ನನ್ನ ಬಗ್ಗೆ
ನಾನು ಬಿ ವಿ ಮಹೀದಾಸ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ರಾಗೋಡು ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಹುಟ್ಟಿದವನು. ಮೈಸೂರು ವಿಶ್ವವಿದ್ಯಾಲಯದಿಂದ ಎಮ್ ಎ, ಪಿಎಚ್ಡಿ, ಇಂಗ್ಲಿಷಿನಲ್ಲಿ ದಿಪ್ಲೊಮಾ ಮತ್ತು ಬಿ ಎಡ್ ಪದವಿಗಳನ್ನು ಪಡೆದಿದ್ದೇನೆ. ಕರ್ನಾಟಕಸರಕಾರದ ಶಿಕ್ಷಣ ಇಲಾಖೆಯಲ್ಲಿ ಸರ್ವಶಿಕ್ಷಾಆಭಿಯಾನದ ವಿಭಾಗದಲ್ಲಿ ಜಂಟೀ ನಿರ್ದೇಶಕನಾಗಿ ಕೆಲಮಾಡಿ 2012ರಲ್ಲಿ ನಿವೃತ್ತನಾಗಿದ್ದೇನೆ. ಇದಕ್ಕೆ ಮೊದಲು ಉಡುಪಿ ಮತ್ತು ದಕ್ಷಿಣಕನ್ನಡದ ಹಲವು ತಾಲ್ಲೂಕುಗಳಲ್ಲಿ ಬಿ ಇ ಒ ಆಗಿ ಮತ್ತು ಆ ಎರಡೂ ಜಿಲ್ಲೆಗಳಲ್ಲಿ ಡಿಡಿಪಿಐ ಆಗಿ ಕೆಲಸಮಾಡಿರುತ್ತೇನೆ. ಅಲ್ಲದೆ ಮಂಗಳೂರಿನ ಬಿ ಎಡ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಒಂಬತ್ತು ವರ್ಷಗಳ ಕಾಲ ಬೋಧನಾ ಕಾರ್ಯ ಮಾಡಿರುತ್ತೇನೆ.
ನಾನು ಮುಖ್ಯವಾಗಿ ಶಾಸ್ತ್ರ ಸಾಹಿತ್ಯದಲ್ಲಿ (ವ್ಯಾಕರಣ, ನಿಘಂಟು, ಛಂದಸ್ಸು, ಗ್ರಂಥಸಂಪಾದನೆ ಇ) ಆಸಕ್ತ. ಜೊತೆಗೆ ಸೃಜನ ಸಾಹಿತ್ಯದಲ್ಲೂ ಮನಶ್ಶಾಸ್ತ್ರದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದೇನೆ. ನನ್ನ ಪ್ರಕಟಿತ ಕೃತಿಗಳು ಇವು:
ಎ ಗ್ರಾಮರ್ ಆಫ್ ದಿ ಕರ್ಣಾಟ ಲಾಂಗ್ವೇಜ್ (ಮೂಲ: ವಿಲಿಯಮ್ ಕೇರಿ) ಸಂಪಾದಿತ: ಪ್ರೊ ಎ ವಿ ನಾವಡ ಮತ್ತು ಡಾ ಬಿ ವಿ ಮಹೀದಾಸ. ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2018
ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು (ಡಾ ಬಿ ವಿ ಮಹೀದಾಸ) ಪ್ರಕಾಶಕರು: ಎರಡನೆಯ ಪರಿಷ್ಕೃತ ಮುದ್ರಣ – ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, 2004. ಪ್ರಥಮ ಮುದ್ರಣ – ಯುಗಪರುಷ ಪ್ರಕಟಣಾಲಯ ಕಿನ್ನಿಗೋಳಿ ದ ಕ, 1997. ಈ ಪುಸ್ತಕಕ್ಕೆ 1997ರಲ್ಲಿ ಮಂಗಳೂರಿನಲ್ಲಿ ನಡೆದ ಅರವತ್ತಾರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಹುಮಾನ ಬಂದಿರುತ್ತದೆ.
ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಶನರಿಗಳ ಕೊಡುಗೆ (ಡಾ ಬಿ ವಿ ಮಹೀದಾಸ) ಪ್ರಕಾಶಕರು – ಶ್ರೀನಿವಾಸ ಪುಸ್ತಕ ಪ್ರಕಾಶನ, ಬಸವನ ಗುಡಿ ಬೆಂಗಳೂರು, 2010. ಇದು ನನ್ನ ಪಿ ಎಚ್ಡಿ ನಿಬಂಧ
ಕನ್ನಡ ಗೀತಾಂಜಲಿ ಅನು. ಡಾ ಬಿ ವಿ ಮಹೀದಾಸ ಪ್ರಕಾಶಕರು: ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 2002. ಇದು ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯ ಕನ್ನಡ ಅನುವಾದ.
