Search This Blog

Tuesday, 15 March 2016

ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು


ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು
                                                

ಕಾಲವೊಂದಿತ್ತು. ಕಾವ್ಯಾಭ್ಯಾಸಕ್ಕೆ ತೊಡಗುವವರು ಮೊದಲಿಗೆ ನಿಘಂಟುಗಳನ್ನು ಬಾಯಿಪಾಠ ಕಲಿತು ಪದಗಳ ಅರ್ಥವನ್ನು ತಿಳಿದುಕೊಂಡು ಸಾಗಬೇಕಿತ್ತು. ಕಲಿಯಲು ಅನುಕೂಲವಾಗುವಂತೆ ನಿಘಂಟುಗಳು ಪದ್ಯರೂಪದಲ್ಲಿರುತ್ತಿದ್ದವು; ಐದಾರು ಪುಟಗಳಷ್ಟೆ ವಿಸ್ತಾರದವಾಗಿದ್ದು ರೂ ಹೊಡೆಯುವುದು ಸುಲಭವೂ ಇರುತ್ತಿತ್ತು.
ಅನಂತರ  ಬಂತೊಂದು ನಿಘಂಟುಗಳ ಸುವರ್ಣಯುಗ. ಒಂಬತ್ತು ಶತಮಾನಗಳ ಕಾಲದಲ್ಲಿ ಇಪ್ಪತ್ತೈದು ನಿಘಂಟುಗಳ ರಚನೆಯಾಗಿದ್ದರೆ ಅದೊಂದೇ ಶತಮಾನದಲ್ಲಿ ಅಷ್ಟೇ ಸಂಖ್ಯೆಯ ನಿಘಂಟುಗಳು ಹುಟ್ಟಿಕೊಂಡವು. ಅವೂ ಆಧುನಿಕ ರೀತಿಯವು. ಹಿರಿಯ ಗಾತ್ರದವು. ಅಂತರ ರಾಷ್ಟ್ರೀಯ ಮಟ್ಟದ ವಿದ್ವತ್ತನ್ನು ಕನ್ನಡಕ್ಕೆ ಪರಿಚಯಿಸದವು. ಬಾಯಿಪಾಠ ಮಾಡಿ ನೆನಪಿಟ್ಟುಕೊಳ್ಳುವ ಕಷ್ಟವನ್ನು ತಪ್ಪಿಸಿ ಬೇಕಾದಾಗ ಉಪಯೋಗಿಸುವ ಸೌಲಭ್ಯವನ್ನು ಕಲ್ಪಿಸಿದವು. ಅವುಗಳಲ್ಲಿ ಶಿರೋಮಣಿಯ ರೀತಿಯದು ಕಿಟೆಲನ ನಿಘಂಟು. ಈ ನಿಘಂಟಿನಿಂದ ಕನ್ನಡ ಪದಗಳ ಅರ್ಥವನ್ನು ತಿಳಿಯಬಹುದಷ್ಟೇ ಅಲ್ಲ. ಪ್ರತಿಪದದ ಇತಿಹಾಸವನ್ನುಗುರುತಿಸಬಹುದು. ಇತರ ದ್ರಾವಿಡ ಭಾಷೆಗಳಲ್ಲಿ ಅದಕ್ಕೆ ಸಂವಾದಿಯಾಗಿರುವ ಪದಗಳನ್ನು ನೋಡಿ ಹೋಲಿಸಬಹುದು. ಪದದ ಭಾಷಾ ಮೂಲವನ್ನು ಕಾಣಬಹುದು. ಇಂತಹ ನಿಘಂಟು ಇನ್ನೊಂದು ಭಾಷೆಯಲ್ಲಿಲ್ಲವೆಂದು ಹೆಮ್ಮೆ ಪಡುತ್ತಾ ಮುಂದೆ ಬರುವುದೇ ಎಂಬ ಸಂದೇಹ ಕಾಣಿಸುತ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಎಂಟು ಸಂಪುಟಗಳಲ್ಲಿ ಪ್ರಕಟವಾಗಿದೆಯಾದರೂ ಅದು ಕನ್ನಡ-ಕನ್ನಡ ನಿಘಂಟು. ಅದರ ಎತ್ತರ, ಉಪಯೋಗ, ರಚನಾ ರೀತಿ ಎಲ್ಲ ಬೇರೆ. ಕನ್ನಡ ನಿಘಂಟು ಕ್ಷೇತ್ರದಲ್ಲಿ ಅದು ಹೊಸ ಆಯಾಮವನ್ನೇ ಸೃಷ್ಟಿಸಿದೆಯಾದರೂ ಕಿಟೆಲನ ನಿಘಂಟಿನಂತೆ ಕನ್ನಡ-ಇಂಗ್ಲಿಷ್ ನಿಘಂಟಲ್ಲ.
ಈಗ ಬಂದಿದೆ ಇನ್ನೊಂದು ಕನ್ನಡ-ಇಂಗ್ಲಿಷ್ ನಿಘಂಟು. ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದಿಂದ. ಇದರ ಹೆಸರು ಕನ್ನಡ-ಇಂಗ್ಲಿಷ್ ಎಟಿಮಲಾಜಿಕಲ್ ಡಿಕ್ಷನರಿ. ರಚಿಸಿದವರು ಎನ್ ಉಚಿಡ ಮತ್ತು ಬಿ ಬಿ ರಾಜಪುರೋಹಿತ್ ಇವರು. ಈ ಸರಣಿಯ ಸಂಪಾದಕರು ತಕಶಿಮ. ವಿದೇಶ ಅಧ್ಯಯನಗಳ ಟೋಕಿಯೋ ವಿಶ್ವವಿದ್ಯಾಲಯದ ಏಶ್ಯಾ ಮತ್ತು ಆಫ್ರಿಕಾಗಳ ಭಾಷೆ ಮತ್ತು ಸಂಸಕೃತಿಗಳ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಇದರ ರಚನೆ ಮತ್ತು ಪ್ರಕಟಣೆ. ಆಧುನಿಕ ಕಾಲಕ್ಕನುಗುಣವಾಗಿ ಇದು ಆನ್-ಲೈನಿನಲ್ಲಿ ಪಿಡಿಎಫ್ ರೂಪದಲ್ಲಿ ಲಭ್ಯ. ಅಂಗಡಿಗೆ ಹೋಗಿ ಖರೀದಿಸಬೇಕೆಂಬ ಅಥವ ಲೈಬ್ರರಿಗೆ ಹೋಗಿ ಪರಾಮರ್ಶಿಸಬೇಕೆಂಬ ಗೋಜೇ ಇಲ್ಲ. ಆಲಸ್ಯಕ್ಕೆ ಇನ್ನೆಡೆ ಎಲ್ಲಿ? ನಿಮ್ಮಲ್ಲೊಂದು ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ಡಾಟಾ ಇದ್ದರೆ ಈಗಲೇ ನೀವು ಈ ನಿಘಂಟನ್ನು ನೋಡಬಹುದು.
ಗ್ರಂಥದಲ್ಲಿರುವ ಪುಟಗಳ ಸಂಖ್ಯೆ 1036. ಇದರಲ್ಲಿ ಮೊದಲ ಇಪ್ಪತ್ತಮೂರು ಪುಟಗಳಷ್ಟು ಪೀಠಿಕೆ ಇದೆ. ಇಲ್ಲಿರುವ ವಿವರಗಳಿಂದ ನಿಘಂಟಿನ ಒಟ್ಟಾರೆ ಶೈಲಿಯಲ್ಲಿ ಕಿಟೆಲನನ್ನು ಅನುಸರಿಸಿರುವುದು, ಪದಗಳ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟನ್ನನುಸರಿಸಿ ಸಿದ್ಧಪಡಿಸಿರುವುದೂ ತಿಳಿಯುತ್ತದೆ. ಅಲ್ಲದೆ ಈ ಪೀಠಿಕೆ ತುಂಬ  ವಿಶಿಷ್ಟ ಮತ್ತು ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ.
ಪ್ರಾರಂಭದಲ್ಲಿ ಕನ್ನಡ ನಿಘಂಟುಗಳ ಒಂದು ಸಂಕ್ಷಿಪ್ತ ಚರಿತ್ರೆಯನ್ನು ನೀಡಲಾಗಿದೆ. ಅನಂತರ ಕನ್ನಡ ಭಾಷಾ ಶಾಸ್ತ್ರ ಕ್ಷೇತ್ರದಲ್ಲಾದ ಕೆಲವು ಬೆಳವಣಿಗೆಗಳನ್ನು ಚರ್ಚಿಸಲಾಗಿದೆ. ಬರೋ-ಎಮಿನೋ ಇವರ ದ್ರವಿಡಿಯನ್ಎಟಿಮೊಲಾಜಿಕಾಲ್ ಡಿಕ್ಷನರಿ, ಕಿಟೆಲನ ಕನ್ನಡ-ಇಂಗ್ಲಿಷ್ ನಿಘಂಟು, ಇದರ ಮರಿಯಪ್ಪಭಟ್ ಪರಿಷ್ಕರಣ ಇವುಗಳ ವೈಶೀಷ್ಟ್ಯಗಳನ್ನು ಚರ್ಚಿಸಿದ್ದಾರೆ. ಹಳಗನ್ನಡ ಕಾಲದಲ್ಲಿ ಪ್ರಚಲಿತವಿದ್ದ ಕನ್ನಡದ ೆರಡು ವಿಶಿಷ್ಟ ಅಕ್ಷರಗಳು: ‘ಶಕಟ ರೇಫೆ’ ಮತ್ತು ‘ರಳ’ಗಳು. ಹಲವು ಜನಪ್ರಿಯ ನಿಘಂಟುಗಳಲ್ಲಿ ಈ ಅಕ್ಷರಗಳ ಬದಲಾಗಿ ಇಂದಿನ ಕನ್ನಡದಲ್ಲಿ ಅವುಗಳ ಸ್ಥಾನದಲ್ಲಿ ನಾವು ಬಳಸುವ ‘ರ’ ಮತ್ತು ‘ಳ’ಗಳನ್ನೇ ಉಪಯೋಗಿಸಿರುತ್ತಾರೆ. ಆದರೆ ಕಿಟೆಲ್ ನಿಘಂಟಿನಲ್ಲಿ ‘ರಳ’ಯುಕ್ತ ಪದಗಳನ್ನು ಆ ಅಕ್ಷರವನ್ನೇ ಬಳಸಿ ಉಲ್ಲೇಖ ಪದಗಳನ್ನಾಗಿನೀಡಿದ್ದಾನೆ.   ಆದ್ದರಿಂದ ನಾವು ಹೇಳುವಂತೆ ‘ಪೊಳಲು’ ಎಂಬ ಪದದ ಅರ್ಥವನ್ನು ಹುಡುಕಲು ಹೋದರೆ ಈ ಪದ ಅದರ ಸ್ಥಾನದಲ್ಲಿ ದೊರಕುವುದಿಲ್ಲ. ಅಪರೂಪಗಳೆಂದು ಪರಿಗಣಿಸಿ ಪ್ರತ್ಯೇಕವಾಗಿ ಉಲ್ಲೇಖಿಸಿರುವುದಿಲ್ಲ. ಅದರ ರಳಯುಕ್ತ ಪದವನ್ನು ಹುಡುಕಿಕೊಂಡು ಅರ್ಥ ತಿಳಿಯಬೇಕಾಗುತ್ತದೆ. ಇದು ನಿಘಂಟನ್ನು ಬಳಸುವವರಿಗೆ ಸ್ನೇಹಿಯಾಗಿಲ್ಲವೆಂಬುದು ಪ್ರಸ್ತುತ ಕನ್ನಡ-ಇಂಗ್ಲಿಷ್ ಎಟಿಮಲಾಜಿಕಲ್ ಡಿಕ್ಷನರಿಯ ಸಂಕಲನಕಾರರ ಅಭಿಪ್ರಾಯ. ಆದ್ದರಿಂದ ಅಂತಹ ಪದಗಳನ್ನೂ ಪ್ರತ್ಯೇಕ ಉಲ್ಲೇಖಪದಗಳನ್ನಾಗಿಯೇ ನೀಡಿರುವುದಾಗಿ ತಿಳಿಸಿದ್ದಾರೆ. ಇಪ್ಪತ್ತನೆಯ ಶತಮಾನದ ಪ್ರಮುಖ ನಿಘಂಟುಗಳನ್ನು ಹೆಸರಿಸಿ ನಿಘಂಟಿನ ಬೆಳವಣಿಗೆಯ ಹೆಜ್ಜೆಗಳನ್ನು ಗುರುತಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟನ್ನು ಬೇರೆಯಾಗಿ ಉಲ್ಲೇಖಿಸಿ, ಈ ನಿಘಂಟಿನ ಪದಪಟ್ಟಿಯನ್ನೇ ತಮ್ಮ ನಿಘಂಟಿನಲ್ಲಿ ಅನುಸರಿಸಿರುವುದಾಗಿ ತಿಳಿಸಿದ್ದಾರೆ.
ಇದೊಂದು ಕನ್ನಡ-ಇಂಗ್ಲಿಷ್ ನಿಘಂಟು. ಇದರಲ್ಲಿ ಉಲ್ಲೇಖ ಪದಗಳೆಲ್ಲ ಕನ್ನಡದವು, ಕನ್ನಡ ಲಿಪಿಗಳಲ್ಲೇ ಮುದ್ರಿತ. ಪದ ಜೋಡಣೆಗೆ ಕನ್ನಡ ಅಕ್ಷರಾನುಕ್ರಮವನ್ನೇ ಅನುಸರಿಸಿದೆ. ಅನಂತರ ಸಾಮಾನ್ಯ ಆಂಗ್ಲ ಭಾಷೆಯಲ್ಲಿ ಅದರ ಲಿಪ್ಯಂತರವನ್ನು ನೀಡಿದ್ದಾರೆ. ಅನುಸರಿಸಿ ಅಂತರ ರಾಷ್ಟ್ರೀಯ ಧ್ವನಿಶಾಸ್ತ್ರದಲ್ಲಿ ಅನುಸರಿಸುವ ಅಕ್ಷರಗಳಲ್ಲಿ ಪದದ ಉಚ್ಚಾರವನ್ನು ಸೂಚಿಸಿದ್ದಾರೆ. ಇಂಗ್ಲಿಷಿನಲ್ಲಿ ಪದದ ಅರ್ಥ,ಪದದ ಭಾಷಾಮೂಲ, ಅಲ್ಲಿ ಅದರ ರೂಪ – ಇವುಗಳು ಸೂಚಿತವಾಗಿವೆ. ಉದಾಹರಣೆಗಾಗಿ: “ಕುಸ್ತಿ kusti [kusti] n. (sports) wrestling [Pe. kušt¯ı].”  “ಮೇಜು m¯eju [me:dzu] ಮೇಜ n. (furn) table, desk [Pe. m¯ez]”. ಇವುಗಳಲ್ಲಿ ಮೊದಲನೆಯದನ್ನು ನೋಡಿದರೆ ‘ಕುಸ್ತಿ’ ಎಂಬ ಪದವು ಕ್ರೀಡಾ ಕ್ಷೇತ್ರದಲ್ಲಿ ಬಳಕೆಯಾಗುವ ಪದವೆಂಬುದೂ ಆ ಪದವು ಪೋರ್ಚುಗೀಸ್ ಮೂಲದ್ದೆಂಬುದೂ ಸ್ಪಷ್ಟವಾಗುತ್ತದೆ. (ಆದರೆ ಈ ಪದದ ಆಲಂಕಾರಿಕ ಅರ್ಥಗಳನ್ನು ನಿಡಿಲ್ಲದಿರುವುದು ಈ ನಿಘಂಟಿನ ಪರಿಮಿತಿ). ಹಾಗೆಯೇ ಮೇಜು ಎಂಬುದು ಪೀಠೋಪಕರಣಗಳಿಗೆ ಸಂಬಂಧಿಸಿದ್ದು ಪೋರ್ಚುಗೀಸ ಮೂಲದ್ದಾಗಿದೆ. ಈ ಪದಗಳನ್ನು ಕನ್ನಡಿಗರು ಹೇಗೆ ಉಚ್ಚರಿಸುತ್ತಾರೆಂಬುದೂ ಆವರಣದಲ್ಲಿ ಕೊಟ್ಟಿರುವ ಬರಹದಿಂದ ತಿಳಿಯುತ್ತದೆ. ಇನ್ನೆರಡು ಉದಾಹರನೆಗಳನ್ನು ನೋಡಿ: “ಗದ್ದೆ gadde [g@dde] n. (agr.)paddy field (or any agricultural field with standing water) [Ka. D1355]”   “ಕುಹಕಿ kuhaki [kuh@ki] mf. (cheat) 1 cheat, trickster,impostor 2 magician, juggler, conjurer [Sk. kuhaka-+ Ka -i].” ಇಲ್ಲಿ ಮೊದಲು ಹೇಳಿದ ವಿವರಗಳಲ್ಲದೆ ಹೆಚ್ಚುವರಿಯಾಗಿ ಒಂದೆರಡು ಅಂಶಗಳನ್ನು ಸೇರಿಸಿದ್ದಾರೆ. ಗದ್ದೆ ಎಂಬುದು ಕನ್ನಡದ್ದೇ ಪದ ಮತ್ತು ಈ ಪದವನ್ನು ಈ ಹಿಂದೆ ಬರೋ-ಎಮಿನೋ ಸಂಕಲಿಸಿದ ದ್ರವಿಡಿಯನ್ ಎಟಿಮಲಾಜಿಕಲ್ ನಿಘಂಟಿನಲ್ಲಿ ಉಲ್ಲೇಖಿಸಿದ್ದಾರೆ ಎಂಬುದು ಇಲ್ಲಿರುವ ಮೊದಲ ಉದಾಹರಣೆಯಿಂದ ತಿಳಿಯುತ್ತದೆ. ಹಾಗೆಯೇ ‘ಕುಹಕಿ’ ಎಂಬುದು ಸಂಸ್ಕೃತ ಪದ ಎಂಬ ಮಾಹಿತಿಯ ಜೊತೆಗೆ ಇದು ‘ಕುಹಕ’ ಎಂಬ ಸಂಸ್ಕೃತಪದಕ್ಕೆ ‘ಕಿ’ ಎಂಬ ಕನ್ನಡ ಪ್ರತ್ಯಯ ಸೇರಿ ಆಗಿದೆ ಎಂಬ ನಿಷ್ಪತ್ತಿಯನ್ನು ಸೂಚಿಸಿದ್ದಾರೆ. ಆದ್ದರಿಂದಲೇ ತಮ್ಮ ಕೃತಿಯನ್ನು ಸಂಕಲನಕಾರರು ಎಟಿಮಲಾಜಿಕಲ್ ನಿಘಂಟು ಎಂದು ಕರೆದಿದ್ದಾರೆ.
            ಈ ನಿಘಂಟನ್ನು ಸಾಮಾನ್ಯ ರೀತಿಯಲ್ಲಿಯೂ ಬಳಸಬಹುದು. ಅಂದರೆ ಪದಗಳ ಅರ್ಥ ನೋಡುವುದಕ್ಕಾಗಿ ಅಥವ  ಪದದ ಅಂಗಪದಗಳನ್ನು ಅಥವ ಪದ-ಪ್ರತ್ಯಯಗಳನ್ನು ತಿಳಿಯಲು ಉಪಯೋಗಿಸಬಹುದು. ವಿದ್ವತ್ಕಾರ್ಯಕ್ಕಾಗಿಯೂ ಬಳಸಬಹುದು: ಹಿಂದಿನ ನಿಘಂಟುಗಳಲ್ಲಿ ಬಂದಿರದೆ ಮೊದಲ ಬಾರಿಗೆ ಇಲ್ಲಿ ದಾಖಲಾಗಿರುವ ಪದಗಳಾವುವು, ಕನ್ನಡಕ್ಕೆ ಇತರ ಭಾಷೆಗಳಿಂದ ಬಂದಿರುವ ಪದಗಳಾವುವು, ಕನ್ನಡದ್ದೇ ಪದಗಳಾವುವು ಪದಗಳ ಸ್ಥೂಲ ಚರಿತ್ರೆ ಏನು – ಇಂತಹ ವಿವರಗಳೆಲ್ಲ ಇಲ್ಲಿ ಲಭ್ಯ. ಒಟ್ಟಿನಲ್ಲಿ ಪಂಡಿತರಿಗೂ, ಇಂಗ್ಲಿಷ್ ಬಲ್ಲ ಪಾಮರರಿಗೂ ಉಪಯುಕ್ತವಾದ ನಿಘಂಟಿದು.






