Search This Blog

Monday 10 August 2020

ಮಾಧ್ವ ತತ್ವಗಳ ಒಂದು ನಿರೂಪಣೆ‌

 


                    ಮಾಧ್ವ ತತ್ವಗಳ ಒಂದು ನಿರೂಪಣೆ‌

                              ಶ್ರೀ ಸತ್ಯಧ್ಯಧ್ಯಾನರ ಸಿವಿಲ್‌ ಸೂಟ್‌ ಗ್ರಂಥದ ಒಂದು ಸಮೀಕ್ಷೆ

ಚಾರಿತ್ರಿಕವಾಗಿ ಭಾರತೀಯ ಚಿಂತನೆಯಲ್ಲಿ ವಾಸ್ತವವಾದವನ್ನು(realism) ಮುಂಚೂಣಿಗೆ ತಂದವರು ಶ್ರೀಮನ್ಮಧ್ವಾಚಾರ್ಯರು. ಇದಕ್ಕೆ ಮುಂಚೆ ಪ್ರಚಲಿತವಿದ್ದ ಭಾವವಾದ(idealism)ದಲ್ಲಿ ಅನೇಕ ಧನಾತ್ಮಕ ಅಂಶಗಳಿದ್ದವು ಮತ್ತು ಅದರದೇ ಆದ ಪ್ರಯೋಜನಗಳೂ ಇದ್ದವು. ಆದರೆ ಈ ಸಿದ್ದಾಂತವನ್ನು ಎಳೆದು ಹಿಂಜಿ ಅರ್ಥೈಸಿದಾಗ ಸಾಮಾನ್ಯ ಜನತೆ ಗೊಂದಲಕ್ಕೆ ಒಳಗಾಯಿತು ಮತ್ತು ಬದುಕು ಅಷ್ಟೊಂದು ಅರ್ಥಪೂರ್ಣವಲ್ಲವೇನೋ ಎನಿಸತೊಡಗಿತು. ಇಂತಹ ಸಂದರ್ಭದಲ್ಲಿ ಮಧ್ವಾಚಾರ್ಯರು ರಂಗಕ್ಕೆ ಬಂದರು ಮತ್ತು ಅವರ ತತ್ವವಾದದ ಸಿದ್ಧಾಂತವನ್ನು ವಾಸ್ತವವಾದದ ನೆಲೆಯಲ್ಲಿ ಕಟ್ಟಿ ಪ್ರಚುರಪಡಿಸಿದರು. ಇವರ ಪ್ರಯತ್ನದಮಹತ್ವವೆಂದರೆ ಹಿಂದಿನ ಭಾವವಾದವನ್ನು ಶ್ರೀ ಶಂಕರರು ವೇದಾಂತದ ಆಧಾರದಲ್ಲಿ ಕಟ್ಟಿದಂತೆ ಮಧ್ವರೂ ತಮ್ಮ ವಾದವನ್ನು ವೇದಾಂತ ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಆಧಾರದಲ್ಲಿ ಕಟ್ಟಿದರು. ಈ ಕಾರ್ಯವನ್ನು ಮಾಡುವಾಗ ಯಾವ ಮಂತ್ರಗಳಿಗೆ ಶ್ರೀ ಶಂಕರರು ಅದ್ವೈತಪರ ಅರ್ಥವನ್ನು ಹೇಳಿದ್ದರೋ ಅವೇ ಅವೇ ಮಂತ್ರಗಳನ್ನು ಬೇರೆ ರೀತಿಯಲ್ಲಿಅರ್ಥೈಸಿದರು. ಪ್ರಪಂಚವನ್ನು ಮತ್ತು ಬದುಕನ್ನು ಅರ್ಥಮಾಡಿಕೊಳ್ಳುವ ಹೊಸದೊಂದು ಚಿಂತನಾ ವಿಧಾನ ಬಳಕೆಗೆ ಬಂತು.

ಶ್ರೀ ಮಧ್ವರ ಅನುಯಾಯಿಗಳು ವಿಶೇಷವಾಗಿ ಅವರ ಸಂನ್ಯಾಸೀ ಶಿಷ್ಯರು ಮಧ್ವಮತವನ್ನು ಪ್ರಚಾರಕ್ಕೆ ತರಲು ಯಾವ ಪ್ರಯತ್ನವನ್ನೂ ಮಢದೆ ಬಿಡಲಿಲ್ಲ. ಶ್ರೀ ವಾದಿರಾಜ ತೀರ್ಥ, ಶ್ರೀ ರಾಘವೇಂದ್ರ ತೀರ್ಥ, ಶ್ರೀ ಜಯತೀರ್ಥ, ಶ್ರೀ ವ್ಯಾಸ ತೀರ್ಥ, ಶ್ರೀ ಸತ್ಯಧ್ಯಾನ ತೀರ್ಥ ಮತ್ತು ಈಚೆಗೆ ಶ್ರೀವಿಶೇಶ್ವರ ತೀರ್ಥ ಇವರುಗಳು ಈ ಕ್ಷಢತ್ರದಲ್ಲಿ ಕೆಲಸ ಮಾಡಿದ ಪ್ರಮುಖರು. ಇವರು ತತ್ವವಾದವನ್ನು ಪ್ರಚಾರಕ್ಕೆ ತಂದರು ಮತ್ತು ಅದು ಎಲ್ಲರಿಗೂ ಒಪ್ಪಿಗೆಯಾಗುವಂತೆ ತಿಳಿಸಿ ಹೇಳಿದರು. 

ನಾನು ಇಲ್ಲಿ ಕೈಗೆತ್ತಿಕೊಂಡಿರುವುದು ಶ್ರೀ ಸತ್ಯಧ್ಯಾನ ತೀರ್ಥರ ಸಿವಿಲ್‌ ಸೂಟ್‌ ಎಂಬಪುಸ್ತಕವನ್ನು. ಈ ಪುಸ್ತಕದ ಸಮೀಕ್ಷೆ ಎಂದು ಈ ಪ್ರಬಂಧದ ಶೀರ್ಷಿಕೆಯಾದರೂ ಇದು ನಿಜವಾಗಿ ವೈಶಿಷ್ಟ್ಯಪೂರ್ಣವಾಗಿ ಮಧ್ವಮತವನ್ನು ಚಿತ್ರಿಸುವ ಪುಸ್ತಕವಾಗಿದ್ದು ಹಿಂದಿನವರು ಅದ್ವೈತ ಮತ ಪ್ರತಿಪಾದನೆಗೆ ಬಳಸಿಕೊಂಡಿದ್ದ ಅವೇ ವೇದ ಮಂತ್ರಗಳನ್ನು ತತ್ವವಾದ ಸ್ಥಾಪನೆಗಾಗಿ ಹೇಗೆ ಭಿನ್ನವಾಗಿ ಅರ್ಥೈಸಬಹುದು ಎಂಬುದನ್ನು  ಈ ಪ್ರಬಂಧದಲ್ಲಿ ಕಾಣಬಹುದು.

ಸಿವಿಲ್‌ ಸೂಟ್‌ ಎಂಬ ಇದು 728 ಪುಟಗಳ ಪುಸ್ತಕ. ಈ ಪುಸ್ತಕದಲ್ಲಿ ದ್ವೈತವಾದಿಯೊಬ್ಬರು ಧರ್ಮರಾಜನ ನ್ಯಾಯಾಲಯದಲ್ಲಿ ತಮ್ಮ ಮತವು ಜನರ ಆಧ್ಯಾತ್ಮಿಕ ಒಳಿತನ್ನು ಸಾಧಿಸುವಂತಹದಾಗಿದ್ದು ಹಿಂದಿನ ಅದ್ವೈತವಾದಿಗಳು ತಮ್ಮ ಮತಪ್ರಚಾರದಿಂದ ಜನರನ್ನು ಅಧರ್ಮದ ಮಾರ್ಗಕ್ಕೆಳೆಯುತ್ತಿದ್ದಾರೆ. ಹಾಗೆ ಮಾಡದಂತೆ ಅವರನ್ನು ನಿರ್ಬಂಧಿಸುವಂತೆ ಕೋರ್ಟನ್ನು ಕೇಳಿಕೊಂಡಿರುವುದಾಗಿದೆ.ಬೇರೆಬೇರೆ ಅಧ್ಯಾಯಗಳಲ್ಲಿ ತತ್ವವಾದದ ವಿಭಿನ್ನ ಮುಖಗಳು ಅನಾವರಣಗೊಳ್ಳುತ್ತವೆ.

ಇದರಲ್ಲಿ ವಿಭಾಗಗಳನ್ನು ಅಧ್ಯಾಯಗಳೆಂದು ಕರೆದಿಲ್ಲ. ಅವುಗಳನ್ನು ಇಸ್ಯುಗಳೆಂದು ಕರೆದಿದೆ. ಪುಸ್ತಕದಲ್ಲಿ ಒಟ್ಟು ಐದು ಇಸ್ಯೂಗಳಿವೆ. ಮೊದಲನೆಯ ಇಸ್ಯುದಲ್ಲಿ ಇಲ್ಲಿ ಚರ್ಚಿಸಲಾಗುತ್ತಿರುವ ವಿಷಯಗಳು ಬೇರೆ ಕಡೆ ಪ್ಚರ್ಚೆಯಾಗಿಲ್ಲದಿದ್ದು ಇಲ್ಲಿ ವಿಚಾರಣಾ ಯೋಗ್ಯವೆಂದು ಪ್ರತಿಪಾದಿಸಿದೆ. ನ್ಯಾಯಾಲಯಗಳ ಸಾಮಾನ್ಯ ಸಂಪ್ರದಾಯದಂತೆ ಇದು ಇದ್ದು ಈಗಾಗಲೇ ತೀರ್ಮಾನವಾಗದ ವಿಷಯವಾದ್ದರಿಂದ ಇದನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿದೆ ಎಂಬಂತೆ ವಿವರಿಸಿದೆ.  ಇದೊಂದು ಉಪೋದ್ಘಾತ ಅಥವ ಪೀಠಿಕಾ ಅಧ್ಯಾಯದಂತೆ. ಬರವಣಿಗೆಯ ಶೈಲಿಯು ನ್ಯಾಯಾಲಯ ನಡಾವಳಿಗಳ ದಾಖಲೀಕರಣದಂತೆ ಇದೆ. ಈ ಅಧ್ಯಾದಲ್ಲಿಯೂ ಮತ್ತು ಅನಂತರದ ಪ್ರತಿ ಅಧ್ಯಾಯದಲ್ಲಿಯೂ ಉಪಸಂಹಾರ ರೂಪವಾಗಿ ʼಡಿಕ್ರಿʼ ಇದೆ. ಅದಕ್ಕೆ ಮುಖ್ಯ ನ್ಯಾಧೀಶರ ಸಹಿ ಇರಬೇಕಷ್ಟೆ; ಆ ಸ್ಥಾನದಲ್ಲಿ ಧರ್ಮರಾಜ ಎಂಬ ಸಹಿ ಇದೆ. ಅಂದರೆ ವಾದಿ ಪ್ರತಿವಾದಿಗಳ ವಾದ ವಿವಾದಗಳನ್ನು ಕೇಳಿ ಪರಿಶೀಲಿಸಿ ಸ್ವತಹ ಯಮಧರ್ಮ ನಿರ್ಣಯ ಕೊಡುವನೆಂದರ್ಥ. ಪ್ರಥಮ ಇಸ್ಯು  ನ್ಯಾಯಾಲಯ ದಾವೆಯನ್ನು ವಿಚಾರಣೆಗೆ ಸ್ವೀಕಾರಿಸುತ್ತಿದೆ ಎಂಬುದನ್ನು ತಿಳಿಸುತ್ತದೆ. 

ಎರಡನೆಯ ಇಸ್ಯುದಲ್ಲಿ ವಿಚಾರಣೆ ಪ್ರಾರಂಭವಾಗುತ್ತದೆ. ಇಲ್ಲಿ ವಾದಿ ಪ್ರತಿವಾದಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿ ಕೊಳ್ಳುತ್ತದೆ. ವಾದಿಯು ದ್ವೈತಿಯಾಗಿದ್ದು ಅವನ ಹೆಸರು ಸತ್ಯ ಬೋಧಾಚಾರ್ಯ; ಕೆಲವು ಕಡೆ ವಿಷ್ಣುದಾಸಾಚಾರ್ಯ ಎಂದೂ ಇದೆ. ಪ್ರತಿವಾದಿಯು ಅದ್ವೈತಿ ಗಂಗಾಧರಶಾಸ್ತ್ರಿ ಮತ್ತು ಅವರ ವಕೀಲರು ಹರಿಹರ ಶರ್ಮ. ಪ್ರತಿವಾದಿಯು ಪ್ರತ್ಯಕ್ಷಾದಿ ಪ್ರಮಾಣಸಿದ್ಧವಾದ ಜಗತ್ತನ್ನು ಸುಳ್ಳಾದುದು ಎಂದು ಹೇಳಿ ಸಜ್ಜನರನ್ನು ಭ್ರಾಂತರನ್ನಾಗಿಸಿ ತಮಸ್ಸಿಗೆ ಕರೆದುಕೊಂಡು ಹೋಗುವುದನ್ನು ನಿಷೇಧಿಸಬೇಕೆಂಬುದು ದಾವೆ. ಇದೇ ಮುಖ್ಯವಾಗಿ ವಾದಿಯ ಹೇಳಿಕೆ. ಮಾಧವದಾಸ ಎಂಬುದು ವಾದಿಪರ ವಕೀಲರ ಹೆಸರು ಅವನು ವಾದಿಯ ವಿಚಾರಣೆಯನ್ನು ನಡೆಸುತ್ತಾ ಅವನ ಮಂಡನೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸುತ್ತಾನೆ ಮತ್ತು ಹೇಳಿಕೆಗಳನ್ನು ದಾಖಲಿಸುತ್ತಾನೆ. ಪ್ರತಿವಾದಿ ಪರ ವಕೀಲರಿಂದ ಕ್ರಾಸ್‌ ಎಕ್ಸಾಮಿನೇಶನ್‌, ವಾದಿ ವಕೀಲರಿಂದ ಪುನಃ ರೀ-ಎಕ್ಸಾಮಿನೇಶನ್‌ ಈ ವಿಧಿವಿಧಾನಗಳನ್ನು ಅನುಸರಿಸಿ ತತ್ವವಾದದ ಮಂಡನೆ ಪೂರ್ವ ಪಕ್ಷ ಖಂಡನೆ ಇವೆಲ್ಲವೂ ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ವೇದ ಮಂತ್ರಗಳ ದ್ವೈತ ಪರ ಅರ್ಥಗಳು, ದ್ವೈತಪರ ಶ್ರುತಿ ಭಾಗಗಳು ಮತ್ತು ಅವುಗಳ ಅರ್ಥ – ಇವು ಬಂದಿದ್ದು ದ್ವೈತ ಪರ ನಿಲುವೊಂದು ರೂಪು ತಳೆಯುತ್ತದೆ. 

ಇಸ್ಯು 2ರಲ್ಲಿ ಮುಖ್ಯವಾಗಿ ಲೋಕವು ಇದೆ; ಬ್ರಹ್ಮನೂ ಇದೆ - ಇವೆರಡಕ್ಕೂ ಬೆರೆಬೇರೆಯಾದ ಮತ್ತು ನಿಜವಾದದ ಅಸ್ತಿತ್ವ ಇದೆ ಎಂಬುದರ ಪ್ರತಿಪಾದನೆ ಇದೆ.  ಇಲ್ಲಿ ಪ್ರಥಮತಃ ಪ್ರಸ್ತಾವಿತವಾಗಿರುವ ಮಂತ್ರ ತದನನ್ಯತ್ವಂ ಆರಂಭಣ ಶಬ್ದಾದಿಭ್ಯಃ ಎಂಬುದು. ಇದೊಂದು ಬ್ರಹ್ಮಸೂತ್ರ ಪಠ್ಯದಿಂದ ಆಯ್ದ ಉಲ್ಲೇಖ. ಈ ಸೂತ್ರದ ಅದ್ವೈತಪರ ಅರ್ಥವನ್ನು ಮೊದಲು ಹೇಳಿ ಅನಂತರ ತತ್ವವಾದಪರ ನಿಲುವನ್ನು ಪ್ರತಿಪಾದಿಸುವುದು ಇಲ್ಲಿನ ತಂತ್ರ. ಈ ಸೂತ್ರವನ್ನು ಲೋಕ ಮತ್ತು ಬ್ರಹ್ಮರಲ್ಲಿ ಅಭೇದವನ್ನು ಹೇಳುವ ಸೂತ್ರವೆಂದು ಪ್ರತಿವಾದಿಪರ ಸಾಕ್ಷಿ ಹೇಳುತ್ತಾರೆ. ಆರಂಭಣ ಶಬ್ದಾದಿಭ್ಯಃ ಎಂಬುದು ತಾನೊಂದೇ ಅಲ್ಲ. ಅದು ಒಟ್ಟು ಆರು ಶ್ರುತಿ ವಾಕ್ಯಗಳನ್ನು ಹೊಳೆಸುತ್ತದೆ: ಆರಂಭಣ ಶಬ್ದದಿಂದ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಎಂಬ ಛಾಂದೋಗ್ಯ ಉಪನಿಷತ್ತಿನ ವಾಕ್ಯವು ವಿವಕ್ಷಿತವಾಗಿದೆ. ಮುಂದಿರುವ ಆದಿ ಶಬ್ದದಿಂದ ಅದೇ ಉಪನಿಷತ್ತಿನ 8ನೆಯ ಖಂಡದಲ್ಲಿರುವ (ಇಲ್ಲಿ ಹೇಳಿರುವಂತೆ) ಐದಾತ್ಮ್ಯಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ವಮಸಿ, ಬೃಹದಾರಣ್ಯಕ ಉಪನಿಷತ್ತಿನ ಇದಂ ಸರ್ವಂ ಯದಯಮಾತ್ಮಾ ಮುಂಡಕೋಪನಿಷತ್ತಿನ ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಂ, ಛಾಂದೋಗ್ಯೋಪನಿಷತ್ತಿನ ಆತ್ಮೈವೇದಂ ಸರ್ವಂ, ಬೃಹದಾರಣ್ಯಕದ ನೇಹನಾನಾಸ್ತಿ ಕಿಂಚನ, - ಈ ಶ್ರುತಿ ವಾಕ್ಯಗಳು ವಿವಕ್ಷಿತ ವಾಗಿದ್ದು ಇವೆಲ್ಲ ಜಗನ್ಮಿಥ್ಯತ್ವವನ್ನು ತನ್ಮೂಲಕ ಲೋಕ ಮತ್ತು ಬ್ರಹ್ಮರಲ್ಲಿ ಅಭೇದವನ್ನು ಸಾರುತ್ತಿರುವುದಾಗಿ ಪ್ರತಿವಾದಿಯ ವಾದವಿದೆ. ಈ ಒಂದೊಂದೂ ಹೇಗೆ ಲೋಕ ಮತ್ತು ಬ್ರಹ್ಮರಲ್ಲಿ ಭೇದವನ್ನೇ ಪ್ರತಿಪಾದಿಸುತ್ತವೆ ಜಗನ್ಮಿಥ್ಯತ್ವವನ್ನು ಸಾಧಿಸುವುದಿಲ್ಲ ಎಂಬುದನ್ನು ವಾದಿಪರ ಸಾಕ್ಷಿ ಮತ್ತು ವಾದಿ ಪರ ವಕೀಲರು ಪ್ರಸ್ತುತ ಪಡಿಸುತ್ತಾರೆ ಮತ್ತು ಅದನ್ನು ನ್ಯಾಯಾಲಯ ಒಪ್ಪಿಕೊಳ್ಳುತ್ತದೆ. ಇಲ್ಲಿರುವಂತೆ ಈ ಶ್ರುತಿಗಳ ದ್ವೈತಾದ್ವೈತ ಅರ್ಥಗಳನ್ನು ಹೀಗೆ ಅವಲೋಕಿಸಬಹುದು:

ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಅಂದರೆ ವಿಕಾರದ ಹೆಸರು ಶಬ್ದಪ್ರತಿಪಾದ್ಯ; ಮಣ್ಣಿನಿಂದ ತಯಾರಿಸಲಾದ ಘಟ, ಹೂಜಿ, ಮಡಕೆ ಇತ್ಯಾದಿಗಳೆಲ್ಲ ಬೇರೆಬೇರೆ ಹೆಸರುಗಳು ಅಷ್ಟೆ; ಮಣ್ಣು ಮಾತ್ರ ಸತ್ಯ. (ಮಣ್ಣು ಸತ್ಯವಾದಂತೆ ಬ್ರಹ್ಮ ಸತ್ಯ, ಉಳಿದವೆಲ್ಲವೂ ವಿಕಾರಗಳಾಗಿದ್ದು ಮಿಥ್ಯ). ಐತದಾತ್ಮ್ಯಂ ಇದಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ತ್ವಮಸಿ ಅಂದರೆ ಈ ಎಲ್ಲವೂ ಅವನೇ ಆತ್ಮವಾಗಿ ಉಳ್ಳದ್ದು; ಆ ಪರಮಾತ್ಮನು ಸತ್ಯ; ಅವನೇ ಎಲ್ಲದರಲ್ಲೂ ಇರುವವನು; ನೀನು ಆ ಬ್ರಹ್ಮ ರೂಪನು ಆಗಿರುವೆ. ಇದಂ ಸರ್ವಂ ಯದಯಮಾತ್ಮಾ ಬ್ರಹ್ಮ ಅಂದರೆ ಕ್ಷತ್ರಾದಿ ಜಗತ್ತು ಯತ್ ಯಾವನಲ್ಲಿದೆಯೋ ಅವನೇ ಆ ಪರಮಾತ್ಮನು. ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಮ್ ಅಂದರೆ ಈ ವಿಶ್ವವು ಬ್ರಹ್ಮನಲ್ಲಿ ಕಲ್ಪಿತವಾದುದು (ಬ್ರಹ್ಮನಿಂದ ಬೇರೆಯಲ್ಲ, ಆದ್ದರಿಂದ ಮಿಥ್ಯ), ಇದು ವರಿಷ್ಠ(ಅತ್ಯುತ್ತಮ)ವಾದುದು. ನೇಹನಾನಾಸ್ತಿ ಕಿಂಚನ ಎಂದರೆ ಈ ಬ್ರಹ್ಮನಲ್ಲಿ ನಾನಾಪ್ರಕಾರವಾದ ಯಾವ ಜಗತ್ತೂ ಇಲ್ಲ(ಆದ್ದರಿಂದ ಮಿಥ್ಯ). ಹೀಗೆ ಅದ್ವೈತ ಸಿದ್ಧಾಂತಕಾರರ ಪ್ರತಿಪಾದನೆ.

ಇವೇ ವೇದ ಮಂತ್ರಗಳಿಗೆ ದ್ವೈತಪರವಾದ ಅರ್ಥಗಳು ಹೀಗಿವೆ: ಅದ್ವೈತಪ್ರತಿಪಾಕರು ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ ಎಂಬ ಶ್ರುತಿಯಿಂದ ಈ ಜಗತ್ತು ಮಿಥ್ಯ ಎಂಬ ಅರ್ಥ ಬರುತ್ತದೆಂದು ವಾದಿಸುತ್ತಾರೆ; ಆದರೆ ಶ್ರುತಿಯಲ್ಲಿ ಮಿಥ್ಯ ಎಂಬ ಪದವಾಗಲಿ ಮಿಥ್ಯ ಎಂಬ ಅರ್ಥ ಬರುವ ಪದವಾಗಲೀ ಇಲ್ಲದಿದ್ದು ಬ್ರಹ್ಮ ಸತ್ಯ ಎಂಬುದನ್ನು ಮಾತ್ರ ಖಚಿತವಾಗಿ ಹೇಳಿದೆ. ಆದ್ದರಿಂದ ಇಲ್ಲಿ ಜಗತ್ತು ಮಿಥ್ಯ ಎಂಬ ಅರ್ಥವನ್ನು ಹೊರಡಿಸುವುದು ಉಚಿತವಲ್ಲ ಎಂಬುದು ದ್ವೈತವಾದಿಗಳ ಪ್ರತಿಪಾದನೆ. ಐತದಾತ್ಮ್ಯಂ ಇದಂ ಸರ್ವಂ ತತ್ಸತ್ಯಂ ಸ ಆತ್ಮಾತತ್ತ್ವಮಸಿ ಎಂಬಲ್ಲಿ ನಾಲ್ಕು ವಾಕ್ಯಗಳಿವೆ; ಆತ್ಮ್ಯಂ ಎಂದರೆ  ಆತ್ಮಭಾವ (souledness). ಇದೆಲ್ಲದರಲ್ಲಿಯೂ ಆತ್ಮವಿದೆ, ಅದು ಸತ್ಯ. ಅದ್ವೈತಪರವಾದದಲ್ಲಿ ಅದು ಸತ್ಯ ಎಂದರೆ ಉಳಿದುವೆಲ್ಲವೂ ಮಿಥ್ಯ ಎಂದು ಅರ್ಥೈಸಲಾಗುತ್ತದೆ. ಆದರೆ ಈ ಎರಡನೆಯದನ್ನು ಶ್ರುತಿ ಹೇಳುವುದಿಲ್ಲವಾದ್ದರಿಂದ ಜಗನ್ಮಿಥ್ಯತ್ವ ಇದರಿಂದ ಹೊರಡುವುದಿಲ್ಲವೆಂದು ದ್ವೈತಪ್ರತಿಪಾದಕರ ವಾದ. ಸ ಆತ್ಮಾತತ್ವಮಸಿ ಎಂಬುದನ್ನು ಸ ಆತ್ಮಾ ಅತತ್ವಮಸಿ ಎಂದು ಪದಚ್ಛೇದ ಮಾಡಬೇಕೆಂದೂ ಇದರ ಅರ್ಥ ಜೀವಾತ್ಮ ಪರಮಾತ್ಮರು ಭಿನ್ನ ಎಂಬುದಾಗಿಯೂ ದ್ವೈತಿಗಳು ಪ್ರತಿಪಾದಿಸುತ್ತಾರೆ. ಇದಂ ಸರ್ವಂ ಯದಯಮಾತ್ಮಾ ಬ್ರಹ್ಮ ಎಂಬುದಕ್ಕೆ ಈ ಎಲ್ಲವೂ ಪರಮಾತ್ಮನಲ್ಲಿ ಕಲ್ಪಿತವಾದುವು ಎಂಬುದು ಅದ್ವೈತಪರ ಅರ್ಥ. ಆದ್ದರಿಂದ ಜಗತ್ತೆಲ್ಲವೂ ಮಿಥ್ಯ ಎಂಬುದು ನಿಹಿತ ಎಂಬುದು ಅದ್ವೈತಪ್ರತಿಪಾದಕರ ಪ್ರತಿಪಾದನೆ. ಈ ಮಂತ್ರಕ್ಕೆ ಈ ಎಲ್ಲವೂ ಪರಮಾತ್ಮನ ಅಧೀನ ಎಂಬುದು ದ್ವೈತಪ್ರತಿಪಾದಕರ ವಿವರಣೆ, ಜಗನ್ಮಿಥ್ಯ ಎಂಬರ್ಥವು ಇದರಿಂದ ಹೊರಡುವುದಿಲ್ಲ.  ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಮ್ ಇಲ್ಲಿ ಪ್ರಥಮಾರ್ಧಕ್ಕೆ ಇದಂ ಬ್ರಹ್ಮ= ಈ ಬ್ರಹ್ಮನು ವಿಶ್ವಂ = ಎಲ್ಲ ಕಡೆಗೂ ಇದ್ದಾನೆ ಹೀಗೆ ಬ್ರಹ್ಮನ ವ್ಯಾಪ್ತಿಯ್ನು ತಿಳಿಸುತ್ತದೆ ಎಂಬುದು ಮಾಧ್ವ ವಿವರಣೆ. ನೇಹನಾನಾಸ್ತಿ ಕಿಂಚನ ಇದರ ಪೂರ್ಣ ಪಾಠವು ಮನಸೈವೇದಮಾಪ್ತವ್ಯಂ ನೇಹನಾನಾಸ್ತಿ ಕಿಂಚನ ಎಂಬುದಾಗಿ (ಕಠೋಪನಿಷತ್ತು ೨-೪-೧೧). ಇದಕ್ಕೆ ಇದಂ=ಈ ಪರಮಾತ್ಮನು ಮನಸಾ ಏವ = ಮನಸ್ಸಿನಿಂದಲೇ ಆಪ್ತವ್ಯಂ = ತಿಳಿದು ಬರುವವನು. ಇಹ = ಈ ಪರಮಾತ್ಮನಲ್ಲಿ ಕಿಂಚನ ನಾನಾ = ಸ್ವಲ್ಪ ಭೇದವೂ (ಪರಮಾತ್ಮನ ರೂಪಗಳಲ್ಲಿ ಭೇದವು) ನಾಸ್ತಿ = ಇಲ್ಲ. ಆದ್ದರಿಂದ ಇದು ಪರಮಾತ್ಮನ ಏಕಮೇವಾದ್ವಿತೀಯತ್ವವನ್ನು ತಿಳಿಸಿಕೊಡುತ್ತಿದೆಯೇ ಹೊರತು ಜಗನ್ಮಿಥ್ಯತ್ವವನ್ನಲ್ಲ.

ಒಟ್ಟಿನಲ್ಲಿ ಯಾವ ಮಂತ್ರಗಳಿಂದ ಜಗನ್ಮಿಥ್ಯತ್ವವು ಸಿದ್ಧವಾಗುವುದೆಂದು ಅದ್ವೈತಿಗಳ ವಿವರಣೆ ಇದೆಯೋ ಆ ಮಂತ್ರಗಳಲ್ಲೆಲ್ಲ ಜಗನ್ಮಿಥ್ಯತ್ವದ ಪ್ರತಿಪಾದನೆ ಇಲ್ಲ ಎಂಬುದು ದ್ವೈತಮತಾನುಸಾರ ವಿವರಣೆ. ಹೀಗೆ ಜಗತ್ತು ಸತ್ಯ ಮತ್ತು ಪರಮಾತ್ಮನು ಏಕಮೇವಾದ್ವಿತೀಯ ಎಂಬುದು ಈ ಭಾಗದಲ್ಲಿ ವ್ಯಕ್ತವಾಗಿದೆ. 

ಮೇಲಿನ ಮಂತ್ರಗಳಲ್ಲದೆ “ಯತ್ರಹಿ ದ್ವೈತಮಿವ ಭವತಿ”, “ನೇತಿ ನೇತಿ”, “ಸರ್ವಂ ಖಲ್ವಿದಂ ಬ್ರಹ್ಮ”, - ಈ ಮಂತ್ರಗಳೂ ಈ ಭಾಗದಲ್ಲಿ ವಿವರಣೆ ಕಂಡಿವೆ. ಈ ಭಾಗವನ್ನು ಒಂದು ಹೆಚ್ಚುವರಿ ಭಾಗವೆಂಬಂತೆ ಇಲ್ಲಿ ಕಲ್ಪಿಸಿದೆ. ಆದ್ದರಿಂದಲೇ ಈ ಭಾಗದ ಉಪೋದ್ಘಾತ ರೂಪವಾಗಿ “ಶಾಸ್ತ್ರಿಗಳೇ! ಜಗತ್ತು ಮಿಥ್ಯ ಎಂಬ ವಿಷಯದಲ್ಲಿ ಮತ್ತೇನಾದರೂ ಆಧಾರ ಉಂಟೆ?” ಎಂಬ ಪ್ರಶ್ನೆಯನ್ನು  ಪ್ರತಿವಾದಿ ಪರ ವಕೀಲರು ತನ್ನ ಕಕ್ಷಿದಾರರಿಗೆ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಪ್ರತಿವಾದಿಯು   “ಯತ್ರಹಿ ದ್ವೈತಮಿವ ಭವತಿ” ಎಂಬುದನ್ನು ಉದಾಹರಿಸುತ್ತಾರೆ.ಈ ಮಂತ್ರದ ಪೂರ್ಣ ರೂಪ ಹೀಗಿದೆ: “ಯತ್ರಹಿ ದ್ವೈತಮಿವ ಭವತಿ ತದಿತರ ಇತರಂ ಪಶ್ಯತಿ ತದಿತರ ಇತರಂ ಜಿಘ್ರತಿ ತದಿತರ ಇತರಂ ಶ್ರುಣೋತಿ ತದಿತರ ಇತರಂ ಅಭಿವದತಿ ತದಿತರ ಇತರಂ ಮನುತೇ ತದಿತರ ಇತರಂ ವಿಜಾನಾತಿ ಯತ್ರವಾ ಅಸ್ಯ ಸರ್ವಮಾತ್ಮೈವಾಭೂತ್ತತ್ಕೇನ ಕಂ ಜಿಘ್ರೇತ್ತತ್ಕೇನ‌ ಕಂ ಪಶ್ಯೇತ್ತತ್ಕೇನ ಕಂ ಶ್ರುಣುಯಾತ್ತತ್ಕೇನ ಕಂ ಅಭಿವದೇತ್ತತ್ಕೇನ ಕಂ ಮನ್ವೀತ ತತ್ಕೇನ ಕಂ ವಿಜಾನೀಯಾತ್‌ ಏನೇದಂ ಸರ್ವಂ ವಿಜಾನೀತಿ ತಂ ಕೇನ ವಿಜಾನೀಯಾತ್‌ ವಿಜ್ಞಾತಾರಮರೇ ಕೇನ ವಿಜಾನೀಯಾದಿತಿ” (ಬೃ. ೨-೪-೧೪). ಅಂದರೆ ಅವಿದ್ಯಾವಸ್ಥೆಯಲ್ಲಿವಸ್ತುಗಳಲ್ಲಿ ಭೇದವಿರುವಂತೆ (ದ್ವೈತಮಿವ) ಕಾಣುವುದರಿಂದ ಮನುಷ್ಯ ಆಘ್ರಾಣಿಸುತ್ತಾನೆ, ಕೇಳುತ್ತಾನೆ, ಹೇಳುತ್ತಾನೆ, ತಿಳಿಯುತ್ತಾನೆ ಇತ್ಯಾದಿಯಾಗಿ ಹೇಳಬಹುದು; ಜ್ಞಾನ ಪ್ರಾಪ್ತವಾಗಿ ಎಲ್ಲವೂ ಒಂದೇ ಆಗಿರಲು ಆಘ್ರಾಣಿಸುವುದೇನನ್ನು, ನೋಡುವುದೇನನ್ನು, ಹೇಳುವುದೇನನ್ನು , ಕೇಳುವುದೇನನ್ನು ಅಥವ ತಿಳಿಯುವುದೇನನ್ನು? - ಇದು ಅದ್ವೈತಪರ ಅರ್ಥ. ದ್ವೈತ ಪ್ರತಿಪಾದಕರು ಇದಕ್ಕೆ ಹೇಳುವ ಅರ್ಥವು ಸ್ವಲ್ಪ ಭಿನ್ನವಾಗಿದೆ. ಅವರ ಪ್ರಕಾರ “ಯತ್ರ = ಯಾವ ಮೋಕ್ಷಾವಸ್ಥೆಯಲ್ಲಿ ಅಸ್ಯ = ಈ ಜ್ಞಾನಿಗೆ ಸರ್ವಂ = ಎಲ್ಲ ಪದಾರ್ಥಗಳು ಆತ್ಮೈವಾಭೂತ್‌ =ಆತ್ಮನಿಂದ ಬೇರೆ ಇರದೇ ಹೋಗಬಹುದೋ ತತ್‌ = ತತ್ರ = ಆ ಕಾಲದಲ್ಲಿ ಕೇನ = ಯಾವ ಘ್ರಾಣೇಂದ್ರಿಯದಿಂದ ಕಂ = ಯಾವ ಗಂಧವನ್ನು ಜಿಘ್ರೇತ್‌ = ಮೂಸಿಯಾನು …” ಇತ್ಯಾದಿ. ಆದ್ದರಿಂದ ಅವು ಬೇರೆ ಇದ್ದೇ ಇರುತ್ತವೆ - ಎಂದರ್ಥ. ನೇತಿ ನೇತಿ ನಹ್ಯೇತದಿತಿ ನೇತ್ಯನ್ಯಾತ್ಪರಮಸ್ತಿ ಎಂಬುದಕ್ಕೆ “ಬ್ರಹ್ಮನಿಂದ ಬೇರೆಯಾದ ಮೂರ್ತಾಮೂರ್ತ ರೂಪಾತ್ಮಕ ಸಮಸ್ತ ಜಗತ್ತೂ ಮಿಥ್ಯಾ” “ಬ್ರಹ್ಮನೊಬ್ಬನೇ ಸತ್ಯ” ಎಂದು ಅದ್ವೈತ ಪರ ಅರ್ಥ (೧೨೨). ಇದು ಅಲ್ಲ, ಅದೂ ಅಲ್ಲ, ಇದಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ” “ಪರಮಾತ್ಮನು ಪರತಂತ್ರವಾದ ಮೂರ್ತ ವಸ್ತುಗಳಿಂದ ಬೇರೆ”, “ಆ ಪರಮಾತ್ಮನಿಂದ ಬೇರೆಯಾದ ಉತ್ತಮ ವಸ್ತು ಯಾವುದೂ ಇಲ್ಲ, ಪರಮಾತ್ಮನೇ ಉತ್ತಮನು” (೧೨೮) ಎಂಬುದು ದ್ವೈತ ನಿಲುವು. ಸರ್ವಂ ಖಲ್ವಿದಂ ಬ್ರಹ್ಮ ಏಂಬ ಶ್ರುತಿಗೆ ಈ ಎಲ್ಲವೂ (ಒಂದೇ) ಬ್ರಹ್ಮನಲ್ಲಿ ಕಲ್ಪಿತವಾದುದು, ಯಾರೂ ಯಾವುದನ್ನೂ ಮೂಸಲು ಸಾಧ್ಯವಿಲ್ಲ ಇತ್ಯಾದಿ (೧೩೮) ಎಂಬುದು ಅದ್ವೈತ ಪರ ಅರ್ಥ. ಆದರೆ ಈ ಬ್ರಹ್ಮನೇ ಎಲ್ಲ ಅಂದರೆ ಎಲ್ಲದರಲ್ಲೂ ಬ್ರಹ್ಮನ ವ್ಯಾಪ್ತಿ ಇದೆ ಎಂಬುದು ದ್ವೈತಪರ ಅರ್ಥ. 

ಮೇಲಿನ ವಿಷಯಗಳಲ್ಲದೆ ಭ್ರಮೆ ಮತ್ತು ಸ್ವಪ್ನ - ಈ ಎರಡು ವಿಷಯಗಳ ಬಗ್ಗೆಯೂ ಈ ಇಸ್ಯೂದಲ್ಲಿ ಚರ್ಚೆ ಇದೆ. ಭ್ರಮೆ ಎಂಬುದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ಹಾವನ್ನು ಹಗ್ಗವೆಂದು ಭ್ರಮಿಸುವ ಉದಾಹರಣೆಯನ್ನು ತೆಗೆದುಕೊಂಡು ಸಮನ್ವಯಿಸಿದೆ. ಒಂದು ಇಂದ್ರಿಯಾನುಭವವನ್ನು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗವೇ ಭ್ರಮೆ. ಭ್ರಮೆಗೆ ಕಾರಣಗಳು ಹಲವಾರು. ಇಲ್ಲಿ ಪಟ್ಟಿ ಮಾಡಿರುವ ಭ್ರಮಾ ಕಾರಣಗಳೆಂದರೆ‌ (೧) ಅಧಿಷ್ಠಾನ (೨) ಸಾಮಾನ್ಯ ಧರ್ಮ (೩) ವಿಶೇಷ ಧರ್ಮ (೪) ಆರೋಪ್ಯ ವಸ್ತುವಿನ ಸಾದೃಶ್ಯ (೫) ಸಾಮಾನ್ಯ ಧರ್ಮದ ಜ್ಞಾನ (೬) ವಿಶೇಷ ಧರ್ಮದ ಅಜ್ಞಾನ (೭) ಸಾಮಾನ್ಯ ಧರ್ಮದ ಜ್ಞಾನವಿದ್ದು  ವಿಶೇಷ ಧರ್ಮದ ಜ್ಞಾನವಿಲ್ಲದ ಮನುಷ್ಯ ಮತ್ತು (೮) ಜ್ಞಾನಕ್ಕೆ ಕಾರಣವಾದ ಭ್ರಾಂತಮನುಷ್ಯನ ದೇಹೇಂದ್ರಿಯಾದಿವಸ್ತುಗಳು. ಹಾವನ್ನು ಹಗ್ಗವೆಂದು ಭ್ರಮಿಸುವ ಸಂದರ್ಭದಲ್ಲಿ ಹಗ್ಗವು ಅಧಿಷ್ಠಾನ - ಹಗ್ಗವನ್ನು ಹಗ್ಗವಾಗಿ ತಿಳಿಯದೆ ಅದರಲ್ಲಿ ಬೇರೇನೋ ಉಂಟೆಂದು ತಿಳಿಯುತ್ತೇವೆ. ಹಗ್ಗದಲ್ಲಿ ಇದಂತ್ವ (ಇದು ಎಂಬ) ಸಾಮಾನ್ಯ ಧರ್ಮವಿದೆ. ಹಗ್ಗತ್ವವೆಂಬ ವಿಶೇಷ ಧರ್ಮ, ಆರೋಪ್ಯಮಾಣವಾದ ಸರ್ಪ ಸಾದೃಶ್ಯ - ಇವೂ ಇವೆ. ಭ್ರಮೆಗೊಳಗಾಗುವ ಪುರುಷನಿಗೆ ದೇಹೇಂದ್ರಿಯಗಳಿವೆ; ಇದಂತ್ವವೆಂಬ ಸಾಮಾನ್ಯ ಧರ್ಮವನ್ನು ತಿಳಿದೂ ಹಗ್ಗತ್ವವೆಂಬ ವಿಶೇಷ ಧರ್ಮವನ್ನು ತಿಳದಿರುವುದಿಲ್ಲ. ಹೀಗಾಗಿ ತಾನು ನೋಡಿದ ಹಗ್ಗವನ್ನು ಹಾವೆಂದು ಭ್ರಮಿಸುವನು. ಅದ್ವೈತದ ಪ್ರಕಾರ ಈ ಲೋಕವು ಮಿಥ್ಯ. ಇದು ಸಾಧ್ಯವಾಗುವುದು ಬ್ರಹ್ಮನಿಗೆ ಭ್ರಮೆ ಬರುವುದರಿಂದ. ಇಲ್ಲಿ ಭ್ರಮೆಗೆ ಬ್ರಹ್ಮನೇ ಅಧಿಷ್ಠಾನ‌,  “ಅದ್ವೈತಿಗಳು ಒಪ್ಪಿಕೊಂಡಿರುವ ಬ್ರಹ್ಮನಲ್ಲಿ ಅಧಿಷ್ಠಾನತ್ವಕ್ಕೆ ಉಪಯೋಗಿಯಾದ ಸಾಮಾನ್ಯ ಧರ್ಮ, ವಿಶೇಷ ಧರ್ಮ, ಆರೋಪ್ಯ ಸಾದೃಶ್ಯ, ಇವು ಸತ್ಯವಾದುವು ಇಲ್ಲದಿದ್ದರೂ ಸುಳ್ಳು (ಕಲ್ಪಿತ) ಆದುವುಗಳು ಉಂಟು. ಬ್ರಹ್ಮನು ಅಧಿಷ್ಠಾನನಾಗುವನು ಮತ್ತು ಭ್ರಾಂತನೂ ಆಗುವನು. ಆದ್ದರಿಂದ ಜಗತ್ತಿನ ಭ್ರಮವು ತನ್ನ(ಬ್ರಹ್ಮನ)ಲ್ಲಿ ಬ್ರಹ್ಮನಿಗೆ ಆಗುತ್ತದೆ (ಪು೧೩೧).  ಹಾಗೆಯೇ ಭ್ರಾಂತನಾಗಲು ಕಾರಣಗಳಾದ ಸಾಮಾನ್ಯ ಧರ್ಮದ ಜ್ಞಾನವು, ವಿಶೇಷ ಧರ್ಮದ ಅಜ್ಞಾನವು ಮತ್ತು ದೇಹೇಂದ್ರಿಯಗಳು ಸತ್ಯವಾದುವು ಬ್ರಹ್ಮನಲ್ಲಿ ಇಲ್ಲ; ಆರೋಪಿತವಾದುವುಗಳು ಇವೆ. ಹೀಗೆ ಬ್ರಹ್ಮನಿಗೆ ಭ್ರಮೆ ಉಂಟಾಗುವುದರಿಂದ ಜಗತ್ತು ಅಸ್ತಿತ್ವಕ್ಕೆ ಬರುತ್ತದೆ (ಪು೧೩೨).

ದ್ವೈತ ಮತದಲ್ಲಿ ಜಗತ್ತು ಸತ್ಯವೆಂದು ಸ್ವೀಕೃತವಾಗಿದ್ದು ಬ್ರಹ್ಮನ ಭ್ರಮೆಯಿಂದ ಜಗತ್ತು ಅಸ್ತಿತ್ವಕ್ಕೆ ಬರದು.

ಈ ಭಾಗದಲ್ಲಿ ವಿಸ್ತಾರವಾಗಿ ಚರ್ಚೆಯಾಗಿರುವ ಇನ್ನೊಂದು ಮುಖ್ಯ ವಿಚಾರ ಸ್ವಪ್ನಕ್ಕೆ ಸಂಬಂಧಿಸಿದ್ದು. ಸ್ವಪ್ನಗಳು ಮಾನಸಿಕ ಕಲ್ಪನೆಗಳಾಗಿದ್ದು ಸುಳ್ಳಾದುವಾಗಿವೆ ಎಂಬುದು ಸಾಮಾನ್ಯವಾಗಿ ಜನಜನಿತವಾದ ವಿಚಾರ. ಅದ್ವೈತದ ಪ್ರಕಾರ ಕೂಡ ಸ್ವಪ್ನ ಸುಳ್ಳೆಂದೇ ಹೇಳ ಲಾಗುತ್ತದೆ. ಇದನ್ನು ಶ್ರುತಿಗಳ ಆಧಾರದಲ್ಲಿ ಸ್ಥಾಪಿಸಲಾಗಿದೆ.  ಆದರೆ ಮಧ್ವಾಚಾರ್ಯರ ತತ್ವವಾದದ ಪ್ರಕಾರ ಸ್ವಪ್ನದಲ್ಲಿ ಕಾಣುವ ವಸ್ತುಗಳು ಮತ್ತು ಘಟನೆಗಳನ್ನು ಸತ್ಯವೆಂದೇ ಪರಿಗಣಿಸಲಾಗುತ್ತದೆ. ಅವು ಜಾಗೃತಾವಸ್ಥೆಯಲ್ಲಿ ಕಾಣದಿರುವುದು ಸ್ಸ್ವಪ್ನವನ್ನು ಅಸತ್ಯವೆಂದು ತೋರಿಸುವುದಿಲ್ಲ. ಸ್ವಪ್ನವು ಸತ್ಯವೆಂಬುದನ್ನು ಶ್ರುತಿಗಳ ಆಧಾರದಲ್ಲಿಯೇ ಸ್ಥಾಪಿಸಿರುವುದು ಮಧ್ವಮತದ ವಿಶೇಷ.

ಈ ಸಂಬಂಧದಲ್ಲಿ ಸ್ವಪ್ನಗಳು ಹೇಗೆ ಉಂಟಾಗುತ್ತವೆ ಎಂಬುನ್ನು ವಿವರಿಸಿದ್ದು ಈ ವಿವರಣೆ ಆಧುನಿಕ ಮನೋವಿಜ್ಞಾನಕ್ಕೆ ಹತ್ತಿರವಾದುದಾಗಿದೆ. “ಯಾವ ಯಾವ ಪದಾರ್ಥಗಳ ಶ್ರವಣ, ದರ್ಶನ ಇವುಗಳಿಂದ ಉತ್ಪನ್ನವಾದ ಮನಸ್ಸಿನ ಮೇಲ[ಣ] ಸಂಸ್ಕಾರ ಇರುವುದೋ ಆ ಸಂಸ್ಕಾರವೇ” ಕನಸಿನ ಅಸ್ತಿವಾರವೆಂದು ಇಲ್ಲಿ ಹೇಳಲಾಗಿದೆ. ಸ್ವಪ್ನ ಕಾಲದಲ್ಲಿ ಉಳಿದ ಇಂದ್ರಿಯಗಳು ನಿಷ್ಕ್ರಿಯವಾಗಿದ್ದರೂ ಮನಸ್ಸಿಗೆ ʼಉಪರತಿʼ ಇರುವುದಿಲ್ಲವಾದುದರಿಂದ ಇದು ಸಾಧ್ಯವಾಗುತ್ತದೆ. “ಸ್ವಪ್ನ ಪದಾರ್ಥಗಳು ಪೂರ್ವಕ್ಷಣದಲ್ಲಿಯೂ ಇರುವುದಿಲ್ಲ, ಉತ್ತರಕ್ಷಣದಲ್ಲಿಯೂ ಇರುವುದಿಲ್ಲ, ಮಧ್ಯಕ್ಷಣದಲ್ಲಿಯೇ ಉತ್ಪನ್ನವಾಗಿ ಅದೇಕ್ಷಣದಲ್ಲಿ ನಷ್ಟವಾಗುತ್ತವೆ. ಇದು ಎಲ್ಲರ ಅನುಭವಸಿದ್ಧವಾದುದು” (ಪು ೧೪೧-೧೪೯). ಜಾಗೃತಾವಸ್ಥೆಯಲ್ಲಿ ವ್ಯಕ್ತಿ ವಸ್ತುಗಳನ್ನು ನೋಡಿದ, ಕೇಳಿದ, ಸ್ಪರ್ಶಿಸಿದ ಮೇಲೆ ಅವು ಕಣ್ಮರೆಯಾದನಂತರ ಮನಸ್ಸಿನಲ್ಲಿ ಉಳಿಯುವ ಅವುಗಳ ʼಟ್ರೇಸ್‌ʼ ಸ್ವಪ್ನಕ್ಕೆ ಕಾರಣವೆಂಬುದು ಆಧುನಿಕ ಮನೋವಿಜ್ಞಾನದ ನಿಲುವಾಗಿದೆ.

ಹೀಗೆ ಇಸ್ಯೂ ೨,  ಜಗತ್ತು ಮಿಥ್ಯ, ಬ್ರಹ್ಮನಲ್ಲದೆ ಬೇರೆ ಏನೂ ಇಲ್ಲ ಎಂಬುದನ್ನು ಯಾವ ವೇದ ಮಂತ್ರಗಳಿಂದ ಅದ್ವೈತ ಪ್ರತಿಪಾದಕರು ಸಾಧಿಸುತ್ತಿದ್ದರೋ, ಅದೇ ಮಂತ್ರಗಳನ್ನು ಪರಿಗಣಿಸಿ, ಆ ಮಂತ್ರಗಳಿಗೆ ಅರ್ಥವು ಸ್ವಲ್ಪ ಬೇರೆ ಎಂದೂ, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಅವೇ ಮಂತ್ರಗಳು ಜಗತ್ತು ಸತ್ಯ ಮತ್ತು ಬ್ರಹ್ಮನಿಂದ ಬೇರೆಯಾದುದು ಎಂದು ತಿಳಿಸುತ್ತವೆ ಎಂದೂ ವಿವರಿಸುತ್ತದೆ. ಈ ವಿವರಣೆಗಳು ಈ ಭಾಗದಲ್ಲಿ ಸಹಜವಾಗಿ ಮೂಡಿ ಬಂದಿವೆ. “ಒಂದು ಇಂದ್ರಿಯಾನುಭವವನ್ನು ತಪ್ಪಾಗಿ ತಿಳಿದುಕೊಳ್ಳುವ ಪ್ರಸಂಗ” ಎಂದು ಭ್ರಮೆಯನ್ನು ವಿವರಿಸಿ ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡಿದೆ. ಇಂತಹ ಒಂದು ಖಚಿತ ವಿವರಣೆಯು ಭಾರತೀಯ ತತ್ವಶಾಸ್ತ್ರದಲ್ಲಿ ಮೊದಲ ಬಾರಿಗೆ ಇಲ್ಲಿ ಕಾಣಸಿಗುತ್ತದೆ ಎಂಬುದು ಮುಖ್ಯ. ಮನಸ್ಸು ಎಂಬುದರ ವಿವರಣೆ ಮತ್ತು ಸ್ವಪ್ನ ಉಂಟಾಗುವುದರ ವಿವರಣೆಗಳನ್ನೂ ಇಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಸ್ವಪ್ನವು ಸಂಸ್ಕಾರಗಳಿಂದ ಉಂಟಾಗುವಂತಹುದು ಎಂಬ ಇಲ್ಲಿನ ವಿವರಣೆ ಸಿಗ್ಮಂಡ್‌-ಫ್ರಾಯಿಡನ ʼಅನುಭವಗಳುಂಟಾದಾಗ ಅವುಗಳ ಒಂದು ಟ್ರೇಸ್‌ ಮನಸ್ಸಿನಲ್ಲಿ ಉಳಿದಿರುತ್ತದೆ ಮತ್ತು ಅವುಗಳಿಂದ ಸ್ವಪ್ನ ಉಂಟಾಗುತ್ತದೆʼ ಎಂಬ ಸಿದ್ಧಾಂತದ ಬುನಾದಿ ಇರುವಂತೆ ತೋರುತ್ತದೆ. 

ಎರಡನೆಯ ಇಸ್ಯೂವಿನಲ್ಲಿ ಜಗತ್ತು ಸತ್ಯ, ಬ್ರಹ್ಮ ಸತ್ಯ ಮತ್ತು ಸ್ವಾಪ್ನ ಪದಾರ್ಥಗಳೂ ಸತ್ಯ ಎಂಬುದು ಮುಖ್ಯ ಪ್ರತಿಪಾದನೆ. ಮೂರನೆಯ ಇಸ್ಯೂವಿನಲ್ಲಿ ಜೀವ-ಬ್ರಹ್ಮಾದಿ ಭೇದ ಪ್ರತಿಪಾದನೆಗೆ ಒತ್ತು ನೀಡಲಾಗಿದೆ. ಅಂದರೆ ಇಲ್ಲಿ ಈ ಲೋಕಕ್ಕೆ ಸರ್ವ ಪ್ರಭುವಾಗಿ ದೇವರಿದ್ದು ಲೋಕ ಸಂರಕ್ಷಣಾ ಕಾರ್ಯವನ್ನು ಮಾಡುತ್ತಾನೆ ಎಂಬುದು, ಪ್ರತಿಯೊಬ್ಬ ವ್ಯಕ್ತಿ ಅನನ್ಯನಾಗಿದ್ದು ಪ್ರತಿಯೊಬ್ಬರಿಗೂ ವಿಶಿಷ್ಟ ಅಸ್ಮಿತೆ ಇದೆ ಎಂಬುದು, ಚೇತನಾಚೇತನರಲ್ಲಿ ವ್ಯತ್ಯಾಸವಿದ್ದು ಲೋಕದಲ್ಲಿ ಪ್ರತಿಯೊಂದರ ಸ್ಥಾನ ವಿಶಿಷ್ಟವೆಂಬುದು - ಈ ಅಧ್ಯಾಯದ ಪ್ರತಿಪಾದನೆ. ಈ ದೃಷ್ಟಿಯಿಂದ ವೇದ ಮಂತ್ರಗಳ ಅರ್ಥ ವಿವರಣೆ, ವಿಶ್ಲೇಷಣೆ ಮತ್ತು ಪೂರ್ವ-ಪ್ರತಿಪಾದನೆ ಸರಿಯಲ್ಲವೆಂಬುದನ್ನು ಸಯುಕ್ತಿಕವಾಗಿ ತೋರಿಸುವುದು - ಇವೆಲ್ಲ ಸಾಗಿವೆ. 

ಗ್ರಂಥದಲ್ಲಿರುವ ಅಧ್ಯಾಯಗಳಲ್ಲೆಲ್ಲ ಈ ಮೂರನೆಯದು ಅತ್ಯಂತ ವಿಸ್ತಾರವಾದುದು; ಇಸ್ಯು (೧) ೪೬ ಪುಟ ವಿಸ್ತಾರ, ಇಸ್ಯು (೨) ೧೩೮ ಪುಟ ವಿಸ್ತಾರ ಇವೆಯಾದರೆ ಇಸ್ಯು೩ ಮುನ್ನೂರ ಅರವತ್ತ ಮೂರು (೩೬೩) ಪುಟಗಳಷ್ಟು ವಿಸ್ತಾರವಾಗಿದೆ. ಇಸ್ಯು ೪ ಮತ್ತು ಇಸ್ಯು ೫ ಒಟ್ಟಾಗಿ ೧೭೦ ಪುಟ ವಿಸ್ತಾರ ಹೊಂದಿವೆ. ಇದು ಇಲ್ಲಿ ಪ್ರತಿಪಾದಿತ ವಿಷಯಗಳಿಗೆ ಲೇಖಕರು ಎಷ್ಟೆಷ್ಟು ಪ್ರಾಮುಖ್ಯ ಕೊಟ್ಟಿದ್ದಾರೆ ಎಂಬುದನ್ನೂ ತೋರಿಸುತ್ತದೆ. ಇಸ್ಯೂ೩ ರಲ್ಲಿ ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಯಃಪೃಥಿವ್ಯಾಂ ತಿಷ್ಠನ್‌, ಸಯಶ್ಚಾಯಂ ಪುರುಷೇ, ನಾನ್ಯದತೋಸ್ತಿ ದ್ರಷ್ಟೃ, ಯತ್ರಹಿ ದ್ವೈತಮಿವ ಭವತಿ, ಯತ್ರತ್ವಸ್ಯ ಸರ್ವಮಾತ್ಮೈವಾಭೂತ್‌, ಮುಂತಾಗಿ ನಲವತ್ತೆರಡು ವೇದ ಮಂತ್ರಗಳನ್ನು ಮುಖ್ಯವಾಗಿ ವಿಶ್ಲೇಷಿಸುತ್ತದೆ. ಇದರಲ್ಲಿ ಪಾರ್ಟ್‌ ೧, ಪಾರ್ಟ್‌ ೨ ಮತ್ತು ಪಾರ್ಟ್‌ ೩ ಎಂಬ ಮೂರು ವಿಭಾಗಗಳಿವೆ. ಇವುಗಳಲ್ಲಿ ಕ್ರಮವಾಗಿ ಶ್ರುತಿ, ಬ್ರಹ್ಮ ಸೂತ್ರ ಮತ್ತು ಗೀತಾ ವಾಕ್ಯಗಳ ವಿಚಾರಣೆ ಇವೆ. ಪಾರ್ಟ್‌ ೧ರ ಮೊದಲ ಎಪ್ಪತ್ತು ಪುಟಗಳಲ್ಲಿ (ಇತರ ಭಾಗಗಳಂತೆ) ಇಲ್ಲಿಯೂ ತೀರ್ಪನ್ನು ಬರೆದಿದ್ದಾರೆ. ಇಲ್ಲಿರುವ ಅಂತಿಮ ತೀರ್ಪೆಂದರೆ: ಶ್ರುತಿ, ಸೂತ್ರಗಳು ಮತ್ತು ಗೀತಾ - ಇವು ಜೀವೇಶ್ವರರಿಗೆ ಭೇದವನ್ನು ತಿಳಿಸುತ್ತವೆ; ಜೀವೇಶ್ವರರ ಅಭೇದವು ಶಷವಿಶೇಷಣದಂತೆ ಅಪ್ರಮಾಣಿಕವು; ಪರಮಾತ್ಮನು ಜೀವಜಡಾತ್ಮಕವಾದ ಪ್ರಪಂಚಕ್ಕಿಂತಲೂ ಭಿನ್ನನು ಮತ್ತು ಅನಂತ ಕಲ್ಯಾಣಗುಣ ಪರಿಪೂರ್ಣನು; ಪರಮಾತ್ಮನ ಪ್ರಸಾದದಿಂದ ಮೋಕ್ಷವನ್ನು ಸಂಪಾದಿಸಿಕೊಂಡು ಅವರವರಿಗೆ ಯೋಗ್ಯವಾದ ಆನಂದವನ್ನು ಅನುಭವಿಸಬೇಕು (ಪು ೧೯೧-೨೬೨). 

ಜಡ್ಜ್-ಮೆಂಟಿನ ನಂತರ ಸಾಮಾನ್ಯ ನ್ಯಾಯಾಲಯ ಸಂಪ್ರದಾಯದಂತೆ ಅಡಕಗಳ ರೀತಿಯಲ್ಲಿ ನ್ಯಾಯಾಲಯ ನಡಾವಳಿಗಳ ರೀತಿಯಲ್ಲಿ ವಿವರಗಳನ್ನೆಲ್ಲ ದಾಖಲಿಸಿದ್ದಾರೆ. ಅಲ್ಲಿಂದ ಮುಂದೆ ನ್ಯಾಯಾಲಯದ ವಿಚಾರಣೆ ಪ್ರಾರಂಭ. ಅಂದರೆ ದ್ವೈತಾದ್ವೈತ ವಾದ ವಿವಾದ ಪ್ರಾರಂಭವಾಗುತ್ತದೆ. ಪಾರ್ಟ್‌ ೧ ಎಂಬ ಈ ವಿಭಾಗದಲ್ಲಿ ಅದ್ವೈತ ಪ್ರತಿಪಾದಕರು ಅಭೇದವನ್ನು ಸ್ಥಾಪಿಸಲು ಬಳಸುವ ವೇದ ಮಂತ್ರಗಳನ್ನು ತೆಗೆದುಕೊಂಡು ಅವು ನಿಜವಾಗಿ ದ್ವೈತಪರ(ಎಂದರೆ ಜೀವೇಶ್ವರ ಭೇದ ತಿಳಿಸುವ)ವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಒಂದು ಹಂತದಲ್ಲಿ ಅದ್ವೈತ ಪ್ರತಿಪಾದಕರು ʼನಿರುತ್ತರʼರಾಗುವುದು ದ್ವೈತ ಮತವನ್ನು ಸ್ಥಾಪಿಸುತ್ತದೆ. 

ಈ ಭಾಗದಲ್ಲಿ  ಮೂವತ್ತು ವೇದ ಮಂತ್ರಗಳನ್ನು ವಿಶ್ಲೇಷಿಸಲಾಗಿದೆ. ಇವುಗಳಲ್ಲಿ ಬೃಹದಾರಣ್ಯಕ ಉಪನಿಷತ್ತಿನಿಂದ ೧೧, ಶ್ವೇತಾಶ್ವತರ ಉಪನಿಷತ್ತಿನಿಂದ ೬, ಛಾಂದೋಗ್ಯ ಉಪನಿಷತ್ತಿನಿಂದ ೫, ತೈತ್ತರೀಯದಿಂದ ೪, ಮುಂಡಕೋಪನಿಷತ್ತಿನಿಂದ ೩ ಮತ್ತು ಐತರೇಯದಿಂದ ೧ ಮಂತ್ರಗಳಿವೆ. ಇಲ್ಲಿ ಉದಾಹರಣೆಗಾಗಿ ಕೆಲವನ್ನು ಮಾತ್ರ ತೆಗೆದುಕೊಂಡಿದೆ.  

ಈ ಹಿಂದೆಯೇ ಪ್ರಸ್ತಾವಿಸಲಾದ ಕೆಲವು ಮಂತ್ರಗಳನ್ನೂ ಇಲ್ಲಿ ಮತ್ತೆ ವಿಶ್ಲೇಷಣೆಗೆ ಒಳಪಡಿಸಿದೆ. ಇವುಗಳ ಪ್ರಾಮುಖ್ಯವನ್ನು ಶ್ರುತಿ ಸ್ಮೃತ್ಯಾದಿಗಳಿಂದ ಮತ್ತಷ್ಟು ಸಮರ್ಥನೆಗಳನ್ನು ನೀಡಿ ಸ್ಪಷ್ಟಪಡಿಸಿದ್ದಾರೆ. ಅಂತಹವುಗಳಲ್ಲಿ ಒಂದು ಸ ಆತ್ಮಾತತ್ವಮಸಿ ಎಂಬ ಶ್ರುತಿ. ಇದನ್ನು ಈ ಹಿಂದೆಯೇ ಅರ್ಥೈಸಿದ್ದು  ಸ ಆತ್ಮಾ ಅತತ್ವಮ್‌ ಅಸಿ ಎಂದು ಪದ ಚ್ಛೇದ ಮಾಡಬೇಕೆಂದೂ ಇದರ ಅರ್ಥ ನೀನು ಆ ಪರಬ್ರಹ್ಮನಲ್ಲ ಎಂದೂ ವಿವರಿಸಿದೆ. ಇಲ್ಲಿ ಈ ಮಂತ್ರವನ್ನು ಮತ್ತೆ ವಿಶ್ಲೇಷಣೆಗೆ ಎತ್ತಿಕೊಂಡಿದೆ. ಇದರ ವಿವರಣೆ ಮತ್ತು ವಿಶ್ಲೇಷಣೆಗಳು ಇಲ್ಲಿ ಐವತ್ತು ಪುಟಗಳಷ್ಟು ವಿಸ್ತಾರವಾಗಿ ಸಾಗುತ್ತವೆ. ಈ ಅರ್ಥವನ್ನು ಬೆಂಬಲಿಸಿ ಗಟ್ಟಿಗೊಳಿಸುವ ಹಲವು ಸಮರ್ಥನ ವಾಕ್ಯಗಳನ್ನು ಉದಾಹರಿಸಿ ವಿವರಿಸಿದ್ದಾರೆ. ಇಂತಹ ಸಮರ್ಥನ ವಾಕ್ಯಗಳಲ್ಲಿ ಒಂದು ಉತತಮಾದೇಶಮಪ್ರಾಕ್ಷ್ಯಃ ಯೇನಾಶ್ರುತಂ ಶ್ರುತಂ ಭವತಿ ಅಮತಂ ಮತಂ ಅವಿಜ್ಞಾತಂ ವಿಜ್ಞಾತಮಿತಿ ಎಂಬ ಛಾಂದೋಗ್ಯೋಪನಿಷತ್ತಿನ ಮಂತ್ರ (ಪು೨೯೨). ಈ ವಾಕ್ವವನ್ನು ಶಂಕರ ಮತಾನುಯಾಯಿಗಳು ಪರಮಾತ್ಮ ಮತ್ತು ಪ್ರಪಂಚಗಳ ನಡುವೆ ಅಭೇದಕ್ಕೆ ಮತ್ತೊಂದು ಆಧಾರವೆಂದು ಉದಾಹರಿಸುತ್ತಾರೆ. “ಪರಮಾತ್ಮನ ಜ್ಞಾನದಿಂದ ಸರ್ವ ಪದಾರ್ಥಗಳ ಜ್ಞಾನವು ಆಗುತ್ತದೆಯೆಂದು ಈ ವಾಕ್ಯವು ಹೇಳುತ್ತದೆ. ಜೀವಜಡಾತ್ಮಕವಾದ ಪ್ರಪಂಚವು ಪರಮಾತ್ಮನಿಂದ ಭಿನ್ನವಾದ ಪಕ್ಷದಲ್ಲಿ ಪರಮಾತ್ಮನ ಜ್ಞಾನದಿಂದ ಜೀವಜಡಾತ್ಮಕವಾದ ಜ್ಞಾನವು ಹೇಗಾಗುವುದು?” (ಪು ೨೯೨) ಎಂಬುದು ಇವರ ವಾದ. ಹೀಗೆ ಅನ್ಯತ್ರ ಜೀವ ಜಡ ಅಭಿನ್ನತೆಯನ್ನು ವೇದಮಂತ್ರಗಳು ಹೇಳುತ್ತಿರುವುದರಿಂದ ಸ ಆತ್ಮಾತತ್ವಮಸಿ ಎಂಬಲ್ಲಿ ಅತತ್ವಮಸಿ ಎಂದು ಪದವಿಭಾಗ ಮಾಡತಕ್ಕದ್ದಲ್ಲ; ಈ ಮಂತ್ರ ತತ್ವಮಸಿ ಎಂಬುದು ಜೀವಜಡಾಭಿನ್ನತೆಯನ್ನೇ ಹೇಳುತ್ತದೆ ಎಂಬುದು ಅವರ ನಿಲುವು. ಏಕಮೇವಾದ್ವಿತೀಯಂ ಎಂಬ ಶ್ರುತಿ ಕೂಡ ಇದಕ್ಕೆ ಪೂರಕವಾಗಿದ್ದು ಪರಮಾತ್ಮನೊಬ್ಬನೇ ಇದ್ದು ಇನ್ನೊಂದು ದ್ವಿತೀಯ ವಸ್ತು ಇಲ್ಲವೆಂಬುದನ್ನೇ ಹೇಳುತ್ತದೆ ಎಂದು ಇವರು ಹೇಳುತ್ತಾರೆ (ಪು೨೯೭). ಈ ರೀತಿ ಇನ್ನೂ ಹಲವು ಸಮರ್ಥನ ವಾಕ್ಯಗಳನ್ನು ಇಲ್ಲಿ ಉದಾಹರಿಸಿದ್ದಾರೆ.

ಉತತಮಾದೇಶಮಪ್ರಾಕ್ಷ್ಯಃ ಯೇನಾಶ್ರುತಂ ಶ್ರುತಂಭವತಿ ಎಂಬ ವಾಕ್ಯದ ಅರ್ಥದ  ಬಗ್ಗೆ ವಿಸ್ತಾರವಾದ ಚರ್ಚೆ ಇಲ್ಲಿದೆ. ಕೊನೆಯಲ್ಲಿ ಶಂಕರಾಚಾರ್ಯರ ಭಾಷ್ಯಾನುಸಾರವಾಗಿ ಪರಮಾತ್ಮನ ಜ್ಞಾನವು ಬೇರೆ, ಜಗತ್ತಿನ ಜ್ಞಾನವು ಬೇರೆ ಎಂದು ಸಿದ್ಧವಾಗುತ್ತದೆಯೇ ಇಲ್ಲವೆ ಎರಡೂ ಒಂದೇ ಎಂದು ಸಿದ್ಧವಾಗುತ್ತದೆಯೇ ಎಂಬ ವಾದಿ ಪರ ವಕೀಲರ ಪ್ರಶ್ನೆಗೆ ಪರಮಾತ್ಮನ ಜ್ಞಾನವು ಬೇರೆ, ಜಗತ್ತಿನ ಜ್ಞಾನವು ಬೇರೆ ಎಂದು ಸಿದ್ಧವಾಗುತ್ತದೆ ಎಂದು ಪ್ರತಿವಾದಿ ಉತ್ತರಿಸುತ್ತಾರೆ (ಪು ೨೯೪). ಹೀಗಾಗಿ ಶಾಂಕರ ಪ್ರತಿಪಾದನೆಯಲ್ಲಿಯೇ ದ್ವೈತ ನಿಲುವಿನ ಬೀಜಗಳಿವೆ ಎಂದು ಲೇಖಕರು ಸೂಚಿಸುತ್ತಾರೆ.

ಹೀಗೆಯೇ ಏಕಮೇವಾದ್ವಿತೀಯಂ ಎಂಬ ಮಂತ್ರದ ವಿಶ್ಲೇಷಣೆ. ಏಕಮೇವಾದ್ವಿತೀಯಂ ಮಂತ್ರದಲ್ಲಿ ಏಕಂ ಎಂಬ ಪದಕ್ಕೆ ಶಂಕರಾಚಾರ್ಯರು ಮಾಡಿದ ಅರ್ಥದ ಪ್ರಕಾರವಾಗಿ ಎರಡನೆಯ ವಸ್ತುವೇ ಇಲ್ಲವೆಂದು ಸಿದ್ಧವಾಗುತ್ತದೆಯೋ ಇಲ್ಲವೋ ಎಂಬ ವಾದಿಪರ ವಕೀಲರ ಪ್ರಶ್ನೆಗೆ ಪ್ರತಿವಾದಿಯು ಬ್ರಹ್ಮನಿಗಿಂತ ಬೇರೆ ವಸ್ತುವಿಲ್ಲವೆಂದು ಸಿದ್ಧವಾಗುವುದಿಲ್ಲ ಎಂದು ಉತ್ತರಿಸುತ್ತಾರೆ. ಹಾಗೆಯೇ ಜೀವ ಈಶೋ ವಿಶುದ್ಧಾಚಿತ್‌ ಭೇದಸ್ತಸ್ಯಾಃ ತಯೋರ್ದ್ವಯೋಃ, ಅವಿದ್ಯಾತಚ್ಚಿತೋರ್ಯೋಗಃ ಷಡಸ್ಮಾಕಂ ಹ್ಯನಾದಯಃ ಎಂಬ ಶ್ಲೋಕಕ್ಕೆ ಪ್ರತಿವಾದಿ ಗಂಗಾಧರ ಶಾಸ್ತ್ರಿಗಳು (೧) ಜೀವನು (೨) ಈಶ್ವರನು (೩) ಚಿತ್‌ (೪) ಚಿತ್ತಿಗೆ ಜೀವೇಶರಿಂದ ಭೇದವು ಮತ್ತು ಜೀವೇಶ್ವರಲ್ಲಿ ಭೇದವು (೫) ಅವಿದ್ಯೆಯು (೬) ಅವಿದ್ಯೆಗೆ ಚಿತ್ತಿನ ಸಂಬಂಧವು ಎಂದು ಹೀಗೆ ಆರು ಪದಾರ್ಥಗಳು ಅನಾದಿಯಾಗಿರುವುವು ಎಂದು ಅರ್ಥ ಎಂಬುದಾಗಿ ಹೇಳುತ್ತಾರೆ (ಪು ೨೯೮ - ೨೯೯). (ಹೀಗಿದ್ದರೂ ಈ ಭೇದಗಳೆಲ್ಲ ವ್ಯಾವಹಾರಿಕ ಸತ್ಯಗಳು ಮಾತ್ರ ಆತ್ಯಂತಿಕ ಸತ್ಯವಲ್ಲ ಎಂಬುದು ಅವರ ವಾದ). ಹೀಗೆ ಪರಮಾತ್ಮ, ಜೀವ, ಜಗತ್ತು - ಇವುಗಳ ನಡುವೆ ಅಭೇದದ ವಾದ ಸುಸಂಬದ್ಧವಾಗಿಲ್ಲ ಎಂಬುದು ಈ ಅಧ್ಯಾಯದಲ್ಲಿ ಘನತರವಾಗಿ ಪ್ರತಿಪಾದಿತವಾಗಿರುವ ಅಂಶ. ಇದರ ಸಮರ್ಥನೆಗೆ ಇನ್ನೂ ಹಲವು ಉದಾಹರಣೆಗಳನ್ನು ನೀಡಿದ್ದಾರೆ.

ಹೀಗೆ ಇಲ್ಲಿ ಪರಮಾತ್ಮನು ಜೀವಜಡಾತ್ಮಕವಾದ ಪ್ರಪಂಚದಿಂದ ಭಿನ್ನನು ಎಂಬುದನ್ನು ಘನತರವಾಗಿ ಪ್ರತಿಪಾದಿಸಿದ್ದಾರೆ. ಪರಮಾತ್ಮನು ಜೀವನಿಂದ ಭಿನ್ನನು; ಪರಮಾತ್ಮನು ಬೇರೆಬೇರೆಯಾದ ಎಲ್ಲ ಜೀವಜಡಗಳಾಂತರ್ಯಾಮಿಯು ಎಂದು ಇಲ್ಲಿ ಪ್ರತಿಪಾದಿಸಲಾಗಿದೆ.

ಸ ಯಶ್ಚಾಯಂ ಪುರುಷೇ ಯಶ್ಚಾಸಾವಾದಿತ್ಯೇ ಸ ಏಕಃ (ತೈತ್ತರೀಯ ಉಪನಿಷತ್ತಿನ ಮಂತ್ರ,  ಇಲ್ಲಿ ಪು೩೬೦) ಈ ಮಂತ್ರದ ಅರ್ಥ ವಿವರಣೆ ಇಲ್ಲಿರುವಂತೆ ಹೀಗಿದೆ: ಪುರುಷನಲ್ಲಿ(ಜೀವನಲ್ಲಿ)  ಯಾವ ಪರಮಾತ್ಮನಿರುವನೋ ಆದಿತ್ಯನಲ್ಲಿ ಯಾವ ಪರಮಾತ್ಮನಿರುವನೋ ಆ ಪರಮಾತ್ಮನು ʼಏಕʼ ಒಂದೇ ಎಂದು ಜೀವಾಂತರ್ಗತನಾದ ಪರಮಾತದ್ಮನಿಂದ ಆದಿತ್ಯಾಂತರ್ಗತನಾದ ಪರಮಾತ್ಮನಿಗೆ ಭೇದವು ಇಲ್ಲವೆಂದು ಅರ್ಥವು (ಪು ೩೬೦). ಪರಮಾತ್ಮನ ಅಂತರ್ಯಾಮಿತ್ವ ಜೀವ ಜೀವ ಭೇದಗಳು ಹೀಗೆ ಸ್ಪಷ್ಟವಾಗುತ್ತವೆ. ಇಂತಹ ಅನೇಕ ಶ್ರುತಿ ವಾಕ್ಯಗಳನ್ನು ಸಮರ್ಥನೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. ನಾನ್ಯದತೋಸ್ತಿ ದ್ರಷ್ಟೃ ಎಂಬುದು ಅಂತಹವುಗಳಲ್ಲಿ ಒಂದು. ಇದಕ್ಕೆ ಪರಮಾತ್ಮನಲ್ಲದೆ ಬೇರೆ ದ್ರಷ್ಟೃವಿಲ್ಲವೆಂದು ಅರ್ಥೈಸಿ ಜೀವ ಪರಮಾತ್ಮ ಭೇದವನ್ನು ಅದ್ವೈತಿಗಳು ಅಲ್ಲಗಳೆಯುತ್ತಾರೆ. ಆದರೆ ಜೀವ ಪರಮಾತ್ಮ ಭೇದ ಉಂಟೆಂದು ಹಲವು ಪ್ರಮಾಣಗಳಿಂದ ತತ್ವವಾದಪರರು ಪ್ರತಿಪಾದಿಸುತ್ತಾರೆ. ಇನ್ನೊಂದು ಅಂತಹ ಉದಾಹರಣೆಯೆಂದರೆ ಅನ್ಯೋಸಾವನ್ಯೋಹಮಸ್ಮಿ (ಪು೪೪೧-೪೪೫). ಈ ವಾಕ್ಯ ಪರಮಾತ್ಮನಿಂದ ಇಂದ್ರಾದಿ ದೇವತೆಗಳಿಗೆ ಭೇದವನ್ನು ತಿಳಿಸುತ್ತದೆ ಎಂಬ ಪ್ರತಿಪದನೆ ಇದೆ (ಪು ೪೪೬).

ಅಜೋ ಹೈಕಃ ಎಂಬ ಶ್ರುತಿ ವಿಚಾರಣೆ ವೇಳೆ ವಾದಿಯು “ಅಜ= ಉತ್ಪತ್ತಿರಹಿತನಾದ ಒಬ್ಬ ಜೀವನು ಸತ್ವರಜಸ್ತಮೋಗುಣಾತ್ಮಕವಾದ ಅನೇಕ ಪ್ರಜೆಗಳನ್ನು ಸೃಜಿಸುವ ಪ್ರಕೃತಿಯನ್ನು ಸೇವಿಸುತ್ತಾ ಇರುತ್ತಾನೆ. ಮತ್ತೊಬ್ಬನಾದ ಮುಕ್ತ ಭೋಗವುಳ್ಳ (ಸುಖದುಃಖಗಳನ್ನು ಅನುಭವಿಸಿದ್ದು ಆದ) ಜೀವನು ಪ್ರಕೃತಿಯನ್ನು ತ್ಯಜಿಸುವವನಾಗಿರುತ್ತಾನೆ. ಹೀಗೆ ಜೀವ ಜೀವರ ನಡುವೆ ಭೇದವನ್ನು ಹೇಳುತ್ತಾ ಅನೇಕರಾದ ಪರಸ್ಪರ ಭಿನ್ನರಾದ ಜೀವರಿಂದ ಒಬ್ಬನಾದ ಪರಮಾತ್ನಿಗೆ ಭೇದವನ್ನು ತಿಳಿಸುತ್ತದೆ” ಎಂದು ತಿಳಿಸುತ್ತಾರೆ. ಹೀಗೆ ಈ ಶ್ರುತಿ ಜೀವ - ಜೀವ ಭೇದವನ್ನು ಘನತರವಾಗಿ ಸ್ಥಾಪಿಸುತ್ತದೆ (ಪು೪೨೭). ಒಂದು ಹಂತದಲ್ಲಿ ಒಂದೇ ವಿಧವಾಗಿ ಎಷ್ಟು ಎಷ್ಟು ವಾಕ್ಯಗಳನ್ನು ಕೇಳುತ್ತೀರಿ? ಸಾಕು ಮುಗಿಸಿರಿ ಎಂಬ ಕೋರ್ಟಿನ ಆದೇಶ ಬರುತ್ತದೆ. ಇದು ಸಾಮಾನ್ಯ ಓದುಗನ ಭಾವೆನೆಯೇ ಆಗಿದ್ದು ಗ್ರಂಥಕರ್ತರು ತಮ್ಮ ಓದುಗರ ಭಾವನೆಗಳನ್ನು ಎಷ್ಟು ಚೆನ್ನಾಗಿ ಗುರುತಿಸಿದ್ದಾರೆ ಮತ್ತು ಅದಕ್ಕೆ ಸ್ಪಂದಿಸಿದ್ದಾರೆ ಎಂಬದನ್ನು ಗುರುತಿಸ ಬಹುದು ( ಪು ೩೭೯). ಇದೇ ರೀತಿಯ ಇತರ ವಾಕ್ಯಗಳೂ ಇವೆ (ಉದಾ.ಪು೪೯೫)

ಪಾರ್ಟ್‌ ೨ರಲ್ಲಿ ಜೀವ ಬ್ರಹ್ಮರಿಗೆ ಭೇದವನ್ನು ಬ್ರಹ್ಮಸೂತ್ರಗಳನ್ನಾಧರಿಸಿ ಪ್ರತಿಪಾದಿಸಲಾಗಿದೆ. ಬ್ರಹ್ಮಸೂತ್ರಗಳಲ್ಲಿ ಪ್ರತಿಯೊಂದೂ ಜೀವ ಬ್ರಹ್ಮರ ಭೇದವನ್ನೇ ತಿಳಿಸುತ್ತದೆ ಎಂಬುದು ಮಾಧ್ವ ವಿದ್ವಾಂಸರ ಪ್ರತಿಪಾದನೆ. ಈ ಭಾಗದಲ್ಲಿ ಬ್ರಹ್ಮ ಸೂತ್ರಗಳ ಪ್ರಕಾರ ಪ್ರಪಂಚ ಸತ್ಯ, ಪ್ರಪಂಚಪರಮಾತ್ಮನಿಂದ ಭಿನ್ನ, ಜೀವ ಪರಮಾತ್ಮರು ಭಿನ್ನರು, ದೇವತೆಗಳೂ ಪರಮಾತ್ನಿಂದ ಮತ್ತು ಪರಸ್ಪರ ಭಿನ್ನರು ಮತ್ತು ಜೀವ ಜೀವರು ಭಿನ್ನರು ಎಂದು (ಅದ್ವೈತ ಪ್ರತಿಪಾದಕರ ವಾದಗಳನ್ನು ಖಂಡಿಸಿ) ಸ್ಥಾಪಿಸಿದ್ದಾರೆ. ಶಾಸ್ತ್ರ ದೃಷ್ಟ್ಯಾತು ಉಪದೇಶೋ ವಾಮದೇವವತ್‌ ಎಂಬುದನ್ನು ವಿಚರಿಸುತ್ತಾ “ನಾನೇ ಬ್ರಹ್ಮನು ಎಂಬ ದೃಷ್ಟಿಯು ಶಾಸ್ತ್ರ ದೃಷ್ಟಿಯಾಗುವುದಿಲ್ಲ. ನನ್ನ ಅಂತರ್ಯಾಮಿಯು ಪರಮಾತ್ಮನು ಎಂಬುದು ಶಾಸ್ತ್ರ ದೃಷ್ಟಿಯಾಗುತ್ತದೆ” (ಪು ೪೯೭) ಎಂದು ಹೇಳಿದ್ದಾರೆ. ಮುಂದುವರೆದು ಅಹಂ ಮನುರಭವಂ ಸೂರ್ಯಶ್ಚ ಎಂಬ ವಾಕ್ಯಕ್ಕೆ ಮುಂದಿರುವ ಋಗ್ವೇದ ವಾಕ್ಯಗಳಲ್ಲಿ ನಾನು ಗರ್ಭದಲ್ಲಿರುವಾಗಲೇ ʼದೇವತೆಗಳು ಪರಮಾತ್ಮನಿಂದ ಹುಟ್ಟಿದರುʼ ಎಂಬ ವಿಷಯವನ್ನು  ತಿಳಿದುಕೊಂಡಿದ್ದೇನೆ, ಸರ್ವ ಪ್ರೇರಕನಾದ ಪಮಾತ್ಮನು ಗರ್ಭದಲ್ಲಿರುವ ನನ್ನ ಶತ್ರುಗಳನ್ನು ಸಂಹರಿಸಿದನು, ಪರಿಪೂರ್ಣನಾದ ಪರಮಾತ್ಮನು ಗರ್ಭಕ್ಕೆ ಕ್ಲೇಶಕರವಾದ ವಾಯುವನ್ನು ದಾಟಿಸಿದನು ಎಂದು ವಾಮದೇವನು ಹೇಳಿರುವುದರಿಂದ (ಪು ೫೦೩) ಜೀವಾತ್ಮ ಭೇದವು ಇಲ್ಲೆಲ್ಲ  ಪ್ರತಿಪಾದಿತವಾಗಿದೆಯೆಂದೂ ವಾದಿಸಿದ್ದಾರೆ. ಹಾಗೆಯೇ ಅಹಂ ಮನುರಭವಂಸೂರ್ಯಶ್ಚ ಎಂಬುದಕ್ಕೆ ಮನು ಸೂರ್ಯ ಮತ್ತ ಬ್ರಹ್ಮರಲ್ಲಿ ಅಂತರ್ಯಾಮಿಯಾಗಿ ಪರಮಾತ್ಮನಿದ್ದಾನೆ ಎಂದರ್ಥ ಮಾಡಿ ಮನು ಸೂರ್ಯ ಬ್ರಹ್ಮ ಮುಂತಾದ ದೇವತೆಗಳಲ್ಲಿ ಭೇದವಿರುವುದನ್ನು (ತಾರತಮ್ಯವನ್ನು) ಪ್ರತಪಾದಿಸಿದ್ದಾರೆ.

೩ನೆಯ ಅಧ್ಯಾಯದ ಭಾಗ ೩ ದ್ವೈತಾದ್ವೈತ ದೃಷ್ಟಿಯಿಂದ ಭಗವದ್ಗೀತೆಯನ್ನು ಪರಿಶೀಲನೆಗೊಡ್ಡುತ್ತದೆ. ಇದು ಈ ಭಾಗದ ಅತ್ಯಂತ ಸಂಕ್ಷಿಪ್ತ ಉಪಭಾಗ. ಇದರಲ್ಲಿ ಮೂವತ್ತು ಪುಟಗಳಷ್ಟೇ ಇವೆ. ಇಡೀ ಗೀತಾ ಗ್ರಂಥವನ್ನು ಇಲ್ಲಿ ಪರೀಶೀಲಿಸಿಲ್ಲವೆಂಬುದು ಇದರಿಂದಲೇ ಸ್ಪಷ್ಟ. ದ್ವೈತಾದ್ವೈತ ಚರ್ಚೆಗೆ ಅವಕಾಶವಿರುವ ಕೆಲವು ಮುಖ್ಯ ಶ್ಲೋಕಗಳನ್ನು ಮಾತ್ರ ಇಲ್ಲಿ ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಇಲ್ಲಿ ಪರಿಶೀಲಿಸಿರುವ ಗೀತಾ ಶ್ಲೋಕಗಳು ಇವು: (೧) ಕ್ಷೇತ್ರಜ್ಞಂಚಾಪಿ ಮಾಂ ವಿದ್ಧಿ (೨)ಮಮೈವಾಂಶೋ ಜೀವಲೋಕೇ (೩) ಬಹೂನಾಂ ಜನ್ಮನಾಮಂತೇ (೪) ವಿದ್ಯಾ ವಿನಯ ಸಂಪನ್ನೇ (೫) ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವಚ. ಇವುಗಳಿಂದೆಲ್ಲ ಜೀವ ಬ್ರಹ್ಮ ಭೇದವವು ಪ್ರತಿಪಾದಿತವಾಗಿದೆ ಎಂಬುದು ಇಲ್ಲಿರುವ ವಿವರಣೆಗಳ ಒಟ್ಟು ತಾತ್ಪರ್ಯ.

ಇವುಗಳಲ್ಲಿ ಮೊದಲನೆಯ ಶ್ಲೋಕದಲ್ಲಿ ಕ್ಷೇತ್ರ ಎಂದರೆ ಜೀವ ಮತ್ತು ಹೊರ ಪ್ರಪಂಚವೆಂದೂ ಕ್ಷೇತ್ರಜ್ಞ ಎಂದರೆ ಪರಬ್ರಹ್ಮನೆಂದೂ ಅರ್ಥ.  ಹೀಗೆ ಹೇಳದೆ ನಾನೇ (ಜೀವನೇ ) ಪರಬ್ರಹ್ಮನೆಂದು ತಿಳಿದುಕೋ ಎಂದು ಅರ್ಥೈಸಿದರೆ ಅದು ಹತ್ತನೆಯ ಅಧ್ಯಾಯದಲ್ಲಿರುವ ಪರಬ್ರಹ್ಮ ಪರಂ ಧಾಮ, ಪವಿತ್ರಂ ಪರಮಂ ಭವಾನ್‌ ಇತ್ಯಾದಿ ಶ್ಲೋಕಗಳಿಗೆ ವಿರುದ್ಧವಾಗುತ್ತದೆ ಎಂದೂ ಆದ್ದರಿಂದ ಕ್ಷೇತ್ರಜ್ಞಂಚಾಪಿ ಮಾಂ ವಿದ್ಧಿ ಎಂಬ ಶ್ಲೋಕವು ಜೀವ - ಪರಮಾತ್ಮ ಮತ್ತು ಹೊರ ಪ್ರಪಂಚಗಳ ನಡುವಣ ಭೇದವನ್ನು ತಿಳಿಸುತ್ತದೆ ಎಂದೂ ಇಲ್ಲಿಯ ಪ್ರತಿಪಾದನೆ.  

ಎರಡನೆಯ ಶ್ಲೋಕ ಮಮೈವಾಂಶೋ ಜೀವ ಲೋಕೇ ಜೀವಭೂತಸ್ಸನಾತನಃ. ಜೀವನು ಪರಮಾತ್ಮನ ಅಂಶನು ಎಂದರೆ ಪರಮಾತ್ಮನ ಅಂಶಕ್ಕೆ ಸಮಾನನಾದವನು - ಅತ್ಯಲ್ಪನು ಎಂದು ಅಭಿಪ್ರಾಯವು. ಜೀವನು ಪರಮಾತ್ಮನ ಒಂದು ಭಾಗವೇ ಎಂದು ಅಭಿಪ್ರಾಯವಲ್ಲ ದೇವದತ್ತನಲ್ಲಿ ಒಂದು ಲಕ್ಷ ರೂಪಾಯಿಗಳಿದ್ದರೆ ಮತ್ತು ಚೈತ್ರನಲ್ಲಿ ಹತ್ತು ಸಾವಿರ ರೂಪಾಯಿಗಳಿದ್ದರೆ ದೇವದತ್ತನ ಹತ್ತನೆಯ ಒಂದಂಶ ಚೈತ್ರ ಎಂದು ಹೇಳುತ್ತೇವೆಯಷ್ಟೆ? ಹಾಗೆ. ಹೀಗೆ ಜೀವ ಪರಮಾತ್ಮ ಭೇದ ಇಲ್ಲಿ ವಿವಕ್ಷಿತ.

ಬಹೂನಾಂ ಜನ್ಮನಾಮಂತೇ ಜ್ಞಾನವಾನ್‌ ಮಾಂ ಪ್ರಪದ್ಯತೇ. ವಾಸುದೇವಸ್ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ಎಂಬುದು ಇಲ್ಲಿ ಚರ್ಚೆಗೊಳಗಾಗಿರುವ ಮೂರನೆಯ ಶ್ಲೋಕ. ಇಲ್ಲಿ ವಾಸುದೇವಸ್ಸರ್ವಂ ಎಂಬ ಪದ ವಿವಾದದ ಮೂಲ. ಇದಕ್ಕೆ ಎಲ್ಲವೂ ವಾಸುದೇವನೇ ಎಂದರ್ಥ ಮಾಡಿ ವಾಸುದೇವ ಮತ್ತು ಈ ಜೀವಜಡಾತ್ಮಕಪ್ರಪಂಚಕ್ಕೆ ಅಭೇದವನ್ನು ಅದ್ವೈತಿಗಳು ಪ್ರತಿಪಾದಿಸಿದರೆ, ತತ್ವವಾದಪರರು ವಾಸುದೇವನು ಸರ್ವನಿಯಾಮಕನು ಎಂದು ಅರ್ಥೈಸಿ ನಿಯಮ್ಯ ನಿಯಾಮಕ ಭಾವದಿಂದ ಈ ವಾಕ್ಯವು ವಾಸುದೇವ ಮತ್ತು ಈ ಜೀವ ಜಡಾತ್ಮಕ ಪ್ರಪಂಚ ಇವು ಬೇರೆ ಬೇರೆ ಎಂದು ಪ್ರತಿಪಾದಿಸುತ್ತಾರೆ.

ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ, ಶುನಿಚೈವ ಶ್ವಪಾಕೇಚ ಪಂಡಿತಾಸ್ಸಮದರ್ಶಿನಃ ಎಂಬುದು ಇಲ್ಲಿ ವಿಮರ್ಶೆಗೆ ಒಳಗಾದ ನಾಲ್ಕನೆಯ ಶ್ಲೋಕ. ಇಲ್ಲಿ ವಿದ್ವಾಂಸ, ಹಸು, ನಾಯಿ, ಕಟುಕ ಇವರೆಲ್ಲರೂ ಪರಬ್ರಹ್ಮ ಸ್ವರೂಪರೇ ಈ ರೀತಿಯಲ್ಲಿ ʼಸಮರುʼ  ಎಂದು ತಿಳಿಯುವವನು  ಪಂಡಿತನು ಎಂಬುದು ಅದ್ವೈತಪರರ ವಾದ. ಹೀಗೆ ಈ ಶ್ಲೋಕವು ಜೀವರಲ್ಲಿ ಮತ್ತು ಜೀವ ಪರಮಾತ್ಮರಲ್ಲಿ ಅಭೇದವನ್ನು ಹೇಳುತ್ತದೆ ಎಂಬುದು ಅವರ ಮತ. ಇವರೆಲ್ಲರಲ್ಲಿಯೂ ಇರುವ ಪರಬ್ರಹ್ಮನನ್ನು ನೋಡ ಬಲ್ಲವನು ಪಂಡಿತನು ಎಂಬುದು ತತ್ವವಾದ ಪರ ಅರ್ಥ. ಸಮ ಎಂಬುದು ಪರಬ್ರಹ್ಮ ವಾಚಿ. ಈ ವಾಕ್ಯದಲ್ಲಿ ತಿಳಿಯ ಬಲ್ಲವನೊಬ್ಬನಿದ್ದಾನೆ ಮತ್ತು ತಿಳಿಯತಕ್ಕಂತಹುದೊಂದಿದೆ. ಹೀಗೆ ಜ್ಙಾತೃ - ಜ್ಞೇಯ ಭಾವವು ಈ ಶ್ಲೋಕದಲ್ಲಿ ಕಂಡು ಬರುತ್ತಿದೆ; ಆದ್ದರಿಂದ ಭೇದವೇ ಈ ಶ್ಲೋಕದ ತಾತ್ಪರ್ಯ. ಆದರೆ ಅದ್ವೈತಿಗಳ ಪ್ರಕಾರ ಈ ಜ್ಞಾತೃ - ಜ್ಞೇಯ ಭಾವವು ವ್ಯಾವಹಾರಿಕವು ಆತ್ಯಂತಿಕವಾದುದಲ್ಲ. (ಇದನ್ನು ಸಮರ್ಥಿಸಲು ಅವರು ಬೇರೆ ಬೇರೆ ಶ್ರುತಿಗಳನ್ನೂ ಇತರ ವಾಕ್ಯಗಳನ್ನೂ ಉದಾಹರಿಸುತ್ತಾರೆ. ಆದರೆ ಈ ಎಲ್ಲವೂ ಭೇದವನ್ನೇ ತಿಳಿಸುತ್ತದೆ ಎಂಬುದು ದ್ವೈತ ಪ್ರತಿಪಾದನೆ).

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ಎಂಬಲ್ಲಿಂದ ಪ್ರಾರಂಭವಾಗಿ ಏತದ್ಬುಧ್ಯಾ ಬದ್ಧಿಮಾನ್‌ ಸ್ಯಾತ್‌ ಕೃತ ಕೃತ್ಯಶ್ಚ ಭಾರತ ಎಂಬಲ್ಲಿವರೆಗಿನ ಐದು ಶ್ಲೋಕಗಳನ್ನು ಅನಂತರ ಪರಿಶೀಲಿಸಿದ್ದಾರೆ. ಇದರಲ್ಲಿ ಮೊದಲನೆಯದು ಮುಖ್ಯವಾದುದು. “ಈ ಶ್ಲೋಕದಲ್ಲಿ ಕ್ಷರಭೂತ ಎಂದೂ ಅಕ್ಷರ ಭೂತ ಎಂದೂ ಇಬ್ಬರು ಪುರುಷರು ಉಂಟು. ಚತುರ್ಮುಖನೇ ಮೊದಲಾದ ಸಮಸ್ತ ಪ್ರಾಣಿಗಳೂ ಕ್ಷರ ಪುರುಷರು. ಅಕ್ಷರಃ=ದೇಹನಾಶವಿಲ್ಲದ ಮಹಾಲಕ್ಷ್ಮಿಯು ಅಕ್ಷರ ಪುರುಷಳೆನಿಸಿಕೊಳ್ಳುವಳು. ಉತ್ತಮ ಪುರುಷನು ಈಕ್ಷರಾಕ್ಷರ ಪುರುಷರಿಗಿಂತ ಭಿನ್ನನಾದವನು.ಆತನೇ ಪರಮಾತ್ಮನೆಂದು ಶ್ರುತ್ಯಾದಿಗಳಲ್ಲಿ ಹೇಳಿಸಿಕೊಳ್ಳುತ್ತಾನೆ” (ಪು ೫೪೬). ಹೀಗೆ ಕ್ಷರಅಕ್ಷರ ಪ್ರಾಣಿಗಳಲ್ಲಿ ಜೀವನಿಗೆ ಪರಮಾತ್ಮನಿಂದ ಭೇದವನ್ನು ಹೇಳಿ ಈ ಭೇದಜ್ಞಾನವು ಮೋಕ್ಷ ಸಾಧನವು ಎಂದು ಹೇಳಿದೆ.

ಹೀಗೆ ಗೀತೆಯಲ್ಲಿ ಜೀವೇಶ್ವರ ಭೇದವು ಪ್ರತಿಪಾದಿತವಾಗಿದೆ ಎಂದು ಇಲ್ಲಿ ಸ್ಥಾಪಿಸಿದ್ದಾರೆ (೫೨೩-೫೫೩)

ನಾಲ್ಕನೆಯ ಇಸ್ಯು ಪರಮಾತ್ಮನು ಸರ್ವಗುಣ ಸಂಪನ್ನ ಎಂದರೆ ಪರಬ್ರಹ್ಮನು ಸರ್ವಜ್ಞತ್ವ, ಸರ್ವಶಕ್ತಿಮತ್ವ, ಜಗತ್ಕರ್ತೃತ್ವ, ಪಾಲಕತ್ವ, ಸರ್ವನಿಯಾಮಕತ್ವ, ಸ್ವತಂತ್ರತ್ವ, ಸರ್ವಸಂಹಾರಕತ್ವ, ಜ್ಞಾನದಾತೃತ್ವ, ಸರ್ವೋತ್ತಮತ್ವ, ವಿಚಿತ್ರಶಕ್ತಿಮತ್ವ, ಚಂದ್ರಸೂರ್ಯಾದ್ಯಾಧಾರತ್ವ, ಸರ್ವಪ್ರಕಾಶತ್ವ, ಕರ್ಮಫಲದಾತೃತ್ವ, ಸರ್ವಾಶ್ರಯತ್ವ, ಸಾಕ್ಷಾದ್ದ್ರಷ್ಟೃತ್ವಾದಿ ಸಮಸ್ತ ಕಲ್ಯಾಣಗುಣಗಳಿಂದ ಪೂರ್ಣನು ಎಂದು ಪ್ರತಿಪಾದಿಸುತ್ತದೆ. ಇಂತಹ ಒಂದು ಪ್ರತಿಪಾದನೆ ಅಗತ್ಯವಾದುದು ಬ್ರಹ್ಮ ನಿರ್ಗುಣ ನಿರ್ವಿಶೇಷ ಎಂಬ ಅದ್ವೈತಿಗಳ ವಾದದಿಂದ. ಇದರಿಂದಾಗಿ ಅದ್ವೈತಿಗಳು ಉಲ್ಲೇಖಿಸಿದ ಅದೇ ಮಂತ್ರಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಿ ಬ್ರಹ್ಮ ಸರ್ವಗುಣ ಸಂಪನ್ನನೆಂದು ಸ್ಥಾಪಿಸಿರುವುದು ಇಲ್ಲಿಯ ವೈಶಿಷ್ಟ್ಯ.

ಇಲ್ಲಿ ಹಲವು ಆಧಾರ ವಾಕ್ಯಗಳು ಪ್ರಸ್ತಾವಿತವಾಗಿವೆ. ಅವುಗಳಲ್ಲಿ ಪ್ರಾತಿನಿಧಿಕವಾಗಿ ಮೂರು ಆಧಾರ ವಾಕ್ಯಗಳನ್ನು ಇಲ್ಲಿ ಉದಾಹರಿಸಿದೆ: ನಿರ್ಗುಣಂ ಗುಣ ಭೋಕ್ತೃಂಚ ಎಂಬ ಗೀತಾ ವಾಕ್ಯ, ಕೇವಲೋ ನಿರ್ಗುಣಶ್ಚ ಎಂಬ ಶ್ವೇತಾಶ್ವೇತರೋಪನಿಷತ್ತಿನ ವಾಕ್ಯ ಮತ್ತು ನಸ್ಥಾನತೋಪಿಪರಸ್ಯೋಭಯಲಿಂಗಂ ಸರ್ವತ್ರಹಿ ಎಂಬ ಬ್ರಹ್ಮ ಸೂತ್ರ. ತತ್ವವಾದದ ಪ್ರಕಾರ ನಿರ್ಗುಣಂ ಗುಣ ಭೋಕ್ತೃಂಚ ಎಂಬಲ್ಲಿರುವ ನಿರ್ಗುಣಂ ಪದಕ್ಕೆ ಸತ್ವರಜಸ್ತಮೋ ಗುಣ ವಿವರ್ಜಿತನೆಂದು ಮಾತ್ರ ಅರ್ಥ; ಸರ್ವಜ್ಞತ್ವ, ಸರ್ವಶಕ್ತಿತ್ವ, ಸರ್ವ ವ್ಯಾಪ್ತತ್ವ ಇತ್ಯಾದಿಗುಣ ಸಂಪನ್ನನೇ ಹೌದು. ಈ ವಾಕ್ಯಕ್ಕೆ ಅದ್ವೈತದ ಪ್ರಕಾರವೂ ಇದೇ ಅರ್ಥ ಎಂಬುದಾಗಿ ಇಲ್ಲಿ ಪ್ರತಿವಾದಿಯಾಗಿರುವ ಗಂಗಾಧರ ಶಾಸ್ತ್ರಿ ಹೇಳುತ್ತಾರೆ. ಕೇವಲೋ ನಿರ್ಗುಣಶ್ಚ ಎಂಬ ಶ್ರುತಿಯ ಪೂರ್ವದಲ್ಲಿ ಏಕೋದೇವಸ್ಸರ್ವಭೂತೇಷು ಗೂಢಃ ಸರ್ವ ವ್ಯಾಪೀ ಸರ್ವಭೂತಾಂತರಾತ್ಮಾll ಕರ್ಮಾಧ್ಯಕ್ಷಃ ಸರ್ವಭೂತಾಧಿವಾಸಃl ಸಾಕ್ಷೀ ಚೇತಾ ಎಂದಿದೆ (೫೯೦). ಇದರ ಅರ್ಥವು ಇದೇ ಗಂಗಾಧರ ಶಾಸ್ತ್ರಿಗಳು ಹೇಳಿದಂತೆ ಮತ್ತು ತತ್ವವಾದ ಪರ ವಕೀಲರು ಒಪ್ಪಿದಂತೆ ಹೀಗಿದೆ: ಏಕಃ= ಒಬ್ಬನೇ (ಎರಡನೆಯ ವಸ್ತುವಿಲ್ಲದವನು) ದೇವಃ = ಕ್ರೀಡಾದಿ ಗುಣಗಳಿಂದ ಕೂಡಿದವನು ಸರ್ವಭೂತೇಷು ಗೂಢಃ = ಸರ್ವ ಪ್ರಾಣಿಗಳಲ್ಲಿಯೂ ಇರುವವನು, ಸರ್ವವನ್ನೂ ವ್ಯಾಪಿಸಿಕೊಂಡಿರುವವನು; ಇಷ್ಟೇ ಅಲ್ಲ! ಸರ್ವ ಪ್ರಾಣಿಗಳಲ್ಲಿದ್ದು ನಿಯಮಿಸುವವನು, ಕರ್ಮಾಧ್ಯಕ್ಷಃ = ಪ್ರಾಣಿಗಳಿಂದ ಮಾಡಲಪಟ್ಟ ಕರ್ಮಗಳಿಗೆ ಫಲಗಳನ್ನು ಕೊಡುವವನು, ಸರ್ವಭೂತಾಧಿವಾಸಃ = ಸರ್ವ ಭೂತಗಳಿಗೂ ಆಶ್ರಯನು, ಸಾಕ್ಷೀ = ಸರ್ವವನ್ನೂ ನೋಡುವವನು, ಕೇವಲ ಶುದ್ಧನು, ನಿರ್ಗುಣಃ = ಸತ್ವ ರಜಸ್ತಮೋ ಗುಣಗಳಿಂದ ರಹಿತನು  (ಅಲ್ಲಿಯೇ). ಏಕೋ ದೇವಃ ಮತ್ತು ಸರ್ವ ಭೂತಾಂತರಾತ್ಮಾ (ದೇವನು ಒಬ್ಬ ಮತ್ತು ಅವನನು ಸರ್ವ ಪ್ರಾಣಿಗಳನ್ನು ನಿಯಮಿಸುವವನು) ಎಂಬ ಎರಡು ಪದಗಳಿಂದ ಬ್ರಹ್ಮಾತಿರಿಕ್ತವಾದ ಎರಡನೆಯ ವಸ್ತುವಿದೆಯೆಂದು ಸಿದ್ಧಿಸುತ್ತದೆ (೫೯೧).  ನಸ್ಥಾನತೋಪಿಪರಸ್ಯೋ ಭಯಲಿಂಗಂ ಸರ್ವತ್ರಹಿ ಎಂಬುದು ಬ್ರಹ್ಮ ಸೂತ್ರ (೩-೨-೧೧ ಇದನ್ನು ಈ ಪುಸ್ತಕದ ಪು ೬೦೪ರಲ್ಲಿ ೩-೨-೨ಎಂದು ತಪ್ಪಾಗಿ ಮುದ್ರಿಸಿದೆ). ಸ್ಥಾನತಃ = ಸ್ಥಾನದ ಸಂಬಂಧದಿಂದಾಗಿ ಅಪಿ = ಕೂಡ ಪರಸ್ಯ = ಪರ ಬ್ರಹ್ಮನಿಗೆ ನ =ಯಾವುದೇ ತರಹದ ದೋಷದೊಡನೆ ಸಂಸರ್ಗವು ಆಗುವುದಿಲ್ಲ ಹಿ = ಏಕೆಂದರೆ ಸರ್ವತ್ರ = ಎಲ್ಲ ವೇದವಾಕ್ಯಗಳೂ  ಆ ಪರಬ್ರಹ್ಮನನ್ನು ಉಭಯಲಿಂಗಂ = ಎರಡೂ ತರಹದ ಲಕ್ಷಣಗಳಿಂದ ಯುಕ್ತ ಎಂದರೆ ಸರ್ವ ಪ್ರಕಾರ ದೋಷರಹಿತನು ಈ ರೀತಿಯಲ್ಲಿ ನಿರ್ವಿಶೇಷನು. ಈ ಪ್ರತಿಪದಾರ್ಥ ನಿರ್ವಚನದಲ್ಲಿ ಶಂಕರ ಮತ್ತು ಮಧ್ವರಲ್ಲಿ ಗಣನೀಯ ವ್ಯತ್ಯಾಸವೇನೂ ಇಲ್ಲ. ಆದರೆ ನಿರ್ವಿಶೇಷನೆಂದರೆ ಸರ್ವಗುಣ ರಹಿತನೆಂಬುದು ಶಾಂಕರ ಅರ್ಥವಾದರೆ ಸತ್ವರಜಸ್ತಮೋ ಗುಣ ರಹಿತನಾಗಿದ್ದು ಸರ್ವಗುಣ ಸಂಪನ್ನನೆಂಬುದು ಮಧ್ವಮತದ ಪ್ರತಿಪಾದನೆ. ನಿರ್ವಿಶೇಷನೆಂಬುದಕ್ಕೆ ಇತರೆಡೆಗಳಲ್ಲಿಯೂ ಈ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಮತ್ತು ಶಂಕರ ಭಾಷ್ದಲ್ಲಿಯೇ ಈ ಪದಕ್ಕೆ ಸತ್ವರಜಸ್ತಮೋ ಗುಣ ವಿರಹಿತ ಎಂಬರ್ಥ ಹಲವು ಕಡೆ ನಿರ್ವಚಿತವಾಗಿದೆ. 

ಈ ಇಸ್ಯುದ ಉಪಸಂಹಾರ ರೂಪವಾಗಿ ಗ್ರಂಥಕರ್ತರು ಹೀಗೆ ತೀರ್ಮಾನಿಸಿರುವುದು ಸಯುಕ್ತಿಕವಾಗಿದೆ: “ಹೀಗೆ ಬ್ರಹ್ಮನು ಸರ್ವಜ್ಞತ್ವಾದಿ ಅನಂತ ಗುಣಗಳಿಂದ ಕೂಡಿದವನೆಂಬ ವಿಷಯದಲ್ಲಿ ಶ್ರುತಿ, ಸೂತ್ರ, ಗೀತರೂಪವಾದ ಪ್ರಸ್ಥಾನತ್ರಯದ ಆಧಾರಗಳು ಇವೆ, ಬ್ರಹ್ಮನು ಸರ್ವಜ್ಞತ್ವಾದಿ ಗುಣರಹಿತನು ಎಂಬ ವಿಷಯದಲ್ಲಿ ಒಂದು ಆಧಾರವೂ ಇಲ್ಲ. ಆದುದರಿಂದ ಬ್ರಹ್ಮನು ಸರ್ವಜ್ಞತ್ವಾದಿ ಅನಂತಗುಣಗಳಿಂದ  ಯುಕ್ತನು” (ಪು ೬೪೦). ಪರಮಾತ್ಮನು ಸರ್ವಜ್ಞತ್ವ, ಸರ್ವ ಶಕ್ತಿಮತ್ವ, ಜಗತ್ಕರ್ತೃತ್ವ, ಪಾಲಕತ್ವ, ಮುಕ್ತಾಮುಕ್ತನಿಯಾಮಕತ್ವ,  ಸರ್ವಸ್ಡಾಮಿತ್ವ, ಜ್ಞಾನದಾತೃತ್ವ ಇತಾದಿ ಸರ್ವಗುಣ ಸಂಪನ್ನನು (ಪು ೬೦೫).

ಇಸ್ಯು ೫ ಈ ಗ್ರಂಥದಲ್ಲಿ ದಾಖಲಾದ ವಾದ-ವಿವಾದಗಳ ಸರಣಿಯಲ್ಲಿ ತತ್ವವಾದ ಪರರಿಂದ ಅಂತಿಮ ವಾದಘಾತ. ಇದರಲ್ಲಿ ಅದ್ವೈತ ಮತ ಮತ್ತು ಬೌದ್ಧ ಮತಗಳನ್ನು ತುಲನಾತ್ಮಕವಾಗಿ ನೋಡಲಾಗಿದೆ. ಅದ್ವೈತವು ವೈದಿಕ ಭಾಷೆಯಲ್ಲಿ ನಿರೂಪಿಸಲಾದ ಬೌದ್ಧಮತವೇ ಆಗಿದೆ; ಹೀಗಾದ್ದರಿಂದ ಅದು ಅವೈದಿಕ ಎಂಬುದು ಇಲ್ಲಿರುವ ಮುಖ್ಯ ವಾದ. ಹಿಂದಿನ ಅಧ್ಯಾಯಗಳಲ್ಲಿ ವೇದ ಮಂತ್ರಗಳನ್ನು ಪ್ರಸ್ತಾವಿಸಿ ಅವು ಲೋಕದ ಮಿಥ್ಯಾತ್ವವನ್ನಾಗಲೀ ಪರಮಾತ್ಮನ ನಿರ್ಗುಣತ್ವ ನಿರ್ವಿಶೇಷತ್ವಗಳನ್ನಾಗಲೀ ಪ್ರತಿಪಾದಿಸದೆ ತತ್ವವಾದವನ್ನೇ ಪ್ರತಿಪಾದಿಸುತ್ತವೆ ಎಂಬುದನ್ನು ಘನತರವಾಗಿ ಸ್ಥಾಪಿಸಿದ್ದಾರೆ. ಹೀಗಾಗಿ ೫ನೆಯ ಇಸ್ಯುದಲ್ಲಿ ವೇದ ಮಂತ್ರಗಳಿಗೆ ಅದ್ವೈತ ಪರ ಅರ್ಥಗಳು ಅವುಗಳ ಖಂಡನೆ ಅರ್ಥವನ್ನು ನೇರ್ಪುಗೊಳಿಸುವುದು ಇಂತಹ ಪ್ರಕ್ರಿಯೆಗಳು ಇಲ್ಲ. ಬದಲಾಗಿ ಇತರಮೂಲಗಳಿಂದ ಬೌದ್ಧವಾದ, ವಿಜ್ಞಾನ ವಾದ ಇಂತಹವುಗಳನ್ನು ಪ್ರಸ್ತಾವಿಸಿ ಹೇಗೆ ಇವುಗಳೇ ಅದ್ವೈತ ಮತ್ದಲ್ಲಿಯೂ ಪ್ರಸಕ್ತವಾಗಿವೆ ಎಂಬುದನ್ನು ವಿವರಿಸಿದ್ದಾರೆ. 

ತಮ್ಮದು ಬೌದ್ಧಮತದ ಮತ್ತೊಂದು ಅವತರಣಿಕೆಯಲ್ಲ ಎಂಬುದಕ್ಕೆ ಅದ್ವೈತವಾದಿಗಳ ಸಮರ್ಥನೆ ಎಂದರೆ ತಮ್ಮ ಮತ ಸಂಧ್ಯಾವಂದನಾದಿ ವೈದಿಕ ಕರ್ಮಗಳನ್ನು ಒಪ್ಪುತ್ತದೆ; ಜಗತ್ತನ್ನು ಮತ್ತು ಜಗತ್ತಿನಲ್ಲಿರುವ ಭೇದಗಳನ್ನು ವ್ಯವಹಾರಿಕ ಸತ್ಯವೆಂದು ಒಪ್ಪುತ್ತದೆ. ಬೌದ್ಧಮತವು ಇವಾವುದನ್ನೂ ಒಪ್ಪುವುದಿಲ್ಲ ಎಂಬುದು. ಇದಕ್ಕೆ ಪ್ರತಿವಾದವೆಂದರೆ ಅದ್ವೈತ ಸಿದ್ಧಾಂತದಲ್ಲಿ ಆತ್ಯಂತಿಕವಾಗಿ ಬ್ರಹ್ಮಾನುಭವವೇ ಮುಖ್ಯವಾಗಿದ್ದು ಅದು ಜ್ಞಾನರೂಪ ಮತ್ತು ಆನಂದ ರೂಪವಾದುದು (ಪು ೬೮೫); ಕೆಲವು ಅದ್ವೈತ ಗ್ರಂಥಗಳಲ್ಲಿ ಶೂನ್ಯವು ಸತ್ಯಸ್ವರೂಪವೆಂದೂ ಹೇಳಿದೆ (ಪು ೬೮೫). ಬೌದ್ಧರ ಶೂನ್ಯವೂ ಇದೇ ಸ್ವರೂಪಪದ್ದು. ಆದ್ದರಿಂದ ಅದ್ವೈತ ಮತವು ಬೌದ್ಧ ಮತವನ್ನೇ ಇನ್ನೊಂದು ಬಗೆಯಾಗಿ ಹೇಳಿದ್ದು ಎಂಬುದು ತತ್ವವಾದಪರ ನಿಲುವು.

  ದ್ವೈತಾದ್ವೈತ ಮತಗಳೆರಡೂ ವೇದಮಂತ್ರಗಳನ್ನು ಅರ್ಥೈಸುವುದರಿಂದಲೇ ಪ್ರಾರಂಬವಾದುವು. ಎರಡೂ ಪ್ರಸ್ಥಾನತ್ರಯಕ್ಕೆ ಭಾಷ್ಯ, ವ್ಯಾಖ್ಯಾನ ಇತ್ಯಾದಿಗಳ ರಚನೆಯಿಂದಲೇ ಪ್ರತಿಪಾದಿತವಾದುವು. ಈ ದೃಷ್ಟಿಯಿಂದ ನೋಡಿದಾಗ ಅದ್ವೈತವು ವೇದ ಮಂತ್ರಗಳ ಒಂದು ರೀತಿಯ ಅರ್ಥ ನಿರೂಪಣೆ ಮತ್ತು ತದಾಚರಣೆಗಳ ಪದ್ಧತಿ; ದ್ವೈತ ಮತವು ವೇದ ಮಂತ್ರಗಳ ಅರ್ಥವನ್ನು ನೇರ್ಪುಗೊಳಿಸುವ ಆದ್ದರಿಂದ ಭಿನ್ನವಾದ ರೀತಿ ಮತ್ತು ತದನುಸಾರ ಆಚರಣೆಗಳ ಪದ್ಧತಿ. ಈ ಗ್ರಂಥದಲ್ಲಿಯೇ ಪ್ರತಿವಾದಿ ಹೇಳಿರುವಂತೆ ಯಜ್ಞ ಸ್ವರ್ಗಾದಿ ಲೋಕಗಳು ಬ್ರಾಹ್ಮಣಾದಿ ವರ್ಣಗಳು ಉಪಾಸನಾಗಳು ಇವೇ ಮೊದಲಾದ ಜಗತ್ತು ಸುಳ್ಳು ಆದಗ್ಯೂ ಆ ಕರ್ಮವನ್ನು ಮತ್ತು ಉಪಾಸನವನ್ನು ಮಾಡುವ ಮನುಷ್ಯನಿಗೆ ಅಂತಃಕರಣ ಶುದ್ಧಿಯಾಗುತ್ತದೆ. ಶುದ್ಧವಾದ ಅಂತಃಕರಣ ಉಳ್ಳ ಅಧಿಕಾರಿಗೆ ವೇದಾಂತ ಶಾಸ್ತ್ರವು ಬ್ರಹ್ಮನ ಯಥಾರ್ಥ ಜ್ಞಾನವನ್ನು ಹುಟ್ಟಿಸಿಕೊಡುತ್ತದೆ (ಪು೬೯೭). 

ಇಲ್ಲಿ ಪ್ರಸ್ತಾವಿತವಾಗಿರುವ ದ್ವೈತಮತ ತತ್ವಗಳಾಗಲೀ ಅದ್ವೈತಮತ ತತ್ವಗಳಾಗಲೀ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ತಿಳಿಸುವಂತಹವಲ್ಲ. ಅವು ಯಾವ ನೆಲೆಯಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸ ಬೇಕು ಮತ್ತು ಯಾವ ಮಾರ್ಗದಲ್ಲಿ ಮುಂದುವರೆಯಬೇಕು ಎಂಬ ಬಗ್ಗೆ ಇರರುವಂತಹವು. ದೇವರೇ ಎಲ್ಲ, ಈ ಪ್ರಪಂಚವಿಲ್ಲ ಎಂಬುದು ಸಾಧಕನಿಗೆ ಅದ್ವೈತ ಸಿದ್ಧಪಡಿಸಿಕೊಡುವ ನೆಲಗಟ್ಟಾದರೆ ಈ ಪ್ರಪಂಚವಿದೆ ಮತ್ತು ಇದರ ಮೂಲಕವೇ ದೇವರ ಸಾಕ್ಷಾತ್ಕಾರವಾಗ ಬೇಕು ಎಂಬುದು ತತ್ವವಾದ ಒದಗಿಸಿಕೊಡುವ ನೆಲೆ. ಹಾಗೆಯೇ ಪರಮಾತ್ಮ ನಿರ್ಗುಣ ಎಂದು ಭಾವಿಸಿ ಅದ್ವೈತಾನುಯಾಯಿ ಸಾಧನೆಯನ್ನು ಪ್ರಾರಂಭಿಸಬೇಕಾಗಿದೆಯಾದರೆ ಪರಮಾತ್ಮ ಸರ್ವಗುಣ ಸಂಪನ್ನ ಎಂಬ ಪೂಜೆಯೊಂದಿಗೆ ತತ್ವವಾದಪರನು ಸಾಧನೆಯಲ್ಲಿ ತೊಡಗಬೇಕಾಗುತ್ತದೆ.

ಒಟ್ಟಿನಲ್ಲಿ ಪುಸ್ತಕವು ಆಸಕ್ತಿದಾಯಕ ಮತ್ತು ಜ್ಞಾನದಾಯೀ ಓದನ್ನುನೀಡುತ್ತದೆ ಎನ್ನಬಹುದು.