Search This Blog

Wednesday, 3 June 2015

ಮುನ್ನುಡಿಗಳು ಕೇವಲ ಮುನ್ನುಡಿಗಳೇ ಆಗಿರಬೇಕಿಲ್ಲ!!

ನಾನು ಕೆಲವು ದಿನಗಳ ಹಿಂದೆ ಮಾಧವ ಕುಲಕರ್ಣಿಯವರ ನಾನು ಬರೆದ ಮುನ್ನುಡಿಗಳು ಎಂಬ ಪುಸತಕವನ್ನು ಓದಿದೆ. ಈ ಪುಸತಕವನ್ನು ಹೊಸದಿಗಂತದವರು ನನಗೆ ಸಮೀಕ್ಷೆಗೆಂದು ಕಳುಹಿಸಿದ್ದರು. ಓದಿದನಂತರ ಇವು ಬರೀ ಮುನ್ನುಡಿಗಳಲ್ಲ ಆ ಹೆಸರಿನಲ್ಲಿ ಅಡಕಗೊಳಿಸಿದ ಒಂದು ಜಾತಿಯ ವಿಮರ್ಶೆ ಎನ್ನಿಸತು. ಈ ಹಿನ್ನೆಲೆ ಇಟ್ಟುಕೊಂಡೇ ಈ ಪರಿಚಯಾತ್ಮಕ ಲೇಖನ ಬರೆದೆ. ಅದರ ನಕಲು ಇಲ್ಲಿದೆ:
           ಉಪ್ಪಿನ ಕಾಯಿ ಇಲ್ಲದೆ ಊಟವಿಲ್ಲ; ಮುನ್ನುಡಿ ಇಲ್ಲದೆ ಪುಸ್ತಕವಿಲ್ಲ. ಉಪ್ಪಿನಕಾಯಿ ಹೇಗೆ ಊಟದ ರುಚಿಯನ್ನು ಹೆಚ್ಚಿಸುವುದೋ ಹಾಗೆ ಮುನ್ನುಡಿಯೂ ಓದುಗರಿಗೆ ಕೃತಿಯ ಆಸ್ವಾದವನ್ನು ಸುಗಮಗೊಳಿಸುವುದು, ಕೃತಿಯನ್ನು ನೋಡಲು ಮನಸ್ಸನ್ನು ಸಿದ್ಧಪಡಿಸುವುದು ಮತ್ತು ಕೃತಿಯನ್ನು ಆತ್ಮೀಯವಾಗಿಸುವುದು. ಮುನ್ನುಡಿಯು ಕೃತಿಯನ್ನು ಪರಿಚಯಿಸುತ್ತದೆ, ವಿಮರ್ಶಿಸುತ್ತದೆ, ಅದಕ್ಕೊಂದು ಹಿನ್ನೆಲೆ ಕಲ್ಪಿಸುತ್ತದೆ. ಮುನ್ನುಡಿಯನ್ನು ಕೃತಿಕಾರರಿಗೆ ಆತ್ಮೀಯರೂ  ಉನ್ನತ ವ್ಯಕ್ತಿತ್ವವುಳ್ಳವರೂ ಆದ ಹಿರಿಯರು ಬರೆದಿರುತ್ತಾರೆ. ಅನಂತ ಮೂರ್ತಿಯವರು, ಗೋಪಾಲ ಕೃಷ್ಣ ಅಡಿಗರು , ದೇ ಜವರೇಗೌಡರು, ಶಿವರುದ್ರಪ್ಪನವರು ಇಂತಹ ಹಲವು ಹಿರಿಯೆರು ಅನೇಕ ಕೃತಿಗಳಿಗೆ ಮುನ್ನುಡಿ ಬರೆದು ಬರಹಗಾರರನ್ನು ಪ್ರೋತ್ಸಾಹಿಸಿರುತ್ತಾರೆ. ಮತ್ತು ಅನಂತರ ತಮ್ಮ ಮುನ್ನುಡಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಕೂಡ ಪ್ರಕಟಿಸಿರುತ್ತಾರೆ. ಅಂತಹ ವ್ಯಕ್ತಿಗಳ ಸಾಲಿಗೆ ಮಾಧವ ಕುಲಕರ್ಣಿಯವರು ಸೇರುತ್ತಾರೆ. ತಮ್ಮಕೃತಿಗೆ ಅವರು ಕೊಟ್ಟಿರುವ ಹೆಸರು ನಾನು ಬರೆದ ಮುನ್ನುಡಿಗಳು. ಈ ಹೆಸರೇ ಕುಲಕರ್ಣಿಯವರ ಸರಳತೆಯನ್ನೂ ನೇರ ಸ್ವಭಾವವನ್ನೂ ತೋರಿಸುತ್ತದೆ.
          ನಾನು ಬರೆದ ಮುನ್ನುಡಿಗಳು ಕೃತಿಯಲ್ಲಿ ಒಟ್ಟು ಹದಿನೆಂಟು ಮುನ್ನುಡಿಗಳನ್ನು ಸಂಕಲಿಸಲಾಗಿದೆ. ಇಲ್ಲಿರುವ ಮುನ್ನುಡಿಗಳು ಸರಾಸರಿ ಹನ್ನೆರಡು ಪುಟಗಳಷ್ಟು ದೀರ್ಘ. ಆದರೆ ಎಲ್ಲವೂ ಅಷ್ಟೇ ಉದ್ದದವಲ್ಲ. ಅತಿಕಡಿಮೆ ಎಂದರೆ ಅಶೋಕ ಕುಲಕರ್ಣಿಯವರ ಕೃತಿಗೆ ಬರೆದಿರುವ ಐದು ಪುಟಗಳ ಮುನ್ನುಡಿ ಅತಿ ಸಂಕ್ಷಿಪ್ತವಾದುದು. ದಬಾಕು – ಸಮಗ್ರ ನೋಟ ಮತ್ತು ಮೊಗಸಾಲೆಯವರ ಸಮಗ್ರ ಕಾವ್ಯ – ಈ ಗ್ರಂಥಗಳಿಗೆ ಬರೆದಿರುವ ಮುನ್ನುಡಿಗಳು ತಲಾ ಮೂವತ್ತು ಪುಟಗಳಷ್ಟು ದೀರ್ಘ. ಸಂಕ್ಷಿಪ್ತತೆ ಅಥವ ದೀರ್ಘವಾಗಿರುವುದು ಗುಣಮಟ್ಟವನ್ನೇನೂ ತೋರಿಸುವುದಿಲ್ಲ. ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಮುನ್ನುಡಿಗಳಿಂದ ಅಲಂಕೃತವಾದ ಕೃತಿಗಳಲ್ಲಿ ಕಂಡುಬರುವ ವಸ್ತುಗಳು ವೈವಿಧ್ಯಮಯ. ಆರು ಕಥಾಸಂಕಲನಗಳಿಗೆ, ಆರು ಕಾವ್ಯಗಳಿಗೆ ಎರಡು ಕಾದಂಬರಿಗಳು ಮೂರು ಸಮಗ್ರ ಸಾಹಿತ್ಯ ಮತ್ತು ಒಂದು ನಾಟಕ – ಹೀಗೆ ವಿಭಿನ್ನ ಸಾಹಿತ್ಯಕೃತಿಗಳಿಗೆ ಮಾಧವ ಕುಲಕರ್ಣಿಯವರು ಬರೆದ ಮುನ್ನುಡಿಗಳನ್ನು ಇಲ್ಲಿ ಒಟ್ಟಾಗಿಸಲಾಗಿದೆ. ಭೈರಪ್ಪ, ಕಂಬಾರರು, ಮೊಗಸಾಲೆ, ಅಕಬರ ಆಲಿ – ಹೀಗೆ ಕರ್ನಾಟಕದ ಬೇರೆಬೇರೆ ಭಾಗಗಳ ಖ್ಯಾತ ಲೇಖಕರ ಕೃತಿಗಳಿಗೆ ಇವರು ಮುನ್ನುಡಿ ಬರೆದಿರುತ್ತಾರೆ. ಇಂತಹ ಕೃತಿಗಳಿಗೆ ಮುನ್ನುಡಿ ಬರೆಯುವ ಎಂಟೆದೆಯೂ ಸೌಜನ್ಯವೂ ವಿದ್ವತ್ತೂ ಕುಲಕರ್ಣಿಯವರಲ್ಲಿದೆ. ಕೃತಿಕಾರರೊಡನೆ ಆತ್ಮೀಯ ಸಂಬಂಧ, ಅವರ ಕಷ್ಟಾನುಕಷ್ಗಳಿಗೆ ಸಾನುಕಂಪ, ಅವರ ಕೃತಿಗಳ ಬಗ್ಗೆ ಮೆಚ್ಚುಗೆ ಇಂತಹ ಗುಣಗಳು ಮುನ್ನುಡಿಗಳನ್ನು ಹೆಚ್ಚು ಮೌಲಿಕವೂ ಅರ್ಥಪೂರ್ಣವೂ ಆಗಿಸಿವೆ.
          ಇಲ್ಲಿರುವ ಮುನ್ನುಡಿಗಳು ಕೇವಲ ಲೇಖಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾತ್ರ ಬರೆದ ಚೆನ್ನುಡಿಗಳಲ್ಲ. ಕೃತಿಯನ್ನು ಪರಿಚಯಿಸುತ್ತಾ ತಕ್ಕಮಟ್ಟಿಗೆ ಅದನ್ನು ಒರೆಗೆ ಹಚ್ಚುವ ಕುಶಾಗ್ರ ನುಡಿಗಳು. ಆದ್ದರಿಂದ ಇವುಗಳನ್ನು ವಿಮರ್ಶಾತ್ಮಕ ಮುನ್ನುಡಿಗಳು ಎನ್ನಬಹುದು. ಒಂದು ಕೃತಿಯನ್ನು ಅದರಷ್ಟಕ್ಕೇ ಅಲ್ಲ; ಲೇಖಕರ ಎಲ್ಲಕೃತಿಗಳ ಹಿನ್ನೆಲೆಯಲ್ಲಿ ಸಮಗ್ರವಾಗಿ ಸೂಕ್ಷ್ಮವಾಗಿ ನೋಡುವುದು, ಅದರ ಸಾಮಾಜಿಕ ಪ್ರಸ್ತುತತೆಯನ್ನು ಎತ್ತಿ ತೋರುವುದು ಮಾಧವರ ವೈಶಿಷ್ಟ್ಯ. ಅವರು ಆರಿಸಿಕೊಂಡಿರುವ ಪುಸ್ತಕವಿಧಗಳಾದ ಸಮಗ್ರ ಸಾಹಿತ್ಯ, ಕಾವ್ಯ, ಕಥಾಸಂಕಲನ ಇವುಗಳಲ್ಲಿ ಹಾಗೆ ಮಾಡುವುದು ಅನಿವಾರ್ಯವೂ ಉಚಿತವೂ. ಆದರೆ ಭೈರಪ್ಪನವರ ಗೃಹಭಂಗ ಕಾದಂಬರಿಯನ್ನಾಗಲೀ ಕಂಬಾರರ ಶಿವರಾತ್ರಿ ನಾಟಕವನ್ನಾಗಲೀ ವಿಮರ್ಶಿಸುವಾಗ ಕೂಡ ಈ ಪ್ರವೃತ್ತಿಯನ್ನು ತೋರುತ್ತಾರೆ. ಇದು ಮಾಧವ ಕುಲಕರ್ಣಿಯವರ ವಿಮರ್ಶೆಯ ಸಿದ್ಧಾಂತದ ಒಂದು ಹೊಳಹು.
          ಭೈರಪ್ಪನವರ ಗೃಹಭಂಗ ಕಾದಂಬರಿಯನ್ನು ವಿಮರ್ಶಿಸುವಾಗ ಅವರ ಅದುವರೆಗಿನ ಕಾದಂಬರಿಗಳ ಒಂದು ಸಮೀಕ್ಷೆಯನ್ನು ಮಾಡುತ್ತಾರಾದರೂ ಅನೇಕರಂತೆ ಭೈರಪ್ಪನವರು ಭಾರತದ ಪರಂಪರಾಗತ ಮೌಲ್ಯಗಳಿಗೆ ಶರಣಾಗಿ ಬಿಡುತ್ತಾರೆ ಎಂಬಂತೆ ಸರಳೀಕರಿಸುವುದಿಲ್ಲ. ಅದಕ್ಕಿಂತ ಹಿಂದಿನದಾದ ಭೈರಪ್ಪನವರ ಗ್ರಹಣದವರೆಗಿನ ಕಾದಂಬರಿಗಳಲ್ಲಿ ಆಧುನಿಕತೆ ಮತ್ತು ಸನಾತನತೆಗಳ ಸಮಸ್ಯೆಯನ್ನು ಚರ್ಚಿಸಿದ್ದಾರೆಂದು ಪ್ರತಿಪಾದಿಸಿ ಅವರ ಈ ಕೃತಿಗಳಲ್ಲಿ ಸಾತ್ವಿಕತೆಯನ್ನು ಸ್ವೀಕರಿಸುವ ಮತ್ತು ವೈಭವಗೊಳಿಸುವ, ಮತ್ತು ವೈಚಾರಿಕವಾಗಿ ಸಮಸ್ಯೆಯನ್ನು ನೋಡುವ ಪ್ರವೃತ್ತಿ ಇದೆ ಎಂದು ಅಭಿಪ್ರಾಯಿಸುತ್ತಾರೆ.ಗೃಹಭಂಗವು ಒಂದು ವಿಭಿನ್ನ ದೃಷ್ಟಿಕೋನದ್ದಾಗಿದ್ದು ಇದರಲ್ಲಿ ದೈವವಿರೋಧಿಯಾಗಿಯೂ (ಒಬ್ಬ) ಒಳ್ಳೆಯ ಮಾನವನಾಗಬಲ್ಲನೆಂಬುದನ್ನು ಪ್ರಥಮವಾಗಿ ಚಿತ್ರಿಸಿದ್ದಾರೆಂದು ವಿವರಿಸಿದ್ದಾರೆ.ಜೀವನದ ಒಂದು ತುಣುಕನ್ನು ವಾಸ್ತವಿಕ ಮಟ್ಟದಲ್ಲಿ ಚಿತ್ರಿಸಿರುವುದು ಇಲ್ಲಿ ಭೈರಪ್ಪನವರ ವೈಶಿಷ್ಟ್ಯವೆಂದು ಅಭಿಪ್ರಾಯಿಸಿದ್ದಾರೆ. ವಿಮರ್ಶೆಯ ಸಂದರ್ಭದಲ್ಲಿ ಆನುಷಂಗಿಕವಾಗಿ  “ಐತಿಹಾಸಿಕ ವಿಷಯಗಳನ್ನು ವರ್ತಮಾನದ ವಿಪುಲತೆಯೊಡನೆ ವಿವರಿಸುವ ಗಳನಾಥರ ಕಾದಂಬರಿಗಳು ಕನ್ನಡ ಕಾದಂಬರೀ ಲೋಕದ ನಿರೂಪಣಾ ವಿಧಾನಕ್ಕೆ ಭದ್ರವಾದ ತಳಪಾಯವನ್ನು ಹಾಕಿದ”ವು ಎಂದೂ, “ನವ್ಯ ಪಂಥದ ಅನುಭವದ ಹರಹು ತೀರ ಕಡಿಮೆಯಿದ್ದು ಬದ್ಧ ವಿಚಾರಗಳಿಂದಾಗಿ ಸಾಹಿತ್ಯ ಕ್ರಿಯೆಯನ್ನೇ ಬಲಿಕೊಡುತ್ತಿದ್ದಾರೆ” ಎಂದೂ ಪ್ರತಿಪಾದಿಸಿದ್ದಾರೆ. ಇಷ್ಟೇ ಅಲ್ಲ. ಗೃಹಭಂಗದನಂತರ ಬಂದ ಭೈರಪ್ಪನವರ ಗ್ರಹಣವು ರಚನೆಯ ದೃಷ್ಟಿಯಿಂದ ತೀರ ಅಶಕ್ತವಾದ ಕಾದಂಬರಿ ಎನ್ನುತ್ತಾರೆ. ಇಲ್ಲೆಲ್ಲ ಮಾಧವ ಕುಲಕರ್ಣಿಯವರ ವಿದ್ವತ್ತೂ, ನಿಷ್ಠುರ ನಿರ್ಣಯಗಳೂ ಕಾಣುತ್ತವೆ.
          ಕಂಬಾರರ ಶಿವರಾತ್ರಿ ನಾಟಕವನ್ನು ವಿಶ್ಲೇಷಿಸುವಾಗಲೂ ಅವರ ಚಕೋರಿ ಎಂಬ ಕವನ, ಶಿಖರ ಸೂರ್ಯ ಎಂಬ ಕಾದಂಬರಿ ಇವುಗಳ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಈ ಅಧ್ಯಯನ ಶೀಲ ಗುಣವೇ ಕುಲಕರ್ಣಿಯವರ ಪ್ರಬಂಧಗಳಿಗೆ ಮೆರುಗು ಕೊಡುವಂತಹದು.
          ನರಸಿಂಹ ಪರಾಂಜಪೆಯವರ ಕಾವ್ಯಕ್ಕೆ ಬರೆದ ಮುನ್ನುಡಿಯಲ್ಲಿ ಕಾವ್ಯದ ಬಗ್ಗೆ ಕೆಲವು ಮೂಲಭೂತ ತತ್ವಗಳನ್ನು ತಿಳಿಸುತ್ತಾರೆ. “ಅಮೂರ್ತವು ಮೂರ್ತವಾಗುವ ಕಾಲವೇ ಕವಿತೆ ಹುಟ್ಟುವ ಕಾಲ” ಎಂಬ ಕವಿಯ ಅಭಿಪ್ರಾಯವನ್ನು ಒಪ್ಪಿ ಉಲ್ಲೇಖಿಸಿದ್ದಾರೆ.”ನಿಸರ್ಗ ಮತ್ತು ಮನುಷ್ಯನ ಮಧ್ಯೆ ಇರುವ ಸಂಪರ್ಕಸೇತುವೆಯನ್ನು ಪುನರ್ ರಚಿಸಬೇಕೆಂಬುದೇ” ಪರಾಂಜಪೆಯವರ ಕಾವ್ಯದ ವಸ್ತುವಾಗಿದೆ ಎಂದು ಸಾಮಾನ್ಯೀಕರಿಸಿದ್ದಾರೆ. ಒಟ್ಟಿನಲ್ಲಿ ಮಾಧವ ಕುಲಕರ್ಣಿಯವರ ಮುನ್ನುಡಿಯಿಂದ ಪರಾಂಜಪೆಯವರ ಕವನಗಳನ್ನು ಓದಬೇಕೆಂಬ ಪ್ರೇರಣೆಯೊದಗುತ್ತದೆ.
          ಅಶೋಕಕುಲಕರ್ಣಿಯವರ ಕಥೆಗಳಿಗೆ ಬರೆದ ಮುನ್ನುಡಿ ವಿಶಿಷ್ಟವೂ ಮನಮುಟ್ಟುವಂತೆಯೂ ಆಗಿ ಮೂಡಿಬಂದಿದೆ. ಅವರು ಬರೆದ ಏಕಮಾತ್ರ ಕಾದಂಬರಿ ನಿರ್ಗತಿಕರು ಎಂಬ ಕೃತಿಯನ್ನು, ಬಡ್ತಿ ಮತ್ತು ಇತರ ಕಥೆಗಳು ಎಂಬ ಕಥಾಸಂಕಲನವನ್ನು ಇಲ್ಲಿ ಚರ್ಚಿಸಿದ್ದಾರೆ. ಅಶೋಕ ಕುಲಕರ್ಣಿಯವರಿಗೆ ಕತೆ ಬರೆದುಕೊಡುಂತೆ ಕೇಳಿ ಒಂದು ಆಹ್ವಾನ ಬಂದಿಲ್ಲವೆಂಬುದು ಲೇಖಕರಿಗೆ ದುಃಖದ ಸಂಗತಿಯಾಗುತ್ತದೆ. ಹೀಗೆ ಹೃದಯತಂತಿಯನ್ನು ಮಿಡಿಯುತ್ತಾರೆ ಮಾಧವರು. ಬಡ್ತಿ ಎಂಬ ಕಥೆಯಲ್ಲಿ “ಜಾತಿ ವೈಷಮ್ಯ ಮತ್ತು ದೈಹಿಕ ಶಕ್ತಿಯ ಹಿಕಮ್ತ್ತುಗಳು ಮುಗ್ಧತೆಯನ್ನು ಮತ್ತು ನಿಷ್ಠಾವಂತಿಕೆಯನ್ನುಆಧುನಿಕ ಕಾಲದಲ್ಲಿ ಹೇಗೆ ಹೊಸಕಿಹಾಕುತ್ತವೆ” ಎಂಬುದನ್ನು ವಿವರಿಸುವ ಪರಿಯನ್ನು ನಮ್ಮ ಮುಂದಿಡುತ್ತಾರೆ. ಹೀಗೆಯೇ ಇತರ ಕತೆಗಳ ಬಗ್ಗೆಯೂ. ಕೊನೆಯಲ್ಲಿ ಅಶೋಕರ (ದಿವಂಗತರಾದ್ದರಿಂದ) ಅನುಪಸ್ಥಿತಿಯಲ್ಲಿ ಅವರ ಪ್ರೇರಣೆಯಿಂದ ಕನ್ನಡ ಸಾಹಿತ್ಯಕ್ಕೆ ಮತ್ತೊಬ್ಬಅರ್ಥಪೂರ್ಣ ಕಥೆಗಾರ ದಕ್ಕುವಂತಾಗಲಿ ಎಂದು ಹಾರೈಸಿದ್ದಾರೆ.
           ಅಕಬರ ಅಲಿ, ಸಿಪಿಕೆಯವರಂತಹ ಹಿರಿಯರ ಕೃತಿಗಳಿಗೆ ಮುನ್ನುಡಿ ಬರೆಯುವಾಗ ಸೌಜನ್ಯವನ್ನು ಮೆರೆದಿದ್ದಾರೆ. ಕಿರಿಯರ ಮತ್ತು ಸಮಾನವಯಸ್ಕರ ಕೃತಿಗಳಿಗೆ ಬರೆಯುವಾಗ ಪ್ರೋತ್ಸಾಹದ ನುಡಿಗಳನ್ನಾಡುತ್ತಾರೆ. ಎಲ್ಲ ಕೃತಿಗಳನ್ನು ಒರೆಗೆ ಹಚ್ಚುತ್ತಿರುವಾಗಲೂ ವಿನಯವನ್ನೂ ಹೃದಯವಂತಿಕೆಯನ್ನೂ ಮರೆಯುವುದಿಲ್ಲ.
          ಒಟ್ಟಿನಲ್ಲಿ ನಾನು ಬರೆದ ಮುನ್ನುಡಿಗಳು ಒಂದು ವಿಶಿಷ್ಟ ಕೃತಿ. ಇದು ಮೇಲ್ನೋಟಕ್ಕೆ ಮಾಧವ ಕುಲಕರ್ಣಿಯವರು ಬರೆದ ಮುನ್ನುಡಿಗಳ ಸಂಕಲನ. ಆದರೆ ಇದರಲ್ಲಿ ಪ್ರಮುಖ ಸಾಹಿತಿಗಳ ಕೃತಿಗಳಿಗೆ ಸಂಬಂಧಿಸಿ ಉತ್ತಮ ವಿಮರ್ಶಾತ್ಮಕ ಬರಹಗಳಿವೆ. ಹೀಗೆ ಈ ಕೃತಿ ಇಪ್ಪತ್ತನೆಯ ಶತಮಾನದ ಹಲವು ಕೃತಿಕಾರರ ಒಂದು ಸ್ಥೂಲ ಮೌಲ್ಯಮಾಪನ ಎನ್ನಬಹುದು. ಎಲೆಯ ಮರೆಯ ಕಾಯಿಯಂತಿದ್ದುಕೊಂಡು ಮಾಧವ ಕುಲಕರ್ಣಿಯವರು ಹಲವು ಉತ್ತಮ ಕೃತಿಗಳನ್ನು ನೀಡಿದ್ದಾರೆ. ನಾನು ಬರೆದ ಮುನ್ನುಡಿಗಳು ಇವರ ಕೃತಿಶ್ರೇಣಿಗೆ ಒಂದು ಮೌಲಿಕ ಸೇರ್ಪಡೆ. ಈ ಕೃತಿಯನ್ನು ಓದಿದ ಮೇಲೆ ಮುನ್ನುಡಿ ಎಂಬುದೂ ಒಂದು ಸಾಹಿತ್ಯ ಪ್ರಕಾರವೆಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ಪುಸ್ತಕದಲ್ಲಿ ಒಟ್ಟು 230 ಪುಟಗಳಿವೆ.ಪ್ರಕಾಶಕರು ಜಾಗೃತಿ ಪ್ರಿಂಟೆರ್ಸ್, ಕೊಟ್ಟಿಗೆ ಪಾಳ್ಯ, ಮಾಗಡಿ ರಸ್ತೆ, ಬೆಂಗಳೂರು ಇವರು. ಪುಸ್ತಕದ ಬೆಲೆ 200/-ರೂಗಳಿದ್ದು ಕೈಗೆಟುಕದಷ್ಟಿಲ್ಲ. ಪುಸ್ತಕಕ್ಕೆ ಮತ್ತು ಲೇಖಕರಿಗೆ ಎಲ್ಲ ಶುಭ ಹಾರೈಕೆಗಳು.

1 comment: