Search This Blog

Monday 16 November 2015

ಸಾಹಿತ್ಯಚರಿತ್ರೆಯ ಹೊಸ ರೂಪ

ಹೊಸಯುಗದಲ್ಲಿ ಸಾಹಿತ್ಯಚರಿತ್ರೆಯ ಹೊಸ ರೂಪ – ಮೊದಲ ಧಾರೆ
                                         ಹಳಗನ್ನಡ ನಡುಗನ್ನಡ  ಕಾವ್ಯಗಳಷ್ಟೆ ಕನ್ನಡ ಸಾಹಿತ್ಯ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಪಂಪ ರನ್ನ ಕುಮಾರವ್ಯಾಸ ಮುಂತಾದವರ ಕಾಲ ನಿಷ್ಕರ್ಷೆ, ಸರಿಯಾದ ಕಾಲಾನುಕ್ರಮ ನಿಗದಿ, ಅವರ ಕಾವ್ಯಗಳ ವಿಮರ್ಶೆ – ಇವಿಷ್ಟರ ನಿರೂಪಣೆಯೇ ಸಾಹಿತ್ಯ ಚರಿತ್ರೆಯಾಗಿತ್ತು.  ಈಗ ಹೊಸಗನ್ನಡದಲ್ಲೇ ಸಾಹಿತ್ಯಕ್ಷೇತ್ರ ವಿಶಾಲವಾಗಿ ಬೆಳೆದಿದೆ. ಈಗಿನ ವ್ಯಾಪ್ತಿಯಲ್ಲಿ ಹಳಗನ್ನಡ ಸಾಹಿತ್ಯವು ನಮ್ಮ ಸಾಹಿತ್ಯದ ಒಂದು ಸಣ್ಣ ಪ್ರಾಕಾರ ಮಾತ್ರ. ಅಂದಿನ ಭಾಷೆ ಸಂಪೂರ್ಣವಾಗಿ ವ್ಯತ್ಯಾಸವಾಗಿದೆ. ಕಾದಂಬರಿ, ನಾಟಕ, ಸಣ್ಣ ಕಥೆ, ಭಾವಗೀತೆ, ನವ್ಯಕವನಗಳು, ಸಂಶೋಧನೆ, ಶಾಸ್ತ್ರಸಾಹಿತ್ಯ, ಶಾಸನಾಧ್ಯಯನ, ಜಾನಪದ ಅಧ್ಯಯನ - ಹೀಗೆ ಹೊಸಗನ್ನಡದಲ್ಲಿ ಸಾಹಿತ್ಯ ಪ್ರಕಾರಗಳು ವೈವಿಧ್ಯಮಯ.  ಪುರಾಣೇತಿಹಾಸಗಳ ಬದಲಾಗಿ ಸಮಕಾಲೀನ ಸಾಮಾಜಿಕ ಸಂಬಂಧಗಳನ್ನು ಸಾಹಿತ್ಯ ಅಭಿವ್ಯಕ್ತಿಸುತ್ತಿದೆ.  ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಸಂಕ್ಷಿಪ್ತವಾಗಿ ಮಾತ್ರ ಚರ್ಚಾವಸ್ತುವಾಗಿದ್ದ ಹೊಸಗನ್ನಡ ಪ್ರಕಾರಗಳ ವಿಕಾಸದ ಸುದೀರ್ಘವಾದ ನಿರೂಪಣೆ ಈಗಿನ ಅಗತ್ಯವಾಗಿದೆ. ಈ  ಅಗತ್ಯವನ್ನು ಪೂರೈಸಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ. ಕೆಲವಕ್ಕೆ  ಪ್ರಕಾರವಾರು ಶೀರ್ಷಿಕೆಗಳನ್ನಿಟ್ಟು ಹದಿನೇಳು ಸಂಪುಟಗಳಲ್ಲಿಹೊಸಗನ್ನಡ ಸಾಹಿತ್ಯವನ್ನು ರಚಿಸಿ ಪ್ರಕಟಿಸಲು ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯ ಸಮಿತಿ ನಿರ್ಧರಿಸಿದ್ದು ಈಗ ಪ್ರಥಮ ಸಂಪುಟ ಪ್ರಕಟವಾಗಿದೆ. ಪ್ರಥಮ ಸಂಪುಟದ ಸಂಪಾದಕರು ಪ್ರೊ ಎ ವಿ ನಾವುಡ ಇವರು. ಸಂಪುಟದ ಹೆಸರು ಮುಂಬೆಳಗು. ಇದು ಹತ್ತೊಂಬತ್ತನೆಯ ಶತಮಾನದ ಸಾಹಿತ್ಯಿಕ ಬೆಳವಣಿಗೆಗಳನ್ನು ದಾಖಲಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ. ಇದರ ವಿಸ್ತಾರ 772 ಪುಟಗಳು. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು. ಬೆಲೆ ರೂ.400/-.
ಸಂಪಾದಕರೇ ಹೇಳುವಂತೆ  ‘ಈ ಸಂಪುಟದೊಳಗೆ ಮೂರು ಒಳವಿಭಾಗಗಳವೆ’. “ಹೆಜ್ಜೆ ಒಂದು”, “ ಹೆಜ್ಜೆ ಎರಡು”  ಮತ್ತು “ಅನುಬಂಧ”  ಎಂದು ಇವುಗಳನ್ನು ಹೆಸರಿಸಲಾಗಿದೆ. ಹೆಜ್ಜೆ ಒಂದರಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅಂಕುರಗಳ ಒಂದು ಚರ್ಚೆ ಇದೆ. ಈ ಭಾಗದಲ್ಲಿ ಎಂಟು ಲೇಖನಗಳಿದ್ದು ಒಂದನೆಯ ಲೇಖನದಲ್ಲಿ ಶಿವರಾಮ ಪಡಿಕ್ಕಲ್ ಇವರು, ವಸಹತುಶಾಹಿಯು ದೇಸೀ ಸಂಸ್ಕೃತಿಯ ಮೇಲೆ ಯಾಜಮಾನ್ಯ ಸಾಧಿಸಲು ಪ್ರಯತ್ನ ನಡೆಸಿದ್ದು ಮತ್ತು ಇದಕ್ಕೆದುರಾಗಿ ಇಲ್ಲಿಯ ವಿದ್ವಾಂಸರು ನಮ್ಮಲ್ಲಿ ತಿರುಳೆನಿಸಿದ್ದೇನಿದೆ ಎಂಬ ಹುಡುಕಾಟ ಪ್ರಾರಂಭಿಸಿದ್ದು- ಇವು ಹೊಸ ರೀತಿಯ ಅಭಿವ್ಯಕ್ತಿಗಳಿಗೆ ನಾಂದಿಯಾದುವೆಂದು ಪ್ರತಿಪಾದಿಸಿದ್ದಾರೆ. ಅನಂತರದ ನಾಲ್ಕು ಪ್ರಬಂಧಗಳ ಲೇಖಕರು ಜಿ ಬಿ ಹರೀಶ್ ಇವರು. ಕ್ರೈಸ್ತ ಮಿಶನರಿಗಳು ಪ್ರಸರಿಸಿದ ಶಿಕ್ಷಣ ಕ್ರಮದಿಂದ ಅದುವರೆಗೆ ಸಂಸ್ಕೃತಿ ಸಂಪ್ರದಾಯಗಳೊಡನೆ ಜನರು ಹೊಂದಿದ್ದ ಘನಿಷ್ಠ ಸಂಬಂಧ ಕಡಿದು ಹೋಯಿತೆಂದೂ, ಇದರಿಂದಾಗಿ ಹೊಸ ರೀತಿಯ ಸಾಹಿತ್ಯ ರಚನೆಗೆ ಇಂಗ್ಲಿಷ್ ರೊಮ್ಯಾಂಟಕ್ ಕಾವ್ಯದ ಕಡೆಗೆ ನೋಡುವಂತಾಯಿತೆಂದೂ ಇವರು ಸೂಚಿಸಿದ್ದಾರೆ. ಅನಂತರ ಶ್ರೀನಿವಾಸ ಹಾವನೂರರ ಪ್ರಬಂಧದಲ್ಲಿ ಕರ್ನಾಟಕದಲ್ಲಿ 19ನೆಯ ಶತಮಾನದಲ್ಲಿ ನಡೆದ ಮುದ್ರಣ ಕಾರ್ಯದ ವಿವರಗಳಿವೆ. ಈ ಭಾಗದ ಕೊನೆಯಲ್ಲಿ ಕಲ್ಬುರ್ಗಿಯವರ ಲೇಖನ ಗಮನ ಸೆಳೆಯುತ್ತದೆ. ಇದರಲ್ಲಿ ಕ|| ಮೆಕ್ಕೆಂಝಿ ಬರೆದ ಅಥವ ಬರೆಸಿದ ಕೈಫಿಯತ್ತುಗಳೆಂಬ ಕಾಗದದ ಮೇಲಿನ ಬರಹಗಳು ಇತಿಹಾಸ ಮತ್ತು ಸಾಹಿತ್ಯೇತಿಹಾಸಗಳಿಗೆ ಪ್ರಮಾಣಗಳೆಂಬುದನ್ನು ಇದರಲ್ಲಿ ವಿವರಿಸಿದ್ದಾರೆ.
‘ಹೆಜ್ಜೆ ಎರಡು’ ಈ ಸಂಪುಟದ ತಿರುಳೆನಿಸುವ ಭಾಗ. ಹೊಸಗನ್ನಡ ಸಾಹಿತ್ಯಪ್ರಕಾರಗಳ ಉಗಮ ಮತ್ತು ವಿಕಾಸದತ್ತ ನಡೆ ಇಲ್ಲಿ ದಾಖಲಾಗಿವೆ.ಇದರಲ್ಲಿ ಹೆಸರಾಂತ  ವಿದ್ವಾಂಸರ ಇಪ್ಪತ್ತೊಂದು ಲೇಖನಗಳಿವೆ. ಮುನ್ನೂರಕ್ಕೂ ಹೆಚ್ಚು ಪುಟಗಳ ವಿಸ್ತಾರವಿದೆ. ಇಲ್ಲಿರುವ ಪ್ರತಿಯೊಂದು ಲೇಖನವೂ ವಿಶಿಷ್ಟವಾಗಿದೆ. ಕೆಲವು ಇದುವರೆಗೆ ದಾಖಲಾಗದ ವಸ್ತುವಿಷಯಗಳಿಂದ ತುಂಬಿವೆ. ಒಟ್ಟಾಗಿ,  ಹತ್ತೊಂತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ಬೆಳೆದ ರೀತಿ, ಈ ಅವಧಿಯಲ್ಲಿನ ಹೊಸ ಶಿಸ್ತುಗಳ ಹುಟ್ಟು ಮತ್ತು ಸಾರ್ಥಕತೆ, ಒಟ್ಟಾರೆ ಕನ್ನಡ ಸಾಹಿತ್ಯದಲ್ಲಿ ಕೃತಿಗಳ ಸ್ಥಾನ – ಇಂತಹವುಗಳನ್ನು ನಿರೂಪಿಸುತ್ತವೆ. ರಂಗಭೂಮಿ-ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐದು ಲೇಖನಗಳಿವೆ. ಚಂದ್ರಶೇಖರ ಕಂಬಾರ, ಜಿ ಎಸ್ ಆಮೂರ, ಬರಗೂರು ರಾಮಚಂದ್ರಪ್ಪ,  ಕಬ್ಬಿನಾಲೆ ವಸಂತ ಭಾರದ್ವಾಜ್, ಕೆ ಮರುಳುಸಿದ್ದಪ್ಪ ಇವರು ಈಪ್ರಬಂಧಗಳ ಲೇಖಕರು. ಆದ್ಯಂತದಲ್ಲಿ ದೈವತಾವಾಹನ ಮತ್ತು ಮಂಗಳಾಚರಣೆಳಿದ್ದು ನಡುವೆ  ನಡೆಯುವ ಕ್ರಿಯಾಸರಣಿಗಳೇ ನಾಟಕವಾಗಿ ರೂಪುಗೊಳ್ಳುವುದು ಕನ್ನಡ ಜನಪದ ನಾಟಕದ ತಿರುಳೆಂಬುದು ಕಂಬಾರರ ಪ್ರತಿಪಾದನೆ. ಇಂತಹ ಹಿನ್ನೆಲೆಯ ಯಕ್ಷಗಾನದಿಂದ ಪ್ರಭಾವಿತವಾಗಿ ಹೊಸರಂಗಭೂಮಿ ಚಳುವಳಿ ಪ್ರಾರಂಭವಾದುದನ್ನು ತಿಳಿಸಿ ಉತ್ತರ ಕರ್ನಾಟಕದಲ್ಲಿ ರಂಗಚಟುವಟಿಕೆಗಳಲ್ಲಿ ತೊಡಗಿದ ಹಲವಾರು ನಾಟಕ ಮಂಡಳಿಗಳನ್ನು ಆಮೂರರು ಪರಿಚಯಿಸುತ್ತಾರೆ. ರಾಜಾಶ್ರಯವು ದಕ್ಷಿಣ ಕರ್ನಾಟಕದ ರಂಗಭೂಮಿಗೆ ಹೇಗೆ ಶಕ್ತಿಯೂ ದೌರ್ಬಲ್ಯವೂ ಆಗಿತ್ತು ಎಂಬುದನ್ನು ವಿವರಿಸಿ ಅರಮನೆಯ ಹೊರಗಿನ ರಂಗದ ಬೆಳವಣಿಗೆಗಳನ್ನು ಬರಗೂರರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಯಕ್ಷಗಾನ ಪರಂಪರೆ, ಮತ್ತು ಸಂಸ್ಕೃತ ಹಾಗೂ ಇಂಗ್ಲಿಷ್ ನಾಟಕಗಳ ಕನ್ನಡ ರೂಪಾಂತರಗಳು ಕನ್ನಡ ನಾಟಕಗಳ ವಿಕಾಸಕ್ಕೆ ಇಂಬಾದುದನ್ನು ಉಳಿದೆರಡು ಪ್ರಬಂಧಗಳಲ್ಲಿ ಸಂಗ್ರಹಿಸಿದ್ದಾರೆ. ಹೀಗೆಯೇ ಹೊಸಗನ್ನಡ ಕವಿತೆಯ ವಿಕಾಸವನ್ನು ತಿಳಿಸುವ ಮೂರು ಲೇಖನಗಳಿವೆ: ಹದಿನೆಂಟನೆಯ ಶತಮಾನದವರೆಗೆ ದೀರ್ಘ ಕವಿತೆಗಿದ್ದ ಪ್ರಾಮುಖ್ಯ ಕಡಿಮೆಯಾಗಿ ವ್ಯಕ್ತಿಯ ಅಂತಃಶಕ್ತಿಯನ್ನು ಅಭಿವ್ಯಕ್ತಿಸುವ ತತ್ವಪದಗಳು ಹತ್ತೊಂತ್ತನೆಯ ಶತಮಾನದಲ್ಲಿ ಮುಂಚೂಣಿಗೆ ಬಂದವೆಂದು (ಉದಾ. ಶಿಶುನಾಳ ಶರೀಫ) ಕಿ ರಂ ನಾಗರಾಜರು ನಿರೂಪಿಸಿದರೆ ಶ್ರೀ ಶಿವಾಜಿ ಜೊಯ್ಸರು ಕ್ರೈಸ್ತ ಗೀತೆಗಳಿಂದ ಹೊಸಗನ್ನಡ ಕವಿತೆಗಳ ಉಗಮವನ್ನು ಮತ್ತು ಅನಂತಪದ್ಮನಾಭರಾಯರು ಪೂರ್ವದ ಹರಿದಾಸ ರಚನೆಗಳಿಂದ ನವೋದಯ ಕಾವ್ಯದ ಪೋಷಣೆಯನ್ನು ವಿವರಿಸುತ್ತಾರೆ. ಕಥೆ-ಕಾದಂಬರಿಗಳಿಗೆ ಸಂಬಂಧಿಸಿದ ಎರಡು ಪ್ರಬಂಧಗಳಿವೆ: ಅನುವಾದಗಳು ಮತ್ತು ರೂಪಾಂತರಗಳ ಮೂಲಕ ಸಣ್ಣಕಥೆ ಪ್ರಾರಂಭವಾಯಿತೆಂದು ಶ್ರೀನಿವಾಸ ಹಾವನೂರರು ಕಥಾಸಾಹಿತ್ಯದ ಬಗೆಗಿನ ಲೇಖನದಲ್ಲಿ ನಿರೂಪಿಸಿದ್ದಾರೆ. ಪದ್ಯದಂತೆ ಗದ್ಯವನ್ನೂ ಕಥನಕಲೆಗೆ ಸಮರ್ಥ ವಾಹಕವನ್ನಾಗಿ ಮುಮ್ಮಡಿ ಕೃಷ್ಣ ರಾಜ ಒಡೆಯರು ಬಳಸಿದ್ದು ಮತ್ತು ಕ್ರೈಸ್ತ ವಿದ್ವಾಂಸರು ಹೊಸಗನ್ನಡ ಗದ್ಯವನ್ನು ಮುಂಚೂಣಿಗೆ ತಂದದ್ದು  ಇವೆರಡನ್ನು ಕಾದಂಬರಿ ಸಾಹಿತ್ಯ ವಿಕಾಸಕ್ಕೆ ಪೂರಕವಾದ ಬೆಳವಣಿಗೆಗಳನ್ನಾಗಿ ಶ್ರೀಕಂಠ ಕೂಡಿಗೆ ಇವರು ಗುರುತಿಸಿದ್ದಾರೆ; ತುರುಮುರಿಯವರ ಮತ್ತು ಗಳಗನಾಥರ ಅನುವಾದಗಳು ಕಾದಂಬರಿಯ ಪ್ರಥಮ ಹಂತಗಳೆಂದು ಸೂಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ಹೊಸದಾಗಿ ಉದಯಿಸಿ ಬೆಳೆಯಲಾರಂಭಿಸಿದ ‘ಸಾಹಿತ್ಯ ಪತ್ರಿಕೆಗಳು’(ವಾಸುದೇವ ಶೆಟ್ಟಿ), ‘ಹೊಸಮಾದರಿಯ ವ್ಯಾಕರಣಗಳು’(ಬಿ ವಿ ಮಹೀದಾಸ), ‘ಸಾಹಿತ್ಯ ಚರಿತ್ರೆ’(ಕೆ ಅನಂತರಾಮು), ‘ವಿಜ್ಞಾನ ಸಾಹಿತ್ಯ’(ಸೋಮಶೇಖರ ಬಿ ಎಸ್), ನಿಘಂಟುಗಳು(ಎ ವಿ ನಾವುಡ), ‘ಗ್ರಂಥಸಂಪಾದನೆ’(ಎ ವಿ ನಾವುಡ), ‘ಶಾಸನ ಅಧ್ಯಯನ’(ಎಮ್ ಜಿ ಮಂಜುನಾಥ) – ಇವುಗಳಿಗೆ ಸಂಬಂಧಿಸಿದ ತಲಾ ಒಂದು ಲೇಖನ ಈ ಭಾಗದಲ್ಲಿದ್ದು ಆಧುನಿಕ ಕಾಲಕ್ಕೆ ಕನ್ನಡದ ಅವಸ್ಥಾಂತರವನ್ನು ಕಟ್ಟಿಕೊಡುತ್ತವೆ. ಇವಲ್ಲದೆ ಅವಸ್ಥಾಂತರ ಗದ್ಯವನ್ನು ನಿರ್ವಚಿಸುವ ‘ಗದ್ಯ: ಆಧುನಿಕತೆಯ ಹೊಸಿಲು’(ಸ ಸ ಮಾಳವಾಡ), ಮುಮ್ಮಡಿ ಕೃಷ್ಣರಾಜ ಒಡೆಯರ್ ಸಾಹಿತ್ಯಕ್ಕೆ ನೀಡಿದ ಒತ್ತಾಸೆಯನ್ನು ನಿರೂಪಿಸುವ ‘ಒಡೆಯರ್ ಕಾಲದ ಸಾಹಿತ್ಯ’(ವೆಂಕಟಾಚಲ ಶಾಸ್ತ್ರಿ), ಹೊಸ ರೀತಿಯ ಗದ್ಯ ಮತ್ತು ಹೊಸ ರೂಪದ ವಸ್ತುಗಳನ್ನು ರೂಢಿಸಿದ ಮಿಶನರಿಗಳು ತಂದ ಹೊಸ ಎಚ್ಚರ(ಎ ವಿ ನಾವಡ ಮತ್ತು ಗಾಯತ್ರಿ ನಾವಡ)ವನ್ನು ತಿಳಿಸುವ  ಲೇಖನ - ಇವು ಓದುಗರನ್ನು ಆಕರ್ಷಿಸುತ್ತವೆ. ಈ ಒಂದೊಂದೂ ಒಂದೊಂದು ಮುತ್ತುಗಳು. 
ಕಡೆಯ ಭಾಗವಾಗಿರುವ ಅನುಬಂಧವೂ ಇತರ ಗ್ರಂಥಗಳಂತಲ್ಲದೆ ಇಲ್ಲಿ ಒಂದು ಪ್ರಮುಖ ಭಾಗವಾಗಿ ಬಂದಿದೆ. ವೈಗಲನ ಲೇಖನದ ಕನ್ನಡ ಅನುವಾದವೊಂದು ಪದೆಥಮ ಬಾರಿಗೆ ಇಲ್ಲಿ ಬೆಳಕು ಕಂಡಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ಹತ್ತಂಬ್ನೆಯ ಶತಮಾನದ ಲೇಖಕರ ವಿವರಗಳು ಉಳಿದ ಅನುಬಂಧಳಲ್ಲಿವೆ.

ಸಂಪುಟವು ಬೇರೆಬೇರೆ ಕೃತಿಕಾರರ ಲೇಖನಮುತ್ತುಗಳನ್ನು ಕೋದು ಸಿದ್ಧಪಡಿಸಿದಂತಹದು. ಪ್ರಪ್ರತ್ಯೇಕ ಪ್ರಬಂಧಗಳ ನಡುವೆ ಸುಸೂತ್ರತೆ ಮತ್ತು ಸಮನ್ವಯವನ್ನು ತರುವಲ್ಲಿ ಸಂಪಾದಕರು ಯಶಸ್ವಿಯಾಗಿದ್ದು ಮುಂಬೆಳಗು ಆಹ್ಲಾದಕರವಾಗಿದೆ.

No comments:

Post a Comment