Search This Blog

Tuesday 26 May 2015

Study Skills - ಅಧ್ಯಯನ ಅಧ್ಯಾಪನಗಳಿಗೊಂದು ಹೊಸ ಗತಿ

ನಾನು ಈಚೆಗೆ ಎಸ್ ಅನುಪಮಾ ಇವರು ಇಂಗ್ಲಿಷಿನಲ್ಲಿ ಬರೆದ ಸ್ಟಡಿ ಸ್ಕಿಲ್ಲ್ಸ್ ಎಂಬ ಪುಸ್ತಕವನ್ನು ಓದಿದೆ. ಮನಸ್ಸಿನಲ್ಲಿ ಅಚ್ಚೊತ್ತಿತು. ಅದನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತು. ಅನಂತರ ಅದರ ಬಗ್ಗೆ ಪ್ರಶಂಸಾ ಸಮೀಕ್ಷೆಯೊಂದನ್ನು ಬರೆದೆ. ಅದು ಹೀಗಿದೆ:

                                        
“ಕಲಿಕೆಯಲ್ಲಿ ಯಾವ ಮಗುವೂ ಹಿಂದುಳಿಯ ಬಾರದೆಂ”ದು ಭಾವಿಸುವ ಅಧ್ಯಾಪಕರಾರು? “ಕಡಿಮೆ ಬೋಧನೆ ಹೆಚ್ಚು ಕಲಿಕೆ”; “ತರಗತಿಯು ಒಂದು ವಿಸ್ತೃತ ಕುಟುಂಬದಂತಿರಬೇಕು”; “ಕಲಿಯುವವರ ಅಗತ್ಯಗಳನ್ನು ಸಂಪೂರ್ಣವಾಗಿ ಗಮನಿಸಬೇಕು”; - ಇಂತಹ ಹೇಳಿಕೆಗಳು ಇವತ್ತು ಎಲ್ಲ ದೇಶಗಳಲ್ಲಿ ಸಾಮಾನ್ಯ.ಇಂತಹ ಆಸೆಗಳಿಲ್ಲದವರಾರು? ಆದರೆ ಇವುಗಳ ವೈರುದ್ಧ್ಯಗಳೂ ಸಾಮಾನ್ಯ. ಅಂದರೆ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುವುದು, ಬೋಧನೆಗೆ ಹೆಚ್ಚು ಪ್ರಾಮುಖ್ಯವಿರುವುದು, ತರಗತಿಯಲ್ಲಿ ಶಿಸ್ತಿಗಾಗಿ ಶಿಕ್ಷೆ, ಕಲಿಯುವವರ ಅಗತ್ಯಗಳಿಗಿಂತ ವಸ್ತುವಿಷಯ ನಿರೂಪಣೆಯನ್ನೇ ಹೆಚ್ಚಾಗಿ ಗಮನಿಸುವುದು – ಇವೂ ಎಲ್ಲೆಡೆಯಲ್ಲೂ ಕಾಣಸಿಗುವುವು. ಈ ವೈರುದ್ಧ್ಯಗಳನ್ನು ಮೀರಿ ಕಲಿಕೆ ಪರಿಪೂರ್ಣವಾಗಿ ಮತ್ತು ಸಂತಸದಾಯಕವಾಗಿ ಆಗುವ0ತೆ ನೋಡಿಕೊಳ್ಳುವುದು ಹೇಗೆ ಎಂಬ ಸವಾಲು ಅಧ್ಯಾಪಕರ ಮುಂದಿದೆ.
          ಈ ನಿಟ್ಟಿನಲ್ಲಿ ಕಲಿಕಾಶೈಲಿಗಳು ಎಂಬುದು ಶಿಕ್ಷಣಕ್ಷೇತ್ರದಲ್ಲಿ ಈಚೆಗೆ ಬೆಳೆದು ಬಂದಿರುವ ಪರಿಕಲ್ಪನೆ. ಮಾಹಿತಿಯನ್ನು ಸಂಸ್ಕರಿಸಲು ವ್ಯಕ್ತಿ ಅನುಸರಿಸುವ ರೀತಿಗಳಲ್ಲಿ ಹೆಚ್ಚು ಆದ್ಯತೆಯ ರೀತಿಯನ್ನು ಕಲಿಕಾ ಶೈಲಿ ಎನ್ನಬಹುದು. ಅರಿವನ್ನು ಹೆಚ್ಚಿಸಿಕೊಳ್ಳುವ, ಭಾವನಾತ್ಮಕವಾಗಿ ನೋಡುವ, ಸಾಮಾಜಿಕವಾಗಿ ವ್ಯವಹಿರಿಸುವ, ಅಥವ ದೈಹಿಕವಾಗಿ ಪ್ರತಿಕ್ರಿಯಿಸುವ ಇತ್ಯಾದಿ ಪ್ರತಿಯೊಂದು ಆಯಾಮದಲ್ಲೂ ವ್ಯಕ್ತಿಗೆ ತನ್ನದೇ ಆದ ಆದ್ಯತೆಗಳಿರುತ್ತವೆ. ಈ ಆದ್ಯತೆಗಳು ಸನ್ನಿವೇಶವಶದಿಂದ ಮತ್ತು ಕಾಲಾನುಕ್ರಮದಲ್ಲಿ  ಬದಲಾಗುತ್ತಿರಬಹುದಾದರೂ ಹೆಚ್ಚು ಪ್ರಯೋಜನಕ್ಕೆ ಬರುವ ಒಂದೋ ಎರಡೋ ಇರುತ್ತವೆ. ಇವುಗಳನ್ನು ತಿಳಿದು ಕಲಿಯಲು ಕಲಿಸಲು ಪ್ರಾರಂಭಿಸುವುದರಿಂದ ಕಲಿಕೆಯು ವ್ಯಕ್ತಿಗೆ ಪ್ರಸ್ತುತವಾಗಿ ಸುಲಭವಾಗಬಹುದು. ಸಂತೋಷದಾಯಕವಾಗಬಹುದು. ಹೀಗೆ ಕಲಿಕೆಯನ್ನು ಪ್ರತಿವ್ಯಕ್ತಿಗನುಗುಣವಾಗಿ ಸಜ್ಜುಗೊಳಿಸುವುದು ಸಾಧ್ಯವಾಗುತ್ತದೆ ಎಂಬುದೇ ಈ ಹೊಸ ಪರಿಕಲ್ಪನೆ.
        ಒಂದು ಸಮೀಕ್ಷೆಯ ಪ್ರಕಾರ ಬೇರೆಬೇರೆ ಅಧ್ಯಾಪನ ತಜ್ಙರಿಂದ ಗುರುತಿಸಲ್ಪಟ್ಟ ಒಂದು ನೂರಕ್ಕೂ ಹೆಚ್ಚು ಕಲಿಕಾಶೈಲಿಗಳಿವೆ. ಮತ್ತು ಅವುಗಳಿಂದ ವ್ಯಕ್ತಿ ತನಗೆ ಬೇಕಾದ್ದನ್ನು ಆರಿಸಿಕೊಳ್ಳುತ್ತಾನೆ. ಇಂತಹ ಕಲಿಕಾಶೈಲಿಗಳನ್ನು ವಿವಿಧವಾಗಿ ವರ್ಗೀಕರಿಸುವ ಪ್ರಯತ್ನಗಳು ನಡೆದಿವೆ. ದೃಷ್ಟಿಪ್ರಧಾನ, ಶ್ರವಣಪ್ರಧಾನ, ಭಾಷಾ ಪ್ರಧಾನ, ಶರೀರವ್ಯವಹಾರ ಪ್ರಧಾನ, ತರ್ಕ ಪ್ರಧಾನ, ಸಾಮಾಜಿಕವ್ಯವಹಾರಪ್ರಧಾನ, ವ್ಯಕ್ತಿಯ ಒಂಟಿತನ ಪ್ರಧಾನ – ಇತ್ಯಾದಿಯಾಗಿ ಕಲಿಕಾಶೈಲಿಗಳನ್ನು ಗುರುತಿಸುವುದಿದೆ. ಇಂತಹ ಕಲಿಕಾಶೈಲಿಗಳನ್ನು ಇಂದಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಸರಳ ಭಾಷೆಯಲ್ಲಿ ನಿರೂಪಿಸುವ ಪುಸ್ತಕವೇ ಅಧ್ಯಯನ ಕೌಶಲಗಳು ಅಥವ ಸ್ಟಡಿ ಸ್ಕಿಲ್ಸ್. ಎಸ್ ಅನುಪಮಾ ಇವರು ರಚಿಸಿರುವ ಈ ಪುಸ್ತಕ 2014ರ ನವೆಂಬರ್ ನಲ್ಲಿ ಪ್ರಕಟವಾಗಿದೆ.ಓರ್ಬಿನೆಟ್ ಟೆಕ್ನಾಲೊಜೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪುಸ್ತಕದ ಪ್ರಕಾಶಕರು.  120 ಪುಟಗಳಷ್ಡು ವಿಸ್ತಾರವಾಗಿದೆ. ಬೆಲೆ ರೂ. 199/-. ಉಪಯುಕ್ತವಾಗಿದೆ.
            ಪುಸ್ತಕದಲ್ಲಿ ಹತ್ತು ಅಧ್ಯಾಯಗಳಿವೆ. ಪೋಷಣಾಂಶಯುಕ್ತ ಆಹಾರ ಮತ್ತು ಉನ್ನತಶಿಕ್ಷಣವೃಕ್ಷ ಎರಡನ್ನು ಹೊರತುಪಡಿಸಿದರೆ ಉಳಿದವೆಲ್ಲ ವ್ಯಕ್ತಿ ತನ್ನ ಅಧ್ಯಯನವನ್ನು ಪರಿಣಾಮಕಾರಿಯಾಗಿ ರೂಢಿಸಿಕೊಳ್ಳಲು ಉಪಯುಕ್ತವಾದವು. ಅಧ್ಯಾಪಕರಿಗೂ ತಮ್ಮ ವಿದ್ಯಾರ್ಥಿಗಳ ಒಲವುಗಳನ್ನು ತಿಳಿದು ಕಲಿಸಲು ಪ್ರಯೋಜನಕಾರಿಯಾದವು. ಇವುಗಳಲ್ಲಿ ಮೊದಲನೆಯದೇ ಬಹು ಮುಖ್ಯ ಅಧ್ಯಾಯ ಎನ್ನಬಹುದು. ಇದರಲ್ಲಿ ಅಧ್ಯಯನ ಮಾಡಲು ವ್ಯಕ್ತಿಗಳು ಆದ್ಯತೆಯ ಮೇಲೆ ಬಳಸುವ ವಿಧಾನಗಳ ವಿವರವಿದೆ.
   
ಕಲಿಕಾಶೈಲಿಗಳು ಎಂಬುದು ಮೊದಲನೆಯ ಅಧ್ಯಾಯದ ಹೆಸರು. ಇದರಲ್ಲಿ ಕಲಿಕಾಶೈಲಿಯನ್ನು  ದೃಶ್ಯಪ್ರಧಾನ ಶ್ರವಣಪ್ರಧಾನ ಮತ್ತು ಶರೀರಪ್ರಧಾನ ಎಂಬ ಮೂರು ವರ್ಗಗಳಲ್ಲಿ ಚರ್ಚಿಸಿದ್ದಾರೆ. ದೃಶ್ಯಪ್ರಧಾನ ಕಲಿಕೆಯವರು ಎಂದರೆ ಕಲಿಯಬೇಕಾದ ವಸ್ತುವನ್ನು ಅಥವ ಕ್ರಿಯೆಯನ್ನು ನೋಡುವುದರಿಂದ ಉತ್ತಮವಾಗಿ ಕಲಿಯವವರು. ಅವರಿಗೆ ಉಪನ್ಯಾಸಗಳನ್ನು ಅಥವ ಭಾಷಣಗಳನ್ನು ಕೇಳುವುದು ಅಷ್ಟಾಗಿ ಹಿಡಿಸುವುದಿಲ್ಲ. ಹಾಗೆ ಹೇಳಿದ್ದನ್ನು ಕೇಳಿದರೂ ಅವರು ಅದಕ್ಕೆ ದೃಶ್ಯ ರೂಪವನ್ನು ಕೊಡುವುದರಿಂದಲೇ ನೆನಪಿಟ್ಟುಕೊಳ್ಳುವರು ಮತ್ತು ಅನ್ವಯಪ್ರಯತ್ನಗಳನ್ನು ಮಾಡುವರು. ಶ್ರವಣ ಪ್ರಧಾನ ಕಲಿಕೆಯವರು ಕೇಳುವುದನ್ನೇ ಕಲಿಕೆಗೆ ಹೆಚ್ಚಾಗಿ ಅವಲಂಬಿಸುವವರು. ನೋಡುವುದಷ್ಟರಿಂದಲೇ ಅವರಿಗೆ ಪೂರ್ಣಪ್ರಯೋಜನಾಗದು. ನೋಡುವಾಗ ಅದರ ವಿಷಯವನ್ನು ಕೇಳಿಸಿಕೊಂಡರೆ ಅಂತಹವರ ಕಲಿಕೆ ಪರಿಣಾಮಕಾರಿಯಾಗುವುದು ಸಾಧ್ಯ. ಪ್ರಯೋಗಾಲಯ ಕೆಲಸದಂತಹವು ಇವರಿಗೆ ತುಂಬ  ಇಷ್ಟ. ನೋಡಿದ್ದನ್ನು ಕೇಳುವಂತೆ ತಮಗೆ ತಾವೇ ಗಟ್ಟಿಯಾಗಿ ಹೇಳಿಕೊಳ್ಳುವುದು ಇವರಿಗೆ ಪ್ರಯೋಜನವಾಗಬಹುದು. ಶರೀರ ಪ್ರಧಾನ ಕಲಿಕೆಯವರೆಂದರೆ ಸ್ಪರ್ಶ, ಅಂಗಾಂಗ ಚಲನೆ ಇಂತಹವುಗಳಿಂದ  ಉತ್ತಮವಾಗಿ ಕಲಿಯಬಲ್ಲವರು.ಇವರಿಗೆ ಮುಟ್ಟಿ ತಿಳಿಯುವಂತಹ ಮಾಡಿ ಕಲಿಯುವಂತಹಹ ಅವಕಾಶಗಳು ಬೇಕು. ಅಲ್ಲದೆ ಒಂದೇ ಕಡೆಯಲ್ಲಿ ಕುಳಿತು ಕಲಿಯುವುದಕ್ಕಿಂತ ಓಡಾಡಿಕೊಂಡು ಓದಿ,  ನೋಡಿ ಕಲಿಯುವುದು ಇಷ್ಟವಾಗಬಹುದು. ಮೂರು ತರಹದ ಕಲಿಕೆಯವರ ಗುಣಲಕ್ಷಣಗಳೇನು ಅವರಿಗೆ ಯೋಗ್ಯವಾದ ಚಟುವಟಿಕೆಗಳು ಯಾವ ತರಹದವು ಇಂತಹವು ಮೊದಲ ಅಧ್ಯಾಯದ ಹೂರಣ. ಮುಂದಿನ ಅಧ್ಯಾಗಳಲ್ಲಿ ಮೂರು ಕಲಿಕೆಗಾರರು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ.
      ಎರಡನೆಯ ಅಧ್ಯಾಯಕ್ಕೆ ಅಧ್ಯಯನ ಕೌಶಲಗಳು ಎಂದು ಹೆಸರು. ವ್ಯಕ್ತಿ ಯಾವ ಬಗೆಯ ಕಲಿಕೆಯವನು ಎಂಬುದನ್ನು ಗುರುತಿಸಲು ಪ್ರಶ್ನಾವಳಿ ಭಾಗದಲ್ಲಿದೆ.  ಅಲ್ಲದೆ, ಓದುವ ರೀತಿ, ಗಮನ ಕೇಂದ್ರೀಕರಣ, ಟಿಪ್ಪಣಿ ಬರೆದುಕೊಳ್ಳುವುದು, ಪ್ರಶ್ನೆ ಕೇಳಿಕೊಂಡು ಕಲಿಕೆಯನ್ನು ದೃಢವಾಗಿಸಿಕೊಳ್ಳುವುದು,ಅಧ್ಯಯನಕ್ಕಾಗಿ ಗುಂಪುಗಳನ್ನು ಮಾಡಿಕೊಂಡು ಓದುವುದು ಇತ್ಯಾದಿಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.
          “ನೆನಪಿಟ್ಟುಕೊಳ್ಳುವ ತಂತ್ರಗಳು”, “ಗುರಿನಿರ್ಧಾರ”, “ನಿರ್ವಹಣೆ”, “ಪರೀಕ್ಷೆಗಳನ್ನು ತೆಗೆದುಕೊಳ್ಳುವುದು”, “ಒತ್ತಡ ನಿರ್ವಹಣೆ”, “ಪೋಷಣಾಂಶಯುಕ್ತ ಆಹಾರ”, “ಪೋಷಕರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಒತ್ತಡರಹಿತರಾಗಬಹುದು”  ಮತ್ತು “ಉನ್ನತ ಶಿಕ್ಷಣ ವೃಕ್ಷ” – ಇವು ಮೂರರಿಂದ ಹತ್ತರವರೆಗಿನ ಅಧ್ಯಾಯಗಳ ಶೀರ್ಷಿಕೆಗಳು. ಪೋಷಣಾಂಶಯುಕ್ತ ಆಹಾರ ವ್ಯಕ್ತಿಯನ್ನು ದೈಹಿಕವಾಗಿ ಸಕ್ಷಮನನ್ನಾಹಿಸಿಕೊಳ್ಳುವುದಕ್ಕೆ ಸೂಕ್ತವಾದ ಆಹಾರಾಭ್ಯಾಸಗಳನ್ನು ತಿಳಿಸುತ್ತದೆ. ಉನ್ನತ ಶಿಕ್ಷಣ ವೃಕ್ಷ ಉನ್ನತ ಶಿಕ್ಷಣದ ಬೇರೆಬೇರೆ ಹಂತಗಳನ್ನು ತೋರಿಸುವ ಮೂಲಕ ವ್ಯಕ್ತಿಗೆ ವೃತ್ತಿ ಮಾರ್ಗದರ್ಶಕವಾಗಿದೆ. ಇವೆರಡನ್ನು ಬಿಟ್ಟರೆ ಉಳಿದುವೆಲ್ಲ ಅಧ್ಯಯನವನ್ನು ಪರಿಣಾಮಕಾರಿಯಾಗಿಸುವಂತಹ ಸಲಹೆಗಳನ್ನೇ ಒಳಗೊಂಡಿವೆ.
        ಈಚಿನ ದಿನಗಳಲ್ಲಿ ಬಂದಿರುವ ಶಿಕ್ಷಣ ಶಾಸ್ತ್ರ ಪುಸ್ತಕಗಳಲ್ಲಿ ಇದೊಂದು ವಿಶಿಷ್ಟ ಕೃತಿ. ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ತಮ್ಮತಮ್ಮ ರೀತಿಯಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ. ಮುನ್ನುಡಿಯಲ್ಲಿ ಶ್ರೀ ಗುರುರಾಜ ಕರ್ಜಗಿಯವರು ಹೇಳುವಂತೆ “ ಈ ಪುಸ್ತಕದಲ್ಲಿ ಹೇಳಿರುವ ಅಂಶಗಳ ಪ್ರಯೋಜನವು ಶಾಲೆಯಲ್ಲಿ ಉತ್ತಮ ನಿರ್ವಹಣೆ ತೋರಬೇಕೆಂಬ ನಿಮ್ಮ ಇಚ್ಛೆಯನ್ನು ಅವಲಂಬಿಸಿದೆ.ಸ್ವಲ್ಪ ತ್ಯಾಗ ಮಾಡಲು, ಹೆಚ್ಚು ಪ್ರಯತ್ನಮಾಡಲು ನಿಮಗೆ ಇಷ್ಟವೇ ಇಲ್ಲದಿದ್ದರೆ ಎಷ್ಟೇ ಸಲಹೆಗಳನ್ನು ಕೊಟ್ಟರೂ, ಏನೇ ದೃಷ್ಟಿಕೋನ ತೋರಿದರೂ, ರೂಪುರೇಷೆ ರಚಿಸಿಕೊಟ್ಟರೂ ಪ್ರಯೋಜನವಾಗದು’. ಪ್ರಯತ್ನಶೀಲರಾದ ಗಂಭೀರ ವಿದ್ಯಾರ್ಥಿಗಳಿಗೆ ಮತ್ತು ಅಂತಹ ಅಧ್ಯಾಪಕರಿಗೆ ಈ ಪುಸ್ತಕ ಒಂದು ಅಮೂಲ್ಯ ಸಂಪನ್ಮೂಲವಾಗಿದೆ. ಅಂತಹವರಿಗೆ ಹೊಸದೊಂದು ರೀತಿಯಲ್ಲಿ ಅಧ್ಯಯನ ಪದ್ಧತಿಗಳನ್ನು ನೋಡಲು ಈ ಪುಸ್ತಕ ಸಹಾಯ ಮಾಡುತ್ತದೆ.




