Search This Blog

Wednesday, 13 January 2016

ಭೈರಪ್ಪನವರ ತಂತು: ದೇಶದಲ್ಲಿ ಸಂಸ್ಕೃತಿ ಬದಲಾವಣೆಯ ವ್ಯಾಖ್ಯಾನ

ಭೈರಪ್ಪನವರ ತಂತು: ದೇಶದಲ್ಲಿ ಸಂಸ್ಕೃತಿ ಬದಲಾವಣೆಯ ವ್ಯಾಖ್ಯಾನ
                                                       
ಸಾಮಾಜಿಕವಾಗಿ ಪ್ರಸ್ತುತವಾದ ಯಾವುದೇ  ವಸ್ತುವನ್ನು ಕಾದಂಬರಿಯನ್ನಾಗಿಸುವುದರಲ್ಲಿ ಭೈರಪ್ಪನವರದು ಎತ್ತಿದ ಕೈ. ಯಾವುದೇ ಕಾದಂಬರಿಯನ್ನು ಓದಿದಾಗಲೂ ಇದೇ ಇವರ ಮಾಸ್ಟರ್ ಪೀಸ್ ಎನಿಸುವಂತಿರತ್ತದೆ ಇವರ ರಚನೆ. ತಂತು ಕೂಡ ಅಂತಹ ಕಾದಂಬರಿಗಳಲ್ಲೊಂದು. “ಇಡೀ ಸ್ವಾತಂತ್ರ್ಯೋತ್ತರ ಭಾರತದ ನಾಡಿಯ ಕಥೆ” ಇಲ್ಲಿರುವುದಾಗಿ ಕಾದಂಬರಿಕಾರರು ಹೇಳಿರುವುದು ಅತಿಶಯೋಕ್ತಿಯೇನಲ್ಲ.
ಇದರಲ್ಲಿ ಮುಖ್ಯವಾಗಿ ಮೂರು ವಸ್ತುಗಳು ಚರ್ಚೆಯಾಗಿವೆ: ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು. ಈ ಮೂರು ಎಳೆಗಳನ್ನು ಹೆಣೆದು ಸಿದ್ಧವಾಗಿದೆ ತಂತುವಿನ ಹುರಿ. ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಮತ್ತು ಸಂಗೀತಗಳೂ ಸೇರಿ ಸಿತಾರಿನ ಐದು ತಂತಿಗಳು ಸಿದ್ಧವಾಗುತ್ತದೆ. ಒಂದು ದಶಕದ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಸಿಂಹಾವಲೋಕನಕ್ರಮದಿಂದ ಭಾರತದ ಜೀವನದ ಮೇಲೆ ಮಹಾತ್ಮ ಗಾಂಧಿ ಮತ್ತು ವಿವೇಕಾನಂದರ ಪ್ರಭಾವದ ಒಂದು ನೋಟವೂ ಇಲ್ಲಿ ಕಂಡು ಬರುತ್ತದೆ.
          ಕಾದಂಬರಿ ಪ್ರಾರಂಭವಾಗುವುದು ಬಸನಪುರ ಎಂಬ ಹಳ್ಳಿಯ ಚೆನ್ನಕೇಶವ ದೇವಸ್ಥಾನದ ಸರಸ್ವತಿಯ ಪ್ರತಿಮೆ ಕಳುವಾದ ವರದಿಯನ್ನು ಪ್ರಕಟಿಸಲು ಟ್ರಿಬ್ಯೂನ್ ಪತ್ರಿಕೆಯ ಬೆಂಗಳೂರಿನ ರೆಸಿಡೆಂಟ್ ಎಡಿಟರ್ ರವೀಂದ್ರ ತನ್ನ ವರದಿಗಾರನಿಗೆ ಸೂಚನೆ ಕೊಡುವ ದೃಶ್ಯದಿಂದ. ಘಟನೆಯಿಂದ ರವೀಂದ್ರ ದುಃಖಿತನಾಗುತ್ತಾನೆ. ಈ ದೇವಸ್ಥಾನ ತನ್ನ ಹುಟ್ಟೂರಿನದೇ ಆಗಿದ್ದು