Search This Blog

Wednesday, 21 October 2015

ಹತ್ತೊಂಬತ್ತನೆಯ ಶತಮಾನದ ಕನ್ನಡ ವ್ಯಾಕರಣಗಳು

ಕನ್ನಡದಲ್ಲಿ ಆಧುನಿಕ ರೀತಿಯ ಸಾಹಿತ್ಯ ಚರಿತ್ರೆಯ ರಚನೆ ಪ್ರಾರಂಭವಾಗಿ ನೂರೈವತ್ತು ವರ್ಷಗಳೇ ಸಂದಿವೆ. ಕಾಲಕಾಲಕ್ಕೆ ಸಾಹಿತ್ಯೇತಿಹಾಸದ ಪರಿಷ್ಕರಣಕಾರ್ಯ  ನಡೆಯುತ್ತಲೇ ಬಂದಿದೆ. ಹೊಸಮಾಹಿತಿಗಳ ಸಂಗ್ರಹ, ಸಂಸ್ಕೃತಿಯ ಬದಲಾವಣೆ ಮತ್ತು ಸಾಹಿತ್ಯದ ತಾತ್ವಿಕ ನೆಲೆಗಳು ಬದಲಾಗುವುದು - ಇವುಗಳಿಂದಾಗಿ ಇಂತಹ ಪರಿಷ್ಕರಣೆ ಅಗತ್ಯ. ಕನ್ನಡ ಸಾಹಿತ್ಯ ಸಧ್ಯದ ಪರಿವೇಷದಲ್ಲಿ ಸಾಹಿತ್ಯೆ ಚರಿತ್ರಯನ್ನು ಹದಿನೇಳ ಸಂಪುಟಗಳಲ್ಲಿ ಹೊಸದಾಗಿ ರಚಿಸಲು ಪ್ರವೃತ್ತಿಸಿದೆ. ಈ ಸಾಹಸದ ಪ್ರಥಮ ಸಂಪುಟ ಪ್ರೊ ಎ ವಿ ನಾವುಡ ಇವರ ಸಂಪಾದಕತ್ವದಲ್ಲಿ ಈಗ ಹೊರಬಂದಿದೆ. ಅದರಲ್ಲಿ ಹೊಸಮಾದರಿಯ ವ್ಯಾಕರಣಗಳ ಬಗ್ಗೆ ಲೇಖನ ಬರೆಯುವ ಅವಕಾಶ ನನಗೆ ಲಭಿಸಿದ್ದು ಆ ಲೇಖನವನ್ನು ಇಲ್ಲಿನೀಡುತ್ತಿದ್ದೇನೆ:

                                             ಹೊಸ ಮಾದರಿಯ ಕನ್ನಡ ವ್ಯಾಕರಣಗಳು
                        
ಕನ್ನಡ ವ್ಯಾಕರಣಗಳ ಚರಿತ್ರೆಯನ್ನು ಕನ್ನಡದ ಪ್ರಥಮ ಉಪಲಬಬ್ಧಕೃತಿ ಶ್ರೀವಿಜಯನ ಕವಿರಾಜಮಾರ್ಗದಿಂದಲೇ ಗುರುತಿಸುತ್ತಾರೆ. ಇದೊಂದು ಪೂರ್ಣಪ್ರಮಾಣದ ವ್ಯಾಕರಣಗ್ರಂಥವಲ್ಲದಿದ್ದರೂ ಇದರಲ್ಲಿ  ವ್ಯಾಕರಣಕ್ಕೆ ಸಂಬಂಧಿಸಿದ ಹಲವು ಮುಖ್ಯ ಅಂಶಗಳನ್ನು ಕೃತಿಕಾರ ಪ್ರತಿಪಾದಿಸಿದ್ದಾನೆ. ಸಂಧಿ, ವಿಸಂಧಿ, ಸಮಸಂಸ್ಕೃತ, ಅಧ್ಯಾಹಾರ ಮುಂತಾದ ಪಾರಿಭಾಷಿಕ ಪದಗಳನ್ನೂ ಪರಿಕಲ್ಪನೆಗಳನ್ನೂ ಮೊದಲ ಬಾರಿಗೆ ಪರಿಚಯಿಸಿ ವಿವರಸಿರುವುದು ಈ ಕೃತಿಯಲ್ಲಿಯೇ. ಪೂರ್ಣಪ್ರಮಾಣದ ವಿಸ್ತಾರವಾದ ವ್ಯಾಕರಣಕೃತಿಗಳು ಅನಂತರ ರಚನೆಯಾದವು. ಕವಿರಾಜಮಾರ್ಗದನಂತರ ಹದಿನೆಂಟನೆಯ ಶತಮಾನದ ಅಂತ್ಯದ ವರೆಗೆ ನಾಲ್ಕು ಹಳಗನ್ನಡ ವ್ಯಾಕರಣಗಳು  ರಚನೆಯಾಗಿವೆ. ಹನ್ನೊಂದನೆಯ ಶತಮಾನದಲ್ಲಿ ನಾಗವರ್ಮನ ಎರಡು (ಕರ್ನಾಟಕ ಭಾಷಾಭೂಷಣ ಸಂಸ್ಕೃತದಲ್ಲಿ ಮತ್ತು ಶಬ್ದಾದರ್ಶ ಕನ್ನಡದಲ್ಲಿ), ಹದಿಮೂರನೆಯ ಶತಮಾನದಲ್ಲಿ ಕೇಶಿರಾಜನ  ಒಂದು (ಶಬ್ದಮಣಿದರ್ಪಣ), ಹದಿನೇಳನೆಯ ಶತಮಾನದಲ್ಲಿ  ಭಟ್ಟಾಕಳಂಕನ ಒಂದು (ಕರ್ನಾಟಕ ಶಬ್ದಾನುಶಾಸನ) – ಇವೇ ಆ ನಾಲ್ಕು ವ್ಯಾಕರಣ ಕೃತಿಗಳು. ಸರಾಸರಿ ನೋಡಿದರೆ ಪ್ರತಿಶತಮಾನಕ್ಕೆ ಅರ್ಧ ಕೃತಿಗಿಂತ ಕಡಿಮೆ.  ಹತ್ತಂಬತ್ತನೆಯ ಶತಮಾನದಲ್ಲಿ ಈ ಪರಿಸ್ಥಿತಿ ಬದಲಾಯಿತು.
ಹತ್ತಂಬತ್ತನೆಯ ಶತಮಾನವನ್ನು ಶಾಸ್ತ್ರಸಾಹಿತ್ಯದ, ಅದರಲ್ಲೂ ವ್ಯಾಕರಣ ರಚನೆಯ ಸುವರ್ಣಕಾಲ ಎಂದು ಗುರುತಿಸಬಹುದು. ಈ ಕಾಲದಲ್ಲಿ ಹದಿನೇಳಕ್ಕೂ ಹೆಚ್ಚು ವ್ಯಾಕರಣಕೃತಿಗಳ ರಚನೆಯಾಗಿದೆ. ಇವುಗಳಲ್ಲಿ ಏಳು ಕ್ರೈಸ್ತ ಮಿಶನರಿಗಳಿಂದ ರಚಿತವಾದುವು. ಉಳಿದವುಗಳಲ್ಲಿ ಒಂದು ಕೃತಿ ಇಂಗ್ಲಿಷ್ ಆಡಳಿತಗಾರ ಜಾನ್ ಮೆಕ್ಕೆರೆಲನಿಂದ ರಚಿತ. ಇತರ ವ್ಯಾಕರಣಗಳು ದೇಶೀವಿದ್ವಾಂಸರು ರಚಿಸಿದವು. ಸಂಖ್ಯೆಯೊಂದೇ ಈ ಶತಮಾನದ ವ್ಯಾಕರಣಕೃತಿಗಳ ವೈಶಿಷ್ಟ್ಯವಲ್ಲ. ಪದಗಳ ವರ್ಗೀಕರಣ, ನಿಯಮಗಳ ಮಂಡನೆ, ಉದಾಹರಣೆಗಳ ಆಯ್ಕೆ, ಪ್ರತಿಪಾದನಾ ರೀತಿ, ವ್ಯಾಕರಣದಿಂದಾಗಬೇಕಾದ ಪ್ರಯೋಜನದ ಪರಿಕಲ್ಪನೆ – ಇಂತಹವೆಲ್ಲವೂ  ಹೊಸ ಸ್ವರೂಪವನ್ನು ಪಡೆದು ಹೊಸಹುರುಪನ್ನು ತಂದವು. ಭಾಷೆಯ ಸ್ವರೂಪವನ್ನು ಪ್ರಮಾಣಭೂತ ಪ್ರಯೋಗಗಳ ಆಧಾರದಲ್ಲಿ ಸ್ಪಷ್ಟವಾಗಿ ನಿರೂಪಿಸುವುದು ಹಿಂದಿನ ವ್ಯಾಕರಣಗಳ  ಮುಖ್ಯ ಉದ್ದೇಶ. ಸಾಹಿತ್ಯ ರಚನೆಯಲ್ಲಿ ಮತ್ತು ಅಧಿಕೃತ ವ್ಯವಹಾರಗಳಲ್ಲಿ ಅಪಪ್ರಯೋಗಗಳಾಗದಂತೆ ಎಚ್ಚರವಹಿಸಿ ಭಾಷಾ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಮಿಶನರಿ ವ್ಯಾಕರಣಕಾರರ ಉದ್ದೇಶವೇ ಬೇರೆ. ಕನ್ನಡ ಬಾಷೆಯನ್ನು ಕಲಿಯುವುದಕ್ಕೆ ಅನುಕೂಲವಾಗುವಂತೆ ನಿಯಮಗಳನ್ನು ನಿರೂಪಿಸುವುದು, ಕನ್ನಡದಲ್ಲಿ ವ್ಯವಹರಿಸಲು ಪಾಶ್ಚಾತ್ಯರನ್ನು ಅಣಿಗೊಳಿಸುವುದು, ಕ್ರೈಸ್ತ ಧಾರ್ಮಿಕ ಕೃತಿಗಳನ್ನು ಕನ್ನಡೀಕರಿಸುವುದು,  ಅವುಗಳನ್ನು ಕನ್ನಡದಲ್ಲಿ ರಚಿಸುವುದು – ಇಂತಹ ಉದ್ದೇಶಗಳು ಮುಂಚೂಣಿಗೆ ಬಂದವು. ಕನ್ನಡ ಭಾಷೆಯ ಹುಟ್ಟು ಬೆಳವಣಿಗೆ ಸ್ಥಾನಮಾನಗಳನ್ನು ವಿಶ್ವದ ಭಾಷೆಗಳ ತುಲನೆಯಲ್ಲಿ ಅರ್ಥಮಾಡಿಕೊಳ್ಳುವುದು ಕಿಟೆಲನಂತಹ ವಿದ್ವಾಂಸರಿಗೆ ಮುಖ್ಯವಾದವು. ಸಂಸ್ಕೃತದ ಕಣ್ಣಿನಿಂದ ಕನ್ನಡವನ್ನು ನೋಡುವ ಪ್ರವೃತ್ತಿ ಬದಲಾಗಿ ಇಂಗ್ಲಿಷ್ ಕಣ್ಣಿನಿಂದ ನೋಡುವ ಹೊಸ ಪ್ರವೃತ್ತಿ ಕಾಣಿಸಿಕೊಂಡು,  ಅನಂತರ ಒಂದು ಸಮನ್ವಯತೆಯಿಂದ ಕನ್ನಡದ ವ್ಯಾಕರಣ ನಿಯಮಗಳನ್ನು ನಿರ್ದುಷ್ಟವಾಗಿ ನಿರೂಪಿಸುವ ಪ್ರಯತ್ನಗಳಾದವು.  ಒಟ್ಟಿನಲ್ಲಿ ಸಂಖ್ಯೆ ಮತ್ತು ಸ್ವರೂಪಗಳೆರಡರಲ್ಲೂ ಕನ್ನಡ ವ್ಯಾಕರಣ ಹೊಸ ತಿರುವನ್ನು ಪಡೆದುಕೊಂಡಿತು.
            ವಿಲಿಯಮ್ ಕೇರಿಯ ಎ ಗ್ರಾಮರ್ ಆಫ್ ದಿ ಕುರ್ನಾಟ ಲ್ಯಾಂಗ್ವೇಜ್, ಸೆರಾಂಪುರ (1817) ಅಥವ ಕುರ್ನಾಟ ಭಾಷೆಯ ವ್ಯಾಕರಣ, ಜಾನ್ ಮೆಕೆರಲನ ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ (1820) ಅಥವ ಕರ್ನಾಟಕ ಭಾಷೆಯ ಒಂದು ವ್ಯಾಕರಣ, ಕೃಷ್ಣಮಾಚಾರ್ಯನ ಹೊಸಗನ್ನಡ ನುಡಿಗನ್ನನಡಿ(1838) ಇವುಗಳನ್ನು ಒಂದು ಗುಂಪಿನವೆಂದು ಸ್ವೀಕರಿಸಬಹುದು. ಇವೆಲ್ಲವೂ ಹೊಸಗನ್ನಡಕ್ಕೆ ಒತ್ತುಕೊಟ್ಟ, ಸಂಸ್ಕೃತ ವ್ಯಕಾರಣಗಳ ಚೌಕಟ್ಟಿನಲ್ಲೇ ಕನ್ನಡ ನಿಯಮಗಳನ್ನು ನಿರೂಪಿಸುವ ಮಾದರಿಯನ್ನು ಮೀರಿದ, ಹೊಸ ಪ್ರತಿಪಾದನಾ ರೀತಿ ಇನ್ನೂ ಸ್ಪಷ್ಟಗೊಳ್ಳದ ಹಂತಕ್ಕೆ ಸೇರಿದವು. ಕಿಟೆಲನ ಸಂಪಾದಿತ ಕೃತಿ ಕೇಶವನ ಶಬ್ದಮಣಿದರ್ಪಣ(1872) ಮತ್ತು ಜಾರ್ಜ್ ವುರ್ತನ  ಎ ಶಾರ್ಟ್ ಗ್ರಾಮರ್ ಆಫ್ ದಿ ಏನ್ಶಂಟ್ ಡಯಲಕ್ಟ್ ಆಫ್ ಕ್ಯಾನರೀಸ್ ಲ್ಯಾಂಗ್ವೇಜ್  ಅಥವ ಹಳೆ ಕನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು(1866)  – ಇವೆರಡೂ ಎರಡನೆಯ ಗುಂಪಿನವು. ಇವೆರಡೂ ಕೇಶಿರಾಜನ ಶಬ್ದಮಣಿದರ್ಪಣವನ್ನು ಅಕ್ಷರಶಃ ಅನುಸರಿಸಿದವು. ಅದನ್ನು ಅರ್ಥೈಸುವ ಸಂಕ್ಷೇಪಿಸುವ ಪ್ರವೃತ್ತಿಯವು. ಥಾಮಸ್ ಹಾಡ್ಸನ್ನನ  ಅನ್ ಎಲಿಮೆಂಟರಿ ಗ್ರಾಮರ್ ಆಫ್ ದಿ ಕನ್ನಡ ಆರ್ ಕ್ಯಾನರೀಸ್ ಲ್ಯಾಂಗ್ವೇಜ್(1859) ಅಥವ ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣ, ಫ್ರೀಡ್ರಿಶ್ ಜೀಗ್ಲರನ ಎ ಪ್ರಾಕ್ಟಿಕಲ್ ಕೀ ಟು ದಿ ಕ್ಯಾನರೀಸ್ ಲ್ಯಾಂಗ್ವೇಜ್(1882) ಅಥವ ಕನ್ನಡ ಭಾಷೆ ಕಲಿಯುವವರಿಗೆ ಸಹಾಯವು, ಬಿ ಗ್ರೇಟರನ ಟೇಬಲ್ಸ್ ಆಫ್ ಕ್ಯಾನರೀಸ್ ಲ್ಯಾಂಗ್ವೇಜ್(1884) ಅಥವ ಕನ್ನಡ ವ್ಯಾಕರಣ ಮಾಲೆ – ಇವು ಮೂರನೆಯ ಗುಂಪನ್ನು ರೂಪಿಸಿಕೊಳ್ಳುತ್ತವೆ. ಇವು ಸ್ಪಷ್ಟವಾಗಿ ಇಂಗ್ಲಿಷ್ ವ್ಯಾಕರಣದ ಚೌಕಟ್ಟಿನಲ್ಲಿ ಕನ್ನಡ ವ್ಯಾಕರಣವನ್ನು ನಿರೂಪಿಸುವಂತಹವು. ಪದಗಳನ್ನು ಅಷ್ಟವರ್ಗಗಳಲ್ಲಿ(ಪಾರ್ಟ್ಸ್ ಆಫ್ ಸ್ಪೀಚ್) ವರ್ಗೀಕರಿಸಿ ನಿರೂಪಿಸುವುದು ಇವುಗಳ ವೈಶಿಷ್ಟ್ಯ. ಪ್ರತಿಯೊಂದೂ ತನ್ನದೆ ರೀತಿಯಲ್ಲಿ ವಿಶಿಷ್ಟವಾಗಿದೆ. ಫರ್ಡಿನಂದ್ ಕಿಟೆಲನ ಎ ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ ಇನ್ ಇಂಗ್ಲಿಷ್ ಕಾಂಪ್ರೈಸೀಂಗ್ ದಿ ತ್ರೀ ಡಯಲಕ್ಟ್ಸ್(1903) ಕೃತಿಯನ್ನನು ಮೀರಿಸುವಂತಹ ಇನ್ನೊಂದು ಕನ್ನಡ ವ್ಯಾಕರಣವು ಇನ್ನೂ ಬರಬೇಕಾಗಿದೆ.  ಹೆಸರೇ ತಿಳಿಸುವಂತೆ ಇದು ಹಳಗನ್ನಡ-ನಡುಗನ್ನಡ-ಹೊಸಗನ್ನಡಗಳೆಂಬ ಕನ್ನಡದ ಮೂರು ಅವಸ್ಥೆಗಳಿಗೂ ಸಂಬಂಧಿಸಿದ ವ್ಯಾಕರಣ ನಿಯಮಗಳನ್ನು ನಿರೂಪಿಸುತ್ತದೆ. ಇವಲ್ಲದೆ ಶಾಲಾ ವ್ಯಾಕರಣಗಳ ಮತ್ತು ಕಿಟೆಲೋತ್ತರವಾಗಿ ದೇಶೀ ವಿದ್ವಾಂಸರು ರಚಿಸಿದ ಇನ್ನೊಂದು ವರ್ಗವಿದೆ. ಇದರಲ್ಲಿ ಕ್ರೈಸ್ತ ಮಿಶನರಿಗಳದೆಂದು ಹೇಳಬಹುದಾದ ಎರಡು ಕೃತಿಗಳು ದೇಶೀಯ ಪಂಡಿತರ ಏಳೆಂಟು ಕೃತಿಗಳೂ ಇವೆ..
ಕೇರಿ-ಮೆಕೆರಲ್-ಕೃಷ್ಣಮಾಚಾರ್ಯ
            ಕೇರಿ ವ್ಯಾಕರಣವು ಏಳು ಅಧ್ಯಾಯಗಳಲ್ಲಿ ಹರಡಿದ್ದು ನೂರಮೂವತ್ತೆಂಟು ಪುಟಗಳಷ್ಟು ವಿಸ್ತಾರವಾಗಿದೆ. ಅಕ್ಷರಗಳು, ಪದಗಳು, ನಾಮಪದಗಳ ವಾಕ್ಯರಚನೆ, ಸಮಾಸ ಪದಗಳು, ನಿಷ್ಪನ್ನ ಪದಗಳು, ಕ್ರಿಯಾ ಪದಗಳು, ಕ್ರಿಯಾಪದಗಳ ವಾಕ್ಯರಚನೆ – ಇವೇ ಏಳು ಅಧ್ಯಾಯಗಳು. ಮೊದಲನೆಯ ಅಧ್ಯಾಯದಲ್ಲಿ ಅಕ್ಷರಗಳ ವಿಷಯವಿದ್ದು, ಹದಿನಾರು ಸ್ವರಗಳು, ಇಪ್ಪತ್ತೈದು ವರ್ಗೀಯ ವ್ಯಂಜನಗಳು, ಒಂಬತ್ತು ಅವರ್ಗೀಯ ವ್ಯಂಜನಗಳು – ಹೀಗೆ ಐವತ್ತು ಅಕ್ಷರಗಳನ್ನು ನಿರೂಪಿಸಿದ್ದಾನೆ. ಸಂಸ್ಕೃತದಲ್ಲಿರುವ ಅಕ್ಷರಗಳಲ್ಲಿ ಯಾವುವು ಕನ್ನಡದಲ್ಲಿವೆ ಯಾವುವು ಇಲ್ಲ ಈ ರೀತಿಯಲ್ಲಲ್ಲ. ಕನ್ನಡದಲ್ಲಿ ಬಳಕೆಯಲ್ಲಿರುವ ಅಕ್ಷರಗಳನ್ನು ಬರೆದು ಮುಂದೆ ಅವುಗಳ ಇಂಗ್ಲಿಷ್ ಲಿಪ್ಯಂತರವನ್ನು ನೀಡುವುದು – ಈ ರೀತಿಯ ನಿರೂಪಣೆ ಮೊದಲ ಹಂತ. ಸ್ವರಗಳನ್ನು ಬರೆದು ಅನಂತರದಲ್ಲಿ ಅವುಗಳ ಬಳ್ಳಿಗಳು, ಇದಾದನಂತರ ವ್ಯಂಜನದೊಡನೆ ಸೇರಿದಾಗ ಉಂಟಾಗುವ ಅಕ್ಷರದ ಸ್ವರೂಪ ಮತ್ತು ಉಚ್ಚಾರಕ್ಕಾಗಿ ಅದರ ಇಂಗ್ಲಿಷ್ ಲಿಪ್ಯಂತರ – ಇದು ಇನ್ನೊಂದು ಹಂತ. ಒಂದು ವ್ಯಂಜನಕ್ಕೆ ಇನ್ನೊಂದು ಸೇರಿದಾಗ ಉಂಟಾಗುವ ಒತ್ತಕ್ಷರ ಮತ್ತು ಅದರ ಲಿಪ್ಯಂತರ ಇದು ಕಡೆಯ ಹಂತ. ಹೀಗೆ ಸ್ವೋಪಜ್ಞತೆ ತೋರಿದ್ದರೂ vowels ಅನ್ನು  ವ್ಯಂಜನಗಳೆಂದೂ,  consonants ಅನ್ನು ಸ್ವರಗಳೆಂದೂ(ಕೇರಿ:ಪು,1 )ತಪ್ಪಾಗಿ ಕರೆದಿದ್ದಾನೆ. ಅಲ್ಲದೆ ಅಕ್ಷರಗಳನ್ನು ಬರೆದಿರುವುದನ್ನು ನೋಡಿದರೆ ಇವನು ತೆಲುಗು ಅಕ್ಷರಗಳನ್ನೇ ಕನ್ನಡ ಅಕ್ಷರಗಳೆಂದು ಭ್ರಮಿಸಿರುವಂತೆ ತೋರುತ್ತದೆ. ಎರಡನೆಯ ಅಧ್ಯಾಯದಲ್ಲಿ  ಪದಗಳನ್ನು ಅಷ್ಟವರ್ಗಗಳಲ್ಲಿ ಗುರುತಿಸುವ ಪ್ರಯತ್ನವಿದೆ. ಇದರಲ್ಲಿ ತಪ್ಪಾದ ವರ್ಗನಾಮಗಳು, ಕೆಲವು ಕಡೆ ತಪ್ಪಾದ ಉದಾಹರಣೆಗಳು ಬಂದಿದ್ದು ಪ್ರಯತ್ನವು ಪ್ರಯತ್ನವಾಗಿ ಮಾತ್ರ ಉಳಿಯುತ್ತದೆ. ಉದಾಹರಣೆ:
                             “ಶರೀರ ಸಂಬಂಧ (Names of relationship) ಉದಾ. ತಂದೆ”
                             “ಜಾತಿವಾಚಕ (Generic term ) ಉದಾ, ಬ್ರಾಹ್ಮಣ”
                              “ಭಣವಾಚಕ ( Abstract substantiation) ಉದಾ. ಶುಕ್ಲತಾ”(ಕೇರಿ:ಪು,9-10)
ಇಲ್ಲಿ ಸಂಬಂಧವಾಚಿಗಳನ್ನು  ಶರೀರ ಸಂಬಂಧ ಎಂದು ತಪ್ಪಾಗಿ ಕರೆದಿರುವುದು, ಜಾತಿವಾಚಕಗಳನ್ನು ಸಾಮಾಜಿಕ ಜಾತಿಯಾಗಿ(ಬ್ರಾಹ್ಮಣ) ತಪ್ಪಾಗಿ ಗುರುತಿಸಿರುವುದು, ಕನ್ನಡದಲ್ಲಿ ಬಳಕೆಯಲ್ಲಿಲ್ಲದ ಭಣವಾಚಕಕ್ಕೆ ಶುಕ್ಲತಾ ಎಂಬ ಸಂಸ್ಕೃತ ಪದವನ್ನು ಉದಾಹರಿಸಿರುವುದು ಇಂತಹ ಹಲವು ದೋಷಗಳನ್ನು ಕಾಣಬಹುದು. ಮುಂದೆ ಅವ್ಯಯಗಳಲ್ಲಿ ನಾಲ್ಕು ವಿಧಗಳೆಂದು ಹೇಳಿ, ಸಮುಚ್ಚಯಾವ್ಯಯವನ್ನು ಮಾತ್ರ ಗುರುತಿಸಿ ಉದಾಹರಿಸಿದ್ದು ಉಳಿದವಕ್ಕೆ ಉದಾಹರಣೆಗಳನ್ನು ನೀಡಿಲ್ಲ. ಗ್ರಂಥದುದ್ದಕ್ಕೂ ಇಂತಹ ತಪ್ಪುಗಳು ನಿಬಿಡವಾಗಿದ್ದು ಗ್ರಂಥದ ಉಪಯುಕ್ತತೆಯನ್ನು ಕಡಿಮೆಗೊಳಿಸಿವೆ. ಆದರೂ ಹೊಸಗನ್ನಡದ ಪ್ರಥಮ ವ್ಯಾಕರಣ ಕೃತಿಯೆಂದು, ಮಿಶನರಿ ಕನ್ನಡ ವ್ಯಾಕರಣಗಳಲ್ಲಿ ಮೊದಲನೆಯದೆಂದು, ಇಂಗ್ಲಿಷ್ ನಲ್ಲಿ ಬರೆದ ಮೊದಲ ಕನ್ನಡ ವ್ಯಾಕರಣವೆಂದು, ಕನ್ನಡ ಮುದ್ರಣ ಮೊದಲ ಬಾರಿಗೆ ಕಂಡುಬರುವ ಕೃತಿಯೆಂದು ಇದನ್ನು ಗುರುತಿಸಬೇಕಾಗಿದೆ. ಈ ಅಸ್ಮಿತೆ ಈ ಕೃತಿಯ ವೈಶಿಷ್ಟ್ಯವನ್ನು ಚೆನ್ನಾಗಿಯೇ ವಿವರಿಸುತ್ತದೆ.
            ಜಾನ್ ಮೆಕೆರೆಲ್ ಮತ್ತು ಶ್ರೀರಂಗಪಟ್ಟಣದ ಕೃಷ್ಣಮಾಚಾರಿ ಭಾಷೆಯಲ್ಲುಂಟಾದ ಹೊಸ ವಿದ್ಯಮಾನಗಳಿಗೆ ಮತ್ತು ಕಾಲದ ಅಗತ್ಯಗಳಿಗೆ ಘನತರವಾಗಿ  ಸ್ಪಂದಿಸಿದರು. ಕನ್ನಡವು ಹಳಗನ್ನಡ ಅವಸ್ಥೆಯಿಂದ ನಡುಗನ್ನಡ ಕಾಲವನ್ನು ದಾಟಿ ಹೊಸದೊಂದು ಅವಸ್ಥೆಯನ್ನು ಪ್ರವೇಶಿಸಿತ್ತು. ಪಕಾರ ಹಕಾರವಾಗಿ ಪರಿವರ್ತನೆ, ಲಕಾರ ಳಕಾರವಾಗಿರುವುದು, ವ್ಯಂಜನಾಂತ ಪದಗಳು ಸ್ವರಾಂತಗಳಾಗಿ ರೂಪುಗೊಂಡಿರುವುದು ಇಂತಹ ಹಲವು ಬದಲಾವಣೆಗಳು ಆಗಲೇ ಸ್ಥಿರವಾಗಿದ್ದವು. ಕನ್ನಡ ಬರವಣಿಗೆ ಹೊಸ ಸ್ವರೂಪವನ್ನು ಪಡೆದುಕೊಂಡು ಲೇಖನ ಚಿಹ್ನೆಗಳನ್ನು ಅಳವಡಿಸಿಕೊಂಡಿತ್ತು. ಇವೆಲ್ಲ ಒಂದು ಕಡೆಯಾದರೆ ವ್ಯಾಕರಣದ ಅಗತ್ಯಗಳೂ ಈಗ ಹೊಸ ಆಯಾಮವನ್ನು ಪಡೆದುಕೊಂಡಿದ್ದವು. ರಾಜ್ಯಾಡಳಿತದಲ್ಲಿರುವವರು ಮಧ್ಯವರ್ತಿಗಳನ್ನು ತಪ್ಪಿಸಿ ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕ ಹೊಂದಲು ಕನ್ನಡ ಕಲಿಯುವುದಕ್ಕೆ ತೊಡಗಿದ್ದರು. ಧರ್ಮಪ್ರಚಾರಕಾರಾಗಿ ಬಂದವರೂ ಕೂಡ ಸಭೆಗಳಲ್ಲಿ ತಮ್ಮ  ಈ ನೆಲದ ಧರ್ಮಾನುಯಾಯಿಗಳೊಂದಿಗೆ ಸಂವಹಿಸಲು ಮತ್ತು ಧರ್ಮಾಂತರ ಉದ್ದೇಶದಿಂದ ಇಲ್ಲಿಯವರೊಂದಿಗೆ ಮಾತುಕತೆ ನಡೆಸಲು ಕನ್ನಡ ಜ್ಞಾನ ಅಗತ್ಯವಾಗಿತ್ತು. ಇಂತಹ ಸವಾಲುಗಳ ಪರಿಹಾರಗಳನ್ನೆಲ್ಲ ಅಳವಡಿಸಿಕೊಂಡಂತಹ ವ್ಯಾಕರಣ ಕೃತಿರಚನೆಯ ಸಾಹಸವನ್ನು ಮೆಕೆರೆಲ್ ಕೈಗೊಂಡನು ಮತ್ತು ಹೊಸಗನ್ನಡ ವ್ಯಾಕರಣ ರಚನೆಯನ್ನು ಈ ಇಬ್ಬರು ಕೈಗೊಂಡರು.
            ಮೆಕೆರಲ್ ವ್ಯಾಕರಣ ರಚಿಸಿದ್ದು ಆಡಳಿತಗಾರರಿಗೆ ಕನ್ನಡ ಕಲಿಯಲು ಅನುಕೂಲವಾಗಲೆಂದು. ಭಾಷೆಯನ್ನು ಕಲಿಯಲು ವ್ಯಾಕರಣ ಸುಲಭ ವಿಧಾನವೆಂಬುದು ಇವನ ಅಭಿಪ್ರಾಯ. ಈ  ಕಾರ್ಯಕ್ಕೆ  ಪೂರ್ವಭಾವಿಯಾಗಿ ಇವನು ಶಬ್ದಮಣಿದರ್ಪಣವನ್ನು ಅಭ್ಯಾಸ ಮಾಡಿದ್ದನು ಮತ್ತು ಅದರ ಪ್ರಭಾವವನ್ನು ಮೆಕೆರಲನ ಗ್ರಂಥದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಗ್ರಂಥವನ್ನು ಎಂಟು ಅಧ್ಯಾಯಗಳಲ್ಲಿ ಯೋಜಿಸಿರುವುದು, ಗುಣವಾಚಿಗಳು ಮತ್ತು ಸರ್ವನಾಮಗಳನ್ನು ನಾಮಪದಗಳಡಿ ಗುಂಪುಮಾಡಿರುವುದು, ಕ್ರಿಯಾವಿಶೇಷಣಗಳು, ಸಮುಚ್ಚಾಯಕಗಳು, ಇತ್ಯಾದಿಗಳನ್ನು ಅವ್ಯಯಗಳು(indeclinables) ಎಂಬ ಒಂದೇ ಶೀರ್ಷಿಕೆಯಡಿ ಚರ್ಚಿಸಿರುವುದು, ಕನ್ನಡದಲ್ಲಿ ನಲವತ್ತೇಳು ಅಕ್ಷರಗಳಿವೆ ಎಂದು ಹೇಳಿರುವುದು ಇಲ್ಲೆಲ್ಲ ಇಂತಹ ಪ್ರಭಾವವನ್ನು ಕಾಣಬಹುದು. “ಬೆರಳಿಚ” “ಹಡಪವಳ”  ಇಂತಹ ಪದಗಳನ್ನು, ಅವು ತನ್ನ ಕಾಲದಲ್ಲಿ ಬಳಕೆಯಲ್ಲಿಲ್ಲದಿದ್ದರೂ,  ತದ್ಧಿತ ಪದಗಳಿಗೆ ಉದಾಹರಣೆಗಳನ್ನಾಗಿ ಕೊಟ್ಟಿರುವುದೂ ಶಬ್ದಮಣಿದರ್ಪಣಕ್ಕೆ ಇವನ ಋಣವನ್ನು ತೋರಿಸುತ್ತದೆ.
            ಮೆಕೆರಲನ ವ್ಯಾಕರಣವು ಶಬ್ದಮಣಿದರ್ಪಣಕ್ಕಿಂತ ಅನೇಕ ರೀತಿಗಳಲ್ಲಿ ಭಿನ್ನವಾಗಿದೆ. ಇವನು ಇಲ್ಲಿ ಅಳವಡಿಸಿರುವ ಬದಲಾವಣೆಗಳು ಎರಡು ತರಹದವು. ಮೊದಲನೆಯದಾಗಿ ಹಳಗನ್ನಡದಲ್ಲಿ ಕಲ್ಪಿಸಿದ್ದ ಲಿಂಗ(>ನಾಮಪದ), ಧಾತು(>ಕ್ರಿಯಾಪದ), ಅವ್ಯಯ ಎಂಬ ಮೂರು ಪದವರ್ಗಗಳನ್ನು ಪುನರ್ವಿಂಗಡಿಸಿ ನಾಮಪದ, ಕ್ರಿಯಾಪದ, ಗುಣವಿಶೇಷಣ, ಕ್ರಿಯಾವಿಶೇಷಣ, ಸರ್ವನಾಮ, ಉಪಸರ್ಗ, ಭಾವಬೋಧಕ, ಸಮುಚ್ಚಾಯಕ ಎಂಬ ಅಷ್ಟವರ್ಗಗಳನ್ನು ಕಲ್ಪಿಸಿದನು. ನಾಮಪದಗಳಿಗೆ ವಿಭಕ್ತಿಗಳು ಹತ್ತುವಾಗ ಆಗುವ ಆಗಮಗಳನ್ನು ಅನುಸರಿಸಿ ಅವುಗಳನ್ನು ನಾಲ್ಕು ಗುಂಪು ಮಾಡಿ “ಫಸ್ಟ್ ದಿಕ್ಲೆನ್ಶನ್”, “ಸೆಕೆಂಡ್ ಡಿಕ್ಲೆನ್ಶನ್”, “ಥರ್ಡ್ ಡಿಕ್ಲೆನ್ಶನ್”, ಮತ್ತು “ಫೋರ್ತ್  ಡಿಕ್ಲೆನ್ಶನ್”(ಮೆಕೆರೆಲ್: ಪು, 36) ಎಂದು ಕರೆದಿದ್ದಾನೆ. ಹೀಗೆಯೇ ಆಖ್ಯಾತ ಪ್ರತ್ಯಯಗಳಿಗೆ ಸಂಬಂಧಿಸಿದಂತೆ ಎರಡು “ಕಾಂಜುಗೇಶನ್”ಗಳಾಗಿ ಗುಂಪು ಮಾಡಿದ್ದಾನೆ(ಮೆಕೆರೆಲ್:ಪು,87-101). ಕ್ರಿಯಾಪ್ಗಳಿಗೆ ಕಾಲಸೂಚಕಗಳು ಹತ್ತುವಾಗ ಆಗುವ ವ್ಯತ್ಯಾಸಗಳನ್ನನುಸರಿಸಿ, ಅವುಗಳನ್ನು ”ರೆಗ್ಯುಲರ್”, “, ಇರೆಗ್ಯುಲರ್”, “ಡಿಫೆಕ್ಟಿವ್” ಎಂದು ವಿಂಗಡಿಸಿದ್ದಾನೆ(ಮೆಕೆರೆಲ್:ಪು,101-110). ಇಂತಹವೆಲ್ಲ ಇಂಗ್ಲೀಷರಿಗೆ ತಾನು ಹೇಳುವ ಮಾತುಗಳು ಸುಲಭವಾಗಿ ಅರ್ಥವಾಗುವುದಕ್ಕಾಗಿ ಅಳವಡಿಸಿದವು,
            ಎರಡನೆಯದಾಗಿ ಹೊಸಗನ್ನಡಕ್ಕೆ ಸಂಬಂಧಿಸಿದ ಅನೇಕ ಪದ ಮತ್ತು ಪ್ರತ್ಯಯಗಳನ್ನು ಇವನು ಪ್ರಥಮಬಾರಿಗೆ ದಾಖಲಿಸಿದನು. ಉದಾ. “ತನಕ”, “ತುಸುಕ”,”ಈ ಬಾರಿ”, “ಹೋದ ಬಾರಿ” ಇತ್ಯಾದಿಗಳನ್ನು ಅವ್ಯಯಗಳ ಅಧ್ಯಾಯದಲ್ಲಿ ಉದಾಹರಿಸಿದ್ದಾನೆ. ಇವೆಲ್ಲ ಹಳಗನ್ನಡ ಕಾಲದಲ್ಲಿ ಬಳಕೆಯಲ್ಲಿಲ್ಲದವು, ಹಳಗನ್ನಡ ವ್ಯಾಕರಣಗಳಲ್ಲಿ ಉದಾಹರಿಸಿಲ್ಲದವು. ಹೊಸಗನ್ನಡ ಕಾಲದಲ್ಲಿ ಬಳಕೆಗೆ ಬಂದಿದ್ದರೂ ಅಂದಿನ ಸಾಹಿತ್ಯಿಕ ಬರಹಗಳಲ್ಲಿ ಇನ್ನೂಜನಪ್ರಿಯವಾಗಿಲ್ಲದವು. ಕೃತಿಯ ಇತರ ಭಾಗಗಳಲ್ಲಿಯೂ ಇಂತಹ ಹೊಸಗನ್ನಡ ಪದಗಳನ್ನು ಇವನು ಧಾರಾಳವಾಗಿ ಉದಾಹರಿಸಿದ್ದಾನೆ. ವಾಕ್ಯರಚನೆಗಾಗಿ ಮೀಸಲಿಟ್ಟ “ಸಿಂಟ್ಯಾಕ್ಸ್ “ ಎಂಬ ಅಧ್ಯಾಯದಲ್ಲಿ ಕೇವಲ ಹೊಸಗನ್ನಡ ವಾಕ್ಯಗಳನ್ನೇ ಉದಾಹರಿಸಿದ್ದಾನೆ. ಹೀಗೆ ತನ್ನ ಕಾಲದ ಆಡುಮಾತನ್ನು
ಕಲಿಯುವುದಕ್ಕೆ ತನ್ನ ಗ್ರಂಥ ಸೂಕ್ತವಾಗಿರಬೇಕೆಂಬ ಕಾಳಜಿ ಇವನ ಕೃತಿಯುದ್ದಕ್ಕೂ ಕಾಣುತ್ತದೆ.
ಮೆಕೆರಲನ ವ್ಯಾಕರಣ ಹೀಗೆ ಸಾಂಪ್ರದಾಯಿಕ ಬರವಣಿಗೆಗೂ ಆಧುನಿಕ ಬರವಣಿಗೆಗೂ ಒಂದು ಮಧ್ಯಂತರ ಅವಸ್ಥೆಯನ್ನು ಪ್ರತಿನಿಧಿಸುತ್ತದೆ. ಪಾರಂಪರಿಕ ಚೌಕಟ್ಟಿನಲ್ಲೇ ಪಾಶ್ಚಾತ್ಯ ಪರಿಕಲ್ಪನೆಗಳನ್ನು ತೂರಿಸಿ ವ್ಯಾಕರಣ ನಿಯಮಗಳನ್ನು ಪ್ರತಿಪಾದಿಸುವುದು ಇವನ ಕ್ರಮ.  ಆಡುಮಾತಿಗೆ ಪ್ರಾಶಸ್ತ್ಯ ಕೊಟ್ಟುದು, ಆಧುನಿಕ ಕನ್ನಡ ರೂಪಗಳನ್ನು ಪ್ರಥಮವಾಗಿ ದಾಖಲಿಸಿರುವುದು, ವ್ಯಾಕರಣ ನಿಯಮಗಳ ಪ್ರತಿಪಾದನೆಗೆ ಹೊಸ ತಂತ್ರಗಳನ್ನು ಅಳವಡಿಸಿದ್ದು – ಇವು ಮೆಕರೆಲನ ಸಾಧನೆಗಳು.
            ಶ್ರಿರಂಗಪಟ್ಟಣದ ಕೃಷ್ಣಮಾಚಾರಿ ಹೊಸಗನ್ನಡ ನುಡಿಗನ್ನಡಿ ಎಂಬ ವ್ಯಾಕರಣ ಕೃತಿಯನ್ನು ರಚಿಸಿದ್ದಾನೆ. ಇದು ಕನ್ನಡದಲ್ಲಿದೆ. ಅವಸ್ಥಾಂತರಗೊಂಡ ಕನ್ನಡದ ಹೊಸ  ರೂಪಕ್ಕೆ ವ್ಯಾಕರಣವೊಂದನ್ನು  ಕನ್ನಡದಲ್ಲಿ ರಚಿಸಿದ್ದು ಇದೇ ಪ್ರಥಮ. ಮೆಕೆರಲ್ ಬರೆದ ಕರ್ಣಾಟ ಭಾಷೆಯ ವ್ಯಾಕರಣವನ್ನು ಇವನು ಗಮನಿಸಿದ್ದಾನೆ. ಅವನ ವ್ಯಾಕರಣ ಕೃತಿಯ ಪ್ರತಿಗಳು ಲಭ್ಯವಿಲ್ಲದ್ದರಿಂದ ಈ ಕೃತಿಯನ್ನು ಬರೆದಿರುವುದಾಗಿ ಹೇಳಿ ಇವನು ಸೌಜನ್ಯ ಮೆರೆದಿದ್ದಾನೆ. ಇದರಲ್ಲಿ ಸಂಜ್ಞಾ, ಸಂಧಿ, ಶಬ್ದ, ಆಖ್ಯಾತ, ಕೃತ್‌, ತದ್ದಿತ, ತತ್ಸಮ, ತದ್ಭವ , ಸಮಾಸ ಮತ್ತು ಪ್ರಯೋಗಪ್ರಕರಣಗಳೆಂಬ ಹತ್ತು ಪ್ರಕರಣಗಳಿವೆ. ಕೊನೆಯದಾದ ಪ್ರಯೋಗ ಪ್ರಕರಣದಲ್ಲಿ ವಾಕ್ಯರಚನೆಗೆ ಸಂಬಂಧಿಸಿದ ವಿಷಯಗಳಿವೆ. ಕನ್ನಡದಲ್ಲಿ ಬರೆದ ಕನ್ನಡ ವ್ಯಾಕರಣಗಳಲ್ಲಿ ವಾಕ್ಯರಚನೆಯನ್ನು ಪ್ರತ್ಯೇಕ ಅಧ್ಯಾಯದಲ್ಲಿ ಚರ್ಚಿಸುವ ರೂಢಿಯು ಇದರಿಂದ ಪ್ರಾರಂಭವಾಯಿತು ಎನ್ನಬಹುದು. ಅಲ್ಲದೆ ಇಲ್ಲಿ ಸೂತ್ರಗಳ ನಿರೂಪಣೆ ಮತ್ತು ಉದಾಹರಿಸುವಿಕೆಯ ಕ್ರಮವನ್ನು ಬಿಟ್ಟು ಪ್ರಶ್ನೋತ್ತರ ರೂಪದಲ್ಲಿ ಬರೆದಿರುವುದರಿಂದ  ಇದೊಂದು ಕುತೂಹಲ ಕೆರಳಿಸುವ ಉತ್ತಮ ಮಾರ್ಗದರ್ಶಕ ಗ್ರಂಥವಾಗಿ  ಪರಿಣಮಿಸಿದ.
            ಮೇಲ್ನೋಟಕ್ಕೆ ಈ ಕೃತಿ ಸಾಂಪ್ರದಾಯಿಕ ವ್ಯಾಕರಣದ ಮುಂದುವರಿಕೆಯಾಗಿ ಕಾಣಬಹುದು. ಭಟ್ಟಾಕಳಂಕನ ಕರ್ಣಾಟಕ ಶಬ್ದಾನುಶಾಸನದ ಗ್ರಂಥ ಯೋಜನೆ ಮತ್ತು ಪರಿಭಾಷೆಗಳನ್ನು ಇವನು ಬಳಸಿ ಕೊಂಡಿದ್ದಾನೆ. ಮೆಕೆರೆಲನಂತೆ ಶಬ್ದಮಣಿದರ್ಪಣವನ್ನಲ್ಲ. ವಿಭಕ್ತಿ ಎಂಬುದಕ್ಕೆ “ಸುಪ್” ಎಂಬುದು, ಆಖ್ಯಾತ ಎಂಬುದಕ್ಕೆ “ತಿಙ್” ಎಂಬುದು ಇವನ ಪರಿಭಾಷೆ. ನಿಯಮಗಳನ್ನು ಖಚಿತವಾಗಿ ನಿರೂಪಿಸುವ ದೃಷ್ಟಿಯಿಂದ ಗಣಪಾಠಗಳನ್ನು ರಚಿಸಿಕೊಡುವ ಭಟ್ಟಾಕಳಂಕನ ತಂತ್ರವನ್ನು ಇವನೂ ಅಳವಡಿಸಿಕೊಂಡಿದ್ದಾನೆ. ಉದಾ, ‘ತ’ಪ್ರತ್ಯಯ ಸೇರುವುದರಿಂದ ಭಾವವಾಚಕ ನಾಮಪದಗಳು ಉಂಟಾಗುವ ಕ್ರಿಯಾಪದಗಳ ಮಣ್ವಾದಿ ಗಣ ಹೀಗಿದೆ: “ಮಣಿ-ಕುಣಿ-ಬಿಗಿ-ನುಗಿ-ನುಡಿ-ಅಗಿ-ಮುಗಿ-ಅರಿ-ಇರಿ-ಮುರಿ-ತಿರಿ-ಬಡಿ-ಕಡಿ-ಹಿಡಿ-ಸಿಡಿ-ಹೊಡೆ-ಮೊರೆ-ಕೊಡೆ-ನಗೆ-ಒರೆ-ಕಲೆ-ಅಲೆ ಇತ್ಯಾದಿಗಳು ಮಣ್ವಾದಿಗಳು”. ಆದರೆ ಕರ್ಣಾಟಕ ಶಬ್ದಾನುಶಾಸನವನ್ನು ಕನ್ನಡದಲ್ಲಿ ಬರೆದಿದ್ದಾನೆ ಎನ್ನುವಂತಿಲ್ಲ. ಇವನು ಆಡು ಮಾತಿಗೆ ಕೊಟ್ಟಿರುವ ಪ್ರಾಮುಖ್ಯ, ಸುಲಭ ಗದ್ಯದಲ್ಲಿ ವ್ಯಾಕರಣ ನಿಯಮಗಳನ್ನು ನಿರೂಪಿಸಿರುವುದು, ವಾಕ್ಯರಚನೆಯ ಬಗ್ಗೆ ಪ್ರತ್ಯೇಕ ಅಧ್ಯಾಯವನ್ನು ಸೇರಿಸಿರುವುದು – ಇವೆಲ್ಲ ಮೆಕೆರಲನಿಂದ ಇವನು ಸ್ವೀಕರಿಸಿದ ಅಂಶಗಳು.
            ಕೇವಲ ವ್ಯಾಕರಣ ನಿಯಮಗಳನ್ನು ನಿರೂಪಿಸುವಷ್ಟರಿಂದಲೇ  ಕೃಷ್ನಮಾಚಾರಿ ತೃಪ್ತನಾಗುವುದಿಲ್ಲ. ಭಾಷೆಯ ಮೂಲದ ಬಗ್ಗೆ ತನ್ನದೇ ರೀತಿಯಲ್ಲಿ ಯೋಚನೆಗಳನ್ನು ಹರಿಯ ಬಿಟ್ಟಿದ್ದಾನೆ. ಕನ್ನಡವು ಸಂಸ್ಕೃತಜನ್ಯವಲ್ಲವೆಂದು ಮೊದಲ ಬಾರಿಗೆ ಪ್ರತಿಪಾದಿಸಿದವನು ಇವನು. ಆದರೆ ಈ ಪ್ರತಿಪಾದನೆಗೆ ಹೂಡಿರುವ ವಾದಗಳು ಅವೈಜ್ಞಾನಿಕ ಮತ್ತು ಅವಾಸ್ತವಿಕ. ಸಂಸ್ಕೃತದಲ್ಲಿದ್ದಂತೆ ತಮಿಳಿನಲ್ಲಿಯೂ ವೇದವಿದೆ. ಸಂಸ್ಕೃತ ವ್ಯಾಕರಣವನ್ನು ಪಾಣಿನಿ ಮುಂತಾದ ಋಷಿಗಳು ಬರೆದಿರುವಂತೆ ತಮಿಳು ವ್ಯಾಕರಣವನ್ನೂ ಋಷಿಗಳಾದ ಅಗಸ್ತ್ಯರು ರಚಿಸಿದ್ದಾರೆ. ಆದ್ದರಿಂದ ಸಂಸ್ಕೃತದಂತೆ ದ್ರಮಿಡವೂ(ತಮಿಳೂ) ಹಲವು ಭಾಷೆಗಳಿಗೆ ಜನನಿ. ತುಳು, ಕನ್ನಡ, ಮಲಯಾಳ, ಆಂಧ್ರ ಇವು ದ್ರಮಿಡಾಭಾಸಗಳು (ಕೃಷ್ಣಮಾಚಾರಿ:ಪು,iii ಮತ್ತು 129-130). ಇದು ಇವನ ವಾದಸರಣಿ.
            ಭಾಷೆಯಲ್ಲಿ ಉಂಟಾದ ಹೊಸ ಪ್ರವೃತ್ತಿಗಳಿಗೆ ಕೃಷ್ಣಮಾಚಾರಿ ತೆರೆದ ಮನಸ್ಸಿನಿಂದ ಪ್ರತಿಕ್ರಿಯಿಸಿದ್ದಾನೆ. ಈ ಸಂಬಂಧದ  ಇವನ  ನಿರೂಪಣೆಗಳು ಸಾಮಾನ್ಯವಾಗಿ ವೈಜ್ಞಾನಿಕವಾಗಿವೆ. ಶಬ್ದಮಣಿದರ್ಪಣದ ಕಾಲದನಂತರ ಭಾಷೆಯಲ್ಲಿ ಉಂಟಾದ ಬದಲಾವಣೆಗಳನ್ನು ಸ್ವೀಕರಿಸಿ ಇವನು ಉಲ್ಲೇಖಿಸಿದ್ದಾನೆ. ಇವನು ತಿಳಿಸಿರುವ ವ್ಯತ್ಯಾಸಗಳು ಇವು :
ವ್ಯಂಜನಾಂತ ಪದಗಳು ಉಕಾರಾಂತವಾಗುವುದು – ಉದಾ. ತಿನ್ನು, ಸಲ್ಲು ಇತ್ಯಾದಿ
ಪಕಾರ ಹಕಾರವಾಗುವುದು ಮತ್ತು ಮಧ್ಯ ಅನುಸ್ವಾರ ಲೋಪವಾಗುವುದು – ಉದಾ. ಪಿಸುಂಕು ಎಂಬುದು ಹಿಸುಕು ಎಂದಾಗುತ್ತದೆ.
ಹಳಗನ್ನಡದ ರಳಕಾರವು ಸಾಮಾನ್ಯ ಳಕಾರವಾಗುವುದು – ಉದಾ. ಹಳತು, ಬಾಳೆ ಇತ್ಯಾದಿ
ಹಳಗನ್ನಡದ ಶಕಟರೇಫೆಯು ಸಾಮಾನ್ಯ ರಕಾರವಾಗುವುದು – ಉದಾ. ಕಿರಿದು, ಅರಿ ಇತ್ಯಾದಿ.
“ಉದಿರ್ಚು” ಎಂಬುದು ಉದುರಿಸು ಎಂದಾಗುತ್ತದೆಂದೂ “ನಾಣ್ಚು” ಎಂಬುದು ನಾಚು (ಕೃಷ್ಣಮಾಚಾರಿ: ಪು,171).
 ಹಿಂದೂಸ್ತಾನಿ, ಇಂಗ್ಲಿಷ್ ಮುಂತಾದ ಭಾಷೆಗಳಿಂದ ಬಂದ ಪದಗಳನ್ನು “ಅನ್ಯದೇಶ್ಯ” ಪದಗಳೆಂದು ಕರೆದು ಒಂದು ಪ್ರತ್ಯೇಕ ಪರಿಚ್ಛೇದದಲ್ಲಿ ವಿವರಿಸಿದ್ದಾನೆ. ಆಡುಮಾತಿಗೆ ಪ್ರಾಧಾನ್ಯ ನೀಡಿದ್ದಾನೆ.
ಕೃಷ್ಣಮಾಚಾರಿ ಹೊಸಗನ್ನಡ ವ್ಯಾಕರಣವನ್ನು ಹೇಳಲು ಹಳೆಯ ಚೌಕಟ್ಟನ್ನು ಬಳಸಿಕೊಂಡ ಮೊದಲ ಮತ್ತು ಕೊನೆಯ ವ್ಯಾಕರಣಕಾರ. ಇವನು ಬಳಸಿಕೊಂಡಿರುವ ಭಟ್ಟಾಕಳಂಕನ ಪರಿಭಾಷೆ ಮತ್ತು ನಿರೂಪಣಾ ತಂತ್ರಗಳು ಇವನಿಗೆ ತಡೆ ಏನೂ ಆಗಿಲ್ಲವಾದರೂ ಅವುಗಳಿಂದ ಅನಾವಶ್ಯಕ ಕ್ಲಿಷ್ಟತೆ ಬಂದಿದೆ. “ಅನ್ಯದೇಶ್ಯ ಪದ” ಎಂಬುದು ಸಂಸ್ಕೃತವನ್ನು ಬಿಟ್ಟು ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳಿಗೆ ಇವನು ಕೊಟ್ಟಿರುವ ಹೆಸರು. ಈ ಪದ ಕನ್ನಡ ವ್ಯಾಕರಣ ಕ್ಷೇತ್ರಕ್ಕೆ ಇವನ ಕೊಡುಗೆ ಎನ್ನಬೇಕು. ಮುಂದಿನ ವ್ಯಾಕರಣಗಳಲ್ಲಿ ಈ ಪದ ಸ್ಥಿರವಾಗಿದೆ. ಹೀಗೆ ಆರ್ಷೇಯ ಪಾಂಡಿತ್ಯದ ಜೊತೆಗೆ ವೈಜ್ಞಾನಿಕ ದೃಷ್ಟಿಯೂ ಮೇಳೈಸಿರುವುದನ್ನು ಇಲ್ಲಿ ಕಾಣಬಹುದು. ಒಟ್ಟಿನಲ್ಲಿ ಈ ಎರಡು ಕೃತಿಗಳು ಹೊಸಗನ್ನಡ ವ್ಯಾಕರಣದ ಆರಂಭಿಕ ಕೃತಿಗಳು. ಇವು ಮುಂದಿನ ವ್ಯಾಕರಣಗಳಿಗೆ ಪ್ರೇರಣೆ ನೀಡಿವೆ..
ಕೇಶಿರಾಜನನ್ನನುಸರಿಸಿದ ವುರ್ತ್ ಮತ್ತು ಕಿಟೆಲನ ಕೃತಿಗಳು:
            ಶಬ್ದಮಣಿದರ್ಪಣವು ಹಳಗನ್ನಡದ  ಒಂದು ಪ್ರಮಾಣಭೂತ ವ್ಯಾಕರಣವಾಗಿದ್ದು ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಪಾಶ್ಚಾತ್ಯ ವ್ಯಾಕರಣಕಾರರೂ ಕೂಡ ಈ ಕೃತಿಗೆ ಹಲವು ವಿಧದಲ್ಲಿ ಋಣಿಗಳಾಗಿದ್ದಾರೆ. ಜಾರ್ಜ್ ವುರ್ತ್ ಶಬ್ದಮಣಿದರ್ಪಣದ ಸೂತ್ರಗಳನ್ನು ಸಂಕ್ಷೇಪಿಸಿ ಹೊಸಗನ್ನಡಗದ್ಯರೂಪದಲ್ಲಿ ಪುನರ್ನಿರೂಪಿಸಿದ್ದಾನೆ. ಕಿಟೆಲ್ ಕೇಶಿರಾಜನ ಶಬ್ದಮಣಿದರ್ಪಣವನ್ನು  ಲಭ್ಯ ಹಸ್ತ ಪ್ರತಿಗಳನ್ನಾಧರಿಸಿ ವೈಜ್ಞಾನಿಕವಾಗಿ ಸಂಪಾದಿಸಿ ಕೊಟ್ಟಿದ್ದಾನೆ.
            ವುರ್ತನ ಕೃತಿಯ ಹೆಸರು ಹಳೆ ಕನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು. 1866ರಲ್ಲಿ ಮಂಗಳೂರಿ(ಬಾಸೆಲ್ ಮಿಶನ್)ನಿಂದ ಪ್ರಕಟ. ಇದರ ಕರ್ತೃವನ್ನು ಈಚಿನವರೆಗೆ ಕಿಟೆಲ್ ಎಂದೇ ಭಾವಿಸಲಾಗಿತ್ತು. ಈಚೆಗೆ ಸೂಕ್ತ ಸಾಕ್ಷ್ಯಾಧಾರಗಳನ್ನಾಧರಿಸಿ ಈ ಪುಸ್ತಕವು ಜಾರ್ಜ್ ವುರ್ತ್ ಕೃತವೆಂದೂ (ಮಹೀದಾಸ- ಕ: ಪು1-5),  1888ರಲ್ಲಿ ಇದನ್ನು ಶ್ರೀನಿವಾಸ ಅಯ್ಯಂಗಾರ್ಯ ಎಂಬುವನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಛಂದಸ್ಸು ಅಲಂಕಾರಗಳಿಗೆ ಸಂಬಂಧಿಸಿದ  ಅಂಶಗಳನ್ನು ಸೇರಿಸಿ, ಪರಿಷ್ಕರಿಸಿ(ಮಹೀದಾಸ-ಬ: ಪು.140), ಹಳಗನ್ನಡವ್ಯಾಕರಣ ಸೂತ್ರಗಳು ಅಂದರೆ ಗ್ರಂಥ ಪ್ರಯೋಗದ ವಿಧಿಗಳ ವಿವರವು ಎಂಬ ಹೆಸರಿನಿಂದ ಪ್ರಕಟಿಸಿದನು.
            ಈ ಪುಸ್ತಕದಲ್ಲಿ ಒಟ್ಟು 104ಪುಟಗಳಿವೆ(ಬಿಇಎಮ್ ಆರ್ 1866). ಹಳಗನ್ನಡ ವ್ಯಾಕರಣವನ್ನು ಹೊಸಗನ್ನಡದಲ್ಲಿ ಸಂಕ್ಷೇಪವಾಗಿ ಹೇಳುವ ಕೃತಿ ಇದು. ಶಬ್ದಮಣಿದರ್ಪಣದ ಸೂತ್ರಗಳನ್ನೇ ಅನುಸರಿಸಿ, ಅವುಗಳನ್ನೇ ಹೊಸಗನ್ನಡಕ್ಕೆ ಗದ್ಯರೂಪದಲ್ಲಿ ಭಾಷಾಂತರಗೊಳಿಸುವುದು ಸ್ಥೂಲವಾಗಿ ಇವನ ಪದ್ಧತಿ. ಆದರೆ ಇದು ಆ ರೀತಿಯ  ಯಥಾವತ್ ಭಾಷಾಂತರವಲ್ಲ. ಶಬ್ದಮಣಿದರ್ಪಣದ 323 ಸೂತ್ರಗಳ ಬದಲಾಗಿ ಇಲ್ಲಿ 148 ಸೂತ್ರಗಳು ಮಾತ್ರ ಇವೆ. ಕೇಶಿರಾಜನ ಸೂತ್ರಗಳನ್ನು ಸಂಕ್ಷೇಪಿಸುವುದು ಇವನ ಮಾರ್ಗ.ಎರಡು ಅಥವ ಹೆಚ್ಚು ಸೂತ್ರಗಳನ್ನು ಒಂದುಗೂಡಿಸುವುದು, ವರ್ಣನಾತ್ಮಕ ಮೌಲ್ಯದ ಕೆಲವು ಸೂತ್ರಗಳನ್ನು ಕೈಬಿಡುವುದು, ಉದಾಹರಣೆಗಳ ಸಂಖ್ಯೆಯನ್ನು ಕಡಿತಗೊಳಿಸುವುದು – ಇವು ವುರ್ತನ ಸಂಕ್ಷೇಪೀಕರಣ ಕ್ರಮಗಳು. ಕೆಲವು ಕಡೆ ಸೂತ್ರಗಳನ್ನು ಪುನರ್ವ್ಯವಸ್ಥೆಗೊಳಿಸುವ ಮೂಲಕ ಸಂಕ್ಷಿಪ್ತತೆ ಸಾಧ್ಯವಾಗಿದೆ.
            ತನ್ನ ಪ್ರತಿಯೊಂದು ಸೂತ್ರಕ್ಕೆ ಇಂಗ್ಲಿಷ್ನಲ್ಲಿ ಒಂದು ಶೀರ್ಷಿಕೆಯನ್ನು ನೀಡಿದ್ದಾನೆ. ಇವು ಕನ್ನಡೇತರ ಓದುಗನಿಗೆ ತನಗೆ ಬೇಕಾದ ವಿಷಯವನ್ನು ಆಯ್ದುಕೊಳ್ಳಲು ಅನುವು ಮಾಡಿಕೊಡುತ್ತವೆ. ಎರಡು ರೀತಿಯ ಶೀರ್ಷಿಕೆಗಳಿವೆ. ಪ್ರಕರಣ ಪ್ರಾರಂಭದಲ್ಲಿರುವಂತಹವು ಒಂದನೆಯ ವರ್ಗದವು. “Letters”, “Euphony”, “Noun”, ಇತ್ಯಾದಿ ಈ ವರ್ಗದವು. ಪ್ರತಿ ಸೂತ್ರಕ್ಕೆ ಇರುವಂತಹವು ಎರಡನೆಯ ವರ್ಗದವು.  ಇವುಗಳನ್ನು ಸೂತ್ರದ ಅಂತ್ಯದಲ್ಲಿ ಆವರಣದಲ್ಲಿ ಕೊಡಲಾಗಿದೆ. “Change of letters”, “Insertion of  ಏ  or ಓ” ಇತ್ಯಾದಿ. ಎರಡನೆಯ ವರ್ಗಕ್ಕೆ ಉದಾಹರಣೆಗಳು. ಇವುಗಳಲ್ಲಿ ಸೂಕ್ತ ಸೂತ್ರಗಳ ಕೊನೆಯಲ್ಲಿರುವ irregular verbs, gerund ಇಂತಹವೂ ಸೇರಿವೆ. ಈ ಇಂಗ್ಲಿಷ್ ಪರಿಭಾಷೆಗಳನ್ನು ಇಲ್ಲಿ ಹಳಗನ್ನಡಕ್ಕೆ ಅಳವಡಿಸಿದಂತಾಗಿದೆ.
            ಕೃತಿಯನ್ನು ಶ್ರೀನಿವಾಸ ಅಯ್ಯಂಗಾರ್ಯನು 1888ರಲ್ಲಿ ಪರಿಷ್ಕರಿಸಿದ್ದು ಪರಿಷ್ಕೃತ ಆವೃತ್ತಿಯಲ್ಲಿ ವ್ಯಾಕರಣ ವಿಷಯಗಳಲ್ಲದೆ, ಛಂದಸ್ಸು, ಅಲಂಕಾರ, ಕಾವ್ಯಮೀಮಾಂಸೆಗಳಿಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿಷಯಗಳನ್ನು  ಗ್ರಂಥದ ಕೊನೆಯ ಭಾಗದಲ್ಲಿ ಸೇರಿಸಿದ್ದು ಇವು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.
            ಒಟ್ಟಿನಲ್ಲಿ ಈ ಗ್ರಂಥರಚನೆಯಲ್ಲಿ ವುರ್ತ್ ಶಬ್ದಮಣಿದರ್ಪಣವನ್ನು ಹೆಜ್ಜೆಗೂ ಅನುಸರಿಸಿದ್ದಾನೆ. ಆದರೆ ಇದು ಮೂಲದ ಪಡಿಯಚ್ಚಾಗಿರದೆ ಸಂಕ್ಷಿಪ್ತತೆ, ಸೂತ್ರಗಳ ಅನುಕ್ರಮದಲ್ಲಿ ಪುನರ್ವ್ಯವಸ್ಥೆ, ವಾಕ್ಯರಚನೆಗೆ ಸಂಬಂಧಿಸಿದ ಪ್ರತ್ಯೇಕ ಅಧ್ಯಾಯ,ಇಂಗ್ಲಿಷ್ ಶೀರ್ಷಿಕೆಗಳು – ಇವುಗಳಿಂದ ಬೇರೆಯೇ ಆಗಿ ಉಪಯುಕ್ತವಾಗಿದೆ. ಇದು ಮಿಶನರಿ ರಚಿತವಾದ ಪ್ರಥಮ ಹಳಗನ್ನಡ ವ್ಯಾಕರಣ; ಹೊಸಗನ್ನನಡದಲ್ಲಿ ಬರೆದ ಹಳಗನ್ನಡ ವ್ಯಾಕರಣಗಳಲ್ಲಿಯೂ ಇದು ಮೊದಲನೆಯದು.
            ಕಿಟೆಲನ ಕೇಶವನ ಶಬ್ದಮಣಿದರ್ಪಣಂ 1872: ಇದೊಂದು ಸಂಪಾದಿತ ಕೃತಿ. ಲಭ್ಯ ಹಸ್ತಪ್ರತಿಗಳ ಪರಾಮರ್ಶನದಿಂದ ಲೇಖಕನ ಮೂಲಪ್ರತಿಯನ್ನು ಪುನರ್ನಿರ್ಮಿಸಿ ಕೊಡುವ ವೈಜ್ಞಾನಿಕ ವಿಧಾನದ ಪರಿಚಯವು ಈ ಕೃತಿಯ ಮೂಲಕ ಕನ್ನಡಿಗರಿಗೆ ಆಯಿತು. ಇದರಲ್ಲಿ ಕಿಟೆಲ್ ಅಳವಡಿಸಿರುವ  ಆವಿಷ್ಕಾರಗಳಿಂದ ಒಂದು ವ್ಯಾಕರಣ ಗ್ರಂಥವಾಗಿ ಕೂಡ ಇದು ಮುಖ್ಯವಾಗಿದೆ. ಮೊದಲ ಕೆಲವು ಪದ್ಯಗಳಲ್ಲಿರುವ ಹೆಸರುಗಳ ಜಾಡು ಹಿಡಿದು ಸಾಹಿತ್ಯ ಚರಿತ್ರೆಯ ಅಂಶಗಳನ್ನೂ ದಾಖಲಿಸಿದ್ದು ಮುಖ್ಯವಾಗಿದೆ.
            ಗ್ರಂಥದ ಪಠ್ಯ ಭಾಗದಲ್ಲಿ ಅಧ್ಯಾಯಗಳಿಗೆ ಮತ್ತು ಸೂತ್ರಗಳಿಗೆ ಶೀರ್ಷಿಕೆ ಮತ್ತು ಉಪ ಶೀರ್ಷಿಕೆಗಳನ್ನು ಕೊಟ್ಟಿರುವುದು, ಪ್ರತಿಯೊಂದು ಸೂತ್ರದ ಸಾರಾಂಶವನ್ನು ಇಂಗ್ಲಿಷಿನಲ್ಲಿ ಸೂಚಿಸಿರುವುದು, ಮತ್ತು ಅಡಿಟಿಪ್ಪಣಿಗಳು – ಈ ಮೂರು ಉಪಕ್ರಮಗಳನ್ನು ಅಳವಡಿಸಿ, ಕೃತಿಯು ಹೆಚ್ಚು ಉಪಯುಕ್ತವಾವಂತೆ ಮಾಡಿದ್ದಾನೆ. ಇವನ ಶೀರ್ಷಿಕೆ ಉಪಶೀರ್ಷಿಕೆಗಳ ಸರಣಿ ಪ್ರತಿಯೊಂದು ಪ್ರಕರಣವನ್ನು ಪುನರ್ವಿಂಗಡಿಸಿ, ಅದರಲ್ಲಿರುವ ವ್ಯವಸ್ಥೆಯನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಸೂತ್ರದ ನಿರೂಪಣೆಯನ್ನು ಓದಲು ಮನಸ್ಸನ್ನು ಸಿದ್ಧಪಡಿಸುತ್ತದೆ. ಓದುಗನು ತನಗೆ ಬೇಕಾದ ವಿಷಯವನ್ನು ಕೂಡಲೇ ಹುಡುಕಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಎಲ್ಲದರಿಂದ ಗ್ರಂಥವು ಹೆಚ್ಚು ಪರಾಮರ್ಶನಯೋಗ್ಯವಾಗಿದೆ.
            ಸೂತ್ರಗಳಿಗೆ ಇವನು ಕೊಟ್ಟಿರುವ ಇಂಗ್ಲಿಷ್ ಉಕ್ತಿಗಳು ಅವುಗಳ(ಸೂತ್ರಗಳ) ಸಂಕ್ಷಿಪ್ತ ಗದ್ಯ ಭಾಷಾಂತರವಾಗಿವೆ. “The author’s esteem for speech”(ಕಿಟೆಲ್,1899:1)  “Origin of sound and speech” ”(ಕಿಟೆಲ್,1898:7) ಇತ್ಯಾದಿಗಳು ಅತಿ ಸಂಕ್ಷಿಪ್ತವಾಗಿದ್ದು ಆಯಾ ಸತ್ರಗಳ ಶೀರ್ಷಿಕೆಗಳಂತೆ ಕಾಣುತ್ತವೆ.ಆದರೆ ಹೆಚ್ಚು ಕಡೆ ಇವು ದೀರ್ಘವಾಗಿದ್ದು ಸೂತ್ರಗಳನ್ನು ಅರ್ಥೈಸುತ್ತವೆ. ಉದಾ.”The suffix  which introduces the subjunctive(ಪಕ್ಷಾರ್ಥ),  is used for all genders, all numbers, all persons and all tenses”(ಕಿಟೆಲ್,1898:297) 
            ಅಡಿ ಟಿಪ್ಪಣಿಗಳಲ್ಲಿ ಛಂದೋಬಂಧಗಳ ಲಕ್ಷಣಗಳೂ, ಪಾರಿಭಾಷಿಕ ಪದಗಳ ವ್ಯಾಖ್ಯೆಗಳೂ, ಪಾಠಾಂತರಗಳೂ ಇವೆ. ಉದಾ.”ಯಮಕಂ  is panoramasia the recurrence of syllables(words), of consonants”(ಕಿಟೆಲ್,1872: 27) ಅಥವ  “ ಭಂಡಾರ or ಬಂಡಾರಂ is a corruption of ಭಾಂಡಾಗಾರಂ “(ಅದೇ:377). ಈ ಅಡಿಟಿಪ್ಪಣಿಗಳು ಸೂತ್ರಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಹಾಯವನ್ನು ಒದಗಿಸುತ್ತವೆ.
            ಒಟ್ಟಿನಲ್ಲಿ ಈ ಕೃತಿಯು ಕನ್ನಡ ಭಾಷೆ ಮತ್ತು ಸಾಹಿತ್ಯದ  ಅಧ್ಯಯನಕ್ಕೆ ಮುಖ್ಯವಾದುದಾಗಿದೆ. ಇದು ಕನ್ನಡಕ್ಕೆ ಪಾಂಡಿತ್ಯದ ಹೊಸ ಕ್ಷೇತ್ರಗಳನ್ನು ಪರಿಚಯಿಸಿದೆ.  ಮತ್ತು ಹಳಗನ್ನಡ ವ್ಯಾಕರಣವನ್ನು ಇಂಗ್ಲಿಷ್ ಓದುಗರಿಗೆ ತೆರೆದಿಟ್ಟಿದೆ.
ಹಾಡ್ಸನ್-ಜೀಗ್ಲರ್-ಗ್ರೇಟರ್         
ಇದುವರೆಗೆ ಚರ್ಚಿಸಿದ ಕೃತಿಗಳೆಲ್ಲವೂ ಪಾರಂಪರಿಕ ವ್ಯಾಕರಣ ಪದ್ಧತಿಯಲ್ಲಿ ಸುಧಾರಣೆಗಳನ್ನು ತಂದು ಭಾಷೆಯ ಹೊಸ ವಿದ್ಯಮಾನಗಳಿಗೂ, ಕೃತಿಯನ್ನು ಉಪಯೋಗಿಸುವವರ ಅಗತ್ಯಗಳಿಗೂ ಸ್ಪಂದಿಸುವ ರೀತಿಯವು. ಮೆಕೆರೆಲ್, ವುರ್ತ್, ಕಿಟೆಲ್ - ಇವರುಗಳು ಕೃತಿಯನ್ನು ಇಂಗ್ಲಿಷಿನಲ್ಲಿ ರಚಿಸಿದ್ದರೂ ಶಬ್ದಮಣಿದರ್ಪಣದ ಪರಿಭಾಷೆ, ವರ್ಗೀಕರಣ ರೀತಿ ಇವುಗಳನ್ನು ಇಟ್ಟುಕೊಂಡು ಭಾಷಾ ಬದಲಾವಣೆಗಳು ಮತ್ತು ಕಲಿಯುವವರ ಅಗತ್ಯಗಳು ಬೇಡುವಷ್ಟುಮಟ್ಟಿಗೆ ಹೊಸವನ್ನು ಅಳವಡಿಸಿಕೊಂಡು ಸಾಗಿದ್ದಾರೆ ಇವರು ಸಂಸ್ಕೃತ ವ್ಯಾಕರಣ ಚೌಕಟ್ಟನ್ನು ಮೀರದೆ ಹೊಸತನವನ್ನು ಅಳವಡಿಸಿದವರು.
ಥಾಮಸ್ ಹಾಡ್ಸನ್, ಫ್ರೀಡ್ರಿಶ್ ಜೀಗ್ಲರ್ ಮತ್ತು ಬಿ. ಗ್ರೇಟರ್ ಇವರುಗಳು ಈ ಪದ್ಧತಿಯಿಂದ ಸಂಪೂರ್ಣ ಬೇರೆಯಾಗಿ ಇಂಗ್ಲಿಷ್ ವ್ಯಾಕರಣ ಚೌಕಟ್ಟಿನಲ್ಲಿಯೇ ಮತ್ತು ಇಂಗ್ಲೀಷರಲ್ಲಿ ಪ್ರಚಲಿತವಿದ್ದ ವಿಧಾನಗಳಲ್ಲೇ ಕನ್ನಡ ವ್ಯಾಕರಣವನ್ನು ರಚಿಸುವ ಕಾಯಕಕ್ಕೆ ತೊಡಗಿದವರು. ಪದಗಳಲ್ಲಿ ಅಷ್ಟವರ್ಗಗಳನ್ನು ಸ್ಪಷ್ಟವಾಗಿ ಗುರುತಿಸಿ, ವಾಕ್ಯಗಳಲ್ಲಿ ಅವು ಒಂದೊಂದೂ ಹೇಗೆ ಪ್ರಯೋಗವಾಗುತ್ತವೆ ಎಂಬುದನ್ನು ತಿಳಿಸುವುದು ಈ ವ್ಯಾಕರಣಕಾರರ ಉದ್ದೇಶ. ಒಬ್ಬೊಬ್ಬರೂ ಇದನ್ನು ತಮ್ಮದೇ ರಿತಿಯಲ್ಲಿ ಸಾಧಿಸಿದ್ದಾರೆ.
ಥಾಮಸ್ ಹಾಡ್ಸನ್ನನ ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣದಲ್ಲಿ ನೂರು ಪುಟಗಳಿದ್ದು (ಎರಡನೆಯ ಆವೃತ್ತಿಯಲ್ಲಿ 128 ಪುಟಗಳು) ಮೂರು ಭಾಗಗಳಿವೆ. ಕನ್ನಡ ಅಕ್ಷರಗಳ ವಿಷಯ ಹಾಗೂ ಪದಗಳ ಅಷ್ಟವರ್ಗ – ಇವೆರಡೂ ಮೊದಲ ಭಾಗದ ವಸ್ತು. ವಾಕ್ಯರಚನೆಯ ವಿವರಗಳು ಎರಡನೆಯ ಭಾಗದಲ್ಲಿ ಬಂದಿವೆ. ಮೂರನೆಯ ಭಾಗವು ಒಂದು ಅನುಬಂಧವಾಗಿದ್ದು ಅದರಲ್ಲಿ ಇಂಗ್ಲಿಷ್ ಪಾರಿಭಾಷಿಕ ಪದಗಳಿಗೆ ಕನ್ನಡ ಪರ್ಯಾಯ ಪದಗಳನ್ನು, ಸಂಖ್ಯೆಗಳು, ಭಿನ್ನರಾಶಿಗಳು, ವಾರದ ದಿನಗಳು, ಸಂವತ್ಸರಗಳು – ಇವುಗಳನ್ನು ಕನ್ನಡಿಗರು ಹೇಳುವ ವಿಧಾನವನ್ನು ವಿವರಿಸಿದ್ದಾನೆ. ಒಟ್ಟಿನಲ್ಲಿ ಕನ್ನಡ ನಾಡಿನಲ್ಲಿ ಸಾಮಾನ್ಯ ವ್ಯವಹಾರಕ್ಕೆ ಬೇಕಾದ ಎಲ್ಲ ವಿಷಯಗಳನ್ನೂ ಇವನು ತನ್ನ  ಗ್ರಂಥದಲ್ಲಿ ಅಳವಡಿಸಿದ್ದಾನೆ. ಅಕ್ಷರಗಳ ವಿಭಾಗದಲ್ಲಿ ಅಆ ಇತ್ಯಾದಿ ಹದಿನಾಲ್ಕು ಸ್ವರಗಳು, ಅಂ ಅಃ ಎಂಬ ಎರಡು ಸ್ವರ ಅಥವ ವ್ಯಂಜನಗಳು ಇಪ್ಪತ್ತೈದು ವರ್ಗೀಯ ವ್ಯಂಜನಗಳು ಮತ್ತು ಒಂಬತ್ತು ಅವರ್ಗೀಯ ವ್ಯಂಜನಗಳು – ಹೀಗೆ ಒಟ್ಟು ಐವತ್ತು ಅಕ್ಷರಗಳನ್ನು ತಿಳಸಿ ಅವುಗಳ ಇಂಗ್ಲಿಷ್ ಲಿಪ್ಯಂತರ ಮತ್ತು ಉಚ್ಚಾರಗಳನ್ನು ಸೂಚಿಸಿದ್ದಾನೆ. ಇದೇ ಭಾಗದಲ್ಲಿ ಪದಗಳನ್ನು ಕೂಡಿ ನುಡಿಯುವಾಗ ಆಗುವ ಅಕ್ಷರ ವ್ಯತ್ಯಾಸಗಳಾದ ಸಂಧಿಗಳನ್ನು ವಿವರಿಸಿದ್ದಾನೆ. ಇವನು ವಿವರಿಸಿರುವ ಸಂಧಿಗಳಲ್ಲಿ ಲೋಪ, ಆಗಮ, ಆದೇಶ ಸಂಧಿಗಳು ಸೇರಿವೆ.
ಕನ್ನಡ ಪದಗಳನ್ನು ಅಷ್ಟವರ್ಗಗಳಲ್ಲಿ ಹಿಡಿಸಿರುವುದು ಇವನ ಬಹುಮುಖ್ಯ ಸಾಧನೆ. ಎಲ್ಲಿಯೂ ಪ್ರಾಚೀನ ತ್ರಿವರ್ಗಗಳನ್ನು ಇವನು ಉಲ್ಲೇಖಿಸುವುದಿಲ್ಲ. ಇವನ ಕೃತಿಯ ಓದುಗರಿಗೆ ಅವುಗಳ ನೆನಪಾಗುವುದೂ ಇಲ್ಲ. ಮೆಕೆರೆಲ್ ವ್ಯಾಕರಣದಲ್ಲಿ ಕಂಡು ಬರುವ ತ್ರಿವರ್ಗವೋ ಅಷ್ಟವರ್ಗವೋ ಎಂಬ ಗೊಂದಲ ಇಲ್ಲಿ ಕಾಣುವುದಿಲ್ಲ. ಕೇರಿ ವ್ಯಾಕರಣದಲ್ಲಿರುವ ದೋಷಪೂರ್ಣ ನಿರೂಪಣೆಗಳೂ ಇವನ ಕೃತಿಯಲ್ಲಿಲ್ಲ. ಇವನ ಸಮರ್ಥ ನಿರೂಪಣೆ ಅಷ್ಟವರ್ಗೀಕರಣವೇ ಕನ್ನಡ ಪದಭೇದಗಳನ್ನು ವಿವರಿಸಲು ಸರಿಯಾದ ಪದ್ಧತಿಯೆಂದು ಓದುಗರ ಮೇಲೆ ಅಚ್ಚೊತ್ತುವಷ್ಟು ಪ್ರಭಾವಶಾಲಿಯಾಗಿದೆ. ನಾಮಪದ, ಸರ್ವನಾಮ, ಕ್ರಿಯಾಪದ, ಗುಣವಿಶೇಷಣ, ಕ್ರಿಯಾವಿಶೇಷಣ(ಆಗ,ಈಗ, ಮೇಗು, ಕೆಳಗು ಇತ್ಯಾದಿ), ಉಪಸರ್ಗಾವ್ಯಯ(ಕೂಡ, ಒಡನೆ,ತನಕ, ತುಸುಕ, ಬಗ್ಗೆ, ಇತ್ಯಾದಿ), ಸಮುಚ್ಚಯಾವ್ಯಯ(ಆದರೂ,ಇನ್ನೂ,ಊ ಇತ್ಯಾದಿ), ಭಾವಸೂಚಕಾವ್ಯಯ(ಅಯ್ಯೋ, ಅಕಟಾ, ಛೇ, ಅಶಿಶೀ ಇತ್ಯಾದಿ) - ಇವು ಎಂಟು ಕನ್ನಡದ ಅಷ್ಟವರ್ಗ. ಇಂಗ್ಲಿಷಿನ ಅಷ್ಟವರ್ಗಗಳನ್ನು ಬಲ್ಲವರಿಗೆ ಕನ್ನಡ ಪದಗಳಲ್ಲಿ ಈ ವರ್ಗಗಳನ್ನು ಗುರುತಿಸಲು ಇವನ ವಿವರಣೆ ಸಹಾಯಕವಾಗಿದೆ. ಇದರಿಂದ ಕನ್ನಡ ಪದಗಳನ್ನು ಮಾತಿನಲ್ಲಿ ಬಳಸುವುದು ವಿದೇಶೀ ಓದುಗರಿಗೆ ಸಾಧ್ಯವಾಗುತ್ತದೆ. ಇವಲ್ಲದೆ ನಿಪಾತ (ಆ,ಓ,ಏ,ಏನೋ,ಕಾಣೋ ಇತ್ಯಾದಿ) ಎಂಬ ಒಂಬತ್ತನೆಯ ವರ್ಗವನ್ನು ಕಡೆಯಲ್ಲಿ ಸೇರಿಸಿರುವುದು ಇವನ ವರ್ಗೀಕರಣದ ಅಸಮರ್ಪಕತೆಯನ್ನು ತೋರಿಸುತ್ತದೆ. ಇಂಗ್ಲೀಷರಿಗೆ ಸುಲಭವಾಗಿ ಅರ್ಥವಾಗುವಂತೆ ಕನ್ನಡ ವ್ಯಾಕರಣವನ್ನು ಬರೆಯುವ ಉದ್ದೇಶ ಇದರಿಂದ ಈಡೇರಿದಂತಾಗಿದೆ.
ಪಾಶ್ಚಾತ್ಯ ಪರಿಕಲ್ಪನೆಗಳ ಮೂಲಕ ಕನ್ನಡ ವ್ಯಾಕರಣವನ್ನು ವಿವರಿಸುವ ಮೆಕೆರಲನ ಪದ್ಧತಿಯನ್ನು ಇವನು ಮುಂದುವರೆಸಿ, ಸುಧಾರಿಸಿ ಪರಿಪೂರ್ಣಗೊಳಿಸಿದ್ದಾನೆ. ಕನ್ನಡ ಪದಗಳನ್ನೆಲ್ಲ ಅಷ್ಟವರ್ಗಗಳಲ್ಲಿ ಅಳವಡಿಸಿರುವುದು ಇದಕ್ಕೆ ಒಂದು ಉದಾಹರಣೆ. ಪ್ರತಿಯೊಂದು ವರ್ಗದಲ್ಲಿ ಉಪವರ್ಗಗಳನ್ನು ಕಲ್ಪಿಸಿದ್ದಾನೆ. ಅಲ್ಲದೆ ನಾಮಪದಗಳ ವಿಭಾಗದಲ್ಲಿ ಕೆಲವು ಪ್ರಾಣಿಗಳ ಗಂಡು ಹೆಣ್ಣುಗಳನ್ನು ಸೂಚಿಸಲು ಇರುವ ಬೇರೆ ಬೇರೆ ಪದಗಳನ್ನು ವಿಚಕ್ಷಣೆಯಿಂದ ಪಟ್ಟಿಮಾಡಿದ್ದಾನೆ. ಹೀಗೆ:
“ಗೂಳಿ , a bull   ಆಕಳು, a cow
ಹೋರಿ, a steer  ಕಡಸು, a heifer
ಕೋಣ, a he-buffalo  ಎಮ್ಮೆ, a she-buffalo
ಟಗರು,ಎಳಗ  a ram  ಕುರಿ, a sheep
ಹುಂಜ, a cock  ಹೆಂಟೆ, a hen
ಹೋತ a he-goat  ಆಡು a she-goat   (ಹಾಡ್ಸನ್, 10)
 ಕ್ರಿಯಾಪದಗಳ ವಿಭಾಗದಲ್ಲಿ ವಿಕಾರ ರೂಪ ಹೊಂದುವ ಕ್ರಿಯಾ ಪದಗಳೆಂಬ ಒಂದು ವರ್ಗವನ್ನು ಮೆಕೆರೆಲ್ ಕಲ್ಪಿಸಿ  120 ಅಂತಹ ಕ್ರಿಯಾಪದಗಳನ್ನು ಉದಾಹರಿಸಿದ್ದ. ಆ ಕ್ರಿಯಾಪದಗಳ ಎಲ್ಲ ರೂಪಗಳನ್ನು ಪಟ್ಟಿ ಮಾಡಿರುವುದು ಇನ್ನೊಂದು ಉದಾಹರಣೆ. ಹೀಗೆ: “ಕೊಡು, ಕೊಟ್ಟು, ಕೊಟ್ಟ,ಕೊಟ್ಟನು, ಕೊಟ್ಟಾನು”(ಹಾಡ್ಸನ್, ಪು.44). ಮೆಕೆರೆಲ್ ಈ ಕ್ರಿಯಾ ಪದಗಳ ಭೂತ ಕೃದಂತ ರೂಪಗಳನ್ನು ಮಾತ್ರ ಪಟ್ಟಿ ಮಾಡಿದ್ದಾನೆ. ಊನ ಕ್ರಿಯಾಪದಗಳಿಗೆ ಸಂಬಂಧಪಟ್ಟಂತೆ ಮೆಕೆರೆಲ್ ಎಂಟು ಊನ ಕ್ರಿಯಾಪದಗಳನ್ನು ಮಾತ್ರ ಪಟ್ಟಿ ಮಾಡಿದ್ದರೆ ಹಾಡ್ಸನ್ ಹನ್ನೆರಡು ಅಂತಹ ಕ್ರಿಯಾಪದಗಳನ್ನು ಉದಾಹರಿಸಿದ್ದಾನೆ. ಕ್ರಿಯಾಪದಗಳು ರೂಪುಗೊಳ್ಳುವುದನ್ನು ವಿವರಿಸುವಾಗ ಆಖ್ಯಾತ ಪ್ರತ್ಯಯಗಳು ಭೂತ ಕೃದಂತ ವಿಶೇಷಣ ರೂಪಕ್ಕೆ ಸೇರಿದರೆ ಭೂತಕಾಲ ಕ್ರಿಯಾಪದವೂ,  ಭಾವರೂಪ(ಕೃದಂತಾವ್ಯಯ)ಕ್ಕೆ ಸೇರಿದರೆ ವರ್ತಮಾನ ಕಾಲ ಕ್ರಿಯಾಪದವೂ ಉಂಟಾಗುತ್ತವೆ ಎಂದು ತಿಳಿಸಿದ್ದಾನೆ.  ಹೀಗೆ:
ವರ್ತಮಾನಕಾಲ:  ಮಾಡುತ್ತಾ(ಭಾವರೂಪ/ಕೃದಂತಾವ್ಯಯ) + ಆನೆ(ಆಖ್ಯಾತ) = ಮಾಡುತ್ತಾನೆ
ಭೂತಕಾಲ:          ಮಾಡಿದ(ಭೂತ ಕೃದಂತ ವಿಶೇಷಣ) + ಅನು(ಆಖ್ಯಾತ)       = ಮಾಡಿದನು
ಭವಿಷ್ಯತ್ ಕಾಲ:    ಮಾಡುವ(ಭವಿಷ್ಯತ್ ಕೃದಂತ ವಿಶೇಷಣ) + ಅನು(ಆಖ್ಯಾತ) = ಮಾಡುವನು
                        ಮಾಡಿ(ಭೂತ ಕೃದಂತಾವ್ಯಯ) + ಆನು(ಆಖ್ಯತ)              = ಮಾಡಿಯಾನು                           
                                                                                    (ಈ ವ್ಯಾಕರಣದಲ್ಲಿ ಕ್ರಿಯಾಪದಗಳ ವಿವರಣೆ ಪು.25-52)
ಹಾಡ್ಸನ್ನನ ಇಂತಹ ವಿವರಣೆಗಳು ವಿಷಯಗಳನ್ನು ಹೆಚ್ಚು ಸ್ಪಷ್ಟಗೊಳಿಸುತ್ತವೆ.
ಕೊನೆಯ ಭಾಗದಲ್ಲಿರುವ ವಿಷಯಗಳು ವ್ಯಾಕರಣಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಮಹತ್ವದವು. ವೀಸ - (1/16 ಅಂಶ), ಬೇಳೆ = (1/8), ಕಾಲು I (1/4), ಅರೆ II (1/2), ಮುಕ್ಕಾಲು III (3/4) (ಹಾಡ್ಸನ್,105) – ಈ ಪದಗಳು ಈಗ ಬಳಕೆಯಿಂದ ಮರೆಯಾಗಿದ್ದು ವ್ಯಾಕರಣವೊಂದರಲ್ಲಿ ಪ್ರಥಮವಾಗಿ ದಾಖಲಾಗಿರುವುದು ಇಲ್ಲಿಯೇ.  Gerund - ಶಬ್ದಶೂನ್ಯ, participle - ಕ್ರಿಯಾಶೂನ್ಯ, infinitive mood - ಭಾವರೂಪ – ಹೀಗೆ ಪದಗಳ ಪರ್ಯಾಯಗಳನ್ನು ನೀಡಿರುವುದು ಭಾಷಾಂತರಕ್ಕೆ ಸಹಕಾರಿಯಾಗಿವೆ. ಇವಲ್ಲದೆ ವಾರಗಳ ಇಂಣಗ್ಲಿಷ್ ಹೆಸರುಗಳು, ಹತ್ತು ಸಾವಿರ, ಲಕ್ಷ, -  ಈ ಸಂಖ್ಯೆಗಳ ನಿರ್ವಚನಗಳು ಇಲ್ಲಿವೆ. ಈ ಎಲ್ಲವೂ ಕನ್ನಡ ಕಲಿಯುವ ಇಂಗ್ಲಿಷರಿಗೆ ಅಗತ್ಯವಾದುವುಗಳೇ. ಅಲ್ಲದೆ ಈ ಅಂಶಗಳು ಅಷ್ಟ ವರ್ಗಗಳಲ್ಲಿ ಸೇರಿಲ್ಲದಿದ್ದು ಪ್ರತ್ಯೇಕವಾಗಿ ದಾಖಲಿಸುವುದು ಅಗತ್ಯವಾಗಿತ್ತು.
            ಹಾಡ್ಸನ್ನನ ವ್ಯಾಕರಣ ಸಂಪೂರ್ಣ ದೋಷಮುಕ್ತವಾದುದೇನೂ ಅಲ್ಲ. ಅಲ್ಲಲ್ಲಿ ನಿರೂಪಣೆಯ ದೋಷಗಳು ಇಣುಕಿದ್ದು, ಇವು ಇವನು ನಿರ್ಮಿಸಿಕೊಂಡ ಚೌಕಟ್ಟಿನ ಪರಿಮಿತಿಯನ್ನು ಸೂಚಿಸುತ್ತವೆ. ಉದಾಹರಣೆಗೆ ಒಳಗು, ಹೊರಗು, ಮೇಗು, ಕೆಳಗು – ಈ ಪದಗಳನ್ನು ಸರ್ವನಾಮಗಳು ಮತ್ತು ಕ್ರಿಯಾ ವಿಶೇಷಣಗಳು ಹೀಗೆ ಎರಡು ವರ್ಗಗಳಲ್ಲಿ ಸೇರಿಸಿದ್ದಾನೆ. “There are eight parts of speech”  ಎಂಬ ಘೋಷಣೆಯೊಂದಿಗೆ ಇವನು ಕನ್ನಡ ಪದಗಳ ವಿವರಣೆಗೆ ತೊಡಗಿದ್ದರೂ ಆ ಭಾಗದ ಕೊನೆಯಲ್ಲಿ “ಪಾರ್ಟಿಕಲ್ಸ್” ಎಂಬ ಒಂಬತ್ತನೆಯ ವರ್ಗವೊಂದನ್ನು ಸೇರಿಸಿದ್ದಾನೆ. ಇಂತಹ ದೋಷಗಳೆಲ್ಲ ಭಾಷಾ ಕಲಿಕೆಗೆ ಅಡ್ಡಿಯಾಗುವಂತಹವಲ್ಲ. ಇವು ಗ್ರಂಥದ ಉಪಯುಕ್ತತೆಯನ್ನು ಕುಗ್ಗಿಸುವುದೂ ಇಲ್ಲ.. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಹಾಡ್ಸನ್ನನ ವ್ಯಾಕರಣ ಸ್ಪಷ್ಟ ಮತ್ತು ಖಚಿತ ನಿರೂಪಣೆ ಇರುವ ಉಪಯುಕ್ತ ಕೃತಿ.
            ಜೀಗ್ಲರನ ಕನ್ನಡಭಾಷೆ ಕಲಿಯುವವರಿಗೆ ಸಹಾಯವು 1876 ಹಾಡ್ಸನ್ನನ ವ್ಯಾಕರಣದನಂತರ ಪ್ರಕಟವಾದ ಕೃತಿ. ಇದು ಒಂದು ಅಸಾಂಪ್ರದಾಯಿಕ ರೀತಿಯ ವ್ಯಾಕರಣವಾಗಿದ್ದು ಕನ್ನಡ ಕಲಿಕೆಗೆ ಸಹಾಯವಾಗುವಂತೆ ಪ್ರಾಥಮಿಕ ಮಾಹಿತಿಯನ್ನು ಒಳಗೊಂಡ 104 ಪುಟಗಳ ಚಿಕ್ಕ ಚೊಕ್ಕ ಕೃತಿ. ಭಾಷೆಯನ್ನು ಕಲಿಯುವವನು ಕರಗತಮಾಡಿಕೊಳ್ಳಬೇಕಾದ ಕೌಶಲಗಳು, ನೆನಪಿಟ್ಟುಕೊಳ್ಳಬೇಕಾದ ಪದಗಳು, ವ್ಯವಹಾರದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ ರಿವಾಜುಗಳು ಇಂತಹವುಗಳನ್ನು ಒಳಗೊಳಿಸಿ ಜೀಗ್ಲರ್ ಈ ಕೃತಿಯನ್ನು ಬರೆದಿದ್ದಾನೆ. ಇಲ್ಲಿಗೆ ಹೊಸದಾಗಿ ಬಂದ ವಿದೇಶಿಗನೊಬ್ಬ ಈ ನಾಡಿನ ಅಧ್ಯಾಪಕನೊಬ್ಬನನ್ನು ನೇಮಿಸಿಕೊಂಡು ಸ್ವಂತವಾಗಿ ಕನ್ನಡ ಕಲಿಯಲು ಸಹಾಯವಾಗುವಂತೆ ಈ ಪುಸ್ತಕದ ರಚನೆಯಾಗಿದೆ.
            ಜೀಗ್ಲರನ ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಇಲ್ಲಿರುವುವು ಮೂರು ಪಟ್ಟಿಗಳು. ಮೊದಲನೆಯದರಲ್ಲಿ ಅಕ್ಷರಗಳು, ಅವುಗಳ ಇಂಗ್ಲಿಷ್ ಲಿಪ್ಯಂತರ ಮತ್ತು ಕೆಲವು ಪ್ರಾಥಮಿಕ ಅಂಶಗಳು ಇವೆ. ಎರಡನೆಯದು 162 ಪದಗಳ ಭಂಡಾರ. ಈ ಪದಗಳನ್ನು ನಾಮಪದ, ಕ್ರಿಯಾಪದ ಇತ್ಯಾದಿಯಾಗಿ ಅಷ್ಟವರ್ಗಗಳಲ್ಲಿ ವರ್ಗೀಕರಿಸಿದ್ದಾನೆ. ಪ್ರತಿಯಂದು ಪದದ ಇಂಗ್ಲಿಷ್ ಲಿಪ್ಯಂತರವನ್ನು ಅದರ ಇಂಗ್ಲಿಷ್ ಪರ್ಯಾಯವನ್ನೂ ಕೊಟ್ಟಿದ್ದಾನೆ.  ಮೂರನೆಯದು ಪದಭಂಡಾರದ ಪದಗಳನ್ನು ಉಪಯೋಗಿಸಿ ರಚಿಸಿದ ಒಂದು ಸಾವಿರ ವಾಕ್ಯಗಳು.ಇವುಗಳನ್ನು ಹತ್ತು ಹತ್ತು ವಾಕ್ಯಗಳ ನೂರು ಗುಚ್ಛಗಳನ್ನಾಗಿ ಜೋಡಿಸಿದ್ದಾನೆ.  ಅವುಗಳ ಇಂಗ್ಲಿಷ್ ಲಿಪ್ಯಂತರ ಮತ್ತು ಭಾಷಾಂತರಗಳಿವೆ. ಈ ಮೂರು ಅಧ್ಯಾಯಗಳಲ್ಲಿ ಇದೇ ಅತ್ಯಂತ ದೊಡ್ಡದು. ಪುಸ್ತಕದ ಒಟ್ಟು ನೂರು ಪುಟಗಳಲ್ಲಿ ತೊಂಬತ್ತು ಪುಟಗಳಷ್ಟು ವಿಸ್ತಾರವಾಗಿರುವುದು ಇದು. ಭಾಷೆಯ ಕಲಿಕೆಯಲ್ಲಿ ಇವನು ವಾಕ್ಯಗಳಿಗೆ ನೀಡಿರುವ ಮಹತ್ವವನ್ನು ಇದು ತೋರಿಸುತ್ತದೆ. ಇಲ್ಲಿ ಹೀಗೆ ಅಕ್ಷರಗಳ ಪಟ್ಟಿ, ಪದಗಳ ಪಟ್ಟಿ ಮತ್ತು ವಾಕ್ಯಗಳ ಪಟ್ಟಿ – ಇವು ಈ ಪುಸ್ತಕದ ಒಟ್ಟು ವಸ್ತು.
            ಈ ಪುಟಗಳಲ್ಲದೆ ಪುಸ್ತಕದ ಮೊದಲಲ್ಲಿ ಒಂದು ಸಣ್ಣ ಪೀಠಿಕೆಯಿದ್ದು ನಾಲ್ಕು ಪುಟಗಳ ವಿಸ್ತಾರದ ಪೀಠಿಕೆ ಇದ್ದು  ಈ ಕೃತಿಯಿಂದ ಗರಿಷ್ಠ ಉಪಯೋಗ ಪಡೆಯಲು ಓದುಗ ಅನುಸರಿಸಬೇಕಾದ  ರೀತಿನೀತಿಗಳನ್ನು ವಿವರಿಸಿದ್ದಾನೆ. ಇಲ್ಲಿ ವಿವರಿಸಿರುವ ಪ್ರಕಾರ ವಿದೇಶೀ ವಿದ್ಯಾರ್ಥಿ ಒಬ್ಬ ಸ್ಥಳೀಯ ಕನ್ನಡ ಅಧ್ಯಾಪಕನನ್ನು ನೇಮಿಸಿಕೊಂಡು ಪುಸ್ತಕದ ಮೊದಲ ಅಧ್ಯಾಯವನ್ನು (ಅಂದರೆ ಅಕ್ಷರಗಳನ್ನು) ಪದೇ ಪದೇ ಓದಿಸಿ ಕೇಳಬೇಕು.ಅಧ್ಯಾಪಕ  ಓದುವುದನ್ನು ಅನೇಕ ಸಲ ಕೇಳಿದ ಮೇಲೆ ವಿದ್ಯಾರ್ಥಿಯು ತಾನೂ ಅದರಂತೆ ಹೇಳಬೇಕು. ಅನಂತರ ತನ್ನ ಪುಸ್ತಕದಲ್ಲಿ ಅಕ್ಷರಗಳನ್ನು ನೋಡುತ್ತ ಹಾಗೆಯೇ ಉಚ್ಚರಿಸಬೇಕು. ತಾನು ಹೇಳುವ ರೀತಿ ಅಧ್ಯಾಪಕನಿಗೆ ಸಮಾಧಾನಕರವಾಗುವವರೆಗೂ ಈ ಕ್ರಮವನ್ನು ಪುನರಾವರ್ತಿಸಬೇಕು. ಅನಂತರ ಎರಡನೆಯ ಅಧ್ಯಾಯಕ್ಕೆ ಹೋಗಬೇಕು.  ಕೇಳುವುದು, ಕೇಳಿದನಂತರ ಹೇಳುವುದು, ಹೇಳಿದ ಹಾಗೆ ಓದುವುದು – ಈ ಮೂರರಲ್ಲಿಯೂ ಪರಿಣತನಾದ ಮೇಲೆ ಪುಸ್ತಕದಲ್ಲಿದ್ದಂತೆ ಬರೆಯಬೇಕು. ಮೊದಲನೆಯ ಅಧ್ಯಾಯವನ್ನು ಈ ರೀತಿಯಾಗಿ ಪರಿಪೂರ್ಣವಾಗಿ ಕಲಿತ ಮೇಲೆ ಇದೇ ರೀತಿಯಾಗಿ ಎರಡನೆಯ ಅಧ್ಯಾಯವನ್ನು ತದನಂತರ ಮೂರನೆಯ ಅಧ್ಯಾಯವನ್ನೂ ಕಲಿಯಬಹುದು.ಇಲ್ಲಿರುವ ಸೂಚನೆಗಳನ್ನು ಕಲಿಯುವವನು ತಿಳಿದಿರಲೇ ಬೇಕಾದ ಅಗತ್ಯವಿರುವುದರಿಂದ, ಈ ಪೀಠಿಕೆ ಪುಸ್ತಕದ ಅವಿಭಾಜ್ಯ ಅಂಗವಾಗಿ ಹೊಮ್ಮಿದೆ.
                        ಜೀಗ್ಲರನ ಪುಸ್ತಕದ ಯೋಜನೆ ಮತ್ತು ಅವನು ಕನ್ನಡವನ್ನು ಕಲಿಯಲು ಕೊಟ್ಟಿರುವ ಸೂಚನೆ – ಇವುಗಳು ವಿದೇಶೀ ಭಾಷೆಯಾಗಿ ಕನ್ನಡವನ್ನು ಕಲಿಸುವ ಪ್ರಾಥಮಿಕ ತತ್ವಗಳನ್ನು ನಿರೂಪಿಸುತ್ತವೆ. ಕೇಳುವುದು ಹೇಳುವುದು ಓದುವುದು ಮತ್ತು ಬರೆಯುವುದು – ಈ ಅನುಕ್ರಮದಲ್ಲಿ ಭಾಷಾ ಕೌಶಲ್ಯಗಳನ್ನು ಕಲಿಯಬೇಕೆಂಬ ಇವನ ಆಗ್ರಹ ಆಧುನಿಕ ಅಧ್ಯಾಪನಾ ಪದ್ಧತಿಗೆ ಅನುಸಾರವಾಗಿಯೇ ಇದೆ. ಆದರೆ ಮೊದಲು ಅಕ್ಷರವನ್ನು ಕಲಿತು ಅನಂತರ ಪದ ಮತ್ತು ವಾಕ್ಯಗಳನ್ನು ಕಲಿಯಬೇಕೆಂಬ ಇವನ ಆಶಯ ಆಧುನಿಕ ಶಿಕ್ಷಣ ತತ್ವಗಳಿಗನುಸಾರವಾಗಿಲ್ಲ. ಇವನು ಪ್ರತಿಪಾದಿಸಿದ ಕ್ರಮ ಹಳತಾಗಿದ್ದು ನಿಜವಾಗಿ ತಿರುವುಮುರುವಾಗಿದೆ. ವಾಕ್ಯಗಳು ವಾಕ್ಯ ಭಾಗಗಳಾಗಿ ಪದಗಳು ಪದಭಾಗಗಳಾಗಿ ಅಕ್ಷರಗಳು – ಇದು ಈಗ ತಜ್ಞರು ಭಾವಿಸುವಂತೆ ಮಕ್ಕಳು ಕಲಿಯುವ ಸಹಜ ಕ್ರಮ. ಜೀಗ್ಲರನ ವ್ಯಾಕರಣದಲ್ಲಿದ್ದಂತೆ ಅಕ್ಷರದಿಂದ ಪದ ಪದದಿಂದ ವಾಕ್ಯ ಎಂಬುದಲ್ಲ. ಈ ಕೊರತೆ ಇದ್ದಾಗ್ಯೂ ಈ ಪುಸ್ತಕ ಅನೇಕ ಆವೃತ್ತಿಗಳನ್ನು ಕಂಡು ಜನಪ್ರಿಯವಾಗಿತ್ತು. ಇವನ ಪುಸ್ತಕದ ಬಳಕೆದಾರರು ಪ್ರೌಢ ವಯಸ್ಕರಾದ್ದರಿಂದ ಇವನ ಕ್ರಮ ಅವರಿಗೆ ಅನುಕೂಲಕರವಾಗಿಯೇ ಪರಿಣಮಿಸಿರಬೇಕು.
            ಹೀಗೆ ಜೀಗ್ಲರನ ಕೃತಿ ವ್ಯಾಕರಣವನ್ನು ಹೆಚ್ಚು ಉಪಯೋಗ ಕೇಂದ್ರಿತವನ್ನಾಗಿ ಮಾಡಿತು. ಭಾಷೆಯ ಅಧ್ಯಯನವು ಕಲಿಕೆಯ ಸಿದ್ಧಾಂತಗಳಿಗನುಗುಣವಾಗಿ ನಡೆಯುವುದಕ್ಕೆ ಪೂರಕವಾಯಿತು.
            ಜೀಗ್ಲರನನಂತರ ಗ್ರೇಟರ್ ಎಂಬುವನು ಕನ್ನಡ ವ್ಯಾಕರಣಮಾಲೆ ಎಂಬ ಕಿರುಹೊತ್ತಗೆಯನ್ನು ರಚಿಸಿದನು. ಕನ್ನಡ ವ್ಯಾಕರಣವನ್ನೆಲ್ಲ ಕೋಷ್ಟಕಗಳ ರೂಪದಲ್ಲಿ ಸಂಗ್ರಹಿಸಿಟ್ಟಿರುವುದು ಇವನ ವೈಶಿಷ್ಟ್ಯ. ಮೊದಲ ನಾಲ್ಕು ಪುಟಗಳ ಪೀಠಿಕೆಯನ್ನು ಹೊರತುಪಡಿಸಿದರೆ ಇವನ ಪುಸ್ತಕದಲ್ಲಿರುವುದು ಹನ್ನೊಂದು ಪುಟಗಳಷ್ಟೇ. ಪ್ರತಿಯೊಂದು ಪುಟದಲ್ಲಿ ಒಂದೊಂದು ಕೋಷ್ಟಕವಿದೆ. ಕೋಷ್ಟಕದ ಗಾತ್ರವನ್ನನುಸರಿಸಿ ಪುಟದ ಗಾತ್ರವೂ ಇದ್ದು ಎಲ್ಲ ಹನ್ನೊಂದು ಪುಟಗಳೂ ಒಂದೇ ಗಾತ್ರದವಲ್ಲ. ಪುಟಗಳನ್ನೆಲ್ಲ ಒಂದೇ ಗಾತ್ರಕ್ಕೆ ಮಡಿಸಿರುವುದರಿಂದ ಪುಸ್ತಕವು ಹೊರ ನೋಟಕ್ಕೆ ಬೇರೆ ಯಾವುದೇ ಪುಸ್ತಕದಂತೆ ಕಾಣುತ್ತದೆ. ಬಳಕೆಗಾರರು ತಮಗೆ ಬೇಕಾದ ಪುಟವನ್ನು ಸಂಪೂರ್ಣವಾಗಿ ಬಿಚ್ಚಿಕೊಂಡು ಓದಬಹುದಾಗಿದೆ.
            ಈ ಕೋಷ್ಟಕಗಳಲ್ಲಿ ಪ್ರತಿಯೊಂದೂ ಒಂದು ಅಧ್ಯಾಯವಿದ್ದಂತೆ. ಅದಕ್ಕೆ ಒಂದು ವಸ್ತುವಿದೆ. ಅದರಲ್ಲಿ ನಿಯಮ ನಿರೂಪಣೆ ಮತ್ತು ಉದಾಹರಣೆಗಳಿವೆ. ಇಲ್ಲಿ ನಿರೂಪಣೆ ಇರುವುದು ವಿವರವಾದ ವಾಕ್ಯಗಳಿಂದಲ್ಲ. ಪ್ರತಿಯೊಂದು ಕೋಷ್ಟಕದಲ್ಲಿ ಅಡ್ಡ ಸಾಲು ಮತ್ತ ಉದ್ದ ಸಾಲುಗಳಿದ್ದು, ಉದ್ದ ಸಾಲುಗಳ ಮೇಲ್ತುದಿಯಲ್ಲು ಅಡ್ಡ ಸಾಲುಗಳ ಎಡ ಕೊನೆಯಲ್ಲೂ ಇರುವ ಶೀರ್ಷಿಕೆಗಳೇ ನಿಯಮಗಳನ್ನು ನಿರೂಪಿಸುವುವು. ಈ ಶೀರ್ಷಿಕೆಗಳನ್ನನುಸರಿಸಿ ಉದಾಹರಣೆಗಳು ಕೋಷ್ಟಕದ ಮಧ್ಯ ಭಾಗದಲ್ಲಿ ಬರುತ್ತವೆ. ಪ್ರತಿಯೊಂದು ಕೋಷ್ಟಕ ಹೇಳಬೇಕಾದ್ದನನ್ನಷ್ಟೆ ಹೇಳಿ ಮುಗಿಸುತ್ತದೆ. ಪೀಠಿಕೆ ಮುಕ್ತಾಯಗಳಿಲ್ಲ.
            ಇಲ್ಲಿರುವ ಹನ್ನೊಂದರಲ್ಲಿ ಮೊದಲ ಒಂಬತ್ತು ಕೋಷ್ಟಕಗಳನ್ನು ಒಂಬತ್ತು ಅಧ್ಯಾಯಗಳೆಂದು ಪರಿಗಣಿಸಬಹುದು. ಇವುಗಳಲ್ಲಿ ಶೀರ್ಷಿಕೆಗಳು ಇಂಗ್ಲಿಷ್ ನಲ್ಲಿಯೂ ಕನ್ನಡದಲ್ಲಿಯೂ ಇವೆ. ಉದಾಹರಣೆಗಳು ಮಾತ್ರ ಕನ್ನಡದವಾಗಿದ್ದು ಕನ್ನಡ  ಲಿಪಿಯಲ್ಲಿಯೇ ಮುದ್ರಿತವಾಗಿವೆ. ಹತ್ತನೆಯದು ಹಿಂದಿನ ಎಲ್ಲ ಒಂಬತ್ತು ಕೋಷ್ಟಕಗಳ ವಿಷಯಗಳ ಕ್ರೋಡೀಕೃತ ರೂಪ; ಪುನರಾವರ್ತನ ಕೋಷ್ಟಕ. ಹನ್ನೊಂದನೆಯದು ಹತ್ತನೆಯ ಕೋಷ್ಟಕದಲ್ಲಿರುವುದನ್ನೇ ಇಂಗ್ಲಿಷ್ ಲಿಪಿಗಳಲ್ಲಿ ಬರೆದು ಮುದ್ರಿಸಿರುವಂತಹುದು.
            ಒಂಬತ್ತು ಕೋಷ್ಟಕಗಳನ್ನು ಮೂರು ಗುಂಪುಗಳಲ್ಲಿ ವರ್ಗೀಕರಿಸಬಹುದು. (1) ಅಕ್ಷರಮಾಲೆಗೆ ಸಮಬಂಧಿಸಿದ ಮೊದಲನೆಯ ಕೋಷ್ಟಕ – ಇದರಲ್ಲಿ ಐವತ್ತು ಅಕ್ಷರಗಳನ್ನು ನಿರುಪಿಸಿದ್ದು ಹದಿನಾಲ್ಕು ಸ್ವರಗಳು, ಎರಡು ಯೋಗವಾಹಗಳು ಮತ್ತು ಮೂವತ್ತ ನಾಲ್ಕು ವ್ಯಂಜನಗಳು ಇದರಲ್ಲಿ ಸೇರಿವೆ.ಇಲ್ಲಿ ಇವುಗಳ ಇಂಗ್ಲಿಷ್ ಲಿಪ್ಯಂತರವಿದೆ. ಒಂದು ಪ್ರತ್ಯೇಕ ಉಪವಿಭಾಗದಲ್ಲಿ ಗುಣಿತಾಕ್ಷರಗಳು ಮತ್ತು ಮೂರು ವ್ಯಂಜನಗಳು ಸೇರಿದ ಇಪ್ಪತ್ತೊಂಬತ್ತು ದ್ವಿತ್ವಗಳೂ ಇವೆ. (2) ಪ್ರತ್ಯಯಗಳನ್ನು ನಿರೂಪಿಸುವ ನಾಲ್ಕು ಕೋಷ್ಟಕಗಳು.(ಅ) ಎರಡು ಮತ್ತು ಮೂರನೆಯ ಕೋಷ್ಟಕಗಳು ವಿಭಕ್ತಿಪ್ರತ್ಯಯಗಳನ್ನು ನಿರ್ವಚಿಸುತ್ತವೆ. ಎರಡನೆಯದರಲ್ಲಿ ಸೇವಕನು, ಸೇವಕಳು, ಮರ – ಈ ಮೂರು ಪದಗಳನ್ನು ಉದಾಹರಣೆಯಾಗಿ ಬಳಸಿ ಮೂರು ಲಿಂಗಗಳ ಅಕಾರಾಂತಪದಗಳ ವಿಭಕ್ತಿರೂಪಗಳನ್ನು ತೋರಿಸಿದ್ದಾನೆ. ಇ, ಎ, ಐಕಾರಾಂತಗಳಾದ ಎಲ್ಲ ಪದಗಳಿಗೂ ಲಿಂಗಭೇದವಿಲ್ಲದೆ (ವಿಭಕ್ತಿ ಹತ್ತುವ ಪೂರ್ವದಲ್ಲಿ) ಯಕಾರಾಗಮವಾಗುವುದನ್ನು ತಿಳಿಸಿದ್ದಾನೆ. ಮೂರನೆಯ ಕೋಷ್ಟಕದಲ್ಲಿ ಸರ್ವನಾಮಗಳು  ಮತ್ತು  ಬಂಧುವಾಚಕಗಳ ವಿಭಕ್ತಿಯುತ ರೂಪಗಳಿವೆ. (ಆ) ನಾಲ್ಕು ಮತ್ತು ಐದನೆಯ ಕೋಷ್ಟಕಗಳು ಆಖ್ಯಾತ ಪ್ರತ್ಯಯಗಳನ್ನು ಅವು ಕ್ರಿಯಾಪದಗಳಿಗೆ ಹತ್ತುವುದನ್ನೂ ತೋರಿಸುತ್ತವೆ. (ಇ) ಆರನೆಯ ಕೋಷ್ಟಕದಲ್ಲಿ ಕ್ರಿಯಾಪದಗಳಿಂದ ಉಂಟಾಗುವ ನಾಮಪದಗಳನ್ನು ತೋರಿಸಿದೆ. ಉದಾ. ಮಾಡು ಎಂಬ ಧಾತುವಿನಿಂದ ಮಾಡುವವನು, ಮಾಡಿದವನು, ಮಾಡದವನು ಎಂಬ ವ್ಯಕ್ತಿವಾಚಕಗಳು, ಮಾಡುವಿಕೆ ಎಂಬ ಭಾವನಾಮ ರೂಪ, ಇತ್ಯಾದಿಗಳನ್ನು ತೋರಿಸಿದ್ದಾನೆ.
(3) ಅ. ಏಳನೆಯ ಕೋಷ್ಟಕವು 119 ವಿಕಾರ ರೂಪ ಹೊಂದುವ ಕ್ರಿಯಾಪದಗಳ ವಿಕಾರ ರೂಪಗಳನ್ನು ಪಟ್ಟಿ ಮಾಡುತ್ತದೆ. ಇದು ಒಂದು ವಿಶೇಷ ರೀತಿಯಲ್ಲಿ ರಚಿತವಾಗಿದ್ದು ಸ್ಥೂಲವಾಗಿ ಎಡಭಾಗ ಮತ್ತು ಬಲಭಾಗ ಎಂಬ ಎರಡು ಭಾಗಗಳನ್ನು ಇದರಲ್ಲಿ ಗುರುತಿಸಬಹುದು. ಎಡಭಾಗದಲ್ಲಿ ಮೂವತ್ತೊಂಬತ್ತು ಧಾತುಗಳನ್ನು ಅವುಗಳ ವಿಕಾರರೂಪಗಳೊಂದಿಗೆ ಪಟ್ಟಿ ಮಾಡಿದ್ದು ಪ್ರತಿಯೊಂದಕ್ಕೂ 1 ರಿಂದ 39ರವರೆಗೆ ಅನುಕ್ರಮವಾಗಿ  ಸಂಖ್ಯೆಗಳನ್ನು ನೀಡಿದ್ದಾನೆ. ಬಲಭಾಗದಲ್ಲಿ 119 ವಿಕಾರೂಪ ಹೊಂದುವ ಕ್ರಿಯಾ ಪದಗಳನ್ನು ಅಕಾರಾದಿ ಕ್ರಮದಲ್ಲಿ ಪಟ್ಟಿ ಮಾಡಲಾಗಿದೆ. ಈ ಬಲಭಾಗದ ಪ್ರತಿಯೊಂದು ಪದದ ಮುಂದೆ ಒಂದು ಸಂಖ್ಯೆ ಇದೆ. ಬಲಭಾಗದಲ್ಲಿ ನಮಗೆ ಬೇಕಾದ ಪದದ ಮುಂದಿರುವ ಸಂಖ್ಯೆಯನ್ನು ಗುರುತಿಸಿಕೊಳ್ಳಬೇಕು.  ಇದರ ವಿಕಾರ ರೂಪಗಳನ್ನು ತಿಳಿಯಲು ಎಡಭಾಗದಲ್ಲಿ ಇದೇ ಸಂಖ್ಯೆ ಇರುವ ಸಾಲನ್ನು ಹುಡುಕಬೇಕು. ಅಲ್ಲಿ ಆ ಪದದ ವಿಕಾರ ರೂಪಗಳು ಹೇಗೆ ಇವೆಯೋ ಹಾಗೆಯೇ ಇರುತ್ತವೆ ನಾವು ಆಯ್ದುಕೊಂಡ ಪದದ ವಿಕಾರ ರೂಪಗಳು. (ಆ) ಎಂಟನೆಯ ಕೋಷ್ಟಕದಲ್ಲಿ ಮಾಡುತ್ತಾ ಇದ್ದೇನೆ, ಮಾಡುತ್ತಾ ಇದ್ದೆನು, ಮಾಡುತ್ತಾ ಇರುವೆನು, ಮಾಡಿ ಇದ್ದೇನೆ , ಮಾಡಿ ಇದ್ದೆನು, ಮಾಡಿ ಇರುವೆನು, ಮಾಡದಿದ್ದೆನು, ಮಾಡದಿರುತ್ತೇನೆ, ಮಾಡದಿರುವೆನು – ಈ ರೀತಿಯ ಕ್ರಿಯಾ ಪದಗಳನ್ನು ಅವುಗಳು ರೂಪುಗೊಳ್ಳುವ ವಿಧಾನದೊಂದಿಗೆ ದಾಖಲಿಸಿದ್ದಾನೆ. (ಇ) ಒಂಬತ್ತನೆಯ ಕೋಷ್ಡಕದಲ್ಲಿ ಆಪ, ಆರ, ಬಲ್ಲ ಇತ್ಯಾದಿ ಊನ ಕ್ರಿಯಾಪದಗಳನ್ನು ಪ್ರಯೋಗಿಸುವ ರೀತಿ ಇದೆ. ಅಲ್ಲದೆ ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳನ್ನು ಸೋದಾಹರಣವಾಗಿ ತಿಳಿಸಿದ್ದಾನೆ. ಹತ್ತು ಮತ್ತು ಹನ್ನೊಂದನೆಯ ಕೋಷ್ಟಕಗಳು ಪುನರಾವರ್ತನ ಕೋಷ್ಟಕಗಳು.
            ಒಟ್ಟಾರೆಯಾಗಿ ಈ ಕೋಷ್ಟಕಗಳಲ್ಲಿ ಅಕ್ಷರ ಮಾಲೆಯಿಂದ ಹಿಡಿದು ವಿಭಕ್ತಿ ಪ್ರತ್ಯಯಗಳು, ಆಖ್ಯಾತ ಪ್ರತ್ಯಯಗಳು, ಕ್ರಿಯಾಪದಗಳ ಭಾವನಾಮ ರೂಪಗಳು, ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು – ಹೀಗೆ ಸಮಗ್ರವಾಗುವಂತೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಬಹ್ವಂಶ ವಿಷಯಗಳನ್ನು ಗ್ರೇಟರ್ ಅಳವಡಿಸಿದ್ದಾನೆ. ಈ ವಿಷಯಗಳೆಲ್ಲ ಇವನು ಹಿಂದಿನ ವ್ಯಾಕರಣಗಳಿಂದ ಸಂಗ್ರಹಿಸಿದವು. ಇತರ ವ್ಯಾಕರಣಗಳಿಂದ ಸ್ವೀಕರಿಸಿದ ಉದಾಹರಣೆಗಳನ್ನು ಸಂಕ್ಷಿಪ್ತೀಕರಿಸಿ ಉಲ್ಲೇಖಿಸಿರುವುದು, ಕೋಷ್ಟಕಗಳ ಶೀರ್ಷಿಕೆಗಳನ್ನು ನೀಖರವಾಗಿ ನಿರೂಪಿಸಿರುವುದು, ಶೀರ್ಷಿಕೆ ಉಪಶೀರ್ಷಿಕೆಗಳನ್ನು ನಿಯಮಗಳ ನಿರೂಪಣೆಗೆ ಸೂಕ್ತವಾಗುವಂತೆ ವ್ಯವಸ್ಥೆಗೊಳಿಸಿರುವುದು – ಇವು ಸ್ಥೂಲವಾಗಿ ಇವನ ಸಾಧನೆಗಳು. ವಿಕಾರ ರೂಪ ಪಡೆಯುವ ಕ್ರಿಯಾಪದಗಳಿಗೆ ಮೀಸಲಾದ ಇವನ ಏಳನೆಯ ಕೋಷ್ಟಕ ತುಂಬ ಅನನ್ಯವಾ ಗಿದೆ. ಕನ್ನಡದಲ್ಲಿ ಇಂತಹ ಕ್ರಿಯಾ ಪದಗಳಿರುವುದು ಗೊತ್ತಿದ್ದಾಗ್ಯೂ ಅವುಗಳನ್ನು ಮೂವತ್ತೊಂಬತ್ತು ಗುಂಪುಗಳಲ್ಲಿ ವರ್ಗೀಕರಿಸಬಹುದೆಂಬುದನ್ನು ತೋರಿಕೊಟ್ಟು ಗ್ರೇಟರ್ ತನ್ನ ಸಂಶೋಧನಾ ಪ್ರವೃತ್ತಿಯನ್ನು ಮೆರೆದಿದ್ದಾನೆ.
            ಈ ಕಿರು ಹೊತ್ತಗೆಯ ಎಲ್ಲ ಕೋಷ್ಟಕಗಳನ್ನೂ ಓದಿದನಂತರ ಕನ್ನಡ ವ್ಯಾಕರಣವೊಂದರಲ್ಲಿ ಇದಕ್ಕಿಂತ ಹೆಚ್ಚು ಏನಿರಬೇಕೆಂಬ ಭಾವನೆ ಉಂಟಾಗದಿರದು.ಇಲ್ಲಿರುವ ವಿಷಯ ವ್ಯಾಪ್ತಿ ಅಷ್ಟಿದೆ.ಆದರೆ ಈ ರೀತಿಯ ಕೋಷ್ಟಕಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಪದೇ ಪದೇ ಗಮನಿಸಿ ಕೋಷ್ಟಕದ ಶಿಸ್ತಿಗೆ ಮನಸ್ಸನ್ನು ರೂಢಿಸಿಕೊಂಡು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕನ್ನಡ ವ್ಯಾಕರಣವನ್ನು ಪ್ರಾರಂಭದಿಂದ ಅಭ್ಯಾಸ ಮಾಡುವವರಿಗೆ ಇವು ಪ್ರಯಯೋಜನಕಾರಿಯಲ್ಲ. ವಿಷಯಗಳ ಆಳವಾದ ಮತ್ತು ಸಮಗ್ರವಾದ ಚರ್ಚೆ ಇಲ್ಲಿಲ್ಲ. ಇಲ್ಲಿರುವುದು ವ್ಯಾಕರಣ ನಿಯಮಗಳ ಒಂದು ಪಕ್ಷಿ ನೋಟ ಮಾತ್ರ. ಇವು ಈ ಕೃತಿಯ ಪರಿಮಿತಿಗಳು. ಈ ಕಾರಣಗಳಿಂದ ವ್ಯಾಕರಣ ಅಧ್ಯಯನಕಕ್ಕೆ ಇದನ್ನು ಉಪಯೋಗಿಸುವುದಕ್ಕಿಂತ, ವ್ಯಾಕರಣವನ್ನು ಅಧ್ಯಯನ ಮಾಡಿದ ಮೇಲೆ ಪುನರಾವರ್ತನೆಗೆ ಮತ್ತು ಯಾವುದೇ ನಿಯಮವನ್ನು ಬೇಕೆಂದಾಗ ನೋಡಿಕೊಳ್ಳಲು ಸಿದ್ಧಪರಾಮರ್ಶನ ಕೃತಿಯಾಗಿ ಬಳಸುವುದು ಉಚಿತ.
             ಕಿಟೆಲ್ ರಚಿಸಿದ  ವ್ಯಾಕರಣ ಕೃತಿಯ ಹೆಸರು ಎ ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ ಇನ್ ಇಂಗ್ಲಿಷ್ ಕಾಂಪ್ರೈಸಿಂಗ್ ದಿ ತ್ರೀ ಡಯಯಲಕ್ಟ್ಸ್. ಸಂಕ್ಷಿಪ್ತತೆಗಾಗಿ ಇದನ್ನು ಕಿಟೆಲನ ವ್ಯಾಕರಣ ಎಂದು ಕರೆಯಬಹುದು. ಇದು ಅನೇಕ ವರ್ಷಗಳ ಸಂಶೋಧನೆಯ ಫಲವಾಗಿ 1903ರಲ್ಲಿ ಪ್ರಕಟವಾಯಿತು. ಅದುವರೆಗಿನ ವ್ಯಾಕರಣ ಗ್ರಂಥಗಳಲ್ಲೆಲ್ಲ ಇದು ಬೃಹತ್ ಗಾತ್ರದ್ದಾಗಿದ್ದು ಇದರ 483 ಪುಟಗಳ ವಿಸ್ತಾರದಲ್ಲಿ 28 ಅಧ್ಯಾಯಗಳಿವೆ. ಇದುವರೆಗಿನ ವ್ಯಾಕರಣ ಕೃತಿಗಳಲ್ಲಿ ಒಂದು ಪ್ರತ್ಯೇಕ ಆಯಾಮವಾಗಿರುವ ಕೃತಿ ಇದು. ಹೆಸರಿನಲ್ಲಿಯೇ ಇದು ವ್ಯಕ್ತವಾಗುತ್ತಿದೆ. ಇಂದಿಗೂ ಆ ಸ್ಥಾನವನ್ನು ಉಳಿಸಿಕೊಂಡಿದೆ ಎಂದೇ ಹೇಳಬೇಕು. ಕೃಷ್ಣಮಾಚಾರಿ ಮತ್ತು ಮೆಕೆರೆಲ್ ಇವರುಗಳು ಹಳಗನ್ನಡವನ್ನು ಬಿಟ್ಟರೆ ತಮ್ಮ ಕಾಲದ ಹೊಸಗನ್ನಡವನ್ನು ಮಾತ್ರ ಗುರುತಿಸಿದ್ದರು. ಆದರೆ ಕಿಟೆಲ್ ಹತ್ತರಿಂದ ಹದಿಮೂರನೆಯ ಶತಮಾನದ ಮಧ್ಯದವರೆಗಿನ ಭಾಷೆಯನ್ನು ಹಳಗನ್ನಡವೆಂದೂ, ಅಲ್ಲಿಂದ ಹದಿನೈದನೆಯ ಶತಮಾನದ ಅಂತ್ಯದವರೆಗಿನದನ್ನು ನಡುಗನ್ನಡವೆಂದೂ, ಈಚಿನದನ್ನು ಹೊಸಗನ್ನಡವೆಂದೂ ಮೂರು ಅವಸ್ಥಾ ಭೇದಗಳನ್ನು ಗುರುತಿಸಿದ್ದಾನೆ. ಮೂರೂ ಅವಸ್ಥೆಗಳಿಗೆ ಸಂಬಂಧಿಸಿದಂತೆ ವ್ಯಾಕರಣನಿಯಮಗಳನ್ನು ನಿರೂಪಿಸಿದ್ದಾನೆ. ಭಾಷೆಯು ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಬದಲಾಗುವಾಗ  ಆಗಿರುವ ಭಾಷಾವ್ಯತ್ಯಾಸಗಳನ್ನೂ, ಅಂತಹವಕ್ಕೆ ಕಾರಣಗಳನ್ನೂ ಚರ್ಚಿಸಿದ್ದಾನೆ. ಹೀಗೆ ಇದು ಕನ್ನಡ ವ್ಯಾಕರಣಕ್ಕೆ ಹೊಸ ವ್ಯಾಪ್ತಿ, ನೂತನ ಸಮಗ್ರತೆ ಮತ್ತು ವಿಶಿಷ್ಟವಾದ ಆಳವನ್ನು ತಂದುಕೊಟ್ಟಿದೆ. ಇಂದಿಗೂ ಕನ್ನಡ ವ್ಯಾಕರಣದ ಅಧ್ಯಯನಕ್ಕೆ ಇದೊಂದು ಪ್ರಮುಖ ಆಧಾರಗ್ರಂಥ.
ವ್ಯಾಕರಣ ನಿಯುಮಗಳನ್ನು ನಿಖರವಾಗಿ ಮತ್ತು ಆಧಾರಭೂತವಾಗಿ ನಿರೂಪಿಸಿರುವುದು ಇದರ ವೈಶಿಷ್ಟ್ಯ. ಹಿಂದಿನ ಎಲ್ಲ ವ್ಯಾಕರಣಗಳ ಸಾರ ಇಲ್ಲಿದೆ; ಅನೇಕ ಹೊಸ ವಿಚಾರಗಳನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಉದಾಹರಣೆಗೆ – “ಅಮರಯಿರೆನೆವು” ಎಂದು ವ್ಯಂಜನಾಂತವಾಗಿದ್ದ ವಿಭಕ್ತಿ ಪ್ರತ್ಯಯಳು ಹೊಸಗನ್ನಡದಲ್ಲಿ ಉಕಾರಾಂತಗಳೇ ಆಗಬೇಕಾಗಿತ್ತು.  ಆದರೆ ಕೆಲವು ಎಕಾರಾಂತವಾಗಿವೆ. ಮಾಡುತ್ತಾನೆ, ಕೊಡುತ್ತಾನೆ ಇತ್ಯಾದಿಗಳಲ್ಲಿರುವಂತೆ. ಈ ಆಖ್ಯಾತ ಪ್ರತ್ಯಯಗಳು ಉಕಾರಾಂತವಾಗದೆ ಎಕಾರಾಂತವಾಗಲು ಕಾರಣವೇನು?  ಕನ್ನಡದ ನಿಷೇಧ ಕ್ರಿಯಾ ಪದಕ್ಕೆ ಅದರ ಅರ್ಥ ಬಂದುದು ಹೇಗೆ? ಕನ್ನಡ ಸರ್ವನಾಮಗಳ ಮೂಲಸ್ವರೂಪವೇನು? ಮುಂತಾದುವುಗಳಿಗೆ ಸಂಬಂಧಿಸಿದಂತೆ ತನ್ನ ವಿಚಾರಗಳನ್ನು ಇಲ್ಲಿ ಮಂಡಿಸಿದ್ದಾನೆ. ಇಲ್ಲಿ ವಸ್ತು, ನಿರೂಪಣೆ. ಮತ್ತು ವಿಚಾರಧಾರೆಗಳಲ್ಲಿರುವ ಹೊಸತನವನ್ನು ನೋಡಿದರೆ ತನ್ನ ವ್ಯಾಕರಣವು ಮುಖ್ಯವಾಗಿ ಕೇಶವನ ಶಬ್ದಮಣಿದರ್ಪಣವನ್ನು ಆಧರಿಸಿದೆ (ಕಿಟೆಲ್, ಪು iii) ಎಂಬ ಇವನ ಹೇಳಿಕೆಯಲ್ಲಿ ಸೌಜನ್ಯವೂ, ಅವನ ಕೃತಿಯ ಬಗ್ಗೆ ಮೆಚ್ಚುಕೆಯೂ ಕಾಣಿಸುತ್ತದೆ.
ಗ್ರಂಥದ ಪೀಠಿಕೆಯಲ್ಲಿಯೂ ಕಿಟೆಲ್ ಹಲವು ಮುಖ್ಯ ವಿಷಯಗಳನ್ನು ತಿಳಿಸಿದ್ದಾನೆ. ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ಕನ್ನಡವು ಸಂಸ್ಕತಜನ್ಯವೆಂಬ ನಂಬಿಕೆಯನ್ನು ಕಿಟೆಲ್ ಇಲ್ಲಿ ತೊಡೆದು ಹಾಕಿದ್ದಾನೆ. ಅದೊಂದು ದ್ರಾವಿಡ ಭಾಷೆ ಎಂದು ಪ್ರತಿಪಾದಿಸಿದ್ದಾನೆ.  ಕೃಷ್ಣಮಾಚಾರ್ಯನು ಈ ಮೊದಲೇ ಕನ್ನಡವು ದ್ರಮಿಡಜನ್ಯವೆಂದು ಹೇಳಿದ್ದಾನಾದರೂ(ಕೃಷ್ಣಮಾಚಾರಿ, ಪು iii)  ಕಿಟೆಲನು ಈ ವಿಷಯವನ್ನು ಶಾಸ್ತ್ರೀಯವಾಗಿ ನಿರೂಪಿಸಿದ್ದಾನೆ. ಕನ್ನಡ ಎಂಬ ಪದದ ನಿಷ್ಪತ್ತಿಯನ್ನು ಸಂಸ್ಕೃತದ ಕರ್ಣಾಟ (ಉದಾ. ಕೇಶಿರಾಜ, 1968 : 316) ಎಂಬ ಪದದಿಂದ ಹೇಳುವ ರೀತಿಯನ್ನು ಬಿಟ್ಟು ಕರ್ ನಾಡು ಎಂಬ ಕನ್ನಡ ಪದಗಳಿಂದಲೇ ಹೇಳಿದ್ದಾನೆ(ಕಿಟಲ್, ಪು 1).
ಅಕ್ಷರಗಳ ಬಗ್ಗೆ ವಿವರಿಸುವಾಗ ಕೇಶಿರಾಜನ ನಲವತ್ತೇಳು ಅಕ್ಷರಗಳಿಂದ ಹಿಡಿದು ಇತರ ಪಾಶ್ಚಾತ್ಯ ವ್ಯಾಕರಣಕಾರರು ಈ ಸಂಖ್ಯೆಯನ್ನು ಐವತ್ತು ಎಂದು ಹೇಳಿರುವುದನ್ನು ಉಲ್ಲೇಖಿಸಿ ರಳ ಮತ್ತು ಶಕಟರೇಫೆಗಳನ್ನೂ ಸೇರಿಸಿ ಚರ್ಚಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಹೊಸ ಉದಾಹರಣೆಗಳನ್ನು ಶಾಸನಗಳಿಂದ ನೀಡಿದ್ದಾನೆ. ಕ್ರಿ. ಶ. 600ರಿಂದ 990ರವರೆಗೆ ರಳ ಬಳಕೆಯಲ್ಲಿತ್ತು – ಕ್ರಿ.ಶ.990ರಿಂದ1200ರವರೆಗಿನ ಶಾಸನಗಳಲ್ಲಿ ಅದು ರೇಫೆಯಾಗಿ ಬದಲಾಯಿತು – ಅನಂತರದ ಭಾಷೆಯಲ್ಲಿ ರೇಫೆ ಕಳಚಿ ದ್ವಿತ್ತ್ವಗಳು ಬಳಕೆಗೆ ಬಂದುವು(ಕಿಟೆಲ್, ಪು 15) ಎಂಬ ವಿಷಯಗಳನ್ನು ತಾನು ಸಂಶೋಧಿಸಿ ಸೇರಿಸಿದ್ದಾನೆ. ಕೇಶಿರಾಜ ಹಲವು ಸೂತ್ರಗಳಲ್ಲಿ ನಿರೂಪಿಸಿದ ಸಂಧಿಗಳ ವಿಷಯವನ್ನು ಕಿಟೆಲ್ ಸಂಗ್ರಹಿಸಿ ಹೀಗೆ ಹೇಳಿದ್ದಾನೆ: “Sandhi includes elision, insertion of ಯ್ or ವ್, the permutation of consonants and the doubling of consonants. Sometimes it is optional whether elision happens or ಯ್ or ವ್ are inserted” “Sometimes euphonic junction itellf is optional.Sometimes it is forbidden”  (ಕಿಟೆಲ್, ಪು 170-171). ಸಂಸ್ಕೃತದ ಸಂಧಿಗಳನ್ನು ನಿರೂಪಿಸುವಾಗ ಅಕಾರಕ್ಕೆ ಅ ದಿಂದ ಔದವರೆಗಿನ ಸ್ವರಗಳು ಸೇರಿದಾಗ ಆಗುವ ಬದಲಾವಣೆಗಳನ್ನು ತಿಳಿಸಿ ಉದಾಹರಿಸಿದ್ದಾನೆ. ಭಾಷೆಯ ಮೂರು ಅವಸ್ಥೆಗಳಲ್ಲಿಯೂ ಸಂಧಿ ಇದೆ ಎಂದು ಸ್ಪಷ್ಟಪಡಿಸಿದ್ದಾನೆ.
ಪ್ರತಿಯೊಂದು ವಿಭಾಗದಲ್ಲಿ ಕಿಟೆಲ್ ವಸ್ತುವಿಷಯವನ್ನು ಸಮಗ್ರವಾಗಿಸುತ್ತಾನೆ. ಸರಳವಾಗಿ ನಿರೂಪಿಸುತ್ತಾನೆ. ಇತರ ವ್ಯಾಕರಣಕಾರರನ್ನು ಉಲ್ಲೇಖಿಸುವ ಸೌಜನ್ಯ ಮತ್ತು ಪ್ರಾಮಾಣಿಕತೆ ತೋರಿಸುತ್ತಾನೆ. ಇವು ಇವನ ಕೃತಿಯ ಪ್ರಶಂಸಾರ್ಹ ಗುಣಗಳು. ನಾಮಪದಗಳಿಗೆ ವಿಭಕ್ತಿ  ಹತ್ತುವುದನ್ನು ವಿವರಿಸುವಾಗ ಕೇಶಿರಾಜನ ಶಬ್ದಮಣಿದರ್ಪಣದಲ್ಲಿರುವ ವಿವರಗಳಿಗೆ ಹಾಡ್ಸನ್ ವ್ಯಾಕರಣದ ವಿವರಗಳನ್ನು ಸರಿಪಡಿಸಿ ಸೇರಿಸಿದ್ದಾನೆ. ಈ ವಿಷಯವನ್ನು ಹಿಂದಿನ ವ್ಯಾಕರಣಕಾರರು ಹೇಳಿದ ರೀತಿಯೂ ಉಪಯುಕ್ತವಾಗಿಯೇ ಇತ್ತು. ವಿಭಕ್ತಿಪ್ರತ್ಯಯಯಗಳು ಸೇರಿದಾಗ ಅಕಾರಾಂತಪದಗಳಿಗೆ ನ್/ಳ್/ದ್ (ಪುಲ್ಲಿಂಗದಲ್ಲಿ ನಕಾರ, ಸ್ತ್ರೀಲಿಂಗದಲ್ಲಿ ಳಕಾರ ಮತ್ತು ನಪುಂಸಕ ಲಿಂಗದಲ್ಲಿ ದಕಾರ ಹೀಗೆ)ಗಳು ಆಗಮವಾಗುತ್ತವೆ – ಇ ಎ ಐಕಾರಾಂತಪದಗಳಿಗೆ ಯ್ ಆಗಮವಾಗುತ್ತದೆ ಮತ್ತು  ಉಕಾರಾಂತ ಪದಗಳಿಗೆ ಇನ್  ಆಗಮವಾಗುತ್ತದೆ ಎಂದು ಸ್ಥೂಲವಾಗಿ ವಿವರಿಸಿದ್ದರು. ಈ ಆಧಾರದಲ್ಲಿ ಮೂರು “ಮಾಲೆ”(declensions)ಗಳನ್ನು ರೂಪಿಸಿದ್ದರು. ಕೆಲವರು  ಉಕಾರಾಂತ ನಾಮಪದಗಳನ್ನು, ವಿಭಕ್ತಿ ಸೇರುವಾಗ ಉಕಾರ ಲೋಪವಾಗುವಂತಹ (ಉದಾ.ಊರು – ಊರಿಂದ) ಮತ್ತು ಲೋಪವಾಗದಂತಹ (ಉದಾ. ಗುರು – ಗುರುವಿನಿಂದ) ಎರಡು ಉಪಗುಂಪುಗಳನ್ನಾಗಿ ಮಾಡಿ ಒಟ್ಟು ನಾಲ್ಕು “ಮಾಲೆ”ಗಳನ್ನಾಗಿ ವರ್ಗೀಕರಿಸುತ್ತಿದ್ದರು. ಇವು ಖಚಿತತೆ ಮತ್ತು ಸ್ಪಷ್ಟತೆಯ ದೃಷ್ಟಿಯಿಂದ ಪೂರ್ಣವಾಗಿರಲಿಲ್ಲ. ಕಿಟೆಲ್ ಅದುವರೆಗಿನ ಎಲ್ಲ ವ್ಯಾಕರಣಗಳನ್ನು ಅಧ್ಯಯನ ಮಾಡಿ ನಾಮಪದಗಳು ವಿಭಕ್ತಿಗಳನ್ನು ಪಡೆಯುವ ಹನ್ನೆರಡು ರೀತಿಗಳಿವೆ ಎಂದು ವಿವರಿಸಿದ್ದಾನೆ(ಕಿಟೆಲ್,ಪು 86-87). ಲಿಂಗಗಳ ವಿಷಯ ಬಂದಾಗ ಕನ್ನಡದಲ್ಲಿ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗಗಳೆಂಬ ಮೂರು ಲಿಂಗಗಳಿರುವುದಾಗಿ  ಹೇಳಿರುವುರುವುದಲ್ಲದೆ ಹಾಡ್ಸನ್ ಹೇಳಿರುವ ಪ್ರಾಣಿಗಳಲ್ಲಿ ಗಂಡು ಹೆಣ್ಣುಗಳಿಗೆ ಬೇರೆ ಬೇರೆ ಪದಗಳಿರುವದನ್ನು (ಎಮ್ಮೆ – ಕೋಣ ಇದ್ದಂತೆ) ಉಲ್ಲೇಖಿಸಿ ಹಾಗಿಲ್ಲದಲ್ಲಿ ಗಂಡು ಮತ್ತು ಹೆಣ್ಣು ಪದಗಳನ್ನು ಸೇರಿಸಿ ಲಿಂಗವನ್ನು ಸೂಚಿಸಬೇಕೆಂಬುದನ್ನು ತಿಳಿಸಿದ್ದಾನೆ - ಗಂಡುಕುದುರೆ  ಹೆಣ್ಣುಕುದುರೆ ಎಂಬಂತೆ. ಸಂಸ್ಕೃತ ಪದಗಳನ್ನು ಕನ್ನಡಕ್ಕೆ ಸ್ವೀಕರಿಸುವ ವಿಧಾನಗಳನ್ನು ವಿವರಿಸಿದ್ದಾನೆ. ಪದಗಳು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಆಗುವ ಬದಲಾವಣೆಗಳು, ನಾಮಪದಗಳು ಬೇರೆ ಬೇರೆ ವಚನ ವಿಭಕ್ತಿಗಳಲ್ಲಿ ಪಡೆಯುವ ರೂಪಗಳು, ಅವುಗಳ ಲಿಂಗ ಭೇದಗಳು – ಇವುಗಳೆಲ್ಲ ಹೊಸ ಸಮಗ್ರತೆಯೊಂದಿಗೆ ಇಲ್ಲಿ ನಿರೂಪಿತವಾಗಿವೆ.
ಶಬ್ದಮಣಿದರ್ಪಣದಲ್ಲಿರುವ “ಸಹಜಧಾತುವುಂ ಭಾವಮಕ್ಕುಂ” (ಕೇಶಿರಾಜ,1899: 250) ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ನಾಮಪ್ರಕೃತಿಗಳ ಮೂಲ ಸ್ವರೂಪದ ಬಗ್ಗೆ ಇವನು ಮಂಡಿಸಿರುವ ವಿಚಾರ ತುಂಬ ಮಹತ್ವದ್ದಾಗಿದೆ. ಅನೇಕ ನಾಮ ಪ್ರಕೃತಿಗಳು ಕೃದಂತನಾಮಗಳೇ ಆಗಿದ್ದು ಇವು ಕ್ರಿಯೆಯ “ಸ್ಥಿತಿ ಅಥವ ಕಾರ್ಯ” (“state or action”)ವನ್ನು ಸೂಚಿಸುವ ಭಾವನಾಮಗಳೇ ಆಗಿವೆ – ಎಂಬುದು ನಾಮಪದಗಳ ಬಗ್ಗೆ ಇವನ ಬಹುಮುಖ್ಯ ಸಿದ್ಧಾಂತ. ಇಂತಹ ಭಾವನಾಮಗಳನ್ನು ಕನ್ನಡದ ಮೂಲ ಧಾತುಗಳೆಂದು ಪರಿಗಣಿಸಿ ಬೇರೆ ಬೇರೆ ಕಾಲದ(tense) ಕ್ರಿಯಾಪದಗಳು ಹುಟ್ಟಿಕೊಂಡಿದ್ದನ್ನೂ ಕ್ರಿಯಾಪದಗಳ ಅಧ್ಯಾಯದಲ್ಲಿ ಇವನು ವಿವರಿಸಿದ್ದಾನೆ. ಹೀಗೆ ನಾಮಪ್ರಕೃತಿಗಳೇ ಕನ್ನಡದ ಮೂಲದ್ರವ್ಯ; ಇವು ಕ್ರಿಯಾಪದಗಳಾಗಿಯೂ ವರ್ತಿಸುತ್ತಿದ್ದುದೇ ಕನ್ನಡ ಕ್ರಿಯಾಪದಗಳ ಇಂದಿನ ರೂಪಕ್ಕೆ ಕಾರಣ ಎಂಬುದು ಇವನ ಪ್ರತಿಪಾದನೆ. ಸಂಸ್ಕೃತದಲ್ಲಿ ಎಲ್ಲ ನಾಮಪದಗಳ ನಿಷ್ಪತ್ತಿಯನ್ನು ಧಾತುಗಳಿಂದ ಹೇಳುವ ಸಂಪ್ರದಾಯವಿದ್ದು ಇದಕ್ಕೆ ಸಂಫೂರ್ಣ ವಿರುದ್ಧವಾದ ಪ್ರಕ್ರಿಯೆ ಕನ್ನಡದ್ದು ಎಂದು ಇವನು ಹೇಳಿರುವುದು ಇಲ್ಲಿ ಮೂಡಿಸಿರುವ ಕ್ರಾಂತಿಕಾರೀ ಪರಿಕಲ್ಪನೆಯಾಗಿದೆ. ಇದಕ್ಕೆ ಇವನು ಹಲವು ಉದಾಹರನೆಗಳನ್ನು ನೀಡಿ ವಿರಿಸಿದ್ದಾನೆ. ಅಲೆ, ಕಟ್ಟು, ಓದು – ಇಂತಹ ಹಲವು ಪದಗಳು ಇಂದಿಗೂ ನಾಮಪದಗಳಾಗಿಯೂ ಕ್ರಿಯಾಪದಗಳಾಗಿಯೂ ಬಳಕೆಯಲ್ಲಿವೆ. ಭಾಷೆಯ ಮೂಲ ಪದ ಭಂಡಾರದಲ್ಲಿ ಪರಿಮಿತ ಸಂಖ್ಯೆಯ ಇಂತಹ ಪದಗಳು ಮಾತ್ರವಿದ್ದು ಈಗ ವೈವಿಧ್ಯಮಯವಾಗಿ ಬೆಳೆದಿದೆ.
ಕೃದಂತ ನಾಮ, ತದ್ಧಿತ ನಾಮ, ಸಮಾಸ ನಾಮ, ಗುಣವಚನ – ಇವುಗಳಿಗೆ ಸಂಬಂಧಿಸಿ ವಿವರವಾದ ಚರ್ಚೆ ಇದೆ. ಪ್ರತಿಯೊಂದರಲ್ಲೂ ಕಿಟೆಲನ ಕೊಡುಗೆಗಳಿವೆ.  ಹೊಸಗನ್ನಡದಲ್ಲಿ “ಅದು”ವನ್ನು ಭಾವ ವಚನ ಪ್ರತ್ಯಯವನ್ನಾಗಿ ಬಳಸುವುದುಂಟು ಮತ್ತು ಹಾಗೆ ಬಳಸಿದಾಗ  ಅಂತ್ಯ “ದು” ದ್ವಿತ್ವವಾಗುತ್ತದೆ ಎಂಬ ಹೊಸ ವಿಷಯವನ್ನು ಸೇರಿಸಿದ್ದಾನೆ. ಉದಾ. “ಬನ್ದದ್ದು”, “ಹೋದದ್ದು” (ಕಿಟೆಲ್, ಪು222). ತದ್ಧಿತ ನಾಮಗಳಿಗೆ ಸಂಬಂಧಿಸಿದಂತೆ ಕೇಶಿರಾಜ ಹೇಳಿರದ, (ಮುನಿಸು, ಕನಿಸು, ಮುಳಿಸು ಇವುಗಳಲ್ಲಿದ್ದಂತೆ) “ಸು” ಪ್ರತ್ಯಯವನ್ನು ಭಟ್ಟಾಕಳಂಕನು ಉಲ್ಲೇಖಿಸಿದ್ದ. ಕಿಟೆಲ್ ಈ ಪ್ರತ್ಯಯಕ್ಕೆ ಹೆಚ್ಚುವರಿ ಉದಾಹರ
ಣೆಗಳನ್ನಾಗಿ ಬೆಳಸು, ಪೊಲಸುಗಳನ್ನು ಕೊಟ್ಟಿದ್ದಾನೆ. ಭಟ್ಟಾಕಳಂಕ ಹೇಳಿರುವ “ಹು” ಎಂಬ ಪ್ರತ್ಯಯವು “ಪು” ಎಂಬ ಪ್ರತ್ಯಯದಿಂದ ಬಂತು ಎಂದು ವಿವರಿಸಿದ್ದಾನೆ. ಸಮಾಸ ನಾಮಗಳ ಅಧ್ಯಾಯದಲ್ಲಿ ಸಾಂಪ್ರದಾಯಿಕವಾದ ಬಹುವ್ರೀಹಿ, ತತ್ಪುರುಷ ಮುಂತಾದ ಎಲ್ಲ ಸಮಾಸಗಳನ್ನು ಚರ್ಚಿಸಿರುವನಲ್ಲದೆ ಅರಿಸಮಾಸ ನಿಷೇಧವನ್ನೂ ತಿಳಿಸಿದ್ದಾನೆ. ಜೊತೆಗೆ “ಪಾದರಕ್ಕೆ”, ‘ಪಾದಸಂಕಲೆ” ಎಂಬ ಪ್ರಯೋಗಗಳನ್ನು ಕೇಶಿರಾಜನೇ ಮಾಡಿರುವುದನ್ನು ಎತ್ತಿ ತೋರಿಸಿ ತದ್ಭವಕ್ಕಿಂತ ಸಂಸ್ಕೃತವೇ ಹೆಚ್ಚು ಬಳಕೆಯ ಪದವಾಗಿದ್ದರೆ (ತದ್ಭವವಾದ ಪಾಯ ಎಂಬುದಕ್ಕಿಂತ ಸಂಸ್ಕೃತದ ಪಾದ ಎಂಬುದೇ ಹೆಚ್ಚು ಬಳಕೆಯಲ್ಲಿರುವುದು) ದೋಷವಿಲ್ಲವೆಂಬುದು ಕೇಶವನ ಅಭಿಪ್ರಾಯ  ಎಂದು ವಿವರಿಸಿದ್ದಾನೆ. ಹೀಗೆ ಕಿಟೆಲನ ದೃಷ್ಟಿಯು ಸೂಕ್ಷ್ಮವೂ, ಚಾರಿತ್ರಿಕವೂ, ತರ್ಕಬದ್ಧವೂ ಆಗಿರುವುದನ್ನು ನೋಡಬಹುದು.
ಗುಣವಚನಗಳ ಬಗ್ಗೆಯೂ ಕಿಟೆಲನ ವಿವರಣೆಗಳು ಸ್ವೋಪಜ್ಞವಾಗಿವೆ. ಇವನು ಗುಣವಚನಗಳನ್ನು ಮೂರು ಗುಂಪುಗಳಲ್ಲಿ ವರ್ಗೀಕರಿಸಿದ್ದಾನೆ. (1) ಮೊದಲನೆಯದು ಸ್ವತಂತ್ರ ಅಸ್ತಿತ್ವವುಳ್ಳ 20 ಗುಣವಚನಗಳ ಗುಂಪು.ಅಗಲ, ಉದ್ದ, ಒಳ, ಕಮ್ಮ, ಕೂರ್, ಗುಣ್ಪು, ತೆಳ್, ತೋರ, ದಟ್ಟ, ದೊಡ್ಡ, ನುಣ್, ನೇಲ್, ಬಟ್ಟ, ಬಲ್, ಬಿಣ್, ಬೆರು(ಶಕಟರೇಫೆ), ಮೆಲ್, ಸಣ್ಣ, ಚಿಕ್ಕ (ಕಿಟೆಲ್, ಪು 243). (2) ಎರಡನೆಯದು ಯಾವಾಗಲೂ ಕರ್ಮಧಾರಯ ಸಮಾಸಪದಗಳಲ್ಲಿ ಕಂಡುಬರುವಂತಹದು: ಅಸಿ, ಇನಿ, ಇನ್, ಇಮ್, ಎಳ್, ಎಳ, ಕಟ್ಟು, ಕಡು, ಕರ್, ಕಿರಿ(ಶಕಟರೇಫೆ), ಕಿತ್, ಕುತ್(for ಕಿರಿದು), ನಿಟ್ಟು, ನಿಡಿ, ನಿಡು, ಪ (ರಳ), ಪೆರ್, ಪೇರ್(for ಪಿರಿದು), ಪೊಸ, ಬರಿ(for ಬರಿದು), ಬಸಿ(for ಬಸಿರು), ಬಿಳೆ(for ಬಿಳಿದು) (ಕಿಟೆಲ್ ಪು 245). ಈ ಎರಡನೆಯ ಗುಂಪಿನವಕ್ಕೆ ಸರ್ವನಾಮ ಪ್ರತ್ಯಯಗಳನ್ನು ಹಚ್ಚಿ ಸ್ವತಂತ್ರ ಗುಣವಚನಗಳಂತೆ ಹೇಳಲಾಗುತ್ತದೆ. (3) ಅಪ್ಪ, ಅಹ, ಆಡ, ಆದ, ಉಳ್ಳ ಇವುಗಳನ್ನು ಸೇರಿಸಿ ರೂಪಿಸಲಾದ ಅನೇಕ ಗುಣವಚನಗಳು ಮೂರನೆಯ ಗುಂಪಿನವು(ಕಿಟೆಲ್, ಪು 243-44). ಇವೆಲ್ಲವೂ ಸಾಮಾನ್ಯ ನಾಮಪದಗಳೇ ಆಗಿವೆ ಎಂಬುದು ಕಿಟೆಲನ ಅಭಿಪ್ರಾಯ.” ಹಿರಿದುಚಿಂತಿಸು” – ಇಂತಹ ಕಡೆ ಗುಣ ವಿಶೇಷಣವು ಕ್ರಿಯಾವಿಶೇಷಣದ ಕಾರ್ಯವನ್ನು ಮಾಡುತ್ತಿದೆ ಎಂಬುದನ್ನು ಕಿಟೆಲ್ ತಿಳಿಸಿದ್ದು ಇದೊಂದು ಹೊಸ ಅಂಶವಾಗಿದೆ. ಸಂಖ್ಯೆಗಳು ಕನ್ನಡದ ಇನ್ನೊಂದು ಮುಖ್ಯ ಪದವರ್ಗವಾಗಿದ್ದು ಈ ಸಂಬಂಧ ನಾಡಿನ ಬೇರೆಬೇರೆ ಪ್ರದೇಶಗಳಲ್ಲಿ ಮಗ್ಗಿ ಹೇಳುವ ರೀತಿಯನ್ನು ವಿವರಿಸಿದ್ದಾನೆ. ಸಂಖ್ಯಾಪೂರಣಗಳನ್ನು ರೂಪಿಸಲು ಸೂಳ್, ಸರತಿ, ಬಾರಿ, ಸರ್ತಿ, ಸಲ, ಸಾರಿ, ಸಾಲಿ ಇತ್ಯಾದಿ ಪದಗಳನ್ನು ಬಳಸುವುದನ್ನು ದಾಖಲಿಸಿದ್ದಾನೆ. ಸರ್ವನಾಮಗಳ ವಿಭಾಗದಲ್ಲಿ, ಬೇರೆ ಬೇರೆ ಸರ್ವನಾಮಗಳು ಬೇರೆಬೇರೆ ವಿಭಕ್ತಿಗಳು ಮತ್ತು ವಚನಗಳಲ್ಲಿ ಅವು ಪಡೆಯುವ ರೂಪಗಳು ಇತ್ಯಾದಿಗಳನ್ನು ಹಿಂದಿನ ವ್ಯಾಕರಣಕಾರರಂತೆ ಕಿಟೆಲನೂ ನಿರೂಪಿಸಿದ್ದಾನೆ. ಇಲ್ಲಿಯ ವಿಶೇಷವೆಂದರೆ ಇತರ ದ್ರಾವಿಡ ಭಾಷೆಗಳೊಂದಿಗೆ ತುಲನಾತ್ಮಕವಾಗಿ ನೋಡಿ ಕನ್ನಡ ಸರ್ವನಾಮಗಳ ಮೂಲರೂಪದ ವಿಶ್ಲೇಷಣೆ ಮಾಡಿರುವುದು. ವಿವರವಾದ ವಿವೇಚನೆಯನಂತರ ಏ ಮತ್ತು ಆ ಎಂಬಿವು ದೂರದ ವ್ಯಕ್ತಿಯನ್ನು ತನ್ನೆಡೆಗೆ ಆಕರ್ಷಿಸಲು (the “o” here) ಉಪಯೋಗಿಸುವ ಸ್ವರಗಾಳಾಗಿದ್ದು ಇವೇ ಪ್ರಥಮಪುರುಷ ಸರ್ವನಾಮ ರೂಪಕಗಳೆಂದೂ ಆದಿಯಲ್ಲಿ ಕಾಣುವ “ಯ್”(ತುಳುವಿನ ಯಾನು ಎಂಬಂತೆ), “ಞ್”( ಮಲಯಾಳಂ ಞಾನ್), “ನ್”(ನಾನು ಎಂಬಂತೆ ಅಥವ ತೆಲುಗು ನೇನು ಎಂಬಂತೆ) ಈ ವ್ಯಂಜನಗಳು ಭಾಷಾಮಧುರೀಕರಣಕ್ಕಾಗಿ ಬಂದವು ಎಂದೂ ಇವನು ಪ್ರತಿಪಾದಿಸಿದ್ದಾನೆ(ಕಿಟೆಲ್, ಪು 77). ಇದೇ ರೀತಿ ಮಧ್ಯಮ ಪುರುಷ ಸರ್ವನಾಮದ ಮುಖ್ಯ ಸ್ವರವು “ಈ” ಎಂಬುದು ಇವನ ಪ್ರತಿಪಾದನೆ.  “ The leading vowel is ಈ this, the proximate demonstrative particle, expressing that a person(or any object) is situated in front of another, the original meaning of the pronoun is “next (to me) one”. This appears also as short”(ಕಿಟೆಲ್, ಪು 78). ಇದರಿಂದಲೇ ನೀ, ಈ, ನೀವು, ಈರು, ಮೀರು – ಎಲ್ಲ ಮಧ್ಯಮ ಪುರುಷ ಸರ್ವನಾಮಗಳೂ ಹುಟ್ಟಿಕೊಳ್ಳುತ್ತವೆ. ಪ್ರಥಮ ವಿಭಕ್ತಿಯನ್ನುಳಿದ ವಿಭಕ್ತಿಗಳಲ್ಲಿ ಈ ಸ್ವರಗಳು ಹ್ರಸ್ವವಾವಗುತ್ತವೆ. ಪ್ರಥಮ ಪುರುಷ ಮೂಲಸ್ವರಗಳು ಆ ಮತ್ತು ಅ ಆಗಿವೆ. ಇವೇ ಸ್ವರಗಳೇ(ಅಂದರೆ, ಎ/ಏ, ಇ/ಈ, ಅ/ಆ)  ಉತ್ತಮ, ಮಧ್ಯಮ ಮತ್ತು ಪ್ರಥಮ ಪುರುಷಗಳ ಆಖ್ಯಾತ ಪ್ರತ್ಯಯಗಳಾಗಿ ಕಾಣಿಸಿಕೊಳ್ಳವುದನ್ನು ಇವನು ತಿಳಿಸಿದ್ದಾನೆ(ಕಿಟೆಲ್, ಪು 79).  ಈ ಸ್ವರಗಳ ಈ ರೀತಿಯ ಉಪಯೋಗ,  “ಏ”, “ಈ” ಮತ್ತು “ಅ” ಗಳು ಪುರುಷವಾಚಕ ಸರ್ವನಾಮಗಳ ಮುಖ್ಯ ಸ್ವರಗಳು ಎಂಬುದಕ್ಕೆ ಹೆಚ್ಚುವರಿ ಸಮರ್ಥನೆಯಾಗಿದೆ.
ಇವಿಷ್ಟು ವಿಭಕ್ತಿಗಳನ್ನು ಪಡೆಯುವ ಪದಗಳ ವಿಚಾರ. ಆಖ್ಯಾತ ಪ್ರತ್ಯಯಗಳನ್ನು ಪಡೆದು ಧಾತುಗಳು ಹೇಗೆ ಕ್ರಿಯಾಪದಗಳಾಗುತ್ತವೆ ಎಂಬುದರ ವಿವರಗಳೂ ಇಲ್ಲಿ ಹೊಸ ಸಂಶೋಧನೆಗಳೊಂದಿಗೆ ಸಮಗ್ರವಾಗಿ ಮೂಡಿ ಬಂದಿವೆ. ಧಾತುವಿನಿಂದ ಕೃದಂತ, ಅದರಿಂದ ಕೃದಂತ ವಿಶೇಷಣ ಅದರಿಂದ ಕ್ರಿಯಾಪದ ಎಂಬ ಹಾಡ್ಸನ್ನನ ವಿವರಣೆಯನ್ನು ಕಿಟೆಲ್ ಒಪ್ಪಿ ಉಲ್ಲೇಖಿಸಿದ್ದಾನೆ. ಕೃದಂತಗಳು ರೂಪುಗೊಳ್ಳುವ ವಿಧಾನವನ್ನು ವಿವರಿಸುವಾಗ ಮೂರು ಅವಸ್ಥೆಗಳನ್ನೂ ಗಮನದಲ್ಲಿರಿಸಿಕೊಂಡಿರುವುದಲ್ಲದೆ ಆಡುಮಾತಿನಲ್ಲಿ ತಳೆಯುವ ರೂಪಗಳನ್ನೂ ಸೂಚಿಸಿದ್ದಾನೆ. ವರ್ತಮಾನ ಕೃದಂತವು, ಉತುಂ, ಉತ್ತುಂ, ಉತ್ತೆ, ಉತಂ, ಉತ, ಉತ್ತಂ, ಉತ್ತ, ಉತ್ತಾ, ಉತಾ – ಈ ಪ್ರತ್ಯಯಗಳು ಸೇರುವುದರಿಂದ  ಉಂಟಾಗುತ್ತದೆ ಎಂಬುದು ಇವನ ವಿವರಣೆ. ಇವುಗಳಲ್ಲಿ ಕಡೆಯ ಎರಡು ಹೊಸಗನ್ನಡದಲ್ಲಿ ಬಳಕೆಯಾಗುವುವಾದರೆ ಉಳಿದವು ಹಳಗನ್ನಡ – ನಡುಗನ್ನಡ ಕಾಲದವು. ಭವಿಷ್ಯತ್ ಕೃದಂತ ವಿಶೇಷಣವು ಪ, ಬ, ಹಕಾರಗಳು ಹತ್ತುವುದರಿಂದ ಉಂಟಾಗುತ್ತದೆ ಎಂದು ನಿರೂಪಿಸಿ ಭವಿಷ್ಯತ್ತಿನ ವಕಾರವು ಹೊಸಗನ್ನಡದಲ್ಲಿ ಕೆಲವು ಸಲ ಒ, ಓ ಎಂದಾಗುತ್ತದೆ ಎಂದು ಸೂಚಿಸಿ ಆಗೋ, ಉರುಳೋ ಇತ್ಯಾದಿ ಉದಾಹರಿಸಿದ್ದಾನೆ (ಕಿಟೆಲ್, ಪು 107-114).
ಕ್ರಿಯಾಪದವು ಬೇರೆ ಬೇರೆ ಕಾಲಗಳನ್ನು ಅಭಿವ್ಯಕ್ತಿ ಮಾಡಲು ಹೇಗೆ ಸಮರ್ಥವಾಗುತ್ತದೆ ಎಂಬ ವಿಷಯವನ್ನು ಕಿಟೆಲ್ ಉದಾಹರಣೆಗಳ ಮೂಲಕ ಸುದೀರ್ಘವಾಗಿ ಚರ್ಚಿಸಿದ್ದಾನೆ. ಒಂದು ಧಾತುವಿಗೆ ಇದು ಉದು ಅದು ಎಂಬ ಸರ್ವನಾಮಗಳು ಸೇರುವುದರಿಂದ ಭೂತ ಕಾಲ, ವರ್ತಮಾನ ಕಾಲ ಮತ್ತು ನಿಷೇಧಾರ್ಥ ಕ್ರಿಯಾಪದಗಳು ಉಂಟಾಗುತ್ತವೆ ಎಂಬ ಇವನ ಪ್ರತಿಪಾದನೆ ಕುತೂಹಲಕಾರಿಯಾಗಿದೆ. ಇವನ ಪ್ರಕಾರ ಕನ್ನಡದ ಮೂಲರೂಪದಲ್ಲಿ ಧಾತುಗಳೆಲ್ಲವೂ ಭಾವನಾಮಗಳೇ ಆಗಿದ್ದು ಇವುಗಳಿಗೆ ಸರ್ವನಾಮ ಪ್ರತ್ಯಯಗಳಾದ(“pronominal suffixes”) ದು ಮತ್ತು ತು ಸೇರುವುದರಿಂದ  ಭೂತ ಕೃದಂತಗಳು ಸಿದ್ಧವಾಗುತ್ತವೆ. “ನಡೆ a walking, ನಡೆದು a walking it; ಮೊಳೆ a grminating, ಮೊಳೆತು a germinating it” (ಕಿಟೆಲ್, ಪು 105). ಪ್ರತ್ಯಯಗಳಾದ ದು ಮತ್ತು ತು ಗಳು ಈ ಪದಗಳ ಪ್ರಾಮಿಕ ಅರ್ಥದ ದೃಷ್ಟಿಯಿಂದ ಅನಾವಶ್ಯಕವಾದ ಹೆಚ್ಚುವರಿ ಸೇರ್ಪಡೆಗಳು, ರೂಢಿಯಿಂದ ಇವುಗಳಿಗೆ ಭೂತಕಾಲಾರ್ಥವು ಬಂತು ಎಂಬುದು ಇವನ ವಾದ. “ನಡೆ ಇದು” ಎಂಬುದು ಹೀಗೆ ಆಗಿ ಹೋದ ‘ನಡೆ’ಯನ್ನು ಸೂಚಿಸುತ್ತದೆ. ಆದ್ದರಿಂದ “ನಡೆ ಅದು” ಎಂಬುದು ಆಗಬೇಕಾದ ‘ನಡೆ’ಯನ್ನು ಸೂಚಿಸುತ್ತದೆ. ಅಂದರೆ ಅದು ಇನ್ನೂ ಆಗಿಲ್ಲವೆಂಬ ಅರ್ಥ ಬಂದು ನಿಷೇಧ ರೂಪವಾಗುತ್ತದೆ. ಇದು ರೂಡಿಗತವಾಗಿದೆ. ಈ ಸಂಬಂಧ ಕಿಟೆಲನ ಮಾತುಗಳು ಹೀಗಿವೆ: “it becomes evident from the formation of the so called negative participle that its primitive meaning was not that of direct negation but that of futurity i. e. the state of being yet to come, or in other words , that state of not being, or not having been … … …  the form under consideration  is therefore to say a pronominal noun and the first meaning of the (term) ಇರ ಅದು or ಇರದು ‘is yet to be’ or ‘stay-even-it’ or ‘not yet being’ or ‘staying even it’ or ‘the state of not actually being’… … …”(ಕಿಟೆಲ್, ಪು 107). ವರ್ತಮಾನ ಕಾಲ ಕೃದಂತವು ಇದೇ ರೀತಿ ‘ಉದು’ ವಿನ ಸೇರ್ಪಡೆಯಿಂದ ಉಂಟಾಗುತ್ತದೆ. ಮಧ್ಯಸ್ಥ ದರ್ಶಕ ಸರ್ವನಾಮವಾದ ಇದರ ಸೇರ್ಪಡೆಯ ಔಚಿತ್ಯವೆಂದರೆ, ಇದು, ಕ್ರಿಯೆಯು ಭೂತವೂ ಅಲ್ಲ ಭವಿಷ್ಯತ್ತೂ ಅಲ್ಲ ಎಂದು ಸೂಚಿಸಲು ಸಮರ್ಥವಾಗಿರುವುದು. ಇದಕ್ಕೆ ಮುಂದೆ “ಉ” ಎಂಬ ಸಮುಚ್ಚಯಾವ್ಯವು ಸೇರಿ ಕ್ರಿಯೆಯ ನಿರಂತರತೆಯನ್ನು ಸೂಚಿಸುತ್ತದೆ. ‘ಅದು’ವಿನ ಸೇರ್ಪಡೆಯಿಂದ ಪ್ರತಿಷೇಧಾರ್ಥ ರೂಪುಗೊಂಡದ್ದರಿಂದ ಮೂಲಭಾವನಾಮ(ಇದು ಕ್ರಿಯೆಯನ್ನೂ ಸೂಚಿಸುತ್ತದೆ)ದ ಷಷ್ಠೀ ರೂಪವು ಭವಿಷ್ಯತ್ಕಾಲವನ್ನು ಸೂಚಿಸಲು ಬಳಕೆಯಾಯಿತು – ಕೊಡುವ, ನಡೆವ ಇತ್ಯಾದಿ. ಹೀಗೆ ಇಲ್ಲಿಯ ವಿವರಣೆಯಿಂದ, ಧಾತುವಾದ ಭಾವ ನಾಮ ದರ್ಶಕ ಸರ್ವನಾಮಗಳೊಡನೆ ಸೇರುವುದರಿಂದ ಭೂತ, ವರ್ತಮಾನ ಮತ್ತು ಪ್ರತಿಷೇಧ ರೂಪಗಳುಂಟಾಗುವುವೆಂದೂ ಅದೇ ಭಾವನಾಮದ ಷಷ್ಠ್ಯಂತ ರೂಪವು ಭವಿಷ್ಯತ್ಕಾಲ ಸೂಚಕವಾಗಿ ಪರಿಣಮಿಸಿದೆಯೆಂದೂ ಪ್ರತಿಪಾದಿಸಿದ್ದಾನೆ. ಇದಕ್ಕೆ ಪರ್ಯಾಯ ವಾದಗಳೇನೂ ಇದುವರೆಗೆ ಸಮರ್ಥವಾಗಿ ಮಂಡಿತವಾಗಿಲ್ಲ  ಎಂಬುದು ಗಮನಾರ್ಹ. (ಇವು ಈ ಬಗ್ಗೆ ಕಾಲ್ಡ್ವೆಲ್ ಮಂಡಿಸಿರುವ ವಾದಕ್ಕಿಂತ ಹೆಚ್ಚು ಮನವೊಲಿಸುವಂತಹವಾಗಿವೆ).
ಕ್ರಿಯಾ ಪದದ ವರ್ತಮಾನ ಕಾಲ ರೂಪ ಹಳಗನ್ನಡದಲ್ಲಿ ‘ ಮಾಡಿದಪನ್’ ಎಂಬಂತೆ ಇತ್ತು. ಹೊಸಗನ್ನಡದಲ್ಲಿ ಇದರ ರೂಪ ‘ಮಾಡುತ್ತಾನೆ’ ಎಂದಾಗಿದೆ. ಇದರಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದನೆಯದಾಗಿ ಹಳಗನ್ನಡ ರೂಪದ ಕೊನೆಯಲ್ಲಿರುವ ‘ನ್’ ಎಂಬ ವ್ಯಂಜನವು ಹೊಸಗನ್ನಡದಲ್ಲಿ ‘ನು’ ಎಂದಾಗಬೇಕಿದ್ದು ಅದು ‘ನೆ’ ಎಂದು ಎಕಾರಾಂತ ಹೇಗಾಯಿತು ಎಂಬುದು. ಎರಡನೆಯದಾಗಿ ಹಳಗನ್ನಡ ರೂಪದಲ್ಲಿಲ್ಲದ ‘ಉತ’ ಎಂಬ ಮಧ್ಯಭಾಗವು ಹೊಸಗನ್ನಡದಲ್ಲಿ ಹೇಗೆ ಸೇರಿತು ಎಂಬುದು. ಈ ಪ್ರಶ್ನೆಗಳಿಗೆ ಕಿಟೆಲ್ ನೀಡಿರುವ ಪರಿಹಾರಗಳು ಕನ್ನಡದಲ್ಲಾಗಿರುವ ಭಾಷಾ ಬದಲಾವಣೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ನಿರ್ಣಯಿಸುವ ಅವನ ಗುಣವನ್ನೂ ವ್ಯಾಕರಣವನ್ನು ವೈಜ್ಞಾನಿಕ ತಳಹದಿಯ ಮೇಲೆ ರಚಿಸುವ ಅವನ ಕಾಳಜಿಯನ್ನೂ ತೋರಿಸುತ್ತವೆ.
ಹೊಸಗನ್ನಡದ ‘ಮಾಡುತ್ತಾನೆ’ ಎಂಬ ಕ್ರಿಯಾಪದದಲ್ಲಿ ‘ಮಾಡುತ್ತ’ ಎಂಬ ವರ್ತಮಾನ ಕೃದಂತಾವ್ಯಯವಿದ್ದು ಇದು ‘ಮಾಡಿದಪನ್’ ಎಂಬ ಪದದಲ್ಲಿರುವ ‘ಮಾಡಿದ’ ಎಂಬುದಕ್ಕೆ ಸಮಾನವಾದುದಲ್ಲ. ‘ಮಾಡಿದಪನ್’ ಎಂಬುದು ಸರಳ ರೀತಿಯಲ್ಲಿ ಕನ್ನಡಕ್ಕೆ ಬಂದಿರದೆ ಸ್ವರವ್ಯತ್ಯಯ ಹೊಂದಿ ಬಂದಿರುವುದಾಗಿದೆ. ಮಾಡಿದಪನ್ = ಮಾಡಿದ + ಅಪನ್ = ಮಾಡಿದ + ಅಹನ್ = ಮಾಡಿದ್ + ಹಾನ್ = ಮಾಡಿದ್ಧಾನು(ಹೊಸಗನ್ನಡದಲ್ಲಿ ಅಂತ್ಯ ‘ಉ’ಕಾರ ಪಡೆದು ಸಿದ್ಧವಾದ ರೂಪ) ಆಗಿದೆ ಎಂಬುದು ಕಿಟೆಲನ ಅಭಿಪ್ರಾಯ. ಇದು ಸಾಮಾನ್ಯ ವರ್ತಮಾನಾರ್ಥಕ್ಕಿಂತ ಭಿನ್ನವಾದ ಅನಿಶ್ಚಯಾರ್ಥವನ್ನು ಸೂಚಿಸಲು ಬಳಕೆಯಾಗಿದ್ದರಿಂದ ಬೇರೊಂದು ಕ್ರಿಯಾಪದದ ಅಗತ್ಯ ಉಂಟಾಯಿತು. ಮಾಡಿದ್ದಾನು ಎಂಬಲ್ಲಿರುವ  ಅಂತ್ಯ  ಉಕಾರವು ಅನಿಶ್ಚಯಾರ್ಥಬೋಧಕವಾದ್ದರಿಂದ ಆ ಉಕಾರದ ಸ್ಥಾನದಲ್ಲಿ ಅವಧಾರಣೆಯ ಎಕಾರವನ್ನು ಸೇರಿಸಿ ನಿಶ್ಚಯಾರ್ಥಕ ವರ್ತಮಾನಕ್ರಿಯಾಪದ(ಮಾಡಿದ್ದಾನೆ) ರೂಪಣೆಯಾಗಿದೆ. ಮಾಡುತ್ತಾನೆ ಎಂಬುದು ಹೊಸಗನ್ನಡದಲ್ಲಿ ಮಾಡುತ ಎಂಬ ಕೃದಂತದಿಂದ ಅದೇ ಅವಧಾರಣೆಯ ಎಕಾರ ಸೇರಿ ಸಿದ್ಧವಾದ ಹೊಸ ವರ್ತಮಾನಕಾಲಕ್ರಿಯಾಪದ. ಹೀಗೆ ಭಾಷಾ ಅವಸ್ಥಾಂತರದಲ್ಲಿ ಉಂಟಾದ ಬದಲಾವಣೆಗಳನ್ನು ಶಾಸ್ತ್ರೀಯವಾಗಿ ಚರ್ಚಿಸಿ  ಸಾಮಾನ್ಯಸಮ್ಮತ ನಿರ್ಣಯಗಳನ್ನು ಮುಂದಿಟ್ಟಿದ್ದಾನೆ. ಪಕಾರ ಹಕಾರವಾಗಿರುವುದು,ರಳಕಾರ ಳಕಾರವಾಗಿ ಬದಲಾಗಿರುವುದು, ಅಪ್ಪುದು ಎಂಬುದು ಹೌದು ಎಂದಾದುದು ಇಂತಹವುಗಳೂ ಅವುಗಳಲ್ಲಿ ಸೇರಿವೆ.
ಶಬ್ದಮಣಿದರ್ಪಣದಲ್ಲಿ ಬೇರೆಬೇರೆ ಸೂತ್ರಗಳ ಅಡಿಯಲ್ಲಿ ಪ್ರಸ್ತಾವಿತವಾಗಿದ್ದು ಬೇರೆಯೇ ಪದವರ್ಗವೆಂಬ ಗೌರವಕ್ಕೆ ಪಾತ್ರವಾಗದ  ಪದವರ್ಗಗಳನ್ನು ಕಿಟೆಲ್ ಪ್ರತ್ಯೇಕಿಸಿ ಹೊಸ ಪದವರ್ಗವನ್ನಾಗಿ ಸ್ಥಾಪಿಸಿದ್ದಾನೆ. ಇದು ಅವನ ಇನ್ನೊಂದು ಕೊಡುಗೆ. ನಾಮಪದ, ಸರ್ವನಾಮಮ, ಕೃಲ್ಲಿಂಗ, ಸಮಾಸನಾಮ, ತದ್ಧಿತನಾಮ, ಗುಣವಚನ, ಸಂಖ್ಯೆ – ಇವು ಇವನ ಪ್ರಕಾರ ವಿಭಕ್ತಿಗಳನ್ನೊಂದುವ ಪದವರ್ಗಗಳು.(ಕೇಶಿರಾಜ ತ್ರಿವರ್ಗೀಕರಣಕ್ಕೆ ಬದ್ಧನಾದ್ದರಿಂದ ಸಂಖ್ಯೆ, ಗುಣವಚನಗಳನ್ನು ಸ್ಪಷ್ಟವಾಗಿ ಪ್ರತ್ಯೇಕ ವರ್ಗಗಳಾಗಿರಿಸಿರಲಿಲ್ಲ). ಕ್ರಿಯಾಪದಗಳು ಆಖ್ಯಾತ ಪ್ರತ್ಯಯಗಳನ್ನೊಂದುವ ಪದವರ್ಗ. ಅನುಕರಣ ಪದಗಳು, ಕ್ರಿಯಾವಿಶಷಣ, ಭಾವಬೋಧಕ ಅವ್ಯಯ, ಸಮುಚ್ಚಯಾವ್ಯಯ, ಉಪಸರ್ಗಾವ್ಯಯ ಅಥವ ಉತ್ತರಸ್ಥಾನಿಗಳು(post positions) – ಪ್ರತ್ಯಯವನ್ನೊಂದದ ಪದವರ್ಗಗಳು. (ಕೇಶಿರಾಜ ಇವೆಲ್ಲವನ್ನೂ ಅವ್ಯಯವೆಂಬ ಒಂದೆ ವರ್ಗವಾಗಿ ಪರಿಗಣಿಸಿದ್ದ). ಹೀಗೆ ಕನ್ನಡದಲ್ಲಿ ಹದಿಮೂರು ಪದವರ್ಗಗಳೆಂದು ಕಿಟೆಲನ  ಪ್ರತಿಪಾದನೆ. ಇವುಗಳಲ್ಲಿ ತದ್ಧಿತವು ಸಮಾಸ ಕಾರ್ಯದಲ್ಲಿ ಭಾಗವಹಿಸುವುದಿಲ್ಲ. ಕೃಲ್ಲಿಂಗವು ಸಮಾಸದಲ್ಲಿ ಯಾವಾಗಲೂ ಉತ್ತರಪದವಾಗಿರುತ್ತದೆ ಮತ್ತು ಕೃಲ್ಲಿಂಗದೊಡನೆ ಸಮಾಸವಾಗುವುದಿಲ್ಲ. ಇತರ ಪದಗಳೊಡನೆ ಸಮಾಸವಾದಾಗ ಸಂಖ್ಯೆಯು ಯಾವಾಗಲೂ ಪೂರ್ವಪದವಾಗಿರುತ್ತದೆ ಮತ್ತು ಸಂಖ್ಯೆ ಸಂಖ್ಯೆಯೊಂದಿಗೆ ಸಮಾಸವಾಗಬಹುದು. ಈ ಪದವರ್ಗಗಳ ಇಂತಹ ವ್ಯಾಕರಣ ವೈಶಿಷ್ಟ್ಯಗಳು ಇವುಗಳನ್ನು ಪ್ರತ್ಯೇಕ ವರ್ಗಗಳಾಗಿ ಪರಿಗಣಿಸುವುದಕ್ಕೆ ಸಮರ್ಥನೆ. ಸಮಾಸನಾಮವು ಸ್ವತಂತ್ರ ಅರ್ಥವಿರುವ ಎರಡು ಪದಗಳ ಸಂಯೋಜನೆಯಿಂದಾಗಿದ್ದು ಅವಯವ ಪದಗಳ ಅರ್ಥಗಳಿಂದ  ಪ್ರೇರಿತವಾದ ಆದರೆ ಅವುಗಳನ್ನು ಮೀರಿದ ಬೇರೆಯೇ ಅರ್ಥವನ್ನು ಕೊಡುವಂತಹದು. ಅನುಕರಣ ಪದವು  ರೂಪ ಮತ್ತು ಅರ್ಥಗಳ ಪರಿಪೂರ್ಣ ಸಂಮಿಳನವಿರುವ ವಿಶಿಷ್ಟತೆಯನ್ನು ಪಡೆದಿದೆ. ಹೀಗೆ ಇವುಗಳನ್ನು ಪ್ರತ್ಯೇಕ ವರ್ಗಗಳಾಗಿ ಪರಿಗಣಿಸುವುದಕ್ಕೆ ವ್ಯಾಕರಣ ವೈಶಿಷ್ಟ್ಯಗಳ ಆಧಾರವಿರದಿದ್ದರೂ, ಅರ್ಥ ವೈಶಿಷ್ಟ್ಯವು ಇವುಗಳನ್ನು ಪ್ರತ್ಯೇಕಿಸಲು ಬೇಡಿಕೆ ಇಡುತ್ತದೆ. ಪದಗಳನ್ನು ವರ್ಗೀಕರಿಸುವಾಗ  ಪ್ರತ್ಯಯಗಳು ಸೇರುವುದು ಅಥವ ಸೇರದಿರುವುದು, ವಾಕ್ಯದಲ್ಲಿ ಅವು ನಿರ್ವಹಿಸುವ ಕಾರ್ಯ, ಇತರ ಪದಗಳೊಡನೆ ಸಂಯೋಗವಾಗುವ ಸಾಮರ್ಥ್ಯ ಮುಂತಾದ ವ್ಯಾಕರಣ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ, ಅವುಗಳ ಅರ್ಥವನ್ನೂ ನೆನಪಿಡುವುದು ತುಂಬ ಅಗತ್ಯ(ಸೆಬ್ರಿನ್ನಿಕೋವ್, ಪು 16 ಮತ್ತು 23)ವೆಂಬ ಆಧುನಿಕ ಭಾಷಾ ವಿಜ್ಞಾನಿಗಳ ಅಭಿಮತಕ್ಕೆ ಕಿಟೆಲನ ತ್ರಯೋದಶ ವರ್ಗೀಕರಣವು ಅನುಗುಣವಾಗಿದೆ.
ಈ ಕಾಲದ ಬೇರೆ ವ್ಯಾಕರಣಗಳಂತೆ ವಾಕ್ಯರಚನೆಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕ ಅಧ್ಯಾಯದಲ್ಲಿ ವಿವರಿಸಿದ್ದಾನೆ. ಹಳಗನ್ನಡ ವ್ಯಾಕರಣಕಾರರು ಅಲ್ಲಲ್ಲಿ ಹೇಳಿದ ಯಾವ ಅಂಶವನ್ನೂ ಕಿಟೆಲ್ ಕೈಬಿಟ್ಟಿಲ್ಲ. ಅಲ್ಲಿ ಉಪಯೋಗಿಸಿರುವ ಪಾರಿಭಾಷಿಕ ಪದಗಳನ್ನು ಸ್ವೀಕರಿಸಿ ವಿವರಿಸಿದ್ದಾನೆ. ವಾಕ್ಯದಲ್ಲಿ ಕಾರಕಗಳ ಸ್ಥಾನ ಮತ್ತು ಅವುಗಳನ್ನು ಉಪಯೋಗಿಸುವ ರೀತಿ(ಕಿಟೆಲ್, ಪು 381-382), ವಿಭಕ್ತಿ ಪಲ್ಲಟದ ವಿಷಯ(ಅದೇ 393-397), ಅಧ್ಯಾರೋಪ ಅಥವ ಅಧ್ಯಾಹಾರ, ಜಾತ್ಯೈಕವಚನ ಈ ಎಲ್ಲ ವಿಷಗಳನ್ನು ಚರ್ಚಿಸಿದ್ದಾನೆ. ಹಾಗೆಯೇ ಹಾಡ್ಸನ್ ವ್ಯಾಕರಣದಲ್ಲಿ ನಿರೂಪಿತವಾಗಿರುವ ಪದಗಳ ಅನುಕ್ರಮ, ಕನ್ನಡದಲ್ಲಿ ಆರ್ಟಿಕಲ್ ಇಲ್ಲವೆಂಬ ಅಂಶ, ಕೃದಂತಾವ್ಯಯದ ಉಪಯೋಗದ ವಿವರಗಳು ಇವೆಲ್ಲವನ್ನೂ ಇಲ್ಲಿ ಸೇರಿಸಲಾಗಿದೆ. ಇತರ ಅಧ್ಯಾಯಗಳಂತೆ ಇಲ್ಲಿಯೂ ಹೊಸ ಅಂಶಗಳು ಇಡಿಕಿರಿದಿವೆ. ಇವಲ್ಲದೆ ಇಂಗ್ಲಿಷಿನ ಕೆಲವು ವಿಶಿಷ್ಟ ವಾಕ್ಯರಚನಾ ರೀತಿಗಳನ್ನು ಕನ್ನಡಿಸುವ ಬಗ್ಗೆ ವಿವರವಾದ ಟಿಪ್ಪಣಿಗಳನ್ನು ನೀಡಿದ್ದಾನೆ. “On the expression of other”, “on the so called auxiliary verbs”, “on either .. .. .. or, neither .. .. .. nor” “on the verbs ಎನ್ and ಅನ್“, “on ಇಲ್ಲದೆ,ಅಲ್ಲದೆ,ಅಲ್ತು”, “on the repetition of verbs etc.”(ಅದೇ, 311-380) – ಶೀರ್ಷಿಕೆಗಳ ಅಡಿಯಲ್ಲಿ ಇಂತಹ ವಿವರಗಳು ಬಂದಿವೆ. ಇವೆಲ್ಲ ಕನ್ನಡ ವಾಕ್ಯರಚನೆಯನ್ನು ನಿರ್ವಚಿಸಲು ಸಹಾಯಕವಾಗಿದ್ದು ಇವುಗಳ ಒಟ್ಟು ಪುಟಗಳ ಸಂಖ್ಯೆ ನೂರಕ್ಕೂ ಹೆಚ್ಚಾಗಿದೆ. ಈ ಪ್ರಮಾಣ ಮತ್ತು ಸೂಕ್ಷ್ಮತೆ ಕಿಟೆಲ್ ವಾಕ್ಯ ರಚನೆಗೆ ನೀಡಿರುವ ಮಹತ್ವವನ್ನು ತೋರಿಸುತ್ತದೆ.
ಇಲ್ಲಿರುವ ವಿವರಗಳು ವ್ಯಾಕರಣವು ಕನ್ನಡ ಕಲಿಯುವುದಕ್ಕೂ ಇಂಗ್ಲಿಷ್ - ಕನ್ನಡ ಭಾಷಾಂತರಕ್ಕೂ ಉಪಯೋಗವಾಗತಕ್ಕದ್ದೆಂಬುದನ್ನು ಕಿಟೆಲ್ ಗಮನದಲ್ಲಿಟ್ಟುಕೊಂಡಿರುವುದನ್ನು ಸ್ಪಷ್ಟಪಡಿಸುತ್ತವೆ. ಇಂಗ್ಲಿಷ್ನಲ್ಲಿರುವ ಕೆಲವು ನುಡಿಗಟ್ಟುಗಳಿಗೆ ಎಲ್ಲ  ದೃಷ್ಟಿಗಳಿಂದ ಸಮಾನವಾದ ಕನ್ನಡ ಸಂವಾದಿಗಳಿಲ್ಲ. ಉದಾಹರಣೆಗೆ ಕನ್ನಡದಲ್ಲಿ ಆರ್ಟಿಕಲ್ ಗಳಿಲ್ಲ. ಕಿಟೆಲನ ಪ್ರಕಾರ ಆರ್ಟಿಕಲ್ಗಳನ್ನು ಮಾನಸಿಕವಾಗಿ ಒದಗಿಸಕೊಳ್ಳಬೇಕು. ಕರ್ಣನೊಳ್ನುಡಿ ಎಂಬುದರ ಇಂಗ್ಲಿಷ್ ಭಾಷಾಂತರ the sensible speech of karna ಎಂದಿರುವಂತೆ.
ಹೀಗೆ ಕಿಟೆಲ್ ಕನ್ನಡ ವ್ಯಾಕರಣವನ್ನು ಪರಿಪೂರ್ಣಗೊಳಿಸಿದ್ದಾನೆ. ಅದುವರೆಗಿನ ಕನ್ನಡ ವ್ಯಾಕರಣ ಕೃತಿಗಳನ್ನೆಲ್ಲ ಒಳಗೊಳಿಸಿಕೊಂಡು ,ತುಲನಾತ್ಮಕವಾಗಿ ಅಧ್ಯಯನ ಮಾಡಿ, ದೋಷಗಳನ್ನು ನೇರ್ಪುಗೊಳಿಸಿ, ಸಮಗ್ರಕೃತಿಯನ್ನು ರಚಿಸಿದ್ದಾನೆ. ನಡುಗನ್ನಡವೆಂಬ ಭಾಷಾ ಅವಸ್ಥೆಯನ್ನು ಕಲ್ಪಿಸಿ ಹಳಗನ್ನಡ-ನಡುಗನ್ನಡ-ಹೊಸಗನ್ನಡ ಈ ಮೂರಕ್ಕೂ ವ್ಯಾಕರಣ ನಿಯಮಗಳನ್ನು ನಿರೂಪಿಸಿದ್ದಾನೆ.  ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಆಗಿರುವ ಬೆಳವಣಿಗೆಗಳ ಜಾಡನ್ನು ಗುರುತಿಸಿದ್ದಾನೆ. ಪದಗಳ ವರ್ಗೀಕರಣದಲ್ಲಿದ್ದ ಗೊಂದಲಗಳನ್ನು ನಿವಾರಿಸಿ ಕನ್ನಡ ಪದಗಳಿಗೆ ತ್ರಯೋದಶವರ್ಗೀಕರಣವೇ ಸರಿಯಾದುದೆಂದು ಪ್ರತಿಪಾದಿಸಿದ್ದಾನೆ. ಇವೆಲ್ಲ ಕಿಟೆಲನ ಕೃತಿಯನ್ನು ವಿಶಿಷ್ಟವನ್ನಾಗಿ ಸ್ಥಾಪಿಸಿವೆ, ಅಮರವಾಗಿಸಿವೆ.
ಕಿಟೆಲನೊಂದಿಗೆ ಅಭಿಪ್ರಾಯ ಭೇದವಿರವಹುದು. ಆದರೆ ಕನ್ನಡದ ಮೂಲಸ್ವರೂಪವನ್ನು ಕಂಡುಹುಡುಕಬೇಕೆಂಬ ಅವನ ಕಾಳಜಿಯನ್ನಾಗಲೀ, ಅದಕ್ಕಾಗಿ ತೊಡಗಿರುವ ಅವನ ಪ್ರತಿಭೆಯನ್ನಾಗಲೀ ಯಾರೂ ಪ್ರಶ್ನಿಸಲಾರರು. ಕನ್ನಡ ವ್ಯಾಕರಣ ಕ್ಷೇತ್ರದಲ್ಲಿ ಇವನ ವ್ಯಾಕರಣದಷ್ಟು ಪ್ರಮಾಣ ಭೂತವೂ, ಆಧಾರ ಭೂತವೂ, ವ್ಯಾಪಕವೂ, ಸಮಗ್ರವೂ ಆದ  ಇನ್ನೊಂದು ಕೃತಿ ಇನ್ನೂ ಬರಬೇಕಿದೆ.
ಶಾಲಾ ವ್ಯಾಕರಣಗಳು ಮತ್ತು ಇತರ( ದೇಶೀಯ) ವ್ಯಾಕರಣುಗಳು
            ವ್ಯಾಕರಣ ಕೃತಿಗಳಿಗೆ ಸಂಬಂಧಿಸಿದಂತೆ ಹತ್ತೊಂಬತ್ತನೆಯ ಶತಮಾನದ ಇನ್ನೊಂದು ವಿದ್ಯಮಾನವೆಂದರೆ ಶಾಲಾ ವ್ಯಾಕರಣಗಳ ಹುಟ್ಟು. ಐಗಳ ಮಠದಲ್ಲಿಯೋ ಶ್ರೀಮಂತರ ಮನೆಗಳಲ್ಲಿಯೋ, ಮತ್ತು ಅಂತಹ ಕಡೆ ಮಾತ್ರ ನಡೆಯುತ್ತಿದ್ದ, “ಶಾಲೆ” ಸಾರ್ವತ್ರಿಕ ರೂಪ ಪಡೆದು ಸಾಮೂಹಿಕ ಶಿಕ್ಷಣವು ಈ ಕಾಲದಲ್ಲಿ  ಪ್ರಾರಂಭವಾಯಿತು. ಹಳಗನ್ನಡ – ನಡುಗನ್ನಡ - ಹೊಸಗನ್ನಡ ಸಾಹಿತ್ಯ ಭಾಗಗಳನ್ನೊಳಗೊಂಡ ಸಂಕಲನಗ್ರಂಥಗಳು ಹೊಸ ಶಾಲೆಗಳ ಉಪಯೋಗಕ್ಕಾಗಿ ರಚಿತವಾದವು. ಇವುಗಳನ್ನು ಅರ್ಥಮಾಡಿಕೊಳ್ಳಲು ನಿಘಂಟುಗಳೂ ವ್ಯಾಕರಣಗಳೂ ಅಗತ್ಯವಾದವು. ಹೀಗಾಗಿ ಶಾಲಾ ವ್ಯಾಕರಣಗಳ ರಚನೆ ಕಾಲದ ಅಗತ್ಯವಾಗಿ ಮೂಡಿ ಬಂತು. ಮಕ್ಕಳಿಗೆ ಅರ್ಥವಾಗುವಂತೆ ಮತ್ತು  ಕನ್ನಡ ಕಲಿಕೆಯನ್ನು ಉತ್ತಮ ಪಡಿಸಲು ಸಾಧ್ಯವಾಗುವಂತೆ ಶಾಲಾವ್ಯಾಕರಣಗಳ ರಚನೆ ಪ್ರಾರಂಭವಾಯಿತು. ಈ ವ್ಯಾಕರಣಗಳಲ್ಲಿ ವಿವರಣೆಯು ಆಳವಾಗಿ ವಿಶ್ಲೇಷಣಾತ್ಮಕವಾಗಲೀ, ದೀರ್ಘವಾಗಿ ವರ್ಣನಾತ್ಮಕವಾಗಲೀ ಆಗಿರದೆ ಬೋಧನಾತ್ಮಕ ಸ್ವರೂಪದವಾಗಿವೆ. ಆದ್ದರಿಂದಲೇ ಇವುಗಳಲ್ಲಿ ಹೆಚ್ಚಿನವು ಪ್ರಶ್ನೋತ್ತರ ರೂಪದಲ್ಲಿವೆ.
            ಕನ್ನಡ ಶಾಲಾ ವ್ಯಾಕರಣ Canarese School Grammer, 1859 – ಇದು ಕನ್ನಡದಲ್ಲಿ ಶಾಲಾ ವ್ಯಾಕರಣಗಳ ಸಂಪ್ರದಾಯವನ್ನು ಪ್ರಾರಂಭಿಸಿದ ಕೃತಿ. ಇದರ ಕರ್ತೃ ಯಾರೆಂಬುದು ತಿಳಿಯದು.ಮಿಶನರಿ ಕೃತಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದ ಬಾಸೆಲ್ ಮಿಶನ್ನಿನವರು ಇದನ್ನು ಪ್ರಕಟಿಸಿರುವುದರಿಂದ ಇದೊಮದು ಮಿಶನರಿ ಕೃತಿಯಾಗಿರುವ ಸಾಧ್ಯತೆ ಇದೆ. ಹಳೆ ಕನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು ಈ ಕೃತಿಯನ್ನು ಪರಿಷ್ಕರಿಸಿದ ಶ್ರೀನಿವಾಸ ಅಯ್ಯಂಗಾರ್ಯನೇ ಇದನ್ನು ಪರಿಷ್ಕರಿಸಿರುವಂತೆ ತಿಳಿದು ಬರುತ್ತದೆ(BEMS 1888). ಆದ್ದರಿಂದ ಇದರ ಕರ್ತೃವೂ ವುರ್ತ್ ಇರಬಹುದೇ ಎಂಬ ಸಂದೇಹ ಉಂಟಾಗುತ್ತದೆ. ಆದರೆ ಇದು ವುರ್ತನ ಹಳೆ ಕನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು ಕೃತಿಗಿಂತ ಮೊದಲೇ ಬಂದ ಕೃತಿ. ಈ ಕೃತಿಯಲ್ಲಿ ದೇಶ್ಯ ಮತ್ತು ಅನ್ಯದೇಶ್ಯ ಎಂಬ ಪದಭೇದಗಳನ್ನು ಹೇಳಿದ್ದಾನೆ. ಈ ಭೇದ ಮೊದಲ ಬಾರಿಗೆ ಕಂಡುಬರುವುದು ಕೃಷ್ಣಮಾಚಾರಿಯ ಹೊಸಗನ್ನಡ ನುಡಿಗನ್ನಡಿಯಲ್ಲಿ. ಈ ಕೃತಿಯ ಕಾಲ ಸ್ಪಷ್ಟವಾಗಿ 1838 ಆಗಿರುವುದರಿಂದ ಕೃಷ್ಣಮಾಚಾರಿಯು ಕನ್ನಡ ಶಾಲಾ ವ್ಯಾಕರಣವನ್ನು ತನ್ನ ಇಳಿ ವಯಸ್ಸಿನಲ್ಲಿ ಬರೆದಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಇನ್ನಷ್ಟು ಗಟ್ಟಿಯಾದ ಸಾಕ್ಷ್ಯಾಧಾರಗಳು ಸಿಗುವವರೆಗೂ ಇದರ ಕರ್ತೃತ್ವವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವೆನ್ನ ಬೇಕಾಗಿದೆ.
            ಹೊಸಗನ್ನಡ ನುಡಿಗನ್ನಡಿಯನಂತರದ ಪ್ರಶ್ನೋತ್ತರ ರೂಪದಲ್ಲಿ ಬಂದಿರುವ ಕೃತಿ ಇದೇ. ಇದರಲ್ಲಿ ಒಂದುನೂರ ಐವತ್ತೆರಡು ಪ್ರಶ್ನೆಗಳಿದ್ದು ಇವುಗಳಿಗೆ ಉತ್ತರ ರೂಪವಾಗಿ ಗದ್ಯದಲ್ಲಿ ವ್ಯಾಕರಣ ನಿಯಮಗಳ ನಿರೂಪಣೆ ಇದೆ. ವ್ಯಾಕರಣ ವಿಷಯಗಳಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾದ ಛಂದಶ್ಶಾಸ್ತ್ರ ಅಲಂಕಾರ ಶಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳೂ ಇದರಲ್ಲಿವೆ. ನಿರೂಪಣೆಯು ಸರಳವೂ, ಸುಲಭವೂ, ವಿದ್ಯಾರ್ಥಿಗಳಿಗೆ ಪ್ರಿಯವಾಗುವಂತೆಯೂ ಇದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾವ್ಯ ಭಾಗಗಳಿಂದಲೂ ಮತ್ತು ಆಡುಮಾತನಿಂದಲೂ ಉದಾಹರಣೆಗಳನ್ನು ನೀಡಿದ್ದಾನೆ. ತನ್ನ ಕೋಷ್ಟಕದಲ್ಲಿ  ಗ್ರೇಟರ್ ಕೂಡ ಈ ಕೃತಿಯಿಂದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾನೆ. ಇದು ಅಂದಿನ ಕಾಲದ ತುಂಬ ಜನಪ್ರಿಯ ಶಾಲಾ ವ್ಯಾಕರಣ. ಪ್ರಶ್ನೋತ್ತರ ರೂಪವು ಶಾಲಾ ವಿದ್ಯಾರ್ಥಿಗಳ ದೃಷ್ಟಿಯಿಂದ ತುಂಬ ಸೂಕ್ತವಾದ ಮಾದರಿಯಾಗಿರುವದೂ ಇದಕ್ಕೆ ಒಂದು ಕಾರಣ. 1920ರಲ್ಲಿ ಇದರ ಹನ್ನೆರಡನೆಯ ಆವೃತ್ತಿ ಪ್ರಕಟವಾಗಿದೆ. ಹೀಗೆ ಸು. ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಇದು ಚಲಾವಣೆಯಲ್ಲಿದ್ದು ಹನ್ನೆರಡು ಆವೃತ್ತಿಗಳನ್ನು ಕಂಡಿರುವುದು ಇದರ ಜನಪ್ರಿಯತೆಗೆ ಸಾಕ್ಷಿ.
            ಇದೊಂದು ಶಾಲಾ ವ್ಯಾಕರಣವಾಗಿದ್ದರೂ, ಇದರಲ್ಲಿ ಅಳವಡಿಸಿರುವ ವ್ಯಾಕರಣ ವಸ್ತುವಿನ ವರ್ಗೀಕರಣವು ವಿಶಿಷ್ಟವಾಗಿ ಕಂಡುಬರುತ್ತದೆ. ಇದು ವ್ಯಾಕರಣದ ಸಮಗ್ರತೆಯನ್ನು ಮಕ್ಕಳಿಗೆ ಮನಂಬುಗುವಂತೆ ಬಿಂಬಿಸುತ್ತಿದೆ. ಈ ಕಾರಣಗಳಿಂದ ಮುಖ್ಯಕೃತಿಯಾಗಿದೆ. ಕೃತಿಯಲ್ಲಿ “ಅಕ್ಷರಖಂಡ”, “ಶಬ್ದಖಂಡ”, “ವಾಕ್ಯಖಂಡ” ಮತ್ತು “ಛಂದೋಲಕ್ಷಣ”  ಎಂಬ ನಾಲ್ಕು ಖಂಡಗಳಿವೆ. ಈ ರೀತಿಯ ವ್ಯವಸ್ಥೆ ಒಂದು ನಿರಂತರತೆಯನ್ನು ಪ್ರತಿಬಿಂಬಿಸುತ್ತದೆ. ಧ್ವನಿಯ ಚಾಕ್ಷುಷ ರೂಪಗಳಾದ ಅಕ್ಷರಗಳನ್ನು ನಿರೂಪಿಸಿದ ಮೇಲೆ, ಈ ಅಕ್ಷರಗಳ ಸಂಯೋಜನೆಯಿಂದ ಉಂಟಾಗುವ ಪದಗಳನ್ನು ವಿವರಣೆಗೆ ಎತ್ತಿಕೊಳ್ಳುವುದು ಸಹಜ ಮುಂದಿನ ಭಾಗವಾಗಿದೆ. ಈ ದೃಷ್ಟಿಯಿಂದ ಸಮಂಜಸವಾಗಿದೆ. ಮತ್ತು ಅದರನಂತರ ಪದಗಳ ಸಂಯೋಜನೆಯಿಂದಾಗುವ ವಾಕ್ಯಗಳ ಅಧ್ಯಯನವು ಕ್ರಮಪ್ರಾಪ್ತವಾಗುತ್ತದೆ. ವಾಕ್ಯಗಳನ್ನು ಲಯಬದ್ಧವಾಗಿರುವಂತೆ ಜೋಡಿಸುವುದು, ಅಲಂಕರಿಸಿ ಕಾವ್ಯವನ್ನಾಗಿಸುವುದು ಮುಂದಿನ ಹೆಜ್ಜೆಯಾಗಿರುವುದರಿಂದ  ಛಂದಶ್ಶಾಸ್ತ್ರ ಅಲಂಕಾರ ಶಾಸ್ತ್ರಗಳ ವಿಷಯ ಕೊನೆಯಲ್ಲಿ ಬರುತ್ತದೆ.
            ಅಕ್ಷರಗಳ ನಿರ್ದುಷ್ಟ ನಿರೂಪಣೆ, ಮಾತಿನಲ್ಲಿ ಅಕ್ಷರಗಳು ಬದಲಾಗುವ ರಿತಿ, ಸಂಧಿವಿಧಗಳು  ಮತ್ತು  ವಿವರಗಳು - ಇವು ಅಕ್ಷರ ಖಂಡದ ಮುಖ್ಯ ವಿಭಾಗಗಳು.  ಇಲ್ಲಿ ಕನ್ನಡ ಸಂಧಿಗಳನ್ನೂ ಸಂಸ್ಕೃತ ಸಂಧಿಗಳನ್ನೂ ಉದಾಹರಣಸಹಿತವಾಗಿ ಖಚಿತವಾಗಿ ವಿವರಿಸಿದ್ದಾನೆ. ಜೊತೆಗೆ ಕನ್ನಡ ಬರವಣಿಗೆಯಲ್ಲಿ ಹೊಸದಾಗಿ ಸೇರಿದ ಲೇಖನ ಚಿಹ್ನೆಗಳನ್ನು ತಿಳಿಸಿ ಅವುಗಳ ಉಪಯೋಗವನ್ನು ಸ್ಪಷ್ಟಪಡಿಸಿದ್ದಾನೆ. ಅಕ್ಷರಗಳಂತೆ ಇವೂ ಚಿಹ್ನೆಗಳೇ ಆಗಿರುವುದರಿಂದ ಇದು ಸಯುಕ್ತಿಕವಾಗಿದೆ.
            ಕೃತಿಯ ಎರಡನೆಯ ಭಾಗ ಶಬ್ದಖಂಡ. ಇದು ಶಬ್ದಗಳ ಅಂದರೆ ಪದಗಳನ್ನು ವರ್ಗೀಕರಿಸಿ ಪ್ರತಿಯೊಂದು ಪದವನ್ನು ಪೂರ್ಣವಾಗಿ ಗುರುತಿಸುವ ಒಂದು ರೀತಿಯನ್ನು ಪರಿಚಯಿಸುತ್ತದೆ. ಪದಗಳಲ್ಲಿ ಜಾತಿ ಭೇದ, ರೂಪಭೇದ ಮತ್ತು ವಾಗರ್ಥ ಭೇದ ಎಂಬ ಭೇದಗಳನ್ನು ಇಲ್ಲಿ ಪ್ರತಿಪಾದಿಸಲಾಗಿದೆ. (1) ಜಾತಿ ಭೇದ ಎಂದರೆ ತತ್ಸಮ, ತದ್ಭವ, ದೇಶ್ಯ, ಅನ್ಯದೇಶ್ಯ ಮತ್ತು ಗ್ರಾಮ್ಯ ಎಂಬ ಭೇದಗಳು. ಇವುಗಳಲ್ಲಿ ಒಂದಾಗಿ ಯಾವುದೇ ಪದವನ್ನು ಗುರುತಿಸಬಹುದು. (2) ರೂಪ ಭೇದದಲ್ಲಿ ಮೂರು ತರಹ: . ಯಾವುದೇ ಪ್ರತ್ಯಯ ಸೇರಿಲ್ಲದೆ ಸ್ವತಂತ್ರ ಅಸ್ತಿತ್ವವುಳ್ಳ ಧಾತು, ಪ್ರಕೃತಿ ಮತ್ತು ಅವ್ಯಯ – ಈ ಪದಗಳು ಸಿದ್ಧಪದಗಳು. ಉದಾ. ಮಾಡು, ನಾಯಿ, ಆಗಲೇ. . ಧಾತು ಅಥವ ಪ್ರಕೃತಿಗಳಿಗೆ ಪ್ರತ್ಯಯಗಳು ಸೇರಿ ಉಂಟಾಗುವ ಪದಗಳು ವ್ಯುತ್ಪನ್ನ ಪದಗಳು. ಉದಾ. ಮಾಡಿಸು, ನಾಯಿಯನ್ನು ಇತ್ಯಾದಿ.. ಪದಗಳು ಒಂದಕ್ಕೊಂದು ಸೇರಿ ಉಂಟಾಗುವ ಸಮಾಸ ಪದಗಳು. ಉದಾ. ಗುರುವಾಕ್ಯ, ಕೈಕೆಲಸ ಇತ್ಯಾದಿ.   (3) ವಾಗರ್ಥಭೇದವೆಂದರೆ ಪದಗಳ ಅಷ್ಟವರ್ಗ. ಅಂದರೆ ನಾಮಪದ, ಕ್ರಿಯಾಪದ, ಗುಣವಚನ, ಸರ್ವನಾಮ,ಕ್ರಿಯಾವಿಶೇಷಣ,  ಭಾವಬೋಧಕಾವ್ಯಯ, ಸಮುಚ್ಚಯಾವ್ಯಯ, ಅನುಕರಣಪದ – ಇಂತಹವು. ಉದಾ. ‘ಕೊಟ್ಟನು’ ಎಂಬ ಪದವು ದೇಶ್ಯ, (ಕೊಡು ಎಂಬುದರಿಂದ) ವ್ಯುತ್ಪನ್ನ, (ಭೂತಕಾಲ)ಕ್ರಿಯಾಪದ. ‘ರಾಮಾನುಜ’ ಎಂಬುದು ತತ್ಸಮ, (ಷಷ್ಠೀ ತತ್ಪುರುಷ) ಸಮಾಸವಾಗಿರುವ, ನಾಮಪದ. ಇತ್ಯಾದಿ.
            ಕೃತಿಯ ಮೂರನೆಯ ಭಾಗ ವಾಕ್ಯ ಖಂಡ. ಪದಗಳು ಸೇರಿ ವಾಕ್ಯವಾಗುವ ವಿಧಾನವನ್ನು ಇಲ್ಲಿ ವಿವರಿಸಿದೆ.  ಈ ಭಾಗದಲ್ಲಿ ಆಖ್ಯಾತ ಪ್ರಕರಣ, ಕಾರಕ ಪ್ರಕರಣ, ವಿಶೇಷಣ ಪ್ರಕರಣ, ಅವ್ಯಯ ಪ್ರಕರಣ ಮತ್ತು ವಾಕ್ಯ ಸಮುಚ್ಚಯ ಪ್ರಕರಣಗಳೆಂಬ ಉಪವಿಭಾಗಗಳಿದ್ದು, ಆಯಾ ಪದಗಳು (ಅಂದರೆ ಆಖ್ಯಾತ,ಕಾರಕ,ವಿಶೇಷಣ ಇತ್ಯಾದಿ) ವಾಕ್ಯದಲ್ಲಿ ಪ್ರಯೋಗವಾಗುವ ರಿತಿಯನ್ನು ತೋರಿಸಲಾಗಿದೆ. ಕಡೆಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಛಂದಶ್ಶಾಸ್ತ್ರ ವಿಷಯಗಳಿವೆ.
            ಕೃತಿಯು ಹೊಸ ಅಂಶಗಳನ್ನೇನೂ ಅನಾವರಣಗೊಳಿಸುವುದಿಲ್ಲ. ಶಾಲಾ ಮಟ್ಟದಲ್ಲಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡಶಾಲಾ ವ್ಯಾಕರಣವನ್ನು ರಚಿಸಿದ್ದು ಇದು ಉಪಯುಕ್ತವಾಗಿದೆ. ಇದರ ಅಡಕತನ, ಲಾಲಿತ್ಯ, ಸೌಲಭ್ಯಗಳಿಂದ ಪ್ರೌಢಶಾಲಾ ವ್ಯಾಕರಣವೊಂದು ಹೀಗಿರಬೇಕು ಎನಿಸದೆ ಇರದು.
ಕನ್ನಡ ಬಾಲ ವ್ಯಾಕರಣ – ಪ್ರಶ್ನೋತ್ತರ ಸಂವಾದ, Catachism of Canarese Grammar1862
            ಇದೊಂದು ಕಿರುಹೊತ್ತಗೆ. ಇದರಲ್ಲಿ 64 ಪುಟಗಳಿವೆ.60 ಪುಟಗಳಲ್ಲಿ ವ್ಯಾಕರಣ ವಿಷಯ ನಿರೂಪಣೆ ಇದ್ದು ಉಳಿದ ನಾಲ್ಕು ಪುಟಗಳಲ್ಲಿ ಅನುಬಂಧವಿದೆ. ಇದೂ ಕೂಡ ಪ್ರಶ್ನೋತ್ತರ ರೂಪದಲ್ಲಿದ್ದು 130 ಪ್ರಶ್ನೆಗಳನ್ನೊಳಗೊಂಡಿದೆ. ಅದರ ವರ್ಗೀಕರಣ ಪದ್ಧತಿಯನ್ನು ಇಲ್ಲಿಯೂ ಅನುಸರಿಸಲಾಗಿದೆ. ಕನ್ನಡ ಶಾಲಾ ವ್ಯಾಕರಣದ ಸಂಕ್ಷಿಪ್ತ ರೂಪದಂತೆ ಇದು ಕಂಡು ಬರುತ್ತದೆ. ಉತ್ತರಗಳ ಉದ್ದವನ್ನು ಕಡಿಮೆ ಮಾಡಲಾಗಿದೆ. ಪ್ರಶ್ನೆಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಛಂದಶ್ಶಾಸ್ತ್ರ ಅಲಂಕಾರಗಳಿಗೆ ಸಂಬಂಧಿಸಿದ ಯಾವ ವಿಷಯಗಳೂ ಇಲ್ಲಿ ಬಂದಿಲ್ಲ. 1862ರಲ್ಲಿ ಇದರ ಪ್ರಥಮ ಆವೃತ್ತಿ ಪ್ರಕಟವಾಗಿದ್ದು 1952ರಲ್ಲಿ 26ನೆಯ ಆವೃತ್ತಿ ಬಂದಿದೆ. ಇದೂ ಕೂಡ ಸು.ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಚಾಲ್ತಿಯಲ್ಲಿದ್ದು ಜನಪ್ರಿಯವಾಗಿರುವುದನ್ನು ನೋಡಬಹುದು. ಕನ್ನಡ ಶಾಲಾ ವ್ಯಾಕರಣವು ಪ್ರೌಢಶಾಲಾ ಮಟ್ಟಕ್ಕೆ ಸೂಕ್ತ  ಎನಿಸುವಂತೆ ಪ್ರಾಥಮಿಕ ಶಾಲಾ ಮಟ್ಟಕ್ಕೆ ಇದು ಸೂಕ್ತ ಎಂಬ ಭಾವನೆ ಬರುತ್ತದೆ.
            ಪಾಶ್ಚಾತ್ಯರು ರಚಿಸಿದ ಇಂತಹ ವ್ಯಾಕರಣಗಳು ದೇಶೀಯರಿಗೂ  ವ್ಯಾಕರಣಗಳನ್ನು ರಚಿಸಲು ಪ್ರೇರಿಸಿದವು.ಇವುಗಳಲ್ಲಿ ಕೆಲವು ಶಾಲಾ ವ್ಯಾಕರಣಗಳು.  ಕ್ರಿ. ಶ 1860 ರಿಂದ 1900ರ ಮಧ್ಯದಲ್ಲಿ ದೇಶೀ ವಿದ್ವಾಂಸರಿಂದ ಹಲವು ಶಾಲೆಗಳಿಗೆ ಉಪಯುಕ್ತವಾಗುವಂತಹ ವ್ಯಾಕರಣ ಪುಸ್ತಕಗಳು ರಚನೆಯಾಗಿವೆ. ಇವುಗಳ ಸಂಖ್ಯೆಯನ್ನು ಖಚಿತವಾಗಿ ಹೇಳುವುದು ಕಷ್ಟಸಾಧ್ಯ. ಜನಪ್ರಿಯ ವಾಗಿದ್ದ  ಎಂಟು ಕೃತಿಗಳನ್ನು ಹೊಸಗನ್ನಡ ಅರುಣೋದಯದಲ್ಲಿ ಹೆಸರಿಸಿದ್ದಾರೆ. ವೆಂಕಟ ರಂಗೋಕಟ್ಟಿಯ ಲಘುವ್ಯಾಕರಣ, ಎಂ ಬಿ ಶ್ರೀನಿವಾಸ ಅಯ್ಯಂಗಾರ್ಯನ ವಾಚಕ ಬೋಧಿನಿ – ಇವುಗಳ ಕಾಲ ಖಚಿತವಾಗಿಲ್ಲ. ಹತ್ತೊಂಬತ್ತನೆಯ ಶತಮಾನದಲ್ಲಿ ರಚಿತವಾದುವೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಎಂ ರಾಮಸ್ವಾಮಿ ಶಾಸ್ತ್ರಿಯ ವಾಗ್ವಿಧಾಯಿನಿ 1869ರಲ್ಲಿ ರಚನೆಯಾದಂತೆ ತಿಳಿದು ಬರುತ್ತದೆ.  ಧೋಂಡೋ ನರಸಿಂಹ ಮುಳುಬಾಗಿಲು ಇವನ ನುಡಿಗಟ್ಟು 1892ರಲ್ಲಿ ಮತ್ತು ಕನ್ನಡ ಕೈಪಿಡಿ 1890ರಲ್ಲಿ ಬೆಳಕು ಕಂಡವು. ಇವನ ಎರಡು ಪುಸ್ತಕಗಳ ಬಗ್ಗೆ ಕನ್ನಡ ವಿಶ್ವಕೋಶದಲ್ಲಿ ಹೀಗೆ ಹೇಳಿದೆ: “ವ್ಯಾಕರಣ ಛಂದಸ್ಸುಗಳ ಮೇಲೆ ಅಚ್ಚುಕಟ್ಟಾದ ವ್ಯವಸ್ಥಿತವಾದ ನಿರೂಪಣೆಯುಳ್ಳ ಗ್ರಂಥಗಳನ್ನು ಇವರು ಬರೆದಿದ್ದಾರೆ. ಇವರ ಕನ್ನಡ ಕೈಪಿಡಿ(1890) ಕನ್ನಡ ವ್ಯಾಕರಣವನ್ನು ವಿಸ್ತಾರವಾಗಿ ಪ್ರತಿಪಾದಿಸುತ್ತದೆ. ಹಳೆಯ ವ್ಯಾಕರಣ ಪ್ರಕ್ರಿಯೆಗಳನ್ನು ಹೊಸಕಾಲದ ಭಾಷೆಗೆ ಸಮನ್ವಯಗೊಳಿಸಿದುದು ಇದರ ವೈಶಿಷ್ಟ್ಯ. ಇದರಲ್ಲಿ ಅನೇಕ ಕಡೆ ಇವರ ಸ್ವತಂತ್ರ ವಿಚಾರ ಸರಣಿ ಎದ್ದು ಕಾಣುತ್ತದೆ. ವ್ಯಾಕರಣ ಕ್ಷೇತ್ರದಲ್ಲಿ ಇದೊಂದು ಹಿರಿಯ ಕೃತಿ. ಕೆಳ ವರ್ಗಗಳ ವಿದ್ಯಾರ್ಥಿಗಳಿಗಾಗಿ ಸುಲಭ ಮತ್ತು ಸಂಕ್ಷಿಪ್ತ ರೂಪದಲ್ಲಿ ಬರೆಯಲಾದ ನುಡಿಗಟ್ಟು(1892) ಇವರ ಇನ್ನೊಂದು ಕೃತಿ. ಮೈಸೂರು ಕಡೆಯಲ್ಲಿ ಬಿ. ಮಲ್ಲಪ್ಪನವರ ಶಬ್ದಾದರ್ಶಕ್ಕೆ ಇದ್ದ ಮಹತ್ವ ಉತ್ತರ ಕರ್ನಾಟಕದಲ್ಲಿ ಇದಕ್ಕೆ ಇತ್ತು.” ಬಾಳ ಶಾಸ್ತ್ರಿ ನರೇಗಲ್ ಇವನ ವಾಣೀ ಮುಕುರ(1884), ಆರ್ ರಘುನಾಥರಾಯನ ವ್ಯಾಕರಣೋಪನ್ಯಾಸ ಮಂಜರಿ, ಮೂಡ ಭಟ್ಕಳನು ಇಂಗ್ಲಿಷಿನಲ್ಲಿ ಬರೆದ ಹೊಸಗನ್ನಡ ವ್ಯಾಕರಣ – ಇವು ಈ ಕಾಲದ ಇತರ ವ್ಯಾಕರಣಗಳು. ವ್ಯಾಕರಣಗಳ  ಈ ಸಂಖ್ಯೆ ದೇಶೀಯರು ವ್ಯಾಕರಣ ರಚನೆಗೆ ತೋರಿದ ಉತ್ಸಾಹವನ್ನು ತೋರಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಪ್ರಶ್ನೋತ್ತರ ರೂಪದಲ್ಲಿರಬಹುದು; ಶಾಲಾ ಪಠ್ಯಕ್ರಮಮವನ್ನನುಸರಿಸಿ ಶಾಲಾ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಬರೆದಿರಬಹುದು. ಈ ಕೃತಿಗಳ ಪ್ರತಿಗಳು ಈಗ ಲಭ್ಯವಾಗುತ್ತಿಲ್ಲ. ಹಾಗೆಯೇ ಮೂಡು ಭಟ್ಕಳ ತನ್ನ ಕೃತಿಯ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಎಸ್ ರಾಮಕೃಷ್ಣ ಬರೆದ ಕನ್ನಡ ವಚನ ಕೌಮುದಿ, ಟಿ ಎಸ್ ಮಾಬೆನ್ನನ ವ್ಯಾಕರಣ ಬೋಧಿನಿ – ಇವೂ ಅಲಭ್ಯ.
            ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಎ ಎಸ್ ಮೂಡು ಭಟ್ಕಳ ಎಂಬ ವಿದ್ವಾಂಸ A Modern Canarese Grammar Explained in English (ಇಂಗ್ಲಿಷ್ ಭಾಷೆಯಲ್ಲಿ ಬರೆದ ಹೊಸಗನ್ನಡ ವ್ಯಾಕರಣವು)ಎಂಬ ಕೃತಿಯನ್ನು ರಚಿಸಿದ. (ಇದನ್ನು ಸಂಕ್ಷಿಪ್ತವಾಗಿ ಮಾಡರ್ನ್ ಕ್ಯಾನರೀಸ್ ಗ್ರಾಮರ್ ಎಂದು ಕರೆಯಬಹುದು). 1899ರಲ್ಲಿ ಕಾರವಾರದಿಂದ ಇದು ಪ್ರಕಟವಾಗಿದೆ. ಲೇಖಕರು ಮುನ್ನುಡಿಯಲ್ಲಿ ಹೇಳಿರುವಂತೆ ಇದುಮೆಟ್ರಿಕ್ಯುಲೇಶನ್ನಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಮತ್ತು ಈಗ ತಾನೆ ಮೆಟ್ರಿಕ್ಯುಲೇಶನ್ ಮುಗಿಸಿ  ಇತರ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗಾಗಿ ರೂಪಿಸಿರುವ ಹೊಸಗನ್ನಡ  ವ್ಯಾಕರಣ. ಕೇವಲ ಶಾಲೋಪಯೋಗೀ  ವ್ಯಾಕರಣವಲ್ಲ. ದ್ರಾವಿಡ ಕುಟುಂಬದ ಈ ಭಾಷೆಯನ್ನು ಕಲಿಯುವ ವಿದೇಶೀ ವಿದ್ಯಾರ್ಥಿಗಳಿಗೂ ಅನುಕೂಲವಾಗಬೇಕೆಂಬ ಉದ್ದೇಶವೂ ಇವನಿಗಿದೆ(ಮಾಡರ್ನ್ ಕ್ಯಾನರೀಸ ಗ್ರಾಮರ್, ಮುನ್ನುಡಿ). ಹೀಗೆ, ಸಮಗ್ರ ಸ್ವರೂಪದ ಪೂರ್ಣಪ್ರಮಾಣದ ಹೊಸಗನ್ನಡ ವ್ಯಾಕರಣವಾಗಬೇಕೆಂಬ, ಮುಂದುವರಿದ ವಿದ್ಯಾರ್ಥಿಗಳಿಗೂ ಪಠ್ಯಸ್ವರೂಪದ್ದಾಗಬೇಕೆಂಬ ಉದ್ದೇಶದಿಂದ ರಚಿಸಿದಂತಿರುವ ಇದರಲ್ಲಿ 278 ಪುಟಗಳಿವೆ. ಕಿಟೆಲನ ಕೃತಿಯೊಂದನ್ನು ಹೊರತುಪಡಿಸಿದರೆ, ಹತ್ತೊಂಬತ್ತನೆಯ ಶತಮಾನದ ಆದಿಯಿಂದ ತನ್ನ ಕಾಲದವರೆಗೆ ರಚಿತವಾದ ವ್ಯಾಕರಣ ಕೃತಿಗಳಲ್ಲಿ ಇದೇ ಇಷ್ಡು ದೀರ್ಘವಾಗಿರುವುದು. ದೇಶೀಯರು ಇಂಗ್ಲಿಷಿನಲ್ಲಿ ರಚಿಸಿದ ಕನ್ನಡ ವ್ಯಾಕರಣಗಳಲ್ಲೂ ಇದು ಮೊದಲನೆಯದು.  ಇದು ಪ್ರಶ್ನೋತ್ತರ ರೂಪದಲ್ಲಿಲ್ಲ. ಇತರ ಮುಖ್ಯ ವ್ಯಾಕರಣಗಳಂತೆ ನಿಯಮ(ಸೂತ್ರಗಳ) ನಿರ್ವಚನ ರೂಪದಲ್ಲಿದೆ. ಮುಖ್ಯ ವಿಷಯವನ್ನು ನಿಯಮರೂಪದಲ್ಲಿಟ್ಟು ಅದರ ಕೆಳಗೆ ವಿವರಣೆಗಳನ್ನು ನೀಡುವ ಪದ್ಧತಿಯನ್ನು ಅನುಸರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಕನ್ನಡ ಪದಗಳ ಇಂಗ್ಲಿಷ್  ಲಿಪ್ಯಂತರವನ್ನು ಇದರಲ್ಲಿ ಮಾಡಿಲ್ಲ. ಇವನ ಪ್ರಕಾರ ಈ ಪುಸ್ತಕವನ್ನು ಓದುವವರಿಗೆ ಕನ್ನಡ ವರ್ಣ ಮಾಲೆ ಪರಿಚಿತವಾಗಿರುತ್ತದೆಯಾದ್ದರಿಂದ ಅದರ ಆವಶ್ಯಕತೆ ಇಲ್ಲ..  ಇದನ್ನು ಬರೆಯಲು ತಾನು ಹದಿನೆಂಟು ಪುಸ್ತಕಗಳನ್ನು ಪರಾಮರ್ಶಿಸಿರುವದಾಗಿಯೂ, ಕಾರವಾರದಲ್ಲಿ ಹೈಸ್ಕೂಲಿನ ಸಹಾಧ್ಯಾಪಕನಾಗಿದ್ದ ಶಂಕರನಾರಾಯಣ ಕೊಪ್ಪಿಕರ ಎಂಬುವನ ಸಹಾಯವನ್ನು ತಾನು ಪಡೆದಿರುವುದಾಗಿಯೂ ಹೇಳಿಕೊಂಡಿದ್ದಾನೆ(ಮಾಡರ್ನ್ ಕ್ಯಾನರೀಸ್ ಗ್ರಾಮರ್, ಮುನ್ನುಡಿ).
ಇದರಲ್ಲಿ ಸು.400ಕ್ಕೂ ಮಿಕ್ಕು ಸೂತ್ರ ಅಥವ ನಿಯಮಗಳಿವೆ. ಇವನೂ ಹಾಡ್ಸನ್ನನಂತೆ ಅಷ್ಟವರ್ಗ ವರ್ಗೀಕರಣವನ್ನು ಒಪ್ಪಿಕೊಂಡು ಮುಂದೆ ಸಾಗಿದ್ದಾನೆ. ಪ್ರತಿಯೊಂದು ವರ್ಗದ ಪದಗಳನ್ನು ಹೊಸಗನ್ನಡದಿಂದ ಉದಾಹರಣೆಗಳನ್ನು ನೀಡಿ ವಿವರಿಸಿದ್ದಾನೆ.
            ಆದರೆ ಇವನು ತನ್ನದೇ ಆದ ಸುಧಾರಣೆಗಳನ್ನು ಅಳವಡಿಸಿದ್ದಾನೆ. ಇವನ ಪುಸ್ತಕದ ಯೋಜನೆಯೇ ವಿಶಿಷ್ಟವಾದುದು. ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯದು ಅಕ್ಷರಿಕೆ ಅಥವ “ಆರ್ಥೋಗ್ರಫಿ”. ಇದರಲ್ಲಿ ಅಕ್ಷರಗಳನ್ನು ಸ್ವರ, ವ್ಯಂಜನ ಮತ್ತು ಅರ್ಧಸ್ವರ ಎಂದು ವಿಂಗಡಿಸಿ ಚರ್ಚಿಸಿದ್ದಾನೆ. ಇದು ಕನ್ನಡ ಶಾಲಾ ವ್ಯಾಕರಣದ ಅಕ್ಷರಖಂಡದಂತಿದೆ. ಎರಡನೆಯ ಭಾಗಕ್ಕೆ “ಎಟಿಮಾಲಜಿ” ಎಂದು ಹೆಸರು ಕೊಟ್ಟಿದ್ದಾನೆ. ಇದರಲ್ಲಿ ಪದಗಳಲ್ಲಿ ಭಾಷಾ ಮೂಲಕ್ಕನುಗುಣವಾಗಿ ಭೇದ ಮತ್ತು ಅಷ್ಟವರ್ಗಕ್ಕನುಗುಣವಾಗಿ ಭೇದಗಳನ್ನು ವಿವರವಾಗಿ ಚರ್ಚಿಸಿದ್ದಾನೆ. ಈ ವಿವರಣೆಗಳು ನೂರು ಪುಟಕ್ಕೂ ಮಿಕ್ಕು ಸಾಗುತ್ತವೆ. ಇಲ್ಲಿ ಹೇಳಿರುವ ಎರಡು ಭೇದಗಳು ಕನ್ನಡ ಶಾಲಾ ವ್ಯಾಕರಣದ ಜಾತಿಭೇದ ಮತ್ತು ವಾಗರ್ಥಭೇದಗಳಿಗೆ ಸಂವಾದಿಗಳಾಗಿವೆ. ರೂಪಭೇದವನ್ನು ಅಷ್ಟು ಮುಖ್ಯವಲ್ಲವೆಂದು ಇವನು ಪರಿಗಣಿಸಿರಬಹುದು, ಅದನ್ನು ಕೈಬಿಟ್ಟಿದ್ದಾನೆ. ಮೂರನೆಯ ಭಾಗವು ವಾಕ್ಯರಚನೆಗೆ ಸಂಬಂಧಿಸಿದ್ದು ನೂರಮೂವತ್ತು ಪುಟಗಳಿಗೂ ಹೆಚ್ಚು ವಿಸ್ತಾರವಾಗಿದೆ. ಕನ್ನಡ ಶಾಲಾ ವ್ಯಾಕರಣದ ಋಣವನ್ನು ಇವನು ಒಪ್ಪಿಕೊಂಡಿದ್ದಾನೆ ಮತ್ತು ಸ್ಥೂಲ ರೂಪದಲ್ಲಿ ಅದನ್ನು ಅನುಸರಿಸಿರುವುದು ಸ್ಪಷ್ಟವಿದೆ.
ಅಷ್ಟವರ್ಗಗಳ ಇವನ ವಿವರಣೆ ಸ್ವೋಪಜ್ಞವೂ ಸ್ಪಷ್ಟವೂ ಪಾಠಮಾಡುವ ರೀತಿಯದೂ ಆಗಿದೆ, ಉದಾಹರಣೆಯಾಗಿ ಕ್ರಿಯಾ ಪದದ ಬಗ್ಗೆ ಹೇಳಿರುವುದನ್ನು ನೋಡಬಹುದು: “ಕ್ರಿಯಾಪದ signifies a word denoting an action. A verb differs from a Noun in declaring an  action instead of a name(ಮಾಡರ್ನ್ ಕ್ಯಾನರೀಸ್ ಗ್ರಾಮರ್ , ಪು 79 ). In Canarese, there are two conjugations of regular verbs . They are distinguished by the final Vowel in the Root. 1. the Conjugation of Roots ending in u and 2. Conjugation of those ending in other vowels (ಅದೇ, 94).  ಇತರರು ವಿಕಾರ ಹೊಂದುವ ಕ್ರಿಯಾಪದಗಳು ಎಂದು ಕರೆದಿರುವುದನ್ನು ಇವನು ವಿಕೃತ ಕ್ರಿಯಾಪದಗಳೆಂದು(ಅದೇ,  116) ಕರೆದಿದ್ದಾನೆ.   ಉತ್ತರ ಸ್ಥಾನಿಗಳನ್ನು ಇವನು ಎರಡು ಉಪವಿಭಾಗಗಳನ್ನಾಗಿ ಮಾಡಿದ್ದಾನೆ: “there are  two types of post positions:’ perfect’ post  positions ಪೂರ್ಣ ಉಪಸರ್ಗ  ‘semi’ post positions ಅರೆ ಉಪಸರ್ಗಗಳು” ( ಅದೇ,  122). ಇದೊಂದು ಪಠ್ಯ ಪುಸ್ತಕದ ರೀತಿಯಲ್ಲಿರುವುದರಿಂದ ಇದರಲ್ಲಿ ಸೂಕ್ತ ಅಭ್ಯಾಸಗಳನ್ನು ಅಳವಡಿಸಿದ್ದಾನೆ. ಉದಾ. “combine the following according to the rules of euphony -  ಲಕ್ಷ್ಮಿ + ಅಪ್ಪ,  ಕೈ+ ಅ,  ಕೆಟ್ಟು+  ಹೋಯಿತು”( ಅದೇ, 272). “parse the words underlined ಬೆಲೆ ಹೆಚ್ವಾದರೆ  ..... ಸಹ ಕಡಿಮೆಯಾಗುವುದು” (ಅದೇ, ಪು 260) ಇತ್ಯಾದಿ.
            ಇದರಲ್ಲಿ ಅಳವಡಿಸಲಾದ ಸುಧಾರಣೆಗಳು ಕೃತಿಯನ್ನು ಹೆಚ್ಚು ಆಪ್ತವಾಗಿಸಿವೆ. ಉಪಯುಕ್ತವಾಗಿಸಿವೆ. ಮುಂದೆ ಹೆರಲ್ಡ್ ಸ್ಪೆನ್ಸರನಿಗೆ ಇಂಗ್ಲಿಷಿನಲ್ಲಿ ಕನ್ನಡ ವ್ಯಾಕರಣವನ್ನು ಅಭ್ಯಾಸ ಪ್ರಶ್ನೆಗಳೊಂದಿಗೆ ರಚಿಸಲು ಇದು ಪ್ರೇರಣೆ ನೀಡಿರಬಹುದು.
                        ಕೇಶಿರಾಜ ಮೊದಲಾದವರಿಂದ ಪ್ರಾರಂಭವಾದಾಗ ಕನ್ನಡ ವ್ಯಾಕರಣ ಪರಂಪರೆಯ ಬೇರುಗಳು ಸಂಸ್ಕೃತದಲ್ಲಿ ನೆಟ್ಟಿದ್ದವು. ಪ್ರಾಚೀನ ವ್ಯಾಕರಣಕಾರರಲ್ಲಿ ಒಬ್ಬರು ಪಾಣಿನಿಯಿಂದ ಪ್ರೇರಿತರಾದರೆ ಇನ್ನೊಬ್ಬರು ಕಾತಂತ್ರ ಸಂಪ್ರದಾಯದವರಾದರು. ಆದ್ದರಿಂದಲೇ ಅಕ್ಷರಗಳ ವಿಚಾರ ಬಂದಾಗ ಸಾಗರ ಪರ್ಯಂತ ವ್ಯಾಪ್ತವಾದ ಈ ಭೂಮಿಯಲ್ಲಿ ಖ್ಯಾತವಾಗಿರುವ ಅಕ್ಷರಗಳಲ್ಲಿ ಯಾವುವು ಕನ್ನಡದಲ್ಲಿವೆ ಯಾವುವು ಇಲ್ಲ ಮತ್ತು ಯಾವುವನ್ನು (ಕನ್ನಡದಲ್ಲಿ ಮಾತ್ರ ಇರುವುದರಿಂದ, ಉದಾ. ಎ,ಒ,ಳ ಇತ್ಯಾದಿ) ಹೆಚ್ಚಾಗಿ ಸೇರಿಸಬೇಕು ಎಂಬಂತೆ ನಿರುಪಿಸಿದ್ದಾರೆ.  ಕನ್ನಡ ಪದ ಸಮೂಹವನ್ನು ವಿಭಕ್ತಿ ಹತ್ತುವ ‘ಲಿಂಗ’ ಪದಗಳು, ಆಖ್ಯಾತ ಸೇರುವ ‘ಧಾತು’ಗಳು  ಮತ್ತು ಎರಡು ರೀತಿಯ ಪ್ರತ್ಯಯಗಳೂ ಸೇರದ ಅವ್ಯಯಗಳು ಎಂಬ ಮೂರು ವರ್ಗಗಳನ್ನಾಗಿ ವರ್ಗೀಕರಿಸಿದ್ದಾರೆ. ಕನ್ನಡದ ಪ್ರಾಚೀನ ಕಾವ್ಯಗಳಿಂದ ಉದಾಹರಣೆಗಳನ್ನು ನೀಡಿ ತಮ್ಮ ಸೂತ್ರಗಳನ್ನು ಸಮರ್ಥಿಸಿಕೊಂಡಿದ್ದಾರೆ.  ಹತ್ತೊಂಬತ್ತನೆಯ ಶತಮಾನದಲ್ಲಿ ಇದಕ್ಕೊಂದು ಹೊಸ ತಿರುವು ಬಂತು. ಮುಖ್ಯವಾಗಿ ಪಾಶ್ಚಾತ್ಯ ಕ್ರೈಸ್ತ ಮಿಶನರಿಗಳು ತಮ್ಮವರಿಗೆ ಕನ್ನಡ ಕಲಿಯಲು ಅನುಕೂಲವಾಗುವಂತೆ ವ್ಯಾಕರಣವನ್ನು ಇಂಗ್ಲಿಷಿನಲ್ಲಿ ರಚಿಸಲು ಪ್ರಾರಂಭಿಸಿದರು. ಅವರಿಗೆ ಪರಿಚಿತವಾಗಿದ್ದ ಇಂಗ್ಲಿಷಿನ ಎಂಟು ಪಾರ್ಟ್ಸ್ ಆಫ್ ಸ್ಪೀಚ್ ಗಳನ್ನು ಅವರು ಕನ್ನಡದಲ್ಲಿ ಹುಡುಕ ತೊಡಗಿದರು. ಹಾಡ್ಸನ್ ಕನ್ನಡದಲ್ಲಿ ಎಂಟು ಪಾರ್ಟ್ಸ್ ಆಫ್ ಸ್ಪೀಚ್ ಇವೆ ಎಂಬ ಘೋಷಣೆಯೊಂದಿಗೇ ತನ್ನ ನಿರೂಪಣೆಯನ್ನು ಪ್ರಾರಂಭಿಸುತ್ತಾನೆ. ಅವರುಗಳು ಅಷ್ಟವರ್ಗೀಕರಣಕ್ಕೆ ಕನ್ನಡ ವ್ಯಾಕರಣವನ್ನು ಹೀಗೆ ಒಗ್ಗಿಸಿದರು. ಆದರೆ ಇದೂ ಕೂಡ ಕೃತಕ ಚೌಕಟ್ಟಿನಲ್ಲಿ ಭಾಷೆಯನ್ನು ಕಟ್ಟಿದಂತಾಯಿತು. ಕನ್ನಡದಲ್ಲಿ ಇಲ್ಲಿಯ ಜನರು ಭಾಷೆಯನ್ನು ಆಡುತ್ತ ಆಡುತ್ತ ಬೆಳೆಸುವಾಗ ಉಂಟಾದ ಸಹಜ ವರ್ಗಗಳಾವುವು ಮತ್ತು ಅವು ಹಾಗೇಕೆ ಉಂಟಾದವು ಎಂಬಂತಹ ಸಹಜ ಪ್ರಶ್ನೆಗಳು ಕಿಟೆಲನಂತಹವರನ್ನು ಕಾಡಿದವು. ಇದರ ಪರಿಣಾವಾಗಿ, ಕನ್ನಡಕ್ಕೆ ಮಾತ್ರವಲ್ಲ ದ್ರಾವಿಡ ಭಾಷೆಗಳಿಗೇ ಅನ್ವಯಿಸುವಂತಹ ಹಲವು ನಿಯಮಗಳು ಅನಾವರಣಗೊಂಡವು. ಕ್ರಿಯೆಯನ್ನೂ ಹೆಸರನ್ನೂ ಒಟ್ಟೊಟ್ಟಿಗೆ ಸೂಚಿಸಲು ಸಮರ್ಥವಾಗಿದ್ದ ಭಾವನಾಮಗಳೇ ಕನ್ನಡದ ಮೊದಲ ಪದಭಂಡಾರ, ಬೃಹತ್ತಾಗಿ ಬೆಳೆದ ಇಂದಿನ ಕನ್ನಡ  ಪದಕೋಶವನ್ನು ಹದಿಮೂರು ಪದವರ್ಗಗಳಾಗಿ ವರ್ಗೀಕರಿಸಬಹುದು - ಇವು ಅಂತಹವುಗಳಲ್ಲಿ ಮುಖ್ಯವಾದವು. ಪದಗಳನ್ನು ವರ್ಗೀಕರಿಸಲು ಕಿಟೆಲ್ ಉಪಯೋಗಿಸಿರುವ ತರ್ಕಗಳು ಮೂರು. 1. ಪದಗಳಿಗೆ ಪ್ರತ್ಯಯಗಳು ಹತ್ತುವುದು ಅಥವ ಹತ್ತದಿರುವುದು 2. ವಾಕ್ಯದಲ್ಲಿ ಪದದ ಕಾರ್ಯ ಮತ್ತು 3. ಪದದ ಅರ್ಥ. ಈ ಆಧಾರದಲ್ಲಿ ಪದಗಳನ್ನು ವರ್ಗೀಕರಿಸುವ ಪರಿ ಇಂದಿಗೂ ಅರ್ಥಪೂರ್ಣವಾಗಿವೆ. ಈ ಎಲ್ಲ ಬೆಳವಣಿಗೆಗಳಿಂದ ಮತ್ತು ಈ ವ್ಯಾಕರಣಕಾರರಿಂದ ಪ್ರೇರಿತರಾಗಿ ಹಲವರು ದೇಶೀಯರು ಮತ್ತಷ್ಟು ವ್ಯಾಕರಣಗ್ರಂಥಗಳನ್ನು ರಚಿಸಿದರು. ಹೀಗೆ ಹತ್ತೊಂಬತ್ತನೆಯ ಶತಮಾನವು ಕನ್ನಡ ವ್ಯಾಕರಣದ ಆಡುಂಬೊಲದಲ್ಲಿ ಹೊಸ ಚಿಂತನೆಗಳನ್ನು ನೆಡುವಲ್ಲಿ ಸಮರ್ಥವಾಯಿತು.  ಇನ್ನೊಂದು ಕಡೆಯಿಂದ ಶಾಲೆಗಳ ಉಪಯೋಗಕ್ಕಾಗಿ ಮತ್ತು ಮುಂದುವರಿದ ಅಭ್ಯಾಸಕ್ಕಾಗಿ ಕನ್ನಡ ವ್ಯಾಕರಣಗಳನ್ನು ಈ ಅವಧಿಯಲ್ಲಿ ಬರೆದವರು ಅಷ್ಟವರ್ಗೀಕರಣವನ್ನೇ ಹೆಚ್ಚಾಗಿ ಅವಲಂಬಿಸಿದ್ದು ಈ ಪರಂಪರೆ ಇಂದಿಗೂ ಮುಂದುವರೆಯುತ್ತಿದೆಯಾದರೂ ಕನ್ನಡ ವ್ಯಾಕರಣ ಚೌಕಟ್ಟು ಕನ್ನಡದ್ದೇ ಆಗಿರಬೇಕೆಂಬ ಕಾಳಜಿ ಬೆಳೆಯ ತೊಡಗಿದೆ.
           
ಗ್ರಂಥ ಋಣ:
1.…………..  ಕನ್ನಡ ಬಾಲ ವ್ಯಾಕರಣ. ಇಪ್ಪತ್ತಾರನೆಯ ಆವೃತ್ತಿ 1952.(ಮಂಗಳೂರು: ಬಾಸೆಲ್ ಮಿಶನ್ ಪ್ರೆಸ್). ಪ್ರಥಮ ಆವೃತ್ತಿ 1862
2.…………..  ಕನ್ನಡ ಶಾಲಾ ವ್ಯಾಕರಣ. ಹನ್ನೆರಡನೆಯ ಆವೃತ್ತಿ 1920. (ಮಂಗಳೂರು: ಬಾಸೆಲ್ ಮಿಶನ್ ಪ್ರೆಸ್). ಪ್ರಥಮ ಆವೃತ್ತಿ 1862
3.BEMS:           Basel Evangelical Mission Service Reports
4.ಕೃಷ್ಣಮಾಚಾರ್ಯ, ಶ್ರೀರಂಗಪಟ್ಟಣದ, 1838. ಹೊಸಗನ್ನಡ ನುಡಿಗನ್ನಡಿ (ಮದ್ರಾಸು) ಬೆರಳಚ್ಚು ಪ್ರತಿ
5.ಕಿಟೆಲ್, ಫರ್ಡಿನಂದ್,  1903. ಎ ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ ಇನ್ ಇಂಗ್ಲಿಷ್ ಕಾಂಪ್ರೈಸೀಂಗ್ ದಿ ತ್ರೀ ಡಯಲಕ್ಟ್ಸ್
                             ಬಾಸೆಲ್ ಮಿಶನ್ ಬುಕ್ ಅಂಡ್ ಟ್ರ್ಯಾಕ್ ಡೆಪಾಸಿಟರಿ, ಮಂಗಳೂರು
6.ಕೇರಿ, ವಿಲಿಯಮ್,   1817.  ಎ ಗ್ರಾಮರ್ ಆಫ್ ದಿ ಕುರ್ನಾಟ ಲ್ಯಾಂಗ್ವೇಜ್, ಸೆರಾಂಪುರ ( ಕುರ್ನಾಟ ಭಾಷೆಯ ವ್ಯಾಕರಣ )
7.ಗ್ರೇಟರ್, ಬಿ,         1884.  ಟೇಬಲ್ಸ್ ಆಫ್ ಕ್ಯಾನರೀಸ್ ಲ್ಯಾಂಗ್ವೇಜ್    (ಕನ್ನಡ ವ್ಯಾಕರಣ ಮಾಲೆ)
                                                ಬಾಸೆಲ್ ಮಿಶನ್ ಬುಕ್ ಅಂಡ್ ಟ್ರ್ಯಾಕ್ ಡೆಪಾಸಿಟರಿ, ಮಂಗಳೂರು
8.ಜೀಗ್ಲರ್, ಫ್ರೀಡ್ರಿಶ್,   1876.           ಎ ಪ್ರಾಕ್ಟಿಕಲ್ ಕೀ ಟು ದಿ ಕ್ಯಾನರೀಸ್ ಲ್ಯಾಂಗ್ವೇಜ್( ಕನ್ನಡ ಭಾಷೆ ಕಲಿಯುವವರಿಗೆ ಸಹಾಯವು,)
                                    ಬಾಸೆಲ್ ಮಿಶನ್ ಬುಕ್ ಅಂಡ್ ಟ್ರ್ಯಾಕ್ ಡೆಪಾಸಿಟರಿ, ಮಂಗಳೂರು
9.ಮೂಡು ಭಟ್ಕಳ, ಎ ಎಸ್, 1898. A Modern Canarese Grammar Explained in English (ಇಂಗ್ಲಿಷ್ ಭಾಷೆಯಲ್ಲಿ ಬರೆದ
                                                 ಹೊಸಗನ್ನಡ ವ್ಯಾಕರಣವು)  ಮೊಹಮದನ್ ಪ್ರಿಂಟಿಂಗ್ ಪ್ರೆಸ್,1899 ಕಾರವಾರ
10.ಅಂತರ್ಜಾಲತಾಣ:http://books.google.co.in & “http://static.my-shop.ru/product/pdf/91/903905.pc”
11.ಮೆಕೆರೆಲ್, ಜಾನ್, 1820.   ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್(ಮದ್ರಾಸು)    ಕರ್ನಾಟಕ ಭಾಷೆಯ ಒಂದು ವ್ಯಾಕರಣ
12.ವುರ್ತ್, ಜಾರ್ಜ್, 1866.    ಎ ಶಾರ್ಟ್ ಗ್ರಾಮರ್ ಆಫ್ ದಿ ಏನ್ಶಂಟ್ ಡಯಲಕ್ಟ್ ಆಫ್ ಕ್ಯಾನರೀಸ್ ಲ್ಯಾಂಗ್ವೇಜ್ (ಹಳೆ    ಕನ್ನಡದ ಸಂಕ್ಷೇಪ  
              ವ್ಯಾಕರಣ ಸೂತ್ರಗಳು,)  ಬಾಸೆಲ್  ಮಿಶನ್ ಪ್ರೆಸ್, ಮಂಗಳೂರು. ಮೂಲಪ್ರತಿ ಲಂಡನ್ನಿನ ಬ್ರಿಟಿಶ್ ಮ್ಯೂಸಿಯಮ್ ನಲ್ಲಿ ಲಭ್ಯ  
13.ಹಾಡ್ಸನ್, ಥಾಮಸ್, 1859. ಅನ್ ಎಲಿಮೆಂಟರಿ ಗ್ರಾಮರ್ ಆಫ್ ದಿ ಕನ್ನಡ ಆರ್ ಕ್ಯಾನರೀಸ್ ಲ್ಯಾಂಗ್ವೇಜ್
                                       (ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣ) ವೆಸ್ಲಿಯನ್ ಮಿಶನ್ ಪ್ರೆಸ್, ಬೆಂಗಳೂರು
14.ಹಾವನೂರ, ಶ್ರಿನಿವಾಸ, 1974. ಹೊಸಗನ್ನಡ ಅರುಣೋದಯ  (ಮೈಸೂರು, ವಿ. ವಿ. ಕನ್ನಡ ಅಧ್ಯಯನ ಸಂಸ್ಥೆ)    
15. ಮಹೀದಾಸ, ಬಿ  ವಿ. 1997. ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು    ಯುಗಪುರುಷ ಪ್ರಕಟಣಾಲಯ,ಕಿನ್ನಿಗೋಳಿ ದ ಕ
         



    

No comments:

Post a Comment