Friday, 11 March 2016

ಕನ್ನಡ ನಿಘಂಟುಗಳ ವರ್ಗೀಕರಣದತ್ತ

 ನಿಘಂಟುಗಳ ವರ್ಗೀಕರಣ ನಿಘಂಟು ಶಾಸ್ತ್ರದ  ಒಂದು ನುಖ್ಯ ಅಂಗ. ಕನ್ನಡ ನಿಘಂಟುಗಳ  ಒಂದು ಸಮಗ್ರ ವರ್ಗೀಕರಣಕ್ಕೆ ಇಲ್ಲಿ ಪ್ರಯತ್ನಿಸಲಾಗಿದೆ:

                                             ಕನ್ನಡ ನಿಘಂಟುಗಳ ವರ್ಗೀಕರಣದತ್ತ
               
ಯಾವುದೇ ಶಾಸ್ತ್ರದಲ್ಲಿ ವಸ್ತುವಿಸ್ತಾರವಾದಂತೆ ವರ್ಗೀಕರಣವು ಒಂದು ಅನಿವಾರ್ಯ ಪ್ರಕಾರ್ಯು.ಭಾಷೆಗೆ ಸಂಬಂಧಿಸಿದಂತೆ ವಾಕ್ಯಗಳ ವರ್ಗೀಕರಣ, ಪದ-ಪ್ರ್ಯಯಗಳ ವರ್ಗೀಕರಣ, ಇತ್ಯಾದಿ ಎಷ್ಟೋ ಅಂಶಗಳು ಮೊದಲಿನಿಂದಲೇ ಖ್ಯಾತವಾಗಿವೆ. ಸಾಹಿತ್ಯಪ್ರಕಾರಗಳ ವರ್ಗೀಕರಣ, ಛಂದಸ್ಸುಗಳ ವರ್ಗೀಕರಣ, ಗಣಗಳ ವರ್ಗೀಕರಣ – ಹೀಗೆ ಅಧ್ಯಯನಾನುಕುಲೀ ವರ್ಗೀಕರಣಗಳು ಎಲ್ಲ ಶಾಸ್ತ್ರಗಳಲ್ಲೂ ಇವೆ. ನಿಘಂಟು ಶಾಸ್ತ್ರವೂ ಇದಕ್ಕೆ ಹೊರತಲ್ಲ. ವ್ಯಾಕರಣಗಳಲ್ಲಿ ಕಂಡುಬರುವ ಪದ-ಪ್ರತ್ಯಯ ವರ್ಗೀಕರಣಗಳನ್ನು ನಿಘಂಟುಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ನಿಘಂಟುಗಳ ಸಂಖ್ಯೆ ಬೆಳೆದಂತೆ ಮತ್ತು ವೈವಿಧ್ಯ ಹೆಚ್ಚಾದಂತೆ ನಿಘಂಟುಗಳ ವರ್ಗೀಕರಣ ಮತ್ತು ಪ್ರತಿಯೊಂದು ವಿಧದ ಲಕ್ಷಣನಿರ್ವಚನ ಅಗತ್ಯ ಮತ್ತು ಮುಖ್ಯವಾಗುತ್ತದೆ. ಪ್ರಪಂಚದ ಇತರೆಡೆಗಳಲ್ಲಿ ಪ್ರಥಮ ನಿಘಂಟುಗಳ ರಚನೆಯಾದ ಕಾಲಕ್ಕೂ ಕನ್ನಡದಲ್ಲಿ ಅವು ಜನ್ಮ ತಳೆದ ಕಾಲಕ್ಕೂ ಅಜಗಜಾಂತರವಿದೆ. ಚೀಣೀಯರು ಮತ್ತು ಸುಮೇರಿಯನ್ನರಲ್ಲಿ ಕ್ರಿ ಪೂ ಶತಮಾನಗಳಷ್ಟು ಪ್ರಾಚೀನ ಕಾಲದಲ್ಲಿಯೇ ನಿಘಂಟುಗಳ ರಚನೆಯಾಗಿದ್ದಿತೆಂದು ಉಲ್ಲೇಖಗಳಿವೆ. ಇಂಗ್ಲೀಷಿನಲ್ಲಿ ಕ್ರಿ ಶ ಹದಿನೈದನೆಯ ಶತನಾನದಲ್ಲೇ ಪ್ರಥಮ ನಿಘಂಟುಗಳು ರಚನೆಯಾಗಿದ್ದವು (Dictionary in Wikipaedia). ಕನ್ನಡದಲ್ಲಿ ನಿಘಂಟು ಎಂಬ ನಾಮಮಾತ್ರಕ್ಕೆ ಅರ್ಹವಾದ ಕೃತಿಗಳು ಹತ್ತನೆಯ ಶತಮಾನದವರೆಗೆ ರಚನೆಯಾಗಲಿಲ್ಲ. ಇಲ್ಲಿಂದ ಮುಂದಿನ ಬೆಳವಣಿಗೆಯಲ್ಲಿ  ಐವತ್ತಕ್ಕೂ ಹೆಚ್ಚು ಸಂಖ್ಯೆಯ ಕನ್ನಡ ನಿಘಂಟುಗಳು ಬಂದಿವೆ, ವೈವಿಧ್ಯವೂ ಉಂಟಾಗಿದೆ. ಅವುಗಳಲ್ಲಿ ಹಲವು ಬಗೆಯವು ಇವೆಯಾದರೂ ಪ್ರತಿಯಂದು ವಿಧದಲ್ಲಿ ಕೃತಿಗಳ ಸಂಖ್ಯೆ ಗಣನೀಯವಾಗಿಲ್ಲ; ಕೆಲವು ವಿಭಾಗಗಳ್ಲಿ ಒಂದೊಂದು ಮಾತ್ರ ಇವೆ. ವ್ಯಕ್ತಿಗೆ ತನಗೊಂದು ಅರ್ಥಸಂಬಂಧೀ ಜ್ಞಾನದ ಕೊರತೆಯುಂಟಾದಾಗ ತಾನು ಆರಿಸಿಕೊಳ್ಳಬೇಕಾದ ನಿಘಂಟು ಯಾವುದು ಎಂಬದನ್ನು ನಿರ್ಧರಿಸುವುದಕ್ಕಾಗಿ ವರ್ಗೀಕರಣದ ಅವಶ್ಯಕತೆ (ಸ್ವಾನಪೋಲ್: ಪು, 44) ಎಂಬ ಅಭಿಪ್ರಾಯವಿದ್ದು ಇದು ವರ್ಗೀಕರಣಪೂರ್ವದಲ್ಲಿ ಗಣನೀಯ ಸಂಖ್ಯೆಯ ನಿಘಂಟುಗಳಿರುವುದನ್ನು ಅಪೇಕ್ಷಿಸುತ್ತದೆ. ಈ ದೃಷ್ಟಿಯಿಂದ ಕನ್ನಡದಲ್ಲಿನಿಘಂಟುವರ್ಗೀಕರಣಕ್ಕೆ ಕಾಲ ಪಕ್ವವಾಗಿಲ್ಲ ಎನಿಸಬಹುದಾದರೂ ನಿಘಂಟು ಶಾಸ್ತ್ರದಲ್ಲಿ ವಿಶ್ವದ ಇತರೆಡೆ ಆಗಿರುವ ಬೆಳವಣಿಗೆಗಳ ಜೊತೆ ಸಮನ್ವಯಗೊಳಿಸಿ ನಮ್ಮ ಭಾಷೆಯಲ್ಲಿ ಶಾಸ್ತ್ರವನ್ನು ಬೆಳೆಸುವ ದೃಷ್ಟಿಯಿಂದ ಇದು ಅನಿವಾರ್ಯ. ಇಂತಹ ಕಾರ್ಯದಿಂದ ಒಟ್ಟಾರೆ ನಿಘಂಟು ಶಾಸ್ತ್ರದಲ್ಲಿ ಕನ್ನಡದ ಸ್ಥಾನ ಎಲ್ಲಿದೆ ಎಂಬುದೂ ಇದರಿಂದ ಕನ್ನಡದಲ್ಲಿ ಬೆಳೆಸಬೇಕಾದ ಕ್ಷೇತ್ರಗಳಾವುವು ಎಂಬುದೂ ಸ್ಪಷ್ಟವಾಗುತ್ತವೆ; ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಪ್ರಯೋಗಗಳು ಅಧಿಕೃತಗೊಳ್ಳುತ್ತವೆ ಮತ್ತು ಸ್ಥಿರವಾಗುತ್ತವೆ. ನಿರ್ದಿಷ್ಟ ಸಂದರ್ಭವೊಂದರಲ್ಲಿ ಯಾವ ನಿಘಂಟನ್ನು ಆರಿಸಿಕೊಳ್ಳಬಹುದೆಂಬ ಬಗ್ಗೆಯೂ ಹೊಳಹುಗಳು ಸಿಗುತ್ತವೆ.
                ವಿಶ್ವಮಟ್ಟದಲ್ಲಿ ಕೂಡ ನಿಘಂಟು-ವರ್ಗೀಕರಣ ಪದ್ಧತಿಯು ಸರ್ವಸಮ್ಮತವಾಗಿ ಮತ್ತು ಏಕಪ್ರಕಾರವಾಗಿ ಬಳಕೆಯಾಗುತ್ತಿಲ್ಲ. ನಿಘಂಟುವರ್ಗೀಕರಣಕ್ಕಾಗಿ ಹಲವು ಮಾನದಂಡಗಳ್ನು ಬಳಸಲಾಗುತ್ತಿದ್ದು ವಿಭಿನ್ನ ಜಾಡಿನಲ್ಲಿ ವರ್ಗಗಳನ್ನು ನಿರ್ವಚಿಸಲಾಗುತ್ತಿದೆ. ಹಲವರು ಕಾಲಾನುಕ್ರಮ ವರ್ಗೀಕರಣ ಮಾದರಿಯನ್ನು ಅನುಸರಿಸಿ ಮೂರು ವರ್ಗಗಳನ್ನು ಹೀಗೆ ವಿವರಿಸುತ್ತಾರೆ: (1) ನಿಘಂಟು ಪೂರ್ವಯುಗ (2) ಮೊದಲ ನಿಘಂಟುಗಳ ಯುಗ ಮತ್ತು (3) ನಿಘಂಟುಗಳ ಅಭಿವೃದ್ಧಿಯುಗ. ಅಸ್ಪಷ್ಟವೆನಿಸುವ ಪದಗಳಿಗೆ ಅರ್ಥಸ್ಪಷ್ಟನೆಗಾಗಿ ಚಿಕ್ಕ ಕೋಶಿಕೆಗಳು ಪ್ರಥಮ ಅವಧಿಯಲ್ಲಿ ಹುಟ್ಟಿಕೊಂಡವು. ಎರಡನೆಯ ಅವಧಿಯಲ್ಲಿ ಸಾಹಿತ್ಯಿಕ ಭಾಷೆಯ ಅಧ್ಯಯನಕ್ಕೆ ಪೂರಕವಾದ ನಿಘಂಟುಗಳ ರಚನೆಯಾಯಿತು. ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ  ಈ ಪ್ರಕಾರ್ಯ ನಡೆಯಿತು. ಮೂರನೆಯ ಅವಧಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ನಿಘಂಟುಗಳ ರಚನೆ ಪ್ರಾರಂಭವಾಯಿತು. ಭಾಷೆಯ ಪದಗಳನ್ನು ಸ್ಥಿರಗೊಳಿಸಿ ಭಾಷಾಸಂಸ್ಕೃತಿಯ ಬೆಳವಣಿಗೆಯನ್ನು ಸಾಧಿಸುವುದು ಈ ಪ್ರಕ್ರಿಯೆಯ ಒಂದು ಕಾರ್ಯ. ಹತ್ತೊಂತ್ತು ಮತ್ತು ಇಪ್ಪತ್ತನೆಯ ಶತಮಾನದ ಆದಿ ಭಾಗ ನಿಘಂಟುಗಳ ಈ ಮಹತ್ವದ ಬೆಳವಣಿಗೆಯ ತಿರುಳುಕಾಲ. ಅನಂತರ ಇಪ್ಪತ್ತನೆಯ ಶತಮಾದಲ್ಲಿ ಚಾರಿತ್ರಿಕವಾಗಿ ಪದಗಳ ಬೆಳವಣಿಗೆ, ಪದಗಳ ನಿಷ್ಪತ್ತಿ, ಇತರ ಭಾಷಾ ಪದಗಳೊಂದಿಗೆ ಆಯಾ ಪದದ ಸಂಬಂಧ ಇಂತಹ ಆಯಾಮಗಳನ್ನು ಒಳಗೊಳಿಸಿಕೊಂಡು ಭಾಷಿಕ ಸಂಶೋಧನೆಗೆ ಸಹಾಯಕ ನಿಘಂಟುಗಳ ರಚನೆ ಪ್ರಸ್ತುತವಾಯಿತು(http://encyclopedia2.thefreedictionary.com/Metalexicography).
ಮೊದಲನೆಯ ಕಾಲಘಟ್ಟದಲ್ಲಿ ನಿಘಂಟುಗಳ ಸ್ವರೂಪವು ಈಗಿನಷ್ಟು ಸ್ಪಷ್ಟವಾಗಿರಲಿಲ್ಲ.ಪ್ರಾಚೀನ ಕಾವ್ಯೇತಿಹಾಸಗಳನ್ನು ಓದುವಾಗ ಸಾಲುಗಳ ನಡುವೆ ಬರೆದುಕೊಂಡ ಪದಗಳ ಅರ್ಥಗಳನ್ನು ಪ್ರತ್ಯೇಕವಾಗಿ                 ಸಂಗ್ರಹಿಸಲು ಪ್ರಾರಭಿಸಿದ್ದೇ ಮೊದಲ ನಿಘಂಟುಗಳಾದುವೆಂದು ಹೇಳುತ್ತಾರೆ (http://grammar.about.com/od/il/g/lexicogterm.htm). ಇಂಗ್ಲಿಷ್ ಮತ್ತು ಲ್ಯಾಟಿನ್ ನಿಘಂಟುಗಳಿಗೆ ಸಂಬಂಧಿಸಿ ಹೇಳುವ ಈ ಮಾತನ್ನು ಕನ್ನಡಕ್ಕೂ ಅನ್ವಯಿಸುವುದು ಉಚಿತವಲ್ಲವೆಂದು ತೋರುತ್ತದೆ. ಇಂತಹ ಪಾದಮಧ್ಯ ಪದಾರ್ಥಕೋಶಗಳು ಕನ್ನಡದಲ್ಲಿದ್ದುದಕ್ಕೆ ಸಾಕ್ಷ್ಯಾಧಾರಗಳೇನೂ ಇಲ್ಲದಿದ್ದು ಇಂತಹ ಪದ್ಧತಿ ಇಲ್ಲಿ ಇತ್ತೋ ಇಲ್ಲವೋ ಸಂದೇಹಾಸ್ಪದ. ಏಕೆಂದರೆ ಹಸ್ತಪ್ರತಿಗಳು ತಾಡಪತ್ರದವುಗಳಾಗಿದ್ದು ಸಾಲುಗಳ ಮಧ್ಯೆ ಕಂಟದಿಂದ ಕೊರೆಯುವ ಬರವಣಿಗೆ ಸುಲಭವಾಗಿರಲಿಲ್ಲ. ಸಾಲುಗಳ ನಡುವಣ ಅರ್ಥಕೋಶಗಳು ಕ್ರಿಸ್ತಪೂರ್ವ ಮೊದಲನೆಯ ಸಹಸ್ರಮಾನದಲ್ಲಿ ವೇದಗಳಿಗೆ ಇದ್ದುವೆಂಬ ಅಭಿಪ್ರಾಯವಿದೆಯಾದರೂ (ಮೇಲಿನದೇ ಅಂತರ್ಜಾಲತಾಣ) ವೇದಗಳದು ಕರ್ಣಾಕರ್ಣಿ ಸಂಪ್ರದಾಯವಾಗಿದ್ದು ಇಂತಹ ಪದಾರ್ಥ ಪಟ್ಟಿಗಳಿದ್ದವೆಂಬುದು ವಿವಾದಾತೀತವಲ್ಲ.
                ನಿಘಂಟುಗಳ ಯುಗವೆಂಬ ಎರಡನೆಯ ಕಾಲಘಟ್ಟದಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಅನುಕೂಲವಾಗುವಂತಹ ಸಂಕ್ಷಿಪ್ತ ಏಕಭಾಷಾ ನಿಘಂಟುಗಳ ರಚನೆಯಾದುವೆಂಬುದು ಕನ್ನಡದಲ್ಲಿಯೂ ಸ್ಪಷ್ಟವಾಗಿ ಕಂಡುಬರುವ ವಿದ್ಯಮಾನ. ಸಾಮಾನ್ಯವಾಗಿ ಹದಿನೆಂಟನೆಯ ಶತಮಾನದವರೆಗೆ ಎಂದು ಗುರುತಿಸಲ್ಪಡುವ ಈ ಘಟ್ಟ ಕನ್ನಡದಲ್ಲಿ ಹತ್ತೊಂಬತ್ತನೆಯ ಶತಮಾನದವರೆಗೂ ವಿಸ್ತೃತವಾಗಿತ್ತು. ಇಂತಹ ನಿಘಂಟುಗಳಲ್ಲಿ ಮೊದಲನೆಯದು ಖ್ಯಾತ ಕವಿ ರನ್ನನಿಂದ ರಚಿತವಾದ ರನ್ನಕಂದ . ಇದು ಕಂದರೂಪದಲ್ಲಿದೆ. ಅಪೂರ್ಣವಾಗಿದ್ದು ಉಪಲಬ್ಧವಿರುವಷ್ಟು ಭಾಗದಲ್ಲಿ ಒಂದು ನೂರ ಇಪ್ಪತ್ತಮೂರು ಪದಗಳಿವೆ. ಇಂತಹ ನಿಘಂಟುಗಳಲ್ಲಿ ಕೊನೆಯದು ಕ್ರಿ ಶ 1810ರಲ್ಲಿ ರಚಿತವಾದ ಶಬ್ದಾರ್ಥಮಂಜರಿ (ಸೀತಾರಾಮಯ್ಯ,1975 : ಪು 293). ಇಂತಹ ನಿಘಂಟುಗಳ ಸಂಖ್ಯೆ ಇಪ್ಪತ್ತರಷ್ಟಿದ್ದು “ಕಾವ್ಯಗಳನ್ನು ಕಲಿಯುವವರು ಇವುಗಳನ್ನು ರೂ ಹಾಕಿ ಪಾಠ ಮಾಡುತ್ತಾರೆ” ಎಂಬ ಗಂಗಾಧರೇಶ್ವರ ಮಡಿವಾಳೇಶ್ವರ ತುರಮುರಿಯವರ ಮಾತು (ಧಾರವಾಡಕರ,1975: 204-5 ಇಲ್ಲಿ ಉದ್ಧೃತ) ಸರಿಯಾಗಿದೆ. ಸಂಸ್ಕೃತದಲ್ಲಿ ಕಂಡುಬರುವ ಅಮರಕೋಶದಂತಹ ವ್ಯಾಪಕ ಮತ್ತು ಸಮಗ್ರ ರೀತಿಯ ನಿಘಂಟುಗಳು ಕನ್ನಡದಲ್ಲಿ ರಚನೆಯಾಗಲಿಲ್ಲವೆಂಬದು ವಿಪರ್ಯಾವೇ ಸರಿ. ಪಾಶ್ಚಾತ್ಯ ಜ್ಞಾನದ ಪ್ರಭಾವದನಂತರವೇ ವೈಜ್ಷಾನಿಕ ರೀತಿಯ ನಿಘಂಟುಗಳ ರಚನೆ ಕನ್ನಡದಲ್ಲಿ ಮೊದಲಾದುದು. ಈ ಮಧ್ಯದಲ್ಲಿ ಸುಧಾರಿತ ನಿಘಂಟುಗಳಲ್ಲಿ ಕಂಡುಬರುವ ಪದಪಟ್ಟಿಗಳ ತರಹದ ತುಂಬ ಪರಿಮಿತ ಸಂಖ್ಯೆಯ ಪದಗಳನ್ನೊಳಗೊಂಡ ಸಣ್ಣಪದಪಟ್ಟಿಗಳ  ರೂಪ ಶಬ್ದಮಣಿದರ್ಪಣ(ಕೇಶಿರಾಜ,1260)ದಲ್ಲಿ ಕಾಣಸಿಗುವುದು. ರಳ ಉಪಯೋಗಿಸಬೇಕಾದ ಪದಗಳನ್ನು ತೋರಿಸುವ ಒಂದು ಪಟ್ಟಿ, ಧಾತುಗಳ ಒಂದು ಪಟ್ಟಿ ಮತ್ತು ಪದಾರ್ಥಚಿಂತಾಮಣಿ ಎಂಬ ಕ್ಲಿಷ್ಟಪದಗಳ ಅರ್ಥಗಳನ್ನ ಹೇಳುವುದಕ್ಕಾಗಿಯೇ ಇರುವ ಒಂದು ಪಟ್ಟಿ ಹೀಗೆ ಪದಪಟ್ಟಿಗಳನ್ನು ಸಿದ್ಧಪಡಿಸುವ ಒಂದು ಅತಿಚಿಕ್ಕ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಶಬ್ದಮಣಿದರ್ಪಣದಲ್ಲಿ ಧಾತುಗಳ ಪಟ್ಟಿಯನ್ನು ಅಂತ್ಯಾಕ್ಷರ ಅಕಾರಾದಿಯಾಗಿ ಜೋಡಿಸಲಾಗಿದೆ. ಈ ಮೂರೂ ಪಟ್ಟಿಗಳಿಂದ ಒಟ್ಟು 1441 ಪದಗಳು ಮಾತ್ರ ಇಲ್ಲಿದ್ದು ಧಾತುಗಳಿಗೆ ಸಂಸ್ಕೃತ ಭಾಷೆಯಲ್ಲಿಅರ್ಥವಿದೆ; ಉಳಿದ ಪದಪಟ್ಟಿಗಳಲ್ಲಿರುವ ಪದಗಳಿಗೆ ಕನ್ನಡ ಪರ್ಯಾಯ ಪದಗಳನ್ನೇ ಅರ್ಥವನ್ನಾಗಿ ನೀಡಿದೆ. ಒಟ್ಟಾರೆಯಾಗಿ ಈ ನಿಘಂಟುಗಳಲ್ಲಿ ನಮೂದುಗಳ ವ್ಯಾಕರಣರೂಪದಲ್ಲಾಗಲೀ ಅರ್ಥನಿರೂಪಣೆಗಾಗಿ ಕೊಟ್ಟಿರುವ ಪರ್ಯಾಯಪದಗಳ ವ್ಯಾಕರಣರೂಪದಲ್ಲಾಗಲೀ ಏಕಸೂತ್ರತೆ ಇಲ್ಲ. ಪದಗಳನ್ನು ವ್ಯವಸ್ಥಿತವಾಗಿ ಜೋಡಿಸುವುದು ಮತ್ತು ಅವುಗಳಿಗೆ ಅರ್ಥ ಹೇಳುವುದು ಎಂಬ ತತ್ವ ಮತ್ತು ಭಾಷಾರೂಪಗಳನ್ನು ಶುದ್ಧವಾಗಿ ಉಳಿಸಿಕೊಳ್ಳಬೇಕೆಂಬ ಕಾಳಜಿ ಇಲ್ಲಿ ಕಾಣುತ್ತವೆ. ಹೀಗೆ ನಿಘಂಟು  ಎಂಬ ಪರಿಕಲ್ಪನೆ ಸ್ಥೂಲವಾಗಿ ರೂಪಗೊಂಡು ಒಂದು ಸಂದಿಗ್ಧ ಸ್ವರೂಪವನ್ನು ಪಡೆದುಕೊಂಡುದು ಈ ಕಾಲದ ವೈಶಿಷ್ಟ್ಯ.
