Search This Blog

Sunday, 8 April 2018

ಕೆರೆಯೊಂದರ ಸ್ವಗತ


ಕೆರೆಯೊಂದರ ಸ್ವಗತ


ನಮ್ಮೂರ ಕೆರೆ ನಾನು. ಆದರೆ ನನ್ನನ್ನು  ಊರಿನವಳೆಂದು ತಿಳಿಯುವವರೇ ಕಡಿಮೆ ಜನ. ನಾನಿರುವುದು ಊರಿನ ಹೊರಗೆ.  ಜನಜಂಗುಳಿ, ಅಂಗಡಿಗಳ ಸಾಲು, ವಾಹನಗಳ ದಟ್ಟಣೆ ಯಾವುವೂ ನನ್ನನ್ನು ಬಾಧಿಸಲಾರವು. ನನಗೆ ನಾಗರೀಕತೆ ಎಂದು ಈಚೆಗೆ ಏಳುತ್ತಿರುವ ಕಳೆಗಳಿಂದ ಬಾಧೆಯಾಗದು. ಇದು ನನ್ನ ಅದೃಷ್ಟ. ಹಾಗೆಂದು ನನ್ನನ್ನು ಕೇಳುವವರೇ ಇಲ್ಲವೆಂದಲ್ಲ. ಇದ್ದಾರೆ. ನನ್ನ ಸುತ್ತಲೂ ಈಗ ನಿರ್ಮಾಣವಾಗಿರುವ ದಂಡೆಗಳ ಮೇಲೆ ಸಾವಿರಾರಲ್ಲದಿದ್ದರೂ ನೂರಾರು ಜನ ಬಂದು ಓಡಾಡುತ್ತಾರೆ. ಕೆಲವರು ಓಡುತ್ತಾರೆ. ಮಕ್ಕಳೋ ಆಡುತ್ತಾರೆ. ಅನೇಕರು ನನ್ನತ್ತ ಮೆಚ್ಚುಗೆಯ ನೋಟ ಬೀರುತ್ತಾರೆ. ಎಷ್ಟೋ ಜನ ತಮ್ಮ ಕಷ್ಟ ಸಂಕಷ್ಟಗಳನ್ನು ತಮ್ಮಲ್ಲಿಯೇ ಮಾತನಾಡಿಕೊಂಡು ಹೋಗುತ್ತಾರೆ. ಕೆಲವರು ರಾಜಕೀಯ ಬೆಳವಣಿಗೆಗಳನ್ನು ಮಾತನಾಡಿಕೊಳ್ಳುತ್ತಾರೆ. ಕೊಲೆಗಾರರೂ ಮಖ್ಯ ಮಂತ್ರಿಗಳಾದುದನ್ನು, ಅತಿಭ್ರಷ್ಟರು ಮಂತ್ರಿಗಳಾಗಿ ರಾರಾಜಿಸುವುದನ್ನೂ, ಜಾತಿಜಾತಿಗಳ ನಡುವೆ ಗೋಡೆ ಕಟ್ಟಿ ಓಟು ಗಿಟ್ಟಿಸುವುದನ್ನೂ, ಇನ್ನೂ ಏನೇನೋ ಮಾತನಾಡುತ್ತಾರೆ. ಕೆಲವರಿದ್ದಾರೆ; ಸಮಾಜವನ್ನು ಒಗ್ಗೂಡಿಸಿಕೊಂಡೇ ದೇಶ ಕಟ್ಟಬೇಕೆಂದು ಫಣ ತೊಟ್ಟವರು. ಇಂತಹವರ ಸಂಖ್ಯೆಯೂ ಕಡಿಮೆ ಏನಿಲ್ಲ. ಕೆಲವರು ಭಾಷೆ, ಪ್ರದೇಶದ ಘನತೆ, ಇಂತಹವುಗಳ ಆಧಾರದಲ್ಲಿ ಓಟು ಗಿಟ್ಟಿಸಲು ತಂತ್ರ ಹೆಣೆಯುವವರಿದ್ದಾರೆ. ಇವರೆಲ್ಲ ತಮ್ಮ ಉಪಾಯಗಳನ್ನು ಒರೆಗೆ ಹಚ್ಚುತ್ತಿದ್ದೇವೆ ಎಂದು ಭಾವಿಸುತ್ತಾರೆ. ತಾವು ಜಯ ಗಳಿಸಲು ಈ ‘ತತ್ವಗಳು’ ಗೆಲ್ಲುವಂತೆ ಮಾಡುವಂತೆ ಮಾಡಲು ವಿವರವಾದ ಕಾರ್ಯ ವೈಖರಿಯನ್ನೇ ಯೋಜಿಸುತ್ತಾರೆ. ತಟದ ಮೇಲೆ ಅಲ್ಲಲ್ಲಿ ಕಲ್ಲು ಬೆಂಚುಗಳನ್ನೂ ಈಗ ಹಾಕಿಸಿದ್ದಾರೆ. ನವ ದಂಪತಿಗಳು, ಪ್ರಣಯಿಗಳೂ ಅಲ್ಲಲ್ಲಿ ಕುಳಿತು ತಮ್ಮ ಒಳ್ಮೊಗದೊಳ್ ನಗೆ ಸೂಸಿ ಪಿಸುಮಾತನಾಡಿಕೊಳ್ಳುತ್ತಾರೆ; ಇವರದಂತೂ ಬೇರೆಯೇ ಲೋಕ. ಇವುಗಳಿಗೆಲ್ಲ ಸಾಕ್ಷಿಯಾಗಿ ನಿಂತು ನನ್ನೊಳಗೆ ನಗುತ್ತೇನೆ. ಸಂಕಟಪಡುತ್ತೇನೆ. ಕುದಿಯುತ್ತೇನೆ. ನೊಂದವರಿಗೆ ಸಾಂತ್ವನ ನೀಡಲೂ ಪ್ರಯತ್ನಿಸುತ್ತೇನೆ. ಅದಕ್ಕೇ ಅಲ್ಲವೆ ಕವಿವರೇಣ್ಯರನೇಕರೂ ಇಲ್ಲಿ ಸುಳಿದಾಡಿ ನನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿರುವುದು.
          ಹಾಗೆ ನೋಡಿದರೆ ಸುತ್ತಲೂ ಇರುವ ಈ ಕಟ್ಟೆ, ನನ್ನ ಮೇಲೆ ತೇಲುವ ಈ ದೋಣಿಗಳು, ಅವುಗಳಲ್ಲಿ ವಿಹಾರಿಗಳು, ಅವರೆಲ್ಲ ಕ್ಲಿಕ್ಕಿಸುವ ಫೋಟೋಗಳು ಇವೆಲ್ಲ ಈಚಿನ ಬೆಳವಣಿಗೆಗಳು. ಆಗಲೇ ಹೇಳಿದೆನಲ್ಲ ನಾಗರೀಕತೆಯ ಕಳೆಗಳೆಂದು, ಅವುಗಳು ಹೆಚ್ಚಾದ ಮೇಲೆ ಬಂದಂತಹವು ಇವು. ನಾನು ಮೊದಲು ವಿಶಾಲ ಪ್ರದೇಶವನ್ನು ಆವರಿಸಿದ್ದೆ. ನಿನ್ದಿಷ್ಟೇ ಜಾಗ ಎಂದು ಹೇಳುವವರಿರಲ್ಲವಲ್ಲ.  ಸಮುದ್ರವನ್ನು ನೋಡದವರು ನನ್ನನ್ನು ನೋಡಿದೊಡನೆ ಓ ಸಮುದ್ರ ಎಷ್ಟು ಸುಂದರವಾಗಿದೆ ಎಂದು ನ್ನನ್ನನ್ನು ನೋಡಿಯೇ ಉದ್ಗರಿಸುತ್ತಿದ್ದರು. ಬೆಳ್ಳಕ್ಕಿಗಳು ಕೊಕ್ಕರೆಗಳು ನನ್ನ ದಂಡೆಯ ಮೇಲೆಲ್ಲ ಕುಳಿತು ಮೀನಿಗೆ ಅಥವ ಹುಳುಹುಪ್ಪಟಿಗಳಿಗೆ ಗಾಳ ಹಾಕುತ್ತಿದ್ದವು. ನನ್ನಲ್ಲಿಆ ಶ್ರಯ ಪಡೆದವರೂ, ನನ್ನಿಂದ ಪ್ರಯೋಜನ ಪಡೆದವರೂ ಎಷ್ಟೋ. ಒಳಗೆ ಮೀನುಗಳಿದ್ದವು. ಕಪ್ಪೆಗಳಿದ್ದವು. ಗೊದಮೊಟ್ಟೆಗಳಿದ್ದವು. ಆಮೆಗಳಿದ್ದವು. ಹಾವೂಗಳೂ ಇದ್ದವು. ನಾನು