Search This Blog

Sunday, 16 July 2017

ಶಿಕ್ಷಣತಜ್ಞ ಆ್ಯಂಟನ್ ಸಿಮೊನೊವಿಚ್ ಮೆಕರೆಂಕೊ ಮತ್ತವನ ತತ್ವಗಳು


                     
                              
              ಶಿಕ್ಷಣತಜ್ಞ ಆ್ಯಂಟನ್ ಸಿಮೊನೊವಿಚ್
   ಮೆಕರೆಂಕೊ ಮತ್ತವನ ತತ್ವಗಳು
                                            ಡಾ ಬಿ ವಿ ಮಹೀದಾಸ
ಮೆಕರೆಂಕೋ ಹಿಂದಿನ ಸೋವಿಯಟ್ ಯೂನಿಯನ್ನಿನ ಒಬ್ಬ ಮೇಧಾವೀ ಶಿಕ್ಷಣತಜ್ಞ. ಉಕ್ರೇನಿನವನು. ಕಮ್ಯನಿಸ್ಟ್ ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವದ ರೀತಿನೀತಿಗಳನ್ನು ಶಿಕ್ಷಣಕ್ಕೆ ಅಳವಡಿಸಿದವನು. ಪ್ರಥಮ ಮಹಾ ಯುದ್ಧ ಮತ್ತು ರಶ್ಯನ್ ಮಹಾಕ್ರಾಂತಿಯನಂತರ ಅನಾಥರಾಗಿ ರೌಡಿತನಕ್ಕಿಳಿದ ಹಲವು ಮಕ್ಕಳನ್ನು ಸುಶಿಕ್ಷತರನ್ನಾಗಿಸುವ ಹೊಣೆಹೊತ್ತು ಯಶಸ್ವಿಯಾಗಿ ನಿರ್ವಹಿಸಿದವನು; ಕೇವಲ ಒಂದು ವರ್ಷದಲ್ಲಿ ಅವರನ್ನುಶಿಸ್ತುಬದ್ಧ ಕೆಲಸಗಾರ ಸಮಷ್ಟಿಯನ್ನಾಗಿ ರೂಪಿಸಿಬಿಟ್ಟನು. ಶಿಕ್ಷಣದ ಜೊತೆಗೆ ಸಾಹಿತ್ಯದಲ್ಲಿಯೂ ಕೃಷಿ ಮಾಡಿದವನು; ಅದರಲ್ಲಿಯೂ ಯಶಸ್ಸು ಗಳಿಸಿದವನು. ಇತರ ದೇಶಗಳಲ್ಲಿ ಅಷ್ಟೊಂದು ಹೆಸರಿಲ್ಲದಿದ್ದರೂ (ಕಮ್ಯುನಿಸ್ಟ್ ದೇಶದವನಾದ್ದರಿಂದ ಇರಬಹುದು) ರಶ್ಯದಲ್ಲಿ ಮತ್ತು ಹಿಂದಿನ ಸೋವಿಯಟ್ ಯೂನಿಯನ್ನಿನ ಇಂದಿನ ಸ್ವತಂತ್ರ ದೇಶಗಳಲ್ಲಿ ಇಂದಿಗೂ ಖ್ಯಾತನಾಗಿರುವವನು. ಇವನ ಶಿಕ್ಷಣ ತತ್ವಗಳು ನಮಗೂ ಮಾರ್ಗದರ್ಶಕ ಮತ್ತು ಹೊಸ ಹೊಳಹುಗಳನ್ನು ನೀಡುವಂತಹವು.
                             ಇವನ ಜೀವನದ ಮುಖ್ಯ ರೂಪುರೇಷೆಗಳನ್ನು ಹೀಗೆ ಗುರುತಿಸಬಹುದು:
ಜನನ                      13ನೆಯ ಜನವರಿ 1888, ಬೆಲೋಪೋಲ್, ರಶ್ಯನ್ ಚಕ್ರಾಧಿಪತ್ಯ
ಮರಣ                     1ನೆಯ ಏಪ್ರಿಲ್ 1939 (51ನೆಯ ವಯಸ್ಸಿನಲ್ಲಿ)
                              ಗೊಲಿತ್ಸಿನೊ, ಸೋವಿಯಟ್ ಯೂನಿಯನ್
ವೃತ್ತಿ                     ಶಿಕ್ಷಣತಜ್ಞ, ಲೇಖಕ ಮತ್ತು ಸಮಾಜ ಸುಧಾರಕ
ಭಾಷೆ                     ರಷ್ಯನ್
ಪದವಿ                     1905, ಕ್ರೆಮೆನ್ಚುಗ್-ನಲ್ಲಿ. ಅನಂತರ ಒಂದು ವರ್ಷದ ಅಧ್ಯಾಪಕ ತರಬೇತಿ
ಅಧ್ಯಾಪಕ ವೃತ್ತಿ}       1919ರಿಂದ ಪೋಲ್ಟಾವ ಮತ್ತು ಕ್ರ್ಯುಕೋವ್-ಗಳಲ್ಲಿ.
ಇಷ್ಟರ ಮಧ್ಯೆ       ಸೇನೆಯಲ್ಲೂ ಕಾರ್ಯನಿರ್ವಹಿಸಿದ. 1920ರಲ್ಲಿ ಗಾರ್ಕಿ ಕಾಲೊನಿಯಲ್ಲಿ ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವನಿಗೆ ವಹಿಸಲಾಯಿತು. ಇಲ್ಲಿಯೂ ಅನಂತರ ಜರ್-ಜಿನ್-ಸ್ಕಿ ಕಮ್ಯೂನ್ನಲ್ಲಿಯೂ ಅಧ್ಯಾಪನ ಮತ್ತು ಮೇಲುಸ್ತುವಾರಿ ಎರಡೂ ಜವಾಬ್ದಾರಿಗಳನ್ನುಸಮರ್ಪಕವಾಗಿ ನಿರ್ವಹಿಸಿದ.  ಗಲೀನಾ ಸ್ತಾಹೀವ್ನಾ ಇವನ ಪತ್ನಿ.
                                                                                        (ವಿಕಿಪೀಡಿಯದಿಂದ)

          1920 ಮೆಕರೆಂಕೋನ ಜೀವನದ ಮಹತ್ವದ ಗಳಿಗೆ. ಉಕ್ರೇನಿನ ಅಧಕಾರಿಗಳು ಒಂದು ವಿಶಿಷ್ಟ ಜವಾಬ್ದಾರಿಯನ್ನು ಅವನಿಗೆ ವಹಿಸಿದರು. ಪೋಲ್ಟೋವಾ ಲೇಬರ್ ಕಾಲನಿಯಲ್ಲಿ ಮನೆಮಠ ಕಳೆದುಕೊಂಡ ಅಪರಾಧ ಹಿನ್ನೆಲೆಯ ಮಕ್ಕಳಿಗೆ ಕಲಿಸುವ ಮತ್ತು ಅವರನ್ನು ನೋಡಿಕೊಳ್ಳುವ ಕೆಲಸ; ಅದರ ನಿರ್ದೇಶಕ ಹುದ್ದೆ. ಆ ಕೆಲಸವನ್ನು ಅವನು ಒಪ್ಪಿಕೊಂಡ. ಮೆಕರೆಂಕೊ ತನ್ನ ಯೋಚನೆ ಮತ್ತು ಕೆಲಸಗಳಲ್ಲಿ ಸಮಕಾಲೀನ ಮ್ಯಾಕ್ಸಿಮ್ ಗಾರ್ಕಿಯಿಂದ ಪ್ರಭಾವಿತನಾಗಿದ್ದು ಬಾಲಾಪರಾಧಿಗಳ ಈ ಶಾಲೆಗೆ ಗಾರ್ಕಿ ಕಾಲೊನಿ ಎಂದು ಹೆಸರಿಟ್ಟ.
ಈ ಕೆಲಸಕ್ಕಾಗಿ ಅವನಿಗೆ ಕೊಟ್ಟ ಜಾಗ ಒಂದು ಕೃಷಿಕ ಎಸ್ಟೇಟು. ಅದರಲ್ಲಿ ಒಂದಷ್ಟು ಜಾಗ, ಕೆಲವು ಕಟ್ಟಡಗಳು ಇದ್ದವು. ಕಟ್ಟಡಗಳು ಸುವ್ಯವಸ್ಥಿತವಾಗಿರಲಿಲ್ಲ. ಸ್ಥಳೀಯರಿಂದ ಕಳವು ಮತ್ತು ನಾದುರಸ್ಥಿಗೆ ಪಕ್ಕಾಗಿದ್ದವು. ಕೆಲವೆಡೆ ಕಿಟಕಿಗಳನ್ನೇ ಕದ್ದೊಯ್ದಿದ್ದರು. ಇವುಗಳ ಸುವ್ಯವಸ್ಥೆಗೆ ಅನುದಾನ ಅಲ್ಪಪ್ರಮಾಣದ್ದಾಗಿತ್ತು. ಪರಿಮಿತ ಅನುದಾನದಿಂದಲೇ ಮೆಕರೆಂಕೊ ವ್ಯವಸ್ಥೆಯನ್ನು ಮಕ್ಕಳಿಗೆ ಇರಲು ಯೋಗ್ಯವಾಗುವಂತೆ ಸರಿಪಡಿಸಿದ. ಇಂತಹವೆಲ್ಲಇವನ ಆಡಳಿತ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.
ಅವನ ಅಧೀನಕ್ಕೆ ಕೊಟ್ಟ ಮಕ್ಕಳೆಲ್ಲಕ್ರಿಮಿನಲ್ ಹಿನ್ನೆಲೆಯವರು. ಕಾಲೊನಿಯ ತಮ್ಮ ಆರೈಕೆದಾರರನ್ನು ಗೌರವಿಸುವಂತಹವರಾಗಲೀ ಶಿಸ್ತನ್ನು ಪಾಲಿಸುವವರಾಗಲೀ ಅಲ್ಲ. ಹೊಟ್ಟೆ ಹೊರೆಯಲು ಅಲ್ಲಿದ್ದ ಖಾಲಿ ಜಾಗದಲ್ಲಿ ಕೃಷಿ ಮಾಡಲೇ ಬೇಕಾಗಿತ್ತಾದರೂ ಈ ಮಕ್ಕಳು ಅದಕ್ಕೆ ಒಗ್ಗುವುದು ಕಷ್ಟವಾಗಿತ್ತು. ಮೊದಲಿನಂತೆ ಕದ್ದು ಅಥವ ಇತರರನ್ನು ಬೆದರಿಸಿ ಕಿತ್ತುಕೊಳ್ಳುವ ಮೂಲಕ ಬೇಕಾದ್ದನ್ನು ಪಡೆದುಕೊಳ್ಳುವುದರತ್ತ ಅವರ ಒಲವು. ಹೀಗೆ ಕಾಲೊನಿ ಹೆಚ್ಚುತ್ತಿರುವ ಅಪರಾಧಿಗಳ ನೆಲೆಯಂತಾಯಿತು.
ಈ ಎಲ್ಲದರ ನಡುವೆಯೇ ಮೆಕರೆಂಕೊ ನಿರಂತರವಾಗಿ ಕಾರ್ಯಮಗ್ನನಾಗಿ ಒಂದರನಂತರ ಒಂದರಂತೆ ಎರಗುತ್ತಿದ್ದ ಸವಾಲುಗಳನ್ನು ಬಿಡಿಸುತ್ತಾ ಹೊರಟನು. ಜೊತೆಜೊತೆಗೆ ಇವರನ್ನು ಸುಶಿಕ್ಷಿತರನ್ನಾಗಿಸಲು ಯೋಗ್ಯ ಕಲಿಕಾನಿಯಮಗಳನ್ನು ರೂಪಿಸಲೂ ತೊಡಗಿದ. ಇಂತಹ ಪ್ರಯತ್ನಗಳು ಫಲ ನೀಡಿದವು. ಕಾಲೊನಿಯ ಈ ತರುಣರು ಉತ್ಪಾದಕ ಕೆಲಸದಲ್ಲಿ ತೊಡಗಿದರು. ಕೃಷಿ ಪ್ರಾರಂಭವಾಯಿತು, ಫಲ ನೀಡತೊಡಗಿತು. ಯಾಂತ್ರಿಕ ಕಾರ್ಯ ಶಾಲೆಗಳು ತೆರೆಯಲ್ಪಟ್ಟವು ಮತ್ತು ಹಲವರು ಇವುಗಳಲ್ಲಿ ಕಾರ್ಯ ಪ್ರವೃತ್ತರಾದರು. ಹೀಗೆ ಮೆಕರೆಂಕೊ ಈ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಮರ್ಥ ನಾದ.
ಅನಂತರ ಅವನು ಜರ್-ಜಿನ್-ಸ್ಕಿ ಕಮ್ಯೂನ್ ಅನಾಥಾಲಯದ ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಂಡ. ಅಲ್ಲಿಯೂ ಗಾರ್ಕಿ ಕಾಲೊನಿಯ ರೀತಿಗಳೇ ಪುನರಾವರ್ತನೆಗೊಂಡವು. ಇಲ್ಲಿ ಕೃಷಿ ಕಾರ್ಯವಿರಲಿಲ್ಲ. ಬದಲಾಗಿ ಮೂರು ಕಾರ್ಯಾಗಾರಗಳಿದ್ದವು. ಇವುಗಳಲ್ಲಿ ಪಾದರಕ್ಷೆ ತಯಾರಿ, ಬಟ್ಟೆ ಹೊಲಿಯುವುದು ಮತ್ತು ಅಲಮಾರಿ ತಯಾರಿಕೆ – ಈ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಕೆಲವು ವರ್ಷಗಳನಂತರ ಈ ವಸ್ತುಗಳ ತಯಾರಿ ಮತ್ತು ಮಾರಾಟ ಈ ಕೇಂದ್ರಗಳ ಕೆಲಸವಾಯಿತು. ಇಲ್ಲಿಯೂ ಮೊದಮೊದಲು ಶಿಬಿರಾರ್ಥಿಗಳು ಅಸಮಾಜಿಕವಾಗಿ ವರ್ತಿಸಿದರೂ ಮೆಕರೆಂಕೊನ ಪ್ರಯತ್ನಗಳ ಫಲವಾಗಿ ಅವರು ಉತ್ತಮ ಕುಶಲಕರ್ಮಿಗಳಾಗಿ ರೂಪುಗೊಂಡರು.
ಇವನು ತನ್ನ ಶಿಕ್ಷಣ ಪದ್ಧತಿಯಲ್ಲಿ ಪ್ರಜಾಪ್ರಭುತ್ವ ರೀತಿನೀತಿಗಳನ್ನು ಬಳಸುತ್ತಿದ್ದ. ಇದರಿಂದ ಆಗ ಅಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಒಡೆಯರು ಅಸಮಾಧಾನಗೊಂಡರು. 1937 ಫೆಬ್ರುವರಿಯಲ್ಲಿ ಮೆಕರೆಂಕೊನ ಸಹೋದ್ಯೋಗಿಗಳನ್ನೂ ಸ್ನೇಹಿತರನ್ನೂ ಬಂಧಿಸಿದರು. ಕ್ರಾಂತಿವಿರೋಧೀ ಚಟುವಟಿಕೆಗಳಿಗಾಗಿ ಅವರನ್ನು ‘ವಿಚಾರಣೆ’ ನಡೆಸಿ ಶಿಕ್ಷಿಸಲಾಯಿತು. ಮೆಕರೆಂಕೊಗೆ ತಾನು, ತನ್ನ ಕುಟುಂಬ ಮತ್ತು ತನ್ನ ಉಳಿದ ಸ್ನೇಹಿತರೂ ಅಪಾಯದಲ್ಲಿರುವುದು ಸ್ಪಷ್ಟವಾಯಿತು. ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟ. ಉಕ್ರೇನನ್ನು ತೊರೆದ. ಮಾಸ್ಕೋಗೆ ಹೋಗಿ ಲೇಖಕ ಮತ್ತು ಭಾಷಣಕಾರನಾಗಿ ಹೊಸ ಬದುಕಿಗೆ  ಮೊದಲಿಟ್ಟ.   ಶಿಕ್ಷಣದ ಬಗ್ಗೆ ಅವನು ಹಲವು ಪುಸ್ತಕಗಳನ್ನು ಬರೆದ. Pedagogicheskaya poema (1933–35; ಇದರ ಇಂಗ್ಲಿಷ್ ಭಾಷಾಂತರ “Pedagogical Poem”); . The Road to Life; (or, Epic of Education), . Kniga dlya roditeley (1937; A Book for Parents) and Flagi na bashnyakh (1939; “Flags on the Battlements”) – ಇವು ಇವನ ಕೃತಿಗಳಲ್ಲಿ ಮುಖ್ಯವಾದುವು; ಜನಪ್ರಿಯವಾದುವು. The Road to Life ಕೃತಿಯು ಬಾಳ್ವೆಯ ದರ್ಶನ ಎಂದು ಕನ್ನಡಕ್ಕೆ ಅನುವಾದವಾಗಿದ್ದು ಮೈಸೂರು ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿರುವುದಾಗಿ ತಳಿದು ಬರುತ್ತದೆ. ಇಂಗ್ಲಿಷ್ ಅವತರಣಿಕೆ ಅಂತರ್ಜಾಲದಲ್ಲಿ ಭ್ಯವಿದೆ.  ಅವನು ಸಾಯುವುದಕ್ಕೆ ಎರಡು ತಿಂಗಳು ಮುಂಚೆ ಅವನ ಬರೆವಣಿಗೆಗಾಗಿ ಆರ್ಡರ್ ಆಫ್ ದಿ ರೆಡ್ ಬ್ಯಾನರ್ ಆಫ್ ಲೇಬರ್ ಪ್ರಶಸ್ತಿಯನ್ನು ಕೊಟ್ಟು ಅವನನ್ನು ಸನ್ಮಾನಿಸಿದರು.
ಮೇಲೆ ಹೇಳಿದ ಇವನು ಕೃತಿಗಳಲ್ಲಿ ಶಿಕ್ಷಣದ ಬಗ್ಗೆ ತನ್ನ ನಿಲುವುಗಳನ್ನು ಪ್ರತಿಪಾದಿಸಿದ್ದಾನೆ. ಪ್ರಥಮ ಮಹಾಯುದ್ಧ ಮತ್ತು ರಶ್ಯನ್ ಮಹಾ ಕ್ರಾಂತಿಗಳ ಪರಿಣಾಮವಾಗಿದ್ದ ಸಮಕಾಲೀನ ಸಾಮಾಜಿಕ ಪರಿಸ್ಥಿತಿ, ಮತ್ತು ಗಾರ್ಕಿ ಕಾಲೊನಿ, ಜರ್-ಜಿನ್ಸ್ಕಿ ಕಮ್ಯೂನ್-ಗಳಲ್ಲಿ ಇವನ ಶೈಕ್ಷಣಿಕ ಅನುಭವಗಳು - ಈ ಹಿನ್ನೆಲೆಯಲ್ಲಿ ಶಿಕ್ಷಣ ತತ್ವಗಳನ್ನು ಇವನು ನಿರೂಪಿಸಿದ್ದಾನೆ.  ಇವನ ಬಾಳ್ವೆಯ ದರ್ಶನ ಒಂದು ಕಾದಂಬರಿಯಾಗಿದ್ದು ಇದರಲ್ಲಿ ಮೆಕರೆಂಕೋನ ಆತ್ಮ ಚರಿತ್ರಾತ್ಮಕ ಅಂಶಗಳಿವೆ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಮೆಕರೆಂಕೋಗೆ ಮಾನವನ ಒಳ್ಳೆಯತನದ ಬಗ್ಗೆ ಅಸೀಮ ನಂಬಿಕೆ. ಮಕ್ಕಳನ್ನು ಪರಸ್ಪರ ಹಿತಾಸಕ್ತಿಗಳನ್ನು ಕಾಯ್ದುಕೊಂಡು  ಒಂದು ನಿರ್ದಿಷ್ಟ ಗುರಿಸಾಧನೆಗೆ ನುಗ್ಗುವ ಸಮುದಾಯವನ್ನಾಗಿ ರೂಪಿಸಿದಾಗ ಉತ್ತಮ ಗುಣಗಳು ರೂಢಗೊಳ್ಳುತ್ತವೆ ಎಂದು ಅವನು ಪ್ರತಿಪಾದಿಸಿದ್ದಾನೆ. ಇಂತಹ ಸಮುದಾಯಕ್ಕೆ ಇವನು ಕೊಟ್ಟಿರುವ ಹೆಸರು ಕಲೆಕ್ಟಿವ್. ಇದು ವ್ಯಕ್ತಿಯನ್ನು ಹೊರಸಮಾಜಕ್ಕೆ ಸಂಪರ್ಕಿಸುವ ಕೊಂಡಿ. ಸಮಸ್ಯೆಗಳ ಬಗ್ಗೆ ಚರ್ಚೆಗಳು, ಒಂದು ತಂಡವಾಗಿ ಮಾಡುವ ಕೆಲಸ ಮತ್ತು ಆಸಕ್ತಿದಾಯಕ ಬಿಡುವಿನ ಚಟುವಟಿಕೆಗಳು ಮಕ್ಕಳ ಒಂದು ಗುಂಪನ್ನು ಕಲೆಕ್ಟಿವ್ ಆಗಿ ರೂಪಿಸುತ್ತವೆ.   ಆಗ ಸಾನುಕಂಪ, ಸಮುದಾಯಕ್ಕೆ ನಿಷ್ಠೆ ಇಂತಹ ಗುಣಗಳು ಬೆಳೆದು ಶಿಕ್ಷಣಕ್ಕೆ ನೆಲೆಯಾಗುತ್ತವೆ . ಬಾಳ್ವೆಯ ದರ್ಶನ ಕೃತಿಯಲ್ಲಿ ಅವನು ಶಿಕ್ಷಣ ನೀಡಬೆಕಾಗಿದ್ದ ಅಸಾಮಾಜಿಕ ಮಕ್ಕಳ ಮೇಲೆ  ನೈತಿಕತೆಯನ್ನು ಅಥವ ಶಿಸ್ತನ್ನು ಹೊರಗಡೆಯಿಂದ ಹೇರಿ ಅವರನ್ನು ಉತ್ತಮ ಕಲೆಕ್ಟಿವ್ ಆಗಿ ರೂಪಿಸಿದ್ದಲ್ಲ;  ಹೊರಗಡೆಯ ಪ್ರತಿಕೂಲ ವಾತಾವರಣದೊಡನೆ ಹೋರಾಡುವ ಸಂದರ್ಭದಲ್ಲಿ ಗುಂಪಿನಲ್ಲಿ ಒಗ್ಗೂಡಿಕೆ ಬಲ ಸಂವರ್ಧನೆಯಾಯಿತು.  ಜೊತೆಗೆ ಒಟ್ಟಾಗಿ ಸಾಹಸ, ತಂಡವಾಗಿ ಕೆಲಸ, ಸಂಗಾತಿಗಳಾಗಿ ಮನೋರಂಜನೆ – ಇಂತಹವುಗಳಿಂದ ಕಲೆಕ್ಟಿವ್ ಮತ್ತಷ್ಟು ಗಟ್ಟಿಯಾದ ಘಟಕವಾಗುತ್ತದೆ; ಪರಸ್ಪರ ಕಲಿಕೆ ಸಾಧ್ಯವಾಗುತ್ತದೆ. ನೈತಿಕತೆ ಬೆಳೆಯುತ್ತದೆ.   ಮಕ್ಕಳು ತಮಗೆ ತಾವೇ ಜವಾಬ್ದಾರರೆಂಬುದನ್ನು ಕಂಡುಕೊಳ್ಳುತ್ತಾರೆ.
ಅನುವಂಶೀಯತೆಯೋ ಪೋಷಣೆಯೋ ಯಾವುದು ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಾತ್ರವಹಿಸುತ್ತದೆ ಎಂಬ ಪ್ರಶ್ನೆಗೆ: ಹುಟ್ಟಿನಿಂದ ಬರುವ ಕೆಲವು ಗುಣಗಳ ಮಹತ್ವವನ್ನು ಮೆಕರೆಂಕೊ ಅಲ್ಲಗಳೆಯುವುದಿಲ್ಲ; ಆದರೆ ಪರಿಸರ ಮತ್ತು ಪೋಷಣೆಗೆ ಅಗ್ರಸ್ಥಾನ ನೀಡುತ್ತಾನೆ. ಒಂದು ಮರ ಅಥವ ಹೂವು ತಾನೆತಾನಾಗಿ ಸ್ವಾಭಾವಿಕವಾಗಿ ಬೆಳೆಯುತ್ತವೆ; ಅಡೆತಡೆಗಳನ್ನು ಹೋಗಲಾಡಿಸದರಷ್ಟೆ ಸಾಕು ಎಂಬ ರೂಸೋನ ನಿಲುವನ್ನು ಇವನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಅಧ್ಯಾಪಕ  ಒಬ್ಬ ಒಳ್ಳೆಯ  ತೋಟಗಾರನಂತೆ ಮಕ್ಕಳ ಬೆಳವಣಿಗೆಯನ್ನು ನಿರೀಕ್ಷಿಸುತ್ತಾ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕೆಂಬುದು ಇವನ ಅಭಿಪ್ರಾಯ.  
          ಮೆಕರೆಂಕೋನ ಪದ್ಧತಿಯಲ್ಲಿ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಕೆಲಸಕ್ಕೆ ಮಹತ್ವದ ಸ್ಥಾನ.  ಪ್ರತಿಯೊಬ್ಬ ವಿದ್ಯಾರ್ಥಿಗೆ ಶ್ರಮದ ಅಗತ್ಯವಿರುವ ಒಂದು ಕೆಲಸವನ್ನು ವಹಿಸಬೇಕು. ಮತ್ತು ಜವಾಬ್ದಾರಿಯ ಸ್ಥಾನಗಳನ್ನು ಕೊಡಬೇಕು. ಇದರಿಂದ ಮಕ್ಕಳು ತಮ್ಮ ಹಕ್ಕುಗಳು ಮತ್ತು ಸವಲತ್ತುಗಳಿಗಿರುವ ಪರಿಮಿತಿಗಳನ್ನು ತಿಳಿಯುತ್ತಾರೆ. ಅಧ್ಯಾಪಕರುಗಳೂ ಸ್ವಾರ್ಥರಹಿತವಾಗಿ ಗುರುತರವಾದ  ಕಾರ್ಯಗಳನ್ನು ವಹಿಸಿಕೊಂಡು ದುಡಿಯಬೇಕು. ಇದರಿಂದ ಮಕ್ಕಳ ದೃಷ್ಟಿಯಲ್ಲಿ ಅವರಿಗೆ ಸ್ವಾಭಾವಿಕವಾಗಿ ಗೌರವದ ಸ್ಥಾನ ದೊರಕುತ್ತದೆ. ಮಕ್ಕಳಿಗೆ ಪರಸ್ಪರ ಹಿತಕ್ಕಾಗಿ ಕೆಲಸಮಾಡುವುದು ಅಗತ್ಯ ಎಂಬ ಭಾವನೆ ಮೂಡುತ್ತದೆ. ಮಕ್ಕಳಿಗೆ ನಾವು ಇಷ್ಟನ್ನು ಉತ್ಪಾದಿಸಿದೆವೆಂಬ ಹೆಮ್ಮೆ ಇರಬೇಕೇ ಹೊರತು ಅವುಗಳನ್ನು ಹಂಚುವ ಬಳಸುವ ಮಾರಾಟಮಾಡುವ ಸಂಬಂಧಗಳಿರಬಾರದು. ನಮ್ಮ ಶಾಲೆಗಳಲ್ಲಿದ್ದ ಸಾಮಾಜಿಕ ಉಪಯುಕ್ತ ಉತ್ಪಾದಕ ಕೆಲಸ ಎಂಬ ಪರಿಕಲ್ಪನೆಯ ಮೂಲ ಇಲ್ಲಿದೆ.
          ಕಲಿಯುವ ವ್ಯಕ್ತಿಯಮೇಲೆ ಆದಷ್ಟೂ ಹೆಚ್ಚು ಕೆಲಸದ ಹೊರೆ ಹೊರಿಸಿ; ವ್ಯಕ್ತಿಯನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಗೌರವಿಸಿ. ಇದು ಅವನಿಗೆ ಕಲಿಯಲು ಪ್ರೋತ್ಸಾಹ ನೀಡುತ್ತದೆ. ವ್ಯಕ್ತಿ ಕಲೆಕ್ಟಿವ್-ದ ಸಾಮಾನ್ಯ ಒಳಿತಿಗನುಗುಣವಾಗಿ ಕೆಲಸ ಮಾಡುತ್ತಾನೆ. ಈ ರೀತಿಯ ವ್ಯಕ್ತಿಯ ಅಧೀನತೆ ವ್ಯಕ್ತಿಯ ಸ್ವತಂತ್ರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದಿಲ್ಲ.
ಹಿರಿಯರು ಅಂದರೆ ತಂದೆ ತಾಯಿಗಳು ಮತ್ತು ಅಧ್ಯಾಪಕರು ಮಕ್ಕಳಿಗೆ ಧನಾತ್ಮಕ ಮಾದರಿಗಳಾಗಿ ಪರಿಣಮಿಸುತ್ತಾರೆ. ಗಾರ್ಕಿ ಕಾಲೊನಿಯಲ್ಲಿ ಹಿರಿಯ ಮಕ್ಕಳೂ ಕಿರಿಯರ ಮೇಲೆ ನಿರ್ಣಾಯಕ ಪ್ರಭಾವ ಬೀರಿದ್ದಿದೆ. ತಮ್ಮನ್ನು ಸ್ವೀಕರಿಸುವ ಮತ್ತು ಉತ್ತೇಜಿಸುವ ಆರೈಕೆದಾರರು  ಮಕ್ಕಳ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಬಹುಮುಖ್ಯ. ಮಕ್ಕಳನ್ನು ನಾವು ಅಪರಾಧಿಗಳಂತೆ ನಡೆಸಿಕೊಂಡರೆ ಅವರು ಬಾಲಾಪರಾಧಿಗಳಾಗುತ್ತಾರೆ. ಅವರನ್ನು ಉತ್ತಮರಂತೆ ನಡೆಸಿಕೊಂಡರೆ ಸಹಜಸ್ವಭಾವದ ವ್ಯಕ್ತಿಗಳಾಗಿ ಬೆಳೆಯುತ್ತಾರೆ.
ಅನುಗಮನ ಪದ್ಧತಯಲ್ಲಿ ಕಲಿಸಬೇಕೆಂದು ಮೆಕರೆಂಕೊ ಪ್ರತಿಪಾದಿಸುತ್ತಾನೆ. ಅಂದರೆ ಉದಾಹರಣೆಗಳ ಮೂಲಕ ತತ್ವವೊಂದನ್ನು ನಿರೂಪಿಸುವ ಕ್ರಮ. ಇದೇ ಅಂತಿಮ ಮತ್ತು ಸಾರ್ವತ್ರಿಕ ಎಂಬುದು ಅವನಿಗೆ ಒಪ್ಪಿಗೆ ಇಲ್ಲ. ಅನುಗಮನವು ನಿಗಮನಕ್ಕೆ ಕೊಂಡಿ ಎಂಬುದು ಅವನ ಸಿದ್ಧಾಂತ. ‘ಅನುಭವವು ನಿಗಮನ ರೀತಿಯಲ್ಲಿ ತೆಗೆದುಕೊಂಡ ನಿರ್ಣಯಗಳಿಂದ ಬರುತ್ತದೆ’ ಎಂದು ಅವನು ಹೇಳುತ್ತಾನೆ. ಅಲ್ಲದೆ ಇವು ಮೊದಲಿಗೆ ಒದಗುವ ಪ್ರಾಥಮಿಕ ಅನುಭವಗಳನ್ನು ಮೀರಿರುತ್ತವೆ ಎನ್ನುತ್ತಾನೆ.. ಇಂದಿನ ಶಿಕ್ಷಣ ಪದ್ಧತಿಯಲ್ಲೂ ಈ ಕ್ರಮವನ್ನು ಅನುಸರಿಸುವುದನ್ನು ಕಾಣಬಹುದು.
ಬೇರೆ ಕೆಲವರಂತೆ ಮೆಕರೆಂಕೋಗೆ ಶಿಕ್ಷಣವೇ ಎಲ್ಲ ಅಲ್ಲ. ಶಿಕ್ಷಣವು ವ್ಯಕ್ತಿಯಲ್ಲಿ ಸೂಕ್ತ ಜೀವನ ಶೈಲಿಯನ್ನುಂಟು ಮಾಡುತ್ತದೆ. ಶಿಕ್ಷಣವು ಬದುಕಿಗೆ ಬೇಕಾದ ಕೌಶಲಗಳನ್ನು ವ್ಯಕ್ತಿಗೆ ನೀಡುತ್ತದೆ. ಆದುದರಿಂದ ಶಿಕ್ಷಣ ಮುಖ್ಯ. ಅವನ ಶಿಕ್ಷಣ ತತ್ವಗಳು ಇಂದಿನ ಆಚರಣೆಗಳ ಬಗ್ಗೆ ಆಳವಾದ ಪ್ರಭಾವ ಬೀರಿವೆ. ಇಂದಿಗೂ ಶಿಕ್ಷಣದ ವಿದ್ಯಾರ್ಥಿಗಳು ಮೆಕರೆಂಕೋನ ಕೃತಿಗಳಲ್ಲಿ ಅಮೂಲ್ಯ ವಿಚಾರಗಳನ್ನು ಕಾಣಬಹುದು.
[ಮೆಕರೆಂಕೊನ ಬಾಳ್ವೆಯ ದರ್ಶನ, ಮೆಕರೆಂಕೋನ ಜೀವನ ಮತ್ತು ತತ್ವಗಳ ಬಗ್ಗೆ ಜಿ ಎನ್ ಫಿಲೊನೊವ್ ಇವರ ಲೇಖನ, ತೆರ್ಜೆ ಹಾಲ್ವೊರ್ಸೆನ್ ಇವರ ಲೇಖನ, ಯುನೆಸ್ಕೊ ಪ್ರಕಟಣೆ  ಮತ್ತು ವಿಕಿಪೀಡಿಯಾಗಳನ್ನು ಆಧರಿಸಿದೆ]