ಹಳಗನ್ನಡ ವ್ಯಾಕರಣ ಸೂತ್ರಗಳು – ಕರ್ತೃ
ಮತ್ತು ಕೃತಿ ಕನ್ನಡ ಶಾಸ್ತ್ರಸಾಹಿತ್ಯದ ಬೆಳವಣಿಗೆಯಲ್ಲಿ ಹತ್ತೊಂಬತ್ತನೆಯ
ಶತಮಾನದ ಕಾಲಘಟ್ಟ ತುಂಬ ವಿಶಿಷ್ಟವಾದುದು ಮತ್ತು ಮಹತ್ವದ್ದು. ಅದುವರೆಗೆ ಎರಡೋ ಮೂರೋ ಶತಮಾನಗಳಿಗೊಂದು
ಬಾರಿ ಏನೋ ಒಂದು ಮಹತ್ವದ ಘಟನೆಯಂತೆ ಒಂದುವ್ಯಾಕರಣ ಅಥವ ಒಂದು ಛಂದೋಗ್ರಂಥದ ರಚನೆಯಾಗುತ್ತಿತ್ತು.
ಭಾಷೆಗೆ ಸಂಬಂಧಪಟ್ಟ ಶಾಸ್ತ್ರೀಯ ಅಧ್ಯಯನ ಎಲ್ಲಿಯೋ
ಯಾವಾಗಲೋ ಮಿಂಚುವ ಒಂದು ವಿಸ್ಮಯದಂತೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ‘ಆರಾರೇರರ್ ಶಾಸ್ತ್ರಶ್ರೀರೋಹಣಗಿರಿಯನ್’
ಎಂದು ಶಾಸ್ತ್ರ ಪ್ರಾವೀಣ್ಯವನ್ನು ಕಾವ್ಯರಚನೆಗಿಂತ ಕಡಿಮೆ ಪ್ರಾಶಸ್ತ್ಯದ್ದೆಂದು ಪ್ರಾಚೀನ ಕವಿಯೊಬ್ಬ
ಹಾಡಿದ್ದರೂ ಹಾಗೆ ಏರಿದವರ ಸಂಖ್ಯೆ ಬೆರಳೆಣಿಕೆಯಷ್ಟೆ. ಆದರೆ ಹತ್ತಂಬತ್ತನೆಯ ಶತಮಾನವೊಂದರಲ್ಲೇ ಇಪ್ಪತ್ತಕ್ಕಿಂತ
ಹೆಚ್ಚು ವ್ಯಾಕರಣಕೃತಿಗಳ ರಚನೆಯಾಗಿದೆ. ಈ ಶತಮಾನದಲ್ಲಿ ರಚಿತವಾದ ನೀಘಂಟುಗಳ ಸಂಖ್ಯೆಯೂ ಗಣನೀಯ. ಅಲ್ಲದೆ
ಗ್ರಂಥ ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆಯ ಶಾಸ್ತ್ರೀಯ ಪ್ರಕಾರಗಳೂ ಮೈತಳೆದವು.
ಹತ್ತೊಂಬತ್ತನೆಯ ಶತಮಾನದ ಕನ್ನಡ ಶಾಸ್ತ್ರ ಸಾಹಿತ್ಯವೆಂದೊಡನೆ
ಕ್ರೈಸ್ತ ಮಿಶನರಿಗಳ ನೆನಪಾಗುತ್ತದೆ. ಈ ಕ್ಷೇತ್ರದಲ್ಲಿ ಕಿಟೆಲನೇ ಸಿದ್ಧಿಯನ್ನು ಪಡೆದ ಮಹಾನುಭಾವನಾದರೂ
ಇವನಿಗಿಂತ ಪೂರ್ವದಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿದ ಹಲವರು ಮಿಶನರಿ ಸಾಹಿತಿಗಳಿದ್ದಾರೆ. ಅಷ್ಟಾಗಿ
ಸಾಹಿತ್ಯೇತಿಹಾಸಕಾರರ ಗಮನ ಸೆಳೆಯದೆ ಎಲೆಯ ಮರೆಯ ಕಾಯಿಯಂತೆ ಉಳಿದಿರುವ ಒಂದು ಹೆಸರು ರೆ ಜಾರ್ಜ್ ವುರ್ತನದು.ಇವನು
ಅಂದಿನ ಶಾಲೆಗಳಿಗಾಗಿ ಸಂಪಾದಿಸಿದ ಪ್ರಾಕ್ಕಾವ್ಯಮಾಲಿಕೆ
ಮತ್ತು ಅದರ ಭಾಗವಾದ ಶಬ್ದಕೋಶಗಳು ಸ್ವಲ್ಪ ಮಟ್ಟಿಗೆ ಇವನಿಗೆ ಹೆಸರು ತಂದಿವೆ. ಹಳಗನ್ನಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು
ಮತ್ತು ಶಾಲಾ ಮಕ್ಕಳಿಗೆ ಅಧ್ಯಾಪನ ಮಾಡಲು ಸಹಾಯವಾಗುವಂತೆ ಇವನು ರಚಿಸಿದ ಹಳಗನ್ನಡದ ಸಂಕ್ಷಿಪ್ತ ವ್ಯಾಕರಣ
ಸಾಕಷ್ಟು ಚರ್ಚೆಗೊಳಗಾಗಿದೆಯಾದರೂ ಅದರ ಕರ್ತೃತ್ವವನ್ನು ಕಿಟೆಲನಿಗೆ ಆರೋಪಿಸಲಾಗಿದ್ದು ವುರ್ತನಿಗೆ
ಅದರ ಅದರ ಯಶಸ್ಸು ಲಭ್ಯವಾಗಿಲ್ಲ. ಈ ಕೃತಿಯೇ ಹಳಗನ್ನಡ
ವ್ಯಾಕರಣ ಸೂತ್ರಗಳು ಎಂಬ ಚಿಕ್ಕ ಹೊತ್ತಗೆ.
ಕೃತಿಯ ಮೇಲೆ ಲೇಖಕರ ಹೆಸರನ್ನು ಮುದ್ರಿಸಿಲ್ಲ. ಬೇರೆಬೇರೆ
ಪುಸ್ತಕಗಳಲ್ಲಿ ಮತ್ತು ವರದಿಗಳಲ್ಲಿ ಸಿಕ್ಕುವ ಉಲ್ಲೇಖಗಳು, ಅವುಗಳಿಂದ ತೆಗೆಯಬಹುದಾದ ಅನುಮಾನಗಳು
ಮತ್ತು ಕೃತಿಯಲ್ಲಿ ಆಂತರಿಕವಾಗಿ ದೊರಕುವ ಸಾಕ್ಷ್ಯಾಧಾರಳು ಇತ್ಯಾದಿಗಳನ್ನು ಅವಲಂಬಿಸಿ ಕರ್ತೃತ್ವವನ್ನು
ನಿರ್ಧರಿಸುವುದು ಆದ್ದರಿಂದ ಅನಿವಾರ್ಯ. ಈ ಕೃತಿಯ ಕರ್ತೃ ಕಿಟೆಲ್ ಇರಬಹುದೆಂದು ಶ್ರೀ ಶ್ರೀನಿವಾಸ
ಹಾವನೂರ ಇವರು ಸೂಚಿಸಿದ್ದಾರೆ. ಕೃತಿಯ ಪುನರ್ಮುದ್ರಣವೊಂದು 1985ರಲ್ಲಿ
ಪ್ರಕಟವಾಗಿದ್ದು ಅದರ ಸಂಪಾದಕರು ಪ್ರೊ ಬಿ ವಿವೇಕ ರೈ ಇವರು. ಕೆಲವೊಂದು ಆಧಾರಗಳನ್ನವಲಂಬಿಸಿ ಕೃತಿಯ
ಕರ್ತೃವನ್ನು ಕಿಟೆಲ್ ಎಂದು ಸಂಪಾದಕರು ನಿರ್ಧರಿಸಿದ್ದಾರೆ.