Monday 25 May 2015

ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡಿಗರ ಕೈಯಲ್ಲೊಂದು ವಿಶಿಷ್ಟ ಪದಾರ್ಥ ಕೋಶ

Today
        ದ್ರಾವಿಡಭಾಷಾ ಜ್ಞಾತಿಪದಕೋಶ  -  ಕನ್ನಡಿಗರ ಕೈಯಲ್ಲೊಂದು ವಿಶಿಷ್ಟ ಪದಾರ್ಥ ಕೋಶ

ಯಾವುದೇ ಭಾಷೆಯಲ್ಲಿ ಒಂದು ಪದಕ್ಕೆ ಒಂದೇ ಅರ್ಥವಲ್ಲ. ಪ್ರಸಂಗವಶಾತ್ ಹಲವು ಅರ್ಥಗಳು. ಅದೇ ಪದ ಸೋದರ ಭಾಷೆಯಲ್ಲೂ ಇದ್ದರೆ ಅಲ್ಲಿ ಅದರ ಅರ್ಥ ಬೇರೆಯೇ ಆಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಯಾವುದೇ ಪದವನ್ನು ನೋಡಬಹುದು. “ಕುಡಿ” ಎಂಬ ಕನ್ನಡದ್ದೇ ಪದಕ್ಕೆ  ನಿಮಗೆ ಒಂದು ಅರ್ಥ ಗೊತ್ತಿರಬಹುದು. ಅದಕ್ಕಿರುವ ಬೇರೆಬೇರೆ ಅರ್ಥಗಳು ನಿಮಗೆ ಗೊತ್ತೆ? ಹಾಗೆ ಗೊತ್ತಿದ್ದರೂ ತಮಿಳಿನಲ್ಲಿ, ಮಲಯಾಳಂನಲ್ಲಿ, ತೆಲುಗಿನಲ್ಲಿ, ಕೊಡವರ ಭಾಷೆಯಲ್ಲಿ, ತುಳುವಿನಲ್ಲಿ ಇತ್ಯಾದಿ ದ್ರಾವಿಡ ನುಡಿಗಳಲ್ಲಿ ಏನೇನು ಅರ್ಥಗಳಿವೆ ಎಂಬುದನ್ನು ಬಲ್ಲಿರಾ? ಆ ಪದದಿಂದ ಬರುವ ಹಲವು ಪದಗಳನ್ನು ಪತ್ತೆಹಚ್ಚಬಲ್ಲಿರಾ?
“ಕುಡಿ” ಎಂಬುದಕ್ಕೆ ಪಾನಮಾಡು, ತುದಿ, ಚಿಗುರು,ವಂಶದ ಮಗು ಇತ್ಯಾದಿ ಅರ್ಥಗಳು ಕನ್ನಡದಲ್ಲಿರಬಹುದು.ತಮಿಳು ಮಲಯಾಳಂಗಳಲ್ಲಿ “ಕುಡಿ” ಎಂದರೆ ಪಾನ ಮಾಡು ಎಂದು ಮಾತ್ರ ಅರ್ಥ. ಮಲಯಾಳಂ, ತುಳು, ತೆಲುಗುಗಳಲ್ಲಿ ತುದಿ ಎಂಬರ್ಥ ಬರಬೇಕಾದರೆ “ಕೊಡಿ” ಎನ್ನಬೇಕು; ತಮಿಳಿನಲ್ಲಿ “ಕೋಡು” ಎನ್ನಬೇಕು. “ಕುಡ್ಚು”, “ಕುಡುಚು” ಎಂದರೆ ತುಳು ಮತ್ತು ತೆಲುಗುಗಳಲ್ಲಿ ಪಾನಮಾಡು ಎಂದರ್ಥ .ಕನ್ನಡದಲ್ಲಿ “ಕುಡ್ತೆ” ಎಂಬ ಹಾಲಿನ ಅಳತೆಯ ಪ್ರಮಾಣ “ಒಂದುಸಲ ಕುಡಿಯುವಷ್ಟು” ಎಂಬರ್ಥದಲ್ಲಿ ಇದೇ ಪದದಿಂದ ಬಂದದ್ದು  -   ಇಂತಹ  ಎಲ್ಲ ವಿವರಗಳು ಒಂದೇ ಕಡೆಗೆ ಸಿಕ್ಕಿದರೆ ಎಷ್ಟು ಚೆನ್ನ ಎಂದೆನಿಸುವುದಿಲ್ಲವೆ? ನಿಮಗಾಗಿ ಬಂದಿದೆ ಹೊಸದೊಂದು ಉದ್ಗ್ರಂಥ. ಇದರ ಹೆಸರೇ ದ್ರಾವಿಡ ಭಾಷಾ ಜ್ಞಾತಿಪದಕೋಶ. ಇದೊಂದು ವಿಶಿಷ್ಟ ತರಹದ ಕನ್ನಡ-ಕನ್ನಡ ನಿಘಂಟು.
ಈ ಗ್ರಂಥವು ಹಂಪನಾ ಅವರ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಸದಿಂದ ಹೊರತಂದ ಕೃತಿ. ಗ್ರಂಥದಲ್ಲಿ xx + 685 ಪುಟಗಳಿವೆ. ಇದರ ಸಂಪಾದಕವರ್ಗ ಇಲ್ಲಿ ಒಟ್ಟು 3808 ಕನ್ನಡ ಪದಗಳನ್ನು ಮುಖ್ಯಪದಗಳನ್ನಾಗಿಟ್ಟುಕೊಂಡು, ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಅರ್ಥಗಳನ್ನು ನೀಡಿದ್ದಾರೆ. ಎಲ್ಲ ಪ್ರಧಾನ ದ್ರಾವಿಡಭಾಷೆಗಳಲ್ಲಿ ಅದಕ್ಕಿರುವ ಸಮಾನ ಪದಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದ ಕನ್ನಡಪದವೊಂದಕ್ಕೆ ತಮಿಳು, ಮಲಯಾಳಂ, ಕೊಡವ, ತುಳು ಮತ್ತು ತೆಲುಗು ಭಾಷೆಗಳಲ್ಲಿರುವ ಸಂವಾದಿ ಪದಗಳನ್ನು ತಿಳಿಯಲು ಅನುಕೂಲವಾಗಿದೆ. ಹವ್ಯಕ ಕನ್ನಡ, ಗೌಡ ಕನ್ನಡ, ಜೇನುಕುರುಬ ಕನ್ನಡ ಇತ್ಯಾದಿ ಉಪಭಾಷೆಗಳಲ್ಲಿ ಯಾವರೂಪ ಮತ್ತು ಅರ್ಥದಲ್ಲಿ ಈ ಪದ ಬರುತ್ತದೆ ಎಂಬುದನ್ನೂ ವಿವರಿಸಿದ್ದಾರೆ.
