Search This Blog

Thursday, 20 January 2022

ಗೆಳೆಯ ಸುರೇಂದ್ರ ಅಡಿಗರಿಗೊಂದು ಪತ್ರ

 

ಪ್ರೀತಿಯ ಸುರೇಂದ್ರ ಅಡಿಗರೇ,

ನೀವು ಆತ್ಮೀಯವಾಗಿ ಕಳುಹಿಸಿದ ಕನ್ನಡದ ಕಟ್ಟಾಳು ಹುಲಿಯಪ್ಪ ಮೇಸ್ಟ್ರು ತಲುಪಿ ಬಹಳ ದಿನಗಳೇ ಆದವು. ನಿಮಗೆ ಉತ್ತರ ಬರಯಲು ತಡಮಾಡಿದೆ. ನಾನು ಭಗವದ್ಗೀತೆಯ ಒಂದು ಕನ್ನಡ ಅನುವಾದವನ್ನು ಸಿದ್ಧಪಡಿಸುತ್ತಿದ್ದೆ. ಅದರಿಂದ ನನ್ನ ಗಮನವನ್ನು ಬೇರೆಡೆ ತಿರುಗಿಸಲು ಮನಸ್ಸಿರಲಿಲ್ಲ. ಈಗ ಅದು ಪೂರ್ಣಗೊಂಡಿದ್ದು ನಿಮಗೂ ಒಂದು ಪ್ರತಿಯನ್ನು ಕಳುಹಿಸಿರುವೆ. ಬಿಡುವಾದಾಗಲೊಮ್ಮೆ ಓದಿ.

ನಿಮ್ಮ ಈ ಕೃತಿ ಶಿಕ್ಷಣವನ್ನು ಮತ್ತು ಅಧ್ಯಾಪಕನೊಬ್ಬನ ಬದುಕನ್ನು ಸೆರೆಹಿಡಿಯುವ ಕನ್ನಡದ ಏಕಮಾತ್ರ ಕೃತಿ ಎಂದುಕೊಂಡಿದ್ದೇನೆ. (ರಂಗಣ್ಣನ ಕನಸಿನ ದಿನಗಳು ಮತ್ತು ಛಿದ್ರೆ ಶಂಕರಯ್ಯ ಸ್ವಾಮಿ ಅವರು ಬರೆದ ಆತ್ಮ ಚರಿತ್ರಾತ್ಮಕ ಪುಸ್ತಕಗಳನ್ನು ಹೊರತುಪಡಿಸಿದೆ. ನನಗೆ ನೆನಪಿರುವಂತೆ ಇವೆರಡು ಈ ಗಾತ್ರದವಲ್ಲ ಮತ್ತು ಕಾದಂಬರಿಗಳಲ್ಲ). ಬಹು ಹಿಂದೆ ವಿಶ್ವಾಮಿತ್ರರು ಶ್ರೀರಾಮನಿಗೆ ಹೇಗೆ ಕಲಿಸಿದರು ಎಂಬುದನ್ನು ವಸ್ತುವಾಗಿರಿಸಿಕೊಂಡ ಕಾದಂಬರಿಯನ್ನು ಓದಿದ ನೆನಪು. ಆದರೂ ಅದರಲ್ಲಿ ಈ ಆದುನಿಕಯುಗದ ಶಿಕ್ಷಣಕ್ಕೆ ಸಂಬಂಧಿಸಿದ ಯಾವ ಅಂಶಗಳೂ ಬಹುಶಃ ಇರಲಿಲ್ಲ. ಶಿಕ್ಷಣ ಮತ್ತು ಶಿಕ್ಷಕ ಇವರನ್ನೇ ಕೇಂದ್ರವಾಗಿರಿಸಿಕೊಂಡ ಕಾದಂಬರಿಗಳು ಯಾವುದೇ ಭಾಷೆಯಲ್ಲಿ ವಿರಳ. ಬಹು ಹಿಂದೆ ಮೆಕರೆಂಕೊ ಎಂಬ ರಶ್ಯನ್‌ ಶಿಕ್ಷಣ ತಜ್ಙ The Road to Life ಎಂಬ ಪುಸ್ತಕದಲ್ಲಿ ತನ್ನ ಶಿಕ್ಷಣದ ಬಗೆಗಿನ ವಿಚಾರಗಳನ್ನು ಕಥಾ ರೂಪದಲ್ಲಿ ಮುಂದಿಟ್ಟಿದ್ದ. ನಾನು ಮೂಡಿಗೆರೆಯ ಸರಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಅಲ್ಲಿ ಪುಸ್ತಕ ಭಂಡಾರದಿಂದ ಇದರ ಕನ್ನಡ ಅನುವಾದ ಬಾಳ್ವೆಯ ದರ್ಶನ ಓದುವ ಭಾಗ್ಯ ಒದಗಿತ್ತು. ಕಮುನಿಸ್ಟ್‌ ನಾಡಿನಲ್ಲಿದ್ದೂ ಕಮ್ಯುನಿಸಂ-ಅನ್ನು ಒಪ್ಪಿಕೊಂಡೂ ತನ್ನತನವನ್ನು ಬಿಡದ ಇವನ ಛಲ‌ ಮೆಚ್ಚುಗೆಗೆ ಪಾತ್ರ. ಆಗಿನ ಕ್ರಾಂತಿ, ಯುದ್ಧ ಇತ್ಯಾದಿಗಳ ಪರಿಣಾಮವಾಗಿ ಸರಿದಾರಿಯಿಂದ ಆಚೆ ಸರಿದ ಬೀದಿ ರೌಡಿಗಳನ್ನು ಸುಶಿಕ್ಷಿತರನ್ನಾಗಿ ರೂಪಿಸಿದ ಗಾಥೆಯೇ ಬಾಳ್ವೆಯ ದರ್ಶನ. ಅಲ್ಲಿದ್ದಂತಹ ಸರ್ವಾಧಿಕಾರ, ವಿರೋಧವನ್ನು ಸಹಿಸಲಾಗದ ಉಸಿರುಗಟ್ಟಿಸುವ ವಾತಾವರಣ ನಮ್ಮ ದೇಶದಲ್ಲೇನೂ ಇಲ್ಲ. ಆದಾಗ್ಯೂ ಸಮಯ ಕಳೆದಂತೆ (ಏಕೋ ಗೊತ್ತಿಲ್ಲ; ಅಥವ ಇದು ನನ್ನ ಪೂರ್ವಾಗ್ರಹವೂ ಇರಬಹುದು) ಕರ್ತವ್ಯಕ್ಕೆ ಬದ್ದರಾಗದ ಶಿಕ್ಷಕರು ಹೆಚ್ಚುತ್ತಿದ್ದಾರೆ. ಇಂತಹ ಶಿಕ್ಷಕರನ್ನು ಸರಿದಾರಿಗೆ ತರುತ್ತಾ ಉತ್ತಮ ಶಿಕ್ಷಕರನ್ನು ಪ್ರೋತ್ಸಾಹಿಸುತ್ತಾ ಸಾಗಬೇಕಾದ ಮೆಲುಸ್ತುವಾರೀ ಸಂಸ್ಥೆಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅನೈತಿಕತೆ ಗಳಲ್ಲಿ ಮುಳುಗಿದಾಗ ಯಾರದೇ ಅಂತರಾತ್ಮ ಮರುಗದೆ ಇರದು. ನೀವು ಇಂತಹವಕ್ಕೆಲ್ಲ ಕನ್ನಡಿ ಹಿಡಿದಿದ್ದೀರಿ; ಸಮಕಾಲೀನ ಶಿಕ್ಷಣದ ಓರೆಕೋರೆಗಳನ್ನು ಉತ್ತಮವಾಗಿ ದಾಖಲಿಸಿದ್ದೀರಿ. ಜೊತೆಗೆ ಅಧ್ಯಾಪಕ ಸಂಘ, ಕನ್ನಡ ಸಂಘ, ಸಾರ್ವಜನಿಕರ ಸಹಕಾರ ಇತ್ಯಾದಿಗಳ ಉಪಯುಕ್ತತೆ ಅವುಗಳಿಂದೊದಗುವ ಅವ್ಯವಸ್ಥೆ ಇವೂ ಈ ಕೃತಿಯಲ್ಲಿ ಬಿಂಬಿತವಾಗಿವೆ.

ಕಾದಂಬರಿಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳ ಶಿಕ್ಷಣ, ಮಕ್ಕಳ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಸಾಗಾಟ ಜಾಲ ಇಂತಹ ಅಂಶಗಳೂ ಬಂದಿದ್ದು ಸಮಕಾಲೀನ ಶಿಕ್ಷಣದ ಹಲವು ಶಾಖೆಗಳು ದಾಖಲಾಗಿವೆ. "ಪ್ರತಿಯೊಬ್ಬ ಶಿಕ್ಷಕರು ತನ್ನ ಅನುಭವಗಳನ್ನು ಬರೆದಿಡಬೇಕು. ಅದು ಮುಂದಿನವರಿಗೆ ದಾರಿದೀಪವಾಗುತ್ತದೆ"(ಪು ೨೫೩) ಎಂಬ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಯಿತು.  ಪಾಠ ಯೋಜನೆಗಳನ್ನು ನಿಗದಿತ ಮಾದರಿಯಲ್ಲಿಯೇ ಬರೆಯ ಬೇಕು ಎಂದು ಒತ್ತಾಯಿಸುವುದಕ್ಕಿಂತ ದಿನಚರಿ (ಆ ಶಿಕ್ಷಕ ಎಣಿಸಿದಂತೆ) ಬರೆಯುವುದನ್ನು ನಿಯತಗೊಳಿಸುವುದು ಹೆಚ್ಚು ಉಪಯುಕ್ತವಾದೀತು.

ಇದನ್ನು ಒಂದು ಕಾದಂಬರಿ ಎಂದು ನೀವು ಕರೆದಿದ್ದರೂ ಇದರಲ್ಲಿ ನಿಮ್ಮ ಶಾಲಾ ಅನುಭವಗಳು ದಟ್ಟವಾಗಿರುವುದು ನಿಮ್ಮನ್ನು ಬಲ್ಲ ಯಾರಿಗಾದರೂ ತೋರುತ್ತದೆ. ಆದ್ದರಿಂದಲೇ ವಾಸ್ತವಕ್ಕೆ ಒತ್ತು ಜಾಸ್ತಿ; ರೋಚಕತೆಗೆ ಅವಕಾಶವಿಲ್ಲ. ಸಹಜ ನಿರೂಪಣೆ ಜೀವಂತಿಗೆ ತಂದಿದೆ. ಓದುಗರಿಗೆ ಕೂಡಲೇ ಆಪ್ತವಾಗುತ್ತದೆ. ನೀವು ನೀಡಿರುವ ಉಪನಿರ್ದೇಶಕರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೆಲ ವಿವರಗಳಲ್ಲಿ ನನ್ನನ್ನೇ ನಾನು ನೋಡಿಕೊಂಡ ಅನುಭವವಾಯಿತು. ಶಿಕ್ಷಣ ಆಡಳಿತದಲ್ಲಿನ ಅನುಭವಗಳನ್ನು ಹಿನ್ನೋಡುವಂತಾಯಿತು. ಇನ್ನು ಕೆಲ ವಿವರಗಳಲ್ಲಿ ನನ್ನ ಸಹೋದ್ಯೋಗೀ ಮಿತ್ರರ ಪ್ರತಿಬಿಂಬ ಕಾಣಿಸಿತು. ಹೊಸ ಶಾಲೆಗಳ ಪ್ರಾರಂಭದ ಬಗ್ಗೆ ರಾಜಕೀಯ,  ಕನ್ನಡ ಮಾಧ್ಯಮದಲ್ಲಿ ಕಲಿಸಲು ಅನುಮತಿ ಪಡೆದು ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಸ್ಥಾಪಿಸುವ ಸಂಸ್ಥೆಗಳು,ಕನ್ನಡ ಮಾಧ್ಯಮ ಶಾಲೆಗಳಿಗಾಗುವ ನಷ್ಟವನ್ನು ಲೆಕ್ಕಿಸದೆ ಆಂಗ್ಲ ಮಾಧ್ಯ ಮ ಶಾಲೆಗಳನ್ನು ಪ್ರೋತ್ಸಾಹಿಸುವ ಭ್ರಷ್ಟ ವ್ಯವಸ್ಥೆ - ಇಂತಹವೆಲ್ಲ ನಮ್ಮ ಅನುಭವದ ಹರಳುಗಳೇ ಆಗಿವೆ.

ಶಿಕ್ಷಣ ಶಿಕ್ಷಕ ಶಿಕ್ಷಣದಪರಿಣಾಮ ಇಂತಹವುಗಳ ಬಗ್ಗೆ ನಿಮ್ಮ ಕೇಂದ್ರೀಕೃತ ಗಮನವಿದ್ದರೂ ಶಿಕ್ಷಕನ ಸಾಂಸಾರಿಕ ವಿಷಯಗಳನ್ನು ನೀವು ಮರೆತಿಲ್ಲ. ಹುಲಿಯಪ್ಪನ ಮಾವನ ಮನೆ ಅವರ ಸಂಸಾರದಲ್ಲಿ ಒಡಕುದನಿಗಳು ಅವುಗಳನ್ನು ಸರಿಪಡಿಸಲು ಹುಲಿಯಪ್ಪನ ಪ್ರಯತ್ನ ಮತ್ತು ಅದರಲ್ಲಿ ಯಶಸ್ಸು ಇವುಗಳಲ್ಲಿ ಈ ಅಂಶವನ್ನು ಕಾಣಬಹುದು. ಈ ರೀತಿಯ ಬಿರುಕುಗಳಿಗೆ ತಲೆಮಾರಿನ ಚಿಂತನಾ ಭೇದಗಳು ಒಂದು ಕಾರಣವಾಗಿರುವುದನ್ನು ನೀವು ಸರಿಯಾಗಿ ಗುರುತಿಸಿದ್ದೀರಿ. ಪರಿಹರಿಸಿಕೊಳ್ಳಲು ಉಪಾಯಗಳನ್ನೂ ಸೂಚಿಸಿದ್ದೀರಿ. ಸಾಮಾಜಿಕ ಸಾಂಸಾರಿಕ ಸಮಸ್ಯೆಗಳತ್ತಲೂ ಬೆರಳು ಮಾಡಿದ್ದೀರಿ. -ಹಾಗೆಯೇ ಇಂದಿನ ತಾಂತ್ರಿಕೆಯಲ್ಲಿ ಕಳೆದುಹೋಗಿರುವ ಅಂಚೆಯಣ್ಣನ ನೆನಪು ಕೂಡ.

ಸಮಾಜದ ಇತರ ಕ್ಷೇತ್ರಗಳ ಬಗ್ಗೆಯೂ ನೀವು ದೃಷ್ಟಿ ಹರಿಸಿದ್ದೀರಿ. ತಾಲ್ಲೂಕು ಕಚೇರಿ ಅಲ್ಲಿನ ಭ್ರಷ್ಟ ವಿಧಾನಗಳು,  ಅವುಗಳಿಗೆ ಕಾರಣ,  ಸಮರ್ಥ ಆಡಳಿತ ಅವುಗಳನ್ನು ಮೀರಲು ಸಾಧ್ಯವಾಗುದು ಇಂತಹವುಗಳನ್ನು ಚಿತ್ರಿಸಿದ್ದೀರಿ. ಇದೇ ಸಂದರ್ಭದಲ್ಲಿ ಆಡಳಿತದ ಮಾನವಿಯ ಮುಖ ಎಂತಹ ಪವಾಡಗಳನ್ನು ಸಾಧಿಸಬಲ್ಲುದು ಎಂಬುದನ್ನೂ ವಿಶ್ಲೇಷಿಸಿದ್ದೀರಿ. ಭ್ರಷ್ಟ ವಿಧಾನಗಳನ್ನು ಅನುಸರಿಸುವವನು ಮತ್ತಷ್ಟು ಮತ್ತಷ್ಟು ಅದೇ ಜಾಲದಲ್ಲಿ ಸಿಕ್ಕಿಕೊಳ್ಳುವುದನ್ನೂ ತೋರಿಸಿದ್ದೀರಿ. ಪೀತಪತ್ರಿಕೋದ್ಯಮ, ಅದರಿಂದ ಶಿಷ್ಟರಿಗೆ ಆಗುವ ತೊಂದರೆ ಅನ್ಯಾಯ, ಅದರ ವಿರುದ್ಧ ನಿಲ್ಲಬೇಕಾದ ಅಗತ್ಯ ಇಂತಹವೆಲ್ಲ ನಿಮ್ಮ ಈ ಕಾದಂಬರಿಯಲ್ಲಿ  ಸೂಕ್ತವಾಗಿ ಮೂಡಿ ಬಂದಿವೆ. 

ಬರವಣಿಗೆಯ ನಿಮ್ಮ ಶೈಲಿಯಲ್ಲಿ  ವಿಶೇಷವಾಗಿ ಆಪ್ತವಾಗುವ ಗುಣವಿದೆ. ಅಲ್ಲಲ್ಲಿ ನೀವು ಬಳಸುವ ಸಾಮಾನ್ಯ ಹೇಳಿಕೆಗಳೂ ಇದಕ್ಕೆ ಒಂದು ಕಾರಣ. ʼಪಲ್ಲಕ್ಕಿ ಹೊರುವವರು ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುವಂತಾಗಬೇಕುʼ, ʼಒಂದು ನಿಮಿಷದ ಕೋಪ ತರಬಹುದು ಜೀವನವಿಡೀ ಪ್ರಲಾಪʼ - ಇಂತಹವುಗಳನ್ನು ವಿಶೇಷ ಪರಿಣಾಮ ಬೀರುವಂತೆ ನೀವು ಬಳಸಿದ್ದೀರಿ. ಮನೆಯವರನ್ನು ಹೇಗೆ ಆದರಿಸಬೇಕು, ಅತಿಥಿಗಳನ್ನು ಹೇಗೆ ಉಪಚರಿಸಬೇಕು ಎಂಬೆಲ್ಲಕ್ಕೂ ಕೃತಿ ಒಂದು ಕೈಗನ್ನಡಿಯಾಗ ಬಲ್ಲುದು. ಸಹಜವಾಗಿ ಸಮಾಜದಲ್ಲಿರುವ ಹೆಸರು-ಸಂಕ್ಷಿಪ್ತೀಕರಣವನ್ನು ಸ್ವಾರಸ್ಯಾಕರವಾಗಿ ನಿರೂಪಿಸಿರುವುದು ಇನ್ನೊಂದು ಕಾರಣ. ಹೀಗೆ ನರಸಿಂಹಯ್ಯ ʼನರಿʼಯಾಗುತ್ತಾನೆ; ಹುಲಿಯೂರು ಅಯ್ಯಪ್ಪ ʼಹುಲಿಯಪ್ಪʼನಾಗುತ್ತಾನೆ. [ಹಳೆಯ ಕಾಲದ] ಶಿಕ್ಷೆಗಳು, ಅವುಗಳ ಅನಪೇಕ್ಷಣೀಯ ಪರಿಣಾಮಗಳು ಇವುಗಳನ್ನು ಉತ್ತಮ ವಾಗಿ ನಿರೂಪಿಸಿದ್ದೀರಿ. ನಾವೂ ಇಂತಹ ಸನ್ನಿವೇಶವನ್ನು ಹಾದು ಬಂದವರೇ!  ಹೊರೆರಹಿತ ಕಲಿಕೆ, ಗುಣಮಟ್ಟದ ಕಲಿಕೆ, ಕಲಿಕಾ ಸಾಮಗ್ರಿ, ಕಲಿಕಾ ಮೂಲೆ, ಆ ಮೂಲೆಯಲ್ಲಿ ತೆರೆದ ಪುಸ್ತಕಾಲಯ, ತರಗತಿಯನ್ನು ಗುಂಪುಗಾಳನ್ನಾಗಿ ವಿಂಗಡಿಸಿ ಕಲಿಸುವುದು, ನಲಿಕಲಿ ತರಗತಿ, ಶಿಶು ಕೇಂದ್ರಿತ ಶಿಕ್ಷಣ , ನಿರಂತರ ವ್ಯಾಪಕ ಸಮಗ್ರ ಮೌಲ್ಯಮಾಪನ , ಪ್ರತಿಭಾ ಕಾರಂಜಿ ಇತ್ಯಾದಿ ನಮ್ಮ ಯುಗದ ಶಿಕ್ಷಣ ಪರಿಕಲ್ಪನೆಗಳನ್ನು ದಾಖಲಿಸಿದ್ದೀರಿ. ಇಂತಹದಕ್ಕೆಲ್ಲ ನಾವುಗಳು ಸಾಕ್ಷಿಯಾಗಿದ್ದೆವಲ್ಲ ಎಂದು ಆಶ್ಚರ್ಯವಾಗುತ್ತದೆ, ಸಮಾಧಾನವೂ ಆಗುತ್ತದೆ.

ಸುತ್ತೋಲೆ ರಚನಾ ಸಂದರ್ಭವೊಂದರ ಸೃಷ್ಟಿ, ಆ ಸಂದರ್ಭದಲ್ಲಿ ಅಧ್ಯಾಪಕರ ಮತ್ತು ಪರಿವೀಕ್ಷಕರ ಡೈರಿಗಳಿಂದ ಟಿಪ್ಪಣಿಗಳನ್ನು ಓದಿ ಸುತ್ತೋಲೆಯಲ್ಲಿ ಸೇರಿಸುವ ಪರಿ, ಶಾಲೆಗಳ ಹೋಲಿಕೆ ಇಂತಹವೆಲ್ಲ ನಿಮ್ಮ ಕಾದಂಬರೀತಂತ್ರದ ವಿಜಯ ಎನ್ನಬಹುದು. "ಕಾಳೇನಹಳ್ಳಿಯಲ್ಲಿ ಭೌತಿಕ ಕೊರತೆ ಇಲ್ಲ,ಆದರೆ ಮಕ್ಕಳ ಕಲಿಕೆ ಮಿರೀಕ್ಷಿತ ಮಟ್ಟದಲ್ಲಿಲ್ಲ, ಸುಬ್ರಹ್ಮಣ್ಯಪುರದಲ್ಲಿ ಭೌತಿಕ ಕೊರತೆ ಇದೆ.ಆದರೆ ಮಕ್ಕಳ ಕಲಿಕೆ ಉತ್ತಮವಾಗಿದೆ" -ಈ ತರಹದ ತುಲನಾತ್ಮಕ ವಿಶ್ಲೇಷಣೆ ಅಧ್ಯಾಪನ ಹೇಗೆ ಸಾಗಬೇಕೆಂಬುದಕ್ಕೆ ಮಾರ್ಗದರ್ಶಕ ಸೂತ್ರ. ಇದು ಅಭಿಮಾನಿಗಳು, ಶಿಷ್ಯರು ಮತ್ತು ಆಸಕ್ತರು ಹುಲಿಯಪ್ಪ ಮೇಸ್ಟ್ರ ಪಾತ್ರವನ್ನು ಬಿಚ್ಚಿಡುತ್ತಾ ಸಾಗುವಂತೆ ಮಾಡಿರುವ ತಂತ್ರಕ್ಕೆ ಚೆನ್ನಾಗಿ ಹೊಂದುತ್ತದೆ. ಒಂದು ಶಿಕ್ಷಕರ ಸಭೆ ಹೇಗಿರಬೇಕೆಂಬುದನ್ನು ಹಾಲಹಳ್ಳಿ ಶಾಲೆಯಲ್ಲಿ ನಡೆದ ಅಧ್ಯಾಪಕರ ಸಭೆಯ ನೆಪದಲ್ಲಿ ಸ್ಪಷ್ಟವಾಗಿ ವರ್ಣಿಸಿದ್ದೀರಿ.

ನಿಮ್ಮಕಾದಂಬರಿ ಹಲವು ಪ್ರಸ್ತುತ ಹಾಗೂ ಹಲವು ಕಳಚಿಹೋಗುತ್ತಿರುವ ಅನುಭವಗಳ ಕಣಜ. ಮಕ್ಕಳು ಶಾಲೆಗೆ ಬರುವ ಹಾದಿ, ಅದನ್ನು ಖುಷಿಪಡುತ್ತಾ ನಡೆಯುವ ಪರಿ, ದೀಪಾವಳಿಯಲ್ಲಿ ಗದ್ದೆಗಳಿಗೆ ಮತ್ತು ಗೊಬ್ಬರಗುಂಡಿಗೆ ದೀಪವಿಡುವ ಸಂಪ್ರದಾಯ - ಇಂತಹವೆಲ್ಲ ಬಹುಶಃ ನಾವು ಕಳೆದುಕೊಳ್ಳುತ್ತಿರುವ ಮುದಕೊಡುವ ಅಂಶಗಳು. "ಎರಡು ಬಯಲು, ಒಂದು ಗುಡ್ಡೆ, ಒಂದು ಸಣ್ಣ ಹಾಡಿ ಎರಡು ತೋಡು ಇಷ್ಟನ್ನು ದಾಟಿ ನಮ್ಮ ಮನೆಗೆ ಹೋಗಬೇಕು", "ಗ್ರಾಮೀಣ ಪ್ರದೇಶದ ಈ ಹಣ್ಣಿನ ಸವಿಯನ್ನು ಸವಿದವನೇ ಬಲ್ಲ" - ಇಂತಹವು ಆಪ್ತವಾಗುವುದರ ಜೊತೆಗೆ ಓದುಗನನ್ನು ಏನೋ ಕಳೆದುಕೊಂಡಂತೆ ಉತ್ಕಂಠನನ್ನಾಗಿಸುತ್ತದೆ. ಹುಲಿಯಪ್ಪ ಮೇಸ್ಟ್ರು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಪ್ರೋತ್ಸಾಹಿಸಲು ಪ್ರಯತ್ನಿಸುವುದು, ಕನ್ನಡ ಸಂಘಗಳನ್ನು ಸ್ಥಾಪಿಸಿ ಬೆಳೆಸುವುಸುವುದು, ಕನ್ನಡ ಭಾಷಣ ಹಾಡು ಇತ್ಯಾದಿ ಗಳನ್ನು ನಡೆಸುವುದು ಇತ್ಯಾದಿಗಳಿಂದಾಗಿ ಕನ್ನಡದ ಕಟ್ಟಾಳು ಎಂಬ ಬಿರುದು ಅವರಿಗೆ ಸಾರ್ಥಕವಾಗುತ್ತದೆ. ತಿರುವಾಳ್ಳಿಟ್ರಸ್ಟಿಗೆ ಅಭಿನಂದನೆಗಳು!

ಸೀಗೆಹಳ್ಳಿ ಇಂದಿರಾ ಟೀಚರ್‌ ಪ್ರಶಸ್ತಿಯ ಸಂದರ್ಭದಲ್ಲಿ ನಮ್ಮ ಕ್ಷೇತ್ರದಲ್ಲಿ ನಡೆಯುವ ಸಣ್ಣ ರಾಜಕೀಯಗಳ ಬಗ್ಗೆ ಚೆನ್ನಾದ ವಿಶ್ಲೇಷಣೆ ನಡೆಸಿದ್ದೀರಿ. ಶಿಕ್ಷಕರ ಮಟ್ಟದಲ್ಲಲ್ಲ ಬಿ ಇ ಒಗಳಿಗೆ ಪ್ರಶಸ್ತಿ ಬಂದಾಗ ನಡೆಯುವ ಬಗೆಯ ಬಗ್ಗೆ ನನ್ನ ಅನುಭವವೊಂದನ್ನು, ನೀವು ಆತ್ಮೀಯರಾದ್ದರಿಂದ, ನಿಮಗೆ ಹೇಳಬೇಕೆನಿಸುತ್ತಿದೆ. ನಾನು ಬ್ರಹಮಾವರ ಬಿ ಇ ಒ ಇದ್ದಾಗ ರಾಜನ್‌ ಅವರು ನಮ್ಮ ಡಿ ಡಿ ಪಿ ಐ ಆಗಿದ್ದರು. ಅವರು ಉಡುಪಿ ಜಿಲ್ಲೆಯಿಂದ ಬಿ ಇ ಒಗಳ ರಾಜ್ಯ ಪ್ರಶಸ್ತಿಗೆ ನನ್ನ ಹೆಸರನ್ನು ಕಳುಹಿಸಿದ್ದರು. ಅನಂತರ ನಾನು ವರ್ಗವಾಗಿ ಮಂಗಳೂರು ಟಯಟ್ಟಿನಲ್ಲಿ ಹಿರಿಯ ಉಪನ್ಯಾಸಕನಾಗಿದ್ದೆ. ನನ್ನ ಹಿಂದಿನ ಕೆಲಸಕ್ಕಾಗಿ ನನಗೆ ಪ್ರಶಸ್ತಿ ಬಂದಿತ್ತು. ನನಗೆ ಪ್ರಶಸ್ತಿ ಬಂದ ವಿಷಯವನ್ನು ಪ್ರಾಂಶುಪಾಲತಿಗೆ ದೂರವಾಣಿ ಮುಖಾಂತರ ತಿಳಿಸಿ ನನಗೆ ನಿರ್ದಿಷ್ಟ ದಿನಾಂಕದಂದು ಬೆಂಗಳೂರಿಗೆ ಬರುವಂತೆ ತಿಳಿಸಲಾಗಿತ್ತು. ಅವರು ಹಾಗೆ ಮಾಡಲಿಲ್ಲ. ಟಿ ಬಿ ಎಫ್ನಿಂದ ಸಮಾರಂಭದ ಮಾರನೆಯ ದಿನ ಪತ್ರ ಬಂದಾಗಲೇ ವಿಷಯ ತಿಳಿದದ್ದು. ಪತ್ರಿಕೆಗಳಲ್ಲೆಲ್ಲ ನಾನು ಮತ್ತು ಫಿಲೋಮಿನಾ ಅವರ ಹೆಸರು ಅತ್ಯುತ್ತಮ ಬಿ ಇ ಒ ಪ್ರಶಸ್ತಿ ಪಡೆದವರೆಂದು ಫೋಟೋದೊಂದಗೆ ಪ್ರಚಾರವಾಗಿ ಹೋಯಿತು. ಆದರೆ ಪ್ರಶಸ್ತಿ ಮಾತ್ರ ನನಗೆ ಸಿಗಲೇ ಇಲ್ಲ. ನಾನು ಟಿ ಬಿ ಎಫ್‌ ಜಂಟೀ ನಿರ್ದೇಶಕನಿದ್ದಾಗ ತೆಗೆದುಕೊಂಡು ಬಿಡಬಹುದಿತ್ತು. ಮನಸ್ಸಾಗಲಿಲ್ಲ.ಹೇಸಿಗೆಯಾಯಿತು.

ನಿಮ್ಮ ಶೈಲಿಯ ಒಂದೆರಡು ಕೊರತೆಗಳನ್ನು ಹೇಳ ಬೇಕೆನಿಸುತ್ತದೆ, ಹೆಚ್ಚು ಮಾತು, ಕೆಲವೆಡೆ ಪುನರಾವರ್ತನೆ, ಅಕ್ಷರಿಕೆಯನ್ನು ಏಕಪ್ರಕಾರವಾಗಿ ಸಮನಾಗಿ ಬಳಸದಿರುವುದು ಕಂಡು ಬರುತ್ತದೆ.  ಸಭೆ ಸಮಾರಂಭಗಳು ನಡೆದಾಗ ಸ್ವಾಗತ ವಂದನಾರ್ಪಣೆಗಳ ವಿವರಗಳು - ಇಂತಹವು ಅನಾವಶ್ಯಕವಾಗಿ ಗಾತ್ರ ಹೆಚ್ಚಿಸಿವೆ ಎನಿಸಿತು. ಹುಲಿಯಪ್ಪರ ವೈಭವೀಕರಣ, ಶಿಷ್ಯರ ಸಾಷ್ಟಾಂಗ ನಮಸ್ಕಾರ ಇತ್ಯಾದಿ ಸಹಜತನವನ್ನು ಮೀರಿವೆ ಎನಿಸುತ್ತದೆ. ೫೦೦ ಮತ್ತು ೫೦೧ ಪುಟಗಳ ನಡುವೆ ೪೮೧ ರಿಂದ ೪೮೪ ಪುಟಗಳು ಅಚ್ಚಾಗಿರುವುದು ಸ್ವಲ್ಪಗೊಂದಲವನ್ನು ಸೃಷ್ಟಿಸುತ್ತದೆ.

  ಒಟ್ಟಿನಲ್ಲಿ ನಿಮ್ಮ ಕಾದಂಬರಿ ಕಾದಂಬರಿ ಹೌದು. ನಮ್ಮ ಕಾಲದ ಶೈಕ್ಷಣಿಕ ಯೋಜನೆ, ಕಾರ್ಯಕ್ರಮಗಳು ಮತ್ತು ಆಚರಣೆಗಳ ಒಂದು ಸಮಗ್ರ ದಾಖಲೆಯೂ ಹೌದು. ನಮ್ಮ ಕಾಲದ ಸಾಮಾಜಿಕ ಮತ್ತು ವನ್ಯ ಪರಿಸರಗಳನ್ನು ಚಿತ್ರಿಸುವ ಪುಸ್ತಕವೂ ಹೌದು. ಅಭಿನಂದನೆಗಳು.


No comments:

Post a Comment