Search This Blog

Wednesday, 22 June 2016

ಸುರೇಶ ಕುಲಕರ್ಣಿ ಎಂಬ ಸಜ್ಜನ ಮತ್ತು ಅವರ ಚೈತನ್ಯದ ಕಣಜ




         ಸುರೇಶ ಕುಲಕರ್ಣಿ ಎಂಬ ಸಜ್ಜನ ಮತ್ತು ಅವರ ಚೈತನ್ಯದ ಕಣಜ


                       ಸುರೇಶ ಕುಲಕರ್ಣಿ ಒಬ್ಬ ಕಲಾವಿದ. ಅವರ ಅಭಿಮಾನಿಗಳ ದೃಷ್ಟಿಯಲ್ಲಿ ಅವರು ಅಧ್ಯಾಪಕ ವೃತ್ತಿಗೆ ಬರದೇ ಇದ್ದಿದ್ದರೆ ಎಮ್ ಎಫ್ ಹುಸೇನರ ಸಾಲಿನಲ್ಲಿರುತ್ತಿದ್ದರು. ವೃತ್ತಿಯಿಂದ ಧಾರವಾಡದ ಕರ್ನಾಟಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಬೇಂದ್ರೆಯವರ ಒಡನಾಡಿ. ಅವರ ಬಗ್ಗೆ ತುಂಬ ಅಭಿಮಾನದಿಂದ ಮಾತನಾಡುತ್ತಾರೆ. ನಮ್ಮ. ಇಲಾಖೆಯ ಪಠ್ಯ ಪುಸ್ತಕಗಳಿಗೆ ಚಿತ್ರ ಬರೆದಿದ್ದಾರೆ. ಅಧ್ಯಾಪಕ ತರಬೇತಿಗಳಲ್ಲಿ ಸಂಪನ್ಮೂಲವ್ಯಕ್ತಿ. ಮನೆಗೆ ಹೋದರೆ ಒಳ್ಳೆಯ ಆತಿಥ್ಯ. ಮನಸೋಲುವ ಮಾತು. ಇವರು ನಮ್ಮ ಗುರುರಾಜರ ಗುರು.
                 ನಾನು ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿದ್ದಾಗ ಸುರೇಶಕುಲಕರ್ಣಿಯವರು ನಮ್ಮ ಕಾಲೇಜಿಗೆ ಬಂದಿದ್ದರು. ಕರಿಹಲಗೆಯ ಮೇಲೆ ಒಂದೆರಡು ಗೆರೆ ಹಾಕಿ ಇದು ಯಾವ ಚಿತ್ರದ ಭಾಗವಿರಬಹುದೆಂದು ಕೇಳಿದರು. ಹಲವು ಅಭಿಪ್ರಾಯಗಳು ಬಂದವು. ಅನಂತರ ಅದನ್ನು ಅವರು ಪೂರ್ಣಚಿತ್ರವಾಗಿಸಿದಾಗ ಕುದುರೆಯ ಬಾಲವಾಯಿತು. ವಿದ್ಯಾರ್ಥಿಗಳ ಜೊತೆ ನಾವೂ ಮಂತ್ರಮುಗ್ಧರಾದೆವು. ಈಚೆಗೆ ಧಾರವಾಡದಲ್ಲಿ ಅವರ ಮನೆಗೆ ಹೋದಾಗ ೀಚೆಗೆ ಅವರು ಪ್ರಕಟಿಸಿರುವ ೊಂದು ಪುಸ್ತಕವನ್ನು ಕೊಟ್ಟರು. ಅದರ ಪರಿಚಯವನ್ನು ಇಲ್ಲಿ ಕೊಡಲೇ? ಇದೋ:
