Search This Blog

Friday, 11 March 2016

ಕನ್ನಡ ನಿಘಂಟುಗಳ ವರ್ಗೀಕರಣದತ್ತ

 ನಿಘಂಟುಗಳ ವರ್ಗೀಕರಣ ನಿಘಂಟು ಶಾಸ್ತ್ರದ  ಒಂದು ನುಖ್ಯ ಅಂಗ. ಕನ್ನಡ ನಿಘಂಟುಗಳ  ಒಂದು ಸಮಗ್ರ ವರ್ಗೀಕರಣಕ್ಕೆ ಇಲ್ಲಿ ಪ್ರಯತ್ನಿಸಲಾಗಿದೆ:

                                             ಕನ್ನಡ ನಿಘಂಟುಗಳ ವರ್ಗೀಕರಣದತ್ತ
               
ಯಾವುದೇ ಶಾಸ್ತ್ರದಲ್ಲಿ ವಸ್ತುವಿಸ್ತಾರವಾದಂತೆ ವರ್ಗೀಕರಣವು ಒಂದು ಅನಿವಾರ್ಯ ಪ್ರಕಾರ್ಯು.ಭಾಷೆಗೆ ಸಂಬಂಧಿಸಿದಂತೆ ವಾಕ್ಯಗಳ ವರ್ಗೀಕರಣ, ಪದ-ಪ್ರ್ಯಯಗಳ ವರ್ಗೀಕರಣ, ಇತ್ಯಾದಿ ಎಷ್ಟೋ ಅಂಶಗಳು ಮೊದಲಿನಿಂದಲೇ ಖ್ಯಾತವಾಗಿವೆ. ಸಾಹಿತ್ಯಪ್ರಕಾರಗಳ ವರ್ಗೀಕರಣ, ಛಂದಸ್ಸುಗಳ ವರ್ಗೀಕರಣ, ಗಣಗಳ ವರ್ಗೀಕರಣ – ಹೀಗೆ ಅಧ್ಯಯನಾನುಕುಲೀ ವರ್ಗೀಕರಣಗಳು ಎಲ್ಲ ಶಾಸ್ತ್ರಗಳಲ್ಲೂ ಇವೆ. ನಿಘಂಟು ಶಾಸ್ತ್ರವೂ ಇದಕ್ಕೆ ಹೊರತಲ್ಲ. ವ್ಯಾಕರಣಗಳಲ್ಲಿ ಕಂಡುಬರುವ ಪದ-ಪ್ರತ್ಯಯ ವರ್ಗೀಕರಣಗಳನ್ನು ನಿಘಂಟುಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ನಿಘಂಟುಗಳ ಸಂಖ್ಯೆ ಬೆಳೆದಂತೆ ಮತ್ತು ವೈವಿಧ್ಯ ಹೆಚ್ಚಾದಂತೆ ನಿಘಂಟುಗಳ ವರ್ಗೀಕರಣ ಮತ್ತು ಪ್ರತಿಯೊಂದು ವಿಧದ ಲಕ್ಷಣನಿರ್ವಚನ ಅಗತ್ಯ ಮತ್ತು ಮುಖ್ಯವಾಗುತ್ತದೆ. ಪ್ರಪಂಚದ ಇತರೆಡೆಗಳಲ್ಲಿ ಪ್ರಥಮ ನಿಘಂಟುಗಳ ರಚನೆಯಾದ ಕಾಲಕ್ಕೂ ಕನ್ನಡದಲ್ಲಿ ಅವು ಜನ್ಮ ತಳೆದ ಕಾಲಕ್ಕೂ ಅಜಗಜಾಂತರವಿದೆ. ಚೀಣೀಯರು ಮತ್ತು ಸುಮೇರಿಯನ್ನರಲ್ಲಿ ಕ್ರಿ ಪೂ ಶತಮಾನಗಳಷ್ಟು ಪ್ರಾಚೀನ ಕಾಲದಲ್ಲಿಯೇ ನಿಘಂಟುಗಳ ರಚನೆಯಾಗಿದ್ದಿತೆಂದು ಉಲ್ಲೇಖಗಳಿವೆ. ಇಂಗ್ಲೀಷಿನಲ್ಲಿ ಕ್ರಿ ಶ ಹದಿನೈದನೆಯ ಶತನಾನದಲ್ಲೇ ಪ್ರಥಮ ನಿಘಂಟುಗಳು ರಚನೆಯಾಗಿದ್ದವು (Dictionary in Wikipaedia). ಕನ್ನಡದಲ್ಲಿ ನಿಘಂಟು ಎಂಬ ನಾಮಮಾತ್ರಕ್ಕೆ ಅರ್ಹವಾದ ಕೃತಿಗಳು ಹತ್ತನೆಯ ಶತಮಾನದವರೆಗೆ ರಚನೆಯಾಗಲಿಲ್ಲ. ಇಲ್ಲಿಂದ ಮುಂದಿನ ಬೆಳವಣಿಗೆಯಲ್ಲಿ  ಐವತ್ತಕ್ಕೂ ಹೆಚ್ಚು ಸಂಖ್ಯೆಯ ಕನ್ನಡ ನಿಘಂಟುಗಳು ಬಂದಿವೆ, ವೈವಿಧ್ಯವೂ ಉಂಟಾಗಿದೆ. ಅವುಗಳಲ್ಲಿ ಹಲವು ಬಗೆಯವು ಇವೆಯಾದರೂ ಪ್ರತಿಯಂದು ವಿಧದಲ್ಲಿ ಕೃತಿಗಳ ಸಂಖ್ಯೆ ಗಣನೀಯವಾಗಿಲ್ಲ; ಕೆಲವು ವಿಭಾಗಗಳ್ಲಿ ಒಂದೊಂದು ಮಾತ್ರ ಇವೆ. ವ್ಯಕ್ತಿಗೆ ತನಗೊಂದು ಅರ್ಥಸಂಬಂಧೀ ಜ್ಞಾನದ ಕೊರತೆಯುಂಟಾದಾಗ ತಾನು ಆರಿಸಿಕೊಳ್ಳಬೇಕಾದ ನಿಘಂಟು ಯಾವುದು ಎಂಬದನ್ನು ನಿರ್ಧರಿಸುವುದಕ್ಕಾಗಿ ವರ್ಗೀಕರಣದ ಅವಶ್ಯಕತೆ (ಸ್ವಾನಪೋಲ್: ಪು, 44) ಎಂಬ ಅಭಿಪ್ರಾಯವಿದ್ದು ಇದು ವರ್ಗೀಕರಣಪೂರ್ವದಲ್ಲಿ ಗಣನೀಯ ಸಂಖ್ಯೆಯ ನಿಘಂಟುಗಳಿರುವುದನ್ನು ಅಪೇಕ್ಷಿಸುತ್ತದೆ. ಈ ದೃಷ್ಟಿಯಿಂದ ಕನ್ನಡದಲ್ಲಿನಿಘಂಟುವರ್ಗೀಕರಣಕ್ಕೆ ಕಾಲ ಪಕ್ವವಾಗಿಲ್ಲ ಎನಿಸಬಹುದಾದರೂ ನಿಘಂಟು ಶಾಸ್ತ್ರದಲ್ಲಿ ವಿಶ್ವದ ಇತರೆಡೆ ಆಗಿರುವ ಬೆಳವಣಿಗೆಗಳ ಜೊತೆ ಸಮನ್ವಯಗೊಳಿಸಿ ನಮ್ಮ ಭಾಷೆಯಲ್ಲಿ ಶಾಸ್ತ್ರವನ್ನು ಬೆಳೆಸುವ ದೃಷ್ಟಿಯಿಂದ ಇದು ಅನಿವಾರ್ಯ. ಇಂತಹ ಕಾರ್ಯದಿಂದ ಒಟ್ಟಾರೆ ನಿಘಂಟು ಶಾಸ್ತ್ರದಲ್ಲಿ ಕನ್ನಡದ ಸ್ಥಾನ ಎಲ್ಲಿದೆ ಎಂಬುದೂ ಇದರಿಂದ ಕನ್ನಡದಲ್ಲಿ ಬೆಳೆಸಬೇಕಾದ ಕ್ಷೇತ್ರಗಳಾವುವು ಎಂಬುದೂ ಸ್ಪಷ್ಟವಾಗುತ್ತವೆ; ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಪ್ರಯೋಗಗಳು ಅಧಿಕೃತಗೊಳ್ಳುತ್ತವೆ ಮತ್ತು ಸ್ಥಿರವಾಗುತ್ತವೆ. ನಿರ್ದಿಷ್ಟ ಸಂದರ್ಭವೊಂದರಲ್ಲಿ ಯಾವ ನಿಘಂಟನ್ನು ಆರಿಸಿಕೊಳ್ಳಬಹುದೆಂಬ ಬಗ್ಗೆಯೂ ಹೊಳಹುಗಳು ಸಿಗುತ್ತವೆ.
                ವಿಶ್ವಮಟ್ಟದಲ್ಲಿ ಕೂಡ ನಿಘಂಟು-ವರ್ಗೀಕರಣ ಪದ್ಧತಿಯು ಸರ್ವಸಮ್ಮತವಾಗಿ ಮತ್ತು ಏಕಪ್ರಕಾರವಾಗಿ ಬಳಕೆಯಾಗುತ್ತಿಲ್ಲ. ನಿಘಂಟುವರ್ಗೀಕರಣಕ್ಕಾಗಿ ಹಲವು ಮಾನದಂಡಗಳ್ನು ಬಳಸಲಾಗುತ್ತಿದ್ದು ವಿಭಿನ್ನ ಜಾಡಿನಲ್ಲಿ ವರ್ಗಗಳನ್ನು ನಿರ್ವಚಿಸಲಾಗುತ್ತಿದೆ. ಹಲವರು ಕಾಲಾನುಕ್ರಮ ವರ್ಗೀಕರಣ ಮಾದರಿಯನ್ನು ಅನುಸರಿಸಿ ಮೂರು ವರ್ಗಗಳನ್ನು ಹೀಗೆ ವಿವರಿಸುತ್ತಾರೆ: (1) ನಿಘಂಟು ಪೂರ್ವಯುಗ (2) ಮೊದಲ ನಿಘಂಟುಗಳ ಯುಗ ಮತ್ತು (3) ನಿಘಂಟುಗಳ ಅಭಿವೃದ್ಧಿಯುಗ. ಅಸ್ಪಷ್ಟವೆನಿಸುವ ಪದಗಳಿಗೆ ಅರ್ಥಸ್ಪಷ್ಟನೆಗಾಗಿ ಚಿಕ್ಕ ಕೋಶಿಕೆಗಳು ಪ್ರಥಮ ಅವಧಿಯಲ್ಲಿ ಹುಟ್ಟಿಕೊಂಡವು. ಎರಡನೆಯ ಅವಧಿಯಲ್ಲಿ ಸಾಹಿತ್ಯಿಕ ಭಾಷೆಯ ಅಧ್ಯಯನಕ್ಕೆ ಪೂರಕವಾದ ನಿಘಂಟುಗಳ ರಚನೆಯಾಯಿತು. ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ  ಈ ಪ್ರಕಾರ್ಯ ನಡೆಯಿತು. ಮೂರನೆಯ ಅವಧಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ನಿಘಂಟುಗಳ ರಚನೆ ಪ್ರಾರಂಭವಾಯಿತು. ಭಾಷೆಯ ಪದಗಳನ್ನು ಸ್ಥಿರಗೊಳಿಸಿ ಭಾಷಾಸಂಸ್ಕೃತಿಯ ಬೆಳವಣಿಗೆಯನ್ನು ಸಾಧಿಸುವುದು ಈ ಪ್ರಕ್ರಿಯೆಯ ಒಂದು ಕಾರ್ಯ. ಹತ್ತೊಂತ್ತು ಮತ್ತು ಇಪ್ಪತ್ತನೆಯ ಶತಮಾನದ ಆದಿ ಭಾಗ ನಿಘಂಟುಗಳ ಈ ಮಹತ್ವದ ಬೆಳವಣಿಗೆಯ ತಿರುಳುಕಾಲ. ಅನಂತರ ಇಪ್ಪತ್ತನೆಯ ಶತಮಾದಲ್ಲಿ ಚಾರಿತ್ರಿಕವಾಗಿ ಪದಗಳ ಬೆಳವಣಿಗೆ, ಪದಗಳ ನಿಷ್ಪತ್ತಿ, ಇತರ ಭಾಷಾ ಪದಗಳೊಂದಿಗೆ ಆಯಾ ಪದದ ಸಂಬಂಧ ಇಂತಹ ಆಯಾಮಗಳನ್ನು ಒಳಗೊಳಿಸಿಕೊಂಡು ಭಾಷಿಕ ಸಂಶೋಧನೆಗೆ ಸಹಾಯಕ ನಿಘಂಟುಗಳ ರಚನೆ ಪ್ರಸ್ತುತವಾಯಿತು(http://encyclopedia2.thefreedictionary.com/Metalexicography).
ಮೊದಲನೆಯ ಕಾಲಘಟ್ಟದಲ್ಲಿ ನಿಘಂಟುಗಳ ಸ್ವರೂಪವು ಈಗಿನಷ್ಟು ಸ್ಪಷ್ಟವಾಗಿರಲಿಲ್ಲ.ಪ್ರಾಚೀನ ಕಾವ್ಯೇತಿಹಾಸಗಳನ್ನು ಓದುವಾಗ ಸಾಲುಗಳ ನಡುವೆ ಬರೆದುಕೊಂಡ ಪದಗಳ ಅರ್ಥಗಳನ್ನು ಪ್ರತ್ಯೇಕವಾಗಿ                 ಸಂಗ್ರಹಿಸಲು ಪ್ರಾರಭಿಸಿದ್ದೇ ಮೊದಲ ನಿಘಂಟುಗಳಾದುವೆಂದು ಹೇಳುತ್ತಾರೆ (http://grammar.about.com/od/il/g/lexicogterm.htm). ಇಂಗ್ಲಿಷ್ ಮತ್ತು ಲ್ಯಾಟಿನ್ ನಿಘಂಟುಗಳಿಗೆ ಸಂಬಂಧಿಸಿ ಹೇಳುವ ಈ ಮಾತನ್ನು ಕನ್ನಡಕ್ಕೂ ಅನ್ವಯಿಸುವುದು ಉಚಿತವಲ್ಲವೆಂದು ತೋರುತ್ತದೆ. ಇಂತಹ ಪಾದಮಧ್ಯ ಪದಾರ್ಥಕೋಶಗಳು ಕನ್ನಡದಲ್ಲಿದ್ದುದಕ್ಕೆ ಸಾಕ್ಷ್ಯಾಧಾರಗಳೇನೂ ಇಲ್ಲದಿದ್ದು ಇಂತಹ ಪದ್ಧತಿ ಇಲ್ಲಿ ಇತ್ತೋ ಇಲ್ಲವೋ ಸಂದೇಹಾಸ್ಪದ. ಏಕೆಂದರೆ ಹಸ್ತಪ್ರತಿಗಳು ತಾಡಪತ್ರದವುಗಳಾಗಿದ್ದು ಸಾಲುಗಳ ಮಧ್ಯೆ ಕಂಟದಿಂದ ಕೊರೆಯುವ ಬರವಣಿಗೆ ಸುಲಭವಾಗಿರಲಿಲ್ಲ. ಸಾಲುಗಳ ನಡುವಣ ಅರ್ಥಕೋಶಗಳು ಕ್ರಿಸ್ತಪೂರ್ವ ಮೊದಲನೆಯ ಸಹಸ್ರಮಾನದಲ್ಲಿ ವೇದಗಳಿಗೆ ಇದ್ದುವೆಂಬ ಅಭಿಪ್ರಾಯವಿದೆಯಾದರೂ (ಮೇಲಿನದೇ ಅಂತರ್ಜಾಲತಾಣ) ವೇದಗಳದು ಕರ್ಣಾಕರ್ಣಿ ಸಂಪ್ರದಾಯವಾಗಿದ್ದು ಇಂತಹ ಪದಾರ್ಥ ಪಟ್ಟಿಗಳಿದ್ದವೆಂಬುದು ವಿವಾದಾತೀತವಲ್ಲ.
                ನಿಘಂಟುಗಳ ಯುಗವೆಂಬ ಎರಡನೆಯ ಕಾಲಘಟ್ಟದಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಅನುಕೂಲವಾಗುವಂತಹ ಸಂಕ್ಷಿಪ್ತ ಏಕಭಾಷಾ ನಿಘಂಟುಗಳ ರಚನೆಯಾದುವೆಂಬುದು ಕನ್ನಡದಲ್ಲಿಯೂ ಸ್ಪಷ್ಟವಾಗಿ ಕಂಡುಬರುವ ವಿದ್ಯಮಾನ. ಸಾಮಾನ್ಯವಾಗಿ ಹದಿನೆಂಟನೆಯ ಶತಮಾನದವರೆಗೆ ಎಂದು ಗುರುತಿಸಲ್ಪಡುವ ಈ ಘಟ್ಟ ಕನ್ನಡದಲ್ಲಿ ಹತ್ತೊಂಬತ್ತನೆಯ ಶತಮಾನದವರೆಗೂ ವಿಸ್ತೃತವಾಗಿತ್ತು. ಇಂತಹ ನಿಘಂಟುಗಳಲ್ಲಿ ಮೊದಲನೆಯದು ಖ್ಯಾತ ಕವಿ ರನ್ನನಿಂದ ರಚಿತವಾದ ರನ್ನಕಂದ . ಇದು ಕಂದರೂಪದಲ್ಲಿದೆ. ಅಪೂರ್ಣವಾಗಿದ್ದು ಉಪಲಬ್ಧವಿರುವಷ್ಟು ಭಾಗದಲ್ಲಿ ಒಂದು ನೂರ ಇಪ್ಪತ್ತಮೂರು ಪದಗಳಿವೆ. ಇಂತಹ ನಿಘಂಟುಗಳಲ್ಲಿ ಕೊನೆಯದು ಕ್ರಿ ಶ 1810ರಲ್ಲಿ ರಚಿತವಾದ ಶಬ್ದಾರ್ಥಮಂಜರಿ (ಸೀತಾರಾಮಯ್ಯ,1975 : ಪು 293). ಇಂತಹ ನಿಘಂಟುಗಳ ಸಂಖ್ಯೆ ಇಪ್ಪತ್ತರಷ್ಟಿದ್ದು “ಕಾವ್ಯಗಳನ್ನು ಕಲಿಯುವವರು ಇವುಗಳನ್ನು ರೂ ಹಾಕಿ ಪಾಠ ಮಾಡುತ್ತಾರೆ” ಎಂಬ ಗಂಗಾಧರೇಶ್ವರ ಮಡಿವಾಳೇಶ್ವರ ತುರಮುರಿಯವರ ಮಾತು (ಧಾರವಾಡಕರ,1975: 204-5 ಇಲ್ಲಿ ಉದ್ಧೃತ) ಸರಿಯಾಗಿದೆ. ಸಂಸ್ಕೃತದಲ್ಲಿ ಕಂಡುಬರುವ ಅಮರಕೋಶದಂತಹ ವ್ಯಾಪಕ ಮತ್ತು ಸಮಗ್ರ ರೀತಿಯ ನಿಘಂಟುಗಳು ಕನ್ನಡದಲ್ಲಿ ರಚನೆಯಾಗಲಿಲ್ಲವೆಂಬದು ವಿಪರ್ಯಾವೇ ಸರಿ. ಪಾಶ್ಚಾತ್ಯ ಜ್ಞಾನದ ಪ್ರಭಾವದನಂತರವೇ ವೈಜ್ಷಾನಿಕ ರೀತಿಯ ನಿಘಂಟುಗಳ ರಚನೆ ಕನ್ನಡದಲ್ಲಿ ಮೊದಲಾದುದು. ಈ ಮಧ್ಯದಲ್ಲಿ ಸುಧಾರಿತ ನಿಘಂಟುಗಳಲ್ಲಿ ಕಂಡುಬರುವ ಪದಪಟ್ಟಿಗಳ ತರಹದ ತುಂಬ ಪರಿಮಿತ ಸಂಖ್ಯೆಯ ಪದಗಳನ್ನೊಳಗೊಂಡ ಸಣ್ಣಪದಪಟ್ಟಿಗಳ  ರೂಪ ಶಬ್ದಮಣಿದರ್ಪಣ(ಕೇಶಿರಾಜ,1260)ದಲ್ಲಿ ಕಾಣಸಿಗುವುದು. ರಳ ಉಪಯೋಗಿಸಬೇಕಾದ ಪದಗಳನ್ನು ತೋರಿಸುವ ಒಂದು ಪಟ್ಟಿ, ಧಾತುಗಳ ಒಂದು ಪಟ್ಟಿ ಮತ್ತು ಪದಾರ್ಥಚಿಂತಾಮಣಿ ಎಂಬ ಕ್ಲಿಷ್ಟಪದಗಳ ಅರ್ಥಗಳನ್ನ ಹೇಳುವುದಕ್ಕಾಗಿಯೇ ಇರುವ ಒಂದು ಪಟ್ಟಿ ಹೀಗೆ ಪದಪಟ್ಟಿಗಳನ್ನು ಸಿದ್ಧಪಡಿಸುವ ಒಂದು ಅತಿಚಿಕ್ಕ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಶಬ್ದಮಣಿದರ್ಪಣದಲ್ಲಿ ಧಾತುಗಳ ಪಟ್ಟಿಯನ್ನು ಅಂತ್ಯಾಕ್ಷರ ಅಕಾರಾದಿಯಾಗಿ ಜೋಡಿಸಲಾಗಿದೆ. ಈ ಮೂರೂ ಪಟ್ಟಿಗಳಿಂದ ಒಟ್ಟು 1441 ಪದಗಳು ಮಾತ್ರ ಇಲ್ಲಿದ್ದು ಧಾತುಗಳಿಗೆ ಸಂಸ್ಕೃತ ಭಾಷೆಯಲ್ಲಿಅರ್ಥವಿದೆ; ಉಳಿದ ಪದಪಟ್ಟಿಗಳಲ್ಲಿರುವ ಪದಗಳಿಗೆ ಕನ್ನಡ ಪರ್ಯಾಯ ಪದಗಳನ್ನೇ ಅರ್ಥವನ್ನಾಗಿ ನೀಡಿದೆ. ಒಟ್ಟಾರೆಯಾಗಿ ಈ ನಿಘಂಟುಗಳಲ್ಲಿ ನಮೂದುಗಳ ವ್ಯಾಕರಣರೂಪದಲ್ಲಾಗಲೀ ಅರ್ಥನಿರೂಪಣೆಗಾಗಿ ಕೊಟ್ಟಿರುವ ಪರ್ಯಾಯಪದಗಳ ವ್ಯಾಕರಣರೂಪದಲ್ಲಾಗಲೀ ಏಕಸೂತ್ರತೆ ಇಲ್ಲ. ಪದಗಳನ್ನು ವ್ಯವಸ್ಥಿತವಾಗಿ ಜೋಡಿಸುವುದು ಮತ್ತು ಅವುಗಳಿಗೆ ಅರ್ಥ ಹೇಳುವುದು ಎಂಬ ತತ್ವ ಮತ್ತು ಭಾಷಾರೂಪಗಳನ್ನು ಶುದ್ಧವಾಗಿ ಉಳಿಸಿಕೊಳ್ಳಬೇಕೆಂಬ ಕಾಳಜಿ ಇಲ್ಲಿ ಕಾಣುತ್ತವೆ. ಹೀಗೆ ನಿಘಂಟು  ಎಂಬ ಪರಿಕಲ್ಪನೆ ಸ್ಥೂಲವಾಗಿ ರೂಪಗೊಂಡು ಒಂದು ಸಂದಿಗ್ಧ ಸ್ವರೂಪವನ್ನು ಪಡೆದುಕೊಂಡುದು ಈ ಕಾಲದ ವೈಶಿಷ್ಟ್ಯ.
            ಕನ್ನಡದಲ್ಲಿ ಇಲ್ಲಿಂದ ಮುಂದಿನ ಕಾಲವನ್ನೆಲ್ಲ ನಿಘಂಟುಗಳ ಅಭಿವೃದ್ಧಿಯುಗವೆಂದು ಕರೆಯಬಹುದು. ಅಂದರೆ ಹತ್ತೊಂಬತ್ತನೆಯ ಶತಮಾನ ಮತ್ತು ಅಲ್ಲಿಂದ ಮುಂದಿನ ಕಾಲದಲ್ಲಿ ನಿಘಂಟುಗಳ ಸ್ವರೂಪ, ವಿಸ್ತಾರ, ವೈವಿಧ್ಯ, ಉಪಯೋಗ – ಇವುಗಳಲ್ಲೆಲ್ಲ ಹೊಸತನ ಉಂಟಾಯಿತು ಮತ್ತು ಬೆಳವಣಿಗೆಗಳಾದುವು. ನಿಜವಾದ ಅರ್ಥದ ನಿಘಂಟುಗಳು ಈ ಕಾಲದಲ್ಲಿ ಮತ್ತು ಅಲ್ಲಿಂದ ಮುಂದೆ ರಚನೆಯಾದವು. ಹತ್ತೊಂಬತ್ತನೆಯ ಶತಮಾನದಲ್ಲೇ ಈ ಬೆಳವಣಿಗೆಗಳ ಮಹತ್ತಾದ ಪರಿಚಯ ಕನ್ನಡಿಗರಿಗೆ ಆಯಿತೆಂಬುದು ವಿಶೇಷ. ಕಲಿಯುವವರ ಹೊಸ ವರ್ಗ ಸೃಷ್ಟಿಯಾದುದರಿಂದ ಹೊಸ ರೀತಯ ನಿಘಂಟುಗಳು ಅಗತ್ಯವಾದುವು. ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ, ಲ್ಯಾಟಿನ್-ಕನ್ನಡ ಮತ್ತು ಕನ್ನಡ-ಲ್ಯಾಟಿನ್ ನಿಘಂಟುಗಳ ರಚನೆಯಾಯಿತು. ಹೀಗೆ ಹತ್ತೊಂಬತ್ತನೆಯ ಶತಮಾನವು ಮುಖ್ಯವಾಗಿ ದ್ವಿಭಾಷಾ ನಿಘಂಟುಗಳ ಯುಗ. ಈ ಯುಗವು ಯೂರೋಪು ಖಂಡದಲ್ಲಿ 15 -16 ನೆಯ ಶತಮಾನಗಳಲ್ಲೇ ಪ್ರಾರಂಭವಾಗಿತ್ತು. ಕ್ರಿ ಶ 1445ರಲ್ಲಿ ವೆನಿಸ್ ನಗರದಲ್ಲಿ ಮುದ್ರಿತವಾದ ಇಟಾಲಿಯಾನೋ – ಟೆಡೆಸ್ಕೊ ಎಂಬ ಕೃತಿಯೇ ವಿಶ್ವದ ಪ್ರಥಮ ದ್ವಿಭಾಷಾ ನಿಘಂಟು ಎಂದು ಉಲ್ಲೇಖವಿದೆ (ಪೋಧಜೆಕ್ಕ: ಪು, 7).
            ನಿಘಂಟುಗಳ ವರ್ಗೀಕರಣವೆಂಬುದು ಪ್ರಾರಂಭವಾಗಬೇಕಾದ್ದು ಈ ಕಾಲದ ನಿಘಂಟುಗಳಿಂದ. ನಿಘಂಟುಗಳ ಸಂಖ್ಯಾ ಬಾಹುಳ್ಯ ಮತ್ತು ವೈವಿಧ್ಯಮಯ ಬೆಳವಣಿಗೆ ಕೂಡ ಇದೇ ಶತಮಾನದಲ್ಲಿ ಅಂಕುರಸಿ ಇಲ್ಲಿಂದ ಮುಂದುವರೆಯಿತು. ಹತ್ತೊಂಬತ್ತನೆಯ ಶತಮಾನದ ಈ ನಿಘಂಟುಗಳನ್ನು ಭಾಷಾಂತರಕ್ಕಾಗಿ ನಿಘಂಟುಗಳು ಎಂದು ವರ್ಗೀಕರಿಸಬಹುದೆಂದು ಮೇಲ್ನೋಟಕ್ಕೆ ಎನಿಸುತ್ತದೆ. ಇವುಗಳ ಮುಖ್ಯ ಉದ್ದೇಶವೇ ಬೈಬಲ್ ಮತ್ತಿತರ ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಲು ವಾತಾವರಣವನ್ನು ಅಣಿಗೊಳಿಸುವುದು ಮತ್ತು ಅಗತ್ಯ ಪರಿಕರಗಳನ್ನು ಒದಗಿಸುವುದು. ಭಾಷಾಂತರವು ಸಂಸ್ಕೃತಿಯ ತಿಳಿವಳಿಕೆಯನ್ನು ಅನಿವಾರ್ಯವಾಗಿ ಬೇಡುತ್ತದೆ. ಆದ್ದರಿಂದಲೇ ಈ ನಿಘಂಟುಗಳು ಈ ನಾಡಿನ ಸಂಸ್ಕೃತಿಯನ್ನು ವಿದೇಶೀಯರಿಗೆ ಅರ್ಥೈಸುವ ಕಾರ್ಯವನ್ನೂ ಒಳಗೊಂಡಿವೆ.  ರೀವ್ ನಿಘಂಟಿನಲ್ಲಿ mendicant, Himalaya ಇತ್ಯಾದಿ ಪದಗಳಿಗಿರುವ ದೀರ್ಘ ವಿವರಣೆಗಳು ಈ ಕಾರ್ಯವನ್ನೇ ಮಾಡುತ್ತಿವೆ. ಅವನ ಇನ್ನೊಂದು ಕೃತಿಯಾದ ಕನ್ನಡ-ಇಂಗ್ಲಿಷ್ ನಿಘಂಟೂ ಇದೇ ರೀತಿಯ ಕಾರ್ಯನಿರತ ಗ್ರಂಥ. ಸ್ಕೇರ್ಬಾನ ಪ್ರಕಾರ ಯಾವುದೇ ಎರಡು ಭಾಷೆಗಳ ಸಂದರ್ಭದಲ್ಲಿ ನಾಲ್ಕು ನಿಘಂಟುಗಳ ರಚನೆ ಅಗತ್ಯ.  ಎರಡು ನಿಘಂಟುಗಳು ವಿದೇಶೀ ನಮೂದುಗಳಿಗೆ ಸ್ವಂತ ಭಾಷೆಯಲ್ಲಿ ವಿವರಣೆಗಳನ್ನು ನೀಡುವಂತಹವು  ಮತ್ತು ಎರಡು ಭಾಷಾಂತರಕ್ಕೆ ಅನುಕೂಲವಾದಂತಹ ದ್ವಿಭಾಷಾ ನಿಘಂಟುಗಳು. ಎರಡೂ ರೀತಿಯ ನಿಘಂಟುಗಳು ಎರಡೂ ದಿಕ್ಕುಗಳಲ್ಲಿ ಸಕ್ರಿಯವಾಗಿರುತ್ತವೆ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ (ಪೋಧೆಜೆಕ್ಕ, ಪು 9). ಅಲ್ಲದೆ ಒಂದು ನಿಘಂಟು ಭಾಷಾಂತರಕ್ಕೆ ಮಾತ್ರ ಸಹಾಯ ಮಾಡುವಂತಹುದು ಎಂದಾಗಲೀ ಇನ್ನೊಂದು ನಿಘಂಟು ಪರ್ಯಾಯ ಪದಗಳನ್ನು ನೀಡುವಂತಹದಾದ್ದರಿಂದ ಪರಾಮರ್ಶನಯೋಗ್ಯವಾದುದು ಮಾತ್ರವೆಂದಾಗಲೀ ಹಣೆಪಟ್ಟಿ ಹಚ್ಚುವುದು ಸರಿಯಾಗಲಾರದು. ಇವೆಲ್ಲವುಗಳ ರೂಪ ಒಂದೇ ಆಗಿದ್ದು ಅವುಗಳನ್ನು ದ್ವಿಭಾಷಾ ನಿಘಂಟುಗಳೆಂದಷ್ಟೇ ಗುರುತಿಸುವುದು ಉಚಿತವಾಗಬಹುದು. ರೀವನ ನಿಘಂಟುಗಳು(1824 & 1832), ಗ್ಯಾರೆಟ್ಟನ ಎ ಮ್ಯಾನುಯಲ್ ಅಫ್ ಇಂಗ್ಲಿಷ್ ಅಂಡ್ ಕ್ಯಾನರೀಸ್ ಡಿಕ್ಷನರಿ(1842), ರೀವನ ನಿಘಂಟುಗಳನ್ನು ವಿಸ್ತರಿಸಿ ಮತ್ತು ಸಂಕ್ಷೇಪಿಸಿ ಸ್ಯಾಂಡರ್ಸನ್ ತಯಾರಿಸಿದ ನಿಘಂಟುಗಳು(1858), ಬ್ಯೂಶರ್ ಕಿಟೆಲನ ನಿಘಂಟನ್ನಾಧರಿಸಿ ಹೊರತಂದ ಕನ್ನಡ-ಇಂಗ್ಲಿಷ್ ನಿಘಂಟು(1899) – ಇಂಥವೆಲ್ಲ ಇದೇ ವರ್ಗದವು. 1872ರಲ್ಲಿ ಜೀಗ್ಲರ್ ಇಂಗ್ಲಿಷ್- ಕನ್ನಡ ಸ್ಕೂಲ್ ಡಿಕ್ಷನರಿಯೊಂದನ್ನು ಸಂಪಾದಿಸಿದ್ದಾನೆ. ಅನಂತರ ಇದರ ಪರಿಷ್ಕೃತ ರೂಪಗಳೂ ಪ್ರಕಟಗೊಂಡಿವೆ. ಇದರಲ್ಲಿ ಪದಗಳನ್ನೂ ಅವುಗಳನ್ನೊಳಗೊಂಡ ನುಡಿಗುಚ್ಛಗಳನ್ನೂ ಹೇಗೆ ಪ್ರಯೋಗಿಸಬಹುದೆಂಬುದನ್ನು ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾನೆ. ಉದಾಹರಣೆಗೆ take liberty ಎಂದರೆ ಸ್ವಾತಂತ್ರ್ಯ ವಹಿಸು ಎಂದರ್ಥವಾಗುತ್ತದೆ;  at liberty ಎಂದರೆ ಹಾಗೆ ಮಾಡುವ ಸ್ವಾತಂತ್ರ್ಯ ನಿನಗಿದೆ ಎಂದರ್ಥ – ಇಂತಹ ವಿಷಯಗಳನ್ನು ಇವನು liberty ಎಂಬ ಉಲ್ಲೇಖ ಪದದಡಿ ಸೇರಿಸಿದ್ದಾನೆ.  ಈ ಗುಣದಿಂದ ಇದು ಭಾಷಾಂತರಕ್ಕೂ ಸಹಾಯಕವಾಗಿದೆ. ಬಳಕೆ ಮಾಡುವವರು ಯಾರು ಎಂಬುದು ಶೀರ್ಷಿಕೆಯಲ್ಲಿ ಸೇರಿದ್ದು ಶಾಲಾನಿಘಂಟು ಎಂದು ಇದನ್ನು ಹೆಸರಿಸಲಾಗಿದೆಯಾದರೂ ಅದೂ ಒಂದು ಪರಾಮರ್ಶನ ಯೋಗ್ಯ ದ್ವಿಭಾಷಾ ನಿಘಂಟೇ ಎಂಬುದು ಸ್ಪಷ್ಟವಿದೆ. ಇಂತಹ ನಿಘಂಟುಗಳನ್ನೆಲ್ಲ ಬೇರೊಂದು ವರ್ಗವನ್ನಾಗಿಸುವ ಅಗತ್ಯವಿರಲಾರದು. ಉಲ್ಲೇಖ ಭಾಷೆ ಮತ್ತು ಲಕ್ಷ್ಯಭಾಷೆಗಳು ಬೇರೆಬೇರೆಯಾಗಿರುವುದು, ಅರ್ಥಗಳು ಲಕ್ಷ್ಯಭಾಷೆಯ ಸಮಾನಾರ್ಥಕಗಳಿಂದ ಮತ್ತು ವ್ಯಾಖ್ಯೆಗಳಿಂದ ನಿರೂಪಿತವಾಗಿರುವುದು ಮತ್ತು ಬಳಕೆದಾರರ ಆವಶ್ಯಕತೆಗಳಿಗನುಸಾರವಾಗಿ ಉದಾಹರಣೆಗಳು, ಪ್ರಯೋಗಗಳು ಅಥವ ಹೆಚ್ಚುವರಿ ವಿವರಗಳಿರುವುದು – ಇವು ಇಂತಹ ನಿಘಂಟುಗಳ ಲಕ್ಷಣಗಳು.
 ಹತ್ತೊಂಬತ್ತನೆಯನೆಯ ಶತಮಾನದ ಅಂತ್ಯ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕಿಟೆಲನ ಕನ್ನಡ - ಇಂಗ್ಲಿಷ್ ಡಿಕ್ಷನರಿ(1894) ಪ್ರಕಟವಾಯಿತು. ಇದು ಮೇಲುರೂಪದಲ್ಲಿ ದ್ವಿಭಾಷಾ ನಿಘಂಟಾಗಿದ್ದರೂ ಇದರ ಉದ್ದೇಶವು ಭಾಷಾಂತರವಾಗಲೀ ಸಾಮಾನ್ಯ ಓದುಗ ತನ್ನ ಓದುವಿಕೆಯ ಸಂದರ್ಭದಲ್ಲಿ ಅರ್ಥ ಸ್ಪಷ್ಟಗೊಳಿಸಿಕೊಳ್ಳಲು ತೊಡಗುವ  ಪರಾಮರ್ಶೆಯಾಗಲೀ ಅಲ್ಲ; ಇದು ಅಷ್ಟು ಸರಳ ನಿಘಂಟಲ್ಲ. ಇದರ ಗಾತ್ರವೂ ಸಾಮಾನ್ಯವಾದ ಕೈಹಿಡಿಗಿಂತ ಹೆಚ್ಚೇ ಆಗಿದೆ. ಹಲವು ಹೊಸ ಆವಿಷ್ಕಾರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಶುದ್ಧ ಕನ್ನಡ ಪದಗಳನ್ನು ದಪ್ಪಕ್ಷರಗಳಲ್ಲೂ ಕನ್ನಡದಲ್ಲಿ ಬಳಕೆ ಇರುವ ಇತರ ಭಾಷಾ ಪದಗಳನ್ನು ಸಾಮಾನ್ಯ ಆಕಾರದಲ್ಲೂ ಮುದ್ರಿಸಿರುವುದರಿಂದ ದೇಶ್ಯ-ಅನ್ಯದೇಶ್ಯ ರೀತಿಯ ವರ್ಗೀಕರಣವೊಂದು ಪ್ರಾಥಮಿಕ ಸ್ವರೂಪದಲ್ಲಿಯೇ ಅಳವಟ್ಟಿದೆ. ಶಕಟರೇಫೆ, ರಳ ಮತ್ತು ಕುಳಗಳನ್ನು ಸರಿಯಾದ ಜಾಗದಲ್ಲಿ ಬಳಸಿರುವುದರಿಂದ ಕನ್ನಡ ಪದಗಳ ಸರಿಯಾದ ರೂಪವೂ ತಿಳಿಯುತ್ತದೆ. ವ್ಯಾಖ್ಯೆಯು ಉಲ್ಲೇಖಪದದ ಅರ್ಥವನ್ನು ಸ್ಪಷ್ಪಡಿಸಿದರೆ, ಪ್ರತಿಪದಕ್ಕೆ ಸೋದರೀ ಭಾಷಾ ಜ್ಞಾತಿಪದಗಳನ್ನು ನೀಡಿರುವುದರಿಂದ ಪದದ ನಿಷ್ಪತ್ತಿಯ ಬಗ್ಗೆ ಹೊಳಹುಗಳು ಸಿಗುತ್ತವೆ; ಕನ್ನಡದ ಒಂದು ಪದವನ್ನು ಇತರ ದ್ರಾವಿಡ ಭಾಷೆಗಳ ಸದೃಶ ಪದಗಳೊಂದಿಗೆ ತುಲನೆ ಮಾಡುವುದು ಸುಲಭವಾಗುತ್ತದೆ. ಇದಾದನಂತರ ಪದವು ಕನ್ನಡ ಕಾವ್ಯಗಳಲ್ಲಿ ಪ್ರಯೋಗವಾಗಿರುವ ವಾಕ್ಯಭಾಗಗಳನ್ನುಚರಿತ್ರಾನುಕ್ರಮದಲ್ಲಿ  ಉದಾಹರಿಸಿದ್ದು ಪದದ ಪ್ರಾಚೀನತೆ ಮತ್ತು ಅರ್ಥವಿಕಾಸದ ಪರಿ ಅರಿವಿಗೆ ಬರುತ್ತವೆ.  ಹೀಗೆ  ಇದು  ಸಾಮಾನ್ಯ  ಉಪಯೋಗಕ್ಕಾಗಿರುವ  ನಿಘಂಟು ಮಾತ್ರವಲ್ಲ       ( Dictionary for General Use, DGU ಅಷ್ಟೇ ಅಲ್ಲ); ಮುಂದುವರೆದ ಭಾಷಾ ಶಾಸ್ತ್ರೀಯ ಅಧ್ಯಯನಗಳಿಗೆ ಪೂರಕವಾದ ನಿಘಂಟು. ಇದೊಂದು ನಿಘಂಟು ಶಾಸ್ತ್ರದ ಅದ್ಭುತ ಸಾಹಸವಾಗಿದ್ದುಇದನ್ನುಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟು ಎಂದು ವರ್ಗೀಕರಿಸುವುದು ಉಚಿತವಾಗಬಹುದು. ಈಚೆಗೆ ಪ್ರೊ ಮರಿಯಪ್ಪ ಭಟ್ಟರು ಕಿಟೆಲನ ನಿಘಂಟನ್ನು ಪರಿಷ್ಕರಿಸಿ(1968) ವಿಸ್ತರಿಸಿದ್ದು ಇದೂ ಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟಾಗಿದೆ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಕಿಟೆಲ್ ನಿಘಂಟಿಗೆ ಪೈಪೋಟಿ ನೀಡಬಲ್ಲ ಏಕಭಾಷಾ ನಿಘಂಟೊಂದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಿದ್ವಾಂಸ ಮಂಡಳಿಯೊಂದು ರಚಿಸಿತು.ಇದು ಎಂಟು ಸಂಪುಟಗಳಲ್ಲಿ ಪ್ರಕಟವಾಗಿರುವ ಕನ್ನಡಸಾಹಿತ್ಯಪರಿಷತ್ತಿನ ನಿಘಂಟು(1995).  ಕಿಟೆಲ್ ನಿಘಂಟಿನ ಎಲ್ಲ ಲಕ್ಷಣಗಳ ಜೊತೆಗೆ ಮತ್ತಷ್ಟು ಹೊಸ ಮಧ್ಯವರ್ತನಗಳನ್ನು ಇಲ್ಲಿ ಸೇರಿಸಿದ್ದು ನಿಘಂಟು ಭಾಷಿಕ ಸಂಶೋಧನೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಈ ನಿಘಂಟನ್ನೂ ಇದೇ ಗುಂಪಿನಲ್ಲಿಸೇರಿಸಬೇಕು. ಕಿಟೆಲ್ ನಿಘಂಟು, ಅದರ ಮರಿಯಪ್ಪ ಭಟ್ಟರ ಪರಿಷ್ಕರಣ, ಪರಿಷತ್ ನಿಘಂಟು ಇಂತಹವು ಪದಗಳ ಇತಿಹಾಸ, ಪ್ರತಿಪದದ ರೂಪ ಮತ್ತುಅರ್ಥಗಳಲ್ಲಾದ ಕಾಲಾನುಕಾಲ ವ್ಯತ್ಯಾಸ - ಇವುಗಳನ್ನು ತೋರಿಸುತ್ತವೆ. ಹಾಗೆಯೇ ಜ್ಞಾತಿಪದಗಳನ್ನು ನೀಡಿರುವುದರಿಂದ ಪದದ ಮೂಲಸ್ವರೂಪ ಮತ್ತು ಅದು ಭಾಷೆಯಿಂದ ಭಾಷೆಗೆ ವ್ಯತ್ಯಾಸವಾಗುವ ಪರಿಯೂ ಒಟ್ಟಾಗಿ ತಿಳಿಯುತ್ತವೆ. ನಿಷ್ಪತ್ತಿ ಸೂಚನೆಯೂ ಅನೇಕ ವೇಳೆ ಜ್ಞಾತಿಪದಗಳೊಂದಿಗೆ ತುಲನೆಯಿಂದ ವ್ಯಕ್ತವಾಗುತ್ತದೆ ಎಂಬ ವಿದ್ವಾಂಸರ ಅಭಿಪ್ರಾಯ(ಸ್ವಾನಪೋಲ್: ಪು,53) ಈ ನಿಘಂಟಿಗೆ ಚೆನ್ನಾಗಿ ಅನ್ವಯಿಸುತ್ತದೆ.  
ಈ ಎಲ್ಲ ನಿಘಂಟುಗಳೂ ಜುಗುಸ್ತ ಹೇಳುವಂತೆ ನಿಘಂಟು ರಚನೆಯಲ್ಲಿ ಪ್ರತಿ ಭಾಷೆಯಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ಅನುಕ್ರಮವಾದ ಸಂಕ್ಷಿಪ್ತ-ಏಕಭಾಷಾ ನಿಘಂಟುಗಳು, ದ್ವಿಭಾಷಾ ನಿಘಂಟುಗಳು ಮತ್ತು ವಿಸ್ತೃತ ಸಮಗ್ರ ಏಕಭಾಷಾ ನಿಘಂಟುಗಳು ಎಂಬ ತತ್ವಕ್ಕೂ ಅನುಸಾರವಾಗಿಯೇ ಇವೆ (ಜುಗುಸ್ತ: ಪು, 346). ಈ ಹಂತಗಳೇ ನಿಘಂಟುಗಳ ಒಂದು ಸ್ಥೂಲ ವರ್ಗೀಕರಣವೂ ಆಗಿವೆ. ಕನ್ನಡದಲ್ಲಿ ಪ್ರಥಮಾವಸ್ಥೆಯ ಸಂಕ್ಷಿಪ್ತ ಏಕಭಾಷಾ ನಿಘಂಟುಗಳ ಕಾಲದನಂತರ ಹತ್ತೊಂಬತ್ತನೆಯ ಶತಮಾನದಲ್ಲಿ ಎರಡನೆಯ ಹಂತ ಪ್ರಾರಂಭವಾಗಿದ್ದು ಈ ಹಂತದ ದ್ವಿಭಾಷಾ ನಿಘಂಟುಗಳಲ್ಲಿ ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡದವೇ ಹೆಚ್ಚು ಸಂಖ್ಯೆಯವು. ಮೂರನೆಯ ಹಂತದಲ್ಲಿ ಏಕಭಾಷಾ ನಿಘಂಟನ್ನು ಮಾತ್ರ ಜುಗುಸ್ತ ಹೇಳಿದ್ದರೂ ಪರಿಸ್ಥಿತಿಗನುಗುಣವಾಗಿ ಕನ್ನಡದಲ್ಲಿ ವ್ಯಾಪಕತೆ, ಸಮಗ್ರತೆ, ಚಾರಿತ್ರಿಕತೆ ಮತ್ತು ಸೋದರ ಭಾಷೆಗಳೊಂದಿಗೆ ತುಲನೆ – ಇವುಗಳನ್ನೊಳಗೊಂಡಂತೆ  ಫರ್ಡಿನಂದ್ ಕಿಟೆಲ್ ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟೂ ಈ ಹಂತಕ್ಕೆ ಸೇರಿದ್ದೆಂದು ಹೇಳಬೇಕಾಗುತ್ತದೆ.
