Search This Blog

Monday 25 May 2015

ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡಿಗರ ಕೈಯಲ್ಲೊಂದು ವಿಶಿಷ್ಟ ಪದಾರ್ಥ ಕೋಶ

Today
        ದ್ರಾವಿಡಭಾಷಾ ಜ್ಞಾತಿಪದಕೋಶ  -  ಕನ್ನಡಿಗರ ಕೈಯಲ್ಲೊಂದು ವಿಶಿಷ್ಟ ಪದಾರ್ಥ ಕೋಶ

ಯಾವುದೇ ಭಾಷೆಯಲ್ಲಿ ಒಂದು ಪದಕ್ಕೆ ಒಂದೇ ಅರ್ಥವಲ್ಲ. ಪ್ರಸಂಗವಶಾತ್ ಹಲವು ಅರ್ಥಗಳು. ಅದೇ ಪದ ಸೋದರ ಭಾಷೆಯಲ್ಲೂ ಇದ್ದರೆ ಅಲ್ಲಿ ಅದರ ಅರ್ಥ ಬೇರೆಯೇ ಆಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಯಾವುದೇ ಪದವನ್ನು ನೋಡಬಹುದು. “ಕುಡಿ” ಎಂಬ ಕನ್ನಡದ್ದೇ ಪದಕ್ಕೆ  ನಿಮಗೆ ಒಂದು ಅರ್ಥ ಗೊತ್ತಿರಬಹುದು. ಅದಕ್ಕಿರುವ ಬೇರೆಬೇರೆ ಅರ್ಥಗಳು ನಿಮಗೆ ಗೊತ್ತೆ? ಹಾಗೆ ಗೊತ್ತಿದ್ದರೂ ತಮಿಳಿನಲ್ಲಿ, ಮಲಯಾಳಂನಲ್ಲಿ, ತೆಲುಗಿನಲ್ಲಿ, ಕೊಡವರ ಭಾಷೆಯಲ್ಲಿ, ತುಳುವಿನಲ್ಲಿ ಇತ್ಯಾದಿ ದ್ರಾವಿಡ ನುಡಿಗಳಲ್ಲಿ ಏನೇನು ಅರ್ಥಗಳಿವೆ ಎಂಬುದನ್ನು ಬಲ್ಲಿರಾ? ಆ ಪದದಿಂದ ಬರುವ ಹಲವು ಪದಗಳನ್ನು ಪತ್ತೆಹಚ್ಚಬಲ್ಲಿರಾ?
“ಕುಡಿ” ಎಂಬುದಕ್ಕೆ ಪಾನಮಾಡು, ತುದಿ, ಚಿಗುರು,ವಂಶದ ಮಗು ಇತ್ಯಾದಿ ಅರ್ಥಗಳು ಕನ್ನಡದಲ್ಲಿರಬಹುದು.ತಮಿಳು ಮಲಯಾಳಂಗಳಲ್ಲಿ “ಕುಡಿ” ಎಂದರೆ ಪಾನ ಮಾಡು ಎಂದು ಮಾತ್ರ ಅರ್ಥ. ಮಲಯಾಳಂ, ತುಳು, ತೆಲುಗುಗಳಲ್ಲಿ ತುದಿ ಎಂಬರ್ಥ ಬರಬೇಕಾದರೆ “ಕೊಡಿ” ಎನ್ನಬೇಕು; ತಮಿಳಿನಲ್ಲಿ “ಕೋಡು” ಎನ್ನಬೇಕು. “ಕುಡ್ಚು”, “ಕುಡುಚು” ಎಂದರೆ ತುಳು ಮತ್ತು ತೆಲುಗುಗಳಲ್ಲಿ ಪಾನಮಾಡು ಎಂದರ್ಥ .ಕನ್ನಡದಲ್ಲಿ “ಕುಡ್ತೆ” ಎಂಬ ಹಾಲಿನ ಅಳತೆಯ ಪ್ರಮಾಣ “ಒಂದುಸಲ ಕುಡಿಯುವಷ್ಟು” ಎಂಬರ್ಥದಲ್ಲಿ ಇದೇ ಪದದಿಂದ ಬಂದದ್ದು  -   ಇಂತಹ  ಎಲ್ಲ ವಿವರಗಳು ಒಂದೇ ಕಡೆಗೆ ಸಿಕ್ಕಿದರೆ ಎಷ್ಟು ಚೆನ್ನ ಎಂದೆನಿಸುವುದಿಲ್ಲವೆ? ನಿಮಗಾಗಿ ಬಂದಿದೆ ಹೊಸದೊಂದು ಉದ್ಗ್ರಂಥ. ಇದರ ಹೆಸರೇ ದ್ರಾವಿಡ ಭಾಷಾ ಜ್ಞಾತಿಪದಕೋಶ. ಇದೊಂದು ವಿಶಿಷ್ಟ ತರಹದ ಕನ್ನಡ-ಕನ್ನಡ ನಿಘಂಟು.
ಈ ಗ್ರಂಥವು ಹಂಪನಾ ಅವರ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಸದಿಂದ ಹೊರತಂದ ಕೃತಿ. ಗ್ರಂಥದಲ್ಲಿ xx + 685 ಪುಟಗಳಿವೆ. ಇದರ ಸಂಪಾದಕವರ್ಗ ಇಲ್ಲಿ ಒಟ್ಟು 3808 ಕನ್ನಡ ಪದಗಳನ್ನು ಮುಖ್ಯಪದಗಳನ್ನಾಗಿಟ್ಟುಕೊಂಡು, ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಅರ್ಥಗಳನ್ನು ನೀಡಿದ್ದಾರೆ. ಎಲ್ಲ ಪ್ರಧಾನ ದ್ರಾವಿಡಭಾಷೆಗಳಲ್ಲಿ ಅದಕ್ಕಿರುವ ಸಮಾನ ಪದಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದ ಕನ್ನಡಪದವೊಂದಕ್ಕೆ ತಮಿಳು, ಮಲಯಾಳಂ, ಕೊಡವ, ತುಳು ಮತ್ತು ತೆಲುಗು ಭಾಷೆಗಳಲ್ಲಿರುವ ಸಂವಾದಿ ಪದಗಳನ್ನು ತಿಳಿಯಲು ಅನುಕೂಲವಾಗಿದೆ. ಹವ್ಯಕ ಕನ್ನಡ, ಗೌಡ ಕನ್ನಡ, ಜೇನುಕುರುಬ ಕನ್ನಡ ಇತ್ಯಾದಿ ಉಪಭಾಷೆಗಳಲ್ಲಿ ಯಾವರೂಪ ಮತ್ತು ಅರ್ಥದಲ್ಲಿ ಈ ಪದ ಬರುತ್ತದೆ ಎಂಬುದನ್ನೂ ವಿವರಿಸಿದ್ದಾರೆ.
ಹಾಗೆ ನೋಡಿದರೆ ಇದು ಕನ್ನಡದ ಮೊದಲ ಜ್ಞಾತಿಪದಕೋಶವಲ್ಲ. ಟಿ ಬರೋ ಮತ್ತು ಎಮ್ ಬಿ ಎಮಿನೋ ಎಂಬ ಪಾಶ್ಚಾತ್ಯ ವಿದ್ವಾಂಸರು 1961 ರಲ್ಲಿ ಇಂತಹ ಒಂದು ನಿಘಂಟನ್ನು ರಚಿಸಿದರು. 1984ರಲ್ಲಿ ಅದರ ಪರಿಷ್ಕೃತ ಆವೃತ್ತಿ ಪ್ರಕಟವಾಯಿತು. 1998ರಲ್ಲಿ ಪುನರ್ಮುದ್ರಣವಾಗಿದೆ. ಈಗ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ದ್ರಾವಿಡಭಾಷಾ ಜ್ಞಾತಿಪದಕೋಶ ನಿಘಂಟು ಕನ್ನಡದ ಸಂದರ್ಭಕ್ಕೆ ಸರಿಹೊಂದುವಂತೆ ರಚಿತವಾದುದು. ಹಲವು ರೀತಿಗಳಲ್ಲಿ ಇದು ಬರೋ-ಎಮಿನೋ ನಿಘಂಟನ್ನು ಮುಂದುವರೆಸಿದೆ. ಅಲ್ಲಿ ಕನ್ನಡದ ಉಪಭಾಷೆಗಳಲ್ಲಿ ಹವ್ಯಕ ಮಾತ್ರ ಹೆಚ್ಚಾಗಿ ಉಲ್ಲೇಖಗೊಂಡಿದ್ದರೆ ಈಗಿನ ದ್ರಾವಿಡಭಾಷಾ ಜ್ಞಾತಿಪದಕೋಶದಲ್ಲಿ ಹಾಲಕ್ಕಿ ಕನ್ನಡ, ಜೇನುಕುರುಬ ಕನ್ನಡ, ನಂಜನಗೂಡ ಕನ್ನಡ, ಬಾರ್ಕೂರು ಕನ್ನಡ ಇತ್ಯಾದಿಯಾಗಿ ಒಂಬತ್ತು ಉಪಭಾಷೆಗಳ ಪದಗಳನ್ನು ಉಲ್ಲೇಖಿಸಿದ್ದಾರೆ.  ಕನ್ನಡಿಗರಿಗಾಗಿ ರಚಿಸಿರುವುದರಿಂದ ಇದರಲ್ಲಿ ಎಲ್ಲವೂ ಕನ್ನಡ ಲಿಪಿಗಳಲ್ಲಿ ಮಾತ್ರವಿದೆ. ಕನ್ನಡ ಪದಗಳನ್ನು ಮಾತ್ರ ಪ್ರಧಾನ ಪದಗಳನ್ನಾಗಿ ಉಲ್ಲೇಖಿಸಲಾಗಿದೆ. ಬರೋ-ಎಮಿನೋ ನಿಘಂಟಿನಂತೆ ಎಲ್ಲ ಪದಗಳನ್ನೂ ಲಿಪ್ಯಂತರಿತ(ಇಂಗ್ಲಿಷ್ ಅಕ್ಷರಗಳನ್ನು ಬಳಸಿ) ವಿಧಾನದಲ್ಲಿ ಮಾತ್ರ ಬರೆದಿಲ್ಲ. ಅಲ್ಲಿ ಪ್ರಾಚೀನತೆಯನ್ನಾಧರಿಸಿ ಇತರ ದ್ರಾವಿಡ ಭಾಷಾ ಪದಗಳೂ ಉಲ್ಲೇಖಪದಗಳಾಗಿವೆ; ಹಾಗೆ ನೋಡಿದರೆ ತಮಿಳು ಪದಗಳೇ ಉಲ್ಲೇಖ ಪದಗಳಾಗಿರುವುದು ಹೆಚ್ಚು. ಉದಾ.”ಕುದಿ” ಎಂಬ ಕನ್ನಡ ಪದವು ಬರೋ-ಎಮಿನೋ ನಿಘಂಟಿನಲ್ಲಿ ಸ್ವತಂತ್ರ ನಮೂದಲ್ಲ. ತಮಿಳಿನ “ಕೊತ” ಪದದಡಿ ಬಂದಿರುವ ಪದ. ಇವೆಲ್ಲವೂ ಇಲ್ಲಿ ಸುಧಾರಣೆ ಕಂಡಿವೆ. ಕನ್ನಡ ಪದಗಳೇ ಉಲ್ಲೇಖ ಪದಗಳು. ಕನ್ನಡ ಅಕ್ಷರಗಳಲ್ಲೇ ಮುದ್ರಣ.  ಮೇಲ್ನೋಟಕ್ಕೆ  ಈ ಹೊಸ ನಿಘಂಟಿನಲ್ಲಿ 3808ಪದಗಳು ಮಾತ್ರವಿರುವಂತೆ ಕಾಣುತ್ತದೆ. ಆದರೆ ನಿಘಂಟಿನಲ್ಲಿ ಬಂದಿರುವ ಎಲ್ಲ ಪದಗಳ ಅಕಾರಾದಿ ಸೂಚಿಯೊಂದನ್ನು ಕೊನೆಯಲ್ಲಿ ರಚಿಸಿಕೊಟ್ಟಿದ್ದು ಅದರಲ್ಲಿ ಎಣಿಸಿದಾಗ ನಿಘಂಟಿನಲ್ಲಿ ಪದಗಳ ಸಂಖ್ಯೆ 11632 ಆಗಿರುವುದು ಗೊತ್ತಾಗುತ್ತದೆ. ಈ ಸೂಚಿಯನ್ನು ಬಳಸಿಕೊಂಡು ಯಾವುದೇ ಪದವನ್ನು ಮುಖ್ಯನಿಘಂಟಿನಲ್ಲಿ ಹುಡುಕಬಹುದು. ಅರ್ಥ ಮತ್ತು ವಿವರಗಳನ್ನು ತಿಳಿಯಬಹುದು. ಹೀಗೆ ಇದು ಬರೋ-ಎಮಿನೋ ನಿಘಂಟಿನ ಮುಂದುವರಿಕೆಯಾಗಿದ್ದು ಕನ್ನಡ ಲಿಪಿಗಳ ಬಳಕೆ, ಕನ್ನಡದ ಉಲ್ಲೇಖ ಪದಗಳಿರುವುದು, ಪ್ರಾಚೀನ ನಿಘಂಟುಗಳಿಂದ ಪ್ರಮಾಣೀಕೃತ ನಮೂದುಗಳನ್ನು ಒಳಗೊಂಡಿರುವುದು, ಕನ್ನಡದ ಒಂಬತ್ತು ಉಪಭಾಷೆಗಳಿಂದ ಉಲ್ಲೇಖಗಳನ್ನು ಆಯ್ದಿರುವುದು ಇಂತಹವು  ಹೊಸ ನಿಘಂಟಿನ ವೈಶಿಷ್ಟ್ಯಗಳಾಗಿವೆ. ಆದಾಗ್ಯೂ ಉಲ್ಲೇಖಿತ ದ್ರಾವಿಡ ಭಾಷೆಗಳ ಸಂಖ್ಯೆಯನ್ನು ಗಮನಿಸಿದರೆ ಇದು ಸೀಮಿತವಾಗಿದೆ. ಮಾತಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ದ್ರಾವಿಡನುಡಿಗಳೂ ಸೇರಿದಂತೆ ಒಟ್ಟು ಹತ್ತೊಂಬತ್ತು ಭಾಷೆಗಳನ್ನು ಹಿಂದಿನ ನಿಘಂಟಿನಲ್ಲಿ  ಉಲ್ಲೇಖಿಸಿದ್ದರೆ ಈ ನಿಘಂಟಿನಲ್ಲಿ “ದಕ್ಷಿಣದ ಆರು ಪ್ರಮುಖ ಭಾಷೆಗಳಿಗೆ ಸಂಬಂಧಿಸಿದಂತೆ ಬರೋ ಅವರ ಜ್ಞಾತಿಪದಕೋಶ(1984)ದಲ್ಲಿಯ ಉಲ್ಲೇಖ ಪದಗಳನ್ನು ಪರಿಷ್ಕರಿಸುವುದು ಹಾಗೂ ಕನ್ನಡವನ್ನಾಧರಿಸಿದ ಹೆಚ್ಚಿನ ಉಲ್ಲೇಖ ಪದಗಳನ್ನು ಸೇರ್ಪಡೆಗೊಳಿಸುವುದು” ಇಲ್ಲಿರುವ ಆಶಯ.
ಈ ನಿಘಂಟಿನಲ್ಲಿ ಪ್ರತಿಪದಕ್ಕೆ ಕನ್ನಡದಲ್ಲಿ ವ್ಯಾಖ್ಯೆ ಇದೆ. ಇತರ ದ್ರಾವಿಡ ಭಾಷೆಗಳನ್ನು ಉಲ್ಲೇಖಿಸಿ ಅವುಗಳಲ್ಲಿರುವ ಅರ್ಥವನ್ನು ನೀಡಿದೆ. ಉದಾ. “ಕುದಿ” ಎಂಬ ಉಲ್ಲೇಖ ಪದದಡಿ ತುಳುವಿನಲ್ಲಿ ಇದು “ಕೊದಿ” ಎಂದಿರುವುದನ್ನು ಉಲ್ಲೇಖಿಸಿ “ಕೊದ್ದೇಲು” ಎಂಬ ಪದವನ್ನೂ ನಮೂದಿಸಿದೆ. ಇದರಿಂದ ‘ಕುದ್ದಿದ್ದು ಕೊದ್ದೇಲು’ ಎಂಬಂತೆ ನಿಷ್ಪತ್ತಿ ಹೊಳೆಯುತ್ತದೆ. ಈ ಕೊದ್ದೇಲು ಎಂಬ ಪದವನ್ನು ಹೀಗೆ ಸೇರಿಸಿರುವುದು ಹಳೆಯ ನಿಘಂಟು ಹೇಗೆ ಪರಿಷ್ಕರಣೆಗೊಂಡಿದೆ ಎಂಬುದಕ್ಕೆ ಒಂದು ನಿದರ್ಶನ. ಕುರ್ಕ, ತರಗು, ನೆತ್ತಿ, ಬರಣಿ – ಹೀಗೆ ಹಿಂದಿನ ನಿಘಂಟಿನಲ್ಲಿಲ್ಲದ ಹಲವು ಪದಗಳು ಇಲ್ಲಿ ಉಲ್ಲೇಖಗೊಂಡಿವೆ. ದ್ರಾವಿಡ ಭಾಷೆಗಳಲ್ಲಿ ಜ್ಞಾತಿಗಳಿರುವಂತಹ ಸಂಸ್ಕೃತ,  ಹಿಂದಿ, ಮರಾಠಿ ಪದಗಳನ್ನು ನೀಡಿದ್ದಾರೆ. ಉದಾ. “ವಡೆ” ಎಂಬುದು ಸಂಸ್ಕೃತ ಮೂಲದ್ದು. “ಡೊಕ್ಕರ” ಎಂಬ ಪದ ಸಂಸ್ಕೃತದ ‘ದೋಃಕರಮ್’ ಮತ್ತು ಹಿಂದಿಯ ‘ಠೋಕರ’ ಎಂಬ ಪದಗಳೊಡನೆ ಸಂಬಂಧ ಹೊಂದಿರಬಹುದೆಂದು  ಸೂಚಿಸಿದೆ. “ಡಾಳ”  ಎಂಬುದು ಮರಾಠಿಯ ‘ಢಾಳ’ ಎಂಬ ಮೂಲದ್ದೆಂದು ತಿಳಿಸಿದೆ. ಇಂತಹ ಇನ್ನೂ ಎಷ್ಟೋ ವೈಶಿಷ್ಟ್ಯಗಳು ಈ ಹೊತ್ತಗೆಯಲ್ಲಿವೆ. ಪೂರ್ಣಾನಂದ ಪಡೆಯಲು ಕೃತಿಯ ಪುಟಗಳ ಮೇಲೆ ನೀವು ಕಣ್ಣಾಡಿಸಲೇ ಬೇಕು.
ಇದನ್ನೆಲ್ಲ ಆಗುಮಾಡಿದವರು ಕೆ ಪಿ ಭಟ್ಟ, ಎ ವಿ ನಾವಡ, ಪಿ ಕೇಕುಣ್ಣಾಯ, ಜಿ ಎಸ್ ಮೋಹನ, ಎಮ್ ಕುಂಟಾರ, ಸೆಲ್ವಕುಮಾರಿ ಮತ್ತು ಎಮ್ ಟಿ ರತಿ ಎಂಬ ಕನ್ನಡನಾಡಿನ ಜನಜನಿತ ವಿದ್ವಾಂಸರು. ಇವರು ಹಂಪನಾ ಅವರ ನೇತೃತ್ವದಲ್ಲಿ ಪಟ್ಟಿರುವ ಶ್ರಮದಿಂದ ಸಾಮಾನ್ಯ ಓದುಗನ ಕುತೂಹಲ ತಣಿಯುತ್ತದೆ. ಸಂಶೋಧಕರಿಗೆ ಉಪಯುಕ್ತ ಸಂಪನ್ಮೂಲ ದೊರೆಯುತ್ತಿದೆ. ಇವಕ್ಕೆಲ್ಲ ಪುಸ್ತಕ ಜನರ ಕೈಸೇರಬೇಕು. ಸಾಹಿತ್ಯ ಪರಿಷತ್ತಿನ ಶ್ರೀ ಜೆ ಎನ್ ಶ್ಯಾಮರಾಯರು ಈ ವಿದ್ವತ್ಕಾರ್ಯವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತವರು. ಇವರೆಲ್ಲರ ಪ್ರಯತ್ನಗಳಿಗೆ ಜಯವಾಗಲಿ! ಈ ಕೃತಿಯನ್ನು ಅಭ್ಯಾಸ ಮಾಡಲೆಂದಾದರೂ ಇತರ ಭಾಷಿಗರು ಕನ್ನಡವನ್ನು ಕಲಿಯುವಂತಾಗಲಿ!!

          ………………………………………………………………………………………………………………………………………………………………………

2 comments:

  1. Nice Information..!! Will be useful as a reference...!!

    ReplyDelete
  2. ಮಾಹಿತಿಗಾಗಿ ಧನ್ಯವಾದಗಳು

    ReplyDelete