                   ಶಿಕ್ಷಣದ ಬಗ್ಗೆ ಆಸಕ್ತರಾಗದವರು ಸಮಾಜದಲ್ಲಿಲ್ಲ. ಕೆಲವರು ತಮಗಾಗಿ ತಮ್ಮ ಮಕ್ಕಳಿಗಾಗಿ ಶಿಕ್ಷಣದ ಬಗ್ಗೆ ಆಲೋಚಿಸುವವರಾದರೆ ಬೇರೆ ಕೆಲವರು ಸಮಾಜಕ್ಕಾಗಿ ದೇಶದ ಮಕ್ಕಳಿಗಾಗಿ ಶಿಕ್ಷಣ ಹೇಗಿರಬೇಕೆಂಬ ಬಗ್ಗೆ ಚಿಂತಿಸುವವರು. ಆದರೆ ತಮ್ಮ ಪ್ರತಿಯೊಂದು ಚಟುವಟಿಕೆಯನ್ನು ಶಿಕ್ಷಣಕೇಂದ್ರಿತವಾಗಿಸುವವರು ಬೆರಳೆಣಿಕೆಯಷ್ಟೆ. ಅಂತಹ ಅಪುರೂಪದ ವ್ಯಕ್ತಿಗಳಲ್ಲಿ ಧಾರವಾಡದ ಸುರೇಶ ವೆಂಕಟೇಶ ಕುಲಕರ್ಣಿಯವರು ಒಬ್ಬರು. ಕಲಾವಿದರೂ ಆಗಿರುವ ಇವರು ಈಚೆಗೆ ಚೈತನ್ಯ ಕಣಜ ಎಂಬ ಒಂದು ಹೊತ್ತಗೆಯನ್ನು ಹೊರತಂದಿದ್ದಾರೆ. ಅವರ ಅಭಿಮಾನಿಗಳ ಪ್ರಕಾರ ಕುಲಕರ್ಣಿಯವರು ಮಾಸ್ತರರಾಗದಿದ್ದರೆ ಎಮ್ ಎಫ್ ಹುಸೇನರ ಸಾಲಿನಲ್ಲಿ ನಿಲ್ಲುವ ಚಿತ್ರಕಲಾವಿದರಾಗುತ್ತಿದ್ದರು; ಆದರೆ ಶಿಕ್ಷಣಕ್ಷೇತ್ರಕ್ಕೆ ಅಷ್ಟರಮಟ್ಟಿಗೆ ನಷ್ಟವಾಗುತ್ತಿತ್ತು. ಇಂತಹ ಪುಸ್ತಕವೊಂದು ಕನ್ನಡದಲ್ಲಿ ಬರುತ್ತಿರಲಿಲ್ಲ. ಇದರಲ್ಲಿರುವ ಪುಟಗಳ ಸಂಖ್ಯೆ152. ಆ ಪುಟಗಳಲ್ಲಿ ಬಿಡಿಲೇಖನಗಳ ಸಂಖ್ಯೆ 62. ಪ್ರಕಾಶಕರು: ಶ್ರೀ ಶ್ರೀಧರ, ಕಾರ್ಯದರ್ಶಿಗಳು, ಸರ್ ಎಮ್ ವಿ ಕಾಲೇಜು, ದಾವಣಗೆರೆ. ಬೆಲೆ  ರೂ.200/-.
ಇಲ್ಲಿರುವ ಲೇಖನಗಳು ಶಿಕ್ಷಣದ ಯಾವುದೇ ಮಗ್ಗುಲಿನ ವಿಶ್ಲೇಷಣೆಯಲ್ಲ. ಶಿಕ್ಷಣದ ಬಗ್ಗೆಯೇ ಬರೆಯ ಬೇಕೆಂಬ ಬಗ್ಗೆ ಆಗ್ರಹದಿಂದ ಬರೆದುವೂ ಅಲ್ಲ. ಇವೆಲ್ಲ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವ ತುರ್ತಿನಿಂದ, ಹೆಸರು ಮಾಡದೆ ಸಮಾಜಕ್ಕಾಗಿ ದುಡಿದವರ ಹೆಸರನ್ನು ಹೇಳಬೇಕೆಂಬ ಕಾಳಜಿಯಿಂದ ಬರೆದವು. ಶ್ರೀಯುತರು ಕರ್ನಾಟಕ ಹೈಸ್ಕೂಲು ಮತ್ತು ಸೋದರ ಸಂಸ್ಥೆಗಳಲ್ಲಿ ಕೈಗೊಂಡ ಅಧ್ಯಾಪನ ವೃತ್ತಿಯ ಅನುಭವಗಳು ಹಲವು. ಹೀಗೆ ಆತ್ಮಾನುಭವ ಅಭಿವ್ಯಕ್ತಿಯಾಗಿರುವುದರಿಂದ ಆತ್ಮ ಚರಿತ್ರೆಯಂತೆ ಎನ್ನಿಸುತ್ತವೆ. ಲೇಖನಗಳೆಲ್ಲ ಶಿಕ್ಷಣಮಯವಾವಾಗಿರುದರಿಂದ ಶಿಕ್ಷಣ ಹೇಗಿದೆ ಹೇಗಿರಬೇಕೆಂಬ ಬಗ್ಗೆ ಚಿಕ್ಕ ಚೊಕ್ಕಟ ವ್ಯಾಖ್ಯಾನವೂ ಆಗಿ ಕಂಗೊಳಿಸುತ್ತವೆ.