            ದ್ವಿಭಾಷಾ ನಿಘಂಟುಗಳು ಮುಖ್ಯವಾಗಿ ವಿದೇಶೀ ಭಾಷೆಯ ಕಲಿಕೆಗೆ ಸಹಾಯಕವಾಗುವಂತಹವು. ಅಥವ ವ್ಯಕ್ತಿ ತನ್ನ ಮಾತೃಭಾಷೆಯಲ್ಲದ ಭಾಷೆಯನ್ನು ಕಲಿಯುವಾಗ, ಪಠ್ಯ ಅಥವ ಹೆಚ್ಚುವರಿ ಸಾಹಿತ್ಯವನ್ನು ಓದುವ ಸಂದರ್ಭಗಳಲ್ಲಿ ಎದುರಾಗುವ ಕ್ಲಿಷ್ಟ ಪದಗಳ ಅರ್ಥವನ್ನು ಹುಡುಕಿಕೊಳ್ಳಲು ಇಂತಹ ನಿಘಂಟುಗಳು ಉಪಯುಕ್ತವಾಗುತ್ತವೆ; ಸೂಕ್ತ ನುಡಿಗಟ್ಟುಗಳನ್ನು ಅರಿಯಲು ಮತ್ತು ಯಾವ ಪದದ ಜೊತೆಗೆ ಯಾವ ಪದ ಬಳಸಬೇಕೆಂಬುದನ್ನು ನಿರ್ಧರಿಸಲು ಇವುಗಳಿಂದ  ಅನುಕೂಲವಾಗುತ್ತದೆ. ಏಕಭಾಷಾ ನಿಘಂಟುಗಳು ಹಾಗಲ್ಲದೆ ಅದೇ ಭಾಷೆಯನ್ನೇ ಮಾತನಾಡುವ ಸ್ಥಳೀಕರ ಉಪಯೋಗಕ್ಕಾಗಿ ಇದ್ದು ಪ್ರಾಚೀನ ಕಾವ್ಯಗಳ ಅಧ್ಯಯನದಲ್ಲಿ ಕ್ಲಿಷ್ಟ ಪದಗಳನ್ನು ಅರ್ಥ ಮಾಡಿಕೊಳ್ಳಲು ಅಥವ ಸಾಮಾನ್ಯ ಅಧ್ಯಯನದಲ್ಲಿ ಎದುರಾಗುವ ಅಪುರೂಪದ ಪದಗಳನ್ನು ಅರ್ಥೈಸಿಕೊಳ್ಳಲು ಪ್ರಯೋಜನಕ್ಕೆ ಬರುತ್ತದೆ. ಪದಗಳ ಸೂಕ್ತ ಸ್ಥಾನದ ಬಗ್ಗೆ ಸಂಶಯಗಳು ಬಂದಾಗಲೂ ಇಂತಹ ನಿಘಂಟುಗಳನ್ನು ಪರಾಮರ್ಶಿಸಬಹುದು. ಈ ನಿಘಂಟುಗಳಲ್ಲೆಲ್ಲ ಸಾಮಾನ್ಯವಾಗಿ ನಿರ್ದಿಷ್ಟ ಅರ್ಥಗಳನ್ನು ವ್ಯಾಖ್ಯೆಗಳಿಂದಾಗಲೀ, ಸಮಾನಾರ್ಥಕ ಪದಗಳಿಂದಾಗಲೀ ನೀಡುವುದು ಸಂಪ್ರದಾಯ.
            ಇಲ್ಲಿಂದ ಮುಂದೆ ಅನೇಕ ದ್ವಿಭಾಷಾ ನಿಘಂಟುಗಳೂ ಏಕಭಾಷಾ ನಿಘಂಟುಗಳೂ ರಚನೆಯಾದುವಲ್ಲದೆ  ಈ ಚೌಕಟ್ಟಿನಿಂದ ಹೊರಗೆ  ಬೇಳವಣಿಗೆಗಳಾಗಿದ್ದು ಅವನ್ನು ಹಲವು ವರ್ಗಗಳಲ್ಲಿ ನೋಡುವ ಅಗತ್ಯವಿದೆ. ದ್ವಿಭಾಷಾ ನಿಘಂಟುಗಳಲ್ಲಿ ಸಂಸ್ಕೃತ, ಹಿಂದಿ, ತೆಲುಗು, ರಶ್ಯನ್, ಇಂಗ್ಲಿಷ್ – ಹೀಗೆ ಹಲವು ಭಾಷೆಗಳ ಜೊತೆಗೆ ಸಂಬಂಧ ಕಲ್ಪಿಸುವಂತಹವು ಇವೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು(ಪ್ರಥಮ ಮದ್ರಣ:1947) ಬಿ. ವೆಂಕಟನಾರಣಪ್ಪ ಇವರ ಪ್ರಧಾನ ಸಂಪಾದಕತ್ವದಲ್ಲಿ ರಚನೆಯಾಗಿದ್ದು  ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಿದೆ. ಇದೊಂದು ಪ್ರಮುಖ ಕೃತಿ. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬ  ವಿಭಿನ್ನ ನಿಘಂಟನ್ನು ಡಿ ಎನ್ ಶಂಕರಭಟ್ಟರು 2008ರಲ್ಲಿ ರಚಿಸಿದ್ದು ಇದರಲ್ಲಿ ಸು.15,000ಪದಗಳಷ್ಟು ಪ್ರಧಾನ ಉಲ್ಲೇಖಗಳಿವೆ. ಇಲ್ಲಿ ಇಂಗ್ಲಿಷ್ ಪದಗಳಿಗೆ ಶುದ್ಧ ಕನ್ನಡ ಸಮಾನಾರ್ಥಕಗಳಿದ್ದು  ಇಲ್ಲಿರುವ ಪದಗಳನ್ನು ಅಗತ್ಯಕ್ಕೆ ತಕ್ಕಂತೆ ಸೇರಿಸಿಕೊಂಡು ಅಥವ ಪದಕ್ಕೆ ಸೂಕ್ತ ಪ್ರತ್ಯಯ(ಒಟ್ಟು)ವನ್ನು ಸೇರಿಸಿ ಹೊಸ ಅಚ್ಚಗನ್ನಡ ಪದಗಳನ್ನು ಸೃಷ್ಟಿಸಿಕೊಳ್ಳಬೇಕೆಂಬುದು ನಿಘಂಟುಕಾರರ ಆಶಯ. ಅದರಂತೆ chief-whip ‘ಮಲ್ಲಚಾವಟಿ’ಯಾಗುತ್ತಾನೆ; Chief-guest ‘ಮಲ್ಲ ಬಿದ್ದಿನ’ನಾಗುತ್ತಾನೆ; Bilingual dictionary ‘ಇನ್ನುಡಿ ಪದನೆರಕೆ’ಯಾಗುತ್ತದೆ. ವೈಯಕ್ತಿಕ ಒಲವುಗಳು ಮತ್ತು ಸಾಮೂಹಿಕ ಇಚ್ಛಾಶಕ್ತಿ ಒಗ್ಗೂಡಿದರೆ ಇಂತಹ ಪದಗಳನ್ನು ಕನ್ನಡದಲ್ಲಿ ಬಳಕೆಗೆ ತರುವುದು ಅಸಾಧ್ಯವೇನಲ್ಲ. ಇದೊಂದು ಪ್ರಯೋಗಶೀಲ ನಿಘಂಟೇ ಆದರೂ ಪ್ರತ್ಯೇಕ ವರ್ಗವಾಗಿ ನೋಡುವ ಅಗತ್ಯವಿಲ್ಲ. ಇದೊಂದು ದ್ವಿಭಾಷಾ ನಿಘಂಟುಗಳ ವರ್ಗಕ್ಕೆ ಸೇರಿದ ಹೊಸ ನಿಘಂಟು.
ಸಂಸ್ಕೃತ, ಹಿಂದಿ, ಇಂಗ್ಲಿಷ್ ಇವುಗಳಲ್ಲೊಂದು ಉಲ್ಲೇಖ ಭಾಷೆಯಾಗಿರುವ ಮತ್ತು ಕನ್ನಡ ಲಕ್ಷ್ಯ ಭಾಷೆಯಾಗಿರುವ ಹಲವು ವ್ಯಾಪಕವಾದ, ಸಾಮಾನ್ಯ ಉಪಯೋಗಕ್ಕಾಗಿರುವ ನಿಘಂಟುಗಳು ಬಂದಿವೆ. ಉದಾ. ಎಸ್‌.ವಿ.ಹಂಜಿ ಅವರ ‘ಸಂಸ್ಕೃತ – ಕನ್ನಡ ಕೋಶ’ (1967), ಪ್ರೊ. ಗುರುನಾಥ ಜೋಶಿ ಅವರ ‘ಹಿಂದಿ – ಕನ್ನಡ ಶಬ್ದಕೋಶ’ (1950), ಇತ್ಯಾದಿ.ಹಾಗೆಯೇ ಕನ್ನಡ ಉಲ್ಲೇಖ ಬಾಷೆಯಾಗಿದ್ದುಕೊಂಡು ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅರ್ಥ ನಿರೂಪಣೆ ಇರುವ ನಿಘಂಟುಗಳೂ ಕನ್ನಡದಲ್ಲಿವೆ. ಉದಾ. ಚಾಂದುಲಾಲ ದುಬೆ ಮತ್ತು ಇತರರು ರಚಿಸಿದ  ‘ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ’ (1957).  ಇವಲ್ಲದೆ ಕನ್ನಡ ಪದಗಳಿಗೆ ತೆಲುಗು ಮತ್ತು ತಮಿಳುಗಳಲ್ಲಿ ಸಮಾನಾರ್ಥಕಗಳನ್ನು ನೀಡುವ ನಿಘಂಟುಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡ-ರಶ್ಯನ್ (1975) ನಿಘಂಟಿನ ಮುದ್ರಿತ ರೂಪ ಲಭ್ಯವಿದೆ.
ಇಪ್ಪತ್ತನೆಯ ಶತಮಾನದಲ್ಲಿ ಏಕಭಾಷಾ ನಿಘಂಟುಗಳೂ ವಿಪುಲ ಸಂಖ್ಯೆಯಲ್ಲಿ ರಚಿತವಾದುವು ಮತ್ತು ಅವುಗಳಲ್ಲಿ ಹಲವು ಜನಪ್ರಿಯವಾಗಿವೆ.   ಶಿವರಾಮ ಕಾರಂತ, ಜಿ ವೆಂಕಟಸುಬ್ಬಯ್ಯ, ಹಾ ಮಾನಪ್ಪ ನಾಯಕ ಮುಂತಾದವರರು ಸಾಮಾನ್ಯ ಉಪಯೋಗಕ್ಕಾಗಿ ವ್ಯಾಪಕ ಏಕಭಾಷಾ ನಿಘಂಟುಗಳನ್ನು ರಚಿಸಿದ್ದು ಇವುಗಳಲ್ಲಿ ಉಲ್ಲೇಖಿತ ಪದದ ವ್ಯಾಕರಣ ವಿವರ, ನಿಷ್ಪತ್ತಿಸೂಚನೆ ಇಂತಹವನ್ನೂ ಒಳಗೊಂಡಿವೆ. ಗಾತ್ರಾನುಸಾರಿಯಾಗಿ ಇವುಗಳಲ್ಲಿ ವಿಧಗಳನ್ನು ಗುರುತಿಸುವ ಅಗತ್ಯವಿರಬಹುದು.
            ಅರೆದ್ವಿಭಾಷಾ ನಿಘಂಟುಗಳೆಂಬ ಒಂದುವರ್ಗವನ್ನು ಕೆಲವರು ಸೂಚಿಸುತ್ತಾರೆ. ಅರೆ ಅಂದರೆ ಅರ್ಧ; ದ್ವಿ ಅಂದರೆ ಎರಡು;  ಆದ್ದರಿಂದ ಅರೆದ್ವಿಭಾಷೆ ಎಂದರೆ ಏಕಭಾಷೆ ಎಂದೇ ಅರ್ಥ ಎಂದು ಬೇರೆ ಕೆಲವರು ಈ ನಿಲುವನ್ನು ವ್ಯಂಗ್ಯವಾಡುತ್ತಾರೆ. ಆದರೆ ಜೆ ಡಿ ಮೈಸಾಳೆ ಇವರ ಹಿಂದಿ-ಹಿಂದಿ- ಕನ್ನಡ ರತ್ನಕೋಶ(1951),  ಶೇಷಗಿರಿರಾವ್ ಮತ್ತಿತರರ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು ಇಂತಹವುಗಳು ಶುದ್ಧವಾದ ಏಕಭಾಷಾ ನಿಘಂಟುಗಳೂ ಅಲ್ಲದೆ, ಶುದ್ಧವಾದ ದ್ವಿಭಾಷಾ ನಿಘಂಟುಗಳೂ ಅಲ್ಲದಿದ್ದು ಇಂತಹವುಗಳನ್ನು ಅರೆದ್ವಿಭಾಷ ನಿಘಂಟುಗಳೆಂದು ಕರೆಯುವುದು ಉಚಿತವಾಗಬಹುದು.  ಗುರುನಾಥ ಜೋಶಿಯವರ ‘ಕನ್ನಡ – ಕನ್ನಡಹಿಂದಿ ಶಬ್ದಕೋಶ’ (೧೯೫೭) ಆರ್.ಎಸ್. ರಾಮರಾವ್ ಅವರು 1965 ರಲ್ಲಿ ರಚಿಸಿದ ಕನ್ನಡ – ಕನ್ನಡ ಇಂಗ್ಲಿಷ್ ನಿಘಂಟು ಪ್ರೊ.ಜಿ. ವೆಂಕಟಸುಬ್ಬಯ್ಯ ಮತ್ತು ಇತರರು 1981 ರಲ್ಲಿ ರಚಿಸಿದ ‘ಕನ್ನಡ-ಕನ್ನಡ-ಇಂಗ್ಲಿಷ್-ನಿಘಂಟು’ ಇಂತಹ ಅರೆದ್ವಿಭಾಷಾ ನಿಘಂಟುಗಳು ಹಲವು ಕನ್ನಡದಲ್ಲಿ ಲಭ್ಯವಿದ್ದು ಸರ್ವಜನೋಪಯೋಗಿಯಾಗಿವೆ.
 ಎರಡಕ್ಕಿಂತ ಹೆಚ್ಚು ಭಾಷೆಳನ್ನೊಳಗೊಂಡ ಕೆಲವು ನಿಘಂಟೂಗಳೂ ಕನ್ನಡದಲ್ಲಿದ್ದು ಒಂದರಲ್ಲಿ ಹಿಂದಿ, ಒಂದರಲ್ಲಿ ತುಳು ಮತ್ತು ಮೂರನೆಯದರಲ್ಲಿ ಕನ್ನಡ ಉಲ್ಲೇಖ ಭಾಷೆಗಳಾಗಿವೆ. ಇಂತಹವನ್ನು ಬಹುಭಾಷಾ ನಿಘಂಟುಗಳೆಂಬ ಪ್ರತ್ಯೇಕ ವಿಧದಲ್ಲಿ ಸೇರಿಸುವುದು ಉಚಿತವಾಗಬಹುದು. ಎಲ್‌.ಎಸ್‌. ಚಿಟಗುಪ್ಪಿಯವರ ಆಧುನಿಕ ಹಿಂದಿ – ಕನ್ನಡ – ಇಂಗ್ಲಿಶ್‌ಶಬ್ದಕೋಶದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಲಕ್ಷ್ಯ ಭಾಷೆಗಳಾಗಿವೆ. ಗೋವಿಂದ ಪೈ ಸಂಶೋಧನಾ ಸಂಸ್ಥೆ ಯು. ಪಿ. ಉಪಾಧ್ಯಾಯ ಇವರ ಪ್ರಧಾನ ಸಂಪಾದಕತ್ವದಲ್ಲಿ  ತುಳು – ಕನ್ನಡ – ಇಂಗ್ಲಿಶ್‌ ನಿಘಂಟನ್ನು (1997)  ರಚಿಸಿ ಪ್ರಕಟಿಸಿದೆ. ಹಲವು ವಿದ್ವಾಂಸರ ಹಲವು ರ್ಷಗಳ ಫಲದಿಂದ ಈ ಗ್ರಂಥ ರಚನೆಯಾಗಿದ್ದು ಇದು ಈ ವರ್ಗದ್ದೇ ಆದರೂ ಅದು ಆರು ಸಂಪುಟಗಳಲ್ಲಿದ್ದು  ಬೃಹತ್ ಗಾತ್ರದ್ದಾಗಿದೆ. ಸಮಗ್ರತೆ, ವ್ಯಾಪ್ತಿ ಮತ್ತು ತಾಂತ್ರಿಕತೆಗಳಲ್ಲಿ ಅನನ್ಯವಾಗಿರುವ ಈ ನಿಘಂಟು ತುಳು ಉಲ್ಲೇಖ ಭಾಷೆಯಾಗಿರುವ ಬಹೂದ್ದೇಶೀ ಅಧ್ಯಯನ ಪೂರಕ ನಿಘಂಟಾಗಿದೆ. 1995ರಲ್ಲಿ ಕನ್ನಡ-ಕನ್ನಡ-ಇಂಗ್ಲಿಷ್-ತಮಿಳು-ಜಪಾನೀ ಭಾಷೆಗಳ ಬಹುಭಾಷಾ ನಿಘಂಟಿನ ಮೊದಲ ಸಂಪುಟವೊಂದನ್ನು ಸಂಪಾದಕ ಡಾ.ವಿ.ಗೋಪಾಲಕೃಷ್ಣ ಅವರ ಶ್ರಮದಿಂದ ಸಿದ್ಧಪಡಿಸಿ ಪ್ರಕಟಿಸಿರುವುದಾಗಿ ತಿಳಿದು ಬರುತ್ತದೆ (ಪ್ರಜಾವಾಣಿ: ಫೆಬ್ರುವರಿ, 2016). ಇದೊಂದು ಅಕ್ಷರಶಃ ಬಹುಭಾಷೆಗಳನ್ನೊಳಗೊಂಡ ನಿಘಂಟು.
 ಎಟಿಮಲಾಜಿಕಲ್ ನಿಘಂಟು ಎಂಬ ಒಂದು ವಿಧವನ್ನು ಪ್ರತ್ಯೇಕವಾಗಿ ಹೇಳಲೇಬೇಕಾಗುತ್ತದೆ. ಇದು ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ, ಕನ್ನಡಕ್ಕೆ ಸಂಬಂಧಿಸಿದಂತೆಯೂ 1961ರಿಂದ ಪ್ರಾರಂಭವಾಯಿತು. ಯಾವುದೇ ದ್ರಾವಿಡ ಭಾಷೆಯ ಒಂದು ಪದ ಸೋದರೀ ಭಾಷೆಗಳಲ್ಲಿ ಪಡೆದಿರುವ ರೂಪ, ಅಲ್ಲಿ ಅದರ ಅರ್ಥ ಮತ್ತು ಸಂಗತವಾದ ವ್ಯಾಕರಣ ವಿವರಗಳನ್ನು ದಾಖಲಿಸುವಂತಹ ನಿಘಂಟು ಪ್ರಕಾರವೆಂದು ಇದನ್ನು ವ್ಯಾಖ್ಯಾನಿಸಬಹುದು. ಇಂತಹ ನಿಘಂಟುಗಳ ರಚನೆಯಷ್ಟೇ ಅದನ್ನು ಮುಂದುವರೆಸುವ (updating) ಪ್ರಕ್ರಿಯೆಯೂ ಮುಖ್ಯ. 1961ರಲ್ಲಿ ಟಿ ಬರೋ ಮತ್ತು ಎಮ್ ಬಿ ಎಮಿನೋ ಇವರ ಎ ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್ಷನರಿ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ಮೊದಲ ಜ್ಞಾತಿಪದಕೋಶವಾಗಿದ್ದು ಸುಮಾರು 5000 ಕನ್ನಡ ಪದಗಳನ್ನೊಳಗೊಂಡಿದೆ. 1984ರಲ್ಲಿ ಇದರ ಪರಿಷ್ಕೃತ ಆವೃತ್ತಿಯ ಪ್ರಕಟವಾಗಿದೆ ಮತ್ತು 1998ರಲ್ಲಿ ಇದರ ಪುನರ್ಮುದ್ರಣವಾಗಿರುತ್ತದೆ. ಇದರಲ್ಲಿ ಎಲ್ಲ ದ್ರಾವಿಡ ಭಾಷಾ ಪದಗಳೂ ಇದ್ದು ಉಲ್ಲೇಖಪದಗಳು ಅಥವ ಮುಖ್ಯ ನಮೂದುಗಳನ್ನು ವಿಶಿಷ್ಟ ರಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಒಂದು ಪದದ ಪ್ರಾಚಿನ ರೂಪವು ಯಾವ ಭಾಷೆಯಲ್ಲಿದೆಯೋ ಆ ಭಾಷೆಯ ಪದ ಮುಖ್ಯ ನಮೂದಾಗುತ್ತದೆ. ಉಳಿದ ಭಾಷೆಗಳ ಪದಗಳನ್ನು ಜ್ಞಾತಿಪದಗಳನ್ನಾಗಿ ನೀಡಲಾಗಿದೆ. ಪದವನ್ನು ಲಿಪ್ಯಂತರ ರೂಪದಲ್ಲಿ ದಾಖಲಿಸಲಾಗಿದ್ದು ಅರ್ಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನಿರೂಪಿಸಲಾಗಿದೆ. ಉಲ್ಲೇಖ ಪದವು ಮೂಲ ದ್ರಾವಿಡವಾಗಿರಬೇಕೆಂಬುದು ನಿಘಂಟುಕಾರರ ಕಾಳಜಿಯಾಗಿದೆ. ಕೆಳಗಿನ ಉದಾಹರಣೆಯು ನಿಘಂಟಿನ ಸ್ವರೂಪದ ಬಗ್ಗೆ ಸ್ವಯಮ್ ವಿವರಣೆಯನ್ನು ನೀಡುವುದು:
ಉದಾ. 1140). Ta. kaṭuvaṉ male monkey, tom-cat; kaṭuvaṉ-paṉṟi boar. Ma. kaṭuvan male of cats, pigs, etc.; kāṭan wild hog, tom-cat, male tiger. Ko. kaṛvn tom-cat. Ka. gaḍava a stout male monkey; (Hav.) kaṇṭã male cat. Go. (A. Y.) gaḍḍi
ಯಾವುದೇ ಒಂದು ಪದವನ್ನು ಮೂಲ ದ್ರಾವಿಡ ಎಂದು ಗುರುತಿಸಲಾಗದಿದ್ದರೆ ಅಂತಹ ರೂಪವನ್ನು ಪುನಾರಚಿಸಿ ಕೊಡಲಾಗಿದೆ. ಇಂದಿಗೂ ಹಲವು ದ್ರಾವಿಡಭಾಷಾ ಅಧ್ಯಯನಗಳಲ್ಲಿ ಈ ನಿಘಂಟನ್ನು ಉಲ್ಲೇಖಿಸಲಾಗುತ್ತಿರುವುದು ಬರೋ-ಎಮಿನೋ ನೀಘಂಟಿನ ಪ್ರಾಮುಖ್ಯವನ್ನು ತೋರಿಸುತ್ತದೆ. 2013ರಲ್ಲಿ ಎನ್ ಉಚಿಡ, ಬಿ ಬಿ ರಾಜಪುರೋಹಿತ್ ಮತ್ತು ಜೆ ತಕಶಿಮ ಎಂಬ ವಿದ್ವಾಂಸರು ಕನ್ನಡ - ಇಂಗ್ಲಿಷ್ ಎಟಿಮಲಾಜಿಕಲ್(ಡಿಕ್ಷನರಿ) ನಿಘಂಟು ಎಂಬ ಶೀರ್ಷಿಕೆಯಲ್ಲಿ ನಿಘಂಟೊಂದನ್ನು ರಚಿಸಿದ್ದಾರೆ. ಇದರ ವಿಧಾನವೆಂದರೆ ಪ್ರತಿಯೊಂದು ಕನ್ನಡ ಪದಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಸಮಾನಾರ್ಥಕಗಳನ್ನು ನೀಡಿ ಅರ್ಥವನ್ನು ಸ್ಪಷ್ಟಪಡಿಸುವುದು. ಉಲ್ಲೇಖಪದವು ಬರೋ-ಎಮಿನೋ ನಿಘಂಟಿನಲ್ಲಿ ಬಂದಿದ್ದರೆ ಆ ಅಂಶವನ್ನು ವಿವರಗಳ ಕೊನೆಯಲ್ಲಿ ಸೂಚಿಸಿದ್ದಾರೆ. ಪ್ರತಿಪದದ ಅರ್ಥನಿರೂಪನೆಯನಂತರ ಕೊನೆಯಲ್ಲಿ ಅದರ ಮೂಲಭಾಷೆಯನ್ನು ಆವರಣಗಳಲ್ಲಿ ಸೂಚಿಸಿಸುವುದರಲ್ಲಿ ಕಿಟೆಲನ ಸಂಪ್ರದಾಯವನ್ನು ಮುಂದುವರೆಸಲಾಗಿದೆ. ಪದವು ಸಾಹಿತ್ಯ ಕೃತಿಗಳಲ್ಲಿ ಪ್ರಯೋಗವಾಗಿರುವ ಚರಿತ್ರೆಯನ್ನು ಆಯಾ ಕೃತಿಗಳನ್ನು ಸಂಕೇತಗಳ ಮೂಲಕ ಸೂಚಿಸಿ ತಿಳಿಸಿದ್ದಾರೆ.  ಆದ್ದರಿಂದ ಇದನ್ನು ಎಟಿಮಲಾಜಿಕಲ್ ನಿಘಂಟು ಎಂದು ವರ್ಗೀಕರಿಸುದಕ್ಕಿಂತ ಸಮಗ್ರ ಬಹೂದ್ದೇಶೀ ಅಧ್ಯಯನ ಪೂರಕ ದ್ವಿಭಾಷಾ ನಿಘಂಟು ಎಂದೇ ಗುರುತಿಸುವುದು ಸರಿಯಾದುದು. ನಿಘಂಟಿನ ಹೆಸರು(ಶೀರ್ಷಿಕೆ) ಹೇಗೆ ತಪ್ಪು ದಾರಿಗೆಳೆಯಬಹುದೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಇದರನಂತರ ಈಚೆಗೆ 2014ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ದ್ರಾವಿಡಭಾಷಾ ಜ್ಞಾತಿಪದಕೋಶವನ್ನು ಪ್ರಕಟಿಸಿದ್ದು ಇದರಲ್ಲಿ ಎಲ್ಲವೂ ಕನ್ನಡ ಲಿಪಿಗಳಲ್ಲಿ ಮಾತ್ರವಿದೆ; ಲಿಪ್ಯಂತರ ವಿಧಾನವನ್ನು ಅನುಸರಿಸಿಲ್ಲ. ಹಲವು ದೃಷ್ಟಿಗಳಿಂದ ಇದು ಬರೋ-ಎಮಿನೋ ನಿಘಂಟಿನ ಮುಂದುವರಿಕೆಯಾಗಿದ್ದು ಕನ್ನಡ ಲಿಪಿಗಳ ಬಳಕೆ, ಕನ್ನಡದ ಉಲ್ಲೇಖ ಪದಗಳಿರುವುದು, ಪ್ರಾಚೀನ ನಿಘಂಟುಗಳಿಂದ ಪ್ರಮಾಣೀಕೃತ ನಮೂದುಗಳನ್ನು ಒಳಗೊಂಡಿರುವುದು, ಕನ್ನಡದ ಒಂಬತ್ತು ಉಪಭಾಷೆಗಳಿಂದ ಉಲ್ಲೇಖಗಳನ್ನು ಆಯ್ದಿರುವುದು ಇಂತಹವು  ಹೊಸ ನಿಘಂಟಿನ ವೈಶಿಷ್ಟ್ಯಗಳಾಗಿವೆ. ಇದು ನಿಸ್ಸಂಶಯವಾಗಿ ಎಟಿಮಲಾಜಿಕಲ್ ನಿಘಂಟು. ಕನ್ನಡಕ್ಕೆ ಸಂಬಂಧಿಸಿದಂತೆ ಹೀಗೆ ಎರಡು ಎಟಿಮಲಾಜಿಕಲ್ ನಿಘಂಟು ಅಥವ ಜ್ಞಾತಿಪದಕೋಶಗಳಿವೆ.
ರಾಷ್ಟ್ರೀಯ ನಿಘಂಟು ಎಂಬ ಒಂದು ಪ್ರಕಾರವನ್ನು ಯೂರೋಪಿಯನ್ ನಿಘಂಟು ಪರಂಪರೆಯಲ್ಲಿ ಹೆಸರಿಸುತ್ತಾರೆ. ಇದು ಚಾರಿತ್ರಿಕ ಬೆಳವಣಿಗೆಗಳನ್ನೂ ತೋರಿಸುವ, ರಾಷ್ಟ್ರೀಯ ಪರಿಧಿಗೆಲ್ಲ ಅನ್ವಯಿಸುವ ಪದಗಳನ್ನೊಳಗೊಂಡ ನಿಘಂಟು. ಯೂರೋಪಿನಲ್ಲೇ ಈ ಬಗೆಯ ನಿಘಂಟುಗಳನ್ನು ಒಂದು ಪ್ರಕಾರವೆಂದು ಪರಿಗಣಿಸುವ ಬಗ್ಗೆ ಭಿನ್ನಾಭಿಪ್ರಾವಿದ್ದು (ಪೋಧೆಜೆಕ, ಪು 8)  ಮೇಲೆ ಹೇಳಿದ ಯಾವುದಾರೂ ಒಂದು ವರ್ಗದಲ್ಲಿ ಅವುಗಳನ್ನು ಅಳವಡಿಸಬಹುದು. ಪರ್ಯಾಯ ನಿಘಂಟುಗಳು ಎಂಬ ವರ್ಗವೊಂದನ್ನು  ನಿಘಂಟಿನ ಒಂದು ವಿಧವನ್ನಾಗಿ ಪರಿಗಣಿಸುವುದಿದೆ (ಪೋಧೆಜೆಕ, ಪು 9). ಪದಗಳನ್ನು ಪರ್ಯಾಯ ರೀತಿಯೊಂದರಲ್ಲಿ ಜೋಡಿಸಿ ಅರ್ಥವನ್ನು ವಿವರಿಸುವಂತಹ ನಿಘಂಟುಗಳಿಗೆ ಈ ಹೆಸರನ್ನು ಬಳಸುತ್ತಾರೆ. ಉಳ್ಳಾಲ ನರಸಿಂಗರಾಯರು ಸಂಕಲಿಸಿದ ಕಿಸಮ್ ವಾರ್ ಗ್ಲೋಸರಿ ಆಫ್ ಕ್ಯಾನರೀಸ್ ವರ್ಡ್ಸ್ಯನ್ನು(1891) ಇಂತಹ ನಿಘಂಟುಗಳಿಗೆ ಒಂದು ನಿದರ್ಶನವನ್ನಾಗಿ ನೋಡಬಹುದು.ಸ್ವಯಂ ವಿವರಣಾತ್ಮಕವಾದ ಶೀರ್ಷಿಕೆಗಳಿರುವ ಬೇರೆ ಬೇರೆ ಗುಚ್ಛಗಳಲ್ಲಿ ಪದಗಳನ್ನು ಅಕಾರಾದಿಯಾಗಿ ಜೋಡಿಸಿ ಅವುಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುವುದು ಇಲ್ಲಿ ಅನುಸರಿಸಲಾಗಿರುವ ತಂತ್ರ. ಈ ರೀತಿ ಗುಂಪುಗಳಲ್ಲಿ ಪದಜೋಡಣೆ ಇರುವ ನಿಘಂಟುಗಳಿಗೆ ಥಿಸೌರು ಎಂದೂ ಕರೆಯುವುದುಂಟು. ಗುಚ್ಛಗಳ ಶೀರ್ಷಿಕೆಗಳು ಇಂಗ್ಲಿಷಿನಲ್ಲಿದ್ದು ಮೊದಲ ಮೂರು ಹೀಗಿವೆ (ಉದಾಹರಣೆಗಾಗಿ ನೀಡಿದೆ): Affinity and Relationship, Anatomy and Physiology, Astronomy and Astrology. ಇಂತಹ ಇಪ್ಪತ್ತೊಂಬತ್ತು ಗುಂಪುಗಳು ಇಲ್ಲಿವೆ. ನಿಘಂಟಿನ ಮೂರು ಆವೃತ್ತಿಗಳು (http://www.worldcat.org/wcidentities/lccn-n88154575) ಮುದ್ರಿತವಾಗಿರುವುದಾಗಿ ತಿಳಿದು ಬರುತ್ತದೆ. ಪದಗಳನ್ನು ಪರಿಕಲ್ಪನಾತ್ಮಕ ಗುಂಪುಗಳಾಗಿ ವಿಭಜಿಸುವುದು ಇಂತಹ ನಿಘಂಟುಗಳ ರೀತಿಯಾಗಿದ್ದು ಸಂಸ್ಕೃತದ ಅಮರಕೋಶ ಕೂಡ ಇದೇ ಮಾದರಿಯದು ಎಂಬುದನ್ನು ಗಮನಿಸಬಹುದು. ಆದರೆ ಎಲ್ಲ ಪರ್ಯಾಯ ನಿಘಂಟುಗಳೂ ಈ ರೀತಿಯವಲ್ಲ. ನಾ ಕಸ್ತೂರಿಯವರ ಅನರ್ಥ ಕೋಶ ಇನ್ನೊಂದು ರೀತಿಯದಾಗಿದ್ದು ಅಕ್ಷರಾನುಕ್ರಮದಲ್ಲಿ ಪದಗಳನ್ನು ಜೋಡಿಸಿ  ಪದಗಳಿಗೆ ವಿಪರೀತಾರ್ಥಗಳನ್ನು ನೀಡಿ ಹಾಸ್ಯವನ್ನುಂಟು ಮಾಡುವ ಕೃತಿಯಾಗಿದ್ದು ಪರ್ಯಾಯ ನಿಘಂಟು ವರ್ಗಕ್ಕೆ ಸೇರಬಹುದೆಂದು ಮೇಲ್ನೋಟಕ್ಕೆ ತೋರುತ್ತದೆ; ಪದಗಳ ಪರ್ಯಾಯ ಜೋಡಣೆಯ ಬದಲಾಗಿ ಇಲ್ಲಿ ವಿಭಿನ್ನವಾಗಿ (ಪರ್ಯಾಯವಾಗಿ) ಪದಗಳಿಗೆ ಅರ್ಥಗಳನ್ನು ಸೂಚಿಸುವ ಪದ್ಧತಿ ಇದೆ. ಆದರೆ ನಿಘಂಟಿನ ಪ್ರಧಾನ ಉದ್ದೇಶ ಓದುಗರು ಪದಗಳಿಗೆ ಅರ್ಥ, ಅವು ಯಾವ ಪದವರ್ಗಕ್ಕೆ ಸೇರುತ್ತದೆಂಬ ವಿವರ, ಅಕ್ಷರಿಕೆಯ ಸರಿಯಾದ ರೂಪ, ಪದಪ್ರಯೋಗ ರೀತಿ ಇಂತಹವುಗಳನ್ನು ಕಂಡುಕೊಳ್ಳಲು ಉಪಯುಕ್ತವಾಗುವುದು. ಕಸ್ತೂರಿಯವರ ಈ ಕೋಶ ಇಂತಹ ಪ್ರಕಾರ್ಯಗಳಲ್ಲಿ ನೆರವಾಗುವುದರ ಬದಲು ಮನೋರಂಜಕವಾದುದಾಗಿದೆ; ಸಾಮಾಜಿಕ ವಿಡಂಬನೆಯಾಗಿದೆ. ಇತರ ಕೆಲವರೂ ಈ ದಾರಿಯಲ್ಲಿ ಪ್ರಯತ್ನಿಸುತ್ತಿದ್ದು ಕಸ್ತೂರಿಯವರ ಪ್ರಯತ್ನವನ್ನು ಒಂದು ವಿಶಿಷ್ಟ ಹಾಸ್ಯ ಸಾಹಿತ್ಯ ಪ್ರಕಾರವೆಂದು  ಗುರುತಿಸುವುದು ಹೆಚ್ಚು ಸೂಕ್ತವಾಗಬಹುದು.
            ಉಲ್ಲೇಖ ಭಾಷೆ ಮತ್ತು ಲಕ್ಷ್ಯ ಭಾಷೆಗಳೆರಡೂ ಒಂದೇ ಆಗಿರುವ ಇನ್ನೊಂದು ಬಗೆಯ ನಿಘಂಟುಗಳಿವೆ. ಉಪಯೋಗವಾಗಿರುವ ಭಾಷೆಗಳ ಸಂಖ್ಯೆಯ ದೃಷ್ಟಿಯಿಂದ ಇವು ಏಕ ಭಾಷಾ ನಿಘಂಟುಗಳೇ ಆದರೂ ಇವುಗಳ ರೀತಿ ವಿಭಿನ್ನ. ಈ ನಿಘಂಟುಗಳಲ್ಲಿಆಯ್ದುಕೊಂಡಿರುವ ಉಲ್ಲೇಖಪದಗಳೆಲ್ಲ ಒಂದು ಕ್ಷೇತ್ರಕ್ಕೆ ಸೇರಿದವಾದರೂ ಆ ಕ್ಷೇತ್ರವಿನ್ನೂ ಶೈಕ್ಷಣಿಕಶಿಸ್ತು ಎಂಬ ಗೌರವಕ್ಕೆ ಪಾತ್ರವಾಗಿಲ್ಲ;  ಶಾಲಾಕಾಲೇಜುಗಳಲ್ಲಿ ಅದನ್ನೊಂದು ಅಧ್ಯಯನ ವಿಷಯವನ್ನಾಗಿಸಿ ಅದರಲ್ಲಿ ತಜ್ಞತೆ ಹೊಂದಲು ಅವಕಾಶ ಕಲ್ಪಿಸಲಾಗಿಲ್ಲ. ತಾಪತ್ರಯ, ದಶಾವತಾರ ಇಂತಹ ಸಂಖ್ಯೆಯುಕ್ತ ಪದಗಳನ್ನು ಉಲ್ಲೇಖ ಪದಗಳನ್ನಾಗಿ ಆಯ್ದು ಸಂಖ್ಯಾನುಕ್ರಮದಲ್ಲಿ ಜೋಡಿಸಿ ಐ ಕೆ  ಪಿ ಶರ್ಮ ಇವರ ಸಾಂಖ್ಯೇಯ ಶಬ್ದಮಂಜರಿ(1962)ಯಲ್ಲಿ ಅರ್ಥ ವಿವರಿಸಿದ್ದಾರೆ. ಬೆನೆಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿ ಇವರು ಪುರಾಣ ನಾಮ ಚೂಡಾಮಣಿ(1971)ಯಲ್ಲಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಬರುವ ಹೆಸರುಗಳನ್ನು ಅಕಾರಾದಿಯಾಗಿ ಜೋಡಿಸಿ ಆ ಹೆಸರಿನ ವ್ಯಕ್ತಿ ಸ್ಥಳ ಇತ್ಯಾದಿಗಳ ಬಗ್ಗೆ ಇರುವ ಕತೆ ಘಟನೆಗಳನ್ನೆಲ್ಲ ಸಂದರ್ಭ ಸಮೇತ ವಿವರಿಸಲಾಗಿದೆ. ಇಂತಹವು ಒಂದು ಬೇರೆಯೇ ನಿಘಂಟುವಿಧವಾಗಿದ್ದು ಈ ವಿಧದ ಕೃತಿಗಳನ್ನು ವಿವರಣಾತ್ಮಕ ನಿಘಂಟುಗಳೆಂದು ಹೆಸರಿಸಬಹುದು. ಯಜ್ಞನಾರಾಯಣ ಉಡುಪರ ಪುರಾಣ ಭಾರತಕೋಶ(1975) ಇಂತಹವಕ್ಕೆ ಇನ್ನೊಂದು ಉದಾಹರಣೆ.
            ನಿರ್ದಿಷ್ಟ ಶೈಕ್ಷಣಿಕ ಶಿಸ್ತಿಗೆ ಸಂಬಂಧಿಸಿದ ವಿಶೇಷ ಪದಗಳನ್ನೆಲ್ಲ ಅಕಾರಾದಿಯಾಗಿ ಜೋಡಿಸಿ ಅರ್ಥವನ್ನು ವಿವರಿಸುವ ಏಕಭಾಷಾ ಅಥವ ದ್ವಿಭಾಷಾ ನಿಘಂಟುಗಳಿವೆ. ಉದಾ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು (ಇಂಗ್ಲಿಶ್ – ಕನ್ನಡ)(1981), ಡಿ. ಎಸ್‌. ಶಿವಪ್ಪ ಇವರ ವೈದ್ಯಕ ಪದಗಳ ಹುಟ್ಟು ರಚನೆ (1990) , ಕರ್ನಾಟಕ ಸರಕಾರದ  ಗ್ಲಾಸರಿ ಆಫ್ ಅಡ್ಮಿನಿಸ್ಟ್ರೇಟಿವ್ ಟರ್ಮ್ಸ್ ಇಂಗ್ಲಿಶ್ – ಕನ್ನಡ(1967), ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಇಂಗ್ಲಿಶ್‌ – ಕನ್ನಡ ವಿಜ್ಞಾನಪದ ಕೋಶ (1990), ಇತ್ಯಾದಿ. ಇಲ್ಲೆಲ್ಲ ಅರ್ಥ ಹೇಳುವುದಕ್ಕಾಗಿ ಆಯ್ಕೆ ಮಾಡಿದ ಪದಸಂಗ್ರಹ ವಿಶಿಷ್ಟವಾಗಿದ್ದು ಶಾಲಾ ಕಾಲೇಜುಗಳಲ್ಲಿ ಕಲಿಕಾ ವಿಷಯಗಳಾದ ಒಂದು ಶೈಕ್ಷಣಿಕ ಶಿಸ್ತಿನ ವ್ಯಾಪ್ತಿಗೊಳಪಡುತ್ತಿದೆ ಮತ್ತು ಸಾಮಾನ್ಯಪದದಂತೆ ಉಪಯೋಗವಾಗುವ ಪದವೊಂದಕ್ಕೂ ಶಾಸ್ತ್ರಗಳಲ್ಲಿ ಇರುವ ವಿಶೇಷಾರ್ಥವನ್ನು ನಿರೂಪಿಸುತ್ತದೆ. ಸಂಬಂಧಿಸಿದ ನಿಘಂಟು ಆ ವಿಷಯದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಶಾಸ್ತ್ರೀಯವಾಗಿ ಪದಗಳನ್ನು ಅರ್ಥೈಸುತ್ತಿದ್ದು ಭಾಷಾಂತರಕ್ಕಾಗಿ ಬಳಸಬಹುದಾಗಿದೆ. ಈ ನಿಘಂಟುಗಳೆಲ್ಲ ವಿವಕ್ಷಿತ ಶೈಕ್ಷಣಿಕ ಶಿಸ್ತಿಗೆ ಸಂಬಂಧಿಸಿದ ಪರಿಭಾಷಾ ರೂಪದ ಪದಗಳಿಗೆ ಅರ್ಥ ಹೇಳುವಂತಹವಾಗಿದ್ದು ವಿಶೇಷ ನಿಘಂಟುಗಳೆಂದು ಅಥವ ತಜ್ಞತಾ ನಿಘಂಟುಗಳೆಂದು  ಕರೆಸಿಕೊಂಡಿವೆ.
            ಪಾಶ್ಚಾತ್ಯ ಭಾಷೆಗಳಿಗೆ ಸಂಬಂಧಿಸಿದಂತ ಅಕ್ಷರಿಕಾ(spelling) ನಿಘಂಟು, ಉಚ್ಚಾರಣಾ(pronunciation) ನಿಘಂಟು – ಇಂತಹ ನಿಘಂಟುಗಳು ರಚನೆಯಾಗಿವೆ. ಪದದಲ್ಲಿರುವ ಅಕ್ಷರಗಳ ಜೋಡಣೆಗಿಂತ ಭಿನ್ನವಾಗಿ ಆಪದದ ಉಚ್ಚಾರವಿರುವ ಗಣನೀಯ ಸಂಖ್ಯೆಯ ಪದಗಳಿರುವುದರಿಂದ ಮತ್ತು ಅಕ್ಷರಗಳಿಗೆ ಅವು ಪ್ರತಿನಿಧಿಸುವ ಧ್ವನಿಗಿಂತ ಭಿನ್ನವಾದ ಹೆಸರಿರುವುದರಿಂದ ಇಂತಹ ನಿಘಂಟುಗಳು ಅಗತ್ಯವಾಗುತ್ತವೆ. ಕನ್ನಡದಲ್ಲಿ ಈ ಸಂದರ್ಭವಿಲ್ಲ. ಗಣನೀಯ ಸಂಖ್ಯೆಯ ಸಾಹಿತ್ಯಿಕ ಕೃತಿಳು, ವೃತ್ತ ಪತ್ರಿಕೆಗಳು, ಸಂಭಾಷಣೆಗಳು ಇತ್ಯಾದಿಗಳನ್ನು ಪರಿಶೀಲಿಸಿ ಅವುಗಳಲ್ಲಿರುವ ಒಟ್ಟು ಪದಸಂಖ್ಯೆಯಲ್ಲಿ ಯಾವ ಪದ ಎಷ್ಟು ಪುನರಾವರ್ತನೆಗೊಂಡಿದೆ ಎಂಬುದನ್ನು ದಾಖಲಿಸುವ ನಿಘಂಟುಗಳು ವಿಶ್ವದ ಕೆಲವು ಭಾಷೆಗಳಲ್ಲಿ ಪ್ರಕಟವಾಗಿವೆ. ಉದಾ. Frequency Dictionary of the Contemporary American. ಇಂತಹ ಕೃತಿಯು ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು,  ಪಠ್ಯಪುಸ್ತಕ ರಚಿಸುವುದು ಇತ್ಯಾದಿಗಳಲ್ಲಿ ಯಾವ ಪದಗಳಿಗೆ ಆದ್ಯತೆ ನೀಡಬೇಕೆಂಬುದನ್ನು ನಿರ್ಧರಿಸಲು ಅಗತ್ಯ ಮಾಹಿತಿಯನ್ನು  ಒದಗಿಸಬಲ್ಲುದು. ಇಂತಹ ನಿಘಂಟುಗಳು ಕನ್ನಡದಲ್ಲಿ ಇನ್ನೂ ರಚನೆಯಾಗ ಬೇಕಾಗಿವೆ. ಕನ್ನಡಪಡೆನುಡಿಗಳ ಕೋಶ(ಟಿ ವಿ ವೆಂಕಟರಮಣಯ್ಯ,1968) ಎಂಬ ಒಂದು ನಿಘಂಟು ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾಲಯದ ಗ್ರಂಥಭಂಡಾರದಲ್ಲಿ ಇದನ್ನು ಪಡೆನುಡಿ – ನುಡಿಗಟ್ಟು ನಿಘಂಟು ಎಂದು ವರ್ಗೀಕರಿಸಿದ್ದಾರೆ.  ಓದುಗರಿಗೆ ನಿಘಂಟನ್ನು ಆಯ್ದುಕೊಳ್ಳಲು ಸಹಾಯವಾಗುವ ದೃಷ್ಟಿಯಿಂದ ನುಡಿಗಟ್ಟು ನಿಘಂಟು ಎಂಬ ಒಂದು ವರ್ಗವು ಪ್ರಯೋಜನಕಾರಿಯಾಗಬಹುದು.

