Search This Blog

Thursday, 12 January 2017

ಮಗಳಿಗೆ ಬರೆದ ಪತ್ರಗಳು ಇತರರಿಗೂ ಆಸಕ್ತಿದಾಯಕವಾಗಬಲ್ಲವೆ?



ಮಗಳಿಗೆ ಬರೆದ ಪತ್ರಗಳು ಇತರರಿಗೂ ಆಸಕ್ತಿದಾಯಕವಾಗಬಲ್ಲವೆ?
ತಂದೆಯೊಬ್ಬ ಮಗಳಿಗೆ ಬರೆದ ಪತ್ರಗಳು ಇತರರಿಗೂ ಆಸಕ್ತಿದಾಯಕವಾಗಬಲ್ಲವೆ? ಉಪಯುಕ್ತವಾಗಬಲ್ಲವೆ? ನಮ್ಮ ನಿಮ್ಮ ಪತ್ರಗಳು ಹಾಗಾಗದಿರಬಹುದು. ಜ್ಞಾನಾನುಭವಸಾಧಕನೊಬ್ಬ ತನ್ನ ಮಗಳೂ ಅದೇ ರಿತಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಬರೆದ ಪತ್ರಗಳು ಹಾಗಾದರೆ ಆಶ್ಚರ್ಯವಿಲ್ಲ. ಇಂತಹ ಪತ್ರಗಳ ಸಂಗ್ರಹಗಳು ವಿಶ್ವ ಸಾಹಿತ್ಯದಲ್ಲಿ ಹಲವು ಇವೆ. ಇಲ್ಲಿದೆ ಅಂತಹ ಪತ್ರಗಳ ಸಂಗ್ರಹವೊಂದು: ಜವಹರಲಾಲ ನೆಹ್ರೂ ಅವರು ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಯವರಿಗೆ ಬರೆದ ಪತ್ರಗಳ ಸಂಗ್ರಹ ಪ್ರಿಯ ಇಂದಿರಾ... ನೆಹ್ರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆಅನುವಾದಿಸಿಕೊಟ್ಟಿದ್ದಾರೆ ಮಹಾಬಲೇಶ್ವರ ರಾವ್ ಇವರು. ಪುಟಗಳು 81+7. ಪ್ರಕಾಶಕರು ಕೈಂತಜೆ ಪ್ರಕಾಶನ ಪೇರಮೊಗರು ದ ಕ. ಬೆಲೆ ರೂ.35/-
ಪತ್ರಸಾಹಿತ್ಯವು ಕನ್ನಡದಲ್ಲಿ ವಿಸ್ತಾರವಾಗಿ ಬೆಳೆದಿಲ್ಲ. ಬೇರೆ ಭಾಷೆಗಳಲ್ಲಿ ಕೂಡ ಕೃತಿಗಳು ತುಂಬ ವಿಪುಲ ಸಂಖ್ಯೆಯಲ್ಲೇನಿಲ್ಲ. ಆದರೂ ಹೆಸರಾಂತ ವ್ಯಕ್ತಿಗಳಿಂದ ಮೌಲಿಕವಾದ ಕೃತಿಗಳು ರಚನೆಯಾಗಿವೆ. ಇಂತಹ ಪತ್ರಗಳು ಲೇಖಕರ ಐತಿಹಾಸಿಕ ರಾಜಕೀಯ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಪರಿಚಯಿಸುತ್ತಿದ್ದು ಇವುಗಳ ಶೈಲಿ ಆತ್ಮೀಯವೂ ನೇರವೂ ಸರಳವೂ ಆಗಿ ಮುದ ನೀಡುತ್ತವೆ. ಜೈಲುವಾಸದಿಂದಾಗಿ ಮಗಳೊಂದಿಗಿನ ಉಲ್ಲಾಸಕರ ಮತ್ತು ಹರ್ಷದಾಯಕ ಒಡನಾಟದಿಂದ ವಂಚಿತನಾದ ತಂದೆ ಪತ್ರಗಲ ಮೂಲಕ ಆ ಕೊರತೆಯನ್ನು ನೀಗಿಕೊಳ್ಳುತ್ತಾ ಮಗಳಿಗೆ ತಾನು ಹೇಳಬೇಕೆಂದಿದ್ದ ವಿಷಯಗಳನ್ನು ಪತ್ರಮುಖೇನ ತಿಳಿಸಿಕೊಡುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.
ವಿಶ್ವದ ಪ್ರಾರಂಭ, ಗುಂಪುಗಳಾಗಿ ಬದುಕಲು ಮಾನವ ಪ್ರಾರಂಭಿಸಿದ್ದು, ನಾಗರೀಕತೆ ಮೊದಲ್ಗುಂಡುದು, ಧರ್ಮದ ಉಗಮ, ಪ್ರಜಾಪ್ರಭುತ್ವ ದ ಬೇಳವಣಿಗೆ ಹೀಗೆ ಹಲವು ಆಯಾಮಗಳನ್ನು ಈ ಪತ್ರಗಳಲ್ಲಿ ಕಾಣಬಹದು. ಇವೆಲ್ಲ ಹತ್ತು ಹನ್ನೆರಡು ವರ್ಷದ ಶಾಲಾ ವಿದ್ಯಾರ್ಥಿನಿಯ ಕಲ್ಪನೆಗೆ ನಿಲುಕುವ ರೀತಿಯಲ್ಲಿ ಇಲ್ಲಿ ಮೂಡಿವೆ. ಓದುತ್ತಾ ಹೋದಂತೆ ಇವು ನೆಹ್ರೂ ಅವರು ತಮ್ಮ ಮಗಳಿಗೆ ಬರೆದ ಪತ್ರಗಳಾಗಿ ಮಾತ್ರ ಉಳಿಯುವುದಿಲ್ಲ. ಪ್ರತಿಯೊಬ್ಬ ತಂದೆ ತನ್ನ ಮಗ ಅಥವ ಮಗಳನ್ನು ಕುರಿತು ಹೇಳುತ್ತಿರುವ ಕಥಾನಕಗಳಾಗಿ ಮನಂಬುಗುತ್ತವೆ.
ನೆಹ್ರೂ ಅವರಿಗೆ ಪ್ರಿಯವಾದ ಎಡಪಂಥೀಯ ವಿಚಾರಗಳು ಅಲ್ಲಲ್ಲಿ ಸಂವಹನಗಳ್ಳುತ್ತವೆ. ಈ ಎಡಪಂಥೀಯ ವಿಚಾರವೆಂಬುದು ಒಂದು ಅಚ್ಚರಿಯ ಸಂಗತಿ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅರ್ಥವಾಗುವಂತಹದು. ಶ್ರಮಿಕರು ಸಂಘರ್ಷದ ಮುಖಾಂತರ ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವ ಕಾರ್ಯ. ಕೆಲವರ ಮತದಲ್ಲಿ ಇದು ಶ್ರಮಿಕರಿಗೆ ನ್ಯಾಯ ಒದಗಿಸುವ ತತ್ವ. ಬೇರೆ ಕೆಲವರಿಗೆ ಶ್ರೀಮಂತರಿಂದ ಸಂಪತ್ತನ್ನು ಕಿತ್ತು ಬಡವರಿಗೆ ಹಂಚುವ ಕಾರ್ಯವನ್ನು ಪ್ರೇರಿಸುವ ತತ್ವ. ಮತ್ತೆ ಕೆಲವರಿಗೆ ರಾಜಕೀಯ ಅಧಿಕಾರ ಹಿಡಿಯುವ ತಂತ್ರ. ಆದರೆ ನೆಹ್ರೂ ಅವರಲ್ಲಿ ಇವು ಯಾವುವು ಅತಿಗಳಿಗೆ ಹೋಗದೆ ಆರೊಗ್ಯಕರ ಪ್ರವೃತ್ತಿಯಾಗಿ ಮತ್ತು ಎಲ್ಲರಿಗೂ ಆಪ್ತವಾದ ವಿಚಾರವಾಗಿ ಇಲ್ಲಿ ಕಂಡುಬರುತ್ತದೆ.

ಇವೆಲ್ಲ ಚಾಚಾನೆಹರೂ ಅವರ ವಿಚಾರಗಳಾದುವು. ಇಲ್ಲಿ ಮಹಾಬಲೇಶ್ವರರಾಯರದೇನು ಔಚಿತ್ಯ? ನೆಹರೂ ಅವರು ಇಂಗ್ಲಿಷಿನಲ್ಲಿ ತಮ್ಮ ಮಗಳಿಗೆ ಬರೆದಿದ್ದರು. ಅದು ಎಷ್ಟೇ ಸರಳ ಭಾಷೆಯಲ್ಲದ್ದರೂ  ನಮ್ಮ ಮಕ್ಕಳಿಗೆ ಎಟುಕುವಂತಹುದಲ್ಲ. ಇದನ್ನು ಕಡೆಯ ಪಕ್ಷ ಏಳು ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ದಕ್ಕುವ ಕನ್ನಡದಲ್ಲಿ ಸುಲಲಿತವಾಗಿ ಒದಗಿಸಿರುವುದು ರಾಯರ ವೈಶಿಷ್ಟ್ಯ. ರಾಯರು ಸರಳವಾದ ಕನ್ನಡದಲ್ಲಿ ಇದೊಂದು ಸ್ವೋಪಜ್ಞ ಕೃತಿಯೇನೋ ಅನ್ನುವ ಹಾಗೆ ನಮ್ಮ ಮುಂದಿಟ್ಟಿದ್ದಾರೆ. ಇದು ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳ ಲೈಬ್ರರಿ ಓದಿಗಾಗಿ ಇಡಲೇ ಬೇಕಾದ ೊಂದು ಪುಸ್ತಕ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಓದಲು ಸೂಕ್ತವಾಗಿದೆ. ಇವುಗಳನ್ನು ಓದುವುದರಿಂದ ೆಲ್ಲ ಮಕ್ಕಳು ಇಂದಿರಾ ಗಾಂಧಿಯವರಂತೆ ಆಗಿಬಿಡುತ್ತಾರೆ ಎಂದೇನೂ ಇಲ್ಲ. ಆದರೆ ಇಲ್ಲಿರುವ ನಿರೂಪಣೆಗಳು ನಾಡಿನ ಮಕ್ಕಳಲ್ಲಿ ಉತ್ಸಾಹ, ಪ್ರೇರಣೆ ಮತ್ತು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಒಳನೋಟಗಳನ್ನು ನೀಡುವುದರಲ್ಲಿ ಸಹಾಯವಾದಾವು.

No comments:

Post a Comment