ರವೀಂದ್ರ ಅಲ್ಲಿಗೆ ಹೋಗಿ ದೇವಸ್ಥಾನಕ್ಕಾಗಿ ತಾನೇನು ಮಾಡ ಬಹುದೆಂಬುದನ್ನು ಯೋಚಿಸಬೇಕೆಂದುಕೊಂಡು ಅನಂತರ ಅಲ್ಲಿಗೆ ತಲುಪುತ್ತಾನೆ. ಅವನಿಗೆ ಅಲ್ಲಿ ಕಂಡುಬರುವ ಸಂಸ್ಕೃತಿಯ ಬದಲಾವಣೆ ಅವನ ನಿಲುವುಗಳ ಪುನರ್ವಿಮರ್ಶೆಗೆ ಕಾರಣವಾಗುತ್ತದೆ. ತಾನು ಬಾಲ್ಯದಲ್ಲಿ ಮಂದಿರಕ್ಕೆ ಹೋಗಿ ದರ್ಶನ ಪಡೆಯುತ್ತಿದ್ದ ಸರಸ್ವತಿಯ ಮೂರ್ತಿಯೇ ಈಗ ಕಳುವಾಗಿರುವುದು. ದೇವಾಲಯದ ಮುಂದೆ ದೊಡ್ಡ ಕಟ್ಟಡವೊಂದು ನಿರ್ಮಾಣವಾಗಿದೆ; ದೇವಸ್ಥಾನದ ಕಟ್ಟೆ ಸಿಗರೇಟೆಳೆಯುವ ಆಲಸಿಗಳ ಕಟ್ಟೆಯಾಗಿದೆ; ಗೌರವ ಭಾವದ ಶುಚಿತ್ವ ಮರೆಯಾಗಿದ್ದು ಮಲಮೂತ್ರಗಳ ವಾಸನೆ ಹೊಡೆಯುತ್ತಿದೆ; ತನ್ನ ಮನೆತನದವರು ಆಸ್ಪತ್ರೆಗೆ ನೀಡಿದ್ದ ಸ್ಥಳದ ಜ್ಞಾಪಕಾರ್ಥ ಅಭಿಮಾನಿಗಳು ನೆಟ್ಟಿದ್ದ ನಾಮಫಲಕದ ಸ್ಥಾನದಲ್ಲಿ ಸ್ಥಳೀಯ ರಾಜಕಾರಣಿಯ ಹೆಸರು ಹೊತ್ತ ಹೊಸ ಫಲಕ ಕಂಗೊಳಿಸುತ್ತಿದೆ. ಇತ್ಯಾದಿ ಒಂದು ಕಡೆ. ಇನ್ನೊಂದು ಕಡೆ ಸಮಕಾಲೀನವಾಗಿ ಜಾತಿ-ಜಾತಿಗಳ ಸಾಮರಸ್ಯ ಮಾಯವಾಗಿ ಅಧಿಕಾರಕ್ಕಾಗಿ ಪೈಪೋಟಿ. ಏನಕೇನ ಪ್ರಕಾರೇಣ ಹಣಗಳಿಕೆಗಾಗಿ ಮೇಲಾಟ ಇವೆಲ್ಲ ಬದುಕಿನ ರೀತಿಗಳಾಗಿವೆ. ಇಂತಹ ಸಂದರ್ಭದಲ್ಲಿ ತಾನು ಮಾಡುವಂತಹದು ಹೆಚ್ಚೇನೂ ಇಲ್ಲವೆಂದು ನಿರ್ಣಯಿಸ ಬೇಕಾಗುತ್ತದೆ. ಅಲ್ಲಿ ಅವನಿಗೆ ಆಶಾಕಿರಣಾಗಿ ಅಚ್ಚೊತ್ತಿದ್ದು ಹಾಲುಕೆರೆಯ ವಿವೆಕಾನಂದ ವಸತಿಶಾಲೆಯೊಂದೇ.
          ವಿವೇಕಾನಂದ ಶಾಲೆ ರವೀಂದ್ರನಿಗೆ ಒಂದು ರೀತಿಯಲ್ಲಿ ಅಗತ್ಯಕ್ಕೆ ಒದಗಿ ಬಂದ ಸಂಸ್ಥೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ತನ್ನ ಮಗ ಅನೂಪ ಸಹವಾಸ ದೋಷಗಳಿಂದ ಕೆಟ್ಟ ಚಾಳಿಗಳಿಗೆ ಬಲಿಯಾದ್ದರಿಂದ ಉತ್ತಮ ಶೀಲವನ್ನು ಬೆಳೆಸಲು ಸಮರ್ಥವಾದ ವಿದ್ಯಾ ಸಂಸ್ಥೆಯನ್ನು ಹುಡುಕುತ್ತಿದ್ದಾಗ ಅವನಿಗೆ ಈ ಶಾಲೆ ವರರೂಪವಾಗಿ ಹೊಳೆಯಿತು. ಅದರ ಮುಖ್ಯೋಪಾಧ್ಯಾಯ ಬಾಲ್ಯದಲ್ಲಿ ತನ್ನ ಮನೆಯಲ್ಲಿದ್ದು ಓದಿಕೊಂಡು ತನೆಗೆ ಇಂಗ್ಲಿಷ್ ಗ್ರಾಮರ್ ಕಲಿಸಿದ ಅಣ್ಣಯ್ಯ. ತಾನು ಬಸಂಪುರಕ್ಕೆ ಹೋದಾಗ ಇವನ ಪರಿಚಯವಾಗಿ ಆತ ಹಾಲುಕರರೆಯಲ್ಲಿ ಸ್ಥಾಪಿಸಿದ್ದ ವಿವೇಕಾನಂದ ಶಾಲೆಯ ಸಾಕ್ಷಾತ್ ಪರಿಚಯವಾಯಿತು. ಅಲ್ಲಿ ಅಧ್ಯಾಪಕರಲ್ಲಿ ಒಬ್ಬೊಬ್ಬರೂ ತಜ್ಞತೆಯ ಸಂಪಾದನೆ ಮತ್ತು ತ್ಯಾಗಮಯ ಜೀವನದ ಜೀವಂತ ಆದರ್ಶಗಳಾಗಿ ವಿದ್ಯಾರ್ಥಿಮಾರ್ಗದರ್ಶನ ಮಾಡುತ್ತಾರೆ. ಎಮ್ ಬಿ ಎ  ಮಾಡಿ ಉತ್ತಮ ಸಂಬಳದ ನೌಕರಿಯನ್ನು ಬಿಟ್ಟು ಸಿತಾರಿನಲ್ಲಿ ತಜ್ಞತೆ ಸಾಧಿಸುತ್ತಾ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಹೊನ್ನತ್ತಿ ವಿಶೇಷವಾಗಿ ಗಮನ ಸೆಳೆಯುತ್ತಾನೆ. ರಾಮಚಂದ್ರನೆಂಬ ಅಧ್ಯಾತ್ಮ ಸಾಧಕನೂ ಅಲ್ಲಿ ಶಿಕ್ಷಕ. ರವೀಂದ್ರನಿಗೆ “ಗಾಂಧಿ ಮಾಡಿ ತೋರಿಸಿದ ಕಾಯಕದ ಮೂಲಕ ವ್ಯಕ್ತಿತ್ವದ ಬೆಳವಣಿಗೆಯಾಗುವ ವಿಧಾನ ಪರಿಕರಗಳೆಲ್ಲ ಅಲ್ಲಿ ಅನುಷ್ಠಾನದಲ್ಲಿವೆ . ಅಲ್ಲಿ ಬೆಳೆಯ ಬೇಕು ಅವನು ಎನ್ನಿಸಿತು”(ಪು 128). ಆದ್ದರಿಂದಲೇ ತಾಯಿಗೆ ಅಷ್ಟೇನೂ ತೃಪ್ತಿಯಿಲ್ಲದಿದ್ದರೂ ಅನೂಪ ಆ ಶಾಲೆಯಲ್ಲಿ ಕಲಿಯುವಂತಾಯಿತು. ತಾನು ಬೆಂಗಳೂರಿನ ತನ್ನ ಕಛೇರಿಯಲ್ಲಿದ್ದಾಗ ಬಸನ ಪುರದ ಎಮ್ ಎಲ್ ಎ ಜಯಪ್ಪಗೌಡನ ಭೇಟಿ ಸಂಸ್ಕೃತಿಯ ಬದಲಾವಣೆಯನ್ನು ರವೀಂದ್ರನಿಗೆ ಚಿತ್ರಿಸುತ್ತದೆ: “ಒಳಗೆ ಬಂದಾತ ನಾಲ್ಕನೇ ಮಜಲಿನ ಕಾಂಗ್ರೆಸ್ಸಿಗ. ಮೊದಲನೆ ಮಜಲಿನವರು ಒರಟು ಬಿಳಿ ಖಾದಿಯ ಪಂಚೆ, ಜುಬ್ಬಾ ಧರಿಸುತ್ತಿದ್ದರು. ಎರಡನೆಯವರು ತುಸು ನಯವಾದ ಖಾದಿಯಲ್ಲಿ ಅಂದವಾಗಿ ಪೈಜಾಮ ಜುಬ್ಬಾ ಅಥವ ಕೊರಳ ಪಟ್ಟಿ , ಎದೆಯ ಮೇಲೊಂದು ಜೇಬು ಇರುವ ಜುಬ್ಬಾಧಾರಿಗಳು. ಮೂರನೆಯವರು ಬೂದು ಅಥವ ಕಂದು ಬಣ್ಣದ ಖಾದಿಯ ಪ್ಯಾಂಟ್ ಮತ್ತು ಕ್ಲೋಸ್ ಕಾಲರ್ ಕೋಟು ಧರಿಸುತ್ತಿದ್ದರು. ಈತ ಖಾದಿಯಲ್ಲೇ ಸಫಾರಿ ಸೂಟು ಧರಿಸಿ ಇತ್ತ ರಾಜಕಾರಿಣಿಯಂತೆ ಅತ್ತ ಉದ್ಯಮ ಕಾರ್ಯ ನಿರ್ವಾಹಕನಂತೆ ಕಾಣುತ್ತಿದ್ದ”(ಪು 107).
ಕಾದಂಬರಿಯ ಎರಡನೆಯ ಮಜಲಿನಲ್ಲಿ ರವೀಂದ್ರನ ಪತ್ನಿ ಕಾಂತಿಯ ಸ್ವಾತಂತ್ರ್ಯಪ್ರಿಯತೆ, ಅವಳ ಐಷಾರಾಮೀ ಜೀವನದ ಸೆಳೆತ, ಮಗನನ್ನು ಹೇಗೋ ಬೆಳೆಸಬೇಕೆಂಬ ಇರಾದೆ - ಇಂತಹವೆಲ್ಲ ರವೀಂದ್ರನ ಕೌಟುಂಬಿಕ ಜೀವನದಲ್ಲಿ ಬಿರುಕಿಗೆ ಕಾರಣವಾಗುತ್ತವೆ. ಕಾಂತಿಯ ಮತ್ತು ಅವಳ ದೆಹಲಿ ಸ್ನೇಹಿತೆ ಶೀತಲಳ ವಿವಾಹೇತರ ಸಂಬಂಧಗಳು ಉದಯೋನ್ಮುಖ  ಸಮಾಜದಲ್ಲಿ ಲೈಂಗಿಕ ಸಂಬಂಧಗಳ ಆಧುನಿಕ ಭಾಷ್ಯವಾಗುತ್ತದೆ. ಉನ್ನತಿ ಅಧಿಕಾರಿಯೊಬ್ಬನೊಂದಿಗೆ, ಹೊನ್ನತ್ತಿಯೊಂದಿಗೆ, ಕಲಾಲೋಕದ ಮುಂದಾಳು ಹರಿಶಂಕರನೊಂದಿಗೆ – ಹೀಗೆ ಕಾಂತಿಯ ಸ್ವಚ್ಛಂದ ಸಂಬಂಧಗಳು. ಲೈಂಗಿಕತೆಯೂ ಇತರ ಆವಶ್ಯಕತೆಗಳಂತೆಯೇ ಇನ್ನೊಂದು ಆವಶ್ಯಕತೆ ಎಂದು ಭಾವಿಸಿ ಸ್ವಚ್ಛಂದ ಲೈಂಗಿಕ ಸಂಬಂಧಗಳ ಹೊಸರೀತಿಯ ಜೀವನಕ್ಕೆ ಗೆಳತಿಯರಿಬ್ಬರೂ ಪ್ರತಿನಿಧಿಗಳಾಗುತ್ತಾರೆ. ಆರ್ಥಿಕ ಸ್ವಾತಂತ್ರ್ಯ ಗಳಿಸುವ ಅವಸರದಲ್ಲಿ ಶೀತಲಳೊಡನೆ ಸೇರಿ ಗಾರ್ಮೆಂಟ್ ವ್ಯವಹಾರದಲ್ಲಿ ತೊಡಗಿ ಕಾಂತಿ ದೆಹಲಯಲ್ಲೇ ಉಳಿಯುತ್ತಾಳೆ. ಅನಂತರ ಗಂಡನಿಗೆ ತಿಳಿಯದಂತೆ ಮಗನಿಗೂ ಹಣವನ್ನೊದಗಿಸುತ್ತಾಳೆ. ಮನೋನೆಮ್ಮದಿ, ಕೌಟುಂಬಿಕ ಸಂತೋಷ ಮತ್ತು ಮುಂದಿನ ಪೀಳಿಗೆಗೆ ಕುಟುಂಬವ್ಯವಹಾರಗಳ ನೆಲೆಗಟ್ಟು ಇವೆಲ್ಲ ನಶಿಸುವ ಹಾದಿ ಹಿಡಿಯುತ್ತವೆ; ಹಣ ಮತ್ತು ಅಂತಸ್ತುಗಳು ಮುಖ್ಯ ವೇದಿಕೆಗೆ ಬರುತ್ತವೆ. ಹೊನ್ನತ್ತಿಯನ್ನೂ ಈ ಗುರಿಯತ್ತ ಕಾಂತಿ ಸೆಳೆಯುತ್ತಾಳೆ. ಆದರೆ ಹೊನ್ನತ್ತಿ ಐಷಾರಾಮದ ಸೆಳೆತದಿಂದ ಬಿಡಿಸಿಕೊಳ್ಳುವುದು, ಲೈಂಗಿಕ ಸ್ವಚ್ಛಂದತೆಯಿಂದ ದೂರ ಸರಿಯುವುದು ಈ ನೆಲದ ಸಂಸ್ಕೃತಿಯ ಶಕ್ತಿಯನ್ನು ತೋರಿಸುತ್ತದೆ.
  ಪರಶುರಾಮ ಗೌಡನಿಂದ ಪ್ರತೀಕಾರಾರ್ಥ ತೆರೆಯಲ್ಪಟ್ಟ ಸರಕಾರೀ ಶಾಲೆಯಿಂದಾಗಿ ವಿವೇಕಾನಂದ-ಶಾಲೆ ಮಕ್ಕಳಿಲ್ಲದೆ ಸೊರಗುವುದು, ಅದನ್ನು ಉಳಿಸಿಕೊಳ್ಳಲು ಶ್ರೀಮಂತರ ಸಹಾಯ ಪಡೆಯುವುದು ಮತ್ತು ಇದರಿಂದಾಗಿ ಅದು ಮೊದಲಿನ ಶಾಲೆಯಾಗಿ ಉಳಿಯದೆ ಶ್ರೀಮಂತ ವರ್ಗದ ಇಚ್ಛಾನುಸಾರಿಯಾಗಿ ಪರಿವರ್ತಿತವಾಗುತ್ತದೆ.   ವಿದ್ಯಾರ್ಥಿಗಳೇ ಮಣ್ಣಿನಿಂದ ಕಟ್ಟಿದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಆ ಕಟ್ಟಿನಿಂದ ಬೇರೆಯಾಗಿ ಹೊಸ ರೀತಿಯ ಶಿಲ್ಪವನ್ನು ಅಳವಡಿಸಿಕೊಂಡು, ಹೊಸ ಗಟ್ಟಿ ಸಾಮಗ್ರಿಗಳಿಂದ ವೈಭವಯುತವಾಗಿ ಮಾರ್ಪಡುತ್ತದೆ. ಆ  ಹಳ್ಳಿಯ ಮಕ್ಕಳೇ ಸೇರಿ ಕಲಿಯುತ್ತಿದ್ದ ತರಗತಿಗಳ ವಿನ್ಯಾಸ ಬದಲಾಗಿ ಭಾರತಾದ್ಯಂತದಿಂದ ಶ್ರೀಮಂತ ಕುಟುಂಬಗಳ ಮಕ್ಕಳು ಬಂದು ಸೇರುತ್ತಾರೆ. ಬಯಸುವ ಅಧ್ಯಾಪಕರಿಗೆ ಕೈತುಂಬ ಸಂಬಳ ದೊರಕುತ್ತದೆ. ಪಾರಂಪರಿಕ ನೀತಿಯ ಚೌಕಟ್ಟು, ಪರಿಶ್ರಮದ ಬೆಲೆ, ಒಟ್ಟಾಗಿ ಇದ್ದುದನ್ನೇ ಹಂಚಿಕೊಂಡು ತಿನ್ನುವ ಸಮುದಾಯ ಭಾವ ಕಳೆದು ಹೋಗುತ್ತವೆ. ಹೊಸ ರಾಜಕೀಯ ವ್ಯವಸ್ಥೆ, ನಾಯಕರಿಗೆ ಸೌಲಭ್ಯ ಗಳ ಸುರಿಮಳೆ ಇರುವ ಜೀವನ, ಅಂತಹವರಿಗೆ ಉದ್ದಾಮತೆಯ ಹೆಸರು - ಎಲ್ಲ ಸಿಗುತ್ತವೆ. ಕಷ್ಟಪಟ್ಟು ದುಡಿದೇ ತಿನ್ನಬೇಕೆಂಬ ಛಲ, ಇನ್ನೊಬ್ಬರನ್ನು ಶೋಷಿಸಬಾರದೆಂಬ ವ್ರತ, ಸಮಾಜಕ್ಕಾಗಿ ತನ್ನ ದುಡಿಮೆಯೆಲ್ಲವನ್ನಾದರೂ ನೀಡಿ ಸಹವರ್ತಿಗಳ ಬಾಳು ಹಸನಾಗುವಂತೆ ಮಾಡಬೇಕೆಂಬ ಕಳಕಳಿ ನಷ್ಟವಾಗಿದೆ (ಪು.743). ಬೆವರ್ಲಿ ಇಂಟರ್ನ್ಯಾಶನಲ್ ಸ್ಕೂಲಿನಂತಹ ಇತರ ಶ್ರೀಮಂತ ಶಾಲೆಗಳದೂ ಇದೇ ಪರಿ ಎಂಬುದು ಸೂಚಿತವಾಗಿದೆ.
ಭ್ರಷ್ಟಾಚಾರ ಮತ್ತು ಕ್ರೌರ್ಯದ ವಿರಾಟ್ ಸ್ವರೂಪ ನಮ್ಮನ್ನು ಕಾಡುವುದು ಹಾಲುಕೆರೆಯ ದೇವಸ್ಥಾನದಲ್ಲಿಟ್ಟಿದ್ದ ಹೊನ್ನತ್ತಿಯ ಸಿತಾರನ್ನು ಯಾರೋ ಅಮಾನವೀಯವಾಗಿ ನುರಿದು ಎಸೆದ ಘಟನೆ ಮತ್ತು ಅದರ ಮುಂದಿನ ಪರಿಣಾಮಗಳಾದ ಅರ್ಚಕ ವಡೇರಯ್ಯನ ಬಂಧನ, ಹಿಂಸೆ, ಪೋಲೀಸರ ಲಂಚಾವತಾರ, ಪರಶುರಾಮೇಗೌಡ ಅಣ್ಣಯ್ಯನ ಮೇಲಿನ ತನ್ನ ಸೇಡು ತೀರಿಸಿಕೊಳ್ಳುವುದು ಇತ್ಯಾದಿಗಳ ನಿರೂಪಣೆಯಲ್ಲಿ. ಮನುಷ್ಯ ದುಡ್ಡಿಗಾಗಿ, ಆಸ್ತಿಗಾಗಿ ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲನೆಂಬುದನ್ನು ಇಲ್ಲೆಲ್ಲ ಕಾಣಬಹುದು. ತಾಂತ್ರಿಕ ಶಿಕ್ಷಣ ಮತ್ತು ಉನ್ನತ ವಿದ್ಯಾಸಂಸ್ಥೆಗಳಲ್ಲೂ ಈ ಕೆಡುಕುಗಳು ವಿಜೃಂಭಿಸುತ್ತಿರುವುದನ್ನು ಕಾದಂಬರಿಕಾರರು ಚಿತ್ರಿಸಿದ್ದಾರೆ. ಅನೂಪನ ಅಕ್ರಮ ಲೈಂಗಿಕ ಸಂಬಂಧಗಳು ಅದನ್ನು ಬಳಸಿಕೊಂಡು ರಾಜಕೀಯಸ್ಥರು ಅವನನ್ನೂ ಅವನ ತಾಯಿಯನ್ನೂ ಲೂಟಿಮಾಡುವುದು  ಇಂತಹವುಗಳಲ್ಲಿ ಇದನ್ನು ಕಾಣಬಹುದು. ಭ್ರಷ್ಟಾಚಾರವು ಹೇಗೆ ಬೆಳೆದು ರಾಷ್ಟ್ರಸ್ತರಕ್ಕೆ ಏರಿತು ಎಂಬುದರ  ಒಂದು ಹೊಳಹನ್ನೂ ಇವು ಒದಗಿಸುತ್ತವೆ. ಹುಡುಗಿಯ ತಂದೆಯೇ ತನ್ನ ಮಗಳನ್ನು ವೇಶ್ಯಾವೃತ್ತಿಗಿಳಿಸುವುದು ಆ ಹುಡುಗಿ ಅದನ್ನು ಮುಗ್ಧತೆಯಿಂದ ಒಪ್ಪಿಕೊಳ್ಳುವುದು – ಇವು ಒಂದು ಕಡೆಯಿಂದ ಅಮಾನವೀಯವೂ ಇನ್ನೊಂದು ಕಡೆಯಿಂದ ಸಾಮಾನ್ಯ ಜನರ ಮಟ್ಟದ ಭ್ರಷ್ಟ ಮನೋಸ್ಥಿತಯನ್ನೂ ತೋರಿಸುತ್ತವೆ. ಇವು ಒಂದು ರೀತಿಯಲ್ಲಿ ದೇಶದ ತುಂಬ ವಿಭಿನ್ನ ಸ್ತರಗಳಲ್ಲಿ ಪ್ರಸರಿಸುತ್ತದೆ. ಶೀತಲ್ ಮತ್ತು ಕಾಂತಿಯರು ದೆಹಲಿಯಲ್ಲಿ ಇಂತಹ ಸಂಬಂಧಗಳಿಗೆ ಸಿಕ್ಕುವುದು,  ವಿದೇಶ ಮಂತ್ರಾಲಯದ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ, ಹರಿಶಂಕರನಂತಹವರು ಭಾರತೀಯ ಕಲಾ ಪರಂಪರೆಗೇ ಅಪಾರ್ಥ ಕಲ್ಪಿಸುವುದು ಇಂತಹವು ಹಳ್ಳಿಯಿಂದ ದಿಳ್ಳಿಯವರೆಗೆ ಸಂಸ್ಕೃತಿಯ ಅವಸ್ಥಾಂತರವನ್ನು ನಿರೂಪಿಸುತ್ತವೆ. ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಲೋಕ ಸಭಾ ಸದಸ್ಯತ್ವವನ್ನು ರದ್ದುಪಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು, ಇದರಿಂದ ಬಚಾವಾಗಲು ಪತ್ರಿಕೆಗಳನ್ನು ಸೆನ್ಸಾರಿಗೆ ಒಳಪಡಿಸುವುದು, ಲಕ್ಷಾಂತರ ಮುಗ್ಧರ ಸೆರೆ, ರಾಜಕೀಯ ಭಿನ್ನಾಭಿಪ್ರಾಯದ ಹತ್ತಿಕ್ಕುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯಹರಣ,  ಅಧಿಕಾರಸ್ಥಾನದ ಪ್ರಭಾವವನ್ನೇ ಬಳಸಿಕೊಂಡು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವುದು, ಇವೆಲ್ಲ ಈ ವಿದ್ಯಮಾನಕ್ಕೆ ಕಳಶವಿಟ್ಟಂತೆ ಜರುಗುತ್ತವೆ. ಇವು ಕಾದಂಬರಿಗೆ ಒಂದು ರೀತಿಯ ಅಥೆಂಟಿಸಿಟಿಯನ್ನೂ ತಂದುಕೊಡುತ್ತವೆ.
ಪಾಶ್ಚಾತ್ಯ ಸಂಸ್ಕೃತಿಯ ಧಾಳಿಗೆ ಕೊಚ್ಚಿ ಹೋಗುತ್ತಿರುವ ಘಟನೆಗಳು, ವ್ಯಕ್ತಿಗಳು ಇಲ್ಲಿರುವಂತೆಯೇ ಒಮ್ಮೆ ಇಂತಹ ಪ್ರವಾಹದ ಸೆಳೆತಕ್ಕೊಳಗಾಗಿ ಅದರಿಂದ ಬೇಸತ್ತು ಬದುಕಿನಲ್ಲಿ ಘನವಾದುದರ ಹುಡುಕಾಟದಲ್ಲಿ ತೊಡಗಿ ಸಂಸ್ಕೃತಿಯನ್ನು ಪುನರೊಪ್ಪಿಕೊಳ್ಳುವ ಪಾತ್ರಗಳೂ ಇವೆ. ಹೊನ್ನತ್ತಿ ಜಯಪ್ರಕಾಶ ನಾರಾಯಣರನ್ನು ಭೇಟಿಯಾಗಿ ಅವರ ಸಲಹೆಯಂತೆ ಹಾಲುಕೆರೆಯ ಬಳಿಯೇ ವಿಕಲಾಂಗರ ಶಾಲೆಯೊಂದನ್ನು ಸ್ಥಾಪಿಸುವುದು, ಅದರಲ್ಲಿ ಅಣ್ಣಯ್ಯ ಕೂಡ ಸೇವೆಯಲ್ಲಿ ತೊಡಗುವುದು ಒಂದು ಕಡೆ ಮತ್ತು ರಾಮಚಂದ್ರನ ಪ್ರವಚನ ಧ್ಯಾನಾದಿಗಳು ಇನ್ನೊಂದು ಕಡೆಯಾದರೆ ರವೀಂದ್ರ ಟ್ರಿಬ್ಯೂನ್ ಬಿಟ್ಟು ಸರಕಾರದ ಅಪಚಾರಗಳ ಬಗ್ಗೆ ಜನರನ್ನು ಜಾಗೃತಗೊಳಿಸುವಂತಹ ದಿ ಫ್ಯಾಕ್ಟ್ ಎಂಬ ಚಿಕ್ಕ ಪತ್ರಿಕೆಯೊಂದನ್ನು ಪ್ರಾರಂಬಿಸಿ ಕೃತಕೃತ್ಯನಾಗುವುದು ಇಂತಹವೆಲ್ಲ ಈ  ಪ್ರವೃತ್ತಿಯ ಪ್ರದರ್ಶಕಗಳು. ನಿಜವಾಗಿ ಇಂತಹ ನಂಬಿಕೆಯೇ ತೋಷದಾಯಕ. ಕಾದಂಬರಿಕಾರರ ಸಂದೇಶ ಕೂಡ ಇದೇ ಆಗಿರುವಂತೆ ತೋರುತ್ತದೆ.
ಮೇಲನವುಗಳನ್ನೆಲ್ಲ ಒಂದೊಂದೇ ಪಾತ್ರದಲ್ಲಿ ಗುರತಿಸಿಯೂ ಕಾಣಬಹುದು ಒಟ್ಟಾಗಿ ಕಾದಂಬರಿಯಲ್ಲಿ ವಿವಿಧ ಪಾತ್ರಗಳ  ಒಡನಾಟದಲ್ಲಿಯೂ ಗುರುತಿಸಬಹುದು. ಇದು ಕಾದಂಬರಿಯ ವೈಶಿಷ್ಟ್ಯ.
ಜನತೆಯ ವಿರೋಧವನ್ನು ಹತ್ತಿಕ್ಕುವ ಅಸ್ತ್ರವಾಗಿ  ತುರ್ತು ಪರಿಸ್ಥಿತಿಯ ಘೋಷಣೆ ಕಾದಂಬರಿಯಲ್ಲಿ ಕ್ರಿಯೆಯನ್ನು ಮುಂದಿನ ಮಜಲಿಗೆ ತಲುಪಿಸುತ್ತದೆ. ಹೊಸ ಪರಿಸ್ಥಿತಿ  ಭ್ರಷ್ಟಾಚಾರ, ರಾಜಕೀಯ ಶೋಷಣೆ ಮತ್ತು  ಸ್ವಾತಂತ್ರ್ಯ ಹರಣ – ಇವುಗಳನ್ನು ಒಂದು ರೀತಿಯಲ್ಲಿ ಅಧಿಕೃತ ಗೊಳಿಸಿತು. ಇವುಗಳಿಂದ ಪೀಡಿತರಾದ ಪಾತ್ರಗಳು ತಾವು ಇದುವರೆಗೆ ಮೌಲಿಕವೆಂದು ಅನುಸರಿಸುತ್ತಿದ್ದ ಜೀವನ ವಿಧಾನದಲ್ಲಿ ಬಾಧೆ ಅನುಭವಿಸಿ ಬದುಕಿನಲ್ಲಿ ತಿರುಳೇನು ತಮ್ಮ ಅಸ್ಮಿತೆ ಏನು ಎಂಬ ಹುಡುಕಾಟದಲ್ಲಿ ತೊಡಗುವುದು ಈ ಮಜಲಿನ ವೈಶಿಷ್ಟ್ಯ. ಹಾಗೆ ಕಾಂತಿ ಮತ್ತು ಶೀತಲ್ ಇವರು, ರಾಮಚಂದ್ರ ಬ್ರಹ್ಮಚಾರಿಯವರು ಬೋಧಿಸಿದ ಧ್ಯಾನಾಭ್ಯಾಸದಲ್ಲಿ ತೊಡಗುತ್ತಾರೆ. ಮಗನಿಂದ ಒಂದು ರೀತಿಯ ಬಹಿಷ್ಕಾರಕ್ಕೊಳಗಾದ  ಕಾಂತಿ ಅಕಸ್ಮಾತ್ ಹೃದಯಾಘಾತದಿಂದ ನಿಧನಳಾಗುವುದು, ಅವಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಬ್ರಹ್ಮಚಾರಿ ಭ್ರಮನಿರಸನಗೊಂಡು ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಸಂಪೂರ್ಣವಾಗಿ ಅಧ್ಯಾತ್ಮ ದಾರಿಯಲ್ಲಿ ನಡೆಯುತ್ತಾನೆ. ರವೀಂದ್ರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ ಟ್ರಿಬ್ಯೂನ್ ಪತ್ರಿಕೆಯ ಮಾಲಕವರ್ಗದೊಂದಿಗೆ ಸಂಬಂಧ  ಕಡಿದು ತನ್ನ ಮೌಲ್ಯಗಳನ್ನು ಪ್ರತಿಪಾದಿಸಲು ಅವಕಾಶವಿದ್ದ ಪತ್ರಿಕೆಯ ಭಾಗವಾಗುತ್ತಾನೆ. ಹೊನ್ನತ್ತಿ ಮತ್ತು ಅಣ್ಣಯ್ಯ ಜೈಲು ಸೇರಿದರೂ ತಾವು ಸ್ಥಾಪಿಸಿದ್ದ ವಿಕಲಾಂಗೆ ಶಾಲೆಯ ಮಕ್ಕಳನ್ನು ಸಲುಹುವ ಹೊಸ ಉಪಾಯಗಳನ್ನು ಯೋಚಿಸುತ್ತಾರೆ. ಇಂತಹ ಅಸ್ಮಿತೆಯ ಹುಡುಕಾಟವು ಮಾನವಸಹಜ ಮತ್ತು ಸಾರ್ವಕಾಲಿಕ ಸತ್ಯವಾದುದರಿಂದ ಕಾದಂಬರಿ ಈ ದಿನಕ್ಕೂ ಪ್ರಸ್ತುತವಾಗುತ್ತದೆ.
[ತಂತುವಿನ ಮೊದಲ ಮುದ್ರಣ 1993. ಇದು ಎಂಟು  ಮುದ್ರಣಗಳನ್ನು ಕಂಡಿದೆ.ಪ್ರಸ್ತುತ ಮುದ್ರಣ 2013ರಲ್ಲಿ ಪ್ರಕಟ. ಮುದ್ರಿತ ಪುಟಗಳು 888. ಬೆಲೆ ರೂ.725. ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮ ಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು 53. ದೂರವಾಣಿ – 22877618].