                        ಇಪ್ಪತ್ತನೆಯ ಶತಮಾನದ ಒಂದು ಮುಖ್ಯ ಬೆಳವಣಿಗೆಯೆಂದರೆ ಉಪಭಾಷಾ ನಿಘಂಟುಗಳದು. 2014ರ ದ್ರಾವಿಡ ಭಾಷಾ ಜ್ಞಾತಿಪದಕೋಶದಲ್ಲಿ ಹಾಲಕ್ಕಿ ಕನ್ನಡ, ಜೇನುಕುರುಬ ಕನ್ನಡ, ನಂಜನಗೂಡ ಕನ್ನಡ, ಬಾರ್ಕೂರು ಕನ್ನಡ ಇತ್ಯಾದಿಯಾಗಿ ಒಂಬತ್ತು ಉಪಭಾಷೆಗಳ ಪದಗಳನ್ನು ಉಲ್ಲೇಖಿಸಿದ್ದು ಈ ಉಪಭಾಷೆಗಳ ಪದಗಳ ಒಂದು ಸ್ಥೂಲ ಪರಿಚಯ ಇಲ್ಲಿದೆ. ಬರೋ-ಎಮಿನೋ ನಿಘಂಟಿನಲ್ಲೂ ಇಂತಹ ಪದಗಳನ್ನು ಕಾಣಬಹುದು. ಡಿ ಎನ್ ಶಂಕರ ಭಟ್ಟರು 1970ರಲ್ಲಿ ಬಾರ್ಕೂರು ಕನ್ನಡದ ಕೋಶಿಕೆಯನ್ನು, ಯು ಪಿ ಉಪಾಧ್ಯಾಯ ಇವರು ಸೋಲಿಗ ಕನ್ನಡದ ಪದ ಮತ್ತು ಅರ್ಥಗಳನ್ನು ಒಳಗೊಂಡ ಅಧ್ಯಯನವನ್ನು, ಹಂದೆ ಇವರು ಬಂಧನ ಕಾಣದ ಪದಗಳು ಎಂಬ ಕೋಟಕನ್ನಡ ಕೋಶಿಕೆಯನ್ನು, ಅರ್ತಿಕಜೆ ಇವರು ಹವಿಗನ್ನಡ ನುಡಿಗಟ್ಟುಗಳ ಕೋಶವನ್ನು ರಚಿಸಿರುವಂತೆ ತಿಳಿದು ಬರುತ್ತದೆ. ಮರಿಯಪ್ಪ ಭಟ್ಟ ಇವರ ಹವ್ಯಕ – ಇಂಗ್ಲಿಷ್ ನಿಘಂಟು(1983) ವೈಜ್ಞಾನಿಕವಾಗಿ ರಚಿಸಿದ ಒಂದು ಸಮಗ್ರ ಉಪಭಾಷಾ ನಿಘಂಟು. ಉಪಭಾಷೆಗಳಲ್ಲಿ ವಿಶೇಷಪದಗಳನ್ನೂ ಕನ್ನಡದ ಸಾಮಾನ್ಯ ಪದಗಳಿಗೆ ಉಪಭಾಷೆಗಳಲ್ಲಿರುವ ವಿಶೇಷವಾಗಿರುವ ಅರ್ಥಗಳನ್ನೂ ಸ್ಪಷ್ಟಪಡಿಸುವಂತಹ ನಿಘಂಟುಗಳನ್ನು ಉಪಭಾಷಾ ನಿಃಘಂಟುಗಳು ಎಂಬ ವಿಧವಾಗಿ ಪರಿಗಣಿಸಬಹುದು. ಇದಿನ್ನೂ ಪ್ರವರ್ಧಮಾನದಲ್ಲಿರುವ ನಿಘಂಟು ಕ್ಷೇತ್ರ ಎಂಬುದನ್ನು ಗಮನಿಸಬಹುದು.

            ಕಾವ್ಯ ಸಂಗ್ರಹಗಳ ಕೊನೆಯಲ್ಲಿ ಮತ್ತು ವಿವಿಧ ಕಾವ್ಯಗಳ ಮುದ್ರಿತ ಆವೃತ್ತಿಗಳ ಅಂತ್ಯದಲ್ಲಿ ಆಯಾ ಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಕ್ಲಿಷ್ಟ ಪದಗಳ ಅರ್ಥವನ್ನು ತಿಳಿಸುವ ಸಣ್ಣ ಕೋಶಿಕೆಗಳನ್ನು ಹಲವು ವರ್ಷಗಳಿಂದ ನೀಡಲಾಗುತ್ತಿದೆ. ಇಂತಹ ಸಂಪ್ರದಾಯವನ್ನು ಕ್ರಿ ಶ 1868ರಲ್ಲಿ ರೆ. ಜಿ ವುರ್ತ್ ಇವನು ತನ್ನ ಪ್ರಾಕ್ಕಾವ್ಯ ಮಾಲಿಕೆಯಲ್ಲಿ ಪ್ರಾರಂಭಿಸಿದನು. ಆದರೆ ಇಂತಹ ಕೋಶಿಕೆಗಳು ಸೀಮಿತ ವ್ಯಾಪ್ತಿಯವಾಗಿದ್ದು ಪದಗಳ ಅರ್ಥಗಳನ್ನು ಇತರ ಪ್ರಮಾಣಬದ್ಧ ನಿಘಂಟುಗಳಿಂದ ಆಯ್ದಿರುತ್ತಾರೆ. ಆದ್ದರಿಂದ ಇವುಗಳನ್ನು ಒಂದು ಪ್ರತ್ಯೇಕ ನಿಘಂಟುವಿಧವನ್ನಾಗಿ ನೋಡುವ ಅಗತ್ಯವಿಲ್ಲ. ಇವು ಸ್ವತಂತ್ರ ನಿಘಂಟುಗಳಲ್ಲ; ಒಂದು ರೀತಿಯಲ್ಲಿ ನಿಘಂಟುಭಾಗಳು.
            ಮೇಲೆ ನಿರೂಪಿಸಲಾಗಿರುವ ನಿಘಂಟುಗಳ ವರ್ಗೀಕರಣವನ್ನು ಮೂರು ಆಯಾಮದ ಒಂದು ವರ್ಗೀಕರಣವನ್ನಾಗಿ ಪರಿಗಣಿಸಬಹುದು. ಜೆಲವು ವಿದ್ವಾಂಸರು ಜಾರುಚಿತ್ರದ ರೀತಿಯಲ್ಲಿ ವರ್ಗೀಕರಣವನ್ನು ಪ್ರತಿನಿಧಿಸುತ್ತಾರಾದರೂ (ಜುಗುಸ್ತ: 1971) ನಾನಿಲ್ಲಿ ತಃಖ್ತೆಯ ರೀತಿಯ ವರ್ಗೀಕರಣವೊಂದನ್ನು ಅನುಸರಿಸಿದ್ದೇನೆ. ಮೂರು ಆಯಾಮಗಳಲ್ಲಿ ಎರಡನ್ನು ತಃಖ್ತೆಯ ಎಡ ತುದಿಯ ಶೀರ್ಷಿಕೆಗಳು ನಿರೂಪಿಸುತ್ತಿದ್ದು ಉದ್ದ ಸಾಲುಗಳಿಂದ ಸೂಚಿತವಾಗುತ್ತವೆ: (1) ಮೊದಲನೆಯದಾಗಿ ಭಾಷಾ ಆಯಾಮ – ನಿಘಂಟಿನಲ್ಲಿ ಉಲ್ಲೇಖ ಭಾಷೆ ಮತ್ತು ಲಕ್ಷ್ಯ ಭಾಷೆಗಳೆರಡೂ ಒಂದೇ ಆಗಿದ್ದು ಏಕಭಾಷಿಕವಾಗಿದೆಯೋ, ಬೇರೆಬೇರೆಯಾಗಿದ್ದು ದ್ವಿಭಾಷಿಕವಾಗಿದೆಯೋ, ಉಲ್ಲೇಖ ಪದಗಳಿಗೆ ಅದೇ ಭಾಷೆಯಲ್ಲಿ ಅರ್ಥವನ್ನು ನಿರೂಪಿಸುವುದರ ಜೊತೆಗೆ ಇನ್ನೊಂದು ಭಾಷೆಯ ಸಮಾನಾರ್ಥಕಗಳನ್ನು ನೀಡುವಂತಹ ಅರೆದ್ವಿಭಾಷಾ ವಿಧದ್ದೋ ಅಥವಾ ಒಂದು ಭಾಷೆಯ ನಮೂದುಗಳಿಗೆ ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ಅರ್ಥ ನಿರೂಪಿಸಿ ಬಹುಭಾಷೆಗಳನ್ನು ಒಳಗೊಂಡಿದೆಯೋ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವ ಆಯಾಮ; (2) ಎರಡನೆಯದು ಮುಖ್ಯವಾಗಿ ಗಾತ್ರಾನುಸಾರಿಯಾಗಿದ್ದು ಅತಿ ಸಂಕ್ಷಿಪ್ತ, ಸಂಕ್ಷಿಪ್ತ, ವ್ಯಾಪಕ ಮತ್ತು ಸಮಗ್ರ ಎಂದು ಗುರುತಿಸಲಾಗಿದೆ. ಇವು ಉಲ್ಲೇಖ ಪದಗಳನ್ನು ಯಾವ ಪ್ರಮಾಣದಲ್ಲಿ ಆಯ್ಕೆ ಮಾಡಲಾಗಿದೆ ಎಂಬುದನ್ನೂ ಸೂಚಿಸುತ್ತವೆ. ಈ ಎರಡೂ ಆಯಾಮಗಳನ್ನು  ಎಡದಿಂದ ಬಲಕ್ಕೆ ಸಾಗುವ ಉದ್ದ ಸಾಲುಗಳಲ್ಲಿ ಯೋಜಿಸಲಾಗಿದೆ. (3) ಮೂರನೆಯದು ನಿಘಂಟುಗಳ ಸ್ವರೂಪದ ಆಯಾಮ – ನಿಜವಾಗಿ ನಿಘಂಟಿನ ಕಾರ್ಯ ಯಾವ ರೀತಿಯದು ಮತ್ತು ಅದನ್ನು ಯಾವ ರೀತಿಯ ಉಪಯೋಗಕ್ಕಾಗಿ ಓದುಗರು ಬಳಸಬಹುದು ಎಂಬುದನ್ನು ತಿಳಿಸುವ ಆಯಾಮ. ಈ ರೀತಿಯ ಐದು ವಿಭಿನ್ನ ವರ್ಗಗಳನ್ನು ಕಲ್ಪಿಸಲಾಗಿದ್ದು ಇವುಗಳನ್ನು ಮೇಲಿನಿಂದ ಕೆಳಕ್ಕೆ ಸಾಗುವ ಕಂಬ ಸಾಲುಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಹೊಸ ನಿಘಂಟುಗಳನ್ನು ಅಳವಡಿಸಲು ಹೊಸ ಉದ್ದಸಾಲು ಮತ್ತು ಕಂಬ ಸಾಲುಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಉದಾಹರಣಗೆ ಆವೃತ್ತಿ ನಿಘಂಟುಗಳು ಈಗ ಕನ್ನಡದಲ್ಲಿಲ್ಲವಾಗಿ ಅದು ಈ ತಃಖ್ತೆ ಅಥವ ಪಟ್ಟಿಯಲ್ಲಿ ನಮೂದಾಗಿಲ್ಲ. ಅಂತಹ ನಿಘಂಟು ರಚನೆಯಾದಾಗ ಅದನ್ನು ಏಕಭಾಷಾ ವ್ಯಾಪಕ ನಿಘಂಟುಗಳ ಹೊಸ ವಿಧವಾಗಿ ಹೊಸ ಕಂಬಸಾಲಿನಲ್ಲಿ ಸ್ಥಳ ಪಡೆಯುತ್ತದೆ. ಮುಂದಿನ ಪುಟದಲ್ಲಿ ಈ ರೀತಿಯ ವರ್ಗೀಕರಣವನ್ನು ತಃಖ್ತೆಯ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ ಯಾವುದೇ ನಿಘಂಟನ್ನು ಅದರ ಸ್ಥಾನದಲ್ಲಿ ನೋಡಿದರೆ ಅದು ಎಷ್ಟು ಭಾಷೆಗಳನ್ನು ಒಳಗೊಂಡಿದೆ, ಸ್ಥೂಲವಾಗಿ ಅದರಲ್ಲಿರುವ ಉಲ್ಲೇಖ ಪದಗಳ ಪ್ರಮಾಣವೆಷ್ಟು ಮತ್ತು ಓದುಗರು ತಮ್ಮ ಯಾವ ರೀತಿಯ ಉಪಯೋಗಕ್ಕಾಗಿ ಅದನ್ನು ಬಳಸಬಹುದು ಎಂಬ ವಿವರಗಳನ್ನು ತಿಳಿಯ ಬಹುದು. ಇದು ಸಾಮಾನ್ಯ ಓದುಗರಿಗೆ ಈ ವರ್ಗೀಕರನದಿಂದ ಆಗುವ ಪ್ರಯೋಜನ.
            ಪಟ್ಟಿಯನ್ನು ನೋಡಿದರೆ ಹಲವು ಕುತೂಹಲಕರ ಅಂಶಗಳು ಸ್ಪಷ್ಟವಾಗುತ್ತವೆ. ಕನ್ನಡದಲ್ಲಿ ಪ್ರಮಾಣಭೂತವಾದ ಉಪಭಾಷಾ ನಿಘಂಟು ೊಂದು ಮಾತ್ರ ಇದ್ದು ಇಂತಹ ನಿಘಂಟುಗಳು ಇತರ ಉಪಭಾಷೆಗಳಿಗೆ ಇನ್ನಷ್ಟೇ ರಚನೆಯಾಗಬೇಕಿದೆ. ಅದರಲ್ಲೂ ಒಂದು ಉಪಭಾಷೆಯ ಉಲ್ಲೇಖ ಪದಗಳಿಗೆ ಶಿಷ್ಟಕನ್ನಡದಲ್ಲಿ ಅರ್ಥ ಹೇಳುವಂತಹ, ಒಂದು ಉಲ್ಲೇಖ ಪದಕ್ಕೆ ಕನ್ನಡದ ಇತರ ಉಪಭಾಷೆಗಳ ‘ಜ್ಞಾತಿ’ಗಳನ್ನು ನೀಡುವಂತಹ ನಿಘಂಟುಗಳ ರಚನೆ ಆಗಿಯೇ ಇಲ್ಲ. ಇಂತಹ ತುಲನಾತ್ಮಕ ಪ್ರಕ್ರಿಯೆಗಳಿಂದ ಕನ್ನಡ ಪದಗಳ ಸ್ವರೂಪ ಇನ್ನಷ್ಟು ಸ್ಪಷ್ಟವಾಗಬಹುದು. ವಿವರಣಾತ್ಮಕ ನಿಘಂಟುಗಳು ಇನ್ನೂ ಹಲವು ತರಹದವು ಬರಬಹುದಾಗಿದೆ. ಉದಾಹರಣೆಗೆ ರಾಮಾಯಣದ ಹೆಸರುಗಳ ಕೋಶ, ವೇದೋಪನಿಷತ್ತುಗಳಲ್ಲಿನ ಹೆಸರುಗಳ ಕೋಶ ಇತ್ಯಾದಿ. ಆಡಳಿತ, ವಿಜ್ಞಾನ, ಶಿಕ್ಷಣ, ಮನೋವಿಜ್ಞಾನ ಇಂತಹ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದವನ್ನು ಹೊರತುಪಡಿಸಿದರೆ ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ, ತತ್ವ ಶಾಸ್ತ್ರ ಸಮಾಜ ಶಾಸ್ತ್ರ ಇತ್ಯಾದಿಗಳಿಗೆ ಸಂಬಂಧಿಸಿದ, ತಂತ್ರಜ್ಞಾನ ಗಣಕವಿಜ್ಞಾನ ಮುಂತಾದುವುಗಳಿಗೆ ಸಂಬಂಧಿಸಿದ ವಿಶೇಷ ನಿಘಂಟುಗಳು ಇನ್ನೂ ಬರಬೇಕಾಗಿದೆ. ಕನ್ನಡ ರತ್ನ ಕೋಶದಷ್ಟು ಅಥವ ಅದಕ್ಕಿಂತ ಹೆಚ್ಚು ಸಮರ್ಥವಾದ, ಕಡಿಮೆ ಬೆಲೆಯ ಆಧುನಿಕ ಸಂಕ್ಷಿಪ್ತ ನಿಘಂಟುಗಳಿಗೆ ಒಳ್ಳೆಯ ಅವಕಾಶಗಳಿರಬಹುದು. ಪರ್ಯಾಯ ನಿಘಂಟುಗಳ ಕ್ಷೇತ್ರದಲ್ಲಿ ಇನ್ನೂ ಅನ್ವೇಷಣೆಗಳಾಗಬೇಕಾಗಿದೆ; ಈ ಕ್ಷೇತ್ರದ ಸಾಧ್ಯತೆಗಳನ್ನು ಇನ್ನೂ ಪೂರ್ಣವಾಗಿ ದುಡಿಸಿಕೊಳ್ಳಲಾಗಿಲ್ಲವೆಂದೆನಿಸುತ್ತದೆ. ಒಂದೇ ಪರ್ಯಾಯ ಕೋಶ ಕನ್ನಡ ನಿಘಂಟು ಇತಿಹಾಸದಲ್ಲಿ ಲಭ್ಯವಿದೆ; ಅದೂ ಗತಕಾಲಕ್ಕ ಸೇರಿಹೋಗಿದ್ದು ಕಿಸಮ್ ವಾರ್ ಗ್ಲೋಸರಿಯ ಪರಿಷ್ಕರಣೆ ಮತ್ತು ವಿಸ್ತರಣೆ ಅಗತ್ಯವಾಗಿದೆ; ಏಕ ಭಾಷಾ ಪರ್ಯಾಯ ಕೋಶಗಳ ರಚನೆಯಾಗಬೇಕಾಗಿದ್ದು ಹೊಸ ಬಗೆಯ ಮುಂದುವರೆದ ಪರ್ಯಾಯ ನಿಘಂಟು ಸಂಕಲಿತವಾಗಬೇಕಾಗಿದೆ. ಜ್ಞಾತಿಪದ ಕೋಶವನ್ನು ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಜೊತೆಗೆ ಉಳಿದ ಇಪ್ಪತ್ತಕ್ಕೂ ಹೆಚ್ಚಾಗಿ ಅಸ್ತಿತ್ವದಲ್ಲಿರುವ ಇತರ ದ್ರಾವಿಡ ಭಾಷೆಗಳ ಪದಗಳನ್ನೂ ಸೇರಿಸಿ ಪರಿಪೂರ್ಣಗೊಳಿಸಬೇಕಾಗಿದೆ. ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳ ನಡುವಣ ದ್ವಿಭಾಷಾ ನಿಘಂಟುಗಳ ರಚನೆ ದ್ರಾವಿಡಭಾಷೆಗಳ ಸಾಹಿತ್ಯಿಕ ಸಾಂಸ್ಕೃತಿಕ ಸಂಬಂಧಗಳನ್ನು ಉತ್ತಮ ಪಡಿಸಲು ಸಹಾಯಕವಾಗಬಹುದು.


ವರ್ಗೀಕರಣವಿವರ ತಃಖ್ತೆ
                                                                       


ಸಾಮಾನ್ಯ ಉಪಯೋಗ
ಜ್ಞಾತಿಪದಕೋಶ
ಪರ್ಯಾಯ
ಉಪಭಾಷಾ
ವಿವರಣಾತ್ಮಕ
ವಿಶೇಷ ನಿಘಂಟು
ಏಕಭಾಷೆ
ಅತಿ ಸಂಕ್ಷಿಪ್ತ
ರನ್ನಕಂದ ಮುಂತಾದ
ಹಳಗನ್ನಡ ನಿಘಂಟುಗಳು





ಸಂಕ್ಷಿಪ್ತ
ಕನ್ನಡ ರತ್ನ ಕೋಶ, ಇತ್ಯಾದಿ ಪಾಕೆಟ್ ಮಾದರಿ ನಿಘಂಟುಗಳು



ಸಾಂಖ್ಯೇಯ ಶಬ್ದಮಂಜರಿ.


ವ್ಯಾಪಕ
ಪರಿಷತ್ತಿನ ಸಂಕ್ಷಿಪ್ತ ನಿಘಂಟು,ಸಿರಿಗನ್ನಡ ಕೋಶ,ಕಸ್ತೂರಿ ಕೋಶ, ಕನ್ನಡ-ಕನ್ನಡ ಕಸ್ತೂರಿ ಕೋಶ
.ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟ ಪದ) ನಿಘಂಟು.ಇತ್ಯಾದಿ
ಹಂಪನಾ ಇವರ ದ್ರಾವಿಭಾಷಾ ಜ್ಞಾತಿಪದಕೋಶ
(ಅನರ್ಥ ಕೋಶ,ಇ.)

ಪುರಾಣ ನಾಮ ಚೂಡಾಮಣಿ.
ಪುರಾಣ ಭಾರತಕೋಶ.

ಕುಂಬಾರ ವೃತ್ತಿ ಪದಕೋಶ. ಬಡಿಗ ವೃತ್ತಿಪದ ಮಂಜರಿ .
 ವೈದ್ಯಕ ಪದಗಳ ಹುಟ್ಟು. ರಚನೆ.ಕಾನೂನು ರತ್ನಕೋಶ .
ವಚನ ಪರಿಭಾಷಾ ಕೋಶ.
ನುಡಿಗಟ್ಟು ನಿಘಂಟು
ಸಮಗ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು





ದ್ವಿಭಾಷೆ
ವ್ಯಾಪಕ
ರೀವನ ಇಂಗ್ಲಿಷ್-ಕನ್ನಡ ನಿಘಂಟು.
 ಜೀಗ್ಲರನ ಇಂಗ್ಲಷ್-ಕನ್ನಡ ಶಾಲಾ ನಿಘಂಟು. ಗ್ಯಾರಟ್ಟನ ಇಂಗ್ಲಿಷ್-ಕನ್ನಡ ನಿಘಂಟು. ಇಂಗ್ಲೀಶಿನ ಪದಗಳಿಗೆ ಕನ್ನಡದ್ದೇ ಪದಗಳು, ಇತ್ಯಾದಿ. ರೀವನ ಕನ್ನಡ-ಇಂಗ್ಲಿಷ್  ನಿಘಂಟು. ಬ್ಯುಶರನ  ಕನ್ನಡ-ಇಂಗ್ಲಿಷ್  ನಿಘಂಟು. ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ.ಕನ್ನಡ-ರಶ್ಯನ್ ಸಂಸ್ಕೃತ – ಕನ್ನಡ ಕೋಶ. ಸಂಸ್ಕೃತ – ಕನ್ನಡ ಶಬ್ದಕೋಶ.ಹಿಂದಿ –
ಕನ್ನಡ ಶಬ್ದಕೋಶ. ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ

ಬರೋ-ಎಮಿನೋ ಇವರ ಎಟಿಮಲಾಜಿಕಲ್ ಡಿಕ್ಷನರಿ ಆಫ್ ದ್ರವಿಡಿಯನ್ ಲ್ಯಾಂಗ್ವೇಜಸ್
ಕಿಸಮ್ ವಾರ್ ಗ್ಲೋಸರಿ
ಹವ್ಯಕ-ಇಂಗ್ಲಿಷ್ ನಿಘಂಟು

ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು
ಗ್ಲಾಸರಿ ಆಫ್ ಅಡ್ಮಿನಿಸ್ಟ್ರೇಟಿವ್ ಟರ್ಮ್ಸ್ ಇಂಗ್ಲಿಶ್ – ಕನ್ನಡ
ಇಂಗ್ಲಿಶ್‌ – ಕನ್ನಡ ವಿಜ್ಞಾನ ಕೋಶ
ಭಾಷಾ ವಿಜ್ಞಾನ ಕೋ
ಮನೋವಿಜ್ಞಾನ ಪಾರಿಭಾಷಿಕ ಕೋಶ


ಸಮಗ್ರ
ಮೈಸುರು ವಿವಿ ಇಂಗ್ಲಿಷ್-ಕನ್ನಡ ನಿಘಂಟು. ಕಿಟೆಲನ ಕನ್ನಡ-ಇಂಗ್ಲಿಷ್ ನಿಘಂಟು.





ಅರೆದ್ವಿಭಾಷೆ
ವ್ಯಾಪಕ
ಹಿಂದಿ-ಹಿಂದಿ- ಕನ್ನಡ  ರತ್ನಕೋಶ.ಇಂಗ್ಲಿಷ್-ಇಂಗ್ಲಿಷ್-ಕನ್ನಡ
ಕನ್ನಡ – ಕನ್ನಡ – ಹಿಂದಿ ಶಬ್ದಕೋಶ’
‘ಕನ್ನಡ-ಕನ್ನಡ-ಇಂಗ್ಲಿಷ್-ನಿಘಂಟು’
ಕನ್ನಡ – ಕನ್ನಡ ಇಂಗ್ಲಿಷ್ ನಿಘಂಟು ,ಇತ್ಯಾದಿ.






ಬಹುಭಾಷೆ
ವ್ಯಾಪಕ
ಕನ್ನಡ-ಕನ್ನಡ-ಇಂಗ್ಲಿಷ್-ತಮಿಳು-ಜಪಾನೀ ನಿಘಂಟು.





                                                    

  
                                                 ಗ್ರಂಥ ಋಣ:
1.   http://grammar.about.com/od/il/g/lexicogterm.htm- ಮೊದಲ ನಿಘಂಟುಗಳು ಉಂಟಾಗಿರಬಹುದಾದ ರೀತಿಯ ವವರ ಇಲ್ಲಿದೆ. Howard Jackson, Lexicography: An Introduction. Routledge, 2002 ಇದರಿಂದ ಉಲ್ಲೇಖಿತ.
2.   http://encyclopedia2.thefreedictionary.com/Metalexicography ಈ ತಾಣವು ಈಗ ಹಳತಾಗಿದ್ದು ಏಕಪಕ್ಷೀಯವಾಗಿರಬಹುದೆಂಬ ಎಚ್ಚರಿಕೆಯನ್ನು ಅಲ್ಲಿಯೇ ನೀಡದೆ. ಆದರೂ ಈ ರೀತಿಯ ಹಂತ ಕಲ್ಪನೆ ನಿಘಂಟು ಬೆಳವಣಿಗೆಯನ್ನು ತಾರ್ಕಿಕವಾಗಿ ಸೂಚಿಸತ್ತಿದೆ.
3.   https://kanaja.in/archives/125658 ಇದರಲ್ಲಿ ನಿಘಂಟುಗಳು ಮತ್ತು ಅವುಗಳ ಚರಿತ್ರೆಯ ಬಗ್ಗೆ ಎಸ್ ಎಸ್ ಅಂಗಡಿ ಮತ್ತು ಎನ್ ಬಸವಾರಾಧ್ಯ ಇವರ ಲೇಖನಗಳಿಂದ ಹಲವು ನಿಘಂಟುಗಳ ವಿವರಗಳನ್ನು ಸಂಗ್ರಹಿಸಿದೆ.
4.   http://www.worldcat.org/wcidentities/lccn-n88154575 ಇದೊಂದು ಆನ್ ಲೈನ್ ಮಾರಾಟ ತಾಣವಾಗಿದ್ದು ಕಿಸಮ್ ವಾರ್ ಗ್ಲೋಸರಿಯ ಮೂರು ಆವೃತ್ತಿಗಳಿರುವುದು ಇಲ್ಲಿರುವ ವಿವರಗಳಿಂದ ಸ್ಪಷ್ಟವಾಗುತ್ತದೆ.
5. ಕೇಶಿರಾಜ,1260. ಶಬದಮಣಿದರ್ಪಣಂ. ಇದರ ಐದು ಆವೃತ್ತಿಗಳು ಲಭ್ಯವಿವೆ. ಕಿಟೆಲ್, ವೆಂಕಟರಾವ್ ಮತ್ತು ಶೇಷಯ್ಯಂಗಾರ್, ಡಿ ಎಲ್ ನರಸಿಂಹಾಚಾರ್, ಡಿ ಪದ್ಮನಾಭ ಶರ್ಮ – ಇವರುಗಳಿಂದ ಸಂಪಾದಿತ ಆವೃತ್ತಿಗಳು. ಗ್ಯಾರೆಟ್ ಸಂಪಾದಿತ ಾವೃತ್ತಿಯೊಂದಿರುವುದಾಗಿ ಉಲ್ಲೇಖಗಳಿವೆ.
6.   ಜುಗುಸ್ತ, ಲ್ಯಾಡಿಸ್ಲಾವ್,1971. A Manual of Lexicography. (Prague: Czechoslovak Academy of      Sciences).
7.   ಧಾರವಾಡಕರ ,1975. ಹೊಗನ್ನಡ ಸಾಹಿತ್ಯದ ಉದಯ ಕಾಲ. (ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ).
8.   ಪೋಧಜೆಕ್ಕ,ಮಿರಾಸ್ಲಾವಾ www.lingref.com/cpp/hel-lex/2008/paper2174.pdf  by M Podhajecka - ‎2009: Historical    Development of Lexicographical Genres: Some Methodological Issues.
9.   ಮಹೀದಾಸ ಬಿ ವಿ,2010. ಕನ್ನಡ ಶಾಸ್ತ್ರ ಸಾಹಿತ್ಯಕ್ಕೆ ಕ್ರೈಸ್ತ ಮಿಶನರಿಗಳ ಕೊಡುಗೆ. (ಶ್ರೀನಿವಾಸ ಪುಸ್ತಕ ಪ್ರಕಾಶನ,     ಬಸವನ ಗುಡಿ, ಬೆಂಗಳೂರು). ಇದರಲ್ಲಿ ಹಳಗನ್ನಡ ಸಂಕ್ಷಿಪ್ತ ನಿಘಂಟುಗಳ ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ ಕ್ರೈಸ್ತ ಮಿಶನರಿಗಳು ರಚಿಸಿದ ಹತ್ತು ನಿಘಂಟುಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಿದ್ದೇನೆ.
10. ಮಹೀದಾಸ ಬಿ ವಿ, 1997. ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು (ಯುಗಪುರುಷ ಪ್ರಕಟನಾಲಯ, ಕಿನ್ನಿಗೋಳಿ, ಮಂಗಳೂರು ದ ಕ ). ಇದರಲ್ಲಿ ಹತ್ತೊಂಬತ್ತನೆಯ ಶತಮಾನದ ನಿಘಂಟುಗಳ ಜೊತೆಗೆ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕೆ ಸಂಬಂಧಿಸಿ ರಚಿತವಾದ ನಿಘಂಟುಗಳನ್ನೂ ಸೇರಿಸಿ ಚರ್ಚಿಸಿದ್ದೇನೆ.
11. ಸೀತಾರಾಮಯ್ಯ, ಎಮ್ ವಿ 1975. ಶಾಸ್ತ್ರ ಸಾಹಿತ್ಯ (ಬೆಂಗಳೂರು ವಿ ವಿ)
12.  ಸ್ವಾನಪೋಲ್, ಪೀಟ್ 2003. Dictionary typologies: A Pragmatic Approach. In Piet van Sterkenburg (ed.) A Practical Guide to Lexicography. Amsterdam and Philadelphia: John Benjamins. 44–69.
13.        Dictionary in Wikipedia.










