Search This Blog

Monday, 5 June 2017

ಶಿಶುಪಾಲನೆ ಹೇಗೆ: ಎ ಎಸ್ ನೀಲ್ - ದೃಷ್ಟಿ ಸುಕುಮಾರಗೌಡರಿಂದ ಕನ್ನಡಾವತರಣ

ಶಿಶುಪಾಲನೆ ಹೇಗೆ:  ಎ ಎಸ್ ನೀಲ್ - ದೃಷ್ಟಿ
ಸುಕುಮಾರಗೌಡರಿಂದ ಕನ್ನಡಾವತರಣ                                                            
ತಮ್ಮ ಮಗುವಿಗೆ ಯಾವ ವಿಷಯಗಳನ್ನು ಹೇಗೆ ಕಲಿಸಿದರೆ ಮುಂದೆ ಉತ್ತಮ ನಾಗರೀಕರಾಗಿ ಬಾಳಬಹುದು? ಉತ್ತಮ ಗಳಿಕೆ ಅವನಿಗೆ ಸಿಗಬಹುದು? ಅವನು ಸ್ವಲ್ಪವೂ ದುಃಖವಿಲ್ಲದಂತೆ ನಿರಂತರ ಸುಖಕ್ಕೆ ಭಾಜನವಾಗಬಹುದು? – ಇತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬ ತಂದೆ ತಾಯಿಗೆ ತಮ್ಮ ಮಗುವನ್ನು ಶಾಲೆಗೆ ಸೇರಿಸುವ ಹೊತ್ತು ಕೊರೆಯುವುವು. ಇವುಗಳಿಗೆ ಉತ್ತರಗಳು ವಿಭಿನ್ನರೀತಿಯಾವು.
          ಇಲ್ಲಿ ಎ ಎಸ್ ನೀಲ್ ಎಂಬ ಶಿಕ್ಷಣ ತಜ್ಞ ಯಾವ ಕಾರಣಕ್ಕೂ ಶಿಕ್ಷೆ ನೀಡದೆ ಮಕ್ಕಳಿಗೆ ಶಿಕ್ಷಣ ನೀಡಬಹುದು ಮತ್ತು ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ ಮಕ್ಕಳು ಬೆಳೆಯುವರೆಂದು ಪ್ರತಿಪಾದಿಸಿರುವುದನ್ನು ಕುರಿತು ಬರೆಯುತ್ತಿದ್ದೇನೆ. ಶಾಲೆಯೊಂದನ್ನು ಸ್ಥಾಪಿಸಿ, ಶಿಕ್ಷೆರಹಿತ ಶಿಕ್ಷಣವನ್ನು ಮಾಡಿ ತೋರಿಸಿದ ಮಹಾತ್ಮನೀತ. ಅನುಭವಗಳ ಆಧಾರದಲ್ಲಿ Summerhill – A Radical Approach to Child Rearing ಎಂಬ ಪುಸ್ತಕವನ್ನು ಬರೆದು ಈ ರೀತಿಯ ಶಿಕ್ಷಣಪದ್ಧತಿಯ ಲಾಭಗಳೇನು, ಶಿಕ್ಷೆ ನೀಡುವುದರಿಂದ ಆಗುವ ಅನಾಹುತಗಳೇನು ಎಂಬ ವಿಷಯಗಳನ್ನು ವಿವರವಾಗಿ ಚರ್ಚಿಸಿದ್ದಾನೆ. ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಶಿಕ್ಷೆ ಕೊಡುವುದೇ ಇಂದಿನ ಸಾಮಾಜಿಕ ಸಮಸ್ಯೆಗಳಿಗೆಲ್ಲ ಮೂಲ ಕಾರಣವೆಂಬುದು ಇವನ ಅಭಿಪ್ರಾಯ. ಇದೊಂದು ಆತ್ಮಚರಿತ್ರಾತ್ಮಕ ಅಂಶಗಳನ್ನೊಳಗೊಂಡ ಶಿಕ್ಷಣ ಗಾಥೆ. ಉದಾಹರಣೆಗೆ “ನಾನು ಯುವ ಶಿಕ್ಷಕನಾಗಿದ್ದಾಗ ಮಕ್ಕಳಿಗೆ ಏಟು ಕೊಡುತ್ತಿದ್ದೆನು.... ನನ್ನಲ್ಲಿದ್ದ ಅಹಂಭಾವಕ್ಕೆ ಘಾಸಿಯಾದಾಗ ನಾನು ಸಹಿಸಲಾರದೆ ಇದ್ದೆನು” (148) ಎಂದು ತನ್ನ ಅನುಭವದ ಮಾತನ್ನು ನಿರ್ಭಿಡೆಯಿಂದ ಹೇಳಿದ್ದಾನೆ. ಎಲ್ಲರಿಗೂ ಶಿಕ್ಷಣ, ಹೊರೆರಹಿತ ಶಿಕ್ಷಣ, ಅವರವರ ವೇಗದಲ್ಲಿ ಕಲಿಯುವಂತೆ ಶಿಕ್ಷಣ, ಸಂತಸ ಕಲಿಕೆ, ಶಿಕ್ಷೆ ಇಲ್ಲದೆ ಶಿಕ್ಷಣ - ಇಂತಹ ಧ್ಯೇಯವಾಕ್ಯಗಳು ದೇಶದ ಉದ್ದಗಲದಲ್ಲೂ ಕೇಳಿಬರುತ್ತವೆ. ಆದರೆ ಇವೆಲ್ಲ ವನ್ನು ಶ್ರದ್ಧೆಯಿಂದ ಅನುಷ್ಠಾನಗೊಳಿಸಿದ ಶಾಲೆ ಕಾಣಸಿಗದು. ಎ ಎಸ್ ನೀಲ್ ಇವನ ಸಮ್ಮರ್ ಹಿಲ್ ಶಾಲೆ ಇಂತಹ ಆದರ್ಶವನ್ನು ವಾಸ್ತವವನ್ನಾಗಿಸಿ ಜಯಗಳಿಸಿರುವುದನ್ನು ಅವನ ಈ ಬರಹದಲ್ಲಿ ಕಾಣಬಹುದು. ಪ್ರತಿಯೊಂದು ಮಗುವಿನ ವರ್ತನೆಯ ಹಿಂದೆ ಇರುವ ಕಾರಣಗಳನ್ನು ಆ ಮಗುವಿನ ಪೂರ್ವಾನುಭವಗಳನ್ನಾಧರಿಸಿ ಮನೋವಿಶ್ಲೇಷಣೆ ನಡೆಸಿ ತನ್ನ ಶಾಲೆಯಲ್ಲಿರುವ ಪದ್ಧತಿಗಳು ಹೇಗೆ ಉಚಿತವೆಂಬುದನ್ನು ಅವನು ವಿವರಿಸುವುದು ಮನೋಜ್ಞವಾಗಿದೆ.
          ಹೀಗಿದ್ದರೂ ಇದು ಮನೋವೈಜ್ಞಾನಿಕನೊಬ್ಬ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಅಲ್ಲಿ ದೊರಕಿದ ಫಲಿತಗಳನ್ನು ಮಾನವ ಶಿಶುಗಳಿಗೂ ವಿಸ್ತರಿಸಿದಂತಲ್ಲ.  ತಾನೇ ಸ್ಥಾಪಿಸಿದ ಶಾಲೆಯೊಂದರಲ್ಲಿ ಕಲಿತ  ಮಕ್ಕಳ ನಡವಳಿಕೆಗಳನ್ನುಇವನು ಅಧ್ಯಯನ ಮಾಡಿದ. ಮತ್ತು ಈ ಅಧ್ಯಯನದಿಂದ ಹೊರಹೊಮ್ಮಿದ ವಿಚಾರಗಳ ಪ್ರಾಮಾಣಿಕ ಕಥನವೇ Summerhill – A Radical Approach to Child Rearing ಎಂಬ ಗ್ರಂಥ. ಯಾವುದೇ ನಿರ್ಬಂಧಗಳಿಗೊಳಗಾಗದೆ ಸ್ವತಂತ್ರ ನೆಲೆಯಲ್ಲಿ ಬೆಳೆದ ಮಕ್ಕಳು ಹೇಗೆ ನಿರ್ಭೀತರೂ ಸಮಾಜಮುಖಿಗಳೂ ಆಗಿ ಆರೋಗ್ಯಕರ ಸಮಾಜದ ಸದಸ್ಯರಾಗಬಲ್ಲರು ಎಂಬದನ್ನು ಇಲ್ಲಿ ಘನತರವಾಗಿ ಪ್ರತಿಪಾದಿಸಿದ್ದಾನೆ. ಸ್ವಂತ ಅನುಭವಗಳ ಆಧಾರದಲ್ಲಿ  ವಿಶ್ಲೇಷಣೆ ನಡೆಸುತ್ತಾ ಈ ವಿಚಾರಗಳನ್ನುಪ್ರಸ್ತುತ ಪಡಿಸಿರುವುದು ಕೃತಿಕಾರನ ವೈಶಿಷ್ಟ್ಯ. ಇವನ ಕೃತಿಯಲ್ಲಿ ಎರಡು ಭಾಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಇವನು ಸ್ಥಾಪಿಸಿದ ಸಮ್ಮರ್ ಹಿಲ್ ಎಂಬ ಶಾಲೆಯಲ್ಲಿ ಮಕ್ಕಳ ಶಿಕ್ಷಣ ಮತ್ತು ಶಿಸ್ತಿಗೆ ಸೂಕ್ತ ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತಾನೆ. ಮತ್ತು ಅನಂತರ ಸಮ್ಮರ್ ಹಿಲ್-ನಲ್ಲಿ ಅನುಸರಿಸಿದ ಕ್ರಮಗಳ ಮನೋವೈಜ್ಞಾನಿಕ ವಿಶ್ಲೇಷಣೆಯಾಗಿ ಲೈಂಗಿಕತೆ, ರತಿ, ಧರ್ಮ ಮತ್ತು ನೀತಿ ಇವುಗಳಲ್ಲಿ ಸ್ವಾತಂತ್ರ್ಯವಿಲ್ಲದಿರುವುದು ಹೇಗೆ ಸಮಸ್ಯಾತ್ಮಕ ನಡತೆಗೆ ಕಾರಣವಾಗುತ್ತದೆ ಎಂಬುದನ್ನು ವಿವರವಾಗಿ ವಿವರಿಸುತ್ತಾನೆ. ಇದನ್ನು ಪ್ರಯೋಗಾಧಾರಿತ ಎಂದರೆ ಆಂಶಿಕ ಸತ್ಯವಾಗುವುದು. ಅನುಭವಾಧಾರಿತ ಅನ್ನುವುದೇ ಸೂಕ್ತವಾದಿತು. ಅನುಭವಗಳ ಆಧಾರದಲ್ಲಿ ಮನೋ ವೈಜ್ಞಾನಿಕ ಅನುಮಾನಗಳನ್ನು ಕೈಗೊಂಡು ಶಿಕ್ಷೆಯ ನಿರರ್ಥಕತೆಯನ್ನ ನಿರೂಪಿಸುವುದು ಇಲ್ಲಿಯ ಪದ್ಧತಿ. ಆದ್ದರಿಂದಲೇ ಇಲ್ಲಿಯ ನಿರೂಪಣೆಗಳು ಭೌತಿಕ ವಿಜ್ಞಾನದ ಸಿದ್ಧಾಂತಗಳಂತಲ್ಲದೆ ಅನುಭವಜನ್ಯ ಘನಸತ್ಯಗಳಾಗಿ ಗೋಚರಿಸುವುವು. ಇಲ್ಲಿಯ ವಿವರಣೆಗಳಲ್ಲಿ ವ್ಯಕ್ತಿಯೊಬ್ಬ(ಕೃತಿಕಾರ) ಉತ್ತಮಿಕೆಯ ಸಾಧನೆಯಲ್ಲಿ ಮೇಲೇರುತ್ತಿರುವುದು ಓದುಗನ ಅನುಭವಕ್ಕೆ ಬರುವುದು.ಆದರೆ ಇದು ‘ಧಾರ್ಮಿಕ’ವಲ್ಲ;ಭಯದಿಂದ ತಾನು ಕಲ್ಪಿಸಿದ ಧರ್ಮವನ್ನು ಪಾಲಿಸುವುದು ಇವನಿಗೆ ಸೇರದು.”ಗೊಡ್ಡು ನಂಬಿಕೆಯ ಚಿರಂತನ ಬದುಕನ್ನು ಮರೆತು, ತಮ್ಮೆದುರಿಗೆ ಇರುವ ಪ್ರಸ್ತುತ ಬದುಕನ್ನು ನಂಬುವಂತಿರಬೇಕು”(211) ಎಂಬುದು ಇವನು ನಂಬಿದ ಸಿದ್ಧಾಂತ. ನನಗಂತೂ ಈ ಕೃತಿ ಲೇಖಕ ಮಕ್ಕಳಿಗೆ ಶಿಕ್ಷಣ ನೀಡುತ್ತಾ ತನ್ನತನವನ್ನು ಕಂಡುಕೊಳ್ಳುವ ನಿರಂತರ ಪ್ರಕ್ರಿಯೆಯ ಚಿತ್ರಣವೆನಿಸುತ್ತದೆ. ಸುಕುಮಾರಗೌಡರು ಹೇಳುವಂತೆ “ಕೃತಿಕಾರನ ಆಂತರ್ಯದ ದರ್ಶನವಾದಂತೆ ನಾವೂ ನಮ್ಮ ಆಂತರ್ಯದ ಶೋಧನೆಯಲ್ಲಿ ತೊಡಗುವೆವು” (X). ನಗ್ನತೆ ಇತ್ಯಾದಿಗಳ ಬಗ್ಗೆ ಇವನ ವಿವರಣೆ ಹರ್ಮನ್ ಹೆಸ್ಸನ ಸಿದ್ಧಾರ್ಥ ಕಾದಂಬರಿಯಲ್ಲಿ ಸಿದ್ಧಾರ್ಥನು ತನ್ನ ಸಾಧನೆಯ ಅಂತಿಮ ಘಟ್ಟದಲ್ಲಿ ವೇಶ್ಯಾವಾಟಿಕೆಗಳಿಗೆ ಭೇಟಿ ನೀಡಿ ಎಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಸಮಚಿತ್ತತೆಗೆ ಸಲ್ಲುವುದು ನೆನಪಾಗುತ್ತದೆ.
ಸಮ್ಮರ್ ಹಿಲ್ ಎಂಬುದು 1921ರಲ್ಲಿ ಎ ಎಸ್ ನೀಲ್  ಲಂಡನ್ನಿನಿಂದ ನೂರು ಕಿಲೋ ಮೀಟರ್ ದೂರದಲ್ಲಿ ಸ್ಥಾಪಿಸಿದ ಪ್ರತಿಮಗುವೂ ಸ್ವನಿಯಂತ್ರಣಕ್ಕೊಳಗಾಗಿ ತನಗೆ ಬೇಕಾದ್ದನ್ನು ಕಲಿಯುವ, ತನಗೆ ಇಷ್ಟಬಂದಂತೆ ವರ್ತಿಸುವ ಸಂಪೂರ್ಣ ಸ್ವಾತಂತ್ರ್ಯದ ವ್ಯವಸ್ಥೈಯುಳ್ಳ ಪ್ರಯೋಗಾತ್ಮಕ ವಸತಿ ಶಾಲೆ. ಐದರಿಂದ ಹದಿನಾರುವರ್ಷ ಪ್ರಾಯದ 25ಹುಡುಗರು ಮತ್ತು 20 ಹುಡುಗಿಯರು ಈ ಶಾಲೆಗೆ ಸೇರಿದರು.  ಇವರನ್ನು ಮೂರು ಗುಂಪುಗಳನ್ನಾಗಿ ಮಾಡಿ ಅವರಿಗೆ ಇಷ್ಟವಾದುದನ್ನು ಕಲಿಯುವಂತೆ ಏರ್ಪಡಿಸಿದ್ದನು. ಯಾವುದೇ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವುದು ಶಾಲೆಯ ಉದ್ದೇಶವಲ್ಲ; ಆದರೆ ಹಾಗೆ ತಯಾರಾಗಬೇಕೆಂದು ಒಬ್ಬ(ಳು) ಇಚ್ಛಿಸಿದರೆ ಹಾಗೆ ಮಾಡಬಹುದಿತ್ತು ಶಾಲೆಯ ಆಡಳಿತ ಮಕ್ಕಳು ಅನುಸರಿಸಬೇಕಾದ ಯಾವ ನಿಯಮವನ್ನೂ ರೂಪಿಸಿ ಮಕ್ಕಳ ಮೇಲೆ ಹೇರುವುದಿಲ್ಲ. ಮಕ್ಕಳು, ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ಸೇರಿದ ಸಾಮಾನ್ಯ ಸಭೆ ಆಗಿಂದಾಗ ಸೇರಿ ಎಲ್ಲರೂ ಒಪ್ಪುವಂತಹ ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದರು. ಶಾಲೆಯ ದೈನಂದಿನ ಕಾರ್ಯಕ್ರಮ, ವೇಳಾಪಟ್ಟಿ ಎಲ್ಲವೂ ಹೀಗೇ ಸಿದ್ಧವಾಗುವುವು. ಒಬ್ಬ ವಿದ್ಯಾರ್ಥಿಗಿರುವಷ್ಟೇ ಹಕ್ಕು ನೀಲ್-ಗೂ ಇರುವುದು. ಸಮಾಜದಲ್ಲಿ ಭ್ರಷ್ಟಾಚಾರ, ಅಪರಾಧಗಳು ಇಂತಹವು ಉಂಟಾಗುವುದು ಎಳವೆಯಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯಹರಣ ಮಾಡುವುದರಿಂದಲೇ ಎಂಬುದು ಲೇಖಕರ ಅಭಿಪ್ರಾಯ; ಆದ್ದರಿಂದಲೇ ಸಂಪೂರ್ಣ ಸ್ವಾತಂತ್ರ್ಯವಿರುವ ವಾತಾವರಣದಲ್ಲಿ ಮಕ್ಕಳಿಗೆ ಕಲಿಸುವುದು ಈ ಶಾಲೆಯ ವೈಶಿಷ್ಟ್ಯ. ಇಲ್ಲಿಂದ ಕಲಿತು ಹೊರಹೋದ ಮಕ್ಕಳು ಯಾವುದೇ ವೃತ್ತಿಯನ್ನು (ಉದಾ.ಕೆಮರಾಮನ್) ದಕ್ಷವಾಗಿ ನಿರ್ವಹಿಸಿದ್ದನ್ನು,  ಕೆಲವರು ಸಮಾಜದಲ್ಲಿ ಉತ್ತಮ ಸೇವಾಮನೋಭಾವದವರಾಗಿ ಉನ್ನತ ಕಾರ್ಯಗಳಲ್ಲಿ ತೊಡಗಿ ಯಶಸ್ಸು ಗಳಿಸಿದ್ದನ್ನು ನೀಲ್  ಹೇಳುತ್ತಾರೆ. ಶಾಲೆಯ ರಚನೆ, ಅಲ್ಲಿಯ ಕ್ರಮಗಳ ವಿವರಣೆ, ವಿದ್ಯಾರ್ಥಿಗಳಲ್ಲಿರುವ ಅನಪೇಕ್ಷಣೀಯ ನಡತೆಗಳನ್ನು ನೇರ್ಪುಗೊಳಿಸುವುದು ನೀಲ್ ಇವರ ವಿಧಾನಗಳಾಗಿದ್ದು ಇವುಗಳು ಮೊದಲ ಪುಟಗಳಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿವೆ.
ಸ್ವನಿಯಂತ್ರಿತ ಮಗು ಎಂಬುದು ಇವನ ಮೌಲಿಕ ಪರಿಕಲ್ಪನೆ . ಅಂದರೆ ಮಗುವಿಗೆ ಹೀಗೆ ಮಾಡು, ಹೀಗೆ ಮಾಡಬೇಡ ಎಂದು ವಿಧಿಸುವ (ಇದು ಸರಿಯಾದ ರೀತಿಯಲ್ಲ) ಬದಲು ಅದನ್ನು ಸ್ವತಂತ್ರವಾಗಿ ಬಿಟ್ಟರೆ ತಾನು ಸರಿಯಾದ ರೀತಿಯನ್ನೇ ಅನುಸರಿಸುತ್ತದೆ ಎಂಬುದು ಮೂಲಭೂತ ಕಲ್ಪನೆ. ಪ್ರತಿಯೊಂದು ಕಾರ್ಯವನ್ನು ಹೀಗೆ ಮಾಡಲು ಬಿಟ್ಟರೆ ಮೊದಮೊದಲು ನಷ್ಟವಾಗುವಂತಹ ಕೆಲಸಗಳನ್ನು ಮಾಡಿದರೂ ಅನಂತರ ಸೂಕ್ತವಾದುದನ್ನೇ ಆಯ್ಕೆ ಮಾಡಿಮಾಡುತ್ತದೆ ಎಂಬುದು ಕೃತಿಕಾರನ ಮೂಲ ಗ್ರಹಿಕೆ. ಈ  ರೀತಿಗೆ ಕೃತಿಯಲ್ಲಿ ಹಲವು ನಿದರ್ಶನಗಳಿವೆ. (ಉದಾ. 160, 171, 176). ಸಮ್ಮರ್ ಹಿಲ್ಲಿನಲ್ಲಿ ಪೂರ್ಣತಂತ್ರಸ್ವಾತಂತ್ರವಿದ್ದರೂ ಎಲ್ಲ ಮಕ್ಕಳೂ ಸ್ವನಿಯಂತ್ರಿತರಾಗಿದ್ದು ಶಾಲೆಯಲ್ಲಿ ಉತ್ತಮ ಶಿಸ್ತನ್ನು ಅನುಸರಿಸುತ್ತಾರೆ.
ಬೇರೆ ಶಾಲೆಗಳಿಂದ ಈ ಶಾಲೆಗೆ ವರ್ಗಾವಣೆಗೊಂಡು ಬಂದ ಮಕ್ಕಳು ಇಲ್ಲಿಗೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲದೆ ಮನೆಯ ವಾತಾವರಣದಿಂದಾಗಿ ಈ ಶಾಲೆಗೆ ಬಂದ ಮಕ್ಕಳಲ್ಲಿ ಕೂಡ ಅನಪೇಕ್ಷಿತ ನಡವಳಿಕೆಗಳು ಕಂಡುಬರುತ್ತವೆ. ಇವರ ಸಮಸ್ಯೆಗಳ ನಿವಾರಣೆಗಾಗಿ PLಗಳು (ಖಾಸಗಿ ಪಾಠಗಳು) ಈ ಶಾಲೆಯ ಇನ್ನೊಂದು ವೈ ಶಿಷ್ಟ್ಯ. ಇಂತಹ ಮಕ್ಕಳನ್ನು ಎಕ್ಕಟಿ ಕರೆದು ಒಂದು ರೀತಿಯ ಸಮಾಲೋಚನೆ ನೀಡುವುದು ಇಂತಹ PLಗಳ ಉದ್ದೇಶ. ಈ ಎಲ್ಲ ವಿವರಗಳು ಪುಸ್ತಕದ ಮೊದಲ ಪುಟಗಳಲ್ಲಿ ಬಂದಿವೆ.
ಈ ಶಾಲೆಯಲ್ಲಿ ಪಡೆದ ಅನುಭವಗಳ ಆಧಾರದಲ್ಲಿ ಶಿಶು ಪಾಲನೆಯ ಮೂಲತತ್ವಗಳನ್ನುಅನಂತರ ಇವನು ನಿರೂಪಿಸುತ್ತಾನೆ. “ಮಗು[ವಿಗೆ] ಮಾನಸಿಕ ಹಾಗೂ ದೈಹಿಕವಾಗಿ ಬಾಹ್ಯ ಒತ್ತಾಸೆಗೆ ಒಳಗಾಗದೆ, ಬದುಕಲು ಸ್ವಾತಂತ್ರ್ಯ” ಇರುವಂತೆ ಶಿಶು ಪಾಲನೆ ಮಾಡಬೇಕು. ಅಂದರೆ ತನಗೆ ಹಸಿವಾದಾಗ ತಿನ್ನುವ ಸ್ವಾತಂತ್ರ್ಯ, ಅಗತ್ಯವೆನಿಸಿದಾಗ ಸ್ವಚ್ಛವಾಗಿರಲು ಸ್ವಾತಂತ್ರ್ಯ [ಇದ್ದು] ಗದರಿಕೆ ಬೆದರಿಕೆ ಏಟಿಗೆ ಒಳಗಾಗದೆ ಸದಾ ಪ್ರೀತಿ ಮತ್ತು ರಕ್ಷಣೆಗೆ ಒಳಗಾಗಿರು”ವಂತೆ ನೋಡಿಕೊಳ್ಳಬೇಕು(91). “ಇಂದು ನನ್ನ ಅನುಭವದಿಂದ ಹೇಳವುದಿದ್ದರೆ ಶಿಕ್ಷೆ ಎನ್ನುವುದು ಅನಗತ್ಯ. ನಾನು ಮಗುವನ್ನು ಎಂದೂ ಶಿಕ್ಷಿಸುವುದಿಲ್ಲ;ಶಿಕ್ಷಿಸಬೇಕೆಂಬ ಬಯಕೆಯೂ ಇರದು” (146). ಲೈಂಗಿಕ ಪ್ರವೃತ್ತಿ, ಧರ್ಮ ಮತ್ತು ನೀತಿಯ ಅನುಸರಣೆ, ಇಂತಹವುಗಳಲ್ಲಿ ಹೇಗೆ ಸ್ವಾತಂತ್ರ್ಯವಿರಬೇಕು ಆದರೆ ಸ್ವೇಚ್ಛಾಚಾರವಿರಬಾರದು ಎಂಬುದನ್ನು ತನ್ನ ಅನುಭವದ ನಿದರ್ಶನಗಳನ್ನು ಉದಾಹರಿಸತ್ತಾ ನಿರೂಪಿಸಿದ್ದಾನೆ. ಹೀಗೆ ಮಾಡಲು ಎದುರಾಗುವ ಮಕ್ಕಳ ಸಮಸ್ಯೆಗಳೇನು ಪಾಲಕರ ಸಮಸ್ಯೆಗಳಾವುವು ಮತ್ತು ಇವುಗಳನ್ನು ಮೀರುವುದು ಹೇಗೆಂಬ ಬಗ್ಗೆ ಸೂಚನೆಗಳನ್ನು ನೀಡಿದ್ದಾನೆ.
ಶಿಕ್ಷಣ ತಜ್ಞ ನೀಲ್ ಇವ ಕೃತಿಯನ್ನು ಡಾ ಸಕುಮಾರ ಗೌಡ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ರಾಷ್ಟ್ರದ ಉದಾತ್ತ ಶಿಕ್ಷಣತಜ್ಞರಲ್ಲೊಬ್ಬರಾಗಿದ್ದರೂ ಮಕ್ಕಳಹಿತಾಸಕ್ತಿ ಉಳ್ಳವರಾಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಮಕ್ಕಳಮಂಟಪವೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂತಹವರು ನೀಲ್ ಇವನ ಪುಸ್ತಕವನ್ನು ಅನುವಾದಿಸಿರುವುದು ಸಹಜವೂ ಉಪಯುಕ್ತವೂ ಆಗಿದೆ. ಅನುವಾದಗಳಲ್ಲಿ ಕೃತಿನಿಷ್ಠ, ವಸ್ತು ನಿಷ್ಠ ಇತ್ಯಾದಿಯಾಗಿ ವರ್ಗಗಳನ್ನು ಕಲ್ಪಿಸುವುದಿದೆ. ಗೌಡರ ಅನುವಾದವನ್ನು ಓದುಗನಿಷ್ಠ ಎಂದು ವರ್ಗೀಕರಿಸಬಹುದು. ಕೃತಿಯ ಓದುಗನಿಗೆ ಕೃತಿ ಎಲ್ಲಿಂದಲೋ ಭಾಷಾಂತರವಾಗಿ ಬಂದುದು ಎಂದು ಭಾಸವಾಗದೆ ಒಂದು ಸ್ವತಂತ್ರ ಸೃಜನಶಿಲ ಕೃತಿ ಎಂದೇ ಕಾಣಿಸುತ್ತದೆ. ಆದ್ದರಿಂದ ಆತ್ಮೀಯವಾಗುತ್ತದೆ.
          ತಮ್ಮ ಬರಹವನ್ನು ಓದುಗಸ್ನೇಹಿಯಾಗಿಸಲು ಲೇಖಕರು ಇತರ ಭಾಷಾ ಪದಗಳನ್ನು ಮಧ್ಯೆ ಮಧ್ಯೆ ಬಳಸಲು ಯಾವುದೇ ಹಿಂಜರಿಕೆ ತೋರುವುದಿಲ್ಲ. “ಡಾಕ್ಟರರಾಗಿ “   “ ಯಾ ಫಸ್ಟ್ ಕ್ಲಾಸ್ ಪೋಲೀಸರಾಗಿ”( 23) “ರೆಡ್ ಇಂಡಿಯನ್” ( 63) “ಬಾಜಿಸುವೆನು “  (ಈ ಪದ ಹಿಂದೂಸ್ತಾನಿ 62) ಇತ್ಯಾದಿ ಪದಗಳನ್ನು ಧಾರಾಳವಾಗಿ ಬಳಸಿದ್ದಾರೆ. “ಒಡೆದುದಕ್ಕೆ ಅವನಿಗೆ ಬಾರಿಸಿದಳು” (175) ಎಂಬಂತೆ ಆಡುಮಾತನ್ನು ಸಮರ್ಥವಾಗಿ ಉಪಯೋಗಿಸಿದ್ದಾರೆ. ಇಲ್ಲಿ ಹೊಡೆದಳು, ಏಟುಕೊಟ್ಟಳು ಇತ್ಯಾದಿಯಾಗಿ ಬಳಸಿದ್ದರೆ ಉತ್ತಮ ಪರಿಣಾಮವಾಗುತ್ತಿರಲಿಲ್ಲ. “ಗರೀಬಳೊಬ್ಬಳಿಗೆ ಆ ಸೌಲಭ್ಯವಿರದು”( 207) ಇಲ್ಲಿ ಕನ್ನಡದ ಬಡವಳು ಎಂಬುದಕ್ಕಿಂತ ಗರೀಬಳು ಎಂಬುದು ವ್ಯಕ್ತಿಯ ಬಡತನದ ಚಿತ್ರವನ್ನು ಅದ್ಭುತವಾಗಿಸಿದೆ. ತಿಳಿಗೇಡಿ ಎಂಭರ್ಥದ ಮದಡ ಎಂಬ ಪದ ಅಪುರೂಪದ್ದಾದರೂ   “ಮದಡನೋರ್ವನು ನನ್ನ ನಿಲುವನ್ನು ಒಪ್ಪಲಾರನು?”( 25) ಎಂಬಂತಹ ವಾಕ್ಯದಲ್ಲಿ ಪದರಚನೆಯೇ ಅರ್ಥಾಭಿನಯ ಮಾಡುತ್ತದೆ. “ಸ್ವಾಸ್ಥ್ಯ ಹಾಗೂ ಸ್ವಾತಂತ್ರ್ಯ ಮಕ್ಕಳು”, “ಮಕ್ಕಳನ್ನು ಸ್ವಾಸ್ಥ್ಯಚಿತ್ತರನ್ನಾಗಿ ಮಾಡಲು”(213) – ಇಂತಹಹ ಕಡೆಗಳಲ್ಲಿ ಸ್ವಾಸ್ಥ್ಯ, ಸ್ವಾತಂತ್ರ್ಯ ಎಂಬ ನಾಮಪದಗಳ ಬದಲು ಸ್ವಸ್ಥ, ಸ್ವತಂತ್ರ ಎಂಬ ಗುಣವಿಶೇಷಣಗಳನ್ನು ಬಳಸುವುದು ಹೆಚ್ಚು ಉಚಿತವಾಗಬಹುದು.
ಅನುವಾದಕರು ಕೃತಿಯಲ್ಲಿರುವ ಮುಖ್ಯಾಂಶಗಳನ್ನು ನೀಲ್-ನ ವಿಚಾರಗಳು ಎಂಬ ಉಪಶೀರ್ಷಿಕೆಯಡಿ ಪ್ರಾರಂಭದಲ್ಲಿ ಪಟ್ಟಿ ಮಾಡಿದ್ದಾರೆ. ಇದು ಓದುಗರಿಗೆ ಉಪಯುಕ್ತ ಮಾರ್ಗದರ್ಶನ ನೀಡುತ್ತದೆ.
          ಇದೊಂದು ಅನುಭವಗಳ ಆಧಾರದಲ್ಲಿ ರೂಪುಗೊಂಡ ವಿಶಿಷ್ಟ ಕೃತಿ. ಇಲ್ಲಿರುವಂತೆಯೇ ಎಲ್ಲ ಶಿಕ್ಷಕರೂ ಮಾಡುತ್ತಾರೆಂದು ಯಾರೂ ನಿರೀಕ್ಷಿಸಲಾರರು. ಆದರೆ ಇದನ್ನು ಓದುವುದರಿಂದ ಶಿಕ್ಷಕರಿಗೆ ಮತ್ತು ಪೋಷಕರಿಗೆ ಸಿಗುವ ಹೊಳಹುಗಳು ಅವರ ಮನೋಧೋರಣೆಯನ್ನು ಬದಲಿಸಿ ಆರೋಗ್ಯಕರ ಶಿಕ್ಷಣದತ್ತ ಸಾಗಲು ಅನುವು ಮಾಡಿಕೊಡುವುದು. ಕನ್ನಡಿಗರಿಗೆ ಕೃತಿ ಕನ್ನಡದಲ್ಲಿ ಸಿಗುವಂತೆ ಮಾಡಿ ಸುಕುಮಾರಗೌಡರು ಕೃತಕೃತ್ಯರಾಗಿದ್ದಾರೆ.
                   **********************************************