Search This Blog

Saturday 31 October 2015

ಪಾಂಡವರ ಸ್ವರ್ಗಾರೋಹಣ ಮತ್ತು ದ್ರೌಪದಿಯ ಅನುಭವಗಳು

ನಾರಾಯಣಾಚಾರ್ಯರು ಚಿತ್ರಿಸಿದ ಪಾಂಡವರ
ಸ್ವರ್ಗಾರೋಹಣ ಮತ್ತು ದ್ರೌಪದಿಯ ಅನುಭವಗಳು
                                
ಕೆ ಎಸ್ ನಾರಾಯಣಾಚಾರ್ಯರು ಭಾರತದಲ್ಲಿ ಬೆರಳಿಕೆಯ ಸಂಸ್ಕೃತದ ಉದ್ದಾಮ ವಿದ್ವಾಂಸರಲ್ಲೊಬ್ಬರಾಗಿದ್ದು ಪ್ರಾಚೀನ ಕಾವ್ಯೇತಿಹಾಸ ಪುರಾಣಗಳನ್ನು ಇಂದಿಗೂ ಪ್ರಸ್ತುತವಾಗುವಂತೆ ಬರೆಯುವವರಲ್ಲಿ ಅಗ್ರಗಣ್ಯರು. ಮಹಾಪ್ರಸ್ಥಾನ ಒಂದು ರೀತಿಯಲ್ಲಿ ಇವರ ಇತ್ತೀಚಿನ ಕಾದಂಬರಿ. ನಿಜವಾಗಿ ಇದು ಮಹಾಭಾರತದ ಮಹಾಪ್ರಸ್ಥಾನ ಮತ್ತು ಸ್ವರ್ಗಾರೋಹಣ ಪರ್ವಗಳ ಒಂದು ಅವತರಣಿಕೆ. ಇದರ ವಿಸ್ತಾರ 188 ಪುಟಗಳು. ಪ್ರಕಾಶಕರು ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಬೆಲೆ ರೂ.150/-.
            ಇಡೀ ಮಹಾಭಾರತದ ಕಥೆ ಸಂಕ್ಷಿಪ್ತವಾಗಿ ದ್ರೌಪದಿ ಪರಿಭಾವಿಸಿದಂತೆ ಇಲ್ಲಿ ನಿರೂಪಿತವಾಗಿದೆ ಆದ್ದರಿಂದ ನಿರೂಪಣೆ ಉತ್ತಮ ಪುರಷದಲ್ಲಿ ಸಾಗುತ್ತದೆ. ಸ್ವರ್ಗಕ್ಕೆ ಸಶರೀರರಾಗಿ ಆರೋಹಣ ಪಥದಲ್ಲಿ ನಡೆಯುತ್ತಾ ಇಂದಿನ ಮತ್ತು ಹಿಂದಿನ ಅಶ್ರುಪೂರ್ಣ ಅನುಭವಗಳ ಕಥನ ರೀತಿಯಲ್ಲಿ ಕಥೆಯನ್ನು ಕಟ್ಟಿದ್ದಾರೆ. ತನ್ನ ಗಂಡಂದಿರು, ದುರ್ಯೋಧನ, ದುಶ್ಶಾಸನ, ದ್ರೋಣ, ಕರ್ಣ, ಭೀಷ್ಮ, ಅಶ್ವತ್ಥಾಮ – ಇವರುಗಳಿಂದೆಲ್ಲ ತಾನು ಅನುಭವಿಸಿದ ದುಃಖ-ದುಮ್ಮಾನಗಳನ್ನು ನೆನಪಿಸಿಕೊಳ್ಳುತ್ತಾ ಈಗ ಕೈಕೊಂಡಿರುವ ಸ್ವರ್ಗ ಯಾತ್ರೆಯಲ್ಲಿಯೂ ಉಂಟಾಗುತ್ತಿರುವ ಕಷ್ಟಗಳನ್ನೂ  ನೆನೆದು ಗೋಳಿಡುವ ದ್ರೌಪದಿಯ ಚಿತ್ರ ಇಲ್ಲಿ ನಮ್ಮ ಸಹಾನುಭೂತಿಗೆ ಪಾತ್ರವಾಗಿ ಸ್ತ್ರೀ-ಪುರುಷ ಭಾವ ಸಂಘರ್ಷ ನಮ್ಮ ಕಣ್ಣ ಮುಂದೆ ಬರುತ್ತದೆ. ಸ್ರೀ ಪ್ರತಿನಿಧಿಯಾಗಿ ಇವಳೆತ್ತುವ ಪ್ರಶ್ನೆಗಳಿಗೆ ಉತ್ತರ ನೀಡಿ ಮನಸ್ಸಿನ ತುಮುಲಗಳನ್ನು ಪರಿಹರಿಸುವ ಕಾರ್ಯವನ್ನು ಮುಖ್ಯವಾಗಿ ವಿಧಿ ಮತ್ತು ಶ್ರೀಕೃಷ್ಣ ವಹಿಸುತ್ತಾರೆ.
            ಪ್ರಾರಂಭದಲ್ಲಿ ಚಳಿ ಕೊರೆತಗಳಿಂದ ಸೋತ ದ್ರೌಪದಿ ತನ್ನ ದುಗುಡವನ್ನು ಹೇಳಿಕೊಳ್ಳಲು ಕಲ್ಲಾಗಿ ವರ್ಷಗಳ ಕಾಲ ಕಳೆದ ಅಹಲ್ಯೆಯನ್ನು ಮೊದಲು ನೆನೆಯುತ್ತಾಳೆ. ಸಾಗುತ್ತಿರುವ ಪಥವು ಇಹಾನುಭವಗಳಾಚಿನದಾದ್ದರಿಂದ ಅಹಲ್ಯೆ ಇವಳಿಗೆ ಮುಖಾಮುಖಿಯಾಗುತ್ತಾಳೆ. ದೊಡ್ಡ ಬಂಡೆಗಳನ್ನುರುಳಿಸಲು ಸನ್ನೆ ಕೋಲಿಗೆ ಅಡಗಲ್ಲೊಂದು ಬೇಕಾಗುವಂತೆ ಮಹಾದುಷ್ಟರ ಸಂಹಾರಕ್ಕೆ ಸೀತೆ ದ್ರೌಪದಿಯರಂತಹವರು ಇರುತ್ತಾರೆಂದು ಅಹಲ್ಯೆ ಇವಳನ್ನು ಸಮಾಧಾನ ಪಡಿಸುತ್ತಾಳೆ. ಈ ಭಾವ ಅನಂತರ ದ್ರೌಪದಿಯು ಶ್ರೀಕೃಷ್ಣ ಮತ್ತು ವಿಧಿ ಇವರೊಡನೆ ನಡೆಸುವ ಸಂಭಾಷಣೆಗಳಲ್ಲಿ ಪುನರ್ಬಲನಗೊಂಡು  ಕಾದಂಬರಿಯ ತಾತ್ವಿಕ ನೆಲೆಯಾಗಿ ಮಾರ್ಪಡುತ್ತದೆ. ಇಲ್ಲಿ  ಮನುಷ್ಯರಿಗೊಗೊದಗುವ  ಕಷ್ಟ-ಸುಖ, ದುಃಖ-ದುಮ್ಮಾನಗಳೆಲ್ಲ ಪೂರ್ವ ಕರ್ಮಾನುಸಾರಿಯಾಗಿ ವಿಧಿಯಿಂದ ನಿಯಮಿಸಲ್ಪಟ್ಟು ಅನುಭವಕ್ಕೆ ಬರುವಂತಹವು.
         ಮುಂದಿನ ದಾರಿಯಲ್ಲಿ, ಈಗ ಅಹಲ್ಯೆಯನ್ನು ನೆನೆದಂತೆ ಸೀತೆಯನ್ನು ಕೃಷ್ಣ- ಭೀಷ್ಮ - ದ್ರೋಣ – ಕೀಚಕರನ್ನು ನೆನೆದಾಗ  ಇವರುಗಳೂ ಪಾಂಚಾಲಿಗೆದುರಾಗಿ ಸಂಭಾಷಿಸುತ್ತಾರೆ. ಅಹಲ್ಯೆ, ಸೀತೆ, ನಾಳಾಯಿನಿ ಇವರುಗಳ ಜೀವನಾನುಭವಗಳು ಗೋಳಿನಿಂದ ಕೂಡಿದ್ದು ದ್ರೌಪದಿಯೂ ಅದೇ ರೀತಿಯ ಕಷ್ಟಗಳಿಗೆ ಪಕ್ಕಾಗುತ್ತಾಳೆ. ಸೀತೆ ಭೂಮಿಪುತ್ರಿಯೂ ದ್ರೌಪದಿ ತದ್ವಿರುದ್ಧವಾಗಿ ಅಗ್ನಿಪುತ್ರಿಯೂ ಆಗಿದ್ದರೂ ಸಂಕಷ್ಟಗಳ ಮಾಲೆಯನ್ನು ಅನುಭವಿಸುವುದು ತಪ್ಪದು. ಎಲ್ಲ ಸ್ತ್ರೀಯರೂ ಸದೃಶ ದುಃಖಗಳಿಗೆ ಒಳಗಾಗಿರುವುದನ್ನು ಗುರುತಿಸಿ ಆ ಹಿನ್ನೆಲೆಯಲ್ಲಿ ತನ್ನ ಅನುಭವಗಳನ್ನು ಹೇಳಿಕೊಳ್ಳುವುದರಿಂದ ದ್ರೌಪದಿಯದು ಪ್ರಾತಿನಿಧಿಕ ಸ್ತ್ರೀದನಿಯಂತೆ ಅನುಭವವಾಗುತ್ತದೆ. ಎಲ್ಲ ಸಂಕಷ್ಟದ ಸಂದರ್ಭದಲ್ಲೂ ತನ್ನ ಪತಿಗಳಿಗಿಂತ ಹೆಚ್ಚಾಗಿ ತನಗೆ ದೈವವೇ ಸಹಾಯಕವಾಯಿತೆಂದು, ಒಂದೊಂದುಸಲ ಭೀಮ ಮತ್ತು ಒಂದೊಂದು ಸಲ ಅರ್ಜುನ ತನಗೆ ಅನುಕೂಲರಾಗಿದ್ದರೆಂದೂ ಅವಳು ನೆನೆಯುತ್ತಾಳೆ. “ನಾನು ದುಷ್ಟಾನ್ನ ತಿಂದವನು ಆ ಋಣ ತೀರಬೇಕಿತ್ತು”  (ಪು.84) ಎಂಬ ಭೀಷ್ಮನ ಅಸಹಾಯಕತೆ ತೋರುವ ಮಾತುಗಳು, “ಸಭೆಯಲ್ಲಿ ಸತ್ಯ ಹೇಳದೆ ನಿನ್ನ ಆಪತ್ತನ್ನು ನೋಡುತ್ತಿದ್ದ ಋಣ, ತೀರಿಸಲಾಗದ ಋಣ”(ಪು.92) ಎಂಬ ದ್ರೋಣನುಡಿ, ಪಾಂಚಾಲಿಯನ್ನು ಅವಮಾನಿಸಿದ ದುರ್ಯೋಧನನ ಸ್ತುತಿ ನಡೆಯುವಲ್ಲೆಲ್ಲ ತಿರುಗಾಡುವ ಅಶ್ವತ್ಥಾಮ ಕರ್ಣರು, ತನ್ನ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮಿಸೆಂದು ಅಂಗಲಾಚುವ ಕೀಚಕ ಇವೆಲ್ಲ ಜೀವನವಿಡೀ ದ್ರೌಪದಿ ಅನುಭವಿಸಿದ ಪರಿಭವ ಅವಮಾನಗಳನ್ನು ತೆರದಿಡುತ್ತವೆ. ಹಿಮಾಲಯವನ್ನು ಹತ್ತುತ್ತಾ ಸ್ವರ್ಗದತ್ತ ಹೆಜ್ಜೆ ಹಾಕಿದಂತೆಲ್ಲ ಪೂರ್ಣವಾಗಿ ಬಳಲಿ ಮೊದಲು ಕುಸಿದು ಅಸು ನೀಗುವುದು ದ್ರೌಪದಿಯೇ. ಅನಂತರ ನಕುಲ, ಸಹದೇವ, ಅರ್ಜುನ, ಭೀಮ ಇವರುಗಳು ಸರದಿಯಲ್ಲಿ ದೇಹ ಬಿಡುತ್ತಾರೆ. ಕೊನೆಯಲ್ಲಿ ನಾಯಿಯೊಂದು ಧರ್ಮನನ್ನು ಹಿಂಬಾಲಿಸುತ್ತಾ ಬಂದು ಅವನು ಅದಕ್ಕೂ ಪಕ್ಷಪಾತವಾಗಕೂಡದು, ತನ್ನೊಡನೆ ಸ್ವರ್ಗಕ್ಕೆ ಬರಬೇಕೆಂದು ಸಾತ್ವಿಕತೆಯನ್ನು ಮೆರೆಯುತ್ತಾನೆ ಮತ್ತು ನಾಯಿ ತನ್ನ ರುಜುರೂಪದಲ್ಲಿ ಯಮನಾಗಿ ಕಾಣಿಸಿಕೊಂಡು ಯುಧಿಷ್ಟರನಿಗೆ ಸಶರೀರ ಸ್ವರ್ಗ ಪ್ರಾಪ್ತಿಯಾಗುತ್ತದೆ. ಇನ್ನೊಂದು ಆಯಾಮದಲ್ಲಿನೋಡಿದಾಗ ಮರ್ತ್ಯಭಾವ ಮತ್ತು ಅಹಂಕಾರ ಮನುಷ್ಯನಿಗೆ ಸಶರೀರ ಸ್ವರ್ಗ ಪ್ರಾಪ್ತಿಗೆ ಅಡ್ಡಿಯಾಗುತ್ತದೆ ಎಂಬುದು ತಿಳಿಯುತ್ತದೆ. ಕೊನೆಯ ಭಾಗದಲ್ಲಿ ಬರುವ ಯುಧಿಷ್ಟರನೊಳಗಿನ ಈ ದನಿಗಳು ಮನನೀಯ: “ಮರ್ತ್ಯಭಾವ ಅವರನ್ನುನುಂಗಿತು. ‘ನನ್ನಂಥ ರೂಪವಂತ ಇನ್ನೊಬ್ಬನಿಲ್ಲ’ ಎಂಬುದು ಒಂದು ಹೆಮ್ಮೆ! ‘ನಾನಾಗುವ ಹೊತ್ತಿಗೆ ಐವರನ್ನೂ ಸಂಭಾಳಿಸಿದ್ದೇನೆ’  ಎಂಬುದು ಇನ್ನೊಂದು ಹೆಮ್ಮೆ. ಅದಕ್ಕೆ ಬಲಿಯಾದವರಿಗಾಗಿ ಶೋಕಿಸಬೇಡ. ಇನ್ನು ಉಳಿದ ಮೂವರು – ಒಬ್ಬನಿಗೆ ‘ಸಮಸ್ತ ಭಾರತ ಯುದ್ಧದ  ವಿಜಯಿ ನಾನು’ ಎಂಬ ಹೆಮ್ಮೆ. ‘ಸಮಸ್ತ ಕೌರವರನ್ನು ಬಲಿತೆಗೆದುಕೊಂಡು ವಿಚಿತ್ರ ಪ್ರತಿಜ್ಞೆ, ತೀರಿಸಿಕೊಂಡವನು ನಾನು’ ಎಂಬುವು ಸ್ವರ್ಗಕ್ಕೇರುವ ಗುಣಗಳಲ್ಲ. ವೀರರಿಬಹುದು, ಹೆಮ್ಮೆ ಸಲ್ಲದು. ಇನ್ನೊಬ್ಬರಿಗೆ ಭವಿಷ್ಯತ್ ಜ್ಞಾನದ ಬಗ್ಗೆ ಹೆಮ್ಮೆ! ಇವೆಲ್ಲ ಮನುಷ್ಯನನ್ನು ಕಮ್ಮಿಯಾಗುಸುವ ಭಾವಗಳು”(ಪು.181). ವ್ಯಕ್ತಿಗಳು ಶೌರ್ಯ, ಸೌಂದರ್ಯ, ಜವಾಬ್ದಾರಿ ಇಂತಹ ಹಲವು ಹೆಮ್ಮೆ ಅಹಂಕಾರಗಳಿಂದ ಬಂಧಿತನಾಗುವುದು ಸಹಜ. ಆದರೆ ವ್ಯಕ್ತಿಯ ವಿಕಾಸ ಇವುಗಳನ್ನೆಲ್ಲ ಮೀರಿದ್ದು, ಮತ್ತು ಪೂರ್ಣವಾಗಿ ವ್ಯಕ್ತಿನಿಷ್ಠ ಮತ್ತು ತನ್ನನ್ನುತಾನು ಎಷ್ಟು ವಿಶಾಲಗೊಳಿಸಿಕೊಂಡಿದ್ದಾನೆ ಎಂಬುದೇ ಆಗಿದೆ.
             ಕನ್ನಡದ ಆದಿಕವಿ ಭಾರತದ ವಿಕ್ರಮಾರ್ಜುನನನ್ನು ಹೊರತೆಗೆದಿದ್ದಾನೆ. ರನ್ನನಿಗೆ ಅದು ಸಾಹಸ ಭೀಮನ ಸಾಹಸ. ಕುಮಾರವ್ಯಾಸ ಅದರಲ್ಲಿ ಹೇಳುವುದು ಶ್ರೀಕೃಷ್ಣ ಕಥೆ. ಆ ಎಲ್ಲರೂ ಈ ಇತಿಹಾಸದಲ್ಲಿ ಪಾಂಚಾಲಿ ಪ್ರಪಂಚವನ್ನು ತೋರಿಸಲು ಮರೆಯಲಿಲ್ಲ. ನಾರಾಯಣಾಚಾರ್ಯರು ದ್ರೌಪದಿಯ ಕಣ್ಣಲ್ಲೇ ಭಾರತ ಕಥೆಯನ್ನು ಕಂಡರಿಸಿ ಹೊಸತೊಂದು ದೃಷ್ಟಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಮಹಾಭಾರತದ ಹೊಸ ಸ್ವರೂಪವೊಂದು ಹೀಗೆ ನಮ್ಮ ಮುಂದೆ ಅನಾವರಣವಾಗುತ್ತ ಆಧುನಿಕ ಸಂಘರ್ಷಗಳ ಅಭಿವ್ಯಕ್ತಿಗೆ ವೇದಿಕೆಯಾಗಿದೆ. ಪುಸ್ತಕವು ಪಠನಾಯೋಗ್ಯ ಮಾತ್ರವಲ್ಲ; ಮನನೀಯ.                                                                                              


No comments:

Post a Comment