ರೂಪಕಗಳ
ಸುತ್ತ
1.
ಭಾರತೀಯ
ಪರಂಪರೆಯಲ್ಲಿ ರೂಪಕಗಳು
ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅಲಂಕಾರವೇ
ಕಾವ್ಯದಲ್ಲಿ ಪ್ರಧಾನ ಎಂದು ಪ್ರತಿಪಾದಿಸುವ ಕಾವ್ಯ ಮೀಮಾಂಸಕರ ತಾತ್ವಿಕ ನಿಲುವನ್ನು ಅಲಂಕಾರ ಪ್ರಸ್ಥಾನ
ಎಂದು ಕರೆಯುವುದು ವಾಡಿಕೆ. ಕ್ರಿ ಪೂ 2ನೆಯ ಶತಮಾನದಲ್ಲಿ ರಚಿತವಾದ ಭರತನ ಅಲಂಕಾರ ಶಾಸ್ತ್ರದಿಂದ ಈ
ಸಂಪ್ರದಾಯ ಪ್ರಾರಂಭವಾಯಿತು ಎನ್ನಬಹುದು. ಇಲ್ಲಿಂದ ಮುಂದೆ ಕನಿಷ್ಠ ಇಪ್ಪತ್ತು ಶಾಸ್ತ್ರ ಕಾರರು ಈ
ಪ್ರಸ್ಥಾನವನ್ನು ಬೆಳೆಸಿದರು. ಅವರಲ್ಲಿ ಏಳನೆಯ ಶತಮಾನದ ದಂಡಿ ಮತ್ತು ಭಾಮಹ ಇವರು ಮುಖ್ಯರು. ದಂಡಿ
ಕಾವ್ಯಾದರ್ಶ ಎಂಬ ಅಲಂಕಾರ ಗ್ರಂಥವನ್ನೂ ಭಾಮಹ ಕಾವ್ಯಾಲಂಕಾರವೆಂ ಕೃತಿಯನ್ನೂ ರಚಿಸಿದ್ದಾರೆ.ಕಾವ್ಯಾದರ್ಶದಲ್ಲಿ
ದಂಡಿಯು ‘ಕಾವ್ಯ ಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ’ (ಅಧ್ಯಾಯ 2, 1) ಎಂದು ಹೇಳಿದ್ದಾನೆ.
ಕಾವ್ಯಕ್ಕೆ ಶೋಭೆಯನ್ನು ತರುವ ಪ್ರಯೋಗವೇ ಅಲಂಕಾರ ಎಂಬುದು ಇವನ ಅಭಿಪ್ರಾಯ. ಈ ಅಭಿಪ್ರಾಯವನ್ನೇ ಈ
ಪ್ರಸ್ಥಾನದ ಎಲ್ಲ ಪ್ರತಿಪಾದಕರೂ ಪುನರುಚ್ಚರಿಸಿದ್ದಾರೆ. ಅವರಲ್ಲಿ ಈಚಿನವನಾದ ವಾಮನನು ಕಾವ್ಯಮ್ ಗ್ರಾಹ್ಯಮ್
ಅಲಂಕಾರಾತ್, ಸೌಂದರ್ಯಮ್ ಅಲಂಕಾರಃ ಎಂದೂ ಹೇಳಿದ್ದಾನೆ. ಸೌಂದರ್ಯವೇ ಅಲಂಕಾರ, ಕಾವ್ಯ ಗ್ರಾಹ್ಯವಾಗುವುದು
ಅಲಂಕಾರದಿಂದ ಎಂಬುದು ಇವನ ಪ್ರತಿಪಾದನೆ. ಒಟ್ಟಿನಲ್ಲಿ ಅಲಂಕಾರ ಪ್ರಸ್ಥಾನದ ಶಾಸ್ತ್ರಕಾರರೆಲ್ಲ ಅಲಂಕಾರವೇ
ಕಾವ್ಯದ ಜೀವಾಳ ಎಂಬ ಚಿಂತನೆಯವರು.
ಇವರುಗಳು
ಯಾವುದೇ ವಾಕ್ಯ ಹೇಗೆ ಕಾವ್ಯಗುಣ ಪಡೆಯುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾ ಐವತ್ತಕ್ಕೂ ಹೆಚ್ಚು
ಅಲಂಕಾರಗಳನ್ನು ನಿರೂಪಿಸಿದ್ದಾರೆ. ಆದರೆ ಅವುಗಳಲ್ಲಿ ಉಪಮಾಲಂಕಾರ ಮತ್ತು ರೂಪಕಾಲಂಕಾರಗಳಿಗೆ ವಿಶೇಷ
ಸ್ಥಾನ; ಎರಡರಲ್ಲೂ ಎರಡು ವಸ್ತು ಅಥವ ಜೀವಿಗಳ ಹೋಲಿಕೆಯೇ ಮುಖ್ಯ ಎಂಬುದನ್ನು ಇವರು ಘನತರವಾಗಿ ಪ್ರತಿಪಾದಿಸಿದ್ದಾರೆ.
ಉಪಮಾಲಂಕಾರದಲ್ಲಿ ಈ ವಸ್ತುವನ್ನು ಈ ವಸ್ತುವಿನೊಂದಿಗೆ
(ಅಥವ ಜೀವಿಯೊಂದಿಗೆ) ಹೋಲಿಸಲಾಗುತ್ತಿದೆ ಎಂಬುದು ‘ಎಂಬಂತೆ’ ‘ವೋಲು’ ‘ಹಾಗೆ’ ಇತ್ಯಾದಿ ಪದಗಳಿಂದ
ಸೂಚಿತವಾಗಿರುತ್ತದೆ ಮತ್ತು ಹೀಓಗೆ ಹೋಲಿಕೆ ಸ್ಪಷ್ಟವಾಗಿರುತ್ತದೆ; ರೂಪಕಾಲಂಕಾರದಲ್ಲಿ ಇಂತಹ ಪದದಿಂದ
ಹೋಲಿಕೆಯ ಸೂಚನೆ ಇರುವುದಿಲ್ಲ ಎಂಬುದನ್ನು ಇವರೆಲ್ಲ ಗಮನಿಸಿದ್ದಾರೆ. ಹಾಗಿದ್ದಾಗ್ಯೂ ಸಂಸ್ಕೃತ ಸಾಹಿತ್ಯದಲ್ಲಿ
ಉಪಮಾಲಂಕಾರ ಬಳಕೆಯಲ್ಲಿ ಶ್ರೇಷ್ಠನೆಂದು ಉಪಮಾ ಕಾಳಿದಾಸಸ್ಯ ಎಂದು ಜನಜನಿತವಾಗಿರುವ ವಾಕ್ಯದಿಂದ ಗುರುತಿಸಲಾಗುತ್ತಿದೆ.
ಹೀಗೆ ರೂಪಕಗಳ ಬಳಕೆಯಲ್ಲಿ ನಿಷ್ಣಾತನೆಂದು ಯಾರನ್ನಾದರೂ ಗುರುತಿಸುವ ಪರಿಪಾಠವಿಲ್ಲ.
1.1 ಕನ್ನಡದಲ್ಲಿ ಪ್ರಥಮ ಉಪಲಬ್ಧ
ಪದ್ಯ ಕೃತಿಯಾಗಿರುವ ಕವಿರಾಜ ಮಾರ್ಗ, ದಂಡಿ ಭಾಮಹರನ್ನು
ಅನುಸರಿಸಿ ರಚನೆಯಾಗಿರುವ ಒಂದು ಲಕ್ಷಣ ಗ್ರಂಥ. ಇದರ ಕರ್ತೃ ಶ್ರೀವಿಜಯ. ಇವನೂ ಅಲಂಕಾರ ಪ್ರಸ್ಥಾನಕ್ಕೆ
ಸೇರಿವನೇ. ಇವನು ರಸವನ್ನು ಪ್ರಸ್ತಾವಿಸಿದ್ದರೂ ನವ ವಿಧ ರಸಂಗಳಂ ಮನಕೆವರೆ ನಿರೂಪಿಸುವ ವಚನ ವಿರಚನೆ
ರಸವದ್-ವಿವಿಧಾಳಂಕಾರಂ (ಶ್ರೀವಿಜಯ,163) ಎಂಬುದಾಗಿ ಹೇಳಿ ಅದನ್ನೂ ಒಂದು ಅಲಂಕಾರವಾಗಿಯೇ ಸ್ವೀಕರಿಸಿದ್ದಾನೆ. ಇವನು ‘ವರ್ಣ್ಯವಲ್ಲದ ಬೇರೆಯ ವಸ್ತುಗಳ ರೂಪಾದಿ ಗುಣಗಳನ್ನುವರ್ಣ್ಯದ
ವಿಷಯದಲ್ಲಿ ಅಭೇದೋಕ್ತಿಯಿಂದ (ಎಂದರೆ ಅದರಂತೆ ಇದು ಇದೆ ಎನ್ನದೆ ಅದೇ ಇದು ಎಂದು) ರೂಪಿಸುವುದು ರೂಪಕ.
ಉದಾಹರಣೆ ಬಾಹುಲತೆ, ಪಾದಾಂಬುಜ, ಮುಖೇಂದು, ನಯನಾವಳಿ’ ಎಂದು ವಿವರಿಸಿದ್ದಾನೆ (ಎಮ್ ವಿ ಸೀ,
281). ಅಲ್ಲದೆ ರೂಪಕದಲ್ಲಿರುವ ಹದಿನಾಲ್ಕು ವಿಧಗಳನ್ನು
ಉದಾಹರಣೆಗಳ ಮೂಲಕ ತೋರಿಸಿದ್ದಾನೆ. ಇಲ್ಲಿಯ ವರ್ಗೀಕರಣವು ಪ್ರಯೋಗವಾಗಿರುವ ಭಾಷಾ ರಚನೆಯನ್ನು ಮುಖ್ಯವಾಗಿ
ಆಧರಿಸಿದೆ. ಸಮಸ್ತ (ಸಮಾಸಯುಕ್ತ) ಪದಗಳನ್ನು ಬಳಸಿ ಅಲಂಕಾರ ರಚನೆಯಾಗಿದ್ದರೆ ಸಮಸ್ತ-ರೂಪಕ, ಬಿಡಿ
ಬಿಡಿ ಪದಗಳಿದ್ದರೆ ವ್ಯಸ್ತ-ರೂಪಕ, ಈಗ ವಿವರಿಸಲಾಗುತ್ತಿರುವ ವಸ್ತುವಿನ ಅವಯವಗಳನ್ನು ಇನ್ನೊಂದು ವಸ್ತುವಿನ
ಅವಯವಗಳೊಂದಿಗೆ ಹೋಲಿಸಿ ರೂಪಕ ರಚನೆಯಾಗಿದ್ದರೆ ಅವಯವೀ-ರೂಪಕ ಇತ್ಯಾದಿಯಾಗಿ ಇವನು ವರ್ಗೀಕರಿಸಿದ್ದಾನೆ.
ಕೊನೆಯಲ್ಲಿ “ವರ ರೂಪಕ ಭೇದಮನ್ ಇಂತಿರೆ ಪೇಳ್ದೆಂ ಕಿರಿದನ್” (ಶ್ರೀವಿಜಯ,134) ಎನ್ನುವ ಮೂಲಕ ರೂಪಕ
ಪ್ರಪಂಚ ಇಷ್ಟೇ ಅಲ್ಲವೆಂದೂ ಉಳಿದುದನ್ನು ಅವು ಬಂದಂತೆ ಅರ್ಥ ಮಾಡಿಕೊಳ್ಳಬೇಕೆಂದೂ ಸೂಚಿಸಿದ್ದಾನೆ. ರೂಪಕವು ಕನ್ನಡ ಕಾವ್ಯಗಳಲ್ಲಿ ಇತರ ಭಾಷೆಗಳಂತೆಯೇ ವಿಪುಲವಾಗಿ
ಕಂಡು ಬರುವ ಅಲಂಕಾರ. ಕನ್ನಡ ಕವಿಗಳಲ್ಲಿಲಕ್ಷ್ಮೀಶನನ್ನು ಉಪಮಾಲೋಲ ಎಂದೂ ಕುಮಾರವ್ಯಾಸನನ್ನು ರೂಪಕ
ಸಾಮ್ರಾಜ್ಯ ಚಕ್ರವರ್ತಿ ಎಂದೂ ವಿಮರ್ಶಕರು ಕರೆದಿದ್ದಾರೆ.
1.2 ಒಟ್ಟನಲ್ಲಿ ರೂಪಕವೆಂಬುದು ಕಾವ್ಯಗಳಲ್ಲಿ
ಮಾತ್ರ ಬಳಕೆಯಾಗುವ, ಕವಿಗಳು ತಮ್ಮ ಪ್ರತಿಭೆಯಿಂದ ಸೃಷ್ಟಿಸುವ ಒಂದು ಭಾಷಾ ವೈಚಿತ್ರ್ಯ ಎಂಬುದು ಪ್ರಾಚೀನ
ಕಾವ್ಯ ಮೀಮಾಸಂಸಕರ ಮತ. ಮುಂದೆ ‘ಕಾವ್ಯಾಸ್ಯಾತ್ಮಾ
ಧ್ವನಿರಿತ್ಯುಚ್ಯತೇ’ ಎಂದು ಆನಂದ ವರ್ಧನ ಉದ್ಘೋಷಿಸಿದಾಗಲಾಗಲೀ ವಿಶ್ವನಾಥನು ‘ವಾಕ್ಯಮ್ ರಸಾತ್ಮಕಂ
ಕಾವ್ಯಂ’ ಎಂದು ನಿರೂಪಿಸಿದಾಗಲಾಲಗಲೀ ರೂಪಕಾದಿ ಅಲಂಕಾರಗಳ
ಯಾವುದೇ ರೀತಿಯ ಪುನರ್ನಿರೂಪಣೆಯಾಗಿರುವುದು ಅಥವ ಮರುವ್ಯಾಖ್ಯಾನ ಮಾಡಿರುವುದು ಅಥವ ಹೊಸದೇ ರೀತಿಯಲ್ಲಿ
ವಿವರಿಸಿರುವುದು ಕಂಡು ಬರುವುದಿಲ್ಲ. ರೂಪಕಗಳನ್ನು ಬೇರೆ ರೀತಿಯಲ್ಲಿ ನೋಡುವ ಪ್ರವೃತ್ತಿಯನ್ನಾಗಲೀ,
ಕಾವ್ಯಗಳಲ್ಲಿ ಕಂಡುಬರುವ ರೂಪಕಗಳನ್ನು ಹೊಸ ರೀತಿಯಲ್ಲಿ ಅರ್ಥೈಸುವ ಪ್ರಯತ್ನಗಳನ್ನಾಗಲೀ ಕಾವ್ಯ ಮೀಮಾಂಸಕರು
ತೋರಿಸಿರುವುದಿಲ್ಲ; ಕವಿ ಸೃಜಿತ ರೂಪಕಗಳು ಸಾಮಾನ್ಯರಿಗೂ ಸುಲಭವಾಗಿ ಹೇಗೆ ಅರ್ಥವಾಗಿಬಿಡುತ್ತವೆ ಅವು
ಜನಮಾನಸದಲ್ಲಿ ಹೇಗೆ ರೂಪುಗೊಳ್ಳುತ್ತವೆ ಎಂಬಿವುಗಳ ಬಗ್ಗೆಯೂ ಹೆಚ್ಚು ಚರ್ಚೆಗಳಾಗಿಲ್ಲ. ಹಲವು ರೂಪಕಗಳ ಹಿಂದೆ ಇರುವ ಪರಿಕಲ್ಪನಾತ್ಮಕ ಸಾಮಾನ್ಯ
ನಿರೂಪಣೆಗಳನ್ನು ರೂಪಿಸಿಯೂ ಇಲ್ಲ. ಅಂತಹ ಸಂಶೋಧನಾತ್ಮಕ ಪ್ರಯತ್ನಗಳು
ಕನ್ನಡದಲ್ಲಿ ನಡೆದಿಲ್ಲ.
2. ಪಾಶ್ಚಾತ್ಯರಲ್ಲಿ ರೂಪಕಗಳು
ಪಾಶ್ಚಾತ್ಯರಲ್ಲಿ ಕೂಡ ಮೊದಲ ಲಕ್ಷಣಕಾರರು
ಅದನ್ನೊಂದು ಸಾಹಿತ್ಯೋಪಕರಣ, ಕವಿಕಲ್ಪನೆಯ ಸೃಜನೆ ಎಂದೇ ನಿರೂಪಿಸುತ್ತಾರೆ.
ರೂಪಕದಲ್ಲಿಯೂ ಎರಡು ವಸ್ತುಗಳ ಹೋಲಿಕೆ ಇದೆ ಎಂಬುದು ಅವರದೂ ಅಭಿಪ್ರಾಯ. ಉಪಮಾ ಮತ್ತು ರೂಪಕಗಳು ತುಂಬ
ಹತ್ತಿರದ ಸಂಬಂಧಿಗಳು ಎಂಬುದರಲ್ಲಿ ಭಿನ್ನಾಭಿಪ್ರಾಯವೇನೂ ಇಲ್ಲ. ಖ್ಯಾತವಾದ ರೆನ್ ಅಂಡ್ ಮಾರ್ಟಿನ್
ವ್ಯಾಕರಣದಲ್ಲಿ He fought like a lion ಎಂದರೆ ಉಪಮಾಲಂಕಾರ(simile)ವೆಂದೂ Hewas a lion in the fight ಎಂದರೆ ರೂಪಕಾಲಂಕಾರ(metaphor)ವೆಂದೂ ವಿವರಿಸಿದ್ದಾರೆ.
ಪಾಶ್ಚಾತ್ಯರಲ್ಲಿ ರೂಪಕದ ಚರಿತ್ರೆ ಅರಿಸ್ಟಾಟಲ್ನಿಂದ ಪ್ರಾರಂಭವಾಗುತ್ತದೆ. ಅರಿಸ್ಟಾಟಲ್ “. . . a noun must always be either (1) the
ordinary word for the thing, or (2) a strange word, or (3) a metaphor, or (4)
an ornamental word, or (5) a coined word, or (6) a word lengthened out, or (7)
curtailed, or (8)altered in form.(Chapter
21, 1457b1-30 in http://people.wku.edu/jan.garrett/401s07/arismeta.htm). ಎಂದು ಹೇಳಿ ರೂಪಕವೂ ಒಂದು ನಾಮಪದ ಎಂಬಂತೆ ಪ್ರತಿಪಾದಿಸಿದ್ದಾನೆ. ಅವನ ಪ್ರಕಾರ
ಒಬ್ಬ ಸುಂದರ ಶ್ರೀಮಂತ ಹುಡುಗಿಗೆ ರಾಜಕುಮಾರಿ ಎಂದರೂ, ತುಂಬ ಆಕ್ರಮಣ
ಶೀಲ ಪ್ರವೃತ್ತಿಯ ಹುಡುಗಿಗೆ ಬಂತು ನೋಡು ಸಿಡಿಲು ಎಂದರೂ, ಪರ್ವತದಷ್ಟು ಗೌರವ ಎಂದರೂ, ಚಂದ್ರಮುಖಿ
ಎಂದರೂ, ಸಿಂಹುಲಿ ಎಂದರೂ, ತುಂಬಾ ಎಂದರೂ, (ಮೋದಿಯವರಿಗೆ) ಮೋಡಿ ಎಂದರೂ ಇಂತಹವೆಲ್ಲ ಇವನ ವಿವರಣೆಯಂತೆ
ರೂಪಕಗಳೆನಿಸಿಕೊಳ್ಳುತ್ತವೆ. ಮುಂದುವರೆದು ಅರಿಸ್ಟಾಟಲ್ ವಿವರಿಸುತ್ತಾನೆ: ಒಂದು ಉಪಮಾನ ಕೂಡ ರೂಪಕವೆ;
ಒಂದೇ ವ್ಯತ್ಯಾಸ – ಕವಿಯೊಬ್ಬ ಅವನೊಂದು ಸಿಂಹದಂತೆ ನುಗ್ಗಿದ ಎಂದು ಹೇಳಿದರೆ ಅದು ಉಪಮಾನ, ಬದಲಾಗಿ
ಅದೇ ಪ್ರಸಂಗವನ್ನು ಆ ಸಿಂಹ ನುಗ್ಗಿತು (ವ್ಯಕ್ತಿಯನ್ನು ಸಿಂಹ
ಪ್ರತಿನಿಧಿಸಿಯಾದರೆ) ಎಂದರೆ ರೂಪಕ.Here stands my ship ಎನ್ನುವುದನ್ನೂ Ten thousand noble things Odysseus did ಎನ್ನುವುದನ್ನನೂ
ರೂಪಕಗಳೆಂದು ಅವನು ವಿವರಿಸಿದ್ದಾನೆ(Samuel R Levin, 24-26, http://www.jstor.org/stable/40237305?seq). ಇವುಗಳಲ್ಲಿ
ಮೊದಲನೆಯದನ್ನು ಕನ್ನಡದಲ್ಲಿ ಅಲಂಕಾರವೆಂದು ಪರಿಗಣಿಸುವುದಿಲ್ಲ. ಅದೊಂದು ಸಹಜ ಮಾತು. ಎರಡನೆಯದು ಜಾತ್ಯೈಕವಚನದ
ಸಂದರ್ಭ. ಆದರೆ ಇಂತಹವನ್ನು ರೂಪಕಗಳೆಂದು ಪರಿಗಣಿಸಿರುವುದು ಮುಂದಿನ ಬೆಳವಣಿಗೆಗಳ ಅಂಕುರಗಳಾಗಿವೆ
ಎಂಬುದು ಮುಖ್ಯ.
2.1
ಐ ಎ ರಿಚರ್ಡ್ಸನ ಕಾಲಕ್ಕೆ ಚಿಂತನೆಗಳು ಸ್ವಲ್ಪ ಬದಲಾಗಿದ್ದವು. ರಿಚರ್ಡ್ಸನ ಪ್ರಕಾರ ಭಾಷೆಯೆಲ್ಲವೂ ರೂಪಕಾತ್ಮಕವೇ. ಅವನು Metaphor is
omnipresent principle of language but thinking is also radically metaphoric (ಬಿಲ್ಕಿಸ್, p131 ಇಲ್ಲಿ ಉದ್ಧೃತ) ಎಂದು ಘೋಷಿಸಿದ್ದಾನೆ. ಆದರೂ ಇದರ
ಬಳಕೆಯ ಪ್ರಯೋಜನ ಕಾವ್ಯದಲ್ಲೇ ಎಂಬುದು ಇವನದೂ ಅಭಿಪ್ರಾಯ. ಕಾವ್ಯವೆಂಬುದು ಅನುಭವಗಳ ನೇರ ಕಥನವಲ್ಲ,
ತಾನು ನಿರೂಪಿಸ ಬೇಕಾಗಿರುವ ಅನುಭವವನ್ನು ಒಂದು objective-correlative ಮುಖಾಂತರ ನಿರೂಪಿಸುವುದು
ಎಂಬ ತನ್ನ ನಿರೂಪಣೆಯಿಂದ ಪರೋಕ್ಷವಾಗಿ ಕಾವ್ಯವು ರೂಪಕಮಯವೆಂದೂ
ರೂಪಕವಿಲ್ಲದೆ ಕಾವ್ಯವಿಲ್ಲಎಂದೂ ಸೂಚಿಸಿದ್ದಾನೆ.
ರಿಚರ್ಡ್ಸ್
ರೂಪಕಗಳಲ್ಲಿಮೂರು ವಿಧಗಳನ್ನು ಗುರುತಿಸಿರುವುದು ಅವನ ವಿವರಣೆಗಳಿಂದ ಸ್ಪಷ್ಟವಾಗುತ್ತದೆ. (1)
Un-restricted sense:ಸಾಮನ್ಯ ಭಾಷೆಯಲ್ಲಿ ಕಂಡು ಬರುವ ರೂಪಕಗಳು. ಉದಾಹರಣೆಗೆ ಮೇಜಿನ ಕಾಲು, ಕುರ್ಚಿಯ
ಕೈಯಿ ಇತ್ಯಾದಿಯಾಗಿ ಭಾಷೆಯಲ್ಲಿ ಪ್ರಯೋಗಿಸುತ್ತೇವೆ. ಕೈಕಾಲುಗಳಿರುವುದು ನಿಜವಾಗಿ ಮನುಷ್ಯನಿಗೆ.
ಇವುಗಳನ್ನು ನಾವು ಮೇಜು ಕುರ್ಚಿಗಳಂತಹ ನಿರ್ಜೀವ ವಸ್ತುಗಳಿಗೆ ಆರೋಪಿಸಿ ಮಾತನಾಡುತ್ತೇವೆ. ಇವು ರೂಪಕಗಳಾದರೂ
ರೂಪಕಗಳೆಂದು ನಮಗೆನಿಸುವುದೇ ಇಲ್ಲ. ಇಂತಹವನ್ನು ರಿಚರ್ಡ್ಸ್ ಅನಿಯಂತ್ರಿತಾರ್ಥದ ರೂಪಕಗಳು ಎಂದಿದ್ದಾನೆ.
(2) Restricted sense: The lamp throws
its light on the page ಎಂಬಂತಹ ರೂಪಕಗಳ ವರ್ಗ. ದೀಪವು ಬೆಳಕನ್ನು ಕಾಗದದ ಮೇಲೆ ಬೀಳಿಸುತ್ತದೆ ಎಂದಾಗ ಬೀಳಿಸುತ್ತದೆ ಎಂಬುದು ರೂಪಕ ಶಕ್ತಿ ಪಡೆದಿರುವ ಪದ.
ವಸ್ತುಗಳನ್ನು ಬೀಳಿಸುವುದು ಸಾಮಾನ್ಯವಾಗಿ ಮನುಷ್ಯರ ಗುಣ; ದೀಪವು ಬೆಳಕನ್ನು ಹೊರ ಸೂಸುತ್ತದೆ. ಇವೆರಡೂ
ಅವರವರ ಗುಣಗಳಾಗಿದ್ದು ಒಂದರಂತೆ ಇನ್ನೊಂದು ಇದೆ ಎಂದು ಭಾಸವಾಗುತ್ತದೆ. ಅಂದರೆ ಇಲ್ಲಿಯ ಕ್ರಿಯೆಗಳಲ್ಲಿ
ಒಂದು ಸಾಮಾನ್ಯ ಸ್ವರೂಪವಿದೆ ಎಂದೆನಿಸುತ್ತದೆ. ಬೀಳಿಸುವುದನ್ನು ದೀಪದೊಂದಿಗೆ ಪ್ರಯೋಗಿಸಿದಾಗ ಈ ಸಾಮಾನ್ಯ
ಸ್ವರೂಪದಿಂದ ದೀಪ ಬೆಳಕನ್ನು ಹೊರ ಸೂಸುವುದು ಎಂಬುದು ನಮಗೆ ಅರಿವಾಗುತ್ತದೆ. ಹೀಗೆ ಇಲ್ಲಿ ಕ್ರಿಯೆಗೆ
ಸೀಮಿತವಾಗಿ ಇದು ಅರ್ಥವಾಗುತ್ತದೆ. ಇಂತಹ ವಿವರಣೆಯಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂಬುದನ್ನು ಬಿಲ್ಸ್ಕಿ ಇವರು ಗುರುತಿಸಿದ್ದಾರೆ.