            ಕನ್ನಡದಲ್ಲಿ ಇಲ್ಲಿಂದ ಮುಂದಿನ ಕಾಲವನ್ನೆಲ್ಲ ನಿಘಂಟುಗಳ ಅಭಿವೃದ್ಧಿಯುಗವೆಂದು ಕರೆಯಬಹುದು. ಅಂದರೆ ಹತ್ತೊಂಬತ್ತನೆಯ ಶತಮಾನ ಮತ್ತು ಅಲ್ಲಿಂದ ಮುಂದಿನ ಕಾಲದಲ್ಲಿ ನಿಘಂಟುಗಳ ಸ್ವರೂಪ, ವಿಸ್ತಾರ, ವೈವಿಧ್ಯ, ಉಪಯೋಗ – ಇವುಗಳಲ್ಲೆಲ್ಲ ಹೊಸತನ ಉಂಟಾಯಿತು ಮತ್ತು ಬೆಳವಣಿಗೆಗಳಾದುವು. ನಿಜವಾದ ಅರ್ಥದ ನಿಘಂಟುಗಳು ಈ ಕಾಲದಲ್ಲಿ ಮತ್ತು ಅಲ್ಲಿಂದ ಮುಂದೆ ರಚನೆಯಾದವು. ಹತ್ತೊಂಬತ್ತನೆಯ ಶತಮಾನದಲ್ಲೇ ಈ ಬೆಳವಣಿಗೆಗಳ ಮಹತ್ತಾದ ಪರಿಚಯ ಕನ್ನಡಿಗರಿಗೆ ಆಯಿತೆಂಬುದು ವಿಶೇಷ. ಕಲಿಯುವವರ ಹೊಸ ವರ್ಗ ಸೃಷ್ಟಿಯಾದುದರಿಂದ ಹೊಸ ರೀತಯ ನಿಘಂಟುಗಳು ಅಗತ್ಯವಾದುವು. ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ, ಲ್ಯಾಟಿನ್-ಕನ್ನಡ ಮತ್ತು ಕನ್ನಡ-ಲ್ಯಾಟಿನ್ ನಿಘಂಟುಗಳ ರಚನೆಯಾಯಿತು. ಹೀಗೆ ಹತ್ತೊಂಬತ್ತನೆಯ ಶತಮಾನವು ಮುಖ್ಯವಾಗಿ ದ್ವಿಭಾಷಾ ನಿಘಂಟುಗಳ ಯುಗ. ಈ ಯುಗವು ಯೂರೋಪು ಖಂಡದಲ್ಲಿ 15 -16 ನೆಯ ಶತಮಾನಗಳಲ್ಲೇ ಪ್ರಾರಂಭವಾಗಿತ್ತು. ಕ್ರಿ ಶ 1445ರಲ್ಲಿ ವೆನಿಸ್ ನಗರದಲ್ಲಿ ಮುದ್ರಿತವಾದ ಇಟಾಲಿಯಾನೋ – ಟೆಡೆಸ್ಕೊ ಎಂಬ ಕೃತಿಯೇ ವಿಶ್ವದ ಪ್ರಥಮ ದ್ವಿಭಾಷಾ ನಿಘಂಟು ಎಂದು ಉಲ್ಲೇಖವಿದೆ (ಪೋಧಜೆಕ್ಕ: ಪು, 7).
            ನಿಘಂಟುಗಳ ವರ್ಗೀಕರಣವೆಂಬುದು ಪ್ರಾರಂಭವಾಗಬೇಕಾದ್ದು ಈ ಕಾಲದ ನಿಘಂಟುಗಳಿಂದ. ನಿಘಂಟುಗಳ ಸಂಖ್ಯಾ ಬಾಹುಳ್ಯ ಮತ್ತು ವೈವಿಧ್ಯಮಯ ಬೆಳವಣಿಗೆ ಕೂಡ ಇದೇ ಶತಮಾನದಲ್ಲಿ ಅಂಕುರಸಿ ಇಲ್ಲಿಂದ ಮುಂದುವರೆಯಿತು. ಹತ್ತೊಂಬತ್ತನೆಯ ಶತಮಾನದ ಈ ನಿಘಂಟುಗಳನ್ನು ಭಾಷಾಂತರಕ್ಕಾಗಿ ನಿಘಂಟುಗಳು ಎಂದು ವರ್ಗೀಕರಿಸಬಹುದೆಂದು ಮೇಲ್ನೋಟಕ್ಕೆ ಎನಿಸುತ್ತದೆ. ಇವುಗಳ ಮುಖ್ಯ ಉದ್ದೇಶವೇ ಬೈಬಲ್ ಮತ್ತಿತರ ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಲು ವಾತಾವರಣವನ್ನು ಅಣಿಗೊಳಿಸುವುದು ಮತ್ತು ಅಗತ್ಯ ಪರಿಕರಗಳನ್ನು ಒದಗಿಸುವುದು. ಭಾಷಾಂತರವು ಸಂಸ್ಕೃತಿಯ ತಿಳಿವಳಿಕೆಯನ್ನು ಅನಿವಾರ್ಯವಾಗಿ ಬೇಡುತ್ತದೆ. ಆದ್ದರಿಂದಲೇ ಈ ನಿಘಂಟುಗಳು ಈ ನಾಡಿನ ಸಂಸ್ಕೃತಿಯನ್ನು ವಿದೇಶೀಯರಿಗೆ ಅರ್ಥೈಸುವ ಕಾರ್ಯವನ್ನೂ ಒಳಗೊಂಡಿವೆ.  ರೀವ್ ನಿಘಂಟಿನಲ್ಲಿ mendicant, Himalaya ಇತ್ಯಾದಿ ಪದಗಳಿಗಿರುವ ದೀರ್ಘ ವಿವರಣೆಗಳು ಈ ಕಾರ್ಯವನ್ನೇ ಮಾಡುತ್ತಿವೆ. ಅವನ ಇನ್ನೊಂದು ಕೃತಿಯಾದ ಕನ್ನಡ-ಇಂಗ್ಲಿಷ್ ನಿಘಂಟೂ ಇದೇ ರೀತಿಯ ಕಾರ್ಯನಿರತ ಗ್ರಂಥ. ಸ್ಕೇರ್ಬಾನ ಪ್ರಕಾರ ಯಾವುದೇ ಎರಡು ಭಾಷೆಗಳ ಸಂದರ್ಭದಲ್ಲಿ ನಾಲ್ಕು ನಿಘಂಟುಗಳ ರಚನೆ ಅಗತ್ಯ.  ಎರಡು ನಿಘಂಟುಗಳು ವಿದೇಶೀ ನಮೂದುಗಳಿಗೆ ಸ್ವಂತ ಭಾಷೆಯಲ್ಲಿ ವಿವರಣೆಗಳನ್ನು ನೀಡುವಂತಹವು  ಮತ್ತು ಎರಡು ಭಾಷಾಂತರಕ್ಕೆ ಅನುಕೂಲವಾದಂತಹ ದ್ವಿಭಾಷಾ ನಿಘಂಟುಗಳು. ಎರಡೂ ರೀತಿಯ ನಿಘಂಟುಗಳು ಎರಡೂ ದಿಕ್ಕುಗಳಲ್ಲಿ ಸಕ್ರಿಯವಾಗಿರುತ್ತವೆ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ (ಪೋಧೆಜೆಕ್ಕ, ಪು 9). ಅಲ್ಲದೆ ಒಂದು ನಿಘಂಟು ಭಾಷಾಂತರಕ್ಕೆ ಮಾತ್ರ ಸಹಾಯ ಮಾಡುವಂತಹುದು ಎಂದಾಗಲೀ ಇನ್ನೊಂದು ನಿಘಂಟು ಪರ್ಯಾಯ ಪದಗಳನ್ನು ನೀಡುವಂತಹದಾದ್ದರಿಂದ ಪರಾಮರ್ಶನಯೋಗ್ಯವಾದುದು ಮಾತ್ರವೆಂದಾಗಲೀ ಹಣೆಪಟ್ಟಿ ಹಚ್ಚುವುದು ಸರಿಯಾಗಲಾರದು. ಇವೆಲ್ಲವುಗಳ ರೂಪ ಒಂದೇ ಆಗಿದ್ದು ಅವುಗಳನ್ನು ದ್ವಿಭಾಷಾ ನಿಘಂಟುಗಳೆಂದಷ್ಟೇ ಗುರುತಿಸುವುದು ಉಚಿತವಾಗಬಹುದು. ರೀವನ ನಿಘಂಟುಗಳು(1824 & 1832), ಗ್ಯಾರೆಟ್ಟನ ಎ ಮ್ಯಾನುಯಲ್ ಅಫ್ ಇಂಗ್ಲಿಷ್ ಅಂಡ್ ಕ್ಯಾನರೀಸ್ ಡಿಕ್ಷನರಿ(1842), ರೀವನ ನಿಘಂಟುಗಳನ್ನು ವಿಸ್ತರಿಸಿ ಮತ್ತು ಸಂಕ್ಷೇಪಿಸಿ ಸ್ಯಾಂಡರ್ಸನ್ ತಯಾರಿಸಿದ ನಿಘಂಟುಗಳು(1858), ಬ್ಯೂಶರ್ ಕಿಟೆಲನ ನಿಘಂಟನ್ನಾಧರಿಸಿ ಹೊರತಂದ ಕನ್ನಡ-ಇಂಗ್ಲಿಷ್ ನಿಘಂಟು(1899) – ಇಂಥವೆಲ್ಲ ಇದೇ ವರ್ಗದವು. 1872ರಲ್ಲಿ ಜೀಗ್ಲರ್ ಇಂಗ್ಲಿಷ್- ಕನ್ನಡ ಸ್ಕೂಲ್ ಡಿಕ್ಷನರಿಯೊಂದನ್ನು ಸಂಪಾದಿಸಿದ್ದಾನೆ. ಅನಂತರ ಇದರ ಪರಿಷ್ಕೃತ ರೂಪಗಳೂ ಪ್ರಕಟಗೊಂಡಿವೆ. ಇದರಲ್ಲಿ ಪದಗಳನ್ನೂ ಅವುಗಳನ್ನೊಳಗೊಂಡ ನುಡಿಗುಚ್ಛಗಳನ್ನೂ ಹೇಗೆ ಪ್ರಯೋಗಿಸಬಹುದೆಂಬುದನ್ನು ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾನೆ. ಉದಾಹರಣೆಗೆ take liberty ಎಂದರೆ ಸ್ವಾತಂತ್ರ್ಯ ವಹಿಸು ಎಂದರ್ಥವಾಗುತ್ತದೆ;  at liberty ಎಂದರೆ ಹಾಗೆ ಮಾಡುವ ಸ್ವಾತಂತ್ರ್ಯ ನಿನಗಿದೆ ಎಂದರ್ಥ – ಇಂತಹ ವಿಷಯಗಳನ್ನು ಇವನು liberty ಎಂಬ ಉಲ್ಲೇಖ ಪದದಡಿ ಸೇರಿಸಿದ್ದಾನೆ.  ಈ ಗುಣದಿಂದ ಇದು ಭಾಷಾಂತರಕ್ಕೂ ಸಹಾಯಕವಾಗಿದೆ. ಬಳಕೆ ಮಾಡುವವರು ಯಾರು ಎಂಬುದು ಶೀರ್ಷಿಕೆಯಲ್ಲಿ ಸೇರಿದ್ದು ಶಾಲಾನಿಘಂಟು ಎಂದು ಇದನ್ನು ಹೆಸರಿಸಲಾಗಿದೆಯಾದರೂ ಅದೂ ಒಂದು ಪರಾಮರ್ಶನ ಯೋಗ್ಯ ದ್ವಿಭಾಷಾ ನಿಘಂಟೇ ಎಂಬುದು ಸ್ಪಷ್ಟವಿದೆ. ಇಂತಹ ನಿಘಂಟುಗಳನ್ನೆಲ್ಲ ಬೇರೊಂದು ವರ್ಗವನ್ನಾಗಿಸುವ ಅಗತ್ಯವಿರಲಾರದು. ಉಲ್ಲೇಖ ಭಾಷೆ ಮತ್ತು ಲಕ್ಷ್ಯಭಾಷೆಗಳು ಬೇರೆಬೇರೆಯಾಗಿರುವುದು, ಅರ್ಥಗಳು ಲಕ್ಷ್ಯಭಾಷೆಯ ಸಮಾನಾರ್ಥಕಗಳಿಂದ ಮತ್ತು ವ್ಯಾಖ್ಯೆಗಳಿಂದ ನಿರೂಪಿತವಾಗಿರುವುದು ಮತ್ತು ಬಳಕೆದಾರರ ಆವಶ್ಯಕತೆಗಳಿಗನುಸಾರವಾಗಿ ಉದಾಹರಣೆಗಳು, ಪ್ರಯೋಗಗಳು ಅಥವ ಹೆಚ್ಚುವರಿ ವಿವರಗಳಿರುವುದು – ಇವು ಇಂತಹ ನಿಘಂಟುಗಳ ಲಕ್ಷಣಗಳು.
 ಹತ್ತೊಂಬತ್ತನೆಯನೆಯ ಶತಮಾನದ ಅಂತ್ಯ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕಿಟೆಲನ ಕನ್ನಡ - ಇಂಗ್ಲಿಷ್ ಡಿಕ್ಷನರಿ(1894) ಪ್ರಕಟವಾಯಿತು. ಇದು ಮೇಲುರೂಪದಲ್ಲಿ ದ್ವಿಭಾಷಾ ನಿಘಂಟಾಗಿದ್ದರೂ ಇದರ ಉದ್ದೇಶವು ಭಾಷಾಂತರವಾಗಲೀ ಸಾಮಾನ್ಯ ಓದುಗ ತನ್ನ ಓದುವಿಕೆಯ ಸಂದರ್ಭದಲ್ಲಿ ಅರ್ಥ ಸ್ಪಷ್ಟಗೊಳಿಸಿಕೊಳ್ಳಲು ತೊಡಗುವ  ಪರಾಮರ್ಶೆಯಾಗಲೀ ಅಲ್ಲ; ಇದು ಅಷ್ಟು ಸರಳ ನಿಘಂಟಲ್ಲ. ಇದರ ಗಾತ್ರವೂ ಸಾಮಾನ್ಯವಾದ ಕೈಹಿಡಿಗಿಂತ ಹೆಚ್ಚೇ ಆಗಿದೆ. ಹಲವು ಹೊಸ ಆವಿಷ್ಕಾರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಶುದ್ಧ ಕನ್ನಡ ಪದಗಳನ್ನು ದಪ್ಪಕ್ಷರಗಳಲ್ಲೂ ಕನ್ನಡದಲ್ಲಿ ಬಳಕೆ ಇರುವ ಇತರ ಭಾಷಾ ಪದಗಳನ್ನು ಸಾಮಾನ್ಯ ಆಕಾರದಲ್ಲೂ ಮುದ್ರಿಸಿರುವುದರಿಂದ ದೇಶ್ಯ-ಅನ್ಯದೇಶ್ಯ ರೀತಿಯ ವರ್ಗೀಕರಣವೊಂದು ಪ್ರಾಥಮಿಕ ಸ್ವರೂಪದಲ್ಲಿಯೇ ಅಳವಟ್ಟಿದೆ. ಶಕಟರೇಫೆ, ರಳ ಮತ್ತು ಕುಳಗಳನ್ನು ಸರಿಯಾದ ಜಾಗದಲ್ಲಿ ಬಳಸಿರುವುದರಿಂದ ಕನ್ನಡ ಪದಗಳ ಸರಿಯಾದ ರೂಪವೂ ತಿಳಿಯುತ್ತದೆ. ವ್ಯಾಖ್ಯೆಯು ಉಲ್ಲೇಖಪದದ ಅರ್ಥವನ್ನು ಸ್ಪಷ್ಪಡಿಸಿದರೆ, ಪ್ರತಿಪದಕ್ಕೆ ಸೋದರೀ ಭಾಷಾ ಜ್ಞಾತಿಪದಗಳನ್ನು ನೀಡಿರುವುದರಿಂದ ಪದದ ನಿಷ್ಪತ್ತಿಯ ಬಗ್ಗೆ ಹೊಳಹುಗಳು ಸಿಗುತ್ತವೆ; ಕನ್ನಡದ ಒಂದು ಪದವನ್ನು ಇತರ ದ್ರಾವಿಡ ಭಾಷೆಗಳ ಸದೃಶ ಪದಗಳೊಂದಿಗೆ ತುಲನೆ ಮಾಡುವುದು ಸುಲಭವಾಗುತ್ತದೆ. ಇದಾದನಂತರ ಪದವು ಕನ್ನಡ ಕಾವ್ಯಗಳಲ್ಲಿ ಪ್ರಯೋಗವಾಗಿರುವ ವಾಕ್ಯಭಾಗಗಳನ್ನುಚರಿತ್ರಾನುಕ್ರಮದಲ್ಲಿ  ಉದಾಹರಿಸಿದ್ದು ಪದದ ಪ್ರಾಚೀನತೆ ಮತ್ತು ಅರ್ಥವಿಕಾಸದ ಪರಿ ಅರಿವಿಗೆ ಬರುತ್ತವೆ.  ಹೀಗೆ  ಇದು  ಸಾಮಾನ್ಯ  ಉಪಯೋಗಕ್ಕಾಗಿರುವ  ನಿಘಂಟು ಮಾತ್ರವಲ್ಲ       ( Dictionary for General Use, DGU ಅಷ್ಟೇ ಅಲ್ಲ); ಮುಂದುವರೆದ ಭಾಷಾ ಶಾಸ್ತ್ರೀಯ ಅಧ್ಯಯನಗಳಿಗೆ ಪೂರಕವಾದ ನಿಘಂಟು. ಇದೊಂದು ನಿಘಂಟು ಶಾಸ್ತ್ರದ ಅದ್ಭುತ ಸಾಹಸವಾಗಿದ್ದುಇದನ್ನುಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟು ಎಂದು ವರ್ಗೀಕರಿಸುವುದು ಉಚಿತವಾಗಬಹುದು. ಈಚೆಗೆ ಪ್ರೊ ಮರಿಯಪ್ಪ ಭಟ್ಟರು ಕಿಟೆಲನ ನಿಘಂಟನ್ನು ಪರಿಷ್ಕರಿಸಿ(1968) ವಿಸ್ತರಿಸಿದ್ದು ಇದೂ ಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟಾಗಿದೆ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಕಿಟೆಲ್ ನಿಘಂಟಿಗೆ ಪೈಪೋಟಿ ನೀಡಬಲ್ಲ ಏಕಭಾಷಾ ನಿಘಂಟೊಂದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಿದ್ವಾಂಸ ಮಂಡಳಿಯೊಂದು ರಚಿಸಿತು.ಇದು ಎಂಟು ಸಂಪುಟಗಳಲ್ಲಿ ಪ್ರಕಟವಾಗಿರುವ ಕನ್ನಡಸಾಹಿತ್ಯಪರಿಷತ್ತಿನ ನಿಘಂಟು(1995).  ಕಿಟೆಲ್ ನಿಘಂಟಿನ ಎಲ್ಲ ಲಕ್ಷಣಗಳ ಜೊತೆಗೆ ಮತ್ತಷ್ಟು ಹೊಸ ಮಧ್ಯವರ್ತನಗಳನ್ನು ಇಲ್ಲಿ ಸೇರಿಸಿದ್ದು ನಿಘಂಟು ಭಾಷಿಕ ಸಂಶೋಧನೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಈ ನಿಘಂಟನ್ನೂ ಇದೇ ಗುಂಪಿನಲ್ಲಿಸೇರಿಸಬೇಕು. ಕಿಟೆಲ್ ನಿಘಂಟು, ಅದರ ಮರಿಯಪ್ಪ ಭಟ್ಟರ ಪರಿಷ್ಕರಣ, ಪರಿಷತ್ ನಿಘಂಟು ಇಂತಹವು ಪದಗಳ ಇತಿಹಾಸ, ಪ್ರತಿಪದದ ರೂಪ ಮತ್ತುಅರ್ಥಗಳಲ್ಲಾದ ಕಾಲಾನುಕಾಲ ವ್ಯತ್ಯಾಸ - ಇವುಗಳನ್ನು ತೋರಿಸುತ್ತವೆ. ಹಾಗೆಯೇ ಜ್ಞಾತಿಪದಗಳನ್ನು ನೀಡಿರುವುದರಿಂದ ಪದದ ಮೂಲಸ್ವರೂಪ ಮತ್ತು ಅದು ಭಾಷೆಯಿಂದ ಭಾಷೆಗೆ ವ್ಯತ್ಯಾಸವಾಗುವ ಪರಿಯೂ ಒಟ್ಟಾಗಿ ತಿಳಿಯುತ್ತವೆ. ನಿಷ್ಪತ್ತಿ ಸೂಚನೆಯೂ ಅನೇಕ ವೇಳೆ ಜ್ಞಾತಿಪದಗಳೊಂದಿಗೆ ತುಲನೆಯಿಂದ ವ್ಯಕ್ತವಾಗುತ್ತದೆ ಎಂಬ ವಿದ್ವಾಂಸರ ಅಭಿಪ್ರಾಯ(ಸ್ವಾನಪೋಲ್: ಪು,53) ಈ ನಿಘಂಟಿಗೆ ಚೆನ್ನಾಗಿ ಅನ್ವಯಿಸುತ್ತದೆ.  
ಈ ಎಲ್ಲ ನಿಘಂಟುಗಳೂ ಜುಗುಸ್ತ ಹೇಳುವಂತೆ ನಿಘಂಟು ರಚನೆಯಲ್ಲಿ ಪ್ರತಿ ಭಾಷೆಯಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ಅನುಕ್ರಮವಾದ ಸಂಕ್ಷಿಪ್ತ-ಏಕಭಾಷಾ ನಿಘಂಟುಗಳು, ದ್ವಿಭಾಷಾ ನಿಘಂಟುಗಳು ಮತ್ತು ವಿಸ್ತೃತ ಸಮಗ್ರ ಏಕಭಾಷಾ ನಿಘಂಟುಗಳು ಎಂಬ ತತ್ವಕ್ಕೂ ಅನುಸಾರವಾಗಿಯೇ ಇವೆ (ಜುಗುಸ್ತ: ಪು, 346). ಈ ಹಂತಗಳೇ ನಿಘಂಟುಗಳ ಒಂದು ಸ್ಥೂಲ ವರ್ಗೀಕರಣವೂ ಆಗಿವೆ. ಕನ್ನಡದಲ್ಲಿ ಪ್ರಥಮಾವಸ್ಥೆಯ ಸಂಕ್ಷಿಪ್ತ ಏಕಭಾಷಾ ನಿಘಂಟುಗಳ ಕಾಲದನಂತರ ಹತ್ತೊಂಬತ್ತನೆಯ ಶತಮಾನದಲ್ಲಿ ಎರಡನೆಯ ಹಂತ ಪ್ರಾರಂಭವಾಗಿದ್ದು ಈ ಹಂತದ ದ್ವಿಭಾಷಾ ನಿಘಂಟುಗಳಲ್ಲಿ ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡದವೇ ಹೆಚ್ಚು ಸಂಖ್ಯೆಯವು. ಮೂರನೆಯ ಹಂತದಲ್ಲಿ ಏಕಭಾಷಾ ನಿಘಂಟನ್ನು ಮಾತ್ರ ಜುಗುಸ್ತ ಹೇಳಿದ್ದರೂ ಪರಿಸ್ಥಿತಿಗನುಗುಣವಾಗಿ ಕನ್ನಡದಲ್ಲಿ ವ್ಯಾಪಕತೆ, ಸಮಗ್ರತೆ, ಚಾರಿತ್ರಿಕತೆ ಮತ್ತು ಸೋದರ ಭಾಷೆಗಳೊಂದಿಗೆ ತುಲನೆ – ಇವುಗಳನ್ನೊಳಗೊಂಡಂತೆ  ಫರ್ಡಿನಂದ್ ಕಿಟೆಲ್ ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟೂ ಈ ಹಂತಕ್ಕೆ ಸೇರಿದ್ದೆಂದು ಹೇಳಬೇಕಾಗುತ್ತದೆ.
            ದ್ವಿಭಾಷಾ ನಿಘಂಟುಗಳು ಮುಖ್ಯವಾಗಿ ವಿದೇಶೀ ಭಾಷೆಯ ಕಲಿಕೆಗೆ ಸಹಾಯಕವಾಗುವಂತಹವು. ಅಥವ ವ್ಯಕ್ತಿ ತನ್ನ ಮಾತೃಭಾಷೆಯಲ್ಲದ ಭಾಷೆಯನ್ನು ಕಲಿಯುವಾಗ, ಪಠ್ಯ ಅಥವ ಹೆಚ್ಚುವರಿ ಸಾಹಿತ್ಯವನ್ನು ಓದುವ ಸಂದರ್ಭಗಳಲ್ಲಿ ಎದುರಾಗುವ ಕ್ಲಿಷ್ಟ ಪದಗಳ ಅರ್ಥವನ್ನು ಹುಡುಕಿಕೊಳ್ಳಲು ಇಂತಹ ನಿಘಂಟುಗಳು ಉಪಯುಕ್ತವಾಗುತ್ತವೆ; ಸೂಕ್ತ ನುಡಿಗಟ್ಟುಗಳನ್ನು ಅರಿಯಲು ಮತ್ತು ಯಾವ ಪದದ ಜೊತೆಗೆ ಯಾವ ಪದ ಬಳಸಬೇಕೆಂಬುದನ್ನು ನಿರ್ಧರಿಸಲು ಇವುಗಳಿಂದ  ಅನುಕೂಲವಾಗುತ್ತದೆ. ಏಕಭಾಷಾ ನಿಘಂಟುಗಳು ಹಾಗಲ್ಲದೆ ಅದೇ ಭಾಷೆಯನ್ನೇ ಮಾತನಾಡುವ ಸ್ಥಳೀಕರ ಉಪಯೋಗಕ್ಕಾಗಿ ಇದ್ದು ಪ್ರಾಚೀನ ಕಾವ್ಯಗಳ ಅಧ್ಯಯನದಲ್ಲಿ ಕ್ಲಿಷ್ಟ ಪದಗಳನ್ನು ಅರ್ಥ ಮಾಡಿಕೊಳ್ಳಲು ಅಥವ ಸಾಮಾನ್ಯ ಅಧ್ಯಯನದಲ್ಲಿ ಎದುರಾಗುವ ಅಪುರೂಪದ ಪದಗಳನ್ನು ಅರ್ಥೈಸಿಕೊಳ್ಳಲು ಪ್ರಯೋಜನಕ್ಕೆ ಬರುತ್ತದೆ. ಪದಗಳ ಸೂಕ್ತ ಸ್ಥಾನದ ಬಗ್ಗೆ ಸಂಶಯಗಳು ಬಂದಾಗಲೂ ಇಂತಹ ನಿಘಂಟುಗಳನ್ನು ಪರಾಮರ್ಶಿಸಬಹುದು. ಈ ನಿಘಂಟುಗಳಲ್ಲೆಲ್ಲ ಸಾಮಾನ್ಯವಾಗಿ ನಿರ್ದಿಷ್ಟ ಅರ್ಥಗಳನ್ನು ವ್ಯಾಖ್ಯೆಗಳಿಂದಾಗಲೀ, ಸಮಾನಾರ್ಥಕ ಪದಗಳಿಂದಾಗಲೀ ನೀಡುವುದು ಸಂಪ್ರದಾಯ.
            ಇಲ್ಲಿಂದ ಮುಂದೆ ಅನೇಕ ದ್ವಿಭಾಷಾ ನಿಘಂಟುಗಳೂ ಏಕಭಾಷಾ ನಿಘಂಟುಗಳೂ ರಚನೆಯಾದುವಲ್ಲದೆ  ಈ ಚೌಕಟ್ಟಿನಿಂದ ಹೊರಗೆ  ಬೇಳವಣಿಗೆಗಳಾಗಿದ್ದು ಅವನ್ನು ಹಲವು ವರ್ಗಗಳಲ್ಲಿ ನೋಡುವ ಅಗತ್ಯವಿದೆ. ದ್ವಿಭಾಷಾ ನಿಘಂಟುಗಳಲ್ಲಿ ಸಂಸ್ಕೃತ, ಹಿಂದಿ, ತೆಲುಗು, ರಶ್ಯನ್, ಇಂಗ್ಲಿಷ್ – ಹೀಗೆ ಹಲವು ಭಾಷೆಗಳ ಜೊತೆಗೆ ಸಂಬಂಧ ಕಲ್ಪಿಸುವಂತಹವು ಇವೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು(ಪ್ರಥಮ ಮದ್ರಣ:1947) ಬಿ. ವೆಂಕಟನಾರಣಪ್ಪ ಇವರ ಪ್ರಧಾನ ಸಂಪಾದಕತ್ವದಲ್ಲಿ ರಚನೆಯಾಗಿದ್ದು  ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಿದೆ. ಇದೊಂದು ಪ್ರಮುಖ ಕೃತಿ. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬ  ವಿಭಿನ್ನ ನಿಘಂಟನ್ನು ಡಿ ಎನ್ ಶಂಕರಭಟ್ಟರು 2008ರಲ್ಲಿ ರಚಿಸಿದ್ದು ಇದರಲ್ಲಿ ಸು.15,000ಪದಗಳಷ್ಟು ಪ್ರಧಾನ ಉಲ್ಲೇಖಗಳಿವೆ. ಇಲ್ಲಿ ಇಂಗ್ಲಿಷ್ ಪದಗಳಿಗೆ ಶುದ್ಧ ಕನ್ನಡ ಸಮಾನಾರ್ಥಕಗಳಿದ್ದು  ಇಲ್ಲಿರುವ ಪದಗಳನ್ನು ಅಗತ್ಯಕ್ಕೆ ತಕ್ಕಂತೆ ಸೇರಿಸಿಕೊಂಡು ಅಥವ ಪದಕ್ಕೆ ಸೂಕ್ತ ಪ್ರತ್ಯಯ(ಒಟ್ಟು)ವನ್ನು ಸೇರಿಸಿ ಹೊಸ ಅಚ್ಚಗನ್ನಡ ಪದಗಳನ್ನು ಸೃಷ್ಟಿಸಿಕೊಳ್ಳಬೇಕೆಂಬುದು ನಿಘಂಟುಕಾರರ ಆಶಯ. ಅದರಂತೆ chief-whip ‘ಮಲ್ಲಚಾವಟಿ’ಯಾಗುತ್ತಾನೆ; Chief-guest ‘ಮಲ್ಲ ಬಿದ್ದಿನ’ನಾಗುತ್ತಾನೆ; Bilingual dictionary ‘ಇನ್ನುಡಿ ಪದನೆರಕೆ’ಯಾಗುತ್ತದೆ. ವೈಯಕ್ತಿಕ ಒಲವುಗಳು ಮತ್ತು ಸಾಮೂಹಿಕ ಇಚ್ಛಾಶಕ್ತಿ ಒಗ್ಗೂಡಿದರೆ ಇಂತಹ ಪದಗಳನ್ನು ಕನ್ನಡದಲ್ಲಿ ಬಳಕೆಗೆ ತರುವುದು ಅಸಾಧ್ಯವೇನಲ್ಲ. ಇದೊಂದು ಪ್ರಯೋಗಶೀಲ ನಿಘಂಟೇ ಆದರೂ ಪ್ರತ್ಯೇಕ ವರ್ಗವಾಗಿ ನೋಡುವ ಅಗತ್ಯವಿಲ್ಲ. ಇದೊಂದು ದ್ವಿಭಾಷಾ ನಿಘಂಟುಗಳ ವರ್ಗಕ್ಕೆ ಸೇರಿದ ಹೊಸ ನಿಘಂಟು.
ಸಂಸ್ಕೃತ, ಹಿಂದಿ, ಇಂಗ್ಲಿಷ್ ಇವುಗಳಲ್ಲೊಂದು ಉಲ್ಲೇಖ ಭಾಷೆಯಾಗಿರುವ ಮತ್ತು ಕನ್ನಡ ಲಕ್ಷ್ಯ ಭಾಷೆಯಾಗಿರುವ ಹಲವು ವ್ಯಾಪಕವಾದ, ಸಾಮಾನ್ಯ ಉಪಯೋಗಕ್ಕಾಗಿರುವ ನಿಘಂಟುಗಳು ಬಂದಿವೆ. ಉದಾ. ಎಸ್‌.ವಿ.ಹಂಜಿ ಅವರ ‘ಸಂಸ್ಕೃತ – ಕನ್ನಡ ಕೋಶ’ (1967), ಪ್ರೊ. ಗುರುನಾಥ ಜೋಶಿ ಅವರ ‘ಹಿಂದಿ – ಕನ್ನಡ ಶಬ್ದಕೋಶ’ (1950), ಇತ್ಯಾದಿ.ಹಾಗೆಯೇ ಕನ್ನಡ ಉಲ್ಲೇಖ ಬಾಷೆಯಾಗಿದ್ದುಕೊಂಡು ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅರ್ಥ ನಿರೂಪಣೆ ಇರುವ ನಿಘಂಟುಗಳೂ ಕನ್ನಡದಲ್ಲಿವೆ. ಉದಾ. ಚಾಂದುಲಾಲ ದುಬೆ ಮತ್ತು ಇತರರು ರಚಿಸಿದ  ‘ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ’ (1957).  ಇವಲ್ಲದೆ ಕನ್ನಡ ಪದಗಳಿಗೆ ತೆಲುಗು ಮತ್ತು ತಮಿಳುಗಳಲ್ಲಿ ಸಮಾನಾರ್ಥಕಗಳನ್ನು ನೀಡುವ ನಿಘಂಟುಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡ-ರಶ್ಯನ್ (1975) ನಿಘಂಟಿನ ಮುದ್ರಿತ ರೂಪ ಲಭ್ಯವಿದೆ.
ಇಪ್ಪತ್ತನೆಯ ಶತಮಾನದಲ್ಲಿ ಏಕಭಾಷಾ ನಿಘಂಟುಗಳೂ ವಿಪುಲ ಸಂಖ್ಯೆಯಲ್ಲಿ ರಚಿತವಾದುವು ಮತ್ತು ಅವುಗಳಲ್ಲಿ ಹಲವು ಜನಪ್ರಿಯವಾಗಿವೆ.   ಶಿವರಾಮ ಕಾರಂತ, ಜಿ ವೆಂಕಟಸುಬ್ಬಯ್ಯ, ಹಾ ಮಾನಪ್ಪ ನಾಯಕ ಮುಂತಾದವರರು ಸಾಮಾನ್ಯ ಉಪಯೋಗಕ್ಕಾಗಿ ವ್ಯಾಪಕ ಏಕಭಾಷಾ ನಿಘಂಟುಗಳನ್ನು ರಚಿಸಿದ್ದು ಇವುಗಳಲ್ಲಿ ಉಲ್ಲೇಖಿತ ಪದದ ವ್ಯಾಕರಣ ವಿವರ, ನಿಷ್ಪತ್ತಿಸೂಚನೆ ಇಂತಹವನ್ನೂ ಒಳಗೊಂಡಿವೆ. ಗಾತ್ರಾನುಸಾರಿಯಾಗಿ ಇವುಗಳಲ್ಲಿ ವಿಧಗಳನ್ನು ಗುರುತಿಸುವ ಅಗತ್ಯವಿರಬಹುದು.
            ಅರೆದ್ವಿಭಾಷಾ ನಿಘಂಟುಗಳೆಂಬ ಒಂದುವರ್ಗವನ್ನು ಕೆಲವರು ಸೂಚಿಸುತ್ತಾರೆ. ಅರೆ ಅಂದರೆ ಅರ್ಧ; ದ್ವಿ ಅಂದರೆ ಎರಡು;  ಆದ್ದರಿಂದ ಅರೆದ್ವಿಭಾಷೆ ಎಂದರೆ ಏಕಭಾಷೆ ಎಂದೇ ಅರ್ಥ ಎಂದು ಬೇರೆ ಕೆಲವರು ಈ ನಿಲುವನ್ನು ವ್ಯಂಗ್ಯವಾಡುತ್ತಾರೆ. ಆದರೆ ಜೆ ಡಿ ಮೈಸಾಳೆ ಇವರ ಹಿಂದಿ-ಹಿಂದಿ- ಕನ್ನಡ ರತ್ನಕೋಶ(1951),  ಶೇಷಗಿರಿರಾವ್ ಮತ್ತಿತರರ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು ಇಂತಹವುಗಳು ಶುದ್ಧವಾದ ಏಕಭಾಷಾ ನಿಘಂಟುಗಳೂ ಅಲ್ಲದೆ, ಶುದ್ಧವಾದ ದ್ವಿಭಾಷಾ ನಿಘಂಟುಗಳೂ ಅಲ್ಲದಿದ್ದು ಇಂತಹವುಗಳನ್ನು ಅರೆದ್ವಿಭಾಷ ನಿಘಂಟುಗಳೆಂದು ಕರೆಯುವುದು ಉಚಿತವಾಗಬಹುದು.  ಗುರುನಾಥ ಜೋಶಿಯವರ ‘ಕನ್ನಡ – ಕನ್ನಡಹಿಂದಿ ಶಬ್ದಕೋಶ’ (೧೯೫೭) ಆರ್.ಎಸ್. ರಾಮರಾವ್ ಅವರು 1965 ರಲ್ಲಿ ರಚಿಸಿದ ಕನ್ನಡ – ಕನ್ನಡ ಇಂಗ್ಲಿಷ್ ನಿಘಂಟು ಪ್ರೊ.ಜಿ. ವೆಂಕಟಸುಬ್ಬಯ್ಯ ಮತ್ತು ಇತರರು 1981 ರಲ್ಲಿ ರಚಿಸಿದ ‘ಕನ್ನಡ-ಕನ್ನಡ-ಇಂಗ್ಲಿಷ್-ನಿಘಂಟು’ ಇಂತಹ ಅರೆದ್ವಿಭಾಷಾ ನಿಘಂಟುಗಳು ಹಲವು ಕನ್ನಡದಲ್ಲಿ ಲಭ್ಯವಿದ್ದು ಸರ್ವಜನೋಪಯೋಗಿಯಾಗಿವೆ.
 ಎರಡಕ್ಕಿಂತ ಹೆಚ್ಚು ಭಾಷೆಳನ್ನೊಳಗೊಂಡ ಕೆಲವು ನಿಘಂಟೂಗಳೂ ಕನ್ನಡದಲ್ಲಿದ್ದು ಒಂದರಲ್ಲಿ ಹಿಂದಿ, ಒಂದರಲ್ಲಿ ತುಳು ಮತ್ತು ಮೂರನೆಯದರಲ್ಲಿ ಕನ್ನಡ ಉಲ್ಲೇಖ ಭಾಷೆಗಳಾಗಿವೆ. ಇಂತಹವನ್ನು ಬಹುಭಾಷಾ ನಿಘಂಟುಗಳೆಂಬ ಪ್ರತ್ಯೇಕ ವಿಧದಲ್ಲಿ ಸೇರಿಸುವುದು ಉಚಿತವಾಗಬಹುದು. ಎಲ್‌.ಎಸ್‌. ಚಿಟಗುಪ್ಪಿಯವರ ಆಧುನಿಕ ಹಿಂದಿ – ಕನ್ನಡ – ಇಂಗ್ಲಿಶ್‌ಶಬ್ದಕೋಶದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಲಕ್ಷ್ಯ ಭಾಷೆಗಳಾಗಿವೆ. ಗೋವಿಂದ ಪೈ ಸಂಶೋಧನಾ ಸಂಸ್ಥೆ ಯು. ಪಿ. ಉಪಾಧ್ಯಾಯ ಇವರ ಪ್ರಧಾನ ಸಂಪಾದಕತ್ವದಲ್ಲಿ  ತುಳು – ಕನ್ನಡ – ಇಂಗ್ಲಿಶ್‌ ನಿಘಂಟನ್ನು (1997)  ರಚಿಸಿ ಪ್ರಕಟಿಸಿದೆ. ಹಲವು ವಿದ್ವಾಂಸರ ಹಲವು ರ್ಷಗಳ ಫಲದಿಂದ ಈ ಗ್ರಂಥ ರಚನೆಯಾಗಿದ್ದು ಇದು ಈ ವರ್ಗದ್ದೇ ಆದರೂ ಅದು ಆರು ಸಂಪುಟಗಳಲ್ಲಿದ್ದು  ಬೃಹತ್ ಗಾತ್ರದ್ದಾಗಿದೆ. ಸಮಗ್ರತೆ, ವ್ಯಾಪ್ತಿ ಮತ್ತು ತಾಂತ್ರಿಕತೆಗಳಲ್ಲಿ ಅನನ್ಯವಾಗಿರುವ ಈ ನಿಘಂಟು ತುಳು ಉಲ್ಲೇಖ ಭಾಷೆಯಾಗಿರುವ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟಾಗಿದೆ. 1995ರಲ್ಲಿ ಕನ್ನಡ-ಕನ್ನಡ-ಇಂಗ್ಲಿಷ್-ತಮಿಳು-ಜಪಾನೀ ಭಾಷೆಗಳ ಬಹುಭಾಷಾ ನಿಘಂಟಿನ ಮೊದಲ ಸಂಪುಟವೊಂದನ್ನು ಸಂಪಾದಕ ಡಾ.ವಿ.ಗೋಪಾಲಕೃಷ್ಣ ಅವರ ಶ್ರಮದಿಂದ ಸಿದ್ಧಪಡಿಸಿ ಪ್ರಕಟಿಸಿರುವುದಾಗಿ ತಿಳಿದು ಬರುತ್ತದೆ (ಪ್ರಜಾವಾಣಿ: ಫೆಬ್ರುವರಿ, 2016). ಇದೊಂದು ಅಕ್ಷರಶಃ ಬಹುಭಾಷೆಗಳನ್ನೊಳಗೊಂಡ ನಿಘಂಟು.
 ಎಟಿಮಲಾಜಿಕಲ್ ನಿಘಂಟು ಎಂಬ ಒಂದು ವಿಧವನ್ನು ಪ್ರತ್ಯೇಕವಾಗಿ ಹೇಳಲೇಬೇಕಾಗುತ್ತದೆ. ಇದು ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ, ಕನ್ನಡಕ್ಕೆ ಸಂಬಂಧಿಸಿದಂತೆಯೂ 1961ರಿಂದ ಪ್ರಾರಂಭವಾಯಿತು. ಯಾವುದೇ ದ್ರಾವಿಡ ಭಾಷೆಯ ಒಂದು ಪದ ಸೋದರೀ ಭಾಷೆಗಳಲ್ಲಿ ಪಡೆದಿರುವ ರೂಪ, ಅಲ್ಲಿ ಅದರ ಅರ್ಥ ಮತ್ತು ಸಂಗತವಾದ ವ್ಯಾಕರಣ ವಿವರಗಳನ್ನು ದಾಖಲಿಸುವಂತಹ ನಿಘಂಟು ಪ್ರಕಾರವೆಂದು ಇದನ್ನು ವ್ಯಾಖ್ಯಾನಿಸಬಹುದು. ಇಂತಹ ನಿಘಂಟುಗಳ ರಚನೆಯಷ್ಟೇ ಅದನ್ನು ಮುಂದುವರೆಸುವ (updating) ಪ್ರಕ್ರಿಯೆಯೂ ಮುಖ್ಯ. 1961ರಲ್ಲಿ ಟಿ ಬರೋ ಮತ್ತು ಎಮ್ ಬಿ ಎಮಿನೋ ಇವರ ಎ ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್ಷನರಿ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ಮೊದಲ ಜ್ಞಾತಿಪದಕೋಶವಾಗಿದ್ದು ಸುಮಾರು 5000 ಕನ್ನಡ ಪದಗಳನ್ನೊಳಗೊಂಡಿದೆ. 1984ರಲ್ಲಿ ಇದರ ಪರಿಷ್ಕೃತ ಆವೃತ್ತಿಯ ಪ್ರಕಟವಾಗಿದೆ ಮತ್ತು 1998ರಲ್ಲಿ ಇದರ ಪುನರ್ಮುದ್ರಣವಾಗಿರುತ್ತದೆ. ಇದರಲ್ಲಿ ಎಲ್ಲ ದ್ರಾವಿಡ ಭಾಷಾ ಪದಗಳೂ ಇದ್ದು ಉಲ್ಲೇಖಪದಗಳು ಅಥವ ಮುಖ್ಯ ನಮೂದುಗಳನ್ನು ವಿಶಿಷ್ಟ ರಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಒಂದು ಪದದ ಪ್ರಾಚಿನ ರೂಪವು ಯಾವ ಭಾಷೆಯಲ್ಲಿದೆಯೋ ಆ ಭಾಷೆಯ ಪದ ಮುಖ್ಯ ನಮೂದಾಗುತ್ತದೆ. ಉಳಿದ ಭಾಷೆಗಳ ಪದಗಳನ್ನು ಜ್ಞಾತಿಪದಗಳನ್ನಾಗಿ ನೀಡಲಾಗಿದೆ. ಪದವನ್ನು ಲಿಪ್ಯಂತರ ರೂಪದಲ್ಲಿ ದಾಖಲಿಸಲಾಗಿದ್ದು ಅರ್ಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನಿರೂಪಿಸಲಾಗಿದೆ. ಉಲ್ಲೇಖ ಪದವು ಮೂಲ ದ್ರಾವಿಡವಾಗಿರಬೇಕೆಂಬುದು ನಿಘಂಟುಕಾರರ ಕಾಳಜಿಯಾಗಿದೆ. ಕೆಳಗಿನ ಉದಾಹರಣೆಯು ನಿಘಂಟಿನ ಸ್ವರೂಪದ ಬಗ್ಗೆ ಸ್ವಯಮ್ ವಿವರಣೆಯನ್ನು ನೀಡುವುದು:
ಉದಾ. 1140). Ta. kaṭuvaṉ male monkey, tom-cat; kaṭuvaṉ-paṉṟi boar. Ma. kaṭuvan male of cats, pigs, etc.; kāṭan wild hog, tom-cat, male tiger. Ko. kaṛvn tom-cat. Ka. gaḍava a stout male monkey; (Hav.) kaṇṭã male cat. Go. (A. Y.) gaḍḍi
ಯಾವುದೇ ಒಂದು ಪದವನ್ನು ಮೂಲ ದ್ರಾವಿಡ ಎಂದು ಗುರುತಿಸಲಾಗದಿದ್ದರೆ ಅಂತಹ ರೂಪವನ್ನು ಪುನಾರಚಿಸಿ ಕೊಡಲಾಗಿದೆ. ಇಂದಿಗೂ ಹಲವು ದ್ರಾವಿಡಭಾಷಾ ಅಧ್ಯಯನಗಳಲ್ಲಿ ಈ ನಿಘಂಟನ್ನು ಉಲ್ಲೇಖಿಸಲಾಗುತ್ತಿರುವುದು ಬರೋ-ಎಮಿನೋ ನೀಘಂಟಿನ ಪ್ರಾಮುಖ್ಯವನ್ನು ತೋರಿಸುತ್ತದೆ. 2013ರಲ್ಲಿ ಎನ್ ಉಚಿಡ, ಬಿ ಬಿ ರಾಜಪುರೋಹಿತ್ ಮತ್ತು ಜೆ ತಕಶಿಮ ಎಂಬ ವಿದ್ವಾಂಸರು ಕನ್ನಡ - ಇಂಗ್ಲಿಷ್ ಎಟಿಮಲಾಜಿಕಲ್(ಡಿಕ್ಷನರಿ) ನಿಘಂಟು ಎಂಬ ಶೀರ್ಷಿಕೆಯಲ್ಲಿ ನಿಘಂಟೊಂದನ್ನು ರಚಿಸಿದ್ದಾರೆ. ಇದರ ವಿಧಾನವೆಂದರೆ ಪ್ರತಿಯೊಂದು ಕನ್ನಡ ಪದಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಸಮಾನಾರ್ಥಕಗಳನ್ನು ನೀಡಿ ಅರ್ಥವನ್ನು ಸ್ಪಷ್ಟಪಡಿಸುವುದು. ಉಲ್ಲೇಖಪದವು ಬರೋ-ಎಮಿನೋ ನಿಘಂಟಿನಲ್ಲಿ ಬಂದಿದ್ದರೆ ಆ ಅಂಶವನ್ನು ವಿವರಗಳ ಕೊನೆಯಲ್ಲಿ ಸೂಚಿಸಿದ್ದಾರೆ. ಪ್ರತಿಪದದ ಅರ್ಥನಿರೂಪನೆಯನಂತರ ಕೊನೆಯಲ್ಲಿ ಅದರ ಮೂಲಭಾಷೆಯನ್ನು ಆವರಣಗಳಲ್ಲಿ ಸೂಚಿಸಿಸುವುದರಲ್ಲಿ ಕಿಟೆಲನ ಸಂಪ್ರದಾಯವನ್ನು ಮುಂದುವರೆಸಲಾಗಿದೆ. ಪದವು ಸಾಹಿತ್ಯ ಕೃತಿಗಳಲ್ಲಿ ಪ್ರಯೋಗವಾಗಿರುವ ಚರಿತ್ರೆಯನ್ನು ಆಯಾ ಕೃತಿಗಳನ್ನು ಸಂಕೇತಗಳ ಮೂಲಕ ಸೂಚಿಸಿ ತಿಳಿಸಿದ್ದಾರೆ.  ಆದ್ದರಿಂದ ಇದನ್ನು ಎಟಿಮಲಾಜಿಕಲ್ ನಿಘಂಟು ಎಂದು ವರ್ಗೀಕರಿಸುದಕ್ಕಿಂತ ಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ದ್ವಿಭಾಷಾ ನಿಘಂಟು ಎಂದೇ ಗುರುತಿಸುವುದು ಸರಿಯಾದುದು. ನಿಘಂಟಿನ ಹೆಸರು(ಶೀರ್ಷಿಕೆ) ಹೇಗೆ ತಪ್ಪು ದಾರಿಗೆಳೆಯಬಹುದೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಇದರನಂತರ ಈಚೆಗೆ 2014ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ದ್ರಾವಿಡಭಾಷಾ ಜ್ಞಾತಿಪದಕೋಶವನ್ನು ಪ್ರಕಟಿಸಿದ್ದು ಇದರಲ್ಲಿ ಎಲ್ಲವೂ ಕನ್ನಡ ಲಿಪಿಗಳಲ್ಲಿ ಮಾತ್ರವಿದೆ; ಲಿಪ್ಯಂತರ ವಿಧಾನವನ್ನು ಅನುಸರಿಸಿಲ್ಲ. ಹಲವು ದೃಷ್ಟಿಗಳಿಂದ ಇದು ಬರೋ-ಎಮಿನೋ ನಿಘಂಟಿನ ಮುಂದುವರಿಕೆಯಾಗಿದ್ದು ಕನ್ನಡ ಲಿಪಿಗಳ ಬಳಕೆ, ಕನ್ನಡದ ಉಲ್ಲೇಖ ಪದಗಳಿರುವುದು, ಪ್ರಾಚೀನ ನಿಘಂಟುಗಳಿಂದ ಪ್ರಮಾಣೀಕೃತ ನಮೂದುಗಳನ್ನು ಒಳಗೊಂಡಿರುವುದು, ಕನ್ನಡದ ಒಂಬತ್ತು ಉಪಭಾಷೆಗಳಿಂದ ಉಲ್ಲೇಖಗಳನ್ನು ಆಯ್ದಿರುವುದು ಇಂತಹವು  ಹೊಸ ನಿಘಂಟಿನ ವೈಶಿಷ್ಟ್ಯಗಳಾಗಿವೆ. ಇದು ನಿಸ್ಸಂಶಯವಾಗಿ ಎಟಿಮಲಾಜಿಕಲ್ ನಿಘಂಟು. ಕನ್ನಡಕ್ಕೆ ಸಂಬಂಧಿಸಿದಂತೆ ಹೀಗೆ ಎರಡು ಎಟಿಮಲಾಜಿಕಲ್ ನಿಘಂಟು ಅಥವ ಜ್ಞಾತಿಪದಕೋಶಗಳಿವೆ.
ರಾಷ್ಟ್ರೀಯ ನಿಘಂಟು ಎಂಬ ಒಂದು ಪ್ರಕಾರವನ್ನು ಯೂರೋಪಿಯನ್ ನಿಘಂಟು ಪರಂಪರೆಯಲ್ಲಿ ಹೆಸರಿಸುತ್ತಾರೆ. ಇದು ಚಾರಿತ್ರಿಕ ಬೆಳವಣಿಗೆಗಳನ್ನೂ ತೋರಿಸುವ, ರಾಷ್ಟ್ರೀಯ ಪರಿಧಿಗೆಲ್ಲ ಅನ್ವಯಿಸುವ ಪದಗಳನ್ನೊಳಗೊಂಡ ನಿಘಂಟು. ಯೂರೋಪಿನಲ್ಲೇ ಈ ಬಗೆಯ ನಿಘಂಟುಗಳನ್ನು ಒಂದು ಪ್ರಕಾರವೆಂದು ಪರಿಗಣಿಸುವ ಬಗ್ಗೆ ಭಿನ್ನಾಭಿಪ್ರಾವಿದ್ದು (ಪೋಧೆಜೆಕ, ಪು 8)  ಮೇಲೆ ಹೇಳಿದ ಯಾವುದಾರೂ ಒಂದು ವರ್ಗದಲ್ಲಿ ಅವುಗಳನ್ನು ಅಳವಡಿಸಬಹುದು. ಪರ್ಯಾಯ ನಿಘಂಟುಗಳು ಎಂಬ ವರ್ಗವೊಂದನ್ನು  ನಿಘಂಟಿನ ಒಂದು ವಿಧವನ್ನಾಗಿ ಪರಿಗಣಿಸುವುದಿದೆ (ಪೋಧೆಜೆಕ, ಪು 9). ಪದಗಳನ್ನು ಪರ್ಯಾಯ ರೀತಿಯೊಂದರಲ್ಲಿ ಜೋಡಿಸಿ ಅರ್ಥವನ್ನು ವಿವರಿಸುವಂತಹ ನಿಘಂಟುಗಳಿಗೆ ಈ ಹೆಸರನ್ನು ಬಳಸುತ್ತಾರೆ. ಉಳ್ಳಾಲ ನರಸಿಂಗರಾಯರು ಸಂಕಲಿಸಿದ ಕಿಸಮ್ ವಾರ್ ಗ್ಲೋಸರಿ ಆಫ್ ಕ್ಯಾನರೀಸ್ ವರ್ಡ್ಸ್ಯನ್ನು(1891) ಇಂತಹ ನಿಘಂಟುಗಳಿಗೆ ಒಂದು ನಿದರ್ಶನವನ್ನಾಗಿ ನೋಡಬಹುದು.ಸ್ವಯಂ ವಿವರಣಾತ್ಮಕವಾದ ಶೀರ್ಷಿಕೆಗಳಿರುವ ಬೇರೆ ಬೇರೆ ಗುಚ್ಛಗಳಲ್ಲಿ ಪದಗಳನ್ನು ಅಕಾರಾದಿಯಾಗಿ ಜೋಡಿಸಿ ಅವುಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುವುದು ಇಲ್ಲಿ ಅನುಸರಿಸಲಾಗಿರುವ ತಂತ್ರ. ಈ ರೀತಿ ಗುಂಪುಗಳಲ್ಲಿ ಪದಜೋಡಣೆ ಇರುವ ನಿಘಂಟುಗಳಿಗೆ ಥಿಸೌರು ಎಂದೂ ಕರೆಯುವುದುಂಟು. ಗುಚ್ಛಗಳ ಶೀರ್ಷಿಕೆಗಳು ಇಂಗ್ಲಿಷಿನಲ್ಲಿದ್ದು ಮೊದಲ ಮೂರು ಹೀಗಿವೆ (ಉದಾಹರಣೆಗಾಗಿ ನೀಡಿದೆ): Affinity and Relationship, Anatomy and Physiology, Astronomy and Astrology. ಇಂತಹ ಇಪ್ಪತ್ತೊಂಬತ್ತು ಗುಂಪುಗಳು ಇಲ್ಲಿವೆ. ನಿಘಂಟಿನ ಮೂರು ಆವೃತ್ತಿಗಳು (http://www.worldcat.org/wcidentities/lccn-n88154575) ಮುದ್ರಿತವಾಗಿರುವುದಾಗಿ ತಿಳಿದು ಬರುತ್ತದೆ. ಪದಗಳನ್ನು ಪರಿಕಲ್ಪನಾತ್ಮಕ ಗುಂಪುಗಳಾಗಿ ವಿಭಜಿಸುವುದು ಇಂತಹ ನಿಘಂಟುಗಳ ರೀತಿಯಾಗಿದ್ದು ಸಂಸ್ಕೃತದ ಅಮರಕೋಶ ಕೂಡ ಇದೇ ಮಾದರಿಯದು ಎಂಬುದನ್ನು ಗಮನಿಸಬಹುದು. ಆದರೆ ಎಲ್ಲ ಪರ್ಯಾಯ ನಿಘಂಟುಗಳೂ ಈ ರೀತಿಯವಲ್ಲ. ನಾ ಕಸ್ತೂರಿಯವರ ಅನರ್ಥ ಕೋಶ ಇನ್ನೊಂದು ರೀತಿಯದಾಗಿದ್ದು ಅಕ್ಷರಾನುಕ್ರಮದಲ್ಲಿ ಪದಗಳನ್ನು ಜೋಡಿಸಿ  ಪದಗಳಿಗೆ ವಿಪರೀತಾರ್ಥಗಳನ್ನು ನೀಡಿ ಹಾಸ್ಯವನ್ನುಂಟು ಮಾಡುವ ಕೃತಿಯಾಗಿದ್ದು ಪರ್ಯಾಯ ನಿಘಂಟು ವರ್ಗಕ್ಕೆ ಸೇರಬಹುದೆಂದು ಮೇಲ್ನೋಟಕ್ಕೆ ತೋರುತ್ತದೆ; ಪದಗಳ ಪರ್ಯಾಯ ಜೋಡಣೆಯ ಬದಲಾಗಿ ಇಲ್ಲಿ ವಿಭಿನ್ನವಾಗಿ (ಪರ್ಯಾಯವಾಗಿ) ಪದಗಳಿಗೆ ಅರ್ಥಗಳನ್ನು ಸೂಚಿಸುವ ಪದ್ಧತಿ ಇದೆ. ಆದರೆ ನಿಘಂಟಿನ ಪ್ರಧಾನ ಉದ್ದೇಶ ಓದುಗರು ಪದಗಳಿಗೆ ಅರ್ಥ, ಅವು ಯಾವ ಪದವರ್ಗಕ್ಕೆ ಸೇರುತ್ತದೆಂಬ ವಿವರ, ಅಕ್ಷರಿಕೆಯ ಸರಿಯಾದ ರೂಪ, ಪದಪ್ರಯೋಗ ರೀತಿ ಇಂತಹವುಗಳನ್ನು ಕಂಡುಕೊಳ್ಳಲು ಉಪಯುಕ್ತವಾಗುವುದು. ಕಸ್ತೂರಿಯವರ ಈ ಕೋಶ ಇಂತಹ ಪ್ರಕಾರ್ಯಗಳಲ್ಲಿ ನೆರವಾಗುವುದರ ಬದಲು ಮನೋರಂಜಕವಾದುದಾಗಿದೆ; ಸಾಮಾಜಿಕ ವಿಡಂಬನೆಯಾಗಿದೆ. ಇತರ ಕೆಲವರೂ ಈ ದಾರಿಯಲ್ಲಿ ಪ್ರಯತ್ನಿಸುತ್ತಿದ್ದು ಕಸ್ತೂರಿಯವರ ಪ್ರಯತ್ನವನ್ನು ಒಂದು ವಿಶಿಷ್ಟ ಹಾಸ್ಯ ಸಾಹಿತ್ಯ ಪ್ರಕಾರವೆಂದು  ಗುರುತಿಸುವುದು ಹೆಚ್ಚು ಸೂಕ್ತವಾಗಬಹುದು.
            ಉಲ್ಲೇಖ ಭಾಷೆ ಮತ್ತು ಲಕ್ಷ್ಯ ಭಾಷೆಗಳೆರಡೂ ಒಂದೇ ಆಗಿರುವ ಇನ್ನೊಂದು ಬಗೆಯ ನಿಘಂಟುಗಳಿವೆ. ಉಪಯೋಗವಾಗಿರುವ ಭಾಷೆಗಳ ಸಂಖ್ಯೆಯ ದೃಷ್ಟಿಯಿಂದ ಇವು ಏಕ ಭಾಷಾ ನಿಘಂಟುಗಳೇ ಆದರೂ ಇವುಗಳ ರೀತಿ ವಿಭಿನ್ನ. ಈ ನಿಘಂಟುಗಳಲ್ಲಿಆಯ್ದುಕೊಂಡಿರುವ ಉಲ್ಲೇಖಪದಗಳೆಲ್ಲ ಒಂದು ಕ್ಷೇತ್ರಕ್ಕೆ ಸೇರಿದವಾದರೂ ಆ ಕ್ಷೇತ್ರವಿನ್ನೂ ಶೈಕ್ಷಣಿಕಶಿಸ್ತು ಎಂಬ ಗೌರವಕ್ಕೆ ಪಾತ್ರವಾಗಿಲ್ಲ;  ಶಾಲಾಕಾಲೇಜುಗಳಲ್ಲಿ ಅದನ್ನೊಂದು ಅಧ್ಯಯನ ವಿಷಯವನ್ನಾಗಿಸಿ ಅದರಲ್ಲಿ ತಜ್ಞತೆ ಹೊಂದಲು ಅವಕಾಶ ಕಲ್ಪಿಸಲಾಗಿಲ್ಲ. ತಾಪತ್ರಯ, ದಶಾವತಾರ ಇಂತಹ ಸಂಖ್ಯೆಯುಕ್ತ ಪದಗಳನ್ನು ಉಲ್ಲೇಖ ಪದಗಳನ್ನಾಗಿ ಆಯ್ದು ಸಂಖ್ಯಾನುಕ್ರಮದಲ್ಲಿ ಜೋಡಿಸಿ ಐ ಕೆ  ಪಿ ಶರ್ಮ ಇವರ ಸಾಂಖ್ಯೇಯ ಶಬ್ದಮಂಜರಿ(1962)ಯಲ್ಲಿ ಅರ್ಥ ವಿವರಿಸಿದ್ದಾರೆ. ಬೆನೆಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿ ಇವರು ಪುರಾಣ ನಾಮ ಚೂಡಾಮಣಿ(1971)ಯಲ್ಲಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಬರುವ ಹೆಸರುಗಳನ್ನು ಅಕಾರಾದಿಯಾಗಿ ಜೋಡಿಸಿ ಆ ಹೆಸರಿನ ವ್ಯಕ್ತಿ ಸ್ಥಳ ಇತ್ಯಾದಿಗಳ ಬಗ್ಗೆ ಇರುವ ಕತೆ ಘಟನೆಗಳನ್ನೆಲ್ಲ ಸಂದರ್ಭ ಸಮೇತ ವಿವರಿಸಲಾಗಿದೆ. ಇಂತಹವು ಒಂದು ಬೇರೆಯೇ ನಿಘಂಟುವಿಧವಾಗಿದ್ದು ಈ ವಿಧದ ಕೃತಿಗಳನ್ನು ವಿವರಣಾತ್ಮಕ ನಿಘಂಟುಗಳೆಂದು ಹೆಸರಿಸಬಹುದು. ಯಜ್ಞನಾರಾಯಣ ಉಡುಪರ ಪುರಾಣ ಭಾರತಕೋಶ(1975) ಇಂತಹವಕ್ಕೆ ಇನ್ನೊಂದು ಉದಾಹರಣೆ.
            ನಿರ್ದಿಷ್ಟ ಶೈಕ್ಷಣಿಕ ಶಿಸ್ತಿಗೆ ಸಂಬಂಧಿಸಿದ ವಿಶೇಷ ಪದಗಳನ್ನೆಲ್ಲ ಅಕಾರಾದಿಯಾಗಿ ಜೋಡಿಸಿ ಅರ್ಥವನ್ನು ವಿವರಿಸುವ ಏಕಭಾಷಾ ಅಥವ ದ್ವಿಭಾಷಾ ನಿಘಂಟುಗಳಿವೆ. ಉದಾ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು (ಇಂಗ್ಲಿಶ್ – ಕನ್ನಡ)(1981), ಡಿ. ಎಸ್‌. ಶಿವಪ್ಪ ಇವರ ವೈದ್ಯಕ ಪದಗಳ ಹುಟ್ಟು ರಚನೆ (1990) , ಕರ್ನಾಟಕ ಸರಕಾರದ  ಗ್ಲಾಸರಿ ಆಫ್ ಅಡ್ಮಿನಿಸ್ಟ್ರೇಟಿವ್ ಟರ್ಮ್ಸ್ ಇಂಗ್ಲಿಶ್ – ಕನ್ನಡ(1967), ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಇಂಗ್ಲಿಶ್‌ – ಕನ್ನಡ ವಿಜ್ಞಾನಪದ ಕೋಶ (1990), ಇತ್ಯಾದಿ. ಇಲ್ಲೆಲ್ಲ ಅರ್ಥ ಹೇಳುವುದಕ್ಕಾಗಿ ಆಯ್ಕೆ ಮಾಡಿದ ಪದಸಂಗ್ರಹ ವಿಶಿಷ್ಟವಾಗಿದ್ದು ಶಾಲಾ ಕಾಲೇಜುಗಳಲ್ಲಿ ಕಲಿಕಾ ವಿಷಯಗಳಾದ ಒಂದು ಶೈಕ್ಷಣಿಕ ಶಿಸ್ತಿನ ವ್ಯಾಪ್ತಿಗೊಳಪಡುತ್ತಿದೆ ಮತ್ತು ಸಾಮಾನ್ಯಪದದಂತೆ ಉಪಯೋಗವಾಗುವ ಪದವೊಂದಕ್ಕೂ ಶಾಸ್ತ್ರಗಳಲ್ಲಿ ಇರುವ ವಿಶೇಷಾರ್ಥವನ್ನು ನಿರೂಪಿಸುತ್ತದೆ. ಸಂಬಂಧಿಸಿದ ನಿಘಂಟು ಆ ವಿಷಯದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಶಾಸ್ತ್ರೀಯವಾಗಿ ಪದಗಳನ್ನು ಅರ್ಥೈಸುತ್ತಿದ್ದು ಭಾಷಾಂತರಕ್ಕಾಗಿ ಬಳಸಬಹುದಾಗಿದೆ. ಈ ನಿಘಂಟುಗಳೆಲ್ಲ ವಿವಕ್ಷಿತ ಶೈಕ್ಷಣಿಕ ಶಿಸ್ತಿಗೆ ಸಂಬಂಧಿಸಿದ ಪರಿಭಾಷಾ ರೂಪದ ಪದಗಳಿಗೆ ಅರ್ಥ ಹೇಳುವಂತಹವಾಗಿದ್ದು ವಿಶೇಷ ನಿಘಂಟುಗಳೆಂದು ಅಥವ ತಜ್ಞತಾ ನಿಘಂಟುಗಳೆಂದು  ಕರೆಸಿಕೊಂಡಿವೆ.
            ಪಾಶ್ಚಾತ್ಯ ಭಾಷೆಗಳಿಗೆ ಸಂಬಂಧಿಸಿದಂತ ಅಕ್ಷರಿಕಾ(spelling) ನಿಘಂಟು, ಉಚ್ಚಾರಣಾ(pronunciation) ನಿಘಂಟು – ಇಂತಹ ನಿಘಂಟುಗಳು ರಚನೆಯಾಗಿವೆ. ಪದದಲ್ಲಿರುವ ಅಕ್ಷರಗಳ ಜೋಡಣೆಗಿಂತ ಭಿನ್ನವಾಗಿ ಆಪದದ ಉಚ್ಚಾರವಿರುವ ಗಣನೀಯ ಸಂಖ್ಯೆಯ ಪದಗಳಿರುವುದರಿಂದ ಮತ್ತು ಅಕ್ಷರಗಳಿಗೆ ಅವು ಪ್ರತಿನಿಧಿಸುವ ಧ್ವನಿಗಿಂತ ಭಿನ್ನವಾದ ಹೆಸರಿರುವುದರಿಂದ ಇಂತಹ ನಿಘಂಟುಗಳು ಅಗತ್ಯವಾಗುತ್ತವೆ. ಕನ್ನಡದಲ್ಲಿ ಈ ಸಂದರ್ಭವಿಲ್ಲ. ಗಣನೀಯ ಸಂಖ್ಯೆಯ ಸಾಹಿತ್ಯಿಕ ಕೃತಿಳು, ವೃತ್ತ ಪತ್ರಿಕೆಗಳು, ಸಂಭಾಷಣೆಗಳು ಇತ್ಯಾದಿಗಳನ್ನು ಪರಿಶೀಲಿಸಿ ಅವುಗಳಲ್ಲಿರುವ ಒಟ್ಟು ಪದಸಂಖ್ಯೆಯಲ್ಲಿ ಯಾವ ಪದ ಎಷ್ಟು ಪುನರಾವರ್ತನೆಗೊಂಡಿದೆ ಎಂಬುದನ್ನು ದಾಖಲಿಸುವ ನಿಘಂಟುಗಳು ವಿಶ್ವದ ಕೆಲವು ಭಾಷೆಗಳಲ್ಲಿ ಪ್ರಕಟವಾಗಿವೆ. ಉದಾ. Frequency Dictionary of the Contemporary American. ಇಂತಹ ಕೃತಿಯು ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು,  ಪಠ್ಯಪುಸ್ತಕ ರಚಿಸುವುದು ಇತ್ಯಾದಿಗಳಲ್ಲಿ ಯಾವ ಪದಗಳಿಗೆ ಆದ್ಯತೆ ನೀಡಬೇಕೆಂಬುದನ್ನು ನಿರ್ಧರಿಸಲು ಅಗತ್ಯ ಮಾಹಿತಿಯನ್ನು  ಒದಗಿಸಬಲ್ಲುದು. ಇಂತಹ ನಿಘಂಟುಗಳು ಕನ್ನಡದಲ್ಲಿ ಇನ್ನೂ ರಚನೆಯಾಗ ಬೇಕಾಗಿವೆ. ಕನ್ನಡಪಡೆನುಡಿಗಳ ಕೋಶ(ಟಿ ವಿ ವೆಂಕಟರಮಣಯ್ಯ,1968) ಎಂಬ ಒಂದು ನಿಘಂಟು ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾಲಯದ ಗ್ರಂಥಭಂಡಾರದಲ್ಲಿ ಇದನ್ನು ಪಡೆನುಡಿ – ನುಡಿಗಟ್ಟು ನಿಘಂಟು ಎಂದು ವರ್ಗೀಕರಿಸಿದ್ದಾರೆ.  ಓದುಗರಿಗೆ ನಿಘಂಟನ್ನು ಆಯ್ದುಕೊಳ್ಳಲು ಸಹಾಯವಾಗುವ ದೃಷ್ಟಿಯಿಂದ ನುಡಿಗಟ್ಟು ನಿಘಂಟು ಎಂಬ ಒಂದು ವರ್ಗವು ಪ್ರಯೋಜನಕಾರಿಯಾಗಬಹುದು.

                        ಇಪ್ಪತ್ತನೆಯ ಶತಮಾನದ ಒಂದು ಮುಖ್ಯ ಬೆಳವಣಿಗೆಯೆಂದರೆ ಉಪಭಾಷಾ ನಿಘಂಟುಗಳದು. 2014ರ ದ್ರಾವಿಡ ಭಾಷಾ ಜ್ಞಾತಿಪದಕೋಶದಲ್ಲಿ ಹಾಲಕ್ಕಿ ಕನ್ನಡ, ಜೇನುಕುರುಬ ಕನ್ನಡ, ನಂಜನಗೂಡ ಕನ್ನಡ, ಬಾರ್ಕೂರು ಕನ್ನಡ ಇತ್ಯಾದಿಯಾಗಿ ಒಂಬತ್ತು ಉಪಭಾಷೆಗಳ ಪದಗಳನ್ನು ಉಲ್ಲೇಖಿಸಿದ್ದು ಈ ಉಪಭಾಷೆಗಳ ಪದಗಳ ಒಂದು ಸ್ಥೂಲ ಪರಿಚಯ ಇಲ್ಲಿದೆ. ಬರೋ-ಎಮಿನೋ ನಿಘಂಟಿನಲ್ಲೂ ಇಂತಹ ಪದಗಳನ್ನು ಕಾಣಬಹುದು. ಡಿ ಎನ್ ಶಂಕರ ಭಟ್ಟರು 1970ರಲ್ಲಿ ಬಾರ್ಕೂರು ಕನ್ನಡದ ಕೋಶಿಕೆಯನ್ನು, ಯು ಪಿ ಉಪಾಧ್ಯಾಯ ಇವರು ಸೋಲಿಗ ಕನ್ನಡದ ಪದ ಮತ್ತು ಅರ್ಥಗಳನ್ನು ಒಳಗೊಂಡ ಅಧ್ಯಯನವನ್ನು, ಹಂದೆ ಇವರು ಬಂಧನ ಕಾಣದ ಪದಗಳು ಎಂಬ ಕೋಟಕನ್ನಡ ಕೋಶಿಕೆಯನ್ನು, ಅರ್ತಿಕಜೆ ಇವರು ಹವಿಗನ್ನಡ ನುಡಿಗಟ್ಟುಗಳ ಕೋಶವನ್ನು ರಚಿಸಿರುವಂತೆ ತಿಳಿದು ಬರುತ್ತದೆ. ಮರಿಯಪ್ಪ ಭಟ್ಟ ಇವರ ಹವ್ಯಕ – ಇಂಗ್ಲಿಷ್ ನಿಘಂಟು(1983) ವೈಜ್ಞಾನಿಕವಾಗಿ ರಚಿಸಿದ ಒಂದು ಸಮಗ್ರ ಉಪಭಾಷಾ ನಿಘಂಟು. ಉಪಭಾಷೆಗಳಲ್ಲಿ ವಿಶೇಷಪದಗಳನ್ನೂ ಕನ್ನಡದ ಸಾಮಾನ್ಯ ಪದಗಳಿಗೆ ಉಪಭಾಷೆಗಳಲ್ಲಿರುವ ವಿಶೇಷವಾಗಿರುವ ಅರ್ಥಗಳನ್ನೂ ಸ್ಪಷ್ಟಪಡಿಸುವಂತಹ ನಿಘಂಟುಗಳನ್ನು ಉಪಭಾಷಾ ನಿಃಘಂಟುಗಳು ಎಂಬ ವಿಧವಾಗಿ ಪರಿಗಣಿಸಬಹುದು. ಇದಿನ್ನೂ ಪ್ರವರ್ಧಮಾನದಲ್ಲಿರುವ ನಿಘಂಟು ಕ್ಷೇತ್ರ ಎಂಬುದನ್ನು ಗಮನಿಸಬಹುದು.

            ಕಾವ್ಯ ಸಂಗ್ರಹಗಳ ಕೊನೆಯಲ್ಲಿ ಮತ್ತು ವಿವಿಧ ಕಾವ್ಯಗಳ ಮುದ್ರಿತ ಆವೃತ್ತಿಗಳ ಅಂತ್ಯದಲ್ಲಿ ಆಯಾ ಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಕ್ಲಿಷ್ಟ ಪದಗಳ ಅರ್ಥವನ್ನು ತಿಳಿಸುವ ಸಣ್ಣ ಕೋಶಿಕೆಗಳನ್ನು ಹಲವು ವರ್ಷಗಳಿಂದ ನೀಡಲಾಗುತ್ತಿದೆ. ಇಂತಹ ಸಂಪ್ರದಾಯವನ್ನು ಕ್ರಿ ಶ 1868ರಲ್ಲಿ ರೆ. ಜಿ ವುರ್ತ್ ಇವನು ತನ್ನ ಪ್ರಾಕ್ಕಾವ್ಯ ಮಾಲಿಕೆಯಲ್ಲಿ ಪ್ರಾರಂಭಿಸಿದನು. ಆದರೆ ಇಂತಹ ಕೋಶಿಕೆಗಳು ಸೀಮಿತ ವ್ಯಾಪ್ತಿಯವಾಗಿದ್ದು ಪದಗಳ ಅರ್ಥಗಳನ್ನು ಇತರ ಪ್ರಮಾಣಬದ್ಧ ನಿಘಂಟುಗಳಿಂದ ಆಯ್ದಿರುತ್ತಾರೆ. ಆದ್ದರಿಂದ ಇವುಗಳನ್ನು ಒಂದು ಪ್ರತ್ಯೇಕ ನಿಘಂಟುವಿಧವನ್ನಾಗಿ ನೋಡುವ ಅಗತ್ಯವಿಲ್ಲ. ಇವು ಸ್ವತಂತ್ರ ನಿಘಂಟುಗಳಲ್ಲ; ಒಂದು ರೀತಿಯಲ್ಲಿ ನಿಘಂಟುಭಾಗಳು.
            ಮೇಲೆ ನಿರೂಪಿಸಲಾಗಿರುವ ನಿಘಂಟುಗಳ ವರ್ಗೀಕರಣವನ್ನು ಮೂರು ಆಯಾಮದ ಒಂದು ವರ್ಗೀಕರಣವನ್ನಾಗಿ ಪರಿಗಣಿಸಬಹುದು. ಜೆಲವು ವಿದ್ವಾಂಸರು ಜಾರುಚಿತ್ರದ ರೀತಿಯಲ್ಲಿ ವರ್ಗೀಕರಣವನ್ನು ಪ್ರತಿನಿಧಿಸುತ್ತಾರಾದರೂ (ಜುಗುಸ್ತ: 1971) ನಾನಿಲ್ಲಿ ತಃಖ್ತೆಯ ರೀತಿಯ ವರ್ಗೀಕರಣವೊಂದನ್ನು ಅನುಸರಿಸಿದ್ದೇನೆ. ಮೂರು ಆಯಾಮಗಳಲ್ಲಿ ಎರಡನ್ನು ತಃಖ್ತೆಯ ಎಡ ತುದಿಯ ಶೀರ್ಷಿಕೆಗಳು ನಿರೂಪಿಸುತ್ತಿದ್ದು ಉದ್ದ ಸಾಲುಗಳಿಂದ ಸೂಚಿತವಾಗುತ್ತವೆ: (1) ಮೊದಲನೆಯದಾಗಿ ಭಾಷಾ ಆಯಾಮ – ನಿಘಂಟಿನಲ್ಲಿ ಉಲ್ಲೇಖ ಭಾಷೆ ಮತ್ತು ಲಕ್ಷ್ಯ ಭಾಷೆಗಳೆರಡೂ ಒಂದೇ ಆಗಿದ್ದು ಏಕಭಾಷಿಕವಾಗಿದೆಯೋ, ಬೇರೆಬೇರೆಯಾಗಿದ್ದು ದ್ವಿಭಾಷಿಕವಾಗಿದೆಯೋ, ಉಲ್ಲೇಖ ಪದಗಳಿಗೆ ಅದೇ ಭಾಷೆಯಲ್ಲಿ ಅರ್ಥವನ್ನು ನಿರೂಪಿಸುವುದರ ಜೊತೆಗೆ ಇನ್ನೊಂದು ಭಾಷೆಯ ಸಮಾನಾರ್ಥಕಗಳನ್ನು ನೀಡುವಂತಹ ಅರೆದ್ವಿಭಾಷಾ ವಿಧದ್ದೋ ಅಥವಾ ಒಂದು ಭಾಷೆಯ ನಮೂದುಗಳಿಗೆ ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ಅರ್ಥ ನಿರೂಪಿಸಿ ಬಹುಭಾಷೆಗಳನ್ನು ಒಳಗೊಂಡಿದೆಯೋ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವ ಆಯಾಮ; (2) ಎರಡನೆಯದು ಮುಖ್ಯವಾಗಿ ಗಾತ್ರಾನುಸಾರಿಯಾಗಿದ್ದು ಅತಿ ಸಂಕ್ಷಿಪ್ತ, ಸಂಕ್ಷಿಪ್ತ, ವ್ಯಾಪಕ ಮತ್ತು ಸಮಗ್ರ ಎಂದು ಗುರುತಿಸಲಾಗಿದೆ. ಇವು ಉಲ್ಲೇಖ ಪದಗಳನ್ನು ಯಾವ ಪ್ರಮಾಣದಲ್ಲಿ ಆಯ್ಕೆ ಮಾಡಲಾಗಿದೆ ಎಂಬುದನ್ನೂ ಸೂಚಿಸುತ್ತವೆ. ಈ ಎರಡೂ ಆಯಾಮಗಳನ್ನು  ಎಡದಿಂದ ಬಲಕ್ಕೆ ಸಾಗುವ ಉದ್ದ ಸಾಲುಗಳಲ್ಲಿ ಯೋಜಿಸಲಾಗಿದೆ. (3) ಮೂರನೆಯದು ನಿಘಂಟುಗಳ ಸ್ವರೂಪದ ಆಯಾಮ – ನಿಜವಾಗಿ ನಿಘಂಟಿನ ಕಾರ್ಯ ಯಾವ ರೀತಿಯದು ಮತ್ತು ಅದನ್ನು ಯಾವ ರೀತಿಯ ಉಪಯೋಗಕ್ಕಾಗಿ ಓದುಗರು ಬಳಸಬಹುದು ಎಂಬುದನ್ನು ತಿಳಿಸುವ ಆಯಾಮ. ಈ ರೀತಿಯ ಐದು ವಿಭಿನ್ನ ವರ್ಗಗಳನ್ನು ಕಲ್ಪಿಸಲಾಗಿದ್ದು ಇವುಗಳನ್ನು ಮೇಲಿನಿಂದ ಕೆಳಕ್ಕೆ ಸಾಗುವ ಕಂಬ ಸಾಲುಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಹೊಸ ನಿಘಂಟುಗಳನ್ನು ಅಳವಡಿಸಲು ಹೊಸ ಉದ್ದಸಾಲು ಮತ್ತು ಕಂಬ ಸಾಲುಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಉದಾಹರಣಗೆ ಆವೃತ್ತಿ ನಿಘಂಟುಗಳು ಈಗ ಕನ್ನಡದಲ್ಲಿಲ್ಲವಾಗಿ ಅದು ಈ ತಃಖ್ತೆ ಅಥವ ಪಟ್ಟಿಯಲ್ಲಿ ನಮೂದಾಗಿಲ್ಲ. ಅಂತಹ ನಿಘಂಟು ರಚನೆಯಾದಾಗ ಅದನ್ನು ಏಕಭಾಷಾ ವ್ಯಾಪಕ ನಿಘಂಟುಗಳ ಹೊಸ ವಿಧವಾಗಿ ಹೊಸ ಕಂಬಸಾಲಿನಲ್ಲಿ ಸ್ಥಳ ಪಡೆಯುತ್ತದೆ. ಮುಂದಿನ ಪುಟದಲ್ಲಿ ಈ ರೀತಿಯ ವರ್ಗೀಕರಣವನ್ನು ತಃಖ್ತೆಯ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ ಯಾವುದೇ ನಿಘಂಟನ್ನು ಅದರ ಸ್ಥಾನದಲ್ಲಿ ನೋಡಿದರೆ ಅದು ಎಷ್ಟು ಭಾಷೆಗಳನ್ನು ಒಳಗೊಂಡಿದೆ, ಸ್ಥೂಲವಾಗಿ ಅದರಲ್ಲಿರುವ ಉಲ್ಲೇಖ ಪದಗಳ ಪ್ರಮಾಣವೆಷ್ಟು ಮತ್ತು ಓದುಗರು ತಮ್ಮ ಯಾವ ರೀತಿಯ ಉಪಯೋಗಕ್ಕಾಗಿ ಅದನ್ನು ಬಳಸಬಹುದು ಎಂಬ ವಿವರಗಳನ್ನು ತಿಳಿಯ ಬಹುದು. ಇದು ಸಾಮಾನ್ಯ ಓದುಗರಿಗೆ ಈ ವರ್ಗೀಕರನದಿಂದ ಆಗುವ ಪ್ರಯೋಜನ.
            ಪಟ್ಟಿಯನ್ನು ನೋಡಿದರೆ ಹಲವು ಕುತೂಹಲಕರ ಅಂಶಗಳು ಸ್ಪಷ್ಟವಾಗುತ್ತವೆ. ಕನ್ನಡದಲ್ಲಿ ಪ್ರಮಾಣಭೂತವಾದ ಉಪಭಾಷಾ ನಿಘಂಟು ೊಂದು ಮಾತ್ರ ಇದ್ದು ಇಂತಹ ನಿಘಂಟುಗಳು ಇತರ ಉಪಭಾಷೆಗಳಿಗೆ ಇನ್ನಷ್ಟೇ ರಚನೆಯಾಗಬೇಕಿದೆ. ಅದರಲ್ಲೂ ಒಂದು ಉಪಭಾಷೆಯ ಉಲ್ಲೇಖ ಪದಗಳಿಗೆ ಶಿಷ್ಟಕನ್ನಡದಲ್ಲಿ ಅರ್ಥ ಹೇಳುವಂತಹ, ಒಂದು ಉಲ್ಲೇಖ ಪದಕ್ಕೆ ಕನ್ನಡದ ಇತರ ಉಪಭಾಷೆಗಳ ‘ಜ್ಞಾತಿ’ಗಳನ್ನು ನೀಡುವಂತಹ ನಿಘಂಟುಗಳ ರಚನೆ ಆಗಿಯೇ ಇಲ್ಲ. ಇಂತಹ ತುಲನಾತ್ಮಕ ಪ್ರಕ್ರಿಯೆಗಳಿಂದ ಕನ್ನಡ ಪದಗಳ ಸ್ವರೂಪ ಇನ್ನಷ್ಟು ಸ್ಪಷ್ಟವಾಗಬಹುದು. ವಿವರಣಾತ್ಮಕ ನಿಘಂಟುಗಳು ಇನ್ನೂ ಹಲವು ತರಹದವು ಬರಬಹುದಾಗಿದೆ. ಉದಾಹರಣೆಗೆ ರಾಮಾಯಣದ ಹೆಸರುಗಳ ಕೋಶ, ವೇದೋಪನಿಷತ್ತುಗಳಲ್ಲಿನ ಹೆಸರುಗಳ ಕೋಶ ಇತ್ಯಾದಿ. ಆಡಳಿತ, ವಿಜ್ಞಾನ, ಶಿಕ್ಷಣ, ಮನೋವಿಜ್ಞಾನ ಇಂತಹ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದವನ್ನು ಹೊರತುಪಡಿಸಿದರೆ ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ, ತತ್ವ ಶಾಸ್ತ್ರ ಸಮಾಜ ಶಾಸ್ತ್ರ ಇತ್ಯಾದಿಗಳಿಗೆ ಸಂಬಂಧಿಸಿದ, ತಂತ್ರಜ್ಞಾನ ಗಣಕವಿಜ್ಞಾನ ಮುಂತಾದುವುಗಳಿಗೆ ಸಂಬಂಧಿಸಿದ ವಿಶೇಷ ನಿಘಂಟುಗಳು ಇನ್ನೂ ಬರಬೇಕಾಗಿದೆ. ಕನ್ನಡ ರತ್ನ ಕೋಶದಷ್ಟು ಅಥವ ಅದಕ್ಕಿಂತ ಹೆಚ್ಚು ಸಮರ್ಥವಾದ, ಕಡಿಮೆ ಬೆಲೆಯ ಆಧುನಿಕ ಸಂಕ್ಷಿಪ್ತ ನಿಘಂಟುಗಳಿಗೆ ಒಳ್ಳೆಯ ಅವಕಾಶಗಳಿರಬಹುದು. ಪರ್ಯಾಯ ನಿಘಂಟುಗಳ ಕ್ಷೇತ್ರದಲ್ಲಿ ಇನ್ನೂ ಅನ್ವೇಷಣೆಗಳಾಗಬೇಕಾಗಿದೆ; ಈ ಕ್ಷೇತ್ರದ ಸಾಧ್ಯತೆಗಳನ್ನು ಇನ್ನೂ ಪೂರ್ಣವಾಗಿ ದುಡಿಸಿಕೊಳ್ಳಲಾಗಿಲ್ಲವೆಂದೆನಿಸುತ್ತದೆ. ಒಂದೇ ಪರ್ಯಾಯ ಕೋಶ ಕನ್ನಡ ನಿಘಂಟು ಇತಿಹಾಸದಲ್ಲಿ ಲಭ್ಯವಿದೆ; ಅದೂ ಗತಕಾಲಕ್ಕ ಸೇರಿಹೋಗಿದ್ದು ಕಿಸಮ್ ವಾರ್ ಗ್ಲೋಸರಿಯ ಪರಿಷ್ಕರಣೆ ಮತ್ತು ವಿಸ್ತರಣೆ ಅಗತ್ಯವಾಗಿದೆ; ಏಕ ಭಾಷಾ ಪರ್ಯಾಯ ಕೋಶಗಳ ರಚನೆಯಾಗಬೇಕಾಗಿದ್ದು ಹೊಸ ಬಗೆಯ ಮುಂದುವರೆದ ಪರ್ಯಾಯ ನಿಘಂಟು ಸಂಕಲಿತವಾಗಬೇಕಾಗಿದೆ. ಜ್ಞಾತಿಪದ ಕೋಶವನ್ನು ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಜೊತೆಗೆ ಉಳಿದ ಇಪ್ಪತ್ತಕ್ಕೂ ಹೆಚ್ಚಾಗಿ ಅಸ್ತಿತ್ವದಲ್ಲಿರುವ ಇತರ ದ್ರಾವಿಡ ಭಾಷೆಗಳ ಪದಗಳನ್ನೂ ಸೇರಿಸಿ ಪರಿಪೂರ್ಣಗೊಳಿಸಬೇಕಾಗಿದೆ. ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳ ನಡುವಣ ದ್ವಿಭಾಷಾ ನಿಘಂಟುಗಳ ರಚನೆ ದ್ರಾವಿಡಭಾಷೆಗಳ ಸಾಹಿತ್ಯಿಕ ಸಾಂಸ್ಕೃತಿಕ ಸಂಬಂಧಗಳನ್ನು ಉತ್ತಮ ಪಡಿಸಲು ಸಹಾಯಕವಾಗಬಹುದು.


ವರ್ಗೀಕರಣವಿವರ ತಃಖ್ತೆ
                                                                       


ಸಾಮಾನ್ಯ ಉಪಯೋಗ
ಜ್ಞಾತಿಪದಕೋಶ
ಪರ್ಯಾಯ
ಉಪಭಾಷಾ
ವಿವರಣಾತ್ಮಕ
ವಿಶೇಷ ನಿಘಂಟು
ಏಕಭಾಷೆ
ಅತಿ ಸಂಕ್ಷಿಪ್ತ
ರನ್ನಕಂದ ಮುಂತಾದ
ಹಳಗನ್ನಡ ನಿಘಂಟುಗಳು





ಸಂಕ್ಷಿಪ್ತ
ಕನ್ನಡ ರತ್ನ ಕೋಶ, ಇತ್ಯಾದಿ ಪಾಕೆಟ್ ಮಾದರಿ ನಿಘಂಟುಗಳು



ಸಾಂಖ್ಯೇಯ ಶಬ್ದಮಂಜರಿ.


ವ್ಯಾಪಕ
ಪರಿಷತ್ತಿನ ಸಂಕ್ಷಿಪ್ತ ನಿಘಂಟು,ಸಿರಿಗನ್ನಡ ಕೋಶ,ಕಸ್ತೂರಿ ಕೋಶ, ಕನ್ನಡ-ಕನ್ನಡ ಕಸ್ತೂರಿ ಕೋಶ
.ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟ ಪದ) ನಿಘಂಟು.ಇತ್ಯಾದಿ
ಹಂಪನಾ ಇವರ ದ್ರಾವಿಭಾಷಾ ಜ್ಞಾತಿಪದಕೋಶ
(ಅನರ್ಥ ಕೋಶ,ಇ.)

ಪುರಾಣ ನಾಮ ಚೂಡಾಮಣಿ.
ಪುರಾಣ ಭಾರತಕೋಶ.

ಕುಂಬಾರ ವೃತ್ತಿ ಪದಕೋಶ. ಬಡಿಗ ವೃತ್ತಿಪದ ಮಂಜರಿ .
 ವೈದ್ಯಕ ಪದಗಳ ಹುಟ್ಟು. ರಚನೆ.ಕಾನೂನು ರತ್ನಕೋಶ .
ವಚನ ಪರಿಭಾಷಾ ಕೋಶ.
ನುಡಿಗಟ್ಟು ನಿಘಂಟು
ಸಮಗ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು





ದ್ವಿಭಾಷೆ
ವ್ಯಾಪಕ
ರೀವನ ಇಂಗ್ಲಿಷ್-ಕನ್ನಡ ನಿಘಂಟು.
 ಜೀಗ್ಲರನ ಇಂಗ್ಲಷ್-ಕನ್ನಡ ಶಾಲಾ ನಿಘಂಟು. ಗ್ಯಾರಟ್ಟನ ಇಂಗ್ಲಿಷ್-ಕನ್ನಡ ನಿಘಂಟು. ಇಂಗ್ಲೀಶಿನ ಪದಗಳಿಗೆ ಕನ್ನಡದ್ದೇ ಪದಗಳು, ಇತ್ಯಾದಿ. ರೀವನ ಕನ್ನಡ-ಇಂಗ್ಲಿಷ್  ನಿಘಂಟು. ಬ್ಯುಶರನ  ಕನ್ನಡ-ಇಂಗ್ಲಿಷ್  ನಿಘಂಟು. ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ.ಕನ್ನಡ-ರಶ್ಯನ್ ಸಂಸ್ಕೃತ – ಕನ್ನಡ ಕೋಶ. ಸಂಸ್ಕೃತ – ಕನ್ನಡ ಶಬ್ದಕೋಶ.ಹಿಂದಿ –
ಕನ್ನಡ ಶಬ್ದಕೋಶ. ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ

ಬರೋ-ಎಮಿನೋ ಇವರ ಎಟಿಮಲಾಜಿಕಲ್ ಡಿಕ್ಷನರಿ ಆಫ್ ದ್ರವಿಡಿಯನ್ ಲ್ಯಾಂಗ್ವೇಜಸ್
ಕಿಸಮ್ ವಾರ್ ಗ್ಲೋಸರಿ
ಹವ್ಯಕ-ಇಂಗ್ಲಿಷ್ ನಿಘಂಟು

ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು
ಗ್ಲಾಸರಿ ಆಫ್ ಅಡ್ಮಿನಿಸ್ಟ್ರೇಟಿವ್ ಟರ್ಮ್ಸ್ ಇಂಗ್ಲಿಶ್ – ಕನ್ನಡ
ಇಂಗ್ಲಿಶ್‌ – ಕನ್ನಡ ವಿಜ್ಞಾನ ಕೋಶ
ಭಾಷಾ ವಿಜ್ಞಾನ ಕೋ
ಮನೋವಿಜ್ಞಾನ ಪಾರಿಭಾಷಿಕ ಕೋಶ


ಸಮಗ್ರ
ಮೈಸುರು ವಿವಿ ಇಂಗ್ಲಿಷ್-ಕನ್ನಡ ನಿಘಂಟು. ಕಿಟೆಲನ ಕನ್ನಡ-ಇಂಗ್ಲಿಷ್ ನಿಘಂಟು.





ಅರೆದ್ವಿಭಾಷೆ
ವ್ಯಾಪಕ
ಹಿಂದಿ-ಹಿಂದಿ- ಕನ್ನಡ  ರತ್ನಕೋಶ.ಇಂಗ್ಲಿಷ್-ಇಂಗ್ಲಿಷ್-ಕನ್ನಡ
ಕನ್ನಡ – ಕನ್ನಡ – ಹಿಂದಿ ಶಬ್ದಕೋಶ’
‘ಕನ್ನಡ-ಕನ್ನಡ-ಇಂಗ್ಲಿಷ್-ನಿಘಂಟು’
ಕನ್ನಡ – ಕನ್ನಡ ಇಂಗ್ಲಿಷ್ ನಿಘಂಟು ,ಇತ್ಯಾದಿ.






ಬಹುಭಾಷೆ
ವ್ಯಾಪಕ
ಕನ್ನಡ-ಕನ್ನಡ-ಇಂಗ್ಲಿಷ್-ತಮಿಳು-ಜಪಾನೀ ನಿಘಂಟು.





                                                    

  
                                                 ಗ್ರಂಥ ಋಣ:
1.   http://grammar.about.com/od/il/g/lexicogterm.htm- ಮೊದಲ ನಿಘಂಟುಗಳು ಉಂಟಾಗಿರಬಹುದಾದ ರೀತಿಯ ವವರ ಇಲ್ಲಿದೆ. Howard Jackson, Lexicography: An Introduction. Routledge, 2002 ಇದರಿಂದ ಉಲ್ಲೇಖಿತ.
2.   http://encyclopedia2.thefreedictionary.com/Metalexicography ಈ ತಾಣವು ಈಗ ಹಳತಾಗಿದ್ದು ಏಕಪಕ್ಷೀಯವಾಗಿರಬಹುದೆಂಬ ಎಚ್ಚರಿಕೆಯನ್ನು ಅಲ್ಲಿಯೇ ನೀಡದೆ. ಆದರೂ ಈ ರೀತಿಯ ಹಂತ ಕಲ್ಪನೆ ನಿಘಂಟು ಬೆಳವಣಿಗೆಯನ್ನು ತಾರ್ಕಿಕವಾಗಿ ಸೂಚಿಸತ್ತಿದೆ.
3.   https://kanaja.in/archives/125658 ಇದರಲ್ಲಿ ನಿಘಂಟುಗಳು ಮತ್ತು ಅವುಗಳ ಚರಿತ್ರೆಯ ಬಗ್ಗೆ ಎಸ್ ಎಸ್ ಅಂಗಡಿ ಮತ್ತು ಎನ್ ಬಸವಾರಾಧ್ಯ ಇವರ ಲೇಖನಗಳಿಂದ ಹಲವು ನಿಘಂಟುಗಳ ವಿವರಗಳನ್ನು ಸಂಗ್ರಹಿಸಿದೆ.
4.   http://www.worldcat.org/wcidentities/lccn-n88154575 ಇದೊಂದು ಆನ್ ಲೈನ್ ಮಾರಾಟ ತಾಣವಾಗಿದ್ದು ಕಿಸಮ್ ವಾರ್ ಗ್ಲೋಸರಿಯ ಮೂರು ಆವೃತ್ತಿಗಳಿರುವುದು ಇಲ್ಲಿರುವ ವಿವರಗಳಿಂದ ಸ್ಪಷ್ಟವಾಗುತ್ತದೆ.
5. ಕೇಶಿರಾಜ,1260. ಶಬದಮಣಿದರ್ಪಣಂ. ಇದರ ಐದು ಆವೃತ್ತಿಗಳು ಲಭ್ಯವಿವೆ. ಕಿಟೆಲ್, ವೆಂಕಟರಾವ್ ಮತ್ತು ಶೇಷಯ್ಯಂಗಾರ್, ಡಿ ಎಲ್ ನರಸಿಂಹಾಚಾರ್, ಡಿ ಪದ್ಮನಾಭ ಶರ್ಮ – ಇವರುಗಳಿಂದ ಸಂಪಾದಿತ ಆವೃತ್ತಿಗಳು. ಗ್ಯಾರೆಟ್ ಸಂಪಾದಿತ ಾವೃತ್ತಿಯೊಂದಿರುವುದಾಗಿ ಉಲ್ಲೇಖಗಳಿವೆ.
6.   ಜುಗುಸ್ತ, ಲ್ಯಾಡಿಸ್ಲಾವ್,1971. A Manual of Lexicography. (Prague: Czechoslovak Academy of      Sciences).
7.   ಧಾರವಾಡಕರ ,1975. ಹೊಗನ್ನಡ ಸಾಹಿತ್ಯದ ಉದಯ ಕಾಲ. (ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ).
8.   ಪೋಧಜೆಕ್ಕ,ಮಿರಾಸ್ಲಾವಾ www.lingref.com/cpp/hel-lex/2008/paper2174.pdf  by M Podhajecka - ‎2009: Historical    Development of Lexicographical Genres: Some Methodological Issues.
9.   ಮಹೀದಾಸ ಬಿ ವಿ,2010. ಕನ್ನಡ ಶಾಸ್ತ್ರ ಸಾಹಿತ್ಯಕ್ಕೆ ಕ್ರೈಸ್ತ ಮಿಶನರಿಗಳ ಕೊಡುಗೆ. (ಶ್ರೀನಿವಾಸ ಪುಸ್ತಕ ಪ್ರಕಾಶನ,     ಬಸವನ ಗುಡಿ, ಬೆಂಗಳೂರು). ಇದರಲ್ಲಿ ಹಳಗನ್ನಡ ಸಂಕ್ಷಿಪ್ತ ನಿಘಂಟುಗಳ ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಕ್ರೈಸ್ತ ಮಿಶನರಿಗಳು ರಚಿಸಿದ ಹತ್ತು ನಿಘಂಟುಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಿದ್ದೇನೆ.
10. ಮಹೀದಾಸ ಬಿ ವಿ, 1997. ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು (ಯುಗಪುರುಷ ಪ್ರಕಟನಾಲಯ, ಕಿನ್ನಿಗೋಳಿ, ಮಂಗಳೂರು ದ ಕ ). ಇದರಲ್ಲಿ ಹತ್ತೊಂಬತ್ತನೆಯ ಶತಮಾನದ ನಿಘಂಟುಗಳ ಜೊತೆಗೆ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕೆ ಸಂಬಂಧಿಸಿ ರಚಿತವಾದ ನಿಘಂಟುಗಳನ್ನೂ ಸೇರಿಸಿ ಚರ್ಚಿಸಿದ್ದೇನೆ.
11. ಸೀತಾರಾಮಯ್ಯ, ಎಮ್ ವಿ 1975. ಶಾಸ್ತ್ರ ಸಾಹಿತ್ಯ (ಬೆಂಗಳೂರು ವಿ ವಿ)
12.  ಸ್ವಾನಪೋಲ್, ಪೀಟ್ 2003. Dictionary typologies: A Pragmatic Approach. In Piet van Sterkenburg (ed.) A Practical Guide to Lexicography. Amsterdam and Philadelphia: John Benjamins. 44–69.
13.        Dictionary in Wikipedia.