ಮಾಂಡೂಕ್ಯ ಉಪನಿಷತ್ತು: ದ್ವೈತಾದ್ವೈತ ನಿಲುವುಗಳ ಒಂದು ನೋಟ
ಓಂ ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾ
ಭದ್ರಂ ಪಶ್ಯೇಮಾ ಕ್ಭಿರ್ಯಜತ್ರಾಃ
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿಃ
ವ್ಯಶೇಮ ದೇವಹತಂ ಯದಾಯುಃ
ಸ್ವಸ್ತಿನ ಇಂದ್ರೋ ವೃದ್ಧಶ್ರವಾಃ
ಸ್ವಸ್ತಿನಃ ಪೂಷಾ ವಿಶ್ವದೇವಾಃ
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟ ನೇಮಿಃ
ಸ್ವಸ್ತಿನೋ ಬೃಹಸ್ಪತಿರ್ದಧಾತು
ಓಂ ಶಾಂತಿಃ ಶಾಂತಿಃ ಶಾಂತಿಃ
ಭಾರತೀಯ ಮೀಮಾಂಸಾ ದರ್ಶನದಲ್ಲಿ ದ್ವೈತ ಮತ್ತು ಅದ್ವೈತ ಇವೆರಡು ಬಹಳ ಚರ್ಚೆಗೊಳಗಾಗಿರುವ ದರ್ಶನ ಶಾಖೆಗಳು. ಎರಡರಲ್ಲಿಯೂ ಮಾನವನಲ್ಲಿ ದೈವತ್ವದ ಇರುವಿಕೆ ಮತ್ತು ಅದರ ಸಾಕ್ಷಾತ್ಕಾರ- ಇವು ಪ್ರಧಾನವಾಗಿವೆ. ಎರಡೂ ಸತ್ಯದ ಹುಡುಕಾಟವೇ ಆಗಿದ್ದು, ಈ ನಿಟ್ಟಿನಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇರುವ ಪ್ರಥಮ ಉಪಕರಣವೆಂದರೆ ತರ್ಕ. ಸಾಮಾನ್ಯ ತರ್ಕದಿಂದ ತೆಗೆಯಬಹುದಾದ ನಿರ್ಣಯಗಳು ಎರಡೂ ಶಾಖೆಗಳಿಗೆ ಸಾಮಾನ್ಯಗಳೇ. ಆದ್ದರಿಂದಲೇ ದ್ವೈತದಲ್ಲಿ ಪ್ರಪಂಚ ಸತ್ಯ ಎಂದು ಉದ್ಘೋಷಿಸಿದರೆ ಅದ್ವೈತದಲ್ಲಿ ಅದನ್ನು ವ್ಯಾವಹಾರಿಕ ಸತ್ಯ ಎಂದು ಒಪ್ಪುತ್ತಾರೆ. ಸಾಂಖ್ಯ ದರ್ಶನದಲ್ಲಿ ಪ್ರತಿಪಾದಿಸಿದ ತತ್ವಗಳನ್ನು ಎರಡೂ ಶಾಖೆಗಳಲ್ಲಿ ಒಂದು ಮಿತಿಯವರೆಗೆ ಸ್ವೀಕರಿಸುತ್ತಾರೆ. ನ್ಯಾಯ (ತರ್ಕ) ಶಾಸ್ತ್ರದ ಹಲವು ಪ್ರಮೇಯಗಳನ್ನೂ ಸಾಮಾನ್ಯವಾಗಿ ಸ್ವೀಕರಿಸಲಾಗಿದೆ. (ಪ್ರತ್ಯಕ್ಷ, ಅನುಮಾನ, ಅನುಭವ, ಶ್ರುತಿ (ಪ್ರಸ್ಥಾನತ್ರಯಿ) ಇವುಗಳನ್ನು ಪ್ರಮಾಣಗಳೆಂದು ಎರಡೂ ಶಾಖೆಗಳ ಪ್ರತಿಪಾದಕರು ಒಪ್ಪುತ್ತಾರೆ. ಬ್ರಹ್ಮ ಸತ್ಯತ್ವ, ನಿತ್ಯತ್ವ, ವ್ಯಾಪಕತ್ವ ಇತ್ಯಾದಿ ಆತ್ಯಂತಿಕ ಸತ್ಯಗಳನ್ನು ಪ್ರತಿಪಾದಿಸುವಾಗ ಮಾತ್ರ ಶ್ರುತಿಗಳನ್ನು ಅರ್ಥೈಸುವ ರೀತಿ ಪ್ರಮುಖವಾಗಿ, ಭಿನ್ನವಾಗುತ್ತದೆ). ಉದಾಹರಣೆಗೆ ತರ್ಕದ ನಿತ್ಯಾಃ ಪರಮಾಣುರೂಪಾಃ; ಅನಿತ್ಯಾಃ ಕಾರ್ಯರೂಪಾಃ ಎಂಬ ತತ್ವವನ್ನು ನೋಡಬಹುದು. ಇದಕ್ಕಾಗಿ ದೋಸೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ದೋಸೆ ಅನಿತ್ಯ ಏಕೆಂದರೆ ಅದನ್ನು ನಾವು ಮಾಡಿದ್ದು; ಕಾರ್ಯರೂಪ. ದೋಸೆ ಹಿಟ್ಟು ಮೊದಲು ಇದ್ದದ್ದು ನಿತ್ಯ. ಈಗ ದೋಸೆಯನ್ನು ಬಿಡೋಣ ದೋಸೆಯ ಹಿಟ್ಟನ್ನು ತೆಗೆದುಕೊಳ್ಳೋಣ. ಹಿಟ್ಟು ಅನಿತ್ಯ ಏಕೆಂದರೆ ಅದು ಕಾರ್ಯ ರೂಪ. ಅಕ್ಕಿ ನಿತ್ಯ. ಈಗ ಅಕ್ಕಿಯನ್ನಷ್ಟೇ ತೆಗೆದುಕೊಳ್ಳೋಣ. ಅಕ್ಕಿ ಅನಿತ್ಯ, ಬತ್ತ ನಿತ್ಯ. ಹೀಗೆಯೇ ಬತ್ತ ಅನಿತ್ಯ ಅದರ ಸಸಿ ನಿತ್ಯ. ಮತ್ತು ಬತ್ತದ ಸಸಿ ಅನಿತ್ಯ ಭೂಮಿ ನಿತ್ಯ. ಭೂಮಿ ಬಿಗ್-ಬ್ಯಾಂಗಿನಿಂದ ಉಂಟಾಯಿತೆನ್ನುವುದಾದರೆ ಭೂಮಿ ಅನಿತ್ಯ ಬಿಗ್-ಬ್ಯಾಂಗ್ ಪೂರ್ವದಲ್ಲಿದ್ದ ಮೂಲದ್ರವ್ಯ ನಿತ್ಯ. ಹೀಗೆ.
ಈ ವಿವರಗಳಲ್ಲಿ ದ್ವೈತಾದ್ವೈತ ನಿಲುವುಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಮುಂದುವರೆದಾಗ ಅದ್ವೈತ ಪ್ರತಿಪಾದನೆಯಲ್ಲಿ ಅನಿತ್ಯವಾದುವನ್ನು ಅಸತ್ಯವಾದುವುಗಳೆಂದು ಪರಿಗಣಿಸುತ್ತಾರೆ. ಉದಾಹರಣಾ ರೂಪವಾಗಿ ಮಡಕೆ ಅನಿತ್ಯ - ಅದು ಒಡೆದು ಹೋಗುವುದರಿಂದ. ಆದ್ದರಿಂದ ಅದ್ವೈತದ ಪ್ರಕಾರ ಅದು ಅಸತ್ಯ. ಇದಕ್ಕಾಗಿ ಅವರು ಶ್ರುತಿವಾಕ್ಯಗಳನ್ನು ಉಲ್ಲೇಖಿಸುತ್ತಾರೆ. ದ್ವೈತವಾದಿಗಳು ಮಡಕೆಯನ್ನು ಸತ್ಯವೆಂದೇ ಸ್ವೀಕರಿಸುತ್ತಾರೆ. ಈ ಸಂಬಂಧದಲ್ಲಿ ಶ್ರುತಿವಾಕ್ಯಗಳಿಗೆ ಅದ್ವೈತವಾದಿಗಳು ಹೇಳುವುದಕ್ಕಿಂತ ಭಿನ್ನವಾದ ಅರ್ಥಗಳನ್ನು ದ್ವೈತಪರರು ನೀಡುತ್ತಾರೆ.
ಹೀಗೆಯೇ ಅದ್ವೈತ ಪರರು ಮಹಾವಾಕ್ಯಗಳೆಂದು ವರ್ಗೀಕರಿಸಿದ ಕೆಲವು ಉಪನಿಷದ್ವಾಕ್ಯಗಳಿವೆ. ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ ಇತ್ಯಾದಿ ಅಂತಹ ವಾಕ್ಯಗಳು. ಇವುಗಳನ್ನು ಅರ್ಥೈಸುವ ರೀತಿ ಎರಡೂ ಪರಂಪರೆಗಳಲ್ಲಿ ಭಿನ್ನ. ಇಂತಹ ಭಿನ್ನತೆಗಳು ವಿಭಿನ್ನ ನೆಲೆಗಳಿಂದ ಉಗಮಿಸುತ್ತವೆ. ಅದ್ವೈತ ಪರರ ಪ್ರಕಾರ ಅಹಂ ಬ್ರಹ್ಮಾಸ್ಮಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿ ಹೇಳಿಕೊಳ್ಳುವ ಒಂದು ವಾಕ್ಯ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಬ್ರಹ್ಮಸ್ವರೂಪಿ ಎಂಬರ್ಥ ಹೊರಡುತ್ತದೆ. ದ್ವೈತ ಪರ ವಾದದಲ್ಲಿ ಇದು ಯಾರು ಬ್ರಹ್ಮನೋ ಅವನು ಹೇಳುವ ವಾಕ್ಯ. ಆದ್ದರಿಂದ ಅವನು ಬ್ರಹ್ಮ ಉಳಿದವರಲ್ಲ ಎಂಬ ಅರ್ಥ ಹೊರಡುತ್ತದೆ. ತತ್ತ್ವಮಸಿ ಎಂಬುದು ತಾನೇ ಒಂದು ವಾಕ್ಯವಲ್ಲ; ಒಂದು ವಾಕ್ಯದ ಭಾಗ. ಸ ಆತ್ಮಾತತ್ತ್ವಮಸಿ ಎಂಬುದು ಪೂರ್ಣ ವಾಕ್ಯ. ಇದನ್ನು ನಿಜವಾಗಿ ಸ ಆತ್ಮಾ ಅತ್ತ್ವಮಸಿ ಎಂದು ಬಿಡಿಸ ಬೇಕು ಎಂಬುದು ದ್ವೈತಪರ ನಿಲುವು. (ಸಂಸ್ಕೃತ ವ್ಯಾಕರಣದ ಪ್ರಕಾರ ಎರಡೂ ತರಹ ಪದಚ್ಛೇದ ಮಾಡುವುದು ಸಾಧ್ಯವಿದೆ). ಹೀಗೆ ನೀನು ಆ ಆತ್ಮನಲ್ಲ ಎಂಬ ಅರ್ಥ ಹೊರಡುತ್ತದೆ. ಹೀಗೆಯೇ ಇನ್ನೊಂದು ವಾಕ್ಯ. ಅದ್ವೈತ ಪರರ ಪ್ರಕಾರ ಅಯಮಾತ್ಮಾ ಬ್ರಹ್ಮ ಎಂಬ ವಾಕ್ಯ ಪ್ರತಿಯೊಬ್ಬ ವ್ಯಕ್ತಿ ತನ್ನತ್ತ ಬೆರಳು ಮಾಡಿ ತೋರಿಸುತ್ತಾ ಹೇಳುವಂತಹುದು. ಹೀಗೆ ಮಾಡಿದಾಗ ನನ್ನೊಳಗಿರುವ ಆತ್ಮನೇ ಬ್ರಹ್ಮ ಎಂದರ್ಥವಾಗುತ್ತದೆ. ದ್ವೈತಪರ ನಿಲುವಿನಲ್ಲಿ ಈ ವಾಕ್ಯವು ಎದುರಿಗಿರುವ ಪರಮಾತ್ಮನನ್ನು ತೋರಿಸುತ್ತಾ ಹೇಳುವಂತಹುದು. ಆಗ ಎದುರಿಗಿರುವ ಆ ಪರಮಾತ್ಮನೇ ಬಗರಹ್ಮ ಎಂದರ್ಥವಾಗುತ್ತದೆ. ಹೀಗೆ ಎರಡು ವಾದಗಳು ಅವೇ ಅವೇ ಶ್ರುತಿ ವಾಕ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಹುಟ್ಟುತ್ತವೆ. ಆಯಾ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತದ ಪ್ರಕಾರ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಂಡವರು ಎಂದು ಸ್ವೀಕರಿಸಿದರೆ ಯಾವ ಸಿದ್ಧಾಂತವನ್ನು ಅನುಸರಿಸಿ ಸಾಧನೆ ಮಾಡಿದರೂ ದೈವ ಸಾಕ್ಷಾತ್ಕಾರ ಸಾಧ್ಯ ಎಂದು ಅರ್ಥವಾಗುತ್ತದೆ.
