ಡಿ ಎನ್ ಶಂಕರಭಟ್ಟರು ಕನ್ನಡದ ಹೆಮ್ಮೆಯ ಪುತ್ರ. ಕನ್ನಡಕ್ಕಾಗಿ ಕೈಎತ್ತುವ ವೀರ. ಕನ್ನಡದ್ದೇ ಆದ ವ್ಯಾಕರಣ ಹೇಗಿರಬೇಕು? ಹೊಸ ಪ್ರಪಂಚದಲ್ಲಿ ಕನ್ನಡದ್ದೇ ಆದ ಪದಗಳನ್ನು ಬಳಸಿ ವ್ಯವಹರಿಸಲು ತಡೆಗಳುಂಟೇ ಇಂತಹ ಪ್ರಶ್ನೆಗಳನ್ನು ಎತ್ತಿಕೊಂಡು ಚಿಂತಿಸಿ ವಿಚಾರಗಳನ್ನು ವ್ಯಕ್ತಪಡಿಸಿದವರು. ಇವರ ಹೊಸ ಪ್ರಯತ್ನವನ್ನು ಮೆಚ್ಚುಕೆಯಿಂದ ನೋಡುವ ಒಂದು ಬರಹ ಿದೆ.
ಶಾಸ್ತ್ರವಿಷಯಗಳಲ್ಲಿ
ಯಾರು ಬೇಕಾದರೂ ತಜ್ಞತೆಯನ್ನು ಸಂಪಾದಿಸಬಹುದು; ಆದರೆ ಕಾವ್ಯ ಬರೆಯುವುದು ಅಷ್ಟು ಸುಲಭವಲ್ಲ, ದೇವರ
ಕೃಪೆ ದಕ್ಕಿದವರು ಮಾತ್ರ ಕಾವ್ಯ ಸೃಜಿಸಬಲ್ಲರು ಎಂಬರ್ಥದ ಹಳಗನ್ನಡ ಹೇಳಿಕೆಯೊಂದಿದೆ. ಆದರೆ ಯಾವುದೇ
ಶಾಸ್ತ್ರದಲ್ಲಿ ಅಸೀಮ ಪಾಂಡಿತ್ಯವನ್ನು ಗಳಿಸಿದ ವ್ಯಕ್ತಿಗಳಸಂಖ್ಯೆ ಬೆರಳೆಣಿಕೆಯಷ್ಟೇ ಎಂಬುದು ಅನುಭವದ
ವಿಚಾರ. ಕನ್ನಡ ಭಾಷೆ, ವ್ಯಾಕರಣ ಮತ್ತು ನಿಘಂಟುಗಳಿಗೆ ಸಂಬಂಧಿಸಿದಂತೆ ಇಂತಹ ‘ತಿಳಿವಿಗ’ರು ಸಂಖ್ಯೆಯ
ದೃಷ್ಟಿಯಿಂದಲೂ ಗುಣಮಟ್ಟದ ದೃಷ್ಟಿಯಿಂದಲೂ ಕಡಿಮೆಯೇ. ಮೊದಲಿನಿಂದ ಇವತ್ತಿನವರೆಗೆ ಇಂತಹವರ ಸಂಖ್ಯೆ
ನೂರನ್ನು ಮೀರಿದಂತೆ ಕಾಣಿಸುವುದಿಲ್ಲ. ಈ ಕ್ಷೇತ್ರಗಳಲ್ಲಿ ಉದ್ದಾಮ ಪಾಂಡಿತ್ಯವನ್ನು ಗಳಿಸಿದ ಹೆಸರುಗಳು
ಕೆಲವೇ. ಇಂತಹ ಕೆಲವರಲ್ಲಾದರೂ ಕನ್ನಡ ಪದಗಳನ್ನೇ ಬಳಸಬೇಕು, ಇತರ ಭಾಷಾ ಪದಗಳನ್ನು ಸ್ವೀಕರಿಸುವಾಗಲೂ
ಕನ್ನಡದ ‘ಒಲವು’ಗಳಿಗನುಸಾರವಾಗಿಯೇ ಆಗಬೇಕೆಂಬ ಛಲವುಳ್ಳವರು ಕೇವಲ ಒಬ್ಬರೋ ಇಬ್ಬರೋ ಸಿಗಹುದು. ಹಳಬರಲ್ಲಿ
ಆಂಡಯ್ಯನನ್ನು ಹೊರತುಪಡಿಸಿದರೆ ಕನ್ನಡದ ಬಗ್ಗೆ ಇಂತಹ ಛಲದ ವ್ಯಕ್ತಿ ಇನ್ನೊಬ್ಬ ಕಂಡುಬರುವುದಿಲ್ಲ.