ಹಾಗೆ ನೋಡಿದರೆ ಇದು ಕನ್ನಡದ ಮೊದಲ ಜ್ಞಾತಿಪದಕೋಶವಲ್ಲ. ಟಿ ಬರೋ ಮತ್ತು ಎಮ್ ಬಿ ಎಮಿನೋ ಎಂಬ ಪಾಶ್ಚಾತ್ಯ ವಿದ್ವಾಂಸರು 1961 ರಲ್ಲಿ ಇಂತಹ ಒಂದು ನಿಘಂಟನ್ನು ರಚಿಸಿದರು. 1984ರಲ್ಲಿ ಅದರ ಪರಿಷ್ಕೃತ ಆವೃತ್ತಿ ಪ್ರಕಟವಾಯಿತು. 1998ರಲ್ಲಿ ಪುನರ್ಮುದ್ರಣವಾಗಿದೆ. ಈಗ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ದ್ರಾವಿಡಭಾಷಾ ಜ್ಞಾತಿಪದಕೋಶ ನಿಘಂಟು ಕನ್ನಡದ ಸಂದರ್ಭಕ್ಕೆ ಸರಿಹೊಂದುವಂತೆ ರಚಿತವಾದುದು. ಹಲವು ರೀತಿಗಳಲ್ಲಿ ಇದು ಬರೋ-ಎಮಿನೋ ನಿಘಂಟನ್ನು ಮುಂದುವರೆಸಿದೆ. ಅಲ್ಲಿ ಕನ್ನಡದ ಉಪಭಾಷೆಗಳಲ್ಲಿ ಹವ್ಯಕ ಮಾತ್ರ ಹೆಚ್ಚಾಗಿ ಉಲ್ಲೇಖಗೊಂಡಿದ್ದರೆ ಈಗಿನ ದ್ರಾವಿಡಭಾಷಾ ಜ್ಞಾತಿಪದಕೋಶದಲ್ಲಿ ಹಾಲಕ್ಕಿ ಕನ್ನಡ, ಜೇನುಕುರುಬ ಕನ್ನಡ, ನಂಜನಗೂಡ ಕನ್ನಡ, ಬಾರ್ಕೂರು ಕನ್ನಡ ಇತ್ಯಾದಿಯಾಗಿ ಒಂಬತ್ತು ಉಪಭಾಷೆಗಳ ಪದಗಳನ್ನು ಉಲ್ಲೇಖಿಸಿದ್ದಾರೆ.  ಕನ್ನಡಿಗರಿಗಾಗಿ ರಚಿಸಿರುವುದರಿಂದ ಇದರಲ್ಲಿ ಎಲ್ಲವೂ ಕನ್ನಡ ಲಿಪಿಗಳಲ್ಲಿ ಮಾತ್ರವಿದೆ. ಕನ್ನಡ ಪದಗಳನ್ನು ಮಾತ್ರ ಪ್ರಧಾನ ಪದಗಳನ್ನಾಗಿ ಉಲ್ಲೇಖಿಸಲಾಗಿದೆ. ಬರೋ-ಎಮಿನೋ ನಿಘಂಟಿನಂತೆ ಎಲ್ಲ ಪದಗಳನ್ನೂ ಲಿಪ್ಯಂತರಿತ(ಇಂಗ್ಲಿಷ್ ಅಕ್ಷರಗಳನ್ನು ಬಳಸಿ) ವಿಧಾನದಲ್ಲಿ ಮಾತ್ರ ಬರೆದಿಲ್ಲ. ಅಲ್ಲಿ ಪ್ರಾಚೀನತೆಯನ್ನಾಧರಿಸಿ ಇತರ ದ್ರಾವಿಡ ಭಾಷಾ ಪದಗಳೂ ಉಲ್ಲೇಖಪದಗಳಾಗಿವೆ; ಹಾಗೆ ನೋಡಿದರೆ ತಮಿಳು ಪದಗಳೇ ಉಲ್ಲೇಖ ಪದಗಳಾಗಿರುವುದು ಹೆಚ್ಚು. ಉದಾ.”ಕುದಿ” ಎಂಬ ಕನ್ನಡ ಪದವು ಬರೋ-ಎಮಿನೋ ನಿಘಂಟಿನಲ್ಲಿ ಸ್ವತಂತ್ರ ನಮೂದಲ್ಲ. ತಮಿಳಿನ “ಕೊತ” ಪದದಡಿ ಬಂದಿರುವ ಪದ. ಇವೆಲ್ಲವೂ ಇಲ್ಲಿ ಸುಧಾರಣೆ ಕಂಡಿವೆ. ಕನ್ನಡ ಪದಗಳೇ ಉಲ್ಲೇಖ ಪದಗಳು. ಕನ್ನಡ ಅಕ್ಷರಗಳಲ್ಲೇ ಮುದ್ರಣ.  ಮೇಲ್ನೋಟಕ್ಕೆ  ಈ ಹೊಸ ನಿಘಂಟಿನಲ್ಲಿ 3808ಪದಗಳು ಮಾತ್ರವಿರುವಂತೆ ಕಾಣುತ್ತದೆ. ಆದರೆ ನಿಘಂಟಿನಲ್ಲಿ ಬಂದಿರುವ ಎಲ್ಲ ಪದಗಳ ಅಕಾರಾದಿ ಸೂಚಿಯೊಂದನ್ನು ಕೊನೆಯಲ್ಲಿ ರಚಿಸಿಕೊಟ್ಟಿದ್ದು ಅದರಲ್ಲಿ ಎಣಿಸಿದಾಗ ನಿಘಂಟಿನಲ್ಲಿ ಪದಗಳ ಸಂಖ್ಯೆ 11632 ಆಗಿರುವುದು ಗೊತ್ತಾಗುತ್ತದೆ. ಈ ಸೂಚಿಯನ್ನು ಬಳಸಿಕೊಂಡು ಯಾವುದೇ ಪದವನ್ನು ಮುಖ್ಯನಿಘಂಟಿನಲ್ಲಿ ಹುಡುಕಬಹುದು. ಅರ್ಥ ಮತ್ತು ವಿವರಗಳನ್ನು ತಿಳಿಯಬಹುದು. ಹೀಗೆ ಇದು ಬರೋ-ಎಮಿನೋ ನಿಘಂಟಿನ ಮುಂದುವರಿಕೆಯಾಗಿದ್ದು ಕನ್ನಡ ಲಿಪಿಗಳ ಬಳಕೆ, ಕನ್ನಡದ ಉಲ್ಲೇಖ ಪದಗಳಿರುವುದು, ಪ್ರಾಚೀನ ನಿಘಂಟುಗಳಿಂದ ಪ್ರಮಾಣೀಕೃತ ನಮೂದುಗಳನ್ನು ಒಳಗೊಂಡಿರುವುದು, ಕನ್ನಡದ ಒಂಬತ್ತು ಉಪಭಾಷೆಗಳಿಂದ ಉಲ್ಲೇಖಗಳನ್ನು ಆಯ್ದಿರುವುದು ಇಂತಹವು  ಹೊಸ ನಿಘಂಟಿನ ವೈಶಿಷ್ಟ್ಯಗಳಾಗಿವೆ. ಆದಾಗ್ಯೂ ಉಲ್ಲೇಖಿತ ದ್ರಾವಿಡ ಭಾಷೆಗಳ ಸಂಖ್ಯೆಯನ್ನು ಗಮನಿಸಿದರೆ ಇದು ಸೀಮಿತವಾಗಿದೆ. ಮಾತಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ದ್ರಾವಿಡನುಡಿಗಳೂ ಸೇರಿದಂತೆ ಒಟ್ಟು ಹತ್ತೊಂಬತ್ತು ಭಾಷೆಗಳನ್ನು ಹಿಂದಿನ ನಿಘಂಟಿನಲ್ಲಿ  ಉಲ್ಲೇಖಿಸಿದ್ದರೆ ಈ ನಿಘಂಟಿನಲ್ಲಿ “ದಕ್ಷಿಣದ ಆರು ಪ್ರಮುಖ ಭಾಷೆಗಳಿಗೆ ಸಂಬಂಧಿಸಿದಂತೆ ಬರೋ ಅವರ ಜ್ಞಾತಿಪದಕೋಶ(1984)ದಲ್ಲಿಯ ಉಲ್ಲೇಖ ಪದಗಳನ್ನು ಪರಿಷ್ಕರಿಸುವುದು ಹಾಗೂ ಕನ್ನಡವನ್ನಾಧರಿಸಿದ ಹೆಚ್ಚಿನ ಉಲ್ಲೇಖ ಪದಗಳನ್ನು ಸೇರ್ಪಡೆಗೊಳಿಸುವುದು” ಇಲ್ಲಿರುವ ಆಶಯ.
ಈ ನಿಘಂಟಿನಲ್ಲಿ ಪ್ರತಿಪದಕ್ಕೆ ಕನ್ನಡದಲ್ಲಿ ವ್ಯಾಖ್ಯೆ ಇದೆ. ಇತರ ದ್ರಾವಿಡ ಭಾಷೆಗಳನ್ನು ಉಲ್ಲೇಖಿಸಿ ಅವುಗಳಲ್ಲಿರುವ ಅರ್ಥವನ್ನು ನೀಡಿದೆ. ಉದಾ. “ಕುದಿ” ಎಂಬ ಉಲ್ಲೇಖ ಪದದಡಿ ತುಳುವಿನಲ್ಲಿ ಇದು “ಕೊದಿ” ಎಂದಿರುವುದನ್ನು ಉಲ್ಲೇಖಿಸಿ “ಕೊದ್ದೇಲು” ಎಂಬ ಪದವನ್ನೂ ನಮೂದಿಸಿದೆ. ಇದರಿಂದ ‘ಕುದ್ದಿದ್ದು ಕೊದ್ದೇಲು’ ಎಂಬಂತೆ ನಿಷ್ಪತ್ತಿ ಹೊಳೆಯುತ್ತದೆ. ಈ ಕೊದ್ದೇಲು ಎಂಬ ಪದವನ್ನು ಹೀಗೆ ಸೇರಿಸಿರುವುದು ಹಳೆಯ ನಿಘಂಟು ಹೇಗೆ ಪರಿಷ್ಕರಣೆಗೊಂಡಿದೆ ಎಂಬುದಕ್ಕೆ ಒಂದು ನಿದರ್ಶನ. ಕುರ್ಕ, ತರಗು, ನೆತ್ತಿ, ಬರಣಿ – ಹೀಗೆ ಹಿಂದಿನ ನಿಘಂಟಿನಲ್ಲಿಲ್ಲದ ಹಲವು ಪದಗಳು ಇಲ್ಲಿ ಉಲ್ಲೇಖಗೊಂಡಿವೆ. ದ್ರಾವಿಡ ಭಾಷೆಗಳಲ್ಲಿ ಜ್ಞಾತಿಗಳಿರುವಂತಹ ಸಂಸ್ಕೃತ,  ಹಿಂದಿ, ಮರಾಠಿ ಪದಗಳನ್ನು ನೀಡಿದ್ದಾರೆ. ಉದಾ. “ವಡೆ” ಎಂಬುದು ಸಂಸ್ಕೃತ ಮೂಲದ್ದು. “ಡೊಕ್ಕರ” ಎಂಬ ಪದ ಸಂಸ್ಕೃತದ ‘ದೋಃಕರಮ್’ ಮತ್ತು ಹಿಂದಿಯ ‘ಠೋಕರ’ ಎಂಬ ಪದಗಳೊಡನೆ ಸಂಬಂಧ ಹೊಂದಿರಬಹುದೆಂದು  ಸೂಚಿಸಿದೆ. “ಡಾಳ”  ಎಂಬುದು ಮರಾಠಿಯ ‘ಢಾಳ’ ಎಂಬ ಮೂಲದ್ದೆಂದು ತಿಳಿಸಿದೆ. ಇಂತಹ ಇನ್ನೂ ಎಷ್ಟೋ ವೈಶಿಷ್ಟ್ಯಗಳು ಈ ಹೊತ್ತಗೆಯಲ್ಲಿವೆ. ಪೂರ್ಣಾನಂದ ಪಡೆಯಲು ಕೃತಿಯ ಪುಟಗಳ ಮೇಲೆ ನೀವು ಕಣ್ಣಾಡಿಸಲೇ ಬೇಕು.
ಇದನ್ನೆಲ್ಲ ಆಗುಮಾಡಿದವರು ಕೆ ಪಿ ಭಟ್ಟ, ಎ ವಿ ನಾವಡ, ಪಿ ಕೇಕುಣ್ಣಾಯ, ಜಿ ಎಸ್ ಮೋಹನ, ಎಮ್ ಕುಂಟಾರ, ಸೆಲ್ವಕುಮಾರಿ ಮತ್ತು ಎಮ್ ಟಿ ರತಿ ಎಂಬ ಕನ್ನಡನಾಡಿನ ಜನಜನಿತ ವಿದ್ವಾಂಸರು. ಇವರು ಹಂಪನಾ ಅವರ ನೇತೃತ್ವದಲ್ಲಿ ಪಟ್ಟಿರುವ ಶ್ರಮದಿಂದ ಸಾಮಾನ್ಯ ಓದುಗನ ಕುತೂಹಲ ತಣಿಯುತ್ತದೆ. ಸಂಶೋಧಕರಿಗೆ ಉಪಯುಕ್ತ ಸಂಪನ್ಮೂಲ ದೊರೆಯುತ್ತಿದೆ. ಇವಕ್ಕೆಲ್ಲ ಪುಸ್ತಕ ಜನರ ಕೈಸೇರಬೇಕು. ಸಾಹಿತ್ಯ ಪರಿಷತ್ತಿನ ಶ್ರೀ ಜೆ ಎನ್ ಶ್ಯಾಮರಾಯರು ಈ ವಿದ್ವತ್ಕಾರ್ಯವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತವರು. ಇವರೆಲ್ಲರ ಪ್ರಯತ್ನಗಳಿಗೆ ಜಯವಾಗಲಿ! ಈ ಕೃತಿಯನ್ನು ಅಭ್ಯಾಸ ಮಾಡಲೆಂದಾದರೂ ಇತರ ಭಾಷಿಗರು ಕನ್ನಡವನ್ನು ಕಲಿಯುವಂತಾಗಲಿ!!

          ………………………………………………………………………………………………………………………………………………………………………

Sunday 24 May 2015

ರಾಘವೇಂದ್ರತೀರ್ಥರ ಕೃಷ್ಣಚಾರಿತ್ರ ಮಂಜರಿ

ರಾಘವೇಂದ್ರತೀರ್ಥರ ಕೃಷ್ಣಚಾರಿತ್ರ ಮಂಜರಿ
                                                                 
ರಾಘವೇಂದ್ರಸ್ವಾಮಿಗಳನ್ನು ಸಂಕಟ ಬಂದಾಗ ನೆನೆಯದವರಾರು? “ಇಂದು ಎನಗೆ ಗೋವಿಂದ”  ಎಂಬ ರಾಯರ ಹಾಡನ್ನು ಹಾಡದವರಾರು? ತಿಮ್ಮಣ್ಣ ಭಟ್ಟ ಗೋಪಿಕಾಂಬ ದಂಪತಿಯ ಮಗನಾಗಿ ಹುಟ್ಟಿದ ರಾಘವೇಂದ್ರಸ್ವಾಮಿಗಳ ಮೊದಲ ಹೆಸರು ವೆಂಕಣ್ಣ ಭಟ್ಟ ಅಥವ ವೆಂಕಟನಾಥ ಅಥವ ವೆಂಕಟರಮಣ. ಶ್ರೀ ಸುಧೀಂದ್ರ ತೀರ್ಥರಿಂದ ಸಂನ್ಯಾಸ ಸ್ವೀಕರಿಸಿದ ಮೇಲೆ ಇವರ ಹೆಸರು ಶ್ರೀ ರಾಘವೇಂದ್ರ ತೀರ್ಥರು. 1595 ರಿಂದ 1671ರವರೆಗೆ ಮಧ್ವಸಿದ್ಧಾಂತವನ್ನು ಕೃಷ್ಣಭಕ್ತಿಯನ್ನೂ ಪ್ರಸಾರ ಮಾಡಿ ಮಂತ್ರಾಲಯದಲ್ಲಿ ನೆಲೆನಿಂತ ಈ ಯತಿವರ್ಯ ತನ್ನ ಪವಾಡಗಳಿಂದಲೇ ಜನಜನಿತ. ಗುರುಗಳು, ರಾಯರಗುರುಗಳು, ರಾಘವೇಂದ್ರಗುರುಗಳು, ರಾಯರು ಇತ್ಯಾದಿಯಾಗಿ ಭಕ್ತರಿಂದ ಕರೆಸಿಕೊಂಡು ದೇವರಂತೆಯೇ ಪೂಜೆಗೊಳ್ಳುವ ಕೆಲವೇ ಯತಿಗಳಲ್ಲಿ ಇವರೊಬ್ಬರು. ಪವಾಡಗಳೇ ಈ ಮಹನೀಯರ ಮೌಲ್ಯ ನಿರ್ಧಾರಕಗಳಲ್ಲ. ವಿದ್ಯಯಾ ಅಮೃತಮಶ್ನುತೇ ಎಂಬಂತೆ ಇವರು ರಚಿಸಿದ ವಿದ್ವತ್ಕೃತಿಗಳಿಂದ ಇಂದಿಗೂ ನಮ್ಮ ನಡುವೆ ಇದ್ದಾರೆ ಮತ್ತು ಜ್ಙಾನದಾಹಿಗಳನ್ನು ಸ್ಫೂರ್ತಿಗೊಳಿಸುತ್ತಿದ್ದಾರೆ.
          “ಇಂದು ಎನಗೆ ಗೋವಿಂದ” ಎಂಬ ಹಾಡೊಂದನ್ನು ಬಿಟ್ಟು ಇವರು ರಚಿಸಿದ ಇತರ ಕೃತಿಗಳು ಸಂಸ್ಕೃತದಲ್ಲಿವೆ. ಕೃತಿಗಳ ಸಂಖ್ಯೆ ಸುಮಾರು ಐವತ್ತು. ರಾಘವೇಂದ್ರತೀರ್ಥರ ಎಲ್ಲ ಕೃತಿಗಳನ್ನು ಪ್ರತಿಪದಾರ್ಥ, ತಾತ್ಪರ್ಯ ಮತ್ತು ಅಲಂಕಾರವಿಶೇಷಗಳೊಡನೆ ಎರಡು ಬೃಹತ್ ಸಂಪುಟಗಳಲ್ಲಿ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದವರು ಪ್ರಕಟಿಸಿದ್ದಾರೆ. ಇವೆರಡೂ ರಾಘವೇಂದ್ರತೀರ್ಥರ ವಿದ್ವತ್ತನ್ನೂ ಕೃಷ್ಣಭಕ್ತಿ ಮತ್ತು ಮಧ್ವಸಿದ್ಧಾಂತವನ್ನು ಪ್ರಚುರಪಡಿಸುವ ಕಾಳಜಿಯನ್ನೂ ತೋರಿಸುತ್ತವೆ. ಪ್ರತಿಪದ್ಯದ ಕೊನೆಯಲ್ಲಿ ‘ಅಂತಹ ಕೃಷ್ಣನು ನಮ್ಮನ್ನು ರಕ್ಷಿಸಲಿ ಎಂಬರ್ಥದ ಪದಪುಂಜಗಳಿದ್ದು ಕೃಷ್ಣನನ್ನು ಸ್ತುತಿಸುತ್ತವೆ. ಈ ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಹಲವು ವಿದ್ವಾಂಸರ ಪರಶ್ರಮವಿದೆ.
ಇಲ್ಲಿರುವ ಕೃತಿಗಳಲ್ಲಿ  ಕೃಷ್ಣಚಾರಿತ್ರಮಂಜರಿ ಎಂಬುದೊಂದು. ಇದೊಂದು ಸಂಕ್ಷಿಪ್ತ ಸಣ್ಣ ಕೃತಿ. ಇದರಲ್ಲಿ ಕೇವಲ ಇಪ್ಪತ್ತೆಂಟು ಪದ್ಯಗಳಿವೆ. ಎಲ್ಲವೂ ಸ್ರಗ್ಧರಾ ವೃತ್ತಗಳು. ಹೆಸರೇ ಹೇಳುವಂತೆ ಕೃಷ್ಣನ ಕಥೆಗಳನ್ನು ಈ ಕಾವ್ಯದಲ್ಲಿ ಬಿತ್ತರಿಸಲಾಗಿದೆ. ಅವುಗಳನ್ನೆಲ್ಲ ವಿವರವಾಗಿ ರಸಸ್ಯಂದಿಯಾಗಿ ಹೇಳುವ ಉದ್ದೇಶ ಇಲ್ಲಿಲ್ಲ. ಪ್ರತಿಯೊಂದು ಸಾಲು ಕೃಷ್ಣನ ಒಂದು ಕಥೆಯ ಹೊಳಹನ್ನು ನೀಡುತ್ತದೆ. ಪ್ರತಿಯೊಂದು ಸಾಲೂ  ಕೃಷ್ಣನಕಥೆಗಳನ್ನು ಸ್ಮರಿಸಲು ಉಪಯುಕ್ತವಾಗಿವೆ. ಈ ಮೊದಲ  ಪದ್ಯವನ್ನು  ಉದಾಹರಣೆಗಾಗಿ ನೋಡಿ. ಅದನ್ನು ಕನ್ನಡದಲ್ಲಿ ಹೀಗೆ ಅನುವಾದಿಸಬಹುದು. (ಕನ್ನಡಕ್ಕೆ ಸಾಂಗತ್ಯದಲ್ಲಿ ರೂಪಾಂತರ ಈ ಲೇಖಕನದು):
                                      ಕೇಳಲು ವಿಷ್ಣುವು ಬ್ರಹ್ಮಾದಿ ದೇವರು
ಭೂಭಾರ ಇಳಿಸೆಂದು ಸಂಹರಿಸಿ
ಜನಿಸಿದೆ ದೇವಕಿನಂದರಿಗೆ ಮುದವಾಗಿ
ಶಿಶುಗುಲಿ ಪೂತನಿಯ ಕೊಂದೆ               

ದೇವರಿಗೆ ಹೊರಟಿರಲು ರಥಚಕ್ರದಲ್ಲವಿತು
 ಶಕಟನೆಂಬಸುರನ ತುಳಿದೆ
ಭಾರವ ತಾಳದೆ ಇಳೆಗಿಳಿಸೆ ತಾಯಿಯು
ಚಕ್ರಾವರ್ತನ ಹತ್ಯೆಗೈದೆ                     
                                                ಕಾಯೋ ನೀನೆಮ್ಮನ್ನು ಇಂತಿಪ್ಪ ಕೃಷ್ಣಯ್ಯ,
                                                ಅನುದಿನವು ಸ್ಮರಿಪೆವು ನಿನ್ನ
ಕೃತಿರಚನೆಗೆ ಅವತರಣಿಕೆ, ಕೃಷ್ಣನ ಜನನ – ಪೂತನಿಹರಣ, ಶಕಟಾಸುರನ ಸಂಹಾರ ಮತ್ತು ತೃಣಾವರ್ತನೆಂಬ ದೈತ್ಯನ ಹುಟ್ಟಡಗಿಸುವಿಕೆ – ಇವಿಷ್ಟೂ ಮೊದಲ ಪದ್ಯದಲ್ಲಿ ಅಡಕವಾಗಿ ಬಂದಿವೆ. (ಇಲ್ಲಿ ಎರಡು ಸಾಂಗತ್ಯಗಳಲ್ಲಿವೆ). ಭಾಗವತದಲ್ಲಿ ಹಲವು ಶ್ಲೋಕಗಳಷ್ಟು ವಿಸ್ತಾರವಾಗಿರುವ ಕಥಾ ಪ್ರಸಂಗಗಳಿವು. ಇಲ್ಲಿ ನಿರೂಪಿಸಿರುವ ಈ ರೀತಿಯು ಮೂಲ ಕಥೆಗಳು ಗೊತ್ತಿದ್ದಾಗ ಸ್ಮರಿಸಿಕೊಂಡು ಹಾಡಿಕೊಳ್ಳಲು ಉಪಯುಕ್ತವಾದವಾಗಿವೆ. ಆದ್ದರಿಂದಲೇ ಪ್ರತಿ ಪದ್ಯದ ಕೊನೆಯಲ್ಲಿ ಕೃಷ್ಣನಿಗೊಂದು ಪ್ರಾರ್ಥನೆ ಕಡ್ಡಾಯವಾಗಿ ಬಂದಿದೆ.
          ಈ ಕಾವ್ಯದಲ್ಲಿ ಬಂದಿರುವ ವಿಷಯಗಳನ್ನು ಕೃಷ್ಣನ ಬಾಲಲೀಲೆಗಳು, ಯುವಕ ಕೃಷ್ಣನ ಲೀಲೆಗಳು ಮತ್ತು ವಯಸ್ಕ ಕೃಷ್ಣನ ಲೀಲೆಗಳು ಎಂದು ಗುರುತಿಸಬಹುದು. ಈಗಾಗಲೇ ಉದಾಹರಿಸಿದ ಪದ್ಯವೂ ಬಾಲಲೀಲೆಗಳಿಗೊಂದು ನಿದರ್ಶನ. ಹಾಲು ಬೆಣ್ಣೆಗಳನ್ನು ಕದ್ದು ತಿನ್ನುವ, ಬಾಯಿಕಳೆದು ಮೂರು ಲೋಕಗಳನ್ನು ತಾಯಿಗೆ ತೋರುವ ಅವನ ಬಾಲಲೀಲೆಗಳು ಮೂಲದಲ್ಲಿ ಎರಡು ಸಾಲುಗಲಲ್ಲಿ (ಅನುವಾದದಲ್ಲಿ ಒಂದು ಸಾಂಗತ್ಯದಲ್ಲಿ ) ಹೀಗೆ ಮೂಡಿ ಬಂದಿವೆ:
                                                ಗೋಪಿಯರ ಗೃಹದಲ್ಲಿ ಗಡಿಗೆಯಲಿರಿಸಿದ
ಹಾಲ್ಬೆಣ್ಣೆ ಮೆದ್ದೆಯಾ ನಕ್ಕು
ಮಣ್ಣನು ತಿಂದಿಲ್ಲವೆನ್ನುತ ಬಾಯ್ಕಳೆದು
ತೋರಿದೆ ಮೂಜಗವನಲ್ಲಿ 
          ಯುವಕ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು. ಎಲ್ಲರೊಡನೆಯೂ ಏಕಕಾಲದಲ್ಲಿ ಸರಸದಿಂದಿರುವವ ಈ ಕೃಷ್ಣ.  ಈ ಲೀಲೆಯಿಂದಾಗಿ ಹೆಮ್ಮೆಗೊಳಗಾದ ಸತಿಯರ ಗರ್ವಭಂಗ ಮಾಡಿದ ಮತ್ತೆ ಎಲ್ಲರನ್ನು ಸಂತೋಷದಲ್ಲಿರಿಸಿದ ಪರಿಯನ್ನು ಸ್ವಾಮಿಗಳು ತಿಳಿಸಿರುವ ಪರಿಯನ್ನು ನೋಡಿ:
                                      ಗರ್ವಿತರಾಗಲು  ಲಲನೆಯರು ಸಂಗದಿ
