ಕಿಶೋರ ಸಂಸ್ಕಾರ ಎಂಬ ಒಂದು ಪುಸ್ತಕ ಈಚೆಗೆ ಪ್ರಕಟವಾಗಿದೆ. ಕಿಶೋರರು ಎಂದರೆ ಹದಿಹರಯದ ಮಕ್ಕಳು. ಇವರಲ್ಲಿ ಸನ್ನಡತೆ ಉಂಟಾಗುವಂತೆ ಮಾಡಲು ಕೆಲವು ಸೂಚನೆಗಳನ್ನು ಈ ಪುಸ್ತಕ ೊಳಗೊಂಡಿದೆ. ಇದರಲ್ಲಿ ಕೆಲವು ಉತ್ತಮಾಂಶಗಳಿವೆ. ಹಳತರ ಬಗ್ಗೆ ಅಭಿಮಾನ ಹೆಚ್ಚಿದೆ. ಹೊಸದನ್ನು ಎಚ್ಚರಿಕೆಯಿಂದ ಸ್ವೀಕರಿಸಬೇಕೆಂಬ ಎಚ್ಚರಿಕೆ ಇದೆ. ಇದರ ಒಂದು ಪರಿಚಯಾತ್ಮಕ ಲೇಖನ ಇಲ್ಲಿದೆ:
ಕಿಶೋರರಿಗೆ ಸರಿಯಾದ ಸಂಸ್ಕಾರಗಳನ್ನು ನೀಡುವುದು ಜನ್ಮದಾತರ ಮತ್ತು ಗುರಗಳ
ಕರ್ತವ್ಯ
ಭಾರತೀಯ ಸಂಸ್ಕೃತಿ ಹಿರಿದು, ವಿಶ್ವವೇ
ಒಂದು ಕುಟುಂಬವೆಂದು ಸಾರುತ್ತದೆ, ಬೇರೆಬೇರೆ ನಡವಳಿಕೆಗಳನ್ನು ಒಳಗೊಳಿಸಿಕೊಳ್ಳುತ್ತದೆ, ಆದ್ದರಿಂದಲೇ
ಶ್ರೇಷ್ಠ, ಇತ್ಯಾದಿ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಸಂಸ್ಕೃತಿ ಎಂಬುದು ಜನಜೀವನದಲ್ಲಿ ಬಿಂಬಿತವಾಗುವಂತಹುದೇ
ಹೊರತು ತನ್ನಷ್ಟಕ್ಕೇ ನಿರಪೇಕ್ಷವಾಗಿ ನಿಲ್ಲುವಂತಹುದಲ್ಲ. ಜನರ ನಡವಳಿಕೆ ಈ ಮಟ್ಟವನ್ನು ಮುಟ್ಟ ಬೇಕೆಂದಾದರೆ
ಅದು ಹೇಗಿರಬೇಕು, ಯಾವ ನಿಯಮಗಳನ್ನು ಪಾಲಿಸಬೇಕು, ಮಕ್ಕಳನ್ನು ಈನಿಟ್ಟಿನಲ್ಲಿ ಬೆಳೆಸುವುದು ಹೇಗೆ
ಎಂಬಿವು ಎಲ್ಲರ ಆಸಕ್ತಿಯ ವಿಷಯ. ಇದಕ್ಕೆ ಸಂಬಂಧಿಸಿದ ಹಲವು ಮುಖಗಳನ್ನು ಚಿತ್ರಿಸುವ ಒಂದು ಚಿಕ್ಕ
ಪುಸ್ತಕ ಕಿಶೋರ ಸಂಸ್ಕಾರ, ವ್ಯಕ್ತಿತ್ವ ವಕಸನಕ್ಕೆ
ದಾರಿ. ಇದರ ಲೇಖಕರು ಕೃಷ್ಣ ಜಿ. ಭಟ್ಟ, ಹೆಗಡೆ. ಪುಸ್ತಕದ ಪ್ರಕಾಶಕರು ಸಾಹಿತ್ಯ ಪ್ರಕಾಶನ, ಕೊಪ್ಪೀಕರ್
ಬೀದಿ, ಹುಬ್ಬಳ್ಳಿ 20. ಪುಸ್ತಕದಲ್ಲಿ ಒಟ್ಟು 112 ಪುಟಗಳಿವೆ. ಬೆಲೆ ರೂ.90/-.