ಎರಡೂ ಪದ್ಧತಿಗಳಲ್ಲಿ ಉಪನಿಷತ್ತುಗಳಿಗೆ ಪ್ರಧಾನ ಸ್ಥಾನವಿದ್ದೇ ಇದೆ. ಆದರೆ ಪ್ರತಿ ಉಪನಿಷತ್ತನ್ನು ಅರ್ಥೈಸುವಾಗಲೂ ಎರಡರಲ್ಲಿ ಭಿನ್ನತೆಗಳು ಕಾಣಿಸಿಕೊಳ್ಳುತ್ತವೆ. ಮಾಂಡೂಕ್ಯ ಉಪನಿಷತ್ತಿನ ಸಂದರ್ಭದಲ್ಲಿ ಇಂತಹ ಭಿನ್ನತೆಗಳು ಹೆಚ್ಚಾಗಿವೆ. ಮಾಂಡೂಕ್ಯ ಉಪನಿಷತ್ತನ್ನು ಮಾಧ್ವ ಸಂಪ್ರದಾಯದಲ್ಲಿ ಮಾಂಡುಕೋಪನಿಷತ್ತು ಎಂದು ಕರೆಯುತ್ತಾರೆ. ಅದ್ವೈತ ಸಂಪ್ರದಾಯದಲ್ಲಿ ಉಪನಿಷನ್ಮಂತ್ರಗಳನ್ನು ಗೌಡಪಾದರ ಮಾಂಡೂಕ್ಯ ಕಾರಿಕಾಗಳ ಜೊತೆಗೆ ಓದಿ ಅರ್ಥ ಮಾಡಿಕೊಳ್ಳುವ ವಿಧಾನವಿದೆ. ಗೌಡಪಾದ ಕಾರಿಕೆಗಳಲ್ಲಿ ನಾಲ್ಕು ಅಧ್ಯಾಯಗಳಿದ್ದು ಮೊದಲನೆಯದು ಆಗಮ ಪ್ರಕರಣ. ಇದರಲ್ಲಿ ಉಪನಿಷತ್ತಿನ ಹನ್ನೆರಡು ಮಂತ್ರಗಳು ಮತ್ತು ಅದರ ಅರ್ಥವನ್ನು ವಿವರಿಸಲು ಇಪ್ಪತ್ತಂಬತ್ತು ಕಾರಿಕೆಗಳೂ ಇವೆ. ಮಾಧ್ವ ಸಂಪ್ರದಾಯದಲ್ಲಿ ಎಲ್ಲ ನಾಲ್ಕು ಪ್ರಕರಣಗಳನ್ನೊಳಗೊಂಡ ಗೌಡಪಾದರ ಇಡೀ ಮಾಂಡೂಕ್ಯ ಕಾರಿಕೆಗಳನ್ನು ಉದ್ಧರಿಸುವ ಕ್ರಮವಿಲ್ಲ. ಉಪನಿಷತ್ತಿನ ಹನ್ನೆರಡು ಮಂತ್ರಗಳು ಮತ್ತು ಗೌಡಪಾದರ ಆಗಮ ಪ್ರಕರಣದ ಇಪ್ಪತ್ತೊಂಬತ್ತು ಶ್ಲೋಕಗಳು - ಇವಿಷ್ಟು ಸೇರಿ ಮಾಡೂಕ್ಯೋಪನಿಷತ್ತೆಂದು ಸ್ವೀಕೃತವಾಗಿವೆ. ಆದರೆ ನಿರ್ದಿಷ್ಟ ಮಂತ್ರಗಳನಂತರ ಅತ್ರ ಏತೇ ಶ್ಲೋಕಾಃ ಭವಂತಿ ಎಂಬ ಟಿಪ್ಪಣಿಯ ನಂತರ ಮಾಂಡೂಕ್ಯ ಕಾರಿಕಾದಲ್ಲಿ ಬರುವ ಶ್ಲೋಕಗಳು ಬರುತ್ತವೆ ಮತ್ತು ಈ ಶ್ಲೋಕಗಳನ್ನು ಮೂಲ ಉಪನಿಷತ್ತಿನಿಂದ ಬೇರೆ ಎಂಬುದನ್ನು ಹೀಗೆ ಸೂಚಿಸಲಾಗಿದೆ. ಈ ಶ್ಲೋಕಗಳನ್ನೂ ಚತುರ್ಮುಖ ಬ್ರಹ್ಮ ಹೇಳಿದ್ದು ಎಂಬಂತೆ ಸ್ವೀಕರಿಸುತ್ತಾರೆ. ರಾಮಾನುಜಾಚಾರ್ಯರು ಮಾಂಡೂಕ್ಯ ಉಪನಿಷತ್ತಿಗೆ ಭಾಷ್ಯವನ್ನು ಬರೆದಿಲ್ಲ. ಆದರೆ ಅವರ ಬ್ರಹ್ಮ ಸೂತ್ರ ಭಾಷ್ಯದಲ್ಲಿ ಈ ಶ್ಲೋಕಗಳು ದೈವೀ ಮೂಲದವು ಎಂದು ಹೇಳಿದ್ದಾರೆಂದು ತಿಳಿದು ಬರುತ್ತದೆ. ಗೌಡಪಾದ ಕೃತವೆಂದು ಅದ್ವೈತಪರರು ಸ್ವೀಕರಿಸಿದರೆ ದ್ವೈತ ಹಾಗೂ ವಿಶಿಷ್ಟಾದ್ವೈತಗಳಲ್ಲಿ ಬ್ರಹ್ಮದ್ರಷ್ಟ ಮತ್ತು ದೈವೀಮೂಲದವು ಎಂದು ವಿಭಿನ್ನವಾಗಿ ಸ್ವೀಕರಿಸುತ್ತಾರೆ. ಹೀಗೆ ಈ ಶ್ಲೋಕಗಳ ಕರ್ತೃತ್ವ ವಿವಾದಾತೀತವಾಗಿಲ್ಲ. ಆದರೂ ಉಪನಿಷತ್ತಿನ ಒಟ್ಟಾರೆ ಅರ್ಥವನ್ನು ಗ್ರಹಿಸಲು ಇವುಗಳ ಪ್ರಾಮುಖ್ಯವು ಕಡಿಮೆ ಏನಲ್ಲ.
ಓಮಿತ್ಯೇದಕ್ಷರಮಿದಂ ಸರ್ವಂ ಎಂಬ ಮಂತ್ರದಿಂದ, ಅಂದರೆ ಈ ಎಲ್ಲವೂ ಓಂಕಾರವೇ ಎಂಬ ನಿರೂಪಣೆಯಿಂದ, ಮಾಂಡೂಕ್ಯ ಉಪನಿಷತ್ತು ಪ್ರಾರಂಭವಾಗುತ್ತದೆ. ಮುಂದುವರೆದು ಜಾಗೃತ ಸ್ವಪ್ನ ಮತ್ತು ಸುಷುಪ್ತಿ ಎಂಬ ಅವಸ್ಥೆಗಳನ್ನು ವಿವರಿಸಿ ಇವೆಲ್ಲಕ್ಕಿಂತ ಭಿನ್ನವಾದ ತುರೀಯಾವಸ್ಥೆಯನ್ನು ವಿವರಿಸುತ್ತಾರೆ. ಜಾಗೃತಾವಸ್ಥೆಯ ಅನುಭವಗಳನ್ನು ತಂದುಕೊಡುವ ಪರಮಾತ್ಮನ ಸ್ವರೂಪವನ್ನು ವಿಶ್ವ ಎಂದೂ ಸ್ವಪ್ನಾವಸ್ಥೆಯ ಅನುಭವಗಳನ್ನು ತಂದುಕೊಡುವ ಪರಮಾತ್ಮ ಸ್ವರೂಪವನ್ನು ತೈಜಸ ಎಂದೂ ಸುಷುಪ್ತಾವಸ್ಥೆಯ ಅನುಭವಗಳನ್ನು ತಂದು ಕೊಡುವ ಪರಮಾತ್ಮ ಸ್ವರೂಪವನ್ನು ಪ್ರಾಜ್ಞ ಎಂದೂ ಹೆಸರಿಸುತ್ತಾರೆ. (ಇವುಗಳ ವಿವರಗಳು ಮತ್ತು ದ್ವೈತಾದ್ವೈತ ಸಂಪ್ರದಾಯಗಳಲ್ಲಿ ಇದನ್ನು ವಿವರಿಸುವಲ್ಲಿ ಇರುವ ಭಿನ್ನತೆಗಳೂ ಮುಂದೆ ಬರುತ್ತವೆ). ಮುಂದೆ ಎಂಟನೆಯ ಮಂತ್ರದಲ್ಲಿ ಓಂಕಾರವು ಅಕಾರ ಉಕಾರ ಮತ್ತು ಮಕಾರಗಳಿಂದ ಆಗಿದೆ ಎಂಬುದನ್ನು ವಿವರಿಸಿ ಅಕಾರವು ಜಾಗರಿತ ಅವಸ್ಥೆಯನ್ನೂ ಉಕಾರವು ಸ್ವಪ್ನಾವಸ್ಥೆಯನ್ನೂ ಮಕಾರವು ಸುಷುಪ್ತಾವಸ್ಥೆಯನ್ನೂ ಪ್ರತಿನಿಧಿಸುತ್ತವೆ ಎಂದು ವಿವಿರಿಸಿದೆ. ಅಲ್ಲದೆ ಹನ್ನೆರಡನೆಯ ಮಂತ್ರದಲ್ಲಿ ಅ ಉ ಮಕಾರಗಳಿಂದಾದ ಓಂಕಾರದ ನಂತರ ಬರುವ ನಾದ ಅಥವ ಮೌನವೂ ಓಂಕಾರದ ಭಾಗವೇ ಆಗಿದ್ದು ಅದು ತುರೀಯವೆಂಬ ನಾಲ್ಕನೆಯ ಅವಸ್ಥೆಯನ್ನು ಪ್ರತಿನಿಧಿಸುವುದಾಗಿಯೂ ಅದು ಬ್ರಹ್ಮನೇ ಎಂದು ತಿಳಿಸುತ್ತದೆ. ಸಾಧಕನು ಓಂ ಎಂದು ಧ್ಯಾನಿಸುವ ಕಾಲದಲ್ಲಿ ಆಯಾ ಮಾತ್ರೆಗಳನ್ನು ಉಚ್ಚರಿಸುವಾಗ ಆಯಾ ಪರಮಾತ್ಮ ಸ್ವರೂಪಗಳನ್ನು ಮಾತ್ರೆಗಳ ಮೇಲೆ ಅಧ್ಯಾರೋಪಿಸಿ ಧ್ಯಾನಿಸ ಬೇಕೆಂದು ತಿಳಿಸಿದೆ. ಹೀಗೆ ಓಂಕಾರದ ಪ್ರಾಮುಖ್ಯ, ಅದರ ಭಾಗಗಳು ಮತ್ತು ಓಂಕಾರವನ್ನೇ ಧ್ಯಾನಿಸುವ ಬಗೆ - ಇವು ಈ ಉಪನಿಷತ್ತಿನ ವಸ್ತು.
ಮೊದಲನೆಯ ಮಂತ್ರದಲ್ಲಿ
ಹರಿಃ ಓಂ. ಓಮಿತ್ಯೇದಕ್ಷರಮಿದಂ ಸರ್ವಂ
ತಸ್ಯ ಉಪವ್ಯಾಖ್ಯಾನಂ - ಭೂತ-ಭವದ್-ಭವಿಷ್ಯದಿತಿ
ಸರ್ವಮೋಂಕಾರ ಏವ; ಯಚ್ಚ ಅನ್ಯತ್ ತ್ರಿಕಾಲಾತೀತಂ
ತದಪ್ಯೋಂಕಾರ ಏವ
ಎಂದು ಬರುತ್ತದೆ. "ಈ (ಲೋಕದಲ್ಲರುವ) ಎಲ್ಲವು ಓಂ ಎಂಬ ಈ ಒಂದಕ್ಷರವೇ. ಅಂದರೆ ಹಿಂದೆ ಇದ್ದುದು, ಈಗಿರುವುದು ಮತ್ತು ಮುಂದೆ ಬರುವುದು ಎಲ್ಲವೂ ಓಂಕಾರವೇ" ಎಂದು ಪೂರ್ವ ಭಾಗದ ಅರ್ಥ ಹೇಳುವುದರಲ್ಲಿ ಭಿನ್ನತೆ ಇಲ್ಲ. ಕೊನೆಯ ವಾಕ್ಯವನ್ನು ವಿವರಿಸುವುದರಲ್ಲಿ ಭಿನ್ನತೆ ಇದೆ. ಅದ್ವೈತ ಸಂಪ್ರದಾಯದಲ್ಲಿ ಕಾಲಕ್ಕೆ ಒಳಪಡದ, ಅತೀಂದ್ರಯ ವಸ್ತು, ನಮ್ಮೊಳಗಿನ ಸತ್ತ್ವ ಮತ್ತು ಹೊರಗಿನ ಈ ಎಲ್ಲ ಜಡ ಪದಾರ್ಥಗಳು ಓಂ ಎಂಬ ಅಕ್ಷರವೇ ಎಂದು ಅರ್ಥ ಹೇಳುತ್ತಾರೆ. ದ್ವೈತ ಸಂಪ್ರದಾಯದಲ್ಲಿ ತ್ರಿಕಾಲಾತೀತವಾದ ಬಾಹ್ಯ ವಸ್ತುವೆಲ್ಲವನ್ನು ಪ್ರಕೃತಿ (ಶ್ರೀತತ್ತ್ವ) ಎನ್ನುತ್ತಾರೆ.ಅಂದರೆ ಪ್ರಲಯ ಕಾಲದಲ್ಲಿ ದೃಗ್ಗೋಚರ ಸೃಷ್ಟಿ ಎಲ್ಲವೂ ನಾಶವಾದ ನಂತರ ಮುಂದಿನ ಯುಗದ ಸೃಷ್ಟಿಗೆ ಕಾರಣಭೂತವಾಗಿ ಅಂಕುರ ರೂಪದಲ್ಲಿ ಉಳಿಯುವ ಪ್ರಕೃತಿ. ಇದೂ ಓಂಕಾರವೇ ಎಂದು ಅರ್ಥೈಸುತ್ತಾರೆ.
ಎರಡನೆಯ ಮಂತ್ರ ಹೀಗಿದೆ:
ಸರ್ವಂ ಹ್ಯೇತದ್ ಬ್ರಹ್ಮ ಅಯಮಾತ್ಮಾ ಬ್ರಹ್ಮ
ಸೋsಯಮಾತ್ಮಾ ಚತುಷ್ಪಾತ್
ಮೊದಲಸಾಲು ಸರ್ವಂ ಹ್ಯೇತದ್ ಬ್ರಹ್ಮ; ಅಯಮಾತ್ಮಾ ಬ್ರಹ್ಮ ಎಂದಿದೆ. ಇವಕ್ಕೆ ಅದ್ವೈತದಲ್ಲಿ ಇವೆಲ್ಲವೂ ಬ್ರಹ್ಮ, ಈ ಆತ್ಮವೂ ಬ್ರಹ್ಮ ಎಂದು ಅರ್ಥ ಹೇಳುತ್ತಾರೆ ಮತ್ತು ಅಯಮಾತ್ಮಾ ಬ್ರಹ್ಮ (ನನ್ನೊಳಗಿನ ಈ ಆತ್ಮವೂ ಬ್ರಹ್ಮ,) ಎಂಬುದನ್ನು ಮಹಾವಾಕ್ಯವೆಂದು ಸ್ವೀಕರಿಸುತ್ತಾರೆ. ದ್ವೈತ ಪರಂಪರೆಯಲ್ಲಿ ಇವೆಲ್ಲವೂ ಅಂದರೆ ಇವೆಲ್ಲವನ್ನೂ ಕ್ರಿಯಾಶೀಲ ಗೊಳಿಸುವ ಆ ಶಕ್ತಿ ಬ್ರಹ್ಮ ಎಂದು ಅರ್ಥೈಸುತ್ತಾರೆ. ದೃಗ್ಗೋಚರವಾದ ಹೊರ ಪ್ರಪಂಚವನ್ನು ಕ್ರಿಯಾಶೀಲ ಗೊಳಿಸುವ ಮತ್ತು ಪ್ರತಿ ವ್ಯಕ್ತಿಯನ್ನು ಕ್ರಿಯಾಶೀಲಗೊಳಿಸುವ, ಆಂತರ್ಯವನ್ನು ಬ್ರಹ್ಮ ಎಂದು ನಿರ್ದೇಶಿಸುತ್ತಾರೆ. ಮುಂದಿನ ಸಾಲು ಅಯಮಾತ್ಮಾ ಚತುಷ್ಪಾತ್ ಎಂಬುದು. ಅದ್ವೈತ ವ್ಯಖ್ಯಾನಕಾರರು ಇದನ್ನು ವ್ಯಕ್ತಿಯ ಆತ್ಮಕ್ಕೆ ನಾಲ್ಕು ಆಯಾಮಗಳಿವೆ ಎಂದು ಅರ್ಥೈಸುತ್ತಾರೆ. ದ್ವೈತ ಪರಂಪರೆಯಲ್ಲಿ ಪ್ರತಿ ಜೀವಿಯು ತನ್ನೆಲ್ಲ ಕಾರ್ಯಾಕಾರ್ಯಗಳಿಗಾಗಿ ತನ್ನ ಆಂತರ್ಯದಲ್ಲಿರುವ ಪರಮಾತ್ಮನನ್ನು ಅವಲಂಬಿಸಿರುವುದು; ಅಂತಹ ಪ್ರತಿ ವ್ಯಕ್ತಿಯ ಆಂತರ್ಯಕ್ಕೆ ನಾಲ್ಕು ಆಯಾಮಗಳಿವೆ ಎಂದು ವ್ಯಾಖ್ಯಾನಿಸುತ್ತಾರೆ. ವ್ಯಕ್ತಿಯ ಆತ್ಮವು ಪ್ರತಿಬಿಂಬ ಸ್ವಭಾವದ್ದಾಗಿದ್ದು ಅವನನ್ನು ಕ್ರಿಯಾಶೀಗೊಳಿಸುವ ಸರ್ವೋತ್ತಮ (ಪರಮ)ಆತ್ಮ ಸ್ವರೂಪವು ನಾಲ್ಕು ತರಹ ಎಂದು ತಾತ್ಪರ್ಯವಾಗುತ್ತದೆ. ಅವು ಯಾವುವು ಎಂಬುದು ಮುಂದಿನ ಮಂತ್ರಗಳ ವಸ್ತು.
ಇವುಗಳನ್ನು ವಿವರಿಸುವ ಮಂತ್ರಗಳು ಹೀಗಿವೆ:
ಜಾಗರಿತ ಸ್ಥಾನೋ ಬಹಿಷ್ಪ್ರಜ್ಞಃ ಸಪ್ತಾಂಗಃ
ಏಕೋನವಿಂಶತಿಮುಖಃ ಸ್ಥೂಲಭುಕ್
ವೈಶ್ವಾನರಃ ಪ್ರಥಮ ಪಾದಃ
ಸ್ವಪ್ನಸ್ಥಾನೋsನ್ತಃ ಪ್ರಜ್ಞಃ ಸಪ್ತಾಂಗಃ
ಏಕೋನವಿಂಶತಿಮುಖಃ ಪ್ರವಿವಿಕ್ತಭುಕ್
ತೈಜಸಃ ದ್ವಿತೀಯ ಪಾದಃ
ಮೊದಲನೆಯದು ಜಾಗೃತಾವಸ್ಥೆ ಅಥವ ಮನುಷ್ಯ ಎಚ್ಚರದಲ್ಲಿರುವ ಸಮಯ. ಜಾಗರಿತ ಸ್ಥಾನ ಎಂದು ಮಂತ್ರದಲ್ಲಿ ಇದನ್ನು ಕರೆದಿದ್ದಾರೆ. ಅದ್ವೈತ ವ್ಯಾಖ್ಯಾನದ ಪ್ರಕಾರ ಇದು ಮತ್ತು ಮುಂದಿನ ಮಂತ್ರಗಳು ಪ್ರತಿ ವ್ಯಕ್ತಿಯ ಆಂತರ್ಯದ ಆತ್ಮದ ಸ್ಥಿತಿಗಳನ್ನು ವಿವರಿಸುವಂತಹದು. ಆತ್ಮವು ಜಾಗೃತ ಸ್ಥಿತಿಯಲ್ಲಿರುವಾಗಿನ ಲಕ್ಷಣಗಳನ್ನು ಮೇಲಿನ ಮೊದಲನೆಯ ಮಂತ್ರವು ವಿವರಿಸುತ್ತದೆ. ಈ ಸ್ಥಿತಿಯಲ್ಲಿ ಅವನ ಪ್ರಜ್ಞೆ ಎಲ್ಲ ಅವನಿಂದ ಹೊರಗೆ ನಿರ್ದೇಶಿತವಾಗಿದೆ. ಹೊರಪ್ರಪಂಚವನ್ನು ಗ್ರಹಿಸುವುದು ಅವನ ಈ ಸ್ವರೂಪದ ಲಕ್ಷಣ. ಇಂತಹ ಸ್ಥಿತಿಯಲ್ಲಿ ಅವನ ತಲೆಯು ಸ್ವರ್ಗ, ಕಣ್ಣುಗಳು ಸೂರ್ಯ, ಗಾಳಿಯು ಅವನುಸಿರು, ಆಕಾಶವು ಅವನ ಶರೀರ, ನೀರು ಅವನ ಕೆಳ ಇಂದ್ರಿಯಗಳು ಮತ್ತು ಭೂಮಿ ಅವನ ಕಾಲುಗಳು. ಇದೊಂದು ದೊಡ್ಡ ರೂಪಕವಾಗಿದ್ದು ಹಾಗೆ ಗ್ರಹಿಸಿ ಇದನ್ನು ಅರ್ಥೈಸಿ ಕೊಳ್ಳ ಬೇಕು. ಇವನಿಗೆ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು ಮತ್ತು ನಾಲ್ಕು ಅಂತಃಕರಣಗಳು - ಹೀಗೆ ಹತ್ತೊಂಬತ್ತು ಬಾಯಿಗಳಿದ್ದು ಅವುಗಳಿಂದ ಪ್ರಪಂಚವನ್ನು ಭೋಗಿಸುತ್ತಾನೆ. ವಸ್ತು ಸೂಕ್ಷ್ಮತೆಯ ಗ್ರಹಿಕೆ ಇದರಲ್ಲಿ ಸೇರಿರುವುದಿಲ್ಲ. ಗೋಚರ ಪ್ರಪಂಚ ಹೇಗಿದೆಯೋ ಹಾಗೆ ಗ್ರಹಣೆ (ಸ್ಥೂಲಭುಕ್) ಈ ಸವರೂಪದ ಲಕ್ಷಣ. ಜಾಗರಿತ ಸ್ಥಿತಿಯಲ್ಲಿರುವ ಈ ಆತ್ಮನಿಗೆ ವೈಶ್ವಾನರ ಅಥವ ವಿಶ್ವ ಎಂದು ಹೆಸರು. ದ್ವೈತ ಸಿದ್ಧಾಂತದ ವ್ಯಾಖ್ಯಾನಕಾರರು ಇಲ್ಲಿ ಹೇಳುವ ನಾಲ್ಕು ಸ್ಥಿತಿಗಳು ಜೀವಿಗಳ (ಆತ್ಮದ ಅಲ್ಲ) ನಾಲ್ಕು ಸ್ಥಿತಿಗಳೆಂದೂ ಈ ನಾಲ್ಕು ಸ್ಥಿತಿಗಳಲ್ಲಿ ಸರ್ವೋತ್ತಮನಾದ ಪರಮಾತ್ಮನು ಜೀವಿಗಳ ಆಂತರ್ಯದಲ್ಲಿ ಭಿನ್ನ ಸ್ವರೂಪಗಳಲ್ಲಿ ನೆಲಸಿದ್ದು ವಿಭಿನ್ನ ಅವಸ್ಥೆಗಳಲ್ಲಿ ಜೀವಿಯನ್ನು ಕ್ರಿಯಾಶೀಲ ಗೊಳಿಸುತ್ತಾನೆಂದು ಪ್ರತಿಪಾದಿಸುತ್ತಾರೆ. ಇದರಿಂದಾಗಿ ಮಂತ್ರಗಳನ್ನು ಅರ್ಥೈಸುವಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ.
ವೈಶ್ವಾನರ ಎಂಬುದು ಜೀವಿಯನ್ನು ಜಾಗೃತಾವಸ್ಥೆಯಲ್ಲಿ ಕ್ರಿಯಾಶೀಲನನ್ನಾಗಿಸುವ ಪರಮಾತ್ಮನ ಸ್ವರೂಪದ ಹೆಸರು. ಇವನು ಉಪನಿಷದ್ವಾಕ್ಯದ ಪ್ರಕಾರ ಸಪ್ತಾಂಗಃ. ದ್ವೈತ ವ್ಯಾಖ್ಯಾನಕಾರರು ಸಪ್ತಾಂಗಃ ಎಂಬುದನ್ನು ಬೇರೆಯೇ ರೀತಿಯಲ್ಲಿ ಅರ್ಥೈಸುತ್ತಾರೆ.(ಅದ್ವೈತಪರ ಅರ್ಥವನ್ನು ಮೇಲಿನ ಪರಿಚ್ಛೇದದಲ್ಲಿ ಹೇಳಿದೆ). ಪರಮಾತ್ಮನಿಗೆ ಈ ರೂಪದಲ್ಲಿ ಸೊಂಡಿಲು ಇರುವ ಪುರುಷಮುಖವಿದೆ. ನಾಲ್ಕು ಕೈಗಳು, ಎರಡು ಕಾಲುಗಳು ಮತ್ತು ಒಂದು ಸೊಂಡಿಲು ಹೀಗೆ ಇವನ ಏಳು ಅಂಗಗಳು. ಅಲ್ಲದೆ ಈ ಮುಖ್ಯ ಮುಖದ ಎಡ ಮತ್ತು ಬಲ ಬದಿಗಳಲ್ಲಿ ಬೇರೆ ಬೇರೆ ದೇವತೆಗಳನ್ನು ಪ್ರತಿನಿಧಿಸುವ ಒಂಬತ್ತು ಒಂಬತ್ತು ಮುಖಗಳಿವೆ. ಹೀಗೆ ಇವನು ಏಕೋನ ವಿಂಶತಿ (ಹತ್ತೊಂಬತ್ತು) ಮುಖಃ. ಈ ವೈಶ್ವಾನರ ಜಾಗೃತ ಸ್ಥಿತಿಯಲ್ಲಿ ಹೊರ ವಸ್ತುಗಳ ಜ್ಞಾನ ಉಂಟಾಗುವಂತೆ ಮಾಡುತ್ತಾನೆ.
ಎರಡನೆಯದು ಸ್ವಪ್ನಾವಸ್ಥೆಯನ್ನು ವಿವರಿಸುತ್ತದೆ. ಅದ್ವೈತ ವ್ಯಾಖ್ಯಾನಕಾರರ ಪ್ರಕಾರ ಸ್ವಪ್ನಾವಸ್ಥೆಯಲ್ಲಿ ಆತ್ಮನ ಪ್ರಜ್ಞೆಯೆಲ್ಲವು ಒಳಗೆ ನಿರ್ದೇಶಿತ ವಾಗಿರುತ್ತದೆ. ಅಂದರೆ ಮನಸ್ಸಿನಿಂದ ಮಾತ್ರ ವಸ್ತುಗಳ ಗ್ರಹಿಕೆ. (ಜಾಗೃತಾವಸ್ಥೆಯಲ್ಲಿ ಇತರ ಇಂದ್ರಿಯಗಳು ಹೊರಗಿರುವ ವಸ್ತುಗಳನ್ನು ಭೋಗಿಸುತ್ತವೆ). ಏಳು ಅಂಗಗಳು ಮತ್ತು ಹತ್ತೊಂಬತ್ತು ಮುಖಗಳು ಮೊದಲಿನಂತೆ. ಆದರೆ ವಸ್ತುಗಳನ್ನು ಅವು ಇದ್ದಂತಲ್ಲ, ಅವುಗಳ ಸೂಕ್ಷ್ಮ ಸ್ವರೂಪದಲ್ಲಿ ಭೋಗಿಸುವಿಕೆ. ಅಂದರೆ ಜಾಗೃತಾವಸ್ಥೆಯಲ್ಲಿ ನೋಡಿದ ವಸ್ತುಗಳು ಮನಸ್ಸಿನಲ್ಲಿ ಬಿಟ್ಟ ಅಚ್ಚುಗಳನ್ನು ಮೆಲುಕು ಹಾಕುವಿಕೆ ಮತ್ತು ಇದರಿಂದ ಭೋಗಿಸುವಿಕೆ. ಸ್ವಪ್ನಾವಸ್ಥೆಯಲ್ಲಿರುವ ಈ ಆತ್ಮನಿಗೆ ತೈಜಸ ಎಂದು ಎಂದು ಹೆಸರು. ದ್ವೈತ ವ್ಯಾಖ್ಯಾನಕಾರರು ಸ್ವಪ್ನಾವಸ್ಥೆಯು ಜೀವಿಯ ಒಂದು ಅವಸ್ಥೆ ಎಂದು ಹೇಳುತ್ತಾರೆ. ಜೀವಿಗೆ ಸ್ವಪ್ನಾವಸ್ಥೆಯ ವಸ್ತುಗಳ ಭೋಗವನ್ನು ತಂದುಕೊಡುವ ಪರಮಾತ್ಮನ ಸ್ವರೂಪದ ಹೆಸರು ತೈಜಸ. ಅವನೇ ಸ್ವಪ್ನಗಳನ್ನು ಜಗೃತಾವಸ್ಥೆಯಲ್ಲಿ ಉಂಟಾದ ಅನುಭವಗಳ ಸಂಸ್ಕಾರಗಳನ್ನು ಬಳಸಿ ಸೃಷ್ಟಿ ಮಾಡುತ್ತಾನೆ.
ಅನಂತರದ ಮಂತ್ರ ಇನ್ನೂ ಕುತೂಹಲಕರವಾಗಿದೆ. ಅದು ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಇದೆ. ಗಾಢ ನಿದ್ರೆಯ ಸೂಕ್ತವಾದ ಪ್ರಥಮ ವಿವರಣೆ ಈ ನಿರೂಪಣೆ ಎನ್ನಬಹುದು. ಮಂತ್ರ ಹೀಗಿದೆ:
ಯತ್ರ ಸುಪ್ತೋ ನಕಂಚನ ಕಾಮಂ ಕಾಮಯತೇ,
ನಕಂಚನ ಸ್ವಪ್ನಂ ಪಶ್ಯತಿ, ತತ್ ಸುಷುಪ್ತಂ.
ಸುಷುಪ್ತ ಸ್ಥಾನಃ ಏಕೀಭೂತಃ, ಪ್ರಜ್ಞಾನ ಘನಃ
ಏವಂ ಆನಂದಮಯೋ ಹಿ ಆನಂದಭುಕ್,
ಚೇತೋಮುಖಃ ಪ್ರಾಜ್ಞಃ ತೃತೀಯ ಪಾದಃ.
ಮಂತ್ರದ ಮೊದಲನೆಯ ಭಾಗವನ್ನು ಅರ್ಥೈಸುವಲ್ಲಿ ದ್ವೈತಾದ್ವೈತ ನಿರೂಪಣೆಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಯಾವ ನಿದ್ರಾವಸ್ಥೆಯಲ್ಲಿ ಯಾವ ಆಸೆಯೂ ಇರುವುದಿಲ್ಲವೋ ಮತ್ತು ಕನಸೂ ಕಾಣುವುದಿಲ್ಲವೋ ಅದಕ್ಕೆ ಗಾಢನಿದ್ರೆ ಎಂದು ಹೆಸರು ಎಂದು ಈ ಭಾಗ ನಿರೂಪಿಸುತ್ತದೆ. ಇದು ಸ್ಥೂಲವಾಗಿ ದ್ವೈತಾದ್ವೈತ ಪಕ್ಷಗಳಿಗೆ ಸಮಾನ. ಉತ್ತರ ಭಾಗವನ್ನು ಅರ್ಥೈಸುವಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಅದ್ವೈತ ಪರ ವ್ಯಾಖ್ಯಾನಕಾರರು ಏಕೀಭೂತ ಎಂಬುದಕ್ಕೆ ಜಾಗೃತ ಮತ್ತು ಸ್ವಪ್ನಾವಸ್ಥೆಗಳು ಒಗ್ಗೂಡಿ ಈ ಸುಷುಪ್ತಾವಸ್ಥೆ ಉಂಟಾಗುತ್ತದೆಂದು ವಿವರಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಇದು ಅವೆರಡರಂತಲ್ಲದ ವಿಶಿಷ್ಟವಾದ ಸ್ಥಿತಿ ಎಂದು ಅರ್ಥೈಸುತ್ತಾರೆ. ಇದೊಂದು ಆನಂದಮಯವಾದ ಪ್ರಜ್ಞಾ ಮೊತ್ತ ಎಂಬುದೂ ಆನಂದ ಭೋಜ್ಯನೆಂಬುದೂ ಎರಡೂ ವಾದಗಳಿಗೆ ಸಮಾನ. ಅದ್ವೈತದ ಪ್ರಕಾರ ಈ ಅವಸ್ಥೆಯನ್ನು ಅನುಭವಿಸುವ ಆತ್ಮಸ್ವರೂಪಿಗೆ ಪ್ರಾಜ್ಞನೆಂದು ಹೆಸರು ಎಂದು ಹೇಳುತ್ತಾರೆ. ದ್ವೈತ ವಾದದಲ್ಲಿ ಸುಷುಪ್ತಾನುಭವವನ್ನು ಜೀವಿಗೆ ತಂದುಕೊಡುವ ಪರಮಾತ್ಮನ ಸ್ವರೂಪಕ್ಕೆ ಪ್ರಾಜ್ಞ ಎಂಬ ಹೆಸರೆಂದು ನಿರೂಪಿಸುತ್ತಾರೆ.
ಈ ಮೂರು ಅವಸ್ಥೆಗಳ ವಿವರಣೆಯನಂತರ ವಿಷಯಕ್ಕೆ ಒಂದು ರೀತಿಯ ಮುಕ್ತಾಯ ಬರುತ್ತದೆ. ಇದಾದ ನಂತರ ಬರುವ ಆರನೆಯ ಮಂತ್ರವು ಆದುದರಿಂದ ಪ್ರಾಮುಖ್ಯ ಪಡೆಯುತ್ತದೆ. ಅದ್ವೈತ ವ್ಯಾಖ್ಯಾನಕಾರರು ಈ ಆರನೆಯ ಮಂತ್ರವು ಐದನೆಯ ಮಂತ್ರದಲ್ಲಿ ಹೇಳಿರುವ ಪ್ರಾಜ್ಞನ ಹೆಚ್ಚುವರಿ ವಿವರಣೆ ಎಂದು ವಿವರಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಆರನೆಯದನ್ನು ಏಳನೆಯ ಮಂತ್ರದೊಂದಿಗೆ ಒಗ್ಗೂಡಿಸಿ ವಿವರಿಸುತ್ತಾರೆ.
ಈಗ ಆರನೆಯ ಮಂತ್ರ. ಅದು ಹೀಗಿದೆ:
ಏಷ ಸರ್ವೇಶ್ವರ ಏಷ ಸರ್ವಜ್ಞ ಏಷೋsನ್ತರ್ಯಾಮ್ಯೇಷ
ಯೋನಿಃ ಸರ್ವಸ್ಯ ಪ್ರಭವಾಪ್ಯಯೌ ಹಿ ಭೂತಾನಾಂ.
ಅಂದರೆ 'ಇವನೇ ಎಲ್ಲಕೂ ಒಡೆಯ, ಇವನೇ ಎಲ್ಲವನೂ ತಿಳಿದವನು, ಇವನೇ ಎಲ್ಲದರ ನಿಯಂತ್ರಕ, ಇವನೆ ಎಲ್ಲದರ ಮೂಲ, ಎಲ್ಲ ಪ್ರಾಣಿಗಳ ಹುಟ್ಟು ನಾಶಗಳು ಇವನೆ'.
ಅದ್ವೈತ ವ್ಯಾಖ್ಯಾನಕಾರರ ಪ್ರಕಾರ ಸುಪ್ತ ಸ್ಥಿತಿ-ಸ್ವರೂಪಿ ಪ್ರಾಜ್ಞನನ್ನು ಈ ಮಂತ್ರ ವಿವರಿಸುತ್ತಿದೆ. "ಗಾಢನಿದ್ರೆಗೆ ಸಂವಾದಿಯಾದ ಪ್ರಾಜ್ಞನನ್ನು ಈಶ್ವರನಿಗೆ ಸಮೀಕರಿಸ ಲಾಗುತ್ತಿದೆ. ಈಶ್ವರನು ಇಡೀ ವಿಶ್ವದ ಸೃಷ್ಟಿ ಕರ್ತನಿದ್ದಂತೆ ಗಾಢನಿದ್ರೆಯಲ್ಲಿನ ಪ್ರಜ್ಞೆಯಿಂದಾಗಿ ಜಾಗೃತ ಮತ್ತು ಸ್ವಪ್ನಾವಸ್ಥೆಯ ಎಲ್ಲ ಘಟನೆಗಳೂ ಘಟಿಸುತ್ತವೆ; ಅದರಲ್ಲಿಯೇ ಅವು ಕರಗುತ್ತವೆ ಕೂಡ". ಆದ್ದರಿಂದ ಪ್ರಾಜ್ಞನನ್ನು ಈಶ್ವರನೆಂದು ಕರೆದಿದೆ.
ಈ ಮೂರೂ ಅಲ್ಲದ ನಾಲ್ಕನೆಯ ಸ್ಥಿತಿಯೊಂದಿದೆ. ಅದನ್ನು ತುರೀಯವೆಂದು ಕರೆದಿದ್ದಾರೆ. ಈ ನಾಲ್ಕನೆಯ ಅವಸ್ಥೆಯನ್ನು ಏಳನೆಯ ಮಂತ್ರ ವಿವರಿಸುತ್ತದೆ. ಅದರ ವಿಷಯವನ್ನು ಅನಂತರ ವಿವರವಾಗಿ ಚರ್ಚಿಸಬಹುದು. ದ್ವೈತ ವ್ಯಾಖ್ಯಾನಕಾರರ ಪ್ರಕಾರ ಇದುವರೆಗೆ ವಿವರಿಸಿದ ಮೂರು ಅವಸ್ಥೆಗಳು ಮತ್ತು ಮುಂದೆ ಬರುವ ನಾಲ್ಕನೆಯ ಅವಸ್ಥೆಯೂ ಸೇರಿ ಪರಮಾತ್ಮನನ್ನು ವಿವರಿಸುತ್ತವೆ. " ಹೀಗೆ ಚತುರೂಪ ಆತ್ಮನು ಎಲ್ಲಕ್ಕೂ ಒಡೆಯನು, ಎಲ್ಲವನ್ನೂ ತಿಳಿದವನು, ಎಲ್ಲರಲ್ಲಿ ಶ್ರೇಷ್ಠನು ಮತ್ತು ಎಲ್ಲ ವ್ಯಕ್ತಿಗಳ ದೇಹದಲ್ಲಿ ವಿಶ್ವ, ತೈಜಸ, ಪ್ರಾಜ್ಞ ಮತ್ತು ತುರೀಯ ಎಂಬ ಆನಂದಮಯ ರೂಪಗಳಿಂದ ಇರುವವನು". ಎಲ್ಲವೂ ಆನಂದ ಸ್ವರೂಪಿಗಳು ಎಂಬುದನ್ನು "ಚೇತೋಮುಖಃ" ಎಂಬ ಶಬ್ದ ತಿಳಿಸುತ್ತಿದೆ.
ಆರನೆಯ ಮಂತ್ರದನಂತರ ಅದ್ವೈತ ವ್ಯಾಖ್ಯಾನಗಳಲ್ಲಿ ಗೌಡಪಾದರ ಎಂಟು ಕಾರಿಕೆಗಳು ಬರುತ್ತವೆ. ಈ ಕಾರಿಕೆಗಳು ಒಂದರಿಂದ ಆರು ಮಂತ್ರಗಳಲ್ಲಿ ಬರುವ ವಿಷಯಗಳನ್ನು ವಿವರಿಸುತ್ತವೆ. ಮಂತ್ರಗಳಲ್ಲಿ ಸಾಂದ್ರೀಕೃತವಾಗಿರುವ ಅಂಶಗಳನ್ನು ಸ್ವಲ್ಪಮಟ್ಟಿಗೆ ಸ್ಪಷ್ಟಪಡಿಸುತ್ತವೆ. ಮಂತ್ರಗಳಲ್ಲಿಲ್ಲದ ಆದರೆ ಅರ್ಥ ಗ್ರಹಿಕೆಗೆ ಮುಖ್ಯವೆನಿಸಿದ ಕೆಲವಂಶಗಳನ್ನು ಸೇರಿಸುತ್ತವೆ. ಮೊದಲನೆಯ ಕಾರಿಕೆ ಹೀಗಿದೆ:
ಬಹಿಷ್ಷ್-ಪ್ರಜ್ಞೋ ವಿಭುರ್-ವಿಶ್ವೋ ಹ್ಯಂತಃಪ್ರಜ್ಞಸ್ತು ತೈಜಸಃ.
ಘನಪ್ರಜ್ಞಸ್ತಥಾ ಪ್ರಾಜ್ಞ ಏಕಏವ ತ್ರಿಧಾ ಸ್ಮೃತಃ.
ಮೇಲ್ನೋಟಕ್ಕೆ ಇದು ಜಾಗೃತ, ಸ್ವಪ್ನ ಮತ್ತು ಸುಷುಪ್ತಾವಸ್ಥೆಗಳ ನಿರೂಪಣೆಗಳನ್ನು ಸಂಗ್ರಹಿಸುತ್ತಿರುವಂತೆ ಕಾಣುತ್ತದೆ. ಆದರೆ ಅದು ಇಷ್ಟೇ ಅಲ್ಲ. ಕಾರಿಕೆಯ ಅಂತ್ಯಭಾಗದಲ್ಲಿ ಇರುವ ಏಕ ಏವ ತ್ರಿಧಾ ಸ್ಮೃತಃ ಎಂಬ ಪದ ಪುಂಜವನ್ನು ಒಂದೇ ಆತ್ಮ ಮೂರು ರೂಪಗಳಲ್ಲಿ ಗೋಚರಿಸುವಂತಹದು ಎಂದು ಅದ್ವೈತ ವ್ಯಾಖ್ಯಾನಕಾರರು ಅರ್ಥೈಸುತ್ತಾರೆ. ಮತ್ತು ಮೂರೂ (ಅನಂತರದ ನಾಲ್ಕನೆಯದು ಕೂಡ) ಅವಸ್ಥೆಗಳ ಮೂಲದಲ್ಲಿರುವುದು ಒಂದೇ ಸತ್ಯ ಎನ್ನುತ್ತಾರೆ - ಚಿನ್ನದ ಕಡಗ, ಚಿನ್ನದ ಓಲೆ, ಚಿನ್ನದ ಡಾಬು ಎಂಬ ಮೂರೂ ವಸ್ತುಗಳ ಮೂಲದಲ್ಲಿ ಚಿನ್ನ ಎಂಬ ಒಂದೇ ವಸ್ತು ಇರುವಂತೆ.
ಮಧ್ವ ಭಾಷ್ಯದಲ್ಲಿ ಆರನೆಯ ಮಂತ್ರದ ನಂತರ ಬರುವ ಎಂಟು ಶ್ಲೋಕಗಳನ್ನು ಗೌಡಪಾದ ಕಾರಿಕೆಗಳೆಂದು ಹೇಳಿಲ್ಲ. ಈ ಶ್ಲೋಕಗಳ ಪೂರ್ವದಲ್ಲಿ ʼಅತ್ರ ಏತೇ ಶ್ಲೋಕಾಃ ಭವಂತಿʼ ಎಂದು ಸೂಚಿಸುವ ಮೂಲಕ ಉಪನಿಷತ್ತಿನ ಮುಖ್ಯ ಧಾರೆಯಿಂದ ಇವು ಸ್ವಲ್ಪ ಭಿನ್ನ ಎಂಬುದನ್ನು ಸೂಚಿಸಿದೆ. ಇವೂ ಕೂಡ ಬ್ರಹ್ಮದೃಷ್ಟವೇ ಆಗಿದ್ದು ಪ್ರಮಾಣಗಳೇ ಆಗಿವೆ ಎಂದು ಗರುಡ ಪುರಾಣವನ್ನು ಉಲ್ಲೇಖಿಸಿ ಮಧ್ವರು ತಿಳಿಸುತ್ತಾರೆ. ವಿಶ್ವ, ತೈಜಸ ಮತ್ತು ಪ್ರಾಜ್ಞ ಎಂಬಿವು ಒಬ್ಬನೇ ಪರಮಾತ್ಮನ ಮೂರು ಸ್ವರೂಪಗಳಾಗಿದ್ದು ಇವು ಬೇರೆ ಬೇರೆ ಅವಸ್ಥೆಗಳಲ್ಲಿ ಜೀವಿಯನ್ನು ಕ್ರಿಯಾಶೀಲನನ್ನಾಗಿಸುವುವು ಎಂಬುದು ಮಧ್ವರ ನಿರೂಪಣೆ.
ಇಲ್ಲಿ ಉಲ್ಲೇಖಿಸಿರುವ ಗೌಡಪಾದರ ಎಂಟು ಶ್ಲೋಕಗಳಲ್ಲಿ ಅಥವ ʼಏತೇ ಶ್ಲೋಕಾಃʼಗಳಲ್ಲಿ ಎರಡನೆಯದು ಮೂರು ಅವಸ್ಥೆಗಳಲ್ಲಿ ಪರಮಾತ್ಮನ (ಅದ್ವೈತದ ಪ್ರಕಾರ ಆತ್ಮನ) ಈ ಮೂರು ಸ್ವರೂಪಗಳು ಜೀವಿಯ ಯಾವ ಅಂಗದಲ್ಲಿ ಸ್ಥಿತವಾಗಿರುತ್ತವೆ ಎಂಬುದನ್ನು ತಿಳಿಸುತ್ತದೆ:
ದಕ್ಷಿಣಾಕ್ಷಿ ಮುಖೇ ವಿಶ್ವಃ ಮನಸ್ಯಂತಸ್ತು ತೈಜಸಃ.
ಆಕಾಶೇಚ ಹೃದಿ ಪ್ರಾಜ್ಞಃ ತ್ರಿಧಾ ದೇಹೇ ವ್ಯವಸ್ಥಿತಃ.
ಬಲಗಣ್ಣಿನ ಮುಂಭಾಗದಲ್ಲಿ ವಿಶ್ವ, ಮನಸಿನೊಳಗೆ ತೈಜಸ, ಹೃದಯಾಕಾಶದಲ್ಲಿ ಪ್ರಾಜ್ಞ - ಹೀಗೆ ಪರಮಾತ್ಮನ ಮೂರು ಸ್ವರೂಪಗಳಿಗೆ ಮೂರು ಸ್ಥಾನಗಳು. ಈ ಸ್ಥಾನ ನಿರೂಪಣೆ ಧ್ಯಾನಕ್ಕೆ ಉಪಯುಕ್ತವೆಂಬ ಅಭಿಪ್ರಾಯವಿದೆ.
ಮುಂದಿನ ಮೂರು ಶ್ಲೋಕಗಳಲ್ಲಿ ಈ ಮೂರು ಸ್ವರೂಪಗಳ ಮೂಲಕ ಆತ್ಮನು ಏನನ್ನು ಭೋಗಿಸುತ್ತಾನೆ, ಹೇಗೆ ತೃಪ್ತಿ ಪಡುತ್ತಾನೆ ಮತ್ತು ಅವನ ಸ್ಥಿತಿ ಹೇಗೆ ವ್ಯತ್ಯಾಸ ವಾಗದೆ ಉಳಿಯುತ್ತದೆ ಎಂಬ ವಿಷಯಗಳನ್ನು ಸ್ಪಷ್ಟ ಪಡಿಸುತ್ತಾನೆ. ವಿಶ್ವನು ಸ್ಥೂಲ ವಸ್ತುಗಳನ್ನಷ್ಟೆ ಭೋಗಿಸುತ್ತಾನೆ; ತೈಜಸನು ಸೂಕ್ಷ್ಮ ವಸ್ತುಗಳನ್ನು. ಪ್ರಾಜ್ಞನು ಆನಂದವನ್ನು ಮಾತ್ರ ಉಣ್ಣುತ್ತಾನೆ. ಆಯಾ ಸ್ವರೂಪದಲ್ಲಿ ಆಯಾ ಭಾಗಗಳಿಂದಲೇ ತೃಪ್ತಿ. ವಿಶ್ವನು ಸ್ಥೂಲ ವಸ್ತುಗಳಿಂದ ತೃಪ್ತನಾಗುತ್ತಾನೆ; ತೈಜಸನು ಸೂಕ್ಷ್ಮ ವಸ್ತುಗಳಿಂದ. ಪ್ರಾಜ್ಞನು ಆನಂದದಿಂದ ತೃಪ್ತನಾಗುತ್ತಾನೆ. ಹೀಗೆ ಬೇರೆಬೇರೆ ಸ್ವರೂಗಳಿಂದ ಆತ್ಮನು ಸ್ಥೂಲ, ಸೂಕ್ಷ್ಮ, ಆನಂದಗಳನ್ನು ಭೋಗಿಸಿದರೂ ಅವುಗಳ ಫಲದ ಅಂಟು ಆತ್ಮನಿಗಾಗುವುದಿಲ್ಲ.
ದ್ವೈತ ವ್ಯಾಖ್ಯಾನಕಾರರ ಪ್ರಕಾರ ಈ ಶ್ಲೋಕಗಳ ಅರ್ಥ ಭಿನ್ನವಾಗಿದೆ. ವಿಶ್ವನು ಸ್ಥೂಲ ವಸ್ತುಗಳ ಭೋಗವನ್ನು ಜೀವನಿಗೆ ಒದಗಿಸುತ್ತಾನೆ ಮತ್ತು ತೃಪ್ತನನ್ನಾಗಿಸುತ್ತಾನೆ. ತೈಜಸನು ಸೂಕ್ಷ್ಮ ವಸ್ತುಗಳ ಭೋಗವನ್ನು ಜೀವನಿಗೆ ಒದಗಿಸುತ್ತಾನೆ ಮತ್ತು ತೃಪ್ತನನ್ನಾಗಿಸುತ್ತಾನೆ. ಅದೇ ರೀತಿ ಪ್ರಾಜ್ಞನು ಆನಂದವನ್ನು. ಭೋಗಫಲಗಳ ಅಂಟು ಪರಮಾತ್ಮನಿಗಾಗುವುದಿಲ್ಲ.