ಮರೆಯಾಗಿ ರಮಿಸಿದೆಯೊಬ್ಬಳಲ್ಲಿ
ಕ್ರೀಡಿಸೆ ಎತ್ತಿಕೋ ಭುಜದಲ್ಲಿ ಎನ್ನಲು
ಆಡಿಸಿ ನೆಮ್ಮದಿ ನೀಡಿದೆ                      
                                      ಮತ್ತಲ್ಲಿಂದ ನೀ ಮಾಯವಾಗಲು ಅವರು
ಬಹುವಿಧ ನುತಿಸಲು ಖಿನ್ನರಾಗಿ
ಮತ್ತೊಮ್ಮೆ ಪ್ರಕಟನಾಗೆಲ್ಲರ ಸುಖಿಸುತ
ಗೋಪಿಯರ ಪ್ರೀತಿಯ ಮಾಡಿದೆ             
                                                                   ಕಾಯೋ ನೀನೆಮ್ಮನ್ನು ಇಂತಿಪ್ಪ ಕೃಷ್ಣಯ್ಯ
                                                                   ಅನುದಿನವು ಸ್ಮರಿಪೆವು ನಿನ್ನ
ವಯಸ್ಕ ಕೃಷ್ಣ ಮಾಗಿದ ಮನದವನು. ಪಾಂಡವ ಪಕ್ಷಪಾತಿಯಾಗಿದ್ದರೂ ಧೃತರಾಷ್ಟ್ರನ ಬಗ್ಗೆ ಸಾನುಕಂಪದಿಂದ ವರ್ತಿಸುವವನು. ಆದ್ದರಿಂದಲೇ ಪಾಂಡವರ ದೂತನಾಗಿ ಕೌರವನ ಆಸ್ಥಾನಕ್ಕೆ ಸಂಧಿಗಾಗಿ ಹೋಗುತ್ತಾನೆ. ಅಲ್ಲಿಯ ಆಗುಹೋಗುಗಳನ್ನೂ ತನ್ನ ವಿಶ್ವರೂಪವನ್ನೂ ಕಾಣುವಂತಹ ದಿವ್ಯ ದೃಷ್ಟಿಯನ್ನು ಧೃತರಾಷ್ಟ್ರನಿಗೆ ಕೊಟ್ಟು ಅವನನ್ನು ಕೃತಾರ್ಥನನ್ನಾಗಿ ಮಾಡುತ್ತಾನೆ. ಸಂಧಿ ಮುರಿದು ಬಿದ್ದಾಗ ತಾನೇ ಅರ್ಜುನನ ಸಾರಥ್ಯ ವಹಿಸುತ್ತಾನೆ. ಇವುಗಳನ್ನು ಸೂಚಿಸುವ ಈ ಪದ್ಯವನ್ನು ನೋಡಿ:
                                       ಕೌರವನಾಸ್ಥಾನದೊಳು ದೂತನಾಗಿರಲು
ದಿವ್ಯದೃಷ್ಟಿಯ ನೀಡಿ ಅಯ್ಯಗೆ
ತೋರಿದೆ ಶೋಭಿತ ನಿಜ ರೂಪ ಸಾಸಿರ
ಅರ್ಜುನಗೆ ಬೋಧಿಸಿದೆ ಗೀತೆಯ
ಕೃತಿಯ ಕೊನೆಯು ಕೃಷ್ಣಾವತಾರದ ಕೊನೆಯಲ್ಲ; ಕೃಷ್ಣನ ಮರಣವಲ್ಲ. ಇಷ್ಟೆಲ್ಲ ಲೀಲೆಗಳನ್ನೂ ಸಾಧನೆಗಳನ್ನೂ ತೋರಿಸಿದ ಕೃಷ್ಣನಿಗೆ ಜಯಜಯಕಾರ. ಕೃಷ್ಣನೆಂದಿಗೂ ಜನಮನದಲ್ಲಿ ಜೀವಿತನೇ ತಾನೆ. ಅಲ್ಲದೆ ಗೀತೆಯ ಪ್ರಕಾರ ಕೃಷ್ಣನೂ ಸೇರಿದಂತೆ ನಾವೆಲ್ಲರೂ ಇರಲಿಲ್ಲವೆಂಬ ಇರುವುದಿಲ್ಲವೆಂಬ ಕಾಲವೇ ಇಲ್ಲವಲ್ಲ.
          ಹೀಗೆ ಕೃಷ್ಣನನ್ನು ತಲೆಮಾರುಗಳಿಗೆ ಜೀವಂತವಿಡುವ, ಕೃಷ್ಣನ ನೆನಪು ಸದಾ ಜನರ ನೆನಪಿನಲ್ಲಿರುವಂತೆ ಮಾಡುವ, ಕೃಷ್ಣನ ಕಥೆಗಳನ್ನು ದಿನಂಪ್ರತಿ ಮನನಮಾಡಿಕೊಳ್ಳಲು ಅನುಕೂಲವಾಗುವ ಕೃತಿ ಶ್ರೀ ಕೃಷ್ಣ ಕಥಾಮಂಜರಿ. ಇದೊಂದು ಸಣ್ಣ ಕೃತಿಯಾಗಿದ್ದರೂ ಜನ ಸಾಮಾನ್ಯರಿಗೆ  ಉಪಯುಕ್ತ ಕೃತಿ. ಇಂತಹ ಕೃತಿಗಳ ರಚನೆಯಿಂದಲೇ ರಾಘವೇಂದ್ರ ತೀರ್ಥರ ಹೆಸರು ಅಮರವಾಗಿದೆ.