ಪುಸ್ತಕದಲ್ಲಿ
ಏಳು ಅಧ್ಯಾಯಗಳಿವೆ. ಕಿಶೋರ ಸಂಸ್ಕಾರ, ಧರ್ಮ ಎಂದರೇನು,
ಮಮತಾಮಯಿ ಮಾತೆ, ಜನ್ಮದಾತರಿಗೆ ನಿತ್ಯ ನಮನ, ವೀರಶೈವ ಸಂಸ್ಕಾರ, ಜೈನ ಧರ್ಮ ಸಂಸ್ಕಾರ ತತ್ವಗಳು, ಉಪಸಂಹಾರ
– ಇವು ಅಧ್ಯಾಯಗಳ ಶೀರ್ಷಿಕೆಗಳು. ಪ್ರತಿಯೊಂದು ಅಧ್ಯಾಯದಲ್ಲಿ ಮತ್ತೆ ಉಪಶೀರ್ಷಿಕೆಗಳು ಮತ್ತು ಅವುಳಿಗೆ
ಚಿಕ್ಕಚಿಕ್ಕ ವಿವರಣೆಗಳು ಹೀಗೆ ಸಾಗುತ್ತದೆ ಪುಸ್ತಕದ ಓಟ. ಇದರಿಂದ ಪುಸ್ತಕದ ಓದು ಸುಭಗವಾಗುತ್ತದೆ;
ಆಸಕ್ತಿದಾಯಕವಾಗುತ್ತದೆ.
ಮೊದಲನೆಯ ಅಧ್ಯಾಯ
ಉಪೋದ್ಘಾತ ಸ್ವರೂಪದ್ದು. ಇದರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳ ಒಂದು ವ್ಯಾಖ್ಯೆಯನ್ನು ನಿರೂಪಿಸಲು
ಪ್ರಯತ್ನಿಸಲಾಗಿದೆ. ‘ನಮ್ಮ ನಡವಳಿಕೆ ಮತ್ತು ರೀತಿ ನೀತಿಗಳು ಸತ್ಸಂಪ್ರದಾಯ ಆಧಾರಿತವಾಗಿದ್ದು, ಶೀಲ, ಭಾವ, ನಿರೂಪಣೆಗಳನ್ನೇ ಸಂಸ್ಕೃತಿ’ ಎನ್ನಬಹುದೆಂದು ಇಲ್ಲಿಯ ನಿರೂಪಣೆ. ಸಂಸ್ಕೃತಿಯನ್ನು
ರೂಢಿಸುವ ಪ್ರಕ್ರಿಯೆಗಳು ಮತ್ತು ಘಟನೆಗಳೇ ಸಂಸ್ಕಾರಗಳು. ಎರಡನೆಯ ಅಧ್ಯಾಯದಲ್ಲಿ ಧರ್ಮ ಶಾಸ್ತ್ರ ಸಮ್ಮತವಾದ
ಷೋಡಶಸಂಸ್ಕಾರಗಳ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಕಾಣಬಹುದು. ಇವುಗಳಲ್ಲಿ ಎಲ್ಲವೂ ಸಾಮಾನ್ಯವಾಗಿ
ಪ್ರಚಲಿತವಿಲ್ಲವೆಂದೂ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಉಪನಯನ, ವಿವಾಹ ಮತ್ತು ಅಂತ್ಯತೇಷ್ಟಿಗಳೆಂಬ
ಆರು ಮಾತ್ರ ಆಚರಣೆಯಲ್ಲಿವೆ ಎಂದೂ ಸೂಚಿಸಿದ್ದಾರೆ.ಈ ‘ಸಂಸ್ಕಾರಗಳ ಸ್ವರೂಪವನ್ನು ಅರಿತು ಆಚರಿಸೋಣ’
ಎಂಬ ಆಶಯ ಒಟ್ಟಾರೆಯಾಗಿ ಇಲ್ಲಿ ಪ್ರತಿಪಾದಿತವಾಗಿದೆ. ಈ ಆಚರಣೆಗಳ ಹಿನ್ನೆಲೆ ಮತ್ತು ಅವುಗಳ ಒಂದು
ವಿವರಣೆಯನ್ಮು ಇಲ್ಲಿ ನೋಡಬಹುದು. ಮೂರನೆಯ ಅಧ್ಯಾಯವು ಹೆಸರೇ ತಿಳಿಸುವಂತೆ ತಾಯಿಯ ಜವಾಬ್ದಾರಿಗಳನ್ನು
ತಿಳಿಸುತ್ತದೆ. ಕುಪುತ್ರನಿರಬಹುದು; ಕುಮಾತಾ ಎಲ್ಲಿಯೂ ಇರಲಾರಳು ಎಂಬರ್ಥದ ಸಂಸ್ಕೃತ ಉಕ್ತಿಯನ್ನು
ಉಲ್ಲೇಖಿಸಿ ಮಗುವಿಗೆ ಶಿಕ್ಷಣದ ಪ್ರಾರಂಭವು ತಾಯಿಯಿಂದಲೇ ಎಂದು ವಿವರಿಸಿದ್ದಾರೆ. ತಾಯಿಗೆ ಮಗುವಿನ
ಸರ್ವಾಂಗೀಣ ಪ್ರಗತಿಯತ್ತ ಲಕ್ಷ್ಯವಿರಬೇಕೇ ಹೊರತು ಕೇವಲ ಅಂಕಗಳ ಕಡೆಗಲ್ಲವೆಂದು ತಿಳಿಸಿದ್ದಾರೆ. ಮಗುವಿಗೆ
ಶಿಕ್ಷೆ ನೀಡುವುದು ಅಪರಾಧವೆಂಬ ಆಧುನಿಕ ತತ್ವವನ್ನು ಪ್ರತಿಪಾದಿಸಿದ್ದಾರೆ. ಮಗುವಿಗೆ ಯಾವ ಆಹಾರ ಒಳ್ಳೆಯದು
ಯಾವುದು ತ್ಯಾಜ್ಯ ಎಂಬಂತಹ ವಿಷಯಗಳು ಬಂದಿವೆ. ಒಟ್ಟಾರೆಯಾಗಿ ಷೋಡಶ ಸಂಸ್ಕಾರದಿಂದಾಚೆ ಇಂದಿನ ಸಮಾಜದಲ್ಲಿ
ಮಗುವನ್ನು ಬೆಳೆಸಲು ತಾಯಿಗೆ ಅಗತ್ಯವಾದ ಕೆಲವು ಅಂಶಗಳು ಇಲ್ಲಿವೆ. ನಾಲ್ಕನೆಯ ಅಧ್ಯಾಯವು ಈ ಪುಸ್ತಕದಲ್ಲಿ
ಅತಿ ದೀರ್ಘವಾದುದು ಮತ್ತು ಇದರಲ್ಲಿ ಐವತ್ತೆರಡು ಪುಟಗಳಿವೆ. ಜನ್ಮದಾತರಿಗೆ ನಿತ್ಯ ನಮನ ಎಂಬುದು ಅಧ್ಯಾಯದ
ಶೀರ್ಷಿಕೆಯಾದರೂ ಹಿರಿಯರನ್ನೂ ಗುರುಗಳನ್ನೂ ಗೌರವಿಸುವ ರೀತಿಗಳನ್ನೂ ಇಲ್ಲಿ ಸೇರಿಸಲಾಗಿದೆ. ಹಂಚಿ
ತಿನ್ನಬೇಕು – ಮುಂಜಾನೆ ಮುಂಚೆ ಏಳಬೇಕು – ಪ್ರಾತಃಸ್ಮರಣೆ, ವ್ಯಾಯಾಮ, ಪ್ರಾಣಾಯಾಮ, ಸ್ನಾನ ಇತ್ಯಾದಿಗಳನ್ನು
ಕ್ರಮವಾಗಿ ಮಾಡಬೇಕು ಇಂತಹ ವಿಷಯಗಳನ್ನು ಸಾಂಪ್ರದಾಯಿಕವಾಗಿ ಇಲ್ಲಿ ನಿರೂಪಿಸಲಾಗಿದೆ. ಅನಂತರ ಶಾಲಾಪಾಠಗಳನ್ನು
ಓದಿ ಕಲಿಯಬೇಕು, ಗೃಹ ಪಾಠಗಳನ್ನು ತಪ್ಪದೇ ಪೂರೈಸಬೇಕು, ಸಹಪಠ್ಯ ಚಟುವಟಿಕೆಗಳಿಗಾಗಿ ಸಿದ್ಧತೆ ಮಾಡಿಕೊಂಡು
ಭಾಗವಹಿಸಬೇಕು – ಇಂತಹ ಕಿವಿಮಾತುಗಳನ್ನು ಇಲ್ಲಿ ಕಾಣ ಬಹುದು. ನಮ್ಮ ಭಾಷೆ, ಪಾರಂಪರಿಕ ಉಡುಪು, ಸತ್ಸಂಪ್ರದಾಯ
ಇಂತಹವುಗಳ ಬಗೆಗೆಲ್ಲ ಲೇಖಕರಿಗೆ ಹೆಮ್ಮೆ ಇದೆ. ಮುಂದಿನ ಜನಾಂಗಕ್ಕೆ ಇವುಗಳನ್ನೆಲ್ಲ ಮೌಲಿಕವಾಗಿ ವರ್ಗಾಯಿಸಬೇಕೆಂಬುದು
