Search This Blog

Friday, 13 January 2017

ಮುಳಿಯರು ಕಲಾಮರೂ



                                 ಮುಳಿಯರು ಕಲಾಮರೂ


         ಕೃಷ್ಣಾಷ್ಟಮಿಗೂ ಬುಡಾನುಸಾಬರಿಗೂ ಏನು ಸಂಬಂಧ ಎಂಬಂತೆ ಕಾಣಿಸಬಹುದು ಈ ಶೀರ್ಷಿಕೆ. ಅವರು ಬೇರೆ ಬೇರೆ ಧರ್ಮಾವಲಂಬಿಗಳು ಎಂಬಷ್ಟರಿಂದಲೇ ಅಲ್ಲ.ಮುಳಿಯ ತಿಮ್ಮಪ್ಪಯ್ಯ  ಒಬ್ಬ ಪ್ರಾಚೀನ ಕನ್ವಿನಡ ದ್ವಾಂಸ; ಅಬ್ದುಲ್ ಕಲಾಮ್ ಮಿಸೈಲ್ ವಿಜ್ಞಾನಿ, ಈಚೆಗೆ ರಾಷ್ಟ್ರಪತಿಯಾಗಿದ್ದವರು. ಆದರೆ ಇಂತಹ ವೈರುಧ್ಯಗಳ ನಡುವಣ ನೇಯಿಗೆಯೇ ಅಲ್ಲವೆ ನಮ್ಮೀ ಭವ್ಯ ಭಾರತ!!
          ಭವಿಷ್ಯವನ್ನು ಸುಖಮಯ, ಕೀರ್ತಿಪೂರ್ಣ ಮತ್ತು ಸುಂದರತರವಾಗಿಸುವುದು ಹೇಗೆ ಇದೇ ಕಲಾಮರ ಒಂದಂಶದ ಕಾಳಜಿ. ಅದಕ್ಕೆಂದೇ ಅವರು ಹೋದಹೋದಲ್ಲೆಲ್ಲ ಮುಂದಿನ ಪ್ರಜೆಗಳೊಂದಿಗೆ ಮಾತನಾಡುವ ಧರ್ಮೋತ್ಸಾಹಯುತ ಕಾಳಜಿ  ತೋರಿದ್ದು; ಅವರ ಮಾತು ಸಮಾಜದ ಪ್ರತಿಯೊಂದು ನಡೆಯನ್ನು ಒಳಗೊಳ್ಳುತ್ತಿದ್ದುದು. ಇಂತಹ ಒಂದು ಸಂದರ್ಭದಲ್ಲಿ ಹುಡುಗಿಯೊಬ್ಬಳು ರಾಷ್ಟ್ರಪತಿ ಮಹೋದಯರನ್ನು ಕೇಳಿದಳು: ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರವನ್ನು ತೊಲಗಿಸುವಲ್ಲಿ ತನ್ನಂತಹ ವಿದ್ಯಾರ್ಥಿಯ ಪಾತ್ರವೇನೆಂದು. ಒಂದು ಕ್ಷಣ ಸ್ತಂಭಿತರಾದ ಕಲಾಮ್ ಹೇಳಿದರು - ಭ್ರಷ್ಟಾಚಾರ ನಿರ್ಮೂಲನೆಯನ್ನು ನಿನ್ನಂತಹವರು ಮನೆಯಿಂದ ಪ್ರಾರಂಭಿಸಬೇಕೆಂದು. ತನ್ನ ತಂದೆ ಅಥವ ತಾಯಿ ಅಥವ ಇಬ್ಬರೂ ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿದ್ದಾರೆಂದಾದರೆ ಅವರು ಮಾಡುತ್ತಿರುವುದು ಸರಿಯಲ್ಲವೆಂಬುದನ್ನು ಮಕ್ಕಳು ಅವರಿಗೆ ಹೇಳಬೇಕು; ಅವರು ಭ್ರಷ್ಟ ವಿಧಾನಗಳನ್ನು ಬಳಸದಂತೆ ತಡೆಯಬೇಕು. ಹೀಗೆ ಪ್ರತಿಮನೆಯೂ ಸತ್ಯವಿಧಾನದ ಮಾದರಿಯಾದರೆ ದೇಶವೇ ಸತ್ಯಯುಗದಲ್ಲಿ ಪ್ರವರ್ತಿಸುತ್ತದೆ.

             ಇದೇ ಮುಳಿಯರ ದೃಷ್ಟಿ ಕೂಡ. ಅವರ ನಡೆನುಡಿಗಳು ಇಂದು ಕಾಣೆಯಾಗಿರಬಹುದು. ಬರಹ ಅಕ್ಷರ; ಮುಳಿಯರ ಬರಹಗಳು ಇಂದಿಗೂ ಲಭ್ಯ. ಅವುಗಳಲ್ಲಿ ಕಾಣಸಿಗುವುದು ಮುಳಿಯರ  ಈ ದೃಷ್ಟಿ. 
               ಮುಳಿಯರದು ರಾಷ್ಟ್ರಮಟ್ಟದ ಕರಿಶ್ಮ ಅಲ್ಲ. ಅವರು ರಾಷ್ಟ್ರಮಟ್ಟದಲ್ಲಿ ಮಾತನಾಡುವವರಲ್ಲ. ಸ್ಥಳೀಯವಾಗಿ ಕಾಡುವ ಪ್ರಶ್ನೆಗಳಿಗೆ ಉತ್ತರ ಹುಡುಕುವವರು. ತಮ್ಮ ಸುತ್ತಣಕ್ಕೆ ಪ್ರತಿಕ್ರಿಯಿಸುತ್ತಾ ಸಾರ್ವತ್ರಿಕವನ್ನು ಅನಾವರಣಗೊಳಿಸುವವರು. ಸಾಮಾಜಿಕ ಕೆಡುಕುಗಳನ್ನು ಬಿಡಿಸುವವರು. ಈ ನಿಟ್ಟಿಲ್ಲಿ ಅವರ ಕಾದಂಬರಿಗಳಲ್ಲೊಂದಾದ  ಪಶ್ಚಾತ್ತಾಪದ ಘಟನೆಯೊಂದನ್ನು ಉದಾಹರಿಸಬಹುದು.

                ವಿಟ್ಲ ಸೀಮೆಯ ಕುಟುಂದಲ್ಲೊಬ್ಬ ಭ್ರಷ್ಟ. ಅವನ ಹೆಸರು ನಾಗಪ್ಪ. ತಾನು ಯಾವ ಮರದ ನೆರಳಿನಿಂದಾಗಿ ಬೆಳೆದನೋ ಅದಕ್ಕೇ ಬದನಿಕೆಯಾಗುವ ಪರಿ. ಮುಗ್ಧ ಕುರಿಯ ಮುಖವಾಡ ತೊಟ್ಟ ತೋಳದ ಹಾಗೆ. ತನ್ನ ಸ್ವಾರ್ಥಕ್ಕಾಗಿ ಸುಳ್ಳು ಸುಲಿಗೆ ಕೊಲೆ ಯಾವುದಕ್ಕೂ ಹೇಸುವವನಲ್ಲ. ಇವನ ಮಗ ನಾರಾಯಣ. ತನ್ನನ್ನು ತಾನು ತೇದು ತ್ಯಜಿಸಿಕೊಂಡು ತನ್ನಪ್ಪನ ಪ್ರವೃತ್ತಿಯನ್ನು ತಿದ್ದಿ ಸಾಧಿಸಿದವ ಈ ಕುಲ ಪುತ್ರ. ಕೊನೆಯಲ್ಲಿ ತನ್ನ ತಪ್ಪುಗಳಿಗೆಲ್ಲ ಪಶ್ಚಾತ್ತಾಪಪಟ್ಟು ಸುತ್ತಣವನೆಲ್ಲ ಸಂಭ್ರಮದಲ್ಲಿ ಮುಳುಗಿಸುತ್ತಾನೆ ನಾಗಪ್ಪ. ಮಗ ಮನೆಯನ್ನು ಹೀಗೆ ಸರಿಮಾಡಿದ; ಕುಲಪುತ್ರನಾದ. ಇದುವೆ ಕೃತಿಯ ನಾಲ್ಕು ಕಾಲ ನಿಲ್ಲುವ ನಿಲುವು.

                  ಮಹಾಭಾರತದಲ್ಲಿ ವಿದುರ ನೀಡಿದ ನೀತಿಯೂ ಇದೇ. ಇದೇ ರಾಮಾಯಣದಲ್ಲಿ ವಿಭೀಷಣ ತೋರಿದ ರೀತಿ. ಕುರುಡ ಧೃತರಾಷ್ಟ್ರನ ನೂರು ಮಕ್ಕಳು ಬೇರೆಯೇ ತರಹದವರಾದರೆ ಏನಾಯಿತು? ಮಗಸಮಾನನಾದ ವಿದುರ ದಾರಿತಪ್ಪಿದವರಿಗೆ ಹೇಳಬೇಕಾದ್ದನ್ನು ಹೇಳುವ ಧೈರ್ಯ ಮಾಡಿದ. ವಿಭೀಷಣ ತನ್ನ ರಾಕ್ಷಸೀ ಅಣ್ಣತಮ್ಮಂದಿರನ್ನು ಸರಿದಾರುಗೆ ತರಲು ಯತ್ನಿಸಿದ. ಈ ನೆಲದ ಸಾರಸತ್ವ ರಸವೆ ಇಂತಹದು. ಈ ಸತ್ಯ ತಳದಲ್ಲೆಲ್ಲೋ ತಳುವಿ ಹರಿಯುತ್ತಿರುವುದರಿಂದಲೇ ಭಾರತದ ಭವಿಷ್ಯ.

(ಈ ಲೇಖನವು ಜುಲೈ 2006ರ ಯುಗಪುರುಷದಲ್ಲಿ ಪ್ರಕಟವಾಗಿದೆ).

No comments:

Post a Comment