Search This Blog

Thursday, 20 January 2022

ಈಶಾವಾಸ್ಯೋಪನಿಷತ್ತು: ಒಂದು ಸಾಮಾಜಿಕ ವಿವರಣೆ

 



ಈಶಾವಾಸ್ಯೋಪನಿಷತ್ತು: ಒಂದು ಸಾಮಾಜಿಕ ವಿವರಣೆ

       

  “ಪೂರ್ಣವದು ಪೂರ್ಣವಿದು

        ಸಂಪೂರ್ಣವದು ಸಂಪೂರ್ಣವಿದು

        ಪೂರ್ಣ ದೊಳಗಿಂದುದ್ಭವಿ ಸುವುದದು 

        ಕಳಿಯಲ್ಕದು ಸಂಪೂರ್ಣ ವೇ ಅಹುದು... 

        ಶಾಂತಿ ನಿಲುವುದು ಈ ಪೂರ್ಣದೊಳಗೆ...!!”

                                  (ಅನು:ವೇದಪ್ರಕಾಶ)                     

ಭಾಗ ೧


  ಉಪನಿಷತ್ತುಗಳು, ಭಗವದ್ಗೀತೆ ಮತ್ತು ಈ ತರಹದ ಕೃತಿಗಳೆಲ್ಲ ಆಧ್ಯಾತ್ಮಿಕ ಸಾಧನಾ ಮಾರ್ಗವನ್ನು ವಿವರಿಸುವಂತಹವು ಎಂಬುದು ಸಾಮಾನ್ಯ ತಿಳಿವಳಿಕೆ . ತನ್ನಲ್ಲಿರುವ ಭಗವಂತನನ್ನು ವ್ಯಕ್ತಿ ಹೇಗೆ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂಬುದನ್ನು ತಿಳಿಸುವಂತಹವು. ಆದರೆ ಇಂತಹ ಸಾಧನೆಗೆ ವ್ಯಕ್ತಿಯು ನೀತಿವಂತನೂ ಶಿಸ್ತುಬದ್ಧನೂ ಆಗಿರುವಂತೆ ತನ್ನನ್ನು ತಾನು ರೂಪಿಸಿಕೊಳ್ಳುವುದು ಪ್ರಥಮ ಅಗತ್ಯ. ಇವುಗಳನ್ನು ಸಾಧಿಸುವ ಬಗೆಯೂ ಉಪನಿಷತ್ತುಗಳ ವಸ್ತುವಿಷಯದಲ್ಲಿ ಸೇರಿವೆ. ಇವಲ್ಲದೆ ಬ್ರಹ್ಮದ ಸ್ವರೂಪದ ತಿಳಿವಳಿಕೆ, ಎಂತಹ ಪರಿಸರ ಬ್ರಹ್ಮ ಜ್ಞಾನದ ಗಳಿಕೆಗೆ ಪೂರಕ ಎಂಬುದು, ಬ್ರಹ್ಮಜ್ಞಾನದ ಗಳಿಕೆ, ಅವಿದ್ಯೆಯನ್ನು ಹೋಗಲಾಡಿಸಿಕೊಳ್ಳುವುದು, ದೈವಿಕ ಪ್ರಾರ್ಥನೆಗಳು,  ತಪಸ್ಸು - ಇಂತಹವೆಲ್ಲ ಉಪನಿಷತ್ತುಗಳ ವಸ್ತು. 

ಉಪನಿಷತ್ತುಗಳು ವೇದಗಳಲ್ಲಿ ಬರುವಂತಹವು. ಉಪನಿಷತ್ತುಗಳು ನಾಲ್ಕು ವೇದಗಳಲ್ಲಿಯೂ ಅಂತ್ಯಭಾಗಗಳಾಗಿ ಬರುತ್ತವೆ. ಪ್ರತಿ ವೇದದಲ್ಲಿ ಒಂದೇ ಉಪನಿಷತ್ತು ಇರುವುದು ಎಂದೇನೂ ಇಲ್ಲ. ಒಟ್ಟು ಉಪನಿಷತ್ತುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆಯೂ ಭಿನ್ನಭಿಪ್ರಾಯಗಳಿವೆ. ಕೆಲವು ಕಡೆ ಇನ್ನೂರು ಉಪನಿಷತ್ತುಗಳ ಉಲ್ಲೇಖವಿದೆ. ಕೆಲವು ಕಡೆ ಒಂದು ನೂರ ಎಂಟು ಉಪನಿಷತ್ತುಗಳೆಂದು ಹೇಳಿದೆ. ಹೀಗಾಗಿ ಮುಖ್ಯ ಉಪನಿಷತ್ತುಗಳು ಯಾವುವು ಎಂಬುದೊಂದು ಮುಖ್ಯ ಪ್ರಶ್ನೆ. ಹದಿನೆಂಟು ಉಪನಿಷತ್ತುಗಳು ಪ್ರಮುಖ ಉಪನಿಷತ್ತುಗಳೆಂಬ ಹೇಳಿಕೆ ಇದೆ. ಪ್ರಮುಖ ಉಪನಿಷತ್ತುಗಳಲ್ಲಿ ಈ ಹದಿನೆಂಟು ಯಾವುವು ಎಂಬ ಬಗ್ಗೆ ಒಮ್ಮತವಿಲ್ಲ. ಒಂದು ವಿಷಯವಂತೂ ನಿರ್ವಿವಾದವಾಗಿ ಒಪ್ಪಿಗೆಯಾಗಿದೆ. ಉಪನಿಷತ್ತುಗಳಲ್ಲಿ ವೇದಗಳ ಸಾರಸರ್ವಸ್ವವಿದೆ ಮತ್ತು ಉಪನಿಷತ್ತುಗಳೇ ಹಿಂದೂ ವೈದಿಕ ಮತದ ಸ್ತಂಭಗಳು ಎಂಬ ಬಗ್ಗೆ ಒಟ್ಟಾಭಿಪ್ರಾಯ ಮೂಡಿದೆ. 

ಉಪನಿಷತ್ತುಗಳ ಕಾಲ ಮತ್ತು ಗಾತ್ರಗಳು ವೈವಿಧ್ಯಮಯವಾಗಿವೆ. ಶುಕ್ಲ ಯಜುರ್ವೇದದ ಬೃಹದಾರಣ್ಯಕ ಉಪನಿಷತ್ತು ಉಪನಿಷತ್ತುಗಳಲ್ಲೆಲ್ಲ ದೀರ್ಘವಾದುದು, ಕಾಲದ ದೃಷ್ಟಿಯಿಂದಲೂ ಇದು ಹಳೆಯದಾಗಿದ್ದು ಕ್ರಿ ಪೂ ೭೦೦ ರಲ್ಲಿ ರಚಿತವಾಗಿರಹುದೆಂಬ ಅಭಿಪ್ರಾಯವಿದೆ. ಮಾಂಡೂಕ್ಯ ಉಪನಿಷತ್ತು ಹನ್ನೆರಡು ಮಂತ್ರಗಳ ಚಿಕ್ಕ ಉಪನಿಷತ್ತು. ಇದನ್ನು ಹೊರತುಪಡಿಸಿದರೆ ಚಿಕ್ಕ ಉಪನಿಷತ್ತೆಂದರೆ ಈಶಾವಾಸ್ಯ ಉಪನಿಷತ್ತೇ.

ಈಶಾವಾಸ್ಯೋಪನಿಷತ್ತು ಕೂಡ ಶುಕ್ಲಯಜುರ್ವೇದಕ್ಕೆ ಸೇರಿದುದೇ. ಅದೊಂದು ಸಂಕ್ಷಿಪ್ತ ಉಪನಿಷತ್ತಾಗಿದ್ದು ಅದರಲ್ಲಿರುವ ಮಂತ್ರಗಳನ್ನು ಬೇರೆಬೇರೆ ರೀತಿಗಳಲ್ಲಿ ಎಣಿಸುವ ಸಂಪ್ರದಾಯವಿದೆ. ಇದರಿಂದಾಗಿ ಹದಿನೆಂಟರಿಂದ ಇಪ್ಪತ್ತರವರೆಗೆ ಮಂತ್ರಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಾಣಬಹದು. ಈ ಪ್ರಬಂಧದಲ್ಲಿ ಸುಯಮೀ ರಾಘವೇಂದ್ರ ಸಂಶೋಧನ ಕೇಂದ್ರ, ನಂಜನಗೂಡು ಇವರು ಪ್ರಕಾಶಿಸಿರುವ ಗುರುರಾಜ ಸಂಪುಟಂ ೧ ಈ ಗ್ರಂಥದಲ್ಲಿ ಈಶಾವಾಸ್ಯ ಉಪನಿಷತ್ತಿನ ಶ್ರೀ ರಾಘವೇಂದ್ರ ತೀರ್ಥರ ವ್ಯಾಖ್ಯಾನವಿದ್ದು ಅದರಲ್ಲಿ ಅನುಸರಿಸಿರುವ ಎಣಿಕೆಯ ರೀತಿಯನ್ನು ಅನುಸರಿಸಿದೆ. ಇಲ್ಲಿರುವ ಪ್ರಕಾರ ಈ ಉಪನಿಷತ್ತಿನಲ್ಲಿ ೨೦ ಮಂತ್ರಗಳಿವೆ. 

  ಸಂಕ್ಷಿಪ್ತವಿದ್ದರೂ ಈ ಉಪನಿಷತ್ತಿಗೆ  ಎಲ್ಲ ಮತಾಚಾರ್ಯರೂ ಪ್ರಮುಖ ಸ್ಥಾನ ನೀಡಿದ್ದಾರೆ. ಮತಾಚಾರ್ಯರುಗಳ ಭಾಷ್ಯ ವ್ಯಾಖ್ಯಾನಗಳು ಅಧ್ಯಾತ್ಮ ಸಾಧನೆಗೆ ಒತ್ತು ನೀಡಿ ಮಾಡಿರುವ ವಿವರಣೆಗಳು. (ಇದರಿಂದಾಗಿ ಸಾಮಾನ್ಯ ಬದುಕಿಗೆ ಮತ್ತು ಆದ್ದರಿಂದ ಸಾಮಾನ್ಯ ಜನರಿಗೆ ಇದರಿಂದ ಪ್ರಯೋಜನವೇನೂ ಇಲ್ಲ ಎಂದು ಬಹುಜನರ ನಂಬಿಕೆ. ಆದ್ದರಿಂದಲೇ ಸಾಮಾನ್ಯ ಶಿಕ್ಷಣ ಕ್ರಮದಲ್ಲಿ ಉಪನಿಷತ್ತುಗಳ ಪರಿಚಯವನ್ನಾಗಲೀ ಅಧ್ಯಯನಕ್ಕಾಗಿ ಅವುಗಳ ಭಾಗಗಳನ್ನಾಗಲೀ ಇರಿಸುವ ಪರಿಪಾಠವಿಲ್ಲ).ಅಧ್ಯಾತ್ಮ ಸಾಧನೆಯಲ್ಲಿ ಈ ಉಪನಿಷತ್ತಿಗೆ ದೊಡ್ಡ ಸ್ಥಾನವಿದೆ. ಆಸಕ್ತರಿಗೆ ಅರ್ಥವಾಗುವಂತೆ ವ್ಯಾಖ್ಯಾನ ಬರೆದು ಈ ಉಪನಿಷತ್ತಿಗೆ ಎಲ್ಲ ಆಚಾರ್ಯರುಗಳೂ ನೀಡಿರುವ ಮಹತ್ವ ಆ ನಿಟ್ಟಿನಲ್ಲಿ ಇದು ಪ್ರತಿಪಾದಿಸಿರುವ ತತ್ವಗಳ ಮಹತ್ವವಾಗಿದೆ ಎನ್ನಬಹುದು. 

ಅಧ್ಯಾತ್ಮ ಸಾಧನೆಯೇ ಉಪನಿಷತ್ತುಗಳಲ್ಲಿ ಮುಖ್ಯವಾದರೂ ಸಮಾಜದಲ್ಲಿ ವ್ಯಕ್ತಿ ಹೇಗಿರಬೇಕೆಂಬುದನ್ನೂ ಇವುಗಳಿಂದ ಕಲಿಯಲು ಸಾಧ್ಯ. ಅಧ್ಯಾತ್ಮ ಮತ್ತು ಸಾಮಾಜಿಕ ನಡವಳಿಕೆ ಇವೆರಡೂ ಭಾರತೀಯ ಜನಜೀವನದಲ್ಲಿ ಒಟ್ಟಿಗೆ ಸಾಗುವಂತಹವು. ಸಾಮಾನ್ಯವಾಗಿ ಉಪನಿಷತ್ತುಗಳ ಪ್ರತಿಪಾದನೆಗಳು ಇವೆರಡನ್ನೂ ಒಳಗೊಳ್ಳುವಂತಹವು. ಸಾಮಾಜಿಕ ಮೌಲ್ಯಗಳ ನಿರೂಪಣೆ, ಅವುಗಳ ಅನುಸರಣೆ, ಅನುಸರಿಸಿದರೆ ಆಗುವ ಲಾಭ, ಅನುಸರಿಸದಿದ್ದರೆ ಆಗುವ ಅನಾಹುತ - ಇಂತಹವುಗಳನ್ನೆಲ್ಲ ಉಪನಿಷತ್ತುಗಳಲ್ಲಿ ಕಾಣಬಹುದು. ಹೀಗೆ ಮಾಡತಕ್ಕದ್ದು ಮಾಡದಿದ್ದರೆ ಇಂತಹ ಶಿಕ್ಷೆ ಎಂಬಂತೆ ನಿರೂಪಣೆ ಸಾಗುವುದಿಲ್ಲ.  ತರ್ಕ ಮತ್ತು ಆಪ್ತತ್ವ ಅವುಗಳ ಸಹಜ ನಿರೂಪಣಾ ಮಾರ್ಗ. ಆದ್ದರಿಂದಲೇ ಪ್ರಭು ಸಂಮಿತೆಯೇ ಆದರೂ ಅಲ್ಲಿ ಬರುವ ನಿಯಮಗಳು ಹೇರಿದ ನಿಯಮಗಳಾಗುವುದಿಲ್ಲ. ಕಾರ್ಯಕಾರಣ ತರ್ಕದಿಂದ ಮನಸ್ಸನ್ನು ದೃಢವಾಗಿಸಿಕೊಂಡು ಸಮಾಜ ನಡವಳಿಕೆನ್ನು ಧಾರ್ಮಿಕವಾಗಿರುವಂತೆ ರೂಪಿಸಿಕೊಳ್ಳುವ ರೂಢಿಸಿಕೊಳ್ಳುವ ಸಾತ್ವಿಕ ಒತ್ತಡಕ್ಕೆ ವ್ಯಕ್ತಿ ಒಳಪಡುತ್ತಾನೆ. ಇವುಗಲ ಧ್ಯಯನವು ಶಾಲಾಕ್ರಮದಲ್ಲಿ ಅಷ್ಠಾಗಿ ಇಲ್ಲದಿದ್ದರೂ ಅವುಗಳಲ್ಲಿ ಪ್ರತಿಪಾದಿತವಾಗಿರುವ ತತ್ವಗಳು  ಮತ್ತು ಅವುಗಳ ಬಗ್ಗೆ ಗೌರವ ಸಂಸ್ಕಾರಬಲದಿಂದ ಜನಮನಾಸದಲ್ಲಿ ಕಂಟು ಬರುತ್ತವೆ. ಆದ್ದರಿಂದಲೇ ಸಮಾಜದಲ್ಲಿ ಎಷ್ಟೇ ಭ್ರಷ್ಟಾಚಾರ ಅನ್ಯಾಯಗಳು ಕಂಡುಬಂದರೂ ಸಮಾಜದ ಧಾರ್ಮಿಕ ಸ್ವರೂಪ ಕೆಟ್ಟು ಹಾಳಾಗುವುದಿಲ್ಲ. ಧಾರ್ಮಿಕ ಸ್ವಭಾವವು ʼತಳದಲೆಲ್ಲೋ ತಳುವಿ ಮಾನವನ ಎದೆಯಿಂದಲೆದೆಗೆ ಸತತವಾಗಿ ಹರಿಯುತಲಿರುವ ಅಮೃತವಾಹಿನಿʼಯಾಗುತ್ತದೆ . ಆದ್ದರಿಂದಲೇ ಸಾಮಾಜಿಕ ಆರೋಗ್ಯ ಸಂಪೂರ್ಣವಾಗಿ ನಾಶವಾಗುವ ಸ್ಥಿತಿ ಉಂಟಾಗುವುದಿಲ್ಲ. ಸಮಾಜವು ತನ್ನಷ್ಟಕ್ಕೇ ತನ್ನ ತಾ ಸರಿಪಡಿಸಿಕೊಂಡು ಸಾಗುವ ವ್ಯವಸ್ಥೆಯಾಗುತ್ತದೆ. ಅದಕ್ಕೊಂದು ಸಾಮುದಾಯಿಕ ಸರಿಪಡಿಕಾ ಶಕ್ತಿ ಮೂಡುತ್ತದೆ. (ಅದಕ್ಕೆ ಕಾನೂನು ಇತ್ಯಾದಿ ಸಹಾಯ ಮಾಡುತ್ತವೆ).

ಹೀಗೆ ಉಪನಿಷತ್ತಿಗೆ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಳು ಮುಖ್ಯವಾಗಿರುವಂತೆ ಸಾಮಾಜಿಕತೆಯೂ ಮುಖ್ಯವಾಗುತ್ತದೆ. ಸಮಾಜದಲ್ಲಿ ಏಳಿಗೆಗಾಗಿ ವ್ಯಕ್ತಿ ಅನುಸರಿಸಬೇಕಾದ ನಡವಳಿಕೆಗಳಾವುವು? ವ್ಯಕ್ತಿ ತನ್ನ ಏಳಿಗೆಯ ಜೊತೆಗೆ ಸಮಾಜದ ಏಳಿಗೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕೇದ ಅವಶ್ಯಕತೆ ಇದೆಯೇ ಇತ್ಯಾದಿ ಅಂಶಗಳು ಉಪನಿಷತ್ತುಗಳಲ್ಲಿ ಚರ್ಚೆಗೊಳಗಾಗುತ್ತವೆ. ಈಶಾವಾಸ್ಯೋಪನಿಷತ್ತೂ ಇದಕ್ಕೆ ಹೊರತಲ್ಲ. ಈಶಾವಾಸ್ಯ ಉಪನಿಷತ್ತಿಗೆ ಸಂಬಂಧಿಸಿದಂತೆ ಇಂತಹ ಅಂಶಗಳ ನಿರೂಪಣೆಯನ್ನು ಈ ಪ್ರಬಂಧದಲ್ಲಿ ಮುಖ್ಯವೆಂದು ಪರಿಗಣಿಸಿದೆ.

ಮೊದಲಲ್ಲಿ ಉಪನಿಷತ್ತಿನ ಮಂತ್ರಗಳ ಒಂದು ಸರಳಾನುವಾದವನ್ನು ಪ್ರಸ್ತುತಪಡಿಸುತ್ತಿರುವೆ:


ಭಾಗ ೨

ಶ್ರೀಃ

                            (ಈಶಾವಾಸ್ಯೋಪನಿಷತ್‌ ಕನ್ನಡಾನುವಾದ ಪ್ರಾರಂಭ)

      ಚಲಿಸುತಿಹುದೇನೆಲ್ಲ  ಇಲ್ಲಿ, 

ಈಶನಾವಾಸವದು ಬೇರಲ್ಲ

                  ಅವ ಕೊಟ್ಟುದನು ತಿನ್ನು; 

ಕಸಿಯ ಬೇಡ ಇನ್ನೊಬ್ಬನದನು ನೀನು.  ೧

ಕರ್ಮಗಳ ಮಾಡುತಲೆ ಇಲ್ಲಿ , 

ಬದುಕೋಣ ನಾವು ನೂರು ವರುಷ

ನಮಗಿದುವೆ ದಾರಿ ಬೇರಿಲ್ಲ; 

ಕರ್ಮವಂಟದು ನರನು ಬದುಕಲಿಂತು .೨


ಕತ್ತಲಿನಿಂದಾವೃತವು ಆ ಲೋಕಗಳು

ಅಸುರ್ಯವೆಂಬುದು ಹೆಸರು

ತೆರಳಲಿಲ್ಲಿಂದ ಹೊಗುವರದನು 

ಆತ್ಮಗುಲಿಗಳೆನಿಸಿದ ಜನರು .


ಚಲಿಸದದೊಂದು ; ವೇಗವದರದು ಮನಸಿಗು ಹೆಚ್ಚು 

ದೇವತೆಗಳಾರೂ ಹಿಡಿಯಲಾಪರು ತಲುಪುವುದದು

ಅವರಿಗಿಂತಲು ಮೊದಲೆ ಅಲ್ಲಿ;

ಓಡುತಿಹ ಇತರರನು ಮೀರುವುದದು ನಿಂತೇ

ಅದರಲಿಡುವನು ನೀರ ಮಾತರಿಶ್ವನು ಬಿಡದೆ .


ಚಲಿಸದದು ಚಾಲಿಸುವುದು 

            ದೂರದಲ್ಲಿಯೂ ಅದೆ ಹತ್ತಿರದಲ್ಲಿಯು;

ಎಲ್ಲದರೊಳಗು ಅದೆ, ಅದೆ ಹೊರಗಡೆ ಎಲ್ಲ .


ಅನುಸರಿಸಿ ಕಾಣುವನು ಯಾರು 

ಸರ್ವ ಜೀವಿಗಳನು ತನ್ನಲ್ಲಿಯೇ

ಸರ್ವಜೀವಿಗಳಲಿ ತನ್ನನು ಹಾಗೆ, 

ಬಚ್ಚಿಡದದು ತನ್ನಿಂದ ಎಂದು.   ೬


ಸರ್ವಜೀವಿಗಳನು ತಿಳಿವನು ತನ್ನಂತೆ ಯಾರು

ಅವನಿಗೆಲ್ಲಿಯ ಮೋಹ ಎಲ್ಲಿಯ ಶೋಕ 

ಕಾಣುವನು ತಾನೆ ಏಕತ್ವವನು ಎಲ್ಲಡೆ .    ೭


ಆವರಿಸಿಹನಿವ ರೂಹಿಲ್ಲ ಅಚ್ಚಬಿಳಿಯನನೂನ

ನರನಾಡಿರಹಿತನಿವ ಶುದ್ಧನು ಪಾಪತಟ್ಟದವನು;

ಜ್ಞಾನಿ ಇವ ,ಸರ್ವ-ಚಿಂತನ-ಸ್ವರೂಪಿ;

ಅಧೀನರೆಲ್ಲರು ಅವಗೆ ಅವಲಂಬನವಿಲ್ಲದವ

ತ್ರಿಕಾಲದಲ್ಲಿಯು ಹರಡುವನಿವ ಸಿರಿಸಂಪದಗಳನೆಲ್ಲೆಲ್ಲು .     ೮


ದಟ್ಟ ಕತ್ತಲೆಯನೆ ಪ್ರವೇಶಿಸುವರವರು 

ಅವಿದ್ಯೆಯ ಉಪಾಸಕರು;

ಅದಕು ಸಾಂದ್ರ ಕತ್ತಲೆಯ ಪ್ರವೇಶಿಸುವರು 

ವಿದ್ಯೆಯಲೇ ಆಡುವವರು. ೯      


ಅವಿದ್ಯೆಯ ಕತ್ತಲು ಬೇರೆ , ವಿದ್ಯೆಯ ಕತ್ತಲೇ ಬೇರೆ;

ಹೀಗೆನುವರು ಇವೆರಡನೂ ಬಲ್ಲ ಧೀರರು .    ೧೦


           ವಿದ್ಯೆಯನೂ ಅವಿದ್ಯೆಯನೂ ಅರಿತಿಹನಾರು ಅವ

                       ಮೃತ್ಯುವನು ದಾಟಿ ಅವಿದ್ಯೆಯಿಂದ 

                       ಪಡೆವನು ಅಮರತ್ವ ವಿದ್ಯೆಯಿಂದ. ೧೧


  ದಟ್ಟ ಕತ್ತಲೆಯನೆ ಪ್ರವೇಶಿಸುವರವರು 

ಅಸಂಭೂತಿಯ ಉಪಾಸಕರು;

ಅದಕು ಸಾಂದ್ರ ಕತ್ತಲೆಯ ಪ್ರವೇಶಿಸುವರು 

ಸಂಭೂತಿಯಲೇ ಆಡುವವರು.                


ಅಸಂಭೂತಿಯ ಕತ್ತಲು ಬೇರೆ, ಸಂಭೂತಿಯ ಕತ್ತಲೇ ಬೇರೆ;

ಹೀಗೆನುವರು ಇವೆರಡನೂ ಬಲ್ಲ ಧೀರರು .  ೧೩


ಸಂಭೂತಿಯನೂ ಅಸಂಭೂತಿಯನೂ ಅರಿತಿಹನಾರು ಅವ

ಮೃತ್ಯುವನು ದಾಟಿ ಅಸಂಭೂತಿಯಿಂದ             ಪಡೆವನಮರತ್ವಸಂಭೂತಿಯಿಂದ ೧೪

ಸತ್ಯದ ಮುಖ ಮುಚ್ಚಿಹುದು 

ಸ್ವರ್ಣಮಯ ಪಾತ್ರೆಯೊಂದು

ಅದ ನೀ ಸರಿಸಾಚೆ ಹೇ ಪೂಷನ್!‌ 

ಸತ್ಯಧರ್ಮವ ತೋರೆನಗೆ .  ೧೫

ಹೇ ಪೂಷನ್‌  ಹೇ ಜಗದೊಡೆಯ ಮಿಂಚೆ! 

ನೀನಾಗಿರುವಿ ಮುನ್ನಡೆಸುವ ದೇವ, ಬೆಳಕುಬೀರುವ ದೇವ, 

ಸಂತಾನ ಬೆಳೆಸುವ ದೇವ.  ಚದುರಿ ಹರಡೈ ನಿನ್ನ ಬೆಳಕ ;

ಒಟ್ಟಾಗಿಸು ಒಟ್ಟಾಗಿಸು ಹೊಳಪ. 

ನಿನ್ನ ಕಲ್ಯಾಣತಮ ರೂಪವ ನೋಡಗೊಡು ನನಗೆ

ಇರುವೆ ನೀ ನೇಸರಲಿ, ಪ್ರಾಣನಲಿ ಹೇ ಪೂರ್ಣ ಪುರುಷ ೧೬

                        ಅವನಿರುವನಾಗಿ ಇರುವೆ ನಾನು      ೧೭


ಅನಿಲವಾಯುವು ಅಮೃತವು ತಾನೆ ?

ಸುಟ್ಟು ಭಸ್ಮವೆನಿಸುವುದೈ ಅಂತ್ಯದಲಿ ನಮ್ಮೀ ಶರೀರ;

ಒಳಗಿನಾಂತರ್ಯವದು ಅಮೃತವಹುದು .    ೧೮


ಓಮ್‌ ಅನುಗ್ರಹಿಸೆನ್ನ ಪರನೇ, ನೆನೆ ನಾ ಮಾಡಿದುದ

ಅನುಗ್ರಹಿಸೆನ್ನ ಪರನೇ  ನೆನೆ ನಾ ಮಾಡಿದುದ . ೧೯


ಹೇ ಅಗ್ನಿ ಕರೆದೊಯ್ಯಿ ನಮ್ಮ 

ನೀ ಸಿರಿವಂತಿಕೆಗೆ ಸರಿದಾರಿಯಲ್ಲಿ.

ನಾ ಗಳಿಸಿದುದೆಲ್ಲವ ತಿಳಿದವ ನೀನು, ಹೇ ದೇವ!

ಹೊಡೆದೋಡಿಸು ನಮ್ಮಿಂದ ಕೆಟ್ಟ ತಂಟೆಕೋರತನ

ಅರ್ಪಿಸುವೆವು ನಾವು ಅನೂನ ಗೌರವವ ನಿನಗೆ    ೨೦


(ಈಶಾವಾಸ್ಯೋಪನಿಷತ್‌ ಅನುವಾದ ಸಂಪೂರ್ಣ)

ಭಾಗ ೩

ಈ ಉಪನಿಷತ್ತಿನಲ್ಲಿ ಅಭಿವ್ಯಕ್ತಿಯು ಕಾವ್ಯಮಯವಾಗಿದೆ. ಈ ಉಪನಿಷತ್ತು ಅನುಷ್ಟುಭ್‌ ಛಂದಸ್ಸಿನಲ್ಲಿದೆ ಎಂದು ಹೇಳುತ್ತಾರೆ. ಅಂದರೆ ಸಾಲಿಗೆ ಎಂಟಕ್ಷರದಂತೆ ನಾಲ್ಕು ಸಾಲುಗಳಲ್ಲಿದ್ದು ಇದನ್ನು ಶ್ಲೋಕದಂತೆ ಓದಬಹುದು. ಸರಳ ನಿರೂಪಣೆ, ರೂಪಕಗಳ ಬಳಕೆ, ಪ್ರಾರ್ಥನೆಯನ್ನು ಒಳಗೊಂಡಿರುವುದು ಇದರ ಮುಖ್ಯ ಲಕ್ಷಣಗಳು. ಸಾಮಾಜಿಕ ಪ್ರಸ್ತುತತೆಯ ದೃಷ್ಟಿಯಿಂದಲೂ ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಮಂತ್ರಗಳ ಅರ್ಥೈಸುವಿಕೆಯಲ್ಲಿ ಇಲ್ಲಿರುವ ರೂಪಕಗಳನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಮೌಲ್ಯಗಳ ನಿರೂಪಣೆ, ಮೌಲ್ಯಗಳ ಅನುಸರಣೆಯ ಲಾಭ, ಅನನುಸರಣೆಯ ನಷ್ಟ ಇಂತಹವನ್ನೆಲ್ಲ ರೂಪಕಗಳ ಮುಖಾಂತರವೇ ವಿವರಿಸುತ್ತಾರೆ. ಒಂದೆರಡು ಮಂತ್ರಗಳು ಪ್ರಾರ್ಥನೆಯನ್ನೊಳಗೊಂಡಿದ್ದರೂ ಅವು ಹೇಳ ಬೇಕಾದ್ದನ್ನು ರೂಪಕಗಳಮುಖಾಂತರವೇ ಹೇಳುತ್ತವೆ.

ಉಪನಿಷತ್ತಿನ ಮೊದಲ ಎರಡು ಮಂತ್ರಗಳು ಸಮಾಜದಲ್ಲಿ ನೆಲೆಗೊಳ್ಳಬೇಕಾದ ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಸಮಾಜ ಮತ್ತು ಸಮಾಜದೊಂದಿಗೆ ವ್ಯಕ್ತಿಯ ಕೊಡುಕೊಳೆಗಳ ಬಗ್ಗೆ ಭಾರತೀಯ ಮನಸ್ಸು ತುಡಿಯುವ ರೀತಿಯನ್ನು ಮೊದಲನೆಯ ಮಂತ್ರ ತೆರೆದಿಡುತ್ತದೆ. ವ್ಯಕ್ತಿಯು ಸಮಾಜದ ಭಾಗವಾಗಿದ್ದು ಸಮಾಜ ಮತ್ತು ವ್ಯಕ್ತಿಯ ನಡುವಣ ಕೊಡುಕೊಳೆಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿ ಮತ್ತು ಸಮಾಜ ಈಶನ ನಿಯಂತ್ರಣದಲ್ಲಿರುವುವು ಎಂಬ ಪರಿಕಲ್ಪನೆ ಈ ಮೊದಲ ಮಂತ್ರದಲ್ಲಿದ್ದು ಇದು ಸಮಾಜದೊಡನೆ ವ್ಯಕ್ತಿಯ ಒಡನಾಟವನ್ನು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.

"ಚಲಿಸುವಂತಹುದು ಜಗತ್ತಿನಲ್ಲಿ ಏನೆಲ್ಲ ಇದೆಯೋ ಈ ಎಲ್ಲವೂ ಈಶನ ಆವಾಸ ಸ್ಥಾನ" ಎಂದು ಇದರ ಮೊದಲ ಸಾಲಿಗೆ ಅರ್ಥ ಹೇಳ ಬಹುದು. ಚಲಿಸುವಂತಹುದು ಎಂಬುದನ್ನು ಇಲ್ಲಿ ರೂಪಕಾರ್ಥದಲ್ಲಿ ಪ್ರಯೋಗಿಸಲಾಗಿದೆ. ಬದಲಾವಣೆಯು ಚಲನೆ ಎಂಬುದು ಇಲ್ಲಿ ಬಳಕೆಯಾಗಿರುವ ರೂಪಕ. ಹೀಗೆ ಚಲಿಸುವುದರಲ್ಲೆಲ್ಲ ಈಶನಿದ್ದಾನೆ ಎಂದರೆ ಬದಲಾಗುತ್ತಿರುವ ಎಲ್ಲ ವಸ್ತುಗಳಲ್ಲಿ ಈಶನಿದ್ದಾನೆ ಎಂದರ್ಥ. ಇಡೀ ಪ್ರಪಂಚವೇ ಬದಲಾಗುತ್ತಿದೆಯಷ್ಟೆ! ಆದ್ದರಿಂದ ಪ್ರಪಂಚದಲೆಲ್ಲ ಅವನಿದ್ದಾನೆ. ಈ ಪ್ರಪಂಚ ಈಶನ ಆವಾಸ ಸ್ಥಾನ. ಇದರಲ್ಲಿ ಅವನು ನಮಗೆ ಏನು ಕೊಡುತ್ತಾನೋ ಅದನ್ನಷ್ಟೆ ಭೋಗಿಸಲು ನಾವು ಬಾಧ್ಯರು; ಹೆಚ್ಚಿನದನ್ನಲ್ಲ. ಉಳಿದುದು ಬೇರೆ ಯಾರಿಗಾಗಿಯೋ ಇರುವಂತಹುದು. ಇನ್ನೊಬ್ಬರಿಗಾಗಿ ಅವನು ಮೀಸಲಿಟ್ಟುದನ್ನು ಯಾರೂ ಗೆಬರಬಾರದು.

ಈ ಮಂತ್ರವು ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ಲಭ್ಯವಿರುವ ಸಂಪತ್ತಿನ ಮೇಲೆ ವ್ಯಕ್ತಿಗಿರುವ ಅಧಿಕಾರವೆಷ್ಟು, ಅದನ್ನು ಅವನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಮ್ಮ ಮುಂದಿಡುತ್ತದೆ. ಪ್ರತಿಯೊಬ್ಬನೂ ತಾನಿರುವುದು ಇನ್ನೊಬ್ಬನ ಮನೆಯಲ್ಲಿ ಎಂಬಂತೆ ನೆನಪಿಟ್ಟುಕೊಳ್ಳಬೇಕು; ತಾನು ಇಲ್ಲಿರುವ ಯಾವ ವ್ಯವಸ್ಥೆಯನ್ನೂ ಕೆಡಿಸದೆ ಮುಂದೆ ಬರುವವರಿಗಾಗಿ ಸುಸ್ಥಿತಿಯಲ್ಲಿ ಬಿಟ್ಟುಕೊಡಬೇಕು; ಪ್ರತಿಯೊಬ್ಬನೂ ತನಗೆ ಬೇಕಾದಷ್ಟನ್ನೇ ಜಾಗ್ರತೆಯಿಂದ ಬಳಸಬೇಕು; ಅಷ್ಟೇ ಹೊರತು ತಲೆಮಾರುಗಳಿಗೆ ಬೇಕೆಂಬ ರೀತಿಯಲ್ಲಿ ಆದಷ್ಟೂ ಹೆಚ್ಚನ್ನು ಕೂಡಿಡ ಬಾರದು.

ಎರಡನೆಯ ಮಂತ್ರವು ಮೊದಲನೆಯ ಮಂತ್ರವು ನಿರೂಪಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸೋಣ ಎಂದಾಶಿಸುತ್ತದೆ, ಮೊದಲ ಮಂತ್ರದಲ್ಲಿ ದೇವರು ಕೊಟ್ಟದ್ದನ್ನು ತಿನ್ನು ಎಂದು ಹೇಳಿದರೆ ಎರಡನೆಯ ಮಂತ್ರ ಕರ್ತವ್ಯ ಪಾಲನೆ ಅದಕ್ಕೆ ಪೂರ್ವ ಆವಶ್ಯಕತೆ ಎನ್ನುತ್ತದೆ. "ಇಹ ಕರ್ಮಾಣಿ ಕುರ್ವನ್ನೇವ" ಎಂದರೆ ಇಲ್ಲಿ ಕರ್ಮಗಳನ್ನು ಮಾಡುತ್ತಲೇ ನಾವು ದೇವರು ಕೊಟ್ಟುದನ್ನು ತಿನ್ನ ಬೇಕು. ಹೀಗೆ ಶತಂ ಸಮಾಃ ಜಿಜೀವಿಷೇತ್‌  ನೂರು ವರ್ಷಗಳ ಕಾಲ ಬದುಕಲು ಇಚ್ಛಿಸಬೇಕು. ಹಾಗೆ ಮಾಡಿದರೆ ಕರ್ಮಗಳಿಂದ ಉಂಟಾಗುವ ಸಂಕಷ್ಟಗಳು ನಮಗೆ ಅಂಟುವುದಿಲ್ಲ (ನಲಿಪ್ಯತೇ) ಮತ್ತು ಹೀಗೆ ಮಾಡುವುದೊಂದೇ ನಮಗೆ ಸಂತೋಷದಿಂದ ಬದುಕಲು ಇರುವ ದಾರಿ.

ಇನ್ನೊಂದು ದೃಷ್ಟಿಯಿಂದ ನೋಡಿದರೆ ಎರಡನೆಯ ಮಂತ್ರವೂ ನಮಗೆ ಒಂದೆರಡು ಮೌಲ್ಯಗಳನ್ನು ಕಟ್ಟಿಕೊಡುತ್ತದೆ: ಕರ್ತವ್ಯವನ್ನು ಮಾಡು ಮತ್ತು ನೂರು ವರ್ಷಗಳ ಕಾಲ ಬದುಕಲು ಇಚ್ಛಿಸು - ಇವು ಈ ಮಂತ್ರದಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳು.  ಮನೆಯನ್ನು ಸುಸ್ಥಿತಿಯಲ್ಲಿಡಲು ಶ್ರಮವಹಿಸುವುದು ಪ್ರತಿ ವ್ಯಕ್ತಿಗೆ ಅನಿವಾರ್ಯ. ತಾನು ಬಳಸಬೇಕಾದುದು ದೇವರು ತನಗೆ ಕೊಟ್ಟಷ್ಟೆ; ಮತ್ತಷ್ಟು, ಮತ್ತಷ್ಟು ಅಲ್ಲ. ಈ ಮಂತ್ರ  ನಮ್ಮನ್ನು ಆಶ್ವಸ್ತರನ್ನಾಗಿಯೂ ಮಾಡುತ್ತದೆ: ನಮ್ಮ ಕರ್ತವ್ಯವನ್ನು ಮಾಡಿ ನಮ್ಮ ಸರಿಯಾದ ಪಾಲನ್ನು ನಾವು ಉಪಭೋಗಿಸಿದರೆ ಆ ಕರ್ಮದಿಂದ ನಮಗೆ ಒದಗಬಹುದಾದ ಸಂಕಷ್ಟ ನಮ್ಮನ್ನು  ಸುತ್ತಿಕೊಳ್ಳುವುದಿಲ್ಲ.

ಹೀಗೆ ಮಾಡದಿದ್ದರೆ ಏನಾಗುತ್ತದೆ ಎಂಬುದು ಮೂರನೆಯ ಮಂತ್ರದಿಂದ ನಮಗೆ ತಿಳಿಯುತ್ತದೆ. ಯಾವುದು ಮಾಡಬೇಕಾದ್ದೋ ಅದನ್ನು ಮಾಡದಿದ್ದರೆ ವ್ಯಕ್ತಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮೂರನೆಯ ಮಂತ್ರವು ಕೆಲವು ಹೊಸ ಪದಗಳನ್ನೂ ಹೊಸ ರೂಪಕಗಳನ್ನೂ ಬಳಸುತ್ತದೆ. ತನ್ಮೂಲಕ ಮೌಲ್ಯಹೀನರ ಗತಿಯನ್ನು ಸಮರ್ಥವಾಗಿ ತಿಳಿಸಿಕೊಡುತ್ತದೆ.

ಆತ್ಮಹನೋ ಜನಾಃ ಎಂದರೆ ತಮ್ಮನ್ನು ತಾವು ಕೊಂದುಕೊಳ್ಳುವ ಜನರು. ತಾವಾಗಿಯೇ ಮರಣವನ್ನು ತಂದುಕೊಳ್ಳುವ ಜನರು. ಮರಣವು ಕಳೆದುಕೊಳ್ಳುವಿಕೆ ಎಂಬ ರೂಪಕವು ಇಲ್ಲಿಬಳಕೆಯಾಗಿದೆ. ಮೇಲಿನ ಮಂತ್ರಗಳಲ್ಲಿ ಹೇಳಿದ ಮೌಲ್ಯಗಳನ್ನು ಕಳೆದುಕೊಳ್ಳುವ ಜನರು ಆತ್ಮಹನೋ ಜನರು. ಇಂತಹ ಜನರು ಸುಖಮಯವಾದ ಈ ಮೌಲ್ಯಗಳ ಲೋಕದಿಂದ ಕಳುಹಿಸಲ್ಪಟ್ಟು ಕತ್ತಲ ಲೋಕಗಳನ್ನು ಪ್ರವೇಶಿಸುತ್ತಾರೆ. ಕತ್ತಲೆಯು ಅಜ್ಞಾನ, ಕತ್ತಲೆಯು ಸಂಕಷ್ಟ - ಎಂಬಿವು ಜನಜನಿತವಾದ ರೂಪಕಗಳು.  ಆದ್ದರಿಂದ ಆತ್ಮಹನೋ ಜನರು ಮೌಲ್ಯಗಳ ಸುಖಮಯ ಲೋಕದಿಂದ ಸಂಕಷ್ಟಗಳ ಕತ್ತಲೆಯ ಲೋಕಕ್ಕೆ ಕಳುಹಿಸಲ್ಪಡುತ್ತಾರೆ. ಆ ಕತ್ತಲೆಯ ಲೋಕಕ್ಕೆ ಅಸುರ್ಯಾ ಎಂದು ಹೆಸರು. ಅಂದರೆ ಸೂರ್ಯ ಅಲ್ಲದ್ದು. ಸೂರ್ಯ ಅಲ್ಲದ್ದು ಎಂದರೆ ಆ ಪ್ರಖರ ಬೇಳಕು (ಜ್ಞಾನ ಸುಖಗಳ ಆಗರ) ಇಲ್ಲದ್ದು. ಅಂದರೆ ಸುಖವಿಲ್ಲದ ಜ್ಞಾನವಿಲ್ಲದ ಲೋಕ. ಮೌಲ್ಯಗಳನ್ನು ಕಳೆದುಕೊಂಡ ಜನರು ಸುಖವಿಲ್ಲದವರೂ ಅಜ್ಞಾನಿಗಳೂ ಎನಿಸುತ್ತಾರೆ.

ಮೌಲ್ಯಗಳನ್ನು ಸ್ವೀಕರಿಸಿಕೊಂಡವರು ಹೇಗೆ ಸಾಧನೆಯ ಮೇಲಿನ ಹಂತಗಳನ್ನು ಪಡೆಯುತ್ತಾರೆ ಎಂಬುದು ಮುಂದಿನ ಮಂತ್ರಗಳಲ್ಲಿ ವ್ಯಕ್ತವಾಗಿದೆ. ವೇದಗಳ ಪದ್ಧತಿಯಲ್ಲಿ ಬೇಳವಣಿಗೆಯು ಒಂದೇ ಆಯಾಮದ್ದಾಗಿರುವುದು ಸಾಧ್ಯವಿಲ್ಲ. ಆಧ್ಯಾತ್ಮಿಕ ಬೇಳವಣಿಗೆ ಮತ್ತು ಸಾಮಾಜಿಕ ಬೆಳವಣಿಗೆ ಒಟ್ಟೊಟ್ಟಾಗಿ ನಡೆಯುವಂಹವು. ಆದ್ದರಿಂದಲೇ ವ್ಯಕ್ತಿ ಮತ್ತು ಸಮಾಜದ ಆಧ್ಯಾತ್ಮಿಕ ನೆಲೆಗಳನ್ನು ಪ್ರಸ್ತಾವಿಸುವುದು ಅನಿವಾರ್ಯವಾಗುತ್ತದೆ. ನಾಲ್ಕನೆಯ ಮಂತ್ರವನ್ನು ಈ ದೃಷ್ಟಿಯಿಂದ ನೋಡಬೇಕು.  

ವ್ಯಕ್ತಿಯ ಆಂತರ್ಯವು ಸ್ಥಿರವಾದುದು, ಬದಲಾಗುವಂಹುದಲ್ಲ. ವ್ಯಕ್ತಿಯ ಆಂತರ್ಯದ ಸ್ಥಿರತೆ ಒಂದು ಕಡೆಯಾದರೆ, ಅವನ ಬಾಹ್ಯ ಇಂದ್ರಿಯಗಳು ನಿರಂತರವಾಗಿ ವಿಷಯ ವಸ್ತುಗಳ ಕಡೆಗೆ ಹರಿಯುವ ಪ್ರವೃತ್ತಿ ಇನ್ನೊಂದು ಕಡೆ. ಇವು ನಾಲ್ಕನೆಯ ಮಂತ್ರದಲ್ಲಿ ಸುಂದರವಾಗಿ ನಿರೂಪಿತವಾಗಿರುವ ಅಂಶಗಳು. ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯ ಅದು ʼಅನೇಜದೇಕಂʼ(ಚಲಿಸದದೊಂದು). ಏಜತ್‌ ಎಂದರೆ ಚಲನೆ, ಚಲಿಸುವ ವಸ್ತು, ನಡುಗುವ ವಸ್ತು ಇತ್ಯಾದಿ. ಚಲನೆಯು ಬದಲಾವಣೆ ಎಂಬುದು ರೂಪಕ. ಅನೇಜತ್‌ ಎಂದರೆ ಚಲಿಸದಿರುವುದು; ಎಂದರೆ ಬದಲಾವಣೆಯಾಗದಿರುವುದು. ಏಕಂ ಎಂದರೆ ಹಾಗಿರುವುದು ಅದೊಂದೆ ಎಂದರೆ ವಿಶಿಷ್ಟವಾದುದು, ಅನನ್ಯವಾದುದು. ವ್ಯಕ್ತಿಯ ಆಂತರ್ಯದ ಅಚಲತೆಯು ಈ ಪದಪುಂಜಗಳಿಂದ ವ್ಯಕ್ತವಾಗಿದೆ. (ಆಂತರ್ಯಕ್ಕೆ ಆತ್ಮ, ಜೀವ ಇತ್ಯಾದಿಯಾದ ಹೆಸರುಗಳಿವೆ). ಸಮಾಜದಲ್ಲಿ ವ್ಯಕ್ತಿಯ ಚಟುವಟಿಕೆಗಳನ್ನು ನೋಡಿದರೆ ಈ ಸ್ಥಿರತೆಯಲ್ಲ, ಚಂಚಲತೆ ಎಲ್ಲರ ಅನುಭವಕ್ಕೆ ಬರುವುದು. ಇಂದ್ರಿಯಗಳು ಈ ಕ್ಷಣ ಒಂದು ವಸ್ತುವನ್ನು ಉಪಭೋಗಿಸಿದರೆ ಮರುಕ್ಷಣದಲ್ಲಿ ಬೇರೆಯದನ್ನು ಅನುಭವಿಸುತ್ತವೆ. ಈ ಚಂಚಲತೆ ಇಂದ್ರಿಯಗಳ ಸ್ವಭಾವ. ಇವು ಒಳಗಿನ ಸ್ಥಿರ ಆಂತರ್ಯವನ್ನು ಬಿಟ್ಟು ಹೊರಗಡೆಯ ವಿಷಯ ವಸ್ತುಗಳ ಕಡೆಗೆ ಶೀಘ್ರಾತಿ ಶೀಘ್ರತೆಯಿಂದ ಓಡುವುವು. ಅವುಗಳ ಚಲನೆ ವೇಗವುಳ್ಳುದು. ಮನಸಿಗಿಂತ ವೇಗ ಅವುಗಳಿಗೆ. ಇಲ್ಲಿರುವ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಅವನು ಚುರುಕಾಗಿದ್ದಾನೆ ಎಂದರೆ ಅವನು ಬೇಗ ತಿಳಿದುಕೊಳ್ಳುತ್ತಾನೆ ಎಂದರ್ಥ. ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯ ಬದಲಾವಣೆಯಾಗದಂತಹ ವಿಶಿಷ್ಟ ಅಸ್ಮಿತೆ. ಆದರೆ ಬಾಹ್ಯ ಘಟನೆಗಳಂದ ಅದು ಕ್ಷುಬ್ಧವಾಗಬಹುದು. ಅದನ್ನು ಯಾವ ಇಂದ್ರಿಯಗಳೂ ತಲುಪಲಾರವು. ಇಂದ್ರಿಯಗಳನ್ನು ಇಲ್ಲಿ ದೇವತೆಗಳೆಂದು ಕರೆದಿದೆ. ಮನಸ್ಸನ್ನು ಯಾವ ದೇವತೆಯೂ ಹೊಂದಲಾರದು (ನೈನದ್ದದೇವಾ ಆಪ್ನುವನ್)‌ ಅಂದರೆ ಮನಸ್ಸನ್ನು ಯಾವ ಇಂದ್ರಿಯವೂ ತಿಳಿಯಲಾರದು. ತಿಳಿಯುವುದು ಹೊಂದುವುದು ಎಂದು ಇಲ್ಲಿ ರೂಪಕ ಮಾಡಲಾಗಿದೆ. ಒಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯಾಗದಂತಹ ಒಂದು ವಿಶಿಷ್ಟ ಅಸ್ಮಿತೆ ಮತ್ತು ಅದನ್ನು ಇಂದ್ರಿಯಗಳು ತಲುಪಲಾರವು; ಅವುಗಳ ಚಟುವಟಿಕೆಗಳಿಂದ ಮನಸ್ಸು ಕ್ಷುಬ್ಧವಾಗಬಹುದು. ಇದರ ನಿಹಿತಗಳೆಂದರೆ ಇಂದ್ರಿಯಗಳನ್ನು ತೃಪ್ತಿಪಡಿಸುತ್ತಾ ಹೋಗುವುದರಿಂದ ತನ್ನನ್ನು ತಾನು ತಿಳಿಯಲಾಗಲೀ ತನ್ನ ಸಮಾಜವನ್ನು ತಿಳಿಯಲಾಗಲೀ ಸಮಾಜ ಮತ್ತು ತನ್ನ ಹಿತವನ್ನು ಸಾಧಿಸಲಾಗಲೀ ಸಾಧ್ಯವಾಗದು. ಇಂದ್ರಿಯಗಳು ಮಾಡಿದ್ದೆಲ್ಲ ಮನಸ್ಸಿನಲ್ಲಿ ಗಾಢವಾಗಿ ಉಳಿಯುವುವು. ಆದ್ದರಿಂದ ಮನಸ್ಸು ಕ್ಷುಬ್ಧವಾಗುವುದು; ಆಂತರ್ಯದ ಅಸ್ಮಿತೆ ಕುಗ್ಗುವುದು. ಆದ್ದರಿಂದ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ತನ್ನ ಆಂತರ್ಯದ ಹಿತವನ್ನೂ ಸಮಾಜದ ಹಿತವನ್ನೂ ಸಾಧಿಸಬೇಕು.

ನಾಲ್ಕನೆಯ ಮಂತ್ರವು ವ್ಯಕ್ತಿಯ ಅಸ್ಮಿತೆ, ಮಾನಸಿಕ ಆರೋಗ್ಯ ಮತ್ತು ಸಮಾಜದೊಡನೆ ಅದರ ಸಂಬಂಧ ಇವುಗಳ ಬಗ್ಗೆ ಹೇಳುತ್ತದೆ. ಮುಂದಿನ ಮಂತ್ರ ಸಮಾಜದ ಸಾಮೂಹಿಕ ಅಸ್ಮಿತೆ ಬಗ್ಗೆ ವಿವರಿಸುತ್ತದೆ. ಹಾಗೆಯೇ ವಿಶ್ವದ ಸಾಮೂಹಿಕ ಅಸ್ಮಿತೆ ವಿಶ್ವಚೇತನ ಕೂಡ. ಅದೂ ಅನೇಜತ್‌ ಎಂದರೆ ಅದೂ ಬದಲಾವಣೆಯಾಗದ್ದು ಮತ್ತು ವಿಶಿಷ್ಟವಾದುದು ಮತ್ತು ಅನನ್ಯವಾದುದು. ತಾನು ಬದಲಾವಣೆಯಾಗದೆ ಉಳಿದು ಹೊರ ಪ್ರಪಂಚವನ್ನು (ಪ್ರಕೃತಿಯನ್ನು) ತನ್ನ ಸ್ವಭಾವಕ್ಕನುಗುಣವಾಗಿ ಬದಲಾಗಲು ಅನುವು ಮಾಡಿಕೊಡುವಂತಹುದು. ಇಂದ್ರಿಯಗಳಿಂದ ಹೊರ ಪ್ರಪಂಚವನ್ನು ತಿಳಿಯಬಹುದು; ವಿಶ್ವದ ಆಂತರ್ಯ ಅಸ್ಮಿತೆಯನ್ನು ತಿಳಿಯುವುದು ಸಾಧ್ಯವಿಲ್ಲ. ಆ ಅಸ್ಮಿತೆ ತಾನು ನಿಂತೇ ಇರುತ್ತದೆ; ಅಂದರೆ ಯಾವ ಬದಲಾವಣೆಗೂ ಪಕ್ಕಾಗದೆ ಇದ್ದು ಪ್ರಕೃತಿಯಲ್ಲಿ ಎಲ್ಲ ಬದಲಾವಣೆಗಳಿಗೆ (ತದೇಜತಿ) ಕಾರಣವಾಗುತ್ತದೆ. ಪ್ರಾಣವಾಯುವಿನ ನಿರಂತರ ಚಲನೆಯಿಂದ ಇದು ಸಾಧ್ಯವಾಗುತ್ತದೆ. ವಾಯು ಹೀಗೆ ಜೀವಿಗಳ ಎಲ್ಲ ಚಟುವಟಿಕೆಗಳಿಗೆ ನೀರೆರೆಯುತ್ತದೆ. 

ಈ ವಿಶ್ವಚೇತನ ವಿಶ್ವದಸ್ಮಿತೆ ಬದಲಾಗುವಂತಹದಲ್ಲ; ಅದು ಹೊರನೋಟಕ್ಕೆ ಕಾಣುವಂತಹುದೂ ಅಲ್ಲ; ತಾನು ಬದಲಾಗದೆ ಕಾಣುವ ವಿಶ್ವದಲ್ಲಿ ಬದಲಾವಣೆ ತರುವಂಹುದು ಅದು. ಆದ್ದರಿಂದಲೇ ಅದು ಪ್ರತಿ ಪ್ರಾಪಂಚಿಕ ವಸ್ತುವಿನಿಂದ ದೂರವೂ ಇದೆ (ಬದಲಾವಣೆ ಪಕ್ಕಾಗದಷ್ಟು ದೂರದಲ್ಲಿ) ಮತ್ತು ಹತ್ತಿರದಲ್ಲೂ ಇದೆ (ಬದಲಾವಣೆ ತರುವಷ್ಟು ಹತ್ತಿರದಲ್ಲಿ). ಅದು ಎಲ್ಲ ವಸ್ತುಗಳ ಅಸ್ಮಿತೆಯೂ ಹೌದು. ವಿಶ್ವದ ಅಸ್ಮಿತೆಯೇ ಆಗಿರುವುದರಿಂದ ವಸ್ತುಗಳ ನಡುವೆಯೂ ಅದು ಇದೆ,ಹೊರಗೂ ಇದೆ.

ವಿಶ್ವ ಅಸ್ಮಿತೆಯೊಂದಿಗೆ ಹೀಗೆ ನಮ್ಮೆಲ್ಲರ ಒಡನಾಟ. ನಾವೆಲ್ಲರೂ ಆ ವಿಶ್ವಚೇತನದಲ್ಲಿದ್ದೇವೆ.  ಈ ಮಂತ್ರ ಸಾಮಾಜಿಕವಾಗಿ ಬಹು ಮುಖ್ಯ ತತ್ವವನ್ನು ತಿಳಿಸುತ್ತದೆ. ನಾವು ಯಾವ ಪ್ರಾಣಿಗಳನ್ನೂ ಹಿಂಸಿಸಬಾರದು. ತಾನು ತನ್ನ ಬಗ್ಗೆ  ಇವರೆಲ್ಲ ಹೇಗೆ ನಡೆದುಕೊಳ್ಳಬೇಕೆಂದು ಬಯಸುವೆನೋ ಆ ರೀತಿಯಲ್ಲಿ ಅವರುಗಳ ಬಗ್ಗೆ ನಡೆದುಕೊಳ್ಳ ಬೇಕು. ಆಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಮ್ತತು ಸಮೃದ್ಧಿ ನೆಲಸುತ್ತದೆ.

ಎಲ್ಲ ಪ್ರಾಣಿಗಳೂ ತಾನು ಯಾವುದರಿಂದ ಸುಖ ಅನುಭವಿಸುತ್ತೇನೋ ಅದರಿಂದ ಸುಖ ಅನುಭವಿಸುತ್ತವೆ, ತಾನು ಯಾವುದರಿಂದ ದುಖ ಅನುಭವಿಸುತ್ತೇನೋ ಅದರಿಂದ ದುಃಖ ಅನುಭವಿಸುತ್ತವೆ ಎಂಬುದನ್ನು ತಿಳಿದು ವರ್ತಿಸಲು ಪ್ರಾರಂಭಿಸಿದರೆ ವ್ಯಕ್ತಿ ಇಡೀ ಸಮಾಜವನ್ನು ಒಂದಾಗಿ ನೋಡುತ್ತಾನೆ. ಇಡೀ ಸಮಾಜವು ಅಭಿವೃದ್ಧಿಯಾದರೆ ತನ್ನ ಅಭಿವೃದ್ಧಿಯನ್ನು ನೋಡಿ ಕರುಬುವವರಾರೂ ಇರುವುದಿಲ್ಲ. ಆದ್ದರಿಂದ ಯಾರಿಗೂ ಶೋಕವಿರುವುದಿಲ್ಲ.

ಐದನೆಯ ಮಂತ್ರವು ವಿಶಿಷ್ಟವಾದುದು. ಇದು ಸಾಮಾಜಿಕ ಅಸ್ಮಿತೆಯ ಲಕ್ಷಣಗಳನ್ನು ಹೇಳುತ್ತಿದೆ. ಅದು ಆವೃತವಾದುದು. ಎಂದರೆ ಸಮಾಜದ ಕಣಕಣದಲ್ಲಿಯೂ ಅದು ತನ್ನ ಅಸ್ತಿತ್ವವನ್ನು ತೋರುವಂತಹುದು - ಒಬ್ಬ ವ್ಯಕ್ತಿಯ ಪ್ರತಿ ಜೀವಕೋಶದಲ್ಲಿಯೂ ಜೀವವಿರುವಂತೆ.  ಈ ಮಂತ್ರದಲ್ಲಿ ಸಾಮಾಜಿಕ ಅಸ್ಮಿತೆಯನ್ನು ಬಿಳಿಯದು ದೇಹವಿಲ್ಲದ್ದು ಊನರಹಿತವಾದುದು ಪಾಪರಹಿತ ವಾದುದು ಶುದ್ಧವಾದುದು ಮತ್ತು  ಕೆಡುಕಿನಿಂದ ಪ್ರಭಾವಿತವಾಗದ್ದು ಎಂದು ವರ್ಣಿಸಲಾಗಿದೆ. ಒಂದು ಸಮಾಜದಲ್ಲಿ ಒಬ್ಬ ಕಳ್ಳನಿದ್ದರೆ ಅದು ಇಡೀ ಸಮಾಜ ಕಳ್ಳರ ಸಮಾಜವೆಂದಾಗುವುದಿಲ್ಲ; ಸ್ಥಾಲೀ ಪುಲಾಕ ನ್ಯಾಯ ಇಲ್ಲಿ ಅನ್ವಯಿಸುವುದಿಲ್ಲ.  ಸಮಾಜವು ಪಾಪ ತಾಕದ್ದು, ಶುದ್ಧವಾದುದು ಮತ್ತು ಆದ್ದರಿಂದ ಬಿಳಿಯದು.  ಬಿಳಿಯದು ಶುದ್ಧ ಎಂಬ ರೂಪಕ ಇಲ್ಲಿ ಬಳಕೆಯಾಗಿದೆ. ವ್ಯಕ್ತಿ ಸಮಾಜದೊಡನೆ ಬೆರೆಯುತ್ತ, ಒಡನಾಡುತ್ತ ಸಮಾಜದಿಂದ ಕಲಿಯುತ್ತ ಸಮಾಜಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತ ತನ್ನ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣನಾಗಬೇಕು. 

ಆರು, ಏಳು ಮತ್ತು ಎಂಟನೆಯ ಮಂತ್ರಗಳು ಸಾಮಾಜಿಕ ಅಸ್ಮಿತೆಯ ಲಕ್ಷಣಗಳನ್ನು ನಿರ್ವಚಿಸುತ್ತವೆ ಮತ್ತು ವ್ಯಕ್ತಿ ಸಮಾಜದಲ್ಲಿ ನಡೆದುಕೊಳ್ಳ ಬೇಕಾದ ರೀತಿಯನ್ನು ವಿವರಿಸುತ್ತವೆ.  ಸಾಮಾಜಿಕ ಅಸ್ಮಿತೆಯ ಎರಡು ಮುಖ್ಯ ಲಕ್ಷಣಗಳೆಂದರೆ ಅದರ ಸ್ವತಂತ್ರ ಅಸ್ತಿತ್ವ ಮತ್ತು ಲೋಕದ ಎಲ್ಲ ಜೀವಿಗಳು ಮತ್ತು ವಸ್ತುಗಳಲ್ಲಿ ವ್ಯಾಪ್ತ. ಅದು ಅಮೂರ್ತವಾಗಿದ್ದರೂ ಸಮುದಾಯದ ಜ್ಞಾನ ಮತ್ತು ವಿಚಾರಶೀಲತೆ ತನ್ನದೇ ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ; ಆದ್ದರಿಂದಲೇ ಅದು ಸರ್ವ-ಚಿಂತನ-ಸ್ವರೂಪಿ. ಸಮಾಜದಲ್ಲಿ ಒಬ್ಬೊಬ್ಬ ವ್ಯಕ್ತಿ ಯಾವುದೋ ರೀತಿಯಲ್ಲಿ ಕಳಂಕಿತನಾಗಿರಬಹುದು ಆದರೆ ಒಟ್ಟಾರೆ ಸಮಾಜವು ಶುದ್ಧವಾದುದು ಪಾಪರಹಿತವಾದುದು ಯಾವುದೇ ಊನ ವಿಲ್ಲದ್ದು. ಸಮಾಜವು ನರನಾಡಿಗಳಿಲ್ಲದೆ ಅಗೋಚರವಾಗಿದ್ದರೂ ಎಲ್ಲ ಜೀವಿಗಳೂ ಸಮಾಜಕ್ಕೆ ಅಧೀನ.  ಯಾವ ವ್ಯಕ್ತಿ ಸರ್ವ ಜೀವಿಗಳನ್ನು ತನ್ನಂತೆಯೇ ಬಗೆದು ಅವರ ಸುಖಗಳಲ್ಲಿ ತನ್ನ ಸಂಭ್ರಮವನ್ನು ಕಾಣುತ್ತಾನೆ ಮತ್ತು ಅವರ ಸಂಕಷ್ಟಗಳನ್ನು ತನ್ನದೆಂದೇ ಅನುಭವಿಸಿ ಅವರಿಗೆ ಸಹಾಯ ಮಾಡಬಲ್ಲ ಅವನು ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳ ಬಲ್ಲ. ಅಂತಹವನು ಶೋಕವನ್ನು ಮೀರಿ ಮನಸ್ಸಿನ ಸಮತೋಲವನ್ನು ಕಾಪಾಡಿಕೊಳ್ಳ ಬಲ್ಲ. ವ್ಯಕ್ತಿಗಳ ಸಿರಿವಂತಿಕೆ ಸಮಾಜದ ಕೊಡುಗೆ. ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಪರಿಶ್ರಮದ ಜೊತೆಗೆ ಅವಕಾಶಗಳು, ಸಹಾಯ ಮತ್ತು ಪರಂಪರೆ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯನ್ನು ನಿರ್ಧರಿಸುತ್ತವೆ.

ಮುಂದಿನ ಮೂರು ಮಂತ್ರಗಳು ವ್ಯಕ್ತಿ ವಿದ್ಯಾವಂತ ಮಾತ್ರನಲ್ಲ, ಪ್ರಜ್ಞಾವಂತನೂ ಆಗಬೇಕಾದ ಅವಶ್ಯಕತೆಯನ್ನು ಬಹಳ ಸ್ಪಷ್ಟವಾಗಿ ತಿಳಿಸಿ ಕೊಡುತ್ತವೆ; ಆಗ ಮಾತ್ರ ಸಮಾಜವು ಸ್ಥಿರವಾಗಿ ಪ್ರಗತಿ ಪಥದಲ್ಲಿರಬಲ್ಲುದು. ಅವಿದ್ಯೆಯನ್ನು ಪೂಜಿಸುವವರು ಕಗ್ಗತ್ತಲೆಯನ್ನು ಪ್ರವೇಶಿಸುವರು. ಕತ್ತಲೆಯು ಅಜ್ಞಾನ, ಕತ್ತಲೆಯು ಸಂಕಷ್ಟ ಎಂಬ ರೂಪಕಗಳಿವೆ. ವಿದ್ಯೆಯನ್ನು ಕಲಿಯದೆ ಅವಿದ್ಯೆಯೇ ಸಾಕು ಹಣ ಸಂಪಾದನೆಗೆ ಎಂದುಕೊಂಡಿರುವವರು ಅಜ್ಞಾನದಲ್ಲಿ (ದಟ್ಟ ಕತ್ತಲೆಯಲ್ಲಿ) ಬೀಳುತ್ತಾರೆ ಮತ್ತು ಅದರ ಸಂಕಷ್ಟಗಳನ್ನು ಅನುಭವಿಸುತ್ತಾರೆ. ಒಂದು ವಿದ್ಯೆಯನ್ನು ಕಲಿತು ವಿದ್ಯಾವಂತರೆನಿಸಿಕೊಂಡವರೂ ಸುಖವನ್ನು ಅನುಭವಿಸುವರು ಮತ್ತು ಸಮಾಜದಲ್ಲಿ ಸುಖ ನೆಲೆಸಲು ಕಾರಣರಾಗುವರು ಎಂದೇನೂ ಇಲ್ಲ. ವಿದ್ಯಾವಂತರೆನಿಸಿಕೊಂಡವರೂ ಕೂಡ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಅದಕ್ಕಿಂತ ಘೋರ ಸಂಕಷ್ಟಕ್ಕೆ ಸಿಲುಕುತ್ತಾರೆ. ಉದಾಹರಣೆಗೆ ಅಣುವಿಜ್ಞಾನಿಯೊಬ್ಬ ವಿದ್ಯಾವಂತನೇ. ಆದರೆ ಅವನು ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಅಣುಬಾಂಬು ಸ್ಫೋಟಿಸಿ ಪ್ರಪಂಚನಾಶಕ್ಕೆ ಕಾರಣವಾಗಬಹುದು. 

ಆದರೆ ವಿದ್ಯೆಯಿಂದ ಒದಗುವ ಕತ್ತಲೆ ಬೇರೆ ಅವಿದ್ಯೆಯಿಂದ ಒದಗುವ ಕತ್ತಲೆ ಬೇರೆ. ವಿದ್ಯೆಯಿಂದ ಒದಗುವ ಕತ್ತಲೆಯೇ ಭೀಕರವೂ ಆಗಿರಬಹುದು. ವಿದ್ಯೆಯನ್ನೂ ಅವಿದ್ಯೆಯನ್ನೂ ಎರಡನ್ನೂ ಸರಿಯಾಗಿ ತಿಳಿದವರು ಅವಿದ್ಯೆಯಿಂದ ಸಾವನ್ನು ಎಂದರೆ ಅಧಃಪತನವನ್ನು ಮೀರಿ ವಿದ್ಯೆಯಿಂದ ಅಮೃತತ್ವವನ್ನು ಅಂದರೆ ಪ್ರಗತಿಯ ಅಂಶಗಳನ್ನು ಪಡೆಯುತ್ತಾರೆ. ವ್ಯಕ್ತಿ ಪ್ರಜ್ಞಾವಂತನಾಗಿ ವಿಕಾಸಿತನಾಗಬೇಕೆಂಬುದು ಈ ಮಂತ್ರಗಳು ನಿರೂಪಿಸುತ್ತವೆ.

ಇದೇ ರೀತಿ ಉತ್ಪಾದಕ ಕಾರ್ಯ ಅನುಸರಿಸುವವರು ಮತ್ತು ವಿನಾಶಕ ಕಾರ್ಯಗಳನ್ನು ಅನುಸರಿಸುವವರ ಬಗ್ಗೆಯೂ ವಿವರಣೆ ಇದೆ.ಈ ವಿವರಣೆಯು ೧೨ ೧೩ ೧೪ನೆಯ ಮಂತ್ರಗಳಲ್ಲಿ ಸ್ಫುಟವಾಗಿ ಬರುತ್ತದೆ. ʼವಿನಾಶಕ ಕಾರ್ಯಗಳಲ್ಲಿ ತೊಡಗಿರುವವರು ಹೇಗೂ ಕತ್ತಲೆಯ ಲೋಕಗಳನ್ನು ಪ್ರವೇಶಿಸುತ್ತಾರೆ. ಉತ್ಪಾದಕ ಅಥವ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿರುವವರೂ ಅದಕ್ಕಿಂತ ದಟ್ಟವಾದ ಕತ್ತಲ ಲೋಕವನ್ನು ಪ್ರವೇಶಿಸುತ್ತಾರೆ. ಆದರೆ ಈ ಎರಡೂ ಕತ್ತಲೆಗಳು ಬೇರೆ ಬೇರೆ. ಹಾಗೆಂದು ಎರಡನ್ನೂ ತಿಳಿದವರಿಂದ ಕೇಳಿದ್ದೇವೆ. ಎರಡನ್ನೂ ತಿಳಿದವರು ವಿನಾಶಕ ಕಾರ್ಯಗಳ ಜ್ಞಾನದಿಂದ ಮೃತ್ಯುವನ್ನು ಮೀರಿ ಸೃಜನಾತ್ಮಕ ಕಾರ್ಯಗಳ ಮೂಲಕ ಅಮರತ್ವವನ್ನು ಪಡೆಯುತ್ತಾರೆʼ - ಇದು ಮಂತ್ರದಲ್ಲಿ ಸ್ಥೂಲವಾಗಿ ಬಂದಿರುವ ವಿವರಣೆ.ಬಾಂಬನ್ನು ಸಿಡಿಸುವವನು ವಿನಾಶಕ ಕಾರ್ಯ ತತ್ಪರ; ಅವನು ಸಂಕಷ್ಟಗಳ ದುಃಖದ ಲೋಕದಲ್ಲಿ ಬಳಲುತ್ತಾನೆ. ಬಾಂಬನ್ನು ತಯಾರಿಸುವವನು ಉತ್ಪಾದಕ ಕಾರ್ಯ ತತ್ಪರನಾದರೂ ಸುಖದ ಲೋಕ ಭಾಜನನಲ್ಲ; ಕತ್ತಲೆಯ ಲೋಕವೇ ಅವನಿಗೆ ಗತಿ. ಸಮಾಜಕ್ಕೆ ಉಪಯುಕ್ತ ವಸ್ತುಗಳನ್ನು ತಯಾರಿಸಲು ಮತ್ತು ಸಮಾಜದ ಏಳಿಗೆಗಾಗಿ ಅದನ್ನು ಬಳಸಲು ಅರಿತವನು ಸುಖ ಸಂತೋಷಗಳ ಲೋಕಕ್ಕೆ ಸಲ್ಲುತ್ತಾನೆ.

ಬದುಕಿನಲ್ಲಿ ಇಂತಹ ವೈರುಧ್ಯಗಳು ಹಲವು ಎದುರಾಗುತ್ತವೆ. ಜ್ಞಾನ ಮತ್ತು ಅಜ್ಞಾನ, ದಯೆ ಮತ್ತು ಕ್ರೌರ್ಯ, ಹಿಂಸೆ ಮತ್ತು ಅಹಿಂಸೆ ಇತ್ಯಾದಿ. ಇಂತಹ ಸಂದರ್ಭಗಳಲ್ಲೆಲ್ಲ ಪರ ಮತ್ತು ವಿರೋಧೀ ನಿಲುವುಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳ ಬೇಕು. ಏಕಪಕ್ಷೀಯ ನಿರ್ಣಯಗಳು ತೊಂದರೆ ನೀಡುವ ಸಂಭವವಿದೆ. ಈ ವಿಷಯವನ್ನು ಇಲ್ಲಿ ಹೇಳಿರುವ ರೀತಿ ವಿಶಿಷ್ಟವಾಗಿದೆ.

ಇಲ್ಲಿಂದ ಮುಂದಿನ ಆರು ಮಂತ್ರಗಳು ಪ್ರಾರ್ಥನಾ ಸ್ವರೂಪದವು. ಇವೆಲ್ಲ ಬೆಳಕನ್ನು ಕುರಿತ ಪ್ರಾರ್ಥನೆಗಳು ಎನ್ನಬಹುದು. ಜ್ಞಾನದ, ಸುಖದ ಮತ್ತು ನಲಿವುಗಳ ದೇವನನ್ನು ಕುರಿತ ಪ್ರಾರ್ಥನೆಗಳು.  ಮೊದಲೆರಡು ಪೂಷನ್‌ ಕುರಿತವು. ಮೊದಲನೆಯದು ಬಹಳ ವಿಶಿಷ್ಟವಾದುದು, ಝಗಝಗಿಸುವ ಪ್ರಪಂಚದ ತೋರಿಕೆಯ ಹಿಂದೆ ಅಡಗಿದೆ ನಿಜವಾದ ಸತ್ಯ, ಈ ತೋರಿಕೆಯನ್ನು ತೆಗೆದು ಹಾಕಿದರೆ ಮಾತ್ರ ನಮಗೆ ಸತ್ಯದ ಅರಿವಾಗುತ್ತದೆ.  ಸಮಾಜದ ಅಸ್ಮಿತೆಯು ವ್ಯಕ್ತಿಗತ ಅಸ್ಮಿತೆಗಿಂತ ದೊಡ್ಡ ಸತ್ಯ. ಸಂತೆ, ಸಿನೆಮಾ, ಮಾಲುಗಳು ಇತ್ಯಾದಿ ಕಣ್ಣು ಕೋರೈಸುವ ಅಸ್ತಿತ್ವಗಳು. ಇವು ದಿನನಿತ್ಯ ನಮ್ಮ ಗಮನವನ್ನೆಲ್ಲ ಸೆಳೆಯುತ್ತವೆ ಮತ್ತು ಸಮಾಜದ ಅಸ್ಮಿತೆ ಎಂಬ ಈ ದೊಡ್ಡ ಸತ್ಯವನ್ನು ಕಾಣದ ಹಾಗಿಡುತ್ತವೆ. ಇಂತಹ ಮೇಲ್ಪದರಿನಿಂದ ಒಳ ಹೊಕ್ಕು ಸಮಾಜದ ಮಿಡಿತವನ್ನು ನಾವು ಗ್ರಹಿಸಬೇಕು. ಅದಕ್ಕೆ ತಕ್ಕಂತೆ ನಡೆದುಕೊಂಡರೆ ಸಮಾಜದ ಬೆಳವಣಿಗೆಗೆ ತನ್ ಕೊಡುಗೆಗಳನ್ನು ನೀಡುತ್ತಾ ವ್ಯಕ್ತಿ ಸುಖ ಸಂತೋಷಗಳನ್ನು ಪಡೆಯಬಹುದು.‌ ಆದ್ದರಿಂದೀ ಮೇಲ್ಪದರಿನ ಸೆಳೆತಗಳ ಮುಚ್ಚಳವನ್ನು ತೆಗೆದು ಸರಿಸು ಎಂಬುದು ಪ್ರಾರ್ಥನೆ.

ಹುಟ್ಟು (ಪ್ರಾಜಾಪತ್ಯ), ಸಾವು (ಯಮ), ಬದುಕು (ಸೂರ್ಯ) ಈ ಎಲ್ಲವು ಆ ಒಟ್ಟು ಅಸ್ಮಿತೆಯ (ಏಕರ್ಷಿ) ಭಾಗ. ಇವೆಲ್ಲವನ್ನೂ ಕಾಣಲು ಸಾಧ್ಯವಾಗುವಂತೆ ಜ್ಷಾನದ ಕಿರಣಗಳು ಹರಡಲಿ ಎಂಬ ಪ್ರಾರ್ಥನೆ ಪೂರ್ವಾರ್ಧ ಮಂತ್ರದಲ್ಲಿದೆ. ಅಂದರೆ ಇವುಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಹುಟ್ಟು-ಸಾವು-ಬದುಕುಗಳ ನಡುವೆ ಒಂದು ಸಮತೋಲವಿದೆ. ಈ ಸಮತೋಲವನ್ನು ಕಾಯ್ದುಕೊಳ್ಳುವುದು ಅಗತ್ಯ. ಅಲ್ಲದೆ ಹುಟ್ಟ ಸಾವುಗಳು ಹೇಗೆ ಪ್ರಮುಖ ಘಟನೆಗಳೋ ಹಾಗೆ ಬದುಕಿನ ಪ್ರತಿಹೆಜ್ಜೆ ಒಂದೊಂದು ಮುಖ್ಯ ಘಟನೆಯಿಂದಾಗಿದೆ. ಅವುಗಳನ್ನು ಹಾಗೆ ಹಾಗೆ ಸ್ವೀಕರಿಸುತ್ತಾ ಸಾಗುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ವ್ಯಕ್ತಿ ಇವುಗಳನ್ನು ಅರ್ಥ ಮಾಡಿಕೊಂಡು ಬದುಕು ಸಾಗಿಸುವುದರಲ್ಲಿ ಸಂಭ್ರಮ, ಸಾರ್ಥಕತೆ ಮತ್ತು ಸಂತೋಷಗಳು ಅಡಗಿವೆ. ಇವುಗಳ ಸಮಗ್ರತೆಯ ಮತ್ತು ಪರಸ್ಪರ ಸಂಬಂಧಗಳ ಅರಿವಾಗುವಂತೆ ಒಟ್ಟು ಜ್ಞಾನ ದೊರಕಲಿ ಎಂಬ ಪ್ರಾರ್ಥನೆ ಮಂತ್ರದ ಉತ್ತರಾರ್ಧದಲ್ಲಿದೆ. ಸಮಾಜವು ಇಂತಹ ಒಟ್ಟು ಅಸ್ಮಿತೆಯನ್ನು ಹೊಂದಿರುದರಿಂದಲೇ ಅದರ ನರಳಿಕೆ ನನ್ನದಾಗುತ್ತದೆ; ಅದರ ಸಂಭ್ರಮವೂ ನನ್ನದಾಗುತ್ತದೆ; ಅದುವೆ ಸಮಾಜದ ಕಲ್ಯಾಣತಮ ರೂಪ. ಅದಿರುವುದರಿಂದ ನಾನು ಹೀಗಿದ್ದೇನೆ ಎಂಬ ಉದ್ಘೋಷದೊಂದಿಗೆ ಹದಿನೇಳನೆಯಂತ್ರ ಮುಕ್ತಾಯವಾಗುತ್ತದೆ.

ಹದಿನೆಂಟು ಮತ್ತು ಹತ್ತೊಂಬತ್ತನೆಯ ಮಂತ್ರಗಳು ವ್ಯಕ್ತಿಗೆ ದೈಹಿಕ ಅಂತ್ಯವಿರುವುದನ್ನೂ ಮತ್ತು ಕಾರ್ಯಗಳ ರೂಪದಲ್ಲಿ ಶಾಶ್ವತತೆ ಇರುವುದನ್ನೂ ಮಾರ್ಮಿಕವಾಗಿ ನಿರೂಪಿಸುತ್ತವೆ. ಪ್ರಾಣವಾಯುವು ಅಮೃತ ಸಮಾನವಾದುದು. ಅದು ದೇಹದಿಂದ ಹೊರ ದಬ್ಬಲ್ಪಟ್ಟಾಗ ವ್ಯಕ್ತಿಯ ದೇಹವು ಸುಟ್ಟು ಭಸ್ಮವಾಗುವುದು; ಅದಕ್ಕೆ ಮಾತ್ರ ಯೋಗ್ಯವಾದುದು. ಹಾಗೆಂದು ವ್ಯಕ್ತಿಯ ಆಂತರ್ಯವಲ್ಲ - ವ್ಯಕ್ತಿಯ ಚಿಂತನೆಗಳು, ಸದ್ಭಾವ, ಅವನು ಮಾಡಿದ ಕರ್ಮಗಳು ಇತ್ಯಾದಿ ಶರೀರ ಭಸ್ಮವಾದ ಮೇಲೂ ಉಳಿಯುವಂತಹವು. ಆದ್ದರಿಂದ ಇದ್ದಾಗ ಸಚ್ಚಿಂತನೆ ಸತ್ಕರ್ಮಗಳನ್ನೇ ಮಾಡತಕ್ಕದ್ದು. ಹತ್ತೊಂಬತ್ತನೆಯ ಮಂತ್ರದಲ್ಲಿ ವ್ಯಕ್ತಿ ಸಮಾಜದಲ್ಲಿ ತಾನು ಮಾಡಿದ ಕಾರ್ಯಗಳ ಸ್ಮರಣೆ ಇರುವಂತೆ ಮಾಡೆಂದು ಪ್ರಾರ್ಥಿಸುತ್ತಾನೆ.

ಇಪ್ಪತ್ತನೆಯದು ಉಪನಿಷತ್ತಿನ ಕೊನೆಯ ಮಂತ್ರ. ಇದರಲ್ಲಿ ಅಗ್ನಿರೂಪಕಗಳನ್ನು ಕವಿ ಬಳಸಿದ್ದಾನೆ. ಕಲ್ಪನೆಯ ಕಿಡಿ ಹೊತ್ತಿಸುವುದು, ಮನಸ್ಸಿನಲ್ಲಿ ಮಿಂಚು ಹರಿಯುವುದು, ಇನ್ನೊಬ್ಬರಿಗಾಗಿ ಬೆಳಕಾಗುವುದು - ಇಂತಹ ಕಡೆಯಲ್ಲೆಲ್ಲ ಅಗ್ನಿ ರೂಪಕವನ್ನು ಕಾಣುತ್ತೇವೆ. ಕಿಡಿ, ಮಿಂಚು, ಬೆಳಕು ಇವೆಲ್ಲ ಅಗ್ನಿಯ ರೂಪಗಳು. ಇಲ್ಲೆಲ್ಲ ಬುದ್ಧಿ ಎಂಬುದರ ಬದಲಾಗಿ ಈ ಪದಗಳನ್ನು ಬಳಸಲಾಗಿದೆ. ಅಂದರೆ ಅಗ್ನಿಯು ಬುದ್ಧಿ ಎಂಬುದನ್ನು ಇಲ್ಲೆಲ್ಲ ರೂಪಕವಾಗಿ ಬಳಸಿದೆ. (ಅಗ್ನಿಯು ಊರಿಗೆ ಊರನ್ನೇ ನುಂಗಿ ಹಾಕಿತು, ಬೆಂಕಿಯ ಅನಾಹುತಕ್ಕೆ ಅವನು ಬಲಿಯಾದ - ಇಂತಹ ಪ್ರಯೋಗಗಳೂ ಇವೆ. ಇಂತಹ ಕಡೆ ಅಗ್ನಿಯೊಂದು ಹಸಿದ ಪ್ರಾಣಿ ಎಂಬ ರೂಪಕ ಬಳಕೆಯಾಗಿದೆ. ಅದನ್ನು ಇಲ್ಲಿ ಪರಿಗಣಿಸಿಲ್ಲ). ಈ ರೂಪಕದಿಂದ ಕೊನೆಯ ಮಂತ್ರವು ಸುಲಭವಾಗಿ ಅರ್ಥವಾಗುತ್ತದೆ. ಸರಿಯಾದ ದಾರಿಯಲ್ಲಿ ನಮ್ಮ ಯೋಚನೆಗಳನ್ನು ನಾವು ಹರಿಯಗೊಡಬೇಕು. ಹೆಚ್ಚು ಸಂಪದ್ಭರಿತ ಜೀವನಕ್ಕೆ ಹಾಗೆ ನಾವು ಸಾಗಬೇಕು. ಉಳಿದ ಸಾಲುಗಳು ಸ್ವಯಂಸ್ಪಷ್ಟವಾಗುತ್ತವೆ.

ಒಟ್ಟಿನಲ್ಲಿ ಈಶೋಪನಿಷತ್ತು ಅಧ್ಯಾತ್ಮ ವಿಷಯಗಳನ್ನು ಪ್ರತಿಪಾದಿಸುವ ಒಂದು ಪ್ರಮುಖ ಉಪನಿಷತ್ತಾದರೂ ಅದು ಸಾಮಾಜಿಕವಾಗಿಯೂ ತುಂಬ ಪ್ರಸ್ತುತವಾದುದಾಗಿದೆ. ಅದರ ಅಧ್ಯಯನ‌ ವ್ಯಕ್ತಿಯು ಸಮಾಜದಲ್ಲಿ ಹೇಗೆ ಬದುಕ ಬೇಕೆಂಬುದನ್ನೂ ಹೇಗೆ ಬದುಕಿದರೆ ತನಗೂ ಸಮಾಜಕ್ಕೂ ಅನುಕೂಲಕರವೆಂಬುದನ್ನೂ ಘನತರವಾಗಿ ತಿಳಿಸಿಕೊಡುತ್ತದೆ. ಶಾಲಾ ವಿಷಯಗಳಲ್ಲಿ (ಮುಖ್ಯವಾಗಿ ಭಾಷಾ ವಿಷಯಗಳಲ್ಲಿ ಇಂತಹವನ್ನು ಸೇರಿಸಿದರೆ) ಮುಂದಿನ ತಲೆಮಾರಿಗೆ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯೂ ಇಂದಿನ ಬದುಕನಲ್ಲಿ ಮೌಲ್ಯಯುತವಾಗಿ ಬಾಳಲು ಪ್ರೇರಣೆಯೂ ದೊರಕುತ್ತದೆ.

******************************************************************************************



No comments:

Post a Comment