Search This Blog

Sunday, 24 May 2015

ರಾಘವೇಂದ್ರತೀರ್ಥರ ಕೃಷ್ಣಚಾರಿತ್ರ ಮಂಜರಿ

ರಾಘವೇಂದ್ರತೀರ್ಥರ ಕೃಷ್ಣಚಾರಿತ್ರ ಮಂಜರಿ
                                                                 
ರಾಘವೇಂದ್ರಸ್ವಾಮಿಗಳನ್ನು ಸಂಕಟ ಬಂದಾಗ ನೆನೆಯದವರಾರು? “ಇಂದು ಎನಗೆ ಗೋವಿಂದ”  ಎಂಬ ರಾಯರ ಹಾಡನ್ನು ಹಾಡದವರಾರು? ತಿಮ್ಮಣ್ಣ ಭಟ್ಟ ಗೋಪಿಕಾಂಬ ದಂಪತಿಯ ಮಗನಾಗಿ ಹುಟ್ಟಿದ ರಾಘವೇಂದ್ರಸ್ವಾಮಿಗಳ ಮೊದಲ ಹೆಸರು ವೆಂಕಣ್ಣ ಭಟ್ಟ ಅಥವ ವೆಂಕಟನಾಥ ಅಥವ ವೆಂಕಟರಮಣ. ಶ್ರೀ ಸುಧೀಂದ್ರ ತೀರ್ಥರಿಂದ ಸಂನ್ಯಾಸ ಸ್ವೀಕರಿಸಿದ ಮೇಲೆ ಇವರ ಹೆಸರು ಶ್ರೀ ರಾಘವೇಂದ್ರ ತೀರ್ಥರು. 1595 ರಿಂದ 1671ರವರೆಗೆ ಮಧ್ವಸಿದ್ಧಾಂತವನ್ನು ಕೃಷ್ಣಭಕ್ತಿಯನ್ನೂ ಪ್ರಸಾರ ಮಾಡಿ ಮಂತ್ರಾಲಯದಲ್ಲಿ ನೆಲೆನಿಂತ ಈ ಯತಿವರ್ಯ ತನ್ನ ಪವಾಡಗಳಿಂದಲೇ ಜನಜನಿತ. ಗುರುಗಳು, ರಾಯರಗುರುಗಳು, ರಾಘವೇಂದ್ರಗುರುಗಳು, ರಾಯರು ಇತ್ಯಾದಿಯಾಗಿ ಭಕ್ತರಿಂದ ಕರೆಸಿಕೊಂಡು ದೇವರಂತೆಯೇ ಪೂಜೆಗೊಳ್ಳುವ ಕೆಲವೇ ಯತಿಗಳಲ್ಲಿ ಇವರೊಬ್ಬರು. ಪವಾಡಗಳೇ ಈ ಮಹನೀಯರ ಮೌಲ್ಯ ನಿರ್ಧಾರಕಗಳಲ್ಲ. ವಿದ್ಯಯಾ ಅಮೃತಮಶ್ನುತೇ ಎಂಬಂತೆ ಇವರು ರಚಿಸಿದ ವಿದ್ವತ್ಕೃತಿಗಳಿಂದ ಇಂದಿಗೂ ನಮ್ಮ ನಡುವೆ ಇದ್ದಾರೆ ಮತ್ತು ಜ್ಙಾನದಾಹಿಗಳನ್ನು ಸ್ಫೂರ್ತಿಗೊಳಿಸುತ್ತಿದ್ದಾರೆ.
          “ಇಂದು ಎನಗೆ ಗೋವಿಂದ” ಎಂಬ ಹಾಡೊಂದನ್ನು ಬಿಟ್ಟು ಇವರು ರಚಿಸಿದ ಇತರ ಕೃತಿಗಳು ಸಂಸ್ಕೃತದಲ್ಲಿವೆ. ಕೃತಿಗಳ ಸಂಖ್ಯೆ ಸುಮಾರು ಐವತ್ತು. ರಾಘವೇಂದ್ರತೀರ್ಥರ ಎಲ್ಲ ಕೃತಿಗಳನ್ನು ಪ್ರತಿಪದಾರ್ಥ, ತಾತ್ಪರ್ಯ ಮತ್ತು ಅಲಂಕಾರವಿಶೇಷಗಳೊಡನೆ ಎರಡು ಬೃಹತ್ ಸಂಪುಟಗಳಲ್ಲಿ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದವರು ಪ್ರಕಟಿಸಿದ್ದಾರೆ. ಇವೆರಡೂ ರಾಘವೇಂದ್ರತೀರ್ಥರ ವಿದ್ವತ್ತನ್ನೂ ಕೃಷ್ಣಭಕ್ತಿ ಮತ್ತು ಮಧ್ವಸಿದ್ಧಾಂತವನ್ನು ಪ್ರಚುರಪಡಿಸುವ ಕಾಳಜಿಯನ್ನೂ ತೋರಿಸುತ್ತವೆ. ಪ್ರತಿಪದ್ಯದ ಕೊನೆಯಲ್ಲಿ ‘ಅಂತಹ ಕೃಷ್ಣನು ನಮ್ಮನ್ನು ರಕ್ಷಿಸಲಿ ಎಂಬರ್ಥದ ಪದಪುಂಜಗಳಿದ್ದು ಕೃಷ್ಣನನ್ನು ಸ್ತುತಿಸುತ್ತವೆ. ಈ ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಹಲವು ವಿದ್ವಾಂಸರ ಪರಶ್ರಮವಿದೆ.
ಇಲ್ಲಿರುವ ಕೃತಿಗಳಲ್ಲಿ  ಕೃಷ್ಣಚಾರಿತ್ರಮಂಜರಿ ಎಂಬುದೊಂದು. ಇದೊಂದು ಸಂಕ್ಷಿಪ್ತ ಸಣ್ಣ ಕೃತಿ. ಇದರಲ್ಲಿ ಕೇವಲ ಇಪ್ಪತ್ತೆಂಟು ಪದ್ಯಗಳಿವೆ. ಎಲ್ಲವೂ ಸ್ರಗ್ಧರಾ ವೃತ್ತಗಳು. ಹೆಸರೇ ಹೇಳುವಂತೆ ಕೃಷ್ಣನ ಕಥೆಗಳನ್ನು ಈ ಕಾವ್ಯದಲ್ಲಿ ಬಿತ್ತರಿಸಲಾಗಿದೆ. ಅವುಗಳನ್ನೆಲ್ಲ ವಿವರವಾಗಿ ರಸಸ್ಯಂದಿಯಾಗಿ ಹೇಳುವ ಉದ್ದೇಶ ಇಲ್ಲಿಲ್ಲ. ಪ್ರತಿಯೊಂದು ಸಾಲು ಕೃಷ್ಣನ ಒಂದು ಕಥೆಯ ಹೊಳಹನ್ನು ನೀಡುತ್ತದೆ. ಪ್ರತಿಯೊಂದು ಸಾಲೂ  ಕೃಷ್ಣನಕಥೆಗಳನ್ನು ಸ್ಮರಿಸಲು ಉಪಯುಕ್ತವಾಗಿವೆ. ಈ ಮೊದಲ  ಪದ್ಯವನ್ನು  ಉದಾಹರಣೆಗಾಗಿ ನೋಡಿ. ಅದನ್ನು ಕನ್ನಡದಲ್ಲಿ ಹೀಗೆ ಅನುವಾದಿಸಬಹುದು. (ಕನ್ನಡಕ್ಕೆ ಸಾಂಗತ್ಯದಲ್ಲಿ ರೂಪಾಂತರ ಈ ಲೇಖಕನದು):
                                      ಕೇಳಲು ವಿಷ್ಣುವು ಬ್ರಹ್ಮಾದಿ ದೇವರು
ಭೂಭಾರ ಇಳಿಸೆಂದು ಸಂಹರಿಸಿ
ಜನಿಸಿದೆ ದೇವಕಿನಂದರಿಗೆ ಮುದವಾಗಿ
ಶಿಶುಗುಲಿ ಪೂತನಿಯ ಕೊಂದೆ               

