಗಳಲ್ಲಿ ಕಂಡುಬರುವುದಾಗಿ ಇವನು ಹೇಳಿದ್ದಾನೆ. ಭೌಗೋಲಿಕ ವಿವರಗಳಲ್ಲೂ ಸಣ್ಣ ದೋಷಗಳು ಕಾಣಿಸುತ್ತವೆ. ಆದರೆ ಇವೆಲ್ಲವುಗಳು ಕೃತಿಯ ಪ್ರಾಮುಖ್ಯವನ್ನು ಸ್ವಲ್ಪವೂ ಕಡಿಮೆ ಮಾಡುವುದಿಲ್ಲ. 

ದ್ರಾವಿಡ ಭಾಷೆಗಳ ಇತಿಹಾಸದಲ್ಲಿ ಕಾಲ್ಡ್ವೆಲ (೧೮೫೬) ಒಂದು ದೊಡ್ಡ ಹೆಸರು. ದ್ರಾವಿಡ ಭಾಷೆಗಳ ವ್ಯಾಕರಣಗಳ ತುಲನೆ, ವಿಶ್ವಭಾಷೆಗಳ ನಡುವೆ ಅವುಗಳ ಸ್ಥಾನ, ಭಾರತದ ಬೇರೆಬೇರೆ ಭಾಗಗಳಲ್ಲಿರುವ ದ್ರಾವಿಡ ಭಾಷೆಗಳ ನಿರೂಪಣೆ ಇಂತಹವುಗಳಲ್ಲೆಲ್ಲ ಇವನೇ ಆದ್ಯ ಪ್ರವರ್ತಕನೆಂದು ಹಲವರ ನಂಬಿಕೆ. ವಿಷಯಗಳ ವ್ಯಾಪ್ತಿ ವಿಶ್ಲೇಷಣೆಯ ಆಳ ನಿರೂಪಣೆಯ ವಿಸ್ತಾರ ಮತ್ತು ಈ ಸಂಬಂಧದ ಬೃಹತ್-ಗ್ರಂಥದ ಲೇಖನ ಇವುಗಳನ್ನೆಲ್ಲ ದೃಷ್ಟಿಯಲ್ಲಿಟ್ಟು ನೋಡಿದಾಗ ಅದು ನಿಜವೂ ಹೌದು. ಐತಿಹಾಸಿಕವಾಗಿ ಯಾರು ಮೊದಲು ಎಂಬ ಜಿಜ್ಞಾಸೆ ಬಂದಾಗ ಎಲ್ಲಿಸನ (೧೮೧೬) ಹೆಸರನ್ನು ಹೇಳಲಾಗುತ್ತಿದೆ. ಇವರಿಬ್ಬರ ನಡುವೆ ಇದುವರೆಗೆ ಅಗೋಚರನಾಗಿದ್ದ ಕೊಂಡಿಯೇ ವೈಗಲ್‌ (೧೮೪೬). ಎಲ್ಲಿಸ್‌ ಪ್ರಾರಂಭಿಸಿದ ದ್ರಾವಿಡ ಆಭಷಾ ಯಾನವನ್ನು ಸುಸೂತ್ರವಾಗಿ ಮುಂದುವರೆಸುವಲ್ಲಿ ಗೊಟ್ಟ-ಫ್ರೈಡ್‌ ವೈಗಲ್‌ ಮೌಲಿಕ ಕೊಡುಗೆಯನ್ನು ಈ ಪ್ರಬಂಧದ ಮೂಲಕ ನೀಡಿದ್ದಾನೆ. 

ಗೆಳೆಯ ಸುರೇಂದ್ರ ಅಡಿಗರಿಗೊಂದು ಪತ್ರ

 

ಪ್ರೀತಿಯ ಸುರೇಂದ್ರ ಅಡಿಗರೇ,

ನೀವು ಆತ್ಮೀಯವಾಗಿ ಕಳುಹಿಸಿದ ಕನ್ನಡದ ಕಟ್ಟಾಳು ಹುಲಿಯಪ್ಪ ಮೇಸ್ಟ್ರು ತಲುಪಿ ಬಹಳ ದಿನಗಳೇ ಆದವು. ನಿಮಗೆ ಉತ್ತರ ಬರಯಲು ತಡಮಾಡಿದೆ. ನಾನು ಭಗವದ್ಗೀತೆಯ ಒಂದು ಕನ್ನಡ ಅನುವಾದವನ್ನು ಸಿದ್ಧಪಡಿಸುತ್ತಿದ್ದೆ. ಅದರಿಂದ ನನ್ನ ಗಮನವನ್ನು ಬೇರೆಡೆ ತಿರುಗಿಸಲು ಮನಸ್ಸಿರಲಿಲ್ಲ. ಈಗ ಅದು ಪೂರ್ಣಗೊಂಡಿದ್ದು ನಿಮಗೂ ಒಂದು ಪ್ರತಿಯನ್ನು ಕಳುಹಿಸಿರುವೆ. ಬಿಡುವಾದಾಗಲೊಮ್ಮೆ ಓದಿ.

ನಿಮ್ಮ ಈ ಕೃತಿ ಶಿಕ್ಷಣವನ್ನು ಮತ್ತು ಅಧ್ಯಾಪಕನೊಬ್ಬನ ಬದುಕನ್ನು ಸೆರೆಹಿಡಿಯುವ ಕನ್ನಡದ ಏಕಮಾತ್ರ ಕೃತಿ ಎಂದುಕೊಂಡಿದ್ದೇನೆ. (ರಂಗಣ್ಣನ ಕನಸಿನ ದಿನಗಳು ಮತ್ತು ಛಿದ್ರೆ ಶಂಕರಯ್ಯ ಸ್ವಾಮಿ ಅವರು ಬರೆದ ಆತ್ಮ ಚರಿತ್ರಾತ್ಮಕ ಪುಸ್ತಕಗಳನ್ನು ಹೊರತುಪಡಿಸಿದೆ. ನನಗೆ ನೆನಪಿರುವಂತೆ ಇವೆರಡು ಈ ಗಾತ್ರದವಲ್ಲ ಮತ್ತು ಕಾದಂಬರಿಗಳಲ್ಲ). ಬಹು ಹಿಂದೆ ವಿಶ್ವಾಮಿತ್ರರು ಶ್ರೀರಾಮನಿಗೆ ಹೇಗೆ ಕಲಿಸಿದರು ಎಂಬುದನ್ನು ವಸ್ತುವಾಗಿರಿಸಿಕೊಂಡ ಕಾದಂಬರಿಯನ್ನು ಓದಿದ ನೆನಪು. ಆದರೂ ಅದರಲ್ಲಿ ಈ ಆದುನಿಕಯುಗದ ಶಿಕ್ಷಣಕ್ಕೆ ಸಂಬಂಧಿಸಿದ ಯಾವ ಅಂಶಗಳೂ ಬಹುಶಃ ಇರಲಿಲ್ಲ. ಶಿಕ್ಷಣ ಮತ್ತು ಶಿಕ್ಷಕ ಇವರನ್ನೇ ಕೇಂದ್ರವಾಗಿರಿಸಿಕೊಂಡ ಕಾದಂಬರಿಗಳು ಯಾವುದೇ ಭಾಷೆಯಲ್ಲಿ ವಿರಳ. ಬಹು ಹಿಂದೆ ಮೆಕರೆಂಕೊ ಎಂಬ ರಶ್ಯನ್‌ ಶಿಕ್ಷಣ ತಜ್ಙ The Road to Life ಎಂಬ ಪುಸ್ತಕದಲ್ಲಿ ತನ್ನ ಶಿಕ್ಷಣದ ಬಗೆಗಿನ ವಿಚಾರಗಳನ್ನು ಕಥಾ ರೂಪದಲ್ಲಿ ಮುಂದಿಟ್ಟಿದ್ದ. ನಾನು ಮೂಡಿಗೆರೆಯ ಸರಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಅಲ್ಲಿ ಪುಸ್ತಕ ಭಂಡಾರದಿಂದ ಇದರ ಕನ್ನಡ ಅನುವಾದ ಬಾಳ್ವೆಯ ದರ್ಶನ ಓದುವ ಭಾಗ್ಯ ಒದಗಿತ್ತು. ಕಮುನಿಸ್ಟ್‌ ನಾಡಿನಲ್ಲಿದ್ದೂ ಕಮ್ಯುನಿಸಂ-ಅನ್ನು ಒಪ್ಪಿಕೊಂಡೂ ತನ್ನತನವನ್ನು ಬಿಡದ ಇವನ ಛಲ‌ ಮೆಚ್ಚುಗೆಗೆ ಪಾತ್ರ. ಆಗಿನ ಕ್ರಾಂತಿ, ಯುದ್ಧ ಇತ್ಯಾದಿಗಳ ಪರಿಣಾಮವಾಗಿ ಸರಿದಾರಿಯಿಂದ ಆಚೆ ಸರಿದ ಬೀದಿ ರೌಡಿಗಳನ್ನು ಸುಶಿಕ್ಷಿತರನ್ನಾಗಿ ರೂಪಿಸಿದ ಗಾಥೆಯೇ ಬಾಳ್ವೆಯ ದರ್ಶನ. ಅಲ್ಲಿದ್ದಂತಹ ಸರ್ವಾಧಿಕಾರ, ವಿರೋಧವನ್ನು ಸಹಿಸಲಾಗದ ಉಸಿರುಗಟ್ಟಿಸುವ ವಾತಾವರಣ ನಮ್ಮ ದೇಶದಲ್ಲೇನೂ ಇಲ್ಲ. ಆದಾಗ್ಯೂ ಸಮಯ ಕಳೆದಂತೆ (ಏಕೋ ಗೊತ್ತಿಲ್ಲ; ಅಥವ ಇದು ನನ್ನ ಪೂರ್ವಾಗ್ರಹವೂ ಇರಬಹುದು) ಕರ್ತವ್ಯಕ್ಕೆ ಬದ್ದರಾಗದ ಶಿಕ್ಷಕರು ಹೆಚ್ಚುತ್ತಿದ್ದಾರೆ. ಇಂತಹ ಶಿಕ್ಷಕರನ್ನು ಸರಿದಾರಿಗೆ ತರುತ್ತಾ ಉತ್ತಮ ಶಿಕ್ಷಕರನ್ನು ಪ್ರೋತ್ಸಾಹಿಸುತ್ತಾ ಸಾಗಬೇಕಾದ ಮೆಲುಸ್ತುವಾರೀ ಸಂಸ್ಥೆಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅನೈತಿಕತೆ ಗಳಲ್ಲಿ ಮುಳುಗಿದಾಗ ಯಾರದೇ ಅಂತರಾತ್ಮ ಮರುಗದೆ ಇರದು. ನೀವು ಇಂತಹವಕ್ಕೆಲ್ಲ ಕನ್ನಡಿ ಹಿಡಿದಿದ್ದೀರಿ; ಸಮಕಾಲೀನ ಶಿಕ್ಷಣದ ಓರೆಕೋರೆಗಳನ್ನು ಉತ್ತಮವಾಗಿ ದಾಖಲಿಸಿದ್ದೀರಿ. ಜೊತೆಗೆ ಅಧ್ಯಾಪಕ ಸಂಘ, ಕನ್ನಡ ಸಂಘ, ಸಾರ್ವಜನಿಕರ ಸಹಕಾರ ಇತ್ಯಾದಿಗಳ ಉಪಯುಕ್ತತೆ ಅವುಗಳಿಂದೊದಗುವ ಅವ್ಯವಸ್ಥೆ ಇವೂ ಈ ಕೃತಿಯಲ್ಲಿ ಬಿಂಬಿತವಾಗಿವೆ.

ಕಾದಂಬರಿಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳ ಶಿಕ್ಷಣ, ಮಕ್ಕಳ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಸಾಗಾಟ ಜಾಲ ಇಂತಹ ಅಂಶಗಳೂ ಬಂದಿದ್ದು ಸಮಕಾಲೀನ ಶಿಕ್ಷಣದ ಹಲವು ಶಾಖೆಗಳು ದಾಖಲಾಗಿವೆ. "ಪ್ರತಿಯೊಬ್ಬ ಶಿಕ್ಷಕರು ತನ್ನ ಅನುಭವಗಳನ್ನು ಬರೆದಿಡಬೇಕು. ಅದು ಮುಂದಿನವರಿಗೆ ದಾರಿದೀಪವಾಗುತ್ತದೆ"(ಪು ೨೫೩) ಎಂಬ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಯಿತು.  ಪಾಠ ಯೋಜನೆಗಳನ್ನು ನಿಗದಿತ ಮಾದರಿಯಲ್ಲಿಯೇ ಬರೆಯ ಬೇಕು ಎಂದು ಒತ್ತಾಯಿಸುವುದಕ್ಕಿಂತ ದಿನಚರಿ (ಆ ಶಿಕ್ಷಕ ಎಣಿಸಿದಂತೆ) ಬರೆಯುವುದನ್ನು ನಿಯತಗೊಳಿಸುವುದು ಹೆಚ್ಚು ಉಪಯುಕ್ತವಾದೀತು.

ಇದನ್ನು ಒಂದು ಕಾದಂಬರಿ ಎಂದು ನೀವು ಕರೆದಿದ್ದರೂ ಇದರಲ್ಲಿ ನಿಮ್ಮ ಶಾಲಾ ಅನುಭವಗಳು ದಟ್ಟವಾಗಿರುವುದು ನಿಮ್ಮನ್ನು ಬಲ್ಲ ಯಾರಿಗಾದರೂ ತೋರುತ್ತದೆ. ಆದ್ದರಿಂದಲೇ ವಾಸ್ತವಕ್ಕೆ ಒತ್ತು ಜಾಸ್ತಿ; ರೋಚಕತೆಗೆ ಅವಕಾಶವಿಲ್ಲ. ಸಹಜ ನಿರೂಪಣೆ ಜೀವಂತಿಗೆ ತಂದಿದೆ. ಓದುಗರಿಗೆ ಕೂಡಲೇ ಆಪ್ತವಾಗುತ್ತದೆ. ನೀವು ನೀಡಿರುವ ಉಪನಿರ್ದೇಶಕರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೆಲ ವಿವರಗಳಲ್ಲಿ ನನ್ನನ್ನೇ ನಾನು ನೋಡಿಕೊಂಡ ಅನುಭವವಾಯಿತು. ಶಿಕ್ಷಣ ಆಡಳಿತದಲ್ಲಿನ ಅನುಭವಗಳನ್ನು ಹಿನ್ನೋಡುವಂತಾಯಿತು. ಇನ್ನು ಕೆಲ ವಿವರಗಳಲ್ಲಿ ನನ್ನ ಸಹೋದ್ಯೋಗೀ ಮಿತ್ರರ ಪ್ರತಿಬಿಂಬ ಕಾಣಿಸಿತು. ಹೊಸ ಶಾಲೆಗಳ ಪ್ರಾರಂಭದ ಬಗ್ಗೆ ರಾಜಕೀಯ,  ಕನ್ನಡ ಮಾಧ್ಯಮದಲ್ಲಿ ಕಲಿಸಲು ಅನುಮತಿ ಪಡೆದು ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಸ್ಥಾಪಿಸುವ ಸಂಸ್ಥೆಗಳು,ಕನ್ನಡ ಮಾಧ್ಯಮ ಶಾಲೆಗಳಿಗಾಗುವ ನಷ್ಟವನ್ನು ಲೆಕ್ಕಿಸದೆ ಆಂಗ್ಲ ಮಾಧ್ಯ ಮ ಶಾಲೆಗಳನ್ನು ಪ್ರೋತ್ಸಾಹಿಸುವ ಭ್ರಷ್ಟ ವ್ಯವಸ್ಥೆ - ಇಂತಹವೆಲ್ಲ ನಮ್ಮ ಅನುಭವದ ಹರಳುಗಳೇ ಆಗಿವೆ.

ಶಿಕ್ಷಣ ಶಿಕ್ಷಕ ಶಿಕ್ಷಣದಪರಿಣಾಮ ಇಂತಹವುಗಳ ಬಗ್ಗೆ ನಿಮ್ಮ ಕೇಂದ್ರೀಕೃತ ಗಮನವಿದ್ದರೂ ಶಿಕ್ಷಕನ ಸಾಂಸಾರಿಕ ವಿಷಯಗಳನ್ನು ನೀವು ಮರೆತಿಲ್ಲ. ಹುಲಿಯಪ್ಪನ ಮಾವನ ಮನೆ ಅವರ ಸಂಸಾರದಲ್ಲಿ ಒಡಕುದನಿಗಳು ಅವುಗಳನ್ನು ಸರಿಪಡಿಸಲು ಹುಲಿಯಪ್ಪನ ಪ್ರಯತ್ನ ಮತ್ತು ಅದರಲ್ಲಿ ಯಶಸ್ಸು ಇವುಗಳಲ್ಲಿ ಈ ಅಂಶವನ್ನು ಕಾಣಬಹುದು. ಈ ರೀತಿಯ ಬಿರುಕುಗಳಿಗೆ ತಲೆಮಾರಿನ ಚಿಂತನಾ ಭೇದಗಳು ಒಂದು ಕಾರಣವಾಗಿರುವುದನ್ನು ನೀವು ಸರಿಯಾಗಿ ಗುರುತಿಸಿದ್ದೀರಿ. ಪರಿಹರಿಸಿಕೊಳ್ಳಲು ಉಪಾಯಗಳನ್ನೂ ಸೂಚಿಸಿದ್ದೀರಿ. ಸಾಮಾಜಿಕ ಸಾಂಸಾರಿಕ ಸಮಸ್ಯೆಗಳತ್ತಲೂ ಬೆರಳು ಮಾಡಿದ್ದೀರಿ. -ಹಾಗೆಯೇ ಇಂದಿನ ತಾಂತ್ರಿಕೆಯಲ್ಲಿ ಕಳೆದುಹೋಗಿರುವ ಅಂಚೆಯಣ್ಣನ ನೆನಪು ಕೂಡ.

ಸಮಾಜದ ಇತರ ಕ್ಷೇತ್ರಗಳ ಬಗ್ಗೆಯೂ ನೀವು ದೃಷ್ಟಿ ಹರಿಸಿದ್ದೀರಿ. ತಾಲ್ಲೂಕು ಕಚೇರಿ ಅಲ್ಲಿನ ಭ್ರಷ್ಟ ವಿಧಾನಗಳು,  ಅವುಗಳಿಗೆ ಕಾರಣ,  ಸಮರ್ಥ ಆಡಳಿತ ಅವುಗಳನ್ನು ಮೀರಲು ಸಾಧ್ಯವಾಗುದು ಇಂತಹವುಗಳನ್ನು ಚಿತ್ರಿಸಿದ್ದೀರಿ. ಇದೇ ಸಂದರ್ಭದಲ್ಲಿ ಆಡಳಿತದ ಮಾನವಿಯ ಮುಖ ಎಂತಹ ಪವಾಡಗಳನ್ನು ಸಾಧಿಸಬಲ್ಲುದು ಎಂಬುದನ್ನೂ ವಿಶ್ಲೇಷಿಸಿದ್ದೀರಿ. ಭ್ರಷ್ಟ ವಿಧಾನಗಳನ್ನು ಅನುಸರಿಸುವವನು ಮತ್ತಷ್ಟು ಮತ್ತಷ್ಟು ಅದೇ ಜಾಲದಲ್ಲಿ ಸಿಕ್ಕಿಕೊಳ್ಳುವುದನ್ನೂ ತೋರಿಸಿದ್ದೀರಿ. ಪೀತಪತ್ರಿಕೋದ್ಯಮ, ಅದರಿಂದ ಶಿಷ್ಟರಿಗೆ ಆಗುವ ತೊಂದರೆ ಅನ್ಯಾಯ, ಅದರ ವಿರುದ್ಧ ನಿಲ್ಲಬೇಕಾದ ಅಗತ್ಯ ಇಂತಹವೆಲ್ಲ ನಿಮ್ಮ ಈ ಕಾದಂಬರಿಯಲ್ಲಿ  ಸೂಕ್ತವಾಗಿ ಮೂಡಿ ಬಂದಿವೆ. 

