Friday, 12 June 2015

ಕನ್ನಡ ಶಾಸ್ತ್ರ ಸಾಹಿತ್ಯದ ಸುವರ್ಣಯುಗ

9ನೆಯ ಶತಮಾನವನ್ನು ಕನ್ನಡ ಸಾಹಿತ್ಯದ ಸುವರ್ಣಯುಗವೆಂದು ಕರೆಯುವುದು  ಕರೆಯುವುದು ಖ್ಯಾತವಾದ ವಿಷಯ. ಸಾಹಿತ್ಯದ ಪ್ರತಿ ಪ್ರಕಾರವನ್ನು ದೃಷ್ಡಿಯಲ್ಲಿಟ್ಟುಕೊಂಡು ಆಯಾ ಪ್ರಕಾರಗಳ ಸುವರ್ಣಯುಗಗಳನ್ನು ಗುರುತಿಸುವುದು ಸಾಧ್ಯವಿರಬಹುದು. ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿಯಂತೂ 19ನೆಯ ಶತಕ ಸುವರ್ಣಯುಗವೆನ್ನಲಡ್ಡಿಯಿಲ್ಲ. ಏಕೆ? ನೋಡಿ:
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತನೆಯ ಶತಮಾನವನ್ನು ಸುವರ್ಣಯುಗವೆಂದೂ ಜೈನ ಯುಗವೆಂದೂ ಕರೆಯುತ್ತಾರೆ. ಪಂಪ, ರನ್ನ, ನಾಗವರ್ಮ ಮುಂತಾದ ಕವಿಗಳು ಈ ಕಾಲದಲ್ಲಿ ಕೃತಿಗಳನ್ನು ರಚಿಸಿದರು. ಕನ್ನಡ ಶಾಡಸ್ತ್ರಕೃತಿಗಳಾದ ಕವಿರಾಜಮಾರ್ಗ ಮತ್ತು ಛಂದೋಂಬುಧಿ – ಇವು ಈ ಕಾಲದಲ್ಲಿ ರಚಿತವಾದವು. ಈ ಯುಗದ ನಂತರ ಶಾಸ್ತ್ರಕ್ಕೆ ಸಂಬಂಧಿಸಿದಂತೆ  ಭಾಷಾಭೂಷಣ. ಶಬ್ದಸ್ಮೃತಿ, ಶಬ್ದಮಣಿದರ್ಪಣ ಮತ್ತು ಶಬ್ದಾನುಶಾಸನ – ಇವು ಬೇರೆ ಬೇರೆ ಶತಮಾನಗಳಲ್ಲಿ ರಚಿತವಾದ ಕೃತಿಗಳು. ಆದರೆ ಹದಿನೆಂಟನೆಯ ಶತಮಾನದವರೆಗೆ ಯಾವುದೇ ಒಂದು ಶತಮಾನದಲ್ಲಿ ವಿಪುಲ ಸಂಖ್ಯೆಯ ಶಾಸ್ತ್ರ ಕೃತಿಗಳು ರಚನೆಯಾಗಿಲ್ಲ. ಶಾಸ್ತ್ರಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನು ತೋರಿಸುವಂತಹ ಪ್ರಯತ್ನಗಳೂ ಅಷ್ಟಷ್ಟಾಗಿ ಆಗಿಲ್ಲ. ಹತ್ತಂಬತ್ತನೆಯ ಶತಮಾನವು ಈ ದೃಷ್ಟಿಯಿಂದ ವಿಶಿಷ್ಟವಾದುದು. ಹತ್ತೊಂತ್ತನೆಯ ಶತಮಾನದಲ್ಲಿ ನಿಘಂಟು ಮತ್ತು ವ್ಯಾಕರಣಕೃತಿಗಳ ಸಂಖ್ಯೆ ಗಣನೀಯವಾಗಿ ಬೆಳೆಯಿತು. ಈ ಶಾಸ್ತ್ರಗಳು ಹೊಸ ದಿಕ್ಕಿನಲ್ಲಿ ಬೆಳೆಯತೊಡಗಿದವು. ಗ್ರಂಥ ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆಗಳೆಂಬ ಹೊಸ ಹೊಸ ಶಾಸ್ತ್ರಸಾಹಿತ್ಯಶಾಖೆಗಳು ಪ್ರಾರಂಭವಾದುವು. ಛಂದಶ್ಶಾಸ್ತ್ರ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಡೆಯಲಿಲ್ಲವಾದರೂ ಒಂದೆರಡು ಹೊಸ ಅಂಶಗಳು ಬೆಳಕಿಗೆ ಬಂದವು. ಹೀಗಾಗಿ ಈ ಶತಮಾನವನ್ನು ಶಾಸ್ತ್ರಸಾಹಿತ್ಯದ ಸುಗ್ಗಿಯ ಕಾಲ ಎಂದು ಕರರೆಯಬಹುದು. ಈ ಎಲ್ಲ ಬೆಳವಣಿಗೆಗಳಿಗೆ ಕ್ರೈಸ್ತ ಮಿಶನರಿಗಳು ಕಾರಣವಾಗಿದ್ದರಿಂದ  ಮಿಶನರಿಯುಗವೆಂದೂ  ಈ ಕಾಲಾವಧಿಯನ್ನು ಕರೆಯಬಹುದು.
          ಮಿಶನರಿಗಳ ಆರಂಭಿಕ ಕೃತಿಗಳು ತಮ್ಮ ಮೂಲಸ್ವರೂಪದಲ್ಲಿ ಹಳಗನ್ನಡ ಶಾಸ್ತ್ರ ಗ್ರಂಥಗಳಿಗಿಂತ
ಭಿನ್ನವಾದುವುಗಳಲ್ಲ.  ವಿಲಿಯಮ್ ಕೇರಿ(1817), ಥಾಮಸ್ ಹಾಡ್ಸನ್(1859), ಫ್ರೀಡ್ರಿಶ್ ಜೀಗ್ಲರ್(1882),ಬಿ  ಗ್ರೇಟರ್(1884), ಜಾರ್ಜ್ ರ್ವುರ್ತ(1866) – ಈ ಕೃತಿಕಾರರನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.  ವಿವರಣಾಪರತೆ ಈ ಕೃತಿಗಳ ಮುಖ್ಯ ಲಕ್ಷಣ. ಭಾಷೆಯ ವ್ಯಾವಹಾರಿಕ ನಿಯಮಗಳನ್ನು ವಸ್ತುನಿಷ್ಠವಾಗಿ ನಿರೂಪಿಸುವುದು ಇವರ ವ್ಯಾವಹಾರಿಕ ವ್ಯಾಕರಣಗಳ ಉದ್ದೇಶ. ಈ ದೃಷ್ಟಿಯಿಂದ ಪರಿಪೂರ್ಣವೆನ್ನುವಂತಹ ವ್ಯಾಕರಣವನ್ನು ಹಾಡ್ಸನ್ ಎಂಬ ಮಹಾಶಯ ರಚಿಸಿದ. ಮುಕುಟಪ್ರಾಯವಾದ ಕೃತಿ ಇನ್ನೂ ಅನಂತರ ಬರುವುದಿತ್ತು. 1903ರಲ್ಲಿ ಫರ್ಡಿನಂದ್ ಕಿಟೆಲ್  ಬೇರೆ ಭಾರತೀಯ ಭಾಷೆಗಳಲ್ಲಿ ರಚಿತವಾಗಿರದಂತಹ, ಕನ್ನಡದಲ್ಲಿ ಮುಂದಿನ ದಿನಗಳಲ್ಲೂ ಮೀರಿಸಲು ಸಾಧ್ಯವಾಗದಂತಹ ಅದ್ಭುತವಾದ ವ್ಯಾಕರಣಕೃತಿಯನ್ನು ರಚಿಸಿದ. ಇವನ ವ್ಯಾಕರಣ ಕನ್ನಡದ ಮೂರು ಅವಸ್ಥಾಭೇದಗಳಲ್ಲಿ ಕಂಡುಬರುವ ವ್ಯಾಕರಣ ನಿಯಮಗಳನ್ನು ಕೂಲಂಕಶವಾಗಿ ನಿರ್ವಚಿಸುತ್ತದೆ. ಹೊಸಗನ್ನಡದಲ್ಲಿ ಕಂಡುಬರುವ ರೂಪಗಳು ಹಳಗನ್ನಡದ ರೂಪಗಳಿಂದ ಹೇಗೆ ಸಿದ್ಧವಾದುವು ಎಂಬುದನ್ನು ಐತಿಹಾಸಿಕವಾಗಿ ಪರಿಶೀಲಿಸುತ್ತದೆ. ಹಳಗನ್ನಡ ವ್ಯಾಕರಣಕೃತಿಗಳಲ್ಲಿರುವ ನಿಯಮಗಳನ್ನೆಲ್ಲ ಸಮಗ್ರವಾಗಿ ಪರಿಶೀಲಿಸಿ ನಿಖರಗೊಳಿಸುತ್ತದೆ.ತನಗಿಂತ ಹಿಂದಿನ ಎಲ್ಲ ವ್ಯಾಕರಣಗಳ ಸಾರದೊಡನೆ ಹತ್ತಂಬತ್ತನೆಯ ಶತಮಾನದಲ್ಲಿ ಪ್ರಚಲಿತವಿದ್ದ ಚಾರಿತ್ರಿಕ ದೃಷ್ಟಿಯನ್ನು ಅಳವಡಿಸಿಕೊಂಡ ಶಾಸ್ತ್ರೀಯವೂ ಸಮಗ್ರವೂ ಆದ ಪರಿಪೂರ್ಣವಾದ ವ್ಯಾಕರಣ ಕಿಟೆಲನ ಈ ಕೃತಿ.
          ನಿಘಂಟುಕ್ಷೇತ್ರದ ಕಥೆಯೂ ಇದಕ್ಕಿಂತ ಭಿನ್ನವಾದುದಲ್ಲ.ಕನ್ನಡ ಸಾಹಿತ್ಯದ ಆರಂಭ ಕಾಲದಿಂದ ಹದಿನೆಂಟನೆಯ ಶತಮಾನದ ಆಂತ್ಯದ ವರೆಗೆ ರಚಿತವಾದ ಕನ್ನಡ ನಿಘಂಟುಗಳ ಸಂಖ್ಯೆ ಹೆಚ್ಚೆಂದರೆ ಹನ್ನೆರಡು. ಹೆಚ್ಚೆಂದರೆ 1600 ಕನ್ನಡದ ಕ್ಲಿಷ್ಟ
 ಪದಗಳಿಗೆ ಇವುಗಳಲ್ಲಿ ಕನ್ನಡ ಪರ್ಯಾಯ ಪದಗಳನ್ನು ನೀಡಲಾಗಿದೆ. ಇವೆಲ್ಲ ಸಂಸ್ಕೃತ ಮಾದದರಿಗಳನ್ನು ಅನುಸರಿಸಿದವು. ಹೆಚ್ಚಿನವು ಪದ್ಯರೂಪದಲ್ಲಿರುವುವು. ಸಾಹಿತ್ಯಾಭ್ಯಾಸದ ಪೂರ್ವದಲ್ಲಿ ಅಧ್ಯಯನ ಮಾಡಬೇಕಾದಂತಹವು.ಹತ್ತೊಂಬತ್ತನೆಯ ಶತಮಾನದಲ್ಲಿ ಕ್ರೈಸ್ತ ಮಿಶನರಿಗಳು ಕನ್ನಡದಲ್ಲಿ ನಿಘಂಟನ್ನು ಹೊಸ ಮಜಲಿಗೆ ತಲುಪಿಸಿದರು.  ವಿಲಿಯಮ್ ರೀವ್ ಕನ್ನಡದಲ್ಲಿ ನಿಘಂಟು ಕಾರ್ಯ ಕೈಗೊಂಡವರಲ್ಲಿ ಮೊದಲಿಗ. ಇವನು 1824ರಲ್ಲಿ ಇಂಗ್ಲಿಷ್-ಕನ್ನಡ ನಿಘಂಟನ್ನೂ 1832ರಲ್ಲಿ ಕನ್ನಡ-ಇಂಗ್ಲಿಷ್ ನಿಘಂಟನ್ನೂ ರಚಿಸಿದ. ಸುಲಭ ಕ್ಲಿಷ್ಟವೆನ್ನದೆ ಎಲ್ಲ ಪದಗಳನ್ನ ದಾಖಲಿಸುವುದು,ಪದಗಳನ್ನು ಅಕಾರಾದಿಯಾಗಿ ಜೋಡಿಸುವುದು, ಅರ್ಥಗಳನ್ನು ವ್ಯಾಖ್ಯೆಯ ರೂಪದಲ್ಲಿ ನಿರೂಪಿಸುವುದು ಮುಂತಾದುವುಗಳಿಂದ ರೀವ್ ಕನ್ನಡ ನಿಘಂಟಿಗೆ ಹೊಸ ದಿಕ್ಕನ್ನು ತೋರಿಸಿದ. ಈ ಕ್ಷೇತ್ರದಲ್ಲಿ ಹೊಸತನ್ನು ಮೂಡಿಸಿದ. ಅನಂತರ ಸ್ಯಾಂಡರ್ಸನ್ ಎಂಬುವನು  1858ರಲ್ಲಿ ಈ  ನಿಘಂಟುಗಳನ್ನು ಪರಿಷ್ಕರಿಸಿದ. ಇವನು ಈ ನಿಘಂಟಿಗೆ ಹೆಚ್ಚು ಪದಗಳನ್ನು ಸೇರಿಸಿ ವಿಸ್ತೃತ ಪರಿಷ್ಕೃತ ನಿಘಂಟೊಂದನ್ನು ರಚಿಸಿದ. ರೀವ್ ನಿಘಂಟನ್ನು ಸಂಕ್ಷಿಪ್ತೀಕರಿಸಿ ಇನ್ನೊಂದನ್ನು ರಚಿಸಿದ. ನಿಘಂಟುಗಳ ಪರಿಷ್ಕರಣದ ಮತ್ತು ಸಂಕ್ಷಿಪ್ತೀಕರಣದ ಒಂದೊಂದು ಮಾದರಿಗಳನ್ನು ಇವನು ಕನ್ನಡಕ್ಕೆ ಪರಿಚಯಿಸಿದ. 1876ರಲ್ಲಿ ಫ್ರೀಡ್ರಿಶ್ ಜೀಗ್ಲರ್ ಎಂಬುವನು ಇಂಗ್ಲಿಷ್-ಕನ್ನಡ ಶಾಲಾ ನಿಘಂಟನ್ನು ರಚಿಸಿ ಶಾಲಾ ಮಕ್ಕಳಿಗೆ ಉಪಯುಕ್ತವೆನಿಸಿದ. ಇವರಲ್ಲದೆ ಜಾನ್ ಗ್ಯಾರೆಟ್(1842) ಮತ್ತು ಬ್ಯುಶರ್(1893) ನಿಘಂಟುಗಳನ್ನು ರಚಿಸಿದ್ದಾರೆ. ಶಾರ್ಬೋನಾ ಎಂಬುವನು 1855ರಲ್ಲಿ ಕನ್ನಡ-ಲ್ಯಾಟಿನ್ ನಿಘಂಟನ್ನು ಮತ್ತು 1861ರಲ್ಲಿ ಲ್ಯಾಟಿನ್-ಕನ್ನಡ ನಿಘಂಟನ್ನು ರಚಿಸಿ ಲ್ಯಾಟಿನ್ ಭಾಷೆಯೊಂದಿಗೆ ಕನ್ನಡದ ಸಂಬಂಧವನ್ನು ಬೆಸೆದ. ಇಂತಹವುಗಳಲ್ಲಿ ಶ್ರೇಷ್ಠ ಕೃತಿ 1903ರಲ್ಲಿ ಪ್ರಕಟವಾಯಿತು. ಫರ್ಡಿನಂದ್ ಕಿಟೆಲ್ ಈ ನಿಘಂಟಿನ ರಚಕ. ದ್ರಾವಿಡತನ ಕನ್ನಡದಲ್ಲಿ ವ್ಯಕ್ತವಾಗಿರುವ ರೀತಿಯನ್ನು ನಿರ್ದೇಶಿಸುವುದು ಮತ್ತು ಸಂಸ್ಕೃತದ ಜೊತೆ ಈ ಭಾಷೆ ಒಟ್ಟಾಗಿ ಬಾಳಿದ ರೀತಿಯನ್ನು ಕಂಡುಕೊಳ್ಳುವುದು – ಇವು ಕಿಟೆಲನಿಗೆ ಪ್ರಸ್ತುತವಾಗಿದ್ದ ವಿಷಯಗಳು. ಪ್ರತಿಯೊಂದು ಕನ್ನಡ ಪದಕ್ಕೆ ಇತರ ದ್ರಾವಿಡ ಜ್ಞಾತಿ ಪದಗಳನ್ನು ಕೊಟ್ಟಿರುವುದು, ದೇಶ್ಯ - ಅನ್ಯ ದೇಶ್ಯ ಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಮುದ್ರಿಸಿರುವುದು, ಉದಾಹರಣ ವಾಕ್ಯಗಳನ್ನು ಕಾಲಾನುಕ್ರಮದಲ್ಲಿ ಕೊಟ್ಟಿರುವುದು – ಇವು ಈ ದೃಷ್ಟಿಯಿಂದ ಮುಖ್ಯವಾಗಿವೆ. “ಖಚಿತತೆ, ಶಾಸ್ತ್ರೀಯತೆ ಮತ್ತು ನಿಯಮ ಬದ್ಧತೆಗಳಲ್ಲಿ ರಾಷ್ಟ್ರದ ಇನ್ನೊಂದು ಭಾಷೆಯಲ್ಲಿ ಇಂಥ ಇನ್ನೊಂದು ನಿಘಂಟು ಇಲ್ಲವೆಂದು” ವಿದ್ವಾಂಸರು ಅಭಿಪ್ರಾಯಿಸಿದ್ದಾರೆ.
          ಗ್ರಂಥ ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆ – ಇವೆರಡು ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿಕೊಂಡ ಹೊಸ ಶಾಸ್ತ್ರ ಸಾಹಿತ್ಯ ಪ್ರಕಾರಗಳು. ಈ ಪ್ರಕಾರಗಳಲ್ಲಿಯೂ ಮತ್ತು ಛಂದಸ್ಸಿಗೆ ಸಂಬಂಧಿಸಿದಂತೆಯೂ ಮಿಶನರಿಗಳು ಪೂರ್ಣಪ್ರಮಾಣದ ಕೃತಿಗಳನ್ನು ರಚಿಸಲಿಲ್ಲ. ಕಿಟೆಲ್ ತಾನು ಸಂಪಾದಿಸಿದ ಕೇಶಿರಾಜನ ಶಬ್ದಮಣಿದರ್ಪಣ ಮತ್ತು ನಾಗವರ್ಮನ ಛಂದೋಂಬುಧಿ – ಇವುಗಳಲ್ಲಿ ಗ್ರಂಥ ಸಂಪಾದನೆಯ ಸೂತ್ರಗಳನ್ನು ಶಾಸ್ತ್ರೀಯವಾಗಿ ಅಳವಡಿಸಿದ್ದಾನೆ.ಹಸ್ತ ಪ್ರತಿಗಳ ಸಂಕಲನ ಅವುಗಳ ಪರಂಪರೆಯನ್ನು ಸಿದ್ಧಪಡಿಸುವುದು, ಪಾಠಾಂತರಗಳನ್ನು ಪರಿಶೀಲಿಸಿ ಸೂಕ್ತವಾದುದನ್ನು ನಿರ್ಣಯಿಸುವುದು – ಇವು ಕಿಟೆಲನ ಸಂಪಾದನ ಕಾರ್ಯದ ಲಕ್ಷಣಗಳು. ಛಂದಸ್ಸಿಗೆ ಸಂಬಂಧಿಸಿದಂತೆ ಗುರು ಮತ್ತು ಲಘುಗಳಿಗೆ ಯೂರೋಪಿಯನ್ ಮಾದರಿಯ  ಚಿಹ್ನೆಗಳ (- ಮತ್ತು ಲ)  ಬಳಕೆ ಮತ್ತು ಕನ್ನಡದಲ್ಲಿ ರಮಾ ಗಣ (- ಲ) ಸಹಜವಾಗಿ ಬರುವುದಿಲ್ಲವೆಂಬುದರ ಸಾಧಾರ ನಿರೂಪಣೆ – ಇವು ಮಿಶನರಿಗಳ ಸಾಧನೆ.ಮೊದಲನೆಯದನ್ನು ವುರ್ತನು ತನ್ನ ಪ್ರಾಕ್ಕಾವ್ಯಮಾಲಿಕೆಯಲ್ಲಿ ತಿಳಿಸಿದ್ದು ಎರಡನೆಯದನ್ನು ಕಿಟೆಲ್ ತಾನು ಸಂಪಾದಿಸಿದ ನಾಗವರ್ಮನ ಕನ್ನಡ ಛಂದಸ್ಸು ಗ್ರಂಥದುದ್ದಕ್ಕೂ ಇಂಗ್ಲಿಷಿನಲ್ಲಿ ಬರೆದಿರುವ ಟಿಪ್ಪಣಿಗಳಲ್ಲಿ ಪ್ರತಿಪಾದಿಸಿದ್ದಾನೆ.
          ಸಾಹಿತ್ಯ ಚರಿತ್ರೆ  ಎಂಬ ಪ್ರಕಾರದ ಅವತರಣ ಮಿಶನರಿಗಳಿಂದ ಆಯಿತು. 1868ರಲ್ಲಿ ಜಾರ್ಜ್ ವುರ್ತ್ ಹಳಗನ್ನಡ ನಡುಗನ್ನಡ ಪದ್ಯಗಳ ಸಂಕಲನವನ್ನು ಹೊತಂದ. ಇದರಲ್ಲಿ ಪದ್ಯಗಳನ್ನು ಬ್ರಾಹ್ಮಣ ಸಾಹಿತ್ಯ, ಲಿಂಗಾಯಿತ ಸಾಹಿತ್ಯ, ಜೈನ ಸಾಹಿತ್ಯ ಮತ್ತು ನಾಡ ಕ್ರೈಸ್ತ ಸಾಹಿತ್ಯ ಎಂಬ ನಾಲ್ಕು ಶೀರ್ಷಿಕೆಗಳಲ್ಲಿ ವರ್ಗೀಕರಿಸಿದ್ದಾನೆ. ಧರ್ಮ ಮತ್ತು ಸಾಹಿತ್ಯದ ಸಂಬಂಧವನ್ನು ಹೀಗೆ ಗುರುತಿಸಿ ವರ್ಗೀಕರಣಕ್ಕೆ ಬಳಸಿರುವುದು ಸಾಹಿತ್ಯೇತಿಹಾಸ ರಚನೆಯ ಪ್ರಥಮ ಪ್ರಯತ್ನವೆನ್ನಬಹುದು. ಮುಂದೆ ಕಿಟೆಲ್ ತಾನು 1875ರಲ್ಲಿ ಸಂಪಾದಿಸಿದ ನಾಗವರ್ಮನ ಕನ್ನಡ ಛಂದಸ್ಸು ಕೃತಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ ಒಂದು ಪ್ರಬಂಧ ಎಂಬ ಅರವತ್ತು ಪುಟಗಳ ಒಂದು ಪ್ರಬಂಧವನ್ನು ರಚಿಸಿ ಕೊಟ್ಟಿದ್ದಾನೆ.ಇದರಲ್ಲಿ ವುರ್ತನ ವರ್ಗೀಕರಣವನ್ನು ಸ್ಥೂಲವಾಗಿ ಅನುಸರಿಸಲಾಗಿದೆ. ಅಲ್ಲದೆ 130 ಹಳಗನ್ನಡ ನಡುಗನ್ನಡ ಕವಿಗಳ ಕಾಲವನ್ನು ವೈಜ್ಞಾನಿಕವಾಗಿ ಸಾಕ್ಷ್ಯಾಧಾರ ಸಮೇತ ನಿಗದಿ ಪಡಿಸಿದ್ದಾನೆ ಮತ್ತು  ಸಾಧ್ಯವಾದ ಮಟ್ಟಿಗೆ ಅವರುಗಳ ಕಾವ್ಯದ ಒಂದು ಸಣ್ಣ ಪರಿಚಯವನ್ನು ನೀಡಿದ್ದಾನೆ.ಇವರಿಬ್ಬರ ಕಾರ್ಯ ವಿಧಾನವನ್ನು ಮುಂದಿನ ಸಾಹಿತ್ಯ ಚರಿತ್ರಕಾರರು ಅನುಸರಿಸಿದರು ಎಂಬುದು ಗಮನಾರ್ಹ.
          ಒಟ್ಟಿನಲ್ಲಿ ಹತ್ತೊಂಬತ್ತನೆಯ ಶತಮಾನ ಶಾಸ್ತ್ರ ಸಾಹಿತ್ಯ ಕೃತಿಗಳ ಬಾಹುಳ್ಯವನ್ನು ಕಂಡ ಕಾಲ. ಶಾಸ್ತ್ರ ಸಾಹಿತ್ಯ ಶಾಖೆಗಳು ಹೊಸ ದಿಕ್ಕನ್ನು ಕಂಡುಕೊಂಡ ಕಾಲ. ಈ ವಿದ್ಯಮಾನಗಳು ವಿದೇಶೀ ಕ್ರೈಸ್ತ ಮಿಶನರಿಗಳಿಂದ ಸಾಧ್ಯವಾದವು. ಆದ್ದರಿಂದಲೇ ಈ ಕಾಲಾವಧಿ ಶಾಸ್ತ್ರ ಸಾಹಿತ್ಯದ ಸುಗ್ಗಿಯ ಕಾಲ; ಶಾಸ್ತ್ರ ಸಾಹಿತ್ಯದ ಮಿಶನರಿ ಯುಗ. ಈ ಯುಗದ ಎಲ್ಲ ಕಾರ್ಯಗಳ ನೇತಾರ ಫರ್ಡಿನಂದ್ ಕಿಟೆಲ್.

No comments:

Post a Comment