ಎಲ್ಲರೊಡನೆ ಮಾತನಾಡುತ್ತಿದ್ದೆ. ಗುಣಗಳನ್ನು ಪ್ರೋತ್ಸಾಹಿಸುತ್ತಿದ್ದೆ. ಅವಗುಣಗಳನ್ನು ತಿದ್ದಲು ಪ್ರಯತ್ನಿಸುತ್ತಿದ್ದೆ. ಯಾರ ಸಿದ್ಧಾಂತವನ್ನೂ ತಿರಸ್ಕರಿಸುತ್ತಿರಲಿಲ್ಲ. ಒಟ್ಟಾರೆಯಾಗಿ ಸಮನ್ವಯವೇ ಎಲ್ಲೆಡೆ ನನಗೆ ಕಾಣಿಸುತ್ತಿತ್ತು . ಅದು ಈಗಲೂ ಹಾಗೆಯೇ ಎನ್ನಿ.
          ನನ್ನ ವಿಸ್ತಾರ ಮತ್ತು ಆಳ ಎರಡೂ ಅಸದಳವಾಗಿದ್ದವು ಎಂದೇನಲ್ಲ. ಆದರೂ ಹಲವು ಸಸ್ಯಗಳಿಗೂ ದೊಡ್ಡ ಪ್ರಾಣಿಗಳಿಗೂ ನಾನು ಆಶ್ರಯಳಾಗಿದ್ದೆ. ಮೊಸಳೆಗಳೂ ನನ್ನೊಳಗೆ ಈಜಾಡುತ್ತಿದ್ದವು. ನೆಗಳಗುಳಿ ಎಂದೇ ನನಗೆ ಹೆಸರು. ಆ ಹೆಸರೇನು ಸುಮ್ಮನೆ ಬರುತ್ತದೆಯೇ? ನೇರಳೆ ಹಣ್ಣಿನ ರುಚಿಗೆ ಮೊಸಳೆ ಮನಸೋತುದೂ ಅದನ್ನು ಪಡೆಯುವುದಕ್ಕಾಗಿ ಒಂದು ಮಂಗನೊಡನೆ ಆ ಮೊಸಳೆ  ಸ್ನೇಹ ಬೆಳೆಸಿ ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋದುದೂ, ಅದನ್ನು ಕೊಲ್ಲಲು ಪ್ರಯತ್ನಿಸಿದ್ದು, ಮಂಗ ತನ್ನ ಚಾತುರ್ಯದಿಂದ ಉಳಿದುಕೊಂಡುದೂ – ಈ ಕಥೆಯನ್ನ ಕೇಳಿರುವಿರುವಿರಲ್ಲ. ಇದು ನಡೆದುದೂ ನನ್ನ ಅಂಗಳದಲ್ಲೇ.  ನಾನಾಗ ಮುಸಿಮುಸಿ ನಕ್ಕದ್ದೆ.
          ನಾಗರೀಕತೆಯ ಕಳೆ ಸುತ್ತಲೂ ಬೆಳೆಯಲು ಶರುವಾದದ್ದು ನನಗೆ ತಿಳಿಯಲೇ ಇಲ್ಲ. ಎಲ್ಲ ಕಡೆಯಿಂದಲೂ ಕಳೆಗಳು ನನ್ನನ್ನು ಒತ್ತುತ್ತಲೇ ಬಂದವು. ಅರವತ್ತು ಎಕರೆಗಳಷ್ಟಿದ್ದ ನನ್ನ ವಿಸ್ತೀರ್ಣ ಹಲವು ಗುಂಟೆಗಳಿಗಷ್ಟೇ ಸೀಮಿತವಾಗೋಯ್ತು. ಇನ್ನಷ್ಟು ಒಳಗೆ ದಂಡೆಗಳನ್ನು ನಿರ್ಮಿಸಿದರು. ಹೇಳುತ್ತಾರೆ ಮುಂದೆ ಯಾರೂ ಒತ್ತದಂತೆ ಈ ದಂಡೆಗಳು ತಡೆಯುವುವಂತೆ. ನನಗೆ ತಿಳಿಯದೆ ನಾನಿದ್ದುದೇ  ಇಷ್ಟುದ್ದವೆಂದು ಎಲ್ಲರೂ ನಂಬುವಂತೆ ಮಾಡುವುದೇ ಇದರ ಉದ್ದೇಶವೆಂದು.
          ನೋಡಿ ಈಗ: ನನ್ನ ತೀರವನ್ನೆಲ್ಲ ಅಲಂಕರಿಸುತ್ತಿದ್ದ ಆ ಬೆಳ್ಳಕ್ಕಿಗಳೆಲ್ಲ ನನ್ನ ಪಶ್ಚಿಮ ದಂಡೆಯ ಹೊರ ವಲಯದಲ್ಲಿ ಇನ್ನೂ ಹಸಿರು ಹುಲ್ಲು ಹೊದ್ದಿರುವ ಆ ತೇವ ನೆಲದಲ್ಲಿ ಬೀಡುಬಿಟ್ಟಿವೆ. ಆದರೂ ಒಂದು ಸಂತೋಷ. ಹಕ್ಕಿಗಳಿಗೆಲ್ಲ ಹಬ್ಬವೆನಿಸುವಷ್ಟು ಆಹಾರ ಅಲ್ಲಿ ದೊರಕುತ್ತಿದೆಯಲ್ಲಾ! ಇನ್ನೂ ಮಣ್ಮುಚ್ಚಿ ಕಾಂಕ್ರೀಟೊರೆಸಿ ಬರ ತರಿಸಿಲ್ಲವಲ್ಲ!.  ಈ ಕಡೆ ಪೂರ್ವ ದಂಡೆಯ ಸ್ವರೂಪವೇ ಬೇರೆ. ಇಲ್ಲಾಗಲೇ ಮಣ್ಣು ಗಾರಿದೆ. ಆಗಲೇ ರಿಯಲ್ ಎಸ್ಟೇಟು ಮಹಾಶಯರು ಒಂದೆರಡು ಕಡೆ ಹದಿನೈದು ಮಹಡಿಗಳ ಕಟ್ಟಡಗಳನ್ನು ಕಟ್ಟಿ ಮಾರಾಟ ಮಾಡಿದ್ದೂ ಆಗಿದೆ. ಕೇಳಿದ್ದೇನೆ: ಕೆಲವು ಕಡೆ ಆ್ಯಕ್ಟಿವಿಸ್ಟರೆಂದು ತಮ್ಮನ್ನು ತಾವು ಕರೆದುಕೊಳ್ಳುವ ಜನರು ಕೆರೆಗಳನ್ನು ಒತ್ತಿದ ಅನಾಗರೀಕರಿಂದ ನಮ್ಮನ್ನು ರಕ್ಷಿಸಲು ಪ್ರಯತ್ನಗಳ್ನು ಮಾಡಿದ್ದಾರೆ. ಮನುಷ್ಯರೆಲ್ಲ ಕೆಟ್ಟವರೇನಲ್ಲ. ಆದರೆ ಫಲಕಾರೀ ಸಸ್ಯಕ್ಕಿಂತ ಕಳೆ ಬೆಳೆಯುವುದೇ ಬೇಗ ನೋಡಿ.
          ಆದರೂ ನಾನು ಆಸೆಯನ್ನೇನೂ ಕಳೆದುಕೊಂಡಿಲ್ಲ. ಮೇಲೆಲ್ಲ ಅಲೆಗಳಿದ್ದರೂ ತಳದಲ್ಲಿ ಶಾಂತವಾಗಿಯೇ ಇರುವ ನನ್ನೊಡಲಂತೆ ತಳದಲೆಲ್ಲೋ ಒಂದು ಸತ್ವದ ಬೆಳ್ಳಿತೊರೆ ಈ ಲೋಕದಲ್ಲೂ ಹರಿಯುತ್ತಿದೆ. ಅದು ಕೆಟ್ಟದ್ದನ್ನು ಬಹಳ ಕಾಲ ಸಹಿಸುವುದಿಲ್ಲ ಎಂದೇ ನನ್ನ ನಂಬಿಕೆ. ಭುಗಿಲೆದ್ದು ಜ್ವಾಲಾಮುಖಿಯಂತೆ ಸರ್ವನಾಶ ಮಾಡುವುದಿಲ್ಲ ಅದು. ಹಾಲುಕ್ಕಿದಂತೆ ಉಕ್ಕಿ ಭಾಗ್ಯದ ಬಾಗಿಲನ್ನು ತೆರೆಯುತ್ತದೆ. ಆಗ ಯಾರೂ ನನ್ನನ್ನು ಒತ್ತುವುದಿಲ್ಲ. ನೀರಿನಲ್ಲಿ ಸಸ್ಯಗಳು ಬೆಳೆದು ಉತ್ತಮ ಫಲಗಳನ್ನು ನೀಡುತ್ತವೆ. ವೈರವಿಲ್ಲದೆ ಪ್ರಾಣಿಗಳೆಲ್ಲ ನೀರ್ಗುಡಿದು ನನ್ನನ್ನು ಹರಸುತ್ತವೆ. ತಟಗಳಲ್ಲೆಲ್ಲ ನಂದನವನಗಳು ಉಂಟಾಗಿ ಹಲಸು-ಮಾವುಗಳಿಗೂ ಮರಗಳ ಮೇಲೆ ಗಿಳಿ-ಕೋಗಿಲೆಗಳಿಗೂ ಆಶ್ರಯತಾಣವಾಗುತ್ತದೆ. ಮನುಷ್ಯ-ಮನುಷ್ಯರ ನಡುವಣ ಗೋಡೆಗಳೆಲ್ಲ ಮಾಯವಾಗಿ ನನ್ನ ದಂಡೆಯ ಮೇಲೆಲ್ಲ ಸೋದರರ ಒಡನಾಟ ವಿಜೃಂಭಿಸುತ್ತದೆ. ಇಲ್ಲಿ ಕುಳಿತು ಜನ ನಾನು ನಗುವುದನ್ನೂ ಅಳುವುದನ್ನೂ ರೋಷಗೊಳ್ಳುವುದನ್ನೂ ಹಾಡುವುದನ್ನೂ ಕಾಡುವುದನ್ನೂ ಆಲೈಸುತ್ತಾರೆ; ಮೌನವಾಗಿ ಕುಳಿತು ತಮ್ಮೊಳದನಿಯನ್ನು ಕೇಳಿಸಿಕೊಳ್ಳುತ್ತಾರೆ. ತಮ್ಮ ಸನ್ನಡೆಯನ್ನು ತೋರುತ್ತಾರೆ.  ನನ್ನ ಮೊದಲಿನ ವೈಭವ ಮೈದಾಳುತ್ತದೆ.
          ನನ್ನೊಳ ಸಂಗೀತವನ್ನು ಜನ ಕೇಳುತ್ತಾರೆ. ನನ್ನಲ್ಲಿ ಮುಖ ನೋಡಿಕೊಳ್ಳುತ್ತಾರೆ. ತಮ್ಮ ಅಜ್ಜಿ ಅಜ್ಜ ಮುತ್ತಜ್ಜಿ ಮುತ್ತಜ್ಜರ ನೆರಳುಗಳನ್ನು ನೋಡುತ್ತಾರೆ. ಪರಂಪರೆಯಿಂದ ವರ್ತಮಾನವನ್ನು ಕಾಣುತ್ತಾ ಭವಿಷ್ಯತ್ತನ್ನು ಸ್ವರ್ಗವಾಗಿಸಲು ಯೋಜನೆಗಳನ್ನು ರೂಪಿಸುತ್ತಾರೆ. ಅವರು ಪ್ರೀತಿಯ ಧಾರೆಗಳಲ್ಲಿ ಮೀಯುತ್ತಾರೆ. ಎಲ್ಲರ ಪ್ರೀತಿಯ ಬಟ್ಟಲುಗಳೂ ತುಂಬುತ್ತವೆ. ಹಂಚಿಕೊಂಡು ಆನಂದಿಸುತ್ತಾರೆ. ಆ ದಿನ ಬೇಗ ಬರುವುದೆಂದು ನನ್ನ ನಂಬಿಕೆ.


No comments:

Post a Comment