ಶಾಲಾ ಮೂಲ ಸೌಲಭ್ಯಗಳು, ಶಿಕ್ಷಣದಲ್ಲಿ ಸಮಾನತೆ ಇತ್ಯಾದಿ ಸಾಮಾಜಿಕ ಆಯಾಮಗಳ ಬಗ್ಗೆ ಇಂದು ಚರ್ಚೆ ಸಾಮಾನ್ಯ. ತರಗತಿ ನಿರ್ವಹಣೆ, ಶೈಕ್ಷಣಿಕ ಪ್ರವಾಸ, ಶೈಕ್ಷಣಿಕ ಶಿಬಿರ ಇತ್ಯಾದಿಗಳು ಗುಣಮಟ್ಟ ನಿರ್ಧರಿಸುವ ಮಹತ್ವದ ಅಂಶಗಳಾಗಿದ್ದರೂ ಅವನ್ನು ಕೇಂದ್ರಸ್ಥವಾಗಿಸಿ ನೀಡಿದ ನಿರೂಪಣೆಗಳು ಕಡಿಮೆಯೇ. ಕುಲಕರ್ಣಿಯವರು ಈ ಬಗ್ಗೆ ಆಸಕ್ತಿವಹಿಸಿ ಹಲವು ನಿರೂಪಣೆಗಳನ್ನು ನೀಡಿದ್ದಾರೆ. ಇವೆಲ್ಲ ಲೇಖಕರ ಅನುಭವಮೂಶೆಯಲ್ಲಿ ಬೆಂದು ಹೊರಬಂದವಾದ್ದರಿಂದ ಆತ್ಮೀಯವೂ ಮಾರ್ಗದರ್ಶಕವೂ ಆಗಿ ಪಡಿಮೂಡಿವೆ. ಕಾಗೆ ಪಿಂಡ ಆಗಲಿಲ್ಲ ಎಂಬ ಲೇಖದಲ್ಲಿ ತರಗತಿಯಲ್ಲಿ ರೋಲ್ ಪ್ಲೇಯನ್ನು ಸಹಜವಾಗಿ ನಿರ್ವಹಿಸುವ ಪರಿಯ ಒಂದು ಸ್ಪಷ್ಟ ನಿಖರ ಚಿತ್ರ ಕಾಣ ಸಿಗುತ್ತದೆ.   ಒಂದು ಶೈಕ್ಷಣಿಕ ಶಿಬಿರ ಹೇಗಿರಬೇಕೆಂಬುದನ್ನು ಕಲಕೇರಿಯಲ್ಲಿ ಚೈತನ್ಯಮಂದಿರದ ಶಿಬಿರ ಇದರಲ್ಲಿ, ಒಂದು ಪಿಕ್ನಿಕ್ಕಿನ ಪ್ರಾಮುಖ್ಯ ಮತ್ತು ನಿರ್ವಹಣಾ ಕೌಶಲಗಳನ್ನು ಹೊಲ್ತಿಕೋಟೆಗೆ ಸೈಕಲ್ ಪ್ರವಾಸ ಎಂಬ ಲೇಖದಲ್ಲಿ, ಒಂದು ಪ್ರಾಜಕ್ಟನ್ನು ವಿದ್ಯಾರ್ಥಿಗಳ ಸಹಜ ಕುತೂಹಲವನ್ನು ದುಡಿಸಿಕೊಂಡು ಪೂರ್ಣಗೊಳಿಸುತ್ತಾ ಕಲಿಕೆಯನ್ನು ಹೇಗೆ ಪರಿಣಾಮಕಾರಿಯಾಗಿಸಬಹುದೆಂಬುದನ್ನು ಪಕ್ಕಾ ಪಾತರಗಿತ್ತಿಯಲ್ಲಿ ಮುಂತಾಗಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಒಂದು ಶಿಬಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ದಿಕ್ಕು ಹೇಗಿರಬೇಕೆಂಬುದು ಓಣಿ ಅಜ್ಜ ಅಕಸ್ಮಾತ್ ಅಜಾರಿ ಬಿದ್ದಾಗ ಎಂಬ ಪ್ರಬಂಧದಲ್ಲಿ ಸುಂದರವಾಗಿ ಮೂಡಿ ಬಂದಿದೆ. ಇನ್ನೊಂದು ಪ್ರಬಂಧದಲ್ಲಿ ಮಕ್ಕಳು ಉತ್ತರ ದಿಕ್ಕನ್ನು ಭೂಗೋಳದ ಪ್ರಕಾರ ಬೇರೆ ಕನ್ನಡದ ಪ್ರಕಾರ ಬೇರೆಯಾಗಿರುವುದನ್ನು ತೋರಿಸುವ ವಿಷಯ ಹಾಸ್ಯಾತ್ಮಕವಾಗಿ ಅಧ್ಯಾಪಕರ ಪಾಠವನ್ನು ಮಕ್ಕಳು ವಿಭಿನ್ನವಾಗಿ ಗ್ರಹಿಸುವ ಪರಿಯನ್ನು ತಿಳಿಸಿಕೊಡುತ್ತದೆ. ಸಮಾಜ ಮತ್ತು ಶಾಲೆ, ಶಾಲೆಯಲ್ಲಿ ಶಿಸ್ತಿನ ಸಮಸ್ಯೆಗಳು ಮತ್ತು ಪರಿಹಾರ ಇಂತಹ ವಿಚಾರಗಳನ್ನೂ ಲೇಖಕರು ವಿವರಿಸಿದ್ದಾರೆ.
ಕುಲಕರ್ಣಿಯವರು ವರಕವಿ ಬೇಂದ್ರೆಯವರೊಡನೆ ಒಡನಾಡಿದವರು, ಅವರಿಂದ ಪ್ರೇರಣೆ ಪಡೆದವರು, ಅವರ ಪ್ರೀತಿ ಗಳಿಸಿದವರು. ಅಂತೆಯೇ ಅವರ ಪ್ರಸ್ತಾವವು ಕೆಲವು ಪ್ರಬಂಧಗಳಲ್ಲಿ ಬಂದಿದೆ. “ಭೂಮಿಯ ಮೇಲೆ ಒಂದು ಸರಳ ರೇಖೆಯನ್ನು ಎಳೆತೀಯೇನು?” ಎಂದು ಬೇಂದ್ರೆಯವರು ಕೇಳಿದ ಪ್ರಶ್ನಗೆ ಪೃಥ್ವಿ ಗೋಲಾಕಾರವಾಗಿರುವುದರಿಂದ ಸಾಧ್ಯವಿಲ್ಲವೆಂದು ಲೇಖಕರು ಉತ್ತರ ಹೇಳಿದರು. ಆಗ ಬೇಂದ್ರೆರಯವರು “ ಮಿಥ್ಯವೇ ನಮಗೆ ಸತ್ಯವಾಗಿ ತೋರ್ತದ| ಮಾನವನ ಮುರುಕಮುರುಕ ಮನಸ್ಸಿನ| ಹರುಕಹರುಕ ಕಣ್ಣಿಗೆ ಕಾಣೋದೆಷ್ಟು? ಸೌಂದರ್ಯ ಅನ್ನೋದು ಕಣ್ಣೀನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು’ – ನಿನಗ ಒಳಗಣ್ಣದ” ಎಂದರು. ಇದರಿಂದ ಲೇಖಕರು ಹೆಮ್ಮೆಪಟ್ಟರು (ಪು, 19). ಇಂತಹ ಹಲವು ಪ್ರಸಂಗಗಳನ್ನು ಹೆಮ್ಮೆಯಿಂದಲೂ ಬೋಧಕವಾಗಿಯೂ ಕುಲಕರ್ಣಿಯವರು ದಾಖಲಿಸಿದ್ದಾರೆ. ಫಕೀರಪ್ಪ ಸ್ವಾಮಿಯವರೊಂದಿಗೆ ಮಕ್ಕಳು ನಡೆಸಿದ ಲವಲವಿಕೆಯ ಸಂವಾದ, ಮಕ್ಕಳೊಂದಿಗೆ ಮಕ್ಕಳಾದ ರಾಮದಾಸ ಕಾಮತರ ಪರಿ, ನಾಗಲೋಟಿಮಠ ಅವರೊಂದಿಗೆ ಮಕ್ಕಳ ವಿಚಾರ ವಿನಿಮಯ, ಶಿಕ್ಷಣ ಮಂತ್ರಿ ಕಾಗೇರಿಯವರ ಶಾಲಾಭೇಟಿ, ಒಂದು ನಾಟಕದ ಅರ್ಧ ಭಾಗವನ್ನು ಒಬ್ಬರು ಇನ್ನರ್ಧವನ್ನು ಇನ್ನೊಬ್ಬರು ಬರೆದ ಕೆ ಎಸ್ ಶರ್ಮ ಮತ್ತು ವಾಮನ ಬೇಂದ್ರೆ, ಮುಂತಾದ ಖ್ಯಾತನಾಮರ ವಿಷಯಗಳೂ ಪ್ರಬಂಧಗಳಲ್ಲಿ ಬಂದಿವೆ. ಹಾಗೆಯೇ ಹೇಳಹೆಸರಿಲ್ಲದ ಆದರೆ ಸಮಾಜಕ್ಕೆ ಮೌಲ್ಯಯುತ ಕೊಡುಗೆಗಳನ್ನು ನೀಡಿದ ಸಾಮಾನ್ಯರ ಚಿತ್ರಗಳೂ ಇಲ್ಲಿ ಹಲವಿವೆ. ಅರಮನೆಯ ಆನೆ ಸತ್ತುದನ್ನುನೆನೆದು “ನನ್ನನ್ನು ಪ್ರೀತಿಯಿಂದ ಪಾಲನೆ ಪೋಷಣೆ ಮಾಡಿದ, ಮಾಲಕನೇ ಸತ್ತ ಮೇಲೆ ನನಗೇನು ಬೆಂಬಲ” ಎಂಬ ಭಾವವನ್ನು ಮಾಹುತ ತಳೆದ ಕಥನ ಓದುಗರ ಹೃದಯವನ್ನು ಕರಗಿಸುತ್ತದೆ (ಪು, 78). ದೇವರು ಕೊಟ್ಟ ಮಗ ಎಂಬ ಮೊದಲ ಪ್ರಬಂಧದಲ್ಲಿ ತಿಪ್ಪೆಯಲ್ಲಿ ಬಿದ್ದಿದ್ದ ಮಗುವೊಂದನ್ನು ಒಬ್ಬ ಹಣ್ಣು ಮಾರುವ ಮುದುಕಿ ಸಾಕಿ ಸಲಹಿ ಕುಲಕರ್ಣಿಯವರ ಶಾಲೆಯಲ್ಲಿ ಶಿಕ್ಷಣ ಕೊಡಿಸಿದ್ದು ಅಂತಹ ಸಂದರ್ಭದಲ್ಲಿ ದೇಣಿಗೆಯ ಕೊಡುಗೆಯನ್ನು ಅವಳು ನಿರಾಕರಿಸಿ ತಾನೇ ಎಲ್ಲ ವೆಚ್ಚವನ್ನು ಭರಿಸಿದ್ದು ನಮ್ಮಲ್ಲಿರುವ ಮಾನವೀಯತೆಯ ಸೆಲೆಗಳನ್ನು ಸರಿಯಾಗಿ ಗುರುತಿಸುತ್ತವೆ.
ಈ ಸಂಕಲನದಲ್ಲಿ ಋಣಾನಬಂಧ ಹ್ಯಾಂಗಿರತೈತಿ ಎಂಬೊಂದು ಲೇಖನವಿದೆ. ಇದನ್ನು ಚಿಕ್ಕ ಚೊಕ್ಕಟ ಸಣ್ಣಕಥೆಯೆಂದೇ ಹೇಳಬೇಕು.ಭೀಮವ್ವ, ಶಕುಂತಲಾ, ಶಕುಂತಲಳ ತಂಗಿ ಇವು ಮೂರು ಈ ಕಥೆಯ ಮುಖ್ಯ ಪಾತ್ರಗಳು. ಭೀಮವ್ವ ಯಾರೋ ಆಗಿ ಶಕುಂತಲಳಿಗೆ ಸಹಾಯ ಮಾಡುವುದು, ತಂಗಿ ರಕ್ತ ಹಂಚಿಕೊಂಡವಳಾಗಿ ಕಡೆಗಾಲದಲ್ಲಿ ಕೂಡ ತನ್ನ ಮನೆ ಸಣ್ಣದು ಅವಳು ಅಲ್ಲಿಯೇ ಇರಲಿ ಎನ್ನುವುದು ಮಾನವೀಯ ಸಂಬಂಧಗಳ ವ್ಯಂಗ್ಯವನ್ನು ಜಾಹೀರು ಮಾಡುತ್ತವೆ. ಕಥೆಯಾಗಬೇಕೆಂದು ಲೇಖಕರು ರಾಗ-ದ್ವೇಷ-ಭಾವಗಳ ರಂಗಾವುದನ್ನೂ ಇಲ್ಲಿ ತುಂಬಿಲ್ಲ. ಒಂದು ವೃತ್ತಾಂತವಾಗಿಯೇ ಇದು ಇದ್ದರೂ ಘಟನಾರಂಭ ಅಂತ್ಯಗಳು ಮನಂಬುಗುವಂತೆ ಮೂಡಿ ಬಂದಿದ್ದು ವ್ಯಕ್ತಿ-ವ್ಯಕ್ತಿ ಸ್ಪಂದನೆಗಳ ಮೂಲಕ ಮಾನವೀಯ ಸಂಬಂಧಗಳು ಚಿತ್ರಿತವಾಗಿವೆ. ಅನಾಮಧೇಯರಾದವರ, ಆರ್ಥಿಕವಾಗಿ ಸಬಲರಲ್ಲದ ನಾಗರೀಕರಲ್ಲಿ ತೆಳುಸ್ರೋತವಾಗಿ ಮೌಲ್ಯಗಳು ಹೇಗೆ ಉಳಿದುಕೊಂಡು ಬರುತ್ತಿವೆ ಎಂಬುದರ ಕುಲಕರ್ಣಿಯವರ ಕಾಣ್ಕೆ ಇಲ್ಲಿದೆ.  ಹೀಗೆ ಈ ಲೇಖ ಈ ಸಂಕಲನದಲ್ಲಿ ವಿಶಿಷ್ಟವಾಗಿದೆ.
ಕುಲಕರ್ಣಿಯವರ ಎರಡನೆಯ ಮಗಳು ಹರ್ಷದಾ ಥೈರಾಯಿಡ್ ಹಾರ್ಮೋನು ವ್ಯತ್ಯಯದಿಂದ ಬುದ್ಧಿಮಾಂದ್ಯಳಾಗಿ ಹುಟ್ಟಿದವಳು. ಅವಳಿಗೆ ಬದುಕಲು, ಬದುಕಿನಲ್ಲಿ ಉತ್ಸಾಹ ತಳೆಯಲು ಶ್ರೀಯುತರು ಕಲಿಸಿದ್ದಾರೆ. ಅವಳ ದಿನಚರಿ ಮತ್ತು ಕಲಾ ಪ್ರೌಢಿಮೆ ಉಪಾಂತ್ಯ ಪ್ರಬಂಧದಲ್ಲಿದೆ. ಎಲ್ಲರಿಗೂ ಶಿಕ್ಷಣ ಕೊಡುವ ಈ ಮಾಸ್ತರರು ತಮ್ಮ ಮಗಳನ್ನು ಅವಗಣಿಸುವರೆ?  ಕೊನೆಯ ಒಂದು ಪುಟದಲ್ಲಿ ಸುರೇಶ ವೆಂಕಟೇಶ ಕುಲಕರ್ಣಿಯವರ ಪರಿಚಯವಿದೆ.
ಹೀಗೆ ಕುಲಕರ್ಣಿಯವರ ಚೈತನ್ಯದ ಕಣಜ ಈ ಪುಸ್ತಕ. ಸ್ವಂತ ಅನುಭವಗಳ ಮೂಲಕ  ಶಿಕ್ಷಣ ಮತ್ತು ಮಾನವೀಯತೆಗಳನ್ನು ಅನಾವರಣಗೊಳಿಸುವ ಪ್ರಬಂಧಗಳು ಅವುಗಳಿಗಾಗಿಯೇ ದುಡಿದವರಿಂದ ಈ ಕೃತಿಯಲ್ಲಿ ಸೃಷ್ಟಿಯಾಗಿ ನಿಂತಿವೆ. ಆದ್ದರಿಂದ ಒಂದು ರೀತಿಯ ಆತ್ಮೀಯತೆಯೂ, ಅಥೆಂಟಿಸಿಟಿಯೂ ಕೃತಿಗೆ ಬಂದಿದೆ. ಸ್ವಾಭಿವ್ಯಕ್ತಿ ಮತ್ತು ಶಿಕ್ಷಣಮಯತೆ ಇವುಗಳಿಂದಾಗಿ ಆತ್ಮಚರಿತ್ರಾತ್ಮಕ ಶಿಕ್ಷಣ ವೃತ್ತಾಂತವೆಂದು ಕೃತಿಯನ್ನು ವರ್ಣಿಸಬಹುದು.

1 comment: