ಕನ್ನಡ
ಗಾದೆಗಳ ಬಗ್ಗೆ
ವೇದ
ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಭಾರತೀಯ ಪರಂಪರೆಯಲ್ಲಿ ವೇದಕ್ಕೆ ಬಹುಮಹತ್ವವಿದೆ. ವೇದಗಳು
ಪ್ರಪಂಚದ ಪ್ರಾಚೀನತಮ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ; ಅವು ಪ್ರಭು ಸಂಮಿತೆಯಿಂದ ಜೀವನ
ಮೌಲ್ಯಗಳನ್ನು ಬೋಧಿಸುವುವು ಮತ್ತು ಆದ್ದರಿಂದ ಆದೇಶಸ್ವರೂಪದಲ್ಲಿರುವುವು; ಅವು ಬೌದ್ಧಿಕವಾಗಿ ವಿಕಸಿತ
ಮನಸ್ಸುಗಳಿಂದ ಬಂದ ವಿವರಣೆಗಳಾದುದರಿಂದ ಸುಳ್ಳಾಗಿರುವುದಿಲ್ಲ; ಅವು ಶಾಬ್ದಿಕವಾಗಿ ಕೂಡ ವ್ಯತ್ಯಾಸವಾಗದೆ
ತಲೆಮಾರಿನಿಂದ ತಲೆಮಾರಿಗೆ ಉಳಿದು ಬಂದವಾಗಿದ್ದು ಸಾಂಸ್ಕೃತಿಕ ಮಹತ್ವದವಾಗಿವೆ; ಹಲವು ವೇದ ಮಂತ್ರಗಳು
ಅತಿ ಸಂಕ್ಷಿಪ್ತವಾಗಿದ್ದು ಸೂತ್ರಸ್ವರೂಪದವಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿನಲ್ಲಿ
ಗಾದೆಗಳೂ ಈ ಎಲ್ಲ ಗುಣಲಕ್ಷಣಗಳಿಂದ ನಿರ್ವಚಿತವಾಗಿವೆ ಎಂಬ ಧ್ವನಿ ಇದೆ. ಗಾದೆಗಳು ಅತಿಸಂಕ್ಷಿಪ್ತಮ
ಹೇಳಿಕೆಗಳ ರೂಪದಲ್ಲಿದ್ದು ದಿನಚರಿಯ ಸ್ಪಷ್ಟ ಸನ್ನಿವೇಶದೊಡನೆ ಸಮನ್ವಯ ಸಾಧಿ22ಸುತ್ತವೆ. ವೇದಗಳಂತೆಯೇ
ಗಾದೆಗಳು ತಲತಲಾಂತರದಿಂದ ಇಂದಿಗೆ ವರ್ಗಾವಣೆಗೋಡಿರುವುವು ಮತ್ತು ಸಾಂಸ್ಕೃತಿಕ ಮಹತ್ವದವು – ಭಾಷಾ
ವ್ಯತ್ಯಾಸಗಳಿಗೆ ಪಕ್ಕಾಗಿ ಶಾಬ್ದಿಕವಾಗಿ ಬದಲಾಗಿರಬಹುದಾದರೂ. ಪ್ರಪಂಚದ ಯಾವುದೇ ಭಾಷೆಯ ಗಾದೆಗೂ ಈ
ಮಾತು ಅನ್ವಯಿಸುತ್ತದೆ ಎಂಬುದು ಆಶ್ಚರ್ಯವಾದರೂ ನಿಜ. ಗಾದೆಗಳು ಒಂದು ಭಾಷಾ ಸಮುದಾಯದವರಿಗೆ ಅಸ್ಮಿತೆಯನ್ನು
ಒದಗಿಸುತ್ತವೆ. ಗಾದೆಗಳು ಸಾಮಾನ್ಯವಾಗಿ ನಿಜವಾದುವಾದರೂ ಯಾವಾಗಲೂ ಆಗಬೇಕೆಂದಿಲ್ಲ; ಅವು ಸಾಮಾನ್ಯವಾಗಿ
ಸೂತ್ರಸ್ವರೂಪದವು ಆದರೆ ಯಾವಾಗಳೂ ಅಲ್ಲ( Mieder).
ಹೀಗೆಯೇ
ಸಾರ್ವತ್ರಿಕವಾಗಿ ಅನ್ವಯವಾಗುವ ಇತರ ಕೆಲವಂಶಗಳೂ ಇವೆ. ಗಾದೆಗಳು ವ್ಯಕ್ತಿಯೊಬ್ಬನ ಅನುಭವಾಭಿವ್ಯಕ್ತಿ
ಮಾತ್ರವಲ್ಲ. ಒಂದು ಜನಸಮುದಾಯದ ಬಾಳಿನ ತಿರುಳಾಗಿ ಮಾರ್ಪಟ್ಟಿವೆ. ಅವುಗಳನ್ನು ಸಮುದಾಯದ ಅನುಭವಾಧಾರಿತ
ಜಾಣ್ನುಡಿಗಳು ಎನ್ನಬಹುದು. ಅವು ಸಂದರ್ಭಾನುಸಾರ ವ್ಯಕ್ತಿಯ ಗುಣಾವಗುಣಗಳನ್ನು ಅರ್ಥ ಮಾಡಿಕೊಳ್ಳಲು
ಸಹಾಯ ಮಾಡುತ್ತವೆ. (ಈ ಗುಣವನ್ನು ಅರ್ಥಸಂದಿಗ್ಧತೆ ಎಂದು ಕೆಲವೊಮ್ಮೆ ಕರೆಯುವುದಿದೆ).ಹೀಗಿರುವುದರಿಂದ
ಗಾದೆಗಳು ಸಂಸ್ಕೃತಿ ನಿರ್ದಿಷ್ಟ ಎಂದು ಹೇಳುತ್ತಾರೆ. ಅವುಗಳನ್ನು ಮೌಲ್ಯಗಳ ಮತ್ತು ನಡೆದುಕೊಂಡು ಬಂದ
ಸಂಪ್ರದಾಯಗಳ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಳ್ಳ ಬೇಕಾಗುತ್ತದೆ. ಒಂದು ಸಂಸ್ಕೃತಿಯಲ್ಲಿರುವ ಗಾದೆಯೊಂದು
ಅಕ್ಷರಶಃ ಇನ್ನೊಂದರಲ್ಲಿರುವುದು ಅಪುರೂಪ. ಆದರೆ ಅದರ ಸಮಾನಾರ್ಥದ ಗಾದೆ ಅಥವ ಗಾದೆಗಳು ಅನೇಕ ವೇಳೆ
ಇರುತ್ತವೆ. ‘ಇಂತಹವು ಒಂದೇ ರೀತಿಯ ಮಾನಸಿಕ ಚಿತ್ರಗಳನ್ನೊಳಗೊಂಡಿದ್ದು ಸಾಂಸ್ಕೃತಿಕ ನಂಬಿಕೆಗಳ ವಿಭಿನ್ನತೆಯನ್ನು
ತೋರಿಸುತ್ತವೆ; ಆದ್ದರಿಂದ ಮನುಷ್ಯ ತನ್ನ ಅನುಭವಗಳನ್ನು ಸಂಸ್ಕರಿಸಿ ಪ್ರಪಂಚವನ್ನು ಪರಿಕಲ್ಪಿಸಿಕೊಳ್ಳುವ
ರೀತಿಯನ್ನು ವಿಶ್ಲೇಷಿಸಲು ಒಂದು ಉತ್ತಮ ಸಂಪನ್ಮೂಲವಾಗಿದೆ’ (ಮೊರೆನೊ, ಪು1). “ಗಾದೆಗಳು ಒಂದು ಸಂಸ್ಕೃತಿಯ ಜಾನಪದ ಜಾಣತನವನ್ನು ಪ್ರತಿನಿಧಿಸುವ
ರೂಪಕಾಧಾರಿತ ಹೇಳಿಕೆಗಳು” (ಕೊವೆಕ್ಸಸ್ 128) ಎಂಬ
ಅಭಿಪ್ರಾಯವಿದೆ. ಅವುಗಳನ್ನುಪರಿಕಲ್ಪನೆಗಳ ಸಂಮ್ಮಿಳಿತಗಳು ಎಂಬ ರೂಪಕ-ಭೇದವನ್ನಾಗಿ ಪರಿಗಣಿಸುವುದು
ಅರ್ಥೈಸಲು ಹೆಚ್ಚು ಪ್ರಯೋಜನಕಾರಿ ಎಂಬುದು ಇನ್ನೋಂದು ಅಭಿಪ್ರಾಯ (ಯೋಂಗ್ಸಿಯಾಂಗ್, ಫಾಕ್ಕೋನಿಯರ್
ಮತ್ತು ಟರ್ನರ್). ಸಮ್ಮೇಳಗಳು ಎಂದು ಪರಿಗಣಿಸಿದರೆ ಸಾಕು, ರೂಪಕ ಪ್ರಭೇದವೋ ಅಲ್ಲವೋ ಎಂಬುದನ್ನು ಚರ್ಚಿಸಬೇಕಾಗಿಲ್ಲ
ಎಂಬ ಅಭಿಪ್ರಾಯವೂ ಉಂಟು (ಸಲ್ಲಿವನ್ ಮತ್ತು ಸ್ವೀಟ್ಸ್ಟರ್). ಇವೆಲ್ಲ ಬೇರೆ ಬೇರೆ ಸಮಾಜಗಳಲ್ಲಿ ಗಾದೆಗಳ
ಬಗ್ಗೆ ಇರುವ ಆಸಕ್ತಿಯನ್ನೂ ವಿಸ್ತಾರವಾದ ಚರ್ಚಾ ಸಾಹಿತ್ಯವನ್ನೂ ಅಭಿಪ್ರಾಯ ಬೇದಗಳನ್ನೂ ತೋರಿಸುತ್ತವೆ.
ಹೀಗೆ ಗಾದೆಗಳು ಸಾರ್ವತ್ರಿಕ ಪ್ರಸ್ತುತೆ ಇರುವಂತಹವು. ಅವುಗಳ ವಿಶ್ಲೇಷಣೆ ಸಾಮಾನ್ಯವಾಗಿ ಮೂರು ದಾರಿಗಳಲ್ಲಿ
ಸಾಗಿದೆ. ಈ ಪ್ರಬಂಧದಲ್ಲಿ ಈ ಮೂರನ್ನೂ (ಅಂದರೆ ಸಾಂಸ್ಕೃತಿಕ ಹಿನ್ನೆಲೆ, ರೂಪಕಗಳ ಕಾಗ್ನಿಟಿವ್ ಸಿದ್ಧಾಂತ
ಮತ್ತು ಸಮ್ಮೇಳ ಅಥವ ಬ್ಲೆಂಡ್ ಸದ್ಧಾಂತ) ಇಲ್ಲಿ ಪರಸ್ಪರ ಪೂರಕಗಳನ್ನಾಗಿ ಬಳಸಿಕೊಳ್ಳಲಾಗಿದೆ. ಗಾದೆಗಳಲ್ಲಿ
ಕೆಲವು ಸರಳ ಹೇಳಿಕೆಗಳು: ಉದಾ. ಮನಸ್ಸಿದ್ದರೆ ಮಾರ್ಗ.
ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ ಇತ್ಯಾದಿ. ಇವು ತಮ್ಮಷ್ಟಕ್ಕೇ ಅರ್ಥವಾಗುವಂತಹವು ಮತ್ತು ಯಾವುದೇ
ವಿಶ್ಲೇಷಣೆಯ ಅಗತ್ಯವಿರುವುದಿಲ್ಲ. ಒಂದು ರೀತಿಯಲ್ಲಿ ಸಾರ್ವತ್ರಿಕ ಸತ್ಯಗಳನ್ನು ತಿಳಿಸುವ ಹೇಳಿಕೆಗಳಿವು.
ಗಾದೆಗಳಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ದೊಡ್ಡ ಪಾತ್ರವಹಿಸುತ್ತವೆ.
ಮನುಷ್ಯರೇ ಪಾತ್ರಗಳಾಗಿರುವ ಗಾದೆಗಳೂ ಅನೇಕವಿವೆ. ಪ್ರಾಣಿಗಳು ಕೇಂದ್ರ ಪ್ರಜ್ಞೆಯಂತಿರುವುವೂ ಇವೆ.
ಉದಾಹರಣೆಗೆ ನಾಯಿಗೆ ಹೇಳಿದರೆ ತನ್ನ ಬಾಲಕ್ಕೆ ಹೇಳ್ತಂತೆ
ಎಂಬಂತಹ ಗಾದೆ-ಮಾತಿನಲ್ಲಿ ನಾಯಿಗೇ ನಾಯಕನ ಸ್ಥಾನ; ಇದು ನಾಯಿಯ ಒಂದು ಗುಣವನ್ನು ಕುರಿತಂತೆ ಕಂಡರೂ
ನಿಜವಾಗಿ ಅದು ಮನುಷ್ಯ ವ್ಯವಹಾರಕ್ಕೇ ಸಂಬಂಧಿಸಿದ್ದು ಮತ್ತು ಇದು ಆ ಗಾದೆ ಪ್ರಯೋಗವಾಗುವ ಸಂದರ್ಭದಿಂದ
ಸ್ಪಷ್ಟವಾಗುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ
ಬಾರದು ಎಂಬ ಗಾದೆಯಲ್ಲಿ ಪ್ರಾಣಿ ಸಸ್ಯಗಳೆರಡೂ ಪಾತ್ರವಹಿಸಿವೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಲ್ಲಿ ಸಸ್ಯದ್ದೇ ಕಾರುಭಾರ. ಕುಣಿಯಲಾರದವ ನೆಲ ಡೊಂಕು ಎಂದ ಎಂಬ ಗಾದೆ-ಮಾತಿನಲ್ಲಿ
ಮನುಷ್ಯನದೇ ಪ್ರಧಾನ ಪಾತ್ರ.
ರಿಚರ್ಡ್
ಹಾನೆಕ್ ಇವರ ಪ್ರಕಾರ Proverbs force people to synthesise at a high level in a
totality of abstract medium (Honeck, p131).ಅಂದರೆ ಒಂದು ವಿಷಯವನ್ನು ಇನ್ನಾವುದರ
ಜೊತೆಗೋ ಸಮನ್ವಯಿಸಿ ಅತ್ಯುನ್ನತ ಮಟ್ಟದಲ್ಲಿ ವಿಚಾರ
ಮಂಥನ ಮಾಡುವಂತೆ ಗಾದೆಗಳು ಜನರನ್ನು ಒತ್ತಾಯಿಸುತ್ತವೆ. ಆದ್ದರಿಂದಲೇ ಗಾದೆಗಳು ಸಾಮಾಜಿಕವಾಗಿ ಪ್ರಸ್ತುತವಾಗಿರುವುವಷ್ಟೇ
ಅಲ್ಲ, ಅವು ಸಮುದಾಯದ ಬೌದ್ಧಿಕ ಬೆಳವಣಿಗೆಗೂ ಕಾರಣವಾಗುತ್ತವೆ.
ಗಾದೆಗಳ
ಕಾರ್ಯವು ಮುಖ್ಯವಾಗಿ ನಾಲ್ಕು: 1. ಅದು ಇನ್ನೊಬ್ಬರ ನಡವಳಿಕೆಯನ್ನು ಟೀಕಿಸಬಹುದು 2. ಅದು ಇನ್ನೊಬ್ಬರಿಗೆ
ಒಂದು ಸಂದೇಶವನ್ನು ನೀಡಬಹುದು 3. ವಾಸ್ತವವನ್ನು ನಿರೂಪಿಸಿ ಸಂದರ್ಭದ ನಡವಳಿಕೆಯ ಅನಿವಾರ್ಯತೆಯನ್ನು
ಸೂಚಿಸಬಹುದು.4. ಸ್ವನಿಯಂತ್ರಣದ ಆವಶ್ಯಕತೆಯನ್ನು ತಿಳಿಸಬಹುದು. ಗಾದೆಗಳ ಈ ಕಾರ್ಯವನ್ನು ವಿಶದೀಕರಿಸಲು
ಮೇಲಿನ ಉದಾಹರಣೆಗಳೇ ಸಾಕಾಗುತ್ತವೆ. ಇತರ ಕೆಲವು ಉದಾಹರಣೆಗಳನ್ನೂ ನೋಡಬಹುದು: ಬಾಯೆಲ್ಲ ವೇದಾಂತ ಕೈಯೆಲ್ಲ ರಾದ್ಧಾಂತ (ಅಥವ ಹೇಳುವುದು
ವೇದ ಹಾಕುವುದು ಗಾಳ) ಎಂಬಲ್ಲಿ ಸಮಾಜಕ್ಕೆ ಹೇಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬುದರ ಬಗ್ಗೆಯೇ
ಯಾವಾಗಲೂ ಭಾಷಣ ಬಿಗಿಯುತ್ತಾ ಒಂದಲ್ಲೊಂದು ರೀತಿಯಲ್ಲಿ ತನ್ನ ತಿಜೋರಿಯನ್ನೇ ತುಬಿಸಿಕೊಳ್ಳುವ ಅಥವ
ಸ್ವಾರ್ಥವನ್ನೇ ಸಾಧಿಸುವವರ ಬಗ್ಗೆ ಟೀಕೆ ಇದೆ; ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲಾಗುವುದೇ? ಎಂಬ ಗಾದೆಯಲ್ಲಿ ನಿಂದೆಗೆ ಪ್ರತಿನಿಂದೆ ಪರಿಹಾರವಲ್ಲವೆಂಬ ಸಂದೇಶವಿದೆ;
ಬೆಲ್ಲವಿದ್ದಲ್ಲಿ ನೊಣಗಳ ಸಂತೆ ಎಂಬ ಗಾದೆ ವಾಸ್ತವವನ್ನು
ತಿಳಿಸುತ್ತಾ ವ್ಯಕ್ತಿಯಲ್ಲಿರುವ ಸದ್ಗುಣಗಳನ್ನು ತೋರ್ಪಡಿಸುವಲ್ಲಿ ವಿವೇಚನೆ ಇಟ್ಟುಕೊಳ್ಳಬೇಕೆಂಬುದನ್ನು
ಸೂಚಿಸುತ್ತದೆ; ಆಳಾಗಬಲ್ಲವ ಅರಸಾಗಬಲ್ಲ ಎಂಬ ಮಾತಿನಲ್ಲಿ
ವೈಭವ-ಅಧಿಕಾರ-ಸಾಮರ್ಥ್ಯಗಳಿದ್ದಾಗ ಅಹಂಕಾರದಿಂದ ವರ್ತಿಸಿ ಇತರರನ್ನು ಶೋಷಿಸದೆ ತನ್ನನ್ನು ತಾನು ನಿಯಂತ್ರಿಸಿಕೊಂಡು
ಸರಳತೆಯಿಂದ ಎಲ್ಲರೊಡನಿರಬೇಕೆಂಬ ಸೂಚನೆ ಇದೆ.
ಹಲವು ರೂಪಕಗಳು ಸಹಜವಾಗಿಯೇ ಗಾದೆಗಳಲ್ಲಿ ಬಳಕೆಯಾಗುತ್ತವೆ. ಕಾಗ್ನಿಟಿವ್ ಸಿದ್ಧಾಂತದ
ಪ್ರಕಾರ ಇವುಗಳನ್ನು ವಿಶ್ಲೇಷಿಸಿವುದು ಗಾದೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಬಹು ಸಹಾಯಕ.
ಕಾಗ್ನಿಟಿವ್ ಸಿದ್ಧಾಂತದ ಪ್ರಕಾರ ರೂಪಕಗಳು ಕವಿಸೃಷ್ಟಿಗೋ ಕಾವ್ಯಗಳನ್ನು ಸುಂದರಗೊಳಿಸುವುದಕ್ಕೋ ಸೀಮಿತಗಳಲ್ಲ.
ಅವು ಸಾಮಾನ್ಯಜನಮಾನಸದಲ್ಲಿ ನಿಬಿಡವಾಗಿರುವಂತಹವು. ಮನುಷ್ಯ ಈ ಪ್ರಪಂಚವನ್ನು ಗ್ರಹಿಸಲು ರೂಪಿಸಿಕೊಂಡ
ಒಂದು ಉಪಕರಣವೇ ರೂಪಕ. ಉದಾಹರಣೆಗೆ ರಾಮಕೃಷ್ಣರನ್ನು ಸಂಧಿಸಿದ ನಂತರ ನರೇಂದ್ರನ ಜೀವನದ ದಿಕ್ಕೇ ಬದಲಾಯಿತು
ಎಂಬ ವಾಕ್ಯವನ್ನು ಅರ್ಥಮಾಡಿಕೊಳ್ಳುವಾಗ ವಿಶೇಷ ಪ್ರಯತ್ನವಿಲ್ಲದೆ ಜೀವನವನ್ನು ಒಂದು ಪ್ರಯಾಣವನ್ನಾಗಿ
ನಾವು ಪರಿಕಲ್ಪಿಸಿಕೊಳ್ಳುತ್ತೇವೆ. ಜೀವನ ಎಂಬುದು ಒಂದು ಅಮೂರ್ತ ಪರಿಕಲ್ಪನೆಯಾಗಿದ್ದು ಅದಕ್ಕೆ ದಿಕ್ಕು
ಎಂಬುದು ಅರ್ಥವಾಗದ ಮಾತು. ಆದರೆ ನಮ್ಮ ಮನಸ್ಸುಗಳಲ್ಲೆಲ್ಲ ಜೀವನವು ಒಂದು ಪ್ರಯಾಣ ಎಂಬ ರೂಪಕ ಇರುವುದರಿಂದ
ಇದು ಕೂಡಲೇ ಅರ್ಥವಾಗುತ್ತದೆ. ಪ್ರಯಾಣಕ್ಕೆ ಮುಂದೆ, ಹಿಂದೆ, ದಿಕ್ಕು ಬದಲಾವಣೆ ಎಲ್ಲವೂ ಇವೆ. ಆಡುವುದಕ್ಕಾಗಿ
ನನ್ನಲ್ಲಿ ಸಮಯವಿಲ್ಲ ಎಂದಾಗಲೂ ಅಷ್ಟೆ. ಸಮಯವನ್ನು ನಾವು ನಮ್ಮಲ್ಲಿ ಇಟ್ಟುಕೊಂಡಿರುವ ಒಂದು ವಸ್ತುವನ್ನಾಗಿ
ಕಲ್ಪಿಸಿ ಹೇಳುತ್ತಿದ್ದೇವೆ. ಅವನಿಗೆ ಸಿಟ್ಟೇರಿತು ಎನ್ನುವಾಗ ಥರ್ಮಾಮೀಟರಿನಂತಹ ಧಾರಕದಲ್ಲಿ ಒಂದು
ದ್ರವವಾಗಿ ಸಿಟ್ಟು ಇದ್ದು ಏನೋ ಘರ್ಷಣೆಯ ಕಾರಣ ಅದು ಮೇಲೇರಿತು ಎಂಬಂತೆ ತಿಳಿಯುತ್ತೇವೆ. ನರಿ ಉಪಾಯಗಾರ
ಎನ್ನುವಾಗ ಉಪಾಯ ಮಾಡುವ ಮಾನವ ಗುಣವನ್ನು ನರಿಗೆ (ಪ್ರಾಣಿಗೆ) ಆರೋಪಿಸುತ್ತೇವೆ. ಅಂದರೆ ಇಲ್ಲೆಲ್ಲ
ಒಂದು ವಿಷಯವನ್ನು ಅಥವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಇನ್ನೊಂದರ ಮೊರೆ ಹೋಗುತ್ತಿದ್ದೇವೆ.
ಹೀಗೆ ಒಂದು ಪರಿಕಲ್ಪನೆ, ಭಾವನೆ ಅಥವ ಘಟನೆಗಳನ್ನು ಇನ್ನೊಂದರ ಸಹಾಯದಿಂದ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ
ಒಂದನ್ನು ಇನ್ನೊಂದು ಎಂದು ಅಭೇದಾತ್ಮಕವಾಗಿ ಅಂದುಕೊಳ್ಳುತ್ತೇವೆ. ಇದೇ ರೂಪಕ.
ನಮ್ಮ ಬದುಕಿನ ರೀತಿಯನ್ನು ನಾವು ಅರ್ಥ ಮಾಡಿಕೊಳ್ಳುವಾಗ ಅಥವ ಇನ್ನೊಬ್ಬರಿಗೆ ಹೇಳುವಾಗ
ನಾವು ಒಂದನ್ನು ಇನ್ನೊಂದಾಗಿ ರೂಪಕಗೊಳಿಸುತ್ತೇವೆ. ಮೇಲಿನವೆಲ್ಲ ಉದಾಹರಣೆಗಳು: ನಾವು ಜೀವನವನ್ನು
ಪ್ರಯಾಣವಾಗಿ ರೂಪಕಗೊಳಿಸುತ್ತೇವೆ; ಸಮಯವನ್ನು ವಸ್ತುವನ್ನಾಗಿ ರೂಪಕಗೊಳಿಸುತ್ತೇವೆ; ಭಾವನೆಯನ್ನು
(ಉದಾಹರಣೆಗೆ ಸಿಟ್ಟನ್ನು) ಧಾರಕದಲ್ಲಿರುವ ದ್ರವ ಅಥವ ಅನಿಲವನ್ನಾಗಿ ರೂಪಕಗೊಳಿಸುತ್ತೇವೆ. ಜೀವನ,
ಸಮಯ, ಸಿಟ್ಟು, ನರಿಯ ಗುಣಸ್ವಭಾವ – ಇಂತಹವುಗಳು ಅಮೂರ್ತ ಸ್ವರೂಪದವಾಗಿದ್ದು ಅವುಗಳನ್ನು ಅರ್ಥಮಾಡಿಕೊಳ್ಳಲು
ಹೀಗೆ ರೂಪಕಗೊಳಿಸುವುದು ಅಗತ್ಯವಾಗುತ್ತದೆ. (ಹೆಚ್ಚಿನ ವಿವರಗಳನ್ನು ರೂಪಕಗಳ ಸುತ್ತ ಎಂಬ ನನ್ನ ಪ್ರಬಂಧದಲ್ಲಿ
ಕಾಣಬಹುದು). ಇವುಗಳಲ್ಲಿ ಕೆಲವು ಸಾರ್ವತ್ರಿಕವಾಗಿ ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ, ಇನ್ನು ಕೆಲವು
ಒಂದು ಸಮುದಾಯದ ಎಲ್ಲ ವ್ಯಕ್ತಿಗಳ ಮನಃಪಟಲದಲ್ಲಿ ಒಂದೇರಿತಿಯಾಗಿ ರೂಪಕಗೊಂಡಿರುವುದು ಆಶ್ಚರ್ಯವೇ ಸರಿ.
ಗಾದೆಗಳೂ ರೂಪಕಗಳೇ ಎಂಬುದು ಒಂದು ಅಭಿಪ್ರಾಯವಷ್ಟೆ. ಗಾದೆಯು ಹಲವು ವಿಶಿಷ್ಟ ಸನ್ನಿವೇಶಗಳಿಗೆ
ಅನ್ವಯವಾಗಬಲ್ಲ ಒಂದು ಸಾಮಾನ್ಯ ಅಥವ ಸಾರ್ವತ್ರಿಕ ಹೇಳಿಕೆ. ಆದ್ದರಿಂದ ಒಂದು ಗಾದೆಯ ಮೂಲಕ ನಾವೇನನ್ನು
ಅರ್ಥ ಮಾಡಿಕೊಳ್ಳ ಬೇಕಿದೆ ಎಂಬುದು ತತ್ಕ್ಷಣ, ಅಂದರೆ ಗಾದೆಯ ಹೇಳಿಕೆಯಲ್ಲಿಯೇ, ಸ್ಪಷ್ಟವಿರುವುದಿಲ್ಲ.
ಆದರೆ ಅದನ್ನು ಜನರು ಪ್ರಯೋಗಿಸುವ ಸನ್ನಿವೇಶ ನಾವು ಅರ್ಥ ಮಾಡಿಕೊಳ್ಳ ಬೇಕಾದ ಘಟನೆಯನ್ನು ಸ್ಪಷ್ಟಗೊಳಿಸುತ್ತದೆ.
ಮತ್ತು ಗಾದೆಯು ಸಂದರ್ಭಾನುಸಾರ ಸ್ಪಷ್ಟವಾಗುತ್ತದೆ. ಹನಿಹನಿಗೂಡಿದರೆ
ಹಳ್ಳ ತೆನೆತೆನೆ ಕೂಡಿದರೆ ಬಳ್ಳ ಎಂಬ ಗಾದೆ ಇದೆ. ನಾವು ಈ ಗಾದೆಯನ್ನು ನಿರ್ದಿಷ್ಟ ಸನ್ನಿವೇಶದಲ್ಲಿ
ಪ್ರಯೋಗಿಸುತ್ತೇವೆ ಮತ್ತು ಪ್ರಯೋಗಿಸಿದ ಸಂದರ್ಭ ಈ ಗಾದೆಯಿಂದ ನಾವು ಹೇಳ ಬೇಕಾದುದನ್ನು ಸ್ಪಷ್ಟಗೊಳಿಸುತ್ತದೆ.
ಹಾಗೆಂದು ಇದೊಂದು ಅರ್ಥಹೀನ ವಾಕ್ಯವೇನಲ್ಲ. ಅದಕ್ಕೆ ತನ್ನದೇ ಆದ ಅರ್ಥವೂ ಇದೆ. ಇಂತಹ ಅರ್ಥ ಸಂಸ್ಕೃತಿಯ
ಹಿನ್ನೆಲೆಯಿಂದ ಬರುತ್ತದೆ. ಈ ವಾಕ್ಯದಲ್ಲಿ ಎರಡು ಭಾಗಗಳಿವೆ. ಹನಿಹನಿ ಕೂಡಿದರೆ ಹಳ್ಳ ಎಂಬುದು ಪೂರ್ವಾರ್ಧ,
ಮೊದಲ ಭಾಗ. ಎರಡನೆಯ ಭಾಗ (ಅಂದರೆ ಉತ್ತರಾರ್ಧ) ಪೂರ್ವಾರ್ಧದಲ್ಲಿ ನಿರೂಪಿತ ವಾಸ್ತವದ ದೃಢೀಕರಣ; ಅದರಿಂದ
ತೆಗೆದ ಅನುಮಾನವಾಗಿಯೂ (inference) ಅದನ್ನು ಪರಿಭಾವಿಸಬಹುದಾಗಿದೆ. ಹೀಗೆ ಗಾದೆಗೆ ತನ್ನಷ್ಟಕ್ಕೆ
ತಾನೆ ಒಂದು ಅರ್ಥವಿದೆ ಮತ್ತು ಅದು ಸ್ಪಷ್ಟವಾಗಿಯೇ ಇದೆ. ಹೇಗೆ ಮಳೆಗಾಲದಲ್ಲಿ ಬೇರೆಬೇರೆ ಕಡೆಗಳಿಂದ
ಹರಿದು ಬಂದ ನೀರೆಲ್ಲ ಸೇರಿ ಒಂದು ಹಳ್ಳವಾಗುತ್ತದೆಯೋ ಹಾಗೆಯೇ ಕೆಲವೇ ಕಾಳುಗಳಿರುವ ಹಲವು ತೆನೆಗಳು
ಸೇರಿ ಬಳ್ಳ (ಧಾನ್ಯವನ್ನು ಅಳೆಯಲು ಬಳಸುವ ದೊಡ್ಡ ಧಾರಕ ಅಥವ ಪಾತ್ರೆ) ತುಂಬುತ್ತದೆ ಎಂಬುದು ಸ್ಪಷ್ಟವಿರುವ
ಅರ್ಥ. ಒಬ್ಬ ಸಣ್ಣ ವಯಸ್ಸಿನ ವ್ಯಕ್ತಿ ತನ್ನಲ್ಲಿರುವ ಧನವನ್ನು ಅಲ್ಪಅಲ್ಪವಾಗಿ ಅನಗತ್ಯವಾಗಿ ವ್ಯಯಿಸುತ್ತಿದ್ದಾನೆನ್ನಿ;
ಆಗ ಒಬ್ಬ ಹಿರಿಯ ವ್ಕಕ್ತಿ ಬುದ್ಧಿಮಾತಾಗಿ ಈ ಗಾದೆಯನ್ನು ಹೇಳಬಹುದು. ಅಂದರೆ ನಾವು ಇಲ್ಲಿ ಎರಡನೆಯದಾಗಿ
ಪ್ರಸ್ತಾವಿಸಿರುವ ಘಟನೆಯನ್ನು ಪ್ರಸ್ತುತ ಗಾದೆಯ ಮೂಲಕ ಅರ್ಥಮಾಡಿಕೊಳ್ಳುತ್ತೇವೆ. ಸಣ್ಣಸಣ್ಣ ಮೊತ್ತಗಳಲ್ಲಿ
ವ್ಯಯಿಸುವ ಧನ ಅರ್ಥಮಾಡಿಕೊಳ್ಳ ಬೇಕಾದ ಲಕ್ಷ್ಯ. ಇದೊಂದು ಮಾನವ ವ್ಯವಹಾರ. ಇದನ್ನು ಅರ್ಥ ಮಾಡಿಕೊಳ್ಳಲು
ನಾವು ಬಳಸುವುದು ಹನಿಹನಿ ಕೂಡಿ ಹಳ್ಳವಾಗುತ್ತದೆಂಬ ಮತ್ತು ತೆನೆತೆನೆ ಕೂಡಿ ಬಳ್ಳವಾಗುತ್ತದೆಂಬ ವಾಸ್ತವವನ್ನು.
ಗಾದೆಯಲ್ಲಿ ನಿರೂಪಿತ ಮೂಲ ಘಟನೆಯಲ್ಲಿ ಸಣ್ಣ ಹನಿಗಳು, ಸಣ್ಣ ತೆನೆಗಳು, ಹಳ್ಳ ಮತ್ತು ಬಳ್ಳ ಇವೆ.
ಗಾದೆ ಪ್ರಯೋಗವಾಗುವ ವಾಸ್ತವ ಘಟನೆಯಲ್ಲಿ ಇರುವ ಧನದ ಅಲ್ಪ ವ್ಯಯಗಳೊಂದಿಗೆ ಹನಿ ಮತ್ತು ತೆನೆಗಳು ನಕ್ಷೀಕೃತವಾಗುತ್ತವೆ;
ಹಳ್ಳ ಮತ್ತು ಬಳ್ಳಗಳು ದೊಡ್ಡ ಮೊತ್ತದ ಹಣದ ಚೀಲದೊಂದಿಗೆ ನಕ್ಷೀಕೃತವಾಗುತ್ತವೆ (ರೂಪಕಗಳಲ್ಲಿ ಕಂಡುಬರುವ
ನಕ್ಷೆಗಳ ಬಗ್ಗೆ ರೂಪಕಗಳ ಸುತ್ತ ಎಂಬ ನನ್ನ ಪ್ರಬಂಧವನ್ನು ನೋಡಬಹುದು). ಸಣ್ಸಣ್ಣ ಮೊತ್ತಗಳನ್ನು ನಾವು
ಎಗ್ಗಿಲ್ಲದೆ ಖರ್ಚು ಮಾಡುವುದನ್ನು ಬಿಟ್ಟು ಸಂಕಲಿಸಿದರೆ ಒಂದು ದಿನ ಅದು ದೊಡ್ಡ ಮೊತ್ತವಾಗುತ್ತದೆ,
ಆಗ ಅದನ್ನು ಸತ್ಕಾರ್ಯಕ್ಕಾಗಿ ಬಳಸಬಹುದು; ಮತ್ತು ಹಣ ಸಿಕ್ಕಿದಂತೆಲ್ಲ ಖರ್ಚು ಮಾಡದೆ ಉಳಿಸುತ್ತಾ
ಹೋಗಬೇಕು ಎಂಬುದು ಇದರ ಅಭಿಪ್ರಾಯವಾಗಿ ಮೂಡುತ್ತದೆ.
ಹೀಗೆ ಗಾದೆ ಸನ್ನಿವೇಶದಲ್ಲಿ ಅರ್ಥವಾಗುತ್ತದೆ.
ಇಲ್ಲೆಲ್ಲ
ಗಾದೆಯು ಒಂದು ಮೂಲ ಪರಿಧಿಯಂತೆ ವರ್ತಿಸುತ್ತದೆ ಮತ್ತು ಅದು ಪ್ರಯೋಗವಾಗುವ ಸಂದರ್ಭದ ಮನಷ್ಯ ನಡವಳಿಕೆ
ಲಕ್ಷ್ಯ ಪರಿಧಿಯಾಗಿ ಅರ್ಥವಾಗುತ್ತದೆ. ಆದ್ದರಿಂದಲೇ ವಿಭಿನ್ನ ಸಂದರ್ಭಗಳಲ್ಲಿ ಗಾದೆಗಳು ವಿಭಿನ್ನವಾಗಿ
ಅರ್ಥವಾಗುತ್ತವೆ. ಪ್ರಥಮ ಚುಂಬನಮ್ ದಂತಭಗ್ನಮ್ ಎಂಬ ಇನ್ನೊಂದು ಉದಾಹರಣೆಯನ್ನು ನೋಡಬಹುದು. ಇದು ವ್ಯಕ್ತಿಯೊಬ್ಬನು
ಭಾವನಾತ್ಮಕವಾಗಿ ನೋವಿನ ಅನುಭವವನ್ನು ಹೇಳಿಕೊಳ್ಳಲು ಮತ್ತು ಆದ್ದರಿಂದ ಸಣ್ಣಮಟ್ಟದ ಭಾವನಾತ್ಮಕ ಸಂದರ್ಭಗಳಲ್ಲಿ
ಭಾಗವಹಿಸಲು ಹೆದರುತ್ತಿರುವುದನ್ನು ಸೂಚಿಸಲು ಬಳಸಬಹುದು. ಅಥವ ಒಬ್ಬ ವ್ಯಕ್ತಿಯು ಪ್ರಾರಂಭಿಸಿದ ಉದ್ಯಮ
ಇತ್ಯಾದಿಗಳಲ್ಲಿ ಪ್ರಾರಂಭದಲ್ಲಿಯೇ ವಿಫಲನಾದುದನ್ನು ಟೀಕಿಸಲು ಬಳಸಬಹುದು.
ಪ್ರತಿಯೊಂದು
ಗಾದೆಯ ಹಿಂದೆ ಒಂದು ವಿಸ್ತೃತ ಕಥೆಯೇ ಇರುತ್ತದೆ ಎನ್ನಬಹುದು.ಅಥವ ಗಾದೆಯ ಹಿನ್ನೆಲೆಯಾಗಿ ಒಂದು ಕಥೆಯನ್ನು
ಕಲ್ಪಿಸುವುದು ಅದರ ಅರ್ಥವನ್ನು ಸ್ಪಷ್ಟಪಡಿಸಲು ಒಂದು ಸಾಧನವೇಸರಿ. (ನಾನು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ
ಗಾದೆಗಳನ್ನು ವಿಸ್ತರಿಸಿ ಬರೆಯುವುದು ಒಂದು ಪರಿಕ್ಷಾ ಪ್ರಶ್ನೆಯಾಗಿರುತ್ತಿತ್ತು). ಉದಾಹರಣೆಗೆ: ಊಟ
ಆಯ್ತೇನೋ ಗುಂಡ ಎಂದರೆ ಮುಂಡಾಸು ಮುವತ್ತು ಮೊಳ ಅಂದ ಎಂಬುದೊಂದು ಗಾದೆ. ಈ ಗಾದೆಯ ಹಿನ್ನೆಲೆಯನ್ನು
ಹೀಗೆ ಕಲ್ಪಿಸಿಕೊಳ್ಳಬಹುದು. ಒಬ್ಬ ಏನೂ ಕೆಲಸವಿಲ್ಲದ, ಕೆಲಸಕ್ಕೆ ಒಗ್ಗದ ಹುಡುಗ; ಅವನೊಮ್ಮೆ ದಾರಿಯಲ್ಲಿ
ನಡೆದುಕೊಂಡು ಹೋಗುತ್ತಿದ್ದ; ಕೆಲಸದಲ್ಲಿ ನಿರತನಾಗಿದ್ದ ಒಬ್ಬ ಹಿರಿಯ ಪರಿಚಿತ ಇವನನ್ನು ನೋಡಿದ; ಮಾತನಾಡಿಸೋಣವೆಂದು
ಊಟವಾಯ್ತೇನೋ ಗುಂಡ ಎಂದು ಕೇಳಿದ; ಗುಂಡ ಆಯ್ತು ಅಥವ ಇಲ್ಲ ಎಂದು ಉತ್ತರಿಸುವುದಿಲ್ಲ; ಬದಲಾಗಿ ಉದ್ದವಾಗಿದ್ದ
ಹಿರಿಯನ ಮುಂಡಾಸನ್ನು ನೋಡಿ ‘ಮುಂಡಾಸು ಮುವತ್ತು ಮೊಳ’ ಎಂದು ಉಡಾಫೆ ಹೊಡೆದು ನಡೆದೇ ಬಿಟ್ಟ. ಕೇಳಿದ
ಪ್ರಶ್ನೆಗೆ ಸರಿಯಾದ ಉತ್ತರ ಹೇಳದ, ಯಾವಾಗಲೂ ಸುತ್ತು ಬಳಸಿಯೇ ಮಾತನಾಡುವ, ಒಂದು ಮಾತಿಗೆ ಹಲವು ಮಾತುಗಳಿಂದ
ಅಸಂಬದ್ಧವಾಗಿ ಪ್ರತಿಕ್ರಿಯಿಸುವ ಸಂದರ್ಭಗಳಲ್ಲಿ ಈ ಗಾದೆ ಬಳಕೆಯಾಗುತ್ತದೆ. ಹೀಗೆ ಗಾದೆಗಳಿಗೆ ಕಥಾ
ಹಿನ್ನೆಲೆ ಕಲ್ಪಿಸ ಬಹುದು.
ಗಾದೆಗಳಲ್ಲಿ
ರೂಪಕಗೊಳಿಸುವ ಪ್ರಕ್ರಿಯೆ ಹಲವು ರೀತಿಯಲ್ಲಿ ನಡೆಯುತ್ತದೆ. ಸಾರ್ವತ್ರಿಕವಾಗಿ ಅನ್ವಯವಾಗುವಂತಹ ಹೇಳಿಕೆಗಳ
ರೂಪವಾಗಿ ಅವು ಇದ್ದು ಎಷ್ಟೋ ನಿರ್ದಿಷ್ಟ ಸಂದರ್ಭಗಳಲ್ಲಿ ಅವುಗಳನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ.
ಅಂದರೆ ಒಂದು ಸಾರ್ವತ್ರಿಕ ಸತ್ಯದಂತಿರುವ ಹೇಳಿಕೆಯನ್ನು ಅದು ಈ ನಿರ್ದಿಷ್ಟ ಸಂದರ್ಭಕ್ಕಾಗಿಯೇ ಮಾಡಿದ್ದು
ಎಂಬಂತೆ ಬಳಸುವುದು. ಅಂತಹವನ್ನು ಸಾರ್ವತ್ರಿಕವು ನಿರ್ದಿಷ್ಟ ಎಂಬ ರೂಪಕ ಎಂದು ಪರಿಗಣಿಸಬಹುದು. (ಇಂತಹವನ್ನು
ರೂಪಕಗಳೆಂದು ಪರಿಗಣಿಸಬೇಕಾಗಿಲ್ಲ ಎಂಬ ವಾದವೂ ಇದೆ). ಮನುಷ್ಯನನ್ನು ಪ್ರಾಣಿಯನ್ನಾಗಿ ರೂಪಕಗೊಳಿಸುವುದು,
ಸಸ್ಯವನ್ನಾಗಿ ರೂಪಕಗೊಳಿಸುವುದು ಇಂಹವು ಗಾದೆಗಳಲ್ಲಿ ಸಹಜ. ನಾಯಿ ಬೊಗಳಿದರೆ ದೇವ ಲೋಕ ಹಾಳಾಗದು ಎಂಬ
ಗಾದೆ ಇದೆ. ಬೀದಿ ನಾಯಿಗೆ ಒಳ್ಳೆಯವರು ಕೆಟ್ಟವರು ಎಂಬುದರ, ಅಥವ ಇವರು ಒಳ್ಳೆಯ ಕಾರ್ಯ ಮಾಡಿದ್ದಾರೆ
ಇನ್ನೊಬ್ಬರು ಕೆಟ್ಟ ಕಾರ್ಯ ಮಾಡಿದ್ದಾರೆ ಅಥವ ಮಾಡುತ್ತಾರೆ ಎಂಬುದರ ಪರಿಗಣನೆ ಇರುವುದಿಲ್ಲ. ತನಗೆ
ಏನೋ ಅಪಾಯವಿದೆ ಎಂದು ದಾರಿಹೋಕರನ್ನು ನೋಡಿ ಬೊಗಳುತ್ತಿರುತ್ತದೆ. ಇದರಿಂದ ದಾರಿಗರಿಗೆ ಕೇಳುವ ಕಿರಿಕಿರಿ
ಉಂಟಾದರೂ ಯಾರೇನೂ ಹೆದರಿ ಓಡುವುದಿಲ್ಲ. ಅವರೇನೂ ಕಳ್ಳರಲ್ಲವಲ್ಲ! ನಾಯಿಯ ಬೊಗಳುವಿಕೆಯೇ ಒಬ್ಬನನ್ನು
ಕಳ್ಳನನ್ನಾಗಿಯೋ ಕೆಟ್ಟವನನ್ನಾಗಿಯೋ ಮಾಡುವುದಿಲ್ಲ. ಇದನ್ನು ಸಾರ್ವತ್ರಿಕವಾಗಿ ಅನ್ವಯವಾಗುವ ಒಂದು
ಹೇಳಿಕೆಯಂತೆ ಗಾದೆ ನಿರೂಪಿಸುತ್ತದೆ. ಒಬ್ಬ ಸಜ್ಜನ ವಿದ್ವಾಂಸರನ್ನು ಅವನಿಗೆ ಸಿಗುವ ಗೌರವವನ್ನು ನೋಡಿ
ಒಬ್ಬ ಕಾಳ ಸಂತೆಕೋರ ಅಸೂಯೆಯಿಂದ ನಿಂದಿಸಿದರೆ ನೋಡುಗರು ಈ ಗಾದೆಯನ್ನು ಹೇಳ ಬಹುದು. ಅಥವ ತನ್ನನ್ನು
ಎದುರೆದುರೇ ವಿನಾಕಾರಣ ನಿಂದಿಸುತ್ತಿದ್ದರೆ ನಿಂದಕನಿಗೆ ತಾನು (ಓರ್ವ ಸಜ್ಜನ) ಈ ಮಾತನ್ನು ಬುದ್ಧಿಮಾತಾಗಿಯೂ
ಹೇಳ ಬಹುದು. ಗಾದೆಯಲ್ಲಿ ನಾಯಿ ಎಂಬ ಮಾತಿದ್ದರೂ ಇದು ನಿಜವಾಗಿ ಮನುಷ್ಯನಿಗೆ ಅನ್ವಯವಾಗುವಂತಹದು.
ಇಲ್ಲಿ ನಾಯಿಯ ನಿಷ್ಠಾ ನಡವಳಿಕೆ ಅನುಲಕ್ಷಿಸಿಲ್ಲ; ನಾಯಿಯ ಹೀನ ಸ್ವಭಾವಗಳು ಅನುಲಕ್ಷಿತವಾಗಿವೆ. ಅನಾವಶ್ಯಕವಾಗಿ
ನಿಂದಿಸುವುದು ಕೆಲವರ ಹೀನ ಸ್ವಭಾವವಾಗಿದ್ದು ಅದರಿಂದ ಶ್ರೇಷ್ಠ ಸ್ವಭಾವದ ಮನುಷ್ಯನಿಗೇನೂ ಕುಂದಾಗುವುದಿಲ್ಲ
ಎಂಬುದೇ ಇಲ್ಲಿರುವ ಧ್ವನಿ. ಅನೇಕ ಗಾದೆಗಳಲ್ಲಿ ಹೀಗೆ ಮನುಷ್ಯನ ಸ್ಥಾನದಲ್ಲಿ ಪ್ರಾಣಿಯೊಂದನ್ನು ಬಳಸುವುದಿದೆ.
ಅಂದರೆ ಮನುಷ್ಯನನ್ನು ಪ್ರಾಣಿಯನ್ನಾಗಿ ರೂಪಕಗೊಳಿಸಿ ಗಾದೆಗಳಲ್ಲಿ ಪ್ರಯೋಗಿಸುವುದು ಸಾಮಾನ್ಯ. ಹೀಗೆ
ಮನುಷ್ಯನ ಗುಣಗಳನ್ನು ಪ್ರಾಣಿಗಳಿಗೆ ಆರೋಪಿಸುವ ಮೂಲಕ ಅಥವ ಪ್ರಾಣಿಗುಣವನ್ನು ಮನುಷ್ಯನಿಗೆ ಆರೋಪಿಸುವ
ಮೂಲಕ ರೂಪಕಗೊಳಿಸುವ ಈ ಪ್ರಕ್ರಿಯೆಗೆ ಅಸ್ತಿತ್ವದ ಮಹಾಸರಪಳಿ ರೂಪಕವೆಂದು ಕರೆಯುವರು.
ಪರಿಕಲ್ಪನಾತ್ಮಕ ರೂಪಕಗಳೂ ಗಾದೆಗಳಲ್ಲಿ
ಪ್ರಯೋಗವಾಗುತ್ತವೆ. ಮಾಡಿದವನ ಪಾಪ ಆಡಿದವನ ಬಾಯಲ್ಲಿ ಎಂಬ ಗಾದೆಯನ್ನು ತೆಗೆದುಕೊಳ್ಳಿ. ಸಾರ್ವತ್ರಿಕವು
ನಿರ್ದಿಷ್ಟ ಎಂಬ ತತ್ವವು ಬೇರೆಲ್ಲ ಗಾದೆಗಳಂತೆ ಇದಕ್ಕೂ
ಅನ್ವಯವೇ. ಅಲ್ಲದೆ ಪಾಪವನ್ನು ಒಂದು ಭಕ್ಷ್ಯದಂತೆ ಇಲ್ಲಿ ಬಳಸಿರುವುದು ಇನ್ನೊಂದು ವೈಶಿಷ್ಟ್ಯ (‘ಮಾಡುವುದು’
‘ಬಾಯಲ್ಲಿ’). ಪಾಪವೆಂಬ ಅಮೂರ್ತ ಪರಿಕಲ್ಪನೆಯನ್ನು ಇಲ್ಲಿ ಭಕ್ಷ್ಯವೆಂಬಂತೆ ರೂಪಕಗೊಳಿಸಲಾಗಿದೆ. ಬಾಳೊಂದು ಪಯಣ, ನೋಟವು ಸ್ಪರ್ಶ ತಿಳಿಯುವುದು ನೋಟ ಇಂತಹ
ಪರಿಕಲ್ಪನಾತ್ಮಕ ರೂಪಕಗಳೂ ಗಾದೆಗಳಲ್ಲಿ ಬಳಕೆಯಾಗುತ್ತವೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಎಂಬ ಗಾದೆಯಲ್ಲಿ ತಿಳಿಯುವುದು ನೋಟ ಎಂಬ ರೂಪಕ ಬಳಕೆಯಾಗಿದೆ. ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ
– ಈ ಗಾದೆಯಲ್ಲಿ ಏರುವುದು ಪ್ರಗತಿ, ಇಳಿಯುವುದು ವಿಗತಿ ಎಂಬ ರೂಪಕವಿದೆ. ಇದು ಜೀವನಕ್ಕೆ ಸಂಬಂಧಿಸಿದ್ದು
ಬಾಳೊಂದು ಪಯಣ ಎಂಬ ರೂಪಕದ ಭಾಗವಾಗಿದೆ. ಪಯಣದಲ್ಲಿ (ಜೀವನದಲ್ಲಿ) ಏರುವುದು ಪ್ರಗತಿ ಮತ್ತು ಇಳಿಯುವುದು
ತದ್ವಿರುದ್ಧ.
ಗಾದೆಗಳನ್ನು ಅರ್ಥೈಸುವುದರಲ್ಲಿ ಈಚೆಗೆ ಬಳಕೆಗೆ ಬರುತ್ತಿರುವ
ವಿಧಾನವೆಂದರೆ ಸಮ್ಮಿಳಿತಗಳ ಸಿದ್ಧಾಂತ (Theory
of Blends). ಇದನ್ನು
ರೂಪಕ ಸಿದ್ಧಾಂತದ ಇನ್ನೊಂದು ಮಗ್ಗಲು ಎನ್ನಬಹುದು. ಇದರ ಪ್ರಕಾರ ಗಾದೆಗಳನ್ನು ಅರ್ಥ ಮಾಡಿಕೊಳ್ಳುವ
ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವು ಯಾವುವೆಂದರೆ: ಸಂಯೋಜನೆ, ಸಂಪೂರ್ಣನೆ ಮತ್ತು ವಿಸ್ತರಣೆ. ಆಳಾಗಬಲ್ಲವ ಅರಸಾಗಬಲ್ಲ
ಎಂಬ ಗಾದೆಯನ್ನು ಪರಿಗಣಿಸೋಣ. ಆಳು ಅರಸ ಎಂಬ ಎರಡು ಅಂಶಗಳಿಲ್ಲಿವೆ. ಆಳು ಎಂದೊಡನೆ ಮನಸ್ಸಿನಲ್ಲಿ
ಮೂಡುವ ಚಿತ್ರಗಳು ಸೇವೆ ಮಾಡುವವನು, ಆದೇಶಗಳನ್ನು ಪಡೆಯುವವನು, ಇನ್ನೊಬ್ಬರನ್ನು ವಿರೋಧಿಸದವನು, ಬಡತನವನ್ನು
ಸಹಿಸುವವನು ಇತ್ಯಾದಿ. ಇವೆಲ್ಲ ಮನಸ್ಸಿನ ಒಂದು ಭಾಗದಲ್ಲಿ ಸಂಗ್ರಹವಾಗಿವೆ ಎಂದು ಭಾವಿಸ ಬಹುದು. ಮತ್ತು
ಆಳು ಎಂದೊಡನೆ ಮನಸ್ಸಿನ ಈ ಭಾಗವು ಕ್ರಿಯಾಶೀಲವಾಆಗುತ್ತದೆ. ಇದನ್ನು ಸಮ್ಮಿಳಿತಗಳ ಸಿದ್ಧಾಂತದಲ್ಲಿ
ಒಂದು ಮಾನಸಿಕ ಅವಕಾಶ ಎಂದು ಕರೆಯುತ್ತಾರೆ. ಹೀಗೆಯೇ ಅರಸ ಎಂಬುದರ ಮಾನಸಿಕ ಅವಕಾಶ ಇನ್ನೊಂದಿದೆ. ಈ
ಮಾನಸಿಕ ಅವಕಾಶದಲ್ಲಿ ಸೇವೆ ಮಾಡಿಸಿಕೊಳ್ಳುವವ, ಆದೇಶಗಳನ್ನು ನೀಡುವವ, ತನ್ನ ನಿರ್ಣಯಗಳನ್ನು ತಾನೇ
ಮಾಡುವವ, ವೈಭವದಲ್ಲಿ ಜೀವಿಸುವವ ಇಂತಹವೆಲ್ಲ ಇವೆ. ಅರಸು ಎಂದೊಡನೆ ಈ ಮಾನಸಿಕ ಅವಕಾಶವು ಕ್ರಿಯಾಶೀಲವಾಗುತ್ತದೆ.
ಆಳಾಗ ಬಲ್ಲವ ಅರಸಾಗ ಬಲ್ಲ ಎಂಬ ಇಡೀ ವಾಕ್ಯವನ್ನು ಉಚ್ಚರಿಸಿದೊಡನೆ ಈ ಎರಡರ ಅಂಶಗಳನ್ನು ಸೇರಿಸಿದ
ಸಂಯೋಜನೆಯೊಂದು ಸಿದ್ಧವಾಗುತ್ತದೆ. ಇದನ್ನೂ ಸಂಯೋಜನೆಯ ಹಂತ ಎಂದು ಕರೆಯುತ್ತಾರೆ. ಈ ಸಂಯೋಜನೆಯಿಂದ
ಸಾರ್ವತ್ರಿಕ ಮಾನಸಿಕ-ಅವಕಾಶವೊಂದನ್ನು ನಾವು ಸಿದ್ಧ ಮಾಡಿ ಕೊಳ್ಳುತ್ತೇವೆ. ಈ ಸಾರ್ವತ್ರಿಕ ಅವಕಾಶದಲ್ಲಿ ಆಳು: ಸೇವೆ ಮಾಡುವವನು, ಆದೇಶಗಳನ್ನು
ಪಡೆಯುವವನು, ಇನ್ನೊಬ್ಬರನ್ನು ವಿರೋಧಿಸದವನು, ಬಡತನವನ್ನು ಸಹಿಸುವವನು, ಅರಸು: ಸೇವೆ ಮಾಡಿಸಿಕೊಳ್ಳುವವ,
ಆದೇಶಗಳನ್ನು ನೀಡುವವ, ತನ್ನ ನಿರ್ಣಯಗಳನ್ನು ತಾನೇ ಮಾಡುವವ, ವೈಭವದಲ್ಲಿ ಜೀವಿಸುವವ ಈ ಎಲ್ಲ ಅಂಶಗಳೂ
ಇರುತ್ತವೆ ಮತ್ತು ವಾಕ್ಯವನ್ನು ಕೇಳಿದೊಡನೆ ಈ ಸಾರ್ವತ್ರಿಕ ಅವಕಾಶವು ಕ್ರಿಯಾಶೀಲವಾಗುತ್ತದೆ. ಇದು
ಎರಡನೆಯ ಹಂತ. ಮೊದಲೇ ಲಭ್ಯವಿರುವ ಅವಕಾಶಗಳ ಸಂಯೋಜಿತ ಸ್ವರೂಪ ಇಲ್ಲಿ ಸಿದ್ಧವಾಗುತ್ತದೆ. ಇದನ್ನು
ಸಂಪೂರ್ಣನೆ ಎನ್ನಬಹುದು. ಸೇವೆ ಮಾಡುವುದು, ಇನ್ನೊಬ್ಬರನ್ನು ಒಪ್ಪುವುದು, ಆಡಂಬರವಿಲ್ಲದ ಸರಳತನ,
ಒಟ್ಟು ಹಿತಕ್ಕನುಗುಣವಾಗಿ ತನ್ನದೇ ನಿರ್ಣಯ ತೆಗೆದುಕೊಳ್ಳುವವನು, ಇಂತಹ ಅಂಶಗಳನ್ನೊಳಗೊಂಡ ಸಮ್ಮಿಳಿತ
ಸಿದ್ಧವಾಗುತ್ತದೆ. ಎರಡು ಪ್ರಾಥಮಿಕ ಮಾನಸಿಕ ಅವಕಾಶಗಳ ಸಂಯೋಜನೆಯಿಂದ (ಅಂದರೆ ಸಂಪೂರ್ಣನೆಯ ಹಂತದಿಂದ)
ಸಮ್ಮೀಳಿತವು ಹೇಗೆ ಉಂಟಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಈ ರೀತಿಯ ಸಂಮಿಳಿತದಿಂದಾಗಿ ನಿರ್ದಿಷ್ಟ
ಸಂದರ್ಭದಲ್ಲಿ ಗಾದೆಯು ತತ್ಕ್ಷಣ ಅರ್ಥವಾಗುತ್ತದೆ. ಈ ಮೂರು ಹಂತಗಳಲ್ಲಿ ಸಮ್ಮಿಳಿತ ಉಂಟಾಗುವ ಪ್ರಕ್ರಿಯೆಯನ್ನ
ವಿದ್ವಾಂಸರೊಬ್ಬರು ಹೀಗೆ ವಿವರಿಸಿದ್ದಾರೆ: “1) by
composition of the elements from the input spaces, 2) by completion, following
a pre-existing structure available to the speaker, and 3) by further
elaboration of the structure. This projection uses relations of identity,
analogy, similarity, causality, change, time, intention, space, role, part and
whole, or representation. If the proverb brings together two or more objects,
it is easy to imagine that each of the objects could belong to a different
input space (Jibir-Daura p8). ಕೈಕೆಸರಾದರೆ
ಬಾಯಿಮೊಸರು ಎಂಬ
ಗಾದೆಯನ್ನು ತೆಗೆದುಕೊಳ್ಳೋಣ. ಇಲ್ಲಿ ‘ಕೆಸರು’ ಮತ್ತು ‘ಮೊಸರು’ ಎಂಬ ಎರಡು ಕ್ಷೇತ್ರಗಳಿವೆ. ಕೆಸರು
ಕೈಗಳನ್ನು ಕೊಳೆ ಮಾಡುವಂತಹುದು; ಮಲೆನಾಡು ಪ್ರದೇಶದಲ್ಲಿ ಕೃಷಿ ಕೆಲಸ ಮಾಡುವಾಗ ಅನಿವಾರ್ಯ; ಕೆಲಸವನ್ನೊಳಗೊಂಡಿರುವುದರಿಂದ
ಶ್ರಮ ಇಲ್ಲಿ ನಿಹಿತ. ಮೊಸರು ಉತ್ತಮ ಪೋಷಕಗುಣಗಳುಳ್ಳುದು; ತಿನ್ನುವಾಗ ರುಚಿ ನೀಡುವಂತಹುದು; ಸದನುಕೂಲ
ತರುವಂತಹುದು. ಶ್ರಮ, ಕೈ ಕೊಳೆ, ಕೃಷಿ ಇವುಗಳೊಂದಿಗೆ ಪೋಷಕಾಂಶ, ರುಚಿ ಮತ್ತು ಅನುಕೂಲಗಳು ಸಮನ್ವಯಗೊಂಡು
ಸಮ್ಮಿಳಿತ ಉಂಟಾಗುತ್ತದೆ. ಇದು ಒಂದು ರೀತಿಯ ಕಸಿ ಕಟ್ಟುವಿಕೆ ಇದ್ದಂತೆ. ಇಲ್ಲಿರುವ ಅಂಶಗಳಲ್ಲಿ ಕಾಣಬರದ
ಹೊಸದೇ ಅರ್ಥವನ್ನು (ಕಸಿ ಮಾವಿನ ಹಣ್ಣು ಬೇರೆಯೇ ರುಚಿ ನೀಡುವಂತೆ) ಈ ಸಮ್ಮಿಳಿತ ಹೊರಡಿಸುತ್ತದೆ.
ಕಷ್ಟ ಪಟ್ಟು ದುಡಿದರೆ ಸುಖದಾಯಕ ಪ್ರತಿಫಲ ಸಿಗುವುದೆಂಬುದು ಇಲ್ಲಿ ಧ್ವನಿತವಾಗುವ ಅಂಶ. ಗಾದೆಗಳನ್ನು
ಅರ್ಥಮಾಡಿಕೊಳ್ಳಲು ಇಲ್ಲಿ ಹೇಳಿರುವ ಯಾವುದೇ ಒಂದಂಶ ಪೂರ್ಣ ಪರಿಣಾಮಕಾರಿ ಎನ್ನಲು ಬರುವುದಿಲ್ಲ. ಇವೆಲ್ಲವನ್ನು
ಸಮ್ಮಿಳಿಸಿಕೊಂಡು ವಿಶ್ಲೇಷಿಸಿದಾಗ ಗಾದೆಯ ಅರ್ಥ ಮನಂಬುಗುತ್ತದೆ.
ಇತರ
ಭಾಷೆಗಳಲ್ಲಿ ಬಹುಸಂಖ್ಯೆಯ ಗಾದೆಗಳು ಪ್ರಾಣಿಗಳನ್ನೊಳಗೊಂಡ ರೂಪಕಗಳನ್ನು ಬಳಸುತ್ತವೆ ಎಂಬ
ಅಭಿಪ್ರಾಯವಿದೆ (Hien, p 2 ). ಕನ್ನಡದಲ್ಲಿ ಪರಿಸ್ಥಿತಿ ಬೇರೆ ಇರುವಂತೆ ಕಾಣುತ್ತದೆ. ಕನ್ನಡದಲ್ಲೊಂದು
ಗಾದೆಗಳ ಸಂಗ್ರಹವನ್ನು ಉಳ್ಳಾಲ ನರಸಿಂಗರಾವ್ ಇವರು
ಹತ್ತೊಂಬತ್ತನೆಯ ಶತಮಾನದಲ್ಲಿ ಸಂಕಲಿಸಿ ಹೊರತಂದರು. ಈ ಪ್ರಥಮ ಗಾದೆಗಳ ಸಂಗ್ರಹದಲ್ಲಿ ಒಟ್ಟು 607 ಗಾದೆಗಳಿದ್ದು ಇದರಲ್ಲಿ ಸಸ್ಯಗಳಿಗೆ
ಸಂಬಂಧಿಸಿದ 30 ಗಾದೆಗಳು, ಪ್ರಾಣಿಗಳ ಪಾತ್ರವಿರುವ 80 ಗಾದೆಗಳು, ದೇವರ ಪಾತ್ರವಿರುವ 7 ಗಾದೆಗಳು
ಮತ್ತು ಮನುಷ್ರನದೇ ಪ್ರಧಾನ ಪಾತ್ರವಿರುವ 303 ಗಾದೆಗಳು ಇವೆ. ಹೀಗೆ ನಮ್ಮ ಭಾಷೆಯ ಗಾದೆಗಳಲ್ಲಿ
ಮನುಷ್ಯರೇ ಪ್ರಧಾನ ಪಾತ್ರಗಳಿರುವಂತೆ ತೋರುತ್ತದೆ. ಅನಂತರದ ಸ್ಥಾನ ಪ್ರಾಣಿಸಂಬಂಧಿ ಗಾದೆಗಳಿಗೆ
ಮತ್ತು ಅನಂತರ ಸಸ್ಯದವುಗಳಿಗೆ. ಎಲ್ಲ ಗಾದೆಗಳು ಸಾಮಾನ್ಯವಾಗಿ ಸಂಭಾಷಣೆಗಳಲ್ಲಿ ಉಪಯೋಗಕ್ಕೆ
ಬರುವಂತಹವು. ಇವು ಜೊತೆಗಾರನ ಅಭಿಪ್ರಾಯಗಳನ್ನು ನಯವಾಗಿ ವಿರೋಧಿಸಲು, ಅವನನ್ನು ವಿಮರ್ಶಿಲು ಅಥವ
ಅವನು ಸಣ್ಣವನಾಗಿದ್ದರೆ ಅವನನ್ನು ತಿದ್ದಲು ಉಪಯುಕ್ತವಾಗುತ್ತವೆ. ಹೀಗೆ ಸಾಂಸ್ಕೃತಿಕವಾಗಿಯೂ
ಗಾದೆಗಳು ಮುಖ್ಯವಾಗುತ್ತವೆ.
ಇಲ್ಲಿ
ಕೆಲವು ಅಪುರೂಪದ ಸಸ್ಯ ಸಂಬಂಧೀ ಗಾದೆಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿದ್ದೇನೆ. ಇಲ್ಲಿ
ಬಳಕೆಯಾಗಿರುವ ವಸ್ತುಗಳಾದ ‘ಅಕ್ಕಿ’, ‘ಅಡಿಕೆ’, ‘ಆನೆ’ ಇಂತಹವೆಲ್ಲ ಭಾರತೀಯ ಪರಂಪರೆಯಲ್ಲಿ
ಮತ್ತು ಕರುನಾಡ ಸಂಸ್ಕೃತಿಯಲ್ಲಿ ತಮ್ಮದೇ ಪ್ರಾಮುಖ್ಯವನ್ನು ಹೊಂದಿವೆ. ಹಾಗಾಗಿಯೇ ಈ ಗಾದೆಗಳ
ಸಂಗ್ರಾಹಕರು (ಉಳ್ಳಾಲ ನರಸಿಂಗರಾಯರು) ನೀಡಿರುವ ಇಂಗ್ಲಿಷಿನ ಸಮಾನ ಗಾದೆಗಳಲ್ಲಿ ಈ ಪದಗಳಿಲ್ಲ;
ಬದಲಾಗಿ ಬೇರೆಯೇ ಪದಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಇಂತಹ ಕೆಲವು ಗಾದೆಗಳನ್ನು ಆಯ್ದು ಕೆಲವು
ನಿರ್ಣಯಗಳನ್ನು ತೆಗೆದುಕೊಂಡಿದೆ. ಇವುಗಳಿಗಾಗಿ ತೆಗೆದ ನಿರ್ಣಯಗಳನ್ನ ಪ್ರಾತಿನಿಧಿಕ
ಸ್ವರೂಪದವೆಂದು ಸ್ವೀಕರಿಸಬಹುದಾಗಿದೆ. ಇವು ಕನ್ನಡ ಮತ್ತು ಇಂಗ್ಲಿಷ್ ಗಾದೆಗಳ ವಿಭಿನ್ನತೆಯನ್ನು
ತೋರಿಸುತ್ತವೆ. ಮೊದಲನೆಯದಾಗಿ
1 ಅಕ್ಕಿ ಎಂದರೆ ಪ್ರಾಣ ನೆಂಟರೆಂದರೆ ಜೀವ
[ಸ್ನೇಹಕ್ಕೆ ಸ್ನೇಹ, ಮೀನಿನ ಬುಟ್ಟಿಗೆ ಕೈಹಾಕಬೇಡ]
I love you well but touch not my pocket
ನೆಂಟರು
ಮನೆಗೆ ಬರುತ್ತಿರಬೇಕು ಅವರ ಒಡನಾಟದಲ್ಲಿ ಸಂತೋಷ ಪಡಬಹುದು ಎಂಬುದು ಸಾಮಾನ್ಯವಾಗಿ ಎಲ್ಲರ ಆಸೆ. ಆದರೆ ಅವರನ್ನು ಉಪಚರಿಸಲು ಬೇಕಾದ ಸಂಪನ್ಮೂಲಗಳಿಲ್ಲದೆ ಇದ್ದರೆ
ಮುಜುಗರಕ್ಕೀಡಾಗ ಬೇಕಾಗುತ್ತದೆ. ಹಿಂದೆ ಅಜ್ಜಿಯರು ಮಕ್ಕಳನ್ನು ಆಡಿಸುತ್ತಿದ್ದ ಒಂದು ಆಟ ಇದೇ ಭಾವನೆಗಳನ್ನು
ವ್ಯಕ್ತ ಪಡಿಸುವುದಿತ್ತು.ಅಜ್ಜಿ ಪ್ರಶ್ನಿಸುತ್ತಾಳೆ ನೆಂಟರು ಬಂದರೆ ಜೀವ ಹೆಂಗಾಗತ್ತೆ? ಕೈಯನ್ನು ಕಿವುಚಿದಂತೆ ಅಭಿನಯಿಸುತ್ತಾ ಮಗು ಹೇಳ ಬೇಕು:
ಹಿಂಗ್ಹಿಂಗಾಗತ್ತೆ. ಅಜ್ಜಿ: ಗಂಟಿಳಿಸಿದರು. ಮಗು ಎದೆಯ ಮೇಲೆ ಕೈಯಿಟ್ಟುಕೊಂಡು ‘ಅಬ್ಬಾ’. ಊಟ ಆಯ್ತುಂತೆ:
‘ಒಹೋ’ ಹೋಗಿಬರ್ತಾರಂತೆ: ‘ಸಂತೋಷ’. ಹೀಗೆ ಬಡತನದಲ್ಲಿರುವವರ
ಮನೆಗೆ ನೆಂಟರು ಬಂದಾಗಿನ ಬವಣೆ ಮತ್ತು ಸಂತೋಷ ಹಾಗೂ ಅವರು ಹೊರಟು ನಿಂತಾಗ ಆಗುವ ಸಮಾಧಾನ ಇವೆಲ್ಲವೂ
ಇಲ್ಲಿ ವ್ಯಕ್ತವಾಗಿವೆ. ಈ ಗಾದೆಯೂ ಅದೇ ಭಾವಗಳನ್ನು ಹೇಳುವಂತಹದು. ಇಲ್ಲಿ ಅಕ್ಕಿಯ ಪರಿಧಿಯಲ್ಲಿ ಜೀವನಾವಶ್ಕ ವಸ್ತುವಿನ ಪರಿಮಿತ
ಲಭ್ಯತೆ, ಖರ್ಚು ಭರಿಸಲು ಕಷ್ಟಸಾಧ್ಯವಾಗಿರುವುದು, ಇರುವ ಸಂಪನ್ಮೂಲಗಳು ಪರಿಮಿತ ಕಾಲದವರೆಗೆ ಮಾತ್ರ
ತಾಳಿಕೊಳ್ಳಲು ಶಕ್ಯವಿರುವುದು ಇತ್ಯಾದಿ ಇವೆ. ನೆಂಟರ ಪರಿಧಿಯಲ್ಲಿ ಪ್ರೀತಿ ವಾತ್ಸಲ್ಯ, ಜೊತೆಗೂಡಿ
ಇರುವುದರಿಂದ ಲಭಿಸುವ ಸಂತೋಷ, ರಕ್ತ ಸಂಬಂಧಿಗಳನ್ನು ಬಿಟ್ಟಿರಲಾರದ ಕರ್ತವ್ಯ ಪ್ರಜ್ಞೆ ಇವು ಇವೆ.
ಈ ಎರಡೂ ಪರಿಧಿಗಳು ನಮ್ಮ ಮನಸ್ಸಿನಲ್ಲಿ ಒಮ್ಮೆಗೇ ಕ್ರಿಯಾಶೀಲವಾಗುವುದರಿಂದ ಅವು ಸಮ್ಮಿಳಿತಗೊಳ್ಳುವು
ಅನಿವಾರ್ಯವಾಗುತ್ತದೆ. ಒಂದು ಉತ್ತಮ ಸಂಮೇಳ ರೂಪುಗೊಳ್ಳುವುದೇ ನಮಗೆ ಗಾದೆಯನ್ನು ಅರ್ಥೈಸಲು ಮತ್ತು
ಬಳಸಲು ಪರಚೋದಿಸುವ ಅಂಶ. ಇಂತಹ ಸಂಮೇಳವು ಸಾಧ್ಯವಾಗದಿದ್ದರೆ ಗಾದೆಯನ್ನು ಅರ್ಥೈಸುವಲ್ಲಿ ನಾವು ವಿಫಲರಾಗುತ್ತೇವೆ
(ಟರ್ನರ್,ಪು5). ವೆರಡೂ ಪರಿಧಿಗಳು ಸಮ್ಮಿಳಿತಗೊಂಡ ಪರಿಧಿಯಲ್ಲಿ (ಇಲ್ಲಿ ಸಾರ್ವತ್ರಿಕ ಪರಿಧಿಯ ನಿರ್ವಚನವನ್ನು
ಪ್ರತ್ಯೇಕವಾಗಿ ಹೇಳಿಲ್ಲ) ಪ್ರೀತಿ ವಾತ್ಸಲ್ಯ, ಕೂಡು ಸಂತೋಷ, ಕರ್ತವ್ಯ ಪ್ರಜ್ಞೆ, ಸಂಪನ್ಮೂಲ ಕೊರತೆ,
ಸಹಿಸುವ ಕಷ್ಟ ಇವೆಲ್ಲವೂ ಇವೆ. ಈ ಸಮ್ಮಿಳಿತ ಪರಿಧಿಯು ನಿರ್ದಿಷ್ಟ ಸಂದರ್ಭವನ್ನು ಸಮರ್ಥವಾಗಿ ಅರ್ಥ
ಮಾಡಿಸುತ್ತದೆ ಎಂಬುದು ಸಂಮೇಳ ಸಿದ್ಧಾಂತಕಾರರ ಅಭಿಪ್ರಾಯ. ಇಲ್ಲಿ ಅಕ್ಕಿ ಎಂದರೆ ಅಕ್ಕಿಯೇ ಆಗಬೇಕಿಲ್ಲ;
ದುಡ್ಡು, ತನ್ನ ಸುಖ, ಹಂಚಿಕೊಳ್ಳ ಬೇಕಾದ ಸೌಲಭ್ಯಗಳು, ಪರಿಮಿತ ಸಂಪನ್ಮೂಲಗಳು ಇಂತಹವೆಲ್ಲ ಪರಿಧಿಯಲ್ಲಿ
ಬರುತ್ತವೆ. ಹಾಗೆಯೇ ನೆಂಟರು ಎಂದರೂ ಸ್ನೇಹಿತರು, ಅತಿಥಿಗಳು, ಉಪಚರಿಸಲೇ ಬೇಕಾಗಿ ಬರುವ ಆಗಂತುಕರು
ಇವರೆಲ್ಲರನ್ನೂ ಉದ್ದೇಶಿಸಿದೆ. ಹೀಗೆ ಇದು ನಿರ್ದಿಷ್ಟವು ಸಾರವತ್ರಿಕ ಎಂಬ ರೂಪಕವಾಗುತ್ತದೆ ಎಂಬುದು
ಇನ್ನೊಂದು ಅಭಿಪ್ರಾಯ. ಇಲ್ಲಿ ಲಕ್ಷ್ಯ ಪರಿಧಿಯಲ್ಲಿ ಅಕ್ಕಿ, ನೆಂಟರು, ನೆಂಟರು ಬಂದಾಗಿನ ಕಷ್ಟ ಇವು
ಇವೆ. ಮೂಲ ಪರಿಧಿಯಲ್ಲಿ ಸಂದರ್ಭದಲ್ಲಿ ವಿವಕ್ಷಿತ
ವ್ಯಕ್ತಿ,, ಅವನ ಮನೆಗೆ ಬಂದ ಅತಿಥಿ, ತನ್ನಲ್ಲಿರುವ ಅಲ್ಪ ಸಂಪನ್ಮೂಲವನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ
ಇವು ಇವೆ. ಹೀಗಿದ್ದರೂ ಇಲ್ಲಿ ಪರಿಕಲ್ಪನಾತ್ಮಕ ರೂಪಕ ಪ್ರತಿಪಾದಕರ ಅಭಿಪ್ರಾಯ ಮತ್ತು ಸಂಮೇಳ ಸಿದ್ಧಾಂತಕಾರರ
ಅಭಿಪ್ರಾಯಗಳು ಪರಸ್ಪರ ಬಹಿಷ್ಕೃತಗಳಾಗಿರದೆ ಪೂರಕಗಳಾಗಿವೆ ಎಂಬದು ಸ್ಪಷ್ಟ.
ಇದರ
ಇಂಗ್ಲಿಷ್ ಸಮಾನಗಾದೆಯನ್ನು ಗಮನಿಸಬಹುದು. ಇದರಲ್ಲಿ ಅಕ್ಕಿಯೂ ಇಲ್ಲ, ನಂಟರೂ ಇಲ್ಲ. ಬದಲಾಗಿ ಪ್ರೀತಿ
ಮತ್ತು ಜೇಬಿಗೆ ಕೈಹಾಕುವುದು ಇವೆ. ಅದೇ ಅರ್ಥವನ್ನು ಧ್ವನಿಸುತ್ತಿದ್ದರೂ, ಅದೇ ರೀತಿಯ ಸಂದರ್ಭಗಳಲ್ಲಿ
ಬಳಸಬಹುದಾಗಿದ್ದಾದರೂ ಇಲ್ಲಿಯ ಒತ್ತು ಬೇರೆ. ವ್ಯಾಪಾರೀ
ಮನೋಭಾವ ಇಲ್ಲಿ ಎದ್ದು ಕಾಣುವ ಅಂಶ. ಇದಕ್ಕೆ ಸಮಾನಾರ್ಥಕವಾಗಿರುವ ಇನ್ನೊಂದು ಕನ್ನಡ ಗಾದೆಯಲ್ಲಿ ಜೇಬಿನ
ಬದಲು ಮೀನಿನ ಬುಟ್ಟಿ ಇದೆ. ಹೆಚ್ಚು ಕಡಿಮೆ ಒಂದೇ ಅರ್ಥವಿರುವ ಈ ಭಿನ್ನ ರೂಪ ಗಾದೆಗಳು ಗಾದೆಗಳ ಸೃಷ್ಟಿ
ಮತ್ತು ಬಳಕೆ ಹೇಗೆ ಸಂಸ್ಕೃತಿ ಮತ್ತು ನಾಗರೀಕತೆ ನಿರ್ದಿಷ್ಟ ವಾಗಿರುತ್ತವೆ ಎಂಬುದನ್ನು ಘನತರವಾಗಿ
ವಿಶದೀಕರಿಸುತ್ತವೆ.
2 ಅಡಿಕೆ ಉಡಿಯಲ್ಲಿ ಹಾಕಬಹುದು, ಮರವಾದ ಮೇಲೆ ಕೂಡದು
ಗಿಡವಾಗಿ
ಬಗ್ಗದ್ದು ಮರವಾಗಿ ಬಗ್ಗೀತೆ
A
colt you may break but an old horse you never can
Best to bend while a twig
ಎಲೆ
ಅಡಿಕೆ ಬಾಳೆಹಣ್ಣು ಇಂತಹವನ್ನು ಹಿರಿಯರು ಕಿರಿಯರಿಗೆ ಕೊಡುವಾಗ ಕಿರಿಯರ ಉಡಿಯಲ್ಲಿ ಹಾಕುವುದು ಸಂಪ್ರದಾಯ.
ಅಡಿಕೆಯನ್ನು ಹೀಗೆ ಉಡಿಯಲ್ಲಿ ಹಾಕಬಹುದು. ಅಡಿಕೆ ಶ್ರೇಷ್ಠ ಆದ್ದರಿಂದ ಅಡಿಕೆ ಮರ ಇನ್ನೂ ಶ್ರೇಷ್ಠ
ಎಂದು ಬಗೆದು ಅಡಿಕೆ ಮರವನ್ನು ಉಡಿಯಲ್ಲಿ ಹಾಕಲು ಸಾಧ್ಯವಿಲ್ಲ ಎಂಬುದು ಇಲ್ಲಿರುವ ವಾಚ್ಯಾರ್ಥ. ಸಾಮಾಜಿಕ
ಸಂದರ್ಭದಲ್ಲಿ ಒಬ್ಬನಿಗೆ ನೋವು ಉಂಟಾದರೆ ಅದು ಸಣ್ಣ ಮಟ್ಟದ್ದಾದರೆ ಅದಕ್ಕೆ ಪ್ರತಿರೋಧ ಒಡ್ಡದೆ ಅಲಕ್ಷಿಸಿ
ಸಂಬಂಧಗಳನ್ನು ಕಾಯ್ದುಕೊಳ್ಳಬಹುದು. ಆದರೆ ನೋವುಂಟು ಮಾಡಬೇಕೆಂದೇ ಮಾಡಿದ ದೊಡ್ಡ ಮಟ್ಟದ ನೋವನ್ನು
ಸಹಿಸಿಕೊಳ್ಳ ಸಾಧ್ಯವಿಲ್ಲ. ಅದನ್ನು ಪ್ರತಿರೋಧಿಸಿ ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಅಡಿಕೆ ತಿಂದು ಜೀರ್ಣಿಸಿಕೊಳ್ಳಬಹುದಾದ್ದು; ಅಡಿಕೆ ಮರ ತಿನ್ನುವಂತಹದಲ್ಲ ಮತ್ತು ಅಂತಹ ಅಡಿಕೆಗಳ ರಾಶಿಯನ್ನೇ
ನಾಳೆ ನೀಡುವಂತಹದು. ಇಲ್ಲಿ ಸಸ್ಯಗಳು ಪ್ರಾಣಿಗಳು ಎಂಬ ಮತ್ತು ನಿರ್ದಿಷ್ಟವು ಸಾರ್ವತ್ರಿಕ ಎಂಬ ರೂಪಕಗಳು
ಬಳಕೆಯಾಗಿವೆ. ಅಡಿಕೆಗೆ ಸಂವಾದಿಯಾಗಿ ಸಣ್ಣ ನೋವು ಸಮಾನ ಉಪಕಾರಗಳು ಇಂತಹವೂ ಮರಕ್ಕೆ ಸಂವಾದಿಯಾಗಿ
ಇವುಗಳ ಬೃಹತ್-ರೂಪಗಳೂ ಇವೆ. ಮರದ ಬೃಹತ್-ರೂಪದಿಂದಾಗಿ ಅಡಿಕೆಯಂತೆ ಕೈಯಲ್ಲಿ ಹಿಡಿಯಲಾಗದು.
ಇಂಗ್ಲಿಷ್
ಸಮಾನಾರ್ಥಕ ಗಾದೆಗಳನ್ನು ಗಮನಿಸಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬುದಕ್ಕೆ Best to
bend while a twig ಎಂಬುದು
ಭಾಷಾಂತರವೇ ಆಗಿದೆ. ಸಸ್ಯಗಳು ಪ್ರಾಣಿಗಳು ರೂಪಕದಿಂದ ಇದು ಮನುಷ್ಯರಿಗೆ ಅನ್ವಯವಾಗುತ್ತದೆ
ಮತ್ತು ಸಾರ್ವತ್ರಿಕವು ನಿರ್ದಿಷ್ಟ ರೂಪಕದಿಂದ ಇದು ಗಾದೆಯು ಅದನ್ನು ಬಳಸಿದ ಸಾಮಾಜಿಕ ಸಂದರ್ಭದಲ್ಲಿ
ಅರ್ಥವಾಗುತ್ತೆ. ಪಾಶ್ಚಾತ್ಯ ಸಂದರ್ಭದಲ್ಲಿಯೂ ಭಾರತೀಯ ಪರಂಪರೆಯಲ್ಲಿಯೂ ಸಸ್ಯಗಳಿಗಿರುವ ಸಮಾನ ಪ್ರಾಮುಖ್ಯ
ಮತ್ತು ಸಮಾನ ಪರಿಕಲ್ಪನೆಗಳನ್ನೂ ಇದು ಎತ್ತಿ ತೋರಿಸುತ್ತದೆ.
ಇನ್ನೊಂದು
ಸಮಾನಾರ್ಥಕ ಗಾದೆಯಾದ a colt you may break but an old
horse you never can ಎಂಬುದರ
ಪರಿ ಬೇರೆ. ಕುದುರೆ ಮರಿಯನ್ನು ಪಳಗಿಸಬಹುದು; ದೊಡ್ಡ ಕುದುರೆಯನ್ನು ಪಳಗಿಸಲಾದೀತೆ ಎಂಬುದು ಇದರ ಭಾಷಾಂತರ.
ಉಳುವುದು, ಗಾಡಿಗೆ ಕಟ್ಟುವುದು ಇತ್ಯಾದಿ ಕಾರ್ಯಗಳಿಗೆ ಇಂಗ್ಲೇಂಡಿನಂತಹ ದೇಶದಲ್ಲಿ ಕುದುರೆಗಳನ್ನು
ಬಳಸುತ್ತಾರೆ. ಆದ್ದರಿಂದ ಅಲ್ಲಿಯ ಸಂಸ್ಕೃತಿಯಲ್ಲಿ ಕುದುರೆಗಳಿಗೆ ವಿಶೇಷ ಸ್ಥಾನ. ಕುದುರೆಯನ್ನು ನೀರಿಗೊಯ್ಯಬಹುದು
ನೀರ್ಗುಡಿಸಲಾದೀತೆ ಎಂಬ ಇನ್ನೊಂದು ಗಾದೆಯೂ ಈ ಅಂಶವನ್ನು ಪುಷ್ಠೀಕರಿಸುತ್ತದೆ. ಇದಕ್ಕೆ ಸಮಾನಾನುವಾದ
ಕನ್ನಡದಲ್ಲಿಲ್ಲ. ಭಾರತೀಯ ಪರಂಪರೆಯಲ್ಲಿ ತತ್ಸಮಾನ ಕಾರ್ಯಗಳಿಗೆ ಎತ್ತುಗಳನ್ನು ಬಳಸಳಾಗುತ್ತಿತ್ತು.
ಆದ್ದರಿಂದ ಆ ಗಾದೆಗೆ ಸ್ಥಾನವಿಲ್ಲ. ಅಲ್ಲದೆ ಎತ್ತಿಗಿಂತ ದನಕ್ಕೆ ಪ್ರಾಮುಖ್ಯ ಹೆಚ್ಚು ಮತ್ತು ದನ
ಪೂಜ್ಯಸ್ಥಾನದಲ್ಲಿದ್ದು ಅದನ್ನು ಹೀಗಳೆಯುವಂತಹ ಹೇಳಿಕೆಗೆ ಅವಕಾಶವಿಲ್ಲ. ಸಾಂಸ್ಕೃತಿಕ ವಿಭಿನ್ನತೆಯು
ಹೇಗೆ ಗಾದೆಗಳ ರೂಪಣೆಯನ್ನು ಪ್ರಭಾವಿಸುತ್ತವೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ.
3 ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
A
wounded reputation can seldom be cured
ಇದೂ
ಅಡಿಕೆಯನ್ನು ಕೇಂದ್ರಪ್ರಜ್ಞೆಯನ್ನಾಗಿ ಬಳಸಿರುವ ಇನ್ನೊಂದು ಗಾದೆ. ಗಾತ್ರದಲ್ಲಿಯೂ ಬೆಲೆಯಲ್ಲಿಯೂ
ಅಡಿಕೆ ಬಹಳ ಸಣ್ಣದು ಮತ್ತು ಆನೆ ಅಗಾಧವಾದದ್ದು. ಆದರೆ ಸಾಂಸ್ಕೃತಿಕವಾಗಿ ಕೆಲವು ಸಂದರ್ಭಗಳಲ್ಲಿ ಅಡಿಕೆಯನ್ನೇ
ಕೊಡಬೇಕಾದುದಿರುತ್ತದೆ. ಉದಾಹರಣೆಗೆ ಸಮಾರಂಭದೂಟದ ನಂತರ ವೀಳ್ಯದೆಲೆಯ ಜೊತೆಗೆ, ಫಲತಾಂಬೂಲದಲ್ಲಿ,
ಪೂಜೆಯಲ್ಲಿ ನೈವೇದ್ಯಾರ್ಥ ಇತ್ಯಾದಿ. ಇಂತಹ ಸಂದರ್ಭಗಳಲ್ಲಿ ಒಂದು ಅಡಿಕೆಯನ್ನು ನೀಡಲಾಗದಿದ್ದರೆ ಯಜಮಾನ
ಅವಮಾನಕ್ಕೊಳಗಾಗುತ್ತಾನೆ. ಅಥವ ಅಡಿಕೆ ಪಡೆಯದವ ಅವಮಾನಿತನಾದೆನೆಂದು ಭಾವಿಸುತ್ತಾನೆ. ಹೀಗೆ ಶ್ರೀಮಂತಿಕೆಯಿಂದ
ಬೀಗುವ ವ್ಯಕ್ತಿಯೊಬ್ಬ ನಾನು ಆನೆಯನ್ನೇ ಕೊಡುತ್ತೇನೆಂದರೂ ಆದ ಅವಮಾನ ನೀಗುವುದಿಲ್ಲ. ಅಥವ ಸತ್ಕಾರಾರ್ಥ
ಅಡಿಕೆಯನ್ನು ನೀಡಬೇಕಾದ ಸಂದರ್ಭದಲ್ಲಿ ಅಡಿಕೆಯನ್ನು ನೀಡದೆ ಒಬ್ಬನನ್ನು ಅವಮಾನಿಸಿದರೆ ವಜ್ರ ಕಿರೀಟ
ಕೊಟ್ಟಾಕ್ಷಣ ಮಾನ ಬರುವುದಿಲ್ಲ.
ಇಲ್ಲಿ
ಅಡಿಕೆಯನ್ನುಸಾಮಾಜಿಕ ಸಂಸ್ಕೃತಿಯಲ್ಲಿ ಇರುವ ಒಂದು ಮೌಲಿಕ ವಸ್ತುವನ್ನಾಗಿ ಕಲ್ಪಿಸಲಾಗಿದೆ ಮತ್ತು
ಆನೆಯನ್ನು ಭೌತಿಕ ಸಂಪತ್ತನ್ನಾಗಿ ಪರಿಕಲ್ಪಿಸಿದೆ. (ಆನೆ ಇಂದ್ರನ ವಾಹನ ಎಂಬುದನ್ನು ನೆನೆಯಬಹುದು).
ಮೌಲ್ಯಹೀನತೆಯಿಂದ ಕಳೆದುಕೊಂಡ ಮಾನವನ್ನು ಎಷ್ಟೇ ಭೌತಿಕ ಸಂಪತ್ತು ಮರಳಿಸಲಾರದು ಎಂಬುದು ಇಲ್ಲಿ ನಿಹಿತವಾಗಿರುವ
ಅರ್ಥ. ಗಾದೆಯನ್ನು ಪೂರ್ಣವಾಗಿ ಹೀಗೆ ಹೇಳಬಹುದು: (ವ್ಯಕ್ತಿಗೆ) ಅಡಿಕೆಯಿಂದಾಗಿ ಹೋದ ಮಾನ ಆನೆ ಕೊಟ್ಟರೂ
ಬಾರದು.
ಇಂಗ್ಲಿಷ್
ಗಾದೆಯು ಗೌರವವನ್ನು ಒಂದು ಪ್ರಾಣಿಯನ್ನಾಗಿ ಕಲ್ಪಿಸಿದೆ. ಇದಕ್ಕೆ ಗಾಯವಾದರೆ ಗುಣಪಡಿಸಲಾಗದು ಎಂದು
ಹೇಳುತ್ತಿದೆ. ಅಡಿಕೆಯ ಪ್ರಸಕ್ತಿ ಇಲ್ಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅಡಿಕೆಗೆ ಯಾವುದೇ ಮೌಲಿಕ
ಸ್ಥಾನವಿಲ್ಲದಿರುವುದನ್ನಿ ಇಲ್ಲಿ ಸ್ಮರಿಸಬಹುದು.
4 ಅರಗಿನಂತೆ ತಾಯಿ ಮರದಂತೆ ಮಕ್ಕಳು
Many a good cow had but a bad calf
ಅರಗು
ಒಟ್ಟಾರೆಯಾಗಿ ಮರದಿಂದ ದೊರಕುವ ಒಂದು ಉಪಯುಕ್ತ ವಸ್ತು. ದೊರಕಿದನಂತರ ಅರಗು ತನ್ನನ್ನು ಸುಟ್ಟುಕೊಂಡು
ಕರಗಿಸಿಕೊಂಡು ಬೀಗಗಳನ್ನು ಭದ್ರ ಪಡಿಸಲು, ಬಟ್ಟೆಗಳಿಗೆ ಬಣ್ಣ ಹಾಕಲು ಉಪಯೋಗಕ್ಕೆ ಬರುತ್ತದೆ. ಮರವನ್ನು
ಆಹಾರಕ್ಕಾಗಿ ಅವಲಂಬಿಸಿದ ಕೀಟ ಹೊರಹಾಕಿದ ಅಂಟು ಇದಾಗಿದ್ದು ಇದನ್ನು ಮರದಿಂದ ಬೇರ್ಪಡಿಸಿ ಉಪಯೋಗಿಸುತ್ತೇವೆ.
ಅಂದರೆ ಅರಗು ಮರಕ್ಕೆ ಹತ್ತಿದ ಕೀಟಗಳು ಹೊರಸೂಸುವ ಅಂಟು. ಕೀಟಗಳು ಮರ ತಯಾರಿಸಿದ ಆಹಾರವನ್ನು ಕೊಂಬೆಗಳಿಂದ
ಸೆಳೆದು ತಿಂದು ಅರಗನ್ನು ಉತ್ಪಾದಿಸುತ್ತವೆ. ಅರಗೂ ಪರೋಪಕಾರಿ; ಮರವೂ ಪರೋಪಕಾರಿ. ಹೀಗೆ ಅರಗಿನಂತೆ
ತಾಯಿ ಮರದಂತೆ ಮಕ್ಕಳು ಎಂದರೆ ತಾಯಿಯಂತೆ ಮಕ್ಕಳು ಎಂದರ್ಥವಾಗುತ್ತದೆ. (ಗಾದೆಯ ಬಳಕೆಯನ್ನು ಸಂದರ್ಭವನ್ನು
ನಾನು ನೋಡಿಲ್ಲ). ಇದು ಯಥಾ ರಾಜಾ ತಥಾ ಪ್ರಜಾ ಎಂಬಂತೆ. ಆದಾಗ್ಯೂ ತಂದೆಯಂತೆ ಮಕ್ಕಳು ಎಂಬಂತಲ್ಲದೆ,
ತಾಯಿಯಂತೆ ಮಕ್ಕಳು ಎಂದು ಹೇಳುತ್ತಿದೆ. ಇದು ಮಾತೃಪ್ರಧಾನ ಕುಟುಂಬವಿರುವ ಸಾಮಾಜಿಕ ಸಂದರ್ಭದಲ್ಲಿ
ಬಂದಿದೆ. ಗಾದೆಗಳ ಸಾಂಸ್ಕೃತಿಕ ಮಹತ್ವವನ್ನು ಇದು ತೋರಿಸುತ್ತಿದೆ. ಸಂಪಾದಕರು ಕೊಟ್ಟಿರುವ ಸಮಾನಾರ್ಥಕ
ಗಾದೆ ಬೇರೆಯೇ ಅರ್ಥವನ್ನು ನೀಡುತ್ತಿದೆ. ಅರಗಿನಂತೆ ತಾಯಿ ಮರದಂತೆ ಮಕ್ಕಳು ಎಂಬುದಕ್ಕೆ Many a good cow had but a bad calf ಎಂಬುದು ಸಮಾನಾರ್ಥಕ
ಗಾದೆಯಲ್ಲ. ಇದಕ್ಕೆ ಸರಿಯಾದ ಗಾದೆ Lke mother Like daughter ಎಂಬುದಾಗಬಹುದೆಂದು ಕಾಣುತ್ತದೆ.
ಗಾದೆ
ಎಲ್ಲರಿಗೂ ಒಂದೇ ರೀತಿಯಲ್ಲಿ ಅರ್ಥವಾಗಬೇಕೆಂದಾಗಲೀ ಗಾದೆಗಳ ಎಲ್ಲ ಸಂಗ್ರಹಗಳಲ್ಲಿಯೂ ಒಂದೇ ಅರ್ಥವನ್ನು
ನೀಡಬೇಕೆಂದಾಗಲೀ ಹೇಳಲಾಗುವುದಿಲ್ಲ. ಒಂದು ಗಾದೆಗೆ ಬೇರೆ ಬೇರೆ ಸಂಗ್ರಾಹಕರು ಬೇರೆಬೇರೆ ಅರ್ಥಗಳನ್ನು
ಸೂಚಿಸಿರುವುದು ಅಸಾಮಾನ್ಯವೇನಲ್ಲ. ಲೀಸಾ ಜಿ ಬಿ ಹೆರನಿನ್
ಇವರು ಫಿನ್ನಿಶ್ ಗಾದೆ Lapset tulee
leipineen [Children come with bread] ಎಂಬ ಗಾದೆಗೆ ಹೀಗೆ ಭಿನ್ನ ಅರ್ಥ ಸೂಚನೆಗಳಿರುವುದನ್ನು
ಚರ್ಚಿಸಿದ್ದಾರೆ. ಗಾದೆಗಳಿಗೆ ಅವುಗಳನ್ನು ಅರ್ಥೈಸುವವರು ನೀಡುವ ಅರ್ಥವಲ್ಲ, ಸಮಾಜದಲ್ಲಿ ಭಾಷಿಕರು ಬಳಸುವ ಅರ್ಥ ಎಂಬುದು ಇವನ ಅಭಿಪ್ರಾಯ (ಲೀಸಾ,ಪು
18).
ಈ
ಗಾದೆಯಲ್ಲಿ ಸಾರ್ವತ್ರಿಕವು ನಿರ್ದಿಷ್ಟ, ಮತ್ತು ಮಾನವರು ಸಸ್ಯಗಳು ಎಂಬ ರೂಪಕಗಳು ಬಳಕೆಯಾಗಿವೆ. ಮೂಲ
ಪರಿಧಿ ಮತ್ತು ಲಕ್ಷ್ಯ ಪರಿಧಿಗಳ ನಡುವಣ ನಕ್ಷೀಕರಣವು ಸ್ವಯಂ ಸ್ಪಷ್ಟವಾಗಿವೆ. ಆದರೆ ಸಮ್ಮಿಳಿತಗಳ
ಸಿದ್ಧಾಂತದ ಪ್ರಕಾರ ರ್ಥೈಸಿದಾಗ ಈ ಗಾದೆ ಹೆಚ್ಚು ಸ್ಪಷ್ಟವಾಗುತ್ತದೆ.
ಇದರ
ಅಭಿಪ್ರಾಯವನ್ನು ಸಮ್ಮಿಳಿತಗಳ ಸಿದ್ಧಾಂತದ ಪ್ರಕಾರ ಹೀಗೆ ವಿವರಿಸಬಹುದು. ಒಂದು ಕಡೆಯಲ್ಲಿ ಅರಗು ಮತ್ತು
ಮರ ಇವೆ. ಇನ್ನೊಂದು ಕಡೆ ತಾಯಿ ಮತ್ತು ಮಕ್ಕಳು ಇವೆ. ಮೊದಲ ಪರಿಧಿಯಲ್ಲಿ (ಮೊದಲ ಮಾನಸಿಕ ಅವಕಾಶದಲ್ಲಿ)
ಅರಗು, ತಾನು ಕರಗಿ ಬೀಗವನ್ನು ಭದ್ರಪಡಿಸುವುದು, ಈ ಪ್ರಕ್ರಿಯೆಯಲ್ಲಿ ಅರಗು ತನ್ನನ್ನು ತಾನು ಕಳೆದುಕೊಳ್ಳುವುದು,
ಮರ, ತನ್ನ ಫಲ-ಪುಷ್ಪ-ನೆರಳುಗಳನ್ನು ಎಲ್ಲರಿಗೆ ನೀಡುವುದು, ಅವರಿಂದ ಪ್ರತಿಫಲಾಪೇಕ್ಷೆ ಇಲ್ಲದಿರುವುದು
– ಇವು ಇವೆ. ಎರಡನೆಯ ಪರಿಧಿಯಲ್ಲಿ (ಎರಡನೆಯ ಮಾನಸಿಕ ಅವಕಾಶದಲ್ಲಿ) ತಾಯಿ, ಸ್ವಾರ್ಥ ತ್ಯಾಗ, ಮಕ್ಕಳ
ಸೇವೆ, ಪ್ರತಿಫಲಾಪೇಕ್ಷೆ ಇಲ್ಲದಿರುವುದು, ಮಕ್ಕಳು, ಆಶ್ರಯ ನೀಡುವುದು, ಸೌಲಭ್ಯಗಳನ್ನು ಒದಗಿಸುವುದು
– ಇವು ಇವೆ. ಇವೆರಡೂ ಸಮ್ಮೇಳಗೊಂಡ ಸಮ್ಮೀಳಿತದಲ್ಲಿ ತಾಯಿ, ಮಗ, ಸ್ವಾರ್ಥ ತ್ಯಾಗ, ಸೇವೆ, ಸೌಲಭ್ಯ
ಒದಗಿಸುವುದು, ಆಶ್ರಯ ನೀಡುವುದು – ಇವು ಉಂಟಾಗುತ್ತವೆ. ಇದರಿಂದಾಗಿ ಗಾದೆ ನಿರ್ದಿಷ್ಟ ಸಂದರ್ಭದಲ್ಲಿ
ಅರ್ಥವಾಗುತ್ತದೆ.
ಕೃತಿಯ
ಸಂಪಾದಕರು ನೀಡಿರುವ ಇಂಗ್ಲಿಷ್ ಪರ್ಯಾಯವು ಇಲ್ಲಿಯೂ ಸಮಾನಾರ್ಥಕ ವಾಗಿರುವಂತೆ ಕಾಣುವುದಿಲ್ಲ. ಹೀಗಿದ್ದರೂ
ಗಾದೆಯಲ್ಲಿ ಅರಗು ಮತ್ತು ಮರಗಳಿಲ್ಲದೆ ಹಸು ದನಗಳಿರುವುದು ಎದ್ದು ಕಾಣುವಂತಹದು. ಸಸ್ಯಗಳು ಮಾನವರು
ಬದಲಿಗೆ ಪ್ರಾಣಿಗಳು ಮಾನವರು ರೂಪಕ ಇಲ್ಲಿ ಬಳಕೆಯಾಗಿದೆ. ಅರಗು ಜಾರ್ಖಂಡಿನಲ್ಲಿ ಬೆಳೆಯುವ ವಿಶಿಷ್ಟ
ಸಸ್ಯೋಪನ್ನವಾಗಿದ್ದು ಭಾರತದ ಇತರೆಡೆಗಳಲ್ಲೂ ಹಿಂದಿನಿಂದಲೂ ಬಳಕೆಯಾಗುತ್ತಿರುವುದು ಬಹುಶಃ ಇದಕ್ಕೆ
ಕಾರಣ (ವಿಕಿಪೀಡಿಯಾ https//en.m.wikipedia.org).
ಇಂಗ್ಲೀಷಿನ
ಎರಡು ಗಾದೆಗಳನ್ನು ಪರಿಶೀಲಿಸಿದರೂ (Many a good cow had but a
bad calf & Lke mother Like daughter )
ಅರಗು ಮತ್ತು ಮರಗಳ ರೀತಿಯ ರೂಪಕಗಳನ್ನ ಅವು ಬಳಸಿಲ್ಲದಿರುವುದು ಕಂಡು ಬರುತ್ತದೆ. ಅವು (ಇಂಗ್ಲಿಷ್
ಗಾದೆಗಳು) ನೀರಸ ವಾಕ್ಯಗಳಂತೆ ಗೋಚರಿಸುತ್ತಿದ್ದು, ರೂಪಕಗಳಿಂದೊದಗುವ ಸೌಂದರ್ಯವನ್ನೂ, ಸ್ಪಷ್ಟತೆಯನ್ನೂ
ಕನ್ನಡ ಗಾದೆಯಲ್ಲಿ ಕಾಣಬಹುದು. ರೂಪಕಗಳ ಸೃಷ್ಟಿಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಗಳ ಮಹತ್ವವನ್ನು
ಈ ಗಾದೆ ಎತ್ತಿ ತೋರಿಸುತ್ತಿದೆ ಎನ್ನಬಹುದು.
5 ಉಳಿ ಸಣ್ಣದಾದರೂ
ಮರ ಕಡಿಯದೆ ಬಿಡದು
Little strokes fell great oaks
ಈ
ಗಾದೆಯಲ್ಲಿ ಮರದ ಪ್ರಸಕ್ತಿ ಇದ್ದರೂ ಉಳಿಗೆ ಪ್ರಧಾನ ಪಾತ್ರ. ಉಳಿ ಕಡಿಯುವ ಕೆಲಸವನ್ನು ಮಾಡಿಯೇ ಮಾಡುತ್ತದೆ.
ದೊಡ್ಡ ಉಳಿಯಾದರೆ ಕೆಲಸ ಬೇಗ ಮುಗಿಯುತ್ತದೆ. ಸಣ್ಣದಾದರೆ ನಿಧಾನವಾಗುತ್ತದೆ. ಇಲ್ಲಿ ಉಳಿ ಕಡಿಯುವ
ಮನೋಭಾವಕ್ಕೆ ಅಂದರೆ ಹಾಳುಗೆಡಹುವ ಕಾರ್ಯಕ್ಕೆ ರೂಪಕ. ಮರ ಪರೋಪಕಾರಿಯಾದ್ದರಿಂದ ಸಜ್ಜನರಿಗೆ ರೂಪಕ.
ಸಮಾಜವನ್ನು ಹಾಳುಗೆಡಹುವ ಜನ ಸಮಾಜದಲ್ಲಿದ್ದೇ ಇರುತ್ತಾರೆ. ಇಂತಹ ಜನರು ಸಣ್ಣದಾಗಿ ಇಂತಹ ಕೆಲಸವನ್ನೇನಾದರೂ
ಮಾಡಿದಾಗ ಕ್ಷಮ್ಯವೆಂದೆಣಿಸಿ ಹಾಗೆಯೇ ಬಿಟ್ಟರೆ ಮುಂದೆ ಅವನು ದೊಡ್ಡ ಸಮಾಜ ಘಾತುಕನಾಗುತ್ತಾನೆ. ಬೇರ
ತರಹದ ಸಾಂದರ್ಭಿಕ ಅರ್ಥಗಳೂ ಇದಕ್ಕೆ ಬರುವುವು. ಅಭಿಮನ್ಯು ಬಾಲಕ. ಆದರೆ ಕೌರವರ ಸೇನೆಯನ್ನೇ ಉರುಳಿಸಿದ.
ಉಳಿ ಸಣ್ಣದಾದರೂ ಮರವನ್ನು ಕಡಿಯದೇ ಬಿಡದು.
ಇಲ್ಲಿರುವ
ಇದರ ಇಂಗ್ಲಿಷ್ ರೂಪವೂ ಉತ್ತಮ ಭಾಷಾಂತರವಾಗಿ ಕಂಡು ಬರುತ್ತದೆ. ಉಳಿ ಮತ್ತು ಮರಗಳು ಎರಡೂ ಸಂಸ್ಕೃತಿಗಳಲ್ಲಿವೆ.
ಒಂದೇ ತರಹದ ಕೆಲಸಗಳನ್ನು ಮಾಡುತ್ತವೆ. ಒಂದೇ ರೀತಿಯ ಸಂಕೇತಾರ್ಥಗಳನ್ನು ಸಮಾಜದಲ್ಲಿ ಪಡೆದಿವೆ. ಹೀಗಾಗಿ
ತತ್ಸಮಾನ ಗಾದೆಗಳಾಗಿವೆ.
ಇದೇ
ಸಂಗ್ರಹದಲ್ಲಿರುವ ಇತರ ಸಸ್ಯ ಸಂಬಂಧೀ ಗಾದೆಗಳು ಇವು: (1)ಆನೆ ಕೈಲಿ ಕಬ್ಬು ಕೊಟ್ಟ ಹಾಗೆ (As
irrecoverable as a lump of butter in greyhound’s mouth), (2)ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು
[ಕೆಲಸಕ್ಕೆ ಕರೀ ಬೇಡ, ಊಟಕ್ಕೆ ಮರೀಬೇಡ (He
has two stomachs to eat but one to work),
(3)ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ
ಹಾಗೆ (It is
like nuts to an ape) (4)ಕಬ್ಬು ಸಿಹಿ ಎಂದು ಬುಡದವರೆಗೆ ಅಗಿ
ಬಾರದು ( ದ್ರಾಕ್ಷಿ ಸಿಹಿ ಎಂದು ಬಳ್ಳಿ ಸಹ ತಿನ್ನಬಾರದು The
orange that is squeezed hard yields bitter juice), (5)ಕಬ್ಬು ಡೊಂಕಾದರೆ ಸವಿ ಡೊಂಕೆ (Black
plums may eat as sweet as white),
(6)ಕಳ್ಳ ಕಳ್ಳಗೆ ನಂಟು, ಹುಳಿ ಮೆಣಸಿಗೆ
ನಂಟು(Birds of the same feather flock together), (7)ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು
ಮುಟ್ಟಿ ನೋಡಿಕೊಂಡ (A guilty conscience needs no
accuser), (8)ತಾನಾಗಿ ಬೀಳುವ ಮರಕ್ಕೆ ಕೊಡಲಿ ಯಾಕೆ
(Press not a falling man too far), (9)ತಾನು ನೆಟ್ಟ ಬೀಳು ತನ್ನೆದೆಗೆ ಹಂಬಿತು
(Clouds that the sun builds up darken him), (10)ಅಡಿಕೆ ಕದ್ದವ ಆನೆ ಕದ್ದಾನು (He
who steals an egg will steal an ox), (11)ನಾಗಮಲ್ಲಿಗೆ ಹೂವು ಪೂಗವಾದೀತೆ (
Every reed will not make a pipe), (12)ಫಲಕ್ಕೆ ತಕ್ಕ ಬೀಜ ನೆಲಕ್ಕೆ ತಕ್ಕ
ನೀರು (As is the tree so is the fruit), (13)ಬಾಳೆ ಹಣ್ಣಿಗೆ ಗರಗಸ ಬೇಕೆ (Send not
for a hatchet to break open an egg),
(14)ಬೂರುಗದ ಮರವನ್ನು ಗಿಣಿ ಕಾದ ಹಾಗೆ
(A watched pan is long in boiling), (15)ಬೋರೇ ಗಿಡದಲ್ಲಿ ಕಾರೇ ಹಣ್ಣಾದೀತೆ
(Can you gather figs out of thistles), (16)ಮರ ಹತ್ತಿದವನ ಕಾಲು ಕೆಳಗೆ (The
higher the ape climbs the more he shows the tail), (17)ಮಲ್ಲಿಗೆ ಹೂವಿನಿಂದ ಬಾಳೆ ಹಗ್ಗ ಪಾವನವಾಯ್ತು
(For the rose the thorn is plucked), (18)ಮೋಟು ಮರ ಗಾಳಿಗೆ ಮಿಂಡ (He
who has nothing is frightened at nothing), (19)ಹಣ್ಣೆಲೆ ಉದುರುವಾಗ ಕಾಯ್-ಎಲೆ ನಗುವುದು
(He jests at scars that has never felt a wound),
(20)ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
(Best to bend while a twig).
ಈ
ಗಾದೆಗಳಲ್ಲಿ ಕಂಡು ಬರುವ ಕೆಲವು ಸಾಮಾನ್ಯ ಸಾಂಸ್ಕೃತಿಕ ಅಂಶಗಳನ್ನು ನೋಡಬಹುದು. ಹಣ್ಣೆಲೆ, ಕಾಯೆಲೆ,
ಮರ,ಬೀಳು – ಇಂತಹ ಸಸ್ಯಗಳಿಗೆ ಸಾಮಾನ್ಯವಾಗಿ ಅನ್ವಯಿಸುವ ಪದಗಳು, ಅಕ್ಕಿ, ಅಡಿಕೆ, ತೆಂಗಿನ ಕಾಯಿ
– ಇಂತಹ ಪೂಜೆಗೆ ಬಳಸುವ ಫಲಗಳು (ಅಕ್ಕಿ ತೆಂಗಿನ ಕಾಯಿಗಳು
ಆಹಾರ ವಸ್ತುಗಳೂ ಆಗಿವೆ. ಕಬ್ಬು, ಕಡಲೆ, ಇವೂ ಇದೇ ಗುಂಪಿಗೆ ಸೇರಿದವು.), ದ್ರಾಕ್ಷಿ, ಮೆಣಸು, ಕುಂಬಳಕಾಯಿ-
ಇಂತಹ ತರಕಾರಿ ಫಲಗಳು,ನಾಗಮಲ್ಲಿಗೆ, ಪೂಗ, ಬಾಳೆ, ಬೂರಗ – ಇಂತಹ ಹೂವುಗಳು ಈ ಗಾದೆಗಳಲ್ಲಿ ಬಳಕೆಯಾಗಿವೆ.
ಇವೆಲ್ಲ ಈ ನಾಡಿನ ನೆಲಜಲದಲ್ಲಿ ಹಾಸುಹೊಕ್ಕಾಗಿರುವುವಷ್ಟೇ ಅಲ್ಲ, ನಾಡಿನ ಸಂಸ್ಕೃತಿಯಲ್ಲಿ ಪ್ರಮುಖ
ಪಾತ್ರವಿದೆ. ಉಳಿ, ಕೊಡಲಿ – ಇವುಗಳನ್ನು ಸಸ್ಯನಾಶನ ಪ್ರವೃತ್ತಿಯ ಪ್ರತಿನಿಧಿಗಳನ್ನಾಗಿ ಬಳಸಿದ್ದಾರೆ.
(ಉಳಿ-ಕೊಡಲಿಗಳು ನಿರ್ಮಾತೃಗಳೂ ಹೌದಾದರೂ ಈ ಉಪಕರಣಗಳ ಅಂತಹ ಗುಣಸ್ವಭಾವಗಳು ಇಲ್ಲಿ ನಕ್ಷೀಕೃತವಾಗಿಲ್ಲ).
ಇಂಗ್ಲಿಷ್ ಗಾದೆಗಳಲ್ಲಿ ಇವು ಇಲ್ಲದಿರುವುದು ಅಲ್ಲಿನ ಸಂಸ್ಕೃತಿಯಲ್ಲಿ ಇವುಗಳಿಗೆ ಅದೇ ಮಹತ್ತವವಿಲ್ಲದಿರುವುದರಿಂದಲೇ.
ಕೆಲವು ಗಾದೆಗಳಿಗೆ ಮಾತ್ರ ಸ್ಪಷ್ಟವಾದ ಸಮಾನಾಂತರ ಭಾಷಾಂತರಗಳು ಲಭ್ಯವಿವೆ ಉದಾ. 3, 8
ಮತ್ತು 20. ಇವು ಮಾನವನ ವಿಶ್ವ ವ್ಯಾಪೀ ಸಂಸ್ಕೃತಿಯ
ಪ್ರತಿನಿಧಿಗಳು. ಆದರೂ ಇವುಗಳಲ್ಲಿ ಮೊದಲನೆಯದರಲ್ಲಿ ಕನ್ನಡದಲ್ಲಿ ಎತ್ತು ಇರುವ ಕಡೆ ಇಂಗ್ಲೀಷಿನಲ್ಲಿ
ಕೋತಿ ಇದೆ.
ಆನೆ
ಕೈಲಿ ಎಂಬಲ್ಲಿ ಪ್ರಾಣಿಯು ಮನುಷ್ಯ ಎಂಬ ರೂಪಕವಿದೆ; ಪರ್ಯಾಯ ಇಂಗ್ಲಿಷ್ ಗಾದೆಯ ಹೇಳಿಕೆಯಲ್ಲಿ ರೂಪಕವಿರುವುದಿಲ್ಲ.
ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು ಎಂಬ ಗಾದೆಯಲ್ಲಿ ಕುದುರೆ ಎಂಬುದು ಅಧ್ಯಾಹಾರ; ಮುಂದು ಎಂಬುದು
ಪ್ರಗತಿಯನ್ನೂ ಹಿಂದು ಎಂಬುದು ವಿಗತಿಯನ್ನೂ ಸೂಚಿಸುವ ದಿಕ್ಸೂಚೀ ರೂಪಕಗಳು. ಇದರ ಇಂಗ್ಲಿಷ್ ಪರ್ಯಾಯ
ಮನುಷ್ಯನು ಪ್ರಾಣಿ ಎಂಬ ರೂಪಕವನ್ನೊಳಗೊಂಡಿದೆ (ಎರಡು ಹೊಟ್ಟೆಗಳು ದನ, ಎಮ್ಮೆ, ಮುಂತಾದ ಪ್ರಾಣಿಗಳಲ್ಲಿ
ಮಾತ್ರ ಕಂಡುಬರುವುದರಿಂದ). ಬುಡದವರೆಗೆ ಅಗಿಯಬಾರದು ಎಂಬಲ್ಲಿ ಬುಡಸಹಿತ ತೆಗೆಯುವುದು ನಾಶ ಎಂಬ ರೂಪಕವಿದೆ;
ಇಂಗ್ಲಿಷ ಗಾದೆ ಒಂದು ವಾಸ್ತವದ ಹೇಳಿಕೆಯಾಗಿದ್ದು (ಸಿಪ್ಪೆ ಸಹಿತ ಕಿವುಚಿದರೆ ಕಿತ್ತಳೆ ರಸ ಕಹಿ ತಾನೆ)
ಸಾರ್ವತ್ರಿಕವು ನಿರ್ದಿಷ್ಟ ಎಂಬ ರೂಪಕದಿಂದ ಎರಡೂ ಅರ್ಥವಾಗುತ್ತವೆ. ಸವಿ ಡೊಂಕು ಎಂಬಲ್ಲಿ ಸವಿಯನ್ನು
ಒಂದು ನೇರವಾಗಿರುವ ಕೋಲಿನಂತೆ ಪರಿಕಲ್ಪಿಸಲಾಗಿದೆ. ಹೀಗೆ ಭಾಷೆಗಳಲ್ಲಿ ಕಾಣ ಬರುತ್ತಿರುವ ರೂಪಕಗಳ
ಪ್ರಯೋಗದಲ್ಲಿ ಭಿನ್ನತೆಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು.
ಒಟ್ಟಿನಲ್ಲಿ
ಗಾದೆಗಳಲ್ಲಿ ಕೆಲವು ಸಾರ್ವತ್ರಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರೆ ಹೆಚ್ಚಿನವು ಕರುನಾಡ
ಸಂಸ್ಕೃತಿಯನ್ನೇ ಘನತರವಾಗಿ ಬಿಂಬಿಸುತ್ತವೆ. ಇವುಗಳನ್ನು ರೂಪಕಗಳ ಕಾಗ್ನಿಟಿವ್ ಸಿದ್ದಾಂತ ಮತ್ತು
ಸಮ್ಮಿಳಿತಗಳ ಸಿದ್ಧಾಂತ ಇವುಗಳನ್ನಾಧರಿಸಿ ಅರ್ಥೈಸಬಹುದು. ಕನ್ನಡದಲ್ಲಿ ಸಸ್ಯ ಸಂಭಂಧೀ ಗಾದೆಗಳನ್ನು
ಪರಿಶೀಲಿಸಿದಾಗ ಅಡಿಕೆ, ಪೂಗ, ಅರಗು ಇಂತಹ ವಸ್ತುಗಳನ್ನು ಅವು ಒಳಗೊಂಡಿರುವುವು. ಈ ವಸ್ತುಗಳನ್ನು ಒಳಗೊಂಡ ಇಂಗ್ಲಿಷ್ ಗಾದೆಗಳು ಇಲ್ಲ. ಗಾದೆಗಳ
ರೂಪಣೆ ಮತ್ತು ಅರ್ಥೈಸುವಿಕೆಗಳಿಗೆ ಸಂಸ್ಕೃತಿಯ ಹಿನ್ನೆಲೆ ಎಷ್ಟೊಂದು ಮುಖ್ಯ ಎಂಬುದನ್ನು ಈ ಅಂಶ ತೋರಿಸುತ್ತದೆ.
ಗಾದೆಗಳಲ್ಲಿ ಬಳಕೆಯಾಗುವ ರೂಪಕಗಳೂ ಕೂಡ ಸಂಸ್ಕೃತಿಯಿಂದ ಸಂಸ್ಕೃತಿಗೆ ಬೇರೆಬೇರೆಯಾಗಿರುತ್ತವೆ. ಇದು
ಹೊರ ಜಗತ್ತನ್ನು ವಿಭಿನ್ನ ಸಂಸ್ಕೃತಿಯ ಜನರು ಅರ್ಥಮಾಡಿಕೊಳ್ಳುವ ರೀತಿಗಳು ಕೂಡ ಭಿನ್ನಭಿನ್ನವಾಗಿರುವುದನ್ನು
ಸೂಚಿಸುವಂತೆ ತೋರುತ್ತದೆ.
BIBLIOGRAPHY
1.
Fauconnier, Gilles and Turner Mark 2003 : Conceptual Blending
Form and Meaning Researches en communication n0 19. The pdf is
available in the internet freely
2.
Hien Li Thi Thu: Proverbs
and Idioms Related to Animals in English and Vietnamese [Class 4c-06, University of Pedogogy] The
PDF is available in the internet freely
3.
Honeck, Richard P 1997: A PROVERB IN MIND The Cognitive Science
of Proverbial Wit and Wisdom”
University of Cicinnati Available in Google Books
4.
Jibir-Daura,
Dr Ramlatu : ANALYSIS OF HAUSA PROVERBS WITH CONCEPTUAL BLENDING Department of Arts and Social
Science, Ahmadu Bello University, Zaria
5.
Kovocses,
Zoltan 2010: Metaphor: A Practical Introduction, 2nd ed.[Oxford University] Available in Googlebooks
6.
Kovecses,
Zoltan 2006: Language Mind and Culture Oxford University Press Newyork Available in
Googlebooks
7.
Lakoff
George amd Turner Mark, 1989: More Than
Cool Reason – A Field Guide to
Poetic Metaphor [Publ. University of Chicago
Press] Available
in Googlebooks
8.
Mieder, Wolfgang 2004 :
Proverbs: A Handbook, Greenwood Punlishing Group, Available in Google
Books
9.
Moreno, Ibanez Ana 2005:
Analysis of the Cognitive Dimension Of Proverbs in English and Spanish :
SKACE Journal of Theoretical Linguistics pdfs.
Semamnticscholar.org
10.
Narasinga
Rao, Ullal 1912: A Hand Book Of Canarese
Proverbs with English Equivalents
[Publ. Basel Mission Book and Track Depository Mangalore]. ಇದು ಕನ್ನಡದ ಮೊದಲ ಗಾದೆಗಳ
ಸಂಗ್ರಹ. ಇದರ ಮೊದಲ ಾವೃತ್ತಿ 1906ರಲ್ಲಿ ಮದ್ರಾಸಿನಿಂದ ಪ್ರಕಟವಾದಂತೆ ತಿಳಿದು
11.
Sullivan,Karen and Sweetstar,Eve
2010: Is “Generic is Specific” a Metaphor?: Maning Form and BodyFey Parrill Ed Mark Turner CSLI
12.
Turner,
Mark 2014: Origin of Ideas Oxford
University Press Newyork Available in Google Books Publications
13.
YANG Yongxiang 2015: The
Explanatory Power of Conceptual Blending Theory for English Proverbs in Studies
in Literature and LanguageVol ii, no.3
pp52-56 CSCanada
*********************************************************************************************************************************************************