Search This Blog

Tuesday 14 August 2018

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವ್ಯಾಕರಣಾಧ್ಯಯನ - ಡಿ ಎನ್ ಶಂಕರಭಟ್ಟ, ಎಂ ವಿ ಸೀತಾರಾಮಯ್ಯ ಮತ್ತು ರಂಗನಾಥ ಶರ್ಮ


   
   ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವ್ಯಾಕರಣಾಧ್ಯಯನ
                                   ಡಿ ಎನ್ ಶಂಕರಭಟ್ಟ, ಎಂ ವಿ ಸೀತಾರಾಮಯ್ಯ ಮತ್ತು ರಂಗನಾಥ ಶರ್ಮ
                                                ++++++++++++++++++++++++++++
ಹಳಗನ್ನಡ ಕಾಲದಲ್ಲಿ ಸಂಸ್ಕೃತ ವ್ಯಾಕರಣ ಪದ್ಧತಿಗಳನ್ನನುಸರಿಸಿ ಕನ್ನಡ ವ್ಯಾಕರಣಗಳ ರಚನೆಯಾಯಿತು. ಕೇಶಿರಾಜನ ಶಬ್ದಮಣಿದರ್ಪಣ, ನಾಗವರ್ಮನ ಶಬ್ದಸ್ಮೃತಿ ಇತ್ಯಾದಿಗಳು ಕಾತಂತ್ರ ಪದ್ಧತಿಯನ್ನನುಸರಿಸಿ ರಚನೆಯಾದುವುಗಳಾದರೆ ಭಟ್ಟಾಕಳಂಕದೇವನ ಶಬ್ದಾನುಶಾಸನ ಪಾಣಿನಿಯ ಪದ್ಧತಿಯನ್ನು ಅನುಸರಿಸಿದೆ. ಇಲ್ಲೆಲ್ಲ ನಾಮಪದ, ಕ್ರಿಯಾಪದ ಮತ್ತು ಅವ್ಯಯಗಳೆಂಬ ಪದಗಳ ತ್ರಿವರ್ಗೀಕರಣವನ್ನು ಅನುಸರಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ಮಿಶನರಿಗಳ ಆಗಮನದ ನಂತರ ಇಂಗ್ಲಿಷ್ ವ್ಯಾಕರಣ ಮಾದರಿಗಳನ್ನು ಅನುಸರಿಸಿ ವ್ಯಾಕರಣಗಳ ರಚನೆ ಕ್ನಡದಲ್ಲಿ ಮೊದಲ್ಗೊಂಡಿತು. ವ್ಯಾಕರಣ ಕೃತಿಗಳ ಸಂಖ್ಯಾ ಬಾಹುಳ್ಯ ಹೆಚ್ಚಿತು. ಇವುಗಳಲ್ಲಿ ಅಷ್ಟವರ್ಗೀಕರಣವೇ ಜೀವಾಳ. ಒಟ್ಟಿನಲ್ಲಿ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವರೆಗೆ ರಚಿತವಾದ ಎಲ್ಲ ಕನ್ನಡ ವ್ಯಾಕರಣಗಳು ತಮ್ಮ ಪ್ರೇರಣೆಯನ್ನು ಬೇರೊಂದು ಭಾಷೆಯ ವ್ಯಾಕರಣದ ವಿನ್ಯಾಸದಿಂದ ಪಡೆದಂತಹವು. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವಿರ ಬೇಕೆಂಬುದರ ಬಗ್ಗೆ ವಿಪುಲವಾದ ಚರ್ಚೆ ನಡೆಯಿತು ಮತ್ತು ಪರ ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡವು. ಅಲ್ಲದೆ ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನಗಳು ಎರಡು ಬಂದಿವೆ. ಈ ಎಲ್ಲವುಗಳ ಒಂದು ಸಂಕ್ಷಿಪ್ತ  ಚರ್ಚೆ ಇಲ್ಲಿದೆ.
2.     ಇಪ್ಪತ್ತನೆಯ ಶತಮಾನದ ಹೊಸ ಪ್ರವೃತ್ತಿಗಳು
ಕನ್ನಡ ವ್ಯಾಕರಣವು ಇತರ ಭಾಷಾ ವ್ಯಾಕರಣಗಳ ಅನುಸರಣೆಯಾಗದೆ ಕನ್ನಡದ ಸ್ವರೂಪವನ್ನು ಸ್ವೋಪಜ್ಞವಾಗಿ ಪರಿಶೀಲನೆಯಿಂದ ಮೂಡಿ ಬರ ಬೇಕೆಂಬ ತತ್ವವನ್ನು ಮೊದಲು ಪ್ರತಿಪಾದಿಸಿದವರು ಸೇಡಿಯಾಪು ಕೃಷ್ಣ ಭಟ್ಟರು. “ಕನ್ನಡದ ಜಾಯಮಾನಕ್ಕೆ ತಕ್ಕಂತೆ [ಮತ್ತು] ಇಂದಿನ ಭಾಷಾ ವ್ಯವಸ್ಥೆಗೆ ತಕ್ಕಂತೆ ಕಾಣಿಸಬಹುದಾದ ಮತ್ತು ತದುಪಭೇದಗಳ ವಿವೃತಿ” (ಸೇಡಿಯಾಪು,ಪು256)ಯಾಗಬೇಕೆಂಬ ತುಡಿತವನ್ನು ಇವರ ಕೃತಿಗಳಲ್ಲಿ ನಾವು ಕಾಣಬಹುದು. “ಕನ್ನಡದ ಹಲವು ವ್ಯಾಕರಣ ಪುಸ್ತಕಗಳಲ್ಲಿ ಇಂಗ್ಲಿಷ್ ವ್ಯಾಕರಣವನ್ನು ಕಣ್ಮುಚ್ಚಿ ಅನುಕರಿಸಿ ನಾಮಪದಗಳನ್ನು ವರ್ಗೀಕರಿಸಿರುವುದು ಕಂಡುಬರುತ್ತದೆ” (ಸೇಡಿಯಾಪು, ಪು246) ಇಂತಹ ದೋಷಗಳನ್ನು ಸರಿಪಡಿಸಬೇಕೆಂಬ ಭಾವನೆ ಅವರಲ್ಲಿ ಬಲವಾಗಿತ್ತು. ತಮ್ಮ ಹಲವು ಕೃತಿಗಳಲ್ಲಿ ಅವರು ಇಂತಹ ಪ್ರತಿಪಾದನೆಗಳನ್ನು ಮುಂದಿಟ್ಟಿದ್ದರೂ ಕನ್ನಡ ವ್ಯಾಕರಣದ ಸ್ವರೂಪ ಹೀಗೆಯೇ ಇರಬೇಕೆಂಬ ಒಂದು ಸುಸಂಬದ್ಧ ಸಿದ್ಧಾಂತವನ್ನು ಅವರು ಮಂಡಿಸಿದಂತೆ ತೋರುವುದಿಲ್ಲ.
ಇಂತಹ ಸ್ವರೂಪದ ಬಗ್ಗೆ ಒಂದು ಗಟ್ಟಿ ನಿಲುವನ್ನು ಡಿ ಎನ್ ಶಂಕರ ಭಟ್ಟರ ಕೃತಿಗಳಲ್ಲಿ ಗುರುತಿಸಬಹುದು. ಅವರ ಏಳು ಕೃತಿಗಳಲ್ಲಿ ಇಂತಹ ವಿಷಯಗಳು ಸವಿಸ್ತಾರವಾಗಿ ಬಂದಿವೆ. ಅವು ಯಾವುವೆಂದರೆ:
1.    ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (2000)
2.    ಕನ್ನಡ ವಾಕ್ಯಗಳ ಒಳರಚನೆ (2004)
3.    ಕನ್ನಡ ಭಾಷೆಯ ಕಲ್ಪಿತ ಚರಿತ್ರೆ  (1995)
4.    ಕನ್ನಡ ಸರ್ವನಾಮಗಳು  (2003)
5.    ಕನ್ನಡ ವಾಕ್ಯಗಳು  (1978)
6.    ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹುದು  (2005)
7.    ಕನ್ನಡ ಶಬ್ದ ರಚನೆ  (1999)
ಸಂಸ್ಕೃತ ವ್ಯಾಕರಣದ ಪರಿಭಾಷೆಯಿಂದ ಮತ್ತು ಇಂಗ್ಲಿಷ್ ವ್ಯಾಕರಣದ ಪರಿಕಲ್ಪನೆಗಳಿಂದ ಕನ್ನಡ ವ್ಯಾಕರಣವನ್ನು ಬಿಡಿಸ ಬೇಕೆಂಬ ಕಾಳಜಿ ಇವರ ಎಲ್ಲ ಕೃತಿಗಳಲ್ಲಿ ಕಂಡುಬರುವ ಅಂಶ. ಕಲಿಯುವವನಿಗೆ ವ್ಯಾಕರಣವನ್ನು ಸುಳಭಗೊಳಿಸುವುದು ಹೇಗೆ ಎಂಬುದು ಇವರ ಇನ್ನೊಂದು ಕಾಳಜಿ. ಭಾಷಾ ಶಾಸ್ತ್ರದ ಆಳವಾದ ಅಧ್ಯಯನ, ವ್ಯಾಪಕವಾಗಿ ಭಾಷಾ ರಚನೆಗಳ ಪರಿಶೀಲನೆ, ವಸ್ತು ನಿಷ್ಠತೆ – ಇವು ಇವರ ಕೃತಿಗಳ ವೈಶಿಷ್ಟ್ಯ. ಈ ಮುಪ್ಪುರಿಯಿಂದ ಕನ್ನಡದಲ್ಲಿ ಭಾಷಾ ಚಿಂತನೆಗೆ ಸಂಬಂಧಿಸಿ ಇವರಿಗೆ ವಿಶಿಷ್ಟ ಸ್ಥಾನವಿದೆ.  ಇವರ ಎಲ್ಲ ಕೃತಿಗಳ ವಿಶ್ಲೇಷಣೆಯನ್ನು ಇಲ್ಲಿ ಪ್ರಯತ್ನಿಸಿಲ್ಲವಾದರೂ ಇವರ ಚಿಂತನೆಗಳ ದಿಕ್ಕನ್ನು, ನಿರೂಪಣೆಯ ರೀತಿಗಳನ್ನು ಮತ್ತು ಸಾಂಪ್ರದಾಯಿಕ ವ್ಯಾಕರಣದಿಂದ ಇವು ಹೇಗೆ ಭಿನ್ನವಾಗುತ್ತವೆ ಎಂಬುದನ್ನೂ ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದೇನೆ.
ಭಟ್ಟರು ಈ ಕೃತಿಗಳ ರಚನಾ ಪೂರ್ವದಲ್ಲಿ ಕನ್ನಡ ವ್ಯಾಕರಣ ಸಾಹಿತ್ಯವನ್ನು ವಿವರವಾಗಿ ಪರಿಶೀಳಿಸಿದ್ದಾರೆ. ಕನ್ನಡ ವ್ಯಾಕರಣ ಪದ್ಧತಿಗಳನ್ನು ಹೋಲಿಸಿದ್ದಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ಪ್ರೇರಿತ ವ್ಯಾಕರಣಗಳ ಪರಿಮಿತಿಗಳನ್ನು ಗುರುತಿಸಿದ್ದಾರೆ. ಕನ್ನಡ ಭಾಷೆಯ ಸ್ವಭಾವ ಮತ್ತು ಬೆಳವಣಿಗೆಯ ಬಗ್ಗೆ ಆಳವಾದ ಅಧ್ಯಯನ ಮತ್ತು ಚಿಂತನೆ ನಡೆಸಿದ್ದಾರೆ. ಇವುಗಳಿಂದೆಲ್ಲ ಕನ್ನಡ ಭಾಷೆಯ ರಚನೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ಮತ್ತು ಸುಲಭವಾಗಿ ವಿವರಿಸುವುದಕ್ಕಾಗಿ ನಿಯಮಗಳನ್ನು ಮಂಡಿಸಿದ್ದಾರೆ. ಈ ಕಾರ್ಯಕ್ಕಾಗಿ ‘ಪದಗುಚ್ಛ’ ‘ಪದಕಂತೆ’ ‘ಗುಣಪದಗಳು’ ‘ಸರ್ವಪದಗಳು’ ‘ಕ್ರಿಯಾವಾಕ್ಯ’ ಇತ್ಯಾದಿ ಹೊಸ ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ. ಈ ಸಂಬಂಧ ಇವರ ಸಾಧನೆಗಳನ್ನು ಹೀಗೆ ಪಟ್ಟಿ ಮಾಡಬಹುದು:
1.    ಭಾಷಾ ಚರಿತ್ರೆ ಮತ್ತು ಭಾಷಾ ವಿಜ್ಞಾನಗಳಲ್ಲಿ ಮೂಡಿ ಬಂದ ತತ್ವಗಳನ್ನು ವ್ಯಾಕರಣ ನಿಯಮಗಳ ನಿರೂಪಣೆಗಳಲ್ಲಿ ಅಳವಡಿಸುವುದು. ಉದಾಹರಣೆಗೆ ‘ಅರಸ’ ‘ಅರಸಿ’ ‘ನೊಗ’ ‘ಬಿನ್ನಪ’ ‘ಕೆಲಸ’ ಮೊದಲಾದ ಪದಗಳನ್ನು ರಾಜನ್ ರಾಜ್ಞೀ ಯುಗ ವಿಜ್ಞಾಪ್ಯ ಕ್ರಿಯಾ ಮೊದಲಾದ ಸಂಸ್ಕೃತ ಪದಗಳಿಂದ ಸಾಧಿಸುವ ಬದಲಾಗಿ ‘ಅರಶನ್’ ‘ಅರಶ’ ‘ನುಗಂ’ ‘ವಿಣ್ಣಪ್ಪಂ’ ‘ಕಿರಿಶೈ’ ಮೊದಲಾದ ತದ್ಭವ ಪದಗಳಿಂದ ಸಾಧಿಸುವುದು ಸುಲಭ ಎಂಬುದನ್ನು ಆರ್ ನರಸಿಂಹಾಚಾರ್ ಇವರ ಕನ್ನಡ ಭಾಷೆಯ ಚರಿತ್ರೆಯನ್ನು ಉಲ್ಲೇಖಿಸಿ ಪ್ರತಿಪಾದಿಸಿದ್ದಾರೆ (ಭಟ್,2005 ಪು 95)
2.    ಇತರ ವ್ಯಾಕರಣಕಾರರ ಚಿಂತನೆಗಳನ್ನು ಇದೇ ರೀತಿ ಅಳವಡಿಸಿರುವುದು. ಉದಾಹರಣೆಗೆ ಕುಡುವಿಲ್ಲ, ಅಲರ್ಗಣ್ಣ, ನಿಡುಮೂಗಿ – ಇಂತಹ ಪದಗಳಲ್ಲಿ “ಕರ್ಮಧಾರಯ [ಸಮಾಸ]ದಿಂದ ಸಿದ್ಧವಾದ ನಾಮಪದಕ್ಕೆ ತದ್ಧಿತ ಪದವೊಂದು ಸೇರಿದೆ” ಎಂಬ ಅಂಶವನ್ನು  ವೆಂಕಟಾಚಲ ಶಾಸ್ತ್ರಿ ಅವರನ್ನು ಉಲ್ಲೇಖಿಸಿ ಪ್ರತಿಪಾದಿಸಿದ್ದಾರೆ (ಭಟ್,2005 ಪು 122).
3.    ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿಗೆ ಆಸ್ಪದವಾದ, ಸುದೀರ್ಘ ಚರ್ಚೆಗೆ ಒಳಗಾದ ಬೇರೆಬೇರೆ ವಿಷಯಗಳನ್ನು ಮತ್ತೊಮ್ಮೆ ಚರ್ಚಿಸಿ ಕನ್ನಡದ ಸ್ವಭಾವಕ್ಕೆ ತಕ್ಕಂತೆ ಮಾರ್ಪಡಿಸುವುದು. ಉದಾಹರಣೆಗೆ ಕನ್ನಡದಲ್ಲಿ ಪದವರ್ಗಗಳು ಮೂರೋ, ಎಂಟೋ ಅಥವ ಕಿಟೆಲ್ ಹೇಳಿದಂತೆ ಹದಿಮೂರೋ ಎಂಬಿವುಗಳನ್ನು ಪರಿಶೀಲಿಸಿ ಕನ್ನಡದಲ್ಲಿ ಪದವರ್ಗಗಳು ನಾಲ್ಕು ಎಂದು ನಿರ್ಣಯಿಸಿದ್ದಾರೆ (ಭಟ್, 2005 ಪು 62-68).
4.    ಯಾಕೆ ಹೀಗೆ ಎಂದೆನಿಸುವ ಕೆಲವು ಅಂಶಗಳನ್ನು ಕಾರಣ ಕೊಟ್ಟು ವಿವರಿಸಿ ಅದೊಂದು ಆಕ್ಷೇಪವಾಗಿರದೆ ಕನ್ನಡ ವ್ಯಾಕರಣದ ಮೈಯಲ್ಲಿ ಸರಿಯಾಗಿ ಹೊಂದುವ ವಿಷಯ ಎಂಬುದನ್ನು ತೋರಿಸಿಕೊಡುವುದು. ಉದಾಹರಣೆಗೆ ರವಿ ಮೂಡಿದಂ ಎಂಬಲ್ಲಿ ರವಿ ಎಂಬುದು ಮನುಷ್ಯನನ್ನು ಸೂಚಿಸುವ ಪದವಲ್ಲದಿದ್ದರೂ ಅದಕ್ಕೆ ಮನುಷ್ತ್ವವನ್ನು ಆರೋಪಿಸಿರುವುದು ಅದು ಪುಲ್ಲಿಂಗವಾಗಿರುವುದಕ್ಕೆ ಕಾರಣ ಎಂಬುದಾಗಿ ವಿವರಿಸಿದ್ದಾರೆ (ಭಟ್,2005 ಪು145).
5.    ಪದಗಳ ಆಂತರಿಕ ರಚನೆಯ ಆಧಾರದಲ್ಲಿ ಕನ್ನಡ ವ್ಯಾಕರಣಗಳಲ್ಲಿರುವ ‘ಅಪಭ್ರಂಶ ಪ್ರಕರಣ’ವನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಸೂಚನೆಗಳಿವೆ. ಉದಾಹರಣೆಗೆ ‘ಪ್ರತಿ’ ‘ಅತಿ’ ಇಂತಹ ಭಾಷಾಘಟಕಗಳನ್ನು ಉಪಸರ್ಗಗಳಂತಲ್ಲದೆ ಪ್ರತ್ಯೇಕ ಪದಗಳನ್ನಾಗಿ ಎಣಿಸುವುದು ಕನ್ನಡ ಭಾಷೆಯು ಪದಗಳನ್ನು ಸ್ವೀಕರಿಸುವ ರೀತಿನೀತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕ ವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ (ಭಟ್,1999 ಪು182)                                                                                                                                                                                                               
                          ಭಟ್ಟರ ಕೃತಿಗಳಲ್ಲಿ ಇಂತಹ ಹಲವು ಇತರ ನಿರೂಪಣೆಗಳಿವೆ. “ಕನ್ನಡ ಸಮಸ್ತ ಪದಗಳನ್ನು ಅವುಗಳ ಮೊದಲನೆಯ ಅಂಗಪದವನ್ನಾಧರಿಸಿ ಮೂರು ಮುಖ್ಯ ವಿಭಾಗಗಳಾಗಿ (ನಾಮಪದಯುಕ್ತ, ಗುಣವಾಚಕ ಯುಕ್ತ, ಕ್ರಿಯಾಪದ ಯುಕ್ತ ಎಂಬುದಾಗಿ) ವರ್ಗೀಕರಿಸುವುದು ಕನ್ನಡ ವ್ಯಾಕರಣದ ಮಟ್ಟಿಗೆ ಸಮರ್ಪಕವಾದುದೆಂದು ಹೇಳಬಹುದು” (ಭಟ್,2000 ಪು127) ಎಂದು ವಿವರಿಸಿರುವುದು ಅಂತಹವುಗಳಲ್ಲಿ ಒಂದು. ಈ ಅಭಿಪ್ರಾಯವು ರಾಚನಿಕವಾಗಿ ಸರಿ ಎನಿಸಿದರೂ ಈ ವಿಧಾನ ಎರಡನೆಯ ಮತ್ತು ಮೂರನೆಯ ವಿಭಾಗಗಳಿಗೆ ಸಮರ್ಪಕವಾಗಿ ಅನ್ವಯವಾದಂತೆ ಮೊದಲ ಗುಂಪಿಗೆ ಅನ್ವಯವಾಗದು. ನಾಮಪದಯುಕ್ತ ಎಂಬ ವರ್ಗದಲ್ಲಿ ತತ್ಪುರುಷಗಳು ಮತ್ತು ದ್ವಂದ್ವ ಎಂಬ ಉಪವಿಭಾಗಗಳನ್ನು ಕಲ್ಪಿಸಬೇಕಾಗುತ್ತದೆ. ಅಲ್ಲದೆ ವಿಗ್ರಹವಾಕ್ಯಗಳನ್ನು ಸಾಂಪ್ರದಾಯಿಕವಾಗಿ ಹೇಳುವ ರೀತಿಯು ಸಮಾಸಪದದ ಅರ್ಥವನ್ನು ಸ್ಪಷ್ಟವಾಗಿ ತಿಳಿಸಲು ಉಪಯುಕ್ತ ಮತ್ತು ಇದನ್ನು ವಿವರಿಸಲು ಒಂದು ಸಾಮಾನ್ಯೀಕೃತ ನಿಯಮ ನಿರ್ವಚನ ಕೂಡ ಸಾಂಪ್ರದಾಯಕ ಪದ್ಧತಿಯಲ್ಲಿಯೇ ಹೆಚ್ಚು ಪ್ರಸಕ್ತ. ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿರಬಹುದು. ವಿಭಕ್ತಿಗಳನ್ನು ಕಾರಕವಶದಿಂದ ವಿಂಗಡಿಸುವ ರೀತಿಯನ್ನು ಬಿಟ್ಟು “ಅವುಗಳ ಅರ್ಥವನ್ನಾಧರಿಸಿ - ಬಾಧಿತ(ಅನ್ನು), ಮೂಲ(ಇಂದ), ಉದ್ದೇಶ(ಗೆ) ಮತ್ತು ಆಕರ(ಅಲ್ಲಿ) ಎಂಬ ಹೆಸರುಗಳಿಂದ ವಿವರಿಸಿದರೆ” (ಭಟ್,2000 ಪು164) ತಿಳಿಸಿ ಹೇಳುವುದು ಮತ್ತು ನೆನಪಿಟ್ಟುಕೊಳ್ಳುವುದು ಸುಲಭವಾದೀತೆಂದು ಅಭಿಪ್ರಾಯ ಪಟ್ಟಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಇಂತಹವನ್ನು ವಿಮರ್ಶಿಸಿ ಅಳವಡಿಸುವುದು ಸೂಕ್ತವಾದೀತು.
                          ಭಟ್ಟರ ನಿರೂಪಣೆಗಳ ಬಗ್ಗೆ ಚರ್ಚೆ ನಡೆದಿದೆ. ತೀವ್ರ ಟೀಕೆಗಳು ಬಂದಿವೆ. ಇಂತಹ ಒಂದು ಟೀಕೆಯನ್ನು ವ್ಯಾಕರಣ ಶಾಸ್ತ್ರದ ಪರಿವಾರ (ಶರ್ಮ,2002) ಎಂಬ ಕೃತಿಯಲ್ಲಿ ನೋಡಬಹುದು. ರಂಗನಾಥ ಶರ್ಮ ಇವರು ಭಟ್ಟರ ಕಾರಕ ಮತ್ತು ವಿಭಕ್ತಿಗಳ ನಿರೂಪಣೆಗಳನ್ನು ಒಪ್ಪುವುದಿಲ್ಲ (ಶರ್ಮ, 2002 ಪು 3). ಕನ್ನಡ ವರ್ಣಮಾಲೆಯಲ್ಲಿ ಭಟ್ಟರು ಸೂಚಿಸಿರುವ ಅನುಪೂರ್ವಿಯನ್ನು ಒಪ್ಪುವುದಿಲ್ಲ  (ಶರ್ಮ, 2002 ಪು 9). ವೈಯಾಕರಣಿ ಎಂಬ ಪದರೂಪದ ಬಗ್ಗೆ ಅವರಿಗೆ ಆಕ್ಷೇಪವಿದೆ. ಭಟ್ಟರೂ ಇವುಗಳಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸಿದ್ದಾರೆ (ಭಟ್,2005). ಒಟ್ಟಾರೆ ಸಮನ್ಯಯವು ಇನ್ನೂಸಾಧಿತವಾಗಬೇಕಿದೆ.
                          ಕನ್ನಡ ವ್ಯಾಕರಣದ ಬಗ್ಗೆ ಪ್ರಮಾಣದಲ್ಲಿಯೂ ಗುಣಮಟ್ಟದಲ್ಲಿಯೂ ಶ್ರೀಯುತ ಶಂಕರ ಭಟ್ಟರಷ್ಟು ಕೃತಿರಚನೆ ಮಾಡಿದವರು ಬೇರೆ ಇಲ್ಲ. ಸ್ವೋಪಜ್ಙತೆ, ಭಾಷಾ ಘಟಕಗಳ ಸೂಕ್ಷ್ಮ ಪರಿಶೀಲನೆ, ಸಂಸ್ಕೃತ ಅಥವ ಇಂಗ್ಲಿಷ್ ಚೌಕಟ್ಟನ್ನು ಉಪಯೋಗಿಸದೆ ಕನ್ನಡ ವ್ಯಾಕರಣವನ್ನು ತನ್ನದೇ ನೆಲೆಯಲ್ಲಿ ಕಟ್ಟಬೇಕೆಂಬ ಕಾಳಜಿ – ಇವೆಲ್ಲವೂ ಪ್ರೊ ಭಟ್ಟರ ಕೃತಿಗಳ ಮುಖ್ಯ ಲಕ್ಷಣಗಳು. ಇವು ಕನ್ನಡ ವ್ಯಾಕರಣಕ್ಕೆ ಹೊಸ ದಿಕ್ಕು ತೋರಿಸ ಬಲ್ಲವು. ಲಭ್ಯವಿರುವ ವಾಸ್ತವಾಂಶಗಳನ್ನು ಈ ತತ್ವಗಳು ಧರಿಸಬಲ್ಲವೇ, ಈ ತತ್ವಗಳಲ್ಲಿ ತರ್ಕಬದ್ಧತೆ ಏಕಪ್ರಕಾರವಾಗಿವೆಯೇ – ಇಂತಹವುಗಳ ದೃಷ್ಟಿಯಿಂದ ವಿಸ್ತೃತವಾದ ಚರ್ಚೆಯ ಅಗತ್ಯವಿದೆ. ಆಗ ಮಾತ್ರ ಸಮನ್ವಯದ ಸಾಧನೆ ಮತ್ತು ತನ್ಮೂಲಕ ಖಚಿತವಾದ ನಿಯಮಗಳ ವಿಕಾಸ ಸಾಧ್ಯವಾಗುತ್ತದೆ.
ಶ್ರೀ ರಂಗನಾಥಶರ್ಮ ಇವರ ಎರಡು ಕೃತಿಗಳು
ವಿದ್ವಾನ್ ಶ್ರೀ ರಂಗನಾಥ ಶರ್ಮರು ಮೇಲೆ ಉಲ್ಲೇಖಿಸಿದ ವ್ಯಾಕರಣಶಾಸ್ತ್ರದ ಪರಿವಾರ ಎಂಬ ಕೃತಿಯನ್ನಲ್ಲದೆ ಹೊಸಗನ್ನಡ ವ್ಯಾಕರಣ ಎಂಬ ಇನ್ನೊಂದು ಪುಸ್ತವನ್ನೂ ಬರೆದಿದ್ದಾರೆ. ಈ ಕೃತಿಗಳಲ್ಲಿ ಇವರು ಕನ್ನಡ ಭಾಷೆಯ ಸಾಧು ಪ್ರಯೋಗಗಳಾವುವು ಎಂಬ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೊದಲನೆಯದಾದ ವ್ಯಾಕರಣಶಾಸ್ತ್ರದ ಪರಿವಾರದಲ್ಲಿ ಐದು ಅಧ್ಯಾಯಗಳಿವೆ. ಇದು 164ಪುಟಗಳಷ್ಟು ವಿಸ್ತಾರದ್ದು. ‘ಕಾರಕ ಮತ್ತು ವಿಭಕ್ತಿ’ ಮತ್ತು ‘ಪಂಚಮೀ ವಿಭಕ್ತಿ ಪರಾಮರ್ಶೆ’ ಇವೆರಡು ಈ ಪುಸ್ತಕದ ಮೊದಲೆರಡು ಅಧ್ಯಾಯಗಳ ಶೀರ್ಷಿಕೆಗಳು ಮತ್ತು ಇವೆರಡೇ ಪುಸ್ತಕದ 134 ಪುಟಗಳಲ್ಲಿ ವ್ಯಾಪಿಸಿವೆ. ಉಳಿದ 30 ಪುಟಗಳಲ್ಲಿ ‘ವರ್ತಮಾನ ಕಾಲ’. ‘ಗಮಕ ಸಮಾಸ’ ‘ಕವಿರಾಜಮಾರ್ಗದ ನೂತನ ಸಂಸ್ಕರಣ’ – ಈ ವಿಷಯಗಳು ಬಂದಿವೆ. ಈ ಕೃತಿಯಲ್ಲಿ ಶರ್ಮರ ನಿರೂಪಣೆಗಳು ಶಂಕರ ಭಟ್ಟರ ಪ್ರತಿಪಾದನೆಗಳಿಗೆ ತದ್ವಿರುದ್ಧ ತುದಿಯಲ್ಲಿವೆ. ಭಟ್ಟರು ಕನ್ನಡದಲ್ಲಿ ನಾಲ್ಕು ಉದ್ದೇಶಗಳಿಗೆ ನಾಲ್ಕು ವಿಭಕ್ತಿಗಳು ಸಾಕು ಎಂದು ವಾದಿಸುತ್ತಾರೆ. ವಿಭಕ್ತಿಗಳು ಕಾರಕವಶಗಳೆಂದೂ ವಿಭಕ್ತಿಗಳೆಷ್ಟೇ ಇರಲಿ ಎಲ್ಲ ಭಾಷೆಗಳಲ್ಲೂ ಕಾರಕಗಳು ಆರೇ ಎಂದೂ ಶರ್ಮರ ವಾದ (ಶರ್ಮ, 2002 ಪು132). ವ್ಯಾಕರಣಕಾರರು ನಿರೂಪಿಸಿರುವುದಕ್ಕನುಗುಣವಾಗಿ ವಿಭಕ್ತಿಗಳನ್ನು ನಿಯತವಾಗಿ ಬಳಸಬೇಕೆಂಬುದು ಇವರ ಕಳಕಳಿ (ಶರ್ಮ, 2002 ಪು63 – ಅಪದಂ ನ ಪ್ರಯುಂಜೀತ ಇತ್ಯಾದಿ). ವಿಭಕ್ತಿಗಳನ್ನು ಸರಿಯಾಗಿ ಬಳಸದಿದ್ದಲ್ಲಿ ‘ಕುರಿ ನುಂಗಿದ ಹಾವು’ ಎಂಬಂತಹ ಪತ್ರಿಕಾ ಶೀರ್ಷಿಕೆಯಲ್ಲಿ ಕುರಿ ಹೆಬ್ಬಾವನ್ನು ನುಂಗಿತೋ ಹೆಬ್ಬಾವು ಕುರಿಯನ್ನು ನುಂಗಿತೋ ಎಂಬುದು ಗೊತ್ತಾಗದಿರುವಂತಹ ಸಂದಿಗ್ಧತೆ ಉಂಟಾಗುತ್ತದೆ (ಶರ್ಮ, 2002 ಪು76). ಇಷ್ಟರ ಮಟ್ಟಿಗೆ ಇವರು ಹೇಳುವಂತೆ ‘ಭಾಷಾಸ್ವರೂಪವನ್ನು ಕೆಡಿಸದೆ ಉಳಿಸಿಕೊಂಡು ಹೋಗುವುದು ಅವಶ್ಯಕ’ (ಶರ್ಮ, 2002 ಪು12).
                          ಕೃತಿಯಲ್ಲಿ ರಂಗನಾಥ ಶರ್ಮರದು ಒಂದು ರೀತಿಯ ತಾತ್ವಿಕ ದೃಷ್ಟಿ. ಅವರು ‘ವ್ಯಾಕರಣವನ್ನು ವೇದಾಂಗವೆಂದೂ ವೇದಕ್ಕೆ ಮುಖವಿದ್ದಂತೆ ಪ್ರಧಾನವೆಂದೂ ಪರಿಗಣಿಸುತ್ತಾರೆ (ಶರ್ಮ,ಪು5) ಹಾಗೆಯೇ ಸಂಸ್ಕೃತ ವ್ಯಾಕರಣದಲ್ಲಿರುವ ತತ್ವಗಳು ಇತರ ಭಾಷಾ ವ್ಯಾಕರಣಗಳಿಗೂ ಅನ್ವಯಿಸುತ್ತವೆ ಎಂಬುದು ಇವರ ನಂಬಿಕೆ. ಉದಾಹರಣೆಗೆ ಇವರು ಹೇಳುತ್ತಾರೆ: “ಸಕಲ ಭಾಷೆಗಳಲ್ಲೂ ನಿಹಿತವಾಗಿರುವ ಗೂಢ ತತ್ವವೇ ಕಾರಕತ್ವ (ಶರ್ಮ,2002 ಪು2). ಇದೊಂದು ಪಾರಂಪರಿಕ ದೃಷ್ಟಿ. ಮತಿಲಾಲ್ ಎಂಬ ವಿದ್ವಾಂಸರು ಹೇಳತ್ತಾರೆ: ವ್ಯಾಕರಣವು ಎಲ್ಲ ಶಾಸ್ತ್ರಗಳ ಅಧ್ಯಯನಕ್ಕೆ  ಮಹಾದ್ವಾರವೆಂಬ ಮನ್ನಣೆಗೆ ಪಾತ್ರವಾಗಿದೆ... ... ಪಾಣಿನಿಯು ಪ್ರಾರಂಭಿಸಿದ ವ್ಯಾಕರಣಾಧ್ಯಯನ ವಿಧಾನಗಳನ್ನು ಬೇರೆಬೇರೆ ಭಾಷೆಗಳಿಗೆ ಹಾಗೂ ಭಾಷಿಕ ವ್ಯವಸ್ಥೆಗಳಿಗೂ ವಿಸ್ತರಿಸಬಹುದೆಂದು ಕೆಲವರು ವಾದಿಸುತ್ತಾರೆ (ಮತಿಲಾಲ್,ಪು33,34). ಹೀಗೆ ವಿಸ್ತರಿಸುವುದೆಂದರೆ ಪರಿಭಾಷೆ, ವರ್ಗೀಕರಣ, ನಿರೂಪಣಾ ಕ್ರಮ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವುದೆಂದರ್ಥ.
                          ಈಗಾಗಲೇ ಪ್ರಚಲಿತವಿರುವ ಪರಿಭಾಷೆಯ ಬಳಕೆ, ಬಳಸುವುದಕ್ಕೂ ಅರ್ಥಮಾಡಿಕೊಳ್ಳುವುದಕ್ಕೂ ಸುಲಭವಾಗುತ್ತದೆ ಎಂಬುದನ್ನು ಒಪ್ಪ ಬೇಕಾಗುತ್ತದೆ. ಆದರೆ ಇಂತಹ ಎಲ್ಲ ಪಾರಿಭಾಷಿಕ ಪದಗಳು ಕನ್ನಡ ವ್ಯಾಕರಣ ವಿವರಣೆಗೆ ಅಗತ್ಯವಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಂಸ್ಕೃತ ವ್ಯಾಕರಣದಲ್ಲಿ ಬಳಸಲಾದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು  ಹಾಗೆ ಹಾಗೆಯೇ ಕನ್ನಡದಲ್ಲಿ ಬಳಸುವುದು ಎಷ್ಟುಮಟ್ಟಿಗೆ ಸೂಕ್ತವಾದೀತೆಂಬುದು ಇನ್ನೊಂದು ಪ್ರಶ್ನೆ. ಪಂಚಮೀ ವಿಭಕ್ತಿ ಕನ್ನಡದಲ್ಲಿ ಇದೆಯೋ ಇಲ್ಲವೋ, ಒಂದು ನಿರ್ದಿಷ್ಟ ವಿಧದ ಸಮಾಸ ಕನ್ನಡದಲ್ಲಿ ಇದೆಯೋ ಇಲ್ಲವೋ ಎಂಬಂತಹ ಹುಡುಕಾಟಗಳು ಹಳಗನ್ನಡ ಕಾಲದಿಂದಲೂ ಇರುವುದೇ ಈ ಪ್ರಶ್ನೆಗಳಿಗೆ ಎಡೆಮಾಡುತ್ತದೆ. ಭಾಷೆ ಮತ್ತು ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳಲು ಕಲಿಯಲು ಮತ್ತು ಕಲಿಸಲು ಇವು ಎಷ್ಟು ಸಹಾಯ ಮಾಡುತ್ತವೆ ಭಾಷೆಯ ರಚನೆಯನ್ನು ಸ್ಪಷ್ಟ ಪಡಿಸುವಲ್ಲಿ ಇವುಗಳ ಕೊಡುಗೆ ಏನು ಎಂಬಿವುಗಳನ್ನೂ ಯೋಚಿಸುವುದು ಅಗತ್ಯ. ಇವೆಲ್ಲವೂ   ಕನ್ನಡ ವ್ಯಾಕರಣ ರಚನೆಗೆ ಮಾರ್ಗದರ್ಶಕ ಸೂತ್ರಗಳಾಗ ಬಲ್ಲವು. ವ್ಯಾಪಕವಾಗಿರುವ ಸಾರ್ವತ್ರಿಕ ವ್ಯಾಕರಣ ಶಾಸ್ತ್ರವೊಂದರಿಂದ ತತ್ವಗಳನ್ನು ಸ್ವೀಕರಿಸುವಾಗ ಇಂತಹ ಪರಿಮಿತಿಗಳನ್ನು ವಿಧಿಸಿಕೊಳ್ಳುವುದು ಕನ್ನಡ ಭಾಷೆಯ ಸೀಮಿತತೆಗೆ ಅಗತ್ಯ ಎಂಬುದನ್ನೂ ಒಪ್ಪಬೇಕಾಗುತ್ತದೆ. ಕನ್ನಡ ಭಾಷೆ ಎಲ್ಲಿ ಆ ಚೌಕಟ್ಟಿನಿಂದ ಹೊರ ಚಾಚುತ್ತದೋ ಅಲ್ಲಿ ಹೊಸ ರೀತಿಯ ನೀರೂಪಣೆ ಅನಿವಾರ್ಯ.
                          ಶರ್ಮರ ಇನ್ನೊಂದು ಕೃತಿ ಹೊಸಗನ್ನಡ ವ್ಯಾಕರಣ. ಇದು ಸಾಮಾನ್ಯ ಜನರ ಆಸಕ್ತಿಗೆ ಸ್ಪಂದಿಸುವ ಇರಾದೆಯದ್ದು. ವಿದ್ಯಾರ್ಥಿಗಳಿಗೂ ಉಪಯುಕ್ತ. ಚಾರಿತ್ರಿಕ ಅಂಶಗಳು, ವಿಶಿಷ್ಟ ಪದಗಳು, ವಾಕ್ಯಗಳು – ಈ ಎಲ್ಲವುಗಳ ಉದಾಹರಣೆ ಮತ್ತು ಚರ್ಚೆ ಈ ಕೃತಿಯ ವೈಶಿಷ್ಟ್ಯ. ಹೊಸಗನ್ನಡದಲ್ಲಿ ಬಂದಿರುವ ಕೆಲವು ವಿಶಿಷ್ಟ ಪ್ರಯೋಗಗಳನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಉಧಾಹರಣೆಗೆ ‘ಪುಸ್ತಕದಲ್ಲಿನ’ ಎಂಬ ಪ್ರಯೋಗದಲ್ಲಿ ಸಪ್ತಮೀ ವಿಭಕ್ತಿ ಮುಂದೆ ಷಷ್ಠೀ ವಿಭಕ್ತಿ ಬಂದಿರುವುದು ಹೇಗೆ? ‘ಸರಕಾರದಿಂದ ಆಜ್ಞೆಯನ್ನು ಹೊರಡಿಸಲಾಗುವುದು’ – ಈ ರೀತಿಯದು ಕರ್ತರೀ ಪ್ರಯೋಗವೇ? ಇತ್ಯಾದಿ ಸೂಕ್ತ ಪ್ರಶ್ನೆಗಳನ್ನು ತಮ್ಮ ಮುನ್ನುಡಿಯಲ್ಲಿ ಇವರು ಎತ್ತಿದ್ದು ವ್ಯಾಕರಣಾಸಕ್ತರು ವಿಚಾರ ಮಾಡಬೇಕಾದ ವಿಷಯಗಳಾಗಿವೆ.
                          ರಂಗನಾಥ ಶರ್ಮರ ಕೃತಿಗಳಲ್ಲಿ ಪಾಂಡಿತ್ಯಪೂರ್ಣ ಚರ್ಚೆಗಳಿವೆ. ಕನ್ನಡದ ಸಾಧು ಪ್ರಯೋಗಗಳನ್ನು ಪತ್ತೆ ಹಚ್ಚಿ ಉಳಿಸಬೇಕೆಂಬ ಘನವಾದ ಕಾಳಜಿ ಇದೆ. ಇದಕ್ಕೆ ಸರಿಯಾದ ಉಪಕರಣ ಸಂಸ್ಕೃತ ವ್ಯಾಕರಣಕಾರರು ಬೆಳೆಸಿದ ಚೌಕಟ್ಟೇ ಆಗಿದೆ ಎಂಬುದು ಇವರ ದೃಢ ನಂಬಿಕೆ.
3.          ಹಳಗನ್ನಡ ವ್ಯಾಕರಣ ಕೃತಿಗಳ ತೌಲನಿಕ ಅಧ್ಯಯನಗಳು
                          ಹಳಗನ್ನಡಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಎರಡು ಹಾಗೂ ಸಂಸ್ಕೃತದಲ್ಲಿ ಎರಡು ಹೀಗೆ ನಾಲ್ಕು ವ್ಯಾಕರಣಗಳಿವೆ. ಇವುಗಳಲ್ಲಿ ಪ್ರತಿಯೊಂದರ ಅಥವ ಪಪ್ರತಿಯೊಬ್ಬ ಕೃತಿಕಾರನ ಕೊಡುಗೆಗಳೇನು ಎಂಬುದು ಒಂದು ಆಸಕ್ತಿದಾಯಕ ವಿಷಯ. ಈ ದೃಷ್ಟಿಯಿಂದ ವ್ಯಾಕರಣ ಕೃತಿಗಳ ತೌಲನಿಕ ಅಧ್ಯಯನ ಮುಖ್ಯ ವಾಗುತ್ತದೆ. ಇಂತಹ ಎರಡು ಮುಖ್ಯ ಅಧ್ಯಯನಗಳಿವೆ:
1.    ಎಂ ವಿ ಸೀ ಇವರ ಪ್ರಾಚೀನ ಕನ್ನಡ ವ್ಯಾಕರಣಗಳು
2.    ದೊಡ್ಡ ಸ್ವಾಮಿ ಇವರ ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನ
                  ಎಮ್ ವಿ ಸೀ ಇವರ ಕೃತಿಯಲ್ಲಿ ಹೆಸರಿನಿಂದ ನಿರೀಕ್ಷಿಸಬಹುದಾದಂತೆ ಹಳಗನ್ನಡದ ನಾಲ್ಕು ವ್ಯಾಕರಣಗಳ ಅಧ್ಯಯನವಿದೆ. ಮೊದಲಲ್ಲಿ ಶಬ್ದಸ್ಮೃತಿ, ಕರ್ಣಾಟ ಭಾಷಾ ಭೂಷಣ – (ಈ ಎರಡೂ ಕೃತಿಗಳು ನಾಗವರ್ಮನವು),  ಶಬ್ದಮಣಿದರ್ಪಣ (ಕೇಶಿರಾಜ), ಶಬ್ದಾನುಶಾಸನ (ಭಟ್ಟಾಕಳಂಕದೇವ) - ಇವುಗಳ ವಸ್ತು ವಿನ್ಯಾಸಗಳನ್ನು ಬೇರೆಬೇರೆಯಾಗಿ ಚರ್ಚಿಸಿದ್ದಾರೆ. ಅವುಗಳ ಕರ್ತೃತ್ವ ಮತ್ತು ಕಾಲಾನುಪೂರ್ವಿಯನ್ನು ಸರಿಯಾಗಿ ಗುರುತಿಸಿದ್ದಾರೆ. ಅನಂತರದ ಅಧ್ಯಾಯದಲ್ಲಿ ಈ ಪ್ರತಿಯೊಂದೂ ಒಂದರಿಂದ ಇನ್ನೊಂದು ಹೇಗೆ ಭಿನ್ನ, ಪ್ರತಿಯೊಂದರ ವೈಶಿಷ್ಟ್ಯವೇನು ಇತ್ಯಾದಿಗಳನ್ನು ಆಳವಾಗಿ ಚರ್ಚಿಸಿದ್ದಾರೆ. ಇದೊಂದು ಪಾಂಡಿತ್ಯ ಪೂರ್ಣ ಕೃತಿ. ಪ್ರತಿಯೊಬ್ಬ ವ್ಯಾಕರಣ ಕಾರನ ನಿರ್ದಿಷ್ಟ ಕೊಡುಗೆಗಳನ್ನು ತಿಳಿಯಲು ಈ ಪುಸ್ತ ಕ ಸಹಾಯ ಮಾಡುತ್ತದೆ.
                          ದೊಡ್ಡ ಸ್ವಾಮಿಯವರದು ಇದಕ್ಕಿಂತ ಭಿನ್ನ ಕೃತಿ. ವ್ಯಾಕರಣದ ಒಂದು ವಿಷಯಕ್ಕೆ ಸಂಬಂಧಿಸಿದಂತೆ (ಉದಾ.ಸಂಧಿ) ಬೇರೆಬೇರೆ ವ್ಯಾಕರಣಗಳಲ್ಲಿರುವ ಸೂತ್ರಗಳನ್ನು ಒಂದೇ ಕಡೆ ಕೊಡುವ ಕ್ರಮವನ್ನು ಇವರು ಅನುಸರಿಸಿದ್ದಾರೆ ಮತ್ತು ಈ ಕೃತಿಯಲ್ಲಿ ಹೀಗಿದೆ ಇನ್ನೊಂದರಲ್ಲಿ ಹಾಗಿದೆ ಎಂದು ಹೇಳಿ ಮುಗಿಸುತ್ತಾರೆ. ಇದರಿಂದ ಈ ವಿಷಯಕ್ಕೆ ಸಂಬಂಧಿಸಿ ಬೇರೆಬೇರೆ ವ್ಯಾಕರಣಕಾರರ ಅಭಿಪ್ರಾಯಗಳನ್ನು ಹೋಲಿಸಲು ಅನುಕೂಲವಾಗಿದೆ. ಆದರೆ ಇದರಲ್ಲಿ ಹೀಗಿದೆ ಎಂಬ ವಿವರಣೆಯನ್ನು ಬಿಟ್ಟು ಬೇರೆ ರೀತಿಯ ಚರ್ಚೆ ಈ ಕೃತಿಯಲ್ಲಿಲ್ಲ.  ಆದ್ದರಿಂದ ದೊಡ್ಡಸ್ವಾಮಿಯವರ ಕೃತಿಯ ಉಪಯುಕ್ತತೆ ಪರಿಮಿತ ಸ್ವರೂಪದ್ದಾಗಿದೆ.
4                       ಶಾಲಾ ವ್ಯಾಕರಣಗಳು
                          ಇಪ್ಪತ್ತನೆಯ ಶತಮಾನದ ಇನ್ನೊಂದು ವಿದ್ಯಮಾನವೆಂದರೆ ಶಾಲೆಗಳಲ್ಲಿ ಉಪಯೋಗಕ್ಕೆಂದು ರಚನೆಯಾದ ವ್ಯಾಕರಣ ಪಠ್ಯಗಳ ವೈಪುಲ್ಯ. ಇಂತಹ ಮೂವತ್ತಕ್ಕೂ ಹೆಚ್ಚು ವ್ಯಾಕರಣಗಳು ಇಪ್ಪತ್ತನೆಯ ಶತಮಾನದಲ್ಲಿ ಪ್ರಕಟವಾಗಿವೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಈ ಪ್ರವೃತ್ತಿ ಮುಂದುವರೆದಿದೆ ಮತ್ತು ಇಂತಹ ಕೃತಿಗಳು ಪ್ರಕಟವಾಗುತ್ತಲೇ ಇವೆ. ವ್ಯಾಕರಣವನ್ನು ಕಲಿಸುವ ಅಗತ್ಯವೇ ಇಲ್ಲ, ಅದು ತನ್ನಷ್ಟಕ್ಕೆ ತಾನೇ ಭಾಷಿಕರ ಕರಗತವಾಗುತ್ತದೆ ಎಂಬ ವಾದವಿದ್ದರೂ ವ್ಯಾಕರಣ ಬೋಧನೆ ಮತ್ತು ಕಲಿಕೆಗಳನ್ನು  ಸಂಪೂರ್ಣವಾಗಿ ಕಡೆಗಣಿಸದೇ ಇರುವುದು ಸಮಾಧಾನದ ವಿಷಯ. ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಕಗಳಲ್ಲಿ ಪ್ರಕಟವಾಗಿರುವ ಮತ್ತು ಆಗುತ್ತಿರುವ ಕೃತಿಗಳೆಲ್ಲಾ ಶಾಲೆಗಳಲ್ಲಿ ಉಪಯೋಗಕ್ಕೆಂದೇ ಇವೆ. ಇವುಗಳಲ್ಲಿ ಭಾಷಾ ರಚನೆಯನ್ನು ನಿರ್ದುಷ್ಟಗೊಳಿಸುವಂತಹ ಖಚಿತವಾದ ಹೊಸ ಅಂಶಗಳು ವಿರಳ. ಈಗಾಗಲೇ ಸಿದ್ಧವಾದ ವ್ಯಾಕರಣ ನಿಯಮಗಳನ್ನು ಸುಲಭವಾಗಿ ಕಲಿಸುವುದು ಹೇಗೆ ಎಂಬುದೇ ಈ ವ್ಯಾಕರಣಕಾರರ ಮುಖ್ಯ ಕಾಳಜಿ. ಭಾಷಾ ಕಲಕೆ ಮತ್ತು ಅದಕ್ಕೆ ಪೂರಕವಾಗಿ ವ್ಯಾಕರಣ ಕಲಿಕೆಯನ್ನು ಅಕ್ಷರ-ಪದ-ವಾಕ್ಯ ಈ ಅನುಪೂರ್ವಿಯನ್ನನುಸರಿಸಿ ಕಲಿಸಬೇಕೆಂಬುದು ಒಂದು ಪಂಥ. ಹೀಗಲ್ಲ ಇದಕ್ಕೆ ವಿಲೋಮವಾಗಿ ವಾಕ್ಯ-ಪದ-ಅಕ್ಷರ ಈ ಅನುಕ್ರಮವನ್ನು ಅನುಸರಿಸ ಬೇಕೆನ್ನುವವರು ಬೇರೆ ಕೆಲವರು. ಹಾಗೆಯೇ ಕಲಿಸುವುದಕ್ಕೆ ಸಂಬಂಧಿಸಿಯೂ ಎರಡು ಪಂಗಡಗಳು: ಮೊದಲು ಉದಾಹರಣೆಗಳನ್ನು ನೀಡಿ ತನ್ಮೂಲಕ ನಿಯಮ ನಿರೂಪಣೆ ಮಾಡಬೇಕೆನ್ನುವವರು ಒಂದು ಕಡೆ; ಹಾಗಲ್ಲ ಮೊದಲು ನಿಯಮಗಳನ್ನು ನಿರೂಪಿಸಿ ಅದನ್ನು ವಿಶ್ಲೇಷಿಸುತ್ತಾ ಉದಾಹರಣೆಗಳನ್ನು ನೀಡಿ ಸ್ಪಷ್ಟಗೊಳಿಸಬೇಕೆನ್ನುವವರು ಇನ್ನೊಂದು ಕಡೆ. ಇವೆಲ್ಲವೂ ಒಟ್ಟಾರೆಯಾಗಿ ಶಾಲಾ ವ್ಯಾಕರಣಗಳ ಪ್ರವೃತ್ತಿಗಳನ್ನು ಚಿತ್ರಿಸುತ್ತವೆ. ಅವರವರು ರಚಿಸಿದ ವ್ಯಾಕರಣ ಪಠ್ಯದ ಸ್ವರೂಪವನ್ನು ನಿರ್ಧರಿಸುತ್ತವೆ.
                          ಪಂಜೆ ಮಂಗೇಶರಾಯರು, ಕಯ್ಯಾರ ಕಿಞ್ಞಣ್ಣ ರೈ, ತೀ ನಂ ಶ್ರೀ ಮುಂತಾದವರು ಅನುಗಮನ ಪದ್ಧತಿಯನ್ನನುಸರಿಸಿ ವ್ಯಾಕರಣ ಪಠ್ಯಗಳನ್ನು ಬರೆದಿದ್ದಾರೆ. ಎರೆಸೀಮೆ ಇವರ ಕನ್ನಡ ವ್ಯಾಕರಣ ನಿಗಮನ ಪದ್ಧತಿಯಲ್ಲಿರುವ ಕೃತಿ. ಉದಾಹರಣೆಗಳ ಬಾಹುಳ್ಯ, ನಿಯಮಗಳನ್ನು ದಪ್ಪಕ್ಷರಗಳಲ್ಲಿ ಮುದ್ರಿಸಿರುವುದು, ನಿಯಮಕ್ಕೆ ಅಪವಾದಗಳನ್ನು ಉಲ್ಲೇಖಿಸಿರುವುದು ಇಂತಹ ಗುಣಗಳಿಂದ ಇದು ಅಧ್ಯಪಕರಿಗೂ ವಿದ್ಯಾರ್ಥಿಗಳಿಗೂ ಪ್ರಿಯವಾದ ಕೃತಿಯಾಗಿತ್ತು. ಜೊತೆಗೆ ಇದರ ಬೆಲೆ ಕೂಡ ಸಾಮಾನ್ಯ ಜನರಿಗೆ ಕೈಗೆಟುಕುಷ್ಟೇ ಇತ್ತು. ಹೀಗಾಗಿ ಇದು ಎಂಬತ್ತರ ದಶಕದಲ್ಲಿ ಕೂಡ ಜನಪ್ರಿಯ ವ್ಯಾಕರಣ ಕೃತಿಯಾಗಿತ್ತು. ಪ್ರಸ್ತುತ ಕೃತಿಯ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
                          ಇಪ್ಪತ್ತನೆಯ ಶತಮಾನದಲ್ಲಿ ಕನ್ನಡದ ಉಪಭಾಷೆಗಳನ್ನು ಗುರುತಿಸುವಿಕೆ ಅವುಗಳಿಗೆ ವ್ಯಾಕರಣ ರಚನೆ ಉಪಭಾಷೆಗಳ ನಡುವೆ ತೌಲನಿಕ ವ್ಯಾಕರಣಾಧ್ಯಯನಗಳು ಇಂತಹ ಹೊಸ ಪ್ರವೃತ್ತಿಗಳೂ ಕಾಣಿಸಿಕೊಂಡವು. ಇಂತಹವುಗಳನ್ನು ಇಲ್ಲಿ ಚರ್ಚಿಸಿಲ್ಲ. ಇವೆಲ್ಲ ಭಾಷಾಶಾಸ್ತ್ರದ ಪರಿಭಾಷೆ, ವಿಧಾನ ಮತ್ತು ವಿವರಣಾ ಕ್ರಮಗಳನ್ನು ಅನುಸರಿಸಿದ್ದು ಭಾಷಾಧ್ಯಯನ ಬೇರೆಯೇ ಮಜಲನ್ನು ಪ್ರವೇಶಿಸಿತು ಎನ್ನ ಬಹುದು. (ಇವುಗಳ ಅತಿ ಸಂಕ್ಷಿಪ್ತ ಮತ್ತು ಸ್ಥೂಲವಧ ವಿವರಗಳನ್ನು ನನ್ನ ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು ಎಂಬ ಕೃತಿಯಲ್ಲಿ ಕಾಣಬಹುದು).  
                          ಒಟ್ಟಿನಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಪದ ವಾಕ್ಯಗಳನ್ನು ವರ್ಗೀಕರಿಸಿ ವಿಶ್ಲೇಷಿಸಿ ಅಂತಹ ಪ್ರಯೋಗಗಳ ಹಿಂದಿನ ತತ್ವಗಳನ್ನು ಕಂಡು ಹಿಡಿಯುವ ಮೂಲಕ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ರಚನೆಯಾಗ ಬೇಕೆಂಬ ಕಾಳಜಿ ಕಾಣಿಸಿಕೊಂಡಿತು. ಆದರೆ ಇಂತಹ ತತ್ವಗಳ ಬಗ್ಗೆ ಒಮ್ಮತ ಮೂಡದೆ ಇಂತಹ ವ್ಯಾಕರಣ ರಚನೆ ಇನ್ನೂ ಸಾಧ್ಯವಾಗಿಲ್ಲ. ಬೋಧನೆ ಮತ್ತು ಕಲಿಕೆಗೆ ಅನುಕೂಲವಾಗುವಂತೆ ಶಾಲಾವ್ಯಾಕರಣಗಳು ಹಲವು ರಚನೆಯಾದುವು.

                          ಪರಾಮರ್ಶಿಸಿದ ಗ್ರಂಥಗಳು: 
1.    ದೊಡ್ಡ ಸ್ವಾಮಿ, 1980:  ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನ ಮದ್ದೂರು ದುಂಡನಹಳ್ಳಿ]
2.   ಸೀತಾರಾಮಯ್ಯ ಎಮ್ ವಿ (ಎಂ ವಿ ಸೀ), : ಪ್ರಾಚೀನ ಕನ್ನಡ ವ್ಯಾಕರಣಗಳು [ಮೈಸೂರು ವಿಶ್ವ ವಿದ್ಯಾಲಯ, ಮಾನಸ ಗಂಗೋತ್ರಿ ಮೈಸೂರು]
3.    ಮತಿಲಾಲ್, ಬಿ ಕೆ 2005: ಶಬ್ದ ಮತ್ತು ಜಗತ್ತು – ಭಾಷೆಯ ಅ ಮಾತುಕತೆ ಸಂಚಿಕೆ 73 ಇದರಲ್ಲಿ ಧಾರಾವಾಹಿಯಾಗಿ ಬಂದಿರುವ ಧ್ಯಯನಕ್ಕೆ ಭಾರತದ ಕೊಡುಗೆ
4.    ಮಹೀದಾಸ, 1997: ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತೆ ಪ್ರಬಂಧಗಳು [ಯುಗಪುರುಷ ಪ್ರಕಾಶನ ಕಿನ್ನಿಗೋಳಿ ಮಂಗಳೂರು]
5.    ಭಟ್ ಶಂಕರ ಢಿ ಎನ್,2000: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ [ಭಾಷಾ ಪ್ರಕಾಶನ ಮೈಸೂರು]
6.    ಭಟ್ ಶಂಕರ ಢಿ ಎನ್, 2004: ಕನ್ನಡ ವಾಕ್ಯಗಳ ಒಳರಚನೆ
7.    ಭಟ್ ಶಂಕರ ಢಿ ಎನ್,1995: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ 
8.    ಭಟ್ ಶಂಕರ ಢಿ ಎನ್,2003: ಕನ್ನಡ ಸರ್ವನಾಮಗಳು 
9.    ಭಟ್ ಶಂಕರ ಢಿ ಎನ್,1978: ಕನ್ನಡ ವಾಕ್ಯಗಳು 
10.  ಭಟ್ ಶಂಕರ ಢಿ ಎನ್,2005: ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹುದು  
11.  ಭಟ್ ಶಂಕರ ಢಿ ಎನ್,1999: ಕನ್ನಡ ಶಬ್ದ ರಚನೆ  [ಕ್ರೈಸ್ಟ್ ಕಾಲೇಜು ಕುವೆಂಪು ನಗರ ಬೆಂಗಳೂರು]
12.  ಶರ್ಮ, ರಂಗನಾಥ ವಿದ್ವಾನ್, 2002:  ವ್ಯಾಕರಣ ಶಾಸ್ತ್ರದ ಪರಿವಾರ [ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ ುಡುಪಿ]
13.  ಸೇಡಿಯಾಪು ಕೃಷ್ಣ ಭಟ್ಟ, 1992: ಇದರಲ್ಲಿ ಪಾದೇಕಲ್ಲು ವಿಷ್ಣು ಭಟ್(ಸಂ) ವಿಚಾರ ಪ್ರಪಂಚ [ಕರ್ನಾಟಕ ಸಂಘ ಪುತ್ತೂರು]


No comments:

Post a Comment