Search This Blog

Saturday, 3 October 2015

ಬರುತಿದೆ ಹೊಸ ಶಿಕ್ಷಣ ನೀತಿ
                               

ಎಲ್ಲ ಮಕ್ಕಳೂ ಶಾಲೆಗೆ ಸೇರಬೇಕು ಮತ್ತು ಶಾಲೆಗೆ ಸೇರಿದ ಎಲ್ಲ ಮಕ್ಕಳೂ ನಿಗದಿಗೊಳಿಸಿದಷ್ಟು ಮಟ್ಟಕ್ಕೆ ಕಲಿಯಬೇಕು ಎಂಬುದು ಎಷ್ಟೋ ವರ್ಷಗಳಿಂದ ನಾವು ಬೆನ್ನು ಹತ್ತಿರುವ ಒಂದು ಗುರಿ. ಆದರೆ ಇದರಲ್ಲಿ ಯಶಸ್ಸು ಇನ್ನೂ ಒಂದು ಮರೀಚಕೆಯಾಗಿಯೇ ಉಳಿದಿದೆ. ಎಲ್ಲ ಅರ್ಹ ಮಕ್ಕಳನ್ನೂ ಪ್ರಾಥಮಿಕ ಶಾಲೆಯೊಳಗೆ ತರುವ ಪ್ರಯತ್ನಗಳು ಗುರಿಯಂಚನ್ನು ತಲುಪಿವೆ. ಗುಣಮಟ್ಟದ ಶಿಕ್ಷಣವಿನ್ನೂ ದೂರದಲ್ಲಿದೆ. ಐದನೆಯ ವರ್ಗದ ಮಕ್ಕಳಿಗೆ ಎರಡನೆಯ ವರ್ಗದ ಕನ್ನಡ ಪುಸ್ತಕವನ್ನೂ ಸುಲಲಿತವಾಗಿ ಓದಲು ಸಾಧ್ಯವಾಗುತ್ತಿಲ್ಲವೆಂಬ, ಸಾಮಾನ್ಯ ಕೂಡುವ ಕಳೆಯುವ ಲೆಕ್ಕಗಳನ್ನೂ ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಸಂಗತಿಗಳು ಬೆಳಕಿಗೆ ಬರುತ್ತಿದ್ದು ಶಿಕ್ಷಣ ಕಾಯಕದಲ್ಲಿ ತೊಡಗಿರುವವರಿಗೆಲ್ಲ ಸವಾಲಾಗಿ ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರಗಳನ್ನು ರೂಪಿಸುತ್ತ ಅನುಷ್ಠಾನಗೊಳಿಸುತ್ತಾ ಸ್ವಲ್ಪ ಸ್ವಲ್ಪವೇ ಪ್ರಗತಿಯಾಗುತ್ತಿದೆ. ಆದರೆ ಗುಣಮಟ್ಟದಲ್ಲಿ ಗುರಿ ಇನ್ನೂ ದೂರದಲ್ಲಿ ಮಾತ್ರ ಕಾಣುವ ಆದರ್ಶವಾಗಿದೆ.  ಹೊಸ ಸರಕಾರಗಳು ಅಧಿಕಾರವನ್ನು ವಹಿಸಿಕೊಂಡಾಗಲೆಲ್ಲ ಈ ಸಮಸ್ಯೆಯನ್ನು ಪರಿಹರಿಸಿಯೇ ತೀರಬೇಕೆಂಬ ಛಲದೊಂದಿಗೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೆ ತರಲು ಕಾಳಜಿ ತೋರಿಸುತ್ತವೆ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರವೂ ಮತ್ತೆ ಛಲಬಿಡದ ವಿಕ್ರಮಾದಿತ್ಯನಂತೆ ಹೊಸ ಶಿಕ್ಷಣ ನೀತಿಯ್ನು ರೂಪಿಸಲು ಪ್ರವೃತ್ತಿಸಿದೆ. ಈಗಿನ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಇವುಗಳನ್ನು ಪ್ರಸ್ತಾಪಿಸಿ, ಪ್ರತಿಸ್ಪಂದಿಸಲು ಒಂದು ಪ್ರಶ್ನಾವಳಿಯನ್ನೂ ಸಿದ್ಧಪಡಿಸಿ National Policy of Education 2015 ಎಂಬ ಶೀರ್ಷಿಕೆಯೊಂದಿಗೆ ಅಂತರ್ಜಾಲದಲ್ಲಿ ಪ್ರಕಟಿಸಿದೆ. ರಾಜ್ಯಗಳಿಂದ ಈ  ಬಗ್ಗೆ ಸಲಹೆಗಳನ್ನು ಕಳುಹಿಸ ಬೇಕಾಗಿದೆ. ಇವುಗಳನ್ನು ಆಸಕ್ತರು ಪರಿಶೀಲಿಸಿ ತಮ್ಮಅಭಿಪ್ರಾಯಗಳನ್ನು ಕರ್ನಾಟಕಸರಕಾರದ ಶಿಕ್ಷಣ ಇಲಾಖೆಯೊಂದಿಗೆ ಹಂಚಕೊಳ್ಳಬಹುದಾಗಿದೆ. ಅಂತರ್ಜಾಲ ತಾಣದಲ್ಲಿ ಪ್ರಸ್ತಾವಿಸಲಾದ ಅಂಶಗಳ ಒಂದು ಸ್ಥೂಲ ಪರಿಚಯ ಇಲ್ಲಿದೆ.
ಶಿಕ್ಷಣ ಪ್ರಕ್ರಿಯೆಯ ಯಾವ ಯಾವ ಅಂಶಗಳಲ್ಲಿ ಸುಧಾರಣೆಗಳನ್ನು ತರಬೇಕು, ಯಾವುಗಳನ್ನು ಕೈಬಿಡುವುದು ಉಚಿತ ಯಾವುಗಳನ್ನು ಹೊಸದಾಗಿ ಸೇರಿಸಬೇಕು, ಇವುಗಳನ್ನೆಲ್ಲ ಆಮೂಲಾಗ್ರವಾಗಿ ಚಿಂತಿಸುವದು ಈ ನಿಟ್ಟಿನಲ್ಲಿಅಗತ್ಯ. ಶಿಕ್ಷಣದ ಸಾರ್ವತ್ರೀಕರಣ ಹೇಗೆ, ಪ್ರತಿ ತರಗತಿಯಲ್ಲಿ ನಿರೀಕ್ಷಿಸಬೇಕಾದ ಸಾಧನೆಯ ಮಟ್ಟಗಳೇನು, ಅವುಗಳನ್ನು ತಲುಪಲು ಇರುವ ಅಡೆತಡೆಗಳಾವುವು, ಅವುಗಳನ್ನು ಮೀರಲು ಯಾವ ತಂತ್ರಗಳನ್ನು ಅನುಸರಿಸಬೇಕು ಇಂತಹ ವಿಷಯಗಳನ್ನೆಲ್ಲ ಶಿಕ್ಷಣ ನೀತಿಯನ್ನು ರೂಪಿಸುವಾಗ ಗಮನಿಸಲೇಬೇಕಾಗುತ್ತದೆ. ಇವುಗಳೆಲ್ಲದರ ಜೊತೆಗೆ ಪ್ರಾಥಮಿಕ ಶಾಲೆಗಳಲ್ಲಿ ಅನುಸರಿಸಲಾಗುತ್ತಿರುವ ಪ್ರಸ್ತುತ ಬೋಧನಾ ಕಲಿಕಾ ಪ್ರಕ್ರಿಯೆಗಳ ಪರಿಶೀಲನೆ ಮತ್ತು ಹೊಸ ವಿಧಾನಗಳ ಶೋಧವೂ ತುರ್ತು ಅಗತ್ಯ. ಮಕ್ಕಳ ಸಾಧನೆ ಏಕೆ ಅಪೇಕ್ಷಿತ ಮಟ್ಟವನ್ನು ತಲುಪುವುದಿಲ್ಲವೆಂಬ ಯಕ್ಷಪ್ರಶ್ನೆಗೆ  ವೈಜ್ಞಾನಿಕಕಾರಣಗಳನ್ನು ಹುಡುಕಿ ಪರಿಹರಿಸುವುದು ಮೊದಲ ಅವಶ್ಯಕತೆ. ಹೊಸ  ತಂತ್ರಜ್ಞಾನಗಳ ಲಭ್ಯತೆ, ಬದಲಾದ ಸಾಮಾಜಿಕ ವಾತಾವರಣ. ವೈಶ್ವಿಕ ಸಂಬಂಧಗಳ ಹೊಸ ಆಯಾಮ ಇಂತಹವುಗಳ ಹಿನ್ನೆಲೆಯಲ್ಲಿ ಈ ಹುಡಕಾಟ ನಡೆಯಬೇಕಾಗುತ್ತದೆ. ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದ ಕೊರತೆಗಳನ್ನು ಗುರುತಿಸಿ ಅವುಗಳನ್ನು ನೀಗಲು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಶಾಲಾ ಅಧ್ಯಾಪಕರುಗಳು ಇಂತಹವಗಳಿಗೆಲ್ಲ ತೆರೆದಕೊಳ್ಳಲು ವೇದಿಕೆ ನಿರ್ಮಾಣವಾಗಬೇಕು. ಇಂತಹ ಕ್ರಮಗಳು ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತವೆ. ಸೃಜನಶೀಲ ಶಿಕ್ಷಕರು, ಸಮಾಜಕ್ಕೆ ಮತ್ತು ವಿದ್ಯಾರ್ಥಿ ಆಸಕ್ತಿಗಳಿಗೆ ಪ್ರಸ್ಗತುತವಾದ ಪಠ್ಯಕ್ರಮ ಮತ್ತು ಪಠ್ಯವಸ್ತು, ಮತ್ತು ನವೀನ ಅಧ್ಯಾಪನ ವಿಧಾನಗಳು – ಇವು ಮಕ್ಕಳ ಕಲಿಯುವಿಕೆಯ ಮೇಲೆ ವಿಶೇಷ ಪ್ರಭಾವವನ್ನುಂಟುಮಾಡುತ್ತವೆ.
            ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣವು ಹೆಚ್ಚು ಕಡಿಮೆ ಸಾಧಿತವಾಗಿರುವುದರಿಂದ ಪ್ರೌಢಶಿಕ್ಷಣ ಸಾರ್ವತ್ರೀಕರಣವು ಮುಂದಿನ ತರ್ಕಬದ್ಧ ಹಂತ. ಅಗತ್ಯವಿರುವಲ್ಲೆಲ್ಲ ಪ್ರೌಢಶಾಲೆಗಳನ್ನು ಸ್ಥಾಪಿಸುವದು ಮತ್ತು  ಎಂಟರಿಂದ ಹತ್ತನೆಯ ವರ್ಗಕ್ಕೆ ಅರ್ಹರಾದ ಎಲ್ಲ ಮಕ್ಕಳಿಗೆ ಇಲ್ಲಿ ಅವಕಾಶ ಕಲ್ಪಿಸಿ ನಿಗದಿತ ಗುಣಮಟ್ಟದ ಶಿಕ್ಷಣವನ್ನು ಅಲ್ಲಿ ನೀಡಬೇಕೆಂಬುದು ಇದರ ಅರ್ಥ. ಇದು ಪ್ರಾಥಮಿಕ ಹಂತವನ್ನು ಪಸರಿಸಿದ್ದಕ್ಕಿಂತ ಭಿನ್ನವೂ ಕ್ಲಿಷ್ಟವೂ ಆದುದಾಗಿದೆ. ಆರ್ ಎಮ್ ಎಸ್ ಎ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಬೇಕಾಗಿದೆ.
                     ಇವಿಷ್ಟೇ ಅಲ್ಲ. ವೃತ್ತಿ ಶಿಕ್ಷಣವನ್ನು ಬಲಪಡಿಸಬೇಕಾಗಿದೆ. ಜನಸಂಖ್ಯೆಯ ಸು. ಶೇ.10 ಭಾಗ ಮಾತ್ರ ಔಪಚಾರಿಕ ದುಡಿಮೆ ಕ್ಷೇತ್ರದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಇದು  ವೃತ್ತಿ ಶಿಕ್ಷಣದ ಪ್ರಾಮುಖ್ಯವನ್ನೂ ಅನಿವಾರ್ಯತೆಯನ್ನೂ ಎತ್ತಿ ತೋರಿಸುತ್ತದೆ. ಶಿಕ್ಷಣದ ಮುಖ್ಯವಾಹಿನಿಯ ಜೊತೆಗೆ ಇದನ್ನು ಹೇಗೆ ಸಮನ್ವಯಗೊಳಿಸಬೇಕೆಂಬುದೂ ತುಂಬ ಮುಖ್ಯವಾಗಿದೆ.
                    ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವ ವೃದ್ಧಿ ಸಾಧಿಸಲು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಬಲಪಡಿಸಬೇಕಾಗಿದೆ. ಅನವಶ್ಯಕವಾಗಿ ಸ್ಪರ್ಧಾ ವಾತಾವರಣವಿಲ್ಲದಂತೆ ಮಾಡುವದು ಇದರ ಒಂದು ಪ್ರಮುಖ ಆವಶ್ಯಕತೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಕ್ರಮಗಳು ಪ್ರಚಲಿತವಿವೆ.  ಮಗುವಿನ ಸಂಕ್ಷಿಪ್ತವಿವರಗಳನ್ನು ದಾಖಲಿಸುವುದು, ಸಂಚಿತ ದಾಖಲೆಗಳನ್ನು ನಿರ್ವಹಿಸುವುದು, ಮಗುವಿನ ಜ್ಞಾನ ಮತ್ತು ಜ್ಞಾನಮಟ್ಟ ಇವುಗಳನ್ನು ಅಳೆಯಲು ವೈವಿಧ್ಯಮಯ ಚಟುವಟಿಕೆಗಳು, ವ್ಯಕ್ತಿತ್ವವನ್ನು ನಿರೂಪಿಸುವುದಕ್ಕಾಗಿ ವೀಕ್ಷಣೆ, ಪ್ರಶ್ನಿಸುವಿಕೆ ಇತ್ಯಾದಿ ಉಪಕರಣಗಳ ಬಳಕೆ, ಇತ್ಯಾದಿಗಳು ಇಂತಹ ಕ್ರಮಗಳಾಗಿದ್ದು ಇವುಗಳನ್ನು ಮೊನಚುಗೊಳಿಸುವ ಕಾರ್ಯವೂ ಆಗಬೇಕಿದೆ. ಇವುಗಳನ್ನು ಪೋಷಕರೊಡನೆ ಹಂಚಿಕಂಡು ಮಗುವಿನ ಬೆಳವಣಿಗೆಯಲ್ಲಿ ಸೂಕ್ತವಾಗಿ ಬಳಸುವುದು ಹೇಗೆಂಬ ಬಗ್ಗೆಯೂ ಚಿಂತಿಸಬೇಕಿದೆ.                                                                                                                                                      ಕೆಲಸ ಮಾಡುತ್ತಿರುವ ಅಧ್ಯಾಪಕರ ಮತ್ತು ತರಬೇತಿಯಲ್ಲಿರುವ ಅಧ್ಯಾಪಕರ ಗುಣ ಮಟ್ಟದ ಬಗ್ಗೆಯೂ ಪ್ರಶ್ನೆಗಳಿವೆ. ಇಲ್ಲೆಲ್ಲ ವೃತ್ತಿಪರತೆ ಸಾಕಷ್ಟಿಲ್ಲವೆನ್ನಲಾಗುತ್ತಿದೆ. ಕೊನೆಯ ಪಕ್ಷ ಸಮಾಜ ಇವರ ವೃತ್ತಿ ಪರತೆಯನ್ನು ಒಪ್ಪಿಕೊಂಡಿಲ್ಲ. ಶಿಕ್ಷಕ ತರಬೇತಿ ಕೇಂದ್ರಗಳಲ್ಲಿ ಸೌಲಭ್ಯದ ಕೊರತೆ ಇರುವುದು ಸುಳ್ಳೇನಲ್ಲ. ತರಬೇತಿಯಲ್ಲಿ ಹೇಳಲಾಗುತ್ತಿರುವ ವಿಧಾನಗಳು ಮತ್ತು ತರಗತಿಗಳಲ್ಲಿ ಕಂಡುಬರುವ ಆಚರಣೆಗಳ ನಡುವೆ ಅಂತರ, ಅಧ್ಯಾಪಕರ ಗೈರು,  ಅಧ್ಯಾಪಕರನ್ನು ಶೈಕ್ಷಣಿಕವಲ್ಲದ ಉದ್ದೇಶಗಳಿಗೆ ಹಚ್ಚುವುದು – ಇಂತಹವುಗಳಿಗೆಲ್ಲ ಸೂಕ್ತ ಪರಿಹಾರಗಳನ್ನು ಹುಡುಕಬೇಕಿದೆ. ಸರಕಾರವು ಶಿಕ್ಷಕರ ಅರ್ಹತಾ ಪರೀಕ್ಷೆಗಳನ್ನು ನಿಗದಗೊಳಿಸಿದ್ದು ಇದರ ಬಗ್ಗೆಯೂ ಅಪಸ್ವರಗಳವೆ.
        ಶಿಕ್ಷಣದಲ್ಲಿ ಲಿಂಗ ತಾರತಮ್ಯ, ಪ್ರಾದೇಶಿಕ ಹಾಗೂ ಸಾಮಾಜಿಕ ಅಸಮತೆ ಇಂದಿಗೂ ಸಂಪೂರ್ಣವಾಗಿ ಮರೆಯಾಗಿಲ್ಲ ಮತ್ತು ಇದಕ್ಕೆ ಸರಿಯಾದ ಪರಿಹಾರೋಪಾಯಗಳನ್ನೂ ರೂಪಿಸಬೇಕಾಗಿದೆ. ವಯಸ್ಕ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕಾಗಿದೆ.
ಶಾಲೆಗಳಲ್ಲಿ ಅಧ್ಯಾಪನಕ್ಕಾಗಿ ತಂತ್ರಜ್ಞಾನದ ಬಳಕೆ ಇನ್ನೂ ಸಾರ್ವತ್ರಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆಯಾಗಬೇಕಾಗಿದೆ. ಅನೇಕ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡಿನಂತಹ ಸೌಲಭ್ಯಗಳಿದ್ದರೂ ಒಂದೋ ಅವುಗಳನ್ನು ಬಳಸುತ್ತಲೇ ಇಲ್ಲ ಅಥವ ಪರಿಣಾಮಕಾರಿಯಾಗಿ ಬಳಸುತ್ತಿಲ್ಲ. ತಂತ್ರ ಜ್ಞಾನದ ಸಮರ್ಪಕ ಬಳಕೆ  ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವುದು ಮಾತ್ರವಲ್ಲದೆ ಕಲಿಕೆ ಉತ್ತಮವಾಗುವಂತೆಯೂ ಮತ್ತು ಅವರನ್ನು ತಂತ್ರಜ್ಞಾನ ಸಮರ್ಥರಾಗುವಂತೆಯೂ  ಮಾಡುತ್ತದೆ.
ಈಚೆಗೆ ಶಿಕ್ಷಣ ಗುಣ ಮಟ್ಟವನ್ನು ಸುಧಾರಿಸುವ ಕ್ರಮವಾಗಿ ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಣ ಮಸೂದೆಗನುಗುಣವಾಗಿ ನೇಮಿಸಲು ಕ್ರಮಕೈಗೊಂಡಿದೆ ಎನ್ನಲಾಗುತ್ತಿದೆ. ಇಂತಹಕ್ರಮಗಳು ಎಷ್ಟು ಪರಿಣಾಮಕಾರಿಯಾಗಿವೆ ಮತ್ತು ವಿಷಯವಾರು ಅಧ್ಯಾಪನಕ್ಕೆ ಎಷ್ಟು ಸಹಕಾರಿಯಾಗಿವೆ ಎಂಬುದನ್ನು ಸಮೀಕ್ಷಿಸಿ  ಅಗತ್ಯವಿದ್ದಲ್ಲಿ ಸರಿಪಡಿಸುವ ಪ್ರಯತ್ನಗಳಾಗಬೇಕಿದೆ. ಹತ್ತನೆಯ ವರ್ಗದಲ್ಲಿ ನಪಾಸಾಗುತ್ತಿರುವವರು ಗಣಿತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿಫಲರಾಗು ತ್ತಿರುವುದರಿಂದ ಈ ವಿಷಯಗಳ ಬೋಧನೆ ಬಗ್ಗೆ ವಿಶೇಷ ಗಮನ ಅಗತ್ಯ.
ಮಗುವಿನ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ಅಕ್ಷರ ಮತ್ತು ಪಾಂಡಿತ್ಯಕ್ಕೆ ಸಂಬಂಧಿಸಿದ ಭಾಷೆ, ವಿಜ್ಞಾನ, ಗಣಿತ, ಮುಂತಾದ ವಿಷಯಗಳಲ್ಲದೆ ದೈಹಿಕ ಶಿಕ್ಷಣ, ಕಲೆಗಳು ಇಂತಹ ವಿಷಯಗಳ ಕಲಿಕೆಯೂ ಪರಿಣಾಮಕಾರಿಯಾಗಬೇಕಾಗಿದೆ. ಇವುಗಳಿಗಾಗಿ ಮೂಲ ಸೌಲಭ್ಯಗಳು, ಅಧ್ಯಪನಾ ಪದ್ಧತಿಗಳು, ಮತ್ತು ಮೌಲ್ಯಮಾಪನಾ ಉಪಕರಣಗಳು ಇವುಗಳ ಬಗ್ಗೆಯೂ ಆಮೂಲಾಗ್ರವಾಗಿ ಚರ್ಚಿಸಬೇಕಾಗಿದೆ.
ಶಿಕ್ಷಣ ಮಾಧ್ಯಮ, ಕಲಿಸಬೇಕಾದ ಭಾಷೆಗಳೆಷ್ಟು ಮತ್ತು ಯಾವುವು ಇಂತಹ ವಿಷಯಗಳು ಕೂಡ ಬಹುಚರ್ಚೆಗೆ ಒಳಗಾಗುತ್ತಿವೆ. ಈ ಬಗ್ಗೆ ಕೂಡ ನೀತಿ ನಿರೂಪಕರು ಗಮನ ಹರಿಸುವುದು ಅಗತ್ಯ. ಬದಲಾದ ಸಾಮಾಜಿಕ ವಾತಾವರಣದಲ್ಲಿ ಇಂಗ್ಲಿಷ್ ಮಾಧ್ಯಮದ ಬಗ್ಗೆ ಒಲವು ಸಮಾಜದಲ್ಲಿ ಅಧಿಕಗೊಳ್ಳುತ್ತಿದ್ದು ಅವಕಾಶಗಳನ್ನು ದಕ್ಕಿಸಕೊಳ್ಳುವದು ಮತ್ತು ನಮ್ಮತನವನ್ನು ಉಳಿಸಿಕೊಳ್ಳುವುದು ಇವುಗಳ ನಡುವೆ ಸಮನ್ವಯವನ್ನು ಸಾಧಿಸಬೇಕಾಗಿದೆ.
ಶೈಕ್ಷಣಕ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ವಾತಾವರಣ, ದರ್ಪರಹಿತ ಸೌಹಾರ್ದಮಯ ವ್ಯವಹಾರ, ಸಮರ್ಪಕ ಮಾನವ ಸಂಪನ್ಮೂಲ ಅಳವಡಿಸುವುದು, ಕಾರ್ಯಗಳ ಸೂಕ್ತ ಹಂಚಿಕೆ ಇಂತಹವಗಳೂ ಪರಿಣಾಮ ಬೀರುವಂತಹವೆ. ವರ್ಷಾಂತರದಲ್ಲಿ ಈ ನಿಟ್ಟಿನಲ್ಲಿ ಹಲವು ಬದಲಾವಣೆಗಳಾಗಿವೆ. ಆಡಳಿತದಲ್ಲಿ ವಿಕೇಂದ್ರೀಕರಣ, ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ಕ್ರಮ, ವೇತನ ಸಂಬಂಧೀ ಸೌಲಭ್ಯಗಳಿಗಾಗಿ ಎಚ್ ಆರ್ ಎಮ್ ಎಸ್ ಇಂತಹ ಹಲವು ಕ್ರಮಗಳನ್ನು ಅಳವಡಿಸಲಾಗಿದೆ. ಅದಾಗ್ಯೂ ಇನ್ನೂ ಸುಧಾರಣೆಗಳಾಗಬೇಕಾಗಿದ್ದು ಶಿಕ್ಷಣ ನೀತಿ ಈ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕಾಗಿದೆ.
ಹೊಸ ಶಿಕ್ಷಣ ನೀತಿಯೊಂದು ರೂಪುತಳೆಯುತ್ತಿದೆ. ಈಗ ಅಧ್ಯಾಪಕ ಸಂಘಗಳು ಜಾಗೃತರಾಗಬೇಕಾಗಿದೆ.  ಹೊಸ ಶಿಕ್ಷಣ ನೀತಿ ಹೇಗಿರಬೇಕೆಂಬ ಬಗ್ಗೆ ತಮ್ಮ ಅನುಭವ ಮತ್ತು ಜ್ಞಾನಗಳನ್ನು ಬಳಸಿ ಸ್ಪಷ್ಟ ನಿಲುವನ್ನು ಪ್ರತಿಪಾದಿಸಬೇಕಾಗಿದೆ. ದನಿ ಏರಿಸಿ ಸರಕಾರಕ್ಕೆಕೇಳಿಸಬೇಕಾಗಿದೆ. 

No comments:

Post a Comment