(3) Very restricted : ಇದಕ್ಕೆ ಕೆಳಗಿನ ಪದ್ಯಭಾಗವನ್ನು
ಉದಾಹರಿಸಬಹುದು. ಇಲ್ಲಿ ಈಲಿಯಟ್ಟನು ಸಂಜೆಯ ಆಕಾಶವನ್ನು [ಶಸ್ತ್ರ ಚಿಕಿತ್ಸೆಗಾಗಿ] ಮೇಜಿನ ಮೇಲೆ ಮಲಗಿದ
ಅರಿವಳಿಸಿದ ರೋಗಿಗೆ ಹೋಲಿಸುತ್ತಾನೆ.ಇವು ಈಲಿಯಟ್ಟನ The Love Song of J. Alfred Prufrock ಎಂಬ ಪದ್ಯದ ಮೊದಲಿನ ಸಾಲುಗಳು:
Let us go then, you and I,
When the evening is spread out against the sky
Like a patient etherised upon a table?
When the evening is spread out against the sky
Like a patient etherised upon a table?
ಇಲ್ಲಿಪ್ರುಫ್ರೋಕ್ ತನ್ನ ಪ್ರಿಯತಮೆಗೆ ಒಂದು
ಪ್ರವಾಸ ಹೋಗೋಣವೆಂದು ಹೇಳುತ್ತಿದ್ದಾನೆ. ಪ್ರಿಯತಮೆ ಎಂದು ಓದುಗನನ್ನು ಕವಿ ಸಂಬೋಧಿಸುತ್ತಿದ್ದಾನೆ
ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಪ್ರವಾಸ ಹೋಗಲು ಆಯ್ಕೆ ಮಾಡಿಕೊಂಡ ಸಮಯ ಸಾಯಂಕಾಲವಾಗಿದ್ದು
ವಿಶಿಷ್ಟವಾಗಿದೆ. ಮುಂದೆ ಪ್ರವಾಸ ಕಾಲದಲ್ಲಿ ಸಮಕಾಲೀನ ಸಮಾಜದ ಸಮಸ್ಯೆಗಳ ಚಿತ್ರಣ ಕಂಡು ಬರುತ್ತದೆ.
ಪ್ರಾರಂಭದ ಎರಡು ಮತ್ತು ಮೂರನೆಯ ಸಾಲಿನಲ್ಲಿರುವ ಅಲಂಕಾರವನ್ನು ಸಿಮಿಲಿ (ಉಪಮಾಲಂಕಾರ)ವೆಂದು ಸಾಮಾನ್ಯವಾಗಿ
ಗುರುತಿಸುವರಾದರೂ, ಅದರ ಸಾಂದ್ರಸ್ವರೂಪವನ್ನು ಗಮನಿಸಿ ಇರಬಹುದು ಮೆಟಫರ್(ರೂಪಕ) ಎಂದೂ ಗುರುತಿಸುವುದಿದೆ
(ಪು, 132). ಅಲ್ಲದೆ the evening is spread
out against the skyಎಂಬುದೇ ಒಂದು ರೂಪಕ.ಬಹುಶಃ ಪ್ರೇಮಿಗಳಂತೆ ಎಂದಂದುಕೊಂಡರೆ ಹಾಗಲ್ಲವೆಂದು ಮುಂದಿನ
ಉಪಮಾನ ಹೇಳುತ್ತದೆ. ಅಂದು ಮಾಲಿನ್ಯ ಕಾರಕ ವಸ್ತುಗಳಿಂದಾಗಿ ಬಣ್ಣಗೆಟ್ಟ ಸಂಜೆ, ಶಸ್ತ್ರ ಚಿಕಿತ್ಸೆಯ
ಮೇಜಿನ ಮೇಲೆ ಅರಿವಳಿಸಿದ ರೋಗಿಯಂತೆ, ಬಾನಿಗೆ ಅಂಟಿಕೊಂಡಿದೆ ಎಂದು ಕವಿ ಉದ್ಗರಿಸಿದ್ದಾನೆ. ಈ ರೂಪಕವು
ಈ ಸಂದರ್ಭಕ್ಕೆ, ಈ ಕವಿಯ ಈ ಪದ್ಯಕ್ಕೆ ಸೀಮಿತವಾದುದು. ಉಪಮಾನವು ಮಲಿನಕಾರಕ ವಸ್ತುಗಳು ಮನುಷ್ಯನ ಅರಿವಳಿಸುವುದನ್ನು
ಬಿಂಬಿಸುತ್ತಿವೆ.
ರಿಚರ್ಡ್ಸನ
ಈ ವರ್ಗೀಕರಣವುಸಾಮಾನ್ಯ, ನಿದ್ರಿತ ಮತ್ತು ಜೀವಂತ ಎಂಬುದಾಗಿ
ಹಲವು ವಿಮರ್ಶಕರು ಹೇಳುವ ವರ್ಗಗಳಿಗೆ ಸಂವಾದಿಗಳಾಗಿವೆ ಎಂದು ಮ್ಯಾನುಯೆಲ್ ಬಿಲ್ಸ್ಕಿ ಅಭಿಪ್ರಾಯ ಪಡುತ್ತಾರೆ.
ರಿಚರ್ಡ್ಸನ ಇನ್ನೊಂದು ಮುಖ್ಯ ಪರಿಕಲ್ಪನೆ ಎಂದರೆ ಟೆನರ್ ಮತ್ತು ವೆಹಿಕಲ್ ಎಂಬುದು. ಅವನ
ಪ್ರಕಾರ ಪ್ರತಿಯೊಂದು ರೂಪಕ ಈ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಯಾವ ವಸ್ತು ಪ್ರಸ್ತುತವಾಗಿದೆಯೋ
ಅದನ್ನು ಟೆನರ್ ಎಂದೂ, ಯಾವುದರ ಮೂಲಕ ಅದನ್ನು ಸ್ಪಷ್ಟ ಪಡಿಸಲಾಗುತ್ತಿದೆಯೋ ಅದನ್ನು ವೆಹಿಕಲ್ ಎಂದೂ
ಇವನು ಹೆಸರಿಸಿದ್ದಾನೆ. ಹೋರಾಟದಲ್ಲಿ ಆ ಸೈನಿಕನು ಸಿಂಹ ಎಂಬಲ್ಲಿ ಸೈನಿಕ ಟೆನರ್ ಆದರೆ, ಸಿಂಹ ವೆಹಿಕಲ್. ಇದರಲ್ಲಿ ಹೊಸದೇನಿಲ್ಲದಿದ್ದರೂ ಒಂದು ರೂಪಕದ
ಭಾಗಗಳನ್ನು ವಿವರವಾಗಿ ನೋಡಿದಂತಾಗಿದೆ (ಬಿಲ್ಸ್ಕಿ, 130-137).
3.0
ರೂಪಕಗಳು ಅಮೂರ್ತ ಕಲ್ಪನೆಗಳಿಗೆ ರೂಪ ತೊಡಿಸಿ ಸುಲಭಗ್ರಾಹ್ಯವನ್ನಾಗಿಸುತ್ತವೆ. ಅಭಿವ್ಯಕ್ತಿಯನ್ನು
ಸುಂದರವಾಗಿಸುತ್ತವೆ. ಆದಾಗ್ಯೂ ರೂಪಕಗಳಿಲ್ಲದೆ ಕಾವ್ಯವಿಲ್ಲ
ಎಂದಲ್ಲ. ಕಾವ್ಯವನ್ನು ಸುಂದರಗೊಳಿಸಲು ಅದು ಆವಶ್ಯ ಎಂಬುದು ಪೌರ್ವಾತ್ಯ ಮತ್ತು ಪಾಶ್ಚಾತ್ಯ ಎರಡೂ
ಕಡೆಯ ವಿದ್ವಾಂಸರ ಮತ. ಅಲಂಕೃತ ವಾಕ್ಯವೇ ಕಾವ್ಯ ಎಂಬ ನಿಲುವು ತಾತ್ವಿಕವಾಗಿ ಬದಲಾವಣೆ ಕಂಡು, ರಸಾತ್ಮಕವಾದ
ವಾಕ್ಯವೇ ಕಾವ್ಯ ಎನ್ನುವಂತೆ ಕ್ರಾಂತಿಕಾರಕವಾಗಿ ವ್ಯತ್ಯಾಸವಾಗಿದ್ದರೂ ಅಲಂಕಾರಗಳು ಅದರಲ್ಲೂ ರೂಪಕಗಳು ಕಾವ್ಯದ ಶೋಭೆಯನ್ನು ಹೆಚ್ಚಿಸುವುವು
ಎಂಬುದು ಭಾರತೀಯ ಶಾಸ್ತ್ರಕಾರರ ಒಲವು. ರಿಚರ್ಡ್ಸನ ವಿಮರ್ಶಾ ತತ್ವಗಳು ಭಾರತೀಯ ರಸ ಪ್ರಸ್ಥಾನಕಾರರ
ತತ್ವಕ್ಕೆ ಹತ್ತಿರದಲ್ಲಿವೆ ಎಂಬ ಅಭಿಪ್ರಾಯವಿದೆ (ಉದಾ: ಗುಪ್ತೇಶ್ವರ್ ಪ್ರಸಾದ್, 1994: ಸ್ವರೂಪ್
ಅಂಡ್ ಸನ್ಸ್ ನವದೆಹಲಿ).
4.0
ರೂಪಕಗಳ ಬಗ್ಗೆ ಹೊಸ ರೀತಿಯ ಚಿಂತನೆ ಭಾರತೀಯ ವಿದ್ವಾಂಸರಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ರೂಪಕವು ಒಂದು ವಿಶಿಷ್ಟ ಭಾಷಾ
ರಚನೆಯೆಂದೇ ಅವರೆಲ್ಲರ ಸ್ವೀಕಾರ. ಕಾವ್ಯ ಏಕೆ ಕಾವ್ಯವಾಗುತ್ತದೆ ಎಂಬುದನ್ನು ವಿವರಿಸಲು ಅಲಂಕಾರಗಳಲ್ಲ;
ಭಾಷಾ ರಚನೆಯಲ್ಲ; ಆ ಭಾಷಾರಚನೆ ಅನುರಣಿಸುವ ಮತ್ತೇನೋ ಅರ್ಥ (ಧ್ವನಿ) ಅದನ್ನು ಕಾವ್ಯವಾಗಿಸುತ್ತದೆ
ಎಂಬ ಹೊಸದೇ ಸಿದ್ಧಾಂತವನ್ನು ಅನಂತರದ ಕಾವ್ಯ ಮೀಮಾಂಸಕರು ಪ್ರತಿಪಾದಿಸಿದ್ದಾರೆ. ಆನಂದ ವರ್ಧನನು ವಸ್ತು-ಧ್ವನಿ,
ಅಲಂಕಾರ-ಧ್ವನಿ ಮತ್ತು ರಸಧ್ವನಿ ಎಂಬ ಭೇದಗಳನ್ನು ಹೇಳಿ ರಸಧ್ವನಿಗೆ ಹೆಚ್ಚು ಪ್ರಾಮುಖ್ಯವನ್ನು ನೀಡಿದ್ದಾನೆ.
ರಸಾನುಭವ ಎಂಬ ಮಾತಿದ್ದು ಅದು ಕೇವಲ ಭಾಷಾ ವೈಚಿತ್ರ್ಯವಾಗಿರದೆ ಒಂದು ಅನುಭವವೆಂಬುದನ್ನು ‘ನವೀನ’
ಮೀಮಾಂಸಕರು ಪ್ರತಿಪಾದಿಸಿದ್ದಾರೆ. ಈ ರೀತಿಯಲ್ಲಿ ಕಾವ್ಯ ದ ಆತ್ಮ ಇಂತಹುದು ಎಂದು ಗುರುತಿಸಿರುವುದು
ಪಾಶ್ಚಾತ್ಯ ಜಗತ್ತಿನಲ್ಲಿ ಕಂಡುಬರುವುದಿಲ್ಲವಾದರೂ ಕಾವ್ಯತ್ವದ ಚರ್ಚೆ ಅಲ್ಲಿ ಬೇರೆಯೇ ಜಾಡನ್ನು ಹಿಡಿದು
ಮುಂದುವರೆಯಿತು. ಈ ಹಿಂದೆ ಸೂಚಿಸಿರುವಂತೆ ರಿಚರ್ಡ್ಸನ ತತ್ವಗಳು ರಸತತ್ವಕ್ಕೆ ಹತ್ತಿರವಾಗಿವೆ ಎಂದು
ಹೇಳಲಾಗುತ್ತಿದೆ.
5.0
ಹೀಗಾಗಿ ಪಾಶ್ಚಾತ್ಯರು ರೂಪಕಗಳ ಚರ್ಚೆಯನ್ನು ಅಲ್ಲಿಗೇ ಬಿಡಲಿಲ್ಲ. ಕಾವ್ಯದಲ್ಲಿ ರೂಪಕಗಳು
ಮುಖ್ಯವೆಂಬುದನ್ನು ಒಪ್ಪುತ್ತಾ ರೂಪಕಗಳು ಕೇವಲ ಭಾಷಾ ವಿಶೇಷ ಬಳಕೆಗಳಲ್ಲ ಎಂಬುದನ್ನು ಗುರುತಿಸಿದ್ದಾರೆ.
6.0 ರೂಪಕಗಳ ಕಾಗ್ನಿತಿವ್ ವಿವರಣೆ
ಪಾಶ್ಚಾತ್ಯರಲ್ಲಿ ಕಾಗ್ನಿಟಿವ್
ಭಾಷಾ ಶಾಸ್ತ್ರ ಮತ್ತು ಕಾಗ್ನಿಟಿವ್ ಗ್ರಾಮರ್ ಎಂಬ ಶಿಸ್ತುಗಳು ಬೆಳೆದು ಬಂದ ಮೇಲೆ ಇಂತಹ ಪ್ರಯತ್ನಗಳು
ಘನತರವಾಗಿ ನಡೆದವು. ಕಾಗ್ನಿಟಿವ್ ಗ್ರಾಮರ್ ಎಂಬ ಶಿಸ್ತಿನ ವ್ಯಾಖ್ಯಯೇ ಹೊಸ ಗಾಳಿಯ ಸುಳಿವನ್ನು ನೀಡುತ್ತದೆ:
Cognitive grammar is a theoretical frame work for describing language structure
as a product of cognition and social interaction. ವ್ಯಾಕರಣವು ಭಾಷಾ ಸಂರಚನೆಯನ್ನು ಗ್ರಹಿಕೆಯ
ಮಾನಸಿಕ ಪ್ರಕ್ರಿಯೆ ಮತ್ತು ಸಾಮಾಜಿಕ ಒಡನಾಟಗಳ ಒಂದು ಉತ್ಪನ್ನವಾಗಿ ವಿವರಿಸುವ ಒಂದು ಚೌಕಟ್ಟು ಎಂದು
ಪರಿಗಣಿಸುವುದು ಈಚೆಗಿನ ಪ್ರವೃತ್ತಿ (ಲ್ಯಾಂಗೇಕರ್,ಪು 1). ಇವೆಲ್ಲ ಮನಶ್ಶಾಸ್ತ್ರದಲ್ಲಿ ಕಾಗ್ನಿಶನ್
ಎಂದು ಕರೆಸಿಕೊಳ್ಳುವ ಪ್ರಕ್ರಿಯೆಯನ್ನವಲಂಬಿಸಿ ಬೆಳೆದವು. ಮೊದಲ ಬಾರಿಗೆ ಎದುರಾಗುವ ಹೊಸ ಘಟನೆ, ವಸ್ತು
ಇತ್ಯಾದಿಗಳು ಮನಸ್ಸಿನಲ್ಲಿ ಗ್ರಹಿಕೆಯಾಗುವಂತೆ ಮೂಡುವ ನಕ್ಷಾ ಸ್ವರೂಪವೇ ಕಾಗ್ನಿಶನ್. ಇಂತಹ ಕಾಗ್ನಿಶನ್
ನಿರ್ದಿಷ್ಟ ಗುಣವೊಂದನ್ನು ಮಾತ್ರ ಒಳಗೊಂಡಿರುವುದಿಲ್ಲ. ಹಲವು ಗುಣಗಳ ಒಂದು ವ್ಯಾಪ್ತಿ ಇರುತ್ತದೆ.
ಉದಾಹರಣೆಗೆ ಶೈಶವದಲ್ಲಿ ಸಹಜವಾಗಿ ಆಗುವ ಭೌತಿಕ ವಸ್ತುಗಳ ಕಾಗ್ನಿಶನ್ ಪ್ರಕ್ರಿಯೆಯನ್ನು ಗಮನಿಸಬಹುದು:
ಮಗುವೊಂದು ನಾಯಿಯನ್ನು ನೋಡುತ್ತದೆ ಎನ್ನಿ. ಆ ನಾಯಿಯ ಆಕಾರ, ಎತ್ತರ, ಉದ್ದ, ದಪ್ಪ ಇತ್ಯಾದಿಗಳ ನಕ್ಷೆಯೊಂದು
ಮಗುವಿನ ಮನಸ್ಸಿನಲ್ಲಿ ಸಿದ್ಧವಾಗುತ್ತದೆ. ಈ ರೀತಿಯ
ನಕ್ಷಾ ತಯಾರಿ ಕಾಗ್ನಿಶನ್ನಿಗೆ ಕಾರಣವಾಗುತ್ತದೆ. ಹೀಗೆ ಕಾಗ್ನೈಸ್ ಆದ ವಸ್ತು ಅನಂತರ ಎದುರಾದಾಗ ಮಗು
ಅದನ್ನು ರೆಕಗ್ನೈಸ್(re-cognise)ಮಾಡುತ್ತದೆ. ಈ ಗ್ರಹಿಕೆ ಮತ್ತು ಗುರುತಿಸುವಿಕೆ ಪರಿಕಲ್ಪನೆಗಳ
ಬೆಳವಣಿಗೆಗೆ ಸಹಾಯಕ. ಮಗುವೊಂದು ಹಲವು ದಿನಗಳ ಕಾಲ ನಾಯಿಗಳನ್ನು ನೋಡುತ್ತಾ ಸಾಗುತ್ತದೆ ಎನ್ನಿ. ಅವುಗಳಲ್ಲಿ
ಪ್ರತಿಯೊಂದೂ ಬಣ್ಣ, ಎತ್ತರ, ಕಿವಿಯ ಆಕಾರ, ರೋಮದ ಸ್ವಭಾವ, ಬಾಲದ ಉದ್ದ ಇತ್ಯಾದಿಗಳಲ್ಲಿ ತನ್ನದೇ
ವೈಶಿಷ್ಟ್ಯವನ್ನು ಹೊಂದಿರುತ್ತದೆ. ಈ ಗುಣಗಳಲ್ಲೆದರ ಸಾಮಾನ್ಯ ನಕ್ಷೆಯೊಂದನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವುದರ
ಮೂಲಕ ನಾಯಿಯ ಪರಿಕಲ್ಪನೆ ಉಂಟಾಗುತ್ತದೆ. ಅಂದರೆ ವಸ್ತುವಿನ ಒಂದು ಸಾಮಾನ್ಯ (common) ಮಾನಸಿಕ ನಕ್ಷೆಯ
ರಚನೆಯಾಗಿ ಉಳಿದುಕೊಳ್ಳುತ್ತದೆ ಮತ್ತು ಇದು ಮುಂದೆ ನಾಯಿಯನ್ನು ಇತರ ಪ್ರಾಣಿ ಮತ್ತು ವಸ್ತುಗಳಿಂದ
ಬೇರೆಯನ್ನಾಗಿಸಿ ನೋಡಲು ಅವನಿಗೆ ಸಹಾಯ ಮಾಡುತ್ತದೆ. ಇದನ್ನೇಪರಿಕಲ್ಪನೆ ಎಂದು ಕರೆಯುತ್ತೇವೆ. ಹಾಗೆಂದು
ಮೆದುಳಿನಲ್ಲಿ (ನಾಯಿ, ದನ, ಮನೆ ಇತ್ಯಾದಿಗಳ) ಇಂತಹ ಚಿತ್ರಗಳ ಸಂಗ್ರಹವೇ ಇರುತ್ತದೆಂದಲ್ಲ. ವಸ್ತುವಿನ
ಹಲವು ಸಾಮಾನ್ಯ ಗುಣಲಕ್ಷಣಗಳ ನೆನಪು ಉಳಿದಿರುತ್ತದೆ ಎಂದು ಭಾವಿಸಬಹುದು. ಅಂತಹ ಗುಣಲಕ್ಷಣಗಳ ಸಂಗ್ರಹವೇ ನಕ್ಷೆ. ಈ ನಕ್ಷೆಯನ್ನು ಮತ್ತು
ನಕ್ಷೆಯಲ್ಲಿರುವ ಗುಣಗಳ ಮೊತ್ತವನ್ನು ಪರಿಕಲ್ಪನೆಯ ಪರಿಧಿ (domain) ಎನ್ನುವುದು ವಾಡಿಕೆ.
6.1 ಭೌತಿಕವಲ್ಲದ ಅಮೂರ್ತ ವಸ್ತುಗಳ ಕಾಗ್ನಿಶನ್
ಇಷ್ಟು ಸಹಜವಾಗಿ ಆಗುವುದು ಸಾಧ್ಯವಿಲ್ಲ. ಅಮೂರ್ತ ವಸ್ತುಗಳ ಗುಣಲಕ್ಷಣಗಳು ಹೀಗೆ ನೇರವಾಗಿ ತನ್ನ ಕಣ್ಣು,
ಕಿವಿ ಇತ್ಯಾದಿಗಳ ಮೂಲಕ ಮಗುವಿನ ಅನುಭವಕ್ಕೆ ಬರುವುದಿಲ್ಲ.ಅಂದರೆ ಮಾನಸಿಕ ನಕ್ಷೆಯು ಜ್ಞಾನೇಂದ್ರಿಯಗಳ
ಅನುಭವದಿಂದ ವ್ಯಕ್ತಿಯ ಮನಸ್ಸಿಗೆ ದಕ್ಕುವುದಿಲ್ಲ.ಹೀಗಾಗಿ ಈಗಾಗಲೇ ಅನುಭವಕ್ಕೆ ಬಂದಿರುವ ಭೌತ ವಸ್ತುಗಳ
ನಕ್ಷೆಗಳ ಮುಖಾಂತರವೇ ಅಮೂರ್ತ ವಸ್ತುವಿನ ಅನುಭವವಾಗಬೇಕಾಗುತ್ತದೆ ಮತ್ತು ಹಾಗೆ ಅವುಗಳನ್ನು ಕಲ್ಪಿಸಿಕೊಳ್ಳ
ಬೇಕಾಗುತ್ತದೆ. ಪ್ರೇಮ, ಬದುಕು, ಕಾಲ, ಇಂತಹವೆಲ್ಲದರ ಪರಿಕಲ್ಪನೆ ಈಗಾಲೇ ಮೂಡಿರುವ ಮೂರ್ತ ಪರಿಕಲ್ಪನೆಗಳ
ಮೂಲಕ ಅರಿವಿಗೆ ಬರುತ್ತದೆ. ಅಂದರೆ ಈ ವಸ್ತುಗಳನ್ನು ಗೊತ್ತಿರುವ ಇನ್ನೊಂದು ವಸ್ತುವಿನ ಮುಖಾಂತರ ಅರ್ಥ
ಮಾಡಿಕೊಳ್ಳುತ್ತೇವೆ. ಇವೇ ಈ ಹೊಸ ಸಿದ್ಧಾಂತದ ಪ್ರಕಾರ ರೂಪಕಗಳು. ಇವು ಸಾಮಾನ್ಯ ಜನಮಾನಸದಲ್ಲಿ ನೆಲೆಗೊಂಡು
ಭಾಷಿಕರಲ್ಲಿ ಬಳಕೆಯಾಗುತ್ತಿರುತ್ತವೆ. ಇವು ಕಾವ್ಯಗಳಲ್ಲಿ ಬಳಕೆಯಾದ ರೂಪಕಗಳಂತೆ ನೇರವಾಗಿ ಅನುಭವಕ್ಕೆ
ಬರುವುದಿಲ್ಲ; ಆದರೆ ಅವುಗಳನ್ನು ಕುರಿತು ನಾವಾಡುವ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರಿವಿಗೆ
ಬರುತ್ತವೆ. ಉದಾಹರಣೆಗೆ ಅವನಿಗೆ ಬದುಕಿನಲ್ಲಿ ಗುರಿಯೇ ಇಲ್ಲ ಎನ್ನುತ್ತೇವೆ. ಬದುಕು ಅಮೂರ್ತವಾದುದರಿಂದ
ಬದುಕಿನಲ್ಲಿ ಅವನಿಗೆ ಗುರಿ ಇರುವುದು ಎಂದರೇನು? ಆದರೆ ಈ ಪ್ರಶ್ನೆ ಯಾರನ್ನೂ ಕಾಡುವುದಿಲ್ಲ ಮತ್ತು
ಮಾತು ಎಲ್ಲರಿಗೂ ಅರ್ಥವಾಗುತ್ತದೆ. ಇದು ಸಾಧ್ಯವಾಗುತ್ತದೆ ಏಕೆಂದರೆ ಬದುಕನ್ನುಒಂದು ಪ್ರಯಾಣ ಎಂದು
ನಾವು ಭಾವಿಸುವುದರಿಂದ. ಮೇಲಿನ ಉದಾಹರಣ ವಾಕ್ಯ ಒಂದು ಒಂಟಿ ನಿದರ್ಶನವೇನೂ ಅಲ್ಲ. ಬದುಕಿನಲ್ಲಿ ಅವನು ಮುಂದೆ ಬಂದ, ಇನ್ನೊಬ್ಬ ಹಿಂದೆ ಉಳಿದ;
ಮಹಾತ್ಮ ಗಾಂಧಿಯವರನ್ನು ಭೇಟಿಯಾದನಂತರ ವಿನೋಬಾರ ಜೀವನದ ದಿಕ್ಕೇ ಬದಲಾಯಿತು; ಅವನು ಜೀವನದಲ್ಲಿ ಅಡ್ಡದಾರಿ
ಹಿಡಿದ; - ಇಂತಹ ಮಾತುಗಳಲ್ಲೆಲ್ಲ ಬಾಳೊಂದು ಪಯಣ ಎಂಬ ಇದೇ ರೂಪಕವಿರುವುದರಿಂದಲೇ ಅರ್ಥವಾಗುತ್ತವೆ. ಬದುಕನ್ನು
ಪ್ರಯಾಣ ಎಂಬ ಪರಿಕಲ್ಪನೆಯ ಮುಖಾಂತರ ಅರ್ಥ ಮಾಡಿಕೊಳ್ಳುತ್ತೇವೆ. ಇದು ಅನಿವಾರ್ಯ. ಬಾಳೊಂದು ಪಯಣ ಎಂಬಲ್ಲಿ
ಎರಡು ಪರಿಧಿ (domain)ಗಳಿವೆ. ಬಾಳಿನದೊಂದು; ಪಯಣದ್ದೊಂದು. ಬಾಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ಅದು ಲಕ್ಷ್ಯ ಪರಿಧಿ. ಅದನ್ನು ಪಯಣದ ಪರಿಧಿಯ ಮೂಲಕ ಅರ್ಥ ಮಾಡಿಕೊಳ್ಳುತ್ತೇವೆ. ಪಯಣದ ಪರಿಧಿ ಎಲ್ಲರಿಗೂ
ಪರಿಚಿತವಿದ್ದು ಮೂರ್ತಸ್ವರೂಪ ಉಳ್ಳುದು. ಇದು ಮೂಲ ಪರಿಧಿ. ಮೂಲ ಪರಿಧಿಯಲ್ಲಿರುವ (ಪಯಣದ) ಗುಣಗಳನ್ನು(ದಾರಿ,
ತಲುಪುದಾಣಗಳು,ಪ್ರಯಾಣದಲ್ಲಿ ತಡೆಗಳು, ಚಲಿಸಿದ ದೂರ, ಸರಿದಾರಿ, ಅಡ್ಡದಾರಿ, ಇತ್ಯಾದಿಗಳನ್ನು) ಲಕ್ಷ್ಯ ಪರಿಧಿಗೆ ನಕ್ಷೀಕರಿಸುವುದರಿಂದ (ಉದ್ದೇಶಗಳನ್ನು
ಈಡೇರಿಸಿಕೊಳ್ಳುವ ಪರಿ, ಉದ್ದೇಶಗಳು, ಜೀವನದಲ್ಲಿ ಕಷ್ಟಗಳು, ಜೀವನದಲ್ಲಿ ಪ್ರಗತಿ, ಸ್ಪಷ್ಟ ಉದ್ದೇಶದ
ಬದುಕು, ಸ್ಪಷ್ಟ ಉದ್ದೇಶವಿಲ್ಲದ ಬದುಕು ) ಮೂಲ ಪರಿಧಿಯು ಅಂದರೆ ಬಾಳೆಂಬ ಪರಿಕಲ್ಪನೆ ನಮಗೆ ಅರ್ಥವಾಗುತ್ತದೆ
(ಲೇಕಾಫ್ ಮತ್ತು ಟರ್ನರ್, ಪು59-69).
6.2 ರೂಪಕವೊಂದರಲ್ಲಿ
ಒಂದು ಮೂರ್ತ ಅಥವ ಅಮೂರ್ತ ವಸ್ತುವನ್ನು ಬೇರೊಂದು ಮೂರ್ತ ವಸ್ತುವಿನ ಮೂಲಕ ಅರ್ಥಮಾಡಿಕೊಳ್ಳುತ್ತೇವೆ.
ರೂಪಕದ ಸ್ವರೂಪ aಯು b ಎಂಬಂತಿರುತ್ತದೆ. ಮತ್ತು ಸಾಮನ್ಯವಾಗಿ ಇಲ್ಲಿb ಎಂಬುದು ಮೂಲ ಪರಿಧಿಯನ್ನೂ a ಎಂಬುದು ಲಕ್ಷ್ಯ ಪರಿಧಿಯನ್ನೂ ಪ್ರತಿನಿಧಿಸುತ್ತವೆ.
‘ಅರ್ಥಮಾಡಿಕೊಳ್ಳಬೇಕಾದ’ ವಸ್ತುವಿನ ಗುಣಸಮೂಹವನ್ನು ಮೂಲಗುಣ ಪರಿಧಿ ಎಂದೂ, ‘ಯಾವ ವಸ್ತುವಿನ ಮೂಲಕ
ಅರ್ಥ ಮಾಡಿಕೊಳ್ಳಲುದ್ದೇಶಿಸಿದೆಯೋ’ ಅದರ ಗುಣಸಮೂಹವನ್ನು ಲಕ್ಷ್ಯಗುಣ ಪರಿಧಿಎಂದೂ ಕರೆಯುತ್ತೇವೆ.
ಉದಾಹರಣೆಗೆ, ಗ್ರಹಿಸಲು ಸುಲಭವಾಗುತ್ತದೆ ಎಂಬ ದೃಷ್ಟಿಯಿಂದ, ಮುಖಚಂದ್ರ ಎಂಬ ರೂಪಕವನ್ನು ತೆಗೆದುಕೊಳ್ಳೋಣ. ಮುಖಚಂದ್ರ
ಎಂಬ ರೂಪಕ ಪದದಲ್ಲಿ ‘ಚಂದ್ರ’ ಮೂಲ ವಸ್ತು ಮತ್ತು ‘ಮುಖ’ ಲಕ್ಷ್ಯ. (ಕೆಲವೊಮ್ಮೆ ಚಂದ್ರಮುಖಿ ಎಂಬಂತೆ
ಅದಲುಬದಲಾಗಿರುವುದುಂಟು). ಚಂದ್ರನ ಗುಣಪರಿಧಿಯಲ್ಲಿ ತಂಪು, ಬೆಳದಿಂಗಳು, ಸೌಂದರ್ಯ ಮುಂತಾದುವು ಇವೆ.
ಲಕ್ಷ್ಯಗುಣ ಪರಿಧಿಯಲ್ಲಿ ಸೌಂದರ್ಯ, ಬಿಳುಪು, ಆಹ್ಲಾದಾನುಭವ ಮುಂತಾದುವು ಇವೆ. ಈ ಎರಡನ್ನು ರೂಪಕಗೊಳಿಸಿದಾಗ
ಎರಡರ ಗುಣಪರಿಧಿಗಳ ನಡುವೆ ಸಂವಾದಿತ್ವ ಏರ್ಪಡುತ್ತದೆ. ಸೌಂದರ್ಯ ಸೌಂದರ್ಯಕ್ಕೇ ಸಂವಾದಿಯಾಗಿದೆ; ಬೇಳದಿಂಗಳು
ಬಿಳುಪಿಗೆ ಸಂವಾಯಾಗಿದೆ; ಮತ್ತು ಆಹ್ಲಾದವು ತಂಪಿಗೆ ಸಂವಾದಿಯಾಗಿದೆ. ಹೀಗೆ ಚಂದ್ರನ ಮುಖಾಂತರ ಉದ್ದಿಷ್ಟ
ತರುಣಿಯ ಮುಖದ ಚಲುವು ಮನಸ್ಸಿಗೆ ಬರುತ್ತದೆ. ಈ ರೀತಿಯ ಮಾನಸಿಕ ನಕ್ಷೆ ಉಂಟಾಗುವುದರಿಂದ ಮೂಲ ಪರಿಧಿಯ
ಮೂಲಕ ಲಕ್ಷ್ಯ ಪರಿಕಲ್ಪನೆಯ ಗ್ರಹಿಕೆಯಾಗುತ್ತದೆ. ಹಾಗೆಂದು ಚಂದ್ರನ ಎಲ್ಲ ಗುಣಗಳೂ ತರುಣಿಯ ಮುಖದ
ಯಾವುದಾದರೊಂದು ಗುಣದೊಡನೆ ಸಂವಾದಿತ್ವ ಪಡೆದಿವೆ ಎನ್ನಲಾಗುವುದಿಲ್ಲ. ಉದಾಹರಣೆಗೆ ಚಂದ್ರ ಹುಣ್ಣಿಮೆಯಂದು
ಪೂರ್ಣಬೆಳಕಾಗಿ ಮತ್ತು ಅಮಾವಾಸ್ಯೆಯಂದು ಪೂರ್ಣಕಪ್ಪಾಗಿ
ಗೋಚರಿಸುವುದರಿಂದ ತರುಣಿಯ ಮುಖವೂ ಹದಿನೈದು ದಿನಗಳಿಗೊಮ್ಮೆ ಬಿಳುಪಾಗಿ ಮತ್ತು ಕಪ್ಪಾಗಿ ಕಾಣುತ್ತದೆ
ಎಂದಾಗಲೀ, ಚಂದ್ರನ ವೃತ್ತಾಕಾರದಿಂದ ಮುಖವೂ ವೃತ್ತಾಕಾರವಾಗಿದೆ ಎಂದಾಗಲೀ, ಚಂದ್ರ ನಿರ್ಜೀವ ವಸ್ತು
ವಾದ್ದರಿಂದ ಮುಖವೂ ನಿರ್ಜೀವ ಎಂದಾಗಲೀ, ಅಥವ ಚಂದ್ರನ ಮೇಲೆ ಕಲೆಗಳಿರುದರಿಂದ ಮುಖವೂ ಕಲೆಗಳಿಂದ ಕೂಡಿದೆ
ಎಂದಾಗಲೀ ಈ ರೂಪಕದ ಅರ್ಥವಲ್ಲ.ಅಂದರೆ ಮೂಲ ಪರಿಧಿಯ ಸಂವಾದಿತ್ವವು ಲಕ್ಷ್ಯದ ಪರಿಧಿಯಲ್ಲಿರುವ ಎಲ್ಲ
ಗುಣಗಳ ನಡುವೆ ಇರಬೇಕೆಂದಿಲ್ಲ. ಅದು ಆಂಶಿಕವಾಗಿರಬಹುದು; ಪೂರ್ಣವಾಗಿಯೂ ಇರಬಹುದು.
6.3 ಪ್ರಾಚೀನರು ರೂಪಕಗಳನ್ನು ವರ್ಗೀಕರಿಸಿದ
ರೀತಿಗಳನ್ನು ಈಗಾಗಲೇ ಪ್ರಸ್ತಾವಿಸಲಾಗಿದೆ. ರಿಚರ್ಡ್ಸನ ಮತ್ತು ಶ್ರೀವಿಜಯನ ವರ್ಗೀಕರಣಗಳು ಆಯಾ ಕಾಲಗಳಲ್ಲಿ
ತಮ್ಮ ಪ್ರಭಾವವನ್ನು ಬೀರಿದವು. ಅವು ಕಾವ್ಯ ರಚನೆಗೆ ಮತ್ತು ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ತಮ್ಮದೇ
ರೀತಿಯಲ್ಲಿ ಸಹಾಯ ಮಾಡಿದವು. ಲೇಕಾಫ್(1992,
2003), ಕೊವೆಕ್ಸಸ್(2009) ಮತ್ತು ಇವುಗಳನ್ನಾಧರಿಸಿ ಬಂದಿರುವ ಕೃತಿಗಳಲ್ಲಿ ರೂಪಕಗಳ ಕಾಗ್ನಿಶನ್
ಸಿದ್ಧಾಂತ ರೀತಿಯ ನಿರೂಪಣೆ ಇದೆ. ಇವರುಗಳು ಬೇರೊಂದು ರೀತಿಯ ವರ್ಗೀಕರಣವನ್ನು ಪ್ರತಿಪಾದಿಸಿದ್ದಾರೆ.
ಪರಿಕಲ್ಪನೀಯ ರಚನಾತ್ಮಕ(conceptiual), ದಿಕ್ಸೂಚಕ(orientational), ತಾತ್ವಿಕ(ontological), ಅಸ್ತಿತ್ವದ ಮಹಾಸರಣಿ(great
chain metaphor), ಘಟನಾತ್ಮಕ ರಚನೆ(event
structure metaphor) ಇತ್ಯಾದಿಯಾಗಿ ಇವರ ವರ್ಗಗಳಿವೆ.
6.4 ರೂಪಕಗಳ ಬಗ್ಗೆ ಇವರ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು
ಇನ್ನೂ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಿದೆ. ಅವರು ಕೊಟ್ಟಿರುವ ಉದಾಹರಣೆಗಳನ್ನೇ ಕನ್ನಡೀಕರಿಸಿ
ಇಲ್ಲಿ ನೀಡಲಾಗಿದೆ. ಇವು ನಮ್ಮ ಭಾಷೆ ಮತ್ತು ಸಂಸ್ಕೃತಿಗಳಲ್ಲಿಯೂ ಎಷ್ಟೊಂದು ಪ್ರಸ್ತುತ ಎಂಬುದನ್ನು
ಈ ವಾಕ್ಯಗಳಲ್ಲಿ ಕಾಣಬಹುದು:
ಉದಾ
2: ವಾದವು ಕುಸ್ತಿ/(ಮಲ್ಲ)ಯುದ್ಧ
ಪ್ರಯೋಗಗಳು -
ನಿಮ್ಮ ಪ್ರತಿಪಾದನೆ ಅಸಮರ್ಥನೀಯವಾಗಿದೆ.
ನನ್ನ ವಾದಮಂಡನೆಯಲ್ಲಿದ್ದ ಪ್ರತಿಯೊಂದು
ದುರ್ಬಲಾಂಶದ ಮೇಲೆ ಅವನು
ಪ್ರಹಾರಗೈದ.
ನಾನು ಅವರ
ವಾದವನ್ನು ಕೆಡವಿ ಬಿಟ್ಟೆ.
ಅವನೊಡನೆ
ವಾದದಲ್ಲಿ ನಾನು ಯಾವಾಗಲೂ ಗೆದ್ದಿಲ್ಲ.
ನೀನು ಒಪ್ಪುವುದಿಲ್ಲವೋ? ಹಾಗಾದರೆ ಬರಲಿ ಬಾಣ.
ನೀವು
ಇದೇ ತಂತ್ರಗಾರಿಕೆಯನ್ನು ಉಪಯೋಗಿಸಿದರೆ ಅವರು
ನಿಮ್ಮನ್ನು
ಸೋಲಿಸಿಬಿಡುತ್ತಾರೆ.
ನನ್ನ
ಎಲ್ಲ ವಾದಗಳನ್ನು ಅವನು ಹೊಡೆದುಹಾಕಿದ.
ಈ ವಾಕ್ಯಗಳಲ್ಲಿ
ಸಮರ್ಥನಾಗುವುದು, ಪ್ರಹಾರಗೈದರು, ಕೆಡವಿಬಿಡುವುದು,
ಗೆಲ್ಲುವುದು, ಬಾಣ ಬರುವುದು, ಹೊಡೆದು ಹಾಕುವುದು ಈ ಪದಗಳೆಲ್ಲ ಮಲ್ಲಯುದ್ಧ ಅಥವ ಕುಸ್ತಿಯನ್ನು
ನೆನಪಿಗೆ ತರುವಂಥವು.ಎಷ್ಟೊಂದು ವ್ಯವಸ್ಥಿತವಾಗಿ ನಾವು ‘ಕುಸ್ತಿ’ ಎಂಬ ಪರಿಕಲ್ಪನೆಯನ್ನೇ ಆಧಾರವಾಗಿಟ್ಟುಕೊಂಡು
ವಾದದ ವಿಷಯವಾಗಿ ಮಾತನಾಡುತ್ತೇವೆ ಎಂಬುದು ಅಚ್ಚರಿಯ ವಿಷಯ. ವಾದವು ಯುದ್ಧ/ಕುಸ್ತಿ ಎಂಬ ರೂಪಕ
ನಮ್ಮ ಕಲ್ಪನೆಯಲ್ಲಿರುವುದರಿಂದ ಇಂತಹ ವಾಕ್ಯಗಳು ಉಂಟಾಗುತ್ತವೆ. ಇಂತಹ ಮಾತುಗಳನ್ನೆಲ್ಲ ನಮಗರಿವಿಲ್ಲದಂತೆಯೇ
ನಾವು ಬಳಸುತ್ತಿರುತ್ತೇವೆ. ಇದು ತನಗೆ ತಾನೆ ನಮಗೊದಗುವ ಚಿಂತನಾದಿಕ್ಕು. ಹೀಗೆ human thought processes are largely
metaphorical(ಲೇಕಾಫ್,2003:
ಪು 6).
ಇಲ್ಲಿ ಯುದ್ಧವೂ ಇಲ್ಲ ಕುಸ್ತಿಯೂ ಇಲ್ಲ
ಅಷ್ಟೇ ಏಕೆ ಜಗಳವೂ ಇಲ್ಲ. ಆದರೆ ಇಲ್ಲಿ ಬಳಸಿರುವ ಮೇಲಿನ ಪದಗಳಲ್ಲಿವಾದವನ್ನು ಕುಸ್ತಿಯೆಂದೋ ಯುದ್ಧವೆಂದೋ
ಪರಿಕಲ್ಪಿಸಿಕೊಂಡಿದ್ದೇವೆ ಎಂಬುದು ಕಂಡು ಬರುತ್ತಿದೆ. ಹೀಗೆ ನಾವು ವಾದವನ್ನು ಕುಸ್ತಿಯ ಚಿತ್ರದೊಡನೆ
ಸಮೀಕರಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ನಿರುಕ್ತ ನಿಘಂಟಿನಲ್ಲಿ ವಾದ ಎಂಬುದಕ್ಕೆ ಜಗಳ ಎಂಬರ್ಥವನ್ನೂ
ಕೊಟ್ಟಿರುವುದಾಗಿ ಕಿಟೆಲ್ ನಿಘಂಟಿನಲ್ಲಿದೆ.
ಉದಾ 3:
TIME
IS MONEY OR A VALUABLE COMMODITY
ಕಾಲವು ಸಂಪತ್ತು ಅಥವ ಒಂದು ಅಮೂಲ್ಯ ವಸ್ತು
ನೀನು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದೀಯೇ
ನಿನ್ನೊಡನೆ ಕಳೆಯಲು
ನನ್ನ ಬಳಿ ಸಮಯವಿಲ್ಲ
ನಿವೃತ್ತನಾಗಿರುವೆ; ಸಮಯವನ್ನು ಹೇಗೆ ಕಳೆಯುವೆ?
ನಾನು ಆ ಕೆಲಸದಲ್ಲಿ ಸಾಕಷ್ಟು ಸಮಯ ಹಾಕಿದ್ದೇನೆ.
ನಿಮಗೆ ಲಭ್ಯವಿರುವ ಕಾಲವನ್ನು ಸರಿಯಾಗಿ ಯೋಜಿಸಿಕೊಳ್ಳಬೇಕು
ವ್ಯಾಯಾಮಕ್ಕಾಗಿ
ಸ್ವಲ್ಪ ಸಮಯವನ್ನು ತೆಗೆದಿಡು
ಆ ಕೆಲಸಕ್ಕಾಗಿ ಅಷ್ಟು ಸಮಯ ಸರಿಯೇ?
ನಿನ್ನ ಬಳಿ ಸಮಯವಿನ್ನೂ ಉಳಿದಿದೆಯೇ?
ನೀನು ಸಮಯವನ್ನು ಲಾಭದಾಯಕವಾಗಿ ಬಳಸುತ್ತಿಲ್ಲ
ನನ್ನ ಆರೋಗ್ಯ ಕೆಟ್ಟಿದ್ದರಿಂದ ತುಂಬ ಸಮಯ ಕಳೆದುಕೊಂಡೆ
ಪಾಶ್ಚಾತ್ಯ ಪ್ರಭಾವದನಂತರ ಸಮಯವನ್ನು ಒಂದು
ಸಂಪತ್ತೆಂಬಂತೆ, ಒಂದು ಅಮೂಲ್ಯ ವಸ್ತು ಎಂಬಂತೆ ನಾವು ಕಲ್ಪಿಸಿಕೊಳ್ಳುತ್ತಿರುವುದಕ್ಕೆ ಇವೆಲ್ಲ ಉದಾಹರಣೆಗಳು.
ಅದಕ್ಕೆ ಮೊದಲು [ಬಹುಶಃ ಮುಂಬೈ ಸಾರ್ವಜನಿಕ ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳನ್ನು ರಚಿಸಿದ ಮೇಲೆ]
ಮೊದಲಿನಂತಲ್ಲ ಕಾಲ ಬದಲಾಗಿದೆ, ಸಮಯ ದುಬಾರಿ, ಕಾಲ ಬರಬೇಕು, ಆ ಕಾಲ ಹೋಯಿತು,
ಪ್ರಯಾಣದಲ್ಲಿ ಕಾರಿನ ಟೈರು ನನ್ನ ಒಂದು ಗಂಟೆಯನ್ನು ತಿಂದಿತು -
ಈ ತರಹದ ಪ್ರಯೋಗಗಳು ಕಾಣ ಸಿಗುತ್ತೆವೆ. ಇಲ್ಲೆಲ್ಲ
ಕಾಲವನ್ನು ಒಂದು ವಸ್ತುವಿನಂತೆ ಅಥವ ಪ್ರಾಣಿಯಂತೆ ಬಳಕೆ ಮಾಡಲಾಗಿದೆ.
ಮೇಲಿನ
ಉದಾಹರಣೆಗಳೆಲ್ಲ ಒಂದು ವರ್ಗಕ್ಕೆ ಸೇರಿದಂತಹವು. ಇವೆಲ್ಲ ರಚನಾತ್ಮಕ ರೂಪಕಗಳೆಂಬ ವರ್ಗಕ್ಕೆ ಸೇರಿದವು. ಇಲ್ಲಿ ವಾದವೆಂಬ (ಅಮೂರ್ತ) ಪರಿಕಲ್ಪನೆ
ಇನ್ನೊಂದು (ಮೂರ್ತ) ಪರಿಕಲ್ಪನೆಯ (ಕುಸ್ತಿ), ಮತ್ತು
ಕಾಲವೆಂಬ ಅಮೂರ್ತ ಪರಿಕಲ್ಪನೆ ಸಂಪತ್ತು ಅಥವ ವಸ್ತು ಅಥವ ಪ್ರಾಣಿ ಎಂಬ ಮೂರ್ತ ಪರಿಕಲ್ಪನೆಗಳ ಗುಣಸ್ವಭಾವಗಳನ್ನು
ಬಳಸಿ ವ್ಯವಸ್ಥೆಗೊಂಡಿವೆ. (ಲೇಕಾಫ್,2003: ಪು 14).
ದಿಕ್ಸೂಚಕ ರೂಪಕಗಳೆಂಬ ಇನ್ನೊಂದು
ವರ್ಗವಿದ್ದು ಇವುಗಳನ್ನು ಸೋದಾಹರಣವಾಗಿ ಪರಿಶೀಲಿಸಬಹುದು.ಏರುಗತಿ – ಬೀಳುಗತಿ,ಮುಂದೆ – ಹಿಂದೆ, ಕೇಂದ್ರ
– ಪರಿಧಿ ಈ ರೀತಿಯ ದಿಕ್ಕುಗಳಿಂದ ಅರ್ಥ ಹೊಮ್ಮಿಸುವ ರೂಪಕಗಳನ್ನು ಈ ಗುಂಪಿಗೆ ಸೇರಿಸುವರು.
ಹೆಚ್ಚು
ಎಂಬುದ ಏರುಗತಿ; ಕಡಿಮೆ ಎಂಬುದು ಇಳಿಗತಿ
ಅವಳು
ದನಿ ಏರಿಸಿ ಮಾತನಾಡಿದಳು.
ದನಿ
ತಗ್ಗಿಸು, ಇಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ.
ಆರೋಗ್ಯ
ಏರುಗತಿ; ಅನಾರೋಗ್ಯ ಬೀಳುಗತಿ
ಹಲವು
ದಿನಗಳಿಂದ ಅವನು ಮಲಗಿದ್ದಾನೆ.
ಅವಳು
ಕಾಯಿಲೆಯಿಂದ ಮೇಲೆದ್ದಳು.
ಎಚ್ಚರಿರುವುದು
ಏರುಗತಿ; ಎಚ್ಚರಿಲ್ಲದಿರುವುದು ಬೀಳುಗತಿ
ಅವಳು
ಬೆಳಿಗ್ಗೆ ಮುಂಚೆ ಏಳುತ್ತಾಳೆ.
ಕೆಲಸಗಳಲ್ಲಿ
ಮುಳುಗಿ ಹೋದ.
ನಿಯಂತ್ರಣದಲ್ಲಿರುವುದು
ಏರುಗತಿ; ನಿಯಂತ್ರಣ ರಾಹಿತ್ಯ ಬೀಳುಗತಿ
ಅವಳುನನ್ನ
ಮೇಲಧಿಕಾರಿ.
ಇವನು
ನನ್ನ ಕೈಕೆಳಗಿದ್ದಾನೆ.
ಉತ್ತಮ
ಚಾರಿತ್ರ್ಯ ಏರುಗತಿ; ಚಾರಿತ್ರ್ಯಹೀಣತೆ ಖೆಳಗತಿ
ಅವನಚಾರಿತ್ರ
ಮೇಲ್ಮಟ್ಟದ್ದು.
ಇವನ
ಚಾರಿತ್ರ ಕೀಳು.
ವೈಚಾರಿಕತೆ
ಏರುಗತಿ; ಅವೈಚಾರಿಕತೆ ಕೇಳಗತಿ
ಅವಳಿಗೆ
ತನ್ನ ಭಾವನೆಗಳಿಂದ ಮೇಲೇರಲಾಗಲಿಲ್ಲ
ಇವನು
ಆ ಮಟ್ಟ್ಕಕ್ಕೆ ಇಳಿದ.
ಪ್ರಗತಿ
ಏರುಗತಿ, ವೈಫಲ್ಯ ಬೀಳುಗತಿ
ಅವನು
ಜೀವನದಲ್ಲಿ ಮೇಲೇರಿದ (ಮುಂದೆ ಬಂದ).
ಇವನು
ವೃತ್ತಿಯಲ್ಲಿ ಹಿಂದೆ ಉಳಿದ.
ಹೀಗೆ ರೂಪಕಗಳಲ್ಲಿ ದಿಕ್ಸೂಚನೆಯು ಒಂದು ವ್ಯವಸ್ಥಿತ ಸ್ವರೂಪದ್ದಾಗಿದೆ. ಏರುಗತಿ
ಸೂಚನೆಯು ಧನಾತ್ಮ ಮೌಲ್ಯಮಾಪನದ ಸಂದರ್ಭದಲ್ಲಿ ಬಳಕೆಯಾಗುತ್ತದೆ; ಇಳಿಗತಿಯು ಋಣಾತ್ಮಕ ಮೌಲ್ಯಮಾಪನದ
ಸಂದರ್ಭವನ್ನು ಸೂಚಿಸುತ್ತದೆ(ಕೊವೆಕ್ಸಸ್ 2010)
6.5 ರೂಪಕಗಳ ಇನ್ನೊಂದು
ವಿಧ ಸತ್ತಾರೂಪಕಗಳದು (ontological
metaphor).
ಸತ್ತಾ ಎಂದರೆ ಅಸ್ತಿತ್ವ. ಮಾನವ ವಿಶಿಷ್ಟವಾದ ಹಲವು ಅಮೂರ್ತ ವ್ಯವಹಾರಗಳನ್ನು ಭಾಷೆಯಲ್ಲಿ ತಿಳಿಸುವಾಗ
ಅವುಗಳನ್ನು ಒಂದು ಮೂರ್ತ ರೀತಿಯಲ್ಲಿ ಪ್ರತಿಧಿನಿಸುವುದು ಅನಿವಾರ್ಯ. ಇಂತಹ ಅಮೂರ್ತ ವ್ಯವಹಾರಗಳ ಅಸ್ತಿತ್ವವನ್ನು
ಕೆಲವು ರೂಪಕಗಳು ಸಾಕಾರಗೊಳಿಸುತ್ತವೆ. SIL Glossary of Linguistic Terms ಎಂಬ ನಿಘಂಟಿನಲ್ಲಿ ಇಂತಹ ರೂಪಕಗಳನ್ನು ‘ಕಾರ್ಯಚಟುವಟಿಕೆ,
ಸಂವೇಗ ಅಥವ ಐಡಿಯಾಗಳಂತಹ ಅಮೂರ್ತ ಪರಿಕಲ್ಪನೆಗಳನ್ನು ಕಣ್ಣಿಗೆ ಕಾಣುವಂತಹ ವಸ್ತು, ಪಾತ್ರೆ(ಧಾರಕ)
ಅಥವ ವ್ಯಕ್ತಿ ಇಂತಹವುಗಳಿಂದ ಪ್ರತಿನಿಧಿಸುವ ರೂಪಕಗಳು’ ಎಂದು ವಿವರಿಸಿದ್ದಾರೆ . ಮುಂದಿನ ಕೆಲವು ಉದಾಹರಣೆಗಳಿಂದ ಈ ಅಂಶವು ಸ್ಪಷ್ಟವಾಗಬಹುದು. ಇವೆಲ್ಲ ಲೇಕಾಫ್ ಮತ್ತು
ಝಾನ್ಸನ್ ಇವರ ಪುಸ್ತಕದಿಂದ ಆಯ್ದವು (ಲೇಕಾಫ್, 2003: ಪು25-30).
ಈ ಕೆಲಸವನ್ನು ಮಾಡಿಮುಗಿಸಲು
ನಾವು ತಾಳ್ಮೆ ತೆಗೆದುಕೊಳ್ಳಬೇಕು (ತಾಳ್ಮೆಯನ್ನು
ಒಂದು
ವಸ್ತು ಎಂಬಂತೆ ಬಳಸಿದೆ).
ಅವನ ಮನಸ್ಸು ಕೆಟ್ಟು ಹೋಯಿತು (ಮನಸ್ಸನ್ನು ಒಂದು ಯಂತ್ರದಂತೆ ಕಲ್ಪಿಸಿದೆ).
ಅವಳಮನಸ್ಸು ಮುರಿಯಿತು (ಮನಸ್ಸನ್ನು ಮುರಿದು ಹೋಗುವ ವಸ್ತು ಎಂಬಂತೆ ಕಲ್ಪಿಸಿದೆ).
ಅವನು ನನ್ನ ಕಣ್ಣಳತೆಯಲ್ಲಿದ್ದಾನೆ (‘ಕಣ್ಣಳತೆ’ ಒಂದು ಧಾರಕ, ಒಂದು ಕೊಠಡಿಯ ತರಹ).
ಆರ್ಥಿಕ ಸಲಹೆಗಾರರು ವರದಿ
ತಯಾರಿಸಿದ್ದಾರೆ (ವರದಿ ಒಂದು ವಸ್ತು).
ಹಣದುಬ್ಬರ ನಮ್ಮ ಜೀವನಮಟ್ಟವನ್ನು ಕುಗ್ಗಿಸುತ್ತಿದೆ
(ಇಲ್ಲಿ ಹಣದುಬ್ಬರವನ್ನು ಒಂದು
ಭಾರವಾದ ವಸ್ತುವಿನಂತೆ ಕಲ್ಪಿಸಿದೆ).
ಹಣದುಬ್ಬರ ನನಗೆ
ಓಕರಿಕೆ ತರಿಸುತ್ತದೆ (ಇಲ್ಲಿ ಹಣದುಬ್ಬರವನ್ನು
ಒಂದು ಅಸಹ್ಯಕರ
ವಸ್ತುವಿನಂತೆ ಬಳಸಿದೆ).
ಇಂತಹ
ರೂಪಕಗಳು ನಮ್ಮ ಅನುಭವಗಳನ್ನು ಗ್ರಹಿಸಲು ಪ್ರಯೋಜನಕ್ಕೆ ಬರುವ ಮೂಲಭೂತ ಉಪಕರಣಗಳು. ಇವು ರಚನಾತ್ಮಕ
ರೂಪಕಗಳಷ್ಟು ವ್ಯವಸ್ಥಿತ ರಚನೆ ಹೊಂದಿರುವುವಲ್ಲ. ಇವು ಇಂತಹ ಪರಿಕಲ್ಪನೆಗಳು ಅಸ್ತಿತ್ವ(ಸತ್ತಾ)ದಲ್ಲಿವೆ
ಎಂಬುದನ್ನು ತೋರಿಸಿ ಕೊಡುವ ಕೆಲಸ ಮಾಡುತ್ತವೆ. ಅಮೂರ್ತ ಕಲ್ಪನೆಗಳ ಸ್ಪಷ್ಟ ಕಾಗ್ನಿಶನ್ನಷ್ಟೆ ಇವುಗಳಿಂದಾಗುವ
ಪ್ರಯೋಜನ. ಒಟ್ಟಿನಲ್ಲಿ ಸತ್ತಾ ರೂಪಕಗಳು ಯಾವುದಕ್ಕೆ ಯಾವ ರಚನೆಯೂ ಇಲ್ಲವೋ ಅಂತಹವಕ್ಕೆ ಒಂದು ರಚನೆಯನ್ನು
ಒದಗಿಸಿ ಸ್ಪಷ್ಟವಾಗಿ ಗೋಚರವಾಗುವಂತೆ ಮಾಡುತ್ತವೆ (ಕೊವೆಕ್ಸಸ್, ಪು32).
6.6 ಅಸ್ತಿತ್ವದ ಮಹಾ ಸರಪಳಿ ರೂಪಕ: ಜೀವ ಜಗತ್ತಿನಲ್ಲಿ ಡಾರ್ವಿನ್ನನ ವಿಕಾಸ ಹಂತಗಳನ್ನು ಅವಲಂಬಿಸಿ ಮೇಲುಸ್ತರದವು
ಮತ್ತು ಕೆಳಸ್ತರದವೆಂದು ಜೀವಿಗಳನ್ನು ಕಲ್ಪಿಸಬಹುದಾಗಿದೆ. ಅತ್ಯಂತ ಕೆಳಸ್ತರದಲ್ಲಿ ಜಡವಸ್ತುಗಳು,
ಅನಂತರ, ಸಸ್ಯಗಳು, ಪ್ರಾಣಿಗಳು ಮತ್ತು ಅತಿ ಮೇಲುಸ್ತರದಲ್ಲಿ ಮನುಷ್ಯ (ಇನ್ನೂ ಮೇಲುಸ್ತರದಲ್ಲಿ ದೇವರು)
– ಸ್ಥೂಲವಾಗಿ ಹೀಗೆ ಈ ಸರಪಳಿ ಇದೆ. ಮೇಲುಸ್ತರದ ಜೀವಿಯ ಗುಣಾವಗುಣಗಳನ್ನು ಕೆಳಸ್ತರದ ಜೀವಿಗಳಿಗೆ
ಆರೋಪಿಸಿದ ರೂಪಕಗಳಿವೆ. ನರಿಯನ್ನು ಉಪಾಯಗಾರ, ಸಿಂಹವನ್ನು ರಾಜ, ನಾಯಿಯನ್ನು ನಿಷ್ಠ, ಬೆಕ್ಕುಗಳನ್ನು
ಚಂಚಲ, ತೋಳಗಳು ಕ್ರೂರ, ತೋಳಗಳು ಹೊಟ್ಟೆ ಬಾಕ (ಹಸಿದ ತೋಳ), ಗೋರಿಲ್ಲಾಗಳು
ಆಕ್ರಮಣಕಾರಿ, ಹಂದಿಗಳು ಕೊಳಕು ಮತ್ತು ಒರಟು, ಇತ್ಯಾದಿಯಾಗಿ ಮಾನವ ಗುಣಗಳನ್ನು ಆರೋಪಿಸಿ ರೂಪಕಗೊಳಿಸುತ್ತೇವೆ(ಕರ್ಕ್-ಮನ್,
2007: ಪು6).ಅಂದರೆ ಈ ಪ್ರಾಣಿಗಳನ್ನು ಮಾನವ ಗುಣಗಳ ಮೂಲಕ ಅರ್ಥೈಸುತ್ತೇವೆ. ಅನಂತರ ಇದನ್ನು ಹಿಂದಕ್ಕೆ
ಅನ್ವಯಿಸಿ ಅವನು ನರಿ; ಇವನು ತೋಳ; ಇನ್ನೊಬ್ಬ ಸಿಂಹ – ಹೀಗೆಲ್ಲ ಹೇಳುತ್ತೇವೆ. ಮಹಾ ಸರಪಳಿಯಲ್ಲಿ ಯಾವುದು ಕೆಳಹಂತದಲ್ಲಿದೆ ಮತ್ತು
ಯಾವುದು ಮೇಲಿನ ಹಂತದಲ್ಲಿದೆ ಮತ್ತು ಅವುಗಳಲ್ಲಿ ಕಂಡುಬರುವ ಗುಣಲಕ್ಷಣಗಳಾವವು ಎಂಬುದನ್ನು
ಕರ್ಕ್-ಮನ್ ಕೆಳಗಿನ ಚಿತ್ರದ ಮೂಲಕ ತೋರಿಸಿದ್ದಾನೆ:
ಮಾನವ ವಿಶಿಷ್ಟ ಗುಣಗಳು
|
|||
ಮೂಲ-ಸ್ವಭಾವಗಳು
|
ಮೂಲ-ಸ್ವಭಾವಗಳು
|
||
ಜೈವಿಕ ಗುಣಲಕ್ಷಣಗಳು
|
ಜೈವಿಕ ಗುಣಲಕ್ಷಣಗಳು
|
ಜೈವಿಕ ಗುಣಲಕ್ಷಣಗಳು
|
|
ಭೌತಿಕ ವಸ್ತುಗಳು
|
ಭೌತಿಕ ಗುಣ ಲಕ್ಷಣಗಳು
|
ಭೌತಿಕ ಗುಣ ಲಕ್ಷಣಗಳು
|
ಭೌತಿಕ ಗುಣ ಲಕ್ಷಣಗಳು
|
ಜಡ ವಸ್ತುಗಳು
|
ಸಸ್ಯಗಳು
|
ಪ್ರಾಣಿಗಳು
|
ಮಾನವರು
|
ಮಾನವರ ಗುಣಗಳನ್ನು ಎಡದಲ್ಲಿರುವ ಪ್ರಾಣಿ-ಸಸ್ಯ-ಜಡ ವಸ್ತುಗಳಿಗೂ, ಪ್ರಾಣಿಗಳ ಗುಣಗಳನ್ನು
ಸಸ್ಯ-ಜಡ ವಸ್ತುಗಳಿಗೂ, ಸಸ್ಯಗಳ ಗುಣಗಳನ್ನು ಜಡವಸ್ತುಗಳಿಗೂ ಆರೋಪಿಸಿ ರೂಪಕಗಳನ್ನು ರೂಪಿಸುವುದು
ಸಾಮಾನ್ಯ. ವ್ಯತ್ಯಯವಾಗಬಹುದಾದರೂ ಹಾಗೆ ರೂಪಿತವಾದ ರೂಪಕಗಳ ಸಂಖ್ಯೆ ಅಲ್ಪ. (ಅವನು ತೋಳ
ಇತ್ಯಾದಿ).
ಗಾದೆಗಳಲ್ಲಿ ಮಹಾ ಸರಪಳಿ ರೂಪಕ
ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ. ಉದಾಹರಣೆಗೆ ಕೆಳಗಿನ ಗಾದೆಗಳನ್ನು ಪರಿಶೀಲಿಸಬಹುದು:
ಹಾವೂ
ಸಾಯಬಾರದು ಕೋಲೂ ಮುರಿಯಬಾರದು
ನಾಯಿಗೆ ಹೇಳಿದರೆ ತನ್ನ ಬಾಲಕ್ಕೆ ಹೇಳಿತು
ಕುಣಿಯಲಾರದವ ನೆಲ ಡೊಂಕು ಎಂದ
ಈ ಗಾದೆಗಳಿಗೆ ಪದಗಳು ತಿಳಿಸುವಷ್ಟು ಮಾತ್ರ ಅರ್ಥವಲ್ಲ ಎಂಬುದು
ಎಲ್ಲರಿಗೂ ಗೊತ್ತಿರುವ ವಿಷಯ. ಗಾದೆಗಳಲ್ಲಿ ಪ್ರಾಣಿಗಳು ಕೆಲಸ ಮಾಡುತ್ತಿರುವಂತೆ, ಜಡವಸ್ತುಗಳು
ಅಡ್ಡಿಪಡಿಸುತ್ತಿರುವಂತೆ ಚಿತ್ರಿತವಾಗಿರುತ್ತವೆ. ಆದರೆ ನಿಜವಾಗಿ ಇವು ಪ್ರಾಣಿಗಳ ಬದುಕನ್ನಾಗಲೀ
ನಿರ್ಜೀವ ವಸ್ತುಗಳ ಮಹತ್ವವನ್ನಾಗಲೀ ತಿಳಿಸುವುದಕ್ಕೆ ರಚನೆಯಾದುವಲ್ಲ. ಗಾದೆಗಳನ್ನು ಬಳಸುವ ಸನ್ನಿವೇಶಗಳೇ
ಇವು ಮನುಷ್ಯರಿಗೆ ಅನ್ವಯಿಸುವಂತಹವು ಎಂಬುದನ್ನು ಸ್ಪಷ್ಟ ಪಡಿಸುತ್ತವೆ. ಅಂದರೆ ಇವು
ರೂಪಕಾತ್ಮಕವಾಗಿದ್ದು ಇಲ್ಲಿರುವ ಪ್ರಾಣಿ ವ್ಯವಹಾರವಗಳು ಮೂಲ ಪರಿಧಿಗಳಾಗಿವೆ. ಅಲ್ಲಿರುವ
ಗುಣಗಳಿಂದ ನಿರ್ದಿಷ್ಟ ಸಂದರ್ಭದ ಮನುಷ್ಯ ಚಟುವಟಿಕೆಯ ಬಗ್ಗೆ ಟಿಪ್ಪಣಿ ಮಾಡಲಾಗುತ್ತದೆ. ಲಕ್ಷ್ಯ
ಪರಿಧಿಯನ್ನು ಸ್ಪಷ್ಟವಾಗಿ ಹೇಳಿಲ್ಲ. ನಿರ್ದಿಷ್ಟ ಸನ್ನಿವೇಶದ ಮನುಷ್ಯ ಚಟುವಟಿಕೆಯೇ ಲಕ್ಷ್ಯ
ಪರಿಧಿ. ಸದೃಶ ಮನುಷ್ಯ ವ್ಯವಹಾರವೇ ಲಕ್ಷ್ಯ ಎಂಬುದು ಬಳಕೆಯ ಸನ್ನಿವೇಶದಿಂದ ಸ್ಪಷ್ಟವಾಗುತ್ತದೆ.
ನಕ್ಷೆಯು ಪ್ರಾಣಿ ವ್ಯವಹಾರ ಪರಿಧಿಯಿಂದ ಮನುಷ್ಯ ವ್ಯವಹಾರ ಪರಿಧಿಗೆ ಉಂಟಾಗುತ್ತದೆ. ಇಲ್ಲೆಲ್ಲ
ಪ್ರಾಣಿಗಳಿಗೆ ಮಾನವ ಗುಣಗಳನ್ನು ಆರೋಪಿಸಲಾಗಿದೆ.
ಮೊದಲಿನ ಗಾದೆಯಲ್ಲಿ ಹಾವಿಗೆ ಮಾನವ ಗುಣವಾದ ಕ್ರೌರ್ಯವನ್ನು
ಆರೊಪಿಸಲಾಗಿದೆ; ಶಿಕ್ಷಿಸುವ ಗುಣವನ್ನು ಕೋಲಿಗೆ ಆರೋಪಿಸಿದೆ.ಈ ಪ್ರಕ್ರಿಯೆಯು ಅಸ್ತಿತ್ವದ ಮಹಾ
ಸರಪಳಿ ತತ್ವವನ್ನು ಅನುಸರಿಸಿದೆ. ಒಬ್ಬ ಒಂದು ಅಪರಾಧವನ್ನು ಮಾಡಿದ್ದಾನೆನ್ನಿ. ವ್ಯವಸ್ಥೆ
ಅವನಿಗೆ ಶಿಕ್ಷೆ ನೀಡಬೇಕಾಗಿದೆ. ಶಿಕ್ಷೆ ನೀಡುವವನು ಇವನನ್ನು ಗಂಭೀರವಾಗಿ ಶಿಕ್ಷಿಸುವುದಿಲ್ಲ.
ಹೀಗೆ ಇದು ಮನುಷ್ಯ ವ್ಯವಹಾರಕ್ಕೆ ಅನ್ವಯಿಸುತ್ತದೆ. ಮೂಲ ಪರಿಧಿಯಲ್ಲಿರುವುವು ಈ ಅಂಶಗಳು: ‘ಹಾವು’,
‘ಕ್ರೌರ್ಯ’, ‘ಹೆದರಿಸುವುದು’, ‘ಕೋಲು’, ‘ಕೋಲಿನ ಹೊಡೆತ’, ‘ಹೊಡೆತವು ಹಾವಿಗೆ ಬೀಳದೆ ನೆಲಕ್ಕೆ
ಬೀಳುವುದು’, ‘ಹೊಡೆತ ಬಲವಾಗಿ ಬೀಳದ್ದರಿಂದ ಅದು ಮುರಿಯದಿರುವುದು’ . ಲಕ್ಷ್ಯ ಪರಿಧಿಯಲ್ಲಿ ‘ಅಪರಾಧಿ’,
‘ಅವನ ಅಪರಾಧ’, ‘ಶಿಕ್ಷಿಸುವ ಪ್ರಾಧಿಕಾರ’, ‘ಸೂಕ್ತ ಶಿಕ್ಷೆಯನ್ನು ಕೊಡದಿರುವುದು’, ‘ತೋರಿಕೆಯ
ಶಿಕ್ಷೆ’ - ಇವು ಇವೆ. ಹಾವು - ಅಪರಾಧಿಗೆ, ಕ್ರೌರ್ಯ - ಅಪರಾಧಕ್ಕೆ, ಕೋಲು - ಶಿಕ್ಷಿಸುವ ಪ್ರಾಧಿಕಾರಕ್ಕೆ, ಕೋಲು
ಮುರಿಯದಿರುವುದು - ತೋರಿಕೆಯ ಶಿಕ್ಷೆಗೆ ಸಂವಾದಿಗಳಾಗುತ್ತವೆ. ಹೀಗೆ ನಕ್ಷೆ ಉಂಟಾಗಿ ಚಟುವಟಿಕೆಯ
ಸನ್ನಿವೇಶದಲ್ಲಿ ಗಾದೆ ಅರ್ಥವಾಗುತ್ತದೆ. ಗಾದೆ ಸದೃಶವಾದ ಯಾವುದೇ ಸಂದರ್ಭಕ್ಕೆ
ಅನ್ವಯವಾಗುತ್ತದೆ; ಆದರೆ ನಿರ್ದಿಷ್ಟ ಮಾನವ ಸಂದರ್ಭದಲ್ಲಿ ಅರ್ಥಪೂರ್ಣವಾಗುತ್ತದೆ. ಹೀಗೆ ಇದು ಸಾರ್ವತ್ರಿಕವು ನಿರ್ದಿಷ್ಟ ಎಂಬ ರೂಪಕವಾಗಿ
ರೂಪಿತವಾಗುತ್ತದೆ.
ಎರಡನೆಯದು ಬೇರೆ ರೀತಿಯದು.
ಇಲ್ಲಿ ನಾಯಿಯ ತಲೆಯನ್ನು ನಾಯಕನೊಂದಿಗೂ ಬಾಲವನ್ನು ಹಿಂಬಾಲಕರಿಗೂ ನಕ್ಷೀಕರಿಸಲಾಗಿದೆ. ನಿಯಂತ್ರಣವು
ಏರುಗತಿ ಎಂಬುದೊಂದು ರೂಪಕ. ನಾಯಿಯು ತಲೆಯನ್ನು
ಎತ್ತಿಕೊಂಡಿರುವುದರಿಂದ ತಲೆ ನಿಯಂತ್ರಕ; ಆದ್ದರಿಂದ ನಾಯಕನ ಸ್ಥಾನ. ಹಾಗೆಯೇ ಇಳಿಗತಯು
ಹಿಂಬಾಲಿಸುವುದು (ನಿಯಂತ್ರಣ ರಾಹಿತ್ಯ ಬೀಳುಗತಿ) ಎಂಬುದು ರೂಪಕ. ಬಾಲವು ಹಿಂದಿದ್ದು ಇಳಿ
ಬಿಟ್ಟಿರುವುದರಿಂದ ಇದಕ್ಕೆ ಹಿಂಬಾಲಕನ ಸ್ಥಾನ. ನಿಯಂತ್ರಣ, ಹಿಂಬಾಲಿಸುವುದು ಈ ಮಾನವ ಗುಣಗಳನ್ನು
ನಾಯಿ ಎಂಬ ಪ್ರಾಣಿಯ ಎರಡು ಅಂಗಗಳಿಗೆ ಆರೋಪಿಸಲಾಗಿದೆ. ಅಸ್ತಿತ್ವದ ಮಹಾಸರಪಳಿ ಇದನ್ನು ಆಗು
ಮಾಡಿಸುತ್ತದೆ. ಇಲ್ಲಿ ಲಕ್ಷ್ಯ ಪರಿಧಿಯಲ್ಲಿರುವ ಅಂಶಗಳೆಂದರೆ: ನಾಯಿಯ ತಲೆ, ತಲೆ ಎತ್ತಿರುವುದು,
ನಾಯಿಯ ಬಾಲ, ಅದು ಹಿಂದಿರುವುದು, ಇಳಿಗತಿಯಲ್ಲಿರುವುದು ಇವು. ವ್ಯಕ್ತಿ, ಅವನ ನಿಯಂತ್ರಕ ಗುಣ,
ವ್ಯಕ್ತಿ, ಅವನ ಹಿಂಬಾಲಕ ಗುಣ ಇವು ಮೂಲ ಪರಿಧಿಯಲ್ಲಿ ಇವೆ. ನಾಯಿ ಎಂಬ ಒಂದೇ ಪ್ರಾಣಿಯ ಮುಂದಿನ
ಮತ್ತು ಹಿಂದಿನ ಭಾಗಗಳು ನಾಯಕನೊಂದಿಗೂ ಹಿಂಬಾಲಕನೊಂದಿಗೂ ನಕ್ಷೀಕೃತವಾಗಿದೆ. ಹೀಗಾಗಿ ಇದೊಂದು ಅರ್ಧ ರೂಪಕವಾಗಿ ಅರ್ಥವಾಗುತ್ತದೆ.
ಮೂರನೆಯ ಗಾದೆಯು ಪ್ರಾಣಿಗಳನ್ನು ಬಳಕೆ ಮಾಡುತ್ತಿಲ್ಲ.
ತನ್ನಲ್ಲಿರುವ ಒಂದು ದೌರ್ಬಲ್ಯದಿಂದಾಗಿ ಈ
ವ್ಯಕ್ತಿ ಕುಣಿಯಲಾರ. ಆದರೆ ತನ್ನ ದೌರ್ಬಲ್ಯವನ್ನು ಒಪ್ಪಿಕೊಳ್ಳದೆ ತಾನು ಕುಣಿಯಲಾರದ್ದಕ್ಕೆ
ಕಾರಣ ನೆಲ. ಅದು ಡೊಂಕಾಗಿದೆ ಎನ್ನುತ್ತಾನೆ. ಇದು ಒಬ್ಬ ನಿರ್ದಿಷ್ಟ ವ್ಯಕ್ತಿಯ ಸಮಸ್ಯೆಯಂತೆ
ಕಾಣುತ್ತದೆ. ರಾಜಕೀಯ ವ್ಯಕ್ತಿಯೊಬ್ಬನು ಚುನಾವಣೆಯಲ್ಲಿ ಪ್ರಚಾರವನ್ನು ಸಂಘಟಿಸಲಾಗದೆ ತಪ್ಪೆಸಗಿದನೆನ್ನಿ.
ಅದರಿಂದಾಗಿ ಅವನು ಚುನಾವಣೆಯಲ್ಲಿ ಸೋಲುತ್ತಾನೆ. ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ.
ಬದಲಾಗಿ ತನ್ನ ಸಹಚರರು ಸರಿಯಾಗಿ ಕೆಲಸ ಮಾಡದ್ದರಿಂದ ತಾನು ಸೋತೆ ಎನ್ನುತ್ತಾನೆ. ಇಂತಹ
ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತೇವೆ. ನಿರ್ದಿಷ್ಟವು ಸಾರ್ವತ್ರಿಕ ಎಂಬ ರೂಪಕವನ್ನು ಇಲ್ಲಿ
ಬಳಸಲಾಗಿದೆ.ಅಂದರೆ ನಿರ್ದಿಷ್ಟ ವ್ಯಕ್ತಿಯೊಬ್ಬನಿಗೆ ಅನ್ವಯಿಸಿ ಹೇಳುವ ಗುಣಗಳು ಸಾರವತ್ರಿಕವಾಗಿ
ಹಲವರಿಗೆ ಅನ್ವಯಿಸಬಲ್ಲುದು. ಲಕ್ಷ್ಯ
ಪರಿಧಿಯಲ್ಲಿ ಒಬ್ಬ ವ್ಯಕ್ತಿ, ಕುಣಿಯಲು ಬಾರದವನು, ಅದನ್ನು ಒಪ್ಪಿಕೊಳ್ಳದವನು, ತಪ್ಪನ್ನು ನೆಲದ
ಮೇಲೆ ಹಾಕುವವನು –ಮ ಇಂತಹ ವ್ಯಕ್ತಿ ಇದ್ದಾನೆ. ಇದು ಈ ವ್ಯಕ್ತಿಗೆ ಅನ್ವಯಿಸುವಂತಹುದು. ಮೂಲಕ
ಪರಿಧಿಯಲ್ಲಿ ಒಬ್ಬ ವ್ಯಕ್ತಿ, ಚುನಾವಣೆ ಎದುರಿಸುವವನು, ತಪ್ಪು ಮಾಡಿದವನು, ಸೋತವನು, ತಪ್ಪನ್ನು
ಇನ್ನೊಬ್ಬರ ಮೇಲೆ ಹಾಕುವವನು ಇದ್ದಾರೆ. ಒಂದಕ್ಕೊಂದು ಸಂವಾದಿತ್ವದಿಂದ ೀ ಗಾದೆ ಅರ್ಥವಾಗುತ್ತದೆ.
ಗುಡ್ಡಕ್ಕೆ ಗುಡ್ಡ ಎದುರು ಎಂಬುದು ಪ್ರಾಣಿ ಅಥವ ಮನುಷ್ಯನನ್ನು
ಬಳಸದೆ ಅರ್ಥ ನೀಡುವ ಗಾದೆ. ಲಕ್ಷ್ಯ ಪರಿಧಿಯಲ್ಲಿ ಗುಡ್ಡಗಳಿವೆ; ಒಂದಕ್ಕಿಂತ ಇನ್ನೊಂದರ ಎತ್ತರ
ಹೆಚ್ಚಾಗಿದೆ; ಎತ್ತರ ಹೆಚ್ಚಾಗಿರುವುದರಿಂದ ಅವುಗಳ ಅವುಗಳ ಸುತ್ತಳತೆ ಪಾದದಲ್ಲಿ ಹೆಚ್ಚು ಮತ್ತು
ತುದಿಯಲ್ಲಿ ತುಂಬ ಕಡಿಮೆ. ಹಾಗೆಯೇ ಅಧಿಕ ಸಂಖ್ಯೆಯ ಸಾಧಕರಲ್ಲಿ ಆರಿಸಿ ಆರಿಸಿ ಅಂತಿಮವಾಗಿ ಆಯ್ದ
ಅತ್ಯುನ್ನತ ಸಾಧಕನೆಂದು ಒಬ್ಬನನ್ನು ನಾವು ಗುರುತಿಸಿದರೆ, ಅದೇ ರೀತಿ ಅದೇ ವಿಷದಲ್ಲಿ ಇನ್ನೊಂದು
ಸಮುದಾಯದಿಂದ ಆಯ್ದಾಗ ಅದಕ್ಕಿಂತ ಉತ್ತಮ ಸಾಧಕ ಸಿಗುತ್ತಾನೆ. ಇದು ಮುಂದುವರೆಯುತ್ತದೆ. ಆದ್ದರಿಂದ
ಯಾರೂ ತನ್ನನ್ನು ಬಿಟ್ಟರೆ ಇನ್ನೊಬ್ಬ ಸಾಧಕನಿಲ್ಲ ಎಂದು ಬೀಗುವಂತಿಲ್ಲ ಎಂಬುದು ಈ ಗಾದೆಯ ಅಭಿಪ್ರಾಯ.
ಗಾದೆಗಳು ಹೀಗೆ ಪಾರಂಪರಿಕವಾದ ಜ್ಞಾನವನ್ನು ತಲೆಮಾರುಗಳಿಗೆ ವರ್ಗಾವಣೆಮಾಡುವ
ವಾಹಕಗಳಾಗಿದ್ದು ಸಂಸ್ಕೃತಿ ನಿರ್ದಿಷ್ಟವಾದವು ಎನ್ನಬಹುದು. ಮೊರೆನೋ ಹೇಳುವಂತೆ [Proverbs]
are highly economic resources to transmit ideas, and thus, they are
pragmatically efficient. Even more, they are informative foranyone who wants to
have access to the traditions and to the popular believes of a community of
speakers. For this, they are also extremely valuable for sociolinguistic
purposes (ಮೊರೆನೋ 11-12). ಇವು ರೂಪಕಗಳನ್ನು
ಉಪಕರಣಗಳನ್ನಾಗಿ ಬಳಸುತ್ತವೆ ಎಂಬುದು ಸ್ವಾಭಾವಿಕ.
ಗಾದೆಗಳಲ್ಲಿ ಬಹುಸಂಖ್ಯೆಯವು
ಪ್ರಾಣಿ ಸಂಬಂಧೀ ರೂಪಕಗಳನ್ನು ಬಳಸುತ್ತವೆ ಎಂಬ ಅಭಿಪ್ರಾಯವಿದೆ (Hien, p 2 ). ಕನ್ನಡಕ್ಕೆ ಇದು
ಅಷ್ಟಾಗಿ ಅನ್ವಯಿಸುವುದಿಲ್ಲ. ಕನ್ನಡದ ಪ್ರಥಮ ಗಾದೆಗಳ ಸಂಗ್ರಹದಲ್ಲಿ(ನರಸಿಂಗರಾವ್) ಒಟ್ಟು 607 ಗಾದೆಗಳಿದ್ದು ಇದರಲ್ಲಿ ಸಸ್ಯಗಳಿಗೆ
ಸಂಬಂಧಿಸಿದ 30 ಗಾದೆಗಳು, ಪ್ರಾಣಿಗಳ ಪಾತ್ರವಿರುವ 80 ಗಾದೆಗಳು, ದೇವರರ ಪಾತ್ರವಿರುವ 7
ಗಾದೆಗಳು ಮತ್ತು ಮನುಷ್ರನದೇ ಪ್ರಧಾನ ಪಾತ್ರವಿರುವ 303 ಗಾದೆಗಳು ಇವೆ. ಹೀಗೆ ನಮ್ಮ ಭಾಷೆಯ
ಗಾದೆಗಳಲ್ಲಿ ಮನುಷ್ಯರೇ ಪ್ರಧಾನ ಪಾತ್ರಗಳಿರುವಂತೆ ತೋರುತ್ತದೆ. ಅನಂತರದ ಸ್ಥಾನ ಪ್ರಾಣಿಸಂಬಂಧಿ
ಗಾದೆಗಳಿಗೆ ಮತ್ತು ಅನಂತರ ಸಸ್ಯದವುಗಳಿಗೆ. ಎಲ್ಲ ಗಾದೆಗಳು ಸಾಮಾನ್ಯವಾಗಿ ಸಂಭಾಷಣೆಗಳಲ್ಲಿ ಉಪಯೋಗಕ್ಕೆ
ಬರುವಂತಹವು. ಇವು ಜೊತೆಗಾರನ ಅಭಿಪ್ರಾಯಗಳನ್ನು ನಯವಾಗಿ ವಿರೋಧಿಸಲು, ಅವನನ್ನು ವಿಮರ್ಶಿಲು ಅಥವ
ಅವನು ಸಣ್ಣವನಾಗಿದ್ದರೆ ಅವನನ್ನು ತಿದ್ದಲು ಉಪಯುಕ್ತವಾಗುತ್ತವೆ. ಹೀಗೆ ಸಾಂಸ್ಕೃತಿಕವಾಗಿಯೂ ಗಾದೆಗಳು
ಮುಖ್ಯವಾಗುತ್ತವೆ. ಹೀಗಾಗಿ ಅಸ್ತಿತ್ವ ಮಹಾಸರಪಳಿ ತತ್ವಗಳನ್ನು ಅಳವಡಿಸಿಕೊಂಡ ರೂಪಕಗಳನ್ನು ಇವು
ಬಳಸಿಕೊಳ್ಳುವುದು ಅನಿವಾರ್ಯ.
6.7 (The
Event structure metaphor) ಘಟನಾ
ರಚನಾತ್ಮಕ ರೂಪಕಗಳು: ಇಲ್ಲಿ ಘಟನೆ ಎಂದರೆ ನಮ್ಮ
ಜೀವನದಲ್ಲಿ ಎದುರಾಗುವ ಘಟನೆಗಳು. ಕಾರನ್ನು ಕೊಂಡುಕೊಳ್ಳುವುದು, ಹಬ್ಬದ ಆಚರಣೆ, ಸ್ನೇಹಿತರೊಡನೆ
ಮಿಲನ ಇಂತಹವೆಲ್ಲ ಘಟನೆಗಳು ಎನಿಸುತ್ತವೆ. ಅಷ್ಟೇ ಅಲ್ಲ. ಒಂದು ಸಂಭಾಷಣೆಯೂ ಒಂದು ಘಟನೆಯೇ. ಇಂತಹ
ಯಾವ ಘಟನೆಯೂ ಒಂದು ಘಟನೆ ಎಂಬಂತೆ ಮೇಲ್ನೋಟಕ್ಕೆ ಕಂಡರೂ, ಅದರಲ್ಲಿ ಅನೇಕ
ಹಂತಗಳಿರುತ್ತವೆ. ಉದಾಹರಣೆಗೆ ಸಂಭಾಷಣೆಯಲ್ಲಿಆದಿ-ಮಧ್ಯ-ಅಂತ್ಯಗಳೆಂಬ ಹಂತಗಳಂತೂ ಇದ್ದೇ ಇವೆ.
"ಸಂಭಾಷಣೆಯಲ್ಲಿ ನಾವು ಇಂತಹ ಹಂತದಲ್ಲಿದ್ದಾಗ ಒಂದು ಶಬ್ದ ಕೇಳಿಸಿತು''ಎಂಬಂತೆ
ಮಾತನಾಡುತ್ತೇವೆ. ಸಂಪಾದಿಸುವ ವ್ಯಕ್ತಿಗಳು, ಸಂಭಾಷಣೆಯ ಭಾಗಗಳು, ಸಂಭಾಷಣೆಯ ಹಂತಗಳು, ರೇಖಾತ್ಮಕ
ಕ್ರಮೀಕರಣ, ಸಂಭಾಷಣೆಗೆ ಕಾರಣಗಳು, ಸಂಭಾಷಣೆಯ ಉದ್ದೇಶ - ಹೀಗೆ ಸಂಭಾಷಣೆಯಲ್ಲಿ ಹಲವು ಹಂತಗಳನ್ನು
ಗುರುತಿಸಬಹುದು. ಹೀಗೆಘಟನೆಗೆ ಅನೇಕ ಆಯಾಮಗಳು.
ಇವೆಲ್ಲ ಸ್ಥಿತಿಗಳು,ಬದಲಾವಣೆಗಳು, ಪ್ರಕ್ರಿಯೆಗಳು, ಕ್ರಿಯೆಗಳು, ಕಾರಣಗಳು,
ಉದ್ದೇಶಗಳು, ಮಾರ್ಗಗಳು ಇತ್ಯಾದಿಘಟನೆಯ ಸ್ವರೂಪಗಳಾಗಿರಬಹುದು ಅಥವ ಒಂದು ಘಟನೆಯ ಅಂಶಗಳೂ
ಆಗಿರಬಹುದು. ಇವೆಲ್ಲವೂ ರೂಪಕಗಳಿಂದ ಪ್ರತಿನಿಧಿತವಾಗುತ್ತವೆ.
ಕೇವಲ ಭೌತಿಕ ಘಟನೆ ಗಳಷ್ಟೇ ಅಲ್ಲ. ಮಿಲನ, ವಿಯೋಗ,
ಒಗ್ಗೂಡಿಸುವಿಕೆ, ಸಿಟ್ಟಾಗುವುದು, ಪ್ರೀತಿಸುವುದು ಇಂತಹವೂ ಎಲ್ಲ ಘಟನೆಗಳು. ಅವನು
ಸಿಟ್ಟಿನಲ್ಲಿದ್ದ ಎಂದಾಗ ನಾವು ಒಂದು ಸ್ಥಿತಿ ಸ್ವರೂಪದ ಘಟನೆಯನ್ನು ಪ್ರಸ್ತಾವಿಸುತ್ತಿದ್ದೇವೆ. ಸಿಟ್ಟಿನಲ್ಲಿ
ಎಂದು ನಾವು ವ್ಯಕ್ತಿಯನ್ನು ಗಡಿರೇಖೆಗಳಿಂದ ಆಚ್ಛಾದಿತ ಪ್ರದೇಶದೊಳಗಿರುವಂತೆ
ಕಲ್ಪಿಸಿತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಇತರ ಉದಾಹರಣೆಗಳು ಇವು:
·
ಸ್ಥಿತಿಗಳು ಸ್ಥಳಗಳು (ಅಂದರೆ ಸೀಮಾರೇಖೆಗಳಿಂದ ಆವೃತವಾದ ಪ್ರದೇಶ).
ಉಧಾ. ಅವನು ಸಿಟ್ಟಿನಲ್ಲಿ ದ್ದ. ನಾನು ಹೋದಾಗ ಅವರು ಸಂಭಾಷಣೆಯ ಮಧ್ಯದಲ್ಲಿ
ದ್ದರು. ಇಲ್ಲಿ ‘ಸಿಟ್ಟು’ ‘ಸಂಭಾಷಣೆಯ ಮಧ್ಯ’
ಇವುಗಳಲ್ಲಿ ಎಂದು ಹೇಳಿದೆ – ಮನೆಯಲ್ಲಿ
ಎಂಬಂತೆ. ಸಿಟ್ಟು, ಸಂಭಾಷಣೆ ಇಂತಹವು
ಸ್ಥಿತಿಗಳು ಮತ್ತು ಅವುಗಳನ್ನು ಧಾರಕ
ರೂಪಕಗಳಂತೆ ಬಳಸಿದೆ.
·
ಬದಲಾವಣೆಗಳು ಚಲನೆಗಳು (ಆವೃತ ಪ್ರದೇಶದ ಒಳಕ್ಕೆ ಅಥವ ಅದರಿಂದ ಹೊರಕ್ಕೆ).
ಉದಾ.ಅವನು ಅತ್ಯಂತ ಕಷ್ಟ ಪರಿಸ್ಥಿತಿಯಿಂದ ಸುಖಸಾಗರಕ್ಕೆ ಹೋದ. ಿಲ್ಲಿ ಕಷ್ಟ ಮತ್ತು ಸುಖಗಳಿ ಸ್ಥಿತಿಗಳಾಗಿವೆ. ಸ್ಥಿತಿ
ಬದಲಾದುದನ್ನು ಹೋದ ಎಂದು ಹೇಳಿರುವುದು ಚಲನೆಯನ್ನು ಸೂಚಿಸುತ್ತಿದೆ.
·
.ಕಾರಣಗಳು ಬಲಗಳು.
ಉದಾ. ಅವನ ಸಿಕ್ಸರ್
ಜನರನ್ನು ಹೊಸ ಉತ್ಸಾಹಕ್ಕೆ ದಬ್ಬಿತು.
·
ಕ್ರಿಯೆಗಳು ಸ್ವಯಂ ಚಾಲಿತ ಚಲನೆಗಳು.
ಉದಾ. ನಾವು ಮೊದಲ ಹೆಜ್ಜೆಯನ್ನು
ಇಟ್ಟಿದ್ದೇವೆ
·
ಉದ್ದೇಶಗಳು ತಲುಪುದಾಣಗಳು.
ಅವನು ಅತ್ಯಂತ ಶ್ರೀಮಂತರಲ್ಲೊಬ್ಬನಾಗಬೇಕೆಂದಿದ್ದ. ಅಂತೂ ಅವನು ಗುರಿ ತಲುಪಿದ.
·
ರೀತಿಗಳು ತಲುಪುದಾಣಗಳಿಗೆ ದಾರಿಗಳು.
ಉದಾ. ವ್ಯಾಯಾಮದ ಮೂಲಕ ಅವಳು ತನ್ನ ದೇಹಾರೋಗ್ಯವನ್ನು ಕಾಪಾಡಿಕೊಂಡಳು.
·
ಸಂಕಷ್ಟ ಗಳು ಚಲನೆಗೆ ತಡೆಗಳು.
ಉದಾ. ನಾವು ಈ ಕಷ್ಟವನ್ನು
ಎದುರಿಸಿ ಮುನ್ನಡೆಯೋಣ.
·
ನಿರೀಕ್ಷಿತ ಪ್ರಗತಿಯು ಒಂದು ಪ್ರಯಾಣ ಯೋಜನೆ.
ಉದಾ. ನಾವು ಯೋಜಿಸಿದ್ದಕ್ಕಿಂತ ಹಿಂದುಳಿದಿದ್ದೇವೆ; ಇದರಲ್ಲಿ ಪ್ರಗತಿ ಸಾಧಿಸಿ ಮುನ್ನಡೆಯನ್ನು ಕಾಯ್ದುಕೊಳ್ಳಬೇಕು.
·
ಬಾಹ್ಯ ಘಟನೆಗಳು ಚಲಿಸುವ ದೊಡ್ಡ ವಸ್ತುಗಳು.
ಉದಾ. ಯುದ್ಧಗಳು ಒಂದರ
ಮೇಲೊಂದರಂತೆ ಮೇಲೆರೆಗಿದವು.
·
ದೀರ್ಘಾವಧಿಯ ಉದ್ದೇಶಿತ ಚಟುವಟಿಕೆಗಳು ಪ್ರಯಾಣಗಳು.
ಉದಾ. ಜೀವನದಲ್ಲಿ ನೀವು ಮುನ್ನಡೆಯುತ್ತಿರಬೇಕು. (ಕೊವೆಕ್ಸಸ್, ಪು133)
ಸಂಪದ್ಭರಿತ ರೂಪಕಗಳಾದ ನುಡಿಗಟ್ಟುಗಳಲ್ಲಿ ಇತರ ರೂಪಕಗಳ ಜೊತೆ ಈ
ವಿಭಾಗದ ರೂಪಕಳು ವಿಪುಲವಾಗಿ ಬಳಕೆಯಾಗುತ್ತವೆ. ನುಡಿಗಟ್ಟುಗಳೆಲ್ಲ ಎರಡು ಅಥವ ಹೆಚ್ಚು ಪದಗಳಿಂದ
ಆಗಿದ್ದು ಅಂಗಪದಗಳ ಅರ್ಥ ಅವುಗಳ ಅರ್ಥವನ್ನು ಹೊರಡಿಸುವುದಿಲ್ಲವಾದ್ದರಿಂದ ಚಕಿತಗೊಳಿಸುತ್ತವೆ
ಮತ್ತು ಒಗಟಾಗಿ ಉಳಿಯುತ್ತವೆ. ಅಲ್ಲಿರುವ ಪದಗಳ ಬೇರೆ ರೂಪಗಳನ್ನು ಉಪಯೋಗಿಸಿದಾಗಲಾಗಲಾಗಲೀ ಆ
ಪದಗಳ ಪರ್ಯಾಯವಾಚಿಗಳನ್ನು ಉಪಯೋಗಿಸಿದಾಗಲಾಗಲೀ ಅವು ಅರ್ಥವನ್ನು ಉಳಿಸಿಕೊಳ್ಳವುದು ಅಪುರೂಪ. ‘ಚಕ್ರಹಾಕು”
ಎಂಬ ನುಡಿಗಟ್ಟನ್ನು ಚಕ್ರವನ್ನು ಹಾಕು ಎಂದು ಉಪಯೋಗಿಸುವಂತಿಲ್ಲ; (ಚಕ್ರದ ಬದಲು) ಗಾಲಿಹಾಕು
ಎಂದು ಉಪಯೋಗಿಸಿದರೂ ಅರ್ಥ ಉಳಿಯದು. ಹೀಗೆ ಆದೇಶಿಸಿದ ಪದದ ಅರ್ಥವು ಮೂಲ ಪದದ ಅರ್ಥದಂತೆಯೇ
ವ್ಯವಹೃತವಾಗದಿರುವುದೇ ಇದಕ್ಕೆ ಕಾರಣ ಎಂದು ವಿದ್ವಾಂಸರ ಅಭಿಪ್ರಾಯವಿದೆ(. ರೂಪಕಗಳ ಕಾಗ್ನಿಟಿವ್ ಸಿದ್ಧಾಂತವನ್ನು ಬಳಸಿ
ವಿಶ್ಲೇಷಿಸಿದಾಗ (Ioannou
Georgios et.al. p22) ನುಡಿಗಟ್ಟುಗಳ
ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಇತರ ವರ್ಗದ ರೂಪಕಗಳೊಂದಿಗೆ ಘಟನಾರಚನಾತ್ಮಕ
ರೂಪಕಳದೂ ದೊಡ್ಡ ಕೊಡುಗೆ ಇದೆ.
ನುಡಿಗಟ್ಟುಗಳಲ್ಲಿ ಎರಡು ಪದಗಳಿರುವಂತಹವು ಅಥವ ಹೆಚ್ಚು
ಪದಗಳಿರುವಂತಹವು ಇರಬಹುದು. ಉದಾಹರಣೆಗೆ ಕಾಲ್ಕಿತ್ತು,ಚಕ್ರಹಾಕು, ಗೋರಿತೋಡು, ತಲೆಗೆ ಹಚ್ಚಿಕೋ
ಇತ್ಯಾದಿಗಳಲ್ಲಿ ಎರಡು ಪದಗಳಿವೆ. ಕಾಲಿಗೆ ಬುದ್ಧಿ ಹೇಳು, ಕಾಲೆಳೆದುಕೊಂಡು ಹೋಗು, ತಲೆ ಎತ್ತದಂತೆ
ಮಾಡು ಇಂತಹವು ಮೂರು ಪದಗಳಿಂದ ಕೂಡಿವೆ. ಎರಡು ಪದಗಳಿಂದಾಗಿರುವುವೇ ಹಚ್ಚು ಸಂಖ್ಯೆಯವು.
ಕಾಲು ಕೀಳು ಎಂಬ
ನುಡಿಗಟ್ಟಿಗೆ ಕನ್ನಡ ರತ್ನ ಕೋಶದಲ್ಲಿ (ಸಂ. ಹಾಮಾನಾ) ಹೊರಡು ಎಂಬರ್ಥ ಕೊಡಲಾಗಿದೆ. ಇದರಲ್ಲಿ ಎರಡು ರೂಪಕಗಳನ್ನು ಗುರುತಿಸಬಹುದು. ಮನುಷ್ಯರು (ಪ್ರಾಣಿಗಳು) ಸಸ್ಯಗಳುಎಂಬ ರೂಪಕದಿಂದ ವ್ಯಕ್ತಿ ಕಾಲನ್ನು (ಗಿಡವೊಂದನ್ನು ಕಿತ್ತಂತೆ)
ಕೀಳುವುದು ಸಾಧ್ಯ ವಾಗುತ್ತದೆ. ಕಾಲನ್ನು(ಸಸ್ಯವನ್ನು) ಮೊದಲು ನೆಟ್ಟಿರುವುದರಿಂದ ಅದನ್ನು ಕೀಳಲು
ಸಾಧ್ಯ. ನೆಟ್ಟಿರುವುದು, ಅನಂತರ ಕಿತ್ತಿರುವುದು – ಹೀಗೆ ಇಲ್ಲಿ ಸ್ಥಿತಿ ಬದಲಾವಣೆ ಇದೆ. ಕಿತ್ತನಂತರ
ಬದಲಾವಣೆಗಳು ಚಲನೆಗಳು ಎಂಬ ರೂಪಕದಿಂದ ಅಲ್ಲಿಂದ ಚಲಿಸುವುದು ಸಿದ್ಧವಾಗುತ್ತದೆ. ಅಂಶವು ಇಡಿ ಎಂಬ ರೂಪಕದಿಂದ ಕಾಲು ಮಾತ್ರವಲ್ಲ ಇಡೀ ವ್ಯಕ್ತಿ ಚಲಿಸುತ್ತಾನೆ ಎಂದು ಬೋಧೆಯಾಗುತ್ತದೆ.
ಕಾಲಿಗೆ ಬುದ್ಧಿ ಹೇಳು ಎಂಬ ನುಡಿಗಟ್ಟಿಗೆ ಕನ್ನಡ ರತ್ನ ಕೋಶದಲ್ಲಿ
ಓಡು ಎಂದು ಅರ್ಥ ಹೇಳಿದೆ. ಬುದ್ಧಿ ಹೇಳುವುದು ಅನಪೇಕ್ಷಣೀಯ ನಡತೆ ಇದ್ದಾಗ ಮಾತ್ರ ಸಾಧ್ಯ. ವ್ಯಕ್ತಿ
ನಡೆಯುತ್ತಿರುತ್ತಾನೆ. ಒದಗಿರುವ (ಅಪಾಯಕರ) ಸಂದರ್ಭದಲ್ಲಿ ನಡೆಯುವುದು ತಪ್ಪು ನಡವಳಿಕೆ. ಆಗ ಕಾಲು
ಬುದ್ಧಿ ಹೇಳಿಸಿಕೊಳ್ಳುತ್ತದೆ. ಬುದ್ಧಿ ಇಲ್ಲದ (ನಿಧಾನ ನಡೆಯ) ಸ್ಥಿತಿಯಿಂದ ಬುದ್ಧಿ ಬಂದ ಹೊಸ
ಸ್ಥಿತಿಗೆ ಸ್ಥಿತಿ ಬದಲಾವಣೆಯಾಗುತ್ತದೆ. ಬದಲಾವಣೆಯು ಚಲನೆಯಾದ್ದರಿಂದ ಚಲಿಸುತ್ತಿರುವುದು ಮತ್ತೂ
ಹೆಚ್ಚು ಚಲಿಸುತ್ತದೆ. ಅಂದರೆ ಓಡುತ್ತದೆ. ಅಂಶವು ಇಡಿ ಎಂಬ ರೂಪಕದಿಂದ ಕಾಲು ಮಾತ್ರವಲ್ಲ ಕಾಲಿರುವ ವ್ಯಕ್ತಿಯೂ ಓಡುತ್ತಾನೆ.
ವ್ಯಕ್ತಿಯ ತಲೆ ತನ್ನ ಕಾಲಿಗೆಬುದ್ಧಿ ಹೇಳುದಾದ್ದರಿಂದ ಇದೊಂದು ಅರೆ ರೂಪಕವೂ ಆಗಿದೆ.
ಚಕ್ರಹಾಕು ಎಂಬುದಕ್ಕೆ ಕನ್ನಡರತ್ನಕೋಶದಲ್ಲಿ ತಪ್ಪಿಸಿಕೋ ಮೋಸಮಾಡು ಎಂಬ
ಅರ್ಥಗಳನ್ನು ಕೊಟ್ಟಿದೆ. ಚಕ್ರಹಾಕು ಎಂಬುದರ ವಾಚ್ಯಾರ್ಥ ಒಂದೇ ಕಡೆ ನಿಂತು ತಿರುಗವುದು ಅಥವ
ಊರಿನ ಬೀದಿಗಳಲ್ಲಿ ತಿರುಗಾಡುವುದು. ಚಕ್ಕರ್ ಲಗಾನಾ ಎಂಬ ಹಿಂದೂಸ್ತಾನೀ ನುಡಿಗಟ್ಟನ್ನು ಇಲ್ಲಿ
ಸ್ಮರಿಸಬಹುದು. ಅಂದರೆ ಹೋಗಬೇಕಾದಲ್ಲಿಗೆ ಹೋಗದೆ ಮತ್ತೆಲ್ಲೋ ತಿರುಗಾಡುವುದು ಅಥವ ನಿಂತಲ್ಲೇ
ತಿರುಗುತ್ತಿರುವುದು. ಉದ್ದೇಶಿತ ಚಟುವಟಿಕೆಗಳು
ಪ್ರಯಾಣಗಳು ಎಂಬುದು ರೂಪಕ. ಮೇಲಿನ ಎರಡೂ ಸಂದರ್ಭಗಳಲ್ಲಿ ಉದ್ದೇಶಿತ ಚಟುವಟಿಕೆ ಇಲ್ಲ. ಹೀಗಾಗಿ ಪ್ರಯಾಣವಿಲ್ಲ. ಅವನು ಶಾಲೆಗೆ ಚಕ್ರ ಹಾಕಿದ ಎಂದರೆ ಹೀಗೆ
ಅವನು ಶಾಲೆಗೆ ಹೋಗಲಿಲ್ಲವೆಂದೂ, ಅವನು ನನಗೆ ಕೊಡಬೇಕಾದ ದುಡ್ಡನ್ನು ಚಕ್ರ ಹಾಕಿದ ಎಂದರೆ
ಕೊಡಲಿಲ್ಲ ಎಂದೂ ಅರ್ಥವಾಗುತ್ತದೆ. ಚಕ್ರ ಹಾಕುವುದು ಎಂಬುದು ಒಂದು ಸಾಮಾನ್ಯ ಘಟನೆ.
ಗೋರಿತೋಡು ಎಂಬುದಕ್ಕೆ ಕನ್ನಡ ರತ್ನಕೋಶದಲ್ಲಿ ಹಾಳು ಮಾಡಿಕೊಳ್ಳು,
ಹಾಳು ಮಾಡು ಎಂಬ ಅರ್ಥ ಕೊಟ್ಟಿದ್ದಾರೆ. ಇಲ್ಲಿ
ಗೋರಿ ಎಂದರೆ ಹೆಣವನ್ನು ಹೂಳಲು ತೋಡುವ ಗುಂಡಿಯಲ್ಲ. ಹಂದಿಯಂತಹ ಪ್ರಾಣಿಗಳನ್ನು ಹಿಡಿಯಲು ತೋಡುವ
ಗುಂಡಿ. ಇಂತಹ ಗುಂಡಿಯ ಮೇಲೆ, ಗುಂಡಿ ಇದೆ ಎಂಬುದು ಗೊತ್ತಾಗದಂತೆ ಮತ್ತು ಆ ಪ್ರಾಣಿ ಆಕರ್ಷಿತವಾಗುವಂತೆ
ಹುಲ್ಲು ಹರಡಿ ಪೊದೆಯಂತೆ ಭಾಸಗೊಳಿಸಲಾಗಿರುತ್ತಿತ್ತು. ಹಾಗೆ ಒಬ್ಬ ಮನುಷ್ಯ ಇನ್ನೊಬ್ಬನಿಗೆ
ಮಾಡುವುದೆಂದರ್ಥ. ಇಲ್ಲಿ ಲಕ್ಷ್ಯ ಪರಿಧಿ ಮತ್ತು ಮೂಲ ಪರಿಧಿಗಳು ಹೀಗಿವೆ:
ಮೂಲ ಪರಿಧಿ ಲಕ್ಷ್ಯ
ಪರಿಧಿ
ಕಷ್ಟಕ್ಕೊಳಗೊಗಾಗುವ ಮನುಷ್ಯ ಹೊಂಡದಲ್ಲಿ
ಬೀಳುವುದೆಂದು ನಿರೀಕ್ಷಿಸಿರುವ ಪ್ರಾಣಿ
ಕಷ್ಟಕ್ಕೊಳಪಡಿಸುವ ತಂತ್ರ ಪ್ರಾಣಿಯನ್ನು
ತನ್ನೆಡೆಗೆ ಸೆಳೆಯುವ ಹೊಂಡ
ಕಷ್ಟಕ್ಕೊಳಪಡಿಸಲು ತಂತ್ರ ರೂಪಿಸಿದ ಗೋರಿತೋಡುವವ
ಮನುಷ್ಯ
ಹೀಗೆ ಒಬ್ಬನು ಇನ್ನೊಬ್ಬನಿಗಾಗಿ
ಗೋರಿ ತೋಡಿದ ಎಂದರೆ ಮೊದಲನೆಯವನು ಎರಡನೆಯವನನ್ನು ಪ್ರಗತಿಯಾಗದಂತೆ ತಡೆದ ಎಂದರ್ಥವಾಗುತ್ತದೆ.
ತನ್ನನ್ನು ತಾನೆ ಹಾಳು ಮಾಡಿಕೊಂಡ ಎಂಬರ್ಥದಲ್ಲಿ ತನ್ನ ಗೋರಿಯನ್ನು ತಾನೇ ತೋಡಿಕೊಂಡ ಎಂದೂ
ಹೇಳುತ್ತಾರೆ.
ನುಡಿಗಟ್ಟುಗಳಲ್ಲಿ ಸೇರಿರುವ ಪದಗಳು ಯಾವಾಗಲೂ ಹೀಗೆ ರೂಪಕಾತ್ಮಕವಾಗಿಯೇ
ಅರ್ಥ ನೀಡುತ್ತವೆ ಎಂದೇನೂ ಇಲ್ಲ. ಅವುಗಳು ಸಾಮಾನ್ಯಾರ್ಥದಲ್ಲಿಯೂ ಪ್ರಯೋಗವಾಗಬಹುದು. ಉದಾಹರಣೆಗೆ
“ಶಿಶಿಲದ ಜನ ಮೀನುಗಳಿಗೆ ಗೋರಿ ಕಟ್ಟಿ ಮೀನಿನ ಬೃಹತ್ ಸಿಮೆಂಟು ಪ್ರತಿಕೃತಿ ರಚಿಸಿ
ನೆನಪನ್ನು ಶಾಶ್ವತಗೊಳಿಸಿದರು”(ಪ್ರಭಾಕರ ಶಿಶಿಲ) ಎಂಬ ವಾಕ್ಯದಲ್ಲಿ ಸತ್ತ ಮೀನುಗಳನ್ನು ಹೂತು ಅದರ ಮೇಲೆ ಮೀನಿನ ಬೃಹತ್ ಸಿಮೆಂಟಿನ ಪ್ರತಿಕೃತಿಯನ್ನು
ನಿಲ್ಲಿಸಿದರು ಎಂದೇ ಅರ್ಥ.
ನುಡಿಗಟ್ಟುಗಳು ಪರಿಕಲ್ಪನಾ ರೂಪಕಗಳು ಮತ್ತು ಘಟನಾ ರಚನಾತ್ಮಕ ತತ್ವಗಳಿಂದ ರೂಪಿತವಾಗಿವೆ. ಆದರೆ
ಪ್ರತಿಯೊಂದು ನುಡಿಗಟ್ಟನ್ನು ಬಳಸುವಾಗ ಮಾತನಾಡುವವನು ಅಥವ ಕೇಳಿ ಅರ್ಥಮಾಡಿಕೊಳ್ಳುವವನು ಅದರ ರೂಪಕಾತ್ಮಕತೆಯನ್ನು
ಮನಸ್ಸಿಗೆ ತಂದುಕೊಳ್ಳುತ್ತಾನೆ ಎಂದು ಹೇಳಲಾಗುವುದಿಲ್ಲ. ಪ್ರತಿ ಸಂದರ್ಭದಲ್ಲಿ ಲಕ್ಷ್ಯ ಪರಿಧಿಯಿಂದ
ಮೂಲ ಪರಿಧಿಗೆ ನಕ್ಷೆ ಉಂಟಾಗಿಯೇ ಅದರರ್ಥ ಅಭಿವ್ಯಕ್ತವಾಗುವುದಿಲ್ಲ. ಇದಕ್ಕೆ ಈಗ ಬಳಸಲಾಗುತ್ತಿರುವ
ಎಷ್ಟೋ ನುಡಿಗಟ್ಟುಗಳಿಗೆ ಈ ರೀತಿಯ ಮೂಲ-ಲಕ್ಷ್ಯ ಪರಿಧಿಗಳನ್ನು ಸುಲಭವಾಗಿ ಗುರುತಿಸಲಾಗುವುದಿಲ್ಲ
ಎಂಬುದೇ ಪ್ರಮಾಣ. ನುಡಿಗಟ್ಟುಗಳು ಅದೇ ತರಹದ ಸನ್ನಿವೇಶಗಳಲ್ಲಿ ಪದೇಪದೇ ಬಳಕೆಯಾಗಿ ರೂಢಿಗತವಾಗುವುದರಿಂದ
ಈ ಪರಿಸ್ಥಿತಿ ಉದ್ಭವಿಸುತ್ತದೆ.
6.8 ಇವೆಲ್ಲ ಸ್ವಲ್ಪ ಅತಿಯಾಯಿತೆಂದು ಎನಿಸುತ್ತಿದೆಯೇ.
ಇರಬಹುದು. ಉದಾಹರಣೆಗೆ ವಾದವು ಕುಸ್ತಿ ಎಂಬಂತೆ ಬಿಂಬಿಸಿಕೊಳ್ಳುವಾಗ ವಾದಮಾಡುವವರಲ್ಲಿ ಇರುವ ಸಹಕಾರ
ಮನೋಭಾವವನ್ನು ಮರೆತು ಬಿಡುತ್ತೇವೆ.ಸಮಯವನ್ನು ಹಣವೆಂಬಂತೆ ಚಿತ್ರಿಸಿಕೊಳ್ಳುವಾಗ ಸಮಯದ ನಿರಂತರತೆಯನ್ನು
ಗಮನಿಸುವುದಿಲ್ಲ. ಆದರೆ ಯಾವುದೇ ಭಾಷಿಕರು ತಮ್ಮ ಇಡೀ ಸಮುದಾಯದಲ್ಲಿ ಇಂತಹ ಪರಿಕಲ್ಪನೆಗಳನ್ನು ಒಂದೇ
ರೀತಿಯಲ್ಲಿ ಅಳವಡಿಸಿಕೊಂಡಿರುತ್ತಾರೆ ಎಂಬುದು ಆಶ್ಚರ್ಯಕರವಾದರೂ ಸತ್ಯ. ಈ ವ್ಯವಸ್ಥಿತ ರೀತಿ ಒಂದು
ಪರಿಕಲ್ಪನೆಯನ್ನು ಇನ್ನೊಂದರ ನೆರವಿನಿಂದ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಹಿತ್ಯದಲ್ಲಿಯೂ
ಜನಮಾನಸದಲ್ಲಿರುವ ಈ ರೂಪಕಗಳನ್ನು ಲೇಖಕರು ಬಳಸುತ್ತಾರಾದರೂ ಅಷ್ಟೇ ಸರಳವಾಗಿ ಬಳಸಿದಾಗ ಅವು ಓದುಗರ
ಗಮನವನ್ನು ಸೆಳೆಯುವುದಿಲ್ಲ. ಜನಮಾನಸದಲ್ಲಿರುವ ರೂಪಕಗಳನ್ನೇ ವಿಸ್ತಿರಿಸಿ, ವಿವರಿಸಿ, ಪ್ರಶ್ನಿಸಿ,
ಮತ್ತು ಸಂಯೋಜಿಸಿ (ಕೊವೆಕ್ಸಸ್, ಪು45) ತಮ್ಮ ಕಾವ್ಯಗಳಲ್ಲಿ ಅವರು ಉಪಯೋಗಿಸುತ್ತಾರೆ. ಅವರು ಎಲ್ಲ
ಹೊಸದೇ ರೂಪಕಗಳನ್ನು ಬಳಸಿದರೆ ಓದುಗರಿಗೆ ಅರ್ಥ ಮಾಡಿಕೊಳ್ಳಲು ಸುಲಭವೆನಿಸುವುದಿಲ್ಲ; ಅವರು ಭಾಷಿಕ
ಸಮಾಜದಲ್ಲಿ ಪ್ರಚಲಿತವಿರುವ ರೂಪಕವೊಂದನ್ನು ಬಳಸಿ ಅದನ್ನುಆಂಶಿಕವಾಗಿ ವಿಸ್ತರಿಸಿ ವಿವರಿಸವುವುದರ
ಮೂಲಕ ನಕ್ಷೆಯನ್ನು ಪುನರ್ಲೇಖನವಾಗುವಂತೆ ಏರ್ಪಡಿಸುತ್ತಾರೆ ಮತ್ತು ನವೋನವೀನವಾಗಿಸುತ್ತಾರೆ (ಹ್ಯಾನ್ಸ್
ಬೋರ್ಕ್, ಪು 17).ಕಾವ್ಯದಲ್ಲಿರುವ ರೂಪಕಗಳ ಹಿಂದೆ ಹೋಗಿ ಅವುಗಳು ಯಾವ ರೀತಿಯ ಮೂಲರೂಪಕಗಳಿಂದ ಹೊರಹೊಮ್ಮಿವೆ
ಎಂಬುದರ ಒಂದು ವಿಶ್ಲೇಷಣೆ ಅಲ್ಲಿ ಬಳಕೆಯಾಗಿರುವ ರೂಪಕಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.ಕಾವ್ಯ
ಹೆಚ್ಚು ಧ್ವನ್ಯಾತ್ಮಕ ಹೊಳಹುಗಳನ್ನು ಮೂಡಿಸಿ ಅರ್ಥವ್ಯಾಪ್ತಿಯನ್ನು ವಿಶಾಲವಾಗಿಸುತ್ತದೆ.
ಉಪಮಾ
ಒಂದರಂತೆ ಇನ್ನಂದು ಎಂದು ತೋರಿಸುತ್ತದೆ; ರೂಪಕ ಒಂದನ್ನು ಇನ್ನೊಂದರೊಡನೆ ಸಮೀಕರಿಸುತ್ತದೆ.
6.9 ಪದ್ಯವೊಂದನ್ನು ಕಾಗ್ನಿಶನ್ ತಂತ್ರಗಳ ದೃಷ್ಟಿಯಿಂದ ಹೇಗೆ
ವಿಶ್ಲೇಷಿಸಬಹುದೆಂಬುದಕ್ಕೆ ಬೇಂದ್ರೆ ಇವರ ಈ ಪದ್ಯವನ್ನು ಪರಿಶೀಲಿಸಬಹುದು:
ಕುರುಡು ಕಾಂಚಾಣ ಕುಣಿಯುತಲಿತ್ತು I
ಕಾಲಿಗೆ
ಬಿದ್ದವರ ತುಳಿಯುತಲಿತ್ತೋ II
ಕುರುಡು
ಕಾಂಚಾಣ II ಪಲ್ಲ II
೧
ಬಾಣಂತಿಯೆಲುಬ
ಸಾ -
ಬಾಣದ ಬಿಳುಪಿನಾ
ಕಾಣದ
ಕಿರುಗೆಜ್ಜೆ ಕಾಲಾಗ ಇತ್ತೊ ;
ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ
ಜೋಮಾಲೆ ಕೊರಳೊಳಗಿತ್ತೋ ;
ಬಡವರ ಒಡಲಿನ
ಬಡಬಾsನಲದಲ್ಲಿ
ಸುಡು ಸುಡು
ಪಂಜು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ
ಮೈ -
ದುಂಬಿದಂತುಧೊ
ಉಧೊ ಎನ್ನುತಲಿತ್ತೊ ;
ಕೂಲಿ
ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ
ಹಣೆಯೊಳಗಿತ್ತೊ ;
೨
ಗುಡಿಯೊಳಗೆ
ಗಣಣ, ಮಾ -
ಹಡಿಯೊಳಗೆ ತನನ,
ಆಂ -
ಗಡಿಯೊಳಗ ಝಣಣಣ
ನುಡಿಗೊಡುತಿತ್ತೋ ;
೩
ಹ್ಯಾಂಗಾರ
ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ,
ಹೆಗಲಲಿ ಎತ್ತೋ.
- ದ.ರಾ. ಬೇಂದ್ರೆ
' ನಾದಲೀಲೆ
ಇಲ್ಲಿ ಮೊದಲ ಮೂರು ಸಾಲುಗಳಲ್ಲಿ ಕುರುಡು ಕಾಂಚಾಣ ಎಂಬ ರೂಪಕ
ಮುಖ್ಯವಾಗಿ ಬಳಕೆಯಾಗಿದೆ. ಕುರುಡು ಎಂದರೆ ಬೆಳಕು ಕಾಣದ್ದು ಅಥವ ಕಪ್ಪು. ಅಂದರೆ ಇಲ್ಲಿ
ಪ್ರಸ್ತಾವಿಸುತ್ತಿರುವುದು ಕಪ್ಪು ಕಾಂಚಾಣ. ಕೆಟ್ಟದ್ದು ಕಪ್ಪು
ಎಂಬ ರೂಪಕ ಇಲ್ಲಿ ಬಳಕೆಯಾಗಿದೆ. ಕಾಂಚಾಣ ಎಂಬುದನ್ನು ದುಡ್ಡು
ಎಂಬರ್ಥದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದಾದರೂ ಇದು ಕಾಂಚನ ಎಂಬುದರ ರೂಪವಾಗಿದ್ದು ಸಂಪತ್ತು
ಎಂಬ ಅರ್ಥ ಹೊಳೆಯುತ್ತದೆ. ಈ ರೂಪಕದಿಂದ ಕುರುಡು ಕಾಂಚಾಣ ಎಂದರೆ ಕೆಟ್ಟ ಸಂಪತ್ತು ಎಂದಾಗುತ್ತದೆ. ಅಂದರೆ ಕಾಳಸಂತೆಯ,
ಭ್ರಷ್ಟ ರೀತಿಯ ಸಂಪಾದನೆಯ ಹಣ. ಅದು ‘ಕುಣಿಯುವುದು’ ಎಂದು ಹೇಳುವುದು ಮಾನವ ಗುಣ ಆರೋಪಣೆಯಿಂದ.
ಇದು ಅಸ್ತಿತ್ವ ಮಹಾ ಸರಪಳಿ ರೂಪಕ. ಕುಣಿಯುವುದು ಇಲ್ಲಿ ಮಾದಕ ವಸ್ತು ಸೇವಿಸಿ ಬುದ್ಧಿಯ ಸ್ತಿಮಿತ
ಕಳೆದುಕೊಂಡ ಸ್ವಭಾವವಾಗಿ ಕಾಣಿಸಿಕೊಳ್ಳುತ್ತದೆ. ಬುದ್ಧಿ ಸ್ತಿಮಿತವಿಲ್ಲದಿರುವುದು ಅನಾಹುತಗಳಿಗೆ
ಕಾರಣವಾಗುತ್ತದೆ. ಮುಂದಿನದೂ ಕೂಡ ಇದೇ ಗುಂಪಿನ ರೂಪಕಗಳಲ್ಲೊಂದು. ಮುತ್ತಿಡುವುದು ಉತ್ತಮಿಕೆ; ತುಳಿಯುವುದು
ನೀಚತನ. ತಲೆಯ ಭಾಗ ಮೇಲ್ತನ, ಕಾಲಿನ ಭಾಗ ಕೀಳ್ತನ ಎಂಬುದು ಇಲ್ಲಿ ಬಳಕೆಯಾಗಿರುವ ರೂಪಕ. ಅದರ
ಕಾಲಿನಲ್ಲಿ ಬಿಳಿಯ ಎಲುಬಿನ ಕಿರುಗೆಜ್ಜೆ ಇದೆ. ಒಳ್ಳೆಯದು ಬಿಳುಪು ಎಂಬ ರೂಪಕದಿಂದ ಕಿರುಗೆಜ್ಜೆ
ಒಳ್ಳೆಯದು ಮತ್ತು ಕೆಟ್ಟ ಕಾಂಚಾಣ ಅದಕ್ಕೆ ನೀಚಸ್ಥಾನವನ್ನುಕೊಡುತ್ತದೆ. ಮಹಾ ಸರಪಳಿ ರೂಪಕದಿಂದ
ಮಾನವ ದೇಹದ ಶಿರೋಭಾಗ ಉತ್ತಮವೂ ಕಾಲಿನ ಭಾಗ ನೀಚವೂ ಆಗಿ ಬಳಕೆಯಾಗುವುದೇ ಈ ಅರ್ಥವನ್ನೂ
ಹೊಳೆಸುತ್ತದೆ. ಕಪ್ಪು ಬಣ್ಣವನ್ನು ಕುರುಡುತನಕ್ಕೆ ವಿಸ್ತರಿಸಿರುವುದು ಮತ್ತು ಕುರುಡುತನವೆಂಬ
ಪ್ರಾಣಿ ಗುಣವನ್ನು ಜಡ ಕಾಂಚಾಣಕ್ಕೆ ಆರೋಪಿಸಿರುವುದು ಕವಿ ಮೆರೆದಿರುವ ವೈಶಿಷ್ಟ್ಯ.
ಮುಂದಿನ ಸಾಲುಗಳಲ್ಲಿ
ತಣ್ಣನ್ನ ಜೋಮಾಲೆ ಕೊರಳೊಳಗಿದೆ. ಮರಣವು ತಣುವು
ಎಂಬ ರೂಪಕದಿಂದ ಯಾವ ಕಣ್ಣುಗಳಿಂದ ಈ ತಣ್ಣನೆಯ ಜೋಮಾಲೆ ಆಗಿದೆಯೋ ಆ
ಕಂದಮ್ಮಗಳು ಮರಣಿಸಿವೆ ಎಂಬುದು ಸೂಚಿತವಾಗಿದೆ. ಕಣ್ಣು ಮತ್ತು ಕವಡಿಗಳಿಗಳಿಗಿರುವ ರೂಪಸಾದೃಶ್ಯ
ಕಣ್ಣಿನ ಕವಡಿ ಎಂಬ ರೂಪಕವನ್ನು ಸೃಷ್ಟಿಸಿದೆ. ಇಲ್ಲಿ ಜೀವಂತ ವಸ್ತುವನ್ನು
ಜಡವಸ್ತುವನ್ನಾಗಿಸಿದೆ. ಜೀವವು ಜಡ ಎಂಬ ರೂಪಕವುಇಲ್ಲಿದೆ. ಜಡವಸ್ತವು ಚಲನೆ ಇಲ್ಲ. ಅಂದರೆ
ಸಾಮಾನ್ಯವಾಗಿ ಚಂಚಲವಾಗಿರುವ ಕಣ್ಣು ಚಲಿಸುವುದಿಲ್ಲ. ಜಡವಸ್ತುವನ್ನು ನಾವು ಹೇಗೆ ಬೇಕೋ ಹಾಗೆ
ಬಳಸ ಬಹುದು. ಜಡವಸ್ತುಗಳು ಆಲಂಕಾರಿಕ ವಸ್ತುಗಳು. ಹಾಗೆ ಅವುಗಳನ್ನು ಮಾಲೆ ಮಾಡಿ ಕೊರಳಲ್ಲಿ
ಧರಿಸಿದೆ. ಅಲ್ಲದೆ ಹೆಚ್ಚು ಬೆಲೆ ಹೆಚ್ಚು ಗೌರವ ಮತ್ತು ಕಡಿಮೆ ಬೆಲೆ ಕಡಿಮೆ ಗೌರವ; ಆದ್ದರಿಂದ
ಕಂದಮ್ಮಗಳ ಕಣ್ಣನ್ನು ಮೌಲಯ್ಹೀನವೆಂದೆನಿಸಿ ನೋಡಿ ಇದಕ್ಕೆ ಇಷ್ಟೇ ಬೆ ಲೆ ಎಂದು ಅಣಕಿಸಿ
ತೋರುವಂತೆ ಕೊರಳಲ್ಲಿ ಧರಿಸಿದೆ. ಪ್ರಪಂಚದಲ್ಲಿರುವುದೆಲ್ಲ ಹೀಗೆ ದ್ರವ್ಯಾತ್ಮಕ ಮೌಲ್ಯ
ಉಳ್ಳುದಾಗುತ್ತದೆ. ಅದರೆ ಕಂದಮ್ಮಗಳ ತಂದೆತಾಯಿ ಮತ್ತು ಅವರ ಸಂಬಂಧಿಗಳಿಗೆ ಕಣ್ಣಲ್ಲಿ ನೀರು
ತುಂಬಿ ಹರಿಯುತ್ತದೆ. ಕಾಂಚಾಣ ಕುರುಡಾದ್ದರಿಂದ ಇದನ್ನು ಗಮನಿಸುವುದಿಲ್ಲ.
ಮೊದಲೇ ಮತ್ತೇರಿದ ಸಂಪದಸುರ ಕಂದಮ್ಮಗಳ ತಾಯ್ತಂದೆಯರ ಕಂಬನಿಗಳನ್ನು
ಕುಡಿದು ಮದ ಮತ್ತಷ್ಟು ಏರಿ ಆವೇಶಗೊಂಡಂತೆ ಉಧೋ
ಉಧೋ ಎಂದು ಹಾರಿ ಹಾರಿ ಕುಣಿಯುತ್ತದೆ. ಕುಡಿತವು ಅಪಾಯಕಾರಿ ಮತ್ತು ಕುಡಿತವು ವಿನಾಶ ಎಂಬ ಜಾನಪದ
ನಂಬಿಕೆಗಳು ಇಲ್ಲಿ ಪಡಿಮೂಡಿವೆ. ಹೀಗೆ ಅತಿಮತ್ತಿಗೆ ಕಾರಣವಾದ ಈ ಕಂಬನಿ, ಕುಡಿತ ಕಾಂಚಾಣಾಸುರನನ್ನು
ವಿನಾಶದ ಹೊಸ್ತಿಲಿಗೆ ತಂದು ನಿಲ್ಲಿಸುತ್ತದೆ. ಕೂಲಿ ಕುಂಬಳಿಯವರು (ಶ್ರಮಿಕರು) ಹಗಲೆಲ್ಲ ಹೊಲದಲ್ಲಿ,
ರಸ್ತೆಯಲ್ಲಿ ದುಡಿದು ಮೈಯೆಲ್ಲ ಧೂಳು ಮಾಡಿಕೊಂಡಿದ್ದಾರೆ. ಕೂಲಿ ಕುಂಬಳಿಯವರು ಅಲ್ಲಿಗೆ
ಬಂದಿದ್ದಾರೆಂಬುದು ಆಗ ಸಂಜೆಯಾಗಿತ್ತೆಂಬುದನ್ನು ಸೂಚಿಸುತ್ತಿದೆ. ತಾನು ಏನು
ಮಾಡುತ್ತಿದ್ದೇನೆಂಬುದರ ಬಗ್ಗೆ ಎಚ್ಚರವೇ ಇಲ್ಲದ ಸಂಪದಸುರ ಅವರ ಮೈಗೆ ಹತ್ತಿಕೊಂಡಿರುವ
ಧೂಳನ್ನೆಲ್ಲ ಕೈಯಿಂದ ಬಳಿದು ತನ್ನ ಹಣೆಗೆ ಮೆತ್ತಿಕೊಳ್ಳುತ್ತಾನೆ – ಧೂಳಿಯ ಭಂಡಾರ
ಹಣೆಯೊಳಗಿತ್ತೋ.
ಮುಂದಿನ ಪದ್ಯವು ಈ ಕಾಂಚಾಣಾಸುರನ ಕುಣಿತದ ಪರಿಣಾಮ ಚಿತ್ರಣ. ಕಾರಣಗಳು ಬಲಗಳು ಎಂಬ ರೂಪಕವಿದೆ. ಈ ಕುಣಿತವು ಒಂದು ಕಾರಣವೆಂದಾದರೆ ಈ ಕಾರಣವು ಪ್ರಯೋಗಿಸುವ ಬಲ ಗುಡಿಯೊಳಗಿನ
ಗಂಟೆಯನ್ನು (ಅಕಾಲದಲ್ಲಿ) ಅಲುಗಿಸಿ ಗಣಗಣ ಎನಿಸುತ್ತದೆ; ಮಹಡಿ ಮೇಲಿರುವ ಸಂಗೀತೋಪಕರಣಗಳಿಂದ (ಅಸಂಬದ್ಧ)
ತನನ ಧ್ವನಿ ಹೊರಡಿಸುತ್ತದೆ; ಅಂಗಡಿಯೊಳಗಿನ ಖಜಾನೆಯಿಂದ ಹಣ ಕೆಳಗೆಲ್ಲ ಬಿದ್ದು ಚದರಿ ಝಣಝಣ ಶಬ್ದವಾಗುವಂತೆ
ಮಾಡುತ್ತದೆ. [ಜನರೆಲ್ಲ ಇದರಿಂದ ಅವಾಕ್ಕಾಗುತ್ತಾರೆ]. ಈ ಪದ್ಯವನ್ನು 2ನೆಯ ಭಾಗವಾಗಿ ಕವಿ
ಗುರುತಿಸಿರುವುದನ್ನು ಗಮನಿಸಬೇಕು.
ಹ್ಯಾಂಗಾರ
ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ,
ಹೆಗಲಲಿ ಎತ್ತೋ.
ಇದು ಪದ್ಯದ ಮೂರನೆಯ ಭಾಗ.
ಎರಡನೆಯಭಾಗವು ಕಾಂಚಣಾಸುರನ ಕುಣಿತದಿಂದ ಸಮಾಜದಲ್ಲುಂಟಾಗುವ ತಲ್ಲಣಗಳನ್ನು ಚಿತ್ರಿಸಿದರೆ ಮೂರನೆಯ
ಭಾಗವು ವಿವಿಧವಾಗಿ ಮತ್ತೇರಿಸಿಕೊಂಡು ಇನ್ನಿಲ್ಲದಂತೆ ಕುಣಿದದ್ದರಿಂದ ತಾನು ತಲುಪುವ ಗತಿಯನ್ನು
ಚಿತ್ರಿಸುತ್ತದೆ. ನಿಜವಾಗಿ ಸಮ್ಮತವಾಗಿ ಕುಣಿಯಲು ಬಾರದು ಇದಕ್ಕೆ. ಆದ್ದರಿಂದ ಅದರ ಕುಣಿತವೆಲ್ಲ ಮಂಗಾಟ. ಇಲ್ಲಿ ಮನುಷ್ಯ ಪ್ರಾಣಿ ಎಂಬ ರೂಪಕ ಕೆಲಸ ಮಾಡುತ್ತಿದೆ. ಮಂಗವು ಚಂಚಲ ಮತ್ತು ಗುರಿಯಿಲ್ಲದ ಚಟುವಟಿಕೆಯ ಸಂಕೇತ. ಈ
ಕಾಂಚಾಣವೂ ಹಾಗೆ ಕುಣಿದು ಸಂಜೆಯ ಹೊತ್ತು ಶ್ರಮಿಕರ ಮೈದೊಗಲ ಧೂಳಿಯಿಂದ ಅಲಂಕಾರ ಮಾಡಿಕೊಂಡು ತನ್ನ
ಅಂತಿಮ ಕ್ಷಣವನ್ನು ಕಾಣುತ್ತದೆ; ಅಂಗಾತ ಬೀಳುತ್ತದೆ. ಬಿದ್ದಮೇಲೆ ಇತರರು ಅದನ್ನು ಹೆಗಲಲ್ಲಿ
ಎತ್ತುತ್ತಾರೆ. ಇದರ ವಾಚ್ಯಾರ್ಥ ಶವದ ಉತ್ತರಕ್ರಿಯೆಗಾಗಿ ಎಂದಾಗುತ್ತದೆ. ಆದರೆ ಏಳುವುದು ಉನ್ನತಿ (ಬೀಳುವುದು ಅವನತಿ) ಎಂಬ ರೂಪಕದಿಂದ ಕುರುಡು ಕಾಂಚಾಣವನ್ನು ಸಂಪೂರ್ಣವಾಗಿ ನಾಶವಾಗದಂತೆ
ಇಲ್ಲಿರುವವರೇ ರಕ್ಷಿಸುತ್ತಾರೆ ಎಂಬ ಧ್ವನಿ ಹೊರಡುತ್ತದೆ. ಹೀಗಾಗಿ ಕುರುಡು ಕಾಂಚಾಣದ ಮತ್ತು
ಸಜ್ಜನಿಕೆಯ ಸಂಘರ್ಷದ ನಿರಂತರತೆ ಸೂಚಿತವಾಗಿದೆ.
ಇಡೀ ಪದ್ಯವನ್ನು ಒಂದು ಪ್ರತಿಮಾ ರೂಪಕವನ್ನಾಗಿಯೂ ನೋ ಡಬಹುದು. ಈಗ ಈ ಪದ್ಯಕ್ಕೆ ಅಂತರಜಾಲದಲ್ಲಿ
ಲಭ್ಯವಿರುವ ಟಿಪ್ಪಣಿಗಳಲ್ಲಿ ಇಂತಹ ರೂಪಕವನ್ನು ಗುರುತಿಸಬಹುದು. ಎಲ್ಲಮ್ಮ ಜಾತ್ರೆಯಲ್ಲಿ ಎಲ್ಲಮ್ಮ ಪಾತ್ರಿ ಕಂಡು ಬರುತ್ತಾಳೆ. ಇದೊಂದು ವಿಶಿಷ್ಟವಾದ
ಸಾಂಸ್ಕೃತಿಕ ಸಂದರ್ಭವನ್ನು ಪದ್ಯಕ್ಕ ಒದಗಿಸುತ್ತದೆ. ಪದ್ಯದಲ್ಲಿರುವ ಕೊರಳಲ್ಲಿ ಜೋಮಾಲೆ, ಕೈಯಲ್ಲಿ
ಪಂಜು, ಹಣೆಯಲ್ಲಿ ಭಂಡಾರ ಇತ್ಯಾದಿ ಪದಗಳು ಇದು ಜೋಗತಿಯೊಂದಿಗೆ ಇರುವ ಪ್ರತಿಮಾ ರೂಪಕ ಎಂಬುದನ್ನು
ಸೂಚಿಸುತ್ತಿದೆ. ಎಲ್ಲಮ್ಮ ಜೋಗತಿ ಎಂದರೆ ಎಲ್ಲಮ್ಮನ
ಆವೇಶವಾಗಿರುವ ಜೋಗತಿ. ಆವೇಶವಾಗುವ ಮುನ್ನ ಜೋಗತಿ ವಿಶಿಷ್ಟ ವೇಷಭೂಷಣಗಳನ್ನು ತೊಡಬೇಕಾಗುತ್ತದೆ. ಕೊರಳಲ್ಲಿ
ಕವಡೆಯ ಜೋಮಾಲೆ, ಕೈಯಲ್ಲಿ ಪಂಜು, ಹಣೆಯಲ್ಲಿ ಅರಿಶಿನ ಭಂಡಾರ,ತೀರ್ಥೋದಕ ಪಾನ ಇತ್ಯಾದಿಗಳಲಂಕಾರ ಜೋಗತಿಯ ಸ್ವರೂಪ. ಆವೇಶವಾದಾಗ ಎಲ್ಲಮ್ಮ ಜೋಗತಿ ವಿಶಿಷ್ಟ
ರೀತಿಯಲ್ಲಿ ಕುಣಿಯುತ್ತಾಳೆ. ಭಕ್ತರು ನಮಸ್ಕರಿಸುತ್ತಾರೆ. ಎಲ್ಲಮ್ಮ ಆಶೀರ್ವಾದಿಸುತ್ತಾಳೆ. ಈ ಇಡೀ
ಪ್ರತಿಮೆಯನ್ನು ಕಾಂಚಾಣಾವಿಷ್ಟ ಜೋಗತಿಯೊಂದಿಗೆ ಸಮೀಕರಿಸಿ
ಕಾಂಚಾಣ ಜೋಗತಿಯು ಎಲ್ಲಮ್ಮ ಜೋಗತಿ ಎಂಬ ಪ್ರತಿಮಾರೂಪಕವಾಗಿ ಪರಿಣಮಿಸುತ್ತದೆ. ಎಲ್ಲಮ್ಮ ಜೋಗತಿಯ
ಗುಣಲಕ್ಷಣಗಳು ಲಕ್ಷ್ಯ ಪರಿಧಿಯೂ, ಕಾಂಚಾಣ ಜೋಗತಿಯ ಗುಣ ಲಕ್ಷಣಗಳು ಮೂಲಪರಿಧಿಯೂ ಆಗಿ ವರ್ತಿಸುತ್ತವೆ.
‘ಎಲ್ಲಮ್ಮ ಜೋಗತಿ ಭಕ್ತಿಯ ಉನ್ಮಾದಲ್ಲಿದ್ದರೆ, ಕಾಂಚಾಣ ಜೋಗತಿ ದುಡ್ಡಿನ ಉನ್ಮಾದದಲ್ಲಿದ್ದಾಳೆ’.
ಕಾಲಿಗೆ ಬಿದ್ದವರನ್ನು ಎಲ್ಲಮ್ಮ ಜೋಗತಿ ಆಶೀರ್ವದಿಸುತ್ತಾಳೆ; ಕಾಂಚಾಣ ಜೋಗತಿ ತುಳೀಯುತ್ತಾಳೆ. ಎಲ್ಲಮ್ಮ
ಜೋಗತಿಯು ಕಾಲಲ್ಲಿಬೆಳ್ಳಿಯ ಕಿರುಗೆಜ್ಜೆಗಳನ್ನು ಧರಿಸಿರುತ್ತಾಳೆ; ಕಾಂಚಾಣ ಜೋಗತಿಯು ಬಾಣಂತಿಯ ಎಲುಬಿನಿಂದ
ಮಾಡಿದ ಕಿರುಗೆಜ್ಜೆಯನ್ನು ಕಟ್ಟಿಕೊಂಡು ಮಾಟಮಾಡುವ ಮಾಟಗಾತಿಯಾಗುತ್ತಾಳೆ. ಕವಡಿಗಳ ಜೋಮಾಲೆಯ ಬದಲು
ತಾನೆ ಕೊಂದ ಬಾಣಂತಿಯ ಕಂದಮ್ಮಗಳ ಕಣ್ಣುಗಳನ್ನು ಕಿತ್ತು ಅದರ ಮಾಲೆ ಧರಿಸುತ್ತಾಳೆ. ಇವಳ ಕೈಯಲ್ಲಿರುವ
ಪಂಜು ಬಡವರ ಒಡಲಿನಿಂದ ಎದ್ದು ಬಡಬಾನಲದ ವಿನಾಶ ಸಾಮರ್ಥ್ಯದ
ಉರಿ (ಸುನಾಥ,2014 ಸಲ್ಲಾಪದಲ್ಲಿ). ಎಲ್ಲಮ್ಮ ಜೋಗತಿಯ ಲಕ್ಷಣಗಳು ಹೀಗೆ ಕಾಂಚಾಣ ಜೋಗತಿಯೊಂದಿಗೆ ನಕ್ಷೀಕೃತವಾಗಿ
ಪ್ರತಿಮಾ ರೂಪಕ ಪೂರ್ಣಗೊಳ್ಳುತ್ತದೆ; ಕ್ರೌರ್ಯದ ಭೂತ
ನಮ್ಮ ಮುಂದೆ ನಿಲ್ಲುತ್ತದೆ. ಈ ಭೂತ ತನಗೆ ತಾನೆ ನಶಿಸಿದಂತೆನಿಸಿದರೂ ಮತ್ತೆ ಎದ್ದು ಬರುವ ಸೂಚನೆ
ಇದೆ.
ಹೀಗೆ ವಿಸ್ತರಿಸುವುದು ವಿವರಿಸುವುದರ ಜೊತೆಗೆ ಪ್ರತಿಮಾ ರೂಪಕಗಳ ಸೃಷ್ಟಿ ಕಾವ್ಯಗಳಲ್ಲಿ ಕಂಡು
ಬರುವ ವಿಶಿಷ್ಟ ವಿದ್ಯಮಾನ.
6.10 ಕಥಾ ಕಾವ್ಯಗಳಲ್ಲಿ
ಕಥೆಯ ಹಿನ್ನೆಲೆ ಸೂಕ್ತ ಸಂದರ್ಭವನ್ನೊದಗಿಸುತ್ತವೆ. ಅಲ್ಲಿಯ ಪಾತ್ರಗಳ ಚರಿತ್ರೆಯೇ ಒಂದು ಹಿನ್ನೆಲೆಯಾಗಿ
ನಿಂತು ರೂಪಕಗಳು ವಿವರವಾಗಿ ಮನಸ್ಸಿಗೆ ತಟ್ಟುತ್ತವೆ. ಈ ನಿಟ್ಟಿನಲ್ಲಿ ರೂಪಕ ಸಾಮ್ರಾಜ್ಯ ಚಕ್ರವರ್ತಿ
ಎಂದೇ ಖ್ಯಾತನಾದ ಕುಮಾರವ್ಯಾಸನ ಒಂದೆರಡು ಪದ್ಯಗಳನ್ನು ಪರಿಶೀಲಿಬಹುದು. ಕೆಳಗೆ ಉದಾಹರಿಸಿರುವ ಪದ್ಯ
ದ್ರೌಪದೀ ವಸ್ತ್ರಾಪಹರಣ ಸಂದರ್ಭದಲ್ಲಿ ವಿದುರ ದುರ್ಯೋಧನನಿಗೆ ಹೇಳುವ (ಅ)ಹಿತ ವಚನಗಳು:
ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರವಹ್ನಿಯೊ
ಳಡಬಳವ ಸುಡಬಗೆದೆಲಾ ಮರುಳೆ ಮಹೀಪತಿಯೆ
ಹೆಡತಲೆಯ ತುರಿಸುವರೆ ಹಾವಿನ
ಹೆಡೆಯನಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ
ಪಾಂಡವರು
ಲೆತ್ತದಲ್ಲಿ ಸೋತನಂತರ ದುರ್ಯೋಧನ ದ್ರೌಪದಿಯನ್ನು ಎಳೆತರುವಂತೆ ದುಶ್ಶಾಸನನಿಗೆ ಹೇಳಿದಾಗ ಸನ್ಮ್ನಸ್ಸಿನ
ವಿದುರ ದುರ್ಯೋಧನನನ್ನು ಎಚ್ಚರಿಸುವ ಮಾತುಗಳಿವು. ಕಾಲುನೋವು ನಿವಾರಿಸಿಕೊಳ್ಳಲು ಬಿಸಿ ಮಾಡಿದ ಉಪ್ಪು,
ಮರಳು ಅಥವ ನೀರಿನ ಪೊಟ್ಟಣದಿಂದ ಕಾಲಿನ ನೋವಿರುವ ಭಾಗವನ್ನು ನೇವರಿಸುವುದು ಸಹಜ; ಯಾರಾದರೂ ಸಿಡಿಲ
ಪೊಟ್ಟಣದಿಂದ ನೋವನ್ನು ನಿವಾರಿಕೊಳ್ಳಲು ಸಾಧ್ಯವೇ? ಈ ರೂಪಕದಿಂದ ದುರ್ಯೋಧನ ವಿನಾಶದ ಕಡೆಗೆ ಸರಿಯುತ್ತಿರುವ
ಸೂಚನೆಯನ್ನು ಕವಿ ಇಲ್ಲಿ ನೀಡುತ್ತಿದ್ದಾನೆ. ಇಲ್ಲಿ ‘ಬೆಚ್ಚಗಿರುವುದು
ಸುಖಕರವು’, ‘ದ್ವೇಷವು ಸುಡುವುದು’, ‘ವಿನಾಶವು ಸುಡುವುದು’, ‘ಕ್ರೋಧವು ಒಂದು ಸ್ಫೋಟ’ ಎಂಬಿವುಗಳನ್ನು
ಸಮ್ಮಿಳಿಸಿ ವಿಸ್ತರಿಸಿದೆ ಎನ್ನಬಹುದು. ಈ ಪರಿಕಲ್ಪನಾತ್ಮಕ ರೂಪಕಗಳು ಸಾಮಾನ್ಯಜನರ ಮನಸ್ಸಿನಲ್ಲಿ
ಸಹಜವಾಗಿರುವಂತಹವು ಮತ್ತು ಭಾಷಾ ವ್ಯವಹಾರದಲ್ಲಿರುವುವು. ಸಿಡಿಲ ಪೊಟ್ಟಣದಿಂದ ಶಾಖ ಕೊಡುವುದೆಂದರೆ
ವಿನಾಶಕರ ಸುಡುವಿಕೆಗೆ ಆಹ್ವಾನ.ದ್ರೌಪದಿಯನ್ನು ಸಭೆಗೆ ಕರೆದು ಅವಮಾನಿಸುವುದೆಂದರೆ ಸಿಡಿಲ ಪೊಟ್ಟಣದಿಂದ
ನೋವು ನಿವಾರಿಸಿಕೊಳ್ಳಲು ಯತ್ನಿಸಿದಂತೆ ಎಂಬುದು ಹೀಗೆ ಒಂದು ಅದ್ಭುತ ರೂಪಕವಾಗಿ ಮೂಡಿದೆ. ತನ್ನ ವಿನಾಶವನ್ನು
ತಾನೆ ಆಹ್ವಾನಿಸಿಕೊಳ್ಳುವುದು ಎಂಬುದು ಇಲ್ಲ ಧ್ವನಿತವಾಗುವ ಅರ್ಥ. ದುರ್ಯೋಧನ ತನ್ನ ಕ್ರೋಧದ ಆವೇಶದಲ್ಲಿ
ದ್ರೌಪದಿಯನ್ನು ಕರೆದು ಅವಮಾನಿಸಿದರೆ ಕ್ರೋಧವು ಸ್ಫೋಟಗೊಂಡು ತನ್ನ ವಿನಾಶವನ್ನೇ ತರುವುದೆಂಬುದನ್ನು
ಕುಮಾರವ್ಯಾಸ ಹೀಗೆ ವರ್ಣಿಸಿದ್ದಾನೆ.
ಮೊದಲನೆಯ ರೂಪಕವನ್ನು ಪ್ರಕೃತಿಯ ಭೀಕರ ಘಟನೆಯೊಂದರಿಂದ ರೂಪಿಸಿದ ಕವಿ ಎರಡನೆಯದನ್ನು ಪೌರಾಣಿಕ
ಅಂಶವೊಂದರಿಂದ ಬಿಡಿಸಿದ್ದಾನೆ. ‘ಹರ ನೇತ್ರವಹ್ನಿಯೊಳಡಬಳವ ಸುಡುವುದು’ ಮೊದಲ ರೂಪಕದ್ದೇ ಮುಂದುವರಿಕೆ
ಎನ್ನಬಹುದಾದರೂ ಇದು ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಸಮಗ್ರವಾಗಿ ಮತ್ತು ವ್ಯಗ್ರವಾಗಿ ಚಿತ್ರಿಸುವಂತಹದು.ಶಿವ
ಮೂರನೆಯ ಕಣ್ತೆರೆದಾಗ ಪ್ರಳಯ ಕಾಲದ ನಾಶ ಉಂಟಾಗುವುದೆಂಬುದು ಜನರ ಮನಸ್ಸಿನಲ್ಲಿ ನೆಲೆಗೊಂಡಿರುವ ನಂಬಿಕೆ,
ಪರಿಕಲ್ಪನೆ. ಹೀಗೆ ಹರನೇತ್ರವಹ್ನಿ ಎಂದರೆ ಪ್ರಳಯಕಾಲದ
ನಾಶ. ಸಾಮಾನ್ಯ ಬೆಂಕಿಯಲ್ಲಿ ಅಡಬಳವ ಸುಡುವುದು ಸುಖಕರವು; ಹರನ ಮೂರನೆಯ ಕಣ್ಣನ್ನು ತೆರದಾಗ ಬರುತ್ತಿರುವುದು
ವಿಶ್ವವಿನಾಶವನ್ನು ತರುವ ಅಗ್ನಿ ಕ್ಷಿಪಣಿ. ಇಂತಹ ಬೆಂಕಿಯಲ್ಲಿ ಅಡಬಳವ ಸುಟ್ಟರೆ ಏನಾದೀತು? ಹಿಂದಿನ
ಉದಾಹರಣೆಯಲ್ಲಿ ಸಿಡಿಲು ಆತ್ಮ ವಿನಾಶವನ್ನು ತರುವಂತಹುದಾದರೆ ಇಲ್ಲಿ ಹೊರ ತೂರುವ ಬೆಂಕಿ ವಿಶಾಲ ವಿನಾಶವನ್ನೇ
ತರುತ್ತದೆ. ‘ದ್ವೇಷವು ಸುಡುವುದು’, ‘ವಿನಾಶವು ಸುಡುವುದು’,
ಎಂಬ ರೂಪಕಗಳೇ ಇಲ್ಲೂ ಇವೆ. ಇವುಗಳನ್ನು ಶಿವನ ಮೂರನೆಯ ಕಣ್ಣಿನ ಬೇಂಕಿಯೊಂದಿಗೆ ಸಮೀಕರಿಸಿ ವಿಶ್ವ
ವಿನಾಶಕ್ಕೆ ವಿಸ್ತರಿಸಿರುವುದು ಇಲ್ಲಿ ಕವಿಯ ವೈಶಿಷ್ಟ್ಯ. ದುರ್ಯೋಧನನ್ನು ಮಾತ್ರವಲ್ಲ, ಕೌರವರನ್ನು
ಮಾತ್ರವಲ್ಲ, ವಿಶ್ವದ ಸುಸಂಸ್ಕೃತ ಎಳೆಗಳೆಲ್ಲವನ್ನೂ ನಾಶಮಾಡದೆ ಬಿಡದು. ಸಸ್ಯ ಮತ್ತು ಪ್ರಾಣಿ ಸಂಕುಲಗಳೆಲ್ಲ
ನಾಶವಾಗಿ ಇದುವರೆಗೆ ಬೆಳೆದು ಬಂದ ವಿಚಾರವಂತಿಕೆ ಸಾಮಾಜಿಕತೆಗಳೆಲ್ಲ ನಾಶವಗುವುವು. ದ್ರೌಪದಿಯನ್ನು
ಸಭೆಗೆ ಕರೆತಂದು ಅವಮಾನಿಸುವುದೆಂದರೆ ಇದೇ ತರಹದ ಅನಾಹುತಗಳಿಗೆ ಆಹ್ವಾನ ಎಂಬುದು ಈ ರೂಪಕದಿಂದ ಧ್ವನಿತವಾಗುವ
ಅಂಶ.
ಮುಂದಿನ ರೂಪಕವನ್ನು ಪ್ರಾಣಿ ರಾಜ್ಯದಿಂದ ಕುಮಾರವ್ಯಾಸ
ಆರಿಸಿದ್ದಾನೆ. ಹಾವು ದ್ವೇಷಕ್ಕೆ ಸಂಕೇತವಾಗಿ ಜಾನಪದದಲ್ಲಿ, ಕನ್ನಡ ಕಾವ್ಯಗಳಲ್ಲಿ ಮತ್ತು ಹಿಂದೂ
ಪುರಾಣಗಳಲ್ಲಿ ಬಳಕೆಯಾಗಿದೆ. ಹಾವಿನ ಸಂಗ ಅದರ ವಿಷದಿಂದಾಗಿ ವಿನಾಶಹೇತು ಎಂಬುದು ಇನ್ನೊಂದು ಪರಿಕಲ್ಪನೆ.
ಹಾವಿಗೆ ಹಾಲೆರೆದೇನು ಫಲ,ಹಾವಿನ ದ್ವೇಷ ಹನ್ನೆರಡು ವರ್ಷ ಇಂತಹ ಪ್ರಯೋಗಗಳಲ್ಲಿ ಇದನ್ನು ಕಾಣಬಹುದು.
ಹಾಗೆಯೇ ನಾಗರ ಹಾವಿನ ಹೆಡೆಯಲ್ಲಿ ಅಮೂಲ್ಯ ಮಣಿ ಇರುವುದೆಂಬುದೂ ಒಂದು ಜಾನಪದ ನಂಬಿಕೆ. ‘ಹಾವು ದ್ವೇಷ’, ‘ಹಾವು ವಿನಾಶ ಹೇತು’ ಎಂಬೀ ರೂಪಕಗಳು
ಇಲ್ಲಿ ಬಳಕೆಯಾಗಿವೆ. ಪಾಂಡವರ ಮೇಲಿನ ದ್ವೇಷದಿಂದ ಮತ್ತು ಹಾವಿನ ತಲೆಯ ಮೇಲಿರುವ ಅಮೂಲ್ಯ ನಾಗಮಣಿಯ
ಮೇಲಿನ (ದ್ರೌಪದಿಯ ಮೇಲಿನ) ಆಸೆಯಿಂದ ಅದರ ಹೆಡೆಯನ್ನು
ತುರಿಸುವುದೆಂದರೆ ಅದು ವಿನಾಶವನ್ನು ತರದೆ ಬಿಡದು ಎಂಬುದು ಇಲ್ಲಿ ವಿವಕ್ಷಿತ.
ಕವಿ ಹೇಗೆ ವಿಸ್ತರಿಸಿ ವಿವರಿಸುವುದರ ಮೂಲಕ ಮತ್ತು
ಕಥಾ ಹಿನ್ನೆಲೆಯನ್ನು ಒದಗಿಸುವುದರ ಮೂಲಕ ಕಾವ್ಯಾಭಿವ್ಯಕ್ತಿಯನ್ನು ಪರಿಣಾಮಕಾರಿಯಾಗಿಸ ಬಲ್ಲ ಎಂಬುದಕ್ಕೆ
ಇದು ಒಳ್ಳೆಯ ಉದಾಹರಣೆ.
ಗಧಾ ಪರ್ವದಿಂದ ಿಲ್ಲಿ ಇನ್ನೊಂದು ಉದಾಹರಣೆಯನ್ನು
ಆರಿಸಿದೆ. ಕೌರವ ಪಾಂಡವರ ನಡುವಣ ಯುದ್ಧದಲ್ಲಿ ಕೌರವರ ಕಡೆಯ ಮುಖ್ಯ ಸೇನೆಯೆಲ್ಲ ನಾಶವಾಗಿದ್ದಾಗ ದುರ್ಯೋಧನನಿಗೆ
ಹೊಸದೊಂದು ಉಪಾಯ ಹೊಳೆಯುತ್ತದೆ. ಅದು ತನ್ನ ಸೇನೆಯನ್ನು ಪುನರ್ಜೀವಿತಗೊಳಿಸುವ ಉಪಾಯ. ಆಗ ಯುದ್ಧವನ್ನು
ಯುದ್ಧವನ್ನು ಪುನರಾರಂಭಿಸ ಬಹುದು. ಇದಕ್ಕಾಗಿ ಅವನು ವೈಶಂಪಾಯನ ಸರಸಿಯಲ್ಲಿ ಜಲಸ್ತಂಭನ ವಿದ್ಯೆಯ ಸಹಾಯದಿಂದ ಮಳುಗಿರುತ್ತಾನೆ.
ಪಾಂಡವರಿಗೆ ಈ ವಿಷಯ ತಿಳಿದು ಅವರೈವರು ಆ ಕೆರೆದಂಡೆಗೆ ಬಂದು ಅವನನ್ನು ಹೀಯಾಳಿಸುತ್ತಾರೆ. ಹೀಗೆ ಮುಳುಗಿ
ಅಡಗಿ ಕುಳಿತ ದುರ್ಯೋಧನನು ತಮ್ಮಹೀಯಾಳಿಕೆಯನ್ನು ಕೇಳಿ ತನ್ನಿರವನ್ನು ಪ್ರಕಟಗೊಳಿಸಿದೊಡನೆ ಪಾಂಡವರಿಗಾದ ಹರ್ಷವನ್ನು
ಕೆಳಗಿನ ಪದ್ಯ ವ್ಯಕ್ತಪಡಿಸುತ್ತಿದೆ.