ಇಲ್ಲಿಂದ ಮುಂದೆ ನಾಲ್ಕು ಶ್ಲೋಕಗಳು ಸೃಷ್ಟಿಯ ಬಗ್ಗೆ ಪ್ರಚಲಿತ ವಾದಗಳನ್ನು ಸಂಗ್ರಹಿಸುತ್ತವೆ. ಇವುಗಳಲ್ಲಿ ಮೊದಲನೆಯದು ಉಪನಿಷತ್ತು ಒಪ್ಪಿರುವ ಸೃಷ್ಟಿ ಸಿದ್ಧಾಂತ.
ಅದ್ವೈತ ವ್ಯಾಖ್ಯಾನಕಾರರು ಈ ಶ್ಲೋಕವು ಸೃಷ್ಟಿಗೆ ಕಾರ್ಯಕಾರಣ ಪ್ರಕ್ರಿಯೆಯನ್ನು ಸೂಚಿಸುತ್ತದೆ ಎಂದು ವಿವರಿಸುತ್ತಾರೆ. ಎಲ್ಲ ಪ್ರಾಣಿಗಳಿಗೆ ಅಸ್ತಿತ್ವ ವಿರುವುದು ನಿಶ್ಚಿತ. ಪ್ರಾಣನು ಎಲ್ಲವನ್ನೂ ಸೃಷ್ಟಿಸುತ್ತಾನೆ ಮತ್ತು ಪುರುಷನು ಚೇತನರನ್ನು ಸೃಷ್ಟಿಸುತ್ತಾನೆ. ಮಧ್ವ ಭಾಷ್ಯದ ಪ್ರಕಾರ ಇದಕ್ಕೆ "ಎಲ್ಲ ಭಾವಗಳ ಕ್ರಿಯಾಶೀಲಕ ವಿಷ್ಣುವೆ ಎಂಬುದು ನಿಶ್ಚಯ. ಹೀಗಲ್ಲದೆ ಅನ್ಯ ರೀತಿಯಲ್ಲಿ ಚಿಂತಿಸುವವರು ಅಜ್ಞಾನಿಗಳು. ನಾರಾಯಣನು ಅತ್ಯುಚ್ಚ ಸ್ಥಾನದಲ್ಲಿದ್ದು ಅವನ ಅಧೀನದಲ್ಲಿ ಪ್ರಾಣನು ಎಲ್ಲ ಜೀವಿಗಳ ಕ್ರಿಯಾಶೀಲ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾನೆ." ಎಂದರ್ಥ.
ಮುಂದಿನ ಮೂರು ಶ್ಲೋಕಗಳನ್ನು ಅರ್ಥೈಸುವಲ್ಲಿ ಎರಡು ಪರಂಪರೆಗಳಲ್ಲಿ ಅಷ್ಟಾಗಿ ವ್ಯತ್ಯಾಸ ವಿಲ್ಲ. ಇವುಗಳಲ್ಲಿ ಸೃಷ್ಟಿಯ ಬಗ್ಗೆ ಆರು ವಾದಗಳನ್ನು ಉಲ್ಲೇಖಿಸಿ ಅವುಗಳನ್ನು ನಿರರ್ಥಗೊಳಿಸಿ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ವಿವರಿಸಿದ್ದಾರೆ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಕಾಣಿಸಿಗೊಳ್ಳುತ್ತವೆ. ಉದಾಹರಣೆಗೆ ಪ್ರಸವವು(ಸೃಷ್ಟಿಯು) ವಿಭೂತಿ ಎಂಬ ಮೊದಲನೆಯ ವಾದ. ಅದ್ವೈತ ವ್ಯಾಖ್ಯಾನಕಾರರು ಪರಮಾತ್ಮನ ವೈಭವವೇ ಸೃಷ್ಟಿ ಎಂದು ಅರ್ಥೈಸುತ್ತಾರೆ; ದ್ವೈತ ವ್ಯಾಖ್ಯಾನಕಾರರು ಇರುವುದರ ಮಾರ್ಪಾಟೇ ಸೃಷ್ಟಿ ಎನ್ನುತ್ತಾರೆ. ಇರುವುದನ್ನು ಮಾರ್ಪಡಿಸುವುದೂ ಪರಮಾತ್ಮನ ಒಂದು ವೈಭವವಾಗಿರಬಹುದೆಂಬುದನ್ನು ಗಮನಿಸಬಹುದು.
ಎರಡನೆಯ ವಾದವು ಸೃಷ್ಟಿಯು ಸ್ವಪ್ನದಲ್ಲಾದಂತೆ ಎಂದು ಹೇಳುತ್ತದೆ. ಮೂರನೆಯ ವಾದವು ಪರಮಾತ್ಮನು ಹೀಗಾಗಲಿ ಎಂದು ಇಚ್ಛೆಪಟ್ಟದ್ದರಿಂದ ಮಾತ್ರವೇ ಈ ಸೃಷ್ಟಿಯೆಲ್ಲ ಉಂಟಾಯಿತು ಎಂದಿದೆ. ನಾಲ್ಕನೆಯ ಗುಂಪಿನವರು ಕಾಲಾನುಕ್ರಮದಲ್ಲಿ ಈ ಸೃಷ್ಟಿ ವಿಕಾಸಗೊಂಡುದು ಎಂದು ಅಭಿಪ್ರಾಯ ಪಡುತ್ತಾರೆ. ಪರಮಾತ್ಮನು ತಾನು ಸುಖಪಡುವುದಕ್ಕಾಗಿ ಈ ಪ್ರಪಂಚವನ್ನು ಸೃಷ್ಟಿಸಿದನೆಂದು ಬೇರೆ ಕೆಲವರು ಸೂಚಿಸುತ್ತಾರೆ. ತನಗೆ ಮುದಕೊಡುವ ಕ್ರೀಡೆಯಾಡಲು ಪರಮಾತ್ಮನು ಸೃಷ್ಟಿಸಿಕೊಂಡುದು ಎನ್ನುತ್ತಾರೆ ಮತ್ತೆ ಕೆಲರು. ಈ ವಾದಗಳ ಸಂಗ್ರಹವನ್ನು ಕೊನೆಗೊಳಿಸುತ್ತಾ ಉಪನಿಷತ್ತು ಹೇಳುತ್ತದೆ: 'ತನ್ನಲ್ಲಿ ತಾನು ತೃಪ್ತನಾದವಗೆ ಆಸೆ ಇನ್ನೆಲ್ಲಿಯದು? ಅವನ ಸ್ವಭಾವದಂತೆ ನಡೆಯುವುದು ಎಲ್ಲ.'
ಗ್ರಂಥದಲ್ಲಿ ವಸ್ತು ವಿಭಜನೆಯಲ್ಲಿ ಇಲ್ಲಿ ಒಂದು ಮುಖ್ಯ ವ್ಯತ್ಯಾಸ ಈ ಹಂತದಲ್ಲಿ ಕಂಡುಬರುತ್ತದೆ. ಅದ್ವೈತಪರ ಗ್ರಂಥಗಳಲ್ಲಿ ಇಡೀ ಉಪನಿಷತ್ತು ಮತ್ತು ಸಂಬಂಧಿಸಿದ ಗೌಡಪಾದ ಕಾರಿಕೆಗಳು ಒಂದು ಘಟಕವಾಗಿರುತ್ತವೆ. ಮಧ್ವ ಭಾಷ್ಯದಲ್ಲಿ ಇಲ್ಲಿಗೆ ಅಂದರೆ ಆರು ಮಂತ್ರಗಳನಂತರದ ಒಂಬತ್ತು ಶಲೋಕಗಳಿಗೆ ಪ್ರಥಮ ಅಧ್ಯಾಯ ಮುಕ್ತಾಯವಾಗುತ್ತದೆ. ಮುಂದಿನ ಮಂತ್ರದಿಂದ ಎರಡನೆಯ ಅಧ್ಯಾಯವು ಪ್ರಾರಂಭಗುತ್ತದೆ.
ಎರಡನೆಯ ಅಧ್ಯಾಯದಲ್ಲಿ ಇರುವುದು ಒಂದೇ ಮಂತ್ರ. ಉಪನಿಷತ್ತಿನ ಮುಖ್ಯಧಾರೆಯಲ್ಲಿಲ್ಲದ ಶ್ಲೋಕಗಳು ಮುಗಿದ ನಂತರ ಇದೇ ಮುಖ್ಯ ಧಾರೆಯ ಮಂತ್ರ. ಶ್ಲೋಕಗಳು ಮುಗಿದವು ಮುಖ್ಯಧಾರೆ ಮತ್ತೆ ಪ್ರಾರಂಭವಾಯಿತು ಎಂಬುದನ್ನು ತೋರಿಸಲೆಂದೇ ಹೊಸ ಅಧ್ಯಾಯವನ್ನು ಪ್ರಾರಂಬಿಸಲಾಗಿದೆ ಎನಿಸುತ್ತದೆ. ಈ ಮಂತ್ರವು ಅದ್ವೈತ ಪರ ಗ್ರಂಥಗಳಲ್ಲಿ ಏಳನೆಯದು. ಮಧ್ವ ಭಾಷ್ಯದಲ್ಲಿ ಹದಿನೈದನೆಯದು. ಈ ಮಂತ್ರವು ತುರೀಯವೆಂಬ ನಾಲ್ಕನೆಯ ಸ್ಥಿತಿಯನ್ನು ವರ್ಣಿಸುವಂತಹದು. ಮಂತ್ರವು ಹೀಗಿದೆ:
ನಾಂತಃಪ್ರಜ್ಞಂ ನಬಹಿಷ್ಪ್ರಜ್ಞಂ ನೋಭಯತಃ
ಪ್ರಜ್ಞಂ ನಪ್ರಜ್ಞಾನಘನಂ ನಪ್ರಜ್ಞಂ ನಾಪ್ರಜ್ಞಂ
ಅದೃಷ್ಟಮವ್ಯವಹಾರ್ಯಮಗ್ರಾಹ್ಯಮಲಕ್ಷಣಂ
ಅಚಿಂತ್ಯಮವ್ಯಪದೇಶ್ಯಮೇಕಾತ್ಮಪ್ರತ್ಯಯಸಾರಂ
ಪ್ರಪಂಚೋಪಶಮಂ ಶಾಂತಂ ಶಿವಮದ್ವೈತಂ
ಚತುರ್ಥಂ ಮನ್ಯಂತೇ ಸ ಆತ್ಮಾ ಸವಿಜ್ಞೇಯಃ
ಅದ್ವೈತ ಮತ್ತು ದ್ವೈತ ಪರ ವ್ಯಾಖ್ಯಾನಕಾರರಲ್ಲಿ ಈ ಮಂತ್ರವನ್ನು ಅರ್ಥೈಸುವಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಅಂತಃಪ್ರಜ್ಞ, ಬಹಿಷ್ಪ್ರಜ್ಞ ಇತ್ಯಾದಿ ಪದಗಳಿಗೆ ಎರಡೂ ಪರಂಪರೆಗಳಲ್ಲಿ ಇರುವ ಅರ್ಥವ್ಯತ್ಯಾಸದಿಂದ ಈ ವ್ಯತ್ಯಯಗಳು ಉದ್ಭವಿಸುತ್ತವೆ. ಅಂತಃಪ್ರಜ್ಞನಲ್ಲ, ಬಹಿಷ್ಪ್ರಜ್ಞನಲ್ಲ ಇತ್ಯಾದಿಯಾಗಿ ಅದ್ವೈತ ಪರರು ವ್ಯಾಖ್ಯಾನಿಸುತ್ತಾರೆ. ದ್ವೈತ ವ್ಯಾಖ್ಯಾನಕಾರರು ಈ ನಾಲ್ಕನೆಯ ಸ್ಥಿತಿಯ ನ್ನು ನಿಯಂತ್ರಿಸುವ ಪರಮಾತ್ಮ ಸ್ವರೂಪ, ಸ್ವಪ್ನದಲ್ಲಿ ಜಾಗೃತಾವಸ್ಥೆಯಲ್ಲಿ ಮತ್ತು ಸುಷುಪ್ತಿಯಲ್ಲಿ ಜೀವಿಯನ್ನು ಕ್ರಿಯಾಶೀಲ ಗೊಳಿಸುವ ಪರಮಾತ್ಮ ಸ್ವರೂಪಗಳಲ್ಲ ಎಂದು ಅರ್ಥ ಹೇಳುತ್ತಾರೆ. ಅದೃಷ್ಟಂ ಅವ್ಯವಹಾರ್ಯಂ ಅಗ್ರಾಹ್ಯಂ ಇತ್ಯಾದಿ ಪದಗಳಿಗೆ ಅದು ಅಜ್ಞಾನಿಗಳಗೆ ಕಾಣದು, ವ್ಯವಹರಿಸಲು ಸಿಗದು, ಗ್ರಹಿಸಲು ಸಾಧ್ಯವಾಗದ್ದು ಎಂಬುದು ದ್ವೈತಪರ ಅರ್ಥ. ಹೀಗೆ ಸ್ಪಷ್ಟವಾಗಿ ಹೇಳದಿದ್ದರೂ ಅದ್ವೈತ ಪರರು ಹೇಳುವ ಅರ್ಥವೂ ಇಲ್ಲಿಗೇ ಮುಟ್ಟುತ್ತದೆ. ಅದ್ವೈತಂ ಎಂಬುದಕ್ಕೆ ಆತ್ಮ ಪರಮಾತ್ಮ ಅಭೇದ ಎಂಬುಸು ಅದ್ವೈತಪರ ಅರ್ಥವಾದರೆ ದ್ವೈತಪರ ವ್ಯಾಖ್ಯಾನದಲ್ಲಿ ಅದೊಂದೇ. ಅದಕ್ಕೆ ಸಮನಾದುದು ಬೇರೊಂದಿಲ್ಲ ಎಂದು ಅರ್ಥ ಹೇಳುತ್ತಾರೆ.
ಇಲ್ಲಿಂದ ಮುಂದೆ ಒಂಬತ್ತು ಶ್ಲೋಕಗಳು ಅದ್ವೈತ ಪರಂಪರೆಯ ಪ್ರಕಾರ ಗೌಡ ಪಾದರ ಮಾಂಡೂಕ್ಯ ಕಾರಿಕಾದ ಶ್ಲೋಕಗಳು. ಮಾಧ್ವ ಪರಂಪರೆಯಲ್ಲಿ ಇವುಗಳನ್ನು ಉಪನಿಷತ್ತಿನ ಮುಖ್ಯ ಧಾರೆಗೆ ಸೇರದ ಆದರೆ ಉಪನಿಷತ್ತಿನ ಭಾಗವೇ ಅಗಿರುವ ʼಏತೇ ಶ್ಲೋಕʼಗಳು ಎಂಬಂತೆ ಪರಿಗಣಿಸುತ್ತಾರೆ.
ಅದ್ವೈತ ಪರಂಪರೆಯಲ್ಲಿ ಈ ಶ್ಲೋಕಗಳ ಅರ್ಥ ಈ ರೀತಿ ಇದೆ: ʼಬದಲಾಗದ ಎಲ್ಲದಕ್ಕಿಂತ ಶ್ರೇಷ್ಠವಾದ ಆ ಸ್ಥಾನದಲ್ಲಿ ಎಲ್ಲ ದುಃಖಗಳೂ ನಿವೃತ್ತವಾವಾಗುವುವು. ಇದು ಎಲ್ಲ ಇರುವಿಕೆಗಳಲ್ಲಿ ಶ್ರೇಷ್ಠವಾದುದಾಗಿದ್ದು ಇದಕ್ಕೆ ಎರಡನೆಯದು ಎಂಬಂತಹದು ಯಾವುದೂ ಇಲ್ಲ ಮತ್ತು ಇದಕ್ಕೆ ಸರ್ವವ್ಯಾಪಿಯಾದ ಸದಾ ಬೆಳಗುವ ತುರೀಯ ಸ್ಥಿತಿ ಎಂದು ಹೇಳುತ್ತಾರೆ.
ವಿಶ್ವ ಮತ್ತು ತೈಜಸ ಎಂಬ ರೂಪಗಳೆರಡೂ ಕಾರ್ಯ ಕಾರಣಗಳಿಂದ ಬದ್ಧವಾದುವುಗಳು. ಪ್ರಾಜ್ಞ ಎಂಬ ರೂಪವು ಕಾರ್ಯದಿಂದ ಬಾಧಿತವಲ್ಲ ಆದರೆ ಕಾರಣದಿಂದ ಬಾಧಿತ. ತುರೀಯವಾದರೋ ಈ ಎರಡರಿಂದಲೂ ಸ್ವತಂತ್ರ.
ಸುಷುಪ್ತಸ್ಥಾನದ ಸ್ವರೂಪನಾದ ಪ್ರಾಜ್ಞನು ಸತ್ಯ ಅಥವ ಅಸತ್ಯ ಅಥವ ಆತ್ಮ ಅಥವ ಆತ್ಮನಲ್ಲದ ಇತರ ಎಂಬ ಯಾವ ತಿಳಿವೂ ಇಲ್ಲದವನು. ಆದರೆ ತುರೀಯವೆಂಬುದು ಎಲ್ಲವನ್ನೂ ತಿಳಿದ ಎಲ್ಲವನ್ನೂ ಸ್ಪಷ್ಟವಾಗಿ ನೋಡಬಲ್ಲ ಆ ಸ್ಥಿತಿ.
ಪ್ರಾಜ್ಞ ಮತ್ತು ತುರೀಯ ಈ ಎರಡು ಸ್ಥಿತಿಗಳಲ್ಲಿ ದ್ವಂದ್ವಗಳ ಅಸ್ತಿತ್ವವನ್ನು ಗುರುತಿಸುವುದು ಸಮಾನ ಗುಣ. ಗಾಢ ನಿದ್ರಾವಸ್ಥಿತನು ಕಾರಣರೂಪಿಯಾಗಿರುವನು. ತುರೀಯನು ನಿದ್ರೆ ಅಥವ ಕಾರಣಗಳಿಂದ ಅಬಾಧಿತನು.
ಾದವೈತ ಸಂಪ್ರದಾಯದಲ್ಲಿ ಈ ಶ್ಲೋಕಗಳ ಅರ್ಥ ಹೀಗಿಗೆ: ವಿಶ್ವ ಮತ್ತು ತೈಜಸ ಎಂಬ ಮೊದಲಿನೆರಡು ಸ್ರೂಪಗಳು ಸ್ವಪ್ನ ಮತ್ತು ನಿದ್ರೆಗಳ ಜೊತೆ ಸಂಬಂಧ ಇರುವುವು; ಪ್ರಾಜ್ಞನಾದರೋ ಸ್ವಪ್ನವಿರದ ನಿದ್ರಾ ಸ್ಥಿತಿ; ತುರೀಯದಲ್ಲಿ ಸ್ವಪ್ನವನ್ನಾಗಲೀ, ನಿದ್ರೆಯನ್ನಾಗಲೀ ನಿಶ್ಚಯವಾಗಿ ನೋಡುವುದಿಲ್ಲ.
ಸ್ವಪ್ನವೆಂಬುದು ಸತ್ಯದ ತಪ್ಪು ಗ್ರಹಿಕೆ; ನಿದ್ರೆಯೆಂಬುದು ಸತ್ಯವನ್ನು ಗ್ರಹಿಸಲಾಗದಿರುವ ಸ್ಥಿತಿ. ಈ ಎರಡು ಸ್ಥಿತಿಗಳಲ್ಲಿ ಉಂಟಾಗುವ ವಿಪರ್ಯಾಸ ಜ್ಞಾನ ಕಳೆದರೆ ತುರೀಯ ಸ್ಥಿತಿ ಉಂಟಾಗುವುದು.
ಆದಿರಹಿತವಾದ ಮಾಯೆಯ ಪ್ರಭಾವಕ್ಕೊಳಗಾಗಿ ನಿದ್ರಾವಸ್ಥೆಯಲ್ಲಿರುವ ಜೀವಾತ್ಮನು ಎಚ್ಚರಗೊಂಡಾಗ ತಾನು ಜನ್ಮರಹಿತ, ಸ್ವಪ್ನ ಗಾಢನಿದ್ರೆಗಳಿಗೆ ಹೊರತಾದ, ಯಾವುದೇ ದ್ವಂದ್ವವಿಲ್ಲದ ಆತ್ಮನೆಂದು ತಿಳಿಯುತ್ತಾನೆ,
ಈ ಬಹುರೂಪಗಳು ನಿಜವಾಗಿಯೂ ಇರುತ್ತಿದ್ದರೆ ಒಂದಲ್ಲ ಒಂದು ಕಾಲದಲ್ಲಿ ಅವು ನಿಸ್ಸಂಶಯವಾಗಿ ಇಲ್ಲವಾಗುತ್ತಿದ್ದವು. ಈ ಬಹುರೂಪಗಳೆಲ್ಲ ಕೇವಲ ಭ್ರಾಮಕವಾದುವು; ಶ್ರೇಷ್ಠವಾದ ಸತ್ಯವೆಂದರೆ ಅದ್ವೈತವೊಂದೇ.
ಯಾರೋ ಒಬ್ಬರಿಂದ ಇವೆಲ್ಲವೂ ಕಲ್ಪಿತವಾದುವುಗಳಾದರೆ ಈ ವೈವಿಧ್ಯವು ಕಾಣೆಯಾಗ ಬೇಕಾದುದು ಸಹಜ. ತಿಳಿದವರ ಉಪದೇಶದಿಂದ ಈ ವಾದದ ಸತ್ಯವನ್ನು ಗ್ರಹಿಸಿದಾಗ ಎಲ್ಲಿಯೂ ಎರಡಿಲ್ಲದಿರುವುದು ಗೊತ್ತಾಗುತ್ತದೆ.
ಈ ಶ್ಲೋಕಗಳೊಂದಿಗೆ ಗೌಡಪಾದ ಕಾರಿಕೆಗಳ ಪ್ರಥಮ ಕಂತು ಮುಕ್ತಾಯವಾಗುತ್ತದೆ. ಉಪನಿಷತ್ತಿನ ಮುಂದಿನ ಮಂತ್ರ ಮತ್ತದರ ವಿವರಣೆಗೆ ಪ್ರವೃತ್ತಿಸಲಾಗುತ್ತದೆ.
ದ್ವೈತ ಪರಂಪರೆಯಲ್ಲಿ ಇವುಗಳ ಅರ್ಥವನ್ನು ಹೀಗೆ ಹೇಳುತ್ತಾರೆ: ಜೀವಿಯ ದುಃಖಗಳೆಲ್ಲ ನಾಶವಾಗಲು ಆ ಬದಲಾಗದ ಸರ್ವಶ್ರೇಷ್ಠನ ದರ್ಶನವಾಗುವುದು.ಅವನಂತೆ ಇನ್ನೊಬ್ಬನಿಲ್ಲದವನು ಅವ, ಸರ್ವ ವ್ಯಾಪ್ತ ಸ್ವಾಮಿ ಅವ. ಅವಗೆ ತುರೀಯ ವೆಂಬುದು ಹೆಸರು.
ಜೀವಾತ್ಮರ ಅಜ್ಞಾನ ಕಾರ್ಯಗಳಿಗೆ ಎರಡು ವಿಧವಾದ ಬಂಧನಗಳಿವೆ - ಒಂದು ಕಾರ್ಯಬಂಧನ ಮತ್ತು ಇನ್ನೊಂದು ಕಾರಣ ಬಂಧನ. ವಿಶ್ವ ಮತ್ತು ತೈಜಸರು ಈ ಎರಡು ಬಂಧನಗಳ ನಿಯಾಮಕರು. “ತುರೀಯವೆಂಬುದು ಮಾತ್ರ ಭ್ರಮೆ ಮತ್ತು ಅದಕ್ಕೆ ಕಾರಣವಾದ ಅವಿದ್ಯೆ ಇವೆರಡರ ಬಂಧನಕ್ಕಾಗಲೀ, ಕೇವಲ ಅವಿದ್ಯೆಯ ಬಂಧನಕ್ಕಾಗಲೀ ನಿಯಾಮಕನಲ್ಲ”(ರಾಘವೇಂದ್ರ ತೀರ್ಥರು).
ಪ್ರಾಜ್ಞನು ಜೀವಾತ್ಮನ ಅಥವ ಅದಕ್ಕಿಂತ ಬೇರೆಯಾದ ಪ್ರಕೃತಿಯ, ಅಥವ ಇರುವಿಕೆಯ ಅಥವ ಇಲ್ಲದಿರುವಿಕೆಯ ಜ್ಞಾನವನ್ನು ಕಡುವುದಿಲ್ಲ; ತುರೀಯ ಮಾತ್ರ ಸದಾ ಬೆಳಗುವವನಾಗಿದ್ದು ಈ ರೀತಿಯ ಜ್ಞಾನಕ್ಕೆ ಕಾರಣನಾಗುತ್ತಾನೆ.
ಸೇಷ್ಟಿಕರ್ತ ಮತ್ತು ಸೃಷ್ಟಿಯ ನಡುವೆ ಭೇದವನ್ನು ಗ್ರಹಿಸದಿರುವಿಕೆ ಪ್ರಾಜ್ಞ ತುರೀಯ ಎರಡೂ ಸ್ಥಿತಿಗಳಲ್ಲೂ ಸಾಮಾನ್ಯ; ಆದರೆ ಗಾಢ ನಿದ್ರೆಯನ್ನು ಪ್ರಾಜ್ಞನು ನೀಡುತ್ತಿದ್ದು ತುರೀಯದಲ್ಲಿ ಈ ಸ್ಥಿತಿಗೆ ಅವಕಾಶವಿರುವುದಿಲ್ಲ.
ಅನಾದಿಯಾದ ಮಾಯೆಯ ವಶವರ್ತಿಯಾಗಿ ನಿದ್ರಿಸುತ್ತಿರುವ ಜೀವನಿಗೆ ಜ್ಞಾನೋದಯವಾದಾಗ ಆಗ ಅವನಿಗೆ ಆ ಪರಮನ ತಿಳಿವು ಉಂಟಾಗುತ್ತದೆ; ಆ ಪರಮನು ಹುಟ್ಟಿರದವ, ಸರ್ವ ಶ್ರೇಷ್ಠ, ಅವನಂತೆ ಇನ್ನೊಬ್ಬನಿಲ್ಲದವ, ತನ್ನನ್ನೂ ಸ್ಫೂರ್ತಗೊಳಿಸುವವ, ಎಂದಗೂ ಸ್ವಪ್ನಾದಿಗಳಲ್ಲಿ ತೊಡಗದವ.
ನಾನು ನನ್ನದೆಂದು ಇರುವ ಭಾವವು ಪರಮನ ಸಾಕ್ಷಾತ್ಕಾರದಿಂದ ನಿಸ್ಸಂಶಯವಾಗಿ ನಾಶವಾಗುವುದು. ನಾನು ನನ್ನದು ಸುಖ-ದುಃಖ ಇತ್ಯಾದಿ ದ್ವಂದ್ವಗಳು ಮಾಯಾಮಾತ್ರಗಳು ಅಥವ ಭ್ರಾಮಕವಾದುವು. ಪರಮಾರ್ಥವು ಈ ತರಹದ ದ್ವಂದ್ವಗಳಿಲ್ಲದ್ದು ಅಥವ ಅದ್ವೈತ.
ಅನುಚಿತ ಜ್ಞಾನವೇನಾದರೂ ಇದ್ದರೆ ಅದು ಯಾರ ಕಲ್ಪನೆಯೇ ಆಗಿರಲಿ ಅದು ಕಾಣೆಯಾಗ ಬೇಕಾದುದು ಸಹಜ. ತಿಳಿದವರ ಉಪದೇಶದಿಂದ ಇದು ಸಾಧ್ಯ ಮತ್ತು ಉಪದೇಶಾದಿಗಳಿಂದ ಸತ್ಯವನ್ನು ಗ್ರಹಿಸಿದಾಗ ಎಲ್ಲಿಯೂ ದ್ವಂದ್ವಗಳಿಲ್ಲದಿರುವುದು ಗೊತ್ತಾಗುತ್ತದೆ.
ಹೀಗೆ ಮಧ್ವ ಭಾಷ್ಯದಲ್ಲಿ ಉಪನಿಷತ್ತಿನ ಎರಡನೆಯ ಅಧ್ಯಾಯವು ಮುಕ್ತಾಯವಾಗುತ್ತದೆ.
ತುರೀಯ ಸ್ಥಿತಿಗೆ ಸಂಬಂಧಿಸಿದ ಮಂತ್ರ ಮತ್ತು ಅದರ ವಿವರಣಾರೂಪವಾದ ʼಏತೇಶ್ಲೋಕಾಃʼ ಇವಿಷ್ಟು ಮುಂದಿನ ಅಧ್ಯಾಯದ ಅಂದರ ಮೂರನೆಯ ಅಧ್ಯಾಯದ ವಸ್ತು. ʼಏತೇ ಶ್ಲೋಕಾಃʼ ಮುಗಿದ ತತ್ಕ್ಷಣ ಅಧ್ಯಾಯವೂ ಮುಗಿದಿರುವುದನ್ನು ಗಮನಿಸಬೇಕು. ಉಪನಿಷತ್ತಿನ ಮುಖ್ಯ ಧಾರೆಯ ಮಂತ್ರವು ಮೊದಲು ಬರುತ್ತದೆ. ಅನಂತರ ವಿವರಣಾರೂಪವಾದ ʼಏತೇ ಶ್ಲೋಕಾಃʼ ಬರುತ್ತವೆ.
ಮುಖ್ಯಧಾರೆಯ ಮುಂದಿನ ಮಂತ್ರಕ್ಕೆ ಪ್ರವರ್ತಿಸಬೇಕಾಗಿದೆ. ಈಗ ಉಪಧಾರೆಯ ʼಏತೇ ಶ್ಲೋಕಾಃʼದ ಒಂದು ಭಾಗ ಮುಕ್ತಾಯವಾದುದನ್ನು ತಿಳಿಸಲು ಎರಡನೆಯ ಅಧ್ಯಾಯದ ಮುಕ್ತಾಯ ಅನಿವಾರ್ಯ. ಹಾಗೆ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯುತ್ತದೆ. ಮಧ್ವ ಭಾಷ್ಯದ ಪ್ರಕಾರ ಮುಂದಿನ ಮಂತ್ರದಿಂದ ಮುಂದಿನ ಅಧ್ಯಾಯದ ಪ್ರಾರಂಭವಾಗುತ್ತದೆ.
ಮುಂದಿನ ಮಂತ್ರವು ಹೀಗಿದೆ:
ಸೋಯಮತ್ಮಾ ಅಧ್ಯಕ್ಷರಂ ಓಂಕಾರೋಧಿಮಾತ್ರಂ
ಪಾದಾ ಮಾತ್ರಾ ಮಾತ್ರಾಶ್ಚ ಪಾದಾ
ಅಕಾರ ಉಕಾರ ಮಕಾರ ಇತಿ
ಜಾಗರಿತಸ್ಥಾನೋ ವೈಶ್ವಾನರೋಕಾರಃ
ಪ್ರಥಮಾ ಮಾತ್ರಾಪ್ತೇರಾದಿಮತ್ವಾದ್ವಾಪ್ನೋತಿ
ಹವೈ ಸರ್ವಾನ್ ಕಾಮಾನಾದಿಶ್ಚ
ಭವತಿ ಯಯೇವಂ ವೇದ
ಅದ್ವೈತ ರೀತ್ಯಾ ಇವುಗಳನ್ನು ಹೀಗೆ ಅರ್ಥೈಸುತ್ತಾರೆ: ಆ ಆತ್ಮನೇ ಓಂಕಾರದಿಂದ ಪ್ರತಿನಿಧಿಸಲ್ಪಡುತ್ತದೆ. ಓಂಕಾರವು ನಾಲ್ಕು ಭಾಗಗಳಿಂದಾಗಿದೆ. ಪ್ರತಿಯೊಂದು ಅಕ್ಷರವೂ ಕಾಲು ಭಾಗ (ಒಂದು ಪಾದ) ಮತ್ತು ಪ್ರತಿಯೊಂದು ಕಾಲು ಭಾಗವೂ (ಪಾದವೂ) ಒಂದಕ್ಷರ. ಅ ಉ ಮ (ಮತ್ತು ಮುಂದಿನ ಮೌನ) ಇವೇ ನಾಲ್ಕು ಭಾಗಗಳು.
ಜಾಗರಿತ ಸ್ಥಾನಿಯಾದ ವೈಶ್ವಾನರನು ಅಕಾರ. ಅದು ಪ್ರಥಮ ಭಾಗ. ಜಾಗರಿತ ಅವಸ್ಥೆಯು ಸರ್ವ ವ್ಯಾಪ್ತ ಮತ್ತು ಪ್ರಥಮವಾಗಿ ಕಾಣುವಂತಹುದು. [ಅಕಾರವೂ ಹಾಗೆ ಪ್ರಥಮಧ್ವನಿ ಮತ್ತು ಎಲ್ಲ ಕಡೆ ಇರುವಂತಹುದು]. ಇದನ್ನು ತಿಳಿದವನು ತನ್ನೆಲ್ಲ ಆಸೆಗಳನ್ನು ಪೂರೈಸಿಕೊಂಡು ಎಲ್ಲದರಲ್ಲೂ ಮೊದಲಿಗನಾಗುತ್ತನೆ.
ಮಾಧ್ವ ಪರಂಪರೆಯ ಪ್ರಕಾರ ಇದರ ಅರ್ಥ ಸ್ವಲ್ಪ ಭಿನ್ನವಾಗಿದೆ: ಈ ಬ್ರಹ್ಮನೇ (ಶ್ರೀ ವಿಷ್ಣುವೇ) ಓಂಕಾರದಿಂದ ಪ್ರತಿನಿಧಿಸಲ್ಪಡುತ್ತಾನೆ. ಅದು ಮಹಾ ಅಕ್ಷರ (ಅಂದರೆ ಎಲ್ಲಕ್ಕಿಂತ ಹೆಚ್ಚು) ಮತ್ತು ನಾಲ್ಕು ಭಾಗಗಳಿಂದ ಆಗಿದೆ. ಮೊದಲನೆಯದಾದ ಅಕಾರವು ವೈಶ್ವಾನರಸ್ವರೂಪಿ. ಇದು ಮೊದಲನೆಯ ಮಾತ್ರೆ ಮತ್ತು ಮೊದಲನೆಯ ಕಾಲು ಭಾಗ. ಈ ಸ್ವರೂಪದಲ್ಲಿ ವಿಷ್ಣುವು [ಜೀವನ] ಎಲ್ಲ ಆಸೆಗಳನ್ನೂ ಪೂರೈಸುತ್ತಾನೆ. ಹೀಗೆಂದು ತಿಳಿಯ ಬೇಕು.
ಇದರ ಮುಂದಿ ಮಂತ್ರವು ಹೀಗಿದೆ:
ಸ್ವಪ್ನಸ್ಥಾನಸ್ತೈಜಸ
ಉಕಾರೋ ದ್ವಿತೀಯಾ ಮಾತ್ತ್ರೋತ್ಕರ್ಷಾದುಭಯತ್ವಾದ್ವೋತ್ಕರ್ಷತಿ ಹ ವೈ
ಜ್ಞಾನಸಂತತಿಂ ಸಮಾನಶ್ಚ ಭವತಿ
ನಾಸ್ಯಬ್ರಹ್ಮವಿದ್ ಕುಲೇ ಭವತಿ ಯ ಏವಂ ವೇದ
ಅದ್ವೈತ ವ್ಯಾಖ್ಯಾನಕಾರರು ಸ್ವಪ್ನಾವಸ್ಥೆಯ ತೈಜಸನು ಎರಡನೆಯ ಮಾತ್ರೆಯಾದ ಉಕಾರದಿಂದ ಪ್ರತಿನಿಧಿಸಲ್ಪಡುತ್ತಾನೆ ಎಂದು ವಿವರಿಸುತ್ತಾರೆ. ಶ್ರೇಷ್ಠತೆಯ ದೃಷ್ಟಿಯಿಂದ ಅಥವ ಅಕಾರ ಮಕಾರಗಳ ಮಧ್ಯಸ್ಥ ಅಕ್ಷರವಾಗಿರುವುದರಿಂದ ಜಾಗೃತ ಮತ್ತು ಗಾಢ ನಿದ್ರಾವಸ್ಥೆಯ ನಡುವೆ ಇರುವ ಸ್ವಪ್ನಾವಸ್ಥೆಯನ್ನು ಇದು ಪ್ರತಿನಿಧಿಸುವುದು ಸಹಜವಾಗಿದೆ. ಇದನ್ನು ತಿಳಿದವನು ಉತ್ತಮ ಜ್ಞಾನವನ್ನು ಪಡೆಯುತ್ತಾನೆ, ಎಲ್ಲರಿಂದಲೂ ಸಮಾನ ಗೌರವವನ್ನು ಪಡೆಯುತ್ತಾನೆ. ಅವನ ವಂಶಸ್ಥರಲ್ಲಾರೂ ಬ್ರಹ್ಮ ಜ್ಞಾನಿಯಲ್ಲದವನು ಇರುವುದಿಲ್ಲ.
ಮಾಧ್ವ ವ್ಯಾಖ್ಯಾನಕಾರರ ಪ್ರಕಾರ ಸ್ವಪ್ನಸ್ಥಾನ ನಿಯಾಮಕನಾದ ತೈಜಸನನ್ನು ಉಕಾರವು ಪ್ರತಿನಿಧಿಸುತ್ತದೆ. ಶ್ರೇಷ್ಠತೆಯಿಂದಾಗಿ ಅಥವ [ತೈಜಸನಿಂದಾಗಿ ಜೀವನು] ಜ್ಞಾನ ವನ್ನು ಹೊಂದುವುದು ಮತ್ತು ಎಲ್ಲೆಡೆ ಸಮಾನ ಗೌರವ ಪಡೆಯುವುದು ಈ ಎರಡೂ ಇರುವುದರಿಂದಾಗಿ ತೈಜಸ ಮತ್ತು ಉಕಾರಗಳ ಅನನ್ಯತೆಯು ಸ್ವಾಭಾವಿಕ. ಅಂತಹವನ ವಂಶದಲ್ಲಿ ಬ್ರಹ್ಮಜ್ಞಾನವಿಲ್ಲದವನಾರೂ ಹುಟ್ಟುವುದಿಲ್ಲ, ಹೀಗೆಂದು ತಿಳಿಯ ಬೇಕು.
ಸುಷುಪ್ತಸ್ಥಾನಃ ಮಕಾರಸ್ತೃತೀಯಾ ಮಾತ್ರಾ
ಮಿತೇರಪೀತೇರ್ವಾ ಮಿನೋತಿ ಹ ವಾ
ಇದಂ ಸರ್ವಮಪೀತಿಶ್ಚ ಭವತಿ
ಯ ಏವಂ ವೇದ
ಅದ್ವೈತ ಪರಂಪರೆಯಲ್ಲಿ ಈ ಮಂತ್ರಕ್ಕೆ ಹೀಗೆ ಅರ್ಥ ಹೇಳುತ್ತಾರೆ: ಸುಷುಪ್ತಾವಸ್ಥೆಯ ಪ್ರಾಜ್ಞನನ್ನು ಮಕಾರ ಪ್ರತಿನಿಧಿಸುತ್ತದೆ. ಅ ಉ ಮ ಗಳಲ್ಲಿ ಮಕಾರವು ಮೂರನೆಯ ಮಾತ್ರೆ ಮತ್ತು ಅದು ಕೊನೆಯದು ; ಜಾಗರಿತ ಸ್ವಪ್ನ ಮತ್ತು ಸುಷುಪ್ತಿಗಳಲ್ಲಿ ಸುಷುಪ್ತಿ ಕೊನೆಯದು. ಅಲ್ಲದೆ ಮಕಾರವು ಅದರ ಮುಂದಿನ ಮೌನದೊಂದಿಗೆ ಸೇರಿಕೊಂಡಿರುತ್ತದೆ, ಹಾಗೆಯೇ ಸುಷುಪ್ತಿಯು ಅದರ ಮುಂದಿನ ತುರೀಯ ಸ್ಥತಿಗೆ ದಾರಿಮಾಡಿ ಕೊಡುತ್ತದೆ. ಮಕಾರ ಮತ್ತು ಗಾಢ ನಿದ್ರಾ ಸ್ಥತಿಯ ಈ ಅನನ್ಯತೆಯನ್ನು ಅರಿತವನು ಈ ಎಲ್ಲವನ್ನೂ ಮತ್ತು ಪ್ರಪಂಚಕ್ಕೆ ತಾನು ಕಾರಣನೆಂಬುದನ್ನೂ ತಿಳಿಯುತ್ತಾನೆ. ಹೀಗೆಂದು ತಿಳಿಯಬೇಕು.
ದ್ವೈತ ಪರಂಪರಯಲ್ಲಿ: “ಪ್ರಾಜ್ಞನು ಮಕಾರ ವಾಚ್ಯನಾಗಲು ಉಪನಿಷತ್ತು ಹೇಳಿದ ನಿಮಿತ್ತಗಳಲ್ಲಿ ಒಂದು ಮಿತಿ. ಅಂದರೆ ಜೀವನನ್ನು ಆಲಂಗಿಸಿ ತನ್ನೊಳಗೆ ಸೇರಿಸಿಕೊಳ್ಳುವುದು.. ಪ್ರಾಜ್ಞನು ಅಜ್ಞಾನಾವೃತನಾದ ಜೀವನನ್ನು ತ್ನನ್ನೊಳಗೆ ಸೇರಿಸಿಕೊಳ್ಳುನು. ಅಲ್ಲದೆ ಜೀವನ ಬಾಹ್ಯ ಪದಾರ್ಥ ಜ್ಞಾನವನ್ನು ಲಯಗೊಳಿಸುವನು.. ಬಾಹ್ಯ ಜ್ಞಾನವನ್ನು ನಾಶಪಡಿಸುವುದರಿಂದ ಅಪೀತಿ ಎಂದು ಕರೆಯಲ್ಪಟ್ಟಿರುವನು”(ರಾಘವೇಂದ್ರ ತೀರ್ಥರು).
ಈ ಮಂತ್ರದ ನಂತರ ಐದು ಶ್ಲೋಕಗಳು ಬರುತ್ತವೆ. ಇವುಗಳನ್ನು ಅದ್ವೈತ ಪರಂಪರೆಯಲ್ಲಿ ಈ ಹಿಂದಿನಂತೆ ಗೌಡಪಾದ ಕಾರಿಕೆಗಳೆಂದೂ ದ್ವೈತ ಪರಂಪರೆಯಲ್ಲಿ ಉಪನಿಷತ್ತಿನ ಮುಖ್ಯ ಧಾರೆಗೆ ಸೇರದ ʼಏತೇ ಶ್ಲೋಕಾಃʼ ಎಂದೂ ಕರೆದಿದ್ದಾರೆ.
ಅದ್ವೈತ ಪರಂಪರೆಯಲ್ಲಿ ಈ ಶ್ಲೋಕಗಳ ಅರ್ಥ ಹೀಗಿದೆ: “ ವಿಶ್ವನನ್ನು ಅಕಾರದೊಂದಿಗೆ ಸಮೀಕರಿಸುವಾಗ ಎರಡೂ ಮೊದಲಿಗರಾಗಿರುವುದು ಮತ್ತು ಎರಡೂ ವ್ಯಾಪ್ತವಾಗಿರುವುದು ಈ ಸಮಾನ ಗುಣಗಳನ್ನು ಪರಿಗಣಿಸಿದೆ.
ತೈಜಸನನ್ನು ಉಕಾರದೊಂದಿಗೆ ಸಮೀಕರಿಸಿದಾಗ ಎರಡೂ ಮಧ್ಯಸ್ಥವಾಗಿರುವುದು ಮತ್ತು ಎರಡೂ ಶ್ರೇಷ್ಠವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಪ್ರಾಜ್ಞ ಮತ್ತು ಮಕಾರಗಳ ಸಮೀಕರಣವು ಅವೆರಡೂ ಮಾನಕಗಳಾಗಿರುವುದು ಮತ್ತು ಎರಡೂ ಕೊನೆಯವಾಗಿರುವುದು (ಲಯ) ಇವುಗಳಿಂದ ಸ್ಪಷ್ಟ.
ಮೂರು ಅವಸ್ಥೆಗಳಲ್ಲಿ (ಅಕಾರ, ಉಕಾರ, ಮಕಾರಗಳಿಗೆ) ಇರುವ ಸಮಾನ ಗುಣಗಳನ್ನು ನಿಶ್ಚಿತವಾಗಿ ತಿಳಿದವನು ಸರ್ವ ಪ್ರಾಣಿಗಳಿಗೆ ಪೂಜ್ಯನೂ ಸರ್ವರಿಂದ ಪೂಜಿಸಲ್ಪಡುವ ಮಹಾಮುನಿಯೂ ಆಗುತ್ತಾನೆ.
ಅಕಾರವು ವಿಶ್ವನನ್ನು, ಉಕಾರವು ತೈಜಸನನ್ನು ಮತ್ತು ಮಕಾರವು ಪ್ರಾಜ್ಞನನ್ನು (ಮನಸ್ಸಿಗೆ) ತರುತ್ತವೆ, ಯಾವುದೇ ಮಾತ್ರೆಯ ಸರಿಯುಚ್ಚಾರವಿಲ್ಲದಿರೆ ಯಾವ ಸಾಧನೆಯೂ ಆಗುವುದಿಲ್ಲ.”
ದ್ವೈತ ಪರಂಪರೆಯಲ್ಲಿಇವುಗಳನ್ನು ಹೀಗೆ ಅರ್ಥೈಸುತ್ತಾರೆ: ವಿಶ್ವನನ್ನು ಅಕಾರದೊಟ್ಟಿಗೆ ಧ್ಯಾನಿಸಿದಾಗ ಅಕಾರದಂತೆ ವಿಶ್ವನ ಶ್ರೇಷ್ಠತೆ ಪ್ರಕಟವಾಗುತ್ತದೆ. ಮಾತ್ರೆಯ(ಅಕ್ಷರದ) ಸಂಸರ್ಗದಿಂದ ವಿಶ್ವನ ವ್ಯಾಪ್ತತ್ವವು ಅನುಭವಕ್ಕೆ ಬರುತ್ತದೆ. ಅಂದರೆ ವಿಶ್ವನಂತೆ ತನಗೂ ಎಲ್ಲ ವಸ್ತುಗಳ ಪ್ರಾಪ್ತಿಯಾಗುತ್ತದೆ.
ಪ್ರಣವದ ಎರಡನೆಯ ಅಕ್ಷರವಾದ ಉಕಾರವು ಪರಮಾತ್ಮನ ತೈಜಸರೂಪವನ್ನು ಪ್ರತಿಪಾದಿಸುತ್ತಿದೆ ಎಂದು ಧ್ಯಾನಿಸಿದಾಗ ಉತ್ಕೃಷ್ಟವಾದ ಜ್ಞಾನವು ಲಭ್ಯವಾಗುತ್ತದೆ. ಈ ಎರಡನೆಯ ಅಕ್ಷರ ಧ್ಯಾನದಿಂದ ಬಾಹ್ಯೇಂದ್ರಿಯಗಳ ವಿಶ್ರಾಂತಿ ರೂಪವಾದ ನಿದ್ರೆ ಮತ್ತು ʼಸ್ವರೂಪೇಂದ್ರಿಯದಿಂದ ವಿಷಯಾನುಭವʼ ಎರಡನ್ನೂ ಹೊಂದುವನು.
ಓಂಕಾರದ ಮೂರನೆಯ ಮಾತ್ರೆಯಾದ ಮಕಾರವು ಪ್ರಾಜ್ಞನನ್ನು ಪ್ರತಿನಿಧಿಸುತ್ತದೆ. ಮಕಾರವು ಕೊನೆಯ ಅಕ್ಷರ. ಹಾಗೆಯೇ ವಿಶ್ವ, ತೈಜಸ ಮತ್ತು ಪ್ರಾಜ್ಞ - ಇವರಲ್ಲಿ ಪ್ರಾಜ್ಞನು ಕೊನೆಯವನು. ಹೀಗೆ ಇವರಿಬ್ಬರ ಅನನ್ಯತೆಯು ಪೂರ್ಣ. ಹೀಗೆ ತಿಳಿದು ಈ ಅಕ್ಷರವನ್ನು ಕುರಿತು ಧ್ಯಾನಿಸಿದಾಗ ಸ್ವನಿಯಂತ್ರಣದ ಅನುಭವವು ಉಂಟಾಗುವುದು ತನ್ನ ಜ್ಞಾನದಲ್ಲಿ ಎಲ್ಲವನ್ನೂ ಒಳಗೊಳಿಸಿಕೊಳ್ಳುವ ಸಾಮರ್ಥ್ಯ ಉಂಟಾಗುವುದು.
ಓಂಕಾರದ ಮೂರು ಅಂಶಗಳು ಮತ್ತು ಸಂವಾದಿಯಾದ ಪರಮಾತ್ಮನ ಮೂರು ಸ್ವರೂಪಗಳ ನಡುವಣ ಹೋಲಿಕೆಗಳನ್ನೂ ಸಮಾನಾಂಶಗಳನ್ನು ತಿಳಿದುಕೊಂಡವನು ಎಲ್ಲ ಜೀವಿಗಳ ಗೌರವಕ್ಕೆ ಪಾತ್ರನು ಮತ್ತು ಮಹಾ ಋಷಿಗಳಿಂದ ವಂದ್ಯನೂ ಆಗುತ್ತಾನೆ.
ಅಕಾರ ಸ್ವರೂಪವು ಜಾಗೃತ ಲೋಕಕ್ಕೆ ರಹದಾರಿ; ಉಕಾರ ಸ್ವರೂಪವು (ಕತ್ತಲೆಯಲ್ಲಿ) ಬೆಳಕಿನ ಲೋಕಕ್ಕೆ ಕರೆದೊಯ್ಯುವುದು ಮತ್ತು ಮಕಾರಸ್ವರೂಪವು ಪ್ರಜ್ಞೆಯ ಮೊತ್ತಕ್ಕೆ ನಮ್ಮನ್ನು ಕರೆದೊಯ್ಯುವುದು. ಆದರೆ (ಓಂಕಾರದಲ್ಲಿ) ಅಕ್ಷರ ಪ್ರಾತಿನಿಧ್ಯವಿಲ್ಲದ ಸ್ವರೂಪವು ನಮ್ಮನ್ನು ಈ ಯಾವ ಗತಿಗೂ ತೆರೆಯುವುದಿಲ್ಲ. [ಅದು ತನ್ನಷ್ಟಕ್ಕೇ ಮಹಾಗತಿ].
ಮಧ್ವ ಭಾಷ್ಯದಲ್ಲಿ ಇಲ್ಲಿಗೆ ಮೂರನೆಯ ಅಧ್ಯಾಯವು ಮುಗಿಯುತ್ತದೆ. ಉಪನಿಷತ್ತಿನ ಮುಖ್ಯ ಧಾರೆಯ ಇನ್ನೊಂದು ಶ್ಲೋಕ ಮಾತ್ರ ಉಳಿದಿದ್ದು ಆ ಮಂತ್ರ ಮತ್ತು ಆರು ʼಏತೇ ಶ್ಲೋಕಾಃʼ ನಾಲ್ಕನೆಯ ಅಧ್ಯಾಯಕ್ಕೆ ಸೇರಿವೆ. ಇಲ್ಲಿ ಬರುವ ಉಪನಿಷತ್ತಿನ ಮುಖ್ಯ ಧಾರೆಯ ಮಂತ್ರವು ಹನ್ನೆರಡನೆಯ ಮಂತ್ರವಾಗಿದೆ.
ಈ ಹನ್ನೆರಡನೆಯ ಮಂತ್ರವು ಹೀಗಿದೆ:
ಅಮಾತ್ರಶ್ಚತುರ್ಥೋsವ್ಯವಹಾರ್ಯಃ ಪ್ರಪಂಚೋಪಶಮಃ
ಶಿವೋsದ್ವೈತ ಏವಮೋಂಕಾರ ಆತ್ಮೈವ
ಸಂವಿಶತ್ಯಾತ್ಮನಾತ್ಮಾನಂ
ಯ ಏವಂ ವೇದ
ಈ ಮಂತ್ರದ ಅದ್ವೈತ ಪರ ಅರ್ಥ ಹೀಗಿದೆ: ಓಂಕಾರದ ನಾಲ್ಕನೆಯ ಭಾಗ ಒಂದಿದೆ. ಅದು ಅಮಾತ್ರ (ಅಕ್ಷರ ಸ್ವರೂಪ ವಿಲ್ಲದ್ದು). ವ್ಯವಾಹಾರಾತೀತವಾದುದು. ಎಲ್ಲ ತೋರಿಕೆ-ಗೊಂದಲಗಳಿಂದ ಮುಕ್ತವಾಗಿ ಶಾಂತವಾಗಿರುವುದು. ಮಂಗಳಕರವಾದದು. ಅದರಂತೆ ಇನ್ನೊಂದು ಇಲ್ಲದಿರುವುದು. ಈ ಓಂಕಾರವು ಆತ್ಮನೇ ಆಗಿರುವುದು. ಈ ಆತ್ಮನು ಶ್ರೇಷ್ಠವಾದ ಪರಮಾತ್ಮನಲ್ಲಿ ವಿಲೀನವಾಗುವುದು. ಹೀಗೆಂದು ತಿಳಿಯ ಬೇಕು.
ದ್ವೈತಪರ ವ್ಯಾಖ್ಯಾನಕಾರರು ಇದಕ್ಕೆ ಹೀಗೆ ಅರ್ಥ ಹೇಳುತ್ತಾರೆ: ಮಾತ್ರೆ ಇಲ್ಲದ ನಾಲ್ಕನೆಯ ಸ್ಥಿತಿಯು ವ್ಯವಹಾರಕ್ಕೆ ನಿಲುಕದು. ಮಂಗಳಕರವಾದುದು. ಅದರಂತೆ ಇನ್ನೊಂದಿಲ್ಲ. ಈ ಏಕಮೇವಾದ್ವಿತೀಯವಾದ ಓಂ ಅತಿ ಶ್ರೇಷ್ಠ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟು ಅವನ ಸಾಕ್ಷಾತ್ಕಾರ ಪಡೆದವನಿಗೆ ತಿಳಿಯಲು ಸಾಧ್ಯವಾಗುವುದು, ಅಂದರೆ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟ ಆತ್ಮನು ಪರಮಾತ್ಮನನ್ನೆ ಹೊಂದುವನು.
ಇಲ್ಲಿಂದ ಮುಂದೆ ಈ ಮಂತ್ರದ ಅರ್ಥವನ್ನು ಸ್ಪಷ್ಟಪಡಿಸುವ ಆರು ಶ್ಲೋಕಗಳಿವೆ. (ಇವುಗಳನ್ನು ಅದ್ವೈತಪರ ವ್ಯಾಖ್ಯಾನ ಗ್ರಂಥಗಳಲ್ಲಿ ಗೌಡಪಾದ ಕಾರಿಕೆಗಳೆಂದೂ ದ್ವೈತ ಪರ ಗ್ರಂಥಗಳಲ್ಲಿ ʼಏತೇ ಶ್ಲೋಕಾಃʼ ಎಂದೂ ಕರೆಯುವರು).
ಓಂಕಾರವನ್ನು ಅದರ ನಾಲ್ಕು ಭಾಗಗಳಲ್ಲಿ ತಿಳಿದುಕೊಳ್ಳಬೇಕು; ಪ್ರತಿ ಕಾಲು ಭಾಗವೂ ಒಂದು ಮಾತ್ರೆಯಾಗಿದೆ ಸಂಶಯ ಬೇಡ. ಓಂಕಾರವನ್ನು ಹೀಗೆ ಪಾದಶಃ ತಿಳಿದು ಬರೇನನ್ನೂ ಚಿಂತಿಸ ಬೇಕಾಗಿಲ್ಲ.
ಓಂಕಾರದ ಅನುರಣನದಿಂದ ಮನಸ್ಸು ನೆನೆಯಲಿ; ಓಂಕಾರವೇ ನಿರ್ಭಯ ಬ್ರಹ್ಮನಾಗಿದ್ದಾನೆ; ಓಂಕಾರವನ್ನು ಸದಾ ಅಳವಡಿಸಿಕೊಂಡವನು ಎಂದಿಗೂ ಯಾವ ಭಯವನ್ನೂ ಹೊಂದುವುದಿಲ್ಲ.
ಇಲ್ಲಿ ಪ್ರಕಟವಾಗಿರುವ ಬ್ರಹ್ಮನೂ ಓಂಕಾರವೇ; ಪ್ರಕಟಗೊಂಡಿರದ ಆ ಶ್ರೇಷ್ಠನೂ ಬ್ರಹ್ಮನೇ; ಕಾರಣವಿಲ್ಲದ ಕಾರ್ಯವಿಲ್ಲದ, ಹೊರಗಿಲ್ಲದ ಅವಿನಾಶಿ ಈ ಓಂಕಾರ.
ಎಲ್ಲದರ ಆದಿ ಮಧ್ಯ ಮತ್ತು ಅಂತಗಳೂ ಓಂಕಾರವೇ; ಹೀಗೆಂದು ಓಂಕಾರವನ್ನು ತಿಳಿದು ಸಾಧಕನು ತತ್ಕ್ಷಣ ಬ್ರಹ್ಮನನ್ನು ಹೊಂದುವನು.
ಎಲ್ಲರ ಹೃದಯದಲ್ಲಿ ನಿಂತಿರುವ ಈಶ್ವರನೇ ಓಂಕಾರನೆಂಬುದನ್ನು ತಿಳಿ; ಸರ್ವ ವ್ಯಾಪ್ತವಾದ ಓಂಕಾರವನ್ನು ತಿಳಿದು ಧೀರನಾದವನು ದುಃಖಕ್ಕೆ ಒಳಗಾಗುವುದಿಲ್ಲ.
ಸದ್ದಿಲ್ಲದ ಓಂಕಾರ ಮತ್ತು ಅನಂತ ಸದ್ದುಗಳ ದ್ವಂದ್ವಗಳಿಲ್ಲದ ಮತ್ತು ಮಂಗಳಕರವಾದ ಓಂಕಾರವನ್ನು ತಿಳಿದವನು ಮತ್ತು ಸಂತ; ಬೇರೆ ಯಾರೂ ಅಲ್ಲ.
ದ್ವೈತ ಪರಂಪರೆಯಲ್ಲಿ ಇದರ ಅರ್ಥ ಹೀಗಿದೆ: ಜಾಗೃತ, ಸ್ವಪ್ನ, ಸುಷುಪ್ತ ಮತ್ತು ತುರೀಯ ಪ್ರತಿಯೊಂದೂ ಒಂದೊಂದು ಪಾದ ಮತ್ತು ಒಂದೊಂದು ಮಾತ್ರೆಯಾಗಿದ್ದು ಒಂದೊಂದು ಅವಸ್ಥೆಯನ್ನು ಪ್ರತಿನಿಧಿಸುತ್ತಿವೆ; ಪ್ರತಿಯೊಂದರಲ್ಲೂ ಓಂಕಾರವನ್ನು ತಿಳಿಯ ಬೇಕು. ಪ್ರತಿಯೊಂದು ಪಾದದಲ್ಲು ಓಂಕಾರವನ್ನು ತಿಳಿದು ಬೇರೇನನ್ನೂ ಚಿಂತಿಸ ಬೇಕಾಗಿಲ್ಲ.
ಓಂಕಾರವು ನಿರ್ಭಯನಾದ ಬ್ರಹ್ಮನೇ ಆಗಿದ್ದು ಓಂಕಾರದಲ್ಲಿ ಮನಸ್ಸನ್ನು ಕೇಂದ್ರೀಕರಿಸ ಬೇಕು. ಓಂಕಾರದಲ್ಲಿ ಸದಾ ನೆಲಸುವವನಿಗೆ ಸ್ವಲ್ಪವೂ ಭಯ ಉಂಟಾಗುವುದಿಲ್ಲ.
ಓಂಕಾರವು ಎಲ್ಲದರ ಆದಿ ಮಧ್ಯ ಮತ್ತು ಅಂತ್ಯ; ಹೀಗೆ ಓಂಕಾರವನ್ನು ತಿಳಿದು ಶೀಘ್ರವಾಗಿ ಬ್ರಹ್ಮನನ್ನು ಹೊಂದುವನು,
ಎಲ್ಲರ ಹೃದಯದಲ್ಲಿರುವ ಈಶ್ವರನು ಓಂಕಾರವೇ ಎಂದು ತಿಳಿಯ ಬೇಕು, ಸರ್ವ ವ್ಯಾಪ್ತವಾದ ಇಂತಹ ಓಂಕಾರವನ್ನು ನೆನೆಯುತ್ತಾ ಧೀರನು ದುಃಖ ಪಡುವುದಿಲ್ಲ.
ಓಂಕಾರವು ಅಕ್ಷರ ಪ್ರಾತಿನಿಧ್ಯವಿಲ್ಲದ್ದು ಮತ್ತು ಅನಂತಾಕ್ಷರ ಪ್ರಾತಿನಿದ್ಯ ಉಳ್ಳುದು; ಸರಿಯಲ್ಲದ ಜ್ಞಾನವ್ನೆಲ್ಲ ನಾಶಮಾಡುವಂತಹುದು ಮಂಗಳಕರವಾದುದು. ಹೀಗಿರುವ ಓಂಕಾರವನ್ನು ಅದರ ಭಾಗಗಳನ್ನು ಬಿಡದೆ ತಿಳಿದವನು, ಅವನೇ ಸಿದ್ಧನಾದ ಮುನಿ ಬೇರೆಯವರಲ್ಲ.
ಹೀಗೆ ಮಾಂಡೂಕ್ಯ ಉಪನಿಷತ್ತು ಮೀಮಾಂಸಾ ಶಾಸ್ತ್ರದ ದ್ವೈತ ಮತ್ತು ಅದ್ವೈತ ಶಾಖೆಗಳಲ್ಲಿರುವ ಸೈದ್ಧಾಂತಿಕ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಒಂದು ಒಂದು ಧರ್ಮ ಗ್ರಂಥ. ಎರಡು ಪಂಥಗಳ ವಿದ್ವಾಂಸರು ಹೇಳುವ ಅರ್ಥಗಳಲ್ಲಿ ಹಲವು ವ್ಯತ್ಯಾಸಗಳಿವೆ. ಬ್ರಹ್ಮ ಶ್ರೇಷ್ಠತೆಯ ಪ್ರತಿಪಾದನೆ ಮತ್ತು ಓಂಕಾರ ಧ್ಯಾನದ ಪ್ರಾಮುಖ್ಯ ಇವುಗಳ ಪ್ರತಿಪಾದನೆ ಇವು ಎರಡೂ ಶಾಖೆಗಳಿಗೆ ಸಮಾನವಾಗಿವೆ.