Monday, 15 February 2016

ಇಂಗ್ಲಿಶ್ ಪದಗಳಿಗೆ ಬೇಕೇ ಕನ್ನಡದ್ದೇ ಪದಗಳು?ಬಂದಿದೆ ಹೊಸ ಪದಕೋಶ



                                            ಡಿ ಎನ್ ಶಂಕರಭಟ್ಟರು ಕನ್ನಡದ ಹೆಮ್ಮೆಯ ಪುತ್ರ. ಕನ್ನಡಕ್ಕಾಗಿ ಕೈಎತ್ತುವ ವೀರ. ಕನ್ನಡದ್ದೇ ಆದ ವ್ಯಾಕರಣ ಹೇಗಿರಬೇಕು? ಹೊಸ ಪ್ರಪಂಚದಲ್ಲಿ ಕನ್ನಡದ್ದೇ ಆದ ಪದಗಳನ್ನು ಬಳಸಿ ವ್ಯವಹರಿಸಲು ತಡೆಗಳುಂಟೇ ಇಂತಹ ಪ್ರಶ್ನೆಗಳನ್ನು ಎತ್ತಿಕೊಂಡು ಚಿಂತಿಸಿ ವಿಚಾರಗಳನ್ನು ವ್ಯಕ್ತಪಡಿಸಿದವರು. ಇವರ ಹೊಸ ಪ್ರಯತ್ನವನ್ನು ಮೆಚ್ಚುಕೆಯಿಂದ ನೋಡುವ ಒಂದು ಬರಹ ಿದೆ.
ಶಾಸ್ತ್ರವಿಷಯಗಳಲ್ಲಿ ಯಾರು ಬೇಕಾದರೂ ತಜ್ಞತೆಯನ್ನು ಸಂಪಾದಿಸಬಹುದು; ಆದರೆ ಕಾವ್ಯ ಬರೆಯುವುದು ಅಷ್ಟು ಸುಲಭವಲ್ಲ, ದೇವರ ಕೃಪೆ ದಕ್ಕಿದವರು ಮಾತ್ರ ಕಾವ್ಯ ಸೃಜಿಸಬಲ್ಲರು ಎಂಬರ್ಥದ ಹಳಗನ್ನಡ ಹೇಳಿಕೆಯೊಂದಿದೆ. ಆದರೆ ಯಾವುದೇ ಶಾಸ್ತ್ರದಲ್ಲಿ ಅಸೀಮ ಪಾಂಡಿತ್ಯವನ್ನು ಗಳಿಸಿದ ವ್ಯಕ್ತಿಗಳಸಂಖ್ಯೆ ಬೆರಳೆಣಿಕೆಯಷ್ಟೇ ಎಂಬುದು ಅನುಭವದ ವಿಚಾರ. ಕನ್ನಡ ಭಾಷೆ, ವ್ಯಾಕರಣ ಮತ್ತು ನಿಘಂಟುಗಳಿಗೆ ಸಂಬಂಧಿಸಿದಂತೆ ಇಂತಹ ‘ತಿಳಿವಿಗ’ರು ಸಂಖ್ಯೆಯ ದೃಷ್ಟಿಯಿಂದಲೂ ಗುಣಮಟ್ಟದ ದೃಷ್ಟಿಯಿಂದಲೂ ಕಡಿಮೆಯೇ. ಮೊದಲಿನಿಂದ ಇವತ್ತಿನವರೆಗೆ ಇಂತಹವರ ಸಂಖ್ಯೆ ನೂರನ್ನು ಮೀರಿದಂತೆ ಕಾಣಿಸುವುದಿಲ್ಲ. ಈ ಕ್ಷೇತ್ರಗಳಲ್ಲಿ ಉದ್ದಾಮ ಪಾಂಡಿತ್ಯವನ್ನು ಗಳಿಸಿದ ಹೆಸರುಗಳು ಕೆಲವೇ. ಇಂತಹ ಕೆಲವರಲ್ಲಾದರೂ ಕನ್ನಡ ಪದಗಳನ್ನೇ ಬಳಸಬೇಕು, ಇತರ ಭಾಷಾ ಪದಗಳನ್ನು ಸ್ವೀಕರಿಸುವಾಗಲೂ ಕನ್ನಡದ ‘ಒಲವು’ಗಳಿಗನುಸಾರವಾಗಿಯೇ ಆಗಬೇಕೆಂಬ ಛಲವುಳ್ಳವರು ಕೇವಲ ಒಬ್ಬರೋ ಇಬ್ಬರೋ ಸಿಗಹುದು. ಹಳಬರಲ್ಲಿ ಆಂಡಯ್ಯನನ್ನು ಹೊರತುಪಡಿಸಿದರೆ ಕನ್ನಡದ ಬಗ್ಗೆ ಇಂತಹ ಛಲದ ವ್ಯಕ್ತಿ ಇನ್ನೊಬ್ಬ ಕಂಡುಬರುವುದಿಲ್ಲ. ಹೊಸಬರಲ್ಲಿ ಡಿ ಎನ್ ಶಂಕರಭಟ್ಟರೊಬ್ಬರೇ ಈ ಛಲದವರು. ಕವಿಗಳಲ್ಲಾಗಲೀ ಶಾಸ್ತ್ರಕಾರರಲ್ಲಾಗಲೀ  ಈ ನಡೆಯವರು ಕಾಣುವುದಿಲ್ಲ. ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ ವಿವಾದಾತೀತ ಪಾಂಡಿತ್ಯದ ಒಂದು ಹೆಸರು ಶ್ರೀ ಫರ್ಡೀನಂದ್ ಕಿಟೆಲ್ ಆದರೆ ಎರಡನೆಯದೇ ಶ್ರೀ ಡಿ ಎನ್ ಶಂಕರಭಟ್ಟರದು. ಕಿಟೆಲನಿಗೆ ಕನ್ನಡವನ್ನೇ ಬಳಸಬೇಕು, ಇತರ ಪದಗಳನ್ನು ಬಳಸಬಾರದೆಂಬ ದೀಕ್ಷೆ ಏನೂ ಇರಲಿಲ್ಲ.  ಕನ್ನಡ ಪದಗಳನ್ನೇ ಬಳಸಬೇಕು. ಕನ್ನಡದ ಒಲವುಗಳಿಗನುಸಾರವಾಗಿಯೇ ಭಾಷೆಯನ್ನು ಬೆಳಸಬೇಕೆಂಬ ಛಲ ಹೊತ್ತವರು ಡಿ ಎನ್ ಶಂಕರ ಭಟ್ಟರು. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬುದು ಇವರು ರಚಿಸಿದ ವಿಭಿನ್ನ ನಿಘಂಟು.
ತಮ್ಮ ವ್ಯಾಕರಣ ಕೃತಿಗಳಲ್ಲಿ ತಾವು ಪ್ರತಿಪಾದಿಸಿದ ತತ್ವಗಳನ್ನು ಅನ್ವಯಿಸಿ ತೋರಿಸಿರುವುದು ಈ ಕೃತಿಯಲ್ಲಿ ಶಂಕರಭಟ್ಟರ ವೈಶಿಷ್ಟ್ಯ. ಇಂಗ್ಲಿಷ್ ಪದದ ಕನ್ನಡ ಅರ್ಥ ಗೊತ್ತಿಲ್ಲದಾಗ  ಗೊತ್ತು ಮಾಡಿಕೊಳ್ಳುವುದಕ್ಕಾಗಿ ಈ ನಿಘಂಟಿಲ್ಲ. ಇದರ ಉದ್ದೇಶವನ್ನು ಕೃತಿಕಾರರು ಹೀಗೆ ಹೇಲಳಿದ್ದಾರೆ: “ಇಂಗ್ಲಿಶ್ ನುಡಿಯನ್ನು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮಾನವಾಗಿರುವ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ಮತ್ತು ಅಂತಹ ಪದಗಳನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ತಿಳಿಯಬೇಕೆಂದಿರುವವರಿಗಾಗಿ ಈ ಪದಕೋಶವನ್ನು ತಯಾರಿಸಿದ್ದೇನೆ.” ಕೊಟ್ಟಿರುವ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಕ್ಕಾಗಿ ಮತ್ತು ಇಂತಹ ಪದಗಳನ್ನು ಸಂದರ್ಭಾನುಸಾರ ಉಂಟುಮಾಡಿಕೊಳ್ಳಲು  ಸಹಾಯಕ್ಕಾಗಿ ಪದರಚನೆ ಬಗ್ಗೆ ಕನ್ನದ ಒಲವುಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇವರು ಪ್ರತ್ಯಯ ಎಂಬುದಕ್ಕೆ ಒಟ್ಟು, ಕ್ರಿಯಾಪದ ಎಂಬುದಕ್ಕೆ ಎಸಕ, ನಾಮಪದ ಎನ್ನಲು ಹೆಸರು, ಗುಣವಚನಕ್ಕೆ ಪರಿಚೆ ಪದ, ಅರ್ಥ ಎನ್ನಲು ಹುರುಳು, ವಿರೋಧಾರ್ಥ ಎನ್ನಲು ಎದುರು ಹುರಳು – ಹೀಗೆ ಕನ್ನಡದ್ದೇ ಆದ ಪದಗಳನ್ನು ಬಳಸಿ ಹೊಸಪದಗಳನ್ನು ಹೇಗೆ ಕಟ್ಟಿಕೊಳ್ಳಬಹುದೆಂಬುದನ್ನು ಸೂಚಿಸಿದ್ದಾರೆ.
ನಿಘಂಟಿನಲ್ಲಿ ಸು.15,000ಪದಗಳಷ್ಟು ಪ್ರಧಾನ ಉಲ್ಲೇಖಗಳಿವೆ. ಇದರಲ್ಲಿ ಆಯ್ದುಕೊಂಡಿರುವ ಇಂಗ್ಲಿಷ್ ಪದಗಳ ಬಗ್ಗೆ ಸಮರ್ಥನೆಯನ್ನು ಕೃತಿಕಾರರು ಹೀಗೆ ವಿವರಿಸಿದ್ದಾರೆ: “ಎಂತಹ ಇಂಗ್ಲಿಶ್ ಪದಗಳಿಗೆ ದೊರೆಯಾದ ಕನ್ನಡ ಪದಗಳು ಬರಹಗಾರರಿಗೆ ಬೇಕಾಗಬಹುದೋ ಅಂತಹ ಪದಗಳನ್ನು ಮಾತ್ರವೇ ಇಲ್ಲಿ ಆರಿಸಿಕೊಂಡಿದ್ದೇನೆ. ನೇರವಾಗಿ ವ್ಯಾಕರಣಕ್ಕೆ ಸಂಬಂಧಿಸಿದಂತಹ and, but, when ಮೊದಲಾದುವನ್ನುಇಲ್ಲಿ ಕೊಟ್ಟಿಲ್ಲ.” ಆದ್ದರಿಂದ ಸಾಮಾನ್ಯವಾದ ದಿನಚರಿಯಲ್ಲಿ ನಾವು ಬಳಸಬೇಕಾದಂತಹ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ನೀಡಲುದ್ದೇಶಿಸಿದ್ದಾರೆ.
ಇಲ್ಲಿ ಉಲ್ಲೇಖ ಪದಗಳ ಜೋಡಣಾ ವ್ಯವಸ್ಥೆ ಹೀಗಿದೆ: ಉಲ್ಲೇಖ ಪದ, ಅದರ ಮುಂದೆ ಪದದ ವ್ಯಾಕರಣ ವಿವರ, ಮತ್ತು ಅದರ ಮುಂದೆ ಕನ್ನಡ ಅರ್ಥ. ವ್ಯಾಕರಣ ವಿವರಗಳನ್ನು ಕೊಡುವಾಗ ಅನುಸರಿಸಿರುವ ವಿಧಾನ ಹೀಗಿದೆ: “ಈ ಪದಕೋಶ ಕನ್ನಡದ ಪದಕೋಶವಲ್ಲದೆ ಇಂಗ್ಲಿಶ್ ಪದಕೋಶವಲ್ಲ. ಹಾಗಾಗಿ ಇಲ್ಲಿ ಇಂಗ್ಲಿಶ್ ಪದಗಳ ಅನಂತರ ಕೊಟ್ಟಿರುವ ವ್ಯಾಕರಣಾಂಶಗಳು (ನಾಮಪದ (ನಾ), ಕ್ರಿಯಾಪದ (ಕ್ರಿ), ಗುಣಪದ (ಗು), ಆಗುವಿಕೆ (ಆ), ಮತ್ತು ಮಾಡುವಿಕೆ (ಮಾ) ಎಂಬವು) ಅವುಗಳ ಅನಂತರ ಬರುವ ಕನ್ನಡ ಪದಗಳಿಗೆ ಸಂಬಂಧಿಸಿವೆಯಲ್ಲದೆ ಇಂಗ್ಲಿಶ್ ಪದಗಳಿಗೆ ಸಂಬಂಧಿಸಿಲ್ಲ.” ಇಲ್ಲಿ ಪದಗಳು ಮತ್ತು ಅವುಗಳ ಅರ್ಥವನ್ನು ಕೊಟ್ಟಿರುವ ರೀತಿಗೆ ಈ ಉದಾಹರಣೆಗಳನ್ನು ನೋಡಬಹುದು: chief ನಾ ಮೇಲಾಳು, ಮೊದಲಿಗ  chief ಗು ಮಲ್ಯ (ಮಲ್ಯ ಕೆಲಸ), ಮಲ್ಲ (ಮಲ್ಲ ಮಾತು; ಮಲ್ಲಂತಿಗೆ), ಮೊದಲಿನ (ಮೊದಲಿನ ಎಡೆ). Whip ನಾ ಕೊರಡ (ಕೊರಡದಲ್ಲಿ ಹೊಡೆ), ಚಾವಟಿ, ಚಾಟಿ (ಚಾಟಿಯ ಏಟು)  guest ನಾ ಬಿದ್ದಿನ (*ಮನೆಗೆ ಬಿದ್ದಿನ ಬಂದಿದ್ದಾನೆ). Dictionary ನಾ ಪದನೆರಕೆ. ಈ ಪದಗಳನ್ನು ಮೂಲ ಹೂರಣವೆಂಬಂತೆ ಇಟ್ಟುಕೊಂಡು ನಮಗೆ ಬೇಕಾದ ಪದವನ್ನುಂಟು ಮಾಡಿಕೊಳ್ಳ ಬೇಕೆಂಬುದು ಬರಹಗಾರರ ಆಶಯ. ಅದರಂತೆ chief-whip ‘ಮಲ್ಲಚಾವಟಿ’ಯಾಗುತ್ತಾನೆ. Chief-guest ‘ಮಲ್ಲ ಬಿದ್ದಿನ’ನಾಗುತ್ತಾನೆ. Bilingual dictionary ‘ಇನ್ನುಡಿ ಪದನೆರಕೆ’ಯಾಗುತ್ತದೆ. original-work ತನ್ನತನವಿರುವ ಗೆಯ್ಮೆ ಎಂದಾಗುತ್ತದೆ. Traveller ನಾ ದಾರಿಗ, ದಾರಿಕಾರ , judge ನಾ ತೀರ್ಪುಗಾರ ಎಂದಾಗುತ್ತವೆ. ಇವೆಲ್ಲ ಏನೋ ಒಂದು ರೀತಿಯ ಬಳಕೆಗೆ ಒಗ್ಗದ ಮಾತುಗಳಾಗಿ ಕಾಣಬಹುದು. ನಮ್ಮ ಪ್ರಾಧ್ಯಾಪಕರಾಗಿದ್ದ ಎಸ್ವಿಪಿಯವರು ನೆನಪುಮಾಡಿಕೊಳ್ಳುತ್ತಿದ್ದರು: ತಾನು ಉಪನ್ಯಾಸಕನಾಗಿ ಸೇರಿದ ಸಂದರ್ಭದಲ್ಲಿ ‘ಸಾರಿಗೆ’(<ಸಾರ್) ಎಂಬ ಪದವನ್ನು ಹೊಸದಾಗಿ ಬಳಕೆಗೆ ತರಲಾಗಿದ್ದು ಹಲವರು ಸಾಂಬಾರಿಗೆ, ಚಟ್ನಿಗೆ ಎಂದಿದ್ದ ಹಾಗೆ ಇದು ‘ಸಾರಿಗೆ’ ಎಂದು ವ್ಯಂಗ್ಯವಾಡುತ್ತಿದ್ದರು ಎಂದು. ಈಗ ಈ ಪದ ಯಾರಿಗೂ ಒಗ್ಗದ್ದಾಗಿಲ್ಲ. ಕನ್ನಡದ್ದೇ ಪದವೊಂದನ್ನು ಬಳಕೆಗೆ ತರುವುದು ಹೀಗೆ ಕಷ್ಟಕರವೇ ಆದರೂ ಕಾಲಾಂತರದಲ್ಲಿ ಅದು ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಸಾಮೂಹಿಕ ಇಚ್ಛಾಶಕ್ತಿ ಬೇಕು. ಹೊಸಪದಗಳ ಹುಟ್ಟಿಗೆ ಪ್ರತಿಯೊಬ್ಬರೂ ಅದೇ ತೆರನ ಸ್ವಂತಿಕೆ ತೋರುವುದೂ ಅಗತ್ಯವಾಗುತ್ತದೆ.
            ಇಂತಹ ಒಂದು ಪದಕೋಶವು ಇಂಗ್ಲಿಶ್ ಪದವೊಂದಕ್ಕೆ ಕನ್ನಡದ್ದೇ ಆದ ‘ಹುರುಳುಗಳು’ ಎಷ್ಟಿವೆ ಎಂಬುದನ್ನು ತೋರಿಸಿಕೊಡುತ್ತವೆ. ಉದಾ. “sink ಕ್ರಿ 1 ಕುಸಿ(ಕುಸಿದು ಬೀಳು; ಮನೆ ಕುಸಿಯಿತು), ತಗ್ಗು (ತಗ್ಗಿದ ನೆಲ), ಕುಗ್ಗು (ಕುಗ್ಗಿದ ಅದಟು), ಕುಂಗು, ನೆಗ್ಗು (ತಂಬಿಗೆ ನೆಗ್ಗಿ ಹೋಗಿದೆ), ತಾಳು (ಕೊಳದಲ್ಲಿ ನೀರು ಕೆಳಗೆ ತಾಳಿದೆ) 2 ಮುಳುಗು (ನೀರಿನಲ್ಲಿಮುಳುಗಿತು, ಮುಳುಗಡೆ), ಆಳು (ಕೊಳದಲ್ಲಿ ಆಳಿ ತಂಬಿಗೆಯನ್ನು ಹೊರತಂದ), ಕಂತು (ನೀರಿನಲ್ಲಿ ಮಂಡಿ ಕಂತುವ ತನಕ ಹೋಗು), ಅಗುಳು (ಕೊಳದಲ್ಲಿ ಅಗುಳಿ ಸತ್ತು ಹೋದ), ಹೂಳು (ಕಾಲು ಹೂತು ಹೋಗಿದೆ)”. ಇಷ್ಟೊಂದು ಅರ್ಥಗಳಿವೆಯಲ್ಲ ಎಂದು ಆಶ್ಚರ್ಯವಾಗುತ್ತದೆ. ಆದರೆ ನಿಘಂಟನ್ನು ಇಂದು ಸಾಮಾನ್ಯವಾಗಿ ನೋಡುತ್ತಿರುವುದು ತಮಗೆ ಅರ್ಥವಾಗದ ಇಂಗ್ಲಿಷ್ ಪದ ಎದುರಾದಾಗ. ಆದರೆ ಈ ನಿಘಂಟನ್ನು ಪರಾಮರ್ಶಿಸಿದರೆ ಅರ್ಥವಾಗದ ಹುರುಳುಗಳೇ ದೃಷ್ಟಿಗೆ ಬೀಳುವ ಸಂಭವವಿದೆ. ಆದ್ದರಿಂದ ಬಳಕೆದಾರ ಹಿಂಜರಿಯಬಹುದು. ಕನ್ನಡದ್ದೇ ಪದವನ್ನು ಹುಡುಕಿಕೊಳ್ಳಬೇಕೆಂಬುವವರಿಗೆ ಈ ನಿಘಂಟು ಖಂಡಿತ ಉಪಯುಕ್ತ. ಅಂತಹ ಅಗತ್ಯವು ಎಲ್ಲರಿಗೂ ಸಂದರ್ಭಾನುಸಾರ ಉಂಟಾಗುತ್ತದಾದ್ದರಿಂದ ಈ ಪುಸ್ತಕವನ್ನು ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿರುವುದು ಉಚಿತ. ಆಗಾಗ ನೋಡಿ ಮನನ ಮಾಡಿ ಬರಹಗಾರರ ಆಶಯವನ್ನು ಆಗುಮಾಡಿದರೆ ಕನ್ನಡವೂ ಧನ್ಯ, ಬರೆದವರೂ ಧನ್ಯ.
ಪುಸ್ತಕದ ಪ್ರಕಾಶಕರು: ಭಾಷಾ ಪ್ರಕಾಶನ, ಬಿಲ್ಲೇಶ್ವರ, ಹುಂಚ, ಹೊಸನಗರ, ದೂರವಾಣಿ 9449774956. ಪ್ರಥಮ ಆವೃತ್ತಿ 2008, ಎರಡನೆಯ ಮುದ್ರಣ 2011.





Wednesday, 13 January 2016

ಭೈರಪ್ಪನವರ ತಂತು: ದೇಶದಲ್ಲಿ ಸಂಸ್ಕೃತಿ ಬದಲಾವಣೆಯ ವ್ಯಾಖ್ಯಾನ

ಭೈರಪ್ಪನವರ ತಂತು: ದೇಶದಲ್ಲಿ ಸಂಸ್ಕೃತಿ ಬದಲಾವಣೆಯ ವ್ಯಾಖ್ಯಾನ
                                                       
ಸಾಮಾಜಿಕವಾಗಿ ಪ್ರಸ್ತುತವಾದ ಯಾವುದೇ  ವಸ್ತುವನ್ನು ಕಾದಂಬರಿಯನ್ನಾಗಿಸುವುದರಲ್ಲಿ ಭೈರಪ್ಪನವರದು ಎತ್ತಿದ ಕೈ. ಯಾವುದೇ ಕಾದಂಬರಿಯನ್ನು ಓದಿದಾಗಲೂ ಇದೇ ಇವರ ಮಾಸ್ಟರ್ ಪೀಸ್ ಎನಿಸುವಂತಿರತ್ತದೆ ಇವರ ರಚನೆ. ತಂತು ಕೂಡ ಅಂತಹ ಕಾದಂಬರಿಗಳಲ್ಲೊಂದು. “ಇಡೀ ಸ್ವಾತಂತ್ರ್ಯೋತ್ತರ ಭಾರತದ ನಾಡಿಯ ಕಥೆ” ಇಲ್ಲಿರುವುದಾಗಿ ಕಾದಂಬರಿಕಾರರು ಹೇಳಿರುವುದು ಅತಿಶಯೋಕ್ತಿಯೇನಲ್ಲ.
ಇದರಲ್ಲಿ ಮುಖ್ಯವಾಗಿ ಮೂರು ವಸ್ತುಗಳು ಚರ್ಚೆಯಾಗಿವೆ: ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು. ಈ ಮೂರು ಎಳೆಗಳನ್ನು ಹೆಣೆದು ಸಿದ್ಧವಾಗಿದೆ ತಂತುವಿನ ಹುರಿ. ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಮತ್ತು ಸಂಗೀತಗಳೂ ಸೇರಿ ಸಿತಾರಿನ ಐದು ತಂತಿಗಳು ಸಿದ್ಧವಾಗುತ್ತದೆ. ಒಂದು ದಶಕದ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಸಿಂಹಾವಲೋಕನಕ್ರಮದಿಂದ ಭಾರತದ ಜೀವನದ ಮೇಲೆ ಮಹಾತ್ಮ ಗಾಂಧಿ ಮತ್ತು ವಿವೇಕಾನಂದರ ಪ್ರಭಾವದ ಒಂದು ನೋಟವೂ ಇಲ್ಲಿ ಕಂಡು ಬರುತ್ತದೆ.
          ಕಾದಂಬರಿ ಪ್ರಾರಂಭವಾಗುವುದು ಬಸನಪುರ ಎಂಬ ಹಳ್ಳಿಯ ಚೆನ್ನಕೇಶವ ದೇವಸ್ಥಾನದ ಸರಸ್ವತಿಯ ಪ್ರತಿಮೆ ಕಳುವಾದ ವರದಿಯನ್ನು ಪ್ರಕಟಿಸಲು ಟ್ರಿಬ್ಯೂನ್ ಪತ್ರಿಕೆಯ ಬೆಂಗಳೂರಿನ ರೆಸಿಡೆಂಟ್ ಎಡಿಟರ್ ರವೀಂದ್ರ ತನ್ನ ವರದಿಗಾರನಿಗೆ ಸೂಚನೆ ಕೊಡುವ ದೃಶ್ಯದಿಂದ. ಘಟನೆಯಿಂದ ರವೀಂದ್ರ ದುಃಖಿತನಾಗುತ್ತಾನೆ. ಈ ದೇವಸ್ಥಾನ ತನ್ನ ಹುಟ್ಟೂರಿನದೇ ಆಗಿದ್ದು ರವೀಂದ್ರ ಅಲ್ಲಿಗೆ ಹೋಗಿ ದೇವಸ್ಥಾನಕ್ಕಾಗಿ ತಾನೇನು ಮಾಡ ಬಹುದೆಂಬುದನ್ನು ಯೋಚಿಸಬೇಕೆಂದುಕೊಂಡು ಅನಂತರ ಅಲ್ಲಿಗೆ ತಲುಪುತ್ತಾನೆ. ಅವನಿಗೆ ಅಲ್ಲಿ ಕಂಡುಬರುವ ಸಂಸ್ಕೃತಿಯ ಬದಲಾವಣೆ ಅವನ ನಿಲುವುಗಳ ಪುನರ್ವಿಮರ್ಶೆಗೆ ಕಾರಣವಾಗುತ್ತದೆ. ತಾನು ಬಾಲ್ಯದಲ್ಲಿ ಮಂದಿರಕ್ಕೆ ಹೋಗಿ ದರ್ಶನ ಪಡೆಯುತ್ತಿದ್ದ ಸರಸ್ವತಿಯ ಮೂರ್ತಿಯೇ ಈಗ ಕಳುವಾಗಿರುವುದು. ದೇವಾಲಯದ ಮುಂದೆ ದೊಡ್ಡ ಕಟ್ಟಡವೊಂದು ನಿರ್ಮಾಣವಾಗಿದೆ; ದೇವಸ್ಥಾನದ ಕಟ್ಟೆ ಸಿಗರೇಟೆಳೆಯುವ ಆಲಸಿಗಳ ಕಟ್ಟೆಯಾಗಿದೆ; ಗೌರವ ಭಾವದ ಶುಚಿತ್ವ ಮರೆಯಾಗಿದ್ದು ಮಲಮೂತ್ರಗಳ ವಾಸನೆ ಹೊಡೆಯುತ್ತಿದೆ; ತನ್ನ ಮನೆತನದವರು ಆಸ್ಪತ್ರೆಗೆ ನೀಡಿದ್ದ ಸ್ಥಳದ ಜ್ಞಾಪಕಾರ್ಥ ಅಭಿಮಾನಿಗಳು ನೆಟ್ಟಿದ್ದ ನಾಮಫಲಕದ ಸ್ಥಾನದಲ್ಲಿ ಸ್ಥಳೀಯ ರಾಜಕಾರಣಿಯ ಹೆಸರು ಹೊತ್ತ ಹೊಸ ಫಲಕ ಕಂಗೊಳಿಸುತ್ತಿದೆ. ಇತ್ಯಾದಿ ಒಂದು ಕಡೆ. ಇನ್ನೊಂದು ಕಡೆ ಸಮಕಾಲೀನವಾಗಿ ಜಾತಿ-ಜಾತಿಗಳ ಸಾಮರಸ್ಯ ಮಾಯವಾಗಿ ಅಧಿಕಾರಕ್ಕಾಗಿ ಪೈಪೋಟಿ. ಏನಕೇನ ಪ್ರಕಾರೇಣ ಹಣಗಳಿಕೆಗಾಗಿ ಮೇಲಾಟ ಇವೆಲ್ಲ ಬದುಕಿನ ರೀತಿಗಳಾಗಿವೆ. ಇಂತಹ ಸಂದರ್ಭದಲ್ಲಿ ತಾನು ಮಾಡುವಂತಹದು ಹೆಚ್ಚೇನೂ ಇಲ್ಲವೆಂದು ನಿರ್ಣಯಿಸ ಬೇಕಾಗುತ್ತದೆ. ಅಲ್ಲಿ ಅವನಿಗೆ ಆಶಾಕಿರಣಾಗಿ ಅಚ್ಚೊತ್ತಿದ್ದು ಹಾಲುಕೆರೆಯ ವಿವೆಕಾನಂದ ವಸತಿಶಾಲೆಯೊಂದೇ.
          ವಿವೇಕಾನಂದ ಶಾಲೆ ರವೀಂದ್ರನಿಗೆ ಒಂದು ರೀತಿಯಲ್ಲಿ ಅಗತ್ಯಕ್ಕೆ ಒದಗಿ ಬಂದ ಸಂಸ್ಥೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ತನ್ನ ಮಗ ಅನೂಪ ಸಹವಾಸ ದೋಷಗಳಿಂದ ಕೆಟ್ಟ ಚಾಳಿಗಳಿಗೆ ಬಲಿಯಾದ್ದರಿಂದ ಉತ್ತಮ ಶೀಲವನ್ನು ಬೆಳೆಸಲು ಸಮರ್ಥವಾದ ವಿದ್ಯಾ ಸಂಸ್ಥೆಯನ್ನು ಹುಡುಕುತ್ತಿದ್ದಾಗ ಅವನಿಗೆ ಈ ಶಾಲೆ ವರರೂಪವಾಗಿ ಹೊಳೆಯಿತು. ಅದರ ಮುಖ್ಯೋಪಾಧ್ಯಾಯ ಬಾಲ್ಯದಲ್ಲಿ ತನ್ನ ಮನೆಯಲ್ಲಿದ್ದು ಓದಿಕೊಂಡು ತನೆಗೆ ಇಂಗ್ಲಿಷ್ ಗ್ರಾಮರ್ ಕಲಿಸಿದ ಅಣ್ಣಯ್ಯ. ತಾನು ಬಸಂಪುರಕ್ಕೆ ಹೋದಾಗ ಇವನ ಪರಿಚಯವಾಗಿ ಆತ ಹಾಲುಕರರೆಯಲ್ಲಿ ಸ್ಥಾಪಿಸಿದ್ದ ವಿವೇಕಾನಂದ ಶಾಲೆಯ ಸಾಕ್ಷಾತ್ ಪರಿಚಯವಾಯಿತು. ಅಲ್ಲಿ ಅಧ್ಯಾಪಕರಲ್ಲಿ ಒಬ್ಬೊಬ್ಬರೂ ತಜ್ಞತೆಯ ಸಂಪಾದನೆ ಮತ್ತು ತ್ಯಾಗಮಯ ಜೀವನದ ಜೀವಂತ ಆದರ್ಶಗಳಾಗಿ ವಿದ್ಯಾರ್ಥಿಮಾರ್ಗದರ್ಶನ ಮಾಡುತ್ತಾರೆ. ಎಮ್ ಬಿ ಎ  ಮಾಡಿ ಉತ್ತಮ ಸಂಬಳದ ನೌಕರಿಯನ್ನು ಬಿಟ್ಟು ಸಿತಾರಿನಲ್ಲಿ ತಜ್ಞತೆ ಸಾಧಿಸುತ್ತಾ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಹೊನ್ನತ್ತಿ ವಿಶೇಷವಾಗಿ ಗಮನ ಸೆಳೆಯುತ್ತಾನೆ. ರಾಮಚಂದ್ರನೆಂಬ ಅಧ್ಯಾತ್ಮ ಸಾಧಕನೂ ಅಲ್ಲಿ ಶಿಕ್ಷಕ. ರವೀಂದ್ರನಿಗೆ “ಗಾಂಧಿ ಮಾಡಿ ತೋರಿಸಿದ ಕಾಯಕದ ಮೂಲಕ ವ್ಯಕ್ತಿತ್ವದ ಬೆಳವಣಿಗೆಯಾಗುವ ವಿಧಾನ ಪರಿಕರಗಳೆಲ್ಲ ಅಲ್ಲಿ ಅನುಷ್ಠಾನದಲ್ಲಿವೆ . ಅಲ್ಲಿ ಬೆಳೆಯ ಬೇಕು ಅವನು ಎನ್ನಿಸಿತು”(ಪು 128). ಆದ್ದರಿಂದಲೇ ತಾಯಿಗೆ ಅಷ್ಟೇನೂ ತೃಪ್ತಿಯಿಲ್ಲದಿದ್ದರೂ ಅನೂಪ ಆ ಶಾಲೆಯಲ್ಲಿ ಕಲಿಯುವಂತಾಯಿತು. ತಾನು ಬೆಂಗಳೂರಿನ ತನ್ನ ಕಛೇರಿಯಲ್ಲಿದ್ದಾಗ ಬಸನ ಪುರದ ಎಮ್ ಎಲ್ ಎ ಜಯಪ್ಪಗೌಡನ ಭೇಟಿ ಸಂಸ್ಕೃತಿಯ ಬದಲಾವಣೆಯನ್ನು ರವೀಂದ್ರನಿಗೆ ಚಿತ್ರಿಸುತ್ತದೆ: “ಒಳಗೆ ಬಂದಾತ ನಾಲ್ಕನೇ ಮಜಲಿನ ಕಾಂಗ್ರೆಸ್ಸಿಗ. ಮೊದಲನೆ ಮಜಲಿನವರು ಒರಟು ಬಿಳಿ ಖಾದಿಯ ಪಂಚೆ, ಜುಬ್ಬಾ ಧರಿಸುತ್ತಿದ್ದರು. ಎರಡನೆಯವರು ತುಸು ನಯವಾದ ಖಾದಿಯಲ್ಲಿ ಅಂದವಾಗಿ ಪೈಜಾಮ ಜುಬ್ಬಾ ಅಥವ ಕೊರಳ ಪಟ್ಟಿ , ಎದೆಯ ಮೇಲೊಂದು ಜೇಬು ಇರುವ ಜುಬ್ಬಾಧಾರಿಗಳು. ಮೂರನೆಯವರು ಬೂದು ಅಥವ ಕಂದು ಬಣ್ಣದ ಖಾದಿಯ ಪ್ಯಾಂಟ್ ಮತ್ತು ಕ್ಲೋಸ್ ಕಾಲರ್ ಕೋಟು ಧರಿಸುತ್ತಿದ್ದರು. ಈತ ಖಾದಿಯಲ್ಲೇ ಸಫಾರಿ ಸೂಟು ಧರಿಸಿ ಇತ್ತ ರಾಜಕಾರಿಣಿಯಂತೆ ಅತ್ತ ಉದ್ಯಮ ಕಾರ್ಯ ನಿರ್ವಾಹಕನಂತೆ ಕಾಣುತ್ತಿದ್ದ”(ಪು 107).
ಕಾದಂಬರಿಯ ಎರಡನೆಯ ಮಜಲಿನಲ್ಲಿ ರವೀಂದ್ರನ ಪತ್ನಿ ಕಾಂತಿಯ ಸ್ವಾತಂತ್ರ್ಯಪ್ರಿಯತೆ, ಅವಳ ಐಷಾರಾಮೀ ಜೀವನದ ಸೆಳೆತ, ಮಗನನ್ನು ಹೇಗೋ ಬೆಳೆಸಬೇಕೆಂಬ ಇರಾದೆ - ಇಂತಹವೆಲ್ಲ ರವೀಂದ್ರನ ಕೌಟುಂಬಿಕ ಜೀವನದಲ್ಲಿ ಬಿರುಕಿಗೆ ಕಾರಣವಾಗುತ್ತವೆ. ಕಾಂತಿಯ ಮತ್ತು ಅವಳ ದೆಹಲಿ ಸ್ನೇಹಿತೆ ಶೀತಲಳ ವಿವಾಹೇತರ ಸಂಬಂಧಗಳು ಉದಯೋನ್ಮುಖ  ಸಮಾಜದಲ್ಲಿ ಲೈಂಗಿಕ ಸಂಬಂಧಗಳ ಆಧುನಿಕ ಭಾಷ್ಯವಾಗುತ್ತದೆ. ಉನ್ನತಿ ಅಧಿಕಾರಿಯೊಬ್ಬನೊಂದಿಗೆ, ಹೊನ್ನತ್ತಿಯೊಂದಿಗೆ, ಕಲಾಲೋಕದ ಮುಂದಾಳು ಹರಿಶಂಕರನೊಂದಿಗೆ – ಹೀಗೆ ಕಾಂತಿಯ ಸ್ವಚ್ಛಂದ ಸಂಬಂಧಗಳು. ಲೈಂಗಿಕತೆಯೂ ಇತರ ಆವಶ್ಯಕತೆಗಳಂತೆಯೇ ಇನ್ನೊಂದು ಆವಶ್ಯಕತೆ ಎಂದು ಭಾವಿಸಿ ಸ್ವಚ್ಛಂದ ಲೈಂಗಿಕ ಸಂಬಂಧಗಳ ಹೊಸರೀತಿಯ ಜೀವನಕ್ಕೆ ಗೆಳತಿಯರಿಬ್ಬರೂ ಪ್ರತಿನಿಧಿಗಳಾಗುತ್ತಾರೆ. ಆರ್ಥಿಕ ಸ್ವಾತಂತ್ರ್ಯ ಗಳಿಸುವ ಅವಸರದಲ್ಲಿ ಶೀತಲಳೊಡನೆ ಸೇರಿ ಗಾರ್ಮೆಂಟ್ ವ್ಯವಹಾರದಲ್ಲಿ ತೊಡಗಿ ಕಾಂತಿ ದೆಹಲಯಲ್ಲೇ ಉಳಿಯುತ್ತಾಳೆ. ಅನಂತರ ಗಂಡನಿಗೆ ತಿಳಿಯದಂತೆ ಮಗನಿಗೂ ಹಣವನ್ನೊದಗಿಸುತ್ತಾಳೆ. ಮನೋನೆಮ್ಮದಿ, ಕೌಟುಂಬಿಕ ಸಂತೋಷ ಮತ್ತು ಮುಂದಿನ ಪೀಳಿಗೆಗೆ ಕುಟುಂಬವ್ಯವಹಾರಗಳ ನೆಲೆಗಟ್ಟು ಇವೆಲ್ಲ ನಶಿಸುವ ಹಾದಿ ಹಿಡಿಯುತ್ತವೆ; ಹಣ ಮತ್ತು ಅಂತಸ್ತುಗಳು ಮುಖ್ಯ ವೇದಿಕೆಗೆ ಬರುತ್ತವೆ. ಹೊನ್ನತ್ತಿಯನ್ನೂ ಈ ಗುರಿಯತ್ತ ಕಾಂತಿ ಸೆಳೆಯುತ್ತಾಳೆ. ಆದರೆ ಹೊನ್ನತ್ತಿ ಐಷಾರಾಮದ ಸೆಳೆತದಿಂದ ಬಿಡಿಸಿಕೊಳ್ಳುವುದು, ಲೈಂಗಿಕ ಸ್ವಚ್ಛಂದತೆಯಿಂದ ದೂರ ಸರಿಯುವುದು ಈ ನೆಲದ ಸಂಸ್ಕೃತಿಯ ಶಕ್ತಿಯನ್ನು ತೋರಿಸುತ್ತದೆ.
  ಪರಶುರಾಮ ಗೌಡನಿಂದ ಪ್ರತೀಕಾರಾರ್ಥ ತೆರೆಯಲ್ಪಟ್ಟ ಸರಕಾರೀ ಶಾಲೆಯಿಂದಾಗಿ ವಿವೇಕಾನಂದ-ಶಾಲೆ ಮಕ್ಕಳಿಲ್ಲದೆ ಸೊರಗುವುದು, ಅದನ್ನು ಉಳಿಸಿಕೊಳ್ಳಲು ಶ್ರೀಮಂತರ ಸಹಾಯ ಪಡೆಯುವುದು ಮತ್ತು ಇದರಿಂದಾಗಿ ಅದು ಮೊದಲಿನ ಶಾಲೆಯಾಗಿ ಉಳಿಯದೆ ಶ್ರೀಮಂತ ವರ್ಗದ ಇಚ್ಛಾನುಸಾರಿಯಾಗಿ ಪರಿವರ್ತಿತವಾಗುತ್ತದೆ.   ವಿದ್ಯಾರ್ಥಿಗಳೇ ಮಣ್ಣಿನಿಂದ ಕಟ್ಟಿದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಆ ಕಟ್ಟಿನಿಂದ ಬೇರೆಯಾಗಿ ಹೊಸ ರೀತಿಯ ಶಿಲ್ಪವನ್ನು ಅಳವಡಿಸಿಕೊಂಡು, ಹೊಸ ಗಟ್ಟಿ ಸಾಮಗ್ರಿಗಳಿಂದ ವೈಭವಯುತವಾಗಿ ಮಾರ್ಪಡುತ್ತದೆ. ಆ  ಹಳ್ಳಿಯ ಮಕ್ಕಳೇ ಸೇರಿ ಕಲಿಯುತ್ತಿದ್ದ ತರಗತಿಗಳ ವಿನ್ಯಾಸ ಬದಲಾಗಿ ಭಾರತಾದ್ಯಂತದಿಂದ ಶ್ರೀಮಂತ ಕುಟುಂಬಗಳ ಮಕ್ಕಳು ಬಂದು ಸೇರುತ್ತಾರೆ. ಬಯಸುವ ಅಧ್ಯಾಪಕರಿಗೆ ಕೈತುಂಬ ಸಂಬಳ ದೊರಕುತ್ತದೆ. ಪಾರಂಪರಿಕ ನೀತಿಯ ಚೌಕಟ್ಟು, ಪರಿಶ್ರಮದ ಬೆಲೆ, ಒಟ್ಟಾಗಿ ಇದ್ದುದನ್ನೇ ಹಂಚಿಕೊಂಡು ತಿನ್ನುವ ಸಮುದಾಯ ಭಾವ ಕಳೆದು ಹೋಗುತ್ತವೆ. ಹೊಸ ರಾಜಕೀಯ ವ್ಯವಸ್ಥೆ, ನಾಯಕರಿಗೆ ಸೌಲಭ್ಯ ಗಳ ಸುರಿಮಳೆ ಇರುವ ಜೀವನ, ಅಂತಹವರಿಗೆ ಉದ್ದಾಮತೆಯ ಹೆಸರು - ಎಲ್ಲ ಸಿಗುತ್ತವೆ. ಕಷ್ಟಪಟ್ಟು ದುಡಿದೇ ತಿನ್ನಬೇಕೆಂಬ ಛಲ, ಇನ್ನೊಬ್ಬರನ್ನು ಶೋಷಿಸಬಾರದೆಂಬ ವ್ರತ, ಸಮಾಜಕ್ಕಾಗಿ ತನ್ನ ದುಡಿಮೆಯೆಲ್ಲವನ್ನಾದರೂ ನೀಡಿ ಸಹವರ್ತಿಗಳ ಬಾಳು ಹಸನಾಗುವಂತೆ ಮಾಡಬೇಕೆಂಬ ಕಳಕಳಿ ನಷ್ಟವಾಗಿದೆ (ಪು.743). ಬೆವರ್ಲಿ ಇಂಟರ್ನ್ಯಾಶನಲ್ ಸ್ಕೂಲಿನಂತಹ ಇತರ ಶ್ರೀಮಂತ ಶಾಲೆಗಳದೂ ಇದೇ ಪರಿ ಎಂಬುದು ಸೂಚಿತವಾಗಿದೆ.
ಭ್ರಷ್ಟಾಚಾರ ಮತ್ತು ಕ್ರೌರ್ಯದ ವಿರಾಟ್ ಸ್ವರೂಪ ನಮ್ಮನ್ನು ಕಾಡುವುದು ಹಾಲುಕೆರೆಯ ದೇವಸ್ಥಾನದಲ್ಲಿಟ್ಟಿದ್ದ ಹೊನ್ನತ್ತಿಯ ಸಿತಾರನ್ನು ಯಾರೋ ಅಮಾನವೀಯವಾಗಿ ನುರಿದು ಎಸೆದ ಘಟನೆ ಮತ್ತು ಅದರ ಮುಂದಿನ ಪರಿಣಾಮಗಳಾದ ಅರ್ಚಕ ವಡೇರಯ್ಯನ ಬಂಧನ, ಹಿಂಸೆ, ಪೋಲೀಸರ ಲಂಚಾವತಾರ, ಪರಶುರಾಮೇಗೌಡ ಅಣ್ಣಯ್ಯನ ಮೇಲಿನ ತನ್ನ ಸೇಡು ತೀರಿಸಿಕೊಳ್ಳುವುದು ಇತ್ಯಾದಿಗಳ ನಿರೂಪಣೆಯಲ್ಲಿ. ಮನುಷ್ಯ ದುಡ್ಡಿಗಾಗಿ, ಆಸ್ತಿಗಾಗಿ ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲನೆಂಬುದನ್ನು ಇಲ್ಲೆಲ್ಲ ಕಾಣಬಹುದು. ತಾಂತ್ರಿಕ ಶಿಕ್ಷಣ ಮತ್ತು ಉನ್ನತ ವಿದ್ಯಾಸಂಸ್ಥೆಗಳಲ್ಲೂ ಈ ಕೆಡುಕುಗಳು ವಿಜೃಂಭಿಸುತ್ತಿರುವುದನ್ನು ಕಾದಂಬರಿಕಾರರು ಚಿತ್ರಿಸಿದ್ದಾರೆ. ಅನೂಪನ ಅಕ್ರಮ ಲೈಂಗಿಕ ಸಂಬಂಧಗಳು ಅದನ್ನು ಬಳಸಿಕೊಂಡು ರಾಜಕೀಯಸ್ಥರು ಅವನನ್ನೂ ಅವನ ತಾಯಿಯನ್ನೂ ಲೂಟಿಮಾಡುವುದು  ಇಂತಹವುಗಳಲ್ಲಿ ಇದನ್ನು ಕಾಣಬಹುದು. ಭ್ರಷ್ಟಾಚಾರವು ಹೇಗೆ ಬೆಳೆದು ರಾಷ್ಟ್ರಸ್ತರಕ್ಕೆ ಏರಿತು ಎಂಬುದರ  ಒಂದು ಹೊಳಹನ್ನೂ ಇವು ಒದಗಿಸುತ್ತವೆ. ಹುಡುಗಿಯ ತಂದೆಯೇ ತನ್ನ ಮಗಳನ್ನು ವೇಶ್ಯಾವೃತ್ತಿಗಿಳಿಸುವುದು ಆ ಹುಡುಗಿ ಅದನ್ನು ಮುಗ್ಧತೆಯಿಂದ ಒಪ್ಪಿಕೊಳ್ಳುವುದು – ಇವು ಒಂದು ಕಡೆಯಿಂದ ಅಮಾನವೀಯವೂ ಇನ್ನೊಂದು ಕಡೆಯಿಂದ ಸಾಮಾನ್ಯ ಜನರ ಮಟ್ಟದ ಭ್ರಷ್ಟ ಮನೋಸ್ಥಿತಯನ್ನೂ ತೋರಿಸುತ್ತವೆ. ಇವು ಒಂದು ರೀತಿಯಲ್ಲಿ ದೇಶದ ತುಂಬ ವಿಭಿನ್ನ ಸ್ತರಗಳಲ್ಲಿ ಪ್ರಸರಿಸುತ್ತದೆ. ಶೀತಲ್ ಮತ್ತು ಕಾಂತಿಯರು ದೆಹಲಿಯಲ್ಲಿ ಇಂತಹ ಸಂಬಂಧಗಳಿಗೆ ಸಿಕ್ಕುವುದು,  ವಿದೇಶ ಮಂತ್ರಾಲಯದ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ, ಹರಿಶಂಕರನಂತಹವರು ಭಾರತೀಯ ಕಲಾ ಪರಂಪರೆಗೇ ಅಪಾರ್ಥ ಕಲ್ಪಿಸುವುದು ಇಂತಹವು ಹಳ್ಳಿಯಿಂದ ದಿಳ್ಳಿಯವರೆಗೆ ಸಂಸ್ಕೃತಿಯ ಅವಸ್ಥಾಂತರವನ್ನು ನಿರೂಪಿಸುತ್ತವೆ. ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಲೋಕ ಸಭಾ ಸದಸ್ಯತ್ವವನ್ನು ರದ್ದುಪಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು, ಇದರಿಂದ ಬಚಾವಾಗಲು ಪತ್ರಿಕೆಗಳನ್ನು ಸೆನ್ಸಾರಿಗೆ ಒಳಪಡಿಸುವುದು, ಲಕ್ಷಾಂತರ ಮುಗ್ಧರ ಸೆರೆ, ರಾಜಕೀಯ ಭಿನ್ನಾಭಿಪ್ರಾಯದ ಹತ್ತಿಕ್ಕುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯಹರಣ,  ಅಧಿಕಾರಸ್ಥಾನದ ಪ್ರಭಾವವನ್ನೇ ಬಳಸಿಕೊಂಡು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವುದು, ಇವೆಲ್ಲ ಈ ವಿದ್ಯಮಾನಕ್ಕೆ ಕಳಶವಿಟ್ಟಂತೆ ಜರುಗುತ್ತವೆ. ಇವು ಕಾದಂಬರಿಗೆ ಒಂದು ರೀತಿಯ ಅಥೆಂಟಿಸಿಟಿಯನ್ನೂ ತಂದುಕೊಡುತ್ತವೆ.
ಪಾಶ್ಚಾತ್ಯ ಸಂಸ್ಕೃತಿಯ ಧಾಳಿಗೆ ಕೊಚ್ಚಿ ಹೋಗುತ್ತಿರುವ ಘಟನೆಗಳು, ವ್ಯಕ್ತಿಗಳು ಇಲ್ಲಿರುವಂತೆಯೇ ಒಮ್ಮೆ ಇಂತಹ ಪ್ರವಾಹದ ಸೆಳೆತಕ್ಕೊಳಗಾಗಿ ಅದರಿಂದ ಬೇಸತ್ತು ಬದುಕಿನಲ್ಲಿ ಘನವಾದುದರ ಹುಡುಕಾಟದಲ್ಲಿ ತೊಡಗಿ ಸಂಸ್ಕೃತಿಯನ್ನು ಪುನರೊಪ್ಪಿಕೊಳ್ಳುವ ಪಾತ್ರಗಳೂ ಇವೆ. ಹೊನ್ನತ್ತಿ ಜಯಪ್ರಕಾಶ ನಾರಾಯಣರನ್ನು ಭೇಟಿಯಾಗಿ ಅವರ ಸಲಹೆಯಂತೆ ಹಾಲುಕೆರೆಯ ಬಳಿಯೇ ವಿಕಲಾಂಗರ ಶಾಲೆಯೊಂದನ್ನು ಸ್ಥಾಪಿಸುವುದು, ಅದರಲ್ಲಿ ಅಣ್ಣಯ್ಯ ಕೂಡ ಸೇವೆಯಲ್ಲಿ ತೊಡಗುವುದು ಒಂದು ಕಡೆ ಮತ್ತು ರಾಮಚಂದ್ರನ ಪ್ರವಚನ ಧ್ಯಾನಾದಿಗಳು ಇನ್ನೊಂದು ಕಡೆಯಾದರೆ ರವೀಂದ್ರ ಟ್ರಿಬ್ಯೂನ್ ಬಿಟ್ಟು ಸರಕಾರದ ಅಪಚಾರಗಳ ಬಗ್ಗೆ ಜನರನ್ನು ಜಾಗೃತಗೊಳಿಸುವಂತಹ ದಿ ಫ್ಯಾಕ್ಟ್ ಎಂಬ ಚಿಕ್ಕ ಪತ್ರಿಕೆಯೊಂದನ್ನು ಪ್ರಾರಂಬಿಸಿ ಕೃತಕೃತ್ಯನಾಗುವುದು ಇಂತಹವೆಲ್ಲ ಈ  ಪ್ರವೃತ್ತಿಯ ಪ್ರದರ್ಶಕಗಳು. ನಿಜವಾಗಿ ಇಂತಹ ನಂಬಿಕೆಯೇ ತೋಷದಾಯಕ. ಕಾದಂಬರಿಕಾರರ ಸಂದೇಶ ಕೂಡ ಇದೇ ಆಗಿರುವಂತೆ ತೋರುತ್ತದೆ.
ಮೇಲನವುಗಳನ್ನೆಲ್ಲ ಒಂದೊಂದೇ ಪಾತ್ರದಲ್ಲಿ ಗುರತಿಸಿಯೂ ಕಾಣಬಹುದು ಒಟ್ಟಾಗಿ ಕಾದಂಬರಿಯಲ್ಲಿ ವಿವಿಧ ಪಾತ್ರಗಳ  ಒಡನಾಟದಲ್ಲಿಯೂ ಗುರುತಿಸಬಹುದು. ಇದು ಕಾದಂಬರಿಯ ವೈಶಿಷ್ಟ್ಯ.
ಜನತೆಯ ವಿರೋಧವನ್ನು ಹತ್ತಿಕ್ಕುವ ಅಸ್ತ್ರವಾಗಿ  ತುರ್ತು ಪರಿಸ್ಥಿತಿಯ ಘೋಷಣೆ ಕಾದಂಬರಿಯಲ್ಲಿ ಕ್ರಿಯೆಯನ್ನು ಮುಂದಿನ ಮಜಲಿಗೆ ತಲುಪಿಸುತ್ತದೆ. ಹೊಸ ಪರಿಸ್ಥಿತಿ  ಭ್ರಷ್ಟಾಚಾರ, ರಾಜಕೀಯ ಶೋಷಣೆ ಮತ್ತು  ಸ್ವಾತಂತ್ರ್ಯ ಹರಣ – ಇವುಗಳನ್ನು ಒಂದು ರೀತಿಯಲ್ಲಿ ಅಧಿಕೃತ ಗೊಳಿಸಿತು. ಇವುಗಳಿಂದ ಪೀಡಿತರಾದ ಪಾತ್ರಗಳು ತಾವು ಇದುವರೆಗೆ ಮೌಲಿಕವೆಂದು ಅನುಸರಿಸುತ್ತಿದ್ದ ಜೀವನ ವಿಧಾನದಲ್ಲಿ ಬಾಧೆ ಅನುಭವಿಸಿ ಬದುಕಿನಲ್ಲಿ ತಿರುಳೇನು ತಮ್ಮ ಅಸ್ಮಿತೆ ಏನು ಎಂಬ ಹುಡುಕಾಟದಲ್ಲಿ ತೊಡಗುವುದು ಈ ಮಜಲಿನ ವೈಶಿಷ್ಟ್ಯ. ಹಾಗೆ ಕಾಂತಿ ಮತ್ತು ಶೀತಲ್ ಇವರು, ರಾಮಚಂದ್ರ ಬ್ರಹ್ಮಚಾರಿಯವರು ಬೋಧಿಸಿದ ಧ್ಯಾನಾಭ್ಯಾಸದಲ್ಲಿ ತೊಡಗುತ್ತಾರೆ. ಮಗನಿಂದ ಒಂದು ರೀತಿಯ ಬಹಿಷ್ಕಾರಕ್ಕೊಳಗಾದ  ಕಾಂತಿ ಅಕಸ್ಮಾತ್ ಹೃದಯಾಘಾತದಿಂದ ನಿಧನಳಾಗುವುದು, ಅವಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಬ್ರಹ್ಮಚಾರಿ ಭ್ರಮನಿರಸನಗೊಂಡು ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಸಂಪೂರ್ಣವಾಗಿ ಅಧ್ಯಾತ್ಮ ದಾರಿಯಲ್ಲಿ ನಡೆಯುತ್ತಾನೆ. ರವೀಂದ್ರ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದ ಟ್ರಿಬ್ಯೂನ್ ಪತ್ರಿಕೆಯ ಮಾಲಕವರ್ಗದೊಂದಿಗೆ ಸಂಬಂಧ  ಕಡಿದು ತನ್ನ ಮೌಲ್ಯಗಳನ್ನು ಪ್ರತಿಪಾದಿಸಲು ಅವಕಾಶವಿದ್ದ ಪತ್ರಿಕೆಯ ಭಾಗವಾಗುತ್ತಾನೆ. ಹೊನ್ನತ್ತಿ ಮತ್ತು ಅಣ್ಣಯ್ಯ ಜೈಲು ಸೇರಿದರೂ ತಾವು ಸ್ಥಾಪಿಸಿದ್ದ ವಿಕಲಾಂಗೆ ಶಾಲೆಯ ಮಕ್ಕಳನ್ನು ಸಲುಹುವ ಹೊಸ ಉಪಾಯಗಳನ್ನು ಯೋಚಿಸುತ್ತಾರೆ. ಇಂತಹ ಅಸ್ಮಿತೆಯ ಹುಡುಕಾಟವು ಮಾನವಸಹಜ ಮತ್ತು ಸಾರ್ವಕಾಲಿಕ ಸತ್ಯವಾದುದರಿಂದ ಕಾದಂಬರಿ ಈ ದಿನಕ್ಕೂ ಪ್ರಸ್ತುತವಾಗುತ್ತದೆ.
[ತಂತುವಿನ ಮೊದಲ ಮುದ್ರಣ 1993. ಇದು ಎಂಟು  ಮುದ್ರಣಗಳನ್ನು ಕಂಡಿದೆ.ಪ್ರಸ್ತುತ ಮುದ್ರಣ 2013ರಲ್ಲಿ ಪ್ರಕಟ. ಮುದ್ರಿತ ಪುಟಗಳು 888. ಬೆಲೆ ರೂ.725. ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮ ಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು 53. ದೂರವಾಣಿ – 22877618].


Tuesday, 15 December 2015

ಹಳಗನ್ನಡ ವ್ಯಾಕರಣ ಸೂತ್ರಗಳು – ಕರ್ತೃ ಮತ್ತು ಕೃತಿ

          ಹಳಗನ್ನಡ ವ್ಯಾಕರಣ ಸೂತ್ರಗಳು – ಕರ್ತೃ ಮತ್ತು ಕೃತಿ                                ಕನ್ನಡ ಶಾಸ್ತ್ರಸಾಹಿತ್ಯದ ಬೆಳವಣಿಗೆಯಲ್ಲಿ ಹತ್ತೊಂಬತ್ತನೆಯ ಶತಮಾನದ ಕಾಲಘಟ್ಟ ತುಂಬ ವಿಶಿಷ್ಟವಾದುದು ಮತ್ತು ಮಹತ್ವದ್ದು. ಅದುವರೆಗೆ ಎರಡೋ ಮೂರೋ ಶತಮಾನಗಳಿಗೊಂದು ಬಾರಿ ಏನೋ ಒಂದು ಮಹತ್ವದ ಘಟನೆಯಂತೆ ಒಂದುವ್ಯಾಕರಣ ಅಥವ ಒಂದು ಛಂದೋಗ್ರಂಥದ ರಚನೆಯಾಗುತ್ತಿತ್ತು. ಭಾಷೆಗೆ ಸಂಬಂಧಪಟ್ಟ ಶಾಸ್ತ್ರೀಯ ಅಧ್ಯಯನ  ಎಲ್ಲಿಯೋ ಯಾವಾಗಲೋ ಮಿಂಚುವ ಒಂದು ವಿಸ್ಮಯದಂತೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ‘ಆರಾರೇರರ್ ಶಾಸ್ತ್ರಶ್ರೀರೋಹಣಗಿರಿಯನ್’ ಎಂದು ಶಾಸ್ತ್ರ ಪ್ರಾವೀಣ್ಯವನ್ನು ಕಾವ್ಯರಚನೆಗಿಂತ ಕಡಿಮೆ ಪ್ರಾಶಸ್ತ್ಯದ್ದೆಂದು ಪ್ರಾಚೀನ ಕವಿಯೊಬ್ಬ ಹಾಡಿದ್ದರೂ ಹಾಗೆ ಏರಿದವರ ಸಂಖ್ಯೆ ಬೆರಳೆಣಿಕೆಯಷ್ಟೆ. ಆದರೆ ಹತ್ತಂಬತ್ತನೆಯ ಶತಮಾನವೊಂದರಲ್ಲೇ ಇಪ್ಪತ್ತಕ್ಕಿಂತ ಹೆಚ್ಚು ವ್ಯಾಕರಣಕೃತಿಗಳ ರಚನೆಯಾಗಿದೆ. ಈ ಶತಮಾನದಲ್ಲಿ ರಚಿತವಾದ ನೀಘಂಟುಗಳ ಸಂಖ್ಯೆಯೂ ಗಣನೀಯ. ಅಲ್ಲದೆ ಗ್ರಂಥ ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆಯ ಶಾಸ್ತ್ರೀಯ ಪ್ರಕಾರಗಳೂ ಮೈತಳೆದವು.
ಹತ್ತೊಂಬತ್ತನೆಯ ಶತಮಾನದ ಕನ್ನಡ ಶಾಸ್ತ್ರ ಸಾಹಿತ್ಯವೆಂದೊಡನೆ ಕ್ರೈಸ್ತ ಮಿಶನರಿಗಳ ನೆನಪಾಗುತ್ತದೆ. ಈ ಕ್ಷೇತ್ರದಲ್ಲಿ ಕಿಟೆಲನೇ ಸಿದ್ಧಿಯನ್ನು ಪಡೆದ ಮಹಾನುಭಾವನಾದರೂ ಇವನಿಗಿಂತ ಪೂರ್ವದಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿದ ಹಲವರು ಮಿಶನರಿ ಸಾಹಿತಿಗಳಿದ್ದಾರೆ. ಅಷ್ಟಾಗಿ ಸಾಹಿತ್ಯೇತಿಹಾಸಕಾರರ ಗಮನ ಸೆಳೆಯದೆ ಎಲೆಯ ಮರೆಯ ಕಾಯಿಯಂತೆ ಉಳಿದಿರುವ ಒಂದು ಹೆಸರು ರೆ ಜಾರ್ಜ್ ವುರ್ತನದು.ಇವನು ಅಂದಿನ ಶಾಲೆಗಳಿಗಾಗಿ ಸಂಪಾದಿಸಿದ ಪ್ರಾಕ್ಕಾವ್ಯಮಾಲಿಕೆ ಮತ್ತು ಅದರ ಭಾಗವಾದ ಶಬ್ದಕೋಶಗಳು ಸ್ವಲ್ಪ ಮಟ್ಟಿಗೆ  ಇವನಿಗೆ ಹೆಸರು ತಂದಿವೆ. ಹಳಗನ್ನಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಶಾಲಾ ಮಕ್ಕಳಿಗೆ ಅಧ್ಯಾಪನ ಮಾಡಲು ಸಹಾಯವಾಗುವಂತೆ ಇವನು ರಚಿಸಿದ ಹಳಗನ್ನಡದ ಸಂಕ್ಷಿಪ್ತ ವ್ಯಾಕರಣ ಸಾಕಷ್ಟು ಚರ್ಚೆಗೊಳಗಾಗಿದೆಯಾದರೂ ಅದರ ಕರ್ತೃತ್ವವನ್ನು ಕಿಟೆಲನಿಗೆ ಆರೋಪಿಸಲಾಗಿದ್ದು ವುರ್ತನಿಗೆ ಅದರ ಅದರ ಯಶಸ್ಸು ಲಭ್ಯವಾಗಿಲ್ಲ. ಈ ಕೃತಿಯೇ ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಚಿಕ್ಕ ಹೊತ್ತಗೆ.
ಕೃತಿಯ ಮೇಲೆ ಲೇಖಕರ ಹೆಸರನ್ನು ಮುದ್ರಿಸಿಲ್ಲ. ಬೇರೆಬೇರೆ ಪುಸ್ತಕಗಳಲ್ಲಿ ಮತ್ತು ವರದಿಗಳಲ್ಲಿ ಸಿಕ್ಕುವ ಉಲ್ಲೇಖಗಳು, ಅವುಗಳಿಂದ ತೆಗೆಯಬಹುದಾದ ಅನುಮಾನಗಳು ಮತ್ತು ಕೃತಿಯಲ್ಲಿ ಆಂತರಿಕವಾಗಿ ದೊರಕುವ ಸಾಕ್ಷ್ಯಾಧಾರಳು ಇತ್ಯಾದಿಗಳನ್ನು ಅವಲಂಬಿಸಿ ಕರ್ತೃತ್ವವನ್ನು ನಿರ್ಧರಿಸುವುದು ಆದ್ದರಿಂದ ಅನಿವಾರ್ಯ. ಈ ಕೃತಿಯ ಕರ್ತೃ ಕಿಟೆಲ್ ಇರಬಹುದೆಂದು ಶ್ರೀ ಶ್ರೀನಿವಾಸ ಹಾವನೂರ ಇವರು ಸೂಚಿಸಿದ್ದಾರೆ. ಕೃತಿಯ ಪುನರ್ಮುದ್ರಣವೊಂದು 1985ರಲ್ಲಿ ಪ್ರಕಟವಾಗಿದ್ದು ಅದರ ಸಂಪಾದಕರು ಪ್ರೊ ಬಿ ವಿವೇಕ ರೈ ಇವರು. ಕೆಲವೊಂದು ಆಧಾರಗಳನ್ನವಲಂಬಿಸಿ ಕೃತಿಯ ಕರ್ತೃವನ್ನು ಕಿಟೆಲ್ ಎಂದು ಸಂಪಾದಕರು ನಿರ್ಧರಿಸಿದ್ದಾರೆ.
ಪ್ರಸ್ತುತ ಮುದ್ರಣದಲ್ಲಿ ಕೃತಿಯ ಕರ್ತೃತ್ವವನ್ನು ನಿರ್ಧರಿಸಲು ಸಂಪಾದಕರು ಆಧರಿಸಿರುವ ಪ್ರಮಾಣಗಳು ಇವು: ಬ್ರಿಟಿಶ್ ಮ್ಯೂಸಿಯಂನಲ್ಲಿರುವ ಕನ್ನಡ ಪುಸ್ತಕಗಳ ಸೂಚಿಯೊಂದನ್ನು ಎಲ್ ಡಿ ಬಾರ್ನೆಟ ಎಂಬುವನು 1910ರಲ್ಲಿ ತಯಾರಿಸಿದ್ದಾನೆ. ಅದರಲ್ಲಿ1866ರಲ್ಲಿ ಪ್ರಕಟವಾದ ಪುಸ್ತಕಗಳ ಪಟ್ಟಿಯಲ್ಲಿA Short Grammar of the Ancient Dialect of Canarese Language(ಇದನ್ನು ಇನ್ನು ಮುಂದೆ ಎ ಶಾರ್ಟ್ ಗ್ರಾಮರ್ ಎಂದು ಉಲ್ಲೇಖಿಸಲಾಗುವುದು) ಎಂಬ ಗ್ರಂಥದ ಕರ್ತೃ  F. Kittel  ಎಂದು ಸೂಚಿಸಿದ್ದು ಇದರಲ್ಲಿ 104 ಪುಟಗಳಿರುವುದಾಗಿ ದಾಖಲಿಸಿದ್ದಾನೆ.ಇದಕ್ಕೆ ಪೂರಕವಾದ ಒಂದು ನಮೂದು 1866ರ ಬಾಸೆಲ್ ಇವೇಂಜಲಿಕಲ್ ಮಿಶನ್ ವರದಿಯಲ್ಲಿ Old Canarese Grammar ಎಂಬ ನಮೂದು ಇದ್ದು ಅದರಲ್ಲಿ 104 ಪುಟಗಳಿರುವುದಾಗಿ ತಿಳಿಸಿದೆ. 1888ರ ಅದೇ ಸಂಸ್ಥೆಯ ವರದಿಯಲ್ಲಿA Grammar of the Ancient Dialect of Canarese Language revised by Mr. Srinivasa Ayangar ಎಂಬ ಪುಸ್ತಕವನ್ನು ಉಲ್ಲೇಖಿಸಿದೆ ಮತ್ತು ಅದರಲ್ಲಿ 188ಪುಟಗಳಿರುವುದಾಗಿ ಸೂಚಿಸಿದೆ(ರೈ, 1985: v – vii).
          ಈ ಉಲ್ಲೇಖಗಳಿಂದ 1866ರಲ್ಲಿ ರಚಿತವಾದ ಹಳಗನ್ನಡದ ಸಂಕ್ಷೇಪ ವ್ಯಾಕರಣ ಸೂತ್ರಗಳು ಪುಸ್ತಕವೇ 1888ರಲ್ಲಿ ಶ್ರೀನಿವಾಸ ಅಯ್ಯಂಗಾರ್ಯನಿಂದ ಪರಿಷ್ಕೃತಗೊಂಡು 104 ಪುಟಗಳಂದ 188 ಪುಟಗಳಿಗೆ ಬೆಳೆಯಿತೆಂಬುದು ಸಿದ್ಧವಾಗುವುದೇನೋ ನಿಜ. ಬಾರ್ನೆಟನ ಕೆಟಲಾಗಿನ ಉಲ್ಲೇಖಗಳು ಮತ್ತು ಬಾಸೆಲ್ ಮಿಶನ್ ವರದಿಗಳಲ್ಲಿರುವ ಪುಸ್ತಕಗಳೂ ಬೇರೆಯಲ್ಲವೆಂಬುದೂ ಸರಿ. ಆದರೆ ಬಾರ್ನೆಟನ ನಿರ್ಣಯಕ್ಕೆ ಪುರಾವೆಗಳೇನು? ಈ ಸಂದೇಹ ಬಂದುದರಿಂದ ಚೆನ್ನೈನಲ್ಲಿರುವ ಬ್ರಿಟಿಶ್ ಕಾನ್ಸುಲೇಟಿನವರ ಸಹಾಯ ಪಡೆದು ಲಂಡನ್ನಿನಲ್ಲಿರುವ ಬ್ರಿಟಿಶ್ ಮ್ಯೂಸಿಯಮ್ಮಿನ ಅಧಿಕಾರಿಗಳಿಂದ ಅಲ್ಲಿ ಲಭ್ಯವಿದ್ದ ಎ ಶಾರ್ಟ್ ಗ್ರಾಮರ್ ದ ಮೇಲು(ರಕ್ಷಾ)ಪುಟದ ಜರಾಕ್ಸ್ ಒಂದನ್ನು ಪಡೆದೆ. ಇದರ ಪ್ರತಿಯನ್ನು ಕೊನೆಯಲ್ಲಿ ನೀಡಿದೆ. ಕೃತಿಕಾರನ ಹೆಸರನ್ನು ಅಲ್ಲೆಲ್ಲೂ ಮದ್ರಿಸಿಲ್ಲ. ಅದರ ಮೇಲ್ಭಾಗದ ಎಡಮೂಲೆಯಲ್ಲಿ Kittel (F) ಎಂದು ಪೆನ್ಸಿಲ್ಲಿನಿಂದ ಬರೆದಿದ್ದು ಇದು ಬಹುಶಃ ಕೆಟಲಾಗ್ ಕರ್ತೃ ಬಾರ್ನೆಟನ ಕಾರ್ಯವೆಂದು ತೋರುತ್ತದೆ. ಈ ಅಭಿಪ್ರಾಯ ಅವನಿಗೆ ಹೇಗೆ ಬಂತೋ ತಿಳಿಯುವುದಿಲ್ಲ.
          ಎ ಶಾರ್ಟ್ ಗ್ರಾಮರ್ ಇದರ ಕರ್ತೃ ಕಿಟೆಲನಲ್ಲ ಎಂದು ತೋರಿಸುವ ಮತ್ತು ಅದರ ಲೇಖಕ ರೆ ಜಾರ್ಜ್ ವುರ್ತ್ ಎಂದು ನಿರೂಪಿಸುವ ಕೆಲವು ಸಾಂದರ್ಭಿಕ ಸಾಕ್ಷ್ಯಗಳು ಮನವೊಲಿಸುವಂತಹವಾಗಿ ಮೂಡಿ ಬರುತ್ತವೆ. ಕಿಟೆಲನ ಕೃತಿಳೆಂದು ನಿಸ್ಸಂಶಯವಾಗಿ ಖ್ಯಾತವಾಗಿರುವ ಕನ್ನಡ-ಇಂಗ್ಲಿಷ್ ನಿಘಂಟು,  ಕಿಟೆಲನ ವ್ಯಾಕರಣ, ಸಾಹಿತ್ಯ ಚರಿತ್ರೆಯ ಬಗ್ಗೆ ಅವನು ಬರೆದ ಪ್ರಬಂಧ, ಶಬ್ದಮಣಿದರ್ಪಣ ಮತ್ತು ಛಂದೋಂಬುಧಿಗಳ ಅವನ ಸಂಪಾದಿತ ಆವೃತ್ತಿಗಳು, ಕರ್ನಾಟಕ ಕಾವ್ಯಮಾಲೆ – ಇವುಗಳನ್ನು ಅವನ ಜೀವಿತಾವಧಿಯಲ್ಲಿ ಇತರರು ಪರಿಷ್ಕರಿಸಿದ ನಿದರ್ಶನಗಳಿಲ್ಲ.  1894ರಲ್ಲಿ ಪ್ರಕಟವಾದ ಕಿಟೆಲ್ ನಿಘಂಟಿನ ಪರಿಷ್ಕರಣೆಯನ್ನು ಪ್ರೊ ಮರಿಯಪ್ಪ ಭಟ್ಟರು ಮಾಡಿದ್ದು 1965ರಲ್ಲಿ- ಕಿಟೆಲ್ ನಿಧನದ ಸು. ಅರವತ್ತು ವರ್ಷಗಳನಂತರ. 1872ರಲ್ಲಿ ಪ್ರಕಟವಾದ ಕಿಟೆಲ್ ಸಂಪಾದಿಸಿದ ಕೇಶಿರಾ ಕವಿಯ ಶಬ್ದಮಣದರ್ಪಣಮ್ ಇದರ ಪರಿಷ್ಕರಣೆಯನ್ನು 1899ರಲ್ಲಿ ತಾನೇ ಮಾಡಿದ್ದಾನೆ; ಇತರರಿಗೆ ಅಕಾಶ ಕೊಟ್ಟಿಲ್ಲ. ಈ ಕೃತಿಯನ್ನು 1920ರಲ್ಲಿ ಕಿಟೆಲ್ ನಿಧನಾನಂತರ ಪಂಜೆ ಮಂಗೇಶರಾಯರು ಪರಿಷ್ಕರಿಸಲು ಸಾಧ್ಯವಾಯಿತು. ಆದ್ದರಿಂದ ಎ ಶಾರ್ಟ್ ಗ್ರಾಮರ್ ಕಿಟೆಲ್ ಕೃತವಾಗಿದ್ದರೆ 1888ರಲ್ಲಿ ಶ್ರೀನಿವಾಸ ಅಯ್ಯಂಗಾರ್ಯನಿಂದ ಪರಿಷ್ಕರಣೆಗೆ ಅವಕಾಶವಾಗುತ್ತಿರಲಿಲ್ಲ.
          ಮೇಲೆ ಹೇಳಿದ ಕಿಟೆಲನ ಎಲ್ಲ ಕೃತಿಗಳೂ ಸ್ವೋಪಜ್ಞ ಕೃತಿಗಳು, ಯಾವುದೂ ಬೇರೊಂದು ಕೃತಿಯನ್ನು ಆಧರಿಸಿ ಬರೆದುದಲ್ಲ. ಆದರೆ ಎ ಶಾರ್ಟ್ ಗ್ರಾಮರ್ ಮತ್ತು ಅದರ ಪರಿಷ್ಕರಣೆ – ಇವು ಶಬ್ದಮಣಿದರ್ಪಣವನ್ನು ಆಧರಿಸಿದ್ದು ಪದ್ಯರೂಪದ ಬದಲು ಗದ್ಯದಲ್ಲಿವೆ ಎಂಬುದೇ ಇಲ್ಲಿಯ ವೈಶಿಷ್ಟ್ಯ.
           ಶಬ್ದಮಣಿದರ್ಪಣ1872ರ ಆವೃತ್ತಿಯಲ್ಲಿವುರ್ತ್ ಒಂದು ಹಳಗನ್ನಡ ವ್ಯಾಕರಣವನ್ನು ಬರೆದಿದ್ದಾನೆಂದು ಕಿಟೆಲ್ ಉಲ್ಲೇಖಿಸಿದ್ದಾನೆ. ಇದರ ಪೀಠಿಕೆಯಲ್ಲಿ ತಾನು ಕೃತಿಯ ಸಂಪಾದನೆಗೆ ಉಪಯೋಗಿಸಿದ ಹಸ್ತಪ್ರತಿಯೊಂದರ ಬಗ್ಗೆ ಹೀಗೆ ಹೇಳುತ್ತಾನೆ: “It is the same manuscript which the late Rev. G. Wurthe used for editing the Short Grammar  of the Ancient Dialect of the Canarese Language 1866.”(ಕೇಶಿರಾಜ, 1872: ಪು ix). ಶಬ್ದಮಣಿದರ್ಪಣದ ಈ ಹಸ್ತಪ್ರತಿಯ ವೈಶಿಷ್ಟ್ಯವನ್ನು ವಿವರಿಸುತ್ತಾ ಇದು ಬೆಟಗೇರಿಯದೆಂದೂ ಇದರಲ್ಲಿ ಶಕಟರೇಫೆ ಮತ್ತು ರಳಗಳನ್ನು ಯಾವುದೇ ಎಗ್ಗಿಲ್ಲದೆ ಬಳಸಲಾಗಿದೆಯೆಂದೂ ಕಿಟೆಲ್ ಹೇಳಿದ್ದಾನೆ. ಇವುಗಳಿಂದ ನಮಗೆ ಸ್ಪಷ್ಟವಾಗುವ ಅಂಶಗಳು ಮೂರು :
1.   ರೆ ಜಿ ವುರ್ತನು ಬರೆದ ಒಂದು ವ್ಯಾಕರಣವಿದೆ.
2.   ಇದು ಶಬ್ದಮಣಿದರ್ಪಣದ ಒಂದು ಹಸ್ತಪ್ರತಿಯನ್ನು ಅವಲಂಬಿಸಿದೆ.
3.   ಈ ಹಸ್ತಪ್ರತಿಯಲ್ಲಿ ಶಕಟರೇಫೆ ಮತ್ತು ರಳಗಳನ್ನುಸೂಕ್ತವಾಗಿ ಬಳಸಿಲ್ಲ
ಕಿಟೆಲ್  ಹೇಳಿರುವ ಕೊನೆಯ ಎರಡು ಅಂಶಗಳು ಈ ಕೃತಿಗೆ ಸ್ಪಷ್ಟವಾಗಿ ಅನ್ವಯಿಸುತ್ತವೆ. ಶಬ್ದಮಣಿದರ್ಪಣದ ಸೂತ್ರಗಳ ಸಂಗ್ರಹರೂಪವೇ ಈ ಕೃತಿ. ಸೂತ್ರಗಳಂತೆ ಉದಾಹರಣೆಗಳೂ ಮೂಲವನ್ನೇ ಅನುಸರಿಸಿವೆ. ಇಲ್ಲಿರುವ ಉದಾಹರಣೆಗಳಲ್ಲಿ ಶಕಟರೇಫೆ ಮತ್ತು ರಳಗಳ ಸರಿಯಾದ ಬಳಕೆ ಇಲ್ಲ. “ಕಿಳಿರ್” ಎಂಬಲ್ಲಿ ಶಕಟರೇಫೆಯ ಬದಲು ಸಾಮಾನ್ಯ ರೇಫೆ ಇದೆ; “ಪಳದು” ಎಂಬಲ್ಲಿ ರಳದ ಬದಲು ಕುಳವಿದೆ. ಉದ್ದಕ್ಕೂ ಇಂತಹ ನಿದರ್ಶನಗಳನ್ನು ಕಾಣಬಹುದು. ಹೀಗೆ ಕಿಟೆಲ್ ತನ್ನ ಉಲ್ಲೇಖದಲ್ಲಿ ಸೂಚಿಸಿರುವ ಕೃತಿ ಇದೇ ಎಂಬುದು ಸ್ಪಷ್ಟವಾಗಿದೆ. ಈ ಕೃತಿಯೇ ಎ ಶಾರ್ಟ್ ಗ್ರಾಮರ್ ಆಗಿದ್ದು ಇದರ ಲೇಖಕ ರೆ ಜಾರ್ಜ್ ವುರ್ತನೇ ಹೊರತು ಫರ್ಡಿನಂದ್ ಕಿಟೆಲನಲ್ಲ. ಪ್ರಾಕ್ ಕಾವ್ಯಮಾಲಿಕೆ ಮಾಲಿಕೆ ಮತ್ತು ಈ ವ್ಯಾಕರಣ - ಇವೆರಡೂ ಮದ್ರಾಸಿನ ಸಾರ್ವಜನಿಕ ಶಿಕ್ಷಣ ಇಲಾಖೆಗಾಗಿ ಸಿದ್ಧಪಡಿಸಿದವು ಎಂಬುದೂ ಗಮನಾರ್ಹ. ಹೀಗೆ ಹಳಗನ್ನಡ ವ್ಯಾಕರಣವೊಂದನ್ನು 1866ರಲ್ಲಿ ಹೊಸಗನ್ನಡದಲ್ಲಿ ಬರೆದ ಕೀರ್ತಿ  ಜಾರ್ಜ್ ವುರ್ತನಿಗೆ ಸಲ್ಲಬೇಕು.
          ಇದು ಹಳಗನ್ನಡ ವ್ಯಾಕರಣವನ್ನು ಹೊಸಗನ್ನಡದಲ್ಲಿ ಹೇಳುವ ಕೃತಿ. ಹಳಗನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುವುದು ಇದರ ಉದ್ದೇಶ. ಶಬ್ದಮಣಿದರ್ಪಣವನ್ನು ಹೆಜ್ಜೆಹೆಜ್ಜೆಗೂ ಅನುಸರಿಸಿದ್ದರೂ ಎ ಶಾರ್ಟ್ ಗ್ರಾಮರ್ ಅದಕ್ಕಿಂತ ವಿಭಿನ್ನ. ಸಂಕ್ಷಿಪ್ತೀಕರಣ ಮತ್ತು ಇಂಗ್ಲಿಷ್ ಬಲ್ಲ ಕನ್ನಡೇತರರಿಗೂ ಸಹಾಯವಾಗುವ ಉದ್ದೇಶ – ಇವು ಇಂತಹ ಭಿನ್ನತೆಗಳುಂಟಾಗಲು ಕಾರಣ.
          ಮೂಲದಲ್ಲಿ 323 ಸೂತ್ರಗಳಿದ್ದುದು ವುರ್ತನ ಕೃತಿಯಲ್ಲಿ 148 ಸೂತ್ರಗಳಾಗಿರುವುದು ಈ ಕೃತಿ ಎಷ್ಟು ಸಂಕ್ಷಿಪ್ತವಾಗಿದೆ ಎಂಬುದನ್ನು ತೋರಿಸುತ್ತದೆ. ಅಷ್ಟರ ಮಟ್ಟಿಗೆ ವಿಷಯ ನಿರೂಪಣೆಯಲ್ಲಿ ಕೊರತೆಯಾಗಿದೆ ಎಂದೇನೂ ಎನ್ನುವಂತಿಲ್ಲ. ಸಂಕ್ಷಿಪ್ತೀಕರಣ ಕಲೆ ಇವನಿಗೆ ಕರಗತವಾಗಿರುವುದನ್ನು ಇದು ತೋರಿಸುತ್ತದೆ. ಇವನ ಸಂಕ್ಷಿಪ್ತೀಕರಣ ರೀತಿ ಕೆಳಗಿನಂತಿವೆ:
1.    ವಾಕ್ಯಗಳನ್ನು ಪುನಾರೂಪಿಸಿ  (ಕೆಲವೊಮ್ಮೆ ಪದಗಳನ್ನು ಬಿಟ್ಟು) ಸೂತ್ರಗಳನ್ನು ಪುನಾರಚಿಸುವುದು,
2.    ಉದಾಹರಣೆಗಳ ಸಂಖ್ಯೆಯನ್ನು ಸೀಮಿತಗೊಳಿಸಿರುವುದು ಮತ್ತು ಅವುಗಳಲ್ಲಿ ಅಗತ್ಯ ಪದಪುಂಜಗಳನ್ನು ಮಾತ್ರ ಉಳಿಸಿಕೊಂಡು ಇತರ ಪದಗಳನ್ನು ಬಿಟ್ಟಿರುವುದು,
3.    ಸೂತ್ರ-ಸೂತ್ರಗಳ ನಡುವೆ ಕೊಂಡಿಯಂತೆ ಮಾತ್ರ ಇರುವ ಒಂದೊಂದು ಸೂತ್ರವನ್ನೇ ಅಂದರೆ ವ್ಯಾಕರಣವಸ್ತವಿಲ್ಲದ ಸೂತ್ರವನ್ನು ಬಿಟ್ಟಿರುವುದು.
ಸಂಕ್ಷಿಪ್ತೀಕರಣವೊಂದೇ ವುರ್ತನ ವ್ಯಾಕರಣಕ್ಕೂ ಶಬ್ದಮಣಿದರ್ಪಣಕ್ಕೂ ಇರುವ ವ್ಯತ್ಯಾಸವಲ್ಲ. ಸೂತ್ರಗಳನ್ನು ಪುನರ್ವ್ಯವಸ್ಥೀಕರಿಸಿದ್ದಾನೆ ಮತ್ತು  ಪ್ರತಿಸೂತ್ರಕ್ಕೆ ಒಂದು ಇಂಗ್ಲಿಷ್ ಶೀರ್ಷಿಕೆಯನ್ನೂ ಕೆಲವೊಮ್ಮೆ ಸೂತ್ರಾಂತ್ಯದಲ್ಲಿ ಇಂಗ್ಲಿಷ್ ಉಪಶೀರ್ಷಿಕೆಯನ್ನೂ ಸೇರಿಸಿದ್ದಾನೆ. ಮೂಲದ ನಲವತ್ತಮೂರನೆಯ ಸೂತ್ರ ಇಲ್ಲಿ ಎರಡನೆಯದಾಗಿ ಬಂದಿದೆ. ಇಪ್ಪತ್ತಮೂರನೆಯ ಮತ್ತು ಹದಿನಾಲ್ಕನೆಯ ಸೂತ್ರಗಳನ್ನು ಸೇರಿಸಿ ಆರನೆಯ ಸೂತ್ರವನ್ನು ರಚಿಸಿದ್ದಾನೆ ಇತ್ಯಾದಿ.
ಇಲ್ಲಿ ನೀಡಿರುವ ಇಂಗ್ಲಿಷ್ ಶೀರ್ಷಿಕೆಗಳು ಕನ್ನಡೇತರರಿಗೆ ಸೂತ್ರಗಳನ್ನು ಅರ್ಥೈಸುವ ದೃಷ್ಟಿಯಿಂದ ಉಪಯುಕ್ತವಾಗಿವೆ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ತಮಗೆ ಬೇಕಾದ ಸೂತ್ರಗಳನ್ನು ಆಯ್ದುಕೊಳ್ಳಲು ಅನಕೂಲಕರವಾಗಿವೆ. ಉದಾಹರಣೆಗಾಗಿ ‘Letters’, ‘Euphony’, ‘Formation of Compound words’ etc. ಸೂತ್ರಾಂತ್ಯ ಉಪಶೀರ್ಷಿಕೆಗಳು ಆಯಾ  ಸೂತ್ರದ ವಸ್ತುವನ್ನು ತಿಳಿಸುತ್ತವೆ. ಉದಾ. “change of letters”, “insertion of or ಓ” etc. ಇವೆಲ್ಲ ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿವೆ.

ರೆ ಜಾರ್ಜ್ ವುರ್ತನ ಈ ವ್ಯಾಕರಣ ಶಬ್ದಮಣಿದರ್ಪಣವನ್ನು ಆಧರಿಸಿದ ಕೃತಿ ;ಸ್ವತಂತ್ರ ಗ್ರಂಥವಲ್ಲ. ಆದರೂ ಇದು ಮೂಲದ ಪಡಿಯಚ್ಚಲ್ಲ. ಹೊಸಗನ್ನಡ ಗದ್ಯದಲ್ಲಿ ಹಳಗನ್ನಡ ವ್ಯಾಕರಣವನ್ನು ಹೇಳಿರುವುದು ಇದರ ಹೆಗ್ಗಳಿಕೆ. ಶಬ್ದಮಣಿದರ್ಪಣದ ವೃತ್ತಿಗಳನ್ನೇ ಇಲ್ಲಿ ಹೆಚ್ಚಾಗಿ ಅವಲಂಬಿಸಿದ್ದಾನೆ. ಇಂದಿನ ಹಳಗನ್ನಡ ಕಾವ್ಯಾಭ್ಯಾಸಿ ಪೂರ್ವ ಸಿದ್ಧತೆಗಾಗಿ ಓದಬಹುದಾದ ವ್ಯಾಕರಣವೊಂದನ್ನು ಸಿದ್ಧಪಡಿಸಿಕೊಟ್ಟುದು ವುರ್ತನ ಇನ್ನೊಂದು ಹೆಗ್ಗಳಿಕೆ. ಹಳಗನ್ನಡ ವ್ಯಾಕರಣವನ್ನು ಇಂಗ್ಲಿಷ್ ವ್ಯಾಕರಣದ ಪರಿಭಾಷೆಗೆ ಹೊಂದಿಸಲು ಪ್ರಯತ್ನಿಸಿದ್ದು ಇನ್ನೊಂದು ಮುಖ್ಯ  ಅಂಶ. ತನ್ನ ವ್ಯಾಕರಣವು ಸಮಗ್ರವಾದ ಪ್ರಮಾಣಭೂತವಾದ ಆಳವಾದಅಧ್ಯಯನಕ್ಕೆ ಪರಾಮರ್ಶನ ಯೋಗ್ಯವಾದ ಒಂದು ಕೃತಿಯಾಗಬೇಕೆಂಬ ಉದ್ದೇಶವಾಗಲೀ ಹಂಬಲವಾಗಲೀ ವುರ್ತನದಲ್ಲ. ಇವನ ಸಂಕ್ಷಿಪ್ತಗೊಳಿಸುವ ವಿಧಾನದಲ್ಲಿಯೇ ಗ್ರಂಥವು ಹೀಗಾಗದಿರುವ ಅಂಶಗಳು ಅಡಗಿವೆ. ಮುಷ್ಟಿಯಲ್ಲಿ ಹಿಡಿಯಬಹುದಾದ, ಹಳಗನ್ನಡ ಕಾವ್ಯಾಭ್ಯಾಸಕ್ಕೆ ಆಡುಗನ್ನಡದಲ್ಲಿ ಮಾರ್ಗದರ್ಶಿಸಬಲ್ಲ ಕೃತಿರಚನೆ ವುರ್ತನಿಗೆ ಪ್ರಸ್ತುತವಾಗಿದ್ದ ವಿಷಯ. ಈ ಉದ್ದೇಶದಲ್ಲಿ ಅವನು ಕೃತಕೃತ್ಯನಾಗಿದ್ದಾನೆ.