Search This Blog

Saturday 31 October 2015

ಗೀತಾಸಾಗರದಲ್ಲಿ ರತ್ನಗಳ ಮರುಶೋಧ - ಶ್ರೀಗೀತಾರ್ಥರತ್ನನಿಧಿ




ಭಗವದ್ಗೀತೆಯು ಭಾರತೀಯರಿಗೆ ನಿರಂತರ ಸ್ಫೂರ್ತಿಯ ಸೆಲೆಯಾಗಿರುವ, ಧಾರ್ಮಿಕ ಶ್ರದ್ಧೆಯ, ಸಂಕಷ್ಟಸಮಯಗಳಲ್ಲಿ ವ್ಯಕ್ತಿಗಳಿಗೆ ಪರಿಹಾರ ಒದಗಿಸುವ ಕಾಮಧೇನು. ಬಹುಶೃತ ವಿದ್ವಾಂಸರಾದ  ಶ್ರೀ ಕೆ ಎಸ್ ನಾರಾಯಣಾಚಾರ್ಯರು ಈಚೆಗೆ ಅದ್ಭುತ ಪುಸ್ತಕವೊಂದನ್ನು ಪ್ರಕಟಿಸಿದ್ದು ಹೊಸದಿಗಂತ ದಿನಪತ್ರಿಕೆಗಾಗಿ ಒಂದು ಸಮೀಕ್ಷೆಯನ್ನು ಬರೆದಿದ್ದೇನೆ. ಅದನ್ನು ಇಲ್ಲಿ ಪುನರ್ಮುದ್ರಿಸಿದೆ.

ಗೀತಾಸಾಗರದಲ್ಲಿ ರತ್ನಗಳ ಮರುಶೋಧ - ಶ್ರೀಗೀತಾರ್ಥರತ್ನನಿಧಿ
                                                          
ಭಗವದ್ಗೀತೆಯನ್ನು ಭಗವದ್ಗೀತೆ ಯನ್ನಾಗಿ ಮಾತ್ರ  ಅಂದರೆ ಘನಿಷ್ಠ ತಾತ್ವಿಕತೆಯ ಒಂದು ಗ್ರಂಥವಾಗಿ ಪರಿಗಣಿಸಿ ಚರ್ಚಿಸುವ, ವಿವರಿಸುವ ಹಲವು ಉದ್ಗ್ರಂಥಗಳು ಬಂದಿವೆ. ಬಾಲಗಂಗಾಧರ ತಿಲಕರ ಬಗವದ್ಗೀತಾ ರಹಸ್ಯ  ಗೀತೆಯ  ಭೌತಿಕ ಲೌಕಿಕ ಆಧ್ಯಾತ್ಮಿಕ ನೆಲೆಗಳನ್ನು ವಿವರಿಸುತ್ತದೆ. ಡಿವಿಜಿಯವರ ಜೀವನ ಧರ್ಮ ಯೋಗ ಗೀತೆಯ ತಾತ್ವಿಕತೆಯನ್ನು  ಜೀವನಕ್ಕೆ ಜೋಡಿಸಿ ಹೇಳುತ್ತದೆ. ಬನ್ನಂಜೆ ಗೋವಿಂದಾಚಾರ್ಯರ ಭಗವದ್ಗೀತೆಯ ಅನುವಾದವು ಪ್ರತಿ ಶ್ಲೋಕದ ಭಾವ ಮತ್ತು ಅದು ಅನಾವರಣಗೊಳಸುವ ತತ್ವಗಳನ್ನು ಸುಂದರವಾಗಿ ಅಭಿವ್ಯಕ್ತಿಸಿದೆ. ಭಗವದ್ಗೀತೆಯ ಭಾಷಾಂತರಗಳಲ್ಲಿ ಕೂಡ ಅಲ್ಲಿರುವ ವಾಚ್ಯಾರ್ಥವನ್ನಷ್ಟೇ ಕನ್ನಡ ಗದ್ಯದಲ್ಲಿ ಹೇಳಿ ಮುಗಿಸುವಂತಹವೇ ಹೆಚ್ಚು. ಸ್ವಾಮಿ ಪ್ರಭವಾನಂದ ಮತ್ತು ಇಶರ್ ವುಡ್ ಇವರ ಇಂಗ್ಲಿಷ್ ಭಾಷಾಂತರ ಮಾತ್ರ ಇದಕ್ಕೆ ಹೊರತಾಗಿದೆ. ಭಗವದ್ಗೀತೆಯನ್ನು ಒಂದು ಕಾವ್ಯದ ಭಾಗವನ್ನಾಗಿ ಪರಿಗಣಿಸಿ ಅಲ್ಲಿರುವ ತಾತ್ವಿಕತೆಯನ್ನು ಇಡಿಯ ಮಹಾಭಾರತ ಹೇಗೆ ಪೋಷಿಸತ್ತದೆ ಎಂಬುದನ್ನು ತೋರಿಸುವಂತಹ ಕೃತಿಗಳು ವಿರಳ.  ಶ್ರೀ ನಾರಾಯಣಾಚಾರ್ಯರ  ಗೀತಾರತ್ನನಿಧಿ ಅಂಥಹ ಅಪುರೂಪದ ಕೃತಿಗಳಲ್ಲೊಂದು. ಪ್ರತಿಯೊಂದು ಪರಿಚ್ಛೇದವನ್ನು ಒಂದೊಂದು ರತ್ನವೆಂದು ಇಲ್ಲಿ ಕರೆಯಲಾಗಿದೆ.
   ನಾರಾಯಾಣಾಚಾರ್ಯರ ಪುಸ್ತಕದಲ್ಲಿ ಮೂರು ವಿಭಾಗಗಳಿವೆ. ಮೊದಲನೆಯ ವಿಭಾಗದಲ್ಲಿ’ಶ್ರೀಕೃಷ್ಣಾವತಾರದ ಉದ್ದೇಶ್ಯ’, ‘ಗೀತೋಪದೇಶದ ಪ್ರಧಾನೋದ್ದೇಶ್ಯ’, ‘ಗೀತೆಯು ಬೋಧಿಸುವ ಯೋಗಸ್ವರೂಪ’, ‘ಗೀತೆ ಬೋಧಿಸುವ ಅಹಿಂಸೆ’, ‘ಗೀತೆಯು ಬೋಧಿಸುವ ಯಜ್ಞದ ಅಂತರಂಗ’ – ಎಂಬ ಶೀರ್ಷಿಕೆಗಳಡಿಯಲ್ಲಿ ಸು.ಐವತ್ತು ಪುಟಗಳ ವಿಸ್ತಾರದಲ್ಲಿ ಒಂದು ಉತ್ತಮ ಪ್ರಸ್ತಾವನೆಯನ್ನು ನೀಡಿದ್ದಾರೆ. ಅನಂತರ  ಗೀತೆಯ ಒಂದನೆಯ ಅಧ್ಯಾಯಕ್ಕೆ ಸು. ಅಷ್ಟೇ ಸಂಖ್ಯೆಯ ಪುಟಗಳು ಮೀಸಲಾಗಿವೆ. ಎರಡನೆಯ ವಿಭಾಗದಲ್ಲಿ ಎರಡನೆಯ ಅಧ್ಯಾಯವಾದ ಸ್ಥಿತಪ್ರಜ್ಞಲಕ್ಷಣ ಇತ್ಯಾದಿ ವಿವರಣೆ ಇದ್ದು ನೂರಹದಿನೇಳು ಪುಟಗಳಷ್ಟು ವಿಸ್ತಾರವಾಗಿದೆ. ಮೂರನೆಯ ವಿಭಾಗದಲ್ಲಿ  ನೂರಹನ್ನೆರಡು ಪುಟಗಳಿವೆ ಮತ್ತು ಅದರ ಮೊದಲ ಏಳೆಂಟು ಪುಟಗಳಲ್ಲಿ ಮೊದಲೆರಡು ಅಧ್ಯಾಯಗಳ ಸಾರಾಂಶ ಅತಿಸಂಕ್ಷಿಪ್ತವಾಗಿ ಬಂದಿದ್ದು ಉಳಿದವುಗಳಲ್ಲಿ ಮತ್ತಿನ ಹದಿನಾರು ಅಧ್ಯಾಯಗಳ ಸಾರವಿದೆ. ಒಂದನೆ ಅಧ್ಯಾಯ ಕಾವ್ಯಮಯವಾಗಿದ್ದು ಗೀತೆಯ ತತ್ವಗಳನ್ನು ಯಾವ ಹಿನ್ನೆಲೆಯಲ್ಲಿ ಯಾವ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕೇಂಬುದನ್ನು ತಿಳಿಸುವುದರಿಂದ ಪ್ರತಿ ಶ್ಲೋಕದಲ್ಲಿ ಹೊರಡುವ ಧ್ವನಿಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಎರಡನೆಯ  ಅಧ್ಯಾಯವನ್ನು ವಿವರಿಸುವಾಗಲೂ ಈ ಪ್ರವೃತ್ತಿ ಮುಂದುವರೆದಿದ್ದು ವಿಸ್ತಾರವಾಗಿಯೇ ಇದೆ. ಸಾಧನೆಯ ಮೊದಲ ಹಂತವಾದ ಸ್ಥಿತಪ್ರಜ್ಞತೆಯನ್ನು ಹೊಂದಲು ಮಾಡಬೇಕಾಗಿರುವ ಉಪಾಯಗಳ ವಿವರವಾದ ಚರ್ಚೆ ಇಲ್ಲಿದೆ. ಅಲ್ಲಿಯೇ ಕರ್ಮಯೋಗದ ಜ್ಞಾನಯೋಗದ ಮಹತ್ವಗಳೂ ಚರ್ಚೆಯಾಗಿವೆ. ಒಂದನೆಯ ಅಧ್ಯಾಯ ಗೀತಾಧ್ಯಯನಕ್ಕೆ ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ ಮತ್ತು ಎರಡನೆಯದು ಸಾಧನೆಯ ಪ್ರಥಮಹಂತ ನಿರೂಪಣೆ ಎಂಬಂತಿದ್ದು ಈ ಹಂತದಲ್ಲಿ ಯಶಸ್ಸು ಗಳಿಸಿದವ ಮುಂದಿನ ಮೆಟ್ಟಿಲುಗಳನ್ನು ಬೇಗ ಬೇಗ ಏರುತ್ತಾನೆಂದೋ,  ಮುಂದೆ ಬರುವ ತತ್ವಗಳನ್ನು ಶೀಘ್ರವಾಗಿ ತಿಳಿಯಬಲ್ಲನೆಂದೋ ಮುಂದಿನ ಎಲ್ಲ ಅಧ್ಯಾಯಗಳನ್ನು ಮೂರನೆಯ ವಿಭಾಗದಲ್ಲಿ ಸಂಕ್ಷೇಪವಾಗಿ ಸಂಗ್ರಹಿಸಿದ್ದಾರೆ.
          ಭಗವದ್ಗೀತೆಯ ಚರ್ಚೆಯಲ್ಲಿ ಸಾಹಿತ್ಯಿಕ ದೃಷ್ಟಿ ಈ ಪುಸ್ತಕದ ಬಹುಭಾಗದಲ್ಲಿ ಕಂಡುಬರುವ ವೈಶಿಷ್ಟ್ಯ.ಮೊದಲನೆಯ ಅಧ್ಯಾಯವು ಈ ದೃಷ್ಟಿಯಿಂದ ಅನನ್ಯವಾದುದು. ಸಾಮಾನ್ಯವಾಗಿ ಪ್ರಥಮೋಧ್ಯಾಯವು ಪ್ರಾಸ್ತಾವಿಕವಾಗಿದ್ದು ಅದನ್ನು ಗಂಭೀರವಾಗಿ ಚರ್ಚಿಸಬೇಕಾಗಿಲ್ಲವೆಂದೇ ಹಲವು ಲೇಖಕರ ಮತವಾಗಿದ್ದು ಅದರಿಂದ ಒದಗುವ ಭೂಮಿಕೆಯನ್ನಷ್ಟೇ ಕೆಲವು ಮಾತುಗಳಲ್ಲಿ ಹೇಳಿ ಮುಗಿಸುತ್ತಾರೆ. ಇಲ್ಲಿ ಇದನ್ನು ಕಟ್ಟಡದ ನೆಲಗಟ್ಟೆಂಬಂತೆ ಪರಿಗಣಿಸಿ ಅದರ ಗಟ್ಟಿತನವನ್ನು ವಿಶ್ಲೇಷಿಸಿದ್ದಾರೆ. ಧೃತರಾಷ್ಟ್ರ ಪ್ರಶ್ನೆಯನ್ನು ಮುಂದಿಡುವ ಪ್ರಥಮ ಶ್ಲೋಕ ಕೇವಲ ಕುತೂಹಲಿಯೊಬ್ಬನ ಸಾಮಾನ್ಯ ಪ್ರಶ್ನೆಯಲ್ಲ. ತಾನು ಮತ್ತು ತನ್ನ ಕಡೆಯ ಸೈನ್ಯ ಬಲಶಾಲಿ, ನಮ್ಮ ಪಕ್ಷವನ್ನು ನೋಡಿ ಎದುರಾಳಿಗಳು ಓಡಿ ಹೋಗಿರಬೇಕಲ್ಲಾ ಅಥವ ಯುದ್ಧಕ್ಕೆ ನಿಂತೇ ಬಿಟ್ಟರೋ ಎಂಬಂತಹ ವ್ಯಂಗ್ಯ ತುಂಬಿದ ಪ್ರಶ್ನೆ ಎಂದು ಸ್ವಾರಸ್ಯಕರವಾಗಿ ಅರ್ಥೈಸಿದ್ದಾರೆ. ಸಂಜಯನ ವಿವರವಾದ ಉತ್ತರ ಧರತರಾಷ್ಟ್ರನಿಗೆ ಅಷ್ಟೇನೂ ತೃಪ್ತಿದಾಯಕವಾಗದೆ ದುರ್ಯೋಧನನ ಆತ್ಮವಿಶ್ವಾಸದ ಕೊರತೆ, ಅಹಂಕಾರಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಆ ಸಮಯದಲ್ಲಿ ಅರ್ಜುನ ವಿಷಾದಕ್ಕೊಳಗಾಗುವುದು ಶ್ರೀಕೃಷ್ಣನ ಒಂದು ತಂತ್ರವೆಂದೂ ವಿಷಾದಕ್ಕೆ ಪರಿಹಾರ ಒದಗುವುದರಿಂದ ಈ ಅಧ್ಯಾಯವನ್ನು ವಿಷಾದಯೋಗವೆಂದು ಕರೆದಿರುವುದಾಗಿಯೂ ಸಯುಕ್ತಿಕವಾಗಿ ಪ್ರತಿಪಾದಿಸಿದ್ದಾರೆ. ಹೀಗೆ ಗೀತೆಯ ಮೊದಲನೆಯ ಅಧ್ಯಾಯಕ್ಕೆ ಪುಸ್ತಕದ ಸು. ಮೂರರಲ್ಲಿ ಒಂದು ಭಾಗ ಮೀಸಲಾಗಿದೆ. ಈ ವಿಸ್ತಾರವು ಓದುಗನಿಗೆ ಸರಿಯಾದ ದೃಷ್ಟಿಕೋನವನ್ನೊದಗಿಸಿ ಗೀತೆಯನ್ನು ಅರ್ಥೈಸಿಕೊಳ್ಳಲು ಸಹಾಯಮಾಡುತ್ತವೆ.
          ಎರಡನೆಯ ಅಧ್ಯಾಯ(ವಿಭಾಗ)ದಲ್ಲಿ  ಒಂದು ರೀತಿಯ ಗೀತೆಯ ಪ್ರವರ್ತಕ ಶ್ಲೋಕಗಳಾದ “ಕುತಸ್ತ್ವಾ...” ಮತ್ತು “ಕ್ಲೈಬ್ಯಮ್...”  ಎಂಬಲ್ಲಿಂದ ಪ್ರಾರಂಭಿಸಿ ಅರ್ಜುನನ ಮತ ಹೇಗೆ ಅನಾರ್ಯವಾದುದೆಂಬುದನ್ನು ಒಟ್ಟು ಮಹಾಭಾರತ ಕಾವ್ಯದ ಸಂದರ್ಭದಲ್ಲಿ ಸಯುಕ್ತಿಕ ಅನುಮಾನಗಳನ್ನು ತೆಗೆದು ವಿವರಿಸಿದ್ದಾರೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವುದೇ ಯಾವುದೇ ಕಾಲದಲ್ಲೂ ಹೇಗೆ ಪ್ರಸ್ತುತ ಮತ್ತು ಕರ್ತವ್ಯ ಎಂಬುದನ್ನು ನಿರೂಪಿಸಿದ್ದಾರೆ. ಪ್ರಾಚೀನ ಭಾಷ್ಯಕಾರ ಮತ್ತು ವ್ಯಾಖ್ಯಾನಕಾರರಾದ ಶ್ರೀ ರಾಮಾನುಜರನ್ನೂ ವೇದಾಂತ ದೇಶಿಕರನ್ನೂ ಹೆಚ್ಚಾಗಿ  ಉಲ್ಲೇಖಿಸಿದ್ದಾರೆ. ಈ ಸಂಬಂಧ ಬರ್ಟ್ರೆಂಡ್ ರಸೆಲ್ ಮತ್ತು ಗಾಂಧಿಯವರು ಕೈಗೊಂಡ ಕೆಲವು ನಿರ್ಣಯಗಳನ್ನೂ ವಿಮರ್ಶಿಸಿ ಒಂದು ಕ್ಷಣದಲ್ಲಿ ಎಂತಹ ವಿದ್ವಾಂಸರನ್ನೂ ಅಜ್ಞಾನವು ಹೇಗೆ ಕಾಡಬಹುದೆಂಬುದನ್ನು ಇವು ತೋರಿಸುತ್ತವೆ ಎಂದು ಸೂಚಿಸಿದ್ದಾರೆ. ಎರಡನೆಯ ವಿಭಾಗವನ್ನು ಸ್ಥಿತ ಪ್ರಜ್ಞಯೋಗವೆಂದೇ ಹೆಸರಿಸಲಾಗಿದೆ. ಇದರಲ್ಲಿ  ಸ್ಥಿತಪ್ರಜ್ಞ ಲಕ್ಷಣ ಮತ್ತು ಸಮಾಧಿಸ್ಥಿತಿ ಸಾಧನಾಮಾರ್ಗ – ಇವುಗಳ ವಿಸ್ತಾರವಾದ ವಿವರಣೆಯಿದ್ದು ಈ ಗ್ರಂಥದಲ್ಲಿ ಈ ಸಂಬಂಧ ನೂರಕ್ಕೂ ಹೆಚ್ಚು ಪುಟಗಳ್ನು ಮೀಸಲಿಟ್ಟಿದ್ದಾರೆ. ಹಲವು ಚಿಕ್ಕ ಪರಿಚ್ಛೇದಗಳಲ್ಲಿ ವಿಭಿನ್ನ ಶೀರ್ಷಿಕೆಗಳಡಿಯಲ್ಲಿ ನಿರ್ದಿಷ್ಟ ವಿಷಯಗಳನ್ನು ಚರ್ಚಿಸಿರುವುದರಿಂದ ಏಕತಾನತೆ ಅನುಭವಕ್ಕೆ ಬರದೆ ಆಸಕ್ತಿದಾಯಕವಾಗುತ್ತದೆ.
          ಗ್ರಂಥದ ಉಳಿದ ಮೂರರಲ್ಲಿ ಒಂದಂಶ ಭಾಗ(ಮೂರನೆಯ ವಿಭಾಗ)ದಲ್ಲಿ ಗೀತೆಯ ಉಳಿದ ಹದಿನಾರು ಅಧ್ಯಾಯಗಳ ಸಂಕ್ಷಿಪ್ತ ನೋಟವಿದೆ. ವಿಶ್ವರೂಪ ದರ್ಶನ, ದೈವಾಸುರ ಸಂಪತ್ತು ವಿಮರ್ಶೆ ಮುಂತಾದುವೆಲ್ಲ ನಾರಾಯಣಾಚಾರ್ಯರ ಸುಲಲಿತ ಸುಸೂತ್ರ ನಿರೂಪಣೆಯಲ್ಲಿ ಆಪ್ಯಾಯಮಾನವಾಗುತ್ತವೆ. ಒಟ್ಟಿನಲ್ಲಿ ನವೋನವೀನವಾದ ಭಗವದ್ಗೀತೆಯ ಜಿಜ್ಞಾಸುಗಳಿಗೆ ಹೊಸ ಮತ್ತು ಇಂದಿಗೆ ಪ್ರಸ್ತುತವಾದ ರೀತಿಯಲ್ಲಿ ಗೀತೆಯ ಸಾರ ಇಲ್ಲಿ ಗೋಚರವಾಗುತ್ತದೆ. ಅಧಿಕೃತತೆ ಮತ್ತು ಆಪ್ತತೆ ಇವುಗಳಿಂದ ಭಗವದ್ಗೀತೆಯಂತೆಯೇ ಶ್ರೀಗೀತಾರ್ಥರತ್ನನಿಧಿ ಕೂಡ ನಿತ್ಯ ಪಾರಾಯಣಯೋಗ್ಯ.

          

No comments:

Post a Comment