ಪ್ರಸ್ತುತ ಮುದ್ರಣದಲ್ಲಿ ಕೃತಿಯ ಕರ್ತೃತ್ವವನ್ನು ನಿರ್ಧರಿಸಲು
ಸಂಪಾದಕರು ಆಧರಿಸಿರುವ ಪ್ರಮಾಣಗಳು ಇವು: ಬ್ರಿಟಿಶ್ ಮ್ಯೂಸಿಯಂನಲ್ಲಿರುವ ಕನ್ನಡ ಪುಸ್ತಕಗಳ ಸೂಚಿಯೊಂದನ್ನು
ಎಲ್ ಡಿ ಬಾರ್ನೆಟ ಎಂಬುವನು 1910ರಲ್ಲಿ
ತಯಾರಿಸಿದ್ದಾನೆ. ಅದರಲ್ಲಿ1866ರಲ್ಲಿ
ಪ್ರಕಟವಾದ ಪುಸ್ತಕಗಳ ಪಟ್ಟಿಯಲ್ಲಿA Short Grammar of the Ancient
Dialect of Canarese Language(ಇದನ್ನು ಇನ್ನು
ಮುಂದೆ ಎ ಶಾರ್ಟ್ ಗ್ರಾಮರ್ ಎಂದು ಉಲ್ಲೇಖಿಸಲಾಗುವುದು) ಎಂಬ
ಗ್ರಂಥದ ಕರ್ತೃ
F. Kittel
ಎಂದು ಸೂಚಿಸಿದ್ದು ಇದರಲ್ಲಿ 104
ಪುಟಗಳಿರುವುದಾಗಿ ದಾಖಲಿಸಿದ್ದಾನೆ.ಇದಕ್ಕೆ ಪೂರಕವಾದ ಒಂದು
ನಮೂದು 1866ರ
ಬಾಸೆಲ್ ಇವೇಂಜಲಿಕಲ್ ಮಿಶನ್ ವರದಿಯಲ್ಲಿ Old Canarese Grammar ಎಂಬ
ನಮೂದು ಇದ್ದು ಅದರಲ್ಲಿ 104
ಪುಟಗಳಿರುವುದಾಗಿ ತಿಳಿಸಿದೆ. 1888ರ
ಅದೇ ಸಂಸ್ಥೆಯ ವರದಿಯಲ್ಲಿA Grammar of the Ancient
Dialect of Canarese Language revised by Mr. Srinivasa Ayangar ಎಂಬ ಪುಸ್ತಕವನ್ನು
ಉಲ್ಲೇಖಿಸಿದೆ ಮತ್ತು ಅದರಲ್ಲಿ 188ಪುಟಗಳಿರುವುದಾಗಿ ಸೂಚಿಸಿದೆ(ರೈ, 1985: v –
vii).
ಈ ಉಲ್ಲೇಖಗಳಿಂದ 1866ರಲ್ಲಿ ರಚಿತವಾದ
ಹಳಗನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು ಪುಸ್ತಕವೇ
1888ರಲ್ಲಿ ಶ್ರೀನಿವಾಸ
ಅಯ್ಯಂಗಾರ್ಯನಿಂದ ಪರಿಷ್ಕೃತಗೊಂಡು 104 ಪುಟಗಳಂದ 188 ಪುಟಗಳಿಗೆ ಬೆಳೆಯಿತೆಂಬುದು
ಸಿದ್ಧವಾಗುವುದೇನೋ ನಿಜ. ಬಾರ್ನೆಟನ ಕೆಟಲಾಗಿನ ಉಲ್ಲೇಖಗಳು ಮತ್ತು ಬಾಸೆಲ್ ಮಿಶನ್ ವರದಿಗಳಲ್ಲಿರುವ
ಪುಸ್ತಕಗಳೂ ಬೇರೆಯಲ್ಲವೆಂಬುದೂ ಸರಿ. ಆದರೆ ಬಾರ್ನೆಟನ ನಿರ್ಣಯಕ್ಕೆ ಪುರಾವೆಗಳೇನು? ಈ ಸಂದೇಹ ಬಂದುದರಿಂದ
ಚೆನ್ನೈನಲ್ಲಿರುವ ಬ್ರಿಟಿಶ್ ಕಾನ್ಸುಲೇಟಿನವರ ಸಹಾಯ ಪಡೆದು ಲಂಡನ್ನಿನಲ್ಲಿರುವ ಬ್ರಿಟಿಶ್ ಮ್ಯೂಸಿಯಮ್ಮಿನ
ಅಧಿಕಾರಿಗಳಿಂದ ಅಲ್ಲಿ ಲಭ್ಯವಿದ್ದ ಎ ಶಾರ್ಟ್ ಗ್ರಾಮರ್ ದ ಮೇಲು(ರಕ್ಷಾ)ಪುಟದ ಜರಾಕ್ಸ್ ಒಂದನ್ನು
ಪಡೆದೆ. ಇದರ ಪ್ರತಿಯನ್ನು ಕೊನೆಯಲ್ಲಿ ನೀಡಿದೆ. ಕೃತಿಕಾರನ ಹೆಸರನ್ನು ಅಲ್ಲೆಲ್ಲೂ ಮದ್ರಿಸಿಲ್ಲ.
ಅದರ ಮೇಲ್ಭಾಗದ ಎಡಮೂಲೆಯಲ್ಲಿ Kittel (F) ಎಂದು
ಪೆನ್ಸಿಲ್ಲಿನಿಂದ ಬರೆದಿದ್ದು ಇದು ಬಹುಶಃ ಕೆಟಲಾಗ್ ಕರ್ತೃ ಬಾರ್ನೆಟನ ಕಾರ್ಯವೆಂದು ತೋರುತ್ತದೆ.
ಈ ಅಭಿಪ್ರಾಯ ಅವನಿಗೆ ಹೇಗೆ ಬಂತೋ ತಿಳಿಯುವುದಿಲ್ಲ.
ಎ ಶಾರ್ಟ್ ಗ್ರಾಮರ್ ಇದರ ಕರ್ತೃ ಕಿಟೆಲನಲ್ಲ ಎಂದು
ತೋರಿಸುವ ಮತ್ತು ಅದರ ಲೇಖಕ ರೆ ಜಾರ್ಜ್ ವುರ್ತ್ ಎಂದು ನಿರೂಪಿಸುವ ಕೆಲವು ಸಾಂದರ್ಭಿಕ ಸಾಕ್ಷ್ಯಗಳು
ಮನವೊಲಿಸುವಂತಹವಾಗಿ ಮೂಡಿ ಬರುತ್ತವೆ. ಕಿಟೆಲನ ಕೃತಿಳೆಂದು ನಿಸ್ಸಂಶಯವಾಗಿ ಖ್ಯಾತವಾಗಿರುವ ಕನ್ನಡ-ಇಂಗ್ಲಿಷ್ ನಿಘಂಟು, ಕಿಟೆಲನ ವ್ಯಾಕರಣ, ಸಾಹಿತ್ಯ ಚರಿತ್ರೆಯ ಬಗ್ಗೆ ಅವನು
ಬರೆದ ಪ್ರಬಂಧ, ಶಬ್ದಮಣಿದರ್ಪಣ ಮತ್ತು ಛಂದೋಂಬುಧಿಗಳ ಅವನ ಸಂಪಾದಿತ ಆವೃತ್ತಿಗಳು, ಕರ್ನಾಟಕ ಕಾವ್ಯಮಾಲೆ – ಇವುಗಳನ್ನು ಅವನ ಜೀವಿತಾವಧಿಯಲ್ಲಿ
ಇತರರು ಪರಿಷ್ಕರಿಸಿದ ನಿದರ್ಶನಗಳಿಲ್ಲ. 1894ರಲ್ಲಿ
ಪ್ರಕಟವಾದ ಕಿಟೆಲ್ ನಿಘಂಟಿನ ಪರಿಷ್ಕರಣೆಯನ್ನು ಪ್ರೊ ಮರಿಯಪ್ಪ ಭಟ್ಟರು ಮಾಡಿದ್ದು 1965ರಲ್ಲಿ-
ಕಿಟೆಲ್ ನಿಧನದ ಸು. ಅರವತ್ತು ವರ್ಷಗಳನಂತರ. 1872ರಲ್ಲಿ
ಪ್ರಕಟವಾದ ಕಿಟೆಲ್ ಸಂಪಾದಿಸಿದ ಕೇಶಿರಾ ಕವಿಯ ಶಬ್ದಮಣದರ್ಪಣಮ್
ಇದರ ಪರಿಷ್ಕರಣೆಯನ್ನು 1899ರಲ್ಲಿ
ತಾನೇ ಮಾಡಿದ್ದಾನೆ; ಇತರರಿಗೆ ಅಕಾಶ ಕೊಟ್ಟಿಲ್ಲ. ಈ ಕೃತಿಯನ್ನು 1920ರಲ್ಲಿ
ಕಿಟೆಲ್ ನಿಧನಾನಂತರ ಪಂಜೆ ಮಂಗೇಶರಾಯರು ಪರಿಷ್ಕರಿಸಲು ಸಾಧ್ಯವಾಯಿತು. ಆದ್ದರಿಂದ ಎ ಶಾರ್ಟ್ ಗ್ರಾಮರ್
ಕಿಟೆಲ್ ಕೃತವಾಗಿದ್ದರೆ 1888ರಲ್ಲಿ ಶ್ರೀನಿವಾಸ
ಅಯ್ಯಂಗಾರ್ಯನಿಂದ ಪರಿಷ್ಕರಣೆಗೆ ಅವಕಾಶವಾಗುತ್ತಿರಲಿಲ್ಲ.
ಮೇಲೆ ಹೇಳಿದ ಕಿಟೆಲನ ಎಲ್ಲ ಕೃತಿಗಳೂ ಸ್ವೋಪಜ್ಞ
ಕೃತಿಗಳು, ಯಾವುದೂ ಬೇರೊಂದು ಕೃತಿಯನ್ನು ಆಧರಿಸಿ ಬರೆದುದಲ್ಲ. ಆದರೆ ಎ ಶಾರ್ಟ್ ಗ್ರಾಮರ್ ಮತ್ತು
ಅದರ ಪರಿಷ್ಕರಣೆ – ಇವು ಶಬ್ದಮಣಿದರ್ಪಣವನ್ನು
ಆಧರಿಸಿದ್ದು ಪದ್ಯರೂಪದ ಬದಲು ಗದ್ಯದಲ್ಲಿವೆ ಎಂಬುದೇ ಇಲ್ಲಿಯ ವೈಶಿಷ್ಟ್ಯ.
ಶಬ್ದಮಣಿದರ್ಪಣದ
1872ರ ಆವೃತ್ತಿಯಲ್ಲಿವುರ್ತ್
ಒಂದು ಹಳಗನ್ನಡ ವ್ಯಾಕರಣವನ್ನು ಬರೆದಿದ್ದಾನೆಂದು ಕಿಟೆಲ್ ಉಲ್ಲೇಖಿಸಿದ್ದಾನೆ. ಇದರ ಪೀಠಿಕೆಯಲ್ಲಿ
ತಾನು ಕೃತಿಯ ಸಂಪಾದನೆಗೆ ಉಪಯೋಗಿಸಿದ ಹಸ್ತಪ್ರತಿಯೊಂದರ ಬಗ್ಗೆ ಹೀಗೆ ಹೇಳುತ್ತಾನೆ: “It
is the same manuscript which the late Rev. G. Wurthe used for editing the Short
Grammar of the Ancient Dialect of the
Canarese Language 1866.”(ಕೇಶಿರಾಜ,
1872: ಪು ix). ಶಬ್ದಮಣಿದರ್ಪಣದ ಈ ಹಸ್ತಪ್ರತಿಯ ವೈಶಿಷ್ಟ್ಯವನ್ನು
ವಿವರಿಸುತ್ತಾ ಇದು ಬೆಟಗೇರಿಯದೆಂದೂ ಇದರಲ್ಲಿ ಶಕಟರೇಫೆ ಮತ್ತು ರಳಗಳನ್ನು ಯಾವುದೇ ಎಗ್ಗಿಲ್ಲದೆ ಬಳಸಲಾಗಿದೆಯೆಂದೂ
ಕಿಟೆಲ್ ಹೇಳಿದ್ದಾನೆ. ಇವುಗಳಿಂದ ನಮಗೆ ಸ್ಪಷ್ಟವಾಗುವ ಅಂಶಗಳು ಮೂರು :
1.
ರೆ
ಜಿ ವುರ್ತನು ಬರೆದ ಒಂದು ವ್ಯಾಕರಣವಿದೆ.
2.
ಇದು
ಶಬ್ದಮಣಿದರ್ಪಣದ ಒಂದು ಹಸ್ತಪ್ರತಿಯನ್ನು ಅವಲಂಬಿಸಿದೆ.
3.
ಈ
ಹಸ್ತಪ್ರತಿಯಲ್ಲಿ ಶಕಟರೇಫೆ ಮತ್ತು ರಳಗಳನ್ನುಸೂಕ್ತವಾಗಿ ಬಳಸಿಲ್ಲ
ಕಿಟೆಲ್
ಹೇಳಿರುವ ಕೊನೆಯ ಎರಡು ಅಂಶಗಳು ಈ ಕೃತಿಗೆ ಸ್ಪಷ್ಟವಾಗಿ
ಅನ್ವಯಿಸುತ್ತವೆ. ಶಬ್ದಮಣಿದರ್ಪಣದ ಸೂತ್ರಗಳ
ಸಂಗ್ರಹರೂಪವೇ ಈ ಕೃತಿ. ಸೂತ್ರಗಳಂತೆ ಉದಾಹರಣೆಗಳೂ ಮೂಲವನ್ನೇ ಅನುಸರಿಸಿವೆ. ಇಲ್ಲಿರುವ ಉದಾಹರಣೆಗಳಲ್ಲಿ
ಶಕಟರೇಫೆ ಮತ್ತು ರಳಗಳ ಸರಿಯಾದ ಬಳಕೆ ಇಲ್ಲ. “ಕಿಳಿರ್” ಎಂಬಲ್ಲಿ ಶಕಟರೇಫೆಯ ಬದಲು ಸಾಮಾನ್ಯ ರೇಫೆ
ಇದೆ; “ಪಳದು” ಎಂಬಲ್ಲಿ ರಳದ ಬದಲು ಕುಳವಿದೆ. ಉದ್ದಕ್ಕೂ ಇಂತಹ ನಿದರ್ಶನಗಳನ್ನು ಕಾಣಬಹುದು. ಹೀಗೆ
ಕಿಟೆಲ್ ತನ್ನ ಉಲ್ಲೇಖದಲ್ಲಿ ಸೂಚಿಸಿರುವ ಕೃತಿ ಇದೇ ಎಂಬುದು ಸ್ಪಷ್ಟವಾಗಿದೆ. ಈ ಕೃತಿಯೇ ಎ ಶಾರ್ಟ್
ಗ್ರಾಮರ್ ಆಗಿದ್ದು ಇದರ ಲೇಖಕ ರೆ ಜಾರ್ಜ್ ವುರ್ತನೇ ಹೊರತು ಫರ್ಡಿನಂದ್ ಕಿಟೆಲನಲ್ಲ. ಪ್ರಾಕ್ ಕಾವ್ಯಮಾಲಿಕೆ ಮಾಲಿಕೆ ಮತ್ತು ಈ ವ್ಯಾಕರಣ
- ಇವೆರಡೂ ಮದ್ರಾಸಿನ ಸಾರ್ವಜನಿಕ ಶಿಕ್ಷಣ ಇಲಾಖೆಗಾಗಿ ಸಿದ್ಧಪಡಿಸಿದವು ಎಂಬುದೂ ಗಮನಾರ್ಹ. ಹೀಗೆ
ಹಳಗನ್ನಡ ವ್ಯಾಕರಣವೊಂದನ್ನು 1866ರಲ್ಲಿ ಹೊಸಗನ್ನಡದಲ್ಲಿ
ಬರೆದ ಕೀರ್ತಿ ಜಾರ್ಜ್ ವುರ್ತನಿಗೆ ಸಲ್ಲಬೇಕು.
ಇದು ಹಳಗನ್ನಡ ವ್ಯಾಕರಣವನ್ನು ಹೊಸಗನ್ನಡದಲ್ಲಿ
ಹೇಳುವ ಕೃತಿ. ಹಳಗನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುವುದು ಇದರ
ಉದ್ದೇಶ. ಶಬ್ದಮಣಿದರ್ಪಣವನ್ನು ಹೆಜ್ಜೆಹೆಜ್ಜೆಗೂ
ಅನುಸರಿಸಿದ್ದರೂ ಎ ಶಾರ್ಟ್ ಗ್ರಾಮರ್ ಅದಕ್ಕಿಂತ ವಿಭಿನ್ನ. ಸಂಕ್ಷಿಪ್ತೀಕರಣ ಮತ್ತು ಇಂಗ್ಲಿಷ್ ಬಲ್ಲ
ಕನ್ನಡೇತರರಿಗೂ ಸಹಾಯವಾಗುವ ಉದ್ದೇಶ – ಇವು ಇಂತಹ ಭಿನ್ನತೆಗಳುಂಟಾಗಲು ಕಾರಣ.
ಮೂಲದಲ್ಲಿ 323 ಸೂತ್ರಗಳಿದ್ದುದು
ವುರ್ತನ ಕೃತಿಯಲ್ಲಿ 148 ಸೂತ್ರಗಳಾಗಿರುವುದು
ಈ ಕೃತಿ ಎಷ್ಟು ಸಂಕ್ಷಿಪ್ತವಾಗಿದೆ ಎಂಬುದನ್ನು ತೋರಿಸುತ್ತದೆ. ಅಷ್ಟರ ಮಟ್ಟಿಗೆ ವಿಷಯ ನಿರೂಪಣೆಯಲ್ಲಿ
ಕೊರತೆಯಾಗಿದೆ ಎಂದೇನೂ ಎನ್ನುವಂತಿಲ್ಲ. ಸಂಕ್ಷಿಪ್ತೀಕರಣ ಕಲೆ ಇವನಿಗೆ ಕರಗತವಾಗಿರುವುದನ್ನು ಇದು
ತೋರಿಸುತ್ತದೆ. ಇವನ ಸಂಕ್ಷಿಪ್ತೀಕರಣ ರೀತಿ ಕೆಳಗಿನಂತಿವೆ:
1.
ವಾಕ್ಯಗಳನ್ನು
ಪುನಾರೂಪಿಸಿ (ಕೆಲವೊಮ್ಮೆ ಪದಗಳನ್ನು ಬಿಟ್ಟು) ಸೂತ್ರಗಳನ್ನು
ಪುನಾರಚಿಸುವುದು,
2.
ಉದಾಹರಣೆಗಳ
ಸಂಖ್ಯೆಯನ್ನು ಸೀಮಿತಗೊಳಿಸಿರುವುದು ಮತ್ತು ಅವುಗಳಲ್ಲಿ ಅಗತ್ಯ ಪದಪುಂಜಗಳನ್ನು ಮಾತ್ರ ಉಳಿಸಿಕೊಂಡು
ಇತರ ಪದಗಳನ್ನು ಬಿಟ್ಟಿರುವುದು,
3.
ಸೂತ್ರ-ಸೂತ್ರಗಳ
ನಡುವೆ ಕೊಂಡಿಯಂತೆ ಮಾತ್ರ ಇರುವ ಒಂದೊಂದು ಸೂತ್ರವನ್ನೇ ಅಂದರೆ ವ್ಯಾಕರಣವಸ್ತವಿಲ್ಲದ ಸೂತ್ರವನ್ನು
ಬಿಟ್ಟಿರುವುದು.
ಸಂಕ್ಷಿಪ್ತೀಕರಣವೊಂದೇ ವುರ್ತನ ವ್ಯಾಕರಣಕ್ಕೂ
ಶಬ್ದಮಣಿದರ್ಪಣಕ್ಕೂ ಇರುವ ವ್ಯತ್ಯಾಸವಲ್ಲ. ಸೂತ್ರಗಳನ್ನು ಪುನರ್ವ್ಯವಸ್ಥೀಕರಿಸಿದ್ದಾನೆ ಮತ್ತು ಪ್ರತಿಸೂತ್ರಕ್ಕೆ ಒಂದು ಇಂಗ್ಲಿಷ್ ಶೀರ್ಷಿಕೆಯನ್ನೂ ಕೆಲವೊಮ್ಮೆ
ಸೂತ್ರಾಂತ್ಯದಲ್ಲಿ ಇಂಗ್ಲಿಷ್ ಉಪಶೀರ್ಷಿಕೆಯನ್ನೂ ಸೇರಿಸಿದ್ದಾನೆ. ಮೂಲದ ನಲವತ್ತಮೂರನೆಯ ಸೂತ್ರ ಇಲ್ಲಿ
ಎರಡನೆಯದಾಗಿ ಬಂದಿದೆ. ಇಪ್ಪತ್ತಮೂರನೆಯ ಮತ್ತು ಹದಿನಾಲ್ಕನೆಯ ಸೂತ್ರಗಳನ್ನು ಸೇರಿಸಿ ಆರನೆಯ ಸೂತ್ರವನ್ನು
ರಚಿಸಿದ್ದಾನೆ ಇತ್ಯಾದಿ.
ಇಲ್ಲಿ ನೀಡಿರುವ ಇಂಗ್ಲಿಷ್
ಶೀರ್ಷಿಕೆಗಳು ಕನ್ನಡೇತರರಿಗೆ ಸೂತ್ರಗಳನ್ನು ಅರ್ಥೈಸುವ ದೃಷ್ಟಿಯಿಂದ ಉಪಯುಕ್ತವಾಗಿವೆ. ಒಂದು ನಿರ್ದಿಷ್ಟ
ಸನ್ನಿವೇಶದಲ್ಲಿ ತಮಗೆ ಬೇಕಾದ ಸೂತ್ರಗಳನ್ನು ಆಯ್ದುಕೊಳ್ಳಲು ಅನಕೂಲಕರವಾಗಿವೆ. ಉದಾಹರಣೆಗಾಗಿ ‘Letters’, ‘Euphony’,
‘Formation of Compound words’ etc. ಸೂತ್ರಾಂತ್ಯ
ಉಪಶೀರ್ಷಿಕೆಗಳು ಆಯಾ ಸೂತ್ರದ ವಸ್ತುವನ್ನು ತಿಳಿಸುತ್ತವೆ.
ಉದಾ. “change of
letters”, “insertion of ಏ or ಓ” etc. ಇವೆಲ್ಲ
ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿವೆ.
ರೆ ಜಾರ್ಜ್ ವುರ್ತನ ಈ ವ್ಯಾಕರಣ ಶಬ್ದಮಣಿದರ್ಪಣವನ್ನು ಆಧರಿಸಿದ
ಕೃತಿ ;ಸ್ವತಂತ್ರ ಗ್ರಂಥವಲ್ಲ. ಆದರೂ ಇದು ಮೂಲದ ಪಡಿಯಚ್ಚಲ್ಲ. ಹೊಸಗನ್ನಡ ಗದ್ಯದಲ್ಲಿ ಹಳಗನ್ನಡ ವ್ಯಾಕರಣವನ್ನು
ಹೇಳಿರುವುದು ಇದರ ಹೆಗ್ಗಳಿಕೆ. ಶಬ್ದಮಣಿದರ್ಪಣದ
ವೃತ್ತಿಗಳನ್ನೇ ಇಲ್ಲಿ ಹೆಚ್ಚಾಗಿ ಅವಲಂಬಿಸಿದ್ದಾನೆ. ಇಂದಿನ ಹಳಗನ್ನಡ ಕಾವ್ಯಾಭ್ಯಾಸಿ ಪೂರ್ವ ಸಿದ್ಧತೆಗಾಗಿ
ಓದಬಹುದಾದ ವ್ಯಾಕರಣವೊಂದನ್ನು ಸಿದ್ಧಪಡಿಸಿಕೊಟ್ಟುದು ವುರ್ತನ ಇನ್ನೊಂದು ಹೆಗ್ಗಳಿಕೆ. ಹಳಗನ್ನಡ ವ್ಯಾಕರಣವನ್ನು
ಇಂಗ್ಲಿಷ್ ವ್ಯಾಕರಣದ ಪರಿಭಾಷೆಗೆ ಹೊಂದಿಸಲು ಪ್ರಯತ್ನಿಸಿದ್ದು ಇನ್ನೊಂದು ಮುಖ್ಯ ಅಂಶ. ತನ್ನ ವ್ಯಾಕರಣವು ಸಮಗ್ರವಾದ ಪ್ರಮಾಣಭೂತವಾದ ಆಳವಾದಅಧ್ಯಯನಕ್ಕೆ
ಪರಾಮರ್ಶನ ಯೋಗ್ಯವಾದ ಒಂದು ಕೃತಿಯಾಗಬೇಕೆಂಬ ಉದ್ದೇಶವಾಗಲೀ ಹಂಬಲವಾಗಲೀ ವುರ್ತನದಲ್ಲ. ಇವನ ಸಂಕ್ಷಿಪ್ತಗೊಳಿಸುವ
ವಿಧಾನದಲ್ಲಿಯೇ ಗ್ರಂಥವು ಹೀಗಾಗದಿರುವ ಅಂಶಗಳು ಅಡಗಿವೆ. ಮುಷ್ಟಿಯಲ್ಲಿ ಹಿಡಿಯಬಹುದಾದ, ಹಳಗನ್ನಡ
ಕಾವ್ಯಾಭ್ಯಾಸಕ್ಕೆ ಆಡುಗನ್ನಡದಲ್ಲಿ ಮಾರ್ಗದರ್ಶಿಸಬಲ್ಲ ಕೃತಿರಚನೆ ವುರ್ತನಿಗೆ ಪ್ರಸ್ತುತವಾಗಿದ್ದ
ವಿಷಯ. ಈ ಉದ್ದೇಶದಲ್ಲಿ ಅವನು ಕೃತಕೃತ್ಯನಾಗಿದ್ದಾನೆ.