ಅರಳಿತರಸನ ವದನ ಭೀಮನ
ಹರುಷ ಉಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀ ಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ (ಕುವ್ಯಾ. 597 – 35)
‘ಅರಳಿತರಸನ ವದನ’ ‘ಹರುಷ ಉಕ್ಕಿತು’ ‘ಪಾರ್ಥನು ಉಬ್ಬಿದನು’ ‘ನಕುಲನುಬ್ಬರಿಸಿದನು’ ಈ ರೂಪಕಗಳನ್ನು
ಇಲ್ಲಿ ಬಳಸಿದೆ. ಇವುಗಳಲ್ಲಿ ಮೊದಲನೆಯದು ಅರಳುವುದು
ಸಂತೋಷ; ಮುದುಡುವುದು ದುಃಖ ಎಂಬ ರೂಪಕ. ಈ ರೂಪಕವು ಭಾರತೀಯ ಕಾವ್ಯಗಳಲ್ಲಿ ಸಾಮಾನ್ಯವಾಗಿ ಕಮಲದ
ಹೂವಿಗಿರುವ ಪ್ರಾಮುಖ್ಯದಿಂದ ಉಂಟಾಗುತ್ತದೆ. ಸೂರ್ಯನ ಉದಯದೊಂದಿಗೆ ಬೆಳಕು ಬರುತ್ತದೆ ಕಮಲವು ಅರಳುತ್ತದೆ;
ಸೂರ್ಯಾಸ್ತದೊಂದಿಗೆ ಕತ್ತಲುಂಟಾಗುತ್ತದೆ, ಕಮಲವು ಮುದುಡುತ್ತದೆ. ಹೀಗಾಗಿ ಹೂವಿನ ಅರಳುವಿಕೆ ಬೆಳಕನ್ನೂ ತನ್ಮೂಲಕ ಸಂತೋಷವನ್ನು ಪ್ರತಿನಿಧಿಸುತ್ತದೆ;
ಅಥವ ಧನಾತ್ಮಕತೆಯನ್ನು ವ್ಯಕ್ತಪಡಿಸುತ್ತದೆ. ಹಾಗೆಯೇ ಮುದುಡುವುದು ಕತ್ತಲಿನ ಮೂಲಕ ದುಃಖವನ್ನು ಪ್ರತಿನಿಧಿಸುತ್ತದೆ;
ಅಥವ ಋಣಾತ್ಮಕತೆಯನ್ನು ವ್ಯಕ್ತಪಡಿಸುತ್ತದೆ. ಉಳಿದವುಗಳು ಧಾರಕ ರೂಪಕಗಳಾಗಿವೆ. ಹರುಷ ಉಕ್ಕಿತು ಎಂಬುದು
ಸಂತೋಷವು (ಧಾರಕದಲ್ಲಿ) ದ್ರವ ಎಂಬ ರೂಪಕ. ಪಾತ್ರೆಯಲ್ಲಿ ಹಾಲಿದ್ದಂತೆ. ಕಾಯಿಸಿದಾಗ ಹಾಲು ಉಕ್ಕುವುದು. ಸಂತೋಷವು ದೇಹದಲ್ಲಿ ಕಾದು ವಿಕಸಿತವಾದಾಗ ಉಕ್ಕುತ್ತದೆ. ಮೈಉಬ್ಬಿದುದು ಎಂಬುದು ಸಂತೋಷವು (ಧಾರಕದಲ್ಲಿರುವ) ಅನಿಲ ಎಂಬ ರೂಪಕ. (ಬಲೂನಿನಂತಹ) ಧಾರಕದಲ್ಲಿ ಅನಿಲವು ಹೆಚ್ಚಾದರೆ ಉಬ್ಬುವುದು,
ಅನಿಲವು ಕಡಿಮೆಯಾದರೆ ಕುಗ್ಗುವುದು. ಉಬ್ಬುವುದು ಸಂತೋಷ;
ಕುಗ್ಗುವುದು ದುಃಖ. ಹೀಗೆ ಸಂತೋಷ ಹೆಚ್ಚಾದಾಗ ಮೈಯುಬ್ಬುವುದು.
ಹೀಗೆ ಇಲ್ಲಿರುವುವುಗಳಲ್ಲಿ ಮೊದಲನೆಯದು ದಿಕ್ಸೂಚಕ ರೂಪಕ ಮತ್ತು ಉಳಿದವು ಧಾರಕ ರೂಪಕಗಳು
(Container metaphors). ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವರಿಗೆ ಆದ ಸಂತೋಷವನ್ನು
ಒಂದೊಂದು ಬಗೆಯ ರೂಪಕದಿಂದ ವರ್ಣೀಸಲಾಗಿದೆ. ದ್ರೌಪದಿ, ಶಿಖಂಡಿ, ಸಾತ್ಯಕಿ ಮತ್ತು ದೃಷ್ಟದ್ಯುಮ್ನರು
“ದೈವಂಗಳಿತ್ತವು ವರವನು” ಎನ್ನುತ್ತಾರೆ. ಹಲವು ರೂಪಕಗಳನ್ನು
ಹೀಗೆ ಒಮ್ಮೆಗೇ ಬಳಸಿ ಪಾಂಡವರಿಗಾದ ಸಂತೋಷಾತಿಶಯವನ್ನು ಕವಿ ಇಲ್ಲಿ ಅಭಿವ್ಯಕ್ತಿಸಿದ್ದಾನೆ.
ಧಾರಕ ರೂಪಕಗಳನ್ನು ಕುಮಾರವ್ಯಾಸ ಹಲವು ಕಡೆ ಬಳಸಿದ್ದಾನೆ
ಉದಾಹರಣೆಗೆ ಮನದಲಿ ಮಡುಗಟ್ಟಿದ ನೋವನು ಬಲವಾಗಿ ಅದಮಿಟ್ಟು ಎಂದು ಒಂದೆಡೆ
ಬಳಸಿದ್ದಾನೆ. ಇಲ್ಲಿ ನೋವು ಧಾರಕದಲ್ಲಿರುವ
ಅನಿಲ ಎಂಬುದು ಇಲ್ಲಿರುವ ಮೂಲ ರೂಪಕ. ಆದ್ದರಿಂದಲೇ ಅದನ್ನು ಅದುಮಿಡುವುದು
ಸಾಧ್ಯವಾಗುವುದು.
ಘಟನಾ ರಚನಾತ್ಮಕ ರೂಪಕಗಳನ್ನೂ ಕವಿ
ಹಲವೆಡೆ ಬಳಸಿದ್ದಾನೆ. ದ್ರೌಪದಿ ಅಕ್ಷಯ ವಸ್ತ್ರ ಪ್ರಕರಣದ ನಂತರ ದುರ್ಯೋಧನನ ಆದೇಶಗಳು ಮತ್ತಷ್ಟು
ಅಪಮಾನಜನಕವಾಗುತ್ತವೆ. ದ್ರೌಪದಿ ನಿನ್ನ ತೊಡೆಯೇ ನಿನ್ನ ವಿನಾಶದ ಬಿಂದುವಾಗಲಿ ಎಂದು
ದುರ್ಯೋಧನನನ್ನು ಶಪಿಸುತ್ತಾಳೆ. ಅದನ್ನು ಆಗುಮಾಡುವವನಂತೆ ಭೀಮ ಕ್ರೋಧಾ ವೇಶದಿಂದ ಭೀಮ,
ದುರ್ಯಫಧನನ ತೊಡೆ ಮುರಿಯುವುದಾಗಿ ಶಪಥ ಮಾಡುತ್ತಾನೆ. ಅರ್ಜುನ ಸಹದೇವರೂ ಭೀಮನ ಬೆಂಬಲಕ್ಕೆ
ನಿಲ್ಲುತ್ತಾರೆ. ಅನಂತರ ಧರತರಾಷ್ಟ್ರನ ಮಧ್ಯಸ್ಥಿಕೆಯಿಂದ ದ್ರೌಪದಿ ಕೌರವ ದಾಸ್ಯದಿಂದ ಮುಕ್ತಳಾಗಿ
ಪತಿಗಳ ಜೊತೆ ವನವಾಸಕ್ಕೆ ಹೋಗುವುದು ನಿಶ್ಚಯವಾಗುತ್ತದೆ. ಆ ಸಂದರ್ಭದಲ್ಲಿ ಪಾಂಡವರ ಮನಸ್ಸಿನಲ್ಲಿ
ಉಂಟಾದ ಚಿಂತನೆಯನ್ನು ವ್ಯಕ್ತ ಪಡಿಸುವ ಕೆಳಗಿನ ಪದ್ಯವನ್ನು ಪರಿಶೀಲಿಸಬಹುದು. ಕಥಾ
ಸಂದರ್ಭದಿಂದಾಗಿ ಇದು ಪಾಂಡವರೆಂದುಕೊಳ್ಳುವ ವಿಚಾರಗಳೆಂದೂ ಖಳರು ಎಂದರೆ ದುರ್ಯೋಧನಾದಿಗಳೆಂದೂ
ಸ್ಪಷ್ಟವಾಗುತ್ತದೆ. ಇಡೀ ಕಾವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ಖಳರು ಎಂಬ ಪದ
ಪಾಂಡವರಿಗನ್ವಯವಾಗುವಂತಹದಲ್ಲ, ದುರ್ಯೋಧನಾದಿಗಳಿಗೆ ಅನ್ವಯಿಸುವಂತಹುದು. ಕೊನೆಯ ಸಾಲಿನಲ್ಲಿರುವ
ವೀರನಾರಾಯಣನ ಕರುಣೆ ಪಾಂಡವರ ಮೇಲೆಯೇ ಅತಿಶಯವಾಗಿರುವುದು. ಹೀಗೆ ಕಥಾ ಸಂದರ್ಭ ರೂಪಕಗಳ ಮತ್ತು
ಪದ್ಯದ ಆಶಯವನ್ನು ನಿರೂಪಿಸುತ್ತದೆ ಎಂಬುದನ್ನು ಕಾಣಬಹುದು.
ಕಳೆದೆವೇ ಖಳರೊಡ್ಡಿದಿರುಬಿನ
ಕುಳಿಗಳನು ಕೈತಪ್ಪು ಮಾಡದೆ
ಸಲಹಿದೆವೆ ಸತ್ಯವನು ಸುಜನರ ಕಲೆಗೆ ಸಂದೆವೆಲೆ
ಕಳವಳದ ಕಡುಗಡಲೊಳಾಳದೆ
ಸುಳಿದೆವಿತ್ತಲು ಶಿವ ಶಿವಾ ಯದು
ತಿಲಕ ಗದುಗಿನ ವೀರನಾರಾಯಣನ ಕರುಣದಲಿ ೧೪೯-೬೭
ಈ ಪದ್ಯದ ಒಟ್ಟು ಸಾರಾಂಶವೆಂದರೆ
ಆಗಬಹುದಾಗಿದ್ದ ಏನೋ ದೊಡ್ಡ ಸಂಕಷ್ಟ ಸಣ್ಣದೊಂದರಿಂದ ಕಳೆಯಿತು; ದೊಡ್ಡ ಅನಾಹುತವಾಗುವುದು ತಪ್ಪಿತು
ಎಂದಾಗಿದೆ. ಇಲ್ಲಿ ಘಟನಾ ರಚನಾತ್ಮಕ ರೂಪಕ ಬಳಕೆಯಾಗಿದೆ. ಪದ್ಯದ ಮೊದಲನೆಯ ಸಾಲಿನಲ್ಲಿ ದುಷ್ಟರು ಅಡ್ಡವಾಗಿ
ಇಟ್ಟ ಸಂಕಷ್ಟದ ಹೊಂಡಗಳನ್ನು ಹೋಗಲಾಡಿಸಿಕೊಂಡೆವು ಎಂದು ಪಾಂಡವರು ಎಂದುಕೊಳ್ಳುತ್ತಾರೆ. ಇಲ್ಲಿ ಬಾಳೊಂದು ಪಯಣ, ಪ್ರಯಾಣದಲ್ಲಿ ತಡೆಗಳು ಸಂಕಷ್ಟಗಳು
ಎಂಬ ರೂಪಕಗಳಿವೆ. ತಡೆಗಳನ್ನು (ನೀರಿನ) ಹೊಂಡಗಳು(ಕುಳಿಗಳು)
ಎಂದು ಕಲ್ಪಿಸಿರುವುದು ಕವಿಯ ವೈಶಿಷ್ಟ್ಯ. ‘ಇರುಬಿನ’ ಎಂಬುದಕ್ಕೆ ನಿಘಂಟಿನಲ್ಲಿ ಇರುವ ಅರ್ಥ ‘ಇಕ್ಕಟ್ಟು’.
ಕುಳಿಗಳು ಇಕ್ಕಟ್ಟಾಗಿದ್ದವು ಎಂದರೆ ನೀರಿನ ಸಣ್ಣ ಹೊಂಡಗಳು (ಬಾಳಿನ) ದಾರಿಯಲ್ಲಿದ್ದು ಪ್ರಯಾಣಕ್ಕೆ
ತಡೆಗಳಾಗಿವೆ. ಇದು ಮುಂದಿನ ‘ಕಳವಳದ ಕಡು+ಕಡಲೊಳ್+ಆಳದೆ
ಸುಳಿದೆವು’ ಎಂಬುದರೊಡನೆ ಸೇರಿ ಪೂರ್ಣಾರ್ಥವನ್ನು ಕೊಡುತ್ತದೆ. ಸಮಸ್ಯೆಗಳ ವಿಶಾಲವಾದ ಸಮುದ್ರದಲ್ಲಿ (ಕಡುಗಡಲೊಳ್) ಮುಳುಗದೆ (ಆಳದೆ) ಪಾರಾದೆವು ಎನ್ನತ್ತಾರೆ. ತಡೆಗಳು
ಸಂಕಷ್ಟಗಳು ಎಂಬುದು ರೂಪಕ; ಸಣ್ಣ ಹೊಂಡ ಸಣ್ಣ ಸಂಕಷ್ಟ ಮತ್ತು ದೊಡ್ಡ ಕಡಲು ದೊಡ್ಡ ಅನಾಹುತ(ಕಳವಳ).
ಉದ್ದೇಶಗಳು ತಲುಪುದಾಣಗಳು. ಆದ್ದರಿಂದ ಪಾಂಡವರಿಗಿದ್ದ
ತಲುಪುದಾಣ ಯಾವುದು? ‘ಕೈತಪ್ಪು ಮಾಡದೆ ಸಲಹಿದೆವೆ ಸತ್ಯವನು; ಸುಜನರ ಕಲೆಗೆ ಸಂದೆವು’ ಎಂಬಲ್ಲಿ ಇದಕ್ಕೆ ಉತ್ತರವಿದೆ. ಕೈತಪ್ಪು ಎಂದರೆ ಸಣ್ಣ ತಪ್ಪು
– ಕೈಗಡ, ಕೈಗೆಲಸ ಇತ್ಯಾದಿಗಳಿದ್ದಂತೆ. ಸಣ್ಣ ತಪ್ಪನ್ನೂ ಮಾಡದೆ ಸತ್ಯವನ್ನು ಪೋಷಿಸಿದೆವು ಎಂದರ್ಥವಾಗುತ್ತದೆ.
ಸತ್ಯವನ್ನು ಪೋಷಿಸಿದೆವು ಎಂದಿರುವುದರಿಂದ ಸತ್ಯವು ಮಗು ಎಂಬ ರೂಪಕವನ್ನು ಬಳಸಲಾಗಿದೆ. ಮಗುವು
ನಿಷ್ಕಲ್ಮಷ ಗುಣಗಳಿರುವಂತಹದು, ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಾದ್ದು; ಪೋಷಿಸಿದರೆ ಸಂತೋಷದ
ಸಾಗರವೇ ಸಿಗುವುದು; ಇವೇ ಗುಣಗಳನ್ನು ಸತ್ಯವೂ ಹೊಂದಿದೆ ಎಂಬುದು ಈ ರೂಪಕದಿಂದ ಹೊಳೆಯುತ್ತದೆ. ಮಗು
ಲಕ್ಷ್ಯ ಪರಿಧಿ ಮತ್ತು ಸತ್ಯವು ಮೂಲ ಪರಿಧಿ. ಹೀಗೆ ಸತ್ಯವನ್ನು ಸಲಹಿದ್ದರಿಂದ ಸಜ್ಜನರ ಗುಂಪಿಗೆ ಸೇರಿದೆವು.
ಇದೇ ಪಾಂಡವರ ತಲುಪುದಾಣ. (ಇದನ್ನು ಧರತರಾಷ್ಟ್ರನೂ ಅರಿತಿದ್ದನೆಂಬುದನ್ನು ಹಿಂದಿನ ಪದ್ಯವೊಂದರಲ್ಲಿ
ವರ ಸತ್ಯಾಯುಧರಲೇ ನೀವು (148 – 50) ಎಂದು ಧೃತರಾಷ್ಟ್ರ ಪಾಂಡವರನ್ನು ಗುರುತಿಸುವುದರಲ್ಲಿ ಕಾಣಬಹುದು). ಪಾಂಡವರು ಸಜ್ಜನಿಕೆಯನ್ನು
(ತನ್ಮೂಲಕ ದೈವ ಕೃಪೆಯನ್ನು) ಗಳಿಸಿಕೊಳ್ಳುವ ಪ್ರಯಾಣದಲ್ಲಿ ದ್ಯೂತದಲ್ಲಿ ಸೋಲು, ದ್ರೌಪದಿಯ ಅವಮಾನಗಳಂತಹ
ಸಣ್ಣ ಸಂಕಷ್ಟಗಳನ್ನು ಅನುಭವಿಸಿದರೂ ಪ್ರಯಾಣವನ್ನು ಮುಂದುವರೆಸಿ ಒಂದು ಘಟ್ಟವನ್ನು ತಲುಪಿದ್ದಾರೆ.
7.0 ಒಟ್ಟಿನಲ್ಲಿ
ಒಂದು ಭಾಷಾ ವೈಚಿತ್ರ್ಯವಾಗಿ ಮಾತ್ರ ನಿರೂಪಿತವಾಗುತ್ತಿದ್ದ ರೂಪಕದ ಪರಿಕಲ್ಪನೆ ಪಾಶ್ಚಾತ್ಯ ಜಗತ್ತಿನಲ್ಲಿ
ಕ್ರಾಂತಿಕಾರಕ ಬದಲಾವಣೆಯನ್ನು ಕಂಡಿದೆ. ಲೇಕಾಫ್, ಝಾನ್ಸನ್, ಟರ್ನರ್, ಕೊವೆಕ್ಸಸ್ ಮುಂತಾದವರ ಸಂಶೋಧನೆಗಳಿಂದ
ಮನುಷ್ಯನ ಸಾಮಾನ್ಯ ಚಿಂತನೆಗಳೆಲ್ಲವೂ ರೂಪಕಾತ್ಮಕವಾಗಿ ನಡೆಯುವುವೆಂಬುದು ಸ್ಪಷ್ಟವಾಗಿದೆ. ಯಾವುದೇ
ಅಮೂರ್ತ ಪರಿಕಲ್ಪನೆಯೊಂದನ್ನು ಗ್ರಹಿಸಲು ಮೂರ್ತ ಪರಿಕಲ್ಪನೆಯನ್ನವಲಂಬಿಸ ಬೇಕಾಗುವುದರಿಂದಲೇ ರೂಪಕಗಳು
ಈ ವಿರಾಡ್-ಸ್ವರೂಪ ಪಡೆಯಲು ಕಾರಣ. ಜನಮಾನಸದಲ್ಲಿ ಬಾಳೊಂದು ಪಯಣ, ಸಮಯವು ಸಂಪತ್ತು, ಸಿಟ್ಟು ಸ್ಫೋಟ,
ಇತ್ಯಾದಿ ನೂರಾರು ರೂಪಕಗಳಿವೆ. ಗಾದೆಗಳು ಮತ್ತು ನುಡಿಗಟ್ಟುಗಳು
ಇಂತಹ ರೂಪಕಗಳಿಂದ ಸಂಪದ್ಭರಿತವಾಗಿವೆ. ಕವಿಗಳು ಇವೇ ರೂಪಕಗಳನ್ನು ವಿಸ್ತರಿಸಿ, ವಿವರಿಸಿ ಹೊಸ ಅರ್ಥಗಳನ್ನು
ಸೃಷ್ಟಿಸುತ್ತಾರೆ. ಜನಮಾನಸ ರೂಪಕಗಳ ಸಮರ್ಪಕ ತಿಳಿವಳಿಕೆ ಕಾವ್ಯದಲ್ಲಿರುವ ರೂಪಕಗಳನ್ನು ಸಮರ್ಪಕವಾಗಿ
ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತವೆ.
ಪರಾಮರ್ಶಿಸಿದ ಕೃತಿಗಳು
3.ಕರ್ಕ್-ಮನ್
ಆರ್ವೋ,2007: The Gret Chain of Being as
the Back-ground of
Personificatory
and Depersonificatory Metaphors in
Proverbs and Elsewhere
[Estonoian Literary Museum]
4.ಕನ್ನಡ ರತ್ನಕೋಶ, 1977: ಕನ್ನಡ-ಕನ್ನಡ
ಸಂಕ್ಷಿಪ್ತ ನಿಘಂಟು ಸಂ. ಹಾಮಾನಾ [ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು]
5.ಕುಮಾರ
ವ್ಯಾಸ, 1988: ಕರ್ಣಾಟ ಭಾರತ ಕಥಾ ಮಂಜರಿ ಸಂ.
ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್,
[ಮೈಸೂರು ವಿಶ್ವ ವಿದ್ಯಾಲಯ]
6.ಕೊವೆಕ್ಸಸ್, ಝೋಲ್ಟನ್, 2010:
Metaphor: A Practical
Introduction, 2nd ed.[Oxford
University]
7.ಕೊವೆಕ್ಸಸ್, ಝೋಲ್ಟನ್, 2009:
Metaphor and Poetic Creativity:
A Cognitive Linguistic Account in Acta Universitaitis Sapientiae, Philologica
1,2 pages 181-196
8.ಗುಪ್ತೇಶ್ವರ್
ಪ್ರಸಾದ್, 1994: I.A. Richards and Indian theory of Rasa [ಸ್ವರೂಪ್ ಅಂಡ್ ಸನ್ಸ್
ನವದೆಹಲಿ].
9.ಜಾರ್ಜಿಯೋ ಇವನ್ನೌ,ಮತ್ತು ಇತರರು, 2014: Cognitive
Mechanisms in the Interpretation and
Meaning of
Idioms [Universidad
de Chile].
10.ದಂಡಿ ಭಾಮಹ: ಇವರ ಸಿದ್ಧಾಂತಗಳ
ಮತ್ತು ಅಲಂಕಾರ ಪ್ರಸ್ಥಾನದ ಇತರರ ಅಭಿಪ್ರಾಯಗಳನ್ನು ಕೆಳಗಿನ ಅಂತರ್ಜಾಲ ತಾಣದಿಂದ ಸಂಗ್ರಹಿಸಿದೆ:
shodhganga.inflibnet.ac.in/bitstream/10603/52324/10/10_chapter%203.pdf
11.ನರಸಿಂಗ ರಾವ್, ಉಳ್ಳಾಲ,
1912: A Hand Book Of Canarese Proverbs
with English
Equivalents [Publ. Basel Mission Book and Track
Depository Mangalore]. ಇದು ಕನ್ನಡದ ಮೊದಲ ಗಾದೆಗಳ ಸಂಗ್ರಹ. ಇದರ ಮೊದಲ ಾವೃತ್ತಿ 1906ರಲ್ಲಿ
ಮದ್ರಾಸಿನಿಂದ ಪ್ರಕಟವಾದಂತೆ ತಿಳಿದು ಬರುತ್ತದೆ.
12.ಪ್ರಭಾಕರ ಶಿಶಿಲ, ನವೆಂಬರ್ 10, 2010: http://chilume.com/?p=5021
13.Bilsky, Manuel. “I. A. Richards' Theory of
Metaphor.”
14.ಬೇಂದ್ರೆ ದ ರಾ : ಕುರುಡು ಕಾಂಚಾಣ ನಾದಲೀಲೆಯಲ್ಲಿ ಸುನಾಥ
2014 ಇಲ್ಲಿಂದ ಎತ್ತಿಕೊಂಡಿದೆ
15.ಮೊರೆನೋ ಇಬಾನೆಜ್ ಆನಾ An
Analysis of the Cognitive Dimension of Proverbs in English and Spanish: the
Coneptual Power of Language Reflecting Popular
Blieves
16.ಲ್ಯಾಂಗೇಕರ್, ರೊನಾಲ್ಡ್ W,
2013: Essentials of Cognitive Grammar Publ.
[Oxford University
Press]
17.ಲೇಕಾಫ್ ಜಾರ್ಜ್ & ಝಾನ್ಸನ್
ಮಾರ್ಕ್, 2003: Metaphors We Live by [publ. University of
Chicago Press]
18.ಲೇಕಾಫ್ ಜಾರ್ಜ್ & ಮಾರ್ಕ್
ಟರ್ನರ್, 1989: More Than Cool Reason – A Field Guide to
Poetic Metaphor [Publ. University of Chicago
Press]
19.ಲೇಕಾಫ್ ಜಾರ್ಜ್, 1992: The Contemporary Theory of Metaphor [Cambridge
University journal]
20.ಶ್ರೀವಿಜಯ,
2015: ಕವಿರಾಜಮಾರ್ಗಂ ಸಂ. ಸೀತಾರಾಮಯ್ಯ, ಎಮ್ ವಿ [ಪ್ರ. ಕನ್ನಡ ಸಾಹಿತ್ಯ
ಪರಿಷತ್ತು, ಬೆಗಳೂರು]
22.ಸೀತಾರಾಯ್ಯ
ಎಮ್ ವಿ: ಶ್ರೀವಿಜಯ 2015ರಲ್ಲಿ ಪೀಠಿಕೆ (ಪು
1-68), ಟಿಪ್ಪಣಿಗಳು (ಪು177-369)
23.ಸುನಾಥ,2014 ಸಲ್ಲಾಪದಲ್ಲಿ:
shodhganga.inflibnet.ac.in/bitstream/10603/52324/10/10_chapter%203.p
24.Hien Li Thi Thu: Proverbs
and Idioms Related to Animals in English and Vietnamese [Class 4c-06, University of Pedogogy]
25.ಹ್ಯಾನ್ಸ್
ಬೋರ್ಕ್, 2011 : Wind, Wave and Generative
Metaphor in Greeck Wasington
University St Louis - https://openscholarship.wustl.edu/cgi/viewcontent.cgi?article=1462&context=etd
No comments:
Post a Comment