ಅವರ ಆಶಯ. ವೀರಶೈವ ಸಂಸ್ಕಾರ ಮತ್ತು ಜೈನ ಧರ್ಮ ಸಂಸ್ಕಾರ
ತತ್ವಗಳು ಎಂಬಿವು ಮುಂದಿನ ಎರಡು ಅಧ್ಯಾಯಗಳು. ಈ ಎರಡು ಅಧ್ಯಾಯಗಳಲ್ಲಿ ಆಯಾ ಮತಾನಯಾಯಿಗಳ ಆಚರಣೆಗಳ
ಒಂದು ಸಂಕ್ಷಿಪ್ತತಮ ನಿರೂಪಣೆ ಇದೆ. ‘ನಮ್ಮ ಸುತ್ತ ಇರುವ ಸನಾತನ ಹಿಂದೂ ಧರ್ಮದ ಜೊತೆ ವೀರಶೈವ, ಜೈನರ
ಕುರಿತೂ ಸ್ಥೂಲವಾಗಿ ತಿಳಿದುಕೊಂಡರೆ ನಮ್ಮದೇ ಅರಿವಿನ ಕ್ಷತಿಜ ವಿಸ್ತಾರಗೊಳ್ಳುತ್ತದೆ’ ಎಂಬುದು ಇವೆರಡನ್ನು
ಸೇರಿಸಲು ಕೃತಿಕಾರರು ನೀಡಿರುವ ಕಾರಣ. ದೇಶದಲ್ಲಿರವ ಇತರ ಧರ್ಮಗಳ ಆಚರಣೆಗಳನ್ನೂ ಸೇರಿಸಿದ್ದರೆ ಪುಸ್ತಕವು
ಹೆಚ್ಚು ಸಮಗ್ರವಾಗುತ್ತಿತ್ತು.
ಪುಸ್ತಕದ
ಶೈಲಿಯು ಒಂದು ರೀತಿಯ ವಿಧ್ಯಾತ್ಮಕವಾದುದು. ಹೀಗೆ ಮಾಡಬೇಕು ಹೀಗೆ ಮಾಡಬಾರದು ಎಂದು ಹೇಳುವುದು ಇಲ್ಲಿಯ
ಪರಿ. ಹಳತೆಲ್ಲ ಸಾಧು; ಹೊಸತು ಪಾಶ್ಚಾತ್ಯರ ಅಂಧಾನುಕರಣೆ ಎಂಬಂತಹ ಮನೋಧೋರಣೆ ಕೃತಿಯುದ್ದಕ್ಕೂ ಕಾಣಸಿಗುತ್ತದೆ.
ಉದಾಹರಣೆಗೆ ‘ಪುರಾಣಶ್ರವಣವೊಂದು ಅತ್ಯುತ್ತಮ ಸಂಸ್ಕಾರ’ (ಪು, 71), ‘ಪಂಚೆ, ಜುಬ್ಬ ಹಿಂದಿನ ಪರಂಪರೆಯ
ಉಡುಪು. ಅದಕ್ಕೆ ಒಂದು ಪಾವಿತ್ರ್ಯ ಇದೆ’(ಪು, 88), ‘ಕಿಸೆಗೂ ಕಿವಿಗೂ ಸಂಪರ್ಕ ೇರ್ಪಡಿಸುವ ಸಾಧನ
‘ಐಪಾಡ್’’. ಇದರ ದುರುಪಯೋಗವೇ ಹೆಚ್ಚು’(ಪು,89) – ಇಂತಹ ಹೇಳಿಕೆಗಳಲ್ಲಿ ಇದನ್ನು ಕಾಣಬಹುದು. ಹಳತರ
ಬಗ್ಗೆ ವಿಮರ್ಶೆಗಿಂತ ಸಂಪಾದಿಸಿದ್ದನ್ನು ಕಳೆದುಕೊಳ್ಳಬಾರದೆಂಬ ಕಳಕಳಿ ಇಲ್ಲಿದೆ. ಹೊಸತರ ಬಗ್ಗೆ ಮೆಚ್ಚುಕೆಗಿಂತ
ಅದರಿಂದ ಏನು ಅನಾಹುತವಾಗಿ ಬಿಡುತ್ತದೋ ಎಂಬ ಭಯ ಇಲ್ಲೆಲ್ಲ
ಕಾಣುತ್ತದೆ. ಹೊಸತು ಅನಿವಾರ್ಯ ಎಂಬ ಪ್ರಜ್ಞೆಯ ಜೊತೆಗೆ ನಮ್ಮತನವನ್ನು ಕಳೆದುಕೊಳ್ಳದಂತೆ ಜಾಗರೂಕತೆಯಿಂದ
ಅದನ್ನು ಸ್ವೀಕರಿಸಬೇಕೆಂಬ ಕಾಳಜಿ ಕೃತಿಯಲ್ಲಿದೆ. ಪುಸ್ತಕವನ್ನು ಒಮ್ಮೆ ಓದಬಹುದು