ಹೊಸಬರಲ್ಲಿ ಡಿ ಎನ್ ಶಂಕರಭಟ್ಟರೊಬ್ಬರೇ ಈ ಛಲದವರು. ಕವಿಗಳಲ್ಲಾಗಲೀ ಶಾಸ್ತ್ರಕಾರರಲ್ಲಾಗಲೀ ಈ ನಡೆಯವರು ಕಾಣುವುದಿಲ್ಲ. ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ
ವಿವಾದಾತೀತ ಪಾಂಡಿತ್ಯದ ಒಂದು ಹೆಸರು ಶ್ರೀ ಫರ್ಡೀನಂದ್ ಕಿಟೆಲ್ ಆದರೆ ಎರಡನೆಯದೇ ಶ್ರೀ ಡಿ ಎನ್ ಶಂಕರಭಟ್ಟರದು.
ಕಿಟೆಲನಿಗೆ ಕನ್ನಡವನ್ನೇ ಬಳಸಬೇಕು, ಇತರ ಪದಗಳನ್ನು ಬಳಸಬಾರದೆಂಬ ದೀಕ್ಷೆ ಏನೂ ಇರಲಿಲ್ಲ. ಕನ್ನಡ ಪದಗಳನ್ನೇ ಬಳಸಬೇಕು. ಕನ್ನಡದ ಒಲವುಗಳಿಗನುಸಾರವಾಗಿಯೇ
ಭಾಷೆಯನ್ನು ಬೆಳಸಬೇಕೆಂಬ ಛಲ ಹೊತ್ತವರು ಡಿ ಎನ್ ಶಂಕರ ಭಟ್ಟರು. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬುದು ಇವರು ರಚಿಸಿದ ವಿಭಿನ್ನ ನಿಘಂಟು.
ತಮ್ಮ ವ್ಯಾಕರಣ ಕೃತಿಗಳಲ್ಲಿ ತಾವು
ಪ್ರತಿಪಾದಿಸಿದ ತತ್ವಗಳನ್ನು ಅನ್ವಯಿಸಿ ತೋರಿಸಿರುವುದು ಈ ಕೃತಿಯಲ್ಲಿ ಶಂಕರಭಟ್ಟರ ವೈಶಿಷ್ಟ್ಯ. ಇಂಗ್ಲಿಷ್
ಪದದ ಕನ್ನಡ ಅರ್ಥ ಗೊತ್ತಿಲ್ಲದಾಗ ಗೊತ್ತು ಮಾಡಿಕೊಳ್ಳುವುದಕ್ಕಾಗಿ
ಈ ನಿಘಂಟಿಲ್ಲ. ಇದರ ಉದ್ದೇಶವನ್ನು ಕೃತಿಕಾರರು ಹೀಗೆ ಹೇಲಳಿದ್ದಾರೆ: “ಇಂಗ್ಲಿಶ್ ನುಡಿಯನ್ನು ತಿಳಿದಿದ್ದು,
ಅದರಲ್ಲಿ ಬರುವ ಪದಗಳಿಗೆ ಸಮಾನವಾಗಿರುವ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ಮತ್ತು ಅಂತಹ
ಪದಗಳನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ತಿಳಿಯಬೇಕೆಂದಿರುವವರಿಗಾಗಿ ಈ ಪದಕೋಶವನ್ನು
ತಯಾರಿಸಿದ್ದೇನೆ.” ಕೊಟ್ಟಿರುವ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಕ್ಕಾಗಿ
ಮತ್ತು ಇಂತಹ ಪದಗಳನ್ನು ಸಂದರ್ಭಾನುಸಾರ ಉಂಟುಮಾಡಿಕೊಳ್ಳಲು ಸಹಾಯಕ್ಕಾಗಿ ಪದರಚನೆ ಬಗ್ಗೆ ಕನ್ನದ ಒಲವುಗಳೇನು ಎಂಬುದನ್ನು
ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇವರು ಪ್ರತ್ಯಯ ಎಂಬುದಕ್ಕೆ ಒಟ್ಟು, ಕ್ರಿಯಾಪದ ಎಂಬುದಕ್ಕೆ ಎಸಕ,
ನಾಮಪದ ಎನ್ನಲು ಹೆಸರು, ಗುಣವಚನಕ್ಕೆ ಪರಿಚೆ ಪದ, ಅರ್ಥ ಎನ್ನಲು ಹುರುಳು, ವಿರೋಧಾರ್ಥ ಎನ್ನಲು ಎದುರು ಹುರಳು – ಹೀಗೆ ಕನ್ನಡದ್ದೇ ಆದ ಪದಗಳನ್ನು
ಬಳಸಿ ಹೊಸಪದಗಳನ್ನು ಹೇಗೆ ಕಟ್ಟಿಕೊಳ್ಳಬಹುದೆಂಬುದನ್ನು ಸೂಚಿಸಿದ್ದಾರೆ.
ನಿಘಂಟಿನಲ್ಲಿ ಸು.15,000ಪದಗಳಷ್ಟು
ಪ್ರಧಾನ ಉಲ್ಲೇಖಗಳಿವೆ. ಇದರಲ್ಲಿ ಆಯ್ದುಕೊಂಡಿರುವ ಇಂಗ್ಲಿಷ್ ಪದಗಳ ಬಗ್ಗೆ ಸಮರ್ಥನೆಯನ್ನು ಕೃತಿಕಾರರು
ಹೀಗೆ ವಿವರಿಸಿದ್ದಾರೆ: “ಎಂತಹ ಇಂಗ್ಲಿಶ್ ಪದಗಳಿಗೆ ದೊರೆಯಾದ ಕನ್ನಡ ಪದಗಳು ಬರಹಗಾರರಿಗೆ ಬೇಕಾಗಬಹುದೋ
ಅಂತಹ ಪದಗಳನ್ನು ಮಾತ್ರವೇ ಇಲ್ಲಿ ಆರಿಸಿಕೊಂಡಿದ್ದೇನೆ. ನೇರವಾಗಿ ವ್ಯಾಕರಣಕ್ಕೆ ಸಂಬಂಧಿಸಿದಂತಹ
and, but, when ಮೊದಲಾದುವನ್ನುಇಲ್ಲಿ ಕೊಟ್ಟಿಲ್ಲ.” ಆದ್ದರಿಂದ ಸಾಮಾನ್ಯವಾದ ದಿನಚರಿಯಲ್ಲಿ ನಾವು
ಬಳಸಬೇಕಾದಂತಹ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ನೀಡಲುದ್ದೇಶಿಸಿದ್ದಾರೆ.
ಇಲ್ಲಿ
ಉಲ್ಲೇಖ ಪದಗಳ ಜೋಡಣಾ ವ್ಯವಸ್ಥೆ ಹೀಗಿದೆ: ಉಲ್ಲೇಖ ಪದ, ಅದರ ಮುಂದೆ ಪದದ ವ್ಯಾಕರಣ ವಿವರ, ಮತ್ತು
ಅದರ ಮುಂದೆ ಕನ್ನಡ ಅರ್ಥ. ವ್ಯಾಕರಣ ವಿವರಗಳನ್ನು ಕೊಡುವಾಗ ಅನುಸರಿಸಿರುವ ವಿಧಾನ ಹೀಗಿದೆ: “ಈ ಪದಕೋಶ
ಕನ್ನಡದ ಪದಕೋಶವಲ್ಲದೆ ಇಂಗ್ಲಿಶ್ ಪದಕೋಶವಲ್ಲ. ಹಾಗಾಗಿ ಇಲ್ಲಿ ಇಂಗ್ಲಿಶ್ ಪದಗಳ ಅನಂತರ ಕೊಟ್ಟಿರುವ
ವ್ಯಾಕರಣಾಂಶಗಳು (ನಾಮಪದ (ನಾ), ಕ್ರಿಯಾಪದ (ಕ್ರಿ), ಗುಣಪದ (ಗು), ಆಗುವಿಕೆ (ಆ), ಮತ್ತು ಮಾಡುವಿಕೆ
(ಮಾ) ಎಂಬವು) ಅವುಗಳ ಅನಂತರ ಬರುವ ಕನ್ನಡ ಪದಗಳಿಗೆ ಸಂಬಂಧಿಸಿವೆಯಲ್ಲದೆ ಇಂಗ್ಲಿಶ್ ಪದಗಳಿಗೆ ಸಂಬಂಧಿಸಿಲ್ಲ.”
ಇಲ್ಲಿ ಪದಗಳು ಮತ್ತು ಅವುಗಳ ಅರ್ಥವನ್ನು ಕೊಟ್ಟಿರುವ ರೀತಿಗೆ ಈ ಉದಾಹರಣೆಗಳನ್ನು ನೋಡಬಹುದು:
chief ನಾ ಮೇಲಾಳು, ಮೊದಲಿಗ chief ಗು ಮಲ್ಯ (ಮಲ್ಯ
ಕೆಲಸ), ಮಲ್ಲ (ಮಲ್ಲ ಮಾತು; ಮಲ್ಲಂತಿಗೆ), ಮೊದಲಿನ (ಮೊದಲಿನ ಎಡೆ). Whip ನಾ ಕೊರಡ (ಕೊರಡದಲ್ಲಿ
ಹೊಡೆ), ಚಾವಟಿ, ಚಾಟಿ (ಚಾಟಿಯ ಏಟು) guest ನಾ ಬಿದ್ದಿನ
(*ಮನೆಗೆ ಬಿದ್ದಿನ ಬಂದಿದ್ದಾನೆ). Dictionary ನಾ ಪದನೆರಕೆ. ಈ ಪದಗಳನ್ನು ಮೂಲ ಹೂರಣವೆಂಬಂತೆ ಇಟ್ಟುಕೊಂಡು
ನಮಗೆ ಬೇಕಾದ ಪದವನ್ನುಂಟು ಮಾಡಿಕೊಳ್ಳ ಬೇಕೆಂಬುದು ಬರಹಗಾರರ ಆಶಯ. ಅದರಂತೆ chief-whip ‘ಮಲ್ಲಚಾವಟಿ’ಯಾಗುತ್ತಾನೆ.
Chief-guest ‘ಮಲ್ಲ ಬಿದ್ದಿನ’ನಾಗುತ್ತಾನೆ. Bilingual dictionary ‘ಇನ್ನುಡಿ ಪದನೆರಕೆ’ಯಾಗುತ್ತದೆ.
original-work ತನ್ನತನವಿರುವ ಗೆಯ್ಮೆ ಎಂದಾಗುತ್ತದೆ. Traveller ನಾ ದಾರಿಗ, ದಾರಿಕಾರ ,
judge ನಾ ತೀರ್ಪುಗಾರ ಎಂದಾಗುತ್ತವೆ. ಇವೆಲ್ಲ ಏನೋ ಒಂದು ರೀತಿಯ ಬಳಕೆಗೆ ಒಗ್ಗದ ಮಾತುಗಳಾಗಿ ಕಾಣಬಹುದು.
ನಮ್ಮ ಪ್ರಾಧ್ಯಾಪಕರಾಗಿದ್ದ ಎಸ್ವಿಪಿಯವರು ನೆನಪುಮಾಡಿಕೊಳ್ಳುತ್ತಿದ್ದರು: ತಾನು ಉಪನ್ಯಾಸಕನಾಗಿ ಸೇರಿದ
ಸಂದರ್ಭದಲ್ಲಿ ‘ಸಾರಿಗೆ’(<ಸಾರ್) ಎಂಬ ಪದವನ್ನು ಹೊಸದಾಗಿ ಬಳಕೆಗೆ ತರಲಾಗಿದ್ದು ಹಲವರು ಸಾಂಬಾರಿಗೆ,
ಚಟ್ನಿಗೆ ಎಂದಿದ್ದ ಹಾಗೆ ಇದು ‘ಸಾರಿಗೆ’ ಎಂದು ವ್ಯಂಗ್ಯವಾಡುತ್ತಿದ್ದರು ಎಂದು. ಈಗ ಈ ಪದ ಯಾರಿಗೂ
ಒಗ್ಗದ್ದಾಗಿಲ್ಲ. ಕನ್ನಡದ್ದೇ ಪದವೊಂದನ್ನು ಬಳಕೆಗೆ ತರುವುದು ಹೀಗೆ ಕಷ್ಟಕರವೇ ಆದರೂ ಕಾಲಾಂತರದಲ್ಲಿ
ಅದು ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸಾಮೂಹಿಕ
ಇಚ್ಛಾಶಕ್ತಿ ಬೇಕು. ಹೊಸಪದಗಳ ಹುಟ್ಟಿಗೆ ಪ್ರತಿಯೊಬ್ಬರೂ ಅದೇ ತೆರನ ಸ್ವಂತಿಕೆ ತೋರುವುದೂ ಅಗತ್ಯವಾಗುತ್ತದೆ.
ಇಂತಹ ಒಂದು ಪದಕೋಶವು ಇಂಗ್ಲಿಶ್ ಪದವೊಂದಕ್ಕೆ
ಕನ್ನಡದ್ದೇ ಆದ ‘ಹುರುಳುಗಳು’ ಎಷ್ಟಿವೆ ಎಂಬುದನ್ನು ತೋರಿಸಿಕೊಡುತ್ತವೆ. ಉದಾ. “sink ಕ್ರಿ 1 ಕುಸಿ(ಕುಸಿದು
ಬೀಳು; ಮನೆ ಕುಸಿಯಿತು), ತಗ್ಗು (ತಗ್ಗಿದ ನೆಲ), ಕುಗ್ಗು (ಕುಗ್ಗಿದ ಅದಟು), ಕುಂಗು, ನೆಗ್ಗು (ತಂಬಿಗೆ
ನೆಗ್ಗಿ ಹೋಗಿದೆ), ತಾಳು (ಕೊಳದಲ್ಲಿ ನೀರು ಕೆಳಗೆ ತಾಳಿದೆ) 2 ಮುಳುಗು (ನೀರಿನಲ್ಲಿಮುಳುಗಿತು, ಮುಳುಗಡೆ),
ಆಳು (ಕೊಳದಲ್ಲಿ ಆಳಿ ತಂಬಿಗೆಯನ್ನು ಹೊರತಂದ), ಕಂತು (ನೀರಿನಲ್ಲಿ ಮಂಡಿ ಕಂತುವ ತನಕ ಹೋಗು), ಅಗುಳು
(ಕೊಳದಲ್ಲಿ ಅಗುಳಿ ಸತ್ತು ಹೋದ), ಹೂಳು (ಕಾಲು ಹೂತು ಹೋಗಿದೆ)”. ಇಷ್ಟೊಂದು ಅರ್ಥಗಳಿವೆಯಲ್ಲ ಎಂದು
ಆಶ್ಚರ್ಯವಾಗುತ್ತದೆ. ಆದರೆ ನಿಘಂಟನ್ನು ಇಂದು ಸಾಮಾನ್ಯವಾಗಿ ನೋಡುತ್ತಿರುವುದು ತಮಗೆ ಅರ್ಥವಾಗದ ಇಂಗ್ಲಿಷ್
ಪದ ಎದುರಾದಾಗ. ಆದರೆ ಈ ನಿಘಂಟನ್ನು ಪರಾಮರ್ಶಿಸಿದರೆ ಅರ್ಥವಾಗದ ಹುರುಳುಗಳೇ ದೃಷ್ಟಿಗೆ ಬೀಳುವ ಸಂಭವವಿದೆ.
ಆದ್ದರಿಂದ ಬಳಕೆದಾರ ಹಿಂಜರಿಯಬಹುದು. ಕನ್ನಡದ್ದೇ ಪದವನ್ನು ಹುಡುಕಿಕೊಳ್ಳಬೇಕೆಂಬುವವರಿಗೆ ಈ ನಿಘಂಟು
ಖಂಡಿತ ಉಪಯುಕ್ತ. ಅಂತಹ ಅಗತ್ಯವು ಎಲ್ಲರಿಗೂ ಸಂದರ್ಭಾನುಸಾರ ಉಂಟಾಗುತ್ತದಾದ್ದರಿಂದ ಈ ಪುಸ್ತಕವನ್ನು
ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿರುವುದು ಉಚಿತ. ಆಗಾಗ ನೋಡಿ ಮನನ ಮಾಡಿ ಬರಹಗಾರರ ಆಶಯವನ್ನು ಆಗುಮಾಡಿದರೆ
ಕನ್ನಡವೂ ಧನ್ಯ, ಬರೆದವರೂ ಧನ್ಯ.
ಪುಸ್ತಕದ
ಪ್ರಕಾಶಕರು: ಭಾಷಾ ಪ್ರಕಾಶನ, ಬಿಲ್ಲೇಶ್ವರ, ಹುಂಚ, ಹೊಸನಗರ, ದೂರವಾಣಿ 9449774956. ಪ್ರಥಮ ಆವೃತ್ತಿ
2008, ಎರಡನೆಯ ಮುದ್ರಣ 2011.