ಪುನರುಕ್ತಾ (ಡಾ ಬಿ ವಿ ಮಹೀದಾಸ) ಪ್ರಕಾಶಕರು: ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 1996 ಕವನ ಸಂಕಲನ
ನಿವೇದನೆ (ಡಾ ಬಿ ವಿ ಮಹೀದಾಸ) ಪ್ರಕಾಶಕರು: ಯುಗಪರುಷ ಪ್ರಕಕಟಣಾಲಯ ಕಿನ್ನಿಗೋಳಿ ದ ಕ 1992 ಇದು ನನ್ನ ಪ್ರಥಮ ಕವನ ಸಂಕಲನ
ಸಂಕ್ಷಿಪ್ತ ಶಿಕ್ಷಣ ಮನೋ ವಿಜ್ಞಾನ (ಡಾ ಬಿ ವಿ ಮಃಈದಾಸ) ಪ್ರಕಾಶಕರು: ರಾಗೋಡು ಪ್ರಕಾಶನ ಕೊಪ್ಪಚಿಕ್ಕಮಗಳೂರು ಜಿಲ್ಲೆ 2009.
ಇವಲ್ಲದೆ ಸಾಹಿತ್ಯ ಪರಿಷತ್-ಪ್ರಕಟಣೆಗಳು, ಬೇರೆಬೇರೆ ಸಂಭಾವನಾಗ್ರಂಥಗಳು, ಸ್ಮರಣ ಸಂಚಕೆಗಳು ಇತ್ಯಾದಿಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಹೊಸದಿಗಂತ ಪತ್ರಿಕೆಯ ಬೆಂಗಳೂರು ಆವೃತ್ತಿಗಾಗಿ ಒಂದು ವರ್ಷ ಪುಸ್ತಕ ಸಮೀಕ್ಷೆಗಳನ್ನು ಬರೆದಿರುತ್ತೇನೆ. ಉದಯವಾಣಿ, ವಾರ್ತಾ ಭಾರತಿ ಇತ್ಯಾದಿ ಪತ್ರಿಕೆಗಳಲ್ಲೂ, ಶಿಕ್ಷಣಕ್ಕೆ ಸಂಬಂಧಿಸಿದ ವಿದ್ವತ್-ಪತ್ರಿಕೆಗಳಲ್ಲೂ ನನ್ನ ಲೇಖನಗಳು ಪ್ರಕಟವಾಗಿವೆ.
ಪ್ರಸ್ತುತ ಕೃತಿಯ ಬಗ್ಗೆ
ಪ್ರಸ್ತುತ ಕೃತಿಯ ಶೀರ್ಷಿಕೆ: ರೂಪಕಗಳ ಸುತ್ತ ಮತ್ತು ಇತರ ಪ್ರಬಂಧಗಳು. ಇದೊಂದು ಸಂಶೋಧನಾ ಪ್ರಬಂಧಗಳ ಸಂಕಲನ. ಕನ್ನಡದಲ್ಲಿ ವಿದ್ವತ್ತಿನ ಮಟ್ಟವನ್ನು ವಿಶ್ವಸ್ತರಕ್ಕೇರಿಸಬೇಕೆಂಬ ಹಂಬಲದಿಂದ ರಚಿಸಿದ ಪ್ರಬಂಧಗಳು ಇಲ್ಲಿವೆ. ರೂಪಕಗಳ ಸುತ್ತ, ಕನ್ನಡ ಗಾದೆಗಳ ಬಗ್ಗೆ, ಸಮಾಸಪದಗಳು ಮತ್ತು ನುಡಿಗಟ್ಟುಗಳು – ಈ ಮೂರು ಈ ಸಂಕಲನದ ಪ್ರಥಮ ಮೂರು ಪ್ರಬಂಧಗಳು. ಪಾಶ್ಚಾತ್ಯ ಜಗತ್ತಿನಲ್ಲಿ ಕಳೆದ ಮೂರು ದಶಕಗಳಿಂದ ಪ್ರಚುರವಾಗಿರುವ ರೂಪಕಗಳ ಕಾಗ್ನಿಟಿವ್ ಸಿದ್ಧಾಂತವನ್ನು ಕನ್ನಡಿಗರಿಗೆ ಪರಚಯಿಸಿ ಕುಮಾರವ್ಯಾಸನ ಪದ್ಯಗಳಿಗೆ ಮತ್ತು ಬೇಂದ್ರೆಯವರ ಕುರುಡು ಕಾಂಚಾಣಕ್ಕೆ ಅಳವಡಿಸಿ ಅರ್ಥೈಸಿದಾಗ ಹೇಗೆ ಹೊಸ ಅರ್ಥಗಳು ಸಹಜವಾಗಿ ಹೊಮ್ಮುತ್ತವೆ ಎಂಬುದು; ಕನ್ನಡಗಾದೆಗಳನ್ನು ಈ ಸಿದ್ಧಾಂತಕ್ಕನುಸಾರವಾಗಿ ಹೇಗೆ ಅರ್ಥೈಸಬಹುದೆಂಬುದು; ಕನ್ನಡನುಡಿಗಟ್ಟುಗಳು ಅರ್ಥಗಳನ್ನು ಪಡೆಯುವ ವಿಧಾನವನ್ನು ವಿವರಿಸುವುದು - ಇವು ಈ ಪ್ರಬಂಧಗಳಲ್ಲಿ ಬಂದಿವೆ.
ಕನ್ನಡ ವ್ಯಾಕರಣಗಳಲ್ಲಿ ನಿರೂಪಣಾ ತಂತ್ರ ವಿಕಾಸ ಎಂಬ ಪ್ರಬಂಧದಲ್ಲಿ ಕನ್ನಡದ ಪ್ರಥಮ ವ್ಯಾಕರಣದಿಂದ ಹಿಡಿದು ಇಪ್ಪತ್ತನೆಯ ಶತಮಾನದಲ್ಲಿ ಬಂದ ವ್ಯಾಕರಣಗಳ ವೆರೆಗೆ ನಿರೂಪಣೆಯಲ್ಲಿ ಹೊಸತನ ಹೇಗೆ ಮೂಡುತ್ತಾ ಬಂತು ಎಂಬುದರ ವಿವರವಿದೆ.
ಕನ್ನಡ ನಿಘಂಟುಗಳ ವರ್ಗೀಕರಣದತ್ತ ಎಂಬುದು ವಿಶ್ವ ಸ್ತರದಲ್ಲಿ ನಿಘಂಟುಗಳ ವರ್ಗೀಕರಣ ವಿಧಾನಗಳನ್ನು ಸಮೀಕ್ಷಿಸಿ ಕನ್ನಡಕ್ಕಾಗಿ ಸೂಕ್ತ ವರ್ಗೀಕರಣವನ್ನು ಸೂಚಿಸಿದ್ದೇನೆ. ಇದು ಒಂದು ಟೇಬಲ್ ರೂಪದಲ್ಲಿದೆ. ಇದರಲ್ಲಿ ನಿಘಂಟುಗಳನ್ನು ಅಳವಡಿಸಿ ಪುಸ್ತಕ ಭಂಡಾರದ ನಿಘಂಟು ವಿಭಾಗದಲ್ಲಿ ನೇತುಹಾಕಿದರೆ ಓದುಗ ತನಗೆ ಬೇಕಾದ ನಿಘಂಟನ್ನು ಆಯ್ದುಕೊಳ್ಳಲು ಅನುಕೂಲವಾಗುತ್ತದೆ; ಸಂಶೋಧಕ ಇದರಲ್ಲಿರುವ ಖಾಲಿ ಖಾನೆಗಳನ್ನು ನೋಡಿ ತಾನು ಯಾವ ತರಹದ ನಿಘಂಟನ್ನು ರಚಿಸಿದರೆ ಉಪಯುಕ್ತವೆಂಬುದನ್ನು ಕಂಡುಕೊಳ್ಳಬಹುದು.
ರೆಂಗ ಬಳಸಿ ಕವಿತೆ ಕಲಿಸಿ ಎಂಬ ಪ್ರಬಂಧ ಶಿಕ್ಷಣಕ್ಕೆ ಸಂಬಂಧಿಸಿದೆ. ಕವಿತೆ ಕಲಿಸುವ ಒಂದು ಹೊಸ ವಿಧಾನವನ್ನು ಪರಿಚಯಿಸುತ್ತದೆ. ಕೆಲವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರಯೋಗಿಸಿ ಪರಿಣಾಮಕಾರಿತ್ವವನ್ನು ದೃಢಪಡಿಸಿಕೊಂಡು ಇಲ್ಲಿ ಸೇರಿಸಿದ್ದೇನೆ.
ಇವಲ್ಲದೆ ಎಟಿಮಲಾಜಿಕಲ್ ನಿಘಂಟುಗಳ ಬಗ್ಗೆ ರಾಘವೇಂದ್ರಸ್ವಾಮಿಗಳು ರಚಿಸಿದ ಕಾವ್ಯಗಳ ಬಗ್ಗೆ ಪ್ರಬಂಧಗಳಿವೆ.
ಈ ಕೃತಿಯನ್ನು ತಮ್ಮ ಸಂಸ್ಥೆಯು ಪ್ರಕಾಶನಕ್ಕೆ ಎತ್ತಿಕೊಳ್ಳಬೇಕೆಂದು ಕೋರುವೆ. ಇದರ ಟೈಪ್ಡ್ ಪ್ರತಿ ನನ್ನಲ್ಲಿದ್ದು ತಮಗೆ ಸಾಫ್ಟ್ ಕಾಪಿಯನ್ನು ಒದಗಿಸ ಬಲ್ಲೆ.ಇದರಲ್ಲಿರುವ ಒಟ್ಟು ಪುಟಗಳ ಸಂಖ್ಯೆ ಸುಮಾರು ೧೪೦
****************************************************
No comments:
Post a Comment