ಬರವಣಿಗೆಯ ನಿಮ್ಮ ಶೈಲಿಯಲ್ಲಿ  ವಿಶೇಷವಾಗಿ ಆಪ್ತವಾಗುವ ಗುಣವಿದೆ. ಅಲ್ಲಲ್ಲಿ ನೀವು ಬಳಸುವ ಸಾಮಾನ್ಯ ಹೇಳಿಕೆಗಳೂ ಇದಕ್ಕೆ ಒಂದು ಕಾರಣ. ʼಪಲ್ಲಕ್ಕಿ ಹೊರುವವರು ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುವಂತಾಗಬೇಕುʼ, ʼಒಂದು ನಿಮಿಷದ ಕೋಪ ತರಬಹುದು ಜೀವನವಿಡೀ ಪ್ರಲಾಪʼ - ಇಂತಹವುಗಳನ್ನು ವಿಶೇಷ ಪರಿಣಾಮ ಬೀರುವಂತೆ ನೀವು ಬಳಸಿದ್ದೀರಿ. ಮನೆಯವರನ್ನು ಹೇಗೆ ಆದರಿಸಬೇಕು, ಅತಿಥಿಗಳನ್ನು ಹೇಗೆ ಉಪಚರಿಸಬೇಕು ಎಂಬೆಲ್ಲಕ್ಕೂ ಕೃತಿ ಒಂದು ಕೈಗನ್ನಡಿಯಾಗ ಬಲ್ಲುದು. ಸಹಜವಾಗಿ ಸಮಾಜದಲ್ಲಿರುವ ಹೆಸರು-ಸಂಕ್ಷಿಪ್ತೀಕರಣವನ್ನು ಸ್ವಾರಸ್ಯಾಕರವಾಗಿ ನಿರೂಪಿಸಿರುವುದು ಇನ್ನೊಂದು ಕಾರಣ. ಹೀಗೆ ನರಸಿಂಹಯ್ಯ ʼನರಿʼಯಾಗುತ್ತಾನೆ; ಹುಲಿಯೂರು ಅಯ್ಯಪ್ಪ ʼಹುಲಿಯಪ್ಪʼನಾಗುತ್ತಾನೆ. [ಹಳೆಯ ಕಾಲದ] ಶಿಕ್ಷೆಗಳು, ಅವುಗಳ ಅನಪೇಕ್ಷಣೀಯ ಪರಿಣಾಮಗಳು ಇವುಗಳನ್ನು ಉತ್ತಮ ವಾಗಿ ನಿರೂಪಿಸಿದ್ದೀರಿ. ನಾವೂ ಇಂತಹ ಸನ್ನಿವೇಶವನ್ನು ಹಾದು ಬಂದವರೇ!  ಹೊರೆರಹಿತ ಕಲಿಕೆ, ಗುಣಮಟ್ಟದ ಕಲಿಕೆ, ಕಲಿಕಾ ಸಾಮಗ್ರಿ, ಕಲಿಕಾ ಮೂಲೆ, ಆ ಮೂಲೆಯಲ್ಲಿ ತೆರೆದ ಪುಸ್ತಕಾಲಯ, ತರಗತಿಯನ್ನು ಗುಂಪುಗಾಳನ್ನಾಗಿ ವಿಂಗಡಿಸಿ ಕಲಿಸುವುದು, ನಲಿಕಲಿ ತರಗತಿ, ಶಿಶು ಕೇಂದ್ರಿತ ಶಿಕ್ಷಣ , ನಿರಂತರ ವ್ಯಾಪಕ ಸಮಗ್ರ ಮೌಲ್ಯಮಾಪನ , ಪ್ರತಿಭಾ ಕಾರಂಜಿ ಇತ್ಯಾದಿ ನಮ್ಮ ಯುಗದ ಶಿಕ್ಷಣ ಪರಿಕಲ್ಪನೆಗಳನ್ನು ದಾಖಲಿಸಿದ್ದೀರಿ. ಇಂತಹದಕ್ಕೆಲ್ಲ ನಾವುಗಳು ಸಾಕ್ಷಿಯಾಗಿದ್ದೆವಲ್ಲ ಎಂದು ಆಶ್ಚರ್ಯವಾಗುತ್ತದೆ, ಸಮಾಧಾನವೂ ಆಗುತ್ತದೆ.

ಸುತ್ತೋಲೆ ರಚನಾ ಸಂದರ್ಭವೊಂದರ ಸೃಷ್ಟಿ, ಆ ಸಂದರ್ಭದಲ್ಲಿ ಅಧ್ಯಾಪಕರ ಮತ್ತು ಪರಿವೀಕ್ಷಕರ ಡೈರಿಗಳಿಂದ ಟಿಪ್ಪಣಿಗಳನ್ನು ಓದಿ ಸುತ್ತೋಲೆಯಲ್ಲಿ ಸೇರಿಸುವ ಪರಿ, ಶಾಲೆಗಳ ಹೋಲಿಕೆ ಇಂತಹವೆಲ್ಲ ನಿಮ್ಮ ಕಾದಂಬರೀತಂತ್ರದ ವಿಜಯ ಎನ್ನಬಹುದು. "ಕಾಳೇನಹಳ್ಳಿಯಲ್ಲಿ ಭೌತಿಕ ಕೊರತೆ ಇಲ್ಲ,ಆದರೆ ಮಕ್ಕಳ ಕಲಿಕೆ ಮಿರೀಕ್ಷಿತ ಮಟ್ಟದಲ್ಲಿಲ್ಲ, ಸುಬ್ರಹ್ಮಣ್ಯಪುರದಲ್ಲಿ ಭೌತಿಕ ಕೊರತೆ ಇದೆ.ಆದರೆ ಮಕ್ಕಳ ಕಲಿಕೆ ಉತ್ತಮವಾಗಿದೆ" -ಈ ತರಹದ ತುಲನಾತ್ಮಕ ವಿಶ್ಲೇಷಣೆ ಅಧ್ಯಾಪನ ಹೇಗೆ ಸಾಗಬೇಕೆಂಬುದಕ್ಕೆ ಮಾರ್ಗದರ್ಶಕ ಸೂತ್ರ. ಇದು ಅಭಿಮಾನಿಗಳು, ಶಿಷ್ಯರು ಮತ್ತು ಆಸಕ್ತರು ಹುಲಿಯಪ್ಪ ಮೇಸ್ಟ್ರ ಪಾತ್ರವನ್ನು ಬಿಚ್ಚಿಡುತ್ತಾ ಸಾಗುವಂತೆ ಮಾಡಿರುವ ತಂತ್ರಕ್ಕೆ ಚೆನ್ನಾಗಿ ಹೊಂದುತ್ತದೆ. ಒಂದು ಶಿಕ್ಷಕರ ಸಭೆ ಹೇಗಿರಬೇಕೆಂಬುದನ್ನು ಹಾಲಹಳ್ಳಿ ಶಾಲೆಯಲ್ಲಿ ನಡೆದ ಅಧ್ಯಾಪಕರ ಸಭೆಯ ನೆಪದಲ್ಲಿ ಸ್ಪಷ್ಟವಾಗಿ ವರ್ಣಿಸಿದ್ದೀರಿ.

ನಿಮ್ಮಕಾದಂಬರಿ ಹಲವು ಪ್ರಸ್ತುತ ಹಾಗೂ ಹಲವು ಕಳಚಿಹೋಗುತ್ತಿರುವ ಅನುಭವಗಳ ಕಣಜ. ಮಕ್ಕಳು ಶಾಲೆಗೆ ಬರುವ ಹಾದಿ, ಅದನ್ನು ಖುಷಿಪಡುತ್ತಾ ನಡೆಯುವ ಪರಿ, ದೀಪಾವಳಿಯಲ್ಲಿ ಗದ್ದೆಗಳಿಗೆ ಮತ್ತು ಗೊಬ್ಬರಗುಂಡಿಗೆ ದೀಪವಿಡುವ ಸಂಪ್ರದಾಯ - ಇಂತಹವೆಲ್ಲ ಬಹುಶಃ ನಾವು ಕಳೆದುಕೊಳ್ಳುತ್ತಿರುವ ಮುದಕೊಡುವ ಅಂಶಗಳು. "ಎರಡು ಬಯಲು, ಒಂದು ಗುಡ್ಡೆ, ಒಂದು ಸಣ್ಣ ಹಾಡಿ ಎರಡು ತೋಡು ಇಷ್ಟನ್ನು ದಾಟಿ ನಮ್ಮ ಮನೆಗೆ ಹೋಗಬೇಕು", "ಗ್ರಾಮೀಣ ಪ್ರದೇಶದ ಈ ಹಣ್ಣಿನ ಸವಿಯನ್ನು ಸವಿದವನೇ ಬಲ್ಲ" - ಇಂತಹವು ಆಪ್ತವಾಗುವುದರ ಜೊತೆಗೆ ಓದುಗನನ್ನು ಏನೋ ಕಳೆದುಕೊಂಡಂತೆ ಉತ್ಕಂಠನನ್ನಾಗಿಸುತ್ತದೆ. ಹುಲಿಯಪ್ಪ ಮೇಸ್ಟ್ರು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಪ್ರೋತ್ಸಾಹಿಸಲು ಪ್ರಯತ್ನಿಸುವುದು, ಕನ್ನಡ ಸಂಘಗಳನ್ನು ಸ್ಥಾಪಿಸಿ ಬೆಳೆಸುವುಸುವುದು, ಕನ್ನಡ ಭಾಷಣ ಹಾಡು ಇತ್ಯಾದಿ ಗಳನ್ನು ನಡೆಸುವುದು ಇತ್ಯಾದಿಗಳಿಂದಾಗಿ ಕನ್ನಡದ ಕಟ್ಟಾಳು ಎಂಬ ಬಿರುದು ಅವರಿಗೆ ಸಾರ್ಥಕವಾಗುತ್ತದೆ. ತಿರುವಾಳ್ಳಿಟ್ರಸ್ಟಿಗೆ ಅಭಿನಂದನೆಗಳು!

ಸೀಗೆಹಳ್ಳಿ ಇಂದಿರಾ ಟೀಚರ್‌ ಪ್ರಶಸ್ತಿಯ ಸಂದರ್ಭದಲ್ಲಿ ನಮ್ಮ ಕ್ಷೇತ್ರದಲ್ಲಿ ನಡೆಯುವ ಸಣ್ಣ ರಾಜಕೀಯಗಳ ಬಗ್ಗೆ ಚೆನ್ನಾದ ವಿಶ್ಲೇಷಣೆ ನಡೆಸಿದ್ದೀರಿ. ಶಿಕ್ಷಕರ ಮಟ್ಟದಲ್ಲಲ್ಲ ಬಿ ಇ ಒಗಳಿಗೆ ಪ್ರಶಸ್ತಿ ಬಂದಾಗ ನಡೆಯುವ ಬಗೆಯ ಬಗ್ಗೆ ನನ್ನ ಅನುಭವವೊಂದನ್ನು, ನೀವು ಆತ್ಮೀಯರಾದ್ದರಿಂದ, ನಿಮಗೆ ಹೇಳಬೇಕೆನಿಸುತ್ತಿದೆ. ನಾನು ಬ್ರಹಮಾವರ ಬಿ ಇ ಒ ಇದ್ದಾಗ ರಾಜನ್‌ ಅವರು ನಮ್ಮ ಡಿ ಡಿ ಪಿ ಐ ಆಗಿದ್ದರು. ಅವರು ಉಡುಪಿ ಜಿಲ್ಲೆಯಿಂದ ಬಿ ಇ ಒಗಳ ರಾಜ್ಯ ಪ್ರಶಸ್ತಿಗೆ ನನ್ನ ಹೆಸರನ್ನು ಕಳುಹಿಸಿದ್ದರು. ಅನಂತರ ನಾನು ವರ್ಗವಾಗಿ ಮಂಗಳೂರು ಟಯಟ್ಟಿನಲ್ಲಿ ಹಿರಿಯ ಉಪನ್ಯಾಸಕನಾಗಿದ್ದೆ. ನನ್ನ ಹಿಂದಿನ ಕೆಲಸಕ್ಕಾಗಿ ನನಗೆ ಪ್ರಶಸ್ತಿ ಬಂದಿತ್ತು. ನನಗೆ ಪ್ರಶಸ್ತಿ ಬಂದ ವಿಷಯವನ್ನು ಪ್ರಾಂಶುಪಾಲತಿಗೆ ದೂರವಾಣಿ ಮುಖಾಂತರ ತಿಳಿಸಿ ನನಗೆ ನಿರ್ದಿಷ್ಟ ದಿನಾಂಕದಂದು ಬೆಂಗಳೂರಿಗೆ ಬರುವಂತೆ ತಿಳಿಸಲಾಗಿತ್ತು. ಅವರು ಹಾಗೆ ಮಾಡಲಿಲ್ಲ. ಟಿ ಬಿ ಎಫ್ನಿಂದ ಸಮಾರಂಭದ ಮಾರನೆಯ ದಿನ ಪತ್ರ ಬಂದಾಗಲೇ ವಿಷಯ ತಿಳಿದದ್ದು. ಪತ್ರಿಕೆಗಳಲ್ಲೆಲ್ಲ ನಾನು ಮತ್ತು ಫಿಲೋಮಿನಾ ಅವರ ಹೆಸರು ಅತ್ಯುತ್ತಮ ಬಿ ಇ ಒ ಪ್ರಶಸ್ತಿ ಪಡೆದವರೆಂದು ಫೋಟೋದೊಂದಗೆ ಪ್ರಚಾರವಾಗಿ ಹೋಯಿತು. ಆದರೆ ಪ್ರಶಸ್ತಿ ಮಾತ್ರ ನನಗೆ ಸಿಗಲೇ ಇಲ್ಲ. ನಾನು ಟಿ ಬಿ ಎಫ್‌ ಜಂಟೀ ನಿರ್ದೇಶಕನಿದ್ದಾಗ ತೆಗೆದುಕೊಂಡು ಬಿಡಬಹುದಿತ್ತು. ಮನಸ್ಸಾಗಲಿಲ್ಲ.ಹೇಸಿಗೆಯಾಯಿತು.

ನಿಮ್ಮ ಶೈಲಿಯ ಒಂದೆರಡು ಕೊರತೆಗಳನ್ನು ಹೇಳ ಬೇಕೆನಿಸುತ್ತದೆ, ಹೆಚ್ಚು ಮಾತು, ಕೆಲವೆಡೆ ಪುನರಾವರ್ತನೆ, ಅಕ್ಷರಿಕೆಯನ್ನು ಏಕಪ್ರಕಾರವಾಗಿ ಸಮನಾಗಿ ಬಳಸದಿರುವುದು ಕಂಡು ಬರುತ್ತದೆ.  ಸಭೆ ಸಮಾರಂಭಗಳು ನಡೆದಾಗ ಸ್ವಾಗತ ವಂದನಾರ್ಪಣೆಗಳ ವಿವರಗಳು - ಇಂತಹವು ಅನಾವಶ್ಯಕವಾಗಿ ಗಾತ್ರ ಹೆಚ್ಚಿಸಿವೆ ಎನಿಸಿತು. ಹುಲಿಯಪ್ಪರ ವೈಭವೀಕರಣ, ಶಿಷ್ಯರ ಸಾಷ್ಟಾಂಗ ನಮಸ್ಕಾರ ಇತ್ಯಾದಿ ಸಹಜತನವನ್ನು ಮೀರಿವೆ ಎನಿಸುತ್ತದೆ. ೫೦೦ ಮತ್ತು ೫೦೧ ಪುಟಗಳ ನಡುವೆ ೪೮೧ ರಿಂದ ೪೮೪ ಪುಟಗಳು ಅಚ್ಚಾಗಿರುವುದು ಸ್ವಲ್ಪಗೊಂದಲವನ್ನು ಸೃಷ್ಟಿಸುತ್ತದೆ.

  ಒಟ್ಟಿನಲ್ಲಿ ನಿಮ್ಮ ಕಾದಂಬರಿ ಕಾದಂಬರಿ ಹೌದು. ನಮ್ಮ ಕಾಲದ ಶೈಕ್ಷಣಿಕ ಯೋಜನೆ, ಕಾರ್ಯಕ್ರಮಗಳು ಮತ್ತು ಆಚರಣೆಗಳ ಒಂದು ಸಮಗ್ರ ದಾಖಲೆಯೂ ಹೌದು. ನಮ್ಮ ಕಾಲದ ಸಾಮಾಜಿಕ ಮತ್ತು ವನ್ಯ ಪರಿಸರಗಳನ್ನು ಚಿತ್ರಿಸುವ ಪುಸ್ತಕವೂ ಹೌದು. ಅಭಿನಂದನೆಗಳು.


ನನ್ನ ಬಗ್ಗೆ

 ನನ್ನ ಬಗ್ಗೆ 

ನಾನು ಬಿ ವಿ ಮಹೀದಾಸ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ರಾಗೋಡು ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಹುಟ್ಟಿದವನು. ಮೈಸೂರು ವಿಶ್ವವಿದ್ಯಾಲಯದಿಂದ ಎಮ್ ಎ, ಪಿಎಚ್ಡಿ, ಇಂಗ್ಲಿಷಿನಲ್ಲಿ ದಿಪ್ಲೊಮಾ ಮತ್ತು ಬಿ ಎಡ್ ಪದವಿಗಳನ್ನು ಪಡೆದಿದ್ದೇನೆ. ಕರ್ನಾಟಕಸರಕಾರದ ಶಿಕ್ಷಣ ಇಲಾಖೆಯಲ್ಲಿ ಸರ್ವಶಿಕ್ಷಾಆಭಿಯಾನದ ವಿಭಾಗದಲ್ಲಿ ಜಂಟೀ ನಿರ್ದೇಶಕನಾಗಿ ಕೆಲಮಾಡಿ 2012ರಲ್ಲಿ ನಿವೃತ್ತನಾಗಿದ್ದೇನೆ. ಇದಕ್ಕೆ ಮೊದಲು ಉಡುಪಿ ಮತ್ತು ದಕ್ಷಿಣಕನ್ನಡದ ಹಲವು ತಾಲ್ಲೂಕುಗಳಲ್ಲಿ ಬಿ ಇ ಒ ಆಗಿ ಮತ್ತು ಆ ಎರಡೂ ಜಿಲ್ಲೆಗಳಲ್ಲಿ ಡಿಡಿಪಿಐ ಆಗಿ ಕೆಲಸಮಾಡಿರುತ್ತೇನೆ. ಅಲ್ಲದೆ ಮಂಗಳೂರಿನ ಬಿ ಎಡ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಒಂಬತ್ತು ವರ್ಷಗಳ ಕಾಲ ಬೋಧನಾ ಕಾರ್ಯ ಮಾಡಿರುತ್ತೇನೆ.

ನಾನು ಮುಖ್ಯವಾಗಿ ಶಾಸ್ತ್ರ ಸಾಹಿತ್ಯದಲ್ಲಿ (ವ್ಯಾಕರಣ, ನಿಘಂಟು, ಛಂದಸ್ಸು, ಗ್ರಂಥಸಂಪಾದನೆ ಇ) ಆಸಕ್ತ. ಜೊತೆಗೆ ಸೃಜನ ಸಾಹಿತ್ಯದಲ್ಲೂ ಮನಶ್ಶಾಸ್ತ್ರದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದೇನೆ. ನನ್ನ ಪ್ರಕಟಿತ ಕೃತಿಗಳು ಇವು:

ಎ ಗ್ರಾಮರ್ ಆಫ್ ದಿ ಕರ್ಣಾಟ ಲಾಂಗ್ವೇಜ್ (ಮೂಲ: ವಿಲಿಯಮ್ ಕೇರಿ) ಸಂಪಾದಿತ:  ಪ್ರೊ ಎ ವಿ ನಾವಡ ಮತ್ತು ಡಾ ಬಿ ವಿ ಮಹೀದಾಸ. ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2018

ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು (ಡಾ ಬಿ ವಿ ಮಹೀದಾಸ) ಪ್ರಕಾಶಕರು: ಎರಡನೆಯ ಪರಿಷ್ಕೃತ ಮುದ್ರಣ – ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, 2004. ಪ್ರಥಮ ಮುದ್ರಣ – ಯುಗಪರುಷ ಪ್ರಕಟಣಾಲಯ ಕಿನ್ನಿಗೋಳಿ ದ ಕ, 1997. ಈ  ಪುಸ್ತಕಕ್ಕೆ 1997ರಲ್ಲಿ ಮಂಗಳೂರಿನಲ್ಲಿ ನಡೆದ ಅರವತ್ತಾರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಹುಮಾನ ಬಂದಿರುತ್ತದೆ.

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಶನರಿಗಳ ಕೊಡುಗೆ (ಡಾ ಬಿ ವಿ ಮಹೀದಾಸ) ಪ್ರಕಾಶಕರು – ಶ್ರೀನಿವಾಸ ಪುಸ್ತಕ ಪ್ರಕಾಶನ, ಬಸವನ ಗುಡಿ ಬೆಂಗಳೂರು, 2010. ಇದು ನನ್ನ ಪಿ ಎಚ್ಡಿ ನಿಬಂಧ

ಕನ್ನಡ ಗೀತಾಂಜಲಿ ಅನು. ಡಾ ಬಿ ವಿ ಮಹೀದಾಸ ಪ್ರಕಾಶಕರು: ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 2002. ಇದು ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯ ಕನ್ನಡ ಅನುವಾದ.

ಪುನರುಕ್ತಾ (ಡಾ ಬಿ ವಿ ಮಹೀದಾಸ) ಪ್ರಕಾಶಕರು:  ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 1996 ಕವನ ಸಂಕಲನ

ನಿವೇದನೆ (ಡಾ ಬಿ ವಿ ಮಹೀದಾಸ) ಪ್ರಕಾಶಕರು:  ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 1992  ಇದು ನನ್ನ ಪ್ರಥಮ ಕವನ ಸಂಕಲನ

ಸಂಕ್ಷಿಪ್ತ ಶಿಕ್ಷಣ ಮನೋ ವಿಜ್ಞಾನ (ಡಾ ಬಿ ವಿ ಮಃಈದಾಸ) ಪ್ರಕಾಶಕರು: ರಾಗೋಡು ಪ್ರಕಾಶನ ಕೊಪ್ಪಚಿಕ್ಕಮಗಳೂರು ಜಿಲ್ಲೆ 2009. 


ಇವಲ್ಲದೆ ಸಾಹಿತ್ಯ ಪರಿಷತ್-ಪ್ರಕಟಣೆಗಳು, ಬೇರೆಬೇರೆ ಸಂಭಾವನಾಗ್ರಂಥಗಳು, ಸ್ಮರಣ ಸಂಚಕೆಗಳು ಇತ್ಯಾದಿಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಹೊಸದಿಗಂತ ಪತ್ರಿಕೆಯ ಬೆಂಗಳೂರು ಆವೃತ್ತಿಗಾಗಿ ಒಂದು ವರ್ಷ ಪುಸ್ತಕ ಸಮೀಕ್ಷೆಗಳನ್ನು ಬರೆದಿರುತ್ತೇನೆ. ಉದಯವಾಣಿ, ವಾರ್ತಾ ಭಾರತಿ ಇತ್ಯಾದಿ ಪತ್ರಿಕೆಗಳಲ್ಲೂ, ಶಿಕ್ಷಣಕ್ಕೆ ಸಂಬಂಧಿಸಿದ ವಿದ್ವತ್-ಪತ್ರಿಕೆಗಳಲ್ಲೂ ನನ್ನ ಲೇಖನಗಳು ಪ್ರಕಟವಾಗಿವೆ.


ಪ್ರಸ್ತುತ ಕೃತಿಯ ಬಗ್ಗೆ

ಪ್ರಸ್ತುತ ಕೃತಿಯ ಶೀರ್ಷಿಕೆ: ರೂಪಕಗಳ ಸುತ್ತ ಮತ್ತು ಇತರ ಪ್ರಬಂಧಗಳು. ಇದೊಂದು ಸಂಶೋಧನಾ ಪ್ರಬಂಧಗಳ ಸಂಕಲನ. ಕನ್ನಡದಲ್ಲಿ ವಿದ್ವತ್ತಿನ ಮಟ್ಟವನ್ನು ವಿಶ್ವಸ್ತರಕ್ಕೇರಿಸಬೇಕೆಂಬ ಹಂಬಲದಿಂದ ರಚಿಸಿದ ಪ್ರಬಂಧಗಳು ಇಲ್ಲಿವೆ. ರೂಪಕಗಳ ಸುತ್ತ, ಕನ್ನಡ ಗಾದೆಗಳ ಬಗ್ಗೆ, ಸಮಾಸಪದಗಳು ಮತ್ತು ನುಡಿಗಟ್ಟುಗಳು – ಈ ಮೂರು ಈ ಸಂಕಲನದ ಪ್ರಥಮ ಮೂರು ಪ್ರಬಂಧಗಳು. ಪಾಶ್ಚಾತ್ಯ ಜಗತ್ತಿನಲ್ಲಿ ಕಳೆದ ಮೂರು ದಶಕಗಳಿಂದ ಪ್ರಚುರವಾಗಿರುವ ರೂಪಕಗಳ ಕಾಗ್ನಿಟಿವ್ ಸಿದ್ಧಾಂತವನ್ನು ಕನ್ನಡಿಗರಿಗೆ ಪರಚಯಿಸಿ ಕುಮಾರವ್ಯಾಸನ ಪದ್ಯಗಳಿಗೆ ಮತ್ತು ಬೇಂದ್ರೆಯವರ ಕುರುಡು ಕಾಂಚಾಣಕ್ಕೆ ಅಳವಡಿಸಿ ಅರ್ಥೈಸಿದಾಗ ಹೇಗೆ ಹೊಸ ಅರ್ಥಗಳು ಸಹಜವಾಗಿ ಹೊಮ್ಮುತ್ತವೆ ಎಂಬುದು; ಕನ್ನಡಗಾದೆಗಳನ್ನು ಈ ಸಿದ್ಧಾಂತಕ್ಕನುಸಾರವಾಗಿ ಹೇಗೆ ಅರ್ಥೈಸಬಹುದೆಂಬುದು; ಕನ್ನಡನುಡಿಗಟ್ಟುಗಳು ಅರ್ಥಗಳನ್ನು ಪಡೆಯುವ ವಿಧಾನವನ್ನು ವಿವರಿಸುವುದು  -  ಇವು ಈ ಪ್ರಬಂಧಗಳಲ್ಲಿ ಬಂದಿವೆ.

ಕನ್ನಡ ವ್ಯಾಕರಣಗಳಲ್ಲಿ ನಿರೂಪಣಾ ತಂತ್ರ ವಿಕಾಸ ಎಂಬ ಪ್ರಬಂಧದಲ್ಲಿ ಕನ್ನಡದ ಪ್ರಥಮ ವ್ಯಾಕರಣದಿಂದ ಹಿಡಿದು ಇಪ್ಪತ್ತನೆಯ ಶತಮಾನದಲ್ಲಿ ಬಂದ ವ್ಯಾಕರಣಗಳ ವೆರೆಗೆ ನಿರೂಪಣೆಯಲ್ಲಿ ಹೊಸತನ ಹೇಗೆ ಮೂಡುತ್ತಾ ಬಂತು ಎಂಬುದರ ವಿವರವಿದೆ.

ಕನ್ನಡ ನಿಘಂಟುಗಳ ವರ್ಗೀಕರಣದತ್ತ ಎಂಬುದು ವಿಶ್ವ ಸ್ತರದಲ್ಲಿ ನಿಘಂಟುಗಳ ವರ್ಗೀಕರಣ ವಿಧಾನಗಳನ್ನು ಸಮೀಕ್ಷಿಸಿ ಕನ್ನಡಕ್ಕಾಗಿ ಸೂಕ್ತ ವರ್ಗೀಕರಣವನ್ನು ಸೂಚಿಸಿದ್ದೇನೆ. ಇದು ಒಂದು ಟೇಬಲ್ ರೂಪದಲ್ಲಿದೆ. ಇದರಲ್ಲಿ ನಿಘಂಟುಗಳನ್ನು ಅಳವಡಿಸಿ ಪುಸ್ತಕ ಭಂಡಾರದ ನಿಘಂಟು ವಿಭಾಗದಲ್ಲಿ ನೇತುಹಾಕಿದರೆ ಓದುಗ ತನಗೆ ಬೇಕಾದ ನಿಘಂಟನ್ನು ಆಯ್ದುಕೊಳ್ಳಲು ಅನುಕೂಲವಾಗುತ್ತದೆ; ಸಂಶೋಧಕ ಇದರಲ್ಲಿರುವ ಖಾಲಿ ಖಾನೆಗಳನ್ನು ನೋಡಿ ತಾನು ಯಾವ ತರಹದ ನಿಘಂಟನ್ನು ರಚಿಸಿದರೆ ಉಪಯುಕ್ತವೆಂಬುದನ್ನು ಕಂಡುಕೊಳ್ಳಬಹುದು.

ರೆಂಗ ಬಳಸಿ ಕವಿತೆ ಕಲಿಸಿ ಎಂಬ ಪ್ರಬಂಧ ಶಿಕ್ಷಣಕ್ಕೆ ಸಂಬಂಧಿಸಿದೆ. ಕವಿತೆ ಕಲಿಸುವ ಒಂದು ಹೊಸ ವಿಧಾನವನ್ನು ಪರಿಚಯಿಸುತ್ತದೆ. ಕೆಲವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರಯೋಗಿಸಿ ಪರಿಣಾಮಕಾರಿತ್ವವನ್ನು ದೃಢಪಡಿಸಿಕೊಂಡು ಇಲ್ಲಿ ಸೇರಿಸಿದ್ದೇನೆ.

ಇವಲ್ಲದೆ ಎಟಿಮಲಾಜಿಕಲ್ ನಿಘಂಟುಗಳ ಬಗ್ಗೆ ರಾಘವೇಂದ್ರಸ್ವಾಮಿಗಳು ರಚಿಸಿದ ಕಾವ್ಯಗಳ ಬಗ್ಗೆ ಪ್ರಬಂಧಗಳಿವೆ.

ಈ ಕೃತಿಯನ್ನು ತಮ್ಮ ಸಂಸ್ಥೆಯು ಪ್ರಕಾಶನಕ್ಕೆ ಎತ್ತಿಕೊಳ್ಳಬೇಕೆಂದು ಕೋರುವೆ. ಇದರ ಟೈಪ್ಡ್ ಪ್ರತಿ ನನ್ನಲ್ಲಿದ್ದು ತಮಗೆ ಸಾಫ್ಟ್ ಕಾಪಿಯನ್ನು ಒದಗಿಸ ಬಲ್ಲೆ.ಇದರಲ್ಲಿರುವ ಒಟ್ಟು ಪುಟಗಳ ಸಂಖ್ಯೆ ಸುಮಾರು ೧೪೦

****************************************************

Monday 10 August 2020

ಮಾಧ್ವ ತತ್ವಗಳ ಒಂದು ನಿರೂಪಣೆ‌

 


                    ಮಾಧ್ವ ತತ್ವಗಳ ಒಂದು ನಿರೂಪಣೆ‌

                              ಶ್ರೀ ಸತ್ಯಧ್ಯಧ್ಯಾನರ ಸಿವಿಲ್‌ ಸೂಟ್‌ ಗ್ರಂಥದ ಒಂದು ಸಮೀಕ್ಷೆ

ಚಾರಿತ್ರಿಕವಾಗಿ ಭಾರತೀಯ ಚಿಂತನೆಯಲ್ಲಿ ವಾಸ್ತವವಾದವನ್ನು(realism) ಮುಂಚೂಣಿಗೆ ತಂದವರು ಶ್ರೀಮನ್ಮಧ್ವಾಚಾರ್ಯರು. ಇದಕ್ಕೆ ಮುಂಚೆ ಪ್ರಚಲಿತವಿದ್ದ ಭಾವವಾದ(idealism)ದಲ್ಲಿ ಅನೇಕ ಧನಾತ್ಮಕ ಅಂಶಗಳಿದ್ದವು ಮತ್ತು ಅದರದೇ ಆದ ಪ್ರಯೋಜನಗಳೂ ಇದ್ದವು. ಆದರೆ ಈ ಸಿದ್ದಾಂತವನ್ನು ಎಳೆದು ಹಿಂಜಿ ಅರ್ಥೈಸಿದಾಗ ಸಾಮಾನ್ಯ ಜನತೆ ಗೊಂದಲಕ್ಕೆ ಒಳಗಾಯಿತು ಮತ್ತು ಬದುಕು ಅಷ್ಟೊಂದು ಅರ್ಥಪೂರ್ಣವಲ್ಲವೇನೋ ಎನಿಸತೊಡಗಿತು. ಇಂತಹ ಸಂದರ್ಭದಲ್ಲಿ ಮಧ್ವಾಚಾರ್ಯರು ರಂಗಕ್ಕೆ ಬಂದರು ಮತ್ತು ಅವರ ತತ್ವವಾದದ ಸಿದ್ಧಾಂತವನ್ನು ವಾಸ್ತವವಾದದ ನೆಲೆಯಲ್ಲಿ ಕಟ್ಟಿ ಪ್ರಚುರಪಡಿಸಿದರು. ಇವರ ಪ್ರಯತ್ನದಮಹತ್ವವೆಂದರೆ ಹಿಂದಿನ ಭಾವವಾದವನ್ನು ಶ್ರೀ ಶಂಕರರು ವೇದಾಂತದ ಆಧಾರದಲ್ಲಿ ಕಟ್ಟಿದಂತೆ ಮಧ್ವರೂ ತಮ್ಮ ವಾದವನ್ನು ವೇದಾಂತ ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಆಧಾರದಲ್ಲಿ ಕಟ್ಟಿದರು. ಈ ಕಾರ್ಯವನ್ನು ಮಾಡುವಾಗ ಯಾವ ಮಂತ್ರಗಳಿಗೆ ಶ್ರೀ ಶಂಕರರು ಅದ್ವೈತಪರ ಅರ್ಥವನ್ನು ಹೇಳಿದ್ದರೋ ಅವೇ ಅವೇ ಮಂತ್ರಗಳನ್ನು ಬೇರೆ ರೀತಿಯಲ್ಲಿಅರ್ಥೈಸಿದರು. ಪ್ರಪಂಚವನ್ನು ಮತ್ತು ಬದುಕನ್ನು ಅರ್ಥಮಾಡಿಕೊಳ್ಳುವ ಹೊಸದೊಂದು ಚಿಂತನಾ ವಿಧಾನ ಬಳಕೆಗೆ ಬಂತು.

ಶ್ರೀ ಮಧ್ವರ ಅನುಯಾಯಿಗಳು ವಿಶೇಷವಾಗಿ ಅವರ ಸಂನ್ಯಾಸೀ ಶಿಷ್ಯರು ಮಧ್ವಮತವನ್ನು ಪ್ರಚಾರಕ್ಕೆ ತರಲು ಯಾವ ಪ್ರಯತ್ನವನ್ನೂ ಮಢದೆ ಬಿಡಲಿಲ್ಲ. ಶ್ರೀ ವಾದಿರಾಜ ತೀರ್ಥ, ಶ್ರೀ ರಾಘವೇಂದ್ರ ತೀರ್ಥ, ಶ್ರೀ ಜಯತೀರ್ಥ, ಶ್ರೀ ವ್ಯಾಸ ತೀರ್ಥ, ಶ್ರೀ ಸತ್ಯಧ್ಯಾನ ತೀರ್ಥ ಮತ್ತು ಈಚೆಗೆ ಶ್ರೀವಿಶೇಶ್ವರ ತೀರ್ಥ ಇವರುಗಳು ಈ ಕ್ಷಢತ್ರದಲ್ಲಿ ಕೆಲಸ ಮಾಡಿದ ಪ್ರಮುಖರು. ಇವರು ತತ್ವವಾದವನ್ನು ಪ್ರಚಾರಕ್ಕೆ ತಂದರು ಮತ್ತು ಅದು ಎಲ್ಲರಿಗೂ ಒಪ್ಪಿಗೆಯಾಗುವಂತೆ ತಿಳಿಸಿ ಹೇಳಿದರು. 

ನಾನು ಇಲ್ಲಿ ಕೈಗೆತ್ತಿಕೊಂಡಿರುವುದು ಶ್ರೀ ಸತ್ಯಧ್ಯಾನ ತೀರ್ಥರ ಸಿವಿಲ್‌ ಸೂಟ್‌ ಎಂಬಪುಸ್ತಕವನ್ನು. ಈ ಪುಸ್ತಕದ ಸಮೀಕ್ಷೆ ಎಂದು ಈ ಪ್ರಬಂಧದ ಶೀರ್ಷಿಕೆಯಾದರೂ ಇದು ನಿಜವಾಗಿ ವೈಶಿಷ್ಟ್ಯಪೂರ್ಣವಾಗಿ ಮಧ್ವಮತವನ್ನು ಚಿತ್ರಿಸುವ ಪುಸ್ತಕವಾಗಿದ್ದು ಹಿಂದಿನವರು ಅದ್ವೈತ ಮತ ಪ್ರತಿಪಾದನೆಗೆ ಬಳಸಿಕೊಂಡಿದ್ದ ಅವೇ ವೇದ ಮಂತ್ರಗಳನ್ನು ತತ್ವವಾದ ಸ್ಥಾಪನೆಗಾಗಿ ಹೇಗೆ ಭಿನ್ನವಾಗಿ ಅರ್ಥೈಸಬಹುದು ಎಂಬುದನ್ನು  ಈ ಪ್ರಬಂಧದಲ್ಲಿ ಕಾಣಬಹುದು.

ಸಿವಿಲ್‌ ಸೂಟ್‌ ಎಂಬ ಇದು 728 ಪುಟಗಳ ಪುಸ್ತಕ. ಈ ಪುಸ್ತಕದಲ್ಲಿ ದ್ವೈತವಾದಿಯೊಬ್ಬರು ಧರ್ಮರಾಜನ ನ್ಯಾಯಾಲಯದಲ್ಲಿ ತಮ್ಮ ಮತವು ಜನರ ಆಧ್ಯಾತ್ಮಿಕ ಒಳಿತನ್ನು ಸಾಧಿಸುವಂತಹದಾಗಿದ್ದು ಹಿಂದಿನ ಅದ್ವೈತವಾದಿಗಳು ತಮ್ಮ ಮತಪ್ರಚಾರದಿಂದ ಜನರನ್ನು ಅಧರ್ಮದ ಮಾರ್ಗಕ್ಕೆಳೆಯುತ್ತಿದ್ದಾರೆ. ಹಾಗೆ ಮಾಡದಂತೆ ಅವರನ್ನು ನಿರ್ಬಂಧಿಸುವಂತೆ ಕೋರ್ಟನ್ನು ಕೇಳಿಕೊಂಡಿರುವುದಾಗಿದೆ.ಬೇರೆಬೇರೆ ಅಧ್ಯಾಯಗಳಲ್ಲಿ ತತ್ವವಾದದ ವಿಭಿನ್ನ ಮುಖಗಳು ಅನಾವರಣಗೊಳ್ಳುತ್ತವೆ.

ಇದರಲ್ಲಿ ವಿಭಾಗಗಳನ್ನು ಅಧ್ಯಾಯಗಳೆಂದು ಕರೆದಿಲ್ಲ. ಅವುಗಳನ್ನು ಇಸ್ಯುಗಳೆಂದು ಕರೆದಿದೆ. ಪುಸ್ತಕದಲ್ಲಿ ಒಟ್ಟು ಐದು ಇಸ್ಯೂಗಳಿವೆ. ಮೊದಲನೆಯ ಇಸ್ಯುದಲ್ಲಿ ಇಲ್ಲಿ ಚರ್ಚಿಸಲಾಗುತ್ತಿರುವ ವಿಷಯಗಳು ಬೇರೆ ಕಡೆ ಪ್ಚರ್ಚೆಯಾಗಿಲ್ಲದಿದ್ದು ಇಲ್ಲಿ ವಿಚಾರಣಾ ಯೋಗ್ಯವೆಂದು ಪ್ರತಿಪಾದಿಸಿದೆ. ನ್ಯಾಯಾಲಯಗಳ ಸಾಮಾನ್ಯ ಸಂಪ್ರದಾಯದಂತೆ ಇದು ಇದ್ದು ಈಗಾಗಲೇ ತೀರ್ಮಾನವಾಗದ ವಿಷಯವಾದ್ದರಿಂದ ಇದನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿದೆ ಎಂಬಂತೆ ವಿವರಿಸಿದೆ.  ಇದೊಂದು ಉಪೋದ್ಘಾತ ಅಥವ ಪೀಠಿಕಾ ಅಧ್ಯಾಯದಂತೆ. ಬರವಣಿಗೆಯ ಶೈಲಿಯು ನ್ಯಾಯಾಲಯ ನಡಾವಳಿಗಳ ದಾಖಲೀಕರಣದಂತೆ ಇದೆ. ಈ ಅಧ್ಯಾದಲ್ಲಿಯೂ ಮತ್ತು ಅನಂತರದ ಪ್ರತಿ ಅಧ್ಯಾಯದಲ್ಲಿಯೂ ಉಪಸಂಹಾರ ರೂಪವಾಗಿ ʼಡಿಕ್ರಿʼ ಇದೆ. ಅದಕ್ಕೆ ಮುಖ್ಯ ನ್ಯಾಧೀಶರ ಸಹಿ ಇರಬೇಕಷ್ಟೆ; ಆ ಸ್ಥಾನದಲ್ಲಿ ಧರ್ಮರಾಜ ಎಂಬ ಸಹಿ ಇದೆ. ಅಂದರೆ ವಾದಿ ಪ್ರತಿವಾದಿಗಳ ವಾದ ವಿವಾದಗಳನ್ನು ಕೇಳಿ ಪರಿಶೀಲಿಸಿ ಸ್ವತಹ ಯಮಧರ್ಮ ನಿರ್ಣಯ ಕೊಡುವನೆಂದರ್ಥ. ಪ್ರಥಮ ಇಸ್ಯು  ನ್ಯಾಯಾಲಯ ದಾವೆಯನ್ನು ವಿಚಾರಣೆಗೆ ಸ್ವೀಕಾರಿಸುತ್ತಿದೆ ಎಂಬುದನ್ನು ತಿಳಿಸುತ್ತದೆ. 

ಎರಡನೆಯ ಇಸ್ಯುದಲ್ಲಿ ವಿಚಾರಣೆ ಪ್ರಾರಂಭವಾಗುತ್ತದೆ. ಇಲ್ಲಿ ವಾದಿ ಪ್ರತಿವಾದಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿ ಕೊಳ್ಳುತ್ತದೆ. ವಾದಿಯು ದ್ವೈತಿಯಾಗಿದ್ದು ಅವನ ಹೆಸರು ಸತ್ಯ ಬೋಧಾಚಾರ್ಯ; ಕೆಲವು ಕಡೆ ವಿಷ್ಣುದಾಸಾಚಾರ್ಯ ಎಂದೂ ಇದೆ. ಪ್ರತಿವಾದಿಯು ಅದ್ವೈತಿ ಗಂಗಾಧರಶಾಸ್ತ್ರಿ ಮತ್ತು ಅವರ ವಕೀಲರು ಹರಿಹರ ಶರ್ಮ. ಪ್ರತಿವಾದಿಯು ಪ್ರತ್ಯಕ್ಷಾದಿ ಪ್ರಮಾಣಸಿದ್ಧವಾದ ಜಗತ್ತನ್ನು ಸುಳ್ಳಾದುದು ಎಂದು ಹೇಳಿ ಸಜ್ಜನರನ್ನು ಭ್ರಾಂತರನ್ನಾಗಿಸಿ ತಮಸ್ಸಿಗೆ ಕರೆದುಕೊಂಡು ಹೋಗುವುದನ್ನು ನಿಷೇಧಿಸಬೇಕೆಂಬುದು ದಾವೆ. ಇದೇ ಮುಖ್ಯವಾಗಿ ವಾದಿಯ ಹೇಳಿಕೆ. ಮಾಧವದಾಸ ಎಂಬುದು ವಾದಿಪರ ವಕೀಲರ ಹೆಸರು ಅವನು ವಾದಿಯ ವಿಚಾರಣೆಯನ್ನು ನಡೆಸುತ್ತಾ ಅವನ ಮಂಡನೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸುತ್ತಾನೆ ಮತ್ತು ಹೇಳಿಕೆಗಳನ್ನು ದಾಖಲಿಸುತ್ತಾನೆ. ಪ್ರತಿವಾದಿ ಪರ ವಕೀಲರಿಂದ ಕ್ರಾಸ್‌ ಎಕ್ಸಾಮಿನೇಶನ್‌, ವಾದಿ ವಕೀಲರಿಂದ ಪುನಃ ರೀ-ಎಕ್ಸಾಮಿನೇಶನ್‌ ಈ ವಿಧಿವಿಧಾನಗಳನ್ನು ಅನುಸರಿಸಿ ತತ್ವವಾದದ ಮಂಡನೆ ಪೂರ್ವ ಪಕ್ಷ ಖಂಡನೆ ಇವೆಲ್ಲವೂ ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ವೇದ ಮಂತ್ರಗಳ ದ್ವೈತ ಪರ ಅರ್ಥಗಳು, ದ್ವೈತಪರ ಶ್ರುತಿ ಭಾಗಗಳು ಮತ್ತು ಅವುಗಳ ಅರ್ಥ – ಇವು ಬಂದಿದ್ದು ದ್ವೈತ ಪರ ನಿಲುವೊಂದು ರೂಪು ತಳೆಯುತ್ತದೆ. 

ಇಸ್ಯು 2ರಲ್ಲಿ ಮುಖ್ಯವಾಗಿ ಲೋಕವು ಇದೆ; ಬ್ರಹ್ಮನೂ ಇದೆ - ಇವೆರಡಕ್ಕೂ ಬೆರೆಬೇರೆಯಾದ ಮತ್ತು ನಿಜವಾದದ ಅಸ್ತಿತ್ವ ಇದೆ ಎಂಬುದರ ಪ್ರತಿಪಾದನೆ ಇದೆ.  ಇಲ್ಲಿ ಪ್ರಥಮತಃ ಪ್ರಸ್ತಾವಿತವಾಗಿರುವ ಮಂತ್ರ ತದನನ್ಯತ್ವಂ ಆರಂಭಣ ಶಬ್ದಾದಿಭ್ಯಃ ಎಂಬುದು. ಇದೊಂದು ಬ್ರಹ್ಮಸೂತ್ರ ಪಠ್ಯದಿಂದ ಆಯ್ದ ಉಲ್ಲೇಖ. ಈ ಸೂತ್ರದ ಅದ್ವೈತಪರ ಅರ್ಥವನ್ನು ಮೊದಲು ಹೇಳಿ ಅನಂತರ ತತ್ವವಾದಪರ ನಿಲುವನ್ನು ಪ್ರತಿಪಾದಿಸುವುದು ಇಲ್ಲಿನ ತಂತ್ರ. ಈ ಸೂತ್ರವನ್ನು ಲೋಕ ಮತ್ತು ಬ್ರಹ್ಮರಲ್ಲಿ ಅಭೇದವನ್ನು ಹೇಳುವ ಸೂತ್ರವೆಂದು ಪ್ರತಿವಾದಿಪರ ಸಾಕ್ಷಿ ಹೇಳುತ್ತಾರೆ. ಆರಂಭಣ ಶಬ್ದಾದಿಭ್ಯಃ ಎಂಬುದು ತಾನೊಂದೇ ಅಲ್ಲ. ಅದು ಒಟ್ಟು ಆರು ಶ್ರುತಿ ವಾಕ್ಯಗಳನ್ನು ಹೊಳೆಸುತ್ತದೆ: ಆರಂಭಣ ಶಬ್ದದಿಂದ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಎಂಬ ಛಾಂದೋಗ್ಯ ಉಪನಿಷತ್ತಿನ ವಾಕ್ಯವು ವಿವಕ್ಷಿತವಾಗಿದೆ. ಮುಂದಿರುವ ಆದಿ ಶಬ್ದದಿಂದ ಅದೇ ಉಪನಿಷತ್ತಿನ 8ನೆಯ ಖಂಡದಲ್ಲಿರುವ (ಇಲ್ಲಿ ಹೇಳಿರುವಂತೆ) ಐದಾತ್ಮ್ಯಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ವಮಸಿ, ಬೃಹದಾರಣ್ಯಕ ಉಪನಿಷತ್ತಿನ ಇದಂ ಸರ್ವಂ ಯದಯಮಾತ್ಮಾ ಮುಂಡಕೋಪನಿಷತ್ತಿನ ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಂ, ಛಾಂದೋಗ್ಯೋಪನಿಷತ್ತಿನ ಆತ್ಮೈವೇದಂ ಸರ್ವಂ, ಬೃಹದಾರಣ್ಯಕದ ನೇಹನಾನಾಸ್ತಿ ಕಿಂಚನ, - ಈ ಶ್ರುತಿ ವಾಕ್ಯಗಳು ವಿವಕ್ಷಿತ ವಾಗಿದ್ದು ಇವೆಲ್ಲ ಜಗನ್ಮಿಥ್ಯತ್ವವನ್ನು ತನ್ಮೂಲಕ ಲೋಕ ಮತ್ತು ಬ್ರಹ್ಮರಲ್ಲಿ ಅಭೇದವನ್ನು ಸಾರುತ್ತಿರುವುದಾಗಿ ಪ್ರತಿವಾದಿಯ ವಾದವಿದೆ. ಈ ಒಂದೊಂದೂ ಹೇಗೆ ಲೋಕ ಮತ್ತು ಬ್ರಹ್ಮರಲ್ಲಿ ಭೇದವನ್ನೇ ಪ್ರತಿಪಾದಿಸುತ್ತವೆ ಜಗನ್ಮಿಥ್ಯತ್ವವನ್ನು ಸಾಧಿಸುವುದಿಲ್ಲ ಎಂಬುದನ್ನು ವಾದಿಪರ ಸಾಕ್ಷಿ ಮತ್ತು ವಾದಿ ಪರ ವಕೀಲರು ಪ್ರಸ್ತುತ ಪಡಿಸುತ್ತಾರೆ ಮತ್ತು ಅದನ್ನು ನ್ಯಾಯಾಲಯ ಒಪ್ಪಿಕೊಳ್ಳುತ್ತದೆ. ಇಲ್ಲಿರುವಂತೆ ಈ ಶ್ರುತಿಗಳ ದ್ವೈತಾದ್ವೈತ ಅರ್ಥಗಳನ್ನು ಹೀಗೆ ಅವಲೋಕಿಸಬಹುದು:

ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಅಂದರೆ ವಿಕಾರದ ಹೆಸರು ಶಬ್ದಪ್ರತಿಪಾದ್ಯ; ಮಣ್ಣಿನಿಂದ ತಯಾರಿಸಲಾದ ಘಟ, ಹೂಜಿ, ಮಡಕೆ ಇತ್ಯಾದಿಗಳೆಲ್ಲ ಬೇರೆಬೇರೆ ಹೆಸರುಗಳು ಅಷ್ಟೆ; ಮಣ್ಣು ಮಾತ್ರ ಸತ್ಯ. (ಮಣ್ಣು ಸತ್ಯವಾದಂತೆ ಬ್ರಹ್ಮ ಸತ್ಯ, ಉಳಿದವೆಲ್ಲವೂ ವಿಕಾರಗಳಾಗಿದ್ದು ಮಿಥ್ಯ). ಐತದಾತ್ಮ್ಯಂ ಇದಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ತ್ವಮಸಿ ಅಂದರೆ ಈ ಎಲ್ಲವೂ ಅವನೇ ಆತ್ಮವಾಗಿ ಉಳ್ಳದ್ದು; ಆ ಪರಮಾತ್ಮನು ಸತ್ಯ; ಅವನೇ ಎಲ್ಲದರಲ್ಲೂ ಇರುವವನು; ನೀನು ಆ ಬ್ರಹ್ಮ ರೂಪನು ಆಗಿರುವೆ. ಇದಂ ಸರ್ವಂ ಯದಯಮಾತ್ಮಾ ಬ್ರಹ್ಮ ಅಂದರೆ ಕ್ಷತ್ರಾದಿ ಜಗತ್ತು ಯತ್ ಯಾವನಲ್ಲಿದೆಯೋ ಅವನೇ ಆ ಪರಮಾತ್ಮನು. ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಮ್ ಅಂದರೆ ಈ ವಿಶ್ವವು ಬ್ರಹ್ಮನಲ್ಲಿ ಕಲ್ಪಿತವಾದುದು (ಬ್ರಹ್ಮನಿಂದ ಬೇರೆಯಲ್ಲ, ಆದ್ದರಿಂದ ಮಿಥ್ಯ), ಇದು ವರಿಷ್ಠ(ಅತ್ಯುತ್ತಮ)ವಾದುದು. ನೇಹನಾನಾಸ್ತಿ ಕಿಂಚನ ಎಂದರೆ ಈ ಬ್ರಹ್ಮನಲ್ಲಿ ನಾನಾಪ್ರಕಾರವಾದ ಯಾವ ಜಗತ್ತೂ ಇಲ್ಲ(ಆದ್ದರಿಂದ ಮಿಥ್ಯ). ಹೀಗೆ ಅದ್ವೈತ ಸಿದ್ಧಾಂತಕಾರರ ಪ್ರತಿಪಾದನೆ.

ಇವೇ ವೇದ ಮಂತ್ರಗಳಿಗೆ ದ್ವೈತಪರವಾದ ಅರ್ಥಗಳು ಹೀಗಿವೆ: ಅದ್ವೈತಪ್ರತಿಪಾಕರು ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಎಂಬ ಶ್ರುತಿಯಿಂದ ಈ ಜಗತ್ತು ಮಿಥ್ಯ ಎಂಬ ಅರ್ಥ ಬರುತ್ತದೆಂದು ವಾದಿಸುತ್ತಾರೆ; ಆದರೆ ಶ್ರುತಿಯಲ್ಲಿ ಮಿಥ್ಯ ಎಂಬ ಪದವಾಗಲಿ ಮಿಥ್ಯ ಎಂಬ ಅರ್ಥ ಬರುವ ಪದವಾಗಲೀ ಇಲ್ಲದಿದ್ದು ಬ್ರಹ್ಮ ಸತ್ಯ ಎಂಬುದನ್ನು ಮಾತ್ರ ಖಚಿತವಾಗಿ ಹೇಳಿದೆ. ಆದ್ದರಿಂದ ಇಲ್ಲಿ ಜಗತ್ತು ಮಿಥ್ಯ ಎಂಬ ಅರ್ಥವನ್ನು ಹೊರಡಿಸುವುದು ಉಚಿತವಲ್ಲ ಎಂಬುದು ದ್ವೈತವಾದಿಗಳ ಪ್ರತಿಪಾದನೆ. ಐತದಾತ್ಮ್ಯಂ ಇದಂ ಸರ್ವಂ ತತ್ಸತ್ಯಂ ಸ ಆತ್ಮಾತತ್ತ್ವಮಸಿ ಎಂಬಲ್ಲಿ ನಾಲ್ಕು ವಾಕ್ಯಗಳಿವೆ; ಆತ್ಮ್ಯಂ ಎಂದರೆ  ಆತ್ಮಭಾವ (souledness). ಇದೆಲ್ಲದರಲ್ಲಿಯೂ ಆತ್ಮವಿದೆ, ಅದು ಸತ್ಯ. ಅದ್ವೈತಪರವಾದದಲ್ಲಿ ಅದು ಸತ್ಯ ಎಂದರೆ ಉಳಿದುವೆಲ್ಲವೂ ಮಿಥ್ಯ ಎಂದು ಅರ್ಥೈಸಲಾಗುತ್ತದೆ. ಆದರೆ ಈ ಎರಡನೆಯದನ್ನು ಶ್ರುತಿ ಹೇಳುವುದಿಲ್ಲವಾದ್ದರಿಂದ ಜಗನ್ಮಿಥ್ಯತ್ವ ಇದರಿಂದ ಹೊರಡುವುದಿಲ್ಲವೆಂದು ದ್ವೈತಪ್ರತಿಪಾದಕರ ವಾದ. ಸ ಆತ್ಮಾತತ್ವಮಸಿ ಎಂಬುದನ್ನು ಸ ಆತ್ಮಾ ಅತತ್ವಮಸಿ ಎಂದು ಪದಚ್ಛೇದ ಮಾಡಬೇಕೆಂದೂ ಇದರ ಅರ್ಥ ಜೀವಾತ್ಮ ಪರಮಾತ್ಮರು ಭಿನ್ನ ಎಂಬುದಾಗಿಯೂ ದ್ವೈತಿಗಳು ಪ್ರತಿಪಾದಿಸುತ್ತಾರೆ. ಇದಂ ಸರ್ವಂ ಯದಯಮಾತ್ಮಾ ಬ್ರಹ್ಮ ಎಂಬುದಕ್ಕೆ ಈ ಎಲ್ಲವೂ ಪರಮಾತ್ಮನಲ್ಲಿ ಕಲ್ಪಿತವಾದುವು ಎಂಬುದು ಅದ್ವೈತಪರ ಅರ್ಥ. ಆದ್ದರಿಂದ ಜಗತ್ತೆಲ್ಲವೂ ಮಿಥ್ಯ ಎಂಬುದು ನಿಹಿತ ಎಂಬುದು ಅದ್ವೈತಪ್ರತಿಪಾದಕರ ಪ್ರತಿಪಾದನೆ. ಈ ಮಂತ್ರಕ್ಕೆ ಈ ಎಲ್ಲವೂ ಪರಮಾತ್ಮನ ಅಧೀನ ಎಂಬುದು ದ್ವೈತಪ್ರತಿಪಾದಕರ ವಿವರಣೆ, ಜಗನ್ಮಿಥ್ಯ ಎಂಬರ್ಥವು ಇದರಿಂದ ಹೊರಡುವುದಿಲ್ಲ.  ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಮ್ ಇಲ್ಲಿ ಪ್ರಥಮಾರ್ಧಕ್ಕೆ ಇದಂ ಬ್ರಹ್ಮ= ಈ ಬ್ರಹ್ಮನು ವಿಶ್ವಂ = ಎಲ್ಲ ಕಡೆಗೂ ಇದ್ದಾನೆ ಹೀಗೆ ಬ್ರಹ್ಮನ ವ್ಯಾಪ್ತಿಯ್ನು ತಿಳಿಸುತ್ತದೆ ಎಂಬುದು ಮಾಧ್ವ ವಿವರಣೆ. ನೇಹನಾನಾಸ್ತಿ ಕಿಂಚನ ಇದರ ಪೂರ್ಣ ಪಾಠವು ಮನಸೈವೇದಮಾಪ್ತವ್ಯಂ ನೇಹನಾನಾಸ್ತಿ ಕಿಂಚನ ಎಂಬುದಾಗಿ (ಕಠೋಪನಿಷತ್ತು ೨-೪-೧೧). ಇದಕ್ಕೆ ಇದಂ=ಈ ಪರಮಾತ್ಮನು ಮನಸಾ ಏವ = ಮನಸ್ಸಿನಿಂದಲೇ ಆಪ್ತವ್ಯಂ = ತಿಳಿದು ಬರುವವನು. ಇಹ = ಈ ಪರಮಾತ್ಮನಲ್ಲಿ ಕಿಂಚನ ನಾನಾ = ಸ್ವಲ್ಪ ಭೇದವೂ (ಪರಮಾತ್ಮನ ರೂಪಗಳಲ್ಲಿ ಭೇದವು) ನಾಸ್ತಿ = ಇಲ್ಲ. ಆದ್ದರಿಂದ ಇದು ಪರಮಾತ್ಮನ ಏಕಮೇವಾದ್ವಿತೀಯತ್ವವನ್ನು ತಿಳಿಸಿಕೊಡುತ್ತಿದೆಯೇ ಹೊರತು ಜಗನ್ಮಿಥ್ಯತ್ವವನ್ನಲ್ಲ.

ಒಟ್ಟಿನಲ್ಲಿ ಯಾವ ಮಂತ್ರಗಳಿಂದ ಜಗನ್ಮಿಥ್ಯತ್ವವು ಸಿದ್ಧವಾಗುವುದೆಂದು ಅದ್ವೈತಿಗಳ ವಿವರಣೆ ಇದೆಯೋ ಆ ಮಂತ್ರಗಳಲ್ಲೆಲ್ಲ ಜಗನ್ಮಿಥ್ಯತ್ವದ ಪ್ರತಿಪಾದನೆ ಇಲ್ಲ ಎಂಬುದು ದ್ವೈತಮತಾನುಸಾರ ವಿವರಣೆ. ಹೀಗೆ ಜಗತ್ತು ಸತ್ಯ ಮತ್ತು ಪರಮಾತ್ಮನು ಏಕಮೇವಾದ್ವಿತೀಯ ಎಂಬುದು ಈ ಭಾಗದಲ್ಲಿ ವ್ಯಕ್ತವಾಗಿದೆ. 

ಮೇಲಿನ ಮಂತ್ರಗಳಲ್ಲದೆ “ಯತ್ರಹಿ ದ್ವೈತಮಿವ ಭವತಿ”, “ನೇತಿ ನೇತಿ”, “ಸರ್ವಂ ಖಲ್ವಿದಂ ಬ್ರಹ್ಮ”, - ಈ ಮಂತ್ರಗಳೂ ಈ ಭಾಗದಲ್ಲಿ ವಿವರಣೆ ಕಂಡಿವೆ. ಈ ಭಾಗವನ್ನು ಒಂದು ಹೆಚ್ಚುವರಿ ಭಾಗವೆಂಬಂತೆ ಇಲ್ಲಿ ಕಲ್ಪಿಸಿದೆ. ಆದ್ದರಿಂದಲೇ ಈ ಭಾಗದ ಉಪೋದ್ಘಾತ ರೂಪವಾಗಿ “ಶಾಸ್ತ್ರಿಗಳೇ! ಜಗತ್ತು ಮಿಥ್ಯ ಎಂಬ ವಿಷಯದಲ್ಲಿ ಮತ್ತೇನಾದರೂ ಆಧಾರ ಉಂಟೆ?” ಎಂಬ ಪ್ರಶ್ನೆಯನ್ನು  ಪ್ರತಿವಾದಿ ಪರ ವಕೀಲರು ತನ್ನ ಕಕ್ಷಿದಾರರಿಗೆ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಪ್ರತಿವಾದಿಯು   “ಯತ್ರಹಿ ದ್ವೈತಮಿವ ಭವತಿ” ಎಂಬುದನ್ನು ಉದಾಹರಿಸುತ್ತಾರೆ.ಈ ಮಂತ್ರದ ಪೂರ್ಣ ರೂಪ ಹೀಗಿದೆ: “ಯತ್ರಹಿ ದ್ವೈತಮಿವ ಭವತಿ ತದಿತರ ಇತರಂ ಪಶ್ಯತಿ ತದಿತರ ಇತರಂ ಜಿಘ್ರತಿ ತದಿತರ ಇತರಂ ಶ್ರುಣೋತಿ ತದಿತರ ಇತರಂ ಅಭಿವದತಿ ತದಿತರ ಇತರಂ ಮನುತೇ ತದಿತರ ಇತರಂ ವಿಜಾನಾತಿ ಯತ್ರವಾ ಅಸ್ಯ ಸರ್ವಮಾತ್ಮೈವಾಭೂತ್ತತ್ಕೇನ ಕಂ ಜಿಘ್ರೇತ್ತತ್ಕೇನ‌ ಕಂ ಪಶ್ಯೇತ್ತತ್ಕೇನ ಕಂ ಶ್ರುಣುಯಾತ್ತತ್ಕೇನ ಕಂ ಅಭಿವದೇತ್ತತ್ಕೇನ ಕಂ ಮನ್ವೀತ ತತ್ಕೇನ ಕಂ ವಿಜಾನೀಯಾತ್‌ ಏನೇದಂ ಸರ್ವಂ ವಿಜಾನೀತಿ ತಂ ಕೇನ ವಿಜಾನೀಯಾತ್‌ ವಿಜ್ಞಾತಾರಮರೇ ಕೇನ ವಿಜಾನೀಯಾದಿತಿ” (ಬೃ. ೨-೪-೧೪). ಅಂದರೆ ಅವಿದ್ಯಾವಸ್ಥೆಯಲ್ಲಿವಸ್ತುಗಳಲ್ಲಿ ಭೇದವಿರುವಂತೆ (ದ್ವೈತಮಿವ) ಕಾಣುವುದರಿಂದ ಮನುಷ್ಯ ಆಘ್ರಾಣಿಸುತ್ತಾನೆ, ಕೇಳುತ್ತಾನೆ, ಹೇಳುತ್ತಾನೆ, ತಿಳಿಯುತ್ತಾನೆ ಇತ್ಯಾದಿಯಾಗಿ ಹೇಳಬಹುದು; ಜ್ಞಾನ ಪ್ರಾಪ್ತವಾಗಿ ಎಲ್ಲವೂ ಒಂದೇ ಆಗಿರಲು ಆಘ್ರಾಣಿಸುವುದೇನನ್ನು, ನೋಡುವುದೇನನ್ನು, ಹೇಳುವುದೇನನ್ನು , ಕೇಳುವುದೇನನ್ನು ಅಥವ ತಿಳಿಯುವುದೇನನ್ನು? - ಇದು ಅದ್ವೈತಪರ ಅರ್ಥ. ದ್ವೈತ ಪ್ರತಿಪಾದಕರು ಇದಕ್ಕೆ ಹೇಳುವ ಅರ್ಥವು ಸ್ವಲ್ಪ ಭಿನ್ನವಾಗಿದೆ. ಅವರ ಪ್ರಕಾರ “ಯತ್ರ = ಯಾವ ಮೋಕ್ಷಾವಸ್ಥೆಯಲ್ಲಿ ಅಸ್ಯ = ಈ ಜ್ಞಾನಿಗೆ ಸರ್ವಂ = ಎಲ್ಲ ಪದಾರ್ಥಗಳು ಆತ್ಮೈವಾಭೂತ್‌ =ಆತ್ಮನಿಂದ ಬೇರೆ ಇರದೇ ಹೋಗಬಹುದೋ ತತ್‌ = ತತ್ರ = ಆ ಕಾಲದಲ್ಲಿ ಕೇನ = ಯಾವ ಘ್ರಾಣೇಂದ್ರಿಯದಿಂದ ಕಂ = ಯಾವ ಗಂಧವನ್ನು ಜಿಘ್ರೇತ್‌ = ಮೂಸಿಯಾನು …” ಇತ್ಯಾದಿ. ಆದ್ದರಿಂದ ಅವು ಬೇರೆ ಇದ್ದೇ ಇರುತ್ತವೆ - ಎಂದರ್ಥ. ನೇತಿ ನೇತಿ ನಹ್ಯೇತದಿತಿ ನೇತ್ಯನ್ಯಾತ್ಪರಮಸ್ತಿ ಎಂಬುದಕ್ಕೆ “ಬ್ರಹ್ಮನಿಂದ ಬೇರೆಯಾದ ಮೂರ್ತಾಮೂರ್ತ ರೂಪಾತ್ಮಕ ಸಮಸ್ತ ಜಗತ್ತೂ ಮಿಥ್ಯಾ” “ಬ್ರಹ್ಮನೊಬ್ಬನೇ ಸತ್ಯ” ಎಂದು ಅದ್ವೈತ ಪರ ಅರ್ಥ (೧೨೨). ಇದು ಅಲ್ಲ, ಅದೂ ಅಲ್ಲ, ಇದಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ” “ಪರಮಾತ್ಮನು ಪರತಂತ್ರವಾದ ಮೂರ್ತ ವಸ್ತುಗಳಿಂದ ಬೇರೆ”, “ಆ ಪರಮಾತ್ಮನಿಂದ ಬೇರೆಯಾದ ಉತ್ತಮ ವಸ್ತು ಯಾವುದೂ ಇಲ್ಲ, ಪರಮಾತ್ಮನೇ ಉತ್ತಮನು” (೧೨೮) ಎಂಬುದು ದ್ವೈತ ನಿಲುವು. ಸರ್ವಂ ಖಲ್ವಿದಂ ಬ್ರಹ್ಮ ಏಂಬ ಶ್ರುತಿಗೆ ಈ ಎಲ್ಲವೂ (ಒಂದೇ) ಬ್ರಹ್ಮನಲ್ಲಿ ಕಲ್ಪಿತವಾದುದು, ಯಾರೂ ಯಾವುದನ್ನೂ ಮೂಸಲು ಸಾಧ್ಯವಿಲ್ಲ ಇತ್ಯಾದಿ (೧೩೮) ಎಂಬುದು ಅದ್ವೈತ ಪರ ಅರ್ಥ. ಆದರೆ ಈ ಬ್ರಹ್ಮನೇ ಎಲ್ಲ ಅಂದರೆ ಎಲ್ಲದರಲ್ಲೂ ಬ್ರಹ್ಮನ ವ್ಯಾಪ್ತಿ ಇದೆ ಎಂಬುದು ದ್ವೈತಪರ ಅರ್ಥ. 

ಮೇಲಿನ ವಿಷಯಗಳಲ್ಲದೆ ಭ್ರಮೆ ಮತ್ತು ಸ್ವಪ್ನ - ಈ ಎರಡು ವಿಷಯಗಳ ಬಗ್ಗೆಯೂ ಈ ಇಸ್ಯೂದಲ್ಲಿ ಚರ್ಚೆ ಇದೆ. ಭ್ರಮೆ ಎಂಬುದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ಹಾವನ್ನು ಹಗ್ಗವೆಂದು ಭ್ರಮಿಸುವ ಉದಾಹರಣೆಯನ್ನು ತೆಗೆದುಕೊಂಡು ಸಮನ್ವಯಿಸಿದೆ. ಒಂದು ಇಂದ್ರಿಯಾನುಭವವನ್ನು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗವೇ ಭ್ರಮೆ. ಭ್ರಮೆಗೆ ಕಾರಣಗಳು ಹಲವಾರು. ಇಲ್ಲಿ ಪಟ್ಟಿ ಮಾಡಿರುವ ಭ್ರಮಾ ಕಾರಣಗಳೆಂದರೆ‌ (೧) ಅಧಿಷ್ಠಾನ (೨) ಸಾಮಾನ್ಯ ಧರ್ಮ (೩) ವಿಶೇಷ ಧರ್ಮ (೪) ಆರೋಪ್ಯ ವಸ್ತುವಿನ ಸಾದೃಶ್ಯ (೫) ಸಾಮಾನ್ಯ ಧರ್ಮದ ಜ್ಞಾನ (೬) ವಿಶೇಷ ಧರ್ಮದ ಅಜ್ಞಾನ (೭) ಸಾಮಾನ್ಯ ಧರ್ಮದ ಜ್ಞಾನವಿದ್ದು  ವಿಶೇಷ ಧರ್ಮದ ಜ್ಞಾನವಿಲ್ಲದ ಮನುಷ್ಯ ಮತ್ತು (೮) ಜ್ಞಾನಕ್ಕೆ ಕಾರಣವಾದ ಭ್ರಾಂತಮನುಷ್ಯನ ದೇಹೇಂದ್ರಿಯಾದಿವಸ್ತುಗಳು. ಹಾವನ್ನು ಹಗ್ಗವೆಂದು ಭ್ರಮಿಸುವ ಸಂದರ್ಭದಲ್ಲಿ ಹಗ್ಗವು ಅಧಿಷ್ಠಾನ - ಹಗ್ಗವನ್ನು ಹಗ್ಗವಾಗಿ ತಿಳಿಯದೆ ಅದರಲ್ಲಿ ಬೇರೇನೋ ಉಂಟೆಂದು ತಿಳಿಯುತ್ತೇವೆ. ಹಗ್ಗದಲ್ಲಿ ಇದಂತ್ವ (ಇದು ಎಂಬ) ಸಾಮಾನ್ಯ ಧರ್ಮವಿದೆ. ಹಗ್ಗತ್ವವೆಂಬ ವಿಶೇಷ ಧರ್ಮ, ಆರೋಪ್ಯಮಾಣವಾದ ಸರ್ಪ ಸಾದೃಶ್ಯ - ಇವೂ ಇವೆ. ಭ್ರಮೆಗೊಳಗಾಗುವ ಪುರುಷನಿಗೆ ದೇಹೇಂದ್ರಿಯಗಳಿವೆ; ಇದಂತ್ವವೆಂಬ ಸಾಮಾನ್ಯ ಧರ್ಮವನ್ನು ತಿಳಿದೂ ಹಗ್ಗತ್ವವೆಂಬ ವಿಶೇಷ ಧರ್ಮವನ್ನು ತಿಳದಿರುವುದಿಲ್ಲ. ಹೀಗಾಗಿ ತಾನು ನೋಡಿದ ಹಗ್ಗವನ್ನು ಹಾವೆಂದು ಭ್ರಮಿಸುವನು. ಅದ್ವೈತದ ಪ್ರಕಾರ ಈ ಲೋಕವು ಮಿಥ್ಯ. ಇದು ಸಾಧ್ಯವಾಗುವುದು ಬ್ರಹ್ಮನಿಗೆ ಭ್ರಮೆ ಬರುವುದರಿಂದ. ಇಲ್ಲಿ ಭ್ರಮೆಗೆ ಬ್ರಹ್ಮನೇ ಅಧಿಷ್ಠಾನ‌,  “ಅದ್ವೈತಿಗಳು ಒಪ್ಪಿಕೊಂಡಿರುವ ಬ್ರಹ್ಮನಲ್ಲಿ ಅಧಿಷ್ಠಾನತ್ವಕ್ಕೆ ಉಪಯೋಗಿಯಾದ ಸಾಮಾನ್ಯ ಧರ್ಮ, ವಿಶೇಷ ಧರ್ಮ, ಆರೋಪ್ಯ ಸಾದೃಶ್ಯ, ಇವು ಸತ್ಯವಾದುವು ಇಲ್ಲದಿದ್ದರೂ ಸುಳ್ಳು (ಕಲ್ಪಿತ) ಆದುವುಗಳು ಉಂಟು. ಬ್ರಹ್ಮನು ಅಧಿಷ್ಠಾನನಾಗುವನು ಮತ್ತು ಭ್ರಾಂತನೂ ಆಗುವನು. ಆದ್ದರಿಂದ ಜಗತ್ತಿನ ಭ್ರಮವು ತನ್ನ(ಬ್ರಹ್ಮನ)ಲ್ಲಿ ಬ್ರಹ್ಮನಿಗೆ ಆಗುತ್ತದೆ (ಪು೧೩೧).  ಹಾಗೆಯೇ ಭ್ರಾಂತನಾಗಲು ಕಾರಣಗಳಾದ ಸಾಮಾನ್ಯ ಧರ್ಮದ ಜ್ಞಾನವು, ವಿಶೇಷ ಧರ್ಮದ ಅಜ್ಞಾನವು ಮತ್ತು ದೇಹೇಂದ್ರಿಯಗಳು ಸತ್ಯವಾದುವು ಬ್ರಹ್ಮನಲ್ಲಿ ಇಲ್ಲ; ಆರೋಪಿತವಾದುವುಗಳು ಇವೆ. ಹೀಗೆ ಬ್ರಹ್ಮನಿಗೆ ಭ್ರಮೆ ಉಂಟಾಗುವುದರಿಂದ ಜಗತ್ತು ಅಸ್ತಿತ್ವಕ್ಕೆ ಬರುತ್ತದೆ (ಪು೧೩೨).

ದ್ವೈತ ಮತದಲ್ಲಿ ಜಗತ್ತು ಸತ್ಯವೆಂದು ಸ್ವೀಕೃತವಾಗಿದ್ದು ಬ್ರಹ್ಮನ ಭ್ರಮೆಯಿಂದ ಜಗತ್ತು ಅಸ್ತಿತ್ವಕ್ಕೆ ಬರದು.

ಈ ಭಾಗದಲ್ಲಿ ವಿಸ್ತಾರವಾಗಿ ಚರ್ಚೆಯಾಗಿರುವ ಇನ್ನೊಂದು ಮುಖ್ಯ ವಿಚಾರ ಸ್ವಪ್ನಕ್ಕೆ ಸಂಬಂಧಿಸಿದ್ದು. ಸ್ವಪ್ನಗಳು ಮಾನಸಿಕ ಕಲ್ಪನೆಗಳಾಗಿದ್ದು ಸುಳ್ಳಾದುವಾಗಿವೆ ಎಂಬುದು ಸಾಮಾನ್ಯವಾಗಿ ಜನಜನಿತವಾದ ವಿಚಾರ. ಅದ್ವೈತದ ಪ್ರಕಾರ ಕೂಡ ಸ್ವಪ್ನ ಸುಳ್ಳೆಂದೇ ಹೇಳ ಲಾಗುತ್ತದೆ. ಇದನ್ನು ಶ್ರುತಿಗಳ ಆಧಾರದಲ್ಲಿ ಸ್ಥಾಪಿಸಲಾಗಿದೆ.  ಆದರೆ ಮಧ್ವಾಚಾರ್ಯರ ತತ್ವವಾದದ ಪ್ರಕಾರ ಸ್ವಪ್ನದಲ್ಲಿ ಕಾಣುವ ವಸ್ತುಗಳು ಮತ್ತು ಘಟನೆಗಳನ್ನು ಸತ್ಯವೆಂದೇ ಪರಿಗಣಿಸಲಾಗುತ್ತದೆ. ಅವು ಜಾಗೃತಾವಸ್ಥೆಯಲ್ಲಿ ಕಾಣದಿರುವುದು ಸ್ಸ್ವಪ್ನವನ್ನು ಅಸತ್ಯವೆಂದು ತೋರಿಸುವುದಿಲ್ಲ. ಸ್ವಪ್ನವು ಸತ್ಯವೆಂಬುದನ್ನು ಶ್ರುತಿಗಳ ಆಧಾರದಲ್ಲಿಯೇ ಸ್ಥಾಪಿಸಿರುವುದು ಮಧ್ವಮತದ ವಿಶೇಷ.

ಈ ಸಂಬಂಧದಲ್ಲಿ ಸ್ವಪ್ನಗಳು ಹೇಗೆ ಉಂಟಾಗುತ್ತವೆ ಎಂಬುನ್ನು ವಿವರಿಸಿದ್ದು ಈ ವಿವರಣೆ ಆಧುನಿಕ ಮನೋವಿಜ್ಞಾನಕ್ಕೆ ಹತ್ತಿರವಾದುದಾಗಿದೆ. “ಯಾವ ಯಾವ ಪದಾರ್ಥಗಳ ಶ್ರವಣ, ದರ್ಶನ ಇವುಗಳಿಂದ ಉತ್ಪನ್ನವಾದ ಮನಸ್ಸಿನ ಮೇಲ[ಣ] ಸಂಸ್ಕಾರ ಇರುವುದೋ ಆ ಸಂಸ್ಕಾರವೇ” ಕನಸಿನ ಅಸ್ತಿವಾರವೆಂದು ಇಲ್ಲಿ ಹೇಳಲಾಗಿದೆ. ಸ್ವಪ್ನ ಕಾಲದಲ್ಲಿ ಉಳಿದ ಇಂದ್ರಿಯಗಳು ನಿಷ್ಕ್ರಿಯವಾಗಿದ್ದರೂ ಮನಸ್ಸಿಗೆ ʼಉಪರತಿʼ ಇರುವುದಿಲ್ಲವಾದುದರಿಂದ ಇದು ಸಾಧ್ಯವಾಗುತ್ತದೆ. “ಸ್ವಪ್ನ ಪದಾರ್ಥಗಳು ಪೂರ್ವಕ್ಷಣದಲ್ಲಿಯೂ ಇರುವುದಿಲ್ಲ, ಉತ್ತರಕ್ಷಣದಲ್ಲಿಯೂ ಇರುವುದಿಲ್ಲ, ಮಧ್ಯಕ್ಷಣದಲ್ಲಿಯೇ ಉತ್ಪನ್ನವಾಗಿ ಅದೇಕ್ಷಣದಲ್ಲಿ ನಷ್ಟವಾಗುತ್ತವೆ. ಇದು ಎಲ್ಲರ ಅನುಭವಸಿದ್ಧವಾದುದು” (ಪು ೧೪೧-೧೪೯). ಜಾಗೃತಾವಸ್ಥೆಯಲ್ಲಿ ವ್ಯಕ್ತಿ ವಸ್ತುಗಳನ್ನು ನೋಡಿದ, ಕೇಳಿದ, ಸ್ಪರ್ಶಿಸಿದ ಮೇಲೆ ಅವು ಕಣ್ಮರೆಯಾದನಂತರ ಮನಸ್ಸಿನಲ್ಲಿ ಉಳಿಯುವ ಅವುಗಳ ʼಟ್ರೇಸ್‌ʼ ಸ್ವಪ್ನಕ್ಕೆ ಕಾರಣವೆಂಬುದು ಆಧುನಿಕ ಮನೋವಿಜ್ಞಾನದ ನಿಲುವಾಗಿದೆ.

ಹೀಗೆ ಇಸ್ಯೂ ೨,  ಜಗತ್ತು ಮಿಥ್ಯ, ಬ್ರಹ್ಮನಲ್ಲದೆ ಬೇರೆ ಏನೂ ಇಲ್ಲ ಎಂಬುದನ್ನು ಯಾವ ವೇದ ಮಂತ್ರಗಳಿಂದ ಅದ್ವೈತ ಪ್ರತಿಪಾದಕರು ಸಾಧಿಸುತ್ತಿದ್ದರೋ, ಅದೇ ಮಂತ್ರಗಳನ್ನು ಪರಿಗಣಿಸಿ, ಆ ಮಂತ್ರಗಳಿಗೆ ಅರ್ಥವು ಸ್ವಲ್ಪ ಬೇರೆ ಎಂದೂ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಅವೇ ಮಂತ್ರಗಳು ಜಗತ್ತು ಸತ್ಯ ಮತ್ತು ಬ್ರಹ್ಮನಿಂದ ಬೇರೆಯಾದುದು ಎಂದು ತಿಳಿಸುತ್ತವೆ ಎಂದೂ ವಿವರಿಸುತ್ತದೆ. ಈ ವಿವರಣೆಗಳು ಈ ಭಾಗದಲ್ಲಿ ಸಹಜವಾಗಿ ಮೂಡಿ ಬಂದಿವೆ. “ಒಂದು ಇಂದ್ರಿಯಾನುಭವವನ್ನು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗ” ಎಂದು ಭ್ರಮೆಯನ್ನು ವಿವರಿಸಿ ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡಿದೆ. ಇಂತಹ ಒಂದು ಖಚಿತ ವಿವರಣೆಯು ಭಾರತೀಯ ತತ್ವಶಾಸ್ತ್ರದಲ್ಲಿ ಮೊದಲ ಬಾರಿಗೆ ಇಲ್ಲಿ ಕಾಣಸಿಗುತ್ತದೆ ಎಂಬುದು ಮುಖ್ಯ. ಮನಸ್ಸು ಎಂಬುದರ ವಿವರಣೆ ಮತ್ತು ಸ್ವಪ್ನ ಉಂಟಾಗುವುದರ ವಿವರಣೆಗಳನ್ನೂ ಇಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಸ್ವಪ್ನವು ಸಂಸ್ಕಾರಗಳಿಂದ ಉಂಟಾಗುವಂತಹುದು ಎಂಬ ಇಲ್ಲಿನ ವಿವರಣೆ ಸಿಗ್ಮಂಡ್‌-ಫ್ರಾಯಿಡನ ʼಅನುಭವಗಳುಂಟಾದಾಗ ಅವುಗಳ ಒಂದು ಟ್ರೇಸ್‌ ಮನಸ್ಸಿನಲ್ಲಿ ಉಳಿದಿರುತ್ತದೆ ಮತ್ತು ಅವುಗಳಿಂದ ಸ್ವಪ್ನ ಉಂಟಾಗುತ್ತದೆʼ ಎಂಬ ಸಿದ್ಧಾಂತದ ಬುನಾದಿ ಇರುವಂತೆ ತೋರುತ್ತದೆ. 

ಎರಡನೆಯ ಇಸ್ಯೂವಿನಲ್ಲಿ ಜಗತ್ತು ಸತ್ಯ, ಬ್ರಹ್ಮ ಸತ್ಯ ಮತ್ತು ಸ್ವಾಪ್ನ ಪದಾರ್ಥಗಳೂ ಸತ್ಯ ಎಂಬುದು ಮುಖ್ಯ ಪ್ರತಿಪಾದನೆ. ಮೂರನೆಯ ಇಸ್ಯೂವಿನಲ್ಲಿ ಜೀವ-ಬ್ರಹ್ಮಾದಿ ಭೇದ ಪ್ರತಿಪಾದನೆಗೆ ಒತ್ತು ನೀಡಲಾಗಿದೆ. ಅಂದರೆ ಇಲ್ಲಿ ಈ ಲೋಕಕ್ಕೆ ಸರ್ವ ಪ್ರಭುವಾಗಿ ದೇವರಿದ್ದು ಲೋಕ ಸಂರಕ್ಷಣಾ ಕಾರ್ಯವನ್ನು ಮಾಡುತ್ತಾನೆ ಎಂಬುದು, ಪ್ರತಿಯೊಬ್ಬ ವ್ಯಕ್ತಿ ಅನನ್ಯನಾಗಿದ್ದು ಪ್ರತಿಯೊಬ್ಬರಿಗೂ ವಿಶಿಷ್ಟ ಅಸ್ಮಿತೆ ಇದೆ ಎಂಬುದು, ಚೇತನಾಚೇತನರಲ್ಲಿ ವ್ಯತ್ಯಾಸವಿದ್ದು ಲೋಕದಲ್ಲಿ ಪ್ರತಿಯೊಂದರ ಸ್ಥಾನ ವಿಶಿಷ್ಟವೆಂಬುದು - ಈ ಅಧ್ಯಾಯದ ಪ್ರತಿಪಾದನೆ. ಈ ದೃಷ್ಟಿಯಿಂದ ವೇದ ಮಂತ್ರಗಳ ಅರ್ಥ ವಿವರಣೆ, ವಿಶ್ಲೇಷಣೆ ಮತ್ತು ಪೂರ್ವ-ಪ್ರತಿಪಾದನೆ ಸರಿಯಲ್ಲವೆಂಬುದನ್ನು ಸಯುಕ್ತಿಕವಾಗಿ ತೋರಿಸುವುದು - ಇವೆಲ್ಲ ಸಾಗಿವೆ. 

ಗ್ರಂಥದಲ್ಲಿರುವ ಅಧ್ಯಾಯಗಳಲ್ಲೆಲ್ಲ ಈ ಮೂರನೆಯದು ಅತ್ಯಂತ ವಿಸ್ತಾರವಾದುದು; ಇಸ್ಯು (೧) ೪೬ ಪುಟ ವಿಸ್ತಾರ, ಇಸ್ಯು (೨) ೧೩೮ ಪುಟ ವಿಸ್ತಾರ ಇವೆಯಾದರೆ ಇಸ್ಯು೩ ಮುನ್ನೂರ ಅರವತ್ತ ಮೂರು (೩೬೩) ಪುಟಗಳಷ್ಟು ವಿಸ್ತಾರವಾಗಿದೆ. ಇಸ್ಯು ೪ ಮತ್ತು ಇಸ್ಯು ೫ ಒಟ್ಟಾಗಿ ೧೭೦ ಪುಟ ವಿಸ್ತಾರ ಹೊಂದಿವೆ. ಇದು ಇಲ್ಲಿ ಪ್ರತಿಪಾದಿತ ವಿಷಯಗಳಿಗೆ ಲೇಖಕರು ಎಷ್ಟೆಷ್ಟು ಪ್ರಾಮುಖ್ಯ ಕೊಟ್ಟಿದ್ದಾರೆ ಎಂಬುದನ್ನೂ ತೋರಿಸುತ್ತದೆ. ಇಸ್ಯೂ೩ ರಲ್ಲಿ ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಯಃಪೃಥಿವ್ಯಾಂ ತಿಷ್ಠನ್‌, ಸಯಶ್ಚಾಯಂ ಪುರುಷೇ, ನಾನ್ಯದತೋಸ್ತಿ ದ್ರಷ್ಟೃ, ಯತ್ರಹಿ ದ್ವೈತಮಿವ ಭವತಿ, ಯತ್ರತ್ವಸ್ಯ ಸರ್ವಮಾತ್ಮೈವಾಭೂತ್‌, ಮುಂತಾಗಿ ನಲವತ್ತೆರಡು ವೇದ ಮಂತ್ರಗಳನ್ನು ಮುಖ್ಯವಾಗಿ ವಿಶ್ಲೇಷಿಸುತ್ತದೆ. ಇದರಲ್ಲಿ ಪಾರ್ಟ್‌ ೧, ಪಾರ್ಟ್‌ ೨ ಮತ್ತು ಪಾರ್ಟ್‌ ೩ ಎಂಬ ಮೂರು ವಿಭಾಗಗಳಿವೆ. ಇವುಗಳಲ್ಲಿ ಕ್ರಮವಾಗಿ ಶ್ರುತಿ, ಬ್ರಹ್ಮ ಸೂತ್ರ ಮತ್ತು ಗೀತಾ ವಾಕ್ಯಗಳ ವಿಚಾರಣೆ ಇವೆ. ಪಾರ್ಟ್‌ ೧ರ ಮೊದಲ ಎಪ್ಪತ್ತು ಪುಟಗಳಲ್ಲಿ (ಇತರ ಭಾಗಗಳಂತೆ) ಇಲ್ಲಿಯೂ ತೀರ್ಪನ್ನು ಬರೆದಿದ್ದಾರೆ. ಇಲ್ಲಿರುವ ಅಂತಿಮ ತೀರ್ಪೆಂದರೆ: ಶ್ರುತಿ, ಸೂತ್ರಗಳು ಮತ್ತು ಗೀತಾ - ಇವು ಜೀವೇಶ್ವರರಿಗೆ ಭೇದವನ್ನು ತಿಳಿಸುತ್ತವೆ; ಜೀವೇಶ್ವರರ ಅಭೇದವು ಶಷವಿಶೇಷಣದಂತೆ ಅಪ್ರಮಾಣಿಕವು; ಪರಮಾತ್ಮನು ಜೀವಜಡಾತ್ಮಕವಾದ ಪ್ರಪಂಚಕ್ಕಿಂತಲೂ ಭಿನ್ನನು ಮತ್ತು ಅನಂತ ಕಲ್ಯಾಣಗುಣ ಪರಿಪೂರ್ಣನು; ಪರಮಾತ್ಮನ ಪ್ರಸಾದದಿಂದ ಮೋಕ್ಷವನ್ನು ಸಂಪಾದಿಸಿಕೊಂಡು ಅವರವರಿಗೆ ಯೋಗ್ಯವಾದ ಆನಂದವನ್ನು ಅನುಭವಿಸಬೇಕು (ಪು ೧೯೧-೨೬೨). 

ಜಡ್ಜ್-ಮೆಂಟಿನ ನಂತರ ಸಾಮಾನ್ಯ ನ್ಯಾಯಾಲಯ ಸಂಪ್ರದಾಯದಂತೆ ಅಡಕಗಳ ರೀತಿಯಲ್ಲಿ ನ್ಯಾಯಾಲಯ ನಡಾವಳಿಗಳ ರೀತಿಯಲ್ಲಿ ವಿವರಗಳನ್ನೆಲ್ಲ ದಾಖಲಿಸಿದ್ದಾರೆ. ಅಲ್ಲಿಂದ ಮುಂದೆ ನ್ಯಾಯಾಲಯದ ವಿಚಾರಣೆ ಪ್ರಾರಂಭ. ಅಂದರೆ ದ್ವೈತಾದ್ವೈತ ವಾದ ವಿವಾದ ಪ್ರಾರಂಭವಾಗುತ್ತದೆ. ಪಾರ್ಟ್‌ ೧ ಎಂಬ ಈ ವಿಭಾಗದಲ್ಲಿ ಅದ್ವೈತ ಪ್ರತಿಪಾದಕರು ಅಭೇದವನ್ನು ಸ್ಥಾಪಿಸಲು ಬಳಸುವ ವೇದ ಮಂತ್ರಗಳನ್ನು ತೆಗೆದುಕೊಂಡು ಅವು ನಿಜವಾಗಿ ದ್ವೈತಪರ(ಎಂದರೆ ಜೀವೇಶ್ವರ ಭೇದ ತಿಳಿಸುವ)ವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಒಂದು ಹಂತದಲ್ಲಿ ಅದ್ವೈತ ಪ್ರತಿಪಾದಕರು ʼನಿರುತ್ತರʼರಾಗುವುದು ದ್ವೈತ ಮತವನ್ನು ಸ್ಥಾಪಿಸುತ್ತದೆ. 

ಈ ಭಾಗದಲ್ಲಿ  ಮೂವತ್ತು ವೇದ ಮಂತ್ರಗಳನ್ನು ವಿಶ್ಲೇಷಿಸಲಾಗಿದೆ. ಇವುಗಳಲ್ಲಿ ಬೃಹದಾರಣ್ಯಕ ಉಪನಿಷತ್ತಿನಿಂದ ೧೧, ಶ್ವೇತಾಶ್ವತರ ಉಪನಿಷತ್ತಿನಿಂದ ೬, ಛಾಂದೋಗ್ಯ ಉಪನಿಷತ್ತಿನಿಂದ ೫, ತೈತ್ತರೀಯದಿಂದ ೪, ಮುಂಡಕೋಪನಿಷತ್ತಿನಿಂದ ೩ ಮತ್ತು ಐತರೇಯದಿಂದ ೧ ಮಂತ್ರಗಳಿವೆ. ಇಲ್ಲಿ ಉದಾಹರಣೆಗಾಗಿ ಕೆಲವನ್ನು ಮಾತ್ರ ತೆಗೆದುಕೊಂಡಿದೆ.  

ಈ ಹಿಂದೆಯೇ ಪ್ರಸ್ತಾವಿಸಲಾದ ಕೆಲವು ಮಂತ್ರಗಳನ್ನೂ ಇಲ್ಲಿ ಮತ್ತೆ ವಿಶ್ಲೇಷಣೆಗೆ ಒಳಪಡಿಸಿದೆ. ಇವುಗಳ ಪ್ರಾಮುಖ್ಯವನ್ನು ಶ್ರುತಿ ಸ್ಮೃತ್ಯಾದಿಗಳಿಂದ ಮತ್ತಷ್ಟು ಸಮರ್ಥನೆಗಳನ್ನು ನೀಡಿ ಸ್ಪಷ್ಟಪಡಿಸಿದ್ದಾರೆ. ಅಂತಹವುಗಳಲ್ಲಿ ಒಂದು ಸ ಆತ್ಮಾತತ್ವಮಸಿ ಎಂಬ ಶ್ರುತಿ. ಇದನ್ನು ಈ ಹಿಂದೆಯೇ ಅರ್ಥೈಸಿದ್ದು  ಸ ಆತ್ಮಾ ಅತತ್ವಮ್‌ ಅಸಿ ಎಂದು ಪದ ಚ್ಛೇದ ಮಾಡಬೇಕೆಂದೂ ಇದರ ಅರ್ಥ ನೀನು ಆ ಪರಬ್ರಹ್ಮನಲ್ಲ ಎಂದೂ ವಿವರಿಸಿದೆ. ಇಲ್ಲಿ ಈ ಮಂತ್ರವನ್ನು ಮತ್ತೆ ವಿಶ್ಲೇಷಣೆಗೆ ಎತ್ತಿಕೊಂಡಿದೆ. ಇದರ ವಿವರಣೆ ಮತ್ತು ವಿಶ್ಲೇಷಣೆಗಳು ಇಲ್ಲಿ ಐವತ್ತು ಪುಟಗಳಷ್ಟು ವಿಸ್ತಾರವಾಗಿ ಸಾಗುತ್ತವೆ. ಈ ಅರ್ಥವನ್ನು ಬೆಂಬಲಿಸಿ ಗಟ್ಟಿಗೊಳಿಸುವ ಹಲವು ಸಮರ್ಥನ ವಾಕ್ಯಗಳನ್ನು ಉದಾಹರಿಸಿ ವಿವರಿಸಿದ್ದಾರೆ. ಇಂತಹ ಸಮರ್ಥನ ವಾಕ್ಯಗಳಲ್ಲಿ ಒಂದು ಉತತಮಾದೇಶಮಪ್ರಾಕ್ಷ್ಯಃ ಯೇನಾಶ್ರುತಂ ಶ್ರುತಂ ಭವತಿ ಅಮತಂ ಮತಂ ಅವಿಜ್ಞಾತಂ ವಿಜ್ಞಾತಮಿತಿ ಎಂಬ ಛಾಂದೋಗ್ಯೋಪನಿಷತ್ತಿನ ಮಂತ್ರ (ಪು೨೯೨). ಈ ವಾಕ್ವವನ್ನು ಶಂಕರ ಮತಾನುಯಾಯಿಗಳು ಪರಮಾತ್ಮ ಮತ್ತು ಪ್ರಪಂಚಗಳ ನಡುವೆ ಅಭೇದಕ್ಕೆ ಮತ್ತೊಂದು ಆಧಾರವೆಂದು ಉದಾಹರಿಸುತ್ತಾರೆ. “ಪರಮಾತ್ಮನ ಜ್ಞಾನದಿಂದ ಸರ್ವ ಪದಾರ್ಥಗಳ ಜ್ಞಾನವು ಆಗುತ್ತದೆಯೆಂದು ಈ ವಾಕ್ಯವು ಹೇಳುತ್ತದೆ. ಜೀವಜಡಾತ್ಮಕವಾದ ಪ್ರಪಂಚವು ಪರಮಾತ್ಮನಿಂದ ಭಿನ್ನವಾದ ಪಕ್ಷದಲ್ಲಿ ಪರಮಾತ್ಮನ ಜ್ಞಾನದಿಂದ ಜೀವಜಡಾತ್ಮಕವಾದ ಜ್ಞಾನವು ಹೇಗಾಗುವುದು?” (ಪು ೨೯೨) ಎಂಬುದು ಇವರ ವಾದ. ಹೀಗೆ ಅನ್ಯತ್ರ ಜೀವ ಜಡ ಅಭಿನ್ನತೆಯನ್ನು ವೇದಮಂತ್ರಗಳು ಹೇಳುತ್ತಿರುವುದರಿಂದ ಸ ಆತ್ಮಾತತ್ವಮಸಿ ಎಂಬಲ್ಲಿ ಅತತ್ವಮಸಿ ಎಂದು ಪದವಿಭಾಗ ಮಾಡತಕ್ಕದ್ದಲ್ಲ; ಈ ಮಂತ್ರ ತತ್ವಮಸಿ ಎಂಬುದು ಜೀವಜಡಾಭಿನ್ನತೆಯನ್ನೇ ಹೇಳುತ್ತದೆ ಎಂಬುದು ಅವರ ನಿಲುವು. ಏಕಮೇವಾದ್ವಿತೀಯಂ ಎಂಬ ಶ್ರುತಿ ಕೂಡ ಇದಕ್ಕೆ ಪೂರಕವಾಗಿದ್ದು ಪರಮಾತ್ಮನೊಬ್ಬನೇ ಇದ್ದು ಇನ್ನೊಂದು ದ್ವಿತೀಯ ವಸ್ತು ಇಲ್ಲವೆಂಬುದನ್ನೇ ಹೇಳುತ್ತದೆ ಎಂದು ಇವರು ಹೇಳುತ್ತಾರೆ (ಪು೨೯೭). ಈ ರೀತಿ ಇನ್ನೂ ಹಲವು ಸಮರ್ಥನ ವಾಕ್ಯಗಳನ್ನು ಇಲ್ಲಿ ಉದಾಹರಿಸಿದ್ದಾರೆ.

ಉತತಮಾದೇಶಮಪ್ರಾಕ್ಷ್ಯಃ ಯೇನಾಶ್ರುತಂ ಶ್ರುತಂಭವತಿ ಎಂಬ ವಾಕ್ಯದ ಅರ್ಥದ  ಬಗ್ಗೆ ವಿಸ್ತಾರವಾದ ಚರ್ಚೆ ಇಲ್ಲಿದೆ. ಕೊನೆಯಲ್ಲಿ ಶಂಕರಾಚಾರ್ಯರ ಭಾಷ್ಯಾನುಸಾರವಾಗಿ ಪರಮಾತ್ಮನ ಜ್ಞಾನವು ಬೇರೆ, ಜಗತ್ತಿನ ಜ್ಞಾನವು ಬೇರೆ ಎಂದು ಸಿದ್ಧವಾಗುತ್ತದೆಯೇ ಇಲ್ಲವೆ ಎರಡೂ ಒಂದೇ ಎಂದು ಸಿದ್ಧವಾಗುತ್ತದೆಯೇ ಎಂಬ ವಾದಿ ಪರ ವಕೀಲರ ಪ್ರಶ್ನೆಗೆ ಪರಮಾತ್ಮನ ಜ್ಞಾನವು ಬೇರೆ, ಜಗತ್ತಿನ ಜ್ಞಾನವು ಬೇರೆ ಎಂದು ಸಿದ್ಧವಾಗುತ್ತದೆ ಎಂದು ಪ್ರತಿವಾದಿ ಉತ್ತರಿಸುತ್ತಾರೆ (ಪು ೨೯೪). ಹೀಗಾಗಿ ಶಾಂಕರ ಪ್ರತಿಪಾದನೆಯಲ್ಲಿಯೇ ದ್ವೈತ ನಿಲುವಿನ ಬೀಜಗಳಿವೆ ಎಂದು ಲೇಖಕರು ಸೂಚಿಸುತ್ತಾರೆ.

ಹೀಗೆಯೇ ಏಕಮೇವಾದ್ವಿತೀಯಂ ಎಂಬ ಮಂತ್ರದ ವಿಶ್ಲೇಷಣೆ. ಏಕಮೇವಾದ್ವಿತೀಯಂ ಮಂತ್ರದಲ್ಲಿ ಏಕಂ ಎಂಬ ಪದಕ್ಕೆ ಶಂಕರಾಚಾರ್ಯರು ಮಾಡಿದ ಅರ್ಥದ ಪ್ರಕಾರವಾಗಿ ಎರಡನೆಯ ವಸ್ತುವೇ ಇಲ್ಲವೆಂದು ಸಿದ್ಧವಾಗುತ್ತದೆಯೋ ಇಲ್ಲವೋ ಎಂಬ ವಾದಿಪರ ವಕೀಲರ ಪ್ರಶ್ನೆಗೆ ಪ್ರತಿವಾದಿಯು ಬ್ರಹ್ಮನಿಗಿಂತ ಬೇರೆ ವಸ್ತುವಿಲ್ಲವೆಂದು ಸಿದ್ಧವಾಗುವುದಿಲ್ಲ ಎಂದು ಉತ್ತರಿಸುತ್ತಾರೆ. ಹಾಗೆಯೇ ಜೀವ ಈಶೋ ವಿಶುದ್ಧಾಚಿತ್‌ ಭೇದಸ್ತಸ್ಯಾಃ ತಯೋರ್ದ್ವಯೋಃ, ಅವಿದ್ಯಾತಚ್ಚಿತೋರ್ಯೋಗಃ ಷಡಸ್ಮಾಕಂ ಹ್ಯನಾದಯಃ ಎಂಬ ಶ್ಲೋಕಕ್ಕೆ ಪ್ರತಿವಾದಿ ಗಂಗಾಧರ ಶಾಸ್ತ್ರಿಗಳು (೧) ಜೀವನು (೨) ಈಶ್ವರನು (೩) ಚಿತ್‌ (೪) ಚಿತ್ತಿಗೆ ಜೀವೇಶರಿಂದ ಭೇದವು ಮತ್ತು ಜೀವೇಶ್ವರಲ್ಲಿ ಭೇದವು (೫) ಅವಿದ್ಯೆಯು (೬) ಅವಿದ್ಯೆಗೆ ಚಿತ್ತಿನ ಸಂಬಂಧವು ಎಂದು ಹೀಗೆ ಆರು ಪದಾರ್ಥಗಳು ಅನಾದಿಯಾಗಿರುವುವು ಎಂದು ಅರ್ಥ ಎಂಬುದಾಗಿ ಹೇಳುತ್ತಾರೆ (ಪು ೨೯೮ - ೨೯೯). (ಹೀಗಿದ್ದರೂ ಈ ಭೇದಗಳೆಲ್ಲ ವ್ಯಾವಹಾರಿಕ ಸತ್ಯಗಳು ಮಾತ್ರ ಆತ್ಯಂತಿಕ ಸತ್ಯವಲ್ಲ ಎಂಬುದು ಅವರ ವಾದ). ಹೀಗೆ ಪರಮಾತ್ಮ, ಜೀವ, ಜಗತ್ತು - ಇವುಗಳ ನಡುವೆ ಅಭೇದದ ವಾದ ಸುಸಂಬದ್ಧವಾಗಿಲ್ಲ ಎಂಬುದು ಈ ಅಧ್ಯಾಯದಲ್ಲಿ ಘನತರವಾಗಿ ಪ್ರತಿಪಾದಿತವಾಗಿರುವ ಅಂಶ. ಇದರ ಸಮರ್ಥನೆಗೆ ಇನ್ನೂ ಹಲವು ಉದಾಹರಣೆಗಳನ್ನು ನೀಡಿದ್ದಾರೆ.

ಹೀಗೆ ಇಲ್ಲಿ ಪರಮಾತ್ಮನು ಜೀವಜಡಾತ್ಮಕವಾದ ಪ್ರಪಂಚದಿಂದ ಭಿನ್ನನು ಎಂಬುದನ್ನು ಘನತರವಾಗಿ ಪ್ರತಿಪಾದಿಸಿದ್ದಾರೆ. ಪರಮಾತ್ಮನು ಜೀವನಿಂದ ಭಿನ್ನನು; ಪರಮಾತ್ಮನು ಬೇರೆಬೇರೆಯಾದ ಎಲ್ಲ ಜೀವಜಡಗಳಾಂತರ್ಯಾಮಿಯು ಎಂದು ಇಲ್ಲಿ ಪ್ರತಿಪಾದಿಸಲಾಗಿದೆ.

ಸ ಯಶ್ಚಾಯಂ ಪುರುಷೇ ಯಶ್ಚಾಸಾವಾದಿತ್ಯೇ ಸ ಏಕಃ (ತೈತ್ತರೀಯ ಉಪನಿಷತ್ತಿನ ಮಂತ್ರ,  ಇಲ್ಲಿ ಪು೩೬೦) ಈ ಮಂತ್ರದ ಅರ್ಥ ವಿವರಣೆ ಇಲ್ಲಿರುವಂತೆ ಹೀಗಿದೆ: ಪುರುಷನಲ್ಲಿ(ಜೀವನಲ್ಲಿ)  ಯಾವ ಪರಮಾತ್ಮನಿರುವನೋ ಆದಿತ್ಯನಲ್ಲಿ ಯಾವ ಪರಮಾತ್ಮನಿರುವನೋ ಆ ಪರಮಾತ್ಮನು ʼಏಕʼ ಒಂದೇ ಎಂದು ಜೀವಾಂತರ್ಗತನಾದ ಪರಮಾತದ್ಮನಿಂದ ಆದಿತ್ಯಾಂತರ್ಗತನಾದ ಪರಮಾತ್ಮನಿಗೆ ಭೇದವು ಇಲ್ಲವೆಂದು ಅರ್ಥವು (ಪು ೩೬೦). ಪರಮಾತ್ಮನ ಅಂತರ್ಯಾಮಿತ್ವ ಜೀವ ಜೀವ ಭೇದಗಳು ಹೀಗೆ ಸ್ಪಷ್ಟವಾಗುತ್ತವೆ. ಇಂತಹ ಅನೇಕ ಶ್ರುತಿ ವಾಕ್ಯಗಳನ್ನು ಸಮರ್ಥನೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. ನಾನ್ಯದತೋಸ್ತಿ ದ್ರಷ್ಟೃ ಎಂಬುದು ಅಂತಹವುಗಳಲ್ಲಿ ಒಂದು. ಇದಕ್ಕೆ ಪರಮಾತ್ಮನಲ್ಲದೆ ಬೇರೆ ದ್ರಷ್ಟೃವಿಲ್ಲವೆಂದು ಅರ್ಥೈಸಿ ಜೀವ ಪರಮಾತ್ಮ ಭೇದವನ್ನು ಅದ್ವೈತಿಗಳು ಅಲ್ಲಗಳೆಯುತ್ತಾರೆ. ಆದರೆ ಜೀವ ಪರಮಾತ್ಮ ಭೇದ ಉಂಟೆಂದು ಹಲವು ಪ್ರಮಾಣಗಳಿಂದ ತತ್ವವಾದಪರರು ಪ್ರತಿಪಾದಿಸುತ್ತಾರೆ. ಇನ್ನೊಂದು ಅಂತಹ ಉದಾಹರಣೆಯೆಂದರೆ ಅನ್ಯೋಸಾವನ್ಯೋಹಮಸ್ಮಿ (ಪು೪೪೧-೪೪೫). ಈ ವಾಕ್ಯ ಪರಮಾತ್ಮನಿಂದ ಇಂದ್ರಾದಿ ದೇವತೆಗಳಿಗೆ ಭೇದವನ್ನು ತಿಳಿಸುತ್ತದೆ ಎಂಬ ಪ್ರತಿಪದನೆ ಇದೆ (ಪು ೪೪೬).

ಅಜೋ ಹೈಕಃ ಎಂಬ ಶ್ರುತಿ ವಿಚಾರಣೆ ವೇಳೆ ವಾದಿಯು “ಅಜ= ಉತ್ಪತ್ತಿರಹಿತನಾದ ಒಬ್ಬ ಜೀವನು ಸತ್ವರಜಸ್ತಮೋಗುಣಾತ್ಮಕವಾದ ಅನೇಕ ಪ್ರಜೆಗಳನ್ನು ಸೃಜಿಸುವ ಪ್ರಕೃತಿಯನ್ನು ಸೇವಿಸುತ್ತಾ ಇರುತ್ತಾನೆ. ಮತ್ತೊಬ್ಬನಾದ ಮುಕ್ತ ಭೋಗವುಳ್ಳ (ಸುಖದುಃಖಗಳನ್ನು ಅನುಭವಿಸಿದ್ದು ಆದ) ಜೀವನು ಪ್ರಕೃತಿಯನ್ನು ತ್ಯಜಿಸುವವನಾಗಿರುತ್ತಾನೆ. ಹೀಗೆ ಜೀವ ಜೀವರ ನಡುವೆ ಭೇದವನ್ನು ಹೇಳುತ್ತಾ ಅನೇಕರಾದ ಪರಸ್ಪರ ಭಿನ್ನರಾದ ಜೀವರಿಂದ ಒಬ್ಬನಾದ ಪರಮಾತ್ನಿಗೆ ಭೇದವನ್ನು ತಿಳಿಸುತ್ತದೆ” ಎಂದು ತಿಳಿಸುತ್ತಾರೆ. ಹೀಗೆ ಈ ಶ್ರುತಿ ಜೀವ - ಜೀವ ಭೇದವನ್ನು ಘನತರವಾಗಿ ಸ್ಥಾಪಿಸುತ್ತದೆ (ಪು೪೨೭). ಒಂದು ಹಂತದಲ್ಲಿ ಒಂದೇ ವಿಧವಾಗಿ ಎಷ್ಟು ಎಷ್ಟು ವಾಕ್ಯಗಳನ್ನು ಕೇಳುತ್ತೀರಿ? ಸಾಕು ಮುಗಿಸಿರಿ ಎಂಬ ಕೋರ್ಟಿನ ಆದೇಶ ಬರುತ್ತದೆ. ಇದು ಸಾಮಾನ್ಯ ಓದುಗನ ಭಾವೆನೆಯೇ ಆಗಿದ್ದು ಗ್ರಂಥಕರ್ತರು ತಮ್ಮ ಓದುಗರ ಭಾವನೆಗಳನ್ನು ಎಷ್ಟು ಚೆನ್ನಾಗಿ ಗುರುತಿಸಿದ್ದಾರೆ ಮತ್ತು ಅದಕ್ಕೆ ಸ್ಪಂದಿಸಿದ್ದಾರೆ ಎಂಬದನ್ನು ಗುರುತಿಸ ಬಹುದು ( ಪು ೩೭೯). ಇದೇ ರೀತಿಯ ಇತರ ವಾಕ್ಯಗಳೂ ಇವೆ (ಉದಾ.ಪು೪೯೫)

ಪಾರ್ಟ್‌ ೨ರಲ್ಲಿ ಜೀವ ಬ್ರಹ್ಮರಿಗೆ ಭೇದವನ್ನು ಬ್ರಹ್ಮಸೂತ್ರಗಳನ್ನಾಧರಿಸಿ ಪ್ರತಿಪಾದಿಸಲಾಗಿದೆ. ಬ್ರಹ್ಮಸೂತ್ರಗಳಲ್ಲಿ ಪ್ರತಿಯೊಂದೂ ಜೀವ ಬ್ರಹ್ಮರ ಭೇದವನ್ನೇ ತಿಳಿಸುತ್ತದೆ ಎಂಬುದು ಮಾಧ್ವ ವಿದ್ವಾಂಸರ ಪ್ರತಿಪಾದನೆ. ಈ ಭಾಗದಲ್ಲಿ ಬ್ರಹ್ಮ ಸೂತ್ರಗಳ ಪ್ರಕಾರ ಪ್ರಪಂಚ ಸತ್ಯ, ಪ್ರಪಂಚಪರಮಾತ್ಮನಿಂದ ಭಿನ್ನ, ಜೀವ ಪರಮಾತ್ಮರು ಭಿನ್ನರು, ದೇವತೆಗಳೂ ಪರಮಾತ್ನಿಂದ ಮತ್ತು ಪರಸ್ಪರ ಭಿನ್ನರು ಮತ್ತು ಜೀವ ಜೀವರು ಭಿನ್ನರು ಎಂದು (ಅದ್ವೈತ ಪ್ರತಿಪಾದಕರ ವಾದಗಳನ್ನು ಖಂಡಿಸಿ) ಸ್ಥಾಪಿಸಿದ್ದಾರೆ. ಶಾಸ್ತ್ರ ದೃಷ್ಟ್ಯಾತು ಉಪದೇಶೋ ವಾಮದೇವವತ್‌ ಎಂಬುದನ್ನು ವಿಚರಿಸುತ್ತಾ “ನಾನೇ ಬ್ರಹ್ಮನು ಎಂಬ ದೃಷ್ಟಿಯು ಶಾಸ್ತ್ರ ದೃಷ್ಟಿಯಾಗುವುದಿಲ್ಲ. ನನ್ನ ಅಂತರ್ಯಾಮಿಯು ಪರಮಾತ್ಮನು ಎಂಬುದು ಶಾಸ್ತ್ರ ದೃಷ್ಟಿಯಾಗುತ್ತದೆ” (ಪು ೪೯೭) ಎಂದು ಹೇಳಿದ್ದಾರೆ. ಮುಂದುವರೆದು ಅಹಂ ಮನುರಭವಂ ಸೂರ್ಯಶ್ಚ ಎಂಬ ವಾಕ್ಯಕ್ಕೆ ಮುಂದಿರುವ ಋಗ್ವೇದ ವಾಕ್ಯಗಳಲ್ಲಿ ನಾನು ಗರ್ಭದಲ್ಲಿರುವಾಗಲೇ ʼದೇವತೆಗಳು ಪರಮಾತ್ಮನಿಂದ ಹುಟ್ಟಿದರುʼ ಎಂಬ ವಿಷಯವನ್ನು  ತಿಳಿದುಕೊಂಡಿದ್ದೇನೆ, ಸರ್ವ ಪ್ರೇರಕನಾದ ಪಮಾತ್ಮನು ಗರ್ಭದಲ್ಲಿರುವ ನನ್ನ ಶತ್ರುಗಳನ್ನು ಸಂಹರಿಸಿದನು, ಪರಿಪೂರ್ಣನಾದ ಪರಮಾತ್ಮನು ಗರ್ಭಕ್ಕೆ ಕ್ಲೇಶಕರವಾದ ವಾಯುವನ್ನು ದಾಟಿಸಿದನು ಎಂದು ವಾಮದೇವನು ಹೇಳಿರುವುದರಿಂದ (ಪು ೫೦೩) ಜೀವಾತ್ಮ ಭೇದವು ಇಲ್ಲೆಲ್ಲ  ಪ್ರತಿಪಾದಿತವಾಗಿದೆಯೆಂದೂ ವಾದಿಸಿದ್ದಾರೆ. ಹಾಗೆಯೇ ಅಹಂ ಮನುರಭವಂಸೂರ್ಯಶ್ಚ ಎಂಬುದಕ್ಕೆ ಮನು ಸೂರ್ಯ ಮತ್ತ ಬ್ರಹ್ಮರಲ್ಲಿ ಅಂತರ್ಯಾಮಿಯಾಗಿ ಪರಮಾತ್ಮನಿದ್ದಾನೆ ಎಂದರ್ಥ ಮಾಡಿ ಮನು ಸೂರ್ಯ ಬ್ರಹ್ಮ ಮುಂತಾದ ದೇವತೆಗಳಲ್ಲಿ ಭೇದವಿರುವುದನ್ನು (ತಾರತಮ್ಯವನ್ನು) ಪ್ರತಪಾದಿಸಿದ್ದಾರೆ.

೩ನೆಯ ಅಧ್ಯಾಯದ ಭಾಗ ೩ ದ್ವೈತಾದ್ವೈತ ದೃಷ್ಟಿಯಿಂದ ಭಗವದ್ಗೀತೆಯನ್ನು ಪರಿಶೀಲನೆಗೊಡ್ಡುತ್ತದೆ. ಇದು ಈ ಭಾಗದ ಅತ್ಯಂತ ಸಂಕ್ಷಿಪ್ತ ಉಪಭಾಗ. ಇದರಲ್ಲಿ ಮೂವತ್ತು ಪುಟಗಳಷ್ಟೇ ಇವೆ. ಇಡೀ ಗೀತಾ ಗ್ರಂಥವನ್ನು ಇಲ್ಲಿ ಪರೀಶೀಲಿಸಿಲ್ಲವೆಂಬುದು ಇದರಿಂದಲೇ ಸ್ಪಷ್ಟ. ದ್ವೈತಾದ್ವೈತ ಚರ್ಚೆಗೆ ಅವಕಾಶವಿರುವ ಕೆಲವು ಮುಖ್ಯ ಶ್ಲೋಕಗಳನ್ನು ಮಾತ್ರ ಇಲ್ಲಿ ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಇಲ್ಲಿ ಪರಿಶೀಲಿಸಿರುವ ಗೀತಾ ಶ್ಲೋಕಗಳು ಇವು: (೧) ಕ್ಷೇತ್ರಜ್ಞಂಚಾಪಿ ಮಾಂ ವಿದ್ಧಿ (೨)ಮಮೈವಾಂಶೋ ಜೀವಲೋಕೇ (೩) ಬಹೂನಾಂ ಜನ್ಮನಾಮಂತೇ (೪) ವಿದ್ಯಾ ವಿನಯ ಸಂಪನ್ನೇ (೫) ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವಚ. ಇವುಗಳಿಂದೆಲ್ಲ ಜೀವ ಬ್ರಹ್ಮ ಭೇದವವು ಪ್ರತಿಪಾದಿತವಾಗಿದೆ ಎಂಬುದು ಇಲ್ಲಿರುವ ವಿವರಣೆಗಳ ಒಟ್ಟು ತಾತ್ಪರ್ಯ.

ಇವುಗಳಲ್ಲಿ ಮೊದಲನೆಯ ಶ್ಲೋಕದಲ್ಲಿ ಕ್ಷೇತ್ರ ಎಂದರೆ ಜೀವ ಮತ್ತು ಹೊರ ಪ್ರಪಂಚವೆಂದೂ ಕ್ಷೇತ್ರಜ್ಞ ಎಂದರೆ ಪರಬ್ರಹ್ಮನೆಂದೂ ಅರ್ಥ.  ಹೀಗೆ ಹೇಳದೆ ನಾನೇ (ಜೀವನೇ ) ಪರಬ್ರಹ್ಮನೆಂದು ತಿಳಿದುಕೋ ಎಂದು ಅರ್ಥೈಸಿದರೆ ಅದು ಹತ್ತನೆಯ ಅಧ್ಯಾಯದಲ್ಲಿರುವ ಪರಬ್ರಹ್ಮ ಪರಂ ಧಾಮ, ಪವಿತ್ರಂ ಪರಮಂ ಭವಾನ್‌ ಇತ್ಯಾದಿ ಶ್ಲೋಕಗಳಿಗೆ ವಿರುದ್ಧವಾಗುತ್ತದೆ ಎಂದೂ ಆದ್ದರಿಂದ ಕ್ಷೇತ್ರಜ್ಞಂಚಾಪಿ ಮಾಂ ವಿದ್ಧಿ ಎಂಬ ಶ್ಲೋಕವು ಜೀವ - ಪರಮಾತ್ಮ ಮತ್ತು ಹೊರ ಪ್ರಪಂಚಗಳ ನಡುವಣ ಭೇದವನ್ನು ತಿಳಿಸುತ್ತದೆ ಎಂದೂ ಇಲ್ಲಿಯ ಪ್ರತಿಪಾದನೆ.  

ಎರಡನೆಯ ಶ್ಲೋಕ ಮಮೈವಾಂಶೋ ಜೀವ ಲೋಕೇ ಜೀವಭೂತಸ್ಸನಾತನಃ. ಜೀವನು ಪರಮಾತ್ಮನ ಅಂಶನು ಎಂದರೆ ಪರಮಾತ್ಮನ ಅಂಶಕ್ಕೆ ಸಮಾನನಾದವನು - ಅತ್ಯಲ್ಪನು ಎಂದು ಅಭಿಪ್ರಾಯವು. ಜೀವನು ಪರಮಾತ್ಮನ ಒಂದು ಭಾಗವೇ ಎಂದು ಅಭಿಪ್ರಾಯವಲ್ಲ ದೇವದತ್ತನಲ್ಲಿ ಒಂದು ಲಕ್ಷ ರೂಪಾಯಿಗಳಿದ್ದರೆ ಮತ್ತು ಚೈತ್ರನಲ್ಲಿ ಹತ್ತು ಸಾವಿರ ರೂಪಾಯಿಗಳಿದ್ದರೆ ದೇವದತ್ತನ ಹತ್ತನೆಯ ಒಂದಂಶ ಚೈತ್ರ ಎಂದು ಹೇಳುತ್ತೇವೆಯಷ್ಟೆ? ಹಾಗೆ. ಹೀಗೆ ಜೀವ ಪರಮಾತ್ಮ ಭೇದ ಇಲ್ಲಿ ವಿವಕ್ಷಿತ.

ಬಹೂನಾಂ ಜನ್ಮನಾಮಂತೇ ಜ್ಞಾನವಾನ್‌ ಮಾಂ ಪ್ರಪದ್ಯತೇ. ವಾಸುದೇವಸ್ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ಎಂಬುದು ಇಲ್ಲಿ ಚರ್ಚೆಗೊಳಗಾಗಿರುವ ಮೂರನೆಯ ಶ್ಲೋಕ. ಇಲ್ಲಿ ವಾಸುದೇವಸ್ಸರ್ವಂ ಎಂಬ ಪದ ವಿವಾದದ ಮೂಲ. ಇದಕ್ಕೆ ಎಲ್ಲವೂ ವಾಸುದೇವನೇ ಎಂದರ್ಥ ಮಾಡಿ ವಾಸುದೇವ ಮತ್ತು ಈ ಜೀವಜಡಾತ್ಮಕಪ್ರಪಂಚಕ್ಕೆ ಅಭೇದವನ್ನು ಅದ್ವೈತಿಗಳು ಪ್ರತಿಪಾದಿಸಿದರೆ, ತತ್ವವಾದಪರರು ವಾಸುದೇವನು ಸರ್ವನಿಯಾಮಕನು ಎಂದು ಅರ್ಥೈಸಿ ನಿಯಮ್ಯ ನಿಯಾಮಕ ಭಾವದಿಂದ ಈ ವಾಕ್ಯವು ವಾಸುದೇವ ಮತ್ತು ಈ ಜೀವ ಜಡಾತ್ಮಕ ಪ್ರಪಂಚ ಇವು ಬೇರೆ ಬೇರೆ ಎಂದು ಪ್ರತಿಪಾದಿಸುತ್ತಾರೆ.

ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ, ಶುನಿಚೈವ ಶ್ವಪಾಕೇಚ ಪಂಡಿತಾಸ್ಸಮದರ್ಶಿನಃ ಎಂಬುದು ಇಲ್ಲಿ ವಿಮರ್ಶೆಗೆ ಒಳಗಾದ ನಾಲ್ಕನೆಯ ಶ್ಲೋಕ. ಇಲ್ಲಿ ವಿದ್ವಾಂಸ, ಹಸು, ನಾಯಿ, ಕಟುಕ ಇವರೆಲ್ಲರೂ ಪರಬ್ರಹ್ಮ ಸ್ವರೂಪರೇ ಈ ರೀತಿಯಲ್ಲಿ ʼಸಮರುʼ  ಎಂದು ತಿಳಿಯುವವನು  ಪಂಡಿತನು ಎಂಬುದು ಅದ್ವೈತಪರರ ವಾದ. ಹೀಗೆ ಈ ಶ್ಲೋಕವು ಜೀವರಲ್ಲಿ ಮತ್ತು ಜೀವ ಪರಮಾತ್ಮರಲ್ಲಿ ಅಭೇದವನ್ನು ಹೇಳುತ್ತದೆ ಎಂಬುದು ಅವರ ಮತ. ಇವರೆಲ್ಲರಲ್ಲಿಯೂ ಇರುವ ಪರಬ್ರಹ್ಮನನ್ನು ನೋಡ ಬಲ್ಲವನು ಪಂಡಿತನು ಎಂಬುದು ತತ್ವವಾದ ಪರ ಅರ್ಥ. ಸಮ ಎಂಬುದು ಪರಬ್ರಹ್ಮ ವಾಚಿ. ಈ ವಾಕ್ಯದಲ್ಲಿ ತಿಳಿಯ ಬಲ್ಲವನೊಬ್ಬನಿದ್ದಾನೆ ಮತ್ತು ತಿಳಿಯತಕ್ಕಂತಹುದೊಂದಿದೆ. ಹೀಗೆ ಜ್ಙಾತೃ - ಜ್ಞೇಯ ಭಾವವು ಈ ಶ್ಲೋಕದಲ್ಲಿ ಕಂಡು ಬರುತ್ತಿದೆ; ಆದ್ದರಿಂದ ಭೇದವೇ ಈ ಶ್ಲೋಕದ ತಾತ್ಪರ್ಯ. ಆದರೆ ಅದ್ವೈತಿಗಳ ಪ್ರಕಾರ ಈ ಜ್ಞಾತೃ - ಜ್ಞೇಯ ಭಾವವು ವ್ಯಾವಹಾರಿಕವು ಆತ್ಯಂತಿಕವಾದುದಲ್ಲ. (ಇದನ್ನು ಸಮರ್ಥಿಸಲು ಅವರು ಬೇರೆ ಬೇರೆ ಶ್ರುತಿಗಳನ್ನೂ ಇತರ ವಾಕ್ಯಗಳನ್ನೂ ಉದಾಹರಿಸುತ್ತಾರೆ. ಆದರೆ ಈ ಎಲ್ಲವೂ ಭೇದವನ್ನೇ ತಿಳಿಸುತ್ತದೆ ಎಂಬುದು ದ್ವೈತ ಪ್ರತಿಪಾದನೆ).

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ಎಂಬಲ್ಲಿಂದ ಪ್ರಾರಂಭವಾಗಿ ಏತದ್ಬುಧ್ಯಾ ಬದ್ಧಿಮಾನ್‌ ಸ್ಯಾತ್‌ ಕೃತ ಕೃತ್ಯಶ್ಚ ಭಾರತ ಎಂಬಲ್ಲಿವರೆಗಿನ ಐದು ಶ್ಲೋಕಗಳನ್ನು ಅನಂತರ ಪರಿಶೀಲಿಸಿದ್ದಾರೆ. ಇದರಲ್ಲಿ ಮೊದಲನೆಯದು ಮುಖ್ಯವಾದುದು. “ಈ ಶ್ಲೋಕದಲ್ಲಿ ಕ್ಷರಭೂತ ಎಂದೂ ಅಕ್ಷರ ಭೂತ ಎಂದೂ ಇಬ್ಬರು ಪುರುಷರು ಉಂಟು. ಚತುರ್ಮುಖನೇ ಮೊದಲಾದ ಸಮಸ್ತ ಪ್ರಾಣಿಗಳೂ ಕ್ಷರ ಪುರುಷರು. ಅಕ್ಷರಃ=ದೇಹನಾಶವಿಲ್ಲದ ಮಹಾಲಕ್ಷ್ಮಿಯು ಅಕ್ಷರ ಪುರುಷಳೆನಿಸಿಕೊಳ್ಳುವಳು. ಉತ್ತಮ ಪುರುಷನು ಈಕ್ಷರಾಕ್ಷರ ಪುರುಷರಿಗಿಂತ ಭಿನ್ನನಾದವನು.ಆತನೇ ಪರಮಾತ್ಮನೆಂದು ಶ್ರುತ್ಯಾದಿಗಳಲ್ಲಿ ಹೇಳಿಸಿಕೊಳ್ಳುತ್ತಾನೆ” (ಪು ೫೪೬). ಹೀಗೆ ಕ್ಷರಅಕ್ಷರ ಪ್ರಾಣಿಗಳಲ್ಲಿ ಜೀವನಿಗೆ ಪರಮಾತ್ಮನಿಂದ ಭೇದವನ್ನು ಹೇಳಿ ಈ ಭೇದಜ್ಞಾನವು ಮೋಕ್ಷ ಸಾಧನವು ಎಂದು ಹೇಳಿದೆ.

ಹೀಗೆ ಗೀತೆಯಲ್ಲಿ ಜೀವೇಶ್ವರ ಭೇದವು ಪ್ರತಿಪಾದಿತವಾಗಿದೆ ಎಂದು ಇಲ್ಲಿ ಸ್ಥಾಪಿಸಿದ್ದಾರೆ (೫೨೩-೫೫೩)

ನಾಲ್ಕನೆಯ ಇಸ್ಯು ಪರಮಾತ್ಮನು ಸರ್ವಗುಣ ಸಂಪನ್ನ ಎಂದರೆ ಪರಬ್ರಹ್ಮನು ಸರ್ವಜ್ಞತ್ವ, ಸರ್ವಶಕ್ತಿಮತ್ವ, ಜಗತ್ಕರ್ತೃತ್ವ, ಪಾಲಕತ್ವ, ಸರ್ವನಿಯಾಮಕತ್ವ, ಸ್ವತಂತ್ರತ್ವ, ಸರ್ವಸಂಹಾರಕತ್ವ, ಜ್ಞಾನದಾತೃತ್ವ, ಸರ್ವೋತ್ತಮತ್ವ, ವಿಚಿತ್ರಶಕ್ತಿಮತ್ವ, ಚಂದ್ರಸೂರ್ಯಾದ್ಯಾಧಾರತ್ವ, ಸರ್ವಪ್ರಕಾಶತ್ವ, ಕರ್ಮಫಲದಾತೃತ್ವ, ಸರ್ವಾಶ್ರಯತ್ವ, ಸಾಕ್ಷಾದ್ದ್ರಷ್ಟೃತ್ವಾದಿ ಸಮಸ್ತ ಕಲ್ಯಾಣಗುಣಗಳಿಂದ ಪೂರ್ಣನು ಎಂದು ಪ್ರತಿಪಾದಿಸುತ್ತದೆ. ಇಂತಹ ಒಂದು ಪ್ರತಿಪಾದನೆ ಅಗತ್ಯವಾದುದು ಬ್ರಹ್ಮ ನಿರ್ಗುಣ ನಿರ್ವಿಶೇಷ ಎಂಬ ಅದ್ವೈತಿಗಳ ವಾದದಿಂದ. ಇದರಿಂದಾಗಿ ಅದ್ವೈತಿಗಳು ಉಲ್ಲೇಖಿಸಿದ ಅದೇ ಮಂತ್ರಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಿ ಬ್ರಹ್ಮ ಸರ್ವಗುಣ ಸಂಪನ್ನನೆಂದು ಸ್ಥಾಪಿಸಿರುವುದು ಇಲ್ಲಿಯ ವೈಶಿಷ್ಟ್ಯ.

ಇಲ್ಲಿ ಹಲವು ಆಧಾರ ವಾಕ್ಯಗಳು ಪ್ರಸ್ತಾವಿತವಾಗಿವೆ. ಅವುಗಳಲ್ಲಿ ಪ್ರಾತಿನಿಧಿಕವಾಗಿ ಮೂರು ಆಧಾರ ವಾಕ್ಯಗಳನ್ನು ಇಲ್ಲಿ ಉದಾಹರಿಸಿದೆ: ನಿರ್ಗುಣಂ ಗುಣ ಭೋಕ್ತೃಂಚ ಎಂಬ ಗೀತಾ ವಾಕ್ಯ, ಕೇವಲೋ ನಿರ್ಗುಣಶ್ಚ ಎಂಬ ಶ್ವೇತಾಶ್ವೇತರೋಪನಿಷತ್ತಿನ ವಾಕ್ಯ ಮತ್ತು ನಸ್ಥಾನತೋಪಿಪರಸ್ಯೋಭಯಲಿಂಗಂ ಸರ್ವತ್ರಹಿ ಎಂಬ ಬ್ರಹ್ಮ ಸೂತ್ರ. ತತ್ವವಾದದ ಪ್ರಕಾರ ನಿರ್ಗುಣಂ ಗುಣ ಭೋಕ್ತೃಂಚ ಎಂಬಲ್ಲಿರುವ ನಿರ್ಗುಣಂ ಪದಕ್ಕೆ ಸತ್ವರಜಸ್ತಮೋ ಗುಣ ವಿವರ್ಜಿತನೆಂದು ಮಾತ್ರ ಅರ್ಥ; ಸರ್ವಜ್ಞತ್ವ, ಸರ್ವಶಕ್ತಿತ್ವ, ಸರ್ವ ವ್ಯಾಪ್ತತ್ವ ಇತ್ಯಾದಿಗುಣ ಸಂಪನ್ನನೇ ಹೌದು. ಈ ವಾಕ್ಯಕ್ಕೆ ಅದ್ವೈತದ ಪ್ರಕಾರವೂ ಇದೇ ಅರ್ಥ ಎಂಬುದಾಗಿ ಇಲ್ಲಿ ಪ್ರತಿವಾದಿಯಾಗಿರುವ ಗಂಗಾಧರ ಶಾಸ್ತ್ರಿ ಹೇಳುತ್ತಾರೆ. ಕೇವಲೋ ನಿರ್ಗುಣಶ್ಚ ಎಂಬ ಶ್ರುತಿಯ ಪೂರ್ವದಲ್ಲಿ ಏಕೋದೇವಸ್ಸರ್ವಭೂತೇಷು ಗೂಢಃ ಸರ್ವ ವ್ಯಾಪೀ ಸರ್ವಭೂತಾಂತರಾತ್ಮಾll ಕರ್ಮಾಧ್ಯಕ್ಷಃ ಸರ್ವಭೂತಾಧಿವಾಸಃl ಸಾಕ್ಷೀ ಚೇತಾ ಎಂದಿದೆ (೫೯೦). ಇದರ ಅರ್ಥವು ಇದೇ ಗಂಗಾಧರ ಶಾಸ್ತ್ರಿಗಳು ಹೇಳಿದಂತೆ ಮತ್ತು ತತ್ವವಾದ ಪರ ವಕೀಲರು ಒಪ್ಪಿದಂತೆ ಹೀಗಿದೆ: ಏಕಃ= ಒಬ್ಬನೇ (ಎರಡನೆಯ ವಸ್ತುವಿಲ್ಲದವನು) ದೇವಃ = ಕ್ರೀಡಾದಿ ಗುಣಗಳಿಂದ ಕೂಡಿದವನು ಸರ್ವಭೂತೇಷು ಗೂಢಃ = ಸರ್ವ ಪ್ರಾಣಿಗಳಲ್ಲಿಯೂ ಇರುವವನು, ಸರ್ವವನ್ನೂ ವ್ಯಾಪಿಸಿಕೊಂಡಿರುವವನು; ಇಷ್ಟೇ ಅಲ್ಲ! ಸರ್ವ ಪ್ರಾಣಿಗಳಲ್ಲಿದ್ದು ನಿಯಮಿಸುವವನು, ಕರ್ಮಾಧ್ಯಕ್ಷಃ = ಪ್ರಾಣಿಗಳಿಂದ ಮಾಡಲಪಟ್ಟ ಕರ್ಮಗಳಿಗೆ ಫಲಗಳನ್ನು ಕೊಡುವವನು, ಸರ್ವಭೂತಾಧಿವಾಸಃ = ಸರ್ವ ಭೂತಗಳಿಗೂ ಆಶ್ರಯನು, ಸಾಕ್ಷೀ = ಸರ್ವವನ್ನೂ ನೋಡುವವನು, ಕೇವಲ ಶುದ್ಧನು, ನಿರ್ಗುಣಃ = ಸತ್ವ ರಜಸ್ತಮೋ ಗುಣಗಳಿಂದ ರಹಿತನು  (ಅಲ್ಲಿಯೇ). ಏಕೋ ದೇವಃ ಮತ್ತು ಸರ್ವ ಭೂತಾಂತರಾತ್ಮಾ (ದೇವನು ಒಬ್ಬ ಮತ್ತು ಅವನನು ಸರ್ವ ಪ್ರಾಣಿಗಳನ್ನು ನಿಯಮಿಸುವವನು) ಎಂಬ ಎರಡು ಪದಗಳಿಂದ ಬ್ರಹ್ಮಾತಿರಿಕ್ತವಾದ ಎರಡನೆಯ ವಸ್ತುವಿದೆಯೆಂದು ಸಿದ್ಧಿಸುತ್ತದೆ (೫೯೧).  ನಸ್ಥಾನತೋಪಿಪರಸ್ಯೋ ಭಯಲಿಂಗಂ ಸರ್ವತ್ರಹಿ ಎಂಬುದು ಬ್ರಹ್ಮ ಸೂತ್ರ (೩-೨-೧೧ ಇದನ್ನು ಈ ಪುಸ್ತಕದ ಪು ೬೦೪ರಲ್ಲಿ ೩-೨-೨ಎಂದು ತಪ್ಪಾಗಿ ಮುದ್ರಿಸಿದೆ). ಸ್ಥಾನತಃ = ಸ್ಥಾನದ ಸಂಬಂಧದಿಂದಾಗಿ ಅಪಿ = ಕೂಡ ಪರಸ್ಯ = ಪರ ಬ್ರಹ್ಮನಿಗೆ ನ =ಯಾವುದೇ ತರಹದ ದೋಷದೊಡನೆ ಸಂಸರ್ಗವು ಆಗುವುದಿಲ್ಲ ಹಿ = ಏಕೆಂದರೆ ಸರ್ವತ್ರ = ಎಲ್ಲ ವೇದವಾಕ್ಯಗಳೂ  ಆ ಪರಬ್ರಹ್ಮನನ್ನು ಉಭಯಲಿಂಗಂ = ಎರಡೂ ತರಹದ ಲಕ್ಷಣಗಳಿಂದ ಯುಕ್ತ ಎಂದರೆ ಸರ್ವ ಪ್ರಕಾರ ದೋಷರಹಿತನು ಈ ರೀತಿಯಲ್ಲಿ ನಿರ್ವಿಶೇಷನು. ಈ ಪ್ರತಿಪದಾರ್ಥ ನಿರ್ವಚನದಲ್ಲಿ ಶಂಕರ ಮತ್ತು ಮಧ್ವರಲ್ಲಿ ಗಣನೀಯ ವ್ಯತ್ಯಾಸವೇನೂ ಇಲ್ಲ. ಆದರೆ ನಿರ್ವಿಶೇಷನೆಂದರೆ ಸರ್ವಗುಣ ರಹಿತನೆಂಬುದು ಶಾಂಕರ ಅರ್ಥವಾದರೆ ಸತ್ವರಜಸ್ತಮೋ ಗುಣ ರಹಿತನಾಗಿದ್ದು ಸರ್ವಗುಣ ಸಂಪನ್ನನೆಂಬುದು ಮಧ್ವಮತದ ಪ್ರತಿಪಾದನೆ. ನಿರ್ವಿಶೇಷನೆಂಬುದಕ್ಕೆ ಇತರೆಡೆಗಳಲ್ಲಿಯೂ ಈ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಮತ್ತು ಶಂಕರ ಭಾಷ್ದಲ್ಲಿಯೇ ಈ ಪದಕ್ಕೆ ಸತ್ವರಜಸ್ತಮೋ ಗುಣ ವಿರಹಿತ ಎಂಬರ್ಥ ಹಲವು ಕಡೆ ನಿರ್ವಚಿತವಾಗಿದೆ. 

ಈ ಇಸ್ಯುದ ಉಪಸಂಹಾರ ರೂಪವಾಗಿ ಗ್ರಂಥಕರ್ತರು ಹೀಗೆ ತೀರ್ಮಾನಿಸಿರುವುದು ಸಯುಕ್ತಿಕವಾಗಿದೆ: “ಹೀಗೆ ಬ್ರಹ್ಮನು ಸರ್ವಜ್ಞತ್ವಾದಿ ಅನಂತ ಗುಣಗಳಿಂದ ಕೂಡಿದವನೆಂಬ ವಿಷಯದಲ್ಲಿ ಶ್ರುತಿ, ಸೂತ್ರ, ಗೀತರೂಪವಾದ ಪ್ರಸ್ಥಾನತ್ರಯದ ಆಧಾರಗಳು ಇವೆ, ಬ್ರಹ್ಮನು ಸರ್ವಜ್ಞತ್ವಾದಿ ಗುಣರಹಿತನು ಎಂಬ ವಿಷಯದಲ್ಲಿ ಒಂದು ಆಧಾರವೂ ಇಲ್ಲ. ಆದುದರಿಂದ ಬ್ರಹ್ಮನು ಸರ್ವಜ್ಞತ್ವಾದಿ ಅನಂತಗುಣಗಳಿಂದ  ಯುಕ್ತನು” (ಪು ೬೪೦). ಪರಮಾತ್ಮನು ಸರ್ವಜ್ಞತ್ವ, ಸರ್ವ ಶಕ್ತಿಮತ್ವ, ಜಗತ್ಕರ್ತೃತ್ವ, ಪಾಲಕತ್ವ, ಮುಕ್ತಾಮುಕ್ತನಿಯಾಮಕತ್ವ,  ಸರ್ವಸ್ಡಾಮಿತ್ವ, ಜ್ಞಾನದಾತೃತ್ವ ಇತಾದಿ ಸರ್ವಗುಣ ಸಂಪನ್ನನು (ಪು ೬೦೫).

ಇಸ್ಯು ೫ ಈ ಗ್ರಂಥದಲ್ಲಿ ದಾಖಲಾದ ವಾದ-ವಿವಾದಗಳ ಸರಣಿಯಲ್ಲಿ ತತ್ವವಾದ ಪರರಿಂದ ಅಂತಿಮ ವಾದಘಾತ. ಇದರಲ್ಲಿ ಅದ್ವೈತ ಮತ ಮತ್ತು ಬೌದ್ಧ ಮತಗಳನ್ನು ತುಲನಾತ್ಮಕವಾಗಿ ನೋಡಲಾಗಿದೆ. ಅದ್ವೈತವು ವೈದಿಕ ಭಾಷೆಯಲ್ಲಿ ನಿರೂಪಿಸಲಾದ ಬೌದ್ಧಮತವೇ ಆಗಿದೆ; ಹೀಗಾದ್ದರಿಂದ ಅದು ಅವೈದಿಕ ಎಂಬುದು ಇಲ್ಲಿರುವ ಮುಖ್ಯ ವಾದ. ಹಿಂದಿನ ಅಧ್ಯಾಯಗಳಲ್ಲಿ ವೇದ ಮಂತ್ರಗಳನ್ನು ಪ್ರಸ್ತಾವಿಸಿ ಅವು ಲೋಕದ ಮಿಥ್ಯಾತ್ವವನ್ನಾಗಲೀ ಪರಮಾತ್ಮನ ನಿರ್ಗುಣತ್ವ ನಿರ್ವಿಶೇಷತ್ವಗಳನ್ನಾಗಲೀ ಪ್ರತಿಪಾದಿಸದೆ ತತ್ವವಾದವನ್ನೇ ಪ್ರತಿಪಾದಿಸುತ್ತವೆ ಎಂಬುದನ್ನು ಘನತರವಾಗಿ ಸ್ಥಾಪಿಸಿದ್ದಾರೆ. ಹೀಗಾಗಿ ೫ನೆಯ ಇಸ್ಯುದಲ್ಲಿ ವೇದ ಮಂತ್ರಗಳಿಗೆ ಅದ್ವೈತ ಪರ ಅರ್ಥಗಳು ಅವುಗಳ ಖಂಡನೆ ಅರ್ಥವನ್ನು ನೇರ್ಪುಗೊಳಿಸುವುದು ಇಂತಹ ಪ್ರಕ್ರಿಯೆಗಳು ಇಲ್ಲ. ಬದಲಾಗಿ ಇತರಮೂಲಗಳಿಂದ ಬೌದ್ಧವಾದ, ವಿಜ್ಞಾನ ವಾದ ಇಂತಹವುಗಳನ್ನು ಪ್ರಸ್ತಾವಿಸಿ ಹೇಗೆ ಇವುಗಳೇ ಅದ್ವೈತ ಮತ್ದಲ್ಲಿಯೂ ಪ್ರಸಕ್ತವಾಗಿವೆ ಎಂಬುದನ್ನು ವಿವರಿಸಿದ್ದಾರೆ. 

ತಮ್ಮದು ಬೌದ್ಧಮತದ ಮತ್ತೊಂದು ಅವತರಣಿಕೆಯಲ್ಲ ಎಂಬುದಕ್ಕೆ ಅದ್ವೈತವಾದಿಗಳ ಸಮರ್ಥನೆ ಎಂದರೆ ತಮ್ಮ ಮತ ಸಂಧ್ಯಾವಂದನಾದಿ ವೈದಿಕ ಕರ್ಮಗಳನ್ನು ಒಪ್ಪುತ್ತದೆ; ಜಗತ್ತನ್ನು ಮತ್ತು ಜಗತ್ತಿನಲ್ಲಿರುವ ಭೇದಗಳನ್ನು ವ್ಯವಹಾರಿಕ ಸತ್ಯವೆಂದು ಒಪ್ಪುತ್ತದೆ. ಬೌದ್ಧಮತವು ಇವಾವುದನ್ನೂ ಒಪ್ಪುವುದಿಲ್ಲ ಎಂಬುದು. ಇದಕ್ಕೆ ಪ್ರತಿವಾದವೆಂದರೆ ಅದ್ವೈತ ಸಿದ್ಧಾಂತದಲ್ಲಿ ಆತ್ಯಂತಿಕವಾಗಿ ಬ್ರಹ್ಮಾನುಭವವೇ ಮುಖ್ಯವಾಗಿದ್ದು ಅದು ಜ್ಞಾನರೂಪ ಮತ್ತು ಆನಂದ ರೂಪವಾದುದು (ಪು ೬೮೫); ಕೆಲವು ಅದ್ವೈತ ಗ್ರಂಥಗಳಲ್ಲಿ ಶೂನ್ಯವು ಸತ್ಯಸ್ವರೂಪವೆಂದೂ ಹೇಳಿದೆ (ಪು ೬೮೫). ಬೌದ್ಧರ ಶೂನ್ಯವೂ ಇದೇ ಸ್ವರೂಪಪದ್ದು. ಆದ್ದರಿಂದ ಅದ್ವೈತ ಮತವು ಬೌದ್ಧ ಮತವನ್ನೇ ಇನ್ನೊಂದು ಬಗೆಯಾಗಿ ಹೇಳಿದ್ದು ಎಂಬುದು ತತ್ವವಾದಪರ ನಿಲುವು.

  ದ್ವೈತಾದ್ವೈತ ಮತಗಳೆರಡೂ ವೇದಮಂತ್ರಗಳನ್ನು ಅರ್ಥೈಸುವುದರಿಂದಲೇ ಪ್ರಾರಂಬವಾದುವು. ಎರಡೂ ಪ್ರಸ್ಥಾನತ್ರಯಕ್ಕೆ ಭಾಷ್ಯ, ವ್ಯಾಖ್ಯಾನ ಇತ್ಯಾದಿಗಳ ರಚನೆಯಿಂದಲೇ ಪ್ರತಿಪಾದಿತವಾದುವು. ಈ ದೃಷ್ಟಿಯಿಂದ ನೋಡಿದಾಗ ಅದ್ವೈತವು ವೇದ ಮಂತ್ರಗಳ ಒಂದು ರೀತಿಯ ಅರ್ಥ ನಿರೂಪಣೆ ಮತ್ತು ತದಾಚರಣೆಗಳ ಪದ್ಧತಿ; ದ್ವೈತ ಮತವು ವೇದ ಮಂತ್ರಗಳ ಅರ್ಥವನ್ನು ನೇರ್ಪುಗೊಳಿಸುವ ಆದ್ದರಿಂದ ಭಿನ್ನವಾದ ರೀತಿ ಮತ್ತು ತದನುಸಾರ ಆಚರಣೆಗಳ ಪದ್ಧತಿ. ಈ ಗ್ರಂಥದಲ್ಲಿಯೇ ಪ್ರತಿವಾದಿ ಹೇಳಿರುವಂತೆ ಯಜ್ಞ ಸ್ವರ್ಗಾದಿ ಲೋಕಗಳು ಬ್ರಾಹ್ಮಣಾದಿ ವರ್ಣಗಳು ಉಪಾಸನಾಗಳು ಇವೇ ಮೊದಲಾದ ಜಗತ್ತು ಸುಳ್ಳು ಆದಗ್ಯೂ ಆ ಕರ್ಮವನ್ನು ಮತ್ತು ಉಪಾಸನವನ್ನು ಮಾಡುವ ಮನುಷ್ಯನಿಗೆ ಅಂತಃಕರಣ ಶುದ್ಧಿಯಾಗುತ್ತದೆ. ಶುದ್ಧವಾದ ಅಂತಃಕರಣ ಉಳ್ಳ ಅಧಿಕಾರಿಗೆ ವೇದಾಂತ ಶಾಸ್ತ್ರವು ಬ್ರಹ್ಮನ ಯಥಾರ್ಥ ಜ್ಞಾನವನ್ನು ಹುಟ್ಟಿಸಿಕೊಡುತ್ತದೆ (ಪು೬೯೭). 

ಇಲ್ಲಿ ಪ್ರಸ್ತಾವಿತವಾಗಿರುವ ದ್ವೈತಮತ ತತ್ವಗಳಾಗಲೀ ಅದ್ವೈತಮತ ತತ್ವಗಳಾಗಲೀ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ತಿಳಿಸುವಂತಹವಲ್ಲ. ಅವು ಯಾವ ನೆಲೆಯಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸ ಬೇಕು ಮತ್ತು ಯಾವ ಮಾರ್ಗದಲ್ಲಿ ಮುಂದುವರೆಯಬೇಕು ಎಂಬ ಬಗ್ಗೆ ಇರರುವಂತಹವು. ದೇವರೇ ಎಲ್ಲ, ಈ ಪ್ರಪಂಚವಿಲ್ಲ ಎಂಬುದು ಸಾಧಕನಿಗೆ ಅದ್ವೈತ ಸಿದ್ಧಪಡಿಸಿಕೊಡುವ ನೆಲಗಟ್ಟಾದರೆ ಈ ಪ್ರಪಂಚವಿದೆ ಮತ್ತು ಇದರ ಮೂಲಕವೇ ದೇವರ ಸಾಕ್ಷಾತ್ಕಾರವಾಗ ಬೇಕು ಎಂಬುದು ತತ್ವವಾದ ಒದಗಿಸಿಕೊಡುವ ನೆಲೆ. ಹಾಗೆಯೇ ಪರಮಾತ್ಮ ನಿರ್ಗುಣ ಎಂದು ಭಾವಿಸಿ ಅದ್ವೈತಾನುಯಾಯಿ ಸಾಧನೆಯನ್ನು ಪ್ರಾರಂಭಿಸಬೇಕಾಗಿದೆಯಾದರೆ ಪರಮಾತ್ಮ ಸರ್ವಗುಣ ಸಂಪನ್ನ ಎಂಬ ಪೂಜೆಯೊಂದಿಗೆ ತತ್ವವಾದಪರನು ಸಾಧನೆಯಲ್ಲಿ ತೊಡಗಬೇಕಾಗುತ್ತದೆ.

ಒಟ್ಟಿನಲ್ಲಿ ಪುಸ್ತಕವು ಆಸಕ್ತಿದಾಯಕ ಮತ್ತು ಜ್ಞಾನದಾಯೀ ಓದನ್ನುನೀಡುತ್ತದೆ ಎನ್ನಬಹುದು.