ದೇವರಿಗೆ ಹೊರಟಿರಲು ರಥಚಕ್ರದಲ್ಲವಿತು
 ಶಕಟನೆಂಬಸುರನ ತುಳಿದೆ
ಭಾರವ ತಾಳದೆ ಇಳೆಗಿಳಿಸೆ ತಾಯಿಯು
ಚಕ್ರಾವರ್ತನ ಹತ್ಯೆಗೈದೆ                     
                                                ಕಾಯೋ ನೀನೆಮ್ಮನ್ನು ಇಂತಿಪ್ಪ ಕೃಷ್ಣಯ್ಯ,
                                                ಅನುದಿನವು ಸ್ಮರಿಪೆವು ನಿನ್ನ
ಕೃತಿರಚನೆಗೆ ಅವತರಣಿಕೆ, ಕೃಷ್ಣನ ಜನನ – ಪೂತನಿಹರಣ, ಶಕಟಾಸುರನ ಸಂಹಾರ ಮತ್ತು ತೃಣಾವರ್ತನೆಂಬ ದೈತ್ಯನ ಹುಟ್ಟಡಗಿಸುವಿಕೆ – ಇವಿಷ್ಟೂ ಮೊದಲ ಪದ್ಯದಲ್ಲಿ ಅಡಕವಾಗಿ ಬಂದಿವೆ. (ಇಲ್ಲಿ ಎರಡು ಸಾಂಗತ್ಯಗಳಲ್ಲಿವೆ). ಭಾಗವತದಲ್ಲಿ ಹಲವು ಶ್ಲೋಕಗಳಷ್ಟು ವಿಸ್ತಾರವಾಗಿರುವ ಕಥಾ ಪ್ರಸಂಗಗಳಿವು. ಇಲ್ಲಿ ನಿರೂಪಿಸಿರುವ ಈ ರೀತಿಯು ಮೂಲ ಕಥೆಗಳು ಗೊತ್ತಿದ್ದಾಗ ಸ್ಮರಿಸಿಕೊಂಡು ಹಾಡಿಕೊಳ್ಳಲು ಉಪಯುಕ್ತವಾದವಾಗಿವೆ. ಆದ್ದರಿಂದಲೇ ಪ್ರತಿ ಪದ್ಯದ ಕೊನೆಯಲ್ಲಿ ಕೃಷ್ಣನಿಗೊಂದು ಪ್ರಾರ್ಥನೆ ಕಡ್ಡಾಯವಾಗಿ ಬಂದಿದೆ.
          ಈ ಕಾವ್ಯದಲ್ಲಿ ಬಂದಿರುವ ವಿಷಯಗಳನ್ನು ಕೃಷ್ಣನ ಬಾಲಲೀಲೆಗಳು, ಯುವಕ ಕೃಷ್ಣನ ಲೀಲೆಗಳು ಮತ್ತು ವಯಸ್ಕ ಕೃಷ್ಣನ ಲೀಲೆಗಳು ಎಂದು ಗುರುತಿಸಬಹುದು. ಈಗಾಗಲೇ ಉದಾಹರಿಸಿದ ಪದ್ಯವೂ ಬಾಲಲೀಲೆಗಳಿಗೊಂದು ನಿದರ್ಶನ. ಹಾಲು ಬೆಣ್ಣೆಗಳನ್ನು ಕದ್ದು ತಿನ್ನುವ, ಬಾಯಿಕಳೆದು ಮೂರು ಲೋಕಗಳನ್ನು ತಾಯಿಗೆ ತೋರುವ ಅವನ ಬಾಲಲೀಲೆಗಳು ಮೂಲದಲ್ಲಿ ಎರಡು ಸಾಲುಗಲಲ್ಲಿ (ಅನುವಾದದಲ್ಲಿ ಒಂದು ಸಾಂಗತ್ಯದಲ್ಲಿ ) ಹೀಗೆ ಮೂಡಿ ಬಂದಿವೆ:
                                                ಗೋಪಿಯರ ಗೃಹದಲ್ಲಿ ಗಡಿಗೆಯಲಿರಿಸಿದ
ಹಾಲ್ಬೆಣ್ಣೆ ಮೆದ್ದೆಯಾ ನಕ್ಕು
ಮಣ್ಣನು ತಿಂದಿಲ್ಲವೆನ್ನುತ ಬಾಯ್ಕಳೆದು
ತೋರಿದೆ ಮೂಜಗವನಲ್ಲಿ 
          ಯುವಕ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು. ಎಲ್ಲರೊಡನೆಯೂ ಏಕಕಾಲದಲ್ಲಿ ಸರಸದಿಂದಿರುವವ ಈ ಕೃಷ್ಣ.  ಈ ಲೀಲೆಯಿಂದಾಗಿ ಹೆಮ್ಮೆಗೊಳಗಾದ ಸತಿಯರ ಗರ್ವಭಂಗ ಮಾಡಿದ ಮತ್ತೆ ಎಲ್ಲರನ್ನು ಸಂತೋಷದಲ್ಲಿರಿಸಿದ ಪರಿಯನ್ನು ಸ್ವಾಮಿಗಳು ತಿಳಿಸಿರುವ ಪರಿಯನ್ನು ನೋಡಿ:
                                      ಗರ್ವಿತರಾಗಲು  ಲಲನೆಯರು ಸಂಗದಿ
ಮರೆಯಾಗಿ ರಮಿಸಿದೆಯೊಬ್ಬಳಲ್ಲಿ
ಕ್ರೀಡಿಸೆ ಎತ್ತಿಕೋ ಭುಜದಲ್ಲಿ ಎನ್ನಲು
ಆಡಿಸಿ ನೆಮ್ಮದಿ ನೀಡಿದೆ                      
                                      ಮತ್ತಲ್ಲಿಂದ ನೀ ಮಾಯವಾಗಲು ಅವರು
ಬಹುವಿಧ ನುತಿಸಲು ಖಿನ್ನರಾಗಿ
ಮತ್ತೊಮ್ಮೆ ಪ್ರಕಟನಾಗೆಲ್ಲರ ಸುಖಿಸುತ
ಗೋಪಿಯರ ಪ್ರೀತಿಯ ಮಾಡಿದೆ             
                                                                   ಕಾಯೋ ನೀನೆಮ್ಮನ್ನು ಇಂತಿಪ್ಪ ಕೃಷ್ಣಯ್ಯ
                                                                   ಅನುದಿನವು ಸ್ಮರಿಪೆವು ನಿನ್ನ
ವಯಸ್ಕ ಕೃಷ್ಣ ಮಾಗಿದ ಮನದವನು. ಪಾಂಡವ ಪಕ್ಷಪಾತಿಯಾಗಿದ್ದರೂ ಧೃತರಾಷ್ಟ್ರನ ಬಗ್ಗೆ ಸಾನುಕಂಪದಿಂದ ವರ್ತಿಸುವವನು. ಆದ್ದರಿಂದಲೇ ಪಾಂಡವರ ದೂತನಾಗಿ ಕೌರವನ ಆಸ್ಥಾನಕ್ಕೆ ಸಂಧಿಗಾಗಿ ಹೋಗುತ್ತಾನೆ. ಅಲ್ಲಿಯ ಆಗುಹೋಗುಗಳನ್ನೂ ತನ್ನ ವಿಶ್ವರೂಪವನ್ನೂ ಕಾಣುವಂತಹ ದಿವ್ಯ ದೃಷ್ಟಿಯನ್ನು ಧೃತರಾಷ್ಟ್ರನಿಗೆ ಕೊಟ್ಟು ಅವನನ್ನು ಕೃತಾರ್ಥನನ್ನಾಗಿ ಮಾಡುತ್ತಾನೆ. ಸಂಧಿ ಮುರಿದು ಬಿದ್ದಾಗ ತಾನೇ ಅರ್ಜುನನ ಸಾರಥ್ಯ ವಹಿಸುತ್ತಾನೆ. ಇವುಗಳನ್ನು ಸೂಚಿಸುವ ಈ ಪದ್ಯವನ್ನು ನೋಡಿ:
                                       ಕೌರವನಾಸ್ಥಾನದೊಳು ದೂತನಾಗಿರಲು
ದಿವ್ಯದೃಷ್ಟಿಯ ನೀಡಿ ಅಯ್ಯಗೆ
ತೋರಿದೆ ಶೋಭಿತ ನಿಜ ರೂಪ ಸಾಸಿರ
ಅರ್ಜುನಗೆ ಬೋಧಿಸಿದೆ ಗೀತೆಯ
ಕೃತಿಯ ಕೊನೆಯು ಕೃಷ್ಣಾವತಾರದ ಕೊನೆಯಲ್ಲ; ಕೃಷ್ಣನ ಮರಣವಲ್ಲ. ಇಷ್ಟೆಲ್ಲ ಲೀಲೆಗಳನ್ನೂ ಸಾಧನೆಗಳನ್ನೂ ತೋರಿಸಿದ ಕೃಷ್ಣನಿಗೆ ಜಯಜಯಕಾರ. ಕೃಷ್ಣನೆಂದಿಗೂ ಜನಮನದಲ್ಲಿ ಜೀವಿತನೇ ತಾನೆ. ಅಲ್ಲದೆ ಗೀತೆಯ ಪ್ರಕಾರ ಕೃಷ್ಣನೂ ಸೇರಿದಂತೆ ನಾವೆಲ್ಲರೂ ಇರಲಿಲ್ಲವೆಂಬ ಇರುವುದಿಲ್ಲವೆಂಬ ಕಾಲವೇ ಇಲ್ಲವಲ್ಲ.
          ಹೀಗೆ ಕೃಷ್ಣನನ್ನು ತಲೆಮಾರುಗಳಿಗೆ ಜೀವಂತವಿಡುವ, ಕೃಷ್ಣನ ನೆನಪು ಸದಾ ಜನರ ನೆನಪಿನಲ್ಲಿರುವಂತೆ ಮಾಡುವ, ಕೃಷ್ಣನ ಕಥೆಗಳನ್ನು ದಿನಂಪ್ರತಿ ಮನನಮಾಡಿಕೊಳ್ಳಲು ಅನುಕೂಲವಾಗುವ ಕೃತಿ ಶ್ರೀ ಕೃಷ್ಣ ಕಥಾಮಂಜರಿ. ಇದೊಂದು ಸಣ್ಣ ಕೃತಿಯಾಗಿದ್ದರೂ ಜನ ಸಾಮಾನ್ಯರಿಗೆ  ಉಪಯುಕ್ತ ಕೃತಿ. ಇಂತಹ ಕೃತಿಗಳ ರಚನೆಯಿಂದಲೇ ರಾಘವೇಂದ್ರ ತೀರ್ಥರ ಹೆಸರು ಅಮರವಾಗಿದೆ.


No comments:

Post a Comment