ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಉಳ್ಳಾಲ ನರಸಿಂಗರಾಯರೆಂ ಒಬ್ಬ ವಿದ್ವಾಂಸರು ಕನ್ನಡ ಭಾಷಾ ಕೆಲಸವನ್ನು ಮಾಡಿದರು. ಅವರ ಕಿಸಮ್ ವಾರ್ ಗ್ಲೋಸರಿ ಆಫ್ ಕನ್ನಡ ವರ್ಡ್ಸ್ ಸಾಕಷ್ಟು ಜನಪ್ರಿಯವಾಗಿ ಖ್ಯಾತಿ ಪಡೆಯಿತು. ಎ ಹ್ಯಾಂಡ್ ಬುಕ್ ಆಫ್ ಕ್ಯಾನರೀಸ್ ಪ್ರೋವರ್ಬ್ಸ್ ಎಂಬ ಕಿರುಹೊತ್ತಗೆ ಕನ್ನಡ ಗಾದೆಗಳ ಪ್ರಥಮ ಸಂಗ್ರಹವಾಗಿದ್ದು ಅದರ ಕಿರು ಪರಿಚಯವನ್ನು ಇಲ್ಲಿ ನೀಡಬಯಸಿದ್ದೇನೆ:
ಇದೋ ನೋಡಿ
ಶತಮಾನ ಹಳೆಯ ಕನ್ನಡದ ಪ್ರಥಮ ಗಾದೆಗಳ ಸಂಗ್ರಹ
ನಮ್ಮ ಸಂಸ್ಕೃತಿಯಲ್ಲಿ ಗಾದೆಗಳಿಗೆ
ವೇದಗಳಿಗಿಂತ ಹಿರಿದಾದ ಸ್ಥಾನವನ್ನು ಕೊಟ್ಟಿದ್ದಾರೆ. ವೇದ ಸುಳ್ಳಾದರೂ ಗಾದೆ ಸುಳ್ಳಾದೀತೆ
ಎಂಬುದೂ ಒಂದು ಗಾದೆ
ತಾನೆ? ಗಾದೆಗಳ ಸಂಗ್ರಹ
ಜನಜೀವನದ
ಅಧ್ಯಯನಕ್ಕೆ ಒಂದು ದೊಡ್ಡ
ಆಕರವೇ ಸರಿ. ಅಮೂಲ್ಯ ಗಾದೆಗಳ ಸಂಗ್ರಹಗಳು ರಚನೆಯಾಗಿವೆಯಾದರೂ ಅವುಗಳ ಸಂಖ್ಯೆ ವಿರಳವೇ. ನಾನೀಗ
ಪರಿಚಯಿಸ ಹೊರಟಿರುವುದು ಕನ್ನಡದ ಪ್ರಥಮ ಗಾದೆಗಳ ಸಂಗ್ರಹವನ್ನು. ಇದೊಂದು ವಿಶಿಷ್ಟವಾದ ಸಂಗ್ರಹ. ಇದರಲ್ಲಿ
ಕನ್ನಡ ಗಾದೆಗಳನ್ನು ಮಾತ್ರ ಸಂಗ್ರಹಿಸಿರುವುದಲ್ಲ; ಪ್ರತಿಯೊಂದು ಗಾದೆಗೆ ಇಂಗ್ಲಿಷಿನಲ್ಲಿರುವ ಸಮಾನ
ಗಾದೆಗಳನ್ನು ನೀಡಿದ್ದಾರೆ. ಉದಾಹರಣೆಗೆ “ತಾನು ಬೂದಿ ತಿನ್ನುತ್ತಾನೆ ಪರರಿಗೆ ಹಿಟ್ಟು ಕೊಟ್ಟಾನೆ?”
ಎಂಬ ಕನ್ನಡ ಗಾದೆಯನ್ನು ಉಲ್ಲೇಖಿಸಿ ಇಂಗ್ಲಿಷಿನಲ್ಲಿ ಅದನ್ನು ಹೀಗೆ ಅನುವಾದಿಸಿ ಕೊಡಲಾಗಿದೆ: “He
can give little to his servant who licks his own trencher” (
ಪು, 31). ಇದರಿಂದಾಗಿ
ನಮಗೆ ಬೇಕಾದಾಗ ಬೇಕಾದ ಗಾದೆಯನ್ನು ಹುಡುಕಿಕೊಂಡು ಅದರ ಇಂಗ್ಲಿಷ್ ಸಮಾನವನ್ನು ತಿಳಿದುಕೊಳ್ಳುವುದು
ಸುಲಭಸಾಧ್ಯವಾಗಿದೆ. ಸಂಭಾಷಣೆಗಳಲ್ಲಿ ಬಂದ ಗಾದೆ ಇರಲಿ ಬರಹಗಳಲ್ಲಿ ಬಂದ ಗಾದೆ ಇರಲಿ ಇದನ್ನು ಬಳಸಿ
ಅರ್ಥಮಾಡಿಕೊಳ್ಳಬಹುದು. ಅಥವ ಅಂತಹ ಸಂದರ್ಭಗಳಲ್ಲಿ ಯಾವ ಗಾದೆಯನ್ನು ಬಳಸಬೇಕೆಂಬುದನ್ನು ನಿರ್ಧರಿಸಬಹದು.
ಒಂದು ಗಾದೆಗೆ ಸಮಾನವಾದ ಎರಡುಮೂರು ಇಂಗ್ಲಿಷ್ ಗಾದೆಗಳಿದ್ದರೆ
ಅವುಗಳನ್ನೂ ಎಲ್ಲ ಪಟ್ಟಿಮಾಡಿರುವುದು ಈ ಪುಸ್ತಕದ ಇನ್ನೊಂದು ಉಪಯುಕ್ತ ವೈಶಿಷ್ಟ್ಯ. ಉದಾಹರಣೆ: “ಒಂದು
ಸಾರಿ ಬಿದ್ದ ಬಾವಿಗೆ ಹಂದಿಯಾದರೂ ಬೀಳದು” ಎಂಬ ಕನ್ನಡ ಗಾದೆ ಈ ಪುಸ್ತಕದಲ್ಲಿದೆ. ಅದರ ಕೆಳಗೆ ಸಮಾನವಾದ
ನಾಲ್ಕು ಇಂಗ್ಲಿಷ್ ಗಾದೆಗಳ್ನು ನೀಡಲಾಗಿದ್ದು ಅವು ಹೀಗಿವೆ: “ Even an ass will not fall
twice on the same quicksand. Cf. Beware of the stone thou stumbledst before. It is a silly fish that is caught twice with
the same bait. It is my own fault if I am deceived by the same man twice.” (ಪು,
15). ಇದರಿಂದ ಓದುಗನಿಗೆ
ಕೃತಿ ಹೆಚ್ಚು ಉಪಯುಕ್ತವಾಗಿದೆ. ಎರಡು
ಅಥವ ಹೆಚ್ಚು ಕನ್ನಡ ಗಾದೆಗಳಿಗೆ ಒಂದು ಸಮಾನಾಂತರ ಇಂಗ್ಲಿಷ್ ಗಾದೆ ಇದ್ದರೆ ಆ ಎರಡೂ ಕನ್ನಡ ಗಾದೆಗಳನ್ನು
ಒಟ್ಟಿಗೆ ಕೊಟ್ಟು ಅದರ ಇಂಗ್ಲಿಷ್ ಸಂವಾದಿಯನ್ನು ನೀಡಿದ್ದಾರೆ. ಉದಾಹರಣೆ: “ ಹುಬ್ಬೆ ಮಳೇಲಿ
ಬಿತ್ತಿದರೆ ಹುಲ್ಲೂ ಇಲ್ಲ, ಕಾಳೂ ಇಲ್ಲ. ಕಂಡ ಹೊಲ ಮಾಡುವುದಕ್ಕಿಂತ ತುಂಡು ಹೊಲ ಮಾಡುವುದು ಲೇಸು.”
ಎಂಬಿವೆರಡಕ್ಕೆ ಸಂವಾದಿಯಾಗಿರುವದು “He who shows the highway tireth his oxen and
looseth his corn” ಎಂಬ ಇಂಗ್ಲಿಷ್ ಗಾದೆ.
ಇಲ್ಲಿ ಕನ್ನಡ
ಗಾದೆ ಗಳನ್ನೆಲ್ಲ ಕನ್ನಡ ಅಕ್ಷರಾದಿಕ್ರಮದಲ್ಲಿ ಜೋಡಿಸಿದ್ದಾರೆ. ಪುಸ್ತಕದ 61 ಪುಟಗಳಲ್ಲಿ ಈ ರೀತಿಯಲ್ಲಿ
ಗಾದೆಗಳು ಮತ್ತು ಅವುಗಳ ಇಂಗ್ಲಿಷ್ ರೂಪಗಳೂ ಇವೆ. ಕನ್ನಡ ಗಾದೆಗಳನ್ನು ಬಳಸಲು ಈ ಕ್ರಮ ಉಪಯುಕ್ತವಾಗಿರುವಂತೆಯೇ,
ಭಾಷೆ ಬಾರದವರು ಕನ್ನಡ ಗಾದೆಗಳನ್ನು ಇಂಗ್ಲಿಷಿನಲ್ಲಿ ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ. ಆದರೆ ಬೇಕಾದ
ಇಂಗ್ಲಿಷ್ ಗಾದೆಗಳ ಅರ್ಥವನ್ನು ಕನ್ನಡದಲ್ಲಿ ತಿಳಿಯಲು ಇದರಿಂದ ಸಹಾಯವಾಗುವುದಿಲ್ಲ. ಆದ್ದರಿಂದ 62ರಿಂದ 84ರ ವರೆಗಿನ ಪುಟಗಳಲ್ಲಿ ಪುಸ್ತಕದ ಮುಖ್ಯ ಭಾಗದಲ್ಲಿ
(ಅಂದರೆ ಮೊದಲ 61 ಪುಟಗಳಲ್ಲಿ) ಬಂದಿರುವ ಎಲ್ಲ ಇಂಗ್ಲಿಷ್ ಗಾದೆಗಳನ್ನು ಇಂಗ್ಲಿಷ್ ಅಕ್ಷರಾದಿಕ್ರಮದಲ್ಲಿ
ಜೋಡಿಸಿದ್ದಾರೆ. ಇದರಿಂದಾಗಿ ನಮಗೊಂದು ಅರ್ಥವಾಗದ ಇಂಗ್ಲಿಷ್ ಗಾದೆ ಎದುರಾದರೆ ಅದನ್ನು ಪುಸ್ತಕದ ಮುಖ್ಯ
ಭಾಗದಲ್ಲಿ ಹುಡುಕಿಕೊಂಡು ಅದರ ಕನ್ನಡ ರೂಪವನ್ನು ಕಂಡುಕೊಳ್ಳುವುದೂ ಸಾಧ್ಯವಾಗುತ್ತದೆ.
ಇಷ್ಟೊಂದು
ಉಪಯುಕ್ತವಾದ ಇದರ ಹೆಸರು ಮಾತ್ರ ಇಂಗ್ಲಿಷಿನಲ್ಲಿದೆ: A Hand Book of Canarese Proverbs
with English Equivalents ಎಂಬುದಾಗಿ. ಇದರ ಲೇಖಕರು ಉಳ್ಳಾಲ ನರಸಿಂಗರಾವ್ ಇವರು. S
V C K ಪ್ರೆಸ್ ಮದ್ರಾಸು ಇಲ್ಲಿ 1906ರಲ್ಲಿ
ಮುದ್ರಿತವಾಗಿರುವಂತೆ ಇದರ ಕೊನೆಯ ಪುಟದಲ್ಲಿ (ಪು,84)
ಉಲ್ಲೇಖವಿದೆ. ಆದರೆ ಮೊದಲ ಪುಟದಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಬುಕ್ ಅಂಡ್ ಟ್ರ್ಯಾಕ್ ಡಿಪಾಸಿಟರಿಯಿಂದ
1912ರಲ್ಲಿ ಪ್ರಕಟವಾದಂತೆ
ಮುದ್ರಿಸಿದೆ. ಬಹುಶಃ ಮೊದಲ ಮುದ್ರಣ 1906ರಲ್ಲಾಗಿದ್ದು
ಎರಡನೆಯ ಮುದ್ರಣ 1912ರಲ್ಲಾಗಿರಬಹುದು
ಮತ್ತು ಎರಡನೆಯದು ಮಂಗಳೂರಿನ ಬಾಸೆಲ್ ಮಿಶನ್ನಿನಿಂದ ಪ್ರಕಟವಾಗಿರಬಹುದು. ಪುಸ್ತಕದ ಅಂದಿನ ಬೆಲೆ
4 ಆಣೆಗಳು. ಅಂದಿನ ನಾಲ್ಕಾಣೆ ಪುಸ್ತಕ ಇಂದಿಗೂ ಅಮೂಲ್ಯವಾಗಿದೆ. ಈ ಪ್ರಥಮ ಗಾದೆಗಳ ಸಂಗ್ರಹಕ್ಕೆ ಈಗ
ಒಂದು ನೂರು ವರ್ಷಗಳಿಗೂ ಮಿಕ್ಕು ಸಂದಿವೆ. ಅಷ್ಟು
ಹಿಂದೆಯೇ ಇಂತಹ ಲಭ್ಯವಿದ್ದ ಗಾದೆಗಳನ್ನೆಲ್ಲ ಸಂಗ್ರಹಿಸಿಕೊಟ್ಟ ಕೀರ್ತಿ ಮತ್ತು ಅದನ್ನು ಪ್ರಕಟಿಸಿದ ಕೀರ್ತಿ ಮಂಗಳೂರಿನ ಉಳ್ಳಾಲದ
ನರಸಿಂಗರಾಯರಿಗೆ ಮತ್ತು ಬಾಸೆಲ್ ಮಿಶನ್ನಿಗೆ ಸಲ್ಲುತ್ತದೆ
ಎಂಬುದು ಹೆಮ್ಮೆಯ ವಿಷಯ.
ಇದು ಕನ್ನಡದ ಗಾದೆಗಳ ಪ್ರಥಮ
ಸಂಗ್ರಹ. ಇದರಲ್ಲಿ 607 ಗಾದೆಗಳಿವೆ. ಆಸಕ್ತರಿಗೆ ಒಳ್ಳೆಯ ಆಹಾರ ಇಲ್ಲಿದೆ. ಇಲ್ಲಿರುವ ಗಾದೆಗಳಲ್ಲಿ
ಬೇರೆ ಬೇರೆ ಅಕ್ಷರಗಳಿಂದ ಪ್ರಾರಂಭವಾಗುವುಗಳ ಸಂಖ್ಯೆ ಹೀಗಿವೆ: ಅಕಾರದಿಂದ ಪ್ರಾರಂಭವಾಗುವುವು – 42 (1ರಿಂದ 42), ಆಕಾರದಿಂದ ಪ್ರಾರಂಭವಾಗುವುವು – 38 (43-70), ಇಕಾರದಿಂದ -
17 (71-87), ಈಕಾರದಿಂದ - 1 (89), ಉಕಾರದಿಂದ - 19 (90-108), ಊಕಾರದಿಂದ - 7 (109-115), ಎಕಾರದಿಂದ – 21( 88 ಮತ್ತು 116-135), ಏಕಾರದಿಂದ - 2 (136-137), ಒಕಾರದಿಂದ - 14 (138-151), ಓ - 3 (152-154), ಕ - 80 (155-234), ಖ - 1 (235), ಗ - 14 (236-249), ಚ - 8 ( 250-257), ಜ -12 (258-269), ಠ - 1 (270), ತ- 47 (271-317), ದ- 9 (318-326), ಧ - 4 (327-330), ನ- 32 ( 331-362), ಪ- 9 (363-371), ಫ-1 (372), ಬ - 44 (373-
416), ಭ -3 (417-419), ಮ- 57 (420-476), ಯ- 4 (477-480), ರ - 1 (481), ಲ - 3 (482-484), ವ - 5 (485-489), ಶ - 8 (490-497), ಸ - 28 (498-525),
ಹ - 82 (526-607).
ಇವುಗಳನ್ನು ನೋಡಿದರೆ
ಋವರ್ಣದಿಂದ ಗಾದೆಗಳಿಲ್ಲದಿರುವುದು, ಮಹಾಪ್ರಾಣಾಕ್ಷರಗಳಿಂದ ಕ್ವಚಿತ್ತಾಗಿ ಮಾತ್ರ ಇರುವುದು, ಹಳಗನ್ನಡದ
ಪಕಾರ ಹಕಾರವಾಗಿರುವುದರಿಂದ ಹಕಾರದಿಂದ ಪ್ರಾರಂಭವಾಗುವ ಹಲವು ಗಾದೆಗಳಿರುವುದು – ಇಂತಹ ಕನ್ನಡ ಬಾಷೆಯ
ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಹೀಗೆ ಸಾಂಸ್ಕೃತಿಕವಾಗಿ
ಮಾತ್ರವಲ್ಲ; ಭಾಷಾ ಅಧ್ಯಯನ ದೃಷ್ಟಿಯಿಂದಲೂ ಇದೊಂದು ಮುಖ್ಯ ಕೃತಿ. ಪರಿಮಿತವಾದುದೇ ಆದರೂ ಇಂತಹ ಒಂದು ಆಕರ 1906ರಲ್ಲೇ ರಚಿತವಾಯಿತೆಂಬುದು ಗಮನಾರ್ಹ
ವಿಷಯ.