Search This Blog

Monday 16 November 2015

ವಿಲಿಯಮ್ ಕೇರಿ ಎಂಬ ಪಂಡಿತನೂ, ಕ್ರೈಸ್ತ ಬೋಧಕನೂ


ವಿಲಿಯಮ್ ಕೇರಿ ಎಂಬ ಪಂಡಿತನೂ, ಕ್ರೈಸ್ತ ಬೋಧಕನೂ

                                                           ಹತ್ತೊಂಬತ್ತನೆಯ ಶತಮಾನ ಕನ್ನಡ ಶಾಸ್ತ್ರ ಸಾಹಿತ್ಯದ ಸುವರ್ಣ ಯುಗ. ಕನ್ನಡ ಸಾಹಿತ್ಯದ ಆರಂಭಕಾಲದಿಂದ ಅಲ್ಲಿಯವರೆಗೆ ಕೇವಲ ನಾಲ್ಕು ವ್ಯಾಕರಣ ಕೃತಿಗಳ ರಚನೆಯಾಗಿದ್ದರೆ ಹತ್ತಂಬತ್ತನೆಯ ಶತಮಾನವೊಂದರಲ್ಲಿಯೇ ಹತ್ತಕ್ಕೂ ಹೆಚ್ಚು ವ್ಯಾಕರಣಗ್ರಂಥಗಳು ಬಂದಿವೆ. ಇವುಗಳ ದೃಷ್ಟಿಕೋನ ಪ್ರಾಚೀನ ಕೃತಿಗಳಿಗಿಂತ ಭಿನ್ನವಾಗಿದ್ದುವ್ಯಾಕರಣ ನಿಯಮಗಳ ನಿರೂಪಣೆಗೆ ಹೊಸ ದಿಕ್ಕನ್ನು ತೋರಿದವು. ಹಾಗೆಯೇ ನಿಘಂಟು ರಚನೆ, ಗ್ರಂಥ ಸಂಪಾದನೆ ಇವೂ ಹೊಸ ಮಜಲನ್ನು ಪ್ರವೇಶಿಸಿದವು. ಇವುಗಳಲ್ಲಿ ಹೆಚ್ಚಿನವು ಇಂಗ್ಲಿಷ್ ಭಾಷೆಯಲ್ಲಿವಿದೇಶೀ ಮಿಶನರಿಗಳಿಂದ  ರಚನೆಯಾದವು.

ಕನ್ನಡದ ವ್ಯಾಕರಣವನ್ನು ಮೊತ್ತಮೊದಲಿಗೆ ಇಂಗ್ಲೀಷನಲ್ಲಿ ಬರೆದವನು ವಿಲಿಯಮ್ ಕೇರಿ ಎಂಬ ಬ್ಯಾಪ್ತಿಸ್ಟ್ ಮಿಶನರಿ. ಇವನ ಕೃತಿ ಪ್ರಕಟವಾದುದು ಈಗಿನ ಪಶ್ಚಿಮ ಬಂಗಾಳದ ಸೆರಾಮ್-ಪುರ ಎಂಬ ಹಳ್ಳಿಯಿಂದ. ತಾರುಣ್ಯದಲ್ಲಿ ವೃತ್ತಿಯಿಂದ ಚಮ್ಮಾರನಾಗಿದ್ದ ಇವನು ಆ ಕಾಲದಲ್ಲಿಯೇ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಂಡಿದ್ದ ಮತ್ತು ಧಾರ್ಮಿಕ ಕೆಲಸದಲ್ಲಿ ತೊಡಗಿಕೊಂಡು ಪ್ರಗತಿಗಾಮೀ ಕ್ರೈಸ್ತ ಮಿಶನರಿಯಾಗಿ ರೂಪುಗೊಂಡ.ಇವನು ಭಾರತಕ್ಕೆ ಬಂದನಂತರ ಬಂಗಾಳದ ಸೆರಾಮ್-ಪುರ ಎಂಬಲ್ಲಿ ಕಾರ್ಯನಿರತನಾಗಿದ್ದುಬಂಗಾಳಿ, ತೆಲುಗು, ಕನ್ನಡ    ಮುಂತಾದ ಭಾಷೆಗಳಲ್ಲಿ ಪರಿಶ್ರಮ ಗಳಿಸಿದ. ಬಂಗಾಳಿ ಭಾಷೆ ಭಾರತದ ಆಡು ಭಾಷೆಗಳಲ್ಲಿ ಅತ್ಯಂತ ಉನ್ನತ ಸಂಸ್ಕೃತಿಯದೆಂದು ಭಾವಿಸಿದ್ದ ಅವನು ಮೊದಲು ಬಂಗಾಳಿ ಭಾಷೆಯನ್ನು ಕಲಿತು ಅದರ ಮೂಲಕ ಸಂಸ್ಕೃತವನ್ನು ಕಲಿತನು. ಅನಂತರ ಬೈಬಲಿನ ನ್ಯೂ ಟೆಸ್ಟಮೆಂಟನ್ನು ಬಂಗಾಳಿಗೆ ಅನುವಾದಿಸಿದನು. ಈ ಪ್ರಕ್ರಿಯೆಯಲ್ಲಿ ಭಾಷಾಂತರದ ಜೊತೆಗೆ ಅವನೊಬ್ಬ ವ್ಯಾಕರಣಕಾರನಾಗಿ ಮತ್ತು ನಿಘಂಟುಕಾರನಾಗಿ ವಿಕಾಸಗೊಂಡ. ಇತರರ ಸಹಾಯವನ್ನು ಬಳಸಿಕೊಂಡು ಬೈಬಲನ್ನು ಮರಾಠಿ, ಹಿಂದಿ, ಒರಿಯ, ಪಂಜಾಬಿ, ಅಸ್ಸಾಮೀ ಮತ್ತು ಗುಜರಾಥೀ ಭಾಷೆಗಳಿಗೆ ಭಾಷಾಂತರಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ. ಅವನು ಕನ್ನಡ ಮತ್ತು ತೆಲುಗು ಭಾಷೆಗಳನ್ನೂ ಈ ಉದ್ದೇಶಕ್ಕಾಗಿಯೇ ಕಲಿತ. ಬಂಗಾಳ ಮತ್ತು ಆಂಧ್ರ ಗಡಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಅವನು ಈ ಕಾರ್ಯದಲ್ಲಿ ತೊಡಗಿದ. (www.languageinindia.com/april2001/carey.html). ಬೈಬಲಿನ ಭಾಷಾಂತರಗಳು ಮತ್ತು ಹಲವು ಇತರ ಪ್ರಕಟಣೆಗಳ ಮೂಲಕ ಅವನು ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸುವಲ್ಲಿ ನೆರವಾದ. ಭಾಷಾಂತರವನ್ನು ಒಂದು ತಂಡಕಾರ್ಯವನ್ನಾಗಿಸಿ ಅದರಲ್ಲಿ ಸಾಕಷ್ಟು ಯಶಸ್ವಿಯೂ ಆದ. ಇವನು ಫೋರ್ಟ್ ವಿಲಿಯಂ ಕಾಲೇಜಿನಲ್ಲಿ ಸಂಸ್ಕೃತ, ಬಂಗಾಳಿ ಮತ್ತು ಮರಾಠಿ ಭಾಷೆಗಳ ಪ್ರಾಧ್ಯಾಪನಾಗಿದ್ದನೆಂದೂ  (www.wmcarey.edu/carey/bibles/translation.htm),    ಸುಮಾರು ನಲವತ್ತು ಭಾಷೆಗಳಿಗೆ  ಅವನು ಬೈಬಲನ್ನು ಭಾಷಾಂತರಿಸಿದನೆಂದೂ ತಿಳಿದು ಬರುತ್ತದೆ(Christian Books and Music World - William Carey (TAMIL):www.cbmwonline.org).


ಇಂಗ್ಲೆಂಡಿನ ನಾರ್ಥ್ಯಾಂಪ್ಟನ್ ಬಳಿಯ ಚಿಕ್ಕ ಹಳ್ಳಿಯೊಂದರಲ್ಲಿ ಕ್ರಿ ಶ 1761ರ 17ನೆಯ ಅಗಸ್ಟ್ ದಿನದಂದು ಪಾಲ್ಸ್ ಪರಿ(ಯು ಕೆ) ಎಂಬಲ್ಲಿ  ಶಾಲಾಧ್ಯಾಪಕನೊಬ್ಬನ - ಅವನು ಪಾದ್ರಿಯೂ ಆಗಿದ್ದನು – ಮಗನಾಗಿ ವಿಲಿಯಮ್ ಕೇರಿಯ ಜನಿಸಿದ. 1779ರಲ್ಲಿ ತನ್ನ ತಂದೆಯ ಸಾವಿನಿಂದಾಗಿ ಹೆಚ್ಚು ಕಾಲ ಶಾಲಾಭ್ಯಾಸದಲ್ಲಿ ಕಳೆಯಲು ಸಾಧ್ಯವಾಗದೆ ಚಮ್ಮಾರನೊಬ್ಬನ ಬಳಿ ಕೆಲಸಕ್ಕೆ ಸೇರಿ ಪಾದರಕ್ಷೆಗಳನ್ನು ಹೊಲಿಯುವ ಕಾರ್ಯದಲ್ಲಿ ಇವನು ತೊಡಗಬೇಕಾಯಿತು. ತನಗೆ 20 ವರ್ಷ ವಯಸ್ಸಾಗಿದ್ದಾಗ 1781ರಲ್ಲಿ ಡೊರೋಥಿ ಪ್ಲಕೆಟ್ ಎಂಬ ಅಷ್ಟೊಂದು ಓದಿರದ ಕನ್ಯೆಯೊಡನೆ ಅವನು ಮದುವೆಯಾದ. ತದನಂತರ ಕ್ರೈಸ್ತ ಮತ ಬೋಧನೆಗೆ ಮತ್ತು ಭಾಷೆಗಳನ್ನು ಕಲಿತು ಬೈಬಲ್ ಅನುವಾದಕ್ಕೆ ಅವನು ತೊಡಗಿದ. ಡೊರೊಥಿಯಲ್ಲಿ ಅವನಿಗೆ ಐವರು ಗಂಡು ಮಕ್ಕಳೂ ಇಬ್ಬರು ಹೆಣ್ಣು ಮಕ್ಕಳೂ ಆದರು. ಇಬ್ಬರೂ ಹೆಣ್ಣು ಮಕ್ಕಳು ಶೈಶವದಲ್ಲಿಯೇ ತೀರಿಕೊಂಡರು ಮತ್ತು ಒಬ್ಬ ಗಂಡು ಮಗ ತನ್ನ ಐದನೆಯ ವಯಸ್ಸಿನಲ್ಲಿ ನಿಧನನಾದ. ಆದರೆ ಕೇರಿ ತನ್ನ ವಿದ್ವತ್ ಕಾರ್ಯವನ್ನೇನೂ ನಿಲ್ಲಿಸಲಿಲ್ಲ. ಭಾಷೆಗಳನ್ನು ಕಲಿಯುವ ಅವನ ಉತ್ಸಾಹಕ್ಕೆ ತಡೆಬೀಳಲಿಲ್ಲ. ಗ್ರೀಕ್ ಮತ್ತು ಹೀಬ್ರೂ ಭಾಷೆಗಳನ್ನು ಅಧ್ಯಾಪಕರ ಸಹಾಯವಿಲ್ಲದೆ ಅವನು ಕಲಿತ. ಏಳು ವರ್ಷಗಳಲ್ಲಿ ಲ್ಯಾಟಿನ್, ಫ್ರೆಂಚ್. ಡಚ್ ಭಾಷೆಗಳೂ ಸೇರಿದಂತೆ ಆರು ಭಾಷೆಗಳಲ್ಲಿ ಅವನು ಬೈಬಲ್ ಓದಬಲ್ಲನಾಗಿದ್ದ. 1792ರಲ್ಲಿ ನಾಟಿಂಗ್ಹ್ಯಾಮ್ ನ ಚರ್ಚ್ ಸಿಬ್ಬಂದಿಗೆ ಬೋಧಿಸಲು ನೇಮಕಗೊಂಡು ಆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದ. ಅದೇ ವರ್ಷ ಅಕ್ಟೋಬರಿನಲ್ಲಿ ಹೀದನ್ನರನ್ನು ಉದ್ಧಾರಮಾಡಬೇಕೆಂಬ ತೀವ್ರವಾದ ಇಚ್ಛೆಯಿಂದ ಕೇರಿ ತನ್ನ ಸಂಗಡಿಗರೊಡನೆ ಲಂಡನ್ ಮಿಶನರಿ ಸೊಸೈಟಿ ಪ್ರಾರಂಭಿಸಿದ. 1793ರ ಜೂನ್13ರಂದು ತನ್ನ ಪತ್ನಿ ಮತ್ತು ನಾದಿನಿಯ ಜೊತೆಗೆ ಭಾರತಕ್ಕೆ ಹೊರಟ. ಭಾರತದಲ್ಲಿ ಕಂಪೆನಿ ಆಡಳಿತದಿಂದ ಅವನಿಗೆ ನಿರೀಕ್ಷಿತ ಸಹಕಾರ ದೊರೆಯಲಿಲ್ಲ. ಹಾಗಾಗಿ ಜನವರಿ 10, 1800ರಲ್ಲಿ ಕಂಪೆನಿಯವರ ವ್ಯಾಪ್ತಿಯಿಂದ ಹೊರಗೆ ಇದ್ದ ಸೆರಾಂಪುರ ಎಂಬ ಬಂಗಾಳದ ಸಣ್ಣ ಹಳ್ಳಿಯಲ್ಲಿ ವಾಸ್ತವ್ಯ ಹೂಡಿ ತನ್ನ ಕೈಂಕರ್ಯವನ್ನು ಪ್ರಾರಂಭಿಸಿದ. ಅಲ್ಲಿಂದ ಮುಂದೆ ಮಿಶನರಿ ಕೆಲಸಗಳಿಂದಾಗಿ ಈ ಹಳ್ಳಿ ಖ್ಯಾತಿ ಗಳಿಸಿತು.
                             ಈ ಹಳ್ಳಿಯಲ್ಲಿ ಇಂಗ್ಲೀಷರು. ಡೇನರು, ಡಚ್ಚರು, ಅಮೆರಿಕನರು, ಆರ್ಮೇನಿಯನರು, ಗ್ರೀಕರು ಮತ್ತು ಒಬ್ಬ ಮಲಬಾರಿ – ಹೀಗೆ ಹಲವು ಸಂಸ್ಕೃತಿಗಳ ಜನರು ವಾಸಿಸುತ್ತಿದ್ದರೆಂದು ಕೇರಿ ಪಟ್ಟಿಮಾಡಿದ್ದಾನೆ. ಅಲ್ಲಿದ್ದುಕೊಂಡು ಬೈಬಲಿನ ತನ್ನ ಬಂಗಾಳಿ ಭಾಷಾಂತರವನ್ನುಸಿದ್ಧಪಡಿಸಿ ಪ್ರಕಟಿಸಿದ. ಇದನ್ನು ಗಮನಿಸಿದ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್  ಅವನನ್ನು ಗೌರವಿಸಿದ. ಅಲ್ಲಿಂದ ಅವನು ಫೋರ್ಟ್ ವಿಲಿಯಮ್ ಕಾಲೇಜಿನಲ್ಲಿ ಭಾಷಾ ಪ್ರಾಧ್ಯಾಪಕನಾಗಿ ನೇಮಕಗೊಂಡ. 1805ರಲ್ಲಿ ಕೇರಿಯನ್ನು ಅಲ್ಲಿ D. D. ಪದವಿ ನೀಡಿ ಗೌರವಿಸಲಾಯಿತು. ಅವನು ಭಾರತೀಯ ಭಾಷೆಗಳನ್ನೂ ಆಸಕ್ತಿಯಿಂದ ಕಲಿಯುತ್ತಿದ್ದು ಅದೇ ಸುಮಾರಿಗೆ ಮರಾಠಿ ವ್ಯಾಕರಣ ಗ್ರಂಥವೊಂದನ್ನು ಪ್ರಕಟಿಸಿದ.
          ಡೊರೋಥಿ 1807ರಲ್ಲಿ ನಿಧನಳಾದಳು ಮತ್ತು ಅನಂತರ 1808ರಲ್ಲಿ ಶಾರ್ಲೋಟಿ ರೂಮೋರ್ ಎಂಬಾಕೆಯನ್ನು ಮದುವೆಯಾಗಿ, ಅವಳೊಡನೆ ಉಳಿದ ಮಕ್ಕಳನ್ನು ಪೋಷಿಸುವ ಹೊಣೆಯನ್ನು ಹೊತ್ತ. ತನ್ನ ಮಿಶನರಿ ಕಾರ್ಯವನ್ನೂ ವಿದ್ವತ್ ಕೆಲಸಗಳನ್ನೂ ಮುಂದುವರೆಸಿಕೊಂಡು ಬಂದ. ತನ್ನ ಪ್ರಕಟಣೆಗಳನ್ನು ಮುದ್ರಿಸುವುದಕ್ಕಾಗಿ ಒಂದು ಮುದ್ರಣಾಲಯವನ್ನು ಅವನು ಸ್ಥಾಪಿಸಿಕೊಂಡಿದ್ದ. 11ನೆಯ ಮಾರ್ಚ್ 1812ರಲ್ಲಿ ಇದು ದುರ್ಘಟನೆಗೆ ತುತ್ತಾಗಿ ಬೆಂಕಿಗೆ ಬಲಿಯಾಯಿತು. ಒಂದು ಸಂಸ್ಕೃತ ನಿಘಂಟನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ನಡೆದು ಅದೂ ಸುಟ್ಟು ಹೋದಂತೆ ತಿಳಿದುಬರುತ್ತದೆ. ಅನಂತರ ಅವನು ಈ ಕಾರ್ಯವನ್ನು ಮುಂದುವರೆಸಿದ್ದು ತಿಳಿಯುವುದಿಲ್ಲ.    
           ಈ ಅಗ್ನಿದುರಂತ ತಕ್ಷಣದಲ್ಲಿ ಸರ್ವನಾಶದಂತೆ ಅವನಿಗೆ ಕಂಡರೂ ಪರೋಕ್ಷ ವರದಂತೆ ನೆರವಿಗೆ ಬಂತು. ಈ ಘಟನೆಯಿಂದಾಗಿ ಮಿಶನ್ನಿಗೆ ವ್ಯಾಪಕ ಪ್ರಚಾರ ದೊರೆಯಿತು. ಅಲ್ಲದೆ ಮುದ್ರಣಾಲಯವನ್ನು ಪುನರುಜ್ಜೀವನಗೊಳಿಸಿ ಪ್ರಕಟಣೆಗಳನ್ನು ಮುಂದುವರೆಸಿದ. 1801ರಲ್ಲಿ ಬಂಗಾಳೀ ವ್ಯಾಕರಣವನ್ನು(ಅನಂತರ ಇದರ ನಾಲ್ಕು ಆವೃತ್ತಿಗಳು ಪ್ರಕಟವಾಗಿವೆ),1804ರಲ್ಲಿ ಸಂಸ್ಕೃತ ವ್ಯಾಕರಣವನ್ನು, 1806ರಲ್ಲಿ ಮರಾಠೀ ವ್ಯಾಕರಣವನ್ನು(ಇದರ ನಾಲ್ಕು ಆವೃತ್ತಿಗಳು ಬಂದಿವೆ),1805ರಿಂದ 1810ರವರೆಗೆ ಜೊಶುವಾ ಮಾರ್ಶ್ ಮನ್ ಜೊತೆ ಸೇರಿ ವಾಲ್ಮೀಕಿ ರಾಮಾಯಣವನ್ನು ಸಂಪಾದಿಸಿ ಇಂಗ್ಲಿಷ್ ಅರ್ಥಗಳನ್ನು ಸೇರಿಸಿರುವ ಪುಸ್ತಕವನ್ನು, 1812ರಲ್ಲಿ ಪಂಜಾಬೀ ವ್ಯಾಕರಣವನ್ನು, 1814ರಲ್ಲಿ ತೆಲುಗು ವ್ಯಾಕರಣವನ್ನು, 1817ರಲ್ಲಿ ಕನ್ನಡ ವ್ಯಾಕರಣವನ್ನು, 1818ರಲ್ಲಿ  ಮೂರು ಸಂಪುಟಗಳಲ್ಲಿ ಬಂಗಾಳಿ ನಿಘಂಟನ್ನು, (1825ರಲ್ಲಿ ಇದರ ಎರಡನೆಯ ಆವೃತ್ತಿಯನ್ನು) ಮುದ್ರಿಸಿ ಪ್ರಕಟಿಸಿದ. 1828ರಲ್ಲಿ ಜಾನ್ ಕ್ಲಾರ್ಕ್ ಮಾರ್ಶ್ ಮನ್ ಜೊತೆ ಸೇರಿ ಬಂಗಾಳೀ ಭಾಷೆಯ ನಿಘಂಟೊಂದನ್ನುರಚಿಸಿದ್ದು ಇದರ ಎಲೆಕ್ಟ್ರಾನಿಕ್ ಆವೃತ್ತಿ ಲಭ್ಯವಿರುವುದಾಗಿ ತಿಳಿದು ಬರುತ್ತದೆ. ಇವಲ್ಲದೆ ಇನ್ನೂ ಕೆಲವು ಕೃತಿಗಳನ್ನು ಇವನು ರಚಿಸಿರುವನಲ್ಲದೆ ಬೇರೆ ಹಲವರನ್ನು ಕೃತಿರಚನೆಗೆ ಸ್ಫೂರ್ತಿಗೊಳಿಸಿದಂತೆ ತಿಳಿದು ಬರುತ್ತದೆ. ಕೇರಿ 41 ವರ್ಷಗಳ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ ಮತ್ತು 1834ರ 9ನೆಯ ಜೂನ್ ರಂದು ಬಂಗಾಳದ ಸೆರಾಮ್ ಪುರದಲ್ಲಿ ಕೊನೆಯುಸಿರೆಳೆದ.

         ಬಡತನದಲ್ಲಿ ಹುಟ್ಟಿ, ಜೀವನ ಸಂಕಷ್ಟಗಳನ್ನೆದುರಿಸುತ್ತಾ ಜೀವನ ಸಾಗಿಸಿದ; ಲಾಭದಾಯಕವಲ್ಲದ ವೃತ್ತಿಯನ್ನು ಹಿಡಿದು ತನ್ನ ನಂಬಿಕೆಗಳಿಗಾಗಿ ಶ್ರದ್ಧೆಯಿಂದ ಬಾಳಿದನೆಂಬುದು ಇವನ ಹಿರಿಮೆ. ತನ್ನ ಕೃತಿಗಳ ಮೂಲಕ ಹಲವು ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಿದನೆಂಬುದೂ ತುಂಬ ನಿಜ. 1800ರಲ್ಲಿ ಒಂದು ದಿವಸದ ತನ್ನ ಕಾರ್ಯವನ್ನು ಅವನು ಹೀಗೆ ಹೇಳುತ್ತಾನೆ: “Yesterday was a day of great joy, I had the happiness to desecrate the Ganges by baptizing the first Hindoo!”(ಫಾರ್ವೆಲ್ 1888: ಪು 37 ಇಲ್ಲಿ ಉದ್ಧೃತ). ಒಬ್ಬ ಹಿಂದೂವನ್ನು ಇವನು ಕ್ರೈಸ್ತನನ್ನಾಗಿ ಮತಾಂತರಿಸಿದನೆಂಬುದು ಅವರಿಬ್ಬರ ಧಾರ್ಮಿಕ ವೈಚಾರಿಕ ಸ್ವಾತಂತ್ರ್ಯದ ವಿಷಯವಾಯಿತು. ಆದರೆ ತನ್ಮೂಲಕ ಗಂಗೆಯನ್ನು ಅಪವಿತ್ರಗೊಳಿಸಿದ್ದಾಗಿ ಅವನು ಹೆಮ್ಮೆಪಡುವುದು ವಿಚಿತ್ರವೆನಿಸುತ್ತದೆ. ಇದು ಸಹ್ಯವಲ್ಲ. 

No comments:

Post a Comment