Search This Blog

Friday, 20 January 2017

ರವೀಂದ್ರನಾಥ ಟ್ಯಾಗೋರರ ಜೀವನದ ಬಗ್ಗೆ ಒಂದು ಟಪ್ಪಣಿ





ರವೀಂದ್ರನಾಥ ಟ್ಯಾಗೋರರ ಜೀವನದ ಬಗ್ಗೆ ಒಂದು ಟಪ್ಪಣಿ


               ನೋಬೆಲ್ ಪಾರಿತೋಷಕ ಪಡೆದ ಪ್ರಥಮ ಭಾರತೀಯನೆಂದೂ, ಸಾಂಸ್ಕೃತಿಕ ಜಗತ್ತಿನಲ್ಲಿ ಭಾರತದ ಗರಿಮೆಯನ್ನು ಎತ್ತಿ ಹಿಡಿದ ಮಹನೀಯನೆಂದೂ ರಾಷ್ಟ್ರ ಹೆಮ್ಮೆ ಪಡುವ ವ್ಯಕ್ತಿ ರವೀಂದ್ರನಾಥ ಟ್ಯಾಗೋರರು. ಬಂಗಾಳದ ಬ್ರಾಹ್ಮಣ ಕಟುಂಬವೊಂದರಲ್ಲಿ ಹುಟ್ಟಿ ಅಂತರರಾಷ್ಟ್ರೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಭಾರತೀಯ ಸಮಾಜಕ್ಕೂ ಸಾಹಿತ್ಯಕ್ಕೂ ಕೊಡುಗೆಗಳನ್ನು ನೀಡಿದವರು ಇವರು.ಗೀತಾಂಜಲಿ, ನೋಬೆಲ್ ಬಹುಮಾನ, ಶಾಂತಿನಿಕೇತನ, ರವೀಂದ್ರನಾಥ ಟ್ಯಾಗೋರರು, ಗುರುದೇವ, ಜನಗಣಮನ – ಇವೆಲ್ಲ ನಮಗೆ ಪರ್ಯಾಯ ಪದಗಳಂತೆ ಕಾಣುತ್ತವೆ.
            ದೇವೇಂದ್ರನಾಥ ಟ್ಯಾಗೋರ್ ಮತ್ತು ಶಾರದಾ ದೇವಿಯರ ಮಗನಾಗಿ ಕ್ರಿ ಶ ಸಾವಿರದ ಎಂಟುನೂರ ಅರವತ್ತೊಂದರ ಮೇ ಆರರಂದು ಕೊಲ್ಕೊತ್ತಾದ ಜೋರಸೆಂಕೋ ಎಂಬಲ್ಲಿ ಹುಟ್ಟಿದವರು ರವೀಂದ್ರರು. ಇವರು ತಮ್ಮ ತಂದೆ ತಾಯಿಗಳಿಗೆ ಹದಿನಾಲ್ಕನೆಯ ಮಗು. ಕುಟುಂಬ ದೊಡ್ಡದಾಗಿತ್ತಾದ್ದರಿಂದ ತಾಯಿ ಶಾರದಾ ದೇವಿಯವರಿಗೆ ಹೆಚ್ಚಿನ ಜವಾಬ್ದಾರಿಗಳಿದ್ದು ಮಗನನ್ನು ನೋಡಿಕೊಳ್ಳಲು ಬಿಡುವೇ ಇರುತ್ತಿರಲಿಲ್ಲ. ಆದ್ದರಿಂದ ಮನೆಯ ನೌಕರರೇ ರವೀಂದ್ರನನ್ನು ನೋಡಿಕೊಳ್ಳು ವಂತಾಯಿತು. ಹೀಗೆ ಮುಂದೆ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಈ ವ್ಯಕ್ತಿ ಬಾಲ್ಯದಲ್ಲಿ ತಂದೆತಾಯಿಗಳ ಅಥವ ಹತ್ತಿರದ ಸಂಬಂಧಿಕರ ಮುದ್ದು ಕಂಡವರಲ್ಲ. ಹಿರಿಯರು ಶ್ರೀಮಂತರಾದರೂ ಇವರು ಇರುತ್ತಿದ್ದುದು ಹೊರಕೋಣೆಯಲ್ಲಿ ಕೆಲಸದವರೊಡನೆ. ಅಣ್ಣ ಸೋಮೇಂದ್ರನಾಥ ಮತ್ತು ಅಕ್ಕನ ಮಗ ಸತ್ಯಪ್ರಸಾದ ಇವರೂ ರವೀಂದ್ರರ ಜೊತೆ ಬೆಳೆದರು.
            ಹೀಗಿದ್ದರೂ ರವೀಂದ್ರರು ತಮ್ಮ ಕುಟುಂಬದ ಹಿನ್ನೆಲೆಗೆ ತಕ್ಕ ವ್ಯಕ್ತಿಯಾಗಿಯೇ ರೂಪುಗೊಂಡರು. ತಂದೆ ದೇವೇಂದ್ರನಾಥರು ರಾಜಾರಾಮರಾಯ್ ಇವರು ಸ್ಥಾಪಿಸಿದ್ದ ಬ್ರಹ್ಮ ಸಮಾಜವನ್ನ ಪುನಶ್ಚೇತನಗೊಳಿಸಿದವರಲ್ಲಿ ಒಬ್ಬರು. ಉಪನಿಷತ್ತುಗಳಲ್ಲಿ ಅವರಿಗೆ ತೀವ್ರ ಆಸಕ್ತಿ ಮತ್ತು ವಿದ್ವತ್ತು ಇತ್ತು. ಶುದ್ಧಮತ್ತು ಸರಳ ಜೀವಿ. ಸುತ್ತಲಿನ ಜನರಿಂದ ಅವರು ಮಹರ್ಷಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ತಾಯಿ ಶಾರದಾ ದೇವಿ ಧಾರ್ಮಿಕ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದರು. ಹಿರಿಯ ಅಣ್ಣ ದ್ವಿಜೇಂದ್ರನಾಥರು  ಕಾವ್ಯ, ತತ್ವಶಾಸ್ತ್ರ, ಗಣಿತ, ಸಾಹಿತ್ಯಗಳಲ್ಲಿ ಸಾಕಷ್ಟು ಪರಿಣತ. ಎರಡನೆಯ ಅಣ್ಣ ಸತ್ಯೇಂದ್ರನಾಥ ಐಸಿಎಸ್ಸಿಗೆ ಆಯ್ಕೆಯಾದ ಪ್ರಥಮ ಭಾರತೀಯ. ದೇವೇಂದ್ರನಾಥರ ಐದನೆಯ ಮಗ ಜ್ಯೋತೀಂದ್ರನಾಥ ಒಬ್ಬ ಪ್ರತಿಭಾವಂತ ಚಿತ್ರಕಾರ, ಸಂಗೀತಗಾರ ಮತ್ತು ನಾಟಕಕಾರ. ಅವನ ಪತ್ನಿ ಕಾದಂಬರೀ ದೇವಿ ಟ್ಯಾಗೋರರ ಕುಟುಂಬದೊಳಗೆ ಬಂಗಾಳಿ ಸಾಹಿತ್ಯ, ನಾಟಕ, ಸಂಗೀತ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ರವೀಂದ್ರರ ಅಭಿರುಚಿ ರೂಪಿಸುವಲ್ಲಿ ಇವರದು ಮುಖ್ಯ ಪಾತ್ರ. ರವೀಂದ್ರ ಸೋದರಿ ಸ್ವರ್ಣಕುಮಾರಿ ಆಧುನಿಕ ಭಾರತೀಯ ಭಾಷೆಯೊಂದರಲ್ಲಿ ಬರೆಯಲು ಪ್ರಾರಂಭಿಸಿದ ಪ್ರಥಮ ಮಹಳಾ ಸಾಹಿತಿ. ಟ್ಯಾಗೋರ್ ಕುಟುಂಬದವರು ತಮ್ಮದೇ ಪತ್ರಿಕೆಯನ್ನೂ, ಕಾವ್ಯ ಕಮ್ಮಟಗಳನ್ನೂ ನಡೆಸುತ್ತಿದ್ದರು. ರವೀಂದ್ರನಾಥರು ಸಾಹಿತ್ಯ, ಶಿಕ್ಷಣ, ಸಂಗೀತ, ಚಿತ್ರಕಲೆಗಳಲ್ಲಿ ಪ್ರವೀಣರಾದುದು ಕುಟುಂಬ ಗೌರವಕ್ಕೆ ಗರಿಮೂಡಿದಂತಾಯಿತು.
            ರವೀಂದ್ರರು ಬಾಲ್ಯದಲ್ಲಿ ಓದಿದ ಶಾಲೆಗಳೆಂದರೆ ಕೊಲ್ಕೊತ್ತೆಯ ಓರಿಯಂಟಲ್ ಸೆಮಿನರಿ ಸ್ಕೂಲ್ ಮತ್ತು ಸಂತ ಸೇವಿಯರ್ ಸ್ಕೂಲ್, ಇಂಗ್ಲೆಂಡಿನ ಬ್ರೈಟನ್ ಪಟ್ಟಣದಲ್ಲಿನ ಶಾಲೆ ಮತ್ತು ಅನಂತರ ಲಂಡನ್ನಿನ ಯೂನಿವರ್ಸಿಟಿ ಕಾಲೇಜು. ಶಾಲಾ ಜೀವನ ಇವರಿಗೆಂದೂ ಹರ್ಷದಾಯಕವಾಗಿರಲಿಲ್ಲವಾದರೂ ಅಂತಹ ಸನ್ನಿವೇಶದಲ್ಲಿಯೇ ತನ್ನನ್ನು ತಾನು ನಿರ್ಮಿಸಿಕೊಳ್ಳುವ ಅಪುರೂಪದ ವ್ಯಕ್ತಿಯಾಗಿ ಬೆಳಗಿದರು. ಜೀವನವಿಡೀ ಅವರು ಓದಿದರು. ಆಸಕ್ತಿವಹಿಸಿ ಚಟುವಟಿಕೆಗಳಲ್ಲಿ ತೊಡಗಿದರು. ಅವರಿಗೆ ಮನೆಯಲ್ಲಿ ಪಾಠ ಕಲಿಸಲು ಖಾಸಗಿ ಅಧ್ಯಾಪಕರನ್ನು ಗೊತ್ತು ಮಾಡಿದ್ದರು. ಮನೆಯಲ್ಲಿ ಇವರು ಅಧ್ಯಯನ ಮಾಡಿದ ಕಾವ್ಯಗಳೆಂದರೆ ಮೇಘನಾದ ವಧ, ವಾಲ್ಮೀಕಿ ರಾಮಾಯಣ ಮತ್ತು ಅಮರುಶತಕ.
            ರವೀಂದ್ರರಿಗೆ ಹದಿನಾಲ್ಕು ವರ್ಷ ವಯಸ್ಸಿದ್ದಾಗ ಅವರ ತಾಯಿ ತೀರಿಕೊಂಡರು. ಅತ್ತಿಗೆ ಕಾದಂಬರಿ ದೇವಿ ತಾಯಿಯ ಸ್ಥಾನವನ್ನು ಸ್ವಲ್ಪಮಟ್ಟಿಗೆ ತುಂಬಿದರಾದರೂ ಅವರ ಒಂಟಿತನವನ್ನು ಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಕ್ರಿ ಶ 1883ರಲ್ಲಿ ಭವತಾರಿಣಿ ಎಂಬ ಹತ್ತು ವರ್ಷ ತುಂಬಿರದ ಹುಡುಗಿಯೊಡನೆ ಇವರ ವಿವಾಹವಾಯಿತು. ಮದುವೆಯನಂತರ ಇವರ ಹೆಸರನ್ನು ಮೃಣಾಲಿನಿ ಎಂದು ಬದಲಿಸಲಾಯಿತು. ರವೀಂದ್ರರ ವಿವಾಹದನಂತರ ಕ್ರಿ ಶ 1884ರಲ್ಲಿ ಕಾದಂಬರೀ ದೇವಿ ಅಫೀಮು ತಿಂದು ಆತ್ಮಹತ್ಯೆಮಾಡಿಕೊಂಡರು. ಇದು ಅವರಿಗೆ ಆಘಾತಕರವಾಯಿತು.
            ಮೃಣಾಲಿನಿ ಮತ್ತು ರವೀಂದ್ರರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಾದರು. ಮಾಧುರೀಲತಾ ದೇವಿ ಅಥವ ಬೇಲಾ, ರಾಣಿ  ಅಥವ ರೇಣುಕಾ ಮತ್ತು ಮೀರಾ ದೇವಿ ಅಥವ ಅತಸಿ  – ಇವು ಹೆಣ್ಣು ಮಕ್ಕಳ ಹೆಸರುಗಳು. ರತೀಂದ್ರನಾಥ ಮತ್ತು ಸಮೀಂದ್ರನಾಥ ಎಂಬ ಇಬ್ಬರು ಗಂಡು ಮಕ್ಕಳು. ಮೃಣಾಲಿನಿ ತನ್ನ ಪತಿ ಮತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಸಾಹಿತ್ಯ ಮತ್ತು ಕಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಭಾಗವಹಿಸುತ್ತಾ ಪದದ ನಿಜವಾದ ಅರ್ಥದಲ್ಲಿ ಬಾಳಸಂಗಾತಿಯಾಗಿದ್ದರು. ಆದರೆ ಗುರುತು ಹಿಡಿಯಲಾಗದ ಕಾಹಿಲೆ ಬಂದು ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಕ್ರಿ ಶ 1902ರಲ್ಲಿ ಕೊನೆಯುಸಿರೆಳೆದರು. ಇದು ಕವಿಯ ಒಂಟಿತನವನ್ನು ಮತ್ತಷ್ಟು ಹೆಚ್ಚಿಸಿತು.
            ರವೀಂದ್ರರು ತಮ್ಮ ಜೀವನದ ಮುಂಬಾಗಿಲಿನಲ್ಲೇ ಕವಿತಗಳನ್ನು ಬರೆಯಲು ಪ್ರಾರಂಭಿಸಿದರು. ರವೀಂದ್ರರಿಗೆ ಹನ್ನೊಂದು ವರ್ಷ ವಯಸ್ಸಿದ್ದಾಗ ತಂದೆ ದೇವೇಂದ್ರನಾಥರು ಅವರನ್ನು ಹಿಮಾಲಯದ ಕಡೆಗೆ ಪ್ರವಾಸ ಕರೆದುಕೊಂಡು ಹೋದರು. ಭೋಲ್ಪುರದಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ, ಶಾಂತಿನಿಕೇತನವೆಂಬ ಮನೆಯನ್ನು ಕಟ್ಟಿಸಿ, ಅಧ್ಯಯನ-ಧ್ಯಾನಗಳಲ್ಲಿ ತೊಡಗಿದ್ದರು. ವಿಶಾಲವಾದ ಬಯಲುಗಳು, ಎತ್ತರವಾದ ತಾಳೆಮರಗಳು ಮತ್ತು ನೀಲಾಕಾಶ ರವೀಂದ್ರರನ್ನು ಇಲ್ಲಿ ಆಕರ್ಷಿಸಿದವು. ಪೃಥ್ವಿಯ ಸೋಲು ಎಂಬ ಪದ್ಯವನ್ನು ಅವರು ಇಲ್ಲಿ ಬರೆದರು. ಕವಿತೆ ಬರೆಯುವ ಕಾರ್ಯ ಅವರಿಂದ ನಿರಂತರವಾಗಿ ಮುಂದುವರೆಯಿತು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ 1875ರಲ್ಲಿ ಭಾರತೀಯ ಸಂಸ್ಕೃತಿ ದರ್ಶನ ಪರಂಪರೆಗಳನ್ನು ಬಿಂಬಿಸುವ “ಹಿಂದಿಮೇಳ”ದಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರೆದುರು ಕವಿತೆ ಓದುವ ಅವಕಾಶ ಅವರಿಗೆ ದೊರೆಯಿತು. ಹದಿನಾರು ವರ್ಷ ವಯಸ್ಸಿದ್ದಾಗ “ಭಾರತಿ” ಎಂಬ ಪತ್ರಿಕೆಯ ಸಂಪಾದಕನ ಕೆಲಸವನ್ನು ಅವರು ನಿರ್ವಹಿಸಿದರು. ಈ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಾ ಗದ್ಯ ಬರವಣಿಗೆಯ ಸುಸಂಬದ್ಧ ಅಭ್ಯಾಸ ಇವರಿಗಾಯಿತು. ಹದಿನೇಳನೆಯ ವಯಸ್ಸಿನಲ್ಲಿ ‘ದಿ ಬ್ರೋಕನ್ ಹಾರ್ಟ್’, ಹದಿನೆಂಟನೆಯ ವಯಸ್ಸಿನಲ್ಲಿ ‘ಈವನಿಂಗ್ ಮೆಲಡಿ’, ‘ಸಾಂಗ್ ಆಫ್ ದಿ ಡಾನ್,’ ‘ನೇಚರ್ಸ್ ರಿಕ್ವಿಟಲ್’ – ಈ ಕವಿತಗಳನ್ನು ಬರೆದು ಪ್ರಕಟಿಸಿದರು. ಇವರ ಸಾಹಿತ್ಯಕಾರ್ಯ ಕವಿತೆಗಳಲ್ಲದೆ ನಾಟಕ, ಸಣ್ಣ ಕತೆ, ಕಾದಂಬರಿ, ಪ್ರಬಂಧ – ಈ ಕ್ಷೇತ್ರಗಳಲ್ಲಿಯೂ ನಡೆಯಿತು.ಇವರು ಮುನ್ನೂರಕ್ಕೂ ಹೆಚ್ಚು ಸಣ್ನ ಕತೆಗಳನ್ನು ಬರೆದಿದ್ದಾರೆ. ಇವು ‘ಸಾಧನಾ’ ಪತ್ರಿಕೆಯಲ್ಲಿ ಕ್ರಮವಾಗಿ ಪ್ರಕಟವಾದುವು. ಗೋರಾ ಇವರ ಪ್ರಖ್ಯಾತ ಕಾದಂಬರಿ. ‘ಚಿತ್ರಾಂಗದಾ’, ‘ಡಾಕ್ ಘರ್’, ‘ವಾಲ್ಮೀಕಿ ಪ್ರತಿಭಾ’ ಇತ್ಯಾದಿ ಇವರ ಪ್ರಮಖ ನಾಟಕಗಳು. ‘ಮಾನಸಿ’, ‘ಪುರವಿ’, ‘ನೈವೇದ್ಯ’, ಇತ್ಯಾದಿ ಇವರ ಕೆಲವು ಕವನ ಸಂಕಲನಗಳು. ‘ವಿಚಿತ್ರ ಪ್ರಬಂಧ’, ‘ಚೈತ್ರಪೂಜಾ’ ಇವರ ಖ್ಯಾತ ಪ್ರಬಂಧ ಸಂಕಲನಗಳು. ನೇರ ಸಹಜ ಅಭಿವ್ಯಕ್ತಿ, ಸರಳ ಭಾಷೆ, ಅಧ್ಯಾತ್ಮಿಕ ಒಲವು ಮತ್ತು ಗಾಢ ಚಂತನೆ – ಇವು ಇವರ ಕೃತಿಗಳಲ್ಲೆಲ್ಲ ಕಾಣುವ ಗುಣಗಳು. ಪ್ರಕೃತಿ ಈ ಕವಿಯ ಜೊತೆ ಮಾತನಾಡುತ್ತದೆ; ಕವಿಯನ್ನು ಆಡಿಸುತ್ತದೆ; ನೆಮ್ಮದಿಯುಕ್ತವಾಗಿ ಮಲಗಿಸುತ್ತದೆ; ಅವನಿಗೆ ದೈವೀ ರಹಸ್ಯಗಳನ್ನು ತೋರಿಸುತ್ತದೆ. ಮನುಷ್ಯ – ಮನುಷ್ಯ ಸಂಬಂಧಗಳ ಭಾವನಾಲೋಕವನ್ನು ಅನ್ವೇಷಿಸುವ ಮತ್ತು ಇತರರ ಅನುಭವಕ್ಕಾಗಿ ತೆರೆದಿಡುವ ಪ್ರೇರಣೆ ಈ ಸಾಹಿತಿಗೆ ಪ್ರಕೃತಿಯಿಂದ ಲಭಿಸುತ್ತದೆ. ದೈವ – ಮಾನವ ಸಂಬಂಧಗಳನ್ನು ಈ ನೆಲದಲ್ಲಿ ನಿಂತು ವಿಶ್ಲೇಷಿಸುತ್ತಾರೆ ಈ ಕವಿ. ಈ ಹಿನ್ನೆಲೆಯಲ್ಲಿ ಮೌಲ್ಯಗಳ ವಿವರಣೆ, ವಿಶ್ಲೇಷಣೆ ಮತ್ತು ಸ್ಥಾಪನೆ – ಇವುಗಳಿಂದ ಇವರ ಕೃತಿಗಳು ಮಹತ್ವ ಪಡೆಯುತ್ತವೆ.ಈ ಕಾರಣದಿಂದಲೇ ಇವು ವಿಶ್ವದ ಗಮನ ಸೆಳೆದಿವೆ. ಕೃತಿಯಲ್ಲಿನ ಈ ಗುಣಗಳ ಗುರುತಿಸುವಿಕೆ ಮತ್ತು ಸನ್ಮಾನ ರೂಪವಾಗಿ “ಗೀತಾಂಜಲಿ” ಕೃತಿಗೆ 1913ರಲ್ಲಿ ನೋಬೆಲ್ ಪಾರಿತೋಷಕ ಲಭಿಸಿದೆ.
            ಸಾಹಿತ್ಯ ಕೃತಿಗಳ ರಚನೆಯನ್ನಲ್ಲದೆ ರವೀಂದ್ರರು ಎಷ್ಟೋ ಮುಖ್ಯ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಎಸ್ಟೇಟುಗಳನ್ನು ನೋಡಕೊಳ್ಳುವುದು, ಸಂಬಂಧಿಕರಿಗೆ ಬಡವರಿಗೆ ಸಹಾಯ ಮಾಡುವುದು ಇತ್ಯಾದಿ ಕೌಟುಂಬಿಕ ಕೆಲಸಗಳು, ಪತ್ರಿಕಾ ಸಂಪಾದನೆ, ಸೇವಾ ಚಟುವಟಕೆಗಳು – ಹೀಗೆ ಬಹುಮುಖವಾಗಿ ಇವರು ಸದಾ ಕಾರ್ಯ ನಿರತರು. ಸೃಜನ ಕಾರ್ಯಗಳಲ್ಲಿಯೂ ಇವರ ಆಸಕ್ತಿ ವೈವಿಧ್ಯಮಯ: ನವ್ಯ ಚಿತ್ರಗಳನ್ನು ಇವರು ರಚಿಸಿದ್ದಾರೆ, ಹಾಡುಗಳನ್ನು ರಚಿಸಿ ಸಂಗೀತ ಅಳವಡಿಸಿದ್ದಾರೆ, ತಮ್ಮ ಕಾಲದ ಸಮಾಜಾಂದೋಲನಕ್ಕೆ ಸ್ಪಂದಿಸಿ ನಾಟಕ ರೂಪಕಗಳನ್ನು ರಚಿಸಿದ್ದಾರೆ ಇತ್ಯಾದಿ. ಸ್ವಾತಂತ್ರ್ಯ ಹೋರಾಟ ಹಿಂಸಾತ್ಮಕವಾಗದಂತೆ ಬರವಣಿಗೆ ಮತ್ತು ಭಾಷಣಗಳ ಮೂಲಕ ಪ್ರಯತ್ನಿಸಿದ್ದಾರೆ. ತಾವು ಶಾಲೆಯಲ್ಲಿ ಅನುಭವಿಸಿದ ನಿರಾಸಕ್ತಿಯನ್ನು ಬೇರೆ ಮಕ್ಕಳು ಅನುಭವಿಸಬಾರದೆಂಬ ಉದ್ದೇಶದಿಂದ ಶಾಂತಿನಿಕೇತನದಲ್ಲಿ ವಿಶಿಷ್ಟವಾದ ಶಾಲಾಕ್ರಮವನ್ನು ಪ್ರಾರಂಭಿಸಿದ್ದಾರೆ. ಅನಂತರ ಅದು ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಪರಿವರ್ತಿತವಾಗಿ ಪ್ರಸಿದ್ಧವಾಗಿದೆ. ಹೀಗೆ ರವೀಂದ್ರರ ದುಡಿತ ಬಳಲಿಕೆ ಕಾಣದ್ದು. ಉತ್ಸಾಹ ಭರಿತವಾದದ್ದು.

            ಹೀಗೆ ರವೀಂದ್ರರು ಎಂಬತ್ತು ರ್ಷಗಳ ಸಮೃದ್ಧ ತುಂಬು ಜೀವನ ನಡೆಸಿರು. ಮುಪ್ಪಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕೊಲ್ಕೊತ್ತೆಯಲ್ಲಿ ಚಿಕಿತ್ಸೆ ನೀಡಲಾಯಿತು. ಶಾಂತಿನಿಕೇತನದಿಂದ ಕೊಲ್ಕೊತ್ತೆಗೆ ತೆರಳುವ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ತರು ಭಾರದ ಹೃದಯದಿಂದ ತಮ್ಮ ಪ್ರೀತಿಯಿಂದ ‘ಗುರುದೇವ’ನನ್ನು ಬೀಳ್ಕೊಟ್ಟರು. ಅವರ ಆರೋಗ್ಯ ಚಿಕಿತ್ಸೆಯಿಂದ ಉತ್ತಮವಾಗಲಿಲ್ಲ. ಅವರು ಏಳನೆಯ ಅಗಸ್ಟ್ 1941ರ ಅಪರಾಹ್ನ ಕೊನೆಯುಸಿರೆಳೆದರು. “ಗೀತಾಂಜಲಿ” ಇವರ ಮುಖ್ಯ ಸಾಧನೆಗಳಲ್ಲೊಂದು. ಕಾಯಕ, ಸೌಂದರ್ಯೋಪಾಸನೆ, ಭಗವದರ್ಪಣ ಬುದ್ಧಿ – ಇವುಗಳ ಪ್ರತಿಪಾದನೆಯಿಂದಾಗಿ “ಗೀತಾಂಜಲಿ” ಭಾರತೀಯ ಸಂಸ್ಕೃತಿಯ ಪ್ರಸಾರಕನಾಗಿದೆ.

No comments:

Post a Comment