Search This Blog

Friday 13 January 2017

ರೆಂಗಾ ಬಳಸಿ ಕವಿತೆ ಕಲಿಸಿ


ನಾನು ಹಿಂದೆ ಜಪಾನೀ ಪದ್ಯಬಂಧವಾದ ರೆಂಗ ಪದ್ಯ ಬರೆಯುವುದನ್ನು ಕಲಿಸಲು ನಮಗೆ ಹೇಗೆ ಸಹಾಯಕವಾದೀತೆಂದು ವಿವರವಾದ ಲೇಖನವೊಂದನ್ನು ಬರೆದಿದ್ದೆ. ಅದ ಧಾರವಾಡ ಡಯಟ್ಟಿನವರು ಪ್ರಕಟಿಸುವ ಜೀವನ ಶಿಕ್ಷಣದಲ್ಲೂ ಕಿನ್ನಿಗೋಳಿಯಿಂದ ಹೊರಡುವ ಯುಗಪುರುಷದಲ್ಲಿಯೂ ಪ್ರಕಟವಾಗಿ ಜನಪ್ರಿಯವಾಗಿದ್ದವು. ಇಲ್ಲಿ ಅದರ ಒಂದು ಸಂಕ್ಷಿಪ್ತರೂಪವನ್ನು ನೀಡುತ್ತಿದ್ದೇನೆ. https://independent.academia.edu/MaheedasBv - ಇಲ್ಲಿಯೂ ನೀವು ನನ್ನನ್ನು ಸಂಧಿಸಬಹುದು.

                           
ರೆಂಗಾ ಬಳಸಿ ಕವಿತೆ ಕಲಿಸಿ

            ಕವಿತೆ ಬರೆಯುವುದನ್ನು ಕಲಿಸಬೇಕೆಂದು ಹೊರಡುವವರಿಗೆಲ್ಲ ಆ ಕಾರ್ಯ ಒಂದು ಸವಾಲಾಗಿ ಪರಿಣಮಿಸುತ್ತದೆ. ಕಾವ್ಯವು ಒಂದು ಸ್ಫೂರ್ತ ಅಭಿವ್ಯಕ್ತಿ, ಅದನ್ನು ರಚಿಸುವುದನ್ನು ಕಲಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ತರಬೇತಿಯು ಕವಿತೆಯನ್ನು ಬರೆಯುವ ಕೌಶಲವನ್ನು ಉತ್ತಮಪಡಿಸಿ ಉತ್ಕರ್ಷ ಕಾವ್ಯ ರಚನೆಗೆ ಕಾರಣವಾಗುವುದೆಂಬ ಇನ್ನೊಂದು ಪಕ್ಷವೂ ಇದೆ. ಎರಡು ವಾದಗಳಲ್ಲೂ ಸತ್ಯಾಂಶಗಳಿವೆ; ಪರಿಮಿತಿಗಳೂ ಇವೆ.
            ಹಳಗನ್ನಡ ಕಾಲದಲ್ಲಿ ಛಂದಸ್ಸು, ವ್ಯಾಕರಣ, ನಿಘಂಟು – ಇವುಗಳನ್ನೆಲ್ಲ ಕಾವ್ಯರಚನೆಗೆ ಪೂರ್ವ ತಯಾರಿಗಳೆಂದೇ ಭಾವಿಸುತ್ತಿದ್ದರು. ಹೊಸಗನ್ನಡದಲ್ಲಿ ಕವಿತೆ ಬರೆಯುವುದನ್ನು ಕಲಿಸಲು ಕೆಲವು ಸಲಹೆಗಳು ಸಾಹಿತ್ಯದಲ್ಲಿ ಲಭ್ಯವಿವೆ. ಪ್ರಖ್ಯಾತ ಪದ್ಯವೊಂದನ್ನು ತೆಗೆದು ಕೊಂಡು ಅದನ್ನು ಬೇರೆಬೇರೆ ಛಂದೋರೂಪಗಳಲ್ಲಿ ಬದಲಾಯಿಸಿ ಬರೆಯುವ ಅಭ್ಯಾಸ ನೀಡುವುದು ಉಪಯುಕ್ತವೆಂದು ಟಿ ಕೇಶವ ಭಟ್ಟರು ತಮ್ಮ ಸಂಶೋಧನ ರತ್ನಮಾಲಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಉದಾಹರಣೆಗೆ
                                    ಪೆಣ್ಣಲ್ಲವೇ ತಮ್ಮನೆಲ್ಲ ಪಡೆದ ತಾಯಿ
                                    ಪೆಣ್ಣಲ್ಲವೇ ಪೊರೆದವಳು
                                    ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
                                    ಕಣ್ಣುಕಾಣದ ಗಾವಿಲರು

ಎಂಬುದು ಸಂಚಿಯ ಹೊನ್ನಮ್ಮನ ಖ್ಯಾತ ಸಾಂಗತ್ಯ. ಇದರ ಪೂರ್ವಾರ್ಧ ಮತ್ತು ಉತ್ತರಾರ್ಧಗಳನ್ನು ಬೇರೆಬೇರೆಯಾಗಿ ಬರೆದರೆ ಎರಡು ಏಳೆಗಳಾಗುತ್ತವೆ. ಇದನ್ನೇ

                                    ಪೆಣ್ಣಲ್ಲವೇ ತಮ್ಮನೆಲ್ಲ ಪಡೆದ ತಾಯಿ
                                    ಪೆಣ್ಣಲ್ಲವೇ ಪೊರೆದವಳು|| ಬೀಳುಗಳೆವೆಯೇಕೆ
                                    ಕಣ್ಣುಕಾಣದ ಗಾವಿಲನೆ
-       ಈ ರೀತಿಯಲ್ಲಿ ಬದಲಾಯಿಸಿ ತ್ರಿದಿಯನ್ನಾಗಿಸಬಹುದು.

ಪೆಣ್ಣುಲ್ಲ ದಿಲ್ಲ ತಾಯಿಯು ಆಕೆಯೇ ಪೊರೆವಳು ಬೇರೇನಿದೆ
ಕಾಣದೆ ಕಣ್ಣು ಗಾವಿಲರೇಕೆ ಹೀನೈಸಿ ತೆಗಳುವರು
-       ಹೀಗೆ ಅಕ್ಕರಿಕೆಯ ಎರಡು ಸಾಲುಗಳನ್ನಾಗಿಸಬಹುದು.

ಬೇರೆ ಅಭಿಪ್ರಾಯಗಳೂ ಇವೆ: ಒಂದು ನಿರ್ದಿಷ್ಟ ವಸ್ತುವನ್ನು ನೀಡಿ ನಿರ್ದಿಷ್ಟ ಛಂದಸ್ಸಿನಲ್ಲಿ ಪದ್ಯ ರಚಿಸುವಂತೆ ತಿಳಿಸಿ ತರಬೇತಿ ನೀಡಬಹುದು. ನಮ್ಮ ಪ್ರಾಧ್ಯಾಪಕರಾದ ಎಸ್ವಿಪಿಯವರೊಮ್ಮೆ ಹೇಳಿದ ನೆನಪು – ಹಿಂದಿನ ಪಂಡಿತ ಪರೀಕ್ಷೆಗಳಲ್ಲಿ ಸುಭಾಶ್ಚಂದ್ರ ಬೋಸರ ಧೀರತನವನ್ನು ಮತ್ತೇಭವಿಕ್ರೀಡಿತವೃತ್ತದಲ್ಲಿ ವರ್ಣಿಸಿರಿ ಎಂಬಂತೆ ಪ್ರಶ್ನೆ ಕೇಳುತ್ತಿದ್ದರೆಂದು. ಈ ರೀತಿಯಲ್ಲಿ ಬೇರೆಬೇರೆ ಛಂದೋಬಂಧಗಳಲ್ಲಿ ಪದ್ಯರಚನಾ ಕಲಿಕೆಗೆ ಪ್ರವೃತ್ತಿಸಿ ತಮಗೆ ಬೇಕಾದ ವಸ್ತುವನ್ನು ಸೂಕ್ತ ಛಂದಸ್ಸಿನಲ್ಲಿ ರಚಿಸಲು ತರಬೇತಿ ನೀಡಿದಂತಾಗುತ್ತದೆ. ಈಗಿನ ಕೆಲವು ಕಾರ್ಯಾಗಾರಗಳಲ್ಲಿ ಒಂದು ವಸ್ತುವನ್ನು ನೀಡಿ ಅದಕ್ಕಿರುವ ವ್ಯಕ್ತಿಯ ಸ್ಪಂದನೆಗಳನ್ನೆಲ್ಲ ಪಟ್ಟಿ ಮಾಡುವಂತೆ ಹೇಳಿ ಅವುಗಳನ್ನು ಸೇರಿಸಿ ಒಂದು ಪದ್ಯ ರೂಪದಲ್ಲಿ ಬರೆಯಲು ತರಬೇತಿ ನೀಡುವಂತಹ ಪದ್ಧತಿ ಇದೆ.

                        ಕಲಿಕೆ ಯಾವುದೇ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.  ಈ ದೃಷ್ಟಿಯಿಂದ ಕವಿತೆ ಬರೆಯಲು ಕಲಿಸುವ ವಿಧಾನಗಳನ್ನು ಉತ್ತಮಪಡಿಸುವುದು ಪ್ರಸ್ತುತವಾಗುತ್ತದೆ. ಅಲ್ಲದೆ ಇಂತಹ ಒಂದು ಕ್ರಮ ಭಾಷಾ ಕಲಿಕೆಯ ವಿವಿಧ ಕೌಶಲಗಳನ್ನು ಸಮರ್ಥಗೊಳಿಸಲೂ ಸಹಾಯವಾಗುತ್ತದೆ.
                       
                        ಇದಕ್ಕೆ ಉತ್ತಮ ಸಾಧನವೊಂದು ಜಪಾನೀ ಕಾವ್ಯ ಪರಂಪರೆಯಲ್ಲಿ ಕಂಡು ಬರುತ್ತದೆ. ರೆಂಗ ಎಂಬ ಪದ್ಯ ಸರಪಳಿ ಹೆಣೆಯುವುದೇ ಈ ಸಾಧನ. ಈ ಪ್ರಕಾರದ ಮುಖ್ಯ ಲಕ್ಷಣವೆಂದರೆ ಒಬ್ಬನು ಒಂದು ನಿರ್ದಿಷ್ಟ ವಸ್ತುವನ್ನು ಕುರಿತು ರಚಿಸಿದ ಸಂಕ್ಷಿಪ್ತ ಪದ್ಯಕ್ಕೆ ಸ್ಪಂದನೆಯಾಗಿ ಎರಡನೆಯವನು ಒಂದು ಪದ್ಯವನ್ನು ರಚಿಸುತ್ತಾನೆ; ಮೊದಲನೆಯವನು ಇದಕ್ಕೆ ಇನ್ನೊಂದು ಪದ್ಯದ ಮೂಲಕ ಸ್ಪಂದಿಸಬಹುದು. ಇದನ್ನೊಂದು ಆಟವಾಗಿ ಮೂರು ಜನರೂ ಸೇರಿ ಆಡಬಹುದು. ಈ ಪದ್ಯಗಳು ಮೂರು ಗಣಗಳ ಮೂರು ಅಥವ ಎರಡು ಸಾಲುಗಳನ್ನೊಳಗೊಂಡಿರಬಹುದು. ಎಲ್ಲರೂ ಒಂದೇ ಸಂಖ್ಯೆಯ ಸಾಲಿನ ಪದ್ಯಗಳನ್ನೇ ರಚಿಸ ಬೇಕೆಂಬ ನಿರ್ಬಂಧವೇನೂ ಇಲ್ಲ. ಆದರೆ ಆಡುವವರೆಲ್ಲ ಕೂಡಿ ಅಂತಹ ನಿರ್ಬಂಧವನ್ನು ಮಾಡಿಕೊಳ್ಳಬಾರದೆಂದೂ ಇಲ್ಲ.  ಒಂದು ಉದಾಹರಣೆಯನ್ನು ನೋಡಬಹುದು (ಕನ್ನಡಾನುವಾದ ನನ್ನದು; ಇಂಗ್ಲಿಶ್ ಮೂಲವನ್ನು ಅಲ್ಲಲ್ಲಿ ಸೂಚಿಸಿದೆ):
                                    Dtmack
                                                ಚಳಿಗಾಲ ಆಡುತಿದೆ ತಣ್ಣಾಟ
                                                ಉದುರಿಸುತ್ತ ಮಂಜಿನ ಚಿಕ್ಕ ಪೊಟ್ಟಣಗಳ
                                                ಬಿಳಿಯೇ ಬಿಳಿ ಬಾನುಬುವಿ
                                    Lexa
                                                ಚಳಿ ಎಂಬುದು ಒಂದು ಕೊರತೆ
                                                ಬಿಸಿ ಇಲ್ಲದಿರೆ ಇಲ್ಲಿ
                                                ಅಳುವೆ ನಾನು
                                      Kelvin D G deGuzman
                                                ಕೊರತೆಯೇ ಚಳಿಯೇ?
                                                ಅದೊಂದು ವೈಭವ
                                                ಚಳಿ ಇಲ್ಲದಿರೆ ಹಿಮಾಲಯವೆಲ್ಲಿ?

                                                ಚಳಿಗಾಲ ಯಾವಾಗಲೂ ಆಡುತ್ತದೆ ತನ್ನಾಟ
                                                ಬುವಿಯ ವಸ್ತುಗಳೊಂದಿಗೆಲ್ಲ.

ಹೀಗೆ ಸರಪಣಿ ಮುಂದುವರೆಯುತ್ತದೆ. ಈ ಸರಪಣಿಗಳು ಗಂಭೀರ ಚಿಂತನೆಗಳ ಸರಣಿಯೂ ಆಗಬಹುದು.  ಈ ಉದಾಹರಣೆ ಇದನ್ನು ಸಮರಥಿಸಬಹುದು:
                                      ಒಬ್ಬ:               ಹೊಳೆಯುತಿದೆ ನಿನ್ನೊಳಗು
                                                            ಬೆಳಕು

                                      ಎರಡನೆಯವನು:  ವಿಶ್ವದ ಭರತಗಳ ಹರಿವು
                                                            ನುಂಗುತ್ತಿದೆ ಕಟ್ಟಕಡೆಯ ಆತ್ಮವನು

                                      ಮೂರನೆಯವನು: ನಿನ್ನೆಚ್ಛೆ ಬಾಳುವುದು ನಿರಂತರ
                                                            ಬದಲಾಗುತಿರುವ ಭರತದಲೆಗಳಿಗಿಂತ
                                                            ಎಷ್ಟೋ ಆಚೆ

                                      ಕಲಿಸುವ ಸಂದರ್ಭದಲ್ಲಿ ಈ ಪ್ರಕಾರದ ಸಾಧ್ಯತೆಗಳು ಹಲವು. ಮೊದಲು ಪದ್ಯ ರಚಿಸುವವನು ತರಬೇತುದಾರನಾಗಿದ್ದು ಅವನ ಪದ್ಯವು ಮಾದರಿಯಾಗಿ ಸ್ವೀಕೃತವಾಗಬಹುದು. ಬಂಧ ತುಂಬ ಕಟ್ಟುನಿಟ್ಟಿನದಲ್ಲದಿರುವುದರಿಂದ ಕಲಿಯುವವನಿಗೆ ಆರಂಭಕ ಅನುಕೂಲವೊದಗುತ್ತದೆ. ಕಲಿಸುವವನ ಒಂದು ಪದ್ಯಕ್ಕೆ ಕಲಿಯುವವರು ಹಲವರು ಸ್ಪಂದಿಸಿದಾಗ ಆರೋಗ್ಯಕರ  ಸ್ಪರ್ಧೆ ಏರ್ಪಡುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಉತ್ತಮ ಪ್ರೇರಣೆ ದೊರಕುತ್ತದೆ. ಕಲಿಯುವವರೆಲ್ಲರೂ ಭಾಗವಹಿಸಲು ಅವಕಾಶವಾಗುವುದರಿಂದ ಕಲಿಕೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕವಿತೆ ರಚಿಸುತ್ತಾ ಕವಿತೆ ರಚಿಸುವುದನ್ನು ಕಲಿಯುವ ಉತ್ತಮ ವಿಧಾನವಾಗುತ್ತದೆ.
                                      ಭಾಷಾ ಕಲಿಕೆಗೂ ಸಾಹಿತ್ಯದ ಅಭ್ಯಾಸಕ್ಕೂ ರೆಂಗ ರೀತಿ ಸಹಾಯಕ. ಕವಿತೆಗೆ ಸಂಬಂಧಿಸಿದಂತೆ ಭಾಷೆಯ ಸಾಮಾನ್ಯ ಕೌಶಲಗಳು ಇಲ್ಲಿ ಕೈಗೆಟುಕುತ್ತವೆ. ರೆಂಗದಲ್ಲಿ ಕೂಡಲೇ ಸ್ಪಂದಿಸುವ ತುರ್ತು ಇರುವುದರಿಂದ ಕವಿತೆಯನ್ನು ಕೇಳುವುದು, ಅದನ್ನು ಮನಸ್ಸಿನಲ್ಲೇ ಹೇಳಿಕೊಳ್ಳುವುದು ಮತ್ತು ಅದಕ್ಕೆ ಪ್ರತಿಯಾಗಿ ಹಾರ್ದಿಕ ಪ್ರತಿಕ್ರಿಯೆಯನ್ನು ರೂಪಿಸಿ ಹೇಳುವುದು – ಇವುಗಳನ್ನು ಶೀಘ್ರವಾಗಿ ಹೊಂದಿಸಿಕೊಳ್ಳಬೇಕಾಗುತ್ತದೆ. ಕವಿತಾ ಸಂಭಾಷಣೆಯನ್ನು ಮುಂದುವರೆಸಿಕಂಡು ಹೋಗುವ ತುರ್ತು ಇದಕ್ಕೆ ಪೂರಕವಾಗುತ್ತದೆ.

*********************************************************************************************